ಪ್ರಸ್ತುತ ಪ್ರಬಂಧದಲ್ಲಿ ಅಭಿವೃದ್ಧಿಯ ಅರ್ಥ, ಆಚರಣೆ ಮತ್ತು ಪರಿಕಲ್ಪನೆಯ ಜೊತೆಗೆ ಜಗಲೂರು ತಾಲ್ಲೂಕಿನ ಅರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಿಚಾರಗಳಲ್ಲಿ ಕರ್ನಾಟಕ ಮತ್ತು ಕರ್ನಾಟಕದ ಇತರೆ ತಾಲ್ಲೂಕುಗಳಿಗೆ ಹೋಲಿಸಿದಾಗ ಯಾವ ಸ್ಥಾನದಲ್ಲಿದೆ ಎನ್ನುವುದನ್ನು ಪ್ರಸ್ತುತಪಡಿಸಲು ಪ್ರಯತ್ನಿಸಲಾಗಿದೆ.

ಅಭಿವೃದ್ಧಿಯ ಅರ್ಥ ತುಂಬಾ ವಿಸ್ತಾರವಾದುದು. ಅಭಿವೃದ್ಧಿ ಅಥವಾ ಬೆಳವಣಿಗೆ ಎಂಬ ಈ ಪದಗಳು ಎಲ್ಲಕಡೆ ಇಂದು ಹೆಚ್ಚು ಬಳಕೆಯಲ್ಲಿವೆ. ‘ಅಭಿವೃದ್ಧಿ’ ಎನ್ನುವುದಕ್ಕೆ ಇಂಗ್ಲೀಶ್‍ನಲ್ಲಿ ‘ಡೆವೆಲಪ್‍ಮೆಂಟ್’ ಎಂದು ಕರೆಯಲಾಗುತ್ತದೆ. ಹಾಗೆಯೇ ಅಭಿವೃದ್ಧಿಗೆ ಸಮಾನಾರ್ಥಕ ಪದವಾಗಿ ಬೆಳವಣಿಗೆ ಅಥವ್ವ ಗ್ರೋತ್ ಎಂದು ಕರೆಯಲಾಗುತ್ತದೆ. ಈ ಅಭಿವೃದ್ಧಿಯಲ್ಲಿಯ ‘ವೃದ್ಧಿ’ ವರಮಾನದಲ್ಲಿ ಕಂಡುಬರುವ ಏರಿಕೆ ಅಥವಾ ಬಡ್ಡಿಯಲ್ಲಿಯ ಏರಿಕೆಯೂ ಆಗುತ್ತದೆ. ಈ ‘ವೃದ್ಧಿ’ ಅಥವಾ ಅಭಿವೃದ್ಧಿ ಅಥವಾ ಬೆಳವಣಿಗೆಯು ಮಾನವನ ದೈಹಿಕ ಬೆಳವಣಿಗೆ ಹಾಗೂ ಮಾನಸಿಕ ಬೆಳವಣಿಗೆಯಲ್ಲೂ ಬಳಕೆಯಾಗುತ್ತದೆ. ರೋಗಿಯ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದರೆ ಆರೋಗ್ಯ ‘ವೃದ್ಧಿ’ ಯಾಗುತ್ತಿದೆ ಎನ್ನಲಾಗುತ್ತದೆ. ಅದೇ ರೀತಿ ವ್ಯಕ್ತಿಯ ದೇಹದಲ್ಲಿ ಕಂಡುಬರುವ ಕ್ಯಾನ್ಸರ್ ನಂತಹ ಕಾಯಿಲೆಗಳಲ್ಲಿ ಕ್ಯಾನ್ಸರ್ ಕಣಗಳು ಕಾಲದಿಂದ ಕಾಲಕ್ಕೆ ‘ವೃದ್ಧಿ’ಯಾಗುತ್ತಾ ಹೋಗುತ್ತವೆ. ಇಲ್ಲಿಯ ‘ವೃದ್ಧಿ’ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ರೀತಿಯ ವೃದ್ಧಿ ರೋಗಿಗೆ ಅಪಾಯಕಾರಿ. ಹಾಗಾಗಿ ಅಭಿವೃದ್ಧಿ ಅನ್ನುವುದು ಯಾವುದರಲ್ಲಿ ವೃದ್ಧಿಯಾಗಬೇಕೋ ಅದರಲ್ಲಿ ‘ವೃದ್ಧಿ’ಯಾದರೆ ಅದು ಉತ್ತಮ ಬೆಳವಣಿಗೆ ಅಥವಾ ಅಭಿವೃದ್ಧಿ ಎಂದಾಗುತ್ತದೆ.

ಒಂದು ದೇಶದ ಉತ್ಪಾದನೆ, ಆದಾಯ, ವರಮಾನ, ಉದ್ಯೋಗ, ಕೃಷಿ, ಶಿಕ್ಷಣ, ವಿಜ್ಞಾನ, ಕೈಗಾರಿಕೆ ಮತ್ತಿತರ ಒಟ್ಟು ಹೆಚ್ಚಳ ಇಲ್ಲವೆ ಬೆಳವಣಿಗೆಯನ್ನು ಗಮನಿಸಿ ಅಭಿವೃದ್ಧಿಯ ಮಟ್ಟವನ್ನು ನಿರ್ಧರಿಸುವ ಪದ್ಧತಿ ಹಿಂದಿನಿಂದಲೂ ಬೆಳೆದುಬಂದಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯನ್ನು ಬಿಡಿಬಿಡಿಯಾಗಿ ನೋಡುವ ಪದ್ಧತಿ ಅರ್ಥಶಾಸ್ತ್ರದಲ್ಲಿ ಆರಂಭವಾಗಿದೆ. ಇದು ಎಲ್ಲಿಯವರೆಗೆ ಅಂದರೆ ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ, ಹೋಬಳಿ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಪ್ರತಿ ಇಲಾಖಾವಾರು ವಿಭಾಗಿಸಿ ನೋಡುವ ಕ್ರಮ ಆರಂಭವಾಗಿದೆ. ಇದು ಪ್ರಗತಿಗೆ ಪೂರಕವಾದ ಆಶಯಕೂಡ. ಅಭಿವೃದ್ಧಿ ಎಂದರೆ ‘ಸರ್ವಾಂಗೀಣ ವಿಕಸನ’, ‘ಆರ್ಥಿಕ ಅಭಿವೃದ್ಧಿ’ ಅನ್ನುವ ಅರ್ಥವನ್ನು ಕೊಡುತ್ತದೆ. ಒಟ್ಟಾರೆ ಕೃಷಿ, ಕೈಗಾರಿಕೆ, ಸಾರಿಗೆ, ವಸತಿ, ಆರೋಗ್ಯ, ಉದ್ಯೋಗ, ಶಿಕ್ಷಣ, ವಿಜ್ಞಾನ ಮುಮ್ತಾದವುಗಳ ಸಮಗ್ರ ಅಭಿವೃದ್ಧಿಯಾಗಿರುತ್ತದೆ.

‘ಅಭಿವೃದ್ಧಿ’ಯ ಪರಿಕಲ್ಪನೆ ಇಂದು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಪ್ರಕ್ರಿಯೆಗಳು ಹೊಸ ಆಯಾಮಗಳನ್ನು ಒದಗಿಸಿಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಮೂಡಿಬಂದ ತಂತ್ರಗಾರಿಕೆಯು ಈ ಹಿಂದಿನ ಎಲ್ಲಾ ಉತ್ಪಾದನೆಯ ಸಂಬಂಧಗಳನ್ನು ಅಡಿಮೇಲುಗೊಳಿಸಿ, ಬಂಡವಾಳ ಸಂಬಂಧಿ ಉತ್ಪದನಾ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸುವ ಅವಸರದಲ್ಲಿ, ಮಾನವ ಸಂಬಂಧಿ ಚಟುವಟಿಕೆಗಳಿಗೆ ಕನಿಷ್ಟವಾದ ಸ್ಥಾನ – ಮಾನಗಳನ್ನು ನೀಡಿರುವುದು ಕಂಡುಬರುತ್ತದೆ. ಉದಾಹರಣೆಗೆ ಕಂಪ್ಯೂಟರ್ ಗಳು, ರೋಬಾಟ್‍ಗಳು, ದೂರಸಂವೇದಿ ಸಾಧನಗಳು ಮತ್ತು ಉಪಗ್ರಹ ಸಂಬಂಧಿ ಜ್ಞಾನದ ವಿಸ್ತರಣೆಗಳಿಂದಾಗಿ ಅನೇಕ ಪ್ರಮಾಣದ ಮಾನವ ಸಂಪನ್ಮೂಲವು ಅಪವ್ಯಯಗೊಂಡಿದೆ. ಇಂತಹ ಸಂಶೋಧನಾತ್ಮಕ ಹಾಗೂ ಬಹೂಪಯೋಗವುಳ್ಳ ಹೊಸಕ್ರಮದ ಆಚರಣೆಯು ಜಗತ್ತಿನ ಗಮನವನ್ನು ತನ್ನೆಡೆಗೆ ಸೆಳೆದದ್ದಲ್ಲದೆ, ಅವುಗಳನ್ನು ಅನುಕರಣೆಗೆ ಯೋಗ್ಯವೆಂದು ಪರಿಗಣಿಸಲಾಗಿದೆ. ಇದರಿಂದಾಗಿ ಮಾನವೀಯ ಸಂಬಂಧಗಳು ಗೌಣವಾಗಿ, ಅಧುನಿಕತೆ, ತಂತ್ರಜ್ಞಾನ, ಜನರ ಅಭಿರುಚಿಗಳು ಸ್ಥಿತ್ಯಂತರಗೊಳ್ಳುವ ಮೂಲಕ, ಅಧಿಕ ಉತ್ಪಾದನೆ, ಅಧಿಕ ವರಮಾನ, ಬೃಹತ್ ಮಾರುಕಟ್ಟೆಯ ಪ್ರಕ್ರಿಯೆಗಳು ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಉತ್ಪಾದನೆ ಮತ್ತು ವಿತರಣೆಯ ಚಟುವಟಿಕೆಗಳು ಹಾಗೂ ವಿದೇಶಿ ವ್ಯಾಪಾರಗಳೆಂಬ ಪರಿಕರಗಳು ಜನಜನಿತಗೊಂಡವು. ಇಂತಹ ಹೊಸ ಕ್ರಮ ಅಭಿವೃದ್ಧಿಶೀಲ ಭಾರತವನ್ನು ಸಹ ಆಕರ್ಷಿಸಿತು. ಆರಂಭದಲ್ಲಿ ಖಾಸಗಿ ಬಂಡವಾಳದಾರರಿಂದ ಪ್ರಾರಂಭಗೊಂದ ತಾಂತ್ರಿಕ ಉತ್ಪಾದನಾ ಕ್ರಿಯೆಯು ಸರ್ಕಾರದ ಗಮನವನ್ನು ಸೆಳೆದದ್ದಲ್ಲದೇ, ಅದರ ನೀತಿ ನಿಯಮಗಳನ್ನು ಚಾಚೂತಪ್ಪದೇ ಅನುಸರಿಸುವಂತೆ ಮಾಡಿತು. ಸ್ವತಂತ್ರ ಭಾರತದ ಪ್ರಪ್ರಥಮ ಪ್ರಧಾನ ಮಂತ್ರಿಗಳಾದ ಜವಾಹರ್ ಲಾಲ್ ನೆಹರು ಅವರು ಆಧುನೀಕರಣಕ್ಕೆ ಮಾರುಹೋಗಿ “ಬೃಹತ್ ಕೈಗಾರಿಕೆಗಳು ಭಾರತದ ಅಭಿವೃದ್ಧಿಯ ತೊಟ್ಟಿಲುಗಳು” ಎಂಬ ತತ್ವದಡಿಯಲ್ಲಿ ಬಂಡವಾಳ ಸಂಬಂಧಿ ತಂತ್ರಗಾರಿಕೆಯ ವಿಧಿ – ವಿಧಾನಗಳು ದೇಶದ ಎಲ್ಲಾ ವಲಯಗಳ ಉತ್ಪಾದನೆಯಲ್ಲಿ ಅಳವಡಿಸಿಗೊಂಡಿತು. ಇಂತಹ ಕ್ರಮದಿಂದ ದೇಶದ ಅಭಿವೃದ್ಧಿಗೆ ಒಂದು ರೀತಿಯಲ್ಲಿ ಪೂರಕವಾದಂತೆ, ಮಾನವೀಯ ಸಂಬಂಧಗಳಿಗೆ ಮಾರಕವಾಗಿ ಪರಿಣಮಿಸಿತು. ಇದರಿಂದಾಗಿ ಉತ್ಪಾದನೆ ಹಾಗೂ ಅಭಿವೃದ್ಧಿಯಲ್ಲಿ ದ್ವಿಗುಣಗೊಂಡಿತು. ಕಾಲಕ್ರಮೇಣ ಉದ್ಯೋಗ, ಉತ್ಪಾದನೆ, ವರಮಾನ, ವ್ಯಾಪಾರ ಹಾಗು ವಾಣಿಜ್ಯ ಚಟುವಟಿಕೆಗಳು ವಿಸ್ತೃತಗೊಂಡಿರುವುದನ್ನು ಕಾಣಬಹುದು.

ಕರ್ನಾಟಕದ ಅಭಿವೃದ್ಧಿ ಗುರುತಿಸಲು ನಮಗೆ ಎರಡು ಅಧ್ಯಯನ ವರದಿಗಳು ಲಭ್ಯವಿವೆ. ಅವು ಒಂದು, ಕರ್ನಾಟಕ ಸರಕಾರದ ‘ಪ್ರಾದೇಶಿಕ ಅಸಮಾನತೆ ಉನ್ನತಾಧಿಕಾರ ಸಮಿತಿ ವರದಿ – ೨೦೦೨’ ಮತ್ತು ಎರಡು, ‘ಕರ್ನಾಟಕ ಮಾನವ ಅಭಿವೃದ್ಧಿ ವರದಿ – ೨೦೦೫’. ಇವುಗಳಲ್ಲಿ ಕರ್ನಾಟಕದ ಅಭಿವೃದ್ಧಿ ಕುರಿತ ಸಮಗ್ರ ಮಾಹಿತಿ ಲಭ್ಯವಾಗುತ್ತದೆ. ಪ್ರಾದೇಶಿಕ ಅಸಮಾನತೆ ಉನ್ನತಾಧಿಕಾರ ಸಮಿತಿ ವರದಿಯಲ್ಲಿ ಅಭಿವೃದ್ಧಿಯನ್ನು ೩೫ ಸೂಚಿಗಳ ಮೂಲಕ ಗುರುತಿಸಲಾಗಿದೆ. ಈ ವರದಿ ಪ್ರಕಾರ ರಾಜ್ಯದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಅಸಮಾನತೆ ಎಷ್ಟಿದೆ ಎನ್ನುವುದನ್ನು ಜಿಲ್ಲಾವರು, ತಾಲ್ಲೂಕುವಾರು ಯಾವ ಪ್ರಮಾಣದಲ್ಲಿ ಮುಂದಿದೆ. ಯಾವ ಯಾವ ಕ್ಷೇತ್ರದಲ್ಲಿ ಎಷ್ಟು ಪ್ರಮಾಣದಲ್ಲಿ ಹಿಂದುಳಿದಿದೆ ಎನ್ನುವುದನ್ನು ಗೊತ್ತುಪಡಿಸಿದೆ. ಅವುಗಳು ಕೃಷಿಗೆ ಸಂಬಂಧಿಸಿದ ಸೂಚಿಗಳು, ಕೈಗಾರಿಕೆಗೆ, ಹಣಕಾಸು ಮತ್ತು ವ್ಯಾಪಾರಕ್ಕೆ ಸಂಬಂಧಿಸಿಸ ಸೂಚುಗಳು, ಸಾಮಾಜಿಕತೆಗೆ ಸಂಬಂಧಿಸಿದ ಸೂಚಿಗಳು, ಜನಸಂಖ್ಯಾ ಹಿನ್ನೆಲೆಯಲ್ಲಿ ಜಗಲೂರು ತಾಲ್ಲೂಕಿನ ಅಭಿವೃದ್ಧಿಯ ಸ್ಥಾನ ಗುರುತಿಸಲು ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಅಸಮಾನತೆ ವರದಿ ಪ್ರಕಾರ ಕರ್ನಾಟಕದ ೧೭೫ ತಾಲ್ಲೂಕುಗಳಲ್ಲಿ ಜಗಲೂರು ತಾಲ್ಲೂಕು ಅಭಿವೃದ್ಧಿಯಲ್ಲಿ ೧೩೪ನೆಯ ಸ್ಥಾನ ಪಡೆದಿದೆ. ಅದರ ಸಮಗ್ರ ಅಭಿವೃದ್ಧಿ ಸೂಚ್ಯಂಕ ೦.೮೦ ಆಗಿದೆ. ಅಂದರೆ ಈ ತಾಲ್ಲೂಕು ಹೆಚ್ಚು ಹಿಂದುಳಿದ ತಾಲ್ಲೂಕೆಂದು ವರ್ಗೀಕರಿಸಲಾಗಿದೆ. ಜಿಲ್ಲೆಯ ಇತರೆ ಚೆನ್ನಗಿರಿ ಮತ್ತು ಹರಪನಹಳ್ಳಿ ತಾಲ್ಲೂಕುಗಳೂ ತಲಾ ೦.೭೮ ಸೂಚ್ಯಾಂಕ ಪಡೆದು ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳಾಗಿವೆ. ಸೂಚ್ಯಂಕದಲ್ಲಿ ಮಾತ್ರ ಅಲ್ಪ ವ್ಯತ್ಯಾಸವಿದೆ.

ಕರ್ನಾಟಕ ಪ್ರಾದೇಶಿಕ ಅಸಮಾನತೆ ವರದಿಯಲ್ಲಿ ೦.೫೩ರಿಂದ ೦.೭೯ರ ಸೂಚ್ಯಂಕ ಹೊಂದಿರುವ ತಾಲ್ಲೂಕುಗಳು ಅತಿ ಹೆಚ್ಚು ಹಿಂದುಳಿದವೆಂದು, ೦.೮೦ರಿಂದ ೦.೮೮ರವರೆಗೆ ಇರುವ ತಾಲ್ಲೂಕುಗಳನ್ನು ಹೆಚ್ಚು ಹಿಂದುಳಿದ ತಾಲ್ಲುಕುಗಳೆಂದು, ೦.೮೯ರಿಮ್ದ ೦.೯೯ರವರೆಗಿನ ಸೂಚ್ಯಂಕ ಹೊಂದಿದ ತಾಲ್ಲೂಕುಗಳನ್ನು ಹಿಂದುಳಿದ ತಾಲ್ಲೂಕುಗಳೆಂದು ಹಾಗೂ ಅಭಿವೃದ್ಧಿ ಹೊಂದಿದ ತಾಲ್ಲೂಕುಗಳೆಂದು ವಿಭಾಗಿಸಲಾಗಿದೆ.

ಜಗಲೂರು ತಾಲ್ಲೂಕು ದಾವಣಗೆರೆ ಜಿಲ್ಲೆಗೊಳಪಟ್ಟಿದೆ. ಈ ಜಿಲ್ಲೆಯಲ್ಲಿ ೬ ತಾಲ್ಲೂಕುಗಳಿವೆ. ಈ ಆರರಲ್ಲಿ ಜಗಳೂರು ತಾಲ್ಲೂಕು ಒಂದು. ಈ ಜಗಳೂರು ತಾಲ್ಲೂಕು ೧೭೧ ಹಳ್ಳಿಗಳನ್ನು ಹೊಂದಿರುವ ಮತ್ತು ಅತೀ ಹೆಚ್ಚು ಹಿಂದುಳಿದ ತಾಲ್ಲೂಕಾಗಿ ಕಂಡುಬರುತ್ತದೆ. ೨೦೦೧ರ ಜನಗಣತಿ ಪ್ರಕಾರ ತಾಲ್ಲೂಕಿನ ಒಟ್ಟು ಜನಸಂಖ್ಯೆ ೧೫೮೮೮೩. ಇದರಲ್ಲಿ ೮೦೯೫೩ ಪುರುಷ ಜನಸಂಖ್ಯೆ ಮತ್ತು ೭೭೯೨೯ ಮಹಿಳಾ ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ ಗ್ರಾಮೀಣ ಜನಸಂಖ್ಯೆ ೧೪೪೧೩೯ ಆಗಿದ್ದರು ನಗರ ಜನಸಂಖ್ಯೆಯು ೧೪೭೪೪ರಷ್ಟಿದೆ. ಒಂದೇ ಒಂದು ಪಟ್ಟಣವನ್ನು (ಜಗಳೂರು) ಹೊಂದಿರುವ ಇದು ಹೆಚ್ಚು ಕೃಷಿಯಾಧಾರಿತ ಚಟುವಟಿಕೆಗಳನ್ನು ಅವಲಂಬಿತವಾಗಿದೆ. ೯೬೩.೩೫ ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿರುವ ಈ ಜಿಲ್ಲೆಯು ಒಂದು ಚ.ಕಿ.ಮೀಗೆ ೧೬೫ ಜನಸಾಂದ್ರತೆಯನ್ನು ಹೊಂದಿದೆ. ಒಂದು ಸಾವಿರ ಪುರುಷರಿಗೆ ೯೬೩ ಮಹಿಳೆಯರನ್ನು ಹೊಂದಿರುತ್ತದೆ. ತಾಲ್ಲೂಕಿನ ಒಟ್ಟು ಸಾಕ್ಷರತಾ ಪ್ರಮಾಣ ೬೩.೩ರಷ್ಟಿರುತ್ತದೆ. ೨೦೦೧ರ ಜನಗಣತಿ ಪ್ರಕಾರ ಇದರಲ್ಲಿ ಪುರುಷರ ಸಾಕ್ಷರತಾ ಪ್ರಮಾಣ ೭೪.೬ ಆಗಿದ್ದು, ಮಹಿಳೆಯರ ಸಾಕ್ಷರತಾ ಪ್ರಮಾಣ ೫೧.೫ರಷ್ಟಿದೆ.

ಈಗಾಗಲೇ ಹೇಳಿರುವಂತೆ ಜಗಲೂರು ತಾಲ್ಲೂಕು ಕೃಷಿಯಾಧಾರಿತ ಆರ್ಥಿಕತೆಯನ್ನು ಹೊಂದಿದೆ. ರಾಜ್ಯ ಮಟ್ಟಕ್ಕಿಂತ ಕೃಷಿ ಅವಲಂಬನೆ ಇಲ್ಲಿ ಅಧಿಕವಾಗಿದೆ. ರಾಜ್ಯ ಮಟ್ಟದಲ್ಲಿ ಕೃಷಿ ಅವಲಂಬನೆ ಶೇ. ೭೦ರಷ್ಟು ಇದ್ದರೆ ಜಗಲೂರು ತಾಲ್ಲೂಕಿನಲ್ಲಿ ಶೇ. ೯೦ರಷ್ಟು ಜನರು ಕೃಷಿಯನ್ನೇ ಅವಲಂಬಿಸಿರುವುದು ಕಂಡುಬರುತ್ತದೆ. ಹೆಚ್ಚು ಕೃಷಿ ಮತ್ತು ಕೃಷಿಯಾಧಾರಿತ ಕೆಲಸವನ್ನು ಜನರು ಅವಲಂಬಿಸಿರುವುದರಿಂದ ಆರ್ಥಿಕವಾಗಿ ಹೆಚ್ಚು ಸಭಲರಾಗಲು ಸಾಧ್ಯವಿಲ್ಲದಾಗಿದೆ. ಅಲ್ಲದೆ ಸಂಪನ್ಮೂಲ ಕೊರತೆ ಅತಿಯಾಗಿರುವುದು ಕಂಡುಬರುತ್ತದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಕೈಗಾರಿಕಾ ಅಭಿವೃದ್ಧಿ ಆಗಿಲ್ಲದಿರುವುದು ಗೊತ್ತಾಗುತ್ತದೆ. ತಾಲ್ಲೂಕಿನಲ್ಲಿಯ ಒಟ್ಟು ದುಡಿಮೆಗಾರರಲ್ಲಿ ಶೇ.೪೮.೭ರಷ್ಟು ಜನರು ಕೃಷಿಯನ್ನು ಮತ್ತು ಶೇ. ೩೭.೦ರಷ್ಟು ಜನರು ಕೃಷಿ ಕೂಲಿಯನ್ನು ಅವಲಂಬಿಸಿರುವುದು ಕಂಡುಬರುತ್ತದೆ. ಕಟ್ಟಡ ನಿರ್ಮಾಣ ಉದ್ದಿಮೆಯಲ್ಲಿ ಶೇ.೧.೨ ಜನರು ಉದ್ಯೋಗವನ್ನು ಮಾಡುತ್ತಿದ್ದಾರೆ (೨೦೦೧ರ ಜನಗಣತಿ ವರದಿ). ಇದು ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರಮಾಣದ ಜನರು ಉದ್ದಿಮೆಗಳಲ್ಲಿ ತೊಡಗಿರುವುದು ತಿಳಿಯುತ್ತದೆ.

ತಾಲ್ಲೂಕಿನಲ್ಲಿ ಶೇ. ೨೩.೮ರಷ್ಟು ಪ.ಜಾತಿ ಜನಸಂಖ್ಯೆ ಇದ್ದು ಶೇ. ೨೩.೬ರಷ್ಟು ಜನರು ಪ.ಪಂಗಡಕ್ಕೆ ಸೇರಿದವರಾಗಿದ್ದಾರೆ. ಅಂದರೆ ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ ಶೇ.೪೭.೪ರಷ್ಟು ಜನರು ಪ.ಜಾತಿ ಮತ್ತು ಪ.ಪಂಗಡಕ್ಕೆ ಸೇರಿದವರಾಗಿದ್ದಾರೆ. ಅಂದರೆ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ.ಜಾತಿ ಮತ್ತು ಪ.ಪಂಗಡ ಜನಸಂಖ್ಯೆಯನ್ನು ಹೊಂದಿರುವ ತಾಲ್ಲೂಕು ಇದಾಗಿದೆ.

ಹೆಚ್ಚು ಹಿಂದುಳಿದಿರುವಿಕೆಯನ್ನು ಯಾವರೀತಿಯಲ್ಲಿ ಪರಿಭಾವಿಸಿಕೊಳ್ಳಬೇಕು ಎನ್ನುವುದನ್ನು ಆಲೋಚಿಸಬೇಕಾಗಿದೆ. ಅಂದರೆ ಭೌಗೋಳಿಕ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿದೆಯೆ? ಆಡಳಿತಾತ್ಮಕ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿದೆಯೆ? ಆರ್ಥಿಕ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿದೆಯೆ? ರಾಜಕೀಯ ಕಾರಣಗಳಿಂದ ಈ ಪ್ರದೇಶ ಹಿಂದುಳಿದಿದೆಯೆ? ಅಥವಾ ಸಾಮಾಜಿಕ ಕಾರಣಗಳಿಂದ ಹಿಂದುಳಿದಿದೆಯೆ? ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ. ಯಾವುದೇ ಒಂದು ಪ್ರದೇಶದ ಹಿಂದುಳಿಯುವಿಕೆಗೆ ಇಂತಿಷ್ಟೇ ಸಮಸ್ಯೆಗಳೆಂದು ಗುರುತಿಸುವುದು ಕಷ್ಟದ ಕೆಲಸ. ಇಷ್ಟು ಸಮಸ್ಯೆಗಳು ಮಾತ್ರ ಅನಭಿವೃದ್ಧಿಗೆ ಕಾರಣಗಳೆಂದು ಹೇಳುವುದು ಸಾಧ್ಯವಿಲ್ಲ. ಅಥವಾ ಈ ಸಮಸ್ಯೆಗಳನ್ನು ಪೂರೈಸಿದರೆ ಅಭಿವೃದ್ಧಿ ಸಾಧಿಸಬಹುದೆನ್ನುವ ನಿರ್ಧಾರಕ್ಕೆ ಬರುವುದಾಗಲೀ ಅಥವಾ ವಾದವಾಗಲೀ ಮಾಡಿದರೆ ಇಂದಿನ ಸಾಮಾಜಿಕ ಅಸಮಾನತೆಯುಳ್ಳ ಸಮಾಜಕ್ಕೆ ಸರಿಹೊಂದಲಾರದು. ಹಾಗೇನಾದರೂ ಕಾರಣಗಳು ತಿಳಿದರೆ ಅಥವಾ ತಿಳಿದಿದ್ದರೆ ಅವುಗಳನ್ನು ಪರಿಹಾರಮಾಡಲು ಸ್ವತಂತ್ರ ಭಾರತಕ್ಕೆ ಇಷ್ಟೊಂದು ಕಾಲಾವಕಾಶ ಬೇಕಿರಲಿಲ್ಲ. ಯಾವಾಗಲೋ ನಿವಾರಿಸಿ ಅಭಿವೃದ್ಧಿಯನ್ನು ಸಾಧಿಸಬಹುದಿತ್ತು. ಹಾಗಾಗಿ ಅಭಿವೃದ್ಧಿ ಎನ್ನುವುದು ಬಹುವಿಸ್ತಾರವಾದ ಮತ್ತು ಭಾರತದ ಸಂದರ್ಭದಲ್ಲಿ ಕ್ಲಿಷ್ಟವಾದ ಸಂಗತಿಯಾಗಿ ಕಂಡುಬರುತ್ತದೆ.

ಭಾರತ ಸುಮಾರು ೫೦ ವರ್ಷಗಳಕಾಲ ಕಲ್ಯಾಣ ತತ್ವದ ಅಭಿವೃದ್ಧಿಯ ಮಾದರಿ ಅಂದರೆ ವೆಲ್‍ಫೇರ್ ಸ್ಟೇಟ್ ಅನ್ನುವಂತ ಇಂದು ತಾತ್ವಿಕ ನೆಲೆಗಟ್ಟಿನಡಿಯಲ್ಲಿ ಅಭಿವೃದ್ಧಿಯ ಮಾದರಿಗಳನ್ನು ಪರಿಭಾವಿಸಿಕೊಳ್ಳಲಾಗಿತ್ತು. ಈ ಕಲ್ಯಾಣ ಮಾದರಿಯಲ್ಲಿ ಯಾವ ರೀತಿಯದು ಎಂದರೆ, ಸಮಾಜದಲ್ಲಿಯ ಕೆಲವೇ ತಿಳಿದವರು. ಅಕ್ಷರಸ್ಥರು ಬಹುಪಾಲು ಇರುವ ಗ್ರಾಮೀಣ ಅನಕ್ಷರಸ್ಥ ಜನರ ಅಭಿವೃದ್ಧಿಯ ವಾರಸುದಾರರಂತೆ ಕೆಲಸ ನಿರ್ವಹಿಸಿ ಅವರ ಅಭಿವೃದ್ಧಿಗೆ ಬೇಕಾದ ಯೋಜನೆ ರೂಪಿಸಿಕೊಡುವುದು. ಅವರಿಗೆ ಬೇಕಾದ ಸಂಪನ್ಮೂಲ ದೊರಕಿಸಿಕೊಡುವುದು ಒಂದು ಅಭಿವೃದ್ಧಿಯ ಕಲ್ಪನೆಯಾಗಿ ರೂಪಿತಗೊಂಡು ಬಳಕೆಯಲ್ಲಿದೆ. ಅಂದರೆ ಕೆಲವೇ ಜನರು ಬಹುಸಂಖ್ಯಾತರ ಪರವಾಗಿ ಅಭಿವೃದ್ಧಿಯ ಸಾಧನೆಗೆ ಪ್ರಯತ್ನಮಾಡುವುದು. ಇದನ್ನು ಕಳೆದ ೫೦ ವರ್ಷಗಳಲ್ಲಿ ಪ್ರಯೋಗ ಮಾಡಲಾಗಿದೆ. ಇದು ಸಮಾಜದಲ್ಲಿ ಅನೇಕರೀತಿಯ ಹೊಸಬಗೆಯ ವರ್ಗಗಳನ್ನು ಸೃಷ್ಟಿಸಿದೆ. ಅದನ್ನು ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗವೆನ್ನಬಹುದು. ಅಂದರೆ ಇಲ್ಲಿ ಶೋಷಕರು ಒಂದುಕಡೆಯಾದರೆ ಶೋಷಿತರು ಮತ್ತೊಂದುಕಡೆ ಆಗುತ್ತಾರೆ. ಶೋಷಕರ ಸಂಖ್ಯೆ ಯಾವಾಗಲೂ ಕಡಿಮೆ ಇರುತ್ತದೆ. ಅದರೆ, ಶೋಷಿತರು ಯಾವಾಗಲೂ ಹೆಚ್ಚಿರುತ್ತಾರೆ. ಬಲಹೀನರು, ಬಡವರು ಒಂದುಕಡೆ ಆದರೆ, ಶ್ರೀಮಂತರು ಒಂದುಕಡೆ ಆಗುತ್ತಾರೆ. ಬಡವರು ನಿರಂತರ ಶೋಷಣೆಗೆ ಒಳಗಾಗುತ್ತಾರೆ. ಈ ಶೋಷಣೆ ಮತ್ತು ಶೋಷಿತ ಅಭಿವೃದ್ಧಿ ಮಾದರಿ ನಮಗೆಷ್ಟು ಅಗತ್ಯ ಅನ್ನುವುದು ಪ್ರಮುಖ ಪ್ರಶ್ನೆಯಾಗುತ್ತದೆ.

ಹಾಗಾಗಿ ೪೦ರ ದಶಕದ ನಂತರ ಹಕ್ಕು ಆಧಾರಿತ ಮಾದರಿ ಕಂಡುಬಂದಿತು. ಈ ಅಭಿವೃದ್ಧಿ ಮಾದರಿಯಲ್ಲಿ ಯಾರು ಅಭಿವೃದ್ಧಿ ಹೊಂದಬೇಕೋ ಅವರೇ ಅಭಿವೃದ್ಧಿ ಯೋಜನೆಗಳ ಬಗ್ಗೆ ಚಿಂತನೆ ಮಾಡಬೇಕು ಅನ್ನುವುದು. ಅಂದರೆ ಅವರೇ ಅಭಿವೃದ್ಧಿ ನೀತಿಗಳನ್ನು ರೂಪಿಸಬೇಕು. ಆ ಅಭಿವೃದ್ಧಿ ಮಾದರಿಗಳನ್ನು ಅನುಷ್ಟಾನ ಮಾಡಬೇಕು. ಹಾಗೂ ಆ ಮಾದರಿಗಳನ್ನು ಅನುಷ್ಟಾನ ಮಾಡುವಾಗ ಆದಷ್ಟು ಅವರೇ ಮೇಲುಸ್ತುವಾರಿ ಮಾಡಬೇಕು. ಇದರಿಂದ ಆ ಪ್ರಕ್ರಿಯೆಯಲ್ಲಿ ಉದ್ಭವಿಸುವ ಹೊಸಹೊಸ ಸಮಸ್ಯೆಗಳಿಗೆ ಪರಿಹಾರಗಳನ್ನೂ ಕೂಡ ಆ ಮೂಲ ವಾರಸುದಾರರೇ ಕಂದುಕೊಳ್ಳಬೇಕು ಎನ್ನುವುದು ರೈಟ್ ಬೇಸ್ಡ್ ಡೆವೆಲಪ್‍ಮೆಂಟ್ ಮಾಡಲ್. ಆಗ ಸಮಾಜದಲ್ಲಿಯ ಬಹುತೇಕ ಜನರು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಾಗುತ್ತದೆ. ತಮಗೆ ಏನು ಬೇಕು? ಏನು ಬೇಡ? ಎನ್ನುವ ಹಕ್ಕುಗಳನ್ನು ಮಂಡಿಸುವ ಅವಕಾಶ ಲಭಿಸುತ್ತದೆ ಎನ್ನುವ ಪರಿಕಲ್ಪನೆ. ಅಂದರೆ ನಮಗೆ ಬೇಕಾದುದನ್ನು ಪಡೆಯುವುದು. ನಾವೊಂದು ಅವಕಾಶ ನೀಡಿದರೆ ಅವರ ಸಮಸ್ಯೆಗಳಿಗೆ ತಮ್ಮದೇ ಆದಂಥ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಅಭಿವೃದ್ಧಿಯ ಮೂಲ ಮಂತ್ರ ಸಮಾನತೆ ಮತ್ತು ಸಾಮಾಜಿಕ ನ್ಯಾಯ ತರುವುದು ಆಗಿದೆ. ಹಾಗಾಗಿ ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ಅಮರ್ತ್ಯಸೇನ್ ಅವರ ಮಾನವಮುಖಿ ಅಭಿವೃದ್ಧಿ (ಹ್ಯೂಮನ್ ಡೆವಲಪ್‍ಮೆಂಟ್) ಹೆಚ್ಚು ಮಹತ್ವ ಪಡೆದುಕೊಂಡಿದೆ. ಹನ್ನೊಂದನೆಯ ಪಂಚವಾರ್ಷಿಕ ಯೋಜನೆಯಲ್ಲಿ ಇದಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಜನರ ಆರೋಗ್ಯ, ಸಾಕ್ಷರತೆ, ಶಿಕ್ಷಣ, ಆಹಾರ ಭದ್ರತೆ, ಸ್ವಾತಂತ್ರ್ಯ, ಸಮಾನತೆ, ವರಮಾನಗಳನ್ನೊಳಗೊಂಡ ಒಟ್ಟು ಪ್ರಕ್ರಿಯೆಯನ್ನು ಮಾನವಾಭಿವೃದ್ಧಿಯೆಂದು ಪರಿಗಣಿಸಲಾಗಿದೆ. ಅಂದರೆ ಜನರ ಬದುಕು ಹೇಗಿದೆ? ಅವರ ಆರೋಗ್ಯ ಸ್ಥಿತಿ ಹೇಗಿದೆ? ಆಯುರ್ಮಾನ ಎಷ್ಟು? ಸಾಕ್ಷರತೆ ಮಟ್ಟ ಎಷ್ಟಿದೆ? ಶಿಶುಗಳ ಮರಣ ಪ್ರಮಾಣ ಎಷ್ಟಿದೆ? ಇವೇ ಮುಂತಾದ ಮಾನದಂಡಗಳಿಂದ ಅಮರ್ಥ್ಯಸೇನ್ ರು ಅಭಿವೃದ್ಧಿಯನ್ನಳೆಯಲು ಪ್ರಯತ್ನಿಸುತ್ತಾರೆ. ಅಭಿವೃದ್ಧಿ ಅನ್ನುವುದು ಕೇವಲ ವರಮಾನದ ಅಭಿವೃದ್ಧಿಯಲ್ಲ. ಉತ್ಪನ್ನದ ಪ್ರಮಾಣದಲ್ಲಿಯ ಏರಿಕೆಯೂ ಅಲ್ಲ. ರಸ್ತೆ ಸೇತುವೆಗಳಲ್ಲ. ಕಾಮಗಾರಿಗಳಲ್ಲ. ಅಭಿವೃದ್ಧಿ ಅಂದರೆ ಜನರ ಬದುಕು. ಅವರ ಆರೋಗ್ಯ, ಅವರ ಬದುಕು, ಅವರ ಅಕ್ಷರ ಸಂಪತ್ತು. ಪೌಷ್ಟಿಕತೆ, ಜನರು ದೃಢಕಾಯರಾಗಿ ದೀರ್ಘಕಾಲ ಬದುಕಬೇಕು. ಅವರಿಗೆ ಓದು ಬರಹ ಬರಬೇಕು. ಲೆಕ್ಕ ಮಾಡುವ ಕುಶಲತೆಯಿರಬೇಕು. ಸರೀಕರ ಮುಂದೆ ಗೌರವಯುತವಾಗಿ ಬದುಕಲು ಅಗತ್ಯವಾದ ಸಂಪನ್ಮೂಲಗಳ ಮೇಲೆ ಅಧಿಕಾರವಿರಬೇಕು, ಅಂದಾಗ ಮಾತ್ರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆಂದು ಅಮರ್ತ್ಯಸೆನ್‍ರು ಪ್ರತಿಪಾದಿಸುತ್ತಾರೆ. ಮಾನವ ಅಭಿವೃದ್ಧಿ ಸೂಚಿಗಳ ಹಿನ್ನೆಲೆಯಲ್ಲಿ ಜಗಳೂರಿನ ಅಭಿವೃದ್ಧಿಯ ಮಾಪನ ಮಾಡುವ ಪ್ರಯತ್ನವನ್ನು ಮಾಡಲಾಗಿದೆ.

ಸಾಕ್ಷರತೆ

ಈ ಜಿಲ್ಲೆಯಲ್ಲಿನ ೨೦೦೧ರ ಒಟ್ಟು ಸಾಕ್ಷರತಾ ಪ್ರಮಾಣ ಶೇ. ೬೭.೪. ಇದು ರಾಜ್ಯದ ಸರಾಸರಿ ಸಾಕ್ಷರತೆಯಾದ ಶೇ. ೬೭ಕ್ಕಿಂತ ಅಧಿಕವಾಗಿದೆ. ಪುರುಷರ ಸಾಕ್ಷರತಾ ಪ್ರಮಾಣ ಶೇ. ೭೬.೪ರಷ್ಟಿದ್ದರೆ ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. ೫೮.೦. ತಾಲ್ಲೂಕುಗಳನ್ನು ತೆಗೆದುಕೊಂಡರೆ ದಾವಣಗೆರೆ ತಾಲ್ಲೂಕಿನಲ್ಲಿ ಅತ್ಯಧಿಕ ಸಾಕ್ಷರತಾ ಪ್ರಮಾಣ ಶೇ. ೭೩.೮ರಷ್ಟಿದ್ದರೆ ಹರಿಹರ ತಾಲ್ಲೂಕಿನಲ್ಲಿ ಸಾಕ್ಷರತಾ ಪ್ರಮಾಣ ಶೇ. ೬೯.೨ರಷ್ಟಿದೆ. ಹೊನ್ನಳ್ಳಿ ತಾಲ್ಲೂಕಿನಲ್ಲಿ ಅದು ಶೇ. ೬೬.೫ರಷ್ಟಿದ್ದರೆ ಚನ್ನಗಿರಿಯಲ್ಲಿ ಅದು ಶೇ. ೬೬.೧ರಷ್ಟಿದೆ. ಜಗಳೂರು ತಾಲ್ಲೂಕು ಶೇ. ೬೩.೩ರಷ್ಟಿದೆ. ಜಿಲ್ಲೆಯಲ್ಲಿ ಹರಪನಹಳ್ಳಿ ತಾಲ್ಲೂಕು ಮಾತ್ರ ಸಾಕ್ಷರತೆಯಲ್ಲಿ ಹೆಚ್ಚು ಹಿಂದುಳಿದಿರುವುದಾಗಿ ತಿಳಿದುಬರುತ್ತದೆ. ಅದು ಶೇ. ೫೫.೯ರಷ್ಟಿದೆ. ಜಗಲೂರು ತಾಲ್ಲೂಕಿನ ಮಹಿಳಾ ಸಾಕ್ಷರತೆ ಶೇ. ೫೧.೫ರಷ್ಟಿದ್ದು, ಪುರುಷರ ಸಾಕ್ಷರತೆ ಶೇ. ೭೪.೬ರಷ್ಟಿದೆ. ರಾಜ್ಯದ ಮುಂದುವರೆದ ಜಿಲ್ಲೆಯಾದ ಉಡುಪಿ ಜಿಲ್ಲೆಯ ಸಾಕ್ಷರತೆ ಪ್ರಮಾಣ ಶೇ. ೮೧ ಇದ್ದು ಅದರಲ್ಲಿ ಪುರುಷರದು ಶೇ. ೮೮ ಮಹಿಳೆಯರದು ಶೇ. ೭೫ರಷ್ಟಿದೆ. ಇದನ್ನು ಗಮನಿಸಿದರೆ ಉಡುಲಿ ಜಿಲ್ಲೆಯ ಮಹಿಳಾ ಸಾಕ್ಷರತಾ ಪ್ರಮಾಣಕ್ಕಿಂತ ಜಗಳೂರು ತಾಲ್ಲೂಕಿನ ಪುರುಷರ ಸಾಕ್ಷರತಾ ಪ್ರಮಾಣ ಕಡಿಮೆಯಿರುವುದು ತಿಳಿಯುತ್ತದೆ.

೨೦೦೧ರ ಜನಗಣತಿ ಪ್ರಕಾರ ದಾವಣಗೆರೆ ಜಿಲ್ಲೆಯ ತಾಲ್ಲೂಕುವಾರು ಜನಸಂಖ್ಯೆ ಮತ್ತು ಸಾಕ್ಷರತೆ ವಿವರವನ್ನು ಗಮನಿಸಿದಾಗ ಒಟ್ಟಾರೆ ಜಗಲೂರು ತಾಲ್ಲುಕನ್ನು ರಾಜ್ಯದ ಇತರೆ ತಾಲ್ಲುಕುಗಳಿಗೆ ಹೋಲಿಸಿದರೆ ಹೆಚ್ಚು ಹಿಂದುಳಿದಿರುವುದು ಕಂಡುಬರುತ್ತದೆ. ಒಟ್ಟಾರೆ ಜಗಲೂರು ತಾಲ್ಲೂಕನ್ನು ರಾಜ್ಯದ ಇತರೆ ತಾಲ್ಲೂಕುಗಳಿಗೆ ಹೋಲಿಸಿದರೆ ಹೆಚ್ಚು ಹಿಂದುಳಿದಿರುವುದು ಕಂಡುಬರುತ್ತದೆ.

ಜಿಲ್ಲೆಯ ಅಂಕಿಅಂಶಗಳಲ್ಲಿ ಜಗಲೂರು ತಾಲೂಕಿನ ಸ್ಥಿತಿಗತಿ

ವಿವರ ಕರ್ನಾಟಕ ದಾವಣಗೆರೆ ಜಿಲ್ಲೆ ಹರಿಹರ ಹರಪನಹಳ್ಳಿ ಜಗಲೂರು ದಾವಣಗೆರೆ ಹೊನ್ನಾಳಿ

ಚನ್ನಗಿರಿ

ವಿಸ್ತೀರ್ಣ (.ಕಿ.ಮೀ) ೧,೯೧,೭೯೧ ೫,೯೨೪,೦೦ ೪೮೪.೬೨ ೧,೪೩೬.೭೨ ೯೬೩.೩೫ ೯೫೬.೫೮ ೮೮೪.೭೪ ೧,೧೭೦.೮೬
ಗ್ರಾಮಗಳು ೨೯,೪೦೬ ೯೨೩ ೮೪ ೮೦ ೧೭೧ ೧೬೬ ೧೭೩ ೨೪೯
ನಗರಗಳು ೨೭೦
ಕುಟುಂಬಗಳು ೧,೦೨,೩೨,೧೩೩ ೩,೩೭,೪೮೪ ೪೫,೨೭೮ ೪೭,೭೪೯ ೨೯,೪೯೫ ೧,೧೭೬೩೫ ೪೨,೩೯೪ ೫೪,೯೩೩
ಒಟ್ಟು ಜನಸಂಖ್ಯೆ ೫,೨೮,೫೦,೫೬೨ ೧೭,೯೦,೯೫೨ ೨,೪೫,೬೫೪ ೨,೬೮,೭೯೩ ,೫೮,೮೮೩ ೬,೦೨,೫೨೩ ೨,೨೨,೫೯೨ ೨,೯೨,೫೦೭
ಗಂಡು ೨,೬೮,೯೮,೯೧೮ ೯,೧೭,೭೦೫ ೧,೨೬,೧೨೮ ೧,೩೭,೬೦೮ ೮೦,೯೫೪ ೩,೦೯,೬೪೨ ೧,೧೩,೫೭೭ ೧,೪೯,೭೯೬
ಹೆಣ್ಣು ೨,೫೯,೫೧,೬೪೪ ೮,೭೩,೨೪೭ ೧,೧೯,೫೨೬ ೧,೩೧,೧೮೫ ೭೭,೯೨೯ ೨,೯೨,೮೮೧ ೧,೦೯,೦೧೫ ೧,೪೨,೭೧೧
ಪಜಾ ಪ್ರಮಾಣ ೧೬.೨ ೧೮.೬ ೧೨.೭ ೨೧.೩ ೨೩. ೧೫.೭ ೧೯.೫ ೨೩.೫
ಪಜಾ ಜನಸಂಖ್ಯೆ ೮೫,೬೩,೯೩೦ ೩,೩೩,೨೨೭ ೩೧,೨೦೩ ೫೭,೩೮೪ ೩೭,೮೩೭ ೯೪,೭೪೨ ೪೩,೩೯೬ ೬೮,೬೬೫
ಗಂಡು ೪೩,೩೯,೭೪೫ ೧,೭೦,೩೬೫ ೧೫,೯೪೮ ೨೯,೫೪೯ ೧೯,೨೫೫ ೪೮,೩೭೦ ೨೨,೦೮೮ ೩೫,೧೫೫
ಹೆಣ್ಣು ೪೨,೨೪,೧೮೫ ೧,೬೨,೮೬೨ ೧೫,೨೫೫ ೨೭,೮೩೫ ೧೮,೫೮೨ ೪೬,೩೭೨ ೨೧,೩೦೮ ೩೩,೫೧೦
ಪಪಂ ಪ್ರಮಾಣ ೬.೬ ೧೧.೭ ೮.೫ ೧೬.೦ ೨೩. ೯.೩ ೭.೧ ೧೨.೫
ಪಪಂ ಜನಸಂಖ್ಯೆ ೩೪,೬೩,೯೮೬ ೨,೦೯,೭೦೧ ೨೦,೮೯೨ ೪೩,೦೫೦ ೩೭,೪೮೩ ೫೫,೭೪೯ ೧೫,೮೭೪ ೩೬,೬೫೩
ಗಂಡು ೧೭,೫೬,೨೩೮ ೧,೦೬,೯೩೨ ೧೦,೬೫೪ ೨೧,೯೯೧ ೧೯,೨೦೦ ೨೮,೩೭೭ ೮,೦೩೫ ೧೮,೬೭೫
ಹೆಣ್ಣು ೧೭,೦೭,೭೪೮ ೧,೦೨,೭೬೯ ೧೦,೨೩೮ ೨೧,೦೫೯ ೧೮,೨೮೩ ೨೭,೩೭೨ ೭,೮೨೯ ೧೭,೯೭೮
ಜನಸಾಂದ್ರತೆ ೨೭೬ ೩೦೨ ೫೦೭ ೧೮೭ ೧೬೫ ೬೩೦ ೨೫೨ ೨೫೦
ಲಿಂಗ ಪ್ರಮಾಣ ೯೬೫ ೯೫೨ ೯೪೮ ೯೫೩ ೯೬೩ ೯೪೬ ೯೬೦ ೯೫೩
ಸಾಕ್ಷರತೆ ಪ್ರಮಾಣ ೬೬.೬ ೬೭.೪ ೬೯.೨ ೫೫.೯ ೬೩. ೭೩.೮ ೬೬.೫ ೬೬.೧
ಗಂಡು ೭೬.೧ ೭೬.೪ ೭೭.೫ ೬೭.೦ ೭೪. ೮೧.೧ ೭೬.೬ ೭೪.೯
ಹೆಣ್ಣು ೫೬.೯ ೫೮.೦ ೬೦.೫ ೪೪.೨ ೫೧. ೬೬.೧ ೫೬.೦ ೫೬.೯

(ಕೃಪೆ: ಡಾ ಕೆ ಎಂ ಮೇತ್ರಿ, ಕ ವಿ ಹಂಪಿ)