ಒಂದು ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಮಹನೀಯರು ತಮ್ಮದೇ ಆದ ಕೊಡುಗೆಗಳನ್ನು ನೀಡಿರುತ್ತಾರೆ. ಕರ್ನಾಟಕದ ಅಭಿವೃದ್ಧಿಗೆ ಕಾರಣೀಭೂತರಾದ ವ್ಯಕ್ತಿಗಳಲ್ಲಿ ಸಿ.ರಂಗಚಾರ್ಲು, ಕೆ.ಶೇಷಾದ್ರಿ ಐಯ್ಯರ್, ಸರ್.ಎಂ. ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್ ಪ್ರಮುಖರು. ಮೈಸೂರು ಸಂಸ್ಥಾನದ ಭಾಗವಾಗಿದ್ದ ಚಿತ್ರದುರ್ಗದ ಜಗಲೂರು (ಪ್ರಸ್ತುತ ದಾವಣಗೆರೆ ಜಿಲ್ಲೆ) ಪ್ರದೇಶದ ಅಭಿವೃದ್ಧಿಗೆ ‘ಎಲೆ ಮರೆಯ ಕಾಯಿಯಂತೆ’ ಯಾವುದೇ ಪ್ರಚಾರ, ಪ್ರತಿಫಲಗಳನ್ನು ಅಪೇಕ್ಷಿಸದೆ ನಿಸ್ವಾರ್ಥವಾಗಿ ದುಡಿದು ಎಲ್ಲರಿಗೂ ಚಿರಪರಿಚಿತರಾದವರು ‘ಜಗಲೂರಿನ ಇಮಾಂಸಾಬ್’. ಇವರು ವಿನಯಶೀಲರು, ಅಜಾಶತ್ರು, ಜನಾನುರಾಗಿ. ಜಯಚಾಮರಾಜೇಂದ್ರ ಒಡೆಯರ ಖಾಸಗಿ ಮಂತ್ರಿಯಾಗಿ ಸಂಸ್ಥಾನದ ಏಳಿಗೆಗೆ ದುಡಿದವರು. ಮಹಾರಾಜರು ಇವರ ಕಾರ್ಯದಕ್ಷತೆ ಸೇವಾಕಾಂಕ್ಷೆಗಳನ್ನು ಮೆಚ್ಚಿ ‘ಮಷೀರ್ – ಉಲ್ – ಮುಲ್ಕ್’ (ಜನಸೇವಾಸಕ್ತ) ಎಂಬ ಬಿರುದನ್ನು ನೀಡಿ ಗೌರವಿಸಿದರು.

ಇಮಾಂಸಾಬ್ ಜಗಲೂರು ಪೌರಸಭೆಯ ಅಧ್ಯಕ್ಷರಾಗಿ, ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ, ಮಂತ್ರಿಗಳಾಗಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸಲ್ಲಿಸಿದ ಸೇವೆ ಪ್ರಶಂಸನಾರ್ಹ. ಇವರನ್ನು ಶ್ರೇಷ್ಠ ವಿರೋಧಪಕ್ಷದ ನಾಯಕ ಎಂದು ನೆಹರುರವರು ಹೊಗಳಿದ್ದಾರೆ. ಲೋಕಸಭೆಗೆ ಎರಡು ಬಾರಿ ಚುನಾಯಿತರಾದರು. ಅಲ್ಲದೇ ಅನೇಕ ಸಾರ್ವಜನಿಕ ಸಂಘ – ಸಂಸ್ಥೆಗಳ ನಿರ್ದೇಶಕರಾಗಿ ಅವುಗಳನ್ನು ಪೋಷಿಸಿ ಬೆಳೆಸಿದ್ದಾರೆ. ಕನ್ನಡ ನಾಡಿನ ಏಕೀಕರಣದಲ್ಲಿ ಇವರ ಪಾತ್ರ ಗಮನಾರ್ಹ. ಇವರಿಗೆ ಕನ್ನಡ, ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಒಳ್ಳೆಯ ಪಾಂಡಿತ್ಯವಿತ್ತು. ನೂರ್ ಜಹಾನ್ ಎಂಬ ಕಾದಂಬರಿ, ದೇವರಗಂಟೆ ಎಂಬ ನಾಟಕ, ಮೈಸೂರು ಆಗ ಮತ್ತು ಈಗ ಎಂಬ ಕೃತಿಯನ್ನು ಬರೆದು ಕನ್ನಡ ಸಾಹಿತ್ಯಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಪ್ರಕಾರ ‘ರಾಜಕೀಯವು ಜೀವನೋಪಾಯವಲ್ಲ, ದೇಶಕ್ಕೆ ಸೇವೆ ಸಲ್ಲಿಸುವ ಸದಾವಕಾಶ’. ಇವರ ಸೇವೆಯನ್ನು ಕಂಡ ಜನತೆ ಇವರನ್ನು ಇಂದಿಗೂ ಪ್ರೀತಿಯಿಂದ ಇಮ್ಮಣ್ಣ ಎಂದೇ ಕರೆಯುತ್ತಾರೆ.

ಆರಂಭಿಕ ಜೀವನ

ಇಮಾಂರು ಜಗಲೂರು ತಾಲೂಕಿನ ಮರೇನಹಳ್ಳಿಯಲ್ಲಿ ೧೮೯೭ ಫೆಬ್ರವರಿ ೧೫ ರಂದು ಬಡೇಸಾಹೇಬ ಮತ್ತು ಹೊನೂರಬಿ ಅವರ ಮಗನಾಗಿ ಜನಿಸಿದರು. ತಾತಾ ಫಕೀರ್ ಸಾಹೇಬರು ಒಬ್ಬ ಜಮೀನ್ ದಾರರು. ಇವರು ಜೀವನ ನಿರ್ವಹಣೆಯ ದೃಷ್ಠಿಯಿಂದ ಮರೇನಹಳ್ಳಿಯಿಂದ ಜಗಲೂರಿಗೆ ಬಂದು ನೆಲೆಸುತ್ತಾರೆ. ಫಕೀರಜ್ಜ ತನ್ನ ಒಳ್ಳೆಯತನದಿಂದ ಜನರ ಪ್ರೀತಿವಿಶ್ವಾಸ ಗಳಿಸಿ ಜಗಲೂರಿನಲ್ಲಿ ಸ್ಥಳೀಯ ಸಂಸ್ಥೆಗಳಾದ ಮುನಿಸಿಪಾಲಿಟಿ, ತಾಲೂಕು ಬೋರ್ಡ್ ಗಳ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಜನಪರ ಕಾರ್ಯಗಳನ್ನು ನಿರ್ವಹಿಸಿದರು. ಹೀಗಾಗಿ ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಗೂ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾದರು. ಸಭೆಯಲ್ಲಿ ಜನರ ಕುಂದುಕೊರತೆಗಳ ಕುರಿತು ಚರ್ಚಿಸಿ ಗಮನ ಸೆಳೆದಿದ್ದರು. ೧೯೧೭ರಲ್ಲಿ ಬಡೇಸಾಹೇಬರೂ ಇದರ ಸದಸ್ಯರಾಗಿದ್ದರು. ಇಂತಹ ರಾಜಕೀಯ ವಾತಾವರಣದಲ್ಲಿ ಬೆಳೆದಿದ್ದರಿಂದ ಇಮಾಂರಿಗೂ ಬಾಲ್ಯದಲ್ಲಿಯೇ ರಾಜಕೀಯದಲ್ಲಿ ಆಸಕ್ತಿಯುಂಟಾಯಿತು. ತಾತನ ಸೇವಾ ಮನೋಭಾವದ ಪ್ರಭಾವವು ಇವರಿಗೆ ಮುಂದೆ ರಾಷ್ಟ್ರನಾಯಕರಾಗಲು ಪ್ರೇರಣೆಯಾಯಿತು.

ಇಮಾಂಸಾಬರು ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಜಗಲೂರು ಹಾಗೂ ಚಿತ್ರದುರ್ಗದಲ್ಲಿ ಪಡೆದರು. ೧೯೧೭ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ಪಡೆಯಲು ಸೇರಿದರು. ಈ ಮಧ್ಯೆ ಬಿ.ಎ.ಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಮನೆಯವರೆಲ್ಲರೂ ಸೇರಿ ಒತ್ತಾಯ ಮಾಡಿ ಸೋದರತ್ತೆ ಮಗಳಾದ ಚಮನ್ ಬಿ ಅವರೊಂದಿಗೆ ವಿವಾಹ ಮಾಡಿದರು. ವಿವಾಹವಾದರೂ ಪದವಿಯನ್ನು ಮುಂದುವರಿಸಿದರು. ೧೯೧೮ರಲ್ಲಿ ಇಡೀ ಜಗಲೂರು ತಾಲೂಕಿನಲ್ಲಿ ಪದವಿ ಪಡೆದ ಮೊದಲ ‘ಪದವೀಧರ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಗಮನಾರ್ಹ. ಇದೇ ವರ್ಷ ಬಡೇಸಾಹೇಬರು ಪ್ಲೇಗ್ ಕಾಯಿಲೆಯಿಂದ ನಿಧನರಾದರು. ತಂದೆಯ ಸಾವು ಇವರನ್ನು ಹೆಚ್ಚು ಬಾಧಿಸಿದರೂ ಕಾನೂನು ಪದವಿಗೆ ಆಕರ್ಷಿತರಾಗಿ ಮದ್ರಾಸಿನ ಸರಕಾರಿ ಕಾನೂನು ಕಾಲೇಜಿಗೆ ಸೇರಿದರು. ಬಿ.ಎಲ್. ಪದವಿಯನ್ನು ೧೯೨೩ರಲ್ಲಿ ಪಡೆದರು. ನಂತರ ಚಿತ್ರದುರ್ಗದಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು. ರಾಜಕೀಯ ಸೆಳೆತದಿಂದ ಈ ವೃತ್ತಿಯನ್ನು ಕೈ ಬಿಟ್ಟರು. ೧೯೨೬ರಲ್ಲಿ ಚಿತ್ರದುರ್ಗ ಜಿಲ್ಲಾ ಬೋರ್ಡಿಗೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದರು. ಇಲ್ಲಿಂದ ಇವರ ರಾಜಕೀಯ ಜೀವನ ಆರಂಭವಾಯಿತು.

ರಾಜಕೀಯ ಪ್ರವೇಶ

ಇಮಾಂರಿಗೆ ಬಾಲ್ಯದಿಂದಲೂ ರಾಜಕೀಯ ಆಸಕ್ತಿಯಿದ್ದುದರಿಂದ ವಕೀಲ ವೃತ್ತಿ ಬಿಟ್ಟು ರಾಜಕೀಯ ಪ್ರವೇಶಿಸಿದರು. ಚಿತ್ರದುರ್ಗ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ ೧೯೨೬, ೧೯೩೬ರಲ್ಲಿ ಎರಡು ಬಾರಿ ಆಯ್ಕೆಯಾದರು. ಹಿಂದುಳಿದ ಪ್ರದೇಶವಾಗಿದ್ದ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡರು. ಕೃಷಿಗೆ ಪ್ರೋತ್ಸಾಹ ನೀಡಿದರು. ಉತ್ತಮ ರಸ್ತೆ, ಕೆರೆ, ಚರಂಡಿಗಳು ನಿರ್ಮಾಣವಾದವು. ೧೯೪೦ – ೪೧ರಲ್ಲಿ ಜಗಲೂರಿಗೆ ವಿದ್ಯುತ್ ಸರಬರಾಜಾಯಿತು. ನಗರಕ್ಕೆ ನೀರಿನ ಟ್ಯಾಂಕ್ ಗಳು ನಿರ್ಮಾಣವಾದವು. ಅರವತ್ತೆರಡು ವರ್ಷಗಳಾದರೂ ನೀರಿನ ಟ್ಯಾಂಕ್ ಗಳು ಇಂದಿಗೂ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ. ಅಲ್ಲದೆ ಮುಸ್ ಫೀರ್ ಎಂಬ ತಂಗುದಾಣವನ್ನು ಕಟ್ಟಿಸಿದರು. ಇದು ಪ್ರಸ್ತುತ ಮುನಿಸಿಪಾಲಿಟಿ ಮಳಿಗೆಯಾಗಿದೆ.

ಮುನಿಸಿಪಾಲಿಟಿಯ ಅಧ್ಯಕ್ಷರಾಗಿ

ಅಂದು ಸರ್ಕಾರ ನೇರವಾಗಿ ಮುನಿಸಿಪಾಲಿಟಿಯ ಅಧ್ಯಕ್ಷರನ್ನು ನೇಮಕ ಮಾಡುತ್ತಿತ್ತು. ೧೯೩೩ – ೩೬ ರವರೆಗೆ ಇಮಾಂರು ಜಗಲೂರಿನ ಪುರಸಭೆಯ ಅಧ್ಯಕ್ಷರಾದರು. ೯ ಜನ ಸದಸ್ಯರ ಒಂದು ಸಮಿತಿ ರಚಿಸಿದರು. ನಗರಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವುದು ಈ ಸದಸ್ಯರ ಮುಖ್ಯ ಉದ್ದೇಶವಾಗಿತ್ತು. ನಗರದ ವಾರ್ಷಿಕ ಆದಾಯ ಕೇವಲ ೬ ರಿಂದ ೭ ಸಾವಿರ ರೂ.ಗಳು ಆಗ ಸರ್ಕಾರದಿಂದ ಎಲ್ಲ ಸದಸ್ಯರು ಸೇರಿ ತೆರಿಗೆ ಸಂಗ್ರಹಿಸಿ ಊರಿಗೆ ರಸ್ತೆ, ವಿದ್ಯುತ್, ನೀರಿನ ವ್ಯವಸ್ಥೆ, ಸಾರ್ವಜನಿಕ ಉದ್ಯಾನವನ ನಿರ್ಮಿಸಿದರು. ಇಂದಿನ ಮುನಿಸಿಪಾಲಿಟಿಯ ಕಟ್ಟಡ ಇವರ ಕಾಲದಲ್ಲಿ ನಿರ್ಮಿಸಿದ ಕಟ್ಟಡವಾಗಿರುವುದು ಗಮನಾರ್ಹ.

ಸಾಧನೆಗಳು

ಇಮಾಂಸಾಬರು ಮುನಿಸಿಪಾಲಿಟಿ ಹಾಗೂ ಜಿಲ್ಲಾ ಬೋರ್ಡಿನ ಅಧ್ಯಕ್ಷರಾಗಿ, ಮೈಸೂರು ಸಂಸ್ಥಾನದಲ್ಲಿ ಮಂತ್ರಿಯಾಗಿ, ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ ಅನೇಕ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ಇವರು ಅಧಿಕಾರ ಅವಧಿಯಲ್ಲಿ ಮಾಡಿದ ಸಾಧನೆಗಳು ಅಪೂರ್ವವಾದವು.

. ನೀರಾವರಿ ಸಾಧನೆಗಳು

ಇಮಾಂರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಾಗಿದ್ದಾಗ ನೀರಾವರಿಗೆ ಆಧ್ಯತೆಯನ್ನು ನೀಡಿದರು. ಜಗಲೂರು ಪರಿಸರದಲ್ಲಿ ಹಲವು ಕೆರೆಗಳು ನಿರ್ಮಾಣವಾದವು. ಅವುಗಳಲ್ಲಿ ಸಂಗೇನಹಳ್ಳಿಕೆರೆ, ತುಪ್ಪದಹಳ್ಳಿಕೆರೆ, ಗಡಿಮಾಕುಂಟೆ ಕೆರೆ, ಜಗಲೂರು ಕೆರೆ ಪ್ರಮುಖವಾಗಿವೆ. ಈ ಕೆರೆಗಳು ಕೃಷಿಯ ಅಭಿವೃದ್ಧಿಗೆ ಸಹಾಯಕವಾಗಿದ್ದವು. ಜಿನಗಿಹಳ್ಳ, ಬಿಳಿಚೋಡುಗಳಲ್ಲಿ ಒಡ್ಡುಗಳನ್ನು ಹಾಕಿ ಕೆರೆಗಳನ್ನು ನಿರ್ಮಾಣ ಮಾಡಲಾಯಿತು. ಇವು ಸುತ್ತಮುತ್ತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿದವು.

. ಸಾರಿಗೆ ಸಾಧನೆಗಳು

ಇಮಾಂರು ಪ್ರಯಾಣಿಕರು ಮತ್ತು ವ್ಯಾಪಾರ, ವಾಣಿಜ್ಯಗಳ ಅನುಕೂಲಕ್ಕಾಗಿ ಸಾರಿಗೆ ಕ್ಷೇತ್ರದಲ್ಲಿ ಸುಧಾರಣೆಗಳನ್ನು ಕೈಗೊಂಡರು. ಅದಕ್ಕಾಗಿ ರಸ್ತೆ, ಸೇತುವೆ, ರೈಲ್ವೆಮಾರ್ಗಗಳನ್ನು ನಿರ್ಮಿಸಲಾಯಿತು. ಇವರ ಕಾಲದಲ್ಲಿ ದೊಣ್ಣೆಹಳ್ಳಿ ಸೇತುವೆ, ಕಲ್ಲೊಡೆ ಸೇತುವೆ, ವೇದಾವರಿ ಸೇತುವೆಗಳನ್ನು ನಿರ್ಮಿಸಿದರು. ೧೯೪೦ – ೪೧ ಕೆಲ್ಲೊಡು ಸೇತುವೆಯ ಉದ್ಘಾಟನೆಗೆ ಜಯಚಾಮರಾಜ ಒಡೆಯರು ಆಗಮಿಸಿ ಇಮಾಂರ ಸಾಧನೆಯನ್ನು ಮುಕ್ತಕಂಠದಿಂದ ಪ್ರಶಂಸಿದರು. ಇವರು ಜಗಲೂರು ಪರಿಸರದಲ್ಲಿ ಅನೇಕ ರಸ್ತೆಗಳನ್ನು ನಿರ್ಮಿಸಿದ್ದಾರೆ. ಅವುಗಳೆಂದರೆ ಜಗಲೂರಿನಿಂದ ಚಿಕ್ಕಮಲ್ಲನಹೊಳೆಯವರೆಗೆ ೨೪ ಕಿ.ಮೀ. ರಸ್ತೆ, ಭರಮಸಾಗರದಿಂದ ದೊಣ್ಣೆಹಳ್ಳಿಗೆ ೨೮ ಕಿ.ಮೀ. ರಸ್ತೆ, ಬಿಳಿಚೋಡು, ಅಸಗೋಡು, ಬಸವನಕೋಟೆ, ಹೊಸಕೆರೆಯವರೆಗೆ ಸುಮಾರು ೨೫ ಕಿ.ಮೀ. ರಸ್ತೆ, ಜಗಲೂರಿನಿಂದ ಸೊಕ್ಕೆಗೆ ೨೬ ಕಿ.ಮೀ. ರಸ್ತೆ, ಜಗಲೂರಿನಿಂದ ಕಾನಾಮಡುಗುವರೆಗೆ ೧೮ ಕಿ.ಮೀ. ರಸ್ತೆಗಳು ರಚನೆಯಾದವು.

ಪಂಚಾಯತ್ ಕಾರ್ಯಾಲಯಗಳು

ಹಳ್ಳಿಗಳ ಅಭಿವೃದ್ಧಿಗೆ ಇಮಾಂರು ಪಂಚಾಯತ್ ಕಾರ್ಯಾಲಯಗಳನ್ನು ಸ್ಥಾಪಿಸಿದರು. ಇವು ಹಳ್ಳಿಯ ಜನರ ಯೋಗಕ್ಷೇಮಕ್ಕಾಗಿ ಕೆಲಸ ಮಾಡುವುದು, ಸ್ವಚ್ಛತೆ ಕಾಪಾಡುವುದು ಹಾಗೂ ಒಳಚರಂಡಿ ವ್ಯವಸ್ಥೆಯ ನಿರ್ಮಾಣ ಮತ್ತು ನಿರ್ವಹಣೆ ಮಾಡುವ ಜವಾಬ್ದಾರಿಗಳನ್ನು ಹೊಂದಿದ್ದವು. ಇವರ ಅಧಿಕಾರ ಅವಧಿಯಲ್ಲಿ ದೊಣ್ಣೆಹಳ್ಳಿ, ಬಿದರಕೆರೆ, ಚಿಕ್ಕಮಲ್ಲನಹೊಳೆ, ಅಸಗೋಡು, ಸೊಕ್ಕೆ, ಅಣಬೂರುಗಳಲ್ಲಿ ಪಂಚಾಯತ್ ಕಾರ್ಯಾಲಯಗಳು ನಿರ್ಮಾಣವಾದವು.

ಗೃಹಕೈಗಾರಿಕೆ

ಇಮಾಂರು ಗೃಹ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಿದ್ದರು. ಇವರ ಕಾಲದಲ್ಲಿ ಜಗಲೂರು ತಾಲೂಕಿನ ಎಣ್ಣೆ ಮತ್ತು ಹತ್ತಿ ಜಿನಿಂಗ್ ಕಾರ್ಖಾನೆಯನ್ನು ಆರಂಭಿಸಿದರು. ಈ ಕಾರ್ಖಾನೆ ೧೦ ವರ್ಷಗಳ ಕಾಲ ಕಾರ್ಯನಿರ್ವಹಿಸಿತು. ಅನಂತರ ನಷ್ಟವಾಗಿ ಸ್ಥಗಿತಗೊಂಡಿತು. ನೆರಳಗುಂಟೆಯಲ್ಲಿ ಕಂಬಳಿ ತಯಾರಿಸುವ ಗ್ರ‍್ಹಕೈಗಾರಿಕೆಯನ್ನು ಪ್ರಾರಂಭಿಸಿದ್ದರು.

ಶೈಕ್ಷಣಿಕ ಸುಧಾರಣೆಗಳು

ಇಮಾಂರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದರು. ಇವರು ಸೊಕ್ಕೆ, ದೊಣ್ಣೆಹಳ್ಳಿ, ಬಿಳಿಚೋಡು, ಅಸಗೋಡುಗಳಲ್ಲಿ ಸರ್ಕಾರಿ ಶಾಲೆಗಳು ಪ್ರಾರಂಭವಾದವು. ೧೯೪೦ರಲ್ಲಿ ಜಗಲೂರಿನಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆ ಸ್ಥಾಪಿಸಿದರು. ಇದು ಪ್ರಸ್ತುತ ಸರ್ಕಾರಿ ಮಹಾವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.

ಐದು ವರ್ಷದ ಕಾರ್ಯಕ್ರಮ

ಜಿಲ್ಲೆಯ ಅಭಿವೃದ್ಧಿಗೆ ಇಮಾಂರು ಐದು ವರ್ಷದ ಕಾರ್ಯಕ್ರಮವನ್ನು ಮೊದಲ ಬಾರಿಗೆ ಜಾರಿಗೆ ತಂದರು. ಇದು ಮುಂದೆ ರಾಷ್ಟ್ರಕ್ಕೆ ಮಾದರಿಯಾಯಿತು. ಈ ಕಾರ್ಯಕ್ರಮಕ್ಕೆ ಆಧಾರವಾಗಿ ದೊಣ್ಣೆಹಳ್ಳಿಯ ಸೇತುವೆ ಬಳಿ ೧೮೩೭ – ೩೮ರ ಸಾಲಿನ ಎರಡು ಶಿಲಾನ್ಯಾಸಗಳನ್ನು ಕಾಣಬಹುದು. ಇವರ ಐದು ವರ್ಷದ ಕಾರ್ಯಕ್ರಮದಲಿ ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುಚ್ಛಕ್ತಿ, ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ, ಶಾಲಾ ಕಾಲೇಜುಗಳ ಸ್ಥಾಪನೆ ವೃತ್ತಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಜಿಲ್ಲೆಗೊಂದು ಪ್ರಥಮ ದರ್ಜೆ ಕಾಲೇಜು ಮುಂತಾದ ಅಂಶಗಳನ್ನು ಒಳಗೊಂಡಿದೆ. ೧೯೩೭ರಲ್ಲಿ ಜಗಲೂರಿಗೆ ಆಗಮಿಸಿದ ಮಹಾರಾಜರು ಈ ಯೋಜನೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥಾನದಲ್ಲಿ ಅದೇ ರೀತಿಯ ಯೋಜನೆಯನ್ನು ಅಳವಡಿಸಲು ಸೂಚಿಸಿದರು.

ಮೈಸೂರು ಸಂಸ್ಥಾನದಲ್ಲಿ ಇಮಾಂರ ಪಾತ್ರ

ಜಯಚಾಮರಾಜ ಒಡೆಯರು ೧೯೪೦ರಲ್ಲಿ ರಾಜ್ಯಾಂಗ ಸುಧಾರಣಾ ಸಮಿತಿಯ ಸಲಹೆಯಂತೆ ಇಬ್ಬರು ಖಾಸಗಿ ಸಚಿವರನ್ನು ನೇಮಿಸಿದರು. ಮಹಮ್ಮದ್ ಇಮಾಂರು ಮತ್ತು ಹಸನದ ಗುಂಡಪ್ಪ ಗೌಡರು ಮಹಾರಾಜರ ಖಾಸಗಿ ಮಂತ್ರಿಯಾಗಿ ಆಯ್ಕೆಯಾದರು. ಇಮಾಂರ ರಾಜಕೀಯ ಜೀವನದಲ್ಲಿ ಇದೊಂದು ಮೈಲಿಗಲ್ಲು. ಇವರು ಶಿಕ್ಷಣ, ಅಬಕಾರಿ, ರೈಲ್ವೆ ಮತ್ತು ಸಹಕಾರ ಖಾತೆಗಳ ಸಚಿವರಾದರು. ಈ ಅವಧಿಯಲ್ಲಿ ದಕ್ಷ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು.

ವಿದ್ಯಾಮಂತ್ರಿ

ಇಮಾಂರು ಮೈಸೂರು ಸಂಸ್ಥಾನದಲ್ಲಿ ವಿದ್ಯಾಮಂತ್ರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಅಂದು ವಿದ್ಯಾಭ್ಯಾಸದ ಮೇಲ್ವಿಚಾರಣೆಗಳನ್ನು ೧೯೩೦ರ ಕಾಯಿದೆಯ ಅನ್ವಯ ಜಿಲ್ಲಾ ಬೋರ್ಡ್ ಗಳಿಗೆ ವಹಿಸಲಾಗಿತ್ತು. ಇವುಗಳನ್ನು ಲೋಕಲ್ ಎಜ್ಯುಕೇಶನ್ ಅಥಾರಿಟಿ ಎಂದು ಕರೆಯುತ್ತಿದ್ದರು. ಈ ಜಿಲ್ಲಾ ಬೋರ್ಡ್ ಗಳಿಗೆ ತೆರಿಗೆ ಮೂಲಕ ಹಣವನ್ನು ಸಂಗ್ರಹಿಸಿ ಶಿಕ್ಷಣ ನೀಡಿದರೆ ಸರ್ಕಾರ ಆ ಹಣವನ್ನು ಮರುಪಾವತಿ ಮಾಡಬೇಕಿತ್ತು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳಾಗುತ್ತಿರಲಿಲ್ಲ. ಶಿಕ್ಷಣದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದ್ದನ್ನು ಗಮನಿಸಿದ ಇಮಾಂರು ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಒಂದು ಕಾಯಿದೆಯನ್ನು ಜಾರಿಗೆ ತಂದರು. ೧೯೪೦ರಲ್ಲಿ ಎಲಿಮೆಂಟರಿ ಎಜುಕೇಶನ್ ಆಕ್ಟ್ ಎಂಬ ಹೊಸ ಯೋಜನೆಯು ಕಾರ್ಯರೂಪಕ್ಕೆ ಬಂದಿತು. ಇದು ಶಿಕ್ಷಣ ಕ್ಷೇತ್ರದಲ್ಲಿ ಒಂದು ಮಹತ್ವದ ಕಾಯಿದೆಯಾಗಿದೆ. ಇದರ ಪ್ರಕಾರ ಸರ್ಕಾರವೇ ಪ್ರಾಥಮಿಕ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಂಡಿತು. ಪರಿಣಾಮವಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ೧೦೦೦ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿದರು. ಮೊದಲ ವರ್ಷದಲ್ಲಿ ೫೦೦ ಹೊಸ ಶಾಲೆಗಳನ್ನು ಮಂಜೂರು ಮಾಡಿದರು. ಇವರು ಪ್ರತಿ ತಾಲೂಕಿಗೂ ಎರಡು ಅಥವಾ ಮೂರು ಮಾಧ್ಯಮಿಕ ಶಾಲೆಗಳನ್ನು ಸ್ಥಾಪಿಸಿ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಪ್ರಯತ್ನಿಸಿದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಇಮಾಂರ ಮತ್ತೊಂದು ಸಾಧನೆ ಎಂದರೆ New type middle school ಎಂಬ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಇದು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷನ್ನು ಬೋಧಿಸುವ ಅವಕಾಶ ನೀಡಿತು. ಅನೇಕ ಸ್ಥಳಗಳಲ್ಲಿ ಅಪ್ಪರ್ ಪ್ರೈಮರಿ ಶಾಲೆಗಳು ಜಾರಿಯಲ್ಲಿದ್ದವು. ಈ ಸ್ಕೂಲ್‍ಗಳನಲ್ಲಿ ಕನ್ನಡ ಲೋಯರ್ ಸೆಕೆಂಡರಿಯವರೆಗೆ ಶಿಕ್ಷಣ ಕೊಡುತ್ತಿದ್ದರು. ಇಂಗ್ಲಿಷ್ ಭಾಷೆ ಒಂದನ್ನು ಬಿಟ್ಟು ಉಳಿದ ವಿಷಯಗಳು ಕನ್ನಡ ಭಾಷೆಯ ಮೂಲಕ ಲೋಯರ್ ಸೆಕೆಂಡರಿ ಪರೀಕ್ಷೆಯವರೆಗೂ ನಡೆಯುತ್ತಿತ್ತು. ಇದರಿಂದ ವಿದ್ಯಾರ್ಥಿಗಳು ಪುನಃ ಮಿಡಲ್ ಸ್ಕೂಲಿಗೆ ಸೇರಿ ಇಂಗ್ಲಿಷ್ ಭಾಷೆಯೊಂದರಲ್ಲಿಯೇ ಶಿಕ್ಷಣ ಹೊಂದಿ ಅದರಲ್ಲಿ ಮಾತ್ರವೇ ತೇರ್ಗಡೆಯಾಗಬೇಕಾಗಿತ್ತು. ಇದರಿಂದ ಎರಡು ವರ್ಷಗಳ ಕಾಲ ವ್ಯಯವಾಗುತ್ತಿತ್ತು. ಈ ಅನಾನುಕೂಲವನ್ನು ತಪ್ಪಿಸಲು ಅಪ್ಪರ್ ಪ್ರೈಮರಿ ಸ್ಕೂಲಿನಲ್ಲಿ ಇಂಗ್ಲಿಷ್ ಶಿಕ್ಷಣ ಕೊಡುವ ಇಬ್ಬರು ಉಪಾಧ್ಯಾಯರನ್ನು ನೇಮಿಸಲು ಏರ್ಪಾಡು ಮಾಡಲಾಯಿತು. ಈ ಏರ್ಪಾಡಿನಿಂದ ಮಿಡಲ್ ಸ್ಕೂಲಿನ ಎಲ್ಲಾ ಸೌಲಭ್ಯಗಲನ್ನು ಇಲ್ಲಿ ದೊರೆಯಿತು. ಇದರಿಂದ ಖರ್ಚು ಕಡಿಮೆಯಾಗಿ ಮಾಧ್ಯಮಿಕ ಸೌಕರ್ಯವೂ ಹೆಚ್ಚಿತು ಈ ಮಾದರಿಯ ನೂರಾರು ಸ್ಕೂಲುಗಳು ಸ್ಥಾಪಿಸಲ್ಪಟ್ಟು ಮಾಧ್ಯಮಿಕ ವಿದ್ಯಾಭ್ಯಾಸ ಹೆಚ್ಚಾಯಿತು.

ಅಂದು ಗ್ರಾಮಾಂತರ ಪ್ರದೇಶಗಳಲ್ಲಿ ಅನಕ್ಷರಸ್ಥರು ಬಹುಸಂಖ್ಯೆಯಲ್ಲಿದ್ದರು. ಇವರಿಗೆ ಕನಿಷ್ಠ ಪಕ್ಷ ಓದು ಬರಹ ಬರುವಷ್ಟಾದರೂ ಶಿಕ್ಷಣವನ್ನು ನೀಡಬೇಕೆಂದು ಇಮಾಂರು ನಿರ್ಧರಿಸಿದರು. ಇದಕ್ಕಾಗಿ ಒಂದು ಸಮಿತಿಯನ್ನು ರಚಿಸಿದರು. ಈ ಸಮಿತಿಯ ವರದಿ ಪ್ರಕಾರ ಗ್ರಾಮಗಳ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಉಪಾಧ್ಯಾಯರಿಗೆ ಅಂದು ೫ ರಿಂದ ೧೦ ರೂ.ಗಳ ಹೆಚ್ಚುವರಿ ಸಂಭಾವನೆ ನೀಡಿ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡುವ ಜವಾಬ್ದಾರಿಯನ್ನು ವಹಿಸುವುದು ಎಂದು ಶಿಫಾರಸ್ಸು ಮಾಡಿತು. ಇದರಿಂದ ಕಡಿಮೆ ಸಂಬಳ ಉಪಾಧ್ಯಾಯರಿಗೆ ಸಹಾಯವಾಗುವುದರ ಜೊತೆಗೆ ಸರ್ಕಾರಕ್ಕೆ ಹಣವು ಉಳಿತಾಯವಾಯಿತು. ಇಂತಹ ಯೋಜನೆಯನ್ನು ಪ್ರಥಮ ಬಾರಿಗೆ ಯೋಜಿಸಿ ಕಾರ್ಯರೂಪಕ್ಕೆ ತಂದ ಇಮಾಂರಿಗೆ ಸಲ್ಲುತ್ತದೆ. ಇಮಾಂರು ೧೯೨೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.

ರೈಲ್ವೆ ಮಂತ್ರಿ

ಇಮಾಂರು ರೈಲ್ವೆ ಮಂತ್ರಿಯಾದ ಸಂದರ್ಭದಲ್ಲಿ ಚಾಮರಾಜನಗರದಿಂದ ಸತ್ಯಮಂಗಲಕ್ಕೆ ರೈಲುಮಾರ್ಗ ನಿರ್ಮಿಸಲು ಯೋಜನೆಯನ್ನು ತಯಾರಿಸಿದರು. ಈ ಯೋಜನೆಯ ಅನುಮತಿಗಾಗಿ ಭಾರತ ಸರ್ಕಾರಕ್ಕೆ ಕಳುಹಿಸಲಾಯಿತು. ದುರಾದೃಷ್ಟವೆಂದರೆ ಈ ಯೋಜನೆಯು ಅನುಷ್ಠಾನಕ್ಕೆ ಬರಲಿಲ್ಲ. ಆದರೆ ಇವರ ಪ್ರಯತ್ನದಿಂದ ದಾವಣಗೆರೆ ಮತ್ತು ಚಿಕ್ಕಜಾಜೂರು ರೈಲ್ವೆ ಸ್ಟೇಷನ್ ಗಳು ಮಾತ್ರ ನಿರ್ಮಾಣವಾದವು.

ಕೃಷಿಮಂತ್ರಿ

ಇಮಾಂರು ಕೃಷಿ ಮಂತ್ರಿಯಾಗಿದ್ದಾಗ ನೀರಾವರಿ ಹಾಗೂ ವಿದ್ಯುಚ್ಛಕ್ತಿ ಕ್ಷೇತ್ರಗಳಲ್ಲಿ ಗಮನಾರ್ಹವಾದ ಕೆಲಸಗಳು ನಡೆದವು. ಗಾಣದ ಹುಣಿಸೆ, ತುಂಗಾ ಅಣೆಕಟ್ಟು, ನುಗು ಜಲಾಶಯಗಳಲ್ಲಿ ಕಾಮಗಾರಿಗಳು ನಡೆದು ನೀರಾವರಿ ಸೌಲಭ್ಯಗಳನ್ನು ಒದಗಿಸಲಾಯಿತು. ಇವರ ಕಾಲದಲ್ಲಿ ಜೋಗದ ವಿದ್ಯುಚ್ಛಕ್ತಿ ಕಾಮಗಾರಿಯಲ್ಲಿ ಮುಖ್ಯವಾದ ಕೆಲಸಗಳೆಲ್ಲ ಮುಗಿದು ೧,೨೦,೦೦೦ ಕಿಲೋ ವ್ಯಾಟಿನಷ್ಟು ವಿದ್ಯುತ್ ಉತ್ಪಾದಿಸಿ ಹಂಚುವ ವ್ಯವಸ್ಥೆ ಮಾಡಲಾಯಿತು. ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ೧೯೪೩ – ೪೪ರಲ್ಲಿ ಎರಗಿದ ಭಾರಿ ಸಿಡಿಲಿನಿಂದಾಗಿ ಎಲ್ಲಾ ಯಂತ್ರಗಳು ಸುಟ್ಟು ಹೋದವು. ರಾಜ್ಯದೆಲ್ಲೆಲ್ಲಾ ವಿದ್ಯುತ್ ಸಂಚಾರ ನಿಂತುಹೋಯಿತು. ಆಗ ಇಮಾಂರ ನೇತೃತ್ವದಲ್ಲಿ ಸುಟ್ಟುಹೋದ ಸಲಕರಣೆಗಳನ್ನು ಕೇವಲ ಎರಡು ತಿಂಗಳಲ್ಲಿ ಪುನರುಜ್ಜೀವನಗೊಳಿಸಲಾಯಿತು. ಇದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿ.

ಪಾನನಿರೋಧದ ಅಧ್ಯಕ್ಷರಾಗಿ

ಮದ್ರಾಸಿನಲ್ಲಿ ರಾಜಾಜಿಯವರ ನೇತೃತ್ವದಲ್ಲಿ ಪಾನನಿರೋಧವನ್ನು ಜಾರಿಗೆ ತರಲಾಯಿತು. ಮೈಸೂರಿನಲ್ಲಿಯೂ ಈ ಪದ್ಧತಿಯನ್ನು ಜಾರಿಗೆ ತರಬೇಕೆಂದು ಕಾಂಗ್ರೆಸ್ಸಿಗರು ಒತ್ತಾಯಿಸಿದರು. ಪಾನನಿರೋಧದಿಂದ ಸರ್ಕಾರಕ್ಕೆ ಆದಾಯ ಕಡಿಮೆಯಾಗುತ್ತಿತ್ತು. ಹಾಗಾಗಿ ಇದನ್ನು ನಿಷೇದಿಸಿ ಹಣ ಕಳೆದುಕೊಳ್ಳುವುದು ಸರ್ಕಾರಕ್ಕೆ ಇಷ್ಟವಿರಲಿಲ್ಲ. ಆದರೂ ಒತ್ತಾಯದ ಮೇರೆಗೆ ಒಂದು ಸಮಿತಿಯನ್ನು ರಚಿಸಿದರು. ಇದರ ಅಧ್ಯಕ್ಷರಾಗಿ ಇಮಾಂಸಾಬರು ಆಯ್ಕೆಯಾದರು. ಈ ಸಮಿತಿ ಪಾನ ನಿರೋಧ ಕುರಿತು ಅಧ್ಯಯನ ಮಾಡಿ ವರದಿ ಸಲ್ಲಿಸಿತು. ಇದರ ಪ್ರಕಾರ ೧/೫ ನೇ ಭಾಗ ಮಧ್ಯಪಾನ ಅಂಗಡಿಗಳನ್ನೆಲ್ಲಾ ಮುಚ್ಚುವುದು. ಪ್ರತಿ ಚರ್ಷ ಈ ಅಂಗಡಿಗಳನ್ನು ಕಡಿಮೆ ಮಾಡುತ್ತಾ ಐದು ವರ್ಷಗಳಲ್ಲಿ ಸಂಪೂರ್ಣ ಮಧ್ಯಪಾನ ನಿಷೇಧ ಮಾಡಬೇಕೆಂದು ಶಿಫಾರಸ್ಸು ಮಾಡಿತು. ಸರ್ಕಾರ ಈ ವರದಿಯ ಶಿಫಾರಸ್ಸುಗಳಿಗೆ ಒಪ್ಪಿಗೆ ಸೂಚಿಸಿತು. ಆದರೆ ಇದನ್ನು ಜಾರಿಗೆ ತರದೇ ಇರುವುದು ವಿಪರ್ಯಾಸ.

ವಿರೋಧ ಪಕ್ಷದ ನಾಯಕರಾಗಿ

ಮೈಸೂರು ಸಂಸ್ಥಾನದಲ್ಲಿ ೧೯೪೭ ರಲ್ಲಿ ಜವಾಬ್ದಾರಿ ಪ್ರಜಾಸರ್ಕಾರ ಜಾರಿಗೆ ಬಂದಿತು. ಕೆ.ಸಿ. ರೆಡ್ಡಿ ಪ್ರಥಮ ಮುಖ್ಯಮಂತ್ರಿಯಾದರು. ಮೈಸೂರಿನಲ್ಲಿ ಪ್ರಜಾ ಸರ್ಕಾರದ ಆಡಳಿತವಿದ್ದರೂ ಹಿಂದಿನ ನ್ಯಾಯ ವಿಧಾಯಕ ಮತ್ತು ಪ್ರಜಾಪ್ರತಿನಿಧಿ ಸಭೆಗಳ ಸದಸ್ಯರ ಬಹುಮತ ತೆಗೆದುಕೊಂಡು ಆಡಳಿತ ನಡೆಸುತ್ತಿದ್ದರು. ವ್ಯವಸ್ಥಿತವಾದ ವಿರೋಧಪಕ್ಷ ಇರಲಿಲ್ಲ. ಏಕಪಕ್ಷ ಸರ್ಕಾರದ ಆಡಳಿತದಲ್ಲಿ ಪ್ರರಜಾಪ್ರಭುತ್ವ ಯಶಸ್ವಿಯಾಗಿ ನಡೆಯಬೇಕಾದರೆ ಸುವ್ಯವಸ್ಥಿತವಾದ ವಿರೋಧ ಪಕ್ಷವು ಇರಬೇಕಾದುದು ಅವಶ್ಯಕ. ೧೯೫೨ರ ಸಾರ್ವತ್ರಿಕ ಚುನಾವಣೆಯಲ್ಲಿ ಪಿ.ಎಸ್.ಪಿ. ಪಕ್ಷದಿಂದ ೧೨ ಜನರು ಚುನಾಯಿತರಾದರು. ಈ ಪಿ.ಎಸ್.ಪಿ. ಪಕ್ಷವೇ ಅಧಿಕೃತ ವಿರೋಧ ಪಕ್ಷವಾಯಿತು. ಇಮಾಂ ಸಾಬರು ವಿರೋಧ ಪಕ್ಷದ ಸದಸ್ಯರಾದರು. ವಿರೋಧ ಪಕ್ಷ ೧೨ ಜನ ಸದಸ್ಯರಿಂದ ಕೂಡಿದ್ದರೂ ಇವರು ಆಡಳಿತದ ಅನುಭವಿಗಳಾಗಿದ್ದರು. ಇವರು ಸರ್ಕಾರದ ಆಡಳಿತ ಕ್ರಮಗಳನ್ನು ವಿಮರ್ಶಿಸುತ್ತಾ ರಚನಾತ್ಮಕವಾಗಿ ಟೀಕಿಸುತ್ತಾ, ಯೋಗ್ಯ ಕಾರ್ಯಗಳಿಗೆ ಬೆಂಬಲ ನೀಡುತ್ತಾ ಆಡಳಿತ ನಡೆಸುತ್ತಿದ್ದರು. ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯರವರು ವಿಧಾನ ಸೌಧದ ನಿರ್ಮಾಣಕ್ಕೆ ೩ ಕೋಟಿರೂ.ಗಳ ವೆಚ್ಚ ಮಾಡುತ್ತಿದ್ದರು. ರಾಜ್ಯದ ಅಭಿವೃದ್ಧಿಗೆ ವಿನಿಯೋಗವಾಗಬೇಕಿದ್ದ ಹಣ ಒಂದು ಕಟ್ಟಡಕ್ಕೆ ವ್ಯಯವಾಗುತ್ತಿದ್ದುದನ್ನು ಅನೇಕರು ಟೀಕಿಸಿದರು. ಆದರೆ ವಿರೋಧ ಪಕ್ಷದ ನಾಯಕರಾಗಿದ್ದ ಇಮಾಂಸಾಬರು ವಿಧಾನಸೌಧದ ನಿರ್ಮಾಣಕ್ಕೆ ಬೆಂಬಲ ನೀಡಿದರು. ಒಂದು ದಿವ್ಯವಾದ, ಸ್ಥಿರವಾದ ಆಸ್ತಿ ದೇಶಕ್ಕೆ ಲಭ್ಯವಾಗುತ್ತದೆಂಬುದು ಅವರ ಭಾವನೆ. ಒಮ್ಮೆ ಇಮಾಂರು ತಮ್ಮ ಆಯವ್ಯಯ ಭಾಷಣದಲ್ಲಿ ಕೆಂಗಲ್ ಹನುಮಂತಯ್ಯನವರನ್ನು ಕುರಿತು ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದರು.

‘Sri Hanumanthaiah will be remebered for two things, first for having constructed the building in the state and secondly for having created the biggest deficit in the state finance.

ಹನುಮಂತಯ್ಯನವರು ಕಟ್ಟಡದ ಕೆಲಸವನ್ನು ವೀಕ್ಷಿಸಲು ಇಮಾಂರನ್ನು ಕರೆದೊಯ್ಯುತ್ತಿದ್ದರು. ಒಂದು ದಿನ ಕಟ್ಟಡದ ಮಹಾದ್ವಾರವನ್ನು ಪರಿಶೀಲಿಸುತ್ತಿದ್ದರು. ಹನುಮಂತಯ್ಯನವರು ಈ ಮಹಾದ್ವಾರದ ಮೇಲು ಭಾಗದಲ್ಲಿ ನೀತಿ ಬೋಧಕವಾದ ಒಂದು ವಾಕ್ಯವನ್ನು ಕೆತ್ತಬೇಕೆಂದು ಸೂಚಿಸಿದರು. ನಂತರ ಇಬ್ಬರು ಸಮಲೋಚಿಸಿ ‘ಸರ್ಕಾರಿ ಕೆಲಸ ದೇವರ ಕೆಲಸ’ ಎಂದು ಮಹಾದ್ವಾರದ ಮೇಲೆ ಕೆತ್ತಿಸಲು ಅಭಿಪ್ರಾಯಪಟ್ಟರು.

ಮೈಸೂರು ರಾಜ್ಯಕ್ಕೆ ೧೯೫೨ ರಲ್ಲಿ ಪ್ರಧಾನಿ ನೆಹರೂ ಭೇಟಿ ನೀಡಿದಾಗ ವಿರೋಧ ಪಕ್ಷದ ಕಾರ್ಯವನ್ನು ಶ್ಲಾಘಿಸಿದರು. ಇಮಾಂರನ್ನು ‘ಶ್ರೇಷ್ಠ ವಿರೋಧ ಪಕ್ಷದ ನಾಯಕ’ ಎಂದು ಕರೆದರು. ಪ್ರಜಾಪ್ರಭುತ್ವ ಮಾದರಿ ಸರ್ಕಾರದ ಬಗ್ಗೆ ಅವರಿಗಿದ್ದ ಅರಿವನ್ನು ಸೂಚಿಸುತ್ತದೆ.

ಕರ್ನಾಟಕ ಏಕೀಕರಣದಲ್ಲಿ ಇಮಾಂರ ಪಾತ್ರ

ಇಮಾಂರು ಕರ್ನಾಟಕ ಏಕೀಕರಣ ಚಳುವಳಿಯ ನಿಷ್ಟಾವಂತ ಹೋರಾಟಗಾರರು. ಅಂದು ಕನ್ನಡ ನಾಡು ಹರಿದು ಹಂಚಿಹೋಗಿತ್ತು ಕನ್ನಡ ಭಾಗಗಳಾದ ಬೆಳಗಾಂ, ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮುಂಬಯಿ ಪ್ರಾಂತ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೊಳ್ಳೆಗಾಲ ಪ್ರದೇಶಗಳು ಮದ್ರಾಸ್ ಪ್ರಾಂತ್ಯದಲ್ಲೂ ಸೇರಿದ್ದವು. ಸರ್ಕಾರ ಫಜಲ್ ಅಲಿ ನೇತೃತ್ವದಲ್ಲಿ ರಾಜ್ಯ ಪುರ್ನವಿಂಗಡಣಾ ಸಮಿತಿಯನ್ನು ನೇಮಿಸಿತು. ಇಮಾಂರು ಈ ಸಮಿತಿಯ ಸದಸ್ಯರಾಗಿದ್ದರು. ಇವರು ಫಜಲ್ ಆಲಿಯವರೊಂದಿಗೆ ದೇಶದಲ್ಲೆಲ್ಲಾ ಸಂಚರಿಸಿ ನವಕರ್ನಾಟಕ ಏಕೀಕರಣಕ್ಕೆ ಪ್ರಯತ್ನಪಟ್ಟರು. ಮೈಸೂರಿನ ಹಲವರು ಏಕೀಕರಣಕ್ಕೆ ವಿರೋಧಿಸಿದರು. ಉತ್ತರ ಕರ್ನಾಟಕದ ಪ್ರದೇಶಕ್ಕೆ ಹೋಲಿಸಿದರೆ ಮೈಸೂರು ರಾಜ್ಯ ಆರ್ಥಿಕವಾಗಿ ಮುಂದುವರಿದಿದ್ದರಿಂದ ಹಿಂದುಳಿದ ಪ್ರದೇಶಗಳನ್ನು ಸೇರಿಸಿಕೊಳ್ಳುವುದರಿಂದ ತಮ್ಮ ರಾಜ್ಯದ ಹಿತಕ್ಕೆ ದಕ್ಕೆ ಬರುತ್ತದೆಂಬುದು ಅವರ ವಾದವಾಗಿತ್ತು. ಇಂತಹ ಸಮಯದಲ್ಲಿ ಇಮಾಂರು ಏಕೀಕರಣದ ಪರವಾಗಿಯೇ ವಾದಿಸಿದರು. ಉತ್ತರ ಕರ್ನಾಟಕದಲ್ಲಿರುವ ಭೂ ಸಂಪತ್ತು ಖನಿಜ, ಆ ಸಂಪತ್ತು ಮತ್ತು ಏಕೀಕರಣವಾದ ನಂತರ ಉದಯವಾಗಲಿರುವ ವಿಶಾಲ ಮೈಸೂರಿಗೆ ಬರಲಿರುವ ೨೦೦ ಮೈಲಿ ಸಮುದ್ರ ತೀರ ಇವನ್ನು ಗಣನೆಗೆ ತೆಗೆದುಕೊಂಡು ಏಕೀಕರಣಕ್ಕೆ ಬೆಂಬಲ ನೀಡಬೇಕೆಂದು ಅವರು ವಾದಿಸಿದರು. ಪ್ರತಿಯೊಬ್ಬರು ಏಕೀಕರಣಕ್ಕೆ ಸಿದ್ಧರಾಗಬೇಕೆಂದು ವಿಧಾನ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದರು. ಪ್ರಸ್ತುತ ಏಕೀಕರಣದಲ್ಲಿ ಇವರ ಹೋರಾಟಗಳ ನೆನಪು ಅಗತ್ಯ.

ಲೋಕಸಭೆಯ ಸದಸ್ಯರಾಗಿ

ಇಮಾಂರು ಪ್ರಜಾ ಸೊಷಲಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾದರು. ೧೯೫೬ – ೫೭ ಇವರಿಗೆ ರಾಷ್ಟ್ರ ರಾಜಕೀಯದಲ್ಲಿ ಸೇವೆ ಸಲ್ಲಿರುವ ಅವಕಾಶ ದೊರೆಯಿತು. ಇವರಿಗೆ ಸಭೆಯಲ್ಲಿ ರೈಲ್ವೆ ಆಡಳಿತ ಕುರಿತು ಭಾಷಣ ಮಾಡುವ ಅವಕಾಶ ದೊರೆಯಿತು. ದಕ್ಷಿಣ ಭಾರತಕ್ಕೆ ಅದರಲ್ಲೂ ಮೈಸೂರು ರಾಜ್ಯಕ್ಕೆ ತೋರಿಸುವ ಅಲಕ್ಷ್ಯವನ್ನು ಮತ್ತು ರೈಲ್ವೆ ಆಡಳಿತದ ಲೋಪದೋಷಗಳನ್ನು ವಿವರಿಸಿದರು. ಇಂದಿಗೂ ಕರ್ನಾಟಕದ ರೈಲ್ವೆ ಆಡಳಿತವು ಅಲಕ್ಷ್ಯದಿಂದ ಕೂಡಿರುವುದು. ವಿಪರ್ಯಾಸ ಮುಂದೆ ಇಮಾಂರವರು ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಸದಸ್ಯರಾದರು. ಲೋಕಸಭೆಯ ಸಭಾಪತಿ, ಉಪಸಭಾಪತಿಗಳು ಇಲ್ಲದಿದ್ದಾಗ ಇವರು ಸಭೆಯ ಅಧ್ಯಕ್ಷತೆವಹಿಸಿ ಕಾರ್ಯಕಲಾಪಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಮಹಾರಾಷ್ಟ್ರ ಗಡಿ ವಿವಾದದಲ್ಲಿ ತಮ್ಮ ಪಕ್ಷದ ತೀರ್ಮಾನದ ವಿರುದ್ಧವಾಗಿ ಸಭೆಯಲ್ಲಿ ಮಾತನಾಡಿ ಪಕ್ಷದಿಂದಲೇ ಹೊರಬಂದರು. ಇದು ಇವರ ಏಕೀಕರಣದ ಪ್ರಾಮಾಣಿಕ ಹೋರಾಟವನ್ನು ಸೂಚಿರುತ್ತದೆ.

ಉಪಸಂಹಾರ

ಇಮಾಂಸಾಬರು ಪ್ರಾಮಾಣಿಕತೆ ಮತ್ತು ನಿಷ್ಟೆಯಿಂದ ರಾಜಕೀಯ ಸೇವೆಮಾಡಿದ ಅಪರೂಪದ ಜನಸೇವಕ. ಇವರು ಪ್ರಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಜಾರಿಗೆ ಕಾರಣೀಭೂತರಾದರು. ಇಂತಹ ಯೋಜನೆಗಳನ್ನು ಮುಂದೆ ಭಾರತ ಸರ್ಕಾರವು ಅಳವಡಿಸಿಕೊಂಡದ್ದು ಗಮನಾರ್ಹ. ಇವರು ಕುರಿತಂತೆ ಹೆಚ್ಚಿನ ಅಧ್ಯಯನಗಳು ಆಗಬೇಕಿದೆ. ಇವರು ಒಂದು ವೇಳೆ ಅಧಿಕಾರದ ಆಸೆಯನ್ನು ಬಯಸಿದ್ದರೆ ಎಂದೋ ರಾಷ್ಟ್ರದ ರಾಷ್ಟ್ರಪತಿ ಅಥವಾ ಪ್ರಧಾನಮಂತ್ರಿಯಾಗಬಹುದಿತ್ತು. ಆದರೆ ಅವರು ಅಧಿಕಾರಕ್ಕೆ ಎಂದೂ ಆಸೆ ಪಡಲಿಲ್ಲ. ಜನತಾಪಕ್ಷ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಇಮಾಂರನ್ನು ರಾಜ್ಯಪಾಲರ ಹುದ್ದೆಗೆ ಆಹ್ವಾನಿಸಿತು. ವಯಸ್ಸಿನ ಕಾರಣ ಹೇಳಿ ವಿನಯವಾಗಿ ತಿರಸ್ಕರಿಸಿದ ಮಾನವತಾವದಿ. ತಮ್ಮ ಕೊನೆಯ ಕಾಲದಲ್ಲಿ ಜಗಲೂರಿನ ಪದವಿಪೂರ್ವ ಕಾಲೇಜು ನಡೆಯಲು ತಮ್ಮ ಬಂಗಲೆಯಲ್ಲಿ ಅವಕಾಶ ಕಲ್ಪಿಸಿಕೊಟ್ಟು ಅಲ್ಲಿಯ out – houseನಲ್ಲಿ ವಾಸಿಸಿದ ಸರಳ ಜೀವಿ. ಇಂತಹ ರಾಷ್ಟ್ರನಾಯಕರ ಹೆಸರಿನಲ್ಲಿ ಜಗಲೂರಿನಲ್ಲಿ ಜೆ.ಎಂ. ಇಮಾಂ ಸ್ಮಾರಕ ಶಾಲೆ ಮತ್ತು ಇಮಾಂನಗರ ಇವುಗಳನ್ನು ಹೊರತುಪಡಿಸಿದರೆ ಇವರ ನೆನಪಿಗಾಗಿ ಯಾವುದೇ ಉದ್ಯಾನವನ, ಗ್ರಂಥಾಲಯ ಇಲ್ಲದಿರುವುದು ವಿಪರ್ಯಾಸ. ಇವರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ವಿಶೇಷ ಗೌರವ ನೀಡಬೇಕು.

ಆಧಾರ ಗ್ರಂಥಗಳು

ಲಕ್ಷ್ಮಣ್ ರಾವ್ ಜೆ.ಆರ್, ೨೦೦೫, ನೆನಪಿನ ಅಲೆಗಳು, ಬೆಂಗಳೂರು, ನವಕರ್ನಾಟಕ ಪ್ರಕಾಶನ. ಮಹಮದ್ ಇಮಾಂ ಜೆ. ೧೯೪೮, ನೂರ್ ಜಹಾನ್, ಬೆಂಗಳೂರು, ಕರ್ನಾಟಕ ಪ್ರಕಟನಾಲಯ ಮಹಮದ್ ಇಮಾಂ ಜೆ. ೧೯೯೭, ಮೈಸೂರು ಆಗ ಮತ್ತು ಈಗ ಜಗಲೂರು, ಜೆ. ಮಹಮ್ದ್ ಇಮಾಂ ಮಕ್ಕಳು.

Mahammad Inam J, 1977, Thirty years of Indian Independence : From cogress to Janatha party.

ಪಾಟೀಲ ಪುಟ್ಟಪ್ಪ, ೧೯೮೩, ನವಕರ್ನಾಟಕ ನಿರ್ಮಾಪಕ, ಬೆಂಗಳೂರು, ಕರ್ನಾಟಕ ಸರ್ಕಾರ.

ರವಿಕುಮಾರ್.ಕೆ. ೧೯೮೦, ನಾಡಶಿಲ್ಪ, ಬೆಂಗಳೂರು, ರಾಘವೇಂದ್ರ ಪ್ರಕಾಶನ.

ಸದಾನಂದ ಜೆ. ಎಸ್. ೨೦೦೦, ಜಗಲೂರು ಮಹಮ್ಮದ್ ಇಮಾಂ, ಬೆಂಗಳೂರು, ಸಂಶೋಧನಾ ಮತ್ತು ಉಲ್ಲೇಖನಾ ಶಾಖೆ, ವಿಧಾನಸೌಧ.

ವೀರಭದ್ರಪ್ಪ ಬಿ.ವಿ. ೨೦೦೬, ಜಗಲೂರು ಮಹಮದ್ ಇಮಾಂಸಾಬ್, ಬೆಂಗಳೂರು, ಪ್ರಸಾರಾಂಗ ಬೆಂಗಳೂರು ವಿಶ್ವವಿದ್ಯಾಲಯ.

ನಿಯತಕಾಲಿಕೆ

ಕರಿಯಮ್ಮ ಚೌಡಪ್ಪ ಬಿ.ಓ. (ಸಂ), ೨೦೦೭, ಜಗಲೂರು ವಾಯ್ಸ್, ಜಗಲೂರು ತಾಲೂಕಿನ ಸಮಗ್ರ ಮಾಹಿತಿ ಕೈಪಿಡಿ ಪು. ೧೨೦ – ೧೨೨