ಜಗಲೂರು ತಾಲೂಕಾಗಿ ಮಾರ್ಪಾಟು ಹೊಂದಿದ್ದುದು ೧೮೮೬ರಲ್ಲಿ. ಇದಕ್ಕೂ ಮುನ್ನ ಕಣಕುಪ್ಪೆಯು ತಾಲೂಕು ಕೇಂದ್ರವಾಗಿದ್ದಿತು. ಚಿತ್ರದುರ್ಗ ಜಿಲ್ಲೆಯಲ್ಲಿದ್ದ ಜಗಲೂರು ತಾಲೂಕು ೧೯೯೭ರಲ್ಲಿ ದಾವಣಗೆರೆ ಜಿಲ್ಲೆಗೆ ಸೇರಿತು. ಜಗಲೂರು ಪರಿಸರವು ಭೌಗೋಳಿಕವಾಗಿ ೧೪ ೧೪೮೫’ ಅಕ್ಷಾಂಶ ೭೬೩೫’ ರೇಖಾಂಶದಲ್ಲಿದ್ದು ಸಮುದ್ರ ಮಟ್ಟದಿಂದ ೧೮೦೦ ಅಡಿಗಳಷ್ಟು ಎತ್ತರದಲ್ಲಿದೆ. ೯೫,೫೨೭ ಹೆಕ್ಟೇರ್ ಭೂವಿಸ್ತೀರ್ಣ ಹೊಂದಿರುವ ಜಗಲೂರು ತಾಲೂಕಿನ ಬಹುಭಾಗ ಕೆಂಪು ಮರಳು ಮಣ್ಣಿನಿಂದ ಕೂಡಿದ್ದು, ಕೆಲಭಾಗ ಕಪ್ಪುಮಣ್ಣನ್ನು ಹೊಂದಿದೆ. ಇಲ್ಲಿನ ಪರಿಸರವು ಬೆಟ್ಟಗುಡ್ಡಗಳು, ಕಣಿವೆಗಳು, ಹಳ್ಳಕೊಳ್ಳಗಳಿಂದ ಕೂಡಿದೆ. ಬೆಟ್ಟಶ್ರೇಣಿಗಳಲ್ಲಿ ಮುಖ್ಯವಾದವೆಂದರೆ ಗುಹೇಶ್ವರ ಬೆಟ್ಟ, ರಂಗಯ್ಯನ ಗುಡ್ಡಸಾಲು, ಕಣಕುಪ್ಪೆ, ಕೆಳಗೋಟೆ, ಹಾಲೇಕಲ್ ಬೆಟ್ಟಶ್ರೇಣಿಗಳು, ಕೊಡದಗುಡ್ಡ, ಕೊಣಚಕಲ್ ಬೆಟ್ಟಸಾಲುಗಳಾಗಿವೆ. ಈ ಭಾಗದ ಶಿಲಾವಲಯವನ್ನು ಧಾರವಾಡ ವಲಯವೆಂದು ಗುರುತಿಸಿರುವರು. ಇಲ್ಲಿ ಹೇರಳವಾಗಿ ಕಣಶಿಲೆ ದೊರೆಯುತ್ತಿದ್ದು, ಅಲ್ಲಲ್ಲಿ ಕಾಂಗ್ಲಾಮರೇಟ್, ಬೆಣಚಕಲ್ಲು ಅಥವಾ ಸ್ಪಟಿಕಾಂತರ ಶಿಲೆ (ಕ್ವಾರ್ಟ್‍ಜೈಟ್), ಡೊಲರೈಟ್, ಡೈಕ್ (ಕಪ್ಪುಶಿಲೆ), ಅಗ್ನಿಜನ್ಯಶಿಲೆ (ವಾಲ್ಕನಿಕ್ ರಾಕ್ಸ್), ಸುಣ್ಣದಕಲ್ಲುಗಳು ದೊರೆಯುತ್ತವೆ.

ಇಲ್ಲಿನ ಭೌಗೋಳಿಕ ಪ್ರದೇಶ ಬಯಲು ಹಾಗೂ ಸಮತಲದಲ್ಲಿರುವುದರಿಂದ ವರ್ಷದ ಬಹುಕಾಲ ಒಣಹವೆಯಿಂದ ಕೂಡಿರುವುದು. ಜನವರಿ ಕೊನೆಯಿಂದ ಪ್ರಾರಂಭವಾಗುವ ಬೇಸಿಗೆಯ ತಾಪಮಾನ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಹೆಚ್ಚಿರುತ್ತದೆ. ೭೭.೩ ಫ್ಯಾರಾನೇಟ್‍ನಷ್ಟು ವರ್ಷದ ಸರಾಸರಿ ಉಷ್ಣಾಂಶವಿರುತ್ತದೆ. ಶೇಕಡಾ ೫೦ ಸಾಪೇಕ್ಷ ಆರ್ದ್ರತೆಯು ಮಾರ್ಚ್ ತಿಂಗಳಲ್ಲಿರುತ್ತದೆ. ಆದರೆ ಜುಲೈ – ಆಗಸ್ಟ್ ನಲ್ಲಿ ಇದು ಶೇ.೮೦ರವರೆಗೂ ಏರುತ್ತದೆ. ಜೂನ್ ತಿಂಗಳಲ್ಲಿ ಮಳೆಗಾಲ ಪ್ರಾರಂಭವಾದರೂ ಜುಲೈ, ಆಗಸ್ಟ್, ಸೆಪ್ಟೆಂಬರ್ ನಲ್ಲಿ ಹೆಚ್ಚು ಮಳೆಯಾಗಿ ಅಕ್ಟೋಬರ್ ವರೆಗೂ ಮಳೆಬರುತ್ತದೆ. ತಾಲೂಕಿನಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ ಸರಾಸರಿ ಪ್ರಮಾಣ ೫೫೦ ಮಿ.ಮೀ.ಇದ್ದು ಇಲ್ಲಿನ ಅರಣ್ಯ ಪ್ರದೇಶವು ೧೨,೬೮೮ ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. ಈ ಕುರುಚಲು ಕಾಡಿನಲ್ಲಿ ಮೊಲ, ನರಿ, ಜಿಂಕೆ, ಕರಡಿ, ಹಂದಿ, ತೋಳಗಳಲ್ಲದೆ ಈ ಭಾಗದಲ್ಲಿ ಅಪರೂಪವಾಗಿ ಕೊಂಡುಕುರಿ ಕಂಡುಬರುತ್ತಿರುವುದು ವಿಶೇಷ.

ತಾಲೂಕಿನ ಮುಖ್ಯ ಜೀವಸೆಲೆಯೆಂದರೆ ಚಿಕ್ಕ ಹಗರಿ ಮತ್ತು ಜನಗಿಹಳ್ಳಗಳು. ಈ ಹಳ್ಳಗಳನ್ನು ಆಶ್ರಯಿಸಿ ಕೆರೆಕಟ್ಟೆ, ಬಾವಿ, ಕೊಳವೆ ಬಾವಿಗಳನ್ನು ತೋಡಿ ನೀರನ್ನು ಕೃಷಿಗೆ ಬಳಸಲಾಗುತ್ತಿದೆ. ಜನಗಿಹಳ್ಳವು ಪ್ರಾಚೀನ ಕಾಲದಿಂದಲೂ ಮಾನವನ ಜೀವಸೆಲೆಯಾಗಿದ್ದಿತು. ಇದಕ್ಕೆ ಈ ಹಳ್ಳದ ದಂಡೆಯುದ್ದಕ್ಕೂ ಕಂಡುಬರುವ ನೆಲೆಗಳು ಸಾಕ್ಷ್ಯಗಳಾಗಿವೆ. ಜನಗಿಹಳ್ಳವಲ್ಲದೆ ತಾಲೂಕಿನಲ್ಲಿ ಸಣ್ಣಪುಟ್ಟ ಹಳ್ಳಕೊಳ್ಳ, ಕಣಿವೆಗಳನ್ನು ಕಾಣಬಹುದು. ಇಲ್ಲಿನ ಪರಿಸರವು ಖನಿಜಗಳ ಖನಿಯೂ ಆಗಿದೆ. ತಾಲೂಕಿನ ಹೊನ್ನೆಮರಡಿಯಲ್ಲಿ ಚಿನ್ನ ಮತ್ತು ಮ್ಯಾಂಗನೀಸ್ ಸಿರಗಳು ಕಂಡುಬಂದರೆ ಹೊಸಕೆರೆ ಬಳಿ ಸುಣ್ಣದಕಲ್ಲು ದೊರೆಯುತ್ತದೆ. ಇಲ್ಲಿನ ಮರೇನಹಳ್ಳಿಯು ಹಾಸುಬಂಡೆಗಳಿಗೆ ಪ್ರಸಿದ್ಧಿ ಹೊಂದಿರುವುದು ಗಮನಾರ್ಹ.

ಜಗಲೂರು ತಾಲೂಕಿನಲ್ಲಿ ಒಟ್ಟು ೧೭೧ ಗ್ರಾಮಗಳನ್ನು ಒಳಗೊಂಡ ಮೂರು ಹೋಬಳಿ ಕೇಂದ್ರಗಳಿವೆ. ೧೯೦೧ರ ಜನಗಣತಿಯ ಪ್ರಕಾರ ಜನಸಂಖ್ಯೆಯು ೪೭,೧೯೬ ಇದ್ದರೆ, ೧೯೬೧ರಲ್ಲಿ ೮೨,೭೯೬ ಆಗಿದ್ದು, ಇದು ೨೦೦೧ರ ಹೊತ್ತಿಗೆ ೧,೫೮,೮೨೯ ಆಗಿದೆ. ಕಳೆದ ಒಂದು ನೂರು ವರ್ಷಗಳಲ್ಲಿ ಜನಸಂಖ್ಯೆಯ ಪ್ರಮಾಣ ಶೇ.೩.೩೬ರಷ್ಟು ಏರಿರುವುದನ್ನು ಗಮನಿಸಬಹುದು.

ಪ್ರಾಗಿತಿಹಾಸ

ಪ್ರಾಗಿತಿಹಾಸವೆಂದರೆ ಇತಿಹಾಸ ಪೂರ್ವಕಾಲ. ಬರವಣಿಗೆ ಪೂರ್ವದ ಕಾಲವೆಂದೇ ಇದನ್ನು ಕರೆಯಬಹುದು. ಇದುವರೆಗಿನ ಸಂಶೋಧನೆಯ ಪ್ರಕಾರ ಜಗಲೂರು ತಾಲೂಕು ಬೃಹತ್ ಶಿಲಾಯುಗ ಅಂದರೆ ಕ್ರಿ.ಪೂ. ೧೦೦೦ರಷ್ಟು ಪ್ರಾಚೀನವೆಂಬುದು ಗ್ಯಾಸೆಟಿಯರ್ ಮೂಲದಿಂದ ತಿಳಿದುಬಂದಿತ್ತು. ಆದರೆ ಕಳೆದ ಏಳೆಂಟು ವರ್ಷಗಳಲ್ಲಿ ನಡೆದ ಕ್ಷೇತ್ರಾಧ್ಯಯನಗಳು ಈ ತಾಲೂಕಿನ ಪ್ರಾಚೀನತೆಯನ್ನು ಕಿ.ಪೂ. ೩೦೦೦ ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿವೆ. ಬೃಹತ್ ಶಿಲಾಯುಗಕ್ಕೂ ಪೂರ್ವದ ನವಶಿಲಾಯುಗ ಅಥವಾ ನೂತನ ಶಿಲಾಯುಗದ ಅನೇಕ ನೆಲೆಗಳು ಬೆಳಕಿಗೆ ಬಂದಿವೆ. ಈ ಸಂಶೋಧನೆಯನ್ನು ಕೈಗೊಂಡವರಲ್ಲಿ ವಿರೂಪಾಕ್ಷಿ ಪೂಜಾರಹಳ್ಳಿ, ಎಚ್. ತಿಪ್ಪೇಸ್ವಾಮಿ ಮತ್ತು ಎಸ್.ವೈ. ಸೋಮಶೇಖರ್ ಮುಖ್ಯರಾಗಿದ್ದಾರೆ. ಇದುವರೆಗೆ ಕಂಡುಬಂದ ನೆಲೆಗಳಲ್ಲಿ ನವಶಿಲಾಯುಗದ ನೆಲೆಗಳೇ ಅತಿ ಪ್ರಾಚೀನವಾಗಿವೆ. ಅವುಗಳಲ್ಲಿ ಸಂಗೇನಹಳ್ಳಿ, ಅರಿಶಿನಗುಂಡಿ, ಕೊಣಚಗಲ್ಲು ರಂಗಪ್ಪನಗುಡ್ಡ, ಚಿಕ್ಕಮಲ್ಲನಹೊಳೆಗಳು ಮುಖ್ಯವಾಗಿವೆ. ಅದಕ್ಕೂ ಹಿಂದಿನ ಸೂಕ್ಷ್ಮ ಮತ್ತು ಹಳೆಯ ಶಿಲಾಯುಗದ ನೆಲೆಗಳು ತಾಲೂಕಿನಲ್ಲಿ ಇದುವರೆಗೆ ಕಂಡುಬಂದಿರುವುದಿಲ್ಲ. ಈ ಬಗೆಗೆ ಹೆಚ್ಚಿನ ಅಧ್ಯಯನದ ಅಗತ್ಯವಿದೆ.

ನವಶಿಲಾಯುಗ/ನೂತನ ಶಿಲಾಯುಗ

ನವಶಿಲಾಯುಗವು ಮಾನವನ್ನು ತನ್ನ ಜೀವನ ಕ್ರಮವನ್ನು ಸುಧಾರಿಸಿಕೊಂಡ ಅತ್ಯಂತ ಪ್ರಮುಖ ಕಾಲಘಟ್ಟ. ಈ ಅವಧಿಯಲ್ಲಿ ಪಶುಪಾಲನೆ, ಕೃಷಿಯ ಆರಂಭ, ಆಯುಧಗಳ ಭಿನ್ನತೆ ಮತ್ತು ನಯಗಾರಿಕೆ, ಅಲೆಮಾರಿ ಜೀವನದಿಂದ ಗ್ರಾಮಜೀವನಕ್ಕೆ ಧಾನ್ಯ – ನೀರಿನ ಶೇಖರಣೆಗೆ ಮಣ್ಣಿನ ಮಡಕೆಗಳ ತಯಾರಿಕೆ – ಹೀಗೆ ಅನೇಕ ಹೊಸ ಹೊಸ ಆವಿಷ್ಕಾರಗಳು ನಡೆದವು.

ಈ ಕಾಲಘಟ್ಟದ ಆರಂಭಿಕ ಲಕ್ಷಣ ಪಶುಪಾಲನ. ಇದರ ಮುಖ್ಯ ಕುರುಹುಗಳೆಂದರೆ ಬೂದಿದಿಬ್ಬಗಳೇ ಆಗಿವೆ. ಇವು ನಿರ್ಮಾಣಗೊಂಡದ್ದು ಅಂದು ಸಾಕುತ್ತಿದ್ದ ದನ, ಕುರಿ, ಮೇಕೆ, ಮೊದಲಾದ ಪ್ರಾಣಿಗಳ ಸಗಣಿಯಿಂದ ಎಂಬುದು ದೃಢಪಟ್ಟಿದೆ. ಸಗಣಿಯನ್ನು ಕೃಷಿಗೆ ಬಳಸುವ ಪರಿಕ್ರಮ ಇಲ್ಲದಾಗ ಅದನ್ನು ಒಂದೆಡೆ ಗುಡ್ಡೆಹಾಕುವ ಪರಿಪಾಠವಿತ್ತು. ಈ ಗುಡ್ಡೆಗೆ ಯಾವುದೋ ಒಂದು ಸಂದರ್ಭದಲ್ಲಿ ಬೆಂಕಿ ಇಡುತ್ತಿದ್ದರು. ಈ ರೀತಿ ಸುಟ್ಟ ಸಗಣಿಯ ಗುಡ್ಡೆಯು ಇಂದು ನಮಗೆ ಬೂದಿದಿಬ್ಬಗಳಾಗಿ ಗೋಚರಿಸುತ್ತವೆ. ಈ ಬಗೆಯ ಬೂದಿದಿಬ್ಬದ ಅವಶೇಷ ಕರ್ನಾಟಕದ ನಾನಾ ಕಡೆ ಕಂಡುಬಂದಿದ್ದು ತಾಲೂಕಿನ ಚಿಕ್ಕಮಲ್ಲನಹೊಳೆ ಮತ್ತು ಸಂಗೇನಹಳ್ಳಿ ಬಳಿಯ ಕೆರೆಯ ಮಧ್ಯದಲ್ಲಿ ಇದರ ಅವಶೇಷಗಳು ದೊರೆತಿವೆ. ಜಗಲೂರು ತಾಲೂಕಿನ ನಾಲ್ಕು ಕಡೆ ನವಶಿಲಾಯುಗ ಮಾನವನ ಕುರುಹುಗಳು ಕಂಡುಬಂದಿವೆ. ಅವುಗಳಲ್ಲಿ ಚಿಕ್ಕಮಲ್ಲನಹೊಳೆ, ಸಂಗೇನಹಳ್ಳಿ, ಅರಶಿನಗುಂಡಿ ಹಾಗೂ ಕೊಣಚಗಲ್ಲು ಗುಡ್ಡ ಪರಿಸರ ಮುಖ್ಯವಾಗಿವೆ. ಇವುಗಳಲ್ಲಿ ಮೊದಲಿನ ಮೂರು ನೆಲೆಗಳು ಕಂಡುಬಂದಿರುವುದು ಜನಗಿಹಳ್ಳದ ದಂಡೆಯ ಮೇಲೆ ಎಂಬುದು ಗಮನಾರ್ಹ ಅಂಶ. ಜನಗಿಹಳ್ಳವನ್ನು ಚಿನ್ನಹಗರಿಯೆಂದೂ ಪ್ರಾಚೀನ ಶಾಸನಗಳಲ್ಲಿ ಹನೆಯ ತೊರೆಯೆಂದು ಕರೆಯಲಾಗಿದೆ.[1] ಹಾಗೆಯೇ ನಂದಿಹಳ್ಳಿ, ಅರಸೂರು, ಹಳುವುದರ, ಎಮ್ಮನಗಟ್ಟಿ, ದೇವಿಕೆರೆಗಳಲ್ಲಿ ನವಶಿಲಾಯುಗದ ನಯವಾದ ಕೊಡಲಿಗಳನ್ನು ಪತ್ತೆಹಚ್ಚಲಾಗಿದೆ.[2]

ಸಂಗೇನಹಳ್ಳಿ ಕೆರೆ : ಸಂಗೇನಹಳ್ಳಿ ಗ್ರಾಮವು ಜಗಲೂರು ತಾಲೂಕಿಗೆ ಸೇರಿದ್ದರೆ, ಇಲ್ಲಿನ ಕೆರೆಯ ಆಯಕಟ್ಟು ಚಿತ್ರದುರ್ಗ ತಾಲೂಕಿಗೆ ಸೇರಿದೆ. ಗಡಿಭಾಗದ ಈ ನೆಲೆ ಎರಡು ತಾಲೂಕುಗಳಿಗೂ ಅನ್ವಯವಾಗುತ್ತದೆಂಬುದು ನನ್ನ ಅಭಿಮತ.ಕೆರೆಯ ಮಧ್ಯಭಾಗದಲ್ಲಿ ಕಂಡುಬರುವ ಮರದ ಗುಂಪನ್ನು ಒಳಗೊಂಡ ದಿಬ್ಬವೇ ಪ್ರಾಗಿತಿಹಾಸ ಕಾಲದ ಮಾನವನ ವಾಸಸ್ಥನ. ಇದನ್ನು ಸ್ಥಳೀಯರು ಓಬಳಾಪುರ ಗಡ್ಡೆ ಎಂದೇ ಕರೆಯುತ್ತಾರೆ. ಕೆರೆಯ ನಿರ್ಮಾಣ ಪೂರ್ವದಲ್ಲಿ ಇಲ್ಲಿನ ಬೊಗಳೇರ ಹಟ್ಟಿ, ಯಳವರ್ತಿ, ಸಂಗೇನಹಳ್ಳಿ ಗ್ರಾಮಗಳ ಜನರು ಇಲ್ಲಿ ವಾಸವಾಗಿದ್ದರು. ಈ ನೆಲೆಯ ಕ್ಸೇತ್ರಕಾರ್ಯದಲ್ಲಿ ಕಂಡುಬಂದ ಮುಖ್ಯ ಆಕರಗಳೆಂದರೆ ನವಶಿಲಾಯುಗ ಕಾಲದ ಕಲ್ಲಿನ ನಯವಾದ ಕೊಡಲಿ, ಬೂದು, ಕಪ್ಪು, ಕೆಂಪು ಹಾಗೂ ಬಿಳಿವರ್ಣ ಲೇಪಿತ ಮಡಕೆ – ಕುಡಿಕೆಗಳು, ಕವಣೆಕಲ್ಲು, ಗುಂಡುಕಲ್ಲು, ಅರೆಯುವ ಕಲ್ಲು, ಒಂದೇ ಅಳತೆಯ ಚಪ್ಪಟೆಯ ಕಲ್ಲು, ಬೂದಿಕಿಟ್ಟ, ಕಬ್ಬಿಣದ ಕಿಟ್ಟ, ಕುಟ್ಟಿ ಮೂಡಿಸಿದ ರೇಖಾ ಚಿತ್ರಗಳು ಮುಖ್ಯವಾಗಿವೆ. ಇವುಗಳಲ್ಲದೆ ಚಾರಿತ್ರಿಕ ಕಾಲದ ವೀರಗಲ್ಲು, ದೇಗುಲದ ಅವಶೇಷಗಳನ್ನೂ ಇಲ್ಲಿ ಕಾಣಬಹುದು. ಇದರಿಂದ ಈ ನೆಲೆಯು ನವಶಿಲಾಯುಗದ ಕಾಲದಿಂದ ಅಧುನಿಕ ಯುಗದವರೆಗೆ ಮಾನವನ ವಸತಿ ತಾಣವಾಗಿದ್ದುದು ಸ್ಪಷ್ಟವಾಗುತ್ತದೆ.

ಕಲ್ಲಿನ ನಯವಾದ ಕೊಡಲಿ, ಬೂದಿಬಣ್ಣದ ಮಡಕೆ ಕುಟ್ಟಿ ಮೂಡಿಸಿದ ದನ, ಗೂಳಿ, ಜಿಂಕೆ, ಹಾವು, ಮನುಷ್ಯರ ರೇಖಾ ಚಿತ್ರಗಳು ನವಶಿಲಾಯುಗದ ಮಾನವನ ಇರವನ್ನು ಅಧಿಕೃತವಾಗಿ ಸೂಚಿಸುವುದರ ಮೂಲಕ ಕ್ರಿ.ಪೂ. ಮೂರು ಸಾವಿರ ವರ್ಷಗಳಷ್ಟು ಹಿಂದೆ ಈ ಪ್ರದೇಶದಲ್ಲಿ ವಾಸವಾಗಿದ್ದುದು ಸ್ಪಷ್ಟಗೊಳ್ಳುತ್ತದೆ. ಸಂಗೇನಹಳ್ಳಿಯನ್ನು ಬಿಟ್ಟರೆ ನವಶಿಲಾಯುಗದ ಇನ್ನೊಂದು ನೆಲೆ ಅರಶಿನಗುಂಡಿ. ಇಲ್ಲಿಯೂ ನಯವಾದ ಕಲ್ಲಿನ ಕೊಡಲಿ, ಬೂದುಬಣ್ಣದ ಮಡಕೆಗಳು ಪತ್ತೆಯಾಗಿವೆ. ಈ ನೆಲೆಯನ್ನು ಎಚ್. ತಿಪ್ಪೇಸ್ವಾಮಿಯವರು ಪತ್ತೆಹಚ್ಚಿ ತಮ್ಮ ಮಹಾಪ್ರಬಂಧದಲ್ಲಿ ಬೆಳಕಿಗೆ ತಂದಿರುವರು. ಇವರು ಪತ್ತೆ ಹಚ್ಚಿದ ನೆಲೆಯೆಂದರೆ ಕೊಣಚಗಲ್ಲು ರಂಗಪ್ಪನಗುಡ್ಡ. ಇಲ್ಲಿಯೂ ನಯಗೊಳಿಸಿದ ಕಲ್ಲಿನ ಕೊಡಲಿ ಕಂಡುಬಂದಿದೆ. ಈ ತಾಲೂಕಿನಲ್ಲಿ ಕಂಡುಬಂದ ನವಶಿಲಾಯುಗದ ಇನ್ನೊಂದು ನೆಲೆಯೆಂದರೆ ಚಿಕ್ಕಮಲ್ಲನಹೊಳೆ ಬಳಿಯದು. ಇದನ್ನು ವಿರೂಪಾಕ್ಷಿ ಪೂಜಾರಹಳ್ಳಿ ಅವರು ಬೆಳಕಿಗೆ ತಂದಿದ್ದಾರೆ. ಇಲ್ಲಿ ಬೂದಿದಿಬ್ಬ ಕಂಡುಬಂದಿದ್ದು. ಈ ನೆಲೆಯಲ್ಲಿ ನಯಗೊಳಿಸಿದ ಕೊಡಲಿ, ದನದ ಮೂಳೆ, ಬೂದುಬಣ್ಣದ ಮಡಕೆಗಳು ಕಂಡುಬಂದಿವೆ. ಸ್ಥಳೀಯರು ಈ ನೆಲೆಯನ್ನು ಮುತ್ತಿಗಾರರ ಬೊಟ್ಟು, ದೇವರೆತ್ತಿನ ಬೊಟ್ಟು ಎಂದು ಕರೆಯುತ್ತಾರೆ. ಅವರ ನಂಬಿಕೆಯಂತೆ ಮುತ್ತಿಗಾರರ ದೇವರ ಎತ್ತುಗಳು ಐಕ್ಯಗೊಂಡ ಸ್ಥಳ ಇದಾಗಿದೆ. ಒಟ್ಟಿನಲ್ಲಿ ಇಲ್ಲಿ ಕಂಡುಬಂದ ನೆಲೆಗಳ ಮೂಲಕ ಕ್ರಿ.ಪೂ. ೩೦೦೦ ವರ್ಷಗಳಷ್ಟು ಹಿಂದೆ ಈ ಪರಿಸರದಲ್ಲಿ ನವಶಿಲಾಯುಗ ಮಾನವ ಬದುಕಿಬಾಳಿದ್ದುದು ಸ್ಪಷ್ಟವಾಗಿದೆ.

ಬೃಹತ್ ಶಿಲಾಯುಗ ಅಥವಾ ಕಬ್ಬಿಣ ಯುಗ

ನವಶಿಲಾಯುಗದ ನಂತರ ಕಾಣಬರುವ ಕಾಲ ಬೃಹತ್ ಶಿಲಾಯುಗ. ಈ ಕಾಲದ ವಿಶೇಷತೆಯೆಂದರೆ ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಸಮಾಧಿ ನಿರ್ಮಾಣಕ್ಕೆ ಬಳಸಿರುವುದು. ಅಲ್ಲದೆ ಈ ಕಾಲದಲ್ಲಿ ಕಬ್ಬಿಣದ ಬಳಕೆ ಮೊಟ್ಟಮೊದಲಬಾರಿಗೆ ಆದುದರಿಂದ ಕಬ್ಬಿಣ ಯುಗವೆಂತಲೂ ಕರೆಯಲಾಗುವುದು. ಈ ಕಾಲದ ಜನರ ಮುಖ್ಯ ಆಕರಗಳೆಂದರೆ ಶಿಲಾಸಮಾಧಿಗಳೇ ಆಗಿವೆ. ಇವರು ನಂಬಿದ್ದ ಸಮಾಧಿ ಕಲ್ಪನೆ ಬಹಳ ವಿಶಿಷ್ಟವಾದುದ್ದು. ಸತ್ತ ಹಿರಿಯರಿಗಾಗಿ ನಿರ್ಮಿಸಿದ್ದ ಸಮಾಧಿಗಳು ಅಂದಿನ ಜನರಲ್ಲಿದ್ದ ನಂಬಿಕೆ ಆಚರಣೆ, ಹಾಗೂ ಮರಳಿ ಬರುವನೆಂಬ ಪುನರ್ಜನ್ಮ ಕಲ್ಪನೆಗಳನ್ನು ವ್ಯಕ್ತಪಡಿಸುತ್ತವೆ. ಈ ಶಿಲಾಸಮಾಧಿಗಳನ್ನು ಭಾರತದ ಪ್ರಾಚೀನ ಪಿರಮಿಡ್ ಗಳೆಂತಲೂ ಕರೆಯಬಹುದು. ಸತ್ತ ಶವದೊಂದಿಗೆ ಅವನು/ಅವಳು ಬಳಸಿದ ಹಾಗೂ ಬಳಸಲು ಬೇಕಾದ ಎಲ್ಲ ಬಗೆಯ ಜೀವನಾವಶ್ಯಕ ವಸ್ತುವಿಶೇಷಗಳನ್ನು ಈ ಸಮಾಧಿಗಳಲ್ಲಿ ಇಟ್ಟು ಶವಸಂಸ್ಕಾರ ಮಾಡಲಾಗುತ್ತಿತ್ತು. ಇದು ಎಷ್ಟರಮಟ್ಟಿಗೆ ಇತ್ತೆಂದರೆ ಒಂದು ಕುಟುಂಬವು ಜೀವನ ನಿರ್ವಹಣೆ ಮಾಡಬಹುದಾದಷ್ಟು ಎಂದರೆ ಅತಿಶಯೋಕ್ತಿಯಾಗಲಾರದು.

ತಾಲೂಕಿನಲ್ಲಿ ಈ ಕಾಲದ ನೆಲೆಗಳು ಕಂಡುಬಂದ ಸ್ಥಳಗಳೆಂದರೆ ಅಸಗೋಡು ಮತ್ತು ಸಂಗೇನಹಳ್ಳಿಗಳು. ಅಸಗೋಡು ಸಮಾಧಿ ನೆಲೆಯಾದರೆ ಸಂಗೇನಹಳ್ಳಿ ವಸತಿ ನೆಲೆಯಾಗಿದೆ. ಅಸಗೋಡಿನಲ್ಲಿ ಶಿಲಾಗೋರಿಗಳು ಇದ್ದ ವಿವರಗಳನ್ನು ಗ್ಯಾಸೆಟಿಯರ್ ನಿಂದ ಮಾತ್ರ ತಿಳಿಯಬಹುದಾಗಿದೆ. ಕೃಷಿ ಚಟುವಟಿಕೆಯಿಂದ ಶಿಲಾಗೋರಿಗಳು ನಾಶವಾಗಿ ಹೋಗಿವೆ. ಇಲ್ಲಿನ ಶಿಲಾಗೋರಿಗಳು ಕಲ್ಲುವೃಕ್ಷ ಮಾದರಿಗಳಾಗಿವೆ. ಸಂಗೇನಹಳ್ಳಿಯಲ್ಲಿ ಶಿಲಾಗೋರಿಗಳು ಕಂಡುಬಂದಿಲ್ಲವಾದರೂ ಆ ಕಾಲದ ಜನರು ವಾಸಮಾಡಿದ್ದ ವಸತಿ ನೆಲೆಯಿಂದ ಅವರು ಬಳಸಿ ಬಿಟ್ಟುಹೋದ ಮಡಕೆಕುಡಿಕೆಗಳು, ಕವಣೆಕಲ್ಲು, ಗುಂಡುಕಲ್ಲು, ಚಪ್ಪಟೆಕಲ್ಲು, ಕಬ್ಬಿಣದ ಅವಶೇಷಗಳು ದೊರೆಯುತ್ತವೆ. ಮಲೆ ಮಾಚಿಕೆರೆಯ ವಾಯುವ್ಯಕ್ಕೆ ಗುಡ್ಡದ ಇಳಿಜಾರಿನಲ್ಲಿ ಬೃಹತ್ ಶಿಲಾಗೋರಿಗಳಿವೆ. ಇವುಗಳನ್ನು ಸ್ಥಳೀಯವಾಗಿ ಮೋರೇರ ಮನೆಗಳೆಂದೇ ಕರೆಯುವರು. ಇಲ್ಲಿ ಐದಾರು ಸಮಾಧಿಗಳು ಮಾತ್ರ ಗೋಚರಿಸುತ್ತಿದ್ದು, ಇವುಗಳನ್ನು ಕಣಶಿಲೆಯ ಚಪ್ಪಡಿಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರಿಂದ ನವಶಿಲಾಯುಗದ ಮುಂದುವರಿಕೆಯಾದ ಬೃಹತ್ ಶಿಲಾಯುಗದ ಜನರು ಈ ಪ್ರದೇಶದಲ್ಲಿ ನೆಲೆಸಿದ್ದುದನ್ನು ದೃಢಪಡಿಸಬಹುದಾಗಿದೆ.

ಆದಿ ಇತಿಹಾಸ ಕಾಲ

ತಾಲೂಕಿನಲ್ಲಿ ಆದಿ ಇತಿಹಾಸ ಹಾಗೂ ಇತಿಹಾಸ ಕಾಲದ ಅನೇಕ ನೆಲೆಗಳು ಕಂಡುಬರುತ್ತವೆ. ಅವುಗಳನ್ನು ಸಂಗೇನಹಳ್ಳಿ, ಕಲ್ಲೇದೇವರಪುರ, ಅಕನೂರು, ಅಸಗೋಡು, ಬಿಳಚೋಡು, ಚದುರಗೊಳ ಮುಂತಾದವು ಸೇರಿವೆ.

ಕಲ್ಲೇದೇವರಪುರವು ಕಲ್ಲೇಶ್ವರನಿಂದ ಪ್ರಸಿದ್ಧಿಯಾಗಿದೆ. ಇದು ಮಧ್ಯಯುಗದ ಪ್ರಸಿದ್ಧ ಧಾರ್ಮಿಕ ಎಡೆ. ಹಾಗಿದ್ದೂ ಆದಿ ಇತಿಹಾಸಕಾಲದ ಅನೇಕ ಕುರುಹುಗಳು ಈ ಗ್ರಾಮದ ಪಶಿಮಕ್ಕೆ ಜನಗಿಹಳ್ಳದ ದಂಡೆಯಲ್ಲಿ ಕಂಡುಬರುತ್ತವೆ. ಅವುಗಳನ್ನು ಕಪ್ಪು, ಕೆಂಪು ಬಣ್ಣದ ಮಡಕೆಗಳು ಹೆಚ್ಚು ದೊರೆಯುತ್ತವೆ. ಈ ನೆಲೆಯನ್ನು ಬಿಟ್ಟರೆ ಆದಿ ಇತಿಹಾಸಕಾಲದ ಪ್ರಮುಖ ಎಡೆಯೆಂದರೆ ಅಕನೂರು, ಇವು ಜನಗಿಹಳ್ಳ ಮತ್ತು ಜಮಾಪುರದೆಡೆಯಿಂದ ಹರಿಯುವ ಕಣಗಳಹಳ್ಳ (ಹುಲಿಗನಹಳ್)ಗಳ ಸಂಗಮ ಸ್ಥಾನದಲ್ಲಿದೆ.

ಈ ಸ್ಥಳವನ್ನು ಸ್ಥಳೀಯರು ಬೂದುಗಡ್ಡೆಯೆಂದೇ ಕರೆಯುವುದು ರೂಢಿ. ಇಲ್ಲಿ ಕಂಡುಬರುವ ಪ್ರಮುಖ ಅವಶೇಷಗಳೆಂದರೆ ಕಪ್ಪು, ಕೆಂಪುಬಣ್ಣದ, ಮಡಕೆಗಳು, ಬಿಳಿವರ್ಣ ಲೇಪಿತ ಕೆಂಪುಮಡಕೆಗಳು, ಗೊಂಬೆಗಳು, ಮಣಿಗಳು, ಚಿಕ್ಕ ಬಿಡಿಬಿಡಿಯಾದ ಶಿಲ್ಪಗಳು, ಚಾರಿತ್ರಿಕ ಕಾಲದ ವೀರಗಲ್ಲು, ನಿಲುವುಗಲ್ಲು, ಭೈರವ, ನಂದಿ, ಗಣೇಶ, ಲಿಂಗ ಮೊದಲಾದ ಶಿಲ್ಪಾವಶೇಷಗಳು ಸೇರಿವೆ. ಅಲ್ಲದೆ ಶಾಸವಾಹನ ಕಾಲದ ಸೀಸದ ನಾಣ್ಯಗಳು ಸ್ಥಳೀಯರಿಗೆ ದೊರೆತಿವೆ. ಸಂಗೇನಹಳ್ಳಿಯಲ್ಲೂ ಆದಿ ಇತಿಹಾಸ ಕಾಲದ ಕುರುಹುಗಳು ಕಂಡುಬರುತ್ತವೆ. ಹಾಗೆಯೇ ಸೊಕ್ಕೆ ಪರಿಸರದಲ್ಲಿ ಕಿಟ್ಟದಾಳ್ ಎಂಬ ನೆಲೆಯಿದ್ದು, ಇಲ್ಲಿ ಆದಿ ಇತಿಹಾಸ ಕಾಲದ ಅನೇಕ ಕುರುಹುಗಳು ಕಂಡುಬಂದಿವೆ. ಅವುಗಳನ್ನು ಕೆಂಪು, ಕಂದು ಬಣ್ಣದ ಮಡಕೆಗಳು, ಬಿಳಿವರ್ಣದ ಗೆರೆ, ಚಿತ್ರಗಳುಳ್ಳ ಮಡಕೆಗಳು ಮುಖ್ಯವಾಗಿವೆ. ಇವು ಶಾತವಾಹನ ಕಾಲದ ಕುರುಹುಗಳು.

ಇವುಗಳಲ್ಲದೆ ಇನ್ನು ಅನೇಕ ಪ್ರಾಚೀನ ಎಡೆಗಳು ಜಗಲೂರು ತಾಲೂಕಿನಾದ್ಯಂತ ಕಂಡುಬರುತ್ತಿದ್ದು, ಈ ಬಗ್ಗೆ ಹೆಚ್ಚಿನ ಕ್ಷೇತ್ರಾಧ್ಯಯನ ಅಗತ್ಯವಾಗಿದೆ.

ಒಟ್ಟಿನಲ್ಲಿ ಜಗಲೂರು ತಾಲೂಕು ಪರಿಸರವು ಇದುವರೆಗಿನ ಸಂಶೋಧನೆಯು ಹಿನ್ನೆಲೆಯಲ್ಲಿ ಹೇಳುವುದಾದರೆ ನವಶಿಲಾಯುಗ ಮಾನವನಿಂದ ಹಿಡಿದು, ಬೃಹತ್ ಶಿಲಾಯುಗದ, ಆದಿ ಇತಿಹಾಸ, ಇತಿಹಾಸ ಕಾಲದಿಂದ ಆಧುನಿಕ ಯುಗದವವೆಗೆ ಮಾನವನ ಪ್ರಮುಖ ವಾಸಸ್ಥಾನವಾಗಿರುವುದು ಗಮನಾರ್ಹ. ಇದರಲ್ಲಿ ಜನಗಹಳ್ಳದ ದಂಡೆಯೆ ಮೇಲೆಯೇ ತಾಲೂಕಿನ ಹೆಚ್ಚು ಪ್ರಾಚೀನ ಎಡೆಗಳು ಕಂಡುಬಂದಿರುವುದು ಗಮನಾರ್ಹ.

ಆಧಾರ ಗ್ರಂಥಗಳು

  • ಎಪಿಗ್ರಾಪಿಯ ಕರ್ನಾಟಿಕ, ಸಂಪುಟ ೧೧
  • ಕರ್ನಾಟಕ ವಿಷಯ ವಿಶ್ವಕೋಶ, ೨೦೦೫, ಸಂ.೧ ಮತ್ತು ೨, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು
  • ತಿಪ್ಪೇಸ್ವಾಮಿ, ಹೆಚ್. ೨೦೦೧, ದಾವಣಗೆರೆ ಜಿಲ್ಲೆಯ ದೇವಾಲಯಗಳು (ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ

[1] ಎಪಿಗ್ರಾಪಿಯ ಕರ್ನಾಟಿಕ, ಸಂಪುಟ ೧೧, ನಿಬಗೂರು ಶಾಸನ

[2] ಈ ಮಾಹಿತಿಯನ್ನು ಶ್ರೀ ಜಿ. ಸಿದ್ದಪ್ಪ ಅವರಿಂದ ಪಡೆಯಲಾಗಿದೆ.