ಜಗಲೂರು ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳು ಸಾವಿರಾರು ವರ್ಷಗಳ ಇತಿಹಾಸವನ್ನು ಸಾರಿ ಹೇಳುತ್ತವೆ. ತಾಲೂಕಿನ ಪೂರ್ವಭಾಗದಲ್ಲಿ ‘ಜನಗಿಹಳ್ಳ’ ಹರಿಯುವ ಪ್ರದೇಶದಲ್ಲಿ ವಿಶೇಷವಾಗಿ ಹೊಳೆದಂಡೆಯಲ್ಲಿರುವ ಕಲ್ಲೇದೇವಪುರ, ಹಿರೇಮಲ್ಲನಹೊಳೆ ಗ್ರಾಮದಲ್ಲಿ ಸಾವಿರ ವರ್ಷಗಳ ಹಿಂದೆ (೧೧ನೇ ಶತಮಾನ) ಕಲ್ಯಾಣ ಚಾಲುಕ್ಯರ ಆಡಳಿತಾಧಿಯಲ್ಲಿ ನಿರ್ಮಾಣವಾದ ಕಲ್ಲೇಶ್ವರ ದೇವಾಲಯಗಳು ಈ ಪ್ರದೇಶದ ಪ್ರಾಚೀನತೆಗೆ ಸಾಕ್ಷಿಯಾಗಿವೆ.

ವರ್ಣಾಶ್ರಮದ ಅನ್ವಯ ಸಮಾಜದಲ್ಲಿ ಸಾಕಷ್ಟು ಜಾತಿಗಳು ವೃತ್ತಿಗಳು ಆಧಾರದ ಮೇಲೆ ಅಸ್ತಿತ್ವದಲ್ಲಿ ಇದ್ದುದನ್ನು ಎಲ್ಲೆಡೆಯಂತೆ ತಾಲೂಕಿನಲ್ಲೂ ಕಾಣಬಹುದು. ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಜನಾಂಗದವರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಾಚೀನ ಕಾಲಘಟ್ಟದಲ್ಲಿ ಅಸ್ತಿತ್ವದಲ್ಲಿದ್ದ ‘ಕುಲಕಸುಬು’ಗಳು ಆಧುನಿಕ ಸಮಾಜದಲ್ಲಿ ಸಾಕಷ್ಟು ಸ್ಥಿತ್ಯಂತರಗೊಂಡಿರುವುದನ್ನು ಕಾಣಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಸಮಾಜದಲ್ಲಿ ಪ್ರಾಚೀನ ಪರಂಪರೆಯಂತೆ ಕುಲಕಸುಬುಗಳು ಅಸ್ತಿತ್ವದಲ್ಲಿದ್ದವು. ಬೇಟೆಗಾರಿಕೆ ಮತ್ತು ಪಶುಪಾಲನೆಯು ಬೇಡ ಅಥವಾ ನಾಯಕ ಜನಾಂಗದ ಪ್ರಮುಖ ಕಸುಬಾಗಿದ್ದಿತು. ಸಾವಿರಾರು ವರ್ಷಗಳಿಂದ ಪಶುಪಾಲನೆ ವೃತ್ತಿಯಲ್ಲಿ ತೊಡಗಿರುವ ಮ್ಯಾಸಬೇಡರು ಬೇಟೆಯಾಡುವುದು ಜೀವನದ ಅವಿಭಾಜ್ಯ ಅಂಗವಾಗಿತ್ತು. ಈ ಹಿನ್ನೆಲೆಯಲ್ಲೇ ಸಮೃದ್ದ ಬುಡಕಟ್ಟು ಸಂಸ್ಕೃತಿ ರೂಢಿಗೊಂಡಿರುವುದು. ಜಗಲೂರು ತಾಲೂಕಿನ ಸುಮಾರು ೮೦ ಚ.ಕಿ.ಮೀ ವಿಸ್ತೀರ್ಣದ ರಂಗಯ್ಯನದುರ್ಗ ಅರಣ್ಯ ಪ್ರದೇಶ ಸಾಕಷ್ಟು ವನ್ಯಜೀವಿಗಳಿಗೆ ಪ್ರಶಸ್ತ ನೆಲೆಯಾಗಿತ್ತು. ಈ ಅರಣ್ಯದ ಆಸುಪಾಸಿನಲ್ಲಿರುವ ೫೦ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಬುಡಕಟ್ಟು ಸಂಸ್ಕೃತಿ ಹಾಸುಹೊಕ್ಕಾಗಿದೆ.

ಅರಣ್ಯವನ್ನೇ ಆಶ್ರಯಿಸಿಕೊಂಡು ಜಾನುವಾರುಗಳನ್ನು ಸಾಕುತ್ತಾ ಪಶುಪಾಲನ ವೃತ್ತಿಯ ಮೂಲಕ ನೆಮ್ಮದಿಯ ಜೀವನ ಕಂಡುಕೊಳ್ಳಲಾಗಿತ್ತು. ಆದರೆ ಕಳೆದ ಕೆಲವು ದಶಕಗಳಿಂದ ಈಚೆಗೆ ಹಲವು ಕಾರಣಗಳಿಂದಾಗಿ ಅರಣ್ಯ ನಶವಾಗುತ್ತಿರುವುದು ಬುಡಕಟ್ಟು ಸಂಸ್ಕೃತಿ ಹಾಗೂ ಪಶುಪಾಲನಾ ವೃತ್ತಿಗೆ ದೊಡ್ಡ ಪೆಟ್ಟೆಂದೇ ಹೇಳಬಹುದು. ಅರಣ್ಯ ಪ್ರದೇಶ ಸೀಮಿತಗೊಳ್ಳುತ್ತಾ ಇಂದು ಸಂಪೂರ್ಣ ವಿನಾಶದ ಅಂಚಿಗೆ ತಲುಪಿದೆ.

ಸಾಕಷ್ಟು ಸ್ಥಿತ್ಯಂತರಗಳ ನಂತರ ನಾಯಕ ಅಥವಾ ಬೇಡ ಸಮಾಜದಲ್ಲಿ ಪಶುಪಾಲನಾ ವೃತ್ತಿ ಕ್ರಮೇಣ ಕಡಿಮೆಯಾಗುತ್ತಿದೆ. ಜನಾಂಗದ ಸಂಘಟನೆ ಹಾಗೂ ಜಾಗೃತಿಯ ಪರಿಣಾಮ ಎಲ್ಲಾ ಜನಾಂಗದ ರೀತಿಯಲ್ಲಿ ‘ಶಿಕ್ಷಣ’ದತ್ತ ಆಸ್ಥೆ ಬೆಳೆಯುತ್ತಿದೆ. ಜನಾಂಗ ಹೆಚ್ಚಾಗಿರುವ ಪ್ರತಿಹಳ್ಳಿಗಳಲ್ಲಿ ಉತ್ತಮ ಶಿಕ್ಷಣ ಹೊಂದಿರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದೆ. ನೌಕರಿ ಹಿಡಿದು ಅಧಿಕಾರಿಗಳಾಗಿದ್ದಾರೆ. ಮೀಸಲಾತಿ ದೆಸೆಯಿಂದ ಶಿಕ್ಷಣ ಹಾಗೂ ನೌಕರಿಯ ಮಾರ್ಗ ಹಿಡಿದು ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಮೀಸಲಾತಿಯಿಂದಾಗಿ ಸುಲಭವಾಗಿ ಜನಾಂಗದವರು ಆಯ್ಕೆಯಾಗಲು ಕಾರಣವಾಗಿದೆ. ದಶಕಗಳ ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಸ್ವಲ್ಪಮಟ್ಟಿನ ಸುಧಾರಣೆ ಆಗಿದ್ದರೂ ಹಳ್ಳಿಗಳಲ್ಲಿ ಭೂರಹಿತರು ಹಾಗೂ ಕೂಲಿಯನ್ನೇ ನಂಬಿ ಬದುಕುವವರ ಸಂಖ್ಯೆ ಹೆಚ್ಚಾಗಿರುವುದು ನಿಜ. ಕೆಲಮಟ್ಟಿಗೆ ಭೂಮಿ ಹೊಂದಿರುವವರು ಒಕ್ಕಲುತನವನ್ನೇ ಮುಖ್ಯ ಕಸುಬಾಗಿ ಪರಿಗಣಿಸಿದ್ದಾರೆ.

ಶತಮಾನಗಳಿಂದ ಕಲ್ಲು ಒಡೆಯುವುದು, ಗೋಡೆ ಮನೆ ನಿರ್ಮಾಣದಂತಹ ಶ್ರಮದಾಯಕ ವೃತ್ತಿಯನ್ನು ನಂಬಿಕೊಂಡಿರುವ ‘ಬೋವಿ’ ಜನಾಂಗದವರು ತಾಲೂಕಿನ ೫೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿದ್ದಾರೆ. ಸ್ವಾತಂತ್ರ್ಯ ಗಳಿಸಿ ಆರು ದಶಕಗಳಾದರೂ ಇಂದಿಗೂ ಹೊಟ್ಟೆಪಾಡಿಗಾಗಿ ರಾಜ್ಯದ ಕಾಫಿ ಸೀಮೆ, ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಮೂಹಿಕವಾಗಿ ಗುಳೆ ಹೋಗುತ್ತಿದ್ದಾರೆ. ಉತ್ತರ ಕರ್ನಾಟಕದ ಕೆಲವು ಬರಪೀಡಿತ ಪ್ರದೇಶಗಳ ರೀತಿಯಲ್ಲಿ ಇಲ್ಲಿ ಮಕ್ಕಳು ದುಡಿಯೊಂದಿಗೆ ಗಂಟುಮೂಟೆ ಹೊತ್ತು ಸಾವಿರಾರು ಕುಟುಂಬಗಳು ಪ್ರತೀವರ್ಷ ದೂರದ ಊರುಗಳಿಗೆ ‘ವಲಸೆ’ ಹೋಗುತ್ತಿದ್ದು, ಜಿಲ್ಲೆಯ ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳ ಸಭೆಗಳಲ್ಲಿ ಬಿಸಿ ಚರ್ಚೆಗೆ ಕಾರಣವಾಗುತ್ತದೆ. ಯುಗಾದಿ ಹಾಗೂ ದಸರಾ ಹಬ್ಬದ ಸಂದರ್ಭದಲ್ಲಿ ಮಾತ್ರ ತಮ್ಮ ಊರುಗಳಿಗೆ ಹಿಂತಿರುಗುವ ಬೋವಿ (ವಡ್ಡರು) ಜನಾಂಗದ ಮನೆಗಳಿಗೆ ವರ್ಷವಿಡೀ ಬೀಗ ಜಡಿಯುವ ದೃಶ್ಯ ಸರ್ವೇಸಾಮಾನ್ಯ. ಭೂರಹಿತರೇ ಹೆಚ್ಚಾಗಿರುವ ಜನಾಂಗದಲ್ಲಿ ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಶಿಕ್ಷಣ ಪಡೆದವರನ್ನು ಕಾಣಬಹುದು. “ಚೂರು ಗಂಜಿಗಾಗಿ ಸೇರು ಬೆವರು ಸುರಿಸುತ್ತಾ ನಾವೆಲ್ಲಿಗೆ ಹೋಗಬೇಕು ಕೂಲಿಯವ್ರು ನಾವು ಕೇಳಯ್ಯಾ” ಎಂಬ ಕವಿವಾಣಿಯಂತೆ ಬೋವಿ ಜನಾಂಗದಲ್ಲಿ ಇಂದಿಗೂ ಅನಕ್ಷರಸ್ಥರು, ಕೂಲಿಕಾರರ ಸಂಖ್ಯೆ ಹೆಚ್ಚಾಗಿದೆ. ತಾಲೂಕಿನಲ್ಲಿ ಮನೆಕಟ್ಟಲು, ಅಗೆಯಲು ವಡ್ಡರೇ ಬೇಕು ಎಂಬ ಸ್ಥಿತಿ ಇದೆ. ಬೆರಳೆಣಿಕೆ ಸಂಖ್ಯೆಯಲ್ಲಿ ಶಿಕ್ಷಣ ಪಡೆದ ಕುಟುಂಬ ವರ್ಗದವರು ನಗರಗಳಲ್ಲಿ ನೆಲೆಸಿ ಸ್ಥಿತಿವಂತರಾಗಿದ್ದಾರೆ. ಮೀಸಲಾತಿಯ ಪರಿಣಾಮವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜನಾಂಗದವರು ಆಯ್ಕೆಯಾಗುತ್ತಿದ್ದಾರೆ.

ಲಂಬಾಣಿ ಜನಾಂಗದವರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಅರಣ್ಯದಿಂದ ಕಟ್ಟಿಗೆ ಹೊತ್ತು ತಂದು ಮಾರಾಟ ಮಾಡಿ ಹೊಟ್ಟೆ ಹೊರೆಯುತ್ತಿದ್ದ ಮಹಿಳೆಯರ ಸಂಖ್ಯೆ ಈಚಿನ ದಶಕಗಳಲ್ಲಿ ಕಡಿಮೆಯಾಗುತ್ತಿದೆ. ಕುಗ್ರಾಮಗಳಾಗಿದ್ದ ತಾಂಡಾಗಳಿಗೆ ವಿದ್ಯುತ್, ರಸ್ತೆಯಂತಹ ಮೂಲ ಸೌಕರ್ಯ ಸಿಗುತ್ತಿದ್ದು ಸುಧಾರಣೆಯತ್ತ ತಾಂಡಗಳು ಮುಖಮಾಡುತ್ತಿವೆ. ಆದರೂ ಲಂಬಾಣಿ ಮಕ್ಕಳಲ್ಲಿ ಬಹುತೇಕರು ಶಾಲೆಗಳಿಗೆ ತೆರಳುವ ಬದಲು ಹೊಟ್ಟೆಪಾಡಿಗೆ ಕೂಲಿ ಅರಸಿಕೊಂಡು ಹೋಗುತ್ತಿರುವುದು ವಾಸ್ತವದ ಸಂಗತಿ. ಬಗ್ಗೇನಹಳ್ಳಿ, ವೆಂಕಟೇಶಪುರ, ಬ್ಯಾತಗಾರನಹಳ್ಳಿ, ಕೊಂತಿಕೆರೆ ತಾಂಡಗಳಲ್ಲಿ ಬಹುತೇಕರು ವ್ಯವಸಾಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟುನಿಟ್ಟಿನ ಕಾನೂನುಗಳಿಂದಾಗಿ ಹಿಂದೆ ಭಟ್ಟಿಸಾರಾಯಿ ತಯಾರಿಸುವುದನ್ನು ವೃತ್ತಿಯಾಗಿಸಿಕೊಂಡಿದ್ದವರು ಈಗ ಅದನ್ನು ತ್ಯಜಿಸಿದ್ದಾರೆ. ಹಿಂದೂ ಧರ್ಮದಲ್ಲಿ ಅತ್ಯಂತ ಶೋಷಿತ ಜನಾಂಗವಾದ ಹರಿಜನ (ಮಾದಿಗ) ಜನಾಂಗದ ಸಂಖ್ಯೆ ತಾಲೂಕಿನ ಬಹುತೇಕ ಎಲ್ಲ ಗ್ರಾಮಗಳಲ್ಲಿ ಹಾಸುಹೊಕ್ಕಾಗಿದೆ. ಉಳಿದ ಎಲ್ಲಾ ಜನಾಂಗಗಳಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸ್ವಲ್ಪಮಟ್ಟಿನ ಪ್ರಗತಿ ಕಾಣಬಹುದು. ಆದರೆ ಹರಿಜನ ಸಮಾಜದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ತೀವ್ರ ಬದಲಾವಣೆಗಳಿಗೆ ಒಳಗಾಗದೇ ಅದೇ ರೀತಿ ಶೋಷಿತ ಜನಾಂಗವಾಗಿ ಹಿಂದುಳಿದಿದೆ.

ಬಹುತೇಕ ಹಳ್ಳಿಗಳಲ್ಲಿ ಅನಕ್ಷರತೆ ಹಾಗೂ ದಾರಿದ್ರ್ಯದಿಂದಾಗಿ ಇಂದಿಗೂ ತಮ್ಮ ಮಕ್ಕಳನ್ನು ಸವರ್ಣೀಯರ ಮನೆಗಳಲ್ಲಿ ಜೀತಕ್ಕೆ ಇಟ್ಟಿರುವುದನ್ನು ನೋಡಬಹುದು. ಹಿಂದಿನಂತೆ ‘ಜೀತಪದ್ಧತಿ’ ತೀವ್ರವಾಗಿಲ್ಲದಿದ್ದರೂ ಸಾಹುಕಾರರ ಮನೆ – ಹೊಲಗಳಲ್ಲಿ ದುಡಿಯುವವರ ಸಂಖ್ಯೆ ಜನಾಂಗದಲ್ಲಿ ಹೆಚ್ಚಿದೆ. ಪಟ್ಟಣ ಪಂಚಾಯಿತಿಯಲ್ಲಿ ಚರಂಡಿ, ಮ್ಯಾನ್ ಹೋಲ್ ಹಾಗೂ ಬೀದಿಗಳನ್ನು ಸ್ವಚ್ಛಗೊಳಿಸಲು ಹರಿಜನರೇ ಬೇಕು. ಉಳಿದ ಎಲ್ಲಾ ಉದ್ಯೋಗಗಳಲ್ಲಿ ಪೈಪೋಟಿ ಇದ್ದರೂ ಚರಂಡಿ, ಬೀದಿಗಳನ್ನು ಸ್ವಚ್ಛಗೊಳಿಸಲು ಇತರೆ ಜನಾಂಗಗಳಿಂದ ಪೈಪೋಟಿ ಇಲ್ಲದಿರುವುದು ಜನಾಂಗದ ಧಾರುಣ ಸ್ಥಿತಿಗೆ ಹಿಡಿದ ಕೈಕನ್ನಡಿ. ಇಷ್ಟೆಲ್ಲಾ ಶೋಷಣೆ ದೌರ್ಜನ್ಯದ ನಡುವೆಯೂ ಸರ್ಕಾರಗಳ ದಲಿತರ ಪರ ನೀತಿಗಳಿಂದಾಗಿ ಮತ್ತು ದಲಿತರಲ್ಲಿ ಸ್ವಲ್ಪಮಟ್ಟಿನ ಸಂಘಟನೆಯಿಂದಾಗಿ ಶೋಷಣೆಯ ತೀವ್ರತೆ ಹಿಂದಿಗಿಂತಲೂ ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎನ್ನಬಹುದು. ತಾಲೂಕಿನಲ್ಲಿ ಕೆಲವೇ ಹಳ್ಳಿಗಳಲ್ಲಿ ವಾಸವಾಗಿರುವ ಹೊಲೆಯ ಚಲವಾದಿ ಪ್ರಮುಖ ವೃತ್ತಿ ಮದುವೆ ಮತ್ತು ಸಭೆ, ಸಮಾರಂಭಗಳಲ್ಲಿ ವಾದ್ಯ ನುಡಿಸುವುದು ಆಧುನಿಕತೆ ಬಿರುಗಾಳಿಯಲ್ಲಿ ಕಹಳೆ, ಶಹನಾಯಿಯ ಸದ್ದು ಕ್ಷೀಣವಾಗಿದೆ. ಹಳ್ಳಿಗಳಲ್ಲಿ ಅಸ್ಪೃಶ್ಯತೆಯ ಆಚರಣೆಯ ಕರಾಳತೆಯನ್ನು ಅನುಭವಿಸುತ್ತಿರುವವರಲ್ಲಿ ಈ ಜನಾಂಗದವರೂ ಸೇರಿದ್ದಾರೆ. ಮೀಸಲಾತಿಯಿಂದಾಗಿ ಶಿಕ್ಷಣ ಪಡೆದು ಸರ್ಕಾರಿ ನೌಕರಿಗೆ ಸೇರುವವರ ಸಂಖ್ಯೆ ದಿನದಿನವೇ ಹೆಚ್ಚುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಕಾಡುಗೊಲ್ಲರು ಮತ್ತು ಕುರುಬರ ಸಂಖ್ಯೆ ಇಲ್ಲಿ ಗಣನೀಯವಾಗಿದೆ. ೧೦೦ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೆಲೆಸಿರುವ ಈ ಎರಡು ಜನಾಂಗಗಳ ಮುಖ್ಯ ಕಸುಬು ಕುರಿ ಕಾಯುವುದು ಬಹುತೇಕವಾಗಿದೆ. ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಮೂಲಸೌಕರ್ಯ ಕಲ್ಪಿಸಲಾಗಿಲ್ಲ. ಹುಲ್ಲುಕಡ್ಡಿಗಳಿಂದ ನಿರ್ಮಿಸಿದ ಗುಡಿಸಲುಗಳಲ್ಲೇ ವಾಸಿಸುವುದನ್ನು ತೋರಣಗಟ್ಟೆ, ಅಣಬೂರು, ಗೊಲ್ಲರಹಟ್ಟಿ, ಹೊನ್ನೆಮರಡಿ ಇನ್ನು ಮುಂತಾದ ಹಲವು ಗ್ರಾಮಗಳಲ್ಲಿ ಕಾಣಬಹುದು. ‘ಕುರಿಗಾಹಿ’ ಸಂಸ್ಕೃತಿಯ ಗೊಲ್ಲರು ಹಾಗೂ ಕುರುಬರಲ್ಲಿ ಶೇ ೭೦ಕ್ಕೂ ಹೆಚ್ಚು ಮಂದಿ ಕುರಿಗಾಹಿಗಳೇ ಆಗಿದ್ದಾರೆ.

ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ವಾಸವಾಗಿರುವ ಅತ್ಯಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಜನಾಂಗ ‘ಲಿಂಗಾಯತ’ ಜನಾಂಗ, ಹಲವು ಒಳಪಂಗಡಗಳನ್ನು ಹೊಂದಿರುವ ಲಿಂಗಾಯಿತರು ಪ್ರಮುಖ ವೃತ್ತಿ ಕೃಷಿ ತಲಾಂತರದಿಂದ ಭೂಮಿಯ ಹಕ್ಕನ್ನು ಹೊಂದಿರುವ ಜನಾಂಗ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸುಸ್ಥಿತಿಯಲ್ಲಿದೆ.

ಪ್ರತಿ ಕುಟುಂಬದಲ್ಲಿ ಸಾಕಷ್ಟು ಜಮೀನು ಹೊಂದಿದ್ದು ಆರ್ಥಿಕವಾಗಿ ಉತ್ತಮ ಸ್ಥಿತಿ ಇದೆ. ಯಾವುದೇ ನದಿ ಮೂಲಗಳಿಲ್ಲದೆ ಈ ಪ್ರದೇಶದಲ್ಲಿ ಮಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡಲಾಗುತ್ತಿದೆ. ವರ್ಷವಿಡೀ ಹೊಲಗಳಲ್ಲಿ ದುಡಿಯುವ ಈ ಜನಾಂಗದವರು ಶ್ರಮ ಜೀವಿಗಳು. ಜನಾಂಗದ ಸಂಘಟನೆ, ಜಾಗೃತಿ ಮತ್ತು ಆರ್ಥಿಕ ಭದ್ರತೆಯ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶದಲ್ಲಿ ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಅಧಿಕ ಪ್ರಮಾಣದಲ್ಲಿದೆ. ವಿವಿಧ ವೃತ್ತಿಗಳಲ್ಲಿ ಲಿಂಗಾಯಿತರ ಪ್ರಾಬಲ್ಯ ಎದ್ದು ಕಾಣುತ್ತದೆ. ಬೆಳೆನಾಶ, ಬೆಲೆ ಕುಸಿತ ಮುಂತಾದ ಕಾರಣಗಳಿಂದಾಗಿ ವ್ಯವಸಾಯವನ್ನೇ ಜೀವನೋಪಾಯ ವೃತ್ತಿಯಾಗಿ ಪರಿಗಣಿಸಿರುವುದು ಕಡಿಮೆಯಾಗುತ್ತಿದೆ. ಇವರ ಹೊಲ ಮನೆಗಳಲ್ಲಿ ಜಾನುವಾರುಗಳ ನಿರ್ವಹಣೆಗೆ ಕೆಳವರ್ಗದವರನ್ನು ಬಳಸಿಕೊಂಡಿರುವುದನ್ನು ಗ್ರಾಮೀಣ ಪ್ರದೇಶದಲ್ಲಿ ಕಾಣಬಹುದು. ‘ರೆಡ್ಡಿ’ ಜನಾಂಗದವರು ಹೆಚ್ಚಾಗಿರುವ ತೊರೆಸಾಲು ಪ್ರದೇಶ ಕೃಷಿಪ್ರಧಾನವಾಗಿದೆ. ಮುಸ್ಲಿಂ, ಪಿಂಜಾರ ಜನಾಂಗ ಸಣ್ಣ ಪುಟ್ಟ ವ್ಯಾಪಾರದಲ್ಲಿ ನಿರತವಾಗಿದೆ. ಉಪ್ಪಾರ, ಬೆಸ್ತ, ನೇಕಾರ, ಸಿಳ್ಳೆಕ್ಯಾತ, ಕೊರಚ, ಅಗಸ, ಶೆಟ್ಟಿ ಮೊದಲಾದ ವರ್ಗಗಳು ತಮ್ಮ ತಮ್ಮ ಸಾಂಪ್ರದಾಯಿಕ ಕಸುಬುಗಳ ಜತೆಯಲ್ಲೇ ವಿವಿಧ ಕಸುಬುಗಳತ್ತ ಸ್ಥಿತ್ಯಂತರಗೊಳ್ಳುತ್ತಿರುವುದು ಪ್ರಮುಖ ಅಂಶ. ಪರಿಶಿಷ್ಟ ಜಾತಿ, ಪಂಗಡದವರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿರುವ ಇಲ್ಲಿ ವಿವಿಧ ಕಸುಬುಗಳನ್ನು ಪಾರಂಪರಿಕವಾಗಿ ಹೊಂದಿರುವ ಹಲವು ಜಾತಿ, ಧರ್ಮದ ಜನರು ಇದ್ದಾರೆ. ಒಟ್ಟಿನಲ್ಲಿ ತಮ್ಮ ತಮ್ಮ ಕುಲ – ಕಸುಬುಗಳೊಂದಿಗೆ ಪರಸ್ಪರ ಸೌಹಾರ್ದ ಸಾಮರಸ್ಯರೊಂದಿಗೆ ಜೀವನ ನಡೆಸುತ್ತಿರುವರು.