(ಕ್ರಿ. ಶ. ೧೮೫೮-೧೯೩೭) (ಸಸ್ಯಗಳ ವರ್ತನೆ)

ಜಗದೀಶ ಚಂದ್ರ ಬೋಸ್ ೧೮೫೮, ನವೆಂಬರ್ ೩೦ರಂದು ಈಗಿನ ಬಂಗ್ಲಾದೇಶದಲ್ಲಿರುವ ಮೈಮೆನ್ ಸಿಂಗ್ ಎಂಬಲ್ಲಿ ಜನಿಸಿದರು. ಅವರು ಕಲ್ಕತ್ತಾದಲ್ಲಿ ಭೌತಿಕ ವಿಜ್ಞಾನಗಳ ವ್ಯಾಸಂಗ ಮಾಡಿದರು. ಇಂಗ್ಲೆಂಡಿನಲ್ಲಿ ಪ್ರಕೃತಿ ವಿಜ್ಞಾನಗಳ ಅಧ್ಯಯನ ಮಾಡಿದರು. ಕೆಂಬ್ರಿಡ್ಜ್ ವಿಶ್ವ ವಿದ್ಯಾಲಯದಿಂದ ಬಿ.ಎ. ಪದವಿಯನ್ನು ಮತ್ತು ಲಂಡನ್ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದರು. ತರುವಾಯ ಕಲ್ಕತ್ತಾ ಪ್ರೆಸೆಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರದ ಸಹಾಯಕ ಪ್ರೊಫೆಸರ‍್ ಆಗಿ ಸೇವೆ ಸಲ್ಲಿಸಿದರು. ತಮ್ಮ ಅಸಾಧಾರಣ ಪ್ರತಿಭಾ ಶಕ್ತಿ ಮತ್ತು ಕಾರ್ಯತತ್ಪರತೆಯ ಪರಿಣಾಮವಾಗಿ ದೇಣಿಗೆಗಳನ್ನು ಸಂಗ್ರಹಿಸಿ, “ಬೋಸ್ ಇನ್ ಸ್ಟಿಟ್ಯೂಟ್ ” ಅನ್ನು ಸ್ಥಾಪಿಸಿ ತಮ್ಮ ಕೊನೆಯ ಉಸಿರು ಇರುವವರೆಗೂ ಅದರ ಡೈರಕ್ಟರ್ ಆಗಿ ಸೇವೆ ಸಲ್ಲಿಸಿದರು.

ಸಸ್ಯಗಳೂ ಮನುಷ್ಯರ ಹಾಗೆ ಪರಿವರ್ತಿಸುತ್ತವೆ, ಮದ್ಯಪಾನೀಯವನ್ನು ಅವುಗಳೊಳಗೆ ಸೇರಿಸಿದರೆ ಅವು ಕೂಡ ಕುಡುಕರ ಹಾಗೆ ಅಸಹಜವಾಗಿ ವರ್ತಿಸುತ್ತವೆ ಮತ್ತು ಅದರ ಪರಿಣಾಮವನ್ನು ತೆಗೆದಾಗ ಸಹಜ ಸ್ಥಿತಿಗೆ ಬರುತ್ತವೆ. ಸಸ್ಯಗಳಿಗೆ ಆಹಾರ ತಯಾರಿಸುವ ಕಾರ್ಯ ಬೇರುಗಳಿಂದ ಮಾತ್ರವೇ ನಡೆಯುವುದಿಲ್ಲ. ಸಸ್ಯಗಳೂ ನರಮಂಡಲ ವ್ಯವಸ್ಥೆಯನ್ನು ಪಡೆದಿರುತ್ತವೆ ಮತ್ತು ನೋವಾದಾಗ ಸಂಕಟ ಪಡುತ್ತವೆ ಎಂಬುದನ್ನು ಜಗದೀಶಚಂದ್ರ ಬೋಸ್ ಜಗತ್ತಿಗೆ ತೋರಿಸಿಕೊಟ್ಟರು. ಇದು ಅವರ ಒಂದು ಬಹುದೊಡ್ಡ ಸಾಧನೆ. ಈ ಸಂಶೋಧನೆಗಳ ಮೂಲಕ ಅವರು ಸಸ್ಯಗಳಿಗೂ ಜೀವ ಇರುತ್ತದೆ ಎಂಬುದನ್ನು ಸಿದ್ಧಮಾಡಿ ತೋರಿಸಿದರು. ಸಸ್ಯಗಳ ಮತ್ತು ಪ್ರಾಣಿಗಳ ಅಂಗಾಂಶಗಳು ಬಾಹ್ಯ ಚೋಧನೆಗೆ ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತೋರಿಸಲು ಅವರು “ಕ್ರೆಸ್ಕೋಗ್ರಾಫ್ ” ಎಂಬ ಯಂತ್ರವೊಂದನ್ನು ತಯಾರು ಮಾಡಿದರು.

ಜಗದೀಶಚಂದ್ರ ಬೋಸ್ ಜೀವಶಾಸ್ತ್ರಜ್ಞ ಮಾತ್ರವಲ್ಲ, ಖ್ಯಾತ ಭೌತಶಾಸ್ತ್ರಜ್ಞ ಕೂಡ ಆಗಿದ್ದರು. ಅವರು ವಿದ್ಯುತ್-ಕಾಂತೀಯ ಅಲೆಗಳ ಉತ್ಪತ್ತಿ ಮಾಡಬಲ್ಲಂಥ ಒಂದು ಸಣ್ಣ ಉಪಕರಣವನ್ನು ಕೂಡ ತಯಾರಿಸಿದ್ದರು. ಹೃಸ್ವ ಶ್ರೇಣಿಯ ಸೂಕ್ಷ್ಮ ರೇಡಿಯೊ ತರಂಗಗಳನ್ನು ಉತ್ಪಾದಿಸುವ ಸಾಧನವೊಂದನ್ನು ಮೊತ್ತಮೊದಲು ನಿರ್ಮಾಣ ಮಾಡಿದವರು ಜಗದೀಶ ಚಂದ್ರ ಬೋಸರೇ ಎಂದು ಹೇಳಲಾಗುತ್ತದೆ. ಆದರೆ ಮಾರ್ಕೋನಿ ತನ್ನ ಸಂಶೋಧನೆಗೆ ಬೇಗ ಪೇಟೆಂಟ್ ಪಡೆದು ಅಂತರರಾಷ್ಟ್ರೀಯ ಜನಪ್ರಿಯತೆಯನ್ನು ಸಂಪಾದಿಸಿದ್ದರಿಂದ ಈ ಕ್ಷೇತ್ರದಲ್ಲಿ ಬೋಸ್ ಅವರ ಸಂಶೋಧನೆ ಅಷ್ಟು ಪ್ರಸಿದ್ಧಿಯನ್ನು ಪಡೆಯಲಿಲ್ಲ. ಸಸ್ಯಗಳಿಗೆ ಮಾತ್ರವಲ್ಲ ಲೋಹಗಳಿಗೆ ಕೂಡ ಸಂವೇದನಾ ಸಾಮರ್ಥ್ಯ ಇರುತ್ತದೆಂಬುದನ್ನು ಕಂಡು ಸಂವೇದನಾ ಸಾಮರ್ಥ್ಯ ಇರುತ್ತದೆಂಬುದನ್ನು ಕಂಡು ಹಿಡಿಯಲು ಅವರು ಅನೇಕ ಪ್ರಯೋಗಗಳನ್ನು ಮಾಡಿದರು.

ಬೋಸ್ ತುಂಬ ಆತ್ಮಗೌರವವುಳ್ಳ ವ್ಯಕ್ತಿಯಾಗಿದ್ದರು. ಬ್ರಿಟಿಷ್ ಸರಕಾರ ಯೂರೋಪಿಯನ್ ಅಧ್ಯಾಪಕರುಗಳಿಗೆ ಕೊಡುತ್ತಿದ್ದಷ್ಟು ಸಂಬಳವನ್ನು ತಮಗೂ ಕೊಡುವವರೆಗೆ ಅವರು ಸಂಬಳವನ್ನೇ ಸ್ವೀಕರಿಸಿರಲಿಲ್ಲ. ಭಾರತಕ್ಕೆ ವೈಜ್ಞಾನಿಕ ಕ್ಷೇತ್ರದಲ್ಲಿ ಅಪಾರ ಕೀರ್ತಿ ತಂದುಕೊಟ್ಟ ಈ ಮಹಾನ್ ವಿಜ್ಞಾನಿ ನವೆಂಬರ್ ೨೩, ೧೯೩೭ರಂದು ನಿಧನರಾದರು.