ಜಗನ್ನಾಥದಾಸರುಸುಲಭವಾದ ಕನ್ನಡದಲ್ಲಿ ಶಾಸ್ತ್ರ ವಿಚಾರಗಳನ್ನೂ ನೀತಿಯನ್ನೂ ಪ್ರಸಾರ ಮಾಡಿದ ಹರಿದಾಸರಲ್ಲಿ ಒಬ್ಬರು. ವಿದ್ಯೆಯ ಅಹಂಕಾರದಿಂದ ಮೆರೆದ ಶ್ರೀನಿವಾಸಾಚಾರ್ಯರು ದೇವರಿಗೆ ತಮ್ಮನ್ನು ಅರ್ಪಿಸಿಕೊಂಡು ಬಾಳಿದರು.

ಜಗನ್ನಾಥದಾಸರು

‘‘ವಿಜಯದಾಸವರೇಣ್ಯರೆ, ಈ ಅಜ್ಞಾನಿಯ ಅಪರಾಧ ವನ್ನು ಕ್ಷಮಿಸಬೇಕು.’’

‘‘ಆಚಾರ್ಯರೆ, ತಾವು ಈ ರೀತಿ ನನ್ನನ್ನು ಬೇಡುವುದುಂಟೆ? ಶಾಸ್ತ್ರಸಂಪನ್ನರೂ ಪಂಡಿತೋತ್ತಮರೂ ಆದ ತಾವು ಮಾಡಿದ ತಪ್ಪಾದರೂ ಏನು?’’

‘‘ಅಪರೋಕ್ಷ ಜ್ಞಾನಿ (ಇತರರ ಕಣ್ಣಿಗೆ ಕಾಣದ್ದನ್ನು ಕಂಡವರು) ಗಳಾದ ತಮ್ಮ ಆಜ್ಞೆಯನ್ನು ನಾನು ಮೀರಿದ್ದರಿಂದ, ಹೊಟ್ಟೆಯನೋವು ನನ್ನನ್ನು ಒಂದೇ ಸಮನೆ ಬಾಧಿಸುತ್ತಿದೆ. ಅದನ್ನು ನಿವಾರಿಸಲು ನಿಮ್ಮನ್ನೇ ಆಶ್ರಯಿಸಬೇಕೆಂದು ಮಂತ್ರಾಲಯದ ಗುರುಗಳ ಪ್ರೇರಣೆಯಾಗಿದೆ. ಇನ್ನು ಹೆಚ್ಚು ವಿಜ್ಞಾಪಿಸಲು ನಾನು ಶಕ್ತನಲ್ಲ.’’

ಪ್ರಾರಬ್ಧ ಕರ್ಮದಿಂದ ಅಜ್ಞಾನವು ಆವರಿಸಿಕೊಂಡಿದ್ದ ಮಾನವಿಯ ಶ್ರೀನಿವಾಸಾಚಾರ್ಯರ ಅಹಂಕಾರವು ಕ್ರಮ ಕ್ರಮವಾಗಿ ಇಳಿಮುಖವಾಗಿರುವುದ್ನು ಕಂಡ ವಿಜಯದಾಸರು, ಅವರ ಮೇಲೆ ತಮ್ಮ ಕರುಣೆಯ ನೋಟವನ್ನು ಬೀರಿದರು.

‘‘ಶ್ರೀನಿವಾಸಾಚಾರ್ಯರೆ, ನಿಮ್ಮ ಈ ಹೊಟ್ಟೆನೋವಿಗೆ ತಕ್ಕ ಔಷಧವನ್ನು ನನ್ನ ಶಿಷ್ಯೋತ್ತಮರಾದ ಗೋಪಾಲದಾಸರು ಬಲ್ಲರು. ನೀವು ಈಗಲೇ ಉತ್ತನೂರಿಗೆ ಹೋಗಿ ಅವರನ್ನು ನೋಡಿರಿ. ಅವರು ನಿಮ್ಮ ಕೋರಿಕೆಯನ್ನು ತಪ್ಪದೆ ನೆರವೇರಿಸಿಕೊಡುವರು.’’

ಅನುಗ್ರಹವಾಯಿತು

ವಿಜಯದಾಸರ ಅನುಗ್ರಹವಾಯಿತೆಂದು ಬಗೆದ ಶ್ರೀನಿವಾಸಾಚಾರ್ಯರು ಸ್ವಲ್ಪವೂ ತಡಮಾಡದೆ ನೇರವಾಗಿ ಉತ್ತನೂರಿಗೆ ತೆರಳಿದರು. ವಿಜಯದಾಸರ ಶಿಷ್ಯರಲ್ಲಿ ಗಣ್ಯರೂ, ಭವಿಷ್ಯವನ್ನು ತಿಳಿದವರೂ ಆಗಿದ್ದ ಗೋಪಾಲದಾಸರು ಮಹಾಪಂಡಿತರಾದ ಶ್ರೀನಿವಾಸಾಚಾರ್ಯರು ತಮ್ಮಲ್ಲಿಗೆ ಧಾವಿಸಿ ಬರುತ್ತಿದ್ದ ಉದ್ದೇಶವನ್ನು ಗ್ರಹಿಸಿ, ಅವರನ್ನು ಅತ್ಯಂತ ಅಭಿಮಾನದಿಂದ ಬರಮಾಡಿಕೊಂಡರು. ಶ್ರೀನಿವಾಸಾಚಾರ್ಯರು ಪಾಂಡಿತ್ಯಮದದಿಂದ ವಿಜಯದಾಸರನ್ನು ಪರೋಕ್ಷವಾಗಿ ಅಲಕ್ಷಿಸಿದ್ದರು. ಎಲ್ಲವನ್ನೂ ಮುಚ್ಚುಮರೆಯಿಲ್ಲದೆ ಗೋಪಾಲದಾಸರಲ್ಲಿ ಬಿನ್ನವಿಸಿಕೊಂಡರು. ‘ನೀವೇ ನನ್ನನ್ನು ಕಾಪಾಡಬೇಕು’ ಎಂದು ಬೇಡಿದರು. ವಿಜಯದಾಸರ ಅಂತಃಕರಣವನ್ನು ಚೆನ್ನಾಗಿ ಬಲ್ಲ ಗೋಪಾಲದಾಸರು, ಶ್ರೀನಿವಾಸಾಚಾರ್ಯರ  ಪರವಾಗಿ ಸಮಸ್ತರೋಗ ನಿವಾರಕನಾದ ಧನ್ವಂತ್ರಿಯನ್ನು ಪ್ರಾರ್ಥಿಸಿಕೊಂಡರು. ಮಂತ್ರಸಮಾನವಾದ ಗೋಪಾಲದಾಸರ ಮಾತುಗಳ ಮೇರೆಗೆ ಧನ್ವಂತ್ರಿಯು ಒಲಿಯಲು, ಆಚಾರ್ಯರಿಗೆ ತಲೆದೋರಿದ ಹೊಟ್ಟೆಯ ನೋವು ನಿವಾರಣೆಯಾಯಿತು. ಗೋಪಾಲದಾಸರು ಮಂತ್ರಿಸಿ ಕೊಟ್ಟ ಜೋಳದ ಭಕ್ಕರಿಯೇ ಅವರಿಗೆ ಔಷಧವಾಯಿತು. ಅಷ್ಟೇ ಅಲ್ಲ; ಶ್ರೀನಿವಾಸಾಚಾರ್ಯರು ಹೆಚ್ಚು ವರ್ಷ ಬದುಕುವುದಿಲ್ಲ ಎಂದು ಅರಿತ ಗೋಪಾಲದಾಸರು, ತಮ್ಮ ಗುರುಗಳ ಅಭೀಷ್ಟದಂತೆ ತಮ್ಮ ಆಯುಸ್ಸಿನಲ್ಲಿ ನಲ್ವತ್ತು ವರ್ಷಗಳನ್ನೂ ಅವರಿಗೆ ಧಾರೆ ಎರೆದು ಕೊಟ್ಟರು. ಆ ಕ್ಷಣದಿಂದ ಶ್ರೀನಿವಾಸಾಚಾರ್ಯರಿಗೆ ಹರಿದಾಸರಲ್ಲಿದ್ದ ತಾತ್ಸಾರವು (ಅಸಡ್ಡೆ) ಉಡುಗಿತು. ತಾವೂ ಹರಿದಾಸರಾಗಬೇಕೆಂಬ ಹಂಬಲ ಮಿಡಿಯಿತು. ತಮ್ಮ ಅಪೇಕ್ಷೆಯನ್ನು ಗೋಪಾಲದಾಸರಲ್ಲಿ ವಿನಂತಿ ಮಾಡಿಕೊಂಡರು. ಅವರು ಸುಪ್ರಸನ್ನರಾಗಿ ‘‘ಆಚಾರ್ಯರೆ, ನೀವು ಪಂಢರಾಪುರಕ್ಕೆ ತೆರಳಿ ಪಾಂಡುರಂಗನ ದರ್ಶನ ಮಾಡಿರಿ. ಆ ಪರಮಾತ್ಮನು ಒಲಿಯುವುದೇ ತಡ, ನಿಮಗೆ ಅಂಕಿತ ದೊರೆಯುವುದು. ನಿಮ್ಮ ಹರಿದಾಸ ಜೀವನ ಅತಿಶಯವೆನ್ನಿಸಿ, ನಿಮ್ಮ ಬಾಳು ಸಾರ್ಥಕವಾಗುವುದು’’ ಎಂದು ದಾರಿ ತೋರಿದರು.

ಜಗನ್ನಾಥ ವಿಠಲ

ಅದೇ ಮೇರೆಗೆ ಶ್ರೀನಿವಾಸಾಚಾರ್ಯರು ಪಂಢರಾಪುರಕ್ಕೆ ಹೊರಟು, ಅಲ್ಲಿ ಪಾಂಡುರಂಗವಿಠಲನನ್ನು ಹೃತ್ಪೂರ್ವಕವಾಗಿ ಸೇವಿಸಿದರು. ಒಮ್ಮೆ ಚಂದ್ರಭಾಗಾ ನದಿಯಲ್ಲಿ ಮುಳುಗಿ ಸ್ನಾನಮಾಡುತ್ತಿರುವಾಗ ಏನೋ ಅಡ್ಡ ಬಂದಂತಾಯಿತು. ಕಣ್ಣುಬಿಟ್ಟು ನೋಡಿದರು. ಅಪೂರ್ವವಾದ ಒಂದು ಶಿಲೆ ಕಾಣಿಸಿತು! ಶ್ರೀನಿವಾಸಾಚಾರ್ಯರು ನಿಬ್ಬೆರಗಾದರು. ಗೋಪಾಲದಾಸರ ಮಾತುಗಳು ನೆನಪಾದವು. ಅದೇ ಪರಮಾತ್ಮನ ಪ್ರಸಾದವೆಂದು ನಿಶ್ಚಯಿಸಿದರು. ಕೂಡಲೇ ವಿಠಲನನ್ನು ಕುರಿತು ಹಾಡಲು ಆರಂಭಿಸಿದರು. ‘‘ವಿಠಲಯ್ಯಾ, ವಿಠಲಯ್ಯಾ’’ ಎಂದು ಪ್ರಾರಂಭವಾಗುವ ಹಾಡನ್ನು ಆಗಲೇ ರಚಿಸಿದ್ದು. ಅದರಲ್ಲಿ ಹೇಳುತ್ತಾರೆ:

ನೀ ಕರುಣಿಸದೆ ನಿರಾಕರಿಸಲು ಎನ್ನ
ಸಾಕುವರಾರೋ ದಯಾಕರ ಮೂರುತಿ
ಶರಣಾಗತರನು ಪೊರೆವೆನೆಂಬ ತವ
ಬಿರುದುಕಾಣೊ ಸಿರಿವರದ ಜಗನ್ನಾಥ

ಅಂದಿನಿಂದ ‘ಜಗನ್ನಾಥವಿಠಲ’ ಎಂಬ ಅಂಕಿತದಿಂದ ಕೃತಿಗಳನ್ನು ರಚಿಸತೊಡಗಿದರು. ಪಂಡಿತೋತ್ತಮರಾಗಿದ್ದ ಶ್ರೀನಿವಾಸಾಚಾರ್ಯರು ಜಗನ್ನಾಥದಾಸರೆಂಬ ಹೆಸರಿನಿಂದ ಹರಿದಾಸರಲ್ಲಿ ಮಾನ್ಯರಾದರು.

ನೋಡಲು ಪವಾಡದಂತೆ ವಿಸ್ಮಯವೆನ್ನಿಸಿದರೂ, ಈ ಅಪೂರ್ವ ಘಟನೆಯನ್ನು ಅವರೇ ಹಾಡಿ, ಅದಕ್ಕೆ ಕನ್ನಡಿ ಹಿಡಿದಿರುವುದರಿಂದ ನಾವು ನಂಬಬಹುದಾಗಿದೆ.

ತಂದೆ-ತಾಯಿ

ಒಂದು ಕಾಲದಲ್ಲಿ ಹರಿದಾಸ ಸಾಹಿತ್ಯಕ್ಕೆ ವಿಜಯನಗರ  ಪ್ರಮುಖ ಕೇಂದ್ರವಾಗಿತ್ತು. ಶ್ರೀಪಾದರಾಜರು, ಶ್ರೀ ವ್ಯಾಸರಾಯರು, ಶ್ರೀ ವಾದಿರಾಜರು, ಕನಕದಾಸರು ಮತ್ತು ಪುರಂದರದಾಸರುಗಳು ಅಲ್ಲಿ ಬಾಳಿ ಬೆಳಗಿದರು.

ಜಗನ್ನಾಥದಾಸರ ಮೊದಲು ಹೆಸರು ಶ್ರೀನಿವಾಸಾ ಚಾರ್ಯ. ಅವರ ತಂದೆಯ ಹೆಸರು ನರಸಪ್ಪ; ತಾಯಿಯ ಹೆಸರು ಲಕ್ಷಿ ಬಾಯಿ. ನರಸಪ್ಪನವರು ಮಾನವಿ ತಾಲ್ಲೂಕಿಗೆ ಸೇರಿದ ಬ್ಯಾಗವಟ್ಟಿ ಎಂಬ ಗ್ರಾಮದಲ್ಲಿ ಶ್ಯಾನುಭೋಗರಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಒಮ್ಮೆ, ತಮ್ಮ ಮೇಲಿನ ಅಧಿಕಾರಿಗಳ ಕೋಪದರ್ಪಗಳಿಂದ ನೊಂದುಕೊಂಡು ಆ ಕರಣಿಕ ವೃತ್ತಿಯನ್ನು ತ್ಯಜಿಸಿದರು. ವಿರಕ್ತರಾದ ನರಸಪ್ಪನವರು, ಆಗಿನ ಕಾಲದಲ್ಲಿ ಆದವಾನಿಯಲ್ಲಿದ್ದ ಪಂಗನಾಮದ ತಿಮ್ಮಣ್ಣದಾಸರನ್ನು ಆಶ್ರಯಿಸಿದರು. ಅವರು ನರಸಪ್ಪನವರಿಗೆ ‘ನರಸಿಂಹವಿಠಲ’ ಎಂಬ ಅಂಕಿತವನ್ನಿತ್ತು, ಮಾನವಿಯಲ್ಲಿ ಅವರಿಗೆ ತಕ್ಕ ಜೀವನೋಪಾಯವನ್ನು ಕಲ್ಪಿಸಿಕೊಟ್ಟರು.

ಇಂಥ ಸಾತ್ವಿಕ ತಂದೆತಾಯಿಗಳಿಗೆ ಕ್ರಿ.ಶ. ೧೭೨೮ ರಲ್ಲಿ ಒಂದು ಗಂಡುಮಗು ಹುಟ್ಟಿತು. ಆ ದಂಪತಿಗಳು ತಿರುಪತಿಯ ಶ್ರೀನಿವಾಸನ ಭಕ್ತರಾಗಿದ್ದುದರಿಂದ, ತಮ್ಮ ಮಗನಿಗೆ ಶ್ರೀನಿವಾಸನೆಂದೇ ಹೆಸರಿಟ್ಟರು. ಶ್ರೀನಿವಾಸನು ವಯಸ್ಸಿಗೆ ತಕ್ಕಂತೆ ವಿದ್ಯಾರ್ಜನೆಯಲ್ಲಿ ಮುಂದುವರಿದನು. ಅವನಿಗೆ ಸಂಸ್ಕೃತದಲ್ಲಿ ವಿಶೇಷವಾದ ಆಸಕ್ತಿ ಇದ್ದುದರಿಂದ ಅದರಲ್ಲಿಯೇ ಹೆಚ್ಚು ಪರಿಶ್ರಮವನ್ನು ಪಡೆಯಲು ತೊಡಗಿದನು. ಮಂತ್ರಾಲಯದ ಶ್ರೀ ವರದೇಂದ್ರ ತೀರ್ಥರಲ್ಲಿಗೆ ಶ್ರೀನಿವಾಸನು ಬಂದು, ಶ್ರೀಗಳನ್ನು ಕುರಿತು ‘ಶ್ರೀ ವರದೇಂದ್ರ ಪಂಚರತ್ನ’ ಎಂಬ ಸ್ತೋತ್ರಮಾಲಿಕೆಯನ್ನು ಸಂಸ್ಕೃತದಲ್ಲಿ ರಚಿಸಿ ಅವರಿಗೆ ಸಮರ್ಪಿಸಿದನು. ಶ್ರೀಗಳವರು ಬಾಲಕನ ಕವಿತಾ ಶಕ್ತಿಯನ್ನು ಕಂಡು, ಮನಸಾರೆ ಮೆಚ್ಚಿ, ಹೃತ್ಪೂರ್ವಕವಾಗಿ ಆಶೀರ್ವದಿಸಿದರು. ಶ್ರೀಗಳವರ ಮೇಲ್ವಿಚಾರಣೆಯಲ್ಲಿ ಶ್ರೀನಿವಾಸನು ಸಕಲ ಶಾಸ್ತ್ರಗಳಲ್ಲಿಯೂ ಪ್ರವೀಣನಾದನು. ವೇದ ಉಪನಿಷತ್ತುಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದನು. ಶ್ರೀನಿವಾಸನ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ಗಮನಿಸಿದ ಶ್ರೀಗಳವರು ಆತನಿಗೆ ‘ಆಚಾರ್ಯ’ ಎಂಬ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದರು. ಅಂದಿನಿಂದ ಶ್ರೀನಿವಾಸನು ‘ಶ್ರೀನಿವಾಸಾಚಾರ್ಯ’ ಎಂಬ ಹೆಸರಿಗೆ ಪಾತ್ರನಾಗಿ ಪ್ರಸಿದ್ಧಿಯನ್ನು ಪಡೆದನು.

ವಿನಯವಿಲ್ಲದ ವಿದ್ಯೆಯೇ ಶತ್ರು

ಶ್ರೀ ವರದೇಂದ್ರತೀರ್ಥರ ಶಿಷ್ಯರಾದ ಶ್ರೀನಿವಾಸಾ ಚಾರ್ಯರ ಪಾಂಡಿತ್ಯವನ್ನು ಕಂಡು ಪ್ರತಿಯೊಬ್ಬ ವಿದ್ವಾಂಸರೂ ಬೆರಗಾಗುತ್ತಿದ್ದರು. ವಿದ್ವತ್ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದ ಅವರಿಗೆ ಜಯವೆನ್ನುವುದು ಕಟ್ಟಿಟ್ಟ ಬುತ್ತಿಯಾಗಿತ್ತು. ತೇಜಸ್ವಿಯಾದ ಅಂಥ ಯುವಕನಿಗೆ ತುಂಬಿ ತುಳುಕುವ ಪಾಂಡಿತ್ಯ, ಪ್ರಶಸ್ತಿ ಪುರಸ್ಕಾರಗಳು ಲಭಿಸಲು ಅವನನ್ನು ಹಿಡಿದು ನಿಲ್ಲಿಸಬಲ್ಲವರುಂಟೆ? ದಿನಗಳು ಕಳೆದಂತೆಲ್ಲ ಶ್ರೀನಿವಾಸಾಚಾರ್ಯರ ಈ ಪಾಂಡಿತ್ಯವೇ ವಿದ್ಯಾಮದವಾಗಿ ಬೆಳೆಯತೊಡಗಿತ್ತು. ಸಂಸ್ಕೃತದ ಮೇಲಿನ ಅವರ ಅಭಿಮಾನ ಕನ್ನಡವನ್ನು ಕಡೆಗಣಿಸುವಂತೆ ಮಾಡಿತು. ಆಗಿನ ಕಾಲದಲ್ಲಿ ಶ್ರೀ ಮಧ್ವಾಚಾರ್ಯರ ಸಂಸ್ಕೃತ ಗ್ರಂಥಗಳನ್ನು ಗಾಢವಾಗಿ ಅಭ್ಯಾಸಮಾಡಿದ ವಿದ್ವಾಂಸರು ಹೇಗೆ ಅಸಂಖ್ಯಾತವಾಗಿ ತೋರಿಬರುತ್ತಿದ್ದರೋ ಹಾಗೆಯೇ ಅವರ ತತ್ವಗಳನ್ನು ತಿಳಿಯಾದ ಕನ್ನಡದಲ್ಲಿ ಹಾಡಿ ಹೇಳಬಲ್ಲ ಹರಿದಾಸರೂ ಮಿಗಿಲಾಗಿದ್ದರು.

ಸಂಸ್ಕೃತ ವಿದ್ಯಾರ್ಜನೆಯಿಂದ ತಮ್ಮ ಸಮಾನರು ಯಾರೂ ಇಲ್ಲವೆಂಬಂತೆ ಗರ್ವದಿಂದ ಬೀಗುತ್ತಿದ್ದ ಶ್ರೀನಿವಾಸಚಾರ್ಯರಿಗೆ ಈ ಹರಿದಾಸರನ್ನು ಕಂಡರೆ ತುಂಬ ಅಲಕ್ಷ್ಯ. ಹರಿದಾಸರಲ್ಲಿ ಪ್ರಮುಖರಾಗಿದ್ದ ವಿಜಯದಾಸರ ಬಗ್ಗೆಯೂ ಶ್ರೀನಿವಾಸಚಾರ್ಯರು ತುಂಬ ಹಗುರವಾಗಿಯೇ ಮಾತಾಡುತ್ತಿದ್ದರು. ‘ಕೂಸೀ ಮಗ ದಾಸನಿಗೆ ಶಾಸ್ತ್ರಜ್ಞಾನವೇನುಂಟು?’ ಎಂದು ಕಟುವಾಗಿ ಖಂಡಿಸುತ್ತಿದ್ದರು. ಆಚಾರ್ಯರ ಈ ವರ್ತನೆ ಅವರ ವಿದ್ವತ್ತನ್ನು ಕಂಡು ಮೆಚ್ಚಿದ್ದ ಆಪ್ತರಿಗೂ ಒಪ್ಪಿಗೆಯಾಗಲಿಲ್ಲ. ಆದರೆ, ಯಾರಿಗೂ ಅವರೊಂದಿಗೆ ವಾದಿಸುವ ಧೈರ್ಯವಿರಲಿಲ್ಲ.

ಹೊತ್ತು ಮೀರಿ ಊಟ ಮಾಡಿದರೆ-

ಒಂದು ಸಲ ವಿಜಯದಾಸರು ಮಾನವಿಗೆ ಬಂದು ಬೀಡುಬಿಟ್ಟರು. ತಮ್ಮ ಪದ್ಧತಿಯ ಮೇರೆಗೆ ಭಕ್ತಾದಿಗಳು ಸಮರ್ಪಿಸಿದ ವಿವಿಧ ಪದಾರ್ಥಗಳನ್ನು ಸ್ವೀಕರಿಸಿ, ಪೂಜಾದಿಗಳನ್ನು ನೆರವೇರಿಸಿ, ಸಮಸ್ತ ದೈವಭಕ್ತರಿಗೆ ತೀರ್ಥಪ್ರಸಾದವನ್ನು ಏರ್ಪಡಿಸಿದರು. ಶ್ರೀನಿವಾಸಾಚಾರ್ಯ ರಿಗೂ ವಿಜಯದಾಸರು ತಾವು ಏರ್ಪಡಿಸಿದ್ದ ತೀರ್ಥ ಪ್ರಸಾದಕ್ಕೆ ಬರುವಂತೆ ಆಹ್ವಾನವಿತ್ತರು. ಆ ಕರೆಯನ್ನು ಕೇಳಿದ ಶ್ರೀನಿವಾಸಾಚಾರ್ಯರಿಗಾದರೋ ವಿಜಯದಾಸರ ಮಾತು ಲಕ್ಷಕ್ಕೇ ಬರಲಿಲ್ಲ. ಅಂದಿನ ತೀರ್ಥಪ್ರಸಾದಕ್ಕೆ ಹೋಗಲೂ ಇಲ್ಲ. ಇದನ್ನು ಗಮನಿಸಿದ ವಿಜಯದಾಸರು, ಶ್ರೀನಿವಾಸಚಾರ್ಯರು ಬಾರದಿರಲು ಕಾರಣವೇನೆಂದು ತಿಳಿದು ಬರಲು ತಮ್ಮವರನ್ನು ಕಳುಹಿಸಿಕೊಟ್ಟರು. ಆ ವೇಳೆಗೆ ತಮ್ಮ ಮನೆಯಲ್ಲಿಯೇ ಉಂಡು ತಾಂಬೂಲವನ್ನು ಜಗಿಯುತ್ತಿದ್ದ ಶ್ರೀನಿವಾಸಾಚಾರ್ಯರು ಬಹಳ ಠೀವಿಯಿಂದ ಬಂದವರೊಡನೆ ‘‘ತಮಗೆ ಹೊತ್ತು ಮೀರಿ ಊಟ ಮಾಡಿದರೆ ಹೊಟ್ಟೆನೋವು ಬರುತ್ತದೆ. ಆದ್ದರಿಂದ ಬರಲಾಗಲಿಲ್ಲ’’ ಎಂದು ಏನೋ ಒಂದು ಕುಂಟು ನೆಪವನ್ನು ಹೇಳಿ ಕಳುಹಿಸಿದರು.

ವಿಜಯದಾಸರೇ ಗತಿ

ಭೃಗುವಿನ ಅಂಶವೆಂದು ಗಣ್ಯರಾಗಿದ್ದ ವಿಜಯದಾಸರ ಮಾತನ್ನು ಆಲಕ್ಷ  ಮಾಡಿದ ಶ್ರೀನಿವಾಸಾಚಾರ್ಯರಿಗೆ ಅದರ ಪ್ರತಿಫಲವನ್ನು ಅನುಭವಿಸಲು ಹೆಚ್ಚು ದಿನ ಬೇಕಾಗಲಿಲ್ಲ. ಅವರು ಆಡಿದ ನುಡಿಯೇ ಅವರಿಗೆ ತಿರುಗುಬಾಣವಾಯಿತು. ನಿಜವಾಗಿಯೂ ತಡೆಯಲಾರದಷ್ಟು ಹೊಟ್ಟೆಯ ಬೇನೆ ಕಾಣಿಸಿಕೊಂಡಿತು. ದಿನದಿನಕ್ಕೂ ಒಣಗಿ ಕಡ್ಡಿಯಂತಾದರು. ಯಾವ ಔಷಧವೂ ದಕ್ಕಲಿಲ್ಲ. ದೇವಾನುದೇವತೆಗಳಿಗೆಲ್ಲ ಹರಕೆ ಹೊತ್ತರು. ಏನೂ ಪ್ರಯೋಜನವಾಗಲಿಲ್ಲ. ಮಂತ್ರಾಲಯಕ್ಕೆ ಹೋಗಿ ಒಂದೇ ಮನಸ್ಸಿನಿಂದ ರಾಘವೇಂದ್ರ ಸ್ವಾಮಿಗಳ ಸೇವೆಸಲ್ಲಿಸಿದರು.

ಆಗ ಒಂದು ವಿಶೇಷ ಸಂಗತಿ ನಡೆಯಿತು ಎಂದು ಹೇಳುತ್ತಾರೆ. ಗುರು ರಾಘವೇಂದ್ರರು ಆಚಾರ್ಯರ ಅಂತರಂಗದಲ್ಲಿ ಕಾಣಿಸಿಕೊಂಡು, ‘ಅಹಂಕಾರದಿಂದ ವಿಜಯದಾಸರಂಥ ಹರಿದಾಸರನ್ನು ನಿಂದಿಸಿದುದೇ ನಿಮ್ಮ ಉದರಶೂಲೆಗೆ ಕಾರಣ. ಆದ್ದರಿಂದ, ವಿಜಯದಾಸರನ್ನು ಬಿಟ್ಟು ಬೇರೆ ಯಾರೂ ನಿಮ್ಮನ್ನು ಉದ್ಧರಿಸಲಾರರು’ ಎಂದು ಸ್ಪಷ್ಟಪಡಿಸಿದರು.

ಅಲ್ಲಿಂದ ಶ್ರೀನಿವಾಸಾಚಾರ್ಯರು ವಿಜಯದಾಸರಿದ್ದಲ್ಲಿಗೆ ಓಡಿದರು. ಅವರ ಪಾದಗಳ ಮೇಲೆ ಬಿದ್ದು, ‘‘ವಿಜಯ ದಾಸವರೇಣ್ಯರೆ, ಈ ಅಜ್ಞಾನಿಯ ಅಪರಾಧವನ್ನು ಕ್ಷಮಿಸಬೇಕು’’ ಎಂದು ಮೊರೆಯಿಟ್ಟರು. ಅವರಿಗೆ ಗುಣವಾದ ರೀತಿಯನ್ನು ಆಗಲೇ ಹೇಳಿದೆ.

ಮನಸ್ಸು ಕನ್ನಡಕ್ಕೆ ತಿರುಗಿತು

ಜಗನ್ನಾಥದಾಸರು ಅತ್ಯಲ್ಪ ಕಾಲದಲ್ಲಿಯೇ ಹರಿದಾಸ ಪ್ರಮುಖರೆನಿಸಿಕೊಂಡರು. ಒಂದು ಕಾಲದಲ್ಲಿ ಹರಿದಾಸರೆಂದರೆ ಅಲ್ಲಗಳೆಯುತ್ತಿದ್ದವರು ಈಗ ತಾವೇ ಹರಿದಾಸರಾಗಿ, ದಾಸಶ್ರೇಷ್ಠರಾದ ಪುರಂದರದಾಸರನ್ನು ಪೂಜ್ಯ ಭಾವದಿಂದ ಸ್ತುತಿಸಿರುವುದನ್ನು ಕಂಡರೆ, ಇದು ಎಂತಹ ಅಪೂರ್ವವಾದ ಹೃದಯ ಪರಿವರ್ತನೆ ಎನ್ನಿಸುತ್ತದೆ. ಕನ್ನಡವೆಂದರೆ ಹಿಂದೊಮ್ಮೆ ಕೀಳಾಗಿ ಕಾಣುತ್ತಿದ್ದ ಮಹನೀಯರು ಈಗ ಪುರಂದರದಾಸರ ಕನ್ನಡ ಕೀರ್ತನೆಗಳು ಹರಿಗೆ ಸುಪ್ರೀತವಾದುವು ಎಂದು ಹಿಗ್ಗಿ ಹೇಳಬೇಕಾದರೆ ಅವರ ಮನೋಧರ್ಮ ಎಷ್ಟರಮಟ್ಟಿಗೆ ಬದಲಾಯಿಸಿದೆ ಯೆಂದು ಸ್ಪಷ್ಟವಾಗುತ್ತದೆ.

ಜಗನ್ನಾಥದಾಸರು ಹರಿದಾಸ ದೀಕ್ಷೆಯನ್ನು ಕೈಕೊಂಡು ತಾವು ಮಾತ್ರ ಉದ್ಧಾರವಾದುದಲ್ಲದೆ ತಮ್ಮನ್ನು ಆಶ್ರಯಿಸಿ ಬಂದ ಇತರ ಜ್ಞಾನಿಗಳಿಗೂ ಹರಿದಾಸ ದೀಕ್ಷೆಯನ್ನು ಕೊಟ್ಟು ತಮ್ಮಗುರುವರ‍್ಯರಂತೆಯೇ ಬಂಧು ಬಳಗವನ್ನು ಬೆಳೆಸಿದರು.

ಜಗನ್ನಾಥದಾಸರ ಸಮಕಾಲೀನರೂ, ಅವರ ಅಚ್ಚು ಮೆಚ್ಚಿನ ಶಿಷ್ಯರೂ ಆದ ಪ್ರಾಣೇಶದಾಸರು ತಮ್ಮ ಗುರುಗಳು ಪ್ರಹ್ಲಾದನ ತಮ್ಮನಾದ ಸಹ್ಲಾದನ ಅಂಶದವ ರೆಂದೂ,ಅವರನ್ನು ರಂಗನೊಲಿದ ದಾಸರೆಂದೂ ಕೊಂಡಾಡಿರು ವರು. (ಜಗನ್ನಾಥದಾಸರು ರಂಗವಲ್ಲಿಯಲ್ಲಿ ಚಿತ್ರ ಬರೆಯುವುದರಲ್ಲಿಯೂ ನಿಪುಣರಾಗಿದ್ದುದರಿಂದ ಅವರನ್ನು ರಂಗೋಲಿದಾಸರೆಂದು ಕರೆಯುತ್ತಿದ್ದರೆಂದು ಪ್ರತೀತಿ. ಆದರೆ ರಂಗವೊಲಿದ ದಾಸರೆಂಬ ಹೆಸರೇ ಜನರ ಉಚ್ಚಾರಣೆಯಲ್ಲಿ ಈ ರೂಪಾಂತರವನ್ನು ತಾಳಿದ್ದರೂ ಆಶ್ಚರ‍್ಯವಿಲ್ಲ!)

ಜಗನ್ನಾಥದಾಸರು ಮೇಲಿಂದ ಮೇಲೆ ಪವಿತ್ರವಾದ ಯಾತ್ರಾಸ್ಥಳಗಳಿಗೆ ಹೋಗಿ ಬರುತ್ತಿದ್ದರೆನ್ನುವುದಕ್ಕೆ ಅವರು ರಚಿಸಿರುವ ಹಲವಾರು ಕೀರ್ತನೆಗಳೇ ಸಾಕ್ಷಿಗಳಂತಿವೆ. ಅವರ ಭಂಡಾರದಲ್ಲಿ ಕೀರ್ತನೆಗಳು, ಸುಳಾದಿಗಳು ಮತ್ತು ಉಗಾಭೋಗಗಳು ತಕ್ಕಮಟ್ಟಿಗೆ ಕಂಡುಬಂದರೆ, ಶ್ರೀ ಮಧ್ವಾಚಾರ್ಯರಿಂದ ಬೋಧಿಸಲ್ಪಟ್ಟ ದ್ವೆ ತ ಸಿದ್ಧಾಂತದ ಪ್ರಮುಖ ಪ್ರಮೇಯಗಳನ್ನು ಒಳಗೊಂಡಿರುವ ‘ಶ್ರೀ ಹರಿಕಥಾಮೃತ ಸಾರ’  ಎಂಬ ಭಾಮಿನಿಷಟ್ಪದಿಯ ಗ್ರಂಥ ಇಂದಿಗೂ ಅದ್ವಿತೀಯವೆನ್ನಿಸಿದೆ. ಸಂಸ್ಕೃತ ಶಾಸ್ತ್ರಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಈ ಮಹಿಮಾವಂತರು ರಚಿಸಿರುವ ಯಾವ ಬರಹವನ್ನೇ ನೋಡಲಿ, ಅಲ್ಲಿ ಅವರ ಪಾಂಡಿತ್ಯದ ಪ್ರಭೆ ಉಜ್ವಲವಾಗಿ ತೋರಿಬರುತ್ತದೆ. ಆದರೆ, ಎಂತಹ ಗಹನ ವಿಚಾರವೇ ಆಗಲಿ ಕಠಿಣ ಸಮಸ್ಯೆಯೇ ಆಗಲಿ, ಸಾಮಾನ್ಯರೂ ಕೇಳಿ ಸಂತೋಷಿಸುವಂತೆ ಕೀರ್ತನೆಯ ರೂಪದಲ್ಲಿಯೋ ಭಾಮಿನಿಷಟ್ಪದಿಯಲ್ಲಿಯೋ ಕಡೆಗೆ ಸರ್ವಜನ ಪ್ರಿಯವಾದ ತ್ರಿಪದಿಯ ಮಟ್ಟನಲ್ಲಿಯೋ ತಿಳಿಗನ್ನಡದಲ್ಲಿ ಹೇಳಬಲ್ಲ ಇವರ ಶಕ್ತಿ ಮೆಚ್ಚುವಂತಹದು.

ಮೈಸೂರಿನಲ್ಲಿ

ಮೈಸೂರು ಸಂಸ್ಥಾನದ ಆಡಳಿತವನ್ನು ಮಹಾರಾಣಿ ಲಕ್ಷ್ಮಮಣ್ಣಿಯವರು ತಮ್ಮ ಮಗನ ಹೆಸರಿನಲ್ಲಿ ನಡೆಸುತ್ತಿದ್ದ ಕಷ್ಟಕಾಲದಲ್ಲಿ ಜಗನ್ನಾಥದಾಸರು ನಾನಾ ಯಾತ್ರಾಸ್ಥಳಗಳನ್ನು ಸುತ್ತಾಡಿಕೊಂಡು ಮೈಸೂರು ಪ್ರಾಂತಕ್ಕೂ ಬಂದರು. ಆಗತಾನೆ ವಿಷಮ ಪರಿಸ್ಥಿತಿಗಳಿಂದ ಪಾರಾಗಿ ಚೇತರಿಸಿಕೊಳ್ಳುತ್ತಿದ್ದ ದೈವಭಕ್ತಿ ಸಂಪನ್ನರಾದ ರಾಣಿಯವರು ಜಗನ್ನಾಥದಾಸರಿಂದ ಹರಿಕೀರ್ತನೆಗಳನ್ನು ಮಾಡಿಸಿ ಸಂತೋಷಪಟ್ಟರು. ದಾಸರಿಗೆ ಬೇಕಾದ ಹಾಗೆ ಸನ್ಮಾನವನ್ನು ಮಾಡಿದ್ದಲ್ಲದೆ, ಅವರಿಗೆ ಒಂದು ಪಲ್ಲಕ್ಕಿಯನ್ನೂ ಕಾಣಿಕೆಯಾಗಿ ಕೊಟ್ಟು ಗೌರವಿಸಿದರು.

ಇದೇ ಸಮಯದಲ್ಲಿ ಅರಸು ಮನೆತನಕ್ಕೆ ವಿಶ್ವಾಸ ಪಾತ್ರರಾಗಿದ್ದ ಪೂರ್ಣಯ್ಯನವರಿಗೆ ತಮ್ಮ ದಿವಾನಕಾರ‍್ಯದಲ್ಲಿ ಬಿಡುವೇ ಇರಲಿಲ್ಲ. ಅವರಿಗೂ ಜಗನ್ನಾಥದಾಸರ ಹರಿಕೀರ್ತನೆಯನ್ನು ಕೇಳಬೇಕೆಂಬ ಹಂಬಲವಾಯಿತು. ದಿವಾನರಿಗೆ ಆಪ್ತರಾಗಿದ್ದ ವಿದ್ವಾಂಸರಿಗಾದರೋ ಜಗನ್ನಾಥರ ಬಗ್ಗೆ ಅಷ್ಟು ಆದರವಿರಲಿಲ್ಲ. ಇದನ್ನು ಮನಗಂಡ ಪೂರ್ಣಯ್ಯನವರು ಅವರ ಸಲಹೆಯನ್ನು ಕೇಳಿದರು. ಅಸೂಯಾಪರರಾದ ಆ ವಿದ್ವಾಂಸರು ಏಕಾದಶಿಯ ದಿನ ದಾಸರ ಹರಿಕಥೆಯನ್ನು ಏರ್ಪಡಿಸಬಹುದೆಂದೂ ಅವರಿಗೆ ಸಂಭಾವನೆಗಾಗಿ ಹೊದೆಯಲು ಒಂದು ಧಾವಳಿಯನ್ನೂ, ಐದು ರೂಪಾಯಿ ದಕ್ಷಿಣೆಯನ್ನೂ ಕೊಟ್ಟರೆ ಸಾಕೆಂದೂ ಸೂಚಿಸಿದರು. ಸೂಕ್ಷ್ಮಮತಿಗಳಾದ ಪೂರ್ಣಯ್ಯನವರು ಹೆಚ್ಚು ಮಾತಾಡದೆ, ಏಕಾದಶಿಯ ದಿನದಂದೇ ಜಗನ್ನಾಥರ ಹರಿಕೀರ್ತನೆಯನ್ನು ಏರ್ಪಡಿಸಿದರು. ಜ್ಞಾನ ಮತ್ತು ಭಕ್ತಿಗಳೆರಡರಲ್ಲಿಯೂ ಮೇಲುಗೈಯಾಗಿದ್ದ ಜಗನ್ನಾಥದಾಸರು ಅತ್ಯಂತ ರಸವತ್ತಾಗಿ ಹರಿಕೀರ್ತನೆಯನ್ನು ಮಾಡಿದರು. ಅಷ್ಟೇ ಅಲ್ಲದೆ, ಅಂದಿನ ಕೀರ್ತನ ಸಮಾರಂಭಕ್ಕೆ ಮುಂಚಿತವಾಗಿ ದಾಸರು ರಂಗವಲ್ಲಿಯಲ್ಲಿ ಉಪಾಸನಾ ಚಕ್ರವನ್ನು ಬರೆದು ಅದರ ನಡುವೆ ಶ್ರೀರಂಗದಲ್ಲಿನ ರಂಗನಾಥನನ್ನು ಭವ್ಯವಾಗಿ ಚಿತ್ರಿಸಿದರು. ದೇವರಿಗೆ ಯಾವ ಆಭರಣವನ್ನೂ ಸೂಚಿಸದೆ ಕೇವಲ ತುಲಸೀಮಾಲೆಯನ್ನು ಮಾತ್ರ ಬರೆದಿದ್ದರು. ಅಂದಿನ ಜಾಗರಣೆ ಎಲ್ಲರ ಮನಸ್ಸಿಗೆ ಒಪ್ಪಿತು. ಗುಣಗ್ರಾಹಿಗಳಾದ ಪೂರ್ಣಯ್ಯನವರಂತೂ ಜಗನ್ನಾಥದಾಸರ ಶಕ್ತಿಗೆ ಬೆರಗಾದರು. ಕಥೆ ಮುಗಿದ ಬಳಿಕ, ಕುತೂಹಲಚಿತ್ತರಾಗಿ, ‘‘ರಂಗನಾಥನಿಗೆ ಒಡವೆಗಳನ್ನು ಯಾಕೆ ಸೂಚಿಸಿಲ್ಲ?’’ ಎಂದು ಪ್ರಶ್ನಿಸಿದರು. ದಾಸರು ‘‘ರಾಯರೆ, ಈ ದಿನ ಶ್ರೀರಂಗದಲ್ಲಿ ಸ್ವಾಮಿಗೆ ಯಾವ ಆಭರಣವನ್ನೂ ಇಟ್ಟಿಲ್ಲ. ಆದ್ದರಿಂದ ನಾನೂ ಹಾಗೆಯೇ ಮಾಡಿದೆ’’ ಎಂದು ಉತ್ತರವಿತ್ತರು. ಅನಂತರ ವಿಚಾರಿಸಿ ನೋಡಿದ್ದರಲ್ಲಿ, ಅಂದು ಸ್ವಾಮಿಯ ಆಭರಣಗಳನ್ನು ಒಪ್ಪವಿಡಲು ತೆಗೆದಿಟ್ಟಿದುದಾಗಿ ತಿಳಿದು ಬಂದಿತು. ದಿವಾನರಿಗೆ ದಾಸರ ಮಹಿಮೆಯನ್ನು ಕಂಡು ಬೆರಗಾಯಿತು. ಕಡೆಯದಾಗಿ ಹರಿದಾಸರಿಗೆ ಸಂಭಾವನೆ ಕೊಡುವ ಸಲುವಾಗಿ ಒಂದು ಬೆಳ್ಳಿಯ ತಟ್ಟೆಯ ತುಂಬ ವರಾಹಗಳನ್ನು ಸಮರ್ಪಿಸಿ ಜರತಾರಿ ಶಾಲು ಜೋಡಿಯನ್ನು ಹೊದಿಸಿದರು. ಜಗನ್ನಾಥದಾಸರು ಒಡನೆಯೇ ‘‘ರಾಯರೇ! ನನಗೆ ಇಷ್ಟು ಭಾರಿ ಸನ್ಮಾನದ ಅಗತ್ಯವಿರಲಿಲ್ಲ. ಈ ಮೊದಲೇ ನಿಮ್ಮ ವಿದ್ವಾಂಸರು ಸಲಹೆ ಮಾಡಿದ್ದಂತೆ, ಹೊದೆಯಲು ಒಂದು ಸಾಧಾರಣ ಧಾವಳಿ, ಐದು ರೂಪಾಯಿ ಸಂಭಾವನೆ ಕೊಟ್ಟರೇ ಸಾಕಾಗುತ್ತಿತ್ತು’’ ಎಂದು ಸೌಮ್ಯವಾಗಿ ತಿಳಿಸಿದರು. ಹರಿದಾಸರ ಸೂಕ್ಷ್ಮಬುದ್ಧಿಯನ್ನು ಕಂಡು ಪೂರ್ಣಯ್ಯನವರು ಬೆರಗಾದರು. ತಮ್ಮ ಅಪ್ತೇಷ್ಟರ ಸಂಕುಚಿತ ಮನಸ್ಸಿಗಾಗಿ ಮರುಗಿ, ದಿವಾನರು ತಮ್ಮ ಮರ‍್ಯಾದೆಗೆ ತಕ್ಕಂತೆ ಜಗನ್ನಾಥದಾಸರನ್ನು ಸತ್ಕರಿಸಿ ಕೃತಾರ್ಥರಾದರು.

ಕಡುಲೋಭಿಗೆ ದಾರಿ ತೋರಿದರು

ಜಗನ್ನಾಥದಾಸರ ಔದಾರ್ಯದಿಂದ ಅನೇಕರು ಉದ್ಧಾರವಾದರು. ಒಮ್ಮೆ, ಅವರು ತಮ್ಮ ಪರಿವಾರದೊಂದಿಗೆ ಸುರಪುರದತ್ತ ಹೊರಟಿದ್ದರು. ಒಬ್ಬ ಬಡಬ್ರಾಹ್ಮಣನು ಅವರ ಗುಂಪಿನಲ್ಲಿ ಸೇರಿ, ಅವರೊಂದಿಗೇ ಬರಲು ಆರಂಭಿಸಿದನು. ದಾಸರಿಗೆ ಈ ವಿಚಾರ ಗಮನಕ್ಕೆ ಬಂದಿತು. ಎಂದಿನಂತೆ ಎಲ್ಲರಿಗೂ ತೀರ್ಥವನ್ನು ಕೊಡುವಲ್ಲಿ, ತನ್ನ ಕೈಯೊಡ್ಡಿದ ಆ ಬ್ರಾಹ್ಮಣನನ್ನು ನೋಡಿ ಆತನ ವೃತ್ತಾಂತವೇನೆಂದು ವಿಚಾರಿಸಿದರು. ಆ ಬ್ರಾಹ್ಮಣನು ತನ್ನ ದಾರಿದ್ರವನ್ನೆಲ್ಲ ಹೇಳಿಕೊಂಡು, ಬಡಪಾಯಿಯಾದ ತನಗೆ ಆಶ್ರಯವೀಯಬೇಕೆಂದು ದೀರ್ಘ ನಮಸ್ಕಾರವನ್ನು ಮಾಡಿದನು. ದಿವ್ಯಜ್ಞಾನಿಗಳಾಗಿದ್ದ ಜಗನ್ನಾಥದಾಸರು ಆತನ ಜನ್ಮ ಜನ್ಮಾಂತರಗಳನ್ನೆಲ್ಲಾ ತಮ್ಮಲ್ಲಿಯೇ ಭಾವಿಸಿಕೊಂಡರು. ಆತನ ಅಂದಿನ ದುಃಸ್ಥಿತಿಗಾಗಿ ಅವರ ಮನಸ್ಸು ಕರಗಿತು. ಆ ಪ್ರಾಣಿ ಒಂದು ಜನ್ಮದಲ್ಲಿಯಾದರೂ ಕೈಯಾರೆ ಇನ್ನೊಬ್ಬರಿಗೆ ಒಂದು ಕಾಸನ್ನೂ ಕೊಟ್ಟವನಲ್ಲ, ಆ ಪ್ರಾರಬ್ಧ ಕರ್ಮವೇ ಅವನನ್ನು ಬೆನ್ನಟ್ಟಿಕೊಂಡು ಬಂದಿತ್ತು ಎಂದು ಅವರಿಗೆ ಗೋಚರವಾಯಿತು. ಆಗ ದಾಸರು ಆತನನ್ನು ಕರೆದು ‘‘ನಿನ್ನಲ್ಲಿ ನಿನ್ನದಾಗಿ ಯಾವುದಾದರೂ ಪದಾರ್ಥವಿದೆಯೆ?’’ ಎಂದು ಪ್ರಶ್ನಿಸಿದರು. ಕಡುಬಡವನಾದ ಅವನು ಕಣ್ಣೀರು ಕರೆಯುತ್ತ ‘‘ಹರಿದಾಸರೆ, ನನ್ನಲ್ಲಿ ಈ ಒಡುಕು ತಂಬಿಗೆಯೊಂದನ್ನು ಬಿಟ್ಟು ಏನೂ ಇಲ್ಲ’’ ಎಂದು ದೈನ್ಯದಿಂದ ಹೇಳಿಕೊಂಡನು. ದಾಸರು ಆ ತಂಬಿಗೆಯನ್ನು ತಮಗೆ ದಾನ ಕೊಡುವಂತೆ ಸಲಹೆ ಮಾಡಿ ಅದನ್ನು ಪಡೆದರು. ಅನಂತರ ಅದನ್ನು ಮಾರಿ ಅದರಿಂದ ಬಂದ ಹಣದಿಂದ ಬೆಲ್ಲವನ್ನು ತರಿಸಿ, ಪಾನಕವನ್ನು ತಯಾರಿಸಿ, ಅಲ್ಲಿದ್ದ ನಿಷ್ಠಾವಂತರಿಗೆಲ್ಲ ಅವನ ಕೈಯಿಂದಲೇ ಹಂಚಿಸಿದರು. ಆ ಮೂಲಕ ಆ ಬ್ರಾಹ್ಮಣನಿಗೆ ಅಲ್ಪಸ್ವಲ್ಪ ಪುಣ್ಯ ಪ್ರಾಪ್ತವಾಯಿತು. ಅನಂತರ ನರಸಿಂಹಸುಳಾದಿಯನ್ನು ರಚಿಸಿ, ಅದನ್ನು ಪಾರಾಯಣ ಮಾಡುವುದರಿಂದ ಅವನ ಪಾಪಕರ್ಮಗಳೆಲ್ಲ ನಿರ್ಮೂಲವಾಗುವುದೆಂದು ಭರವಸೆ ಕೊಟ್ಟರು. ಆ ಬ್ರಾಹ್ಮಣನು ಸುರಪುರದ ಸನಿಹದಲ್ಲಿಯೇ ನಿಂತು ಹರಿದಾಸರ ಮಾತಿನ ಮೇರೆಗೇ ಆಚರಿಸಿದನು. ಅವನ ಅದೃಷ್ಟವೋ ಎಂಬಂತೆ, ಆ ನಿಷ್ಠಾವಂತ ಬ್ರಾಹ್ಮಣನ ವಿಚಾರ ಸುರಪುರದ ದೊರೆಗೆ ತಿಳಿದು ಆತನನ್ನು ತನ್ನಲ್ಲಿ ಕೆಲಸಕ್ಕೆ ನೇಮಿಸಿಕೊಂಡನು. ಕೆಲವು ಕಾಲವಾದ ಬಳಿಕ, ಆಸ್ಥಾನದಲ್ಲಿ ಉನ್ನತವಾದ ಪದವಿಯೇ ದೊರೆಯಿತು.

ಇನ್ನಾದರೂ ಒಳ್ಳೇ ಹಾದಿ ಹಿಡಿ

ಈ ಮೊದಲೇ ಪ್ರಸ್ತಾವಿಸಿರುವಂತೆ ಸವಣೂರಿನಲ್ಲಿ ತಂಗಿದ್ದ ಶ್ರೀಸತ್ಯಬೋಧ ತೀರ್ಥರ ಅನುಗ್ರಹಕ್ಕೆ ಪಾತ್ರರಾದ ಜಗನ್ನಾಥದಾಸರ ಹೆಸರು ಸುತ್ತಮುತ್ತಲೂ ಹರಡಿತು. ಅವರನ್ನು ತಮ್ಮಲ್ಲಿಗೆ ಬರಮಾಡಿಕೊಳ್ಳುವುದಕ್ಕಾಗಿ ನೆರೆಹೊರೆಯ ಊರಿನವರು ತವಕಪಡುತ್ತಿದ್ದರು. ಅಲ್ಲಿಗೆ ಸಮೀಪದಲ್ಲಿಯೇ ಇದ್ದ ಕರ್ಜಿಗಿಯ ಆಸ್ತಿಕರು ಜಗನ್ನಾಥ ದಾಸರನ್ನು ತಮ್ಮ ಊರಿಗೂ ಕರೆತಂದರು. ಅವರನ್ನು ಪರಿವಾರಸಮೇತವಾಗಿ ಇರಿಸಲು ಆ ಊರಿನ ಶ್ರೀಮಂತನಾಗಿದ್ದ ದಾಸಪ್ಪನ ಮನೆಯಲ್ಲಿ ಅವಕಾಶ ಕಲ್ಪಿಸಿದರು. ಆ ಮನೆಯ ಯಜಮಾನನಾದ ದಾಸಪ್ಪನಾದರೋ ಸರ್ವದಾ ಭೋಗ ಮಗ್ನನಾಗಿ ಇದ್ದುಬಿಟ್ಟನು. ಅವನಿಗೆ ಜಗನ್ನಾಥ ದಾಸರಂಥ ಮಹಿಮರು ತನ್ನ ಮನೆಯಲ್ಲಿ ಬಿಡಾರ ಮಾಡಿರುವರೆಂಬ ಪರಿವೆಯೇ ಇಲ್ಲ. ಅವನ ಹೆಂಡತಿ ಮಹಾ ಪತಿವ್ರತೆಯೂ ವ್ರತನಿಷ್ಠಳೂ ಆಗಿದ್ದಳು. ಆಕೆ ತನ್ನ ಪತಿಯನ್ನು ಕಂಡು ‘‘ಜಗನ್ನಾಥದಾಸರಂತಹ ಮಹಾನುಭಾವರು ನಮ್ಮ ಬಂಗಲೆಗೇ ಬಂದು ಬಿಡಾರಮಾಡಿರುವ ಈ ಸಮಯದಲ್ಲಾದರೂ ಮನೆಯಲ್ಲಿಯೇ ಇದ್ದು ಅವರನ್ನು ಸತ್ಕರಿಸಬಾರದೆ?’’ ಎಂದು ದೈನ್ಯದಿಂದ ಬೇಡಿಕೊಂಡಳು. ದಾಸಪ್ಪ ಅಂದು ಮನೆಯಲ್ಲಿಯೇ ಉಳಿದನು.

ಕಾರ್ಯಕ್ರಮದಂತೆ ಸಂಜೆಯ ವೇಳೆಗೆ ಭಕ್ತಾದಿಗಳ ಸಭೆ ಸೇರಿತು. ಗುರುಗಳ ಆಜ್ಞೆಯಂತೆ ಪ್ರಾಣೇಶದಾಸರು ಕೀರ್ತನೆ ಹೇಳಲು ಮೊದಲು ಮಾಡಿದರು. ಅವರು ದಾಸಪ್ಪನ ಕಡೆಗೇ ನೆಟ್ಟನೋಟವನ್ನು ಬೀರಿ ‘‘ಆದದ್ದಾಯ್ತಿನ್ನಾದರೊ ಒಳ್ಳೇ ಹಾದಿ ಹಿಡಿಯೋ ಪ್ರಾಣಿ’’ ಎಂದು ಪಲ್ಲವಿಯನ್ನು ಪ್ರಾರಂಭಿಸಿ ದಾಸಪ್ಪನ ದುರ್ಗುಣಗಳನ್ನೆಲ್ಲ ತೋರಿಸಿಕೊಟ್ಟರು. ಅಲ್ಲಿದ್ದ ಸಭೆಯವರೆಲ್ಲ ಭಯದಿಂದ ತೆಪ್ಪಗಿದ್ದರು. ದಾಸಪ್ಪನಿಗಾದರೋ ಪ್ರಾಣೇಶದಾಸರ ಒಂದೊಂದು ಮಾತು ಚುಚ್ಚಿ ತಿವಿಯುವಂತಿತ್ತು. ಅವನ ಮುಖದ ಬಣ್ಣ ಹದಗೆಟ್ಟಿತು. ಆದರೆ ತಾಳ್ಮೆ ಕಳೆದುಕೊಳ್ಳದೆ ‘‘ಜಗನ್ನಾಥದಾಸರೆ, ನಿಮ್ಮ ಶಿಷ್ಯರು ಆಡಿದ ಒಂದೊಂದು ನುಡಿಯೂ ನನ್ನನ್ನು ಬಡಿದೆಬ್ಬಿಸಿದೆ. ಇದೋ, ಈ ಕ್ಷಣದಿಂದ ಆ ದುರ್ಮಾರ್ಗದ ಕಡೆ ತಿರುಗಿಯೂ ನೋಡುವುದಿಲ್ಲ. ನನ್ನನ್ನೂ ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿ, ನನಗೂ ಹರಿದಾಸ ದೀಕ್ಷೆಯನ್ನು ದಯಪಾಲಿಸಬೇಕು’’ ಎಂದು ಬಿನ್ನೆ ಸಿಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿದನು. ತನ್ನ ಗಂಡನ ಈ ಅನಿರೀಕ್ಷಿತ ಪರಿವರ್ತನೆಯನ್ನು ಕಂಡ ಆ ಧರ್ಮಪತ್ನಿಯ ಕಣ್ಣುಗಳಲ್ಲಿ ಗಳಗಳನೆ ಆನಂದಬಾಷ್ಪಗಳು ಉದುರಿದನು. ಆಕೆಯೂ ದಾಸರಿಗೆ ನಮಸ್ಕರಿಸಿ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದಳು. ಜಗನ್ನಾಥದಾಸರು ಶಾಸ್ತ್ರಾನುಸಾರವಾಗಿ ದಾಸಪ್ಪನಿಗೆ ಹರಿದಾಸದೀಕ್ಷೆಯನ್ನು ಕೊಟ್ಟು ‘‘ಶ್ರೀದವಿಠಲ’’ ಎಂಬ ಅಂಕಿತವನ್ನು ಅನುಗ್ರಹಿಸಿದರು.

ಇದೇ ರೀತಿ, ಜಗನ್ನಾಥದಾಸರ ಪ್ರಭಾವಕ್ಕೆ ಒಳಗಾದ ಒಬ್ಬೊಬ್ಬ ಹರಿದಾಸರ ಜೀವನವೂ ಸ್ವಾರಸ್ಯವಾಗಿದೆ. ಹರಿದಾಸ ಕ್ಷೇತ್ರದಲ್ಲಿ ಆಯಾ ಹರಿದಾಸರು ನಿರ್ವಹಿಸಿರುವ ಕಾರ್ಯವೂ ಅಷ್ಟೇ ಮಹತ್ವದ್ದಾಗಿದೆ.

ಕೃತಿಗಳ ಪರಿಚಯ

ಶ್ರೀ ಜಗನ್ನಾಥದಾಸರು ಕೀರ್ತನೆ, ಸುಳಾದಿ, ಉಗಾಭೋಗ, ವೃತ್ತನಾಮ ಮೊದಲಾದ ಹರಿದಾಸ ಸಾಹಿತ್ಯ ಪ್ರಕಾರಗಳನ್ನು ರಚಿಸಿರುವುದಲ್ಲದೆ, ತಾವು ಗಳಿಸಿದ್ದ ಅಪಾರವಾದ ಶಾಸ್ತ್ರಜ್ಞಾನವನ್ನು ‘‘ಹರಿಕಥಾಮೃತಸಾರ’’ ಮತ್ತು ‘‘ತತ್ತ್ವ ಸುವ್ವಾಲಿ’’  ಎಂಬ ಗ್ರಂಥಗಳಲ್ಲಿ ಅಡಗಿಸಿಟ್ಟು ತಮ್ಮದೇ ಆದ ಒಂದು ವಿಶಿಷ್ಟ ಸ್ಥಾನವನ್ನು ಸಂಪಾದಿಸಿರುತ್ತಾರೆ. ಅವರ ರಚನೆಗಳಲ್ಲಿ ಒಮ್ಮೆ ತಿಳಿಗನ್ನಡದ ತಿರುಳು ತೋರಿಬಂದರೆ, ಮತ್ತೊಮ್ಮೆ ಅವರ ಸಂಸ್ಕೃತದ ಶಬ್ದ ಮಾಧುರ‍್ಯ ಮನವೊಲಿಸುತ್ತದೆ.

ಜಗನ್ನಾಥದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿರಬಹುದೆಂದು ಭಾವಿಸಬಹುದು. ಇವುಗಳಲ್ಲಿ ಅವರು ತಮ್ಮ ಜೀವನದ ಪ್ರಮುಖ ಪ್ರಸಂಗಗಳನ್ನು ಪ್ರಸ್ತಾವಿಸಿರುವುದಲ್ಲದೆ, ತಮ್ಮ ಜೀವನದ ಮೇಲೆ ಪ್ರಬಾವ ಬೀರಿದ  ದೇವಾನುದೇವತೆಗಳು ಮತ್ತು ಯತಿಶ್ರೇಷ್ಠರುಗಳನ್ನು ಕೊಂಡಾಡಿರುವರು.

ಶ್ರೀ ವಿಜಯದಾಸರಲ್ಲಿ ಅವರಿಗಿರುವ ಭಕ್ತಿಯನ್ನು, ಶ್ರೀಗೋಪಾಲದಾಸರಲ್ಲಿ ಅವರಿಗಿರುವ ಕೃತಜ್ಞತೆಯನ್ನೂ ಈಗಾಗಲೇ ಹೇಳಿದೆಯಷ್ಟೆ. ವಾದಿರಾಜರ ಬಗ್ಗೆ ಅವರಿಗಿರುವ ಗೌರವ ಜನ್ಮಾಂತರದ್ದು ಎಂದು ಪ್ರತೀತಿ. ‘‘ವಾದಿರಾಜ ಗುರು ನೀ ದಯಮಾಡದಡೀ ದುರಿತ (ಪಾಪ)ವ ಕಳೆದ್ವಾದಿಪರಾರೋ’’ ಎಂದು ಆ ಯತಿವರ‍್ಯರಲ್ಲಿ ಮೊರೆಯಿಟ್ಟು, ಆ ಮಹಿಮರು ತಮ್ಮ ಜೀವಿತ ಕಾಲದಲ್ಲಿ ನೆರವೇರಿಸಿದ ಅನೇಕ ಮಹತ್ಕಾರ್ಯಗಳನ್ನು ಸ್ಮರಿಸಿರುವರು. ದಾಸರಿಗೆ, ಶ್ರೀ ರಾಘವೇಂದ್ರ ಯತಿಗಳನ್ನು ಎಷ್ಟು ರೀತಿಯಲ್ಲಿ ಹೊಗಳಿದರೂ ಮನಸ್ಸಿಗೆ ತೃಪ್ತಿಯಿಲ್ಲ. ಆ ಯತಿಸಾರ್ವಭೌಮರನ್ನು ಕುರಿತು ರಚಿಸಿರುವ ಒಂದೊಂದು ಕೀರ್ತನೆಯೂ ಪ್ರಶಸ್ತವಾಗಿದೆ. ‘‘ಕರುಣಿಗಳೊಳಗೆಣೆ (ಸಮಾನ) ಕಾಣೆನೊ ನಿನಗೆ ಸದ್ಗುರುವರ ರಾಘವೇಂದ್ರ ಚರಣ ಕಮಲಯಗ್ಮ (ಜೋಡಿ) ಮರೆ ಹೊಕ್ಕವರ ಮನದ ಹರಕೆಯ ನಿರುತ (ನಿಜವಾಗಿ) ದಲೀವೆ ನೀ ಕಾವೆ’’ ಎಂದು ರಾಯರ ದಯೆಯನ್ನು ಒತ್ತಿಹೇಳಿ, ‘‘ರಾಯ ಬಾರೋ ತಂದೆ ತಾಯಿ ಬಾರೋ ನಮ್ಮ ಕಾಯಿ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ’’ ಎಂದು ಪುನಃ ಪುನಃ ಪ್ರಾರ್ಥಿಸಿಕೊಳ್ಳುವರು.

ಜಗನ್ನಾಥದಾಸರು ರಚಿಸಿರುವ ದೇವತಾಸ್ತುತಿಗಳಲ್ಲಿ ಶ್ರೀಹರಿ, ಮಹದೇವ, ನರಸಿಂಹ, ಪಾಂಡುರಂಗ ವಿಠಲ ಮತ್ತು ತಿರುಪತಿಯ ಶ್ರೀನಿವಾಸರನ್ನು ಕುರಿತವು ಮುಖ್ಯವಾದವು. ‘‘ಸ್ಮರಿಸು ಸಂತತ ಹರಿಯನು, ಮನವೆ ಸ್ಮರಿಸು ಸಂತತ ಹರಿಯ ಕರುಣಾಳುಗಳ ದೊರೆಯ’’ ಎಂದು ಎಲ್ಲರಿಗೂ ಬೋಧಿಸಿ ಆತನ ಸರ್ವವ್ಯಾಪಕತ್ವ, ಸರ್ವೋತ್ತಮತ್ವ, ಸರ್ವಕರ್ತೃತ್ವ ಮತ್ತು ಸರ್ವದಯಾಮಯ ಗುಣಗಳನ್ನು ವಿಶದಪಡಿಸುವರು.

ತಿರುಪತಿಯ ವೆಂಕಟರಮಣನನ್ನಂತೂ ಸ್ತುತಿಸಲು ಅವರ ನಾಲಿಗೆಗೆ ದಣಿವೇ ಇಲ್ಲವೆನಿಸುತ್ತದೆ.ಇದಕ್ಕೆ ಕಾರಣವಿಲ್ಲದೆಯೂ ಇಲ್ಲ. ಅವರ ತಂದೆ ತಾಯಿಗಳು ತಿರುಪತಿಯ ತಿಮ್ಮಪ್ಪನ ಪರಮ ಭಕ್ತರು. ಅವರು ಶ್ರೀನಿವಾಸನ ದಯೆಯಿಂದ ತಮಗೆ ಆದ ಮಗನಿಗೆ ಶ್ರೀನಿವಾಸನೆಂದೇ ಹೆಸರಿಟ್ಟರು. ತಮ್ಮ ದೀಕ್ಷಾಗುರುಗಳು ಮೊದಲ್ಗೊಂಡು ಎಲ್ಲ ಹರಿದಾಸರಿಗೂ ತಿರುಪತಿ ಪವಿತ್ರ ಯಾತ್ರಾಸ್ಥಳವಾಗಿದ್ದಿತು. ‘‘ಶ್ರೀವೆಂಕಟಾಚಲನಿವಾಸ ನಿನ್ನ ಸೇವಾನು ಸೇವಕರ ದಾಸ ಎನಿಸಿ ಜೀವಿಸುವ ನನಗೆ ಆಯಾಸ ಯಾಕೆ ಶ್ರೀವರನೆ ಕೊಡು ಎನಗೆ ಲೇಸ (ಒಳ್ಳೆಯದು)’’ ಎಂದು ಮೊದಲಾಗುವ ಒಂದು ಕೀರ್ತನೆಯಲ್ಲಿ ಒಟ್ಟು ೪೬ ನುಡಿಗಳಿವೆ. ದಾಸರು ಇದರಲ್ಲಿ ತಮ್ಮ ಆತುರ ಕಾತರಗಳನ್ನೆಲ್ಲ ತೋಡಿಕೊಂಡಿರುವರಲ್ಲದೆ, ಆ ಪರಮಾತ್ಮನ ಲೀಲಾವೈಭವಗಳನ್ನೆಲ್ಲ ವಿವರಿಸಿರುವರು. ಹೆಸರುವಾಸಿಯಾದ ತಿರುಪತಿಯ ಬ್ರಹ್ಮೋತ್ಸವ ಕಾಲದಲ್ಲಿ ನಡೆಯುವ ರಥೋತ್ಸವವನ್ನು ಕಂಡು ಪುಳಕಿತರಾಗುವರು. ‘‘ರಥವನೇರಿದ ರಥಿಕನ್ಯಾರೆ ಪೇಳಮ್ಮಯ್ಯ’’ ಎಂದು ಗೆಳತಿಯೊಬ್ಬಳು ತನ್ನ ಒಡನಾಡಿಯನ್ನು ಪ್ರಶ್ನಿಸಿದಂತೆಯೂ ಆಕೆ ಭಗವಂತನ ಗುಣಗಳನ್ನೆಲ್ಲ ತನ್ನ ಗೆಳತಿಗೆ ಹೇಳಿ, ಕಡೆಗೆ ‘‘ಮಹಾಮಹಿಮರಮಾವಲ್ಲಭನು ನೋಡಮ್ಮಯ್ಯ …..ಭೂತಳ ಜನರಭಿಲಾಷೆಯ ಸಲಿಸಲು ವಾತಾಶನಗಿರಿ (ಶೇಷಗಿರಿ ತಿರುಪತಿಯ ಬೆಟ್ಟ) ಗಿಳಿದ ಕಾಣಮ್ಮ’’ ಎಂದು ತಿಳಿಸಿದಂತೆಯೂ ಮನೋಹರವಾಗಿ ನಿರೂಪಿಸಿದ್ದಾರೆ.

ಜಗನ್ನಾಥದಾಸರು ತೀರ್ಥಕ್ಷೇತ್ರಗಳನ್ನು ಸಂಚರಿಸುವಲ್ಲಿ ಕಂಡ ಅನೇಕ ನದಿಗಳನ್ನು ಕೊಂಡಾಡಿರುವುದು ಕಂಡುಬರುತ್ತದೆ. ಗಂಗೆ, ಯಮುನೆ, ಕಾವೇರಿ, ಕೃಷ್ಣೆ, ವರದೆ ಮೊದಲಾದವುಗಳನ್ನು ವರ್ಣಿಸುವಾಗ ಆಯಾ ನದಿಯ ಮಹತ್ವವನ್ನು ವರ್ಣಿಸಿರುತ್ತಾರೆ. ಅವರ ಕೀರ್ತನೆಗಳಲ್ಲಿ ದೇವತಾಸ್ತುತಿಗಳ ಭಾಗವೇ ಬಹುಪಾಲು. ಆದಿಶೇಷನನ್ನು ಕುರಿತು ರಚಿಸಿರುವ ಒಂದೆರಡು ಕೃತಿಗಳು ರಮ್ಯವಾಗಿವೆ. ‘‘ಬಲುರಮ್ಯವಾಗಿದೆ ಹರಿಯ ಮಂಚ ಯಲರುಣಿ (ಹಾವು) ಕುಲರಾಜ ರಾಜೇಶ್ವರ ಮಂಚ’’ ಎಂದು ಮೊದಲಾಗುವ ಒಂದು ಕೀರ್ತನೆಯಂತೂ ತುಂಬ ಅರ್ಥವತ್ತಾಗಿದೆ.

ಪರಿಶುದ್ಧ ಮನಸ್ಸು ನಿಜವಾದ ಭಕ್ತಿ

ಪರಮಾತ್ಮನ ಪೂಜೆಯ ಸಲುವಾಗಿ ನಾವು ಅನ್ಯಥಾ ಶ್ರಮಿಸಬೇಕಾಗಿಲ್ಲವಂತೆ; ಪರಿಶುದ್ಧವಾದ ಮನಸ್ಸು, ಪರಿಪೂರ್ಣವಾದ ಭಕ್ತಿಗಳಿದ್ದರೆ, ಆ ಕಾರ್ಯವನ್ನು ಎಷ್ಟು ಸುಲಭವಾಗಿ ನೆರವೇರಿಸಬಹುದೆನ್ನುವುದನ್ನು ಹೀಗೆ ತಿಳಿಸಿರುತ್ತಾರೆ. ‘‘ಅರಿತವರಿಗತಿಸುಲಭ ಹರಿಯಪೂಜೆ, ಅರಿಯದವ ನಿರ್ಭಾಗ್ಯತರ ಲೋಕದೊಳಗೆ||ಪ|| ಹೈಮಾಂಡ (ಬ್ರಹ್ಮಾಂಡ) ಮಂಟಪವು, ಭೂಮಂಡಲವೆ ಪೀಠ, ಸೋಮ (ಚಂದ್ರ) ಸೂರ್ಯರೆ ದೀಪ, ಭೂರುಹಗಳು (ಮರಗಳು) ಚಾಮರಗಳತಿ ವಿಮಲ ವ್ಯೋಮಮಂಡಲ (ವಿಸ್ತಾರವಾದ ಆಕಾಶ) ಛತ್ರ, ಯಾಮಾಷ್ಟಕಗಳ್ (ಎಂಟು ಜಾವಗಳು) ಅಷ್ಟದಳದ ಪದ್ಮವು ಎಂದು ||೧|| ಮಳೆಯೆ ಮಜ್ಜನವು (ಸ್ನಾನ) ದಿಗ್ವಲಯಂಗಳೇ ವಸನ (ಬಟ್ಟೆ), ಮಲಯಜಾನಿಲವೆ (ಮಲಯ ಮಾರುತ) ಶ್ರೀಗಂಧ ಧೂಪ, ಇಳೆ (ಭೂಮಿ) ಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ, ಥಳಥಳಿಪ ಮಿಂಚು ಕರ್ಪೂರದಾರತಿ ಎಂದು ||೨||’’ ಈ ಬಗೆಯಾಗಿ ಬ್ರಹ್ಮಾಂಡದಲ್ಲಿ ಆವರಿಸಿಕೊಂಡಿರುವ ಭಗವಂತನನ್ನು ಆರಾಧಿಸಬಲ್ಲ ಭಕ್ತನನ್ನು ಜಗನ್ನಾಥವಿಠಲನು ಎಲ್ಲ ಕಾಲಗಳಲ್ಲಿಯೂ ಒಲಿದು ಅನುಗ್ರಹಿಸುವನು ಎಂದು ಭರವಸೆ ನೀಡುವರು.

‘‘ಫಲವಿದು ಬಾಳ್ದುದಕೆ ಸಿರಿನಿಲಯನ ಗುಣಗಳ ತಿಳಿದು ಭಜಿಸುವೆ’’ ಎಂಬ ಪಲ್ಲವಿಯಿಂದ ಮೊದಲಾಗುವ ಒಂದುಕೀರ್ತನೆಯಲ್ಲಿ (ಒಟ್ಟು) ಇಪ್ಪತ್ತೇಳು ನುಡಿಗಳಿವೆ. ಇದರಲ್ಲಿ ಒಬ್ಬ ವೈಷ್ಣವನಾದವನು ಹೇಗೆ ಬದುಕಿ ಬಾಳಿ ತನ್ನ ಜನ್ಮವನ್ನು ಸಫಲಗೊಳಿಸಬೇಕೆಂಬುದನ್ನು ವಿಸ್ತಾರವಾಗಿ ನಿರೂಪಿಸಿದೆ. ಆತನು ಯಾವ ನೀಚರನ್ನೂ ಯಾಚಿಸದಂತೆ ತನ್ನ ಧರ್ಮನಿಷ್ಠೆಗೆ ತಕ್ಕಂತೆ ಅಚ್ಯುತನ ಪಾದಗಳನ್ನು ಪೂಜಿಸಿ ತತ್ತ್ವಜ್ಞಾನವನ್ನು ಮನನ ಮಾಡಿಕೊಂಡು ‘‘ಹೃದಯದಿ ರೂಪವು ವದನದಿ (ಬಾಯಲ್ಲಿ) ನಾಮವು ಉದರದಿ (ಹೊಟ್ಟೆಯಲ್ಲಿ) ನೈವೇದ್ಯವು ಶಿರದಿ ಪದಜಲ (ತೀರ್ಥ) ನಿರ್ಮಾಲ್ಯ (ಹೂವಿನ ಪ್ರಸಾದ) ಧರಿಸಿ ನಿರುತ (ಸದಾ) ಕೋವಿದರ (ಪಂಡಿತರ) ಹೆಗ್ಗದ (ದೊಡ್ಡಬಾಗಿಲು)ವನು ಕಾಯ್ವುದೆ’’ ಉಚಿತವಾದ ಮಾರ್ಗವೆಂದು ಬೋಧಿಸುವರು. ಇಡೀ ಕೀರ್ತನೆಯನ್ನು ‘‘ಸದಾಚಾರ ಸಂಹಿತೆ’’ (ಸದ್ಗುಣಗಳ ಸೂಕ್ತಿ) ಎಂದು ಕರೆಯಬಹುದು.

ಹರಿಕಥಾಮೃತಸಾರ

ಜಗನ್ನಾಥದಾಸರು ಇತರ ಹರಿದಾಸರಂತೆ ಕೇವಲ ಕೀರ್ತನೆಗಳನ್ನು ರಚಿಸುವುದರಲ್ಲಿಯೇ ತೃಪ್ತರಾಗಲಿಲ್ಲ. ಅವರು ಗಳಿಸಿದ್ದ ಸಂಸ್ಕೃತ ಗ್ರಂಥಗಳ ಶಾಸ್ತ್ರಜ್ಞಾನದ ಸಾರವೆಲ್ಲ ಅವರು ರಚಿಸಿರುವ ‘‘ಹರಿಕಥಾಮೃತಸಾರ’’ ವೆಂಬ ಭಾಮಿನೀಷಟ್ಪದಿಯ ಗ್ರಂಥದಲ್ಲಿ ತಾನೇ ತಾನಾಗಿ ತುಂಬಿ ತುಳುಕುವಂತಿದೆ. ಇದರಲ್ಲಿ ಇತರ ಕಾವ್ಯಗಳಲ್ಲಿರುವಂತೆ ಕಥೆ ಇಲ್ಲ; ಸಾಮಾನ್ಯವಾಗಿ ನಮ್ಮ ದೇಶದ ಮಹಾಕಾವ್ಯಗಳಲ್ಲಿ ಕಾಣುವ ಹದಿನೆಂಟು ವರ್ಣನೆಗಳ ಅಬ್ಬರವೂ ಇಲ್ಲ. ಶ್ರೀಮನ್ಮಧ್ವಾಚಾರ್ಯರು ಪ್ರತಿಪಾದಿಸಿದ ದ್ವೆ ತಸಿದ್ಧಾಂತದ ಪ್ರಮುಖವಾದ ತತ್ವಗಳನ್ನು ಮೂವತ್ತೆರಡು ಸಂಧಿಗಳಲ್ಲಿ ಪ್ರಸ್ತಾವಿಸಿರುವರು. ಒಟ್ಟು ೯೮೬ ಪದ್ಯಗಳಿವೆ. ಈ ಗ್ರಂಥದಲ್ಲಿ ಹರಿಯ ಕರುಣೆ, ಹರಿಯ ವ್ಯಾಪ್ತಿ, ಹರಿನಾಮ ಸ್ಮರಣೆಯ ಹಿರಿಮೆ ಮೊದಲಾದ ಗಹನ ವಿಚಾರಗಳನ್ನು ವರ್ಣಿಸಿರು ವರು. ಇಂಥ ಕಠಿಣವಾದ ವಿಷಯಗಳನ್ನು ಸುಲಭವಾದ ಹೋಲಿಕೆಗಳ ಮೂಲಕ, ಈ ಬಗ್ಗೆ ಅಲ್ಪ ಸ್ವಲ್ಪ ಆಸಕ್ತಿಯಿರು ವವರೂ ಅರ್ಥ ಮಾಡಿಕೊಳ್ಳುವಂತೆ ರಚಿಸಿರುವುದೇ ಈ ಕೃತಿಯ ಹೆಚ್ಚು ಗಾರಿಕೆ.

ದೇವರನ್ನು ಒಲಿಸಿಕೊಳ್ಳುವುದು ಸುಲಭ. ದೇವರು, ಮನುಷ್ಯ ತನ್ನ ಕಡೆ ಮನಸ್ಸು ತಿರುಗಿಸಿದರೆ ಸಾಕು ಎಂದು ಕಾಯುತ್ತಿರುತ್ತಾನೆ ಎಂಬುದನ್ನು ಸರಳವಾಗಿ ಚಿತ್ರಿಸುವರು. ‘‘ಮಲಗಿ ಪರಮಾದರದಿ ಪಾಡಲು ಕುಳಿತು ಕೇಳುವ, ಕುಳಿತು ಪಾಡಲು ನಿಲುವ, ನಿಂತರೆ ನಲಿವ, ನಲಿದರೆ ಒಲಿವನು ಸುಲಭನೋ ಹರಿ ತನ್ನವರನರೆಘಳಿಗೆ ಬಿಟ್ಟಗಲನು’’ ಎಂಬ ವರ್ಣನೆಗೆ ಬೇರೆ ವ್ಯಾಖ್ಯಾನವೇ ಬೇಕಿಲ್ಲ. ಭಕ್ತನು ದುಃಖದಿಂದ ತೊಳಲುತ್ತಿರಲು, ತಾಯಿಯಾದವಳು ಹೇಗೆ ಓಡಿಬಂದು ಅಳುತ್ತಿರುವ ಮಗುವನ್ನು ಸಂತೈಸುವಳೋ ಹಾಗೆಯೇ ಭಗವಂತನು ಭಕ್ತನ ಬಳಿಗೆ ತಾನಾಗಿಯೇ ಬಂದು ಸಮಾಧಾನ ಮಾಡುವನಂತೆ. ಇದಕ್ಕೆ ಉದಾಹರಣೆಯಾಗಿ ಪುಂಡರೀಕ, ಸುಧಾಮ, ಭೀಷ್ಮ ಮೊದಲಾದವರ ಹೆಸರುಗಳನ್ನು ಹೇಳುವರು. ಯಾರು ಅವನನ್ನು ತಮ್ಮ ‘‘ಸದ್ಭಕ್ತಿ ಪಾಶದಲ್ಲಿ’’ ಕಟ್ಟುವರೋ, ಶ್ರೀಹರಿ ಅವರ ಭವಕಟ್ಟ (ಜನ್ಮಬಂಧನ) ಬಿಡಿಸುವನಂತೆ. ಭಗವಂತನು ಹೇಗೆ ಸರ್ವಾಂತರ್ಯಾಮಿ ಎನ್ನುವುದನ್ನು ಬಗೆಬಗೆಯಾಗಿ ಬಣ್ಣಿಸಿರುವರು. ‘‘ಮಳಲ ಮನೆಗಳ ಮಾಡಿ ಮಕ್ಕಳು ಕೆಲವು ಕಾಲದಲಾಡಿ ಮೋದದಿ (ಸಂತೋಷದಿಂದ) ತುಳಿದು ಕೆಡಿಸುವ ತೆರದಿ’’ ಲಕ್ಷಿ ರಮಣನು ತನ್ನ ಲೀಲೆಗಾಗಿ ಲೋಕಗಳನ್ನು ಸೃಷ್ಟಿಸಿ, ಸಲಹಿ, ತಾನೇ ಸಂಹಾರಮಾಡುವನಂತೆ! ನಾವು ತಿಂದು ತೇಗುವ ಸಕಲ ಆಹಾರ ಪದಾರ್ಥಗಳಲ್ಲಿಯೂ ಭಗವಂತನು ಆಯಾ ರುಚಿಯ ರೂಪದಲ್ಲಿ ತೋರಿಬರುವುದರಿಂದ, ಆಹಾರವನ್ನು ಸೇವಿಸುವವರು ‘ಕೃಷ್ಣಾರ್ಪಣ’ ಎಂದ ಮಾತ್ರಕ್ಕೆ, ತಾಯಿಯ ಊಟದ ಮಧ್ಯೆ ಮಗು ಕೈನೀಡಿ ತಣಿಯುವಂತೆ, ಅದನ್ನು ಸ್ವೀಕರಿಸಿ ಆನಂದಿಸುವನು. ‘‘ಮಣಿಗಳೊಳಿಹ ಸೂತ್ರ (ದಾರ) ದಂದದಿ’’ ದೇವರು ಜಡ ಮತ್ತು ಚೇತನ ಪದಾರ್ಥಗಳಲ್ಲೆಲ್ಲ ವ್ಯಾಪಿಸಿ ಸ್ವಲ್ಪವೂ ಆಯಾಸವಿಲ್ಲದೆ ವ್ಯವಹರಿಸುವನು. ಎಲ್ಲಕ್ಕೂ ಮೂಲನಾದ ಭಗವಂತನು ಬಿಂಬನೆನ್ನಿಸಿದರೆ, ಉಳಿದುವೆಲ್ಲ ಆತನ ಪ್ರತಿಬಿಂಬಗಳು. ಈ ಎರಡಕ್ಕೂ ಇರುವ ಸಂಬಂಧವೇನು ಎನ್ನುವ ಅಂಶವನ್ನು ಶಾಸ್ತ್ರೀಯವಾಗಿ ತಿಳಿಸಿಕೊಡುವರು. ‘‘ನಾನು ನನ್ನದು’’ ಎಂಬ ಸ್ವಾಭಿಮಾನದಿಂದ ಮಾಡಿದ ಯಾವ ಶ್ರೇಷ್ಠ ಕೆಲಸವೂ ಪರಮಾತ್ಮನಿಗೆ ಒಪ್ಪಿಗೆಯಾಗದೆಂದು ಸಾರಿ ಹೇಳುವರು. ಭಗವಂತನ ನಾಮಸ್ಮರಣೆಗೆ ಹೊತ್ತುಗೊತ್ತುಗಳ ನಿರ್ಬಂಧವಿಲ್ಲ. ‘‘ಮಕ್ಕಳಾಡಿಸುವಾಗ, ಮಡದಿಯೊಳಕ್ಕರದಿ (ಪ್ರೀತಿಯಿಂದ) ನಗುವಾಗ, ಬಿಕ್ಕುವಾಗಾಕಳಿಸುತಲಿ ‘‘ಆತನನ್ನು ನೆನೆದರೂ ಅನುಗ್ರಹ ತಪ್ಪದು ಎನ್ನುವರು.’’ ‘‘ಕೆಂಡ ಕಾಣದೆ ಮುಟ್ಟಿದರು ಸರಿ, ಕಂಡು ಮುಟ್ಟಲು ದಹಿಸದಿಪ್ಪುದೆ’’ ಎಂಬಂತೆ, ಪವಿತ್ರಚೇತನರಾದ ಹರಿಭಕ್ತರ ದರ್ಶನ ಮಾತ್ರದಿಂದಲೇ ಎಲ್ಲ ಪಾಪಗಳೂ ಸುಟ್ಟು ಕರಿಕಾಗುವುದಂತೆ. ಭಾಸ್ಕರನ ಮಂಡಲ (ಸೂರ್ಯಮಂಡಲ)ವ ಕಂಡು ನಮಸ್ಕರಿಸಿ ಮೋದಿಸದೆ ದ್ವೇಷದಿ ತಸ್ಕರನು (ಕಳ್ಳ) ನಿಂದಿಸಲು ಕುಂದಹುದೇ ದಿವಾಕರಗೆ, ಸಂಸ್ಕೃತವಿದಲ್ಲೆಂದು ಕುಹಕ ತಿರಸ್ಕರಿಸಲೇನಹುದು, ಭಕ್ತಿ ಪುರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಪರಾಕ್ಷ (ಕಮಲನಯನ, ವಿಷ್ಣು) ಸದಾ’  ಎಂದು ತಮ್ಮ ಕನ್ನಡ ಕೃತಿಯನ್ನು ಕಡೆಗಣಿಸುವವರಿಗೆ ತಕ್ಕ ಉತ್ತರವನ್ನೇ ನೀಡಿರುವರು. ಒಂದು ಕಾಲದಲ್ಲಿ ಸಂಸ್ಕೃತವೆಂದರೆ ಹಿಗ್ಗುತ್ತಿದ್ದವರು ಈಗ ಕನ್ನಡಕ್ಕೆ ಹೇಗೆ ಒಲಿದಿರುವರೆಂಬುದನ್ನು ಕಂಡರೆ ತಲೆದೂಗುವಂತಾಗುತ್ತದೆ.

ಎಂಟು ಜನ ವಿದ್ವನ್ಮಣಿಗಳು ಕನ್ನಡದಲ್ಲಿಯೂ, ಇಬ್ಬರು ಪಂಡಿತರು ಸಂಸ್ಕೃತದಲ್ಲಿಯೂ ಇದಕ್ಕೆ ವಿಸ್ತಾರವಾಗಿ ವ್ಯಾಖ್ಯಾನ ಬರೆದಿರುತ್ತಾರೆ. ಈ ಸಮಗ್ರ ಕೃತಿಯನ್ನು ತೆಲುಗು ತಮಿಳು ಮತ್ತು ಮರಾಠಿಗಳಿಗೂ ಅನುವಾದಿಸಿರುವರೆಂದು ತಿಳಿದು ಬರುತ್ತದೆ.

ತತ್ತ್ವ ಸುವ್ವಾಲಿ

ಕೃತಿಯ ಹೆಸರೇ ಸೂಚಿಸುವಂತೆ ಇದು ತತ್ತ್ವಗಳ ಅಕ್ಷಯ ಸಂಪತ್ತು. ಜನಸಾಮಾನ್ಯರ ಮನಸ್ಸನ್ನು ಸೆಳೆದಿರುವ ತ್ರಿಪದಿಯ ಮಟ್ಟಿನಲ್ಲಿ, ತತ್ತ್ವ ಗರ್ಭಿತವಾದ ಅನೇಕ ವಿಷಯಗಳನ್ನು ಇಲ್ಲಿ ದಾಸರು ಸರಳವಾಗಿ ನಿರೂಪಿಸಿರುತ್ತಾರೆ. ಸದ್ಯಕ್ಕೆ ಸುಮಾರು ೩೫೦ ರಷ್ಟು ತ್ರಿಪದಿಗಳು ದೊರೆತಿವೆ. ತತ್ತ್ವ ವಿಚಾರ ಮತ್ತು ಸರಳ ಶೈಲಿಗಳು ಇಲ್ಲಿನ ತ್ರಿಪದಿಗಳ ಮುಖ್ಯ ಲಕ್ಷಣ. ‘‘ಎನ್ನ ಪೋಲುವ ಭಕ್ತರನ್ನಂತ ನಿನಗಿಹರು| ನಿನ್ನಂಥ ಸ್ವಾಮಿ ಎನಗಿಲ್ಲ| ಎನಗಿಲ್ಲವದರಿಂದ| ಬಿನ್ನೆ ಪೆನಿನ್ನು ಸಲಹೆಂದು’’  ಎಂದು ಹೇಳುವ ಧಾಟಿಯಲ್ಲಿ ಭಕ್ತನ ಉತ್ಕಟವಾದ ಅಪೇಕ್ಷೆಯಿದೆ. ಮೂರೇ ಮೂರು ಸಾಲುಗಳಲ್ಲಿ ದಾಸರು ಅನಂತ ವಿಚಾರಗಳನ್ನು ಅಡಗಿಸಿಟ್ಟಿರುವರು. ಇಲ್ಲಿ ಮಾತು ಮಿತ; ಅರ್ಥಅಮಿತ.

ಜಗನ್ನಾಥದಾಸರ ಅಂತ್ಯ

ಕೇವಲ ೪೦ ವರ್ಷಗಳು ಮಾತ್ರ ಆಯುಷ್ಯವನ್ನು ಪಡೆದಿದ್ದ ಜಗನ್ನಾಥದಾಸರು ಗೋಪಾಲದಾಸರ ಅನುಗ್ರಹದಿಂದ ಇನ್ನೂ ೪೦ ವರ್ಷಗಳ ಭಾಗ್ಯವನ್ನು ಪಡೆದು, ಹತ್ತಿರ ಹತ್ತಿರ ೮೨ ವರ್ಷಗಳ ಕಾಲ ಬದುಕಿದ್ದರು ಎಂದು ಭಕ್ತರು ನಂಬುತ್ತಾರೆ. ಸಾರ್ಥಕವಾದ ಜೀವನವನ್ನು ನಡೆಸಿ ೧೮೦೯ ರಲ್ಲಿ ಶ್ರೀಹರಿಯ ಪಾದಾರವಿಂದವನ್ನು ಸೇರಿದರು. ಜಗನ್ನಾಥದಾಸರು ಕಣ್ಮರೆಯಾದರೂ ಅವರ ಪ್ರಭಾವ  ಎಂದೆಂದಿಗೂ ಕುಂದುವಂತಿಲ್ಲ. ಅಂದು ಮಾನವಿಯಲ್ಲಿ ಅವರು ವಾಸ ಮಾಡುತ್ತಿದ್ದ ಮನೆ ಇಂದು ದೇವಾಲಯವಾಗಿದೆ. ಅವರು ಒರಗಿ ಕುಳಿತುಕೊಳ್ಳುತ್ತಿದ್ದ ಕಂಬದಲ್ಲಿ ಸೂಕ್ಷ್ಮ ಶರೀರಿಯಾಗಿ ಇಂದಿಗೂ ನೆಲಸಿರುವರೆಂದು ಬಲವಾದ ನಂಬಿಕೆ. ಪ್ರಾಣೇಶದಾಸರೇ ಜಗನ್ನಾಥದಾಸರ ಸೊಸೆಯನ್ನು ಸಮಾಧಾನಪಡಿಸಲು ‘‘ಶ್ರೀಕಾಂತನೊಲಿದ ದಾಸರೀಯುಗದಲ್ಲಿ ಲೇಖಾಂಶರ ಹುದೇ ತಂಗೀ, ಶೋಕ ಬ್ಯಾಡಲೇ ನರಲೋಕ ಉಳಿದರೆಂದು ಈ ಕಂಬದೊಳಗಿಹರೇ ಹೇ ನೀರೇ’’ ಎಂದು ಹೇಳಿರುವುದನ್ನು ಕೇಳಿದರೆ ಅಂದಿನಿಂದಲೂ ಈ ನಂಬಿಕೆ ದೃಢವಾಗಿದೆ ಎನ್ನಿಸುತ್ತದೆ. ಪ್ರತಿನಿತ್ಯವೂ ಆ ಕಂಬಕ್ಕೆ ಪೂಜೆ ಸಲ್ಲುತ್ತಿದೆ. ದಾಸರು ಬಳಸುತ್ತಿದ್ದ ಕೆಲವು ಪೂಜಾ ಸಾಮಗ್ರಿಗಳು ಇಂದಿಗೂ ಇವೆ. ಅಂಕಿತಶಿಲೆ ಇತ್ತೀಚೆಗೆ ಕಳೆದು ಹೋಯಿತೆಂದು ತಿಳಿದುಬರುತ್ತದೆ. ಹರಿಕಥಾಮೃತಸಾರ ಮತ್ತು ಕೆಲವು ಕೀರ್ತನೆಗಳಿರುವ ಕಾಗದದ ಹಸ್ತ ಪ್ರತಿಯೊಂದು ದೇವಾಲಯದಲ್ಲಿದೆ. ಪ್ರತಿವರ್ಷವೂ ಭಾದ್ರಪದ ಶುದ್ಧ ನವಮಿಯಂದು ದಾಸರ ಪುಣ್ಯ ದಿನವನ್ನು ಭಕ್ತಾದಿಗಳು ಅತ್ಯಂತ ವೈಭವದಿಂದ ಆಚರಿಸುತ್ತಾರೆ.

ಬಾಳನ್ನು ಬಿಟ್ಟು ಓಡಬೇಕಾಗಿಲ್ಲ

ಜಗನ್ನಾಥದಾಸರು ಶ್ರೀನಿವಾಸಾಚಾರ್ಯರಾಗಿದ್ದ ಕಾಲದ ಜೀವನ ಬರಿಯ ವಿದ್ಯೆ ಸಾಲದು, ವಿದ್ಯೆಯೊಂದಿಗೆ ವಿನಯಬೇಕು ಎಂಬುದನ್ನು ಎತ್ತಿ ತೋರಿಸುತ್ತದೆ. ಅಹಂಕಾರ ಬೆರೆತ ವಿದ್ಯೆ ಬರಿಯ ದುಃಖವನ್ನೇ ತಂದೀತು. ಶ್ರೀನಿವಾಸಾಚಾರ್ಯರು ಜಗನ್ನಾಥದಾಸರಾದ ನಂತರ ಅವರ ಬಾಳಿನ ರೀತಿ ನಿಜವಾದ ವಿದ್ಯೆಯ ಬೆಳಕ್ನು ಕಾಣಿಸುತ್ತದೆ. ಅವರ ಅಹಂಕಾರವೆಲ್ಲ ಸುಟ್ಟು ಹೋಯಿತು. ತಮಗಾಗಿ ಏನನ್ನೂ ಬಯಸದೆ ಭಗವಂತನಲ್ಲಿ ಮನಸ್ಸನ್ನು ನಿಲ್ಲಿಸಿ ಬದುಕಿದರು. ತಾವು ಮನಸ್ಸಿಗೆ ಸಮಾಧಾನ ಕಂಡುಕೊಂಡರೆ ಸಾಲದು, ಇತರರಿಗೂ ತಮ್ಮ ತಿಳಿವನ್ನು ಹಂಚಿಕೊಡಬೇಕು ಎಂದು ಮನಸ್ಸು ಮಾಡಿದರು. ವಿಜಯದಾಸರನ್ನು ಆಲಕ್ಷ್ಯದಿಂದ ಕಂಡವರಿಗೆ ಈಗ ಎಲ್ಲ ಮನುಷ್ಯರೂ ತಮ್ಮ ಅಣ್ಣತಮ್ಮಂದಿರಾಗಿ ತೋರಿದರು. ಅಸಾಧಾರಣ ವಿದ್ವಾಂಸರಾದ ಅವರು ತಾವು ಹೇಳುವುದನ್ನು ಸುಲಭವಾದ ಕನ್ನಡದಲ್ಲಿ ಹೇಳಿದರು. ಎಲ್ಲರೂ ಸಂನ್ಯಾಸಿಗಳಾಗಿ, ಇದೊಂದೇ ಮೋಕ್ಷ ಮಾರ್ಗ ಎನ್ನಲಿಲ್ಲ. ಈ ಜಗತ್ತಿನಲ್ಲಿದ್ದು ಅದರ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದು ಮನುಷ್ಯ ಪರಿಶುದ್ಧನಾಗಿರಬಹುದು. ಮನಸ್ಸನ್ನು ದೇವರಲ್ಲಿ ನಿಲ್ಲಿಸಿ, ಯಾವ ಕೆಲಸ ಮಾಡಲಿ ಸುಖ ತರಲಿ ದೇವರನ್ನು ನೆನೆಯಿರಿ ಎಂದರು. ಶುದ್ಧವಾದ ಜೀವನ ಮುಖ್ಯ ಎಂದು ಹೇಳಿದರು. ತಾವು ಹಾಗೆಯೇ ಬದುಕಿ ಮೇಲ್ಪಂಕ್ತಿಯಾದರು.

ಜಗನ್ನಾಥದಾಸರನ್ನು ಕುರಿತ ಈ ಎರಡು ಸಂಸ್ಕೃತ ಶ್ಲೋಕಗಳು ಅವರ ಮಹಿಮೆಯನ್ನು ಬೆಳಗುವ ನಂದಾ ದೀಪಗಳಂತಿವೆ.

ದಾಸವರ್ಯಂ ದಯಾಯುಕ್ತಂ ದೂರೀಕೃತ
ದುರಾಶಿಷಂ (ಕೆಟ್ಟ ಬಯಕೆ)
ಹರಿಕಥಾಮೃತ ವಕ್ತಾರಂ ಜಗನ್ನಾಥ ಗುರುಂ ಭಜೇ

ಜಲಜೇಷ್ಟ ನಿಭಾಕಾರಂ (ಸೂರ್ಯಸದೃಶರೂಪ)
ಜಗದೀಶಪದಾಶ್ರಯಮ್
ಜಗತೀತಲ ವಿಖ್ಯಾತಂ ಜಗನ್ನಾಥ ಗುರುಂ ಭಜೇ