ಜಗಲೂರು ತಾಲೂಕು ಇಂದು ದಾವಣಗೆರೆ ಜಿಲ್ಲೆಯಲ್ಲಿದೆ. ೧೯೯೭ಕ್ಕೂ ಮುಂಚೆ ಚಿತ್ರದುರ್ಗ ಜಿಲ್ಲೆಯ ತಾಲೂಕು ಕೇಂದ್ರವಾಗಿತ್ತು. ದಾವಣಗೆರೆ ಜಿಲ್ಲಾ ಕೇಂದ್ರದಿಂದ ೪೦ ಕಿ.ಮೀ. ಪೂರ್ವಕ್ಕಿರುವ ಜಗಲೂರು ತನ್ನದೇ ಆದ ಭೌಗೋಳಿಕ ಲಕ್ಷಣಗಳನ್ನು ಹೊಂದಿದ ತಾಲೂಕು ಆಗಿದೆ. ಪೂರ್ವಕ್ಕೆ ಚಳ್ಳಕೆರೆ, ಪಶ್ಚಿಮಕ್ಕೆ ದಾವಣಗೆರೆ, ಹರಪನಹಳ್ಳಿ, ಉತ್ತರಕ್ಕೆ ಕೂಡ್ಲಿಗಿ, ದಕ್ಷಿಣಕ್ಕೆ ಚಿತ್ರದುರ್ಗ ತಾಲೂಕುಗಳ ಗಡಿಗಳನ್ನು ಹೊಂದಿದೆ. ಇಂಥ ತಾಲೂಕಿನ ಭೌಗೋಳಿಕ ಲಕ್ಷಣಗಳು ಗೊಸ್ರಯ್ಯನ (ಗುಡ್ಡಗುಹೇಶ್ವರ ಬೆಟ್ಟ), ಕಂಬಾರಪ್ಪ ಕೋಟೆ, ಚಿನ್ನಹಗರಿ ನದಿ ಪ್ರಮುಖವಾದವು. ಮುಸ್ಟೂರು, ಕಲ್ಲೇದೇವರಪುರ, ತೋರಣಗಟ್ಟ, ಅಸಗೋಡು, ಬಿಳಿಚೋಡು, ಕಸ್ತೂರಿಪುರ, ಕಾಮಗೇತನಹಳ್ಳಿ, ಕೆಂಚವ್ವನಾಗ್ತಿಹಳ್ಳಿ, ಗಡಿಮಾಕುಂಟೆ, ಗುತ್ತಿದುರ್ಗ, ತಳವಾರ ಕರಿಯಪ್ಪನಹಳ್ಳಿ, ಪಾಲನಾಯನಕಕೋಟೆ, ಬೇಡರ ಬೆನಕನಹಳ್ಳಿ, ಮದಗಿನಕೆರೆ, ರಂಗಯ್ಯನದುರ್ಗ, ಹನುಮವ್ವನಾಗತಿಹಳ್ಳಿ, ಬಿದರಕೆರೆ, ಚಿಕ್ಕಮಲ್ಲನಹೊಳೆ – ಹೀಗೆ ಅನೇಕ ಗ್ರಾಮಗಳು ತಮ್ಮದೇ ಆದ ಸ್ಥಳೀಯ ಇತಿಹಾಸವನ್ನು ಹೊಂದಿವೆ.

ಚರಿತ್ರೆ ರಚನೆ ಇಂದು ಸಂಕಿರ್ಣದಿಂದ ಸರಳತೆಯೆಡೆಗೆ ನಡೆಯುತ್ತಿದೆ. ಬದಲಾದ ಬರವಣಿಗೆ ಕ್ರಮಗಳು ರಾಷ್ಟ್ರೀಯ, ವಸಾಹತು, ಸಾಮ್ರಾಜ್ಯಶಾಹಿ, ಮಾರ್ಕ್ಸ್ – ಹೀಗೆ ಆಯಾ ಸಿದ್ಧಾಂತ, ವಾದಗಳಿಗೆ ಸಂಬಂಧಿಸಿದಂತೆ ಚರಿತ್ರೆ ಬರವಣಿಗೆಗಳು ನಡೆದಿವೆ. ದೇಶ, ರಾಜ್ಯಗಳಲ್ಲದೆ, ಪ್ರಾದೇಶಿಕ ಸ್ಥಳೀಯ ಹಾಗೂ ಗ್ರಾಮ ಚರಿತ್ರೆ ಅಧ್ಯಯನವು ಇಂದು ಹೆಚ್ಚಾಗಿದೆ. ಈ ಬಗೆಯಲ್ಲಿ ಮೌಖಿಕ ಚರಿತ್ರೆ ಅಧ್ಯಯನವು ವ್ಯಾಪಕವಾಗಿ ಬೆಳೆಯುತ್ತದೆ. ಪ್ರಸ್ತುತ ಪ್ರಬಂಧದಲ್ಲಿ ಜಗಲೂರು ತಾಲೂಕಿನ ಇತಿಹಾಸವನ್ನು ಸ್ಥಳೀಯ ಹಾಗೂ ಮೌಖಿಕ ಚರಿತ್ರೆಯ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗುವುದು.

ಇಂದು ಜಗಲೂರು ತಾಲೂಕಿನಲ್ಲಿ ಎರಡು ನೂರಕ್ಕೂ ಹೆಚ್ಚು ಗ್ರಾಮಗಳಿವೆ. ಸ್ಥಳೀಯ ಚರಿತ್ರೆಯ ದೃಷ್ಟಿಯಿಂದ ಪ್ರತಿ ಹಳ್ಳಿಯ ಇತಿಹಾಸವು ಇಲ್ಲಿ ರೋಮಾಂಚನಕಾರಿ ಎಂಬುದು ಸ್ಪಷ್ಟ. ಜಗಲೂರು ಒಂದೂವರೆ ಶತಮಾನದ ಹಿಂದೆ ಸಾಮಾನ್ಯ ಗ್ರಾಮವಾಗಿತ್ತು. ೧೮೬೮ರಲ್ಲಿ ಕಣಕುಪ್ಪೆಯಿಂದ ಜಗಳೂರಿಗೆ ತಾಲೂಕು ಕೇಂದ್ರ ವರ್ಗಾವಣೆಗೊಂಡಿತು. ಈಗ್ಗೆ ೧೪೦ ವರ್ಷಗಳ ವಿವಿಧ ಆಯಾಮಗಳ ಬೆಳೆದ ಹಿಂದುಳಿದ ತಾಲೂಕೆಂದು ಹೆಸರಾದ ಜಗಲೂರು, ಇಂದು ಪರಿಶಿಷ್ಟ ವರ್ಗಕ್ಕೆ ವಿಧಾನಸಭಾ ಕ್ಷೇತ್ರವಾಗಿ ಮೀಸಲಾಗಿರುವುದು ಗಮನಾರ್ಹ.

ಜಗಲೂರು ತಾಲೂಕಿನ ಇತಿಹಾಸವನ್ನು ಮಾನವನ ಜೀವನ ವಿಕಾಸ ಕ್ರಮದಿಂದಲೇ ಗುರುತಿಸಬಹುದು. ಇಲ್ಲಿನ ಶಿಲಾಯುಗದ ನಿವೇಶನಗಳು, ಆಯುಧ ಉಪಕರಣಗಳು, ಗುಹೆ, ನದಿ, ಬೆಟ್ಟ – ಗುಡ್ಡಗಳಲ್ಲಿ ಮಾನವ ಸಂಚರಿಸಿದ ಬಗ್ಗೆ ಮಾಹಿತಿಯಿದೆ. ಇಲ್ಲಿನ ಇತಿಹಾಸವನ್ನು ಮೌರ್ಯ, ಶಾತವಾಹನ, ಕದಂಬ, ಗಂಗರು, ಪಲ್ಲವರು, ಉಚ್ಚಂಗಿ ಪಾಂಡ್ಯರು, ಚಾಲುಕ್ಯರು, ಹೊಯ್ಸಳ, ರಾಷ್ಟ್ರಕೂಟ, ಕುಮ್ಮಟದುರ್ಗದ ನಾಯಕರು, ವಿಜಯನಗರ ಹಾಗೂ ಪಾಳೆಯಗಾರರ ಅಧೀನದಲ್ಲಿದ್ದ ಬಗೆಯನ್ನು ಗುರುತಿಸಬಹುದು.

ಮೌರ್ಯರ ಆಳ್ವಿಕಯ ಪ್ರಭಾವ ಈ ಪ್ರದೇಶದ ಮೇಲೆ ಆಗಿದೆ. ಕ್ರಿ.ಶ. ೪ನೇ ಶತಮಾನದಲ್ಲಿ ಖಾರವೇಲನು ಕುಂತಲ ರಾಜ್ಯವನ್ನು ಆಳುತ್ತಿದ್ದನೆಂದು ಹತಿಗುಂಪ ಶಾಸನದಿಂದ ತಿಳಿಯುವುದು. ಮೌರ್ಯರ ಅಶೋಕ, ಬಿಂದುಸಾರನ ಬಗ್ಗೆ ಈ ಪರಿಸರದಲ್ಲಿ ವಿವರಗಳಿವೆ. ಅಶೋಕನ ಹೆಸರಿನಲ್ಲಿ ಅಸಗೋಡು (ಅಸಗ ಪಾಳಿಭಾಷೆಯಲ್ಲಿ ಅಶೋಕ) ನಿರ್ಮಾಣವಾಗಿರುವ ಬಗ್ಗೆ ಚರ್ಚಿಸಲಾಗಿದೆ. ಇವನ ಮೂರು ಶಾಸನಗಳನ್ನು ೧೮೯೨ರಲ್ಲಿ ಬಿ.ಎಲ್. ರೈಸ್ ಬೆಳಕಿಗೆ ತಂದರು.

ಕನ್ನಡದ ಮೊದಲ ರಾಜವಂಶ ಕದಂಬರು. ನಂದರ ಆಳ್ವಿಕೆ ಮತ್ತು ಇತರ ರಾಜ್ಯಗಳ ಆಳ್ವಿಕೆಯ ಅವಧಿಯಲ್ಲಿ ಬೌದ್ಧ, ಜೈನ ಧರ್ಮಗಳ ಉಚ್ಛ್ರಾಯ ಸ್ಥಿತಿ ಇತ್ತು. ತಲಕಾಡಿನ ಗಂಗರು, ಉಚ್ಚಂಗಿ ಪಾಂಡ್ಯರು ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದಾರೆ.

ಶಾತವಾಹನರು ಕನ್ನಡಿಗರೆಂದು, ಆಂಧ್ರಭೃತ್ಯರೆಂದೂ ಕರೆಯುತ್ತಾರೆ. ಶಾತವಾಹನೀಹಾರ (ಶಾತವಾಹನ ಪ್ರಾಂತ) ಎಂದು ಬಳ್ಳಾರಿ ಪ್ರದೇಶಕ್ಕೆ ಕರೆಯುತ್ತಿದ್ದರು. ಚಂದ್ರವಳ್ಳಿ, ಬ್ರಹ್ಮಗಿರಿ ಶಾತವಾಹನರ ಕಾಲಕ್ಕೆ ಸೇರಿದ್ದವು. ೩೧ ಜನ ಅರಸರು ಈ ವಂಶದಲ್ಲಿ ಆಳ್ವಿಕೆ ನಡೆಸಿದರು.

ಇಕ್ಪ್ವಾಕು, ಕದಂಬ, ಗಂಗ, ಪಲ್ಲವ, ರಾಷ್ಟ್ರಕೂಟ, ವಾಕಟಕರು, ನಾಗರು, ಚುಟುಗಳು – ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದಾರೆ. ಕದಂಬರ ರಾಜಧಾನಿಯಾದ ಬನವಾಸಿಯು ಜಗಲೂರು ಪ್ರದೇಶದ ಹತ್ತಿರವೆಂದೇ ಹೇಳಬಹುದು. ತಾಳಗುಂದ ಶಾಸನದಲ್ಲಿ ಮಯೂರಶರ್ಮ ಅಭೀರ, ಪಲ್ಲವ, ಪಾರಿಯಾತ್ರಿಕ, ಶಕಸ್ಥಾನ, ಸೈಂದಿಕಾ, ಪುನ್ನಾಟ ಮತ್ತು ಮೊಕ್ರಿಗಳ ಬಗ್ಗೆ ತಿಳಿದುಬರುತ್ತದೆ. ಕ್ರಿ.ಶ. ೪ನೇ ಶತಮಾನದ ಅಣಜಿ ಶಾಸನವು ಪಲ್ಲವ ನನಕ್ಕಸ [ (ನ)ನೊಣಕ್ಕಸ] ಮತ್ತು ಕದಂಬ ಅರಸ ಕೃಷ್ಣವರ್ಮನೊಡನೆ ಯುದ್ಧವಾದ ಬಗ್ಗೆ ಬೆಳಕು ಚೆಲ್ಲುತ್ತದೆ. ಜಗಲೂರು ಪ್ರದೇಶದಲ್ಲಿಯೇ ಈ ಯುದ್ಧ ಸಂಭವಿಸಿರಬೇಕೆಂದು ನಂಬಲಾಗಿದೆ.

ಪೂರ್ವಚಾಲುಕ್ಯರು, ಪಲ್ಲವರು, ಬಾದಾಮಿ ಚಾಲುಕ್ಯರು, ಕಂಚಿಯ ಪಲ್ಲವರು, ಪಾಡ್ಯರು; ಎರಡನೇ ಪುಲಕೇಶಿ ಮತ್ತು ನರಸಿಂಹವರ್ಮ, ವಿಕ್ರಮಾದಿತ್ಯ ಮೊದಲಾದವರ ಗಡಿ ಪ್ರದೇಶದಲ್ಲಿ ಯುದ್ಧಗಳಾದ ಬಗ್ಗೆ ವಿವರಗಳಿವೆ. ಚಾಲುಕ್ಯ – ಪಲ್ಲವರು ಇಲ್ಲಿ ಯುದ್ಧ ಮಾಡಿದ ಬಗ್ಗೆ ಮಾಹಿತಿ ಸಿಗುತ್ತದೆ. (ಚಿನ್ನಹಗರಿನದಿ ಪರಿಸರ).

ರಾಷ್ಟ್ರಕೂಟರು ಕ್ರಿ.ಶ.೯೬೪ರ ಕದಂಬಳಿಗೆಯಲ್ಲಿ ಕನ್ನಯ್ಯ ಆಳುತ್ತಿದ್ದನು. ಆಗ ಲೋಕಯ್ಯ ಎಂಬುವವನು ಕದಂಬಳಿಗೆ ನಾಡು ೧೦೦೦ ಆಳುತ್ತಿದ್ದನು (ಚೋಳರ ನಿಡಗಲ್ಲು – ರಾಯದುರ್ಗ ಪಾಪದೇವ). ನೊಳಂಬವಾಡಿ ೩೨,೦೦೦ರಲ್ಲಿ ಜಗಲೂರು ಪ್ರದೇಶ ಸೇರಿತ್ತು.

ಕುಮ್ಮಟದುರ್ಗದ ನಾಯಕ ಅರಸರು ಈ ಪ್ರದೇಶದ ಮೇಲೆ ಒಡೆತನ ಹೊಂದಿದ ಬಗೆಗೆ (ದಾವಣಗೆರೆ, ಹರಿಹರ, ಚನ್ನಗಿರಿ ಇತರೆ) ಶಾಸನಗಳು ಬೆಳಕು ಚೆಲ್ಲುತ್ತವೆ.

ಜಗಲೂರು ಸ್ಥಳನಾಮ ಕುರಿತು ಖಚಿತ ತೀರ್ಮಾನಗಳಿಲ್ಲ. ವಿಜಯನಗರ ಕಾಲದ ಕ್ರಿ.ಶ. ೧೫೨೬ರ ನಿಬಗೂರು ಶಾಸನದಲ್ಲಿ ‘ಜಗಲೂರು ಸೀಮೆ’ ಎಂದು, ಕ್ರಿ.ಶ. ೧೬೮೦ರ ಶಾಸನದಲ್ಲಿ ‘ಜಗಲೂರು ನಾಡು’ ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ನಾಡು ಮತ್ತು ಸೀಮೆ ಕುರಿತು ಹೇಳುವಾಗ ಸ್ಥಳೀಯವಾಗಿ ಯಾವುದೇ ರಾಜ್ಯ, ಸಂಸ್ಥಾನ, ಪಾಳೆಯಪಟ್ಟು ಈ ಕಾಲಕ್ಕೆ ಆಳ್ವಿಕೆ ನಡೆಸಿದಂತಿಲ್ಲ. ಏಕೆಂದರೆ ಮೇಲಿನ ಎರಡು ಪದಗಳ ಪ್ರಯೋಗವು ಭೌಗೋಳಿಕವಾಗಿ ತಿಳಿಸುತ್ತವೆಯೆ ಹೊರತು ಚಾರಿತ್ರಿಕ ಮತ್ತು ಸಾಂಸ್ಕೃತಿಕವಾದ ಒತ್ತನ್ನು ನೀಡುವುದಿಲ್ಲ. ಹಾಗಾಗಿ ಕೆಲವು ವರ್ಷಗಳ ಕಾಲ ಇದು ಬೇರೆ ಬೇರೆ ಆಳರಸರ ಆಳ್ವಿಕೆಯ ತೆಕ್ಕೆಯಲ್ಲಿ ಸಿಲುಕಿರುವ ಲಕ್ಷಣಗಳಿವೆ.

ವಿಜಯನಗರೋತ್ತರ ಕಾಲದಲ್ಲಿ ಜಗಲೂರಿನಲ್ಲಿ ಜಗಪತಿರಾಯ ಎಂಬ ಪಾಳೆಯಗಾರ ಆಳ್ವಿಕೆ ಮಾಡುತ್ತಿದ್ದ. ಆತನ ಕಾಲದಲ್ಲಿ ಇಲ್ಲಿನ ಕೋಟೆ, ಕಂದಕ, ಬುರುಜು, ಬತೇರಿಗಳನ್ನು ನಿರ್ಮಿಸಲಾಯಿತು. ಪಾದಗಟ್ಟೆ ಕೋಟೆ ಚೌಡಮ್ಮ ಜಗಲೂರು ಪಾಪನಾಯಕ ದೇವಾಲಯ, ಪಾದಗಟ್ಟೆ ಕೆರೆ ಇತರ ಸ್ಮಾರಕಗಳನ್ನು ನಿರ್ಮಿಸಲಾಗಿದೆ. ಇಲ್ಲಿರುವ ಆಂಜನೇಯ, ನೀಲಕಂಠೇಶ್ವರ, ಮಾರಮ್ಮ, ವೀರಗಲ್ಲು, ಬುಡೆಕಟ್ಟಲು, ಹೊರಕೆರೆ ಇತರ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ.

ಜಗಲೂರು ಪಟ್ಟಣ ಮತ್ತು ತಾಲೂಕಿನ ವಿವಿಧ ಕಡೆ ಚಾರಿತ್ರಿಕ ನೆಲೆ, ಸ್ಮಾರಕಗಳನ್ನು ಗುರುತಿಸಬಹುದು. ಹಾಗೆಯೇ ಸಾಂಸ್ಕೃತಿಕ ಹೆಗ್ಗುರುತುಗಳನ್ನು ಬೆಳಕಿಗೆ ತರಬೇಕಾಗಿದೆ. ಇಲ್ಲಿನ ಜನಜೀವನದ ವಿಕಾಸವನ್ನು ಆದಿಯಿಂದ ಇಂದಿನವರೆಗೆ ಗುರುತಿಸಲು ಅನೇಕ ಆಧಾರಗಳಿವೆ. ಜಗಲೂರು ತಾಲೂಕಿನ ಸಾಂಸ್ಕೃತಿಕ ಚರಿತ್ರೆ ಗಮನಾರ್ಹವಾದುದು. ಕ್ರಿ.ಶ. ೭೫೪ ರ ಶಾಸನದಲ್ಲಿ ‘ಕಾಳಾಮುಖ ಸ್ಥಾನಂ ನೈಷ್ಠಿಕ ವೇದಿಕ ಮಠಂ’ ಎಂದು ಉಲ್ಲೇಖಿಸಲಾಗಿದೆ. ಅಸಗೋಡಿನ ಶಾಸನದಲ್ಲಿ ಕಲ್ಯಾಣದ ಸಾರ್ವಭೌಮನಾದ ಸೋಮೇಶ್ವರನ ಅಧೀನನಾಗಿ ಪಲ್ಲವರ ನಾರಸಿಂಗದೇವನು ತನ್ನ ಮಗ ಬೋರಯ್ಯನೊಂದಿಗೆ ಉಚ್ಚಂಗಿ ಪ್ರಾಂತ್ಯದ ಮಹಾಮಂಡಲೇಶ್ವರನಾಗಿ ಆಳುತ್ತಿದ್ದನು. ಅಸಗೋಡು ಪರಿಸರದಲ್ಲಿ ಕದಂಬಳಿಗೆ ಸಾವಿರ ನಾಡಿನ ಮನ್ನೇಯನಾಗಿದ್ದ ಸಾಮಂತ ದೊರೆ ನಾಗತಿ ಅರಸ ಧಾರ್ಮಿಕ ಕಾರ್ಯಗಳಿಗೆ ಮತಿಘಟ್ಟ ಗ್ರಾಮದಲ್ಲಿ ದತ್ತಿಬಿಟ್ಟ ವಿಷಯ ತಿಳಿದುಬರುತ್ತದೆ. ಕ್ರಿ.ಶ. ೧೦೮೨ – ೮೭ರಲ್ಲಿ ಬರ್ಮದೇವ ನಾಯಕನು ಸರ್ವೇಶ ಪಂಡಿತರಿಗೆ ಹಾಗೂ ಕಲ್ಲೇಶ್ವರ ದೇವರಿಗೆ ಬಿಟ್ಟ ದತ್ತಿ ಬಗ್ಗೆ ಶಾಸನ ಉಲ್ಲೇಖಿಸುತ್ತದೆ.

ಜಗಲೂರಿನ ೧೨ನೇ ಶಾಸನದಲ್ಲಿ (ಕ್ರಿ.ಶ.೧೧೧೦) ವಿಕ್ರಮಾದಿತ್ಯನ ಅಧೀನನಾಗಿದ್ದ ರಾಜಮಯ್ಯನಾಕನು ಕದಂಬಳಿಗೆ – ಸಾವಿರ. ಕೋಗಳಿ – ೫೦೦ ನಾಡನ್ನು ಆಳುತ್ತಿದ್ದನು. ಇವೆರಡು ಭೂಪ್ರದೇಶಗಳು ಜಗಳೂರಿಗೆ ಸಮೀಪವಾಗಿರುವುದರಿಂದ ಅವರ ಆಳ್ವಿಕೆಯು ತೆಕ್ಕೆಯಲ್ಲಿತ್ತೆಂದು ಹೇಳಬಹುದು. ಅಸಗೋಡಿನ ಬಸವೇಶ್ವರ ದೇವಾಲಯದ ಬಳಿ ಗೋಗ್ರಹಣ ವೀರಗಲ್ಲಿದೆ. ಅಸಗೋಡು ಗೌಡ ಅಸಗ ಕಾಡಚ್ಚನ ಮಗನಾದ ಕಾಡವಾಸನೆಂಬುವನು ಕಿತ್ತೂರು (ಗ್ರಾಮದ) ತುರುಗಾಳಗದಲ್ಲಿ ಹೋರಾಡಿದ ವಿಷಯ ತಿಳಿಸುತ್ತದೆ.

ಹೊಯ್ಸಳರ ಕಾಲಕ್ಕೆ ಜಗಲೂರು ಪ್ರದೇಶದಲ್ಲಿ ನರಸಿಂಹನಾಯಕ ಮತ್ತು ಮಲ್ಲಯ್ಯ ನಾಯಕರು ಬೆಮ್ಮತ್ತನೂರ ಸೀಮೆಯನ್ನು ಆಳುತ್ತಿದ್ದರೆಂದು, ಬೆಮ್ಮತ್ತನೂರ ಸ್ವಯಂಭು ಮಣಲೇಶ್ವರ ದೇವರಿಗೆ ದತ್ತಿ ಬಿಟ್ಟ ದಾನದ ವಿಚಾರ ತಿಳಿಯುವುದು. ಕ್ರಿ.ಶ. ೧೧೭೭ರಲ್ಲಿ ವೀರಬಲ್ಲಾಳ ಉಚ್ಚಂಗಿಯನ್ನು ಉಪರಾಜಧಾನಿಯಾಗಿ ಮಾಡಿಕೊಂಡು ಆಳುತ್ತಿದ್ದ. ಆ ಸಂದರ್ಭದಲ್ಲಿ ಜಗಲೂರು ತಾಲೂಕಿನ ಪಶ್ಚಿಮ ಭಾಗ ಪೂರ್ಣವಾಗಿ ಆತನಿಗೆ ಸೇರಿದ್ದಿತು.

ಬಿಳಚೋಡು ಗ್ರಾಮದ ರಾಮೇಶ್ವರ ದೇವಾಲಯದ ಬಾಗಿಲಿನ ಪೂರ್ವಕಡೆ ನೆಟ್ಟ ಶಾಸನದಲ್ಲಿ ಶ್ರೀಕೃಷ್ಣದೇವರಾಯರ ಆಳ್ವಿಕೆಯಲ್ಲಿ ಸ್ಥಳದ ಭಂಡಾರದ ತಿಮ್ಮಯ್ಯ ಈ ಸಾಮ್ರಾಜ್ಯಕ್ಕೆ ಸಕಲ ಪುಣ್ಯವಾಗಬೇಕೆಂದು ಕಾಟುರ ನಾನ ಅಯ್ಯನವರು ಬಿಳಿಚೆಡ ಮೂಲಸ್ಥಾನದ ರಾಮೆಯ ದೇವರ ವಿನಿಯೋಗಕ್ಕೆ ಈ ಗ್ರಾಮದ ಹಮುದ ರಾಉತ್ತರ ಮಕ್ಕಳು ತಂಮ……… ಮರಕಾಕಟೆಯ……. ಕೋಟೆ ಗ್ರಾಮ ಒಂದನ್ನು ಕೊಟ್ಟು, ದೇವರಿಗೆ ಎರಡು ಹೊತ್ತಿನ ವಿನಿಯೋಗವನ್ನು ತಪ್ಪದೆ ಮಾಡಿಸು ಎಂದು ತಿಳಿಯುತ್ತದೆ.

ಇದೇ ದೇವಾಲಯದ ಕ್ರಿ.ಶ. ೧೫೫೩ರ ಶಾಸನದಲ್ಲಿ ಶ್ರೀಮತು ಬಯೆಪನಾಯಕ ಎಂಬುವನು ಕೃಷ್ಣಪ್ಪನಾಯಕರ ಕಾರ್ಯಕರ್ತರಾದ ದಂಮಪನಾಯಕರು ಬಿಳಿಚೆಡ ಸೀಮೆಯಲಿ ಕುರುಬರು ಬೇಸಾಯ ಮಾಡುವವರಿಗೆ ಕುರಿ ತೆರಿಗೆ ಇಲ್ಲ ಎಂದು ಶಾಸನವನ್ನು ಹಾಕಿಸಲಾಗಿದೆ. ಇದೇ ಸ್ಥಳದ ಪಶ್ಚಿಮ ಕಂಬದಲ್ಲಿನ ಶಾಸನವು ಬಿಳಿಚೆಡ ರಾಮದೇವರಿಗೆ ಬೇಲೂರ ರಾಮಪ್ಪ ನಾಯಕರು ಸ್ಥಾನೀಕ ಮಾದೇವ ದೇವರಿಗೆ ಬಿಟ್ಟ ಬಿರಾಡ ಸರ್ವಮಾನ್ಯ ಎಂದಿದೆ.

ಇದೇ ಕಾಲಮಾನದ ಇದೇ ಸ್ಥಳದ ಪಶ್ಚಿಮ ಕಂಬದಲ್ಲಿನ ಶಾಸನವು ಬಿಳಿಚೆಡ ರಾಮದೇವರಿಗೆ ಬೇಲೂರ ರಾಮಪ್ಪನಾಯಕರು ಸ್ಥಾನೀಕ ಮಾದೇವ ದೇವರಿಗೆ ಬಿಟ್ಟ ಬಿರಾಡ, ಸರ್ವಮಾನ್ಯ ಎಂದಿರುವುದು ಗಮನಾರ್ಹ. ಒಂದನೇ ಬುಕ್ಕರಾಯನ ಗಜ ಸೈನ್ಯಾಧಿಕಾರಿಯಾಗಿದ್ದ ಬಲ್ಲಪ್ಪ ಮತ್ತು ಈತನ ಸೋದರ ಚಿಮ್ಮಣ್ಣ ಎಂಬುವರು ಬೈರ ದೇವರ ಪಾದ ನಿರ್ಮಿಸಿದ್ದು ತಿಳಿದುಬರುತ್ತದೆ.

ವಿಜಯನಗರ ಕಾಲದಲ್ಲಿ ಉಚ್ಚಂಗಿ ವೇಂಟೆ ಎಂಬುದು ಕೊಟ್ಟೂರು ಚಾವಡಿಗೆ ಸೇರಿತ್ತು. ಕೊಟ್ಟೂರು, ಉಚ್ಚಂಗಿ, ಜಗಲೂರು ಪ್ರದೇಶಗಳು ತ್ರಿಕೋನಾಕೃತಿಯಲ್ಲಿದ್ದು ಪರಸ್ಪರ ಒಂದಕ್ಕೊಂದು ಹತ್ತಿರವಿದ್ದವು. ಈ ಕಾಲಘಟ್ಟದಲ್ಲಿ ಕ್ರಿ.ಶ. ೧೪೭೨ರಲ್ಲಿ ಗೌರೀಪುರ ಗ್ರಾಮವನ್ನು ಅಗ್ರಹಾರವಾಗಿ ಬಿಟ್ಟುಕೊಡುವುದನ್ನು ಶಾಸನ ಉಲ್ಲೇಖಿಸಿದೆ. ಕ್ರಿ.ಶ. ೧೫೫೦ರಲ್ಲಿ ಬಿಳಿಚೇಡು ಕೊಟ್ಟೂರು ಚಾವಡಿಯ ಉಚ್ಚಂಗಿವೇಂಟೆಗೆ ಸೇರಿದ್ದು, ಎರ್ರಕೃಷ್ಣನಾಯಕ ಆಳುತ್ತಿದ್ದನು.

ಜಗಲೂರು ಪಕ್ಕದಲ್ಲಿರುವ ಕಣಕುಪ್ಪೆ ಕೋಟೆಯನ್ನು ದುರ್ಗದ ಪಾಳೆಯಗಾರರ ಮಕ್ಕಳಲ್ಲಿ ಒಬ್ಬನಾದ ಕಾಟಾನಾಯ್ಕನು ಆಳುತ್ತಿದ್ದು ಈ ಕಣಕುಪ್ಪೆಯಲ್ಲಿ ಕೋಟೆ, ಪೇಟೆ, ಕೆರೆ, ಹೊಂಡ ಮುಂತಾದವುಗಳನ್ನು ಕಟ್ಟಿಸಿದ.

ಹಳುದಂಡೆ, ಗುತ್ತಿದುರ್ಗ, ಸಿದ್ದವ್ವನಹಳ್ಳಿ, ಬಿಳಿಚೋಡು, ಚದುರಗೋಳ, ಅಸಗೋಡು, ಬಸವನಕೋಟೆ, ಉಜ್ಜಪ್ಪ ಒಡೆಯರಹಳ್ಳಿ, ಮುಚ್ಚನೂರು, ಮೆದಕೇರನಹಳ್ಳಿ, ಮುಸ್ಟೂರು, ಕಲ್ಲೇದೇವರಪುರ ಚಾರಿತ್ರಿಕ ಘಟನೆಗಳನ್ನು ಹೊಂದಿರುವ ಗ್ರಾಮಗಳು.

ಕ್ರಿ.ಶ. ೧೫೨೬ ರಿಂದ ಚಿತ್ರದುರ್ಗ ಪಾಳೆಯಗಾರರ ಅಧೀನದಲ್ಲಿದ್ದ ಪ್ರದೇಶ ‘ಜಗಲೂರು ಸೀಮೆ’ ಎಂದಾಯಿತು.

ಈ ಮೇಲೆ ತಿಳಿಸಿರುವಂತೆ ಕಣಕುಪ್ಪೆಯಲ್ಲಿ ಚಿತ್ರದುರ್ಗದ ಪಾಳೆಯಗಾರರ ಚಿಕ್ಕಣ್ಣನಾಯಕನು ಆಳುತ್ತಿದ್ದಾಗ ಕೊಮಾರಪ್ಪನಾಯಕರಿಗೆ ಸುದ್ದಿ ಬಂದಿತಂತೆ. ಬೇಡರ ಕಳ್ಳರ ಉಪದ್ರವಕ್ಕೆ ಸಂಬಂಧಿಸಿದಂತೆ ನಾಲ್ಕುನೂರ ಜನ ಸೈನಿಕರೊಂದಿಗೆ ಕಳ್ಳರನ್ನು ಸೆದೆಬಡಿದು ಕೆಂಚೇನಹಳ್ಳಿಯನ್ನು ಕೇಂದ್ರವಾಗಿ ಮಾಡಿಕೊಂಡು ಕಣಕುಪ್ಪೆ ಕೋಟೆ ಹೊಂದಿರುವ ಈ ಪ್ರದೇಶಕ್ಕೆ ಕಣ್ವ ಮಹರ್ಷಿಯು ನೆಲಸಿದ್ದ ಸ್ಥಳವೆಂದು ಪ್ರತೀತಿ. ಮೂರು ಸುತ್ತಿನ ಕೋಟೆಯಿರುವ ಈ ಪ್ರದೇಶಕ್ಕೆ ಭರಮಣ್ಣನಾಯಕರಿಗೆ ಪಟ್ಟವಾದಾಗ ಕಾಟನಾಯಕನನ್ನು ಕಣಕುಪ್ಪೆ ಅಧಿಕಾರಿಯನ್ನಾಗಿ ಮಾಡಿದ.

ಚಿತ್ರದುರ್ಗದಲ್ಲಿ ಚಿಕ್ಕ ಭರಮಪ್ಪನಿಗೆ ಪಟ್ಟವಾದಾಗ ೩೦೦೦ ಕಾಲು ಮಂದಿ, ೧೦೦ ಕುದುರೆ ಆನೆ, ನಿಶಾನಿ ನಗಾರಿಯನ್ನು ಕಣಕುಪ್ಪೆಗೆ ಕಳುಹಿಸಲಾಯಿತು. ಹೈದರಾಲಿ ಮುತ್ತಿಗೆ ಹಾಕಿದ ಮೇಲೆ ಸರದಿ ಪ್ರಕಾರ ೩೦೦ ಜನ ಸೈನಿಕರ ಠಾಣೆ ಮಾಡಿದ.

ಚಿತ್ರದುರ್ಗದಲ್ಲಿ ಓಬಣ್ಣನಾಯಕ (ಮದಕರಿನಾಯಕ) ಸಿಂಹಾಸನವೇರಿರುತ್ತಾನೆ. ಕ್ರಿ.ಶ. ೧೬೦೨ರಲ್ಲಿ ಕಸ್ತೂರಿ ರಂಗಪ್ಪನಾಯಕರಿಂದ ಓಬಣ್ಣನಾಯಕ ಪಡೆಯುತ್ತಾನೆ. ಆಗ ಹೊಳಲ್ಕೆರೆ, ಮಾಯಕೊಂಡ, ಸಂತೆಬೆನ್ನೂರು, ಅಣಜಿ, ಜಗಲೂರು ಮತ್ತು ಇತರ ಗ್ರಾಮಗಳು ಅವನ ವ್ಯಾಪ್ತಿಗೆ ಸೇರಿದ್ದವು. ಮತ್ತಿ, ಬಿಳಿಚೋಡು ಕಾಮಗೇತಿ ನಾಯಕ ಅರಸರು ನೀರ್ಥಡಿ, ಮತ್ತಿ, ಚಿತ್ರದುರ್ಗಗಳಲ್ಲಿ ಆಳ್ವಿಕೆ ನಡೆಸುತ್ತಿದ್ದರು. ದಳವಾಯಿ ಮುದ್ದಣ್ಣನ ಉಪಟಳಕ್ಕೆ ಹೆದರಿ ಬಿಚ್ಚುಗತ್ತಿ ಭರಮಣ್ಣನಾಯಕ ಬಿಳಿಚೋಡಿನಲ್ಲಿ ನೆಲೆಸಿದನು. ಕ್ರಿ.ಶ. ೧೬೮೯ರಲ್ಲಿ ಈತನೇ ಪಾಳೆಯಗಾರನಾದ. ಬಿಳಿಚೋಡು ವಂಶ ಕೊನೆಯವರೆಗೂ ಆಳ್ವಿಕೆ ನಡೆಸಿತು. ಚಿಕ್ಕಹನುಮಪ್ಪನಾಯಕ, ಓಬಣ್ಣ ನಾಯಕ, ಕಸ್ತೂರಿ ರಂಗಪನಾಯಕ ಪ್ರಮುಖ ಅರಸರಾಗಿದ್ದರು.

ಚಿಕ್ಕಣ್ಣನಾಯಕ ಹರಪನಹಳ್ಳಿಯವರೊಡನೆ ಅಣಜಿ ಹತ್ತಿರ ಯುದ್ಧ ಮಾಡುತ್ತಾನೆ. ಜಗಳೂರಿಗೆ ಹರ್ರಿರವಿರುವ ಈ ಸ್ಥಳವು ಮಹತ್ವ ಹೊಂದಿದೆ. ಮದಕರಿನಾಯಕ ಕ್ರಿ.ಶ. ೧೭೫೯ – ೬೦ರಲ್ಲಿ ರಾಯದುರ್ಗ, ಹರಪನಹಳ್ಳಿ, ಮತ್ತು ಸವಣೂರಿನವರೊಡನೆ ಹೊಸಕೆರೆ ಹತ್ತಿರ ಕಾಳಗ ಮಾಡುತ್ತಾನೆ. ತರೀಕೆರೆ, ಜರಿಮಲೆ ಪಾಳೆಯಗಾರರು ಇವರ ನೆರೆಹೊರೆಯವರಾಗಿದ್ದರು.

ಚಿತ್ರದುರ್ಗದ ಅರಸ ಹಿರೇಮದಕರಿನಾಯಕನ ದಳವಾಯಿ ಆಗಿದ್ದ ಮುದ್ದಣ್ಣ ಕೊಳ (ಹೊಂಡ)ವನ್ನು ಕೊಣಸಗಲ್ಲು ರಂಗಪ್ಪನ ಗುಡ್ದದ ಕೆಳಭಾಗದಲ್ಲಿ ನಿರ್ಮಿಸುತ್ತಾನೆ. ಗುಡ್ದದ ಮೇಲೆ ರಂಗನಾಥ ದೇವಾಲಯವನ್ನು ಸುಂದರವಾಗಿ ನಿರ್ಮಿಸಲಾಗಿದ್ದು, ಕ್ರಿ.ಶ. ೧೭ನೇ ಶತಮಾನಕ್ಕೆ ಸೇರಿದೆ.

ಅಸಗೋಡು ಸಣ್ಣ ಗ್ರಾಮವಾದರೂ ಪ್ರಾಚೀನ ಚರಿತ್ರೆ ಹೊಂದಿದೆ. ಈ ಪರಿಸರದಲ್ಲಿ ಬೃಹತ್ ಶಿಲಾ ಸಂಸ್ಕೃತಿಯ ನೆಲೆಗಳಿವೆ. ಚಾಲುಕ್ಯರ ಕಾಲದ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಸಿದ್ಧಮ್ಮನಹಳ್ಳಿ ಶಾಸನದಲ್ಲಿ ಕ್ರಿ.ಶ. ೧೬೯೦ರಲ್ಲಿ ಅಣಬೂರು ಸ್ಥಳದ ಒಳಗಣ ಬರುವ ಹನುಮನಾಗ್ತಿಹಳ್ಳಿ, ವೀರಾಪುರ ಗ್ರಾಮಗಳ ಉಲ್ಲೇಖವಿದೆ. ಇದೇ ಕಾಲಕ್ಕೆ ಸೇರಿದ ಗವಿಮಠ ಉಜ್ಜನಿ ಪೀಠಕ್ಕೆ ಸಂಬಂಧಿಸಿದ್ದು ಇಲ್ಲಿನ ಕಣಕುಪ್ಪೆ ಕೋಟೆಯ ಪಶ್ಚಿಮಕ್ಕಿದೆ. ಈಗ ಶ್ರೀ ಷ.ಬ್ರ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಣಕುಪ್ಪೆ ಗವಿಮಠದಲ್ಲಿ ಧಾರ್ಮಿಕ, ಸಾಮಾಜಿಕ ಕಾರ್ಯದಲ್ಲಿ ತೊಡಗಿ ಉತ್ತಮ ಕಾರ್ಯಮಾಡುತ್ತಿದ್ದಾರೆ.

ಕಣಕುಪ್ಪೆ ಕೋಟೆ

ಜಗಲೂರು ತಾಲೂಕಿನ ಇತಿಹಾಸಕ್ಕೆ ಕಿರೀಟಪ್ರಾಯವಾದುದು ಈ ಕಣಕುಪ್ಪೆ ಬೆಟ್ಟ ಮತ್ತು ಕೋಟೆ. ಜಗಳೂರಿನಿಂದ ೬. ಕಿ.ಮೀ. ದೂರದಲ್ಲಿರುವ ಈ ಕೋಟೆಯನ್ನು ದಕ್ಷಿಣಾಭಿಮುಖವಾಗಿ ಹತ್ತುವಾಗ ಕೆಳಗಡೆ ಬಾವಿ, ಕೊಳ, ಕಟ್ಟಡಗಳ ಅವಶೇಷಗಳು ಸಿಗುತ್ತವೆ. ಮೇಲಕ್ಕೆ ಹೋದಂತೆಲ್ಲಾ ಕೋಟೆ ಒಳಗೆ ಪ್ರವೇಶ ಮಾಡುವ ಮುನ್ನ ಎರಡು ದೇವಾಲಯಗಳನ್ನು ನೋಡಬಹುದು. ಇವೆರಡು ಅಕ್ಕ ಪಕ್ಕ ಇದ್ದೂ ಪೂರ್ವಾಭಿಮುಖವಾಗಿವೆ. ಒಂದು ಭಗ್ನಗೊಂಡ ದೇವಾಲಯವು ಬಹುತೇಕ ಶೈವ ಧರ್ಮಕ್ಕೆ ಸೇರಿದೆ. ನವರಂಗ, ಗರ್ಭಗೃಹಗಳನ್ನು ಹೊಂದಿರುವ ಈ ದೇವಾಲಯದಲ್ಲಿ ಮೂರು ವೀರಗಲ್ಲುಗಳಿವೆ. ವಿಶೇಷವೆಂದರೆ ಗರ್ಭಗುಡಿಯಲ್ಲಿರುವ ವೀರಗಲ್ಲು. ವೀರಕುದುರೆ ಮೇಲೆ ಕುಳಿತಿರುವ ದೃಶ್ಯವನ್ನು ಹೊಂದಿದೆ. ಇದನ್ನೇ ದೇವರೆಂದು ಆರಾಧಿಸಲಾಗಿದೆ. ನವರಂಗದಲ್ಲಿ ಮೂರುಜನ ವೀರ ವನಿತೆಯರು ಹೋರಾಟಮಾಡಿ ಸಹಗಮನ ಅನುಸರಿಸಿದ ವೀರಗಲ್ಲಿದೆ. ನಡೆದುಹೋದ ಒಂದು ಘಟನೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಇವೆರಡು ವೀರಗಲ್ಲುಗಳು ಮಹತ್ವ ಪಡೆದಿವೆ. ಇದರ ಪಶ್ಚಿಮಕ್ಕಾ ದೇವಾಲಯವಿದೆ. ನವರಂಗ, ಗರ್ಭಗೃಹ ಹೊಂದಿರುವ ಇದರಲ್ಲಿ ವಿಷ್ಣುವಿನ ಶಿಲ್ಪವಿದೆ. ಈ ಹಿನ್ನೆಲೆಯಲ್ಲಿ ವೈಷ್ಣವ ದೇವಾಲಯ ಇರಬಹುದೆಂದು ಊಹಿಸಲಾಗಿದೆ. ಈಗ ಹಾಳು ದೇವಾಲಯವಾಗಿರುವ ಈ ದೇವಾಲಯದಲ್ಲಿ ವಿಷ್ಣು ತನ್ನ ಕೈಯಲ್ಲಿ ಚಕ್ರ, ಶಂಖ, ಗಧೆಗಳನ್ನು ಹಿಡಿದಿದ್ದಾನೆ. ನವರಂಗದಲ್ಲಿ ಅಂಜನೇಯನ ವಿಗ್ರಹವಿದೆ. ದೇವಾಲಯದ ಮುಂದೆ ಎತ್ತರವಾದ ಕಲ್ಲಿನ ಈ ದೀಪಸ್ಥಂಭವಿದ್ದು, ದೇವಾಲಯ ಪೂರ್ವಾಭಿಮುಖವಾಗಿದೆ. ಮೇಲೆ ಹತ್ತಿಹೋದಂತೆ ದೊಡ್ಡ ಕೊಳ ಕಂಡುಬರುತ್ತದೆ. ೧೫೦ ಅಡಿಗಳಿಗೂ ಹೆಚ್ಚು ಆಳವಿದ್ದು, ನೀರು ಶಾಶ್ವತವಾಗಿ ನಿಂತಿರುತ್ತದೆ. ತಪ್ಪಲು ಪ್ರದೇಶವಾಗಿರುವುದರಿಂದ ಜಲದ ನಿಕ್ಷೇಪಗಳಿವೆ. ಇದನ್ನು ಎಷ್ಟು ವೈಜ್ಞಾನಿಕವಾಗಿ ನಿರ್ಮಿಸಿದ್ದಾರೆಂದರೆ ಕೊಳಕ್ಕೆ ಇಳಿಯಲು ಮೆಟ್ಟಿಲುಗಳನ್ನು ಮಾಡಿದ್ದಾರೆ.

ಕೋಟೆ ಹತ್ತಲು ಪ್ರವೇಶದ್ವಾರವಿದ್ದು, ಪಕ್ಕದಲ್ಲಿ ದಿಡ್ಡಿ ಬಾಗಿಲಿದೆ. ಇದು ಚಿತ್ರದುರ್ಗದ ಕೋಟೆಯನ್ನು ನೆನಪಿಸುತ್ತದೆ. ಅಗಲವಾದ ಪ್ರಾಂಗಣ ಕುಸಿದು ಬಿದ್ದ ಕಲ್ಲಿನ ಮನೆಗಳು ಸೈನಿಕರವೋ, ಅರಮನೆಯೋ, ಜನಪ್ರತಿನಿಧಿಗಳು ವಾಸಿಸುತ್ತಿದ್ದರೋ ಏನೋ ಅವೆಲ್ಲವುಗಳ ನಡುವೆ ಲಂಟನ್ ಮೊದಲಾದ ಗಿಡಗಳು ಬೆಳೆದು ಓಡಾಡಲು ದುಸ್ತರವಾಗಿದೆ.

ಹೈದರಾಲಿ, ಟಿಪ್ಪುಸುಲ್ತಾನರು ಈ ಪ್ರದೇಶದ ಮೇಲೆ ದಂಡೆತ್ತಿ ಬಂದಿದ್ದರು. ಕಣಕುಪ್ಪೆ ಕೋಟೆಗೆ ಮುತ್ತಿಗೆ ಹಾಕಿ ೧೧ ದಿನ ಯುದ್ಧವಾಗಿ ಒಪ್ಪಂದ ನಡೆಯಿತು. ಕೋಟೆಯ ಮೇಲಿನ ಫಿರಂಗಿ ಹಾಗೂ ಕಬ್ಬಿಣ ವಸ್ತುಗಳನ್ನು ಶ್ರೀರಂಗಪಟ್ಟಣಕ್ಕೆ ಸಾಗಿಸಿದನು. ಕ್ರಿ.ಶ. ೧೭೯೯ರಲ್ಲಿ ಮೈಸೂರು ಸಂಸ್ಥಾನದಲ್ಲಿ ಒಡೆಯರ ಆಳ್ವಿಕೆಗೆ ಜಗಲೂರು ಪ್ರದೇಶ ಸೇರಿತ್ತು. ೧೮೩೦ರ ಪೌಜುದಾರಿಕೆಗೆ ಸೇರಿತ್ತು. ಕ್ರಿ.ಶ. ೧೯೧೫ರಲ್ಲಿ ನಾಲ್ಮಡಿ ಕೃಷ್ಣರಾಜ ಒಡೆಯರ್ ಚಿತ್ರದುರ್ಗ ರಸ್ತೆಯ ದೊಣೆಹಳ್ಳಿ ಹತ್ತಿರ ಜನಗಿಹಳ್ಳಕ್ಕೆ ದೊಡ್ಡ ಸೇತುವೆಯನ್ನು ನಿರ್ಮಿಸಿದ್ದರು. ಈಗಲೂ ಅಲ್ಲಿರುವ ಶಿಲಾನ್ಯಾಸದ ಕಲ್ಲಿನಿಂದ ಗೊತ್ತಾಗುತ್ತದೆ.

ಜಗಲೂರು ತಾಲೂಕಿನ ಆಧುನಿಕ ಚರಿತ್ರೆ ಬಹು ಮಹತ್ವವಾದುದು. ಬಿಳಿಚೋಡಿನ ಅಂಚೆ ಭೀಮಪ್ಪನಾಯಕರು ವಕೀಲರಾಗಿ, ಶಾಸಕರಾಗಿ, ಸಚಿವರಾಗಿ ದೊಡ್ಡ ಹೆಸರು ಮಾಡಿದವರು. ಹಾಗೆಯೇ ಜಗಲೂರಿನ ಗಾಂಧಿ ಎಂದು ಹೆಸರಾದ ಇಮಾಂಸಾಬರು ಶಾಸಕರಾಗಿ, ಸಚಿವರಾಗಿ ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಮಾಡಿದ ಸೇವೆ ಶ್ಲಾಘನೀಯ. ಅನಂತರ ಜಿ.ಎಚ್. ಅಶ್ವತ್ಥರೆಡ್ಡಿ, ಎಂ.ಬಸಪ್ಪ, ಟಿ. ಗುರುಸಿದ್ದನಗೌಡ ಶಾಸಕರಾಗಿ ಮಹತ್ವದ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಜಗಲೂರು ಇಂದು ಪಟ್ಟಣ ಪಂಚಾಯಿತಿಯ ಮೀಸಲು ಕ್ಷೇತ್ರವನ್ನಾಗಿ ಮಾಡಿದ್ದರಿಂದ ಸಧ್ಯ ಎಸ್.ವಿ. ರಾಮಚಂದ್ರ ಶಾಸಕರಾಗಿ ಆಯ್ಕೆ ಆಗಿ ಕಾರ್ಯ ನಿರ್ವಹಿಸುತ್ತಿರುವರು.

ಒಟ್ಟಾರೆ ಹೇಳುವುದಾದರೆ, ಜಗಲೂರು ತಾಲೂಕಿನ ಚರಿತ್ರೆ ಅಮೋಘವಾದುದು. ಸ್ಥಳೀಯ ಚರಿತ್ರೆಯ ಮೂಲಕ ಇಂತಹ ಅನೇಕ ಸಂಗತಿಗಳನ್ನು ಬೆಳಕಿಗೆ ತರುವ ಔಚಿತ್ಯವಿದೆ.

ಆಧಾರ ಗ್ರಂಥಗಳು

  • ಗಿರಿಜಾ ಟಿ. ೧೯೯೧, ಚಿತ್ರದುರ್ಗ ಜಿಲ್ಲಾ ದರ್ಶಿನಿ, ರೇಖಾ ಪ್ರಕಾಶನ, ದಾವಣಗೆರೆ
  • ಗಿರಿಜಾ ಟಿ., ೨೦೦೧, ದಾವಣಗೆರೆ ಜಿಲ್ಲಾ ದರ್ಶಿನಿ, ನಿಹಾರಿಕಾ ಪ್ರಕಾಶನ, ದಾವಣಗೆರೆ
  • ವಿರೂಪಾಕ್ಷಿ ಪೂಜಾರಹಳ್ಳಿ, ೨೦೦೨, ಚಿತ್ರದುರ್ಗ ಜಿಲ್ಲೆಯ ಬುಡಕಟ್ಟುವೀರರು, ಕನ್ನಡ ವಿಶ್ವವಿದ್ಯಾಲಯ, ಹಂಪಿ
  • ಸತ್ಯನ್ ಬಿ.ಎಸ್. (ಸಂ): ಚಿತ್ರದುರ್ಗ ಡಿಸ್ಟ್ರಿಕ್ಟ್ ಗ್ಯಾಸೆಟಿಯರ್, ಬೆಂಗಳೂರು ಕ್ಷೇತ್ರಕಾರ್ಯ : ೨೭.೦೨.೦೯