ಜಗತ್ತು ಇಂದು ಸಂಪೂರ್ಣವಾಗಿ ಶ್ರೀಮಂತ ಮತ್ತು ಬಡ ರಾಷ್ಟ್ರಗಳೆಂದು ವಿಭಜನೆಗೊಂಡಿದೆ. ಈ ರಾಷ್ಟ್ರಗಳ ನಡುವಿನ ಅಂತರ ಹೆಚ್ಚುತ್ತಲೇ ಸಾಗಿದೆ. ಯುರೋಪ್ ಖಂಡದಲ್ಲಿ ತನ್ನ ಬೇರನ್ನು ಕಂಡುಕೊಂಡು ಆರ್ಥಿಕಾಭಿವೃದ್ಧಿಯು ನಂತರ ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಜಪಾನ್, ಜರ್ಮನಿ ಮುಂತಾದ ರಾಷ್ಟ್ರಗಳಿಗೆ ಪಸರಿಸಿದೆ. ಕಳೆದ ಶತಮಾನದಲ್ಲಿ ಕೆಲರಾಷ್ಟ್ರಗಳು ತೀವ್ರ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಿವೆ. ಈ ರಾಷ್ಟ್ರಗಳ ಜನರು ಅತ್ಯುನ್ನತ ಜೀವನಮಟ್ಟ ಮತ್ತು ಹೆಚ್ಚಿನ ತಲಾ ಆದಾಯವನ್ನು ಅನುಭವಿಸುತ್ತಿವೆ.

ಮುಂದುವರಿದ ರಾಷ್ಟ್ರಗಳಲ್ಲಿ ಜಗತ್ತಿನ ಕೇವಲ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ವಾಸಿಸುತ್ತಿದ್ದಾರೆ. ಆದರೆ ಅವರು ಜಗತ್ತಿನ ಶೇ.೬೬ರಷ್ಟು ಸರಕು ಸೇವೆಗಳನ್ನು ಅನುಭೋಗಿಸುತ್ತಿದ್ದಾರೆ. ಹಿಂದುಳಿದ ರಾಷ್ಟ್ರಗಳಲ್ಲಿ ಶೇ. ೭೦ಕ್ಕಿಂತಲೂ ಅಧಿಕ ಸಂಖ್ಯೆಯ ಜನರು ವಾಸ ಮಾಡುತ್ತಿದ್ದಾರೆ. ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ಈ ಜನರ ತಲಾ ಆದಾಯ ಮತ್ತು ಜೀವನ ಮಟ್ಟಗಳು ತೀರಾ ಕೆಳಮಟ್ಟದಲ್ಲಿವೆ. ಈ ಜನರು ಪ್ರಧಾನ ಕಸುಬು ಕೃಷಿಯಾಗಿದ್ದು ಜಗತ್ತಿನ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಅವರ ಕೊಡುಗೆ ಕೇವಲ ಶೇ. ೨೦ರಷ್ಟಿದೆ. ಹಾಗೂ ಜಗತ್ತಿನ ಕೈಗಾರಿಕಾ ಉತ್ಪನ್ನಕ್ಕೆ ಅವರ ಕೊಡುಗೆ ಶೇ.೧೦ಕ್ಕಿಂತಲೂ ಕಡಿಮೆ ಇದೆ. ಜಗತ್ತಿನ ಸಂಖ್ಯೆಯ ಶೇ ೫೦ರಷ್ಟು ಸಂಖ್ಯೆಯ ಅತ್ಯಂತ ಬಡಜನರು ಜಗತ್ತಿನ ಆದಾಯದ ಕೇವಲ ಶೇ. ೮ರಷ್ಟನ್ನು ಅನುಭವಿಸುತ್ತಿದ್ದರೆ, ಶೇ. ೧೮ರಷ್ಟು ಸಂಖ್ಯೆಯ ಶ್ರೀಮಂತರು ಜಗತ್ತಿನ ಆದಾಯದ ಶೇ. ೫೮ರಷ್ಟನ್ನು ಅನುಭವಿಸುತ್ತಿದ್ದಾರೆ. ಜಗತ್ತಿನ ಜನಸಂಖ್ಯೆಯ ಅರ್ಧಕ್ಕಿಂತಲೂ ಅಧಿಕ ಸಂಖ್ಯೆಯ ಜನರು ತೀವ್ರ ಪೌಷ್ಟಿಕಾಂಶ ಕೊರತೆಯಿಂದ ನರಳುತ್ತಿದ್ದು ಅವರು ದಿನನಿತ್ಯ ಹೊಟ್ಟೆಗೆ ಸಾಕಷ್ಟು ಆಹಾರವಿಲ್ಲದೆ ಹಾಸಿಗೆ ಹಿಡಿಯುತ್ತಿದ್ದಾರೆ. ಶ್ರೀಮಂತ ಮತ್ತು ಬಡರಾಷ್ಟ್ರಗಳ ನಡುವಿನ ಅಂತರವನ್ನು ತೊಡೆದುಹಾಕುವುದು ಮಾನವ ಸಮಾಜದ ಒಂದು ಬಹುದೊಡ್ಡ ಸವಾಲಾಗಿದೆ. ಮೇಯರ್ ಮತ್ತು ಬಾಲ್ಡವಿನ್ ಅರ್ಥಶಾಸ್ತ್ರಜ್ಞರ ಪ್ರಕಾರ ಅಭಿವೃದ್ಧಿಯನ್ನು ಕಾಪಾಡಿಕೊಂಡು ಹೋಗುವುದು ಶ್ರೀಮಂತ ರಾಷ್ಟ್ರಗಳ ಸಮಸ್ಯೆಯಾಗಿದೆ. ಆದರೆ ಅಭಿವೃದ್ಧಿಯನ್ನು ತ್ವರಿತಗೊಳಿಸುವುದು ಬಡರಾಷ್ಟ್ರಗಳ ಒಂದು ಒತ್ತಡದ ವಿಚಾರವಾಗಿದೆ.

ಆರ್ಥಿಕ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಪ್ರಮುಖವಾದುದು. ಸುರಕ್ಷಿತ ಜನರು ಹೆಚ್ಚು ಹೆಚ್ಚು ಯ್ತ್ಪಾದನೆ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತಾರೆ. ಜನರಿಗೆ ಅಕ್ಷರ ಜ್ಞಾನವಿದ್ದರೆ ತರಬೇತಿ ಕೊಡಲು ಸಾಧ್ಯವಾಗುತ್ತದೆ. ದೇಶದ ಸರ್ವತೋಮುಖ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಪ್ರೊ. ಷೂಲ್ಜ್ ರವರು ಪ್ರಾಥಮಿಕ ಶಿಕ್ಷಣಕ್ಕೆ ಅತ್ಯಧಿಕ ಆರ್ಥಿಕ ಗಳಿಕೆಯಿದೆಯೆಂದು ಪ್ರತಿಪಾದಿಸಿದ್ದಾರೆ. ವಿಶ್ವಬ್ಯಾಂಕಿನ ವರದಿಯ ಪ್ರಕಾರ ಪ್ರಾಥಮಿಕ ಶಿಕ್ಷಣದಲ್ಲಿ ಮಾಡಿದ ಹೂಡಿಕೆಗೆ ವಾರ್ಷಿಕ ಗಳಿಕೆ ಶೇ. ೨೬ ರಷ್ಟು ಇದೆಯಾದರೆ ಭೌತಿಕ ಬಂಡವಾಳದಲ್ಲಿ ಮಾಡಿದ ಹೂಡಿಕೆಗೆ ಹೆಚ್ಚೆಂದರೆ ಶೇ. ೧೩ರಷ್ಟು ಮಾತ್ರ ಗಳಿಕೆ ಇದೆ.

ಜನರು ವಿದ್ಯಾವಂತರಾದರೆ ಅವರಿಗೆ ತಮ್ಮ ಮತ್ತು ಪರಿಸರದ ಅರಿವು ಮೂಡಿ ಬರುತ್ತದೆ. ಶ್ರಮಿಕರೆಂದು, ಉತ್ಪಾದಕರೆಂದು, ಅನುಭೋಗಿಗಳೆಂದು ಮತ್ತು ನಾಗರಿಕರೆಂದು ಅವರು ತಮ್ಮ ತಮ್ಮ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಶಿಕ್ಷಣ ಸಹಾಯವಾಗುತ್ತದೆ. ಶಿಕ್ಷಣದಿಂದ ಆರ್ಥಿಕ ಅಭಿವೃದ್ಧಿಯ ವೇಗ ವೃದ್ಧಿಯಾಗುತ್ತದೆ. ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳ ಅಭಿವೃದ್ಧಿಗೆ ಶಿಕ್ಷಣ ತಳಹದಿಯಾಗಿದೆ.

ಒಂದು ದೇಶದ ಸರ್ವತೋಮುಖ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿರುತ್ತದೆ. ಶಿಕ್ಷಣ ಯಾವುದೊಂದು ವ್ಯವಸ್ಥೆಯನ್ನು ಪ್ರಗತಿಯ ಪರವಾಗಿಸುತ್ತದೆ. ಉತ್ತಮ ಶಿಕ್ಷಣ ವ್ಯವಸ್ಥೆ ಹೊಂದಿರುವ ಪಾಶ್ಚಾತ್ಯ ರಾಷ್ಟ್ರಗಳು ತೀವ್ರ ಆರ್ಥಿಕ ಅಭಿವೃದ್ಧಿ ಸಾಧಿಸಿವೆ. ಕಳಪೆ ಶಿಕ್ಷಣ ಪದ್ಧತಿ ಹೊಂದಿದ ದೇಶಗಳು ಅಭಿವೃದ್ಧಿ ಕಾಣದೆ ಹಿಂದುಳಿದ ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳು ಕಳೆದರೂ ಮುಂದುವರೆದ ರಾಷ್ಟ್ರಗಳ ಪಟ್ಟಿಗೆ ಸೇರಲಾಗಿಲ್ಲ. ಒಂದು ರಾಷ್ಟ್ರ ತನ್ನ ಪ್ರಜೆಗಳಿಗೆ ನೀಡಬಹುದಾದ ಏಕೈಕ ಮಹತ್ವದ ಆಸ್ತಿ ಎಂದರೆ ಅತ್ಯುತ್ತಮ ಶಿಕ್ಷಣ.

ಭಾರತದಲ್ಲಿರುವ ಶಿಕ್ಷಣ ಪದ್ಧತಿ ಬ್ರಿಟಿಷರ ಕಾಲದ್ದು. ಅವರ ಆಳ್ವಿಕೆಯ ಕಾಲದಲ್ಲಿ ಅವರ ಆಡಳಿತಕ್ಕೆ ಅನುಕೂಲವಾದ ಇಂಗ್ಲಿಷ್ ಬಲ್ಲ ಗುಮಾಸ್ತರನ್ನು ಉತ್ಪಾದಿಸುವ ಶಿಕ್ಷಣ ಪದ್ಧತಿಯನ್ನು ಲಾರ್ಡ್ ಮೆಕಾಲೆ ರೂಪಿಸಿದ. ಅಂದಿನ ಕಾಲ ಮತ್ತು ಪರಿಸ್ಥಿತಿಗೆ ಅದು ಅನಿವಾರ್ಯವಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಗಿದೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕರಿಸುತ್ತ ಸಾಗಿದರೆ ಆರ್ಥಿಕ ಅಭಿವೃದ್ಧಿ ಸಾಧಿಸುವುದು ಸುಲಭವಾಗುತ್ತದೆ.

ವಿಶ್ವ ಮಾರುಕಟ್ಟೆಯಲ್ಲಿ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಯ ಪ್ರಭಾವ ಜ್ಞಾನಾಧಾರಿತ ವಿಶೇಷ ಮಾನ್ಯತೆ ದೊರೆತು ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವಾಗ ನಮ್ಮ ಹಳೆಯ ಕಾಲದ ಶಿಕ್ಷಣ ವ್ಯವಸ್ಥೆಗೆ ಜೋತುಬೀಳುವುದು ಪ್ರಮಾದವಾಗುತ್ತದೆ. ಆದ್ದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರುವುದು ಅತ್ಯವಶ್ಯಕ. ಇಲ್ಲವಾದರೆ ನಮ್ಮ ವ್ಯವಸ್ಥೆ ನಿಂತ ನೀರಾಗುವುದು. ಭಾರತವು ಇತ್ತೀಚಿನ ವರ್ಷಗಳಲ್ಲಿ ತಾಂತ್ರಿಕ ಕೌಶಲ್ಯಕ್ಕೆ ಸಾಫ್ಟ್ ವೇರ್ ಕುಶಲತೆಗೆ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದ್ದರೂ ಇಲ್ಲಿ ೪೦ ಕೋಟಿ ಜನರಿಗೆ ಓದಲು ಬರೆಯಲು ಬರುವುದಿಲ್ಲವೆಂದರೆ ನೈಜ ಪರಿಸ್ಥಿತಿ ಅರ್ಥವಾದೀತು.

ಭಾರತದಲ್ಲಿ ರಾಷ್ಟ್ರೀಯ ವರಮಾನದ ಕೇವಲ ಶೇ.೩೫ ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ವ್ಯಯಿಸುತ್ತಿದೆ. ಅಮೇರಿಕಾ ಶೇ. ೧೫ರಷ್ಟನ್ನು ಇಂಗ್ಲೆಂಡ್ ಶೇ. ೧೩ರಷ್ಟನ್ನು ಶಿಕ್ಷಣದ ಮೇಲೆ ವಿನಿಯೋಗಿಸುತ್ತವೆ. ದೇಶದಾದ್ಯಂತ ಪ್ರತಿ ವರ್ಷ ೧.೯೦ ಕೋಟಿ ಮಕ್ಕಳು ಶಾಲೆಗೆ ಸೇರುತ್ತಿದ್ದು ಅವರಲ್ಲಿ ಶೇ. ೫೦ರಷ್ಟು ಮಕ್ಕಳು ೭ನೇ ತರಗತಿ ಬರುವುದರೊಳಗೆ ಶಾಲೆ ಬಿಡುತ್ತಿದ್ದಾರೆ. ಈ ಎಲ್ಲಾ ಹಂತಗಳನ್ನು ದಾಟಿ ಉನ್ನತ ಶಿಕ್ಷಣಕ್ಕೆ ಬರುವವರ ಸಂಖ್ಯೆ ನಮ್ಮಲ್ಲಿ ಕೇವಲ ಶೇ. ೭, ಅಮೇರಿಕಾದಲ್ಲಿ ಶೇ. ೬೦ ಆಗಿದೆ. ಇಲ್ಲಿನ ಶೇ. ೨೦ರಷ್ಟು ಶಾಲೆಯಲ್ಲಿ ಒಬ್ಬನೇ ಶಿಕ್ಷಕನಿದ್ದು ಹಲವು ತರಗತಿಗಳನ್ನು ನಿಭಾಯಿಸಬೇಕಾಗುತ್ತದೆ. ಶೇ. ೨೦ರಷ್ಟು ಶಾಲೆಗಳಿಗೆ ಸರಿಯಾದ ಕಟ್ಟಡಗಳಿಲ್ಲ, ಮೂಲಭೂತ ಸವಲತ್ತುಗಳಂತೂ ಮೊದಲೇ ಇಲ್ಲ.

ಕರ್ನಾಟಕದಲ್ಲಿ ಸರಕಾರಿ ಶಾಲೆಗಳಲ್ಲದೆ ಸುಮಾರು ೫೭೬೧ ಅನುದಾನ ರಹಿತ ಶಾಲೆಗಳಲ್ಲಿರುವ ೪೫.೬೩೫ ಶಿಕ್ಷಕರಿಗೆ ೧೫೦೦ ರೂ.ಗಳಿಂದ ೩೦೦ರೂ ವೇತನ ನೀಡಲಾಗುತ್ತಿದೆ. ಈ ರೀತಿ ಕಡಿಮೆ ವೇತನ ನೀಡಿ ನಿಮ್ಮದು ನೊಬೆಲ್ ವೃತ್ತಿ ಎಂದರೆ ಶಿಕ್ಷಕರಿಗೆ ಹೇಗಾಗಬೇಡ. ‘ಭಾರತದ ಭವಿಷ್ಯ ತರಗತಿಯ ಕೊಠಡಿಗಳಲ್ಲಿ ನಿರ್ಮಾಣವಾಗುತ್ತದೆ’ ಎನ್ನುತ್ತದೆ ಕೊಠಾರಿ ವರದಿಯ ಮೊದಲ ಸಾಲು. ಆದರೆ ನಮ್ಮ ಶೈಕ್ಷಣಿಕ ವಾತಾವರಣವನ್ನು ನೋಡಿದರೆ ಕೊಠಾರಿಯವರದ್ದು ಹುಸಿ ಆಶಾವಾದವೇನೋ ಎಂದೆನಿಸದಿರದು. ಇಂದು ನಮ್ಮಲ್ಲಿ ೧೫ ರಿಂದ ೩೫ ವಯೋಮಿತಿಯ ೧೧ ಕೋಟಿ ಅನಕ್ಷರಸ್ಥರಿದ್ದಾರೆ. ೨೦೨೦ ರ ವೇಳೆಗೆ ಶೇ. ೮೦ ರಷ್ಟು ಸಾಕ್ಷರತೆ ಸಾಧ್ಯವಾಗಬಹುದು. ಇಲ್ಲಿ ನಾವು ನೆನಪಿಡಬೇಕಾದ ಅಂಶವೆಂದರೆ ಇದು ಕೇವಲ ಸಾಕ್ಷರರ ಪ್ರಮಾಣ. ಸಾಕ್ಷರರೆಲ್ಲಾ ವಿದ್ಯಾವಂತರಲ್ಲ.

ನಮ್ಮ ದೇಶದಲ್ಲಿ ಆರ್ಥಿಕ ಹಾಗೂ ಪ್ರಾದೇಶಿಕ ಅಸಮಾನತೆಯ ಬಗ್ಗೆ ಸಾಕಷ್ಟು ಚರ್ಚೆ ಹಾಗೂ ಹೋರಾಟಗಳು ನಡೆಯುತ್ತಿವೆ. ಆದರೆ ಅದಕ್ಕಿಂತ ಅಪಾಯಕಾರಿಯಾದುದ್ದು ಶೈಕ್ಷಣಿಕ ಸಮಾನತೆ. ಈ ತಾರತಮ್ಯ ವ್ಯಕ್ತಿಗಳಲ್ಲಿ ಶೈಕ್ಷಣಿಕ ಅಸಮಾನತೆಯನ್ನು ಹುಟ್ಟು ಹಾಕಿ ತನ್ಮೂಲಕ ಮುಂದೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗೆ ಕಾರಣವಾಗುತ್ತದೆ. ಒಂದು ವ್ಯವಸ್ಥೆ ತನ್ನ ಪ್ರಜೆಗಳಿಗೆ ಅದರಲ್ಲಿಯೂ ಯುವಕರಿಗೆ ಸಮಾನ ಅವಕಾಶಗಳನ್ನು ಒದಗಿಸಬೇಕು. ಇದು ದೇಶದ ಎಲ್ಲರಿಗೂ ಶಿಕ್ಷಣ ಒದಗಿಸುವುದರಿಂದ ಸಾಧ್ಯ. ಉನ್ನತ ಶಿಕ್ಷಣದಲ್ಲಿ ಈ ದೇಶದ ಶೇ. ೯೫ರಷ್ಟು ಜನರಿಗೆ ನ್ಯಾಯ ಸಿಕ್ಕಿಲ್ಲ. ಉದಾಹರಣೆಗೆ ನಮ್ಮ ದೇಶದ ಶ್ರೇಷ್ಠ ವಿದ್ಯಾಸಂಸ್ಥೆಗಳಾದ ಐಐಟಿ ಮತ್ತು ಐಐಎಂಗಳನ್ನೇ ತೆಗೆದುಕೊಳ್ಳಿ. ಐಐಟಿಗಳು ೧೯೫೦ ದಶಕದ ಪರಿಕಲ್ಪನೆಯಾದರೆ, ಐಐಎಂಗಳು ೧೯೬೦ ರ ದಶಕದ ಪರಿಕಲ್ಪನೆ ಅಂದಿನಿಂದ ಇಂದಿನವರೆಗೆ ಇಂತಹ ಮತ್ತೊಂದು ಪರಿಕಲ್ಪನೆಯನ್ನು ಶೈಕ್ಷಣಿಕ ರಂಗದಲ್ಲಿ ಸೃಷ್ಟಿಸಲಾಗಿಲ್ಲ. ಎಂದರೆ ನಮ್ಮಲ್ಲಿ ಕ್ರಿಯಾಶೀಲತೆ ಇಲ್ಲವೆಂದೇ ಅರ್ಥವಾಗುತ್ತದೆ. ೧೧೦ ಕೋಟಿ ಜನರಿರುವ ಈ ದೇಶಕ್ಕೆ ಕೆಲವೇ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಐಐಟಿ, ಐಐಎಂ ಸಂಸ್ಥಗಳು ಸಾಕೇ? ಇವುಗಳನ್ನು ಹೆಚ್ಚಿಸದಿರುವುದಕ್ಕೆ ಕಾರಣಗಳೇನು? ಈ ದೊಡ್ಡ ದೇಶಕ್ಕೆ ದೊಡ್ಡ ಸಂಖ್ಯೆಯ ಐಐಟಿ ಮತ್ತು ಐಐಎಂ ಸಂಸ್ಥೆಗಳು ಬೇಕಾಗಿದೆ. ಇವು ಉತ್ತಮ ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದಕ್ಕೆ ಅನಿವಾರ್ಯ. ಇದರಿಂದ ಭಾರತದ ಸ್ಥಿತಿಗತಿಯು ಬದಲಾಗಬಹುದಾಗಿದೆ. ಈ ಸಂಸ್ಥೆಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಬಂಡವಾಳದ ಕೊರತೆ ಇದ್ದರೆ, ಖಾಸಗಿ ಸಹಭಾಗಿತ್ವದಲ್ಲಿ ಆರಂಭಿಸಬಹುದು. ಅದು ಸಾಧ್ಯವಾಗದಿದ್ದರೆ ಇರುವ ಸಂಸ್ಥೆಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಹೆಚ್ಚೆಚ್ಚು ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಬಹುದು. ಈ ಒಂದೊಂದು ಸಂಸ್ಥೆಗಳಲ್ಲಿಯೂ ಕಡಿಮೆ ಸೀಟುಗಳನ್ನಿಟ್ಟು ಇವು ಕೇವಲ ನಗರ ಪ್ರದೇಶದ ಶ್ರೀಮಂತರ ಮಕ್ಕಳಿಗೆ, ಕೈಗಾರಿಕೋದ್ಯಮಿಗಳ ಮಕ್ಕಳಿಗೆ ಶಿಕ್ಷಣ ನೀಡುವಂತಾಗಿದೆ. ಇಂದಿಗೂ ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರು ಕೈಗಾರಿಕೋದ್ಯಮಿಗಳ ಮಕ್ಕಳು, ದೊಡ್ಡ ಅಧಿಕಾರಿಗಳ ಮಕ್ಕಳು ಹಾಗೂ ಶ್ರೀಮಂತರ ಮಕ್ಕಳು. ಗ್ರಾಮೀಣ ಪ್ರದೇಶದ ಇಂಗ್ಲಿಷ್ ಬಾರದ ವಿದ್ಯಾರ್ಥಿಗಳು ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವುದು ಕನಸಿನ ಮಾತಾಗಿದೆ. ದುರಂತವೆಂದರೆ ಇಲ್ಲಿ ಶಿಕ್ಷಣ ಪಡೆದು ಹೊರಬರುವ ವಿದ್ಯಾರ್ಥಿಗಳಲ್ಲಿ ಶೇ. ೭೦ರಷ್ಟು ಉದ್ಯೋಗ ಅರಸಿ ವಿದೇಶಗಳಿಗೆ ಪಲಾಯನ ಮಾಡುತ್ತಾರೆ. ಇನ್ನುಳಿದ ಶೇ. ೨೦ರಷ್ಟು ಭಾರತದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಸಂಸ್ಥೆಗಳು ಹಾಗೂ ಇಲ್ಲಿಂದ ಹೊರಬಂದ ವಿದ್ಯಾರ್ಥಿಗಳಿಂದ ಈ ದೇಶಕ್ಕೆ ಸಲ್ಲಬೇಕಾದ ನ್ಯಾಯ ಸಲ್ಲುತ್ತಿಲ್ಲ. ಇದಕ್ಕೆ ಪರಿಹಾರವೆಂದರೆ ಇಂತಹ ಹೆಚ್ಚು ಸಂಸ್ಥೆಗಳನ್ನು ದೇಶದಾದ್ಯಂತ ಪ್ರಾರಂಭಿಸಬೇಕು. ಚೀನಾ ತನ್ನ ಶೈಕ್ಷಣಿಕ ರಂಗವನ್ನು ಕೂಲಂಕಶವಾಗಿ ಸುಧಾರಣೆ ಮಾಡುತ್ತಿದ್ದು ಶಿಕ್ಷಣಕ್ಕೆ ಇನ್ನಿಲ್ಲದ ಮಹತ್ವ ನೀಡುತ್ತಿದೆ. ಭಾರತದ ಐಐಟಿ ಮಾದರಿಯ ಇಂಜಿನಿಯರಿಂಗ್ ಕಾಲೇಜುಗಳನ್ನು ದೇಶದಾದ್ಯಂತ ಪ್ರಾರಂಭಿಸಲು ಚೀನ ನೀಲನಕ್ಷೆ ತಯಾರಿಸಿ ಕಾರ್ಯರೂಪಕ್ಕೆ ತರುತ್ತಿದೆ. ಅಲ್ಲದೆ ಅಮೇರಿಕಾದ ಹಾರ್ವರ್ಡ್ ಮಾದರಿಯ ೨೦ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲು ಕಾರ್ಯಪ್ರವೃತ್ತವಾಗಿದೆ. ಆದರೆ ನಮ್ಮಲ್ಲಿ ಇಂತಹ ಪ್ರಯತ್ನಗಳಾಗಲಿ, ಯೋಚನೆಗಳಾಗಲಿ ನಡೆಯುತ್ತಿಲ್ಲ. ಜಪಾನ್, ಇಸ್ರೇಲ್ ಮತ್ತು ಸ್ವಿಡ್ಜರ್ಲೆಂಡ್‍ಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳಿಲ್ಲ. ಅದರೂ ಈ ದೇಶಗಳು ಅತ್ಯದ್ಭುತ ಆರ್ಥಿಕ ಪ್ರಗತಿ ಸಾಧಿಸಿದ್ದು ಅಲ್ಲಿನ ಮಾನವ ಸಂಪನ್ಮೂಲದಿಂದ ಇಂತಹ ನಿರಾಶಾದಾಯಕ ವಾತಾವರಣದಲ್ಲಿ ಒಂದು ಆಶಾಕಿರಣವೆಂದರೆ ಭಾರತದ ಟೆಲಿಕಾಂ ಕ್ರಾಂತಿಯ ಹರಿಕಾರ ಸ್ಯಾಮ್‍ಪಿತ್ರೊಡರ ಅಧ್ಯಕ್ಷತೆಯಲ್ಲಿ ನ್ಯಾಷನಲ್ ನಾಲೆಡ್ಜ್ ಕಮಿಷನ್ ಸ್ಥಾಪಿಸಿರುವುದು. ಇದರ ಉದ್ದೇಶ ವಿಶ್ವದ ಅತಿದೊಡ್ಡ ಅನಕ್ಷರಸ್ಥ ದೇಶವನ್ನು ಜ್ಞಾನದ ಸಮಾಜವಾಗಿ ರೂಪಿಸುವುದು. ಕೇಂದ್ರ ಸರ್ಕಾರವು ಈ ವರ್ಷ ಹೊಸ ಐಐಎಂ, ಐಐಟಿ ಹಾಗು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಕ್ರಮ ತೆಗೆದುಕೊಂಡಿರುವುದು ಸಂತೋಷದ ವಿಷಯ ಹಾಗೂ ಈ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಸ್ಥಾನಗಳನ್ನು ಕಾಯ್ದಿರಿಸಿರುವುದು ಉತ್ತಮ ಬೆಳವಣಿಗೆ.

ಯಾವುದೊಂದು ಶಿಕ್ಷಣ ವ್ಯವಸ್ಥೆಯ ಗುರಿ ಗುಮಾಸ್ತರನ್ನು ತಯಾರು ಮಾಡುವುದಲ್ಲ, ಕನಸುಗಾರರನ್ನು ಸೃಷ್ಟಿಸುವ, ಸ್ವತಂತ್ರ ಚಿಂತನೆಯಿಂದ ಹೊಸದನ್ನು ಸಾಧಿಸುವ ಮತ್ತು ಭಿನ್ನವಾಗಿ ಯೋಚಿಸುವ ಬೌದ್ಧಿಕತೆಯನ್ನು ರೂಪಿಸುವುದು. ಬೋಧಕ ವೃತ್ತಿಯನ್ನು Mother of all profession ಎಂದು ಗುರುತಿಸಲಾಗಿದೆ. ಆದರೆ ಪ್ರತಿಭಾವಂತರು ಈ ವೃತ್ತಿಯಿಂದ ವಿಮುಖರಾಗಿ ಬೇರೆ ಕ್ಷೇತ್ರಗಳತ್ತ ಆಕರ್ಷಿತರಾಗುತ್ತಿದ್ದು ಅಂತಹವರನ್ನು ಶಿಕ್ಷಕ ವೃತ್ತಿಯತ್ತ ಸೆಳೆಯುವ ಕಾರ್ಯ ನಡೆಯಬೇಕು. ವಿಶ್ವವಿದ್ಯಾಲಯಗಳು ದೇಶದ ಒಳಗೆ ಹೊರಗೆ ಆಗುತ್ತಿರುವ ಬದಲಾವಣೆಗಳಿಗೆ ಸ್ಪಂದಿಸಬೇಕಾಗಿದೆ.

ಭಾರತ ಬಡವರಿಂದ ಕೂಡಿದ ಶ್ರೀಮಂತ ದೇಶ. ಅಂದರೆ ಭಾರತ ನಿಸರ್ಗದತ್ತವಾಗಿ ಶ್ರೀಮಂತ ದೇಶ ಇಲ್ಲಿ ವೈವಿಧ್ಯಮಯವಾದ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿದೆ. ಆದರೆ ಕಳಪೆ ಮಾನವ ಸಂಪನ್ಮೂಲದಿಂದಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತವಾಗಿ ಬಳಸಿಕೊಳ್ಳಲಾಗದೆ ಆರ್ಥಿಕ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಸಾಧ್ಯವಾಗಿಲ್ಲ. ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಮುನ್ನಡೆಸಬಲ್ಲವ್ರು ಈ ದೇಶದ ಜನರು. ಆದ್ದರಿಂದ ಉತ್ತಮ ಶಿಕ್ಷಣದಿಂದ ಅತ್ಯುತ್ತಮ ಮಾನವ ಸಂಪನ್ಮೂಲ ಸೃಷ್ಟಿಸುವ ಮೂಲಕ ಆರ್ಥಿಕ ಪ್ರಗತಿ ಸಾಧಿಸಬಹುದಾಗಿದೆ.