ದೇಶದ ಸಾಂಸ್ಕೃತಿಕ ಇತಿಹಾಸ ರಚನೆಯಲ್ಲಿ ಗ್ರಾಮಗಳ ಪಾತ್ರ ಬಹುದೊಡ್ಡದು. ವಿಶೇಷ ಘಟನಾತ್ಮಕ ಹಿನ್ನೆಲೆಯಲ್ಲಿ ರಚನೆಗೊಂಡ ಪ್ರತಿ ಗ್ರಾಮವು ಇತಿಹಾಸ ರಚನೆಯಲ್ಲಿ ಪಾತ್ರಗೊಳ್ಳುತ್ತದೆ. ಈ ಕಾರಣದಿಂದ ಗ್ರಾಮನಾಮಗಳ ಅಧ್ಯಯನ ಬಹು ಅವಶ್ಯಕವಾಗಿದೆ. ದೇಶ, ಧರ್ಮ, ಭಾಷೆ, ಬಣ್ಣಗಳು ಯಾವುದೇ ಇರಲಿ ಅಪರಿಚಿತ ಇಲ್ಲವೇ ಆಗಂತುಕರ ನಡುವೆ ಮಾತುಕತೆ ಪ್ರಾರಂಭವಾಗುವ ಒಂದು ಸರಳ ಹಾಗೂ ಸಾಮಾನ್ಯ ಪ್ರಶ್ನೆಯಿಂದ. ಅದೆಂದರೆ ನಿಮ್ಮ ಹೆಸರೇನು? ಎಂಬ ಪ್ರಶ್ನೆ ಆ ಪ್ರಶ್ನೆಗೆ ಉತ್ತರ ದೊರಕಿದ ಕೂಡಲೇ ಮೊದಲನೆಯ ಪ್ರಶ್ನೆಯ ಅವಿಭಾಜ್ಯ ಅಂಗವೊ, ಮುಂದುವರೆದ ಭಾಗ್ಯವೋ ಎಂಬಂತೆ ಕೇಳಿ ಬರುವ ಮರು ಪ್ರಶ್ನೆ ಎಂದರೆ ನಿಮ್ಮ ಊರು ಯಾವುದು? ಪರಸ್ಪರರ ನಡುವೆ ಈ ಪ್ರಶ್ನೆಗಳಿಗೆ ಉತ್ತರ ದೊರಕಿದ ನಂತರವೇ ಉಳಿದೆಲ್ಲ ಸಾಮಾಜಿಕ ವ್ಯವಹಾರಗಳು ಪ್ರಾರಂಭಗೊಳ್ಳುತ್ತವೆ. ಅಂದರೆ ವ್ಯಕ್ತಿಯ ಹೆಸರು ಮತ್ತು ನೆಲೆನಿಂತ ಊರು ಇವುಗಳು ಮುಂದಿನ ವ್ಯವಹಾರಗಳಿಗೆ ಅಡಿಪಾಯವಾಗುತ್ತವೆ. ಮುಂದೊಂದು ದಿನ ಈ ಎರಡು ಸಾಮಾನ್ಯ ಪ್ರಶ್ನೆಗಳಿಂದ ಪ್ರಾರಂಭವಾದ ಸಾಮಾಜಿಕ ಸಂಬಂಧ ಗಾಢವಾಗಿ ಬೆಳೆಯುತ್ತದೆ. ಆದುದರಿಂದ ವ್ಯಕ್ತಿನಾಮಗಳು ಮತ್ತು ಸ್ಥಳನಾಮಗಳು ಮಾನವನ ಜೀವನದ ವಿಕಾಸದಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ.

ಸ್ಥಳ ಎಂದಾಗ ಅಲೆದಾಟದ ಹಂಗಿನಿಂದ ಹೊರಬಂದು ಒಂದೆಡೆ ನೆಲೆಯಾಗುವ ಒಂದು ಚಿಂತನೆ ಎನಿಸುತ್ತದೆ. ಅಲೆಮಾರಿ ಜೀವನದಿಂದ ಆರಂಭವಾದ ಆದಿಮಾನವರ ಬದುಕು ಕ್ರಮೇಣ ಒಂದೆಡೆ ನೆಲೆ ನಿಲ್ಲುವಂತಾಯಿತು. ಅಲೆಮಾರಿಗಳು ಸಂಘ ಜೀವಿಗಳಾಗಿ ಜೀವನ ಪ್ರಾರಂಭಿಸಿದಂದಿನಿಂದ ಅವರಲ್ಲಿ ಒಂದು ಸ್ಥಳದ ಪರಿಕಲ್ಪನೆ ಮಾಡಲು ಆರಂಭಿಸಿತು. ಅಲೆಮಾರಿ ಸಮುದಾಯಗಳು ಭೌಗೋಳಿಕ ಪರಿಸರಕದ ಗವಿ, ಬಂಡೆಗಲ್ಲಾಸರೆ, ಬೆಟ್ಟದ ಅಂಚಿನಲ್ಲಿ ತಂಗುತ್ತಿದ್ದರು. ತರುವಾಯು ನಾಗರಿಕರಾದರು. ಕೆಲವು ಹಂತಗಳಲ್ಲಿ ಅಲೆಮಾರಿತನವನ್ನು ತೊರೆದು ಒಂದೆಡೆ ನೆಲೆಸಲು ಆರಂಭಿಸಿದರು. ಈ ನೆಲೆಸುವಿಕೆಯು ಪ್ರಾಥಮಿಕವಾಗಿ ಒಂದೊಂದು ತಂಡದ ಮಾದರಿಯಲ್ಲಿರುತ್ತಿತ್ತು. ಮುಂದೆ ಕೆಲವಾರು ಗುಂಪುಗಳು ಒಟ್ಟಿಗೆ ಬದುಕುವುದನ್ನು ಆರಂಭಿಸಿದವು. ಈ ಹಂತವನ್ನು ಸಮುದಾಯಗಳು ನೆಲೆಸುವಿಕೆಯ ಗ್ರಾಮ ಕಲ್ಪನೆಯ ಪೂರ್ವ ಸ್ಥಿತಿಯೆಂದು ತಿಳಿಯಬಹುದು. ಆದಿಮಾನವ ಮೂಲತಃ ಸಂಚಾರಿಯಾಗಿದ್ದು ಪಶುಪಾಲನೆಯನ್ನು ಕೈಗೊಂಡ ಮೇಲೆ ಅಥವಾ ಆ ಸುಮಾರಿನ ಕಾಲದಲ್ಲಿ ತಾತ್ವಿಕವಾಗಿ ಒಂದೊಂದು ಎಡೆಯಲ್ಲಿ, ಅನುಕೂಲಕರ ಸ್ಥಳವನ್ನು ಅರಸುತ್ತಾ ನಿಂತಾಗ ಹುಟ್ಟಿಕೊಂಡ ಇಂಥ ‘ಹಟ್ಟಿ’ಗಳು ಸ್ಥಳನಾಮಗಳಲ್ಲೆಲ್ಲ ಅತ್ಯಂತ ಪ್ರಾಚೀನ ಘಟಕ ಎಂದು ಶಂಬಾಜೋಶಿಯವರು ಹೇಳಿದ್ದಾರೆ.[1] ಮಾನವಶಾಸ್ತ್ರದ ಪ್ರಕಾರ ಈ ಸಿದ್ಧಾಂತವನ್ನು ಒಪ್ಪಬಹುದಾಗಿದೆ. ಒಂದು ಕಡೆ ನೆಲೆ ನಿಲ್ಲುವ, ಭದ್ರವಾಗಿ ಬೇರೂರುವ (ಊರು), ವ್ಯವಸಾಯದೊಂದಿಗೆ (ಗದ್ದೆ, ಕ್ಷೇತ್ರ, ಹೊಳೆ, ಏರಿ, ಕೆರೆ, ಕಟ್ಟೆ) ಆಸರೆ ನಿರ್ಮಿಸಿಕೊಳ್ಳುತ್ತಾ, ಮಾನವ ನಾಗರೀಕನಾಗಿ (ಮನೆ, ಹಳ್ಳಿ, ಗ್ರಾಮ, ಪೇಟೆ, ನಗರ) ಹಲವಾರು ಜೀವನ ವಿಕಾಸದ ಚಾರಿತ್ರಿಕ ಅವಸ್ಥೆಗಳನ್ನು ದಾಟಿಕೊಂಡ ಈ ವೃತ್ತಾಂತ ಸ್ಥಳನಾಮಗಳಲ್ಲಿ ಹರಳುಗಟ್ಟಿದೆ. ಸ್ಥಳನಾಮದ ಚರಿತ್ರೆಯೆಂದರೆ ಮಾನವ ಜೀವನಕ್ಕೆ ಯೋಗ್ಯವಾದ ಪರಿಸರವನ್ನು ಐಹಿಕ ಜೀವನದ ಸುಖ ಸಂತೃಪ್ತಿಗೆ ಸಾಧನವಾಗಬಲ್ಲ ಸನ್ನಿವೇಶವನ್ನು ಹುಡುಕುತ್ತಾ ಬಂದು ಅಂಥ ಕಡೆ ವಲಸೆ ಹೋಗಿ ನೆಲೆಸಿದ ಮಾನವ ಜನಾಂಗದ ಲಿಖಿತ ಇತಿಹಾಸವೇ ಆಗಿದೆ.

ಮಾನವ ಪ್ರಾರಂಭಿಕ ಹಂತದಿಂದಲೂ ಪ್ರಕೃತಿಯನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದನು. ಅವನು ನೆಲೆಸಿದ್ದ ಸ್ಥಳಗಳ ಹೆಸರುಗಳು ಸಾಮಾನ್ಯವಾಗಿ ಪ್ರಕೃತಿಗೆ ಸಂಬಂಧಪಟ್ಟವಾಗಿದ್ದವು. ಆದುದರಿಂದ ಗ್ರಾಮ ಸಮುದಾಯಗಳು ಆರಂಭದಲ್ಲಿ ನಿಸರ್ಗವಾಚಿಯೊಂದಿಗೆ ಹೆಸರುಗಳನ್ನು ಕರೆದುಕೊಂಡು ಕ್ರಮೇಣ ಜನಾಂಗವಾಚಿ – ವ್ಯಕ್ತಿವಾಚಿಗೆ ಮುಂದಾದವು. ಈ ಮೂರು ಕಾಲಘಟ್ಟದಲ್ಲಿ ಒಂದು ಸ್ಥಳಕ್ಕೆ ಹೆಸರಿಡುವ ಕ್ರಮದಲ್ಲಿ ಅನೇಕ ಬಗೆಯ ಬದಲಾವಣೆಗಳಾದವು. ಈ ಬದಲಾವಣೆಯ ನಡುವಿನ ಅಂತರದಲ್ಲಿ ಸಂಸ್ಕೃತಿಗಳ ಸಮುದಾಯಗಳ ವಿಕಾಸದ ಹಾದಿಯನ್ನು ಕಂಡುಕೊಳ್ಳಬಹುದು. ಒಂದೊಂದು ಗ್ರಾಮವು ಒಂದೊಂದು ಸಂಸ್ಕೃತಿಯನ್ನು ತನ್ನಲ್ಲಿ ಅಡಗಿಸಿಕೊಂಡಿರುತ್ತದೆ. ಅಂತೆಯೇ ಆ ಗ್ರಾಮಗಳಿಗೆ ಇರುವ ಹೆಸರು ಆ ಸಂಸ್ಕೃತಿಯ ಅರಿಯುವಿಕೆಯ ಮೂಲಧಾತುವೂ ಹೌದು. ಒಂದು ಗ್ರಾಮ ಸಮಾಜದ ಒಟ್ಟು ಸಂಸ್ಕೃತಿಯನ್ನು ಒಂದು ರೂಪರೇಶೆಯ ಮಾದರಿಯಲ್ಲಿ ‘ಹೆಸರುಗಳು’ ಒಳಗು ಮಾಡಿಕೊಂಡು ಪ್ರತಿನಿಧಿಸುತ್ತಿರುತ್ತವೆ. ಈ ಕಾರಣದಿಂದ ಸಂಸ್ಕೃತಿಯ ಅಧ್ಯಯನಗಳಲ್ಲಿ ಸ್ಥಳನಾಮಗಳು ಮಹತ್ವದ ಪಾತ್ರವಹಿಸುತ್ತವೆ.

ಪ್ರತಿಯೊಂದು ವಸ್ತುವಿಗೂ ಹೆಸರಿರುತ್ತದೆ. ಹೆಸರು ಆ ವಸ್ತುವಿನ ಗುಣ ಸ್ವರೂಪವನ್ನು ಪ್ರತಿನಿಧಿಸುತ್ತದೆ. ಇಂಥದೇ ಇನ್ನೊಂದು ವಸ್ತುವಿಗಿಂತ ಹೇಗೆ ಭಿನ್ನ ಎಂಬುದನ್ನು ಈ ಹೆಸರು ವ್ಯಕ್ತಪಡಿಸುತ್ತದೆ. ಎಷ್ಟೆಷ್ಟು ಈ ಗುರುತಿಸುವ ಕೆಲಸವನ್ನು ಈ ಹೆಸರು ಪರಿಪೂರ್ಣವಾಗಿ ಪರಿಣಾಮಕಾರಿಯಾಗಿ ನಿರ್ವಹಿಸಬಲ್ಲದೋ ಅಷ್ಟಷ್ಟು ಆ ಹೆಸರು ಸುಂದರ, ಸಾರ್ಥಕ. ಈ ಗುರುತಿನ ಕೆಲಸದ ಸಾರ್ಥಕತೆಯೇ ಈ ಹೆಸರುಗಳ ಜೀವಂತಿಕೆ ಮತ್ತು ನಿರಂತರತೆಗೆ ಕಾರಣೀಭೂತವಾಗಿದೆ.[2] ವ್ಯಕ್ತಿಗಳು ಇಂದು ಇದ್ದು ನಾಳೆ ಇಲ್ಲದೆ ಹೋಗಬಹುದು. ಆದರೆ ಒಂದು ನಿರ್ದಿಷ್ಟ ಸ್ಥಳ ಬಹುಮಟ್ಟಿಗೆ ತನ್ನ ಭೂವೈಶಿಷ್ಟ್ಯಗಳನ್ನು ಕಳೆದುಕೊಳ್ಳದೆ ಸಹಸ್ರಾರು ವರ್ಷ ಹಾಗೆಯೇ ಉಳಿಯುತ್ತದೆ. ಆದ್ದರಿಂದ ಸ್ಥಳಗಳಿಗೆ ಹೆಸರಿಡುವುದು ಅತ್ಯಾವಶ್ಯಕವಾಗಿ ತೋರಿತು.

ಸಾವಿರಾರು ಪುಟಗಳ್ಳುಳ್ಳ ದೊಡ್ಡ ಗಾತ್ರದ ಗ್ರಂಥದ ಸಾರ ಅದರ ಹತ್ತಾರು ಅಕ್ಷರಗಳ ಶಿರೋನಾಮೆಯಲ್ಲಿ ಅಡಗಿರುವ ಒಂದು ಗ್ರಾಮದ ವಿಶೇಷತೆಯನ್ನು ಗ್ರಾಮಕ್ಕೊಂದು ಹೆಸರಿಡುವುದರ ಮೂಲಕ ಆ ವಿಶೇಷತೆಯನ್ನು ಕಾಣಬಹುದು. ಜಗಲೂರು ತಾಲೂಕಿನ ಸ್ಥಳನಾಮಗಳನ್ನು ಗಮನಿಸಿದಾಗ ಅವುಗಳ ಮೇಲೆ ಪ್ರಾಕೃತಿಕ ಹಾಗೂ ಭೌಗೋಳಿಕ ಅಂಶಗಳ ಪ್ರಭಾವವಾಗಿರುವುದನ್ನು ಕಾಣಬಹುದು. ಹಾಗೆಯೇ ಆ ಪ್ರದೇಶದ ಆರ್ಥಿಕ ಸ್ಥಿತಿಗತಿಯನ್ನು ಅಲ್ಲಿಯ ಸಿರಿ – ಸಂಪತ್ತು, ಜನಾಂಗ, ಧರ್ಮ, ಭೂಸ್ಥಿತಿ, ಭಾಷೆ, ರಾಜಕೀಯ ಪರಿಸ್ಥಿತಿ ಮೊದಲಾದ ಹಿನ್ನೆಲೆಯನ್ನು ಸ್ಥಳನಾಮಗಳ ಅಧ್ಯಯನದ ಮೂಲಕ ತಿಳಿಯಬಹುದು.

ಅಲೆಮಾರಿ ಜೀವನದಿಂದ ಆರಂಭವಾದ ಮಾನವರ ಬದುಕು ಕ್ರಮೇಣ ಒಂದೆಡೆ ನೆಲೆ ನಿಲ್ಲುವಂತಾಯಿತು. ಈ ನೆಲೆಸುವಿಕೆಯು ಪ್ರಾಥಮಿಕವಾಗಿ ಒಂದೊಂದು ಗುಂಪಿನ ಮಾದರಿಯಲ್ಲಿತ್ತು. ಮುಂದೆ ಕೆಲವಾರು ಗುಂಪುಗಳು ಒಟ್ಟಿಗೆ ಬದುಕುವುದನ್ನು ಆರಂಭಿಸಿದವು. ಈ ಹಂತವನ್ನು ಸಮುದಾಯಗಳು ನೆಲೆಸುವಿಕೆಯ ಗ್ರಾಮ ಕಲ್ಪನೆಯ ಪೂರ್ವ ಸ್ಥಿತಿಯೆಂದು ತಿಳಿಯಬಹುದು. ಅದರಂತೆ ಆಯಾ ಭೌಗೋಳಿಕ ಪರಿಸರದಲ್ಲಿ ವಾಸಿಸುವ ಗುಂಪುಗಳ ನೆಲೆಗಳು ಆರಂಭವಾದವು. ಈ ನೆಲೆಗಳಿಗೆ ಗುರುತು ಹೇಳುವ ಸಲುವಾಗಿ ಒಂದು ಹೆಸರನ್ನು ನೀಡಿದನು. ಹೀಗೆ ಮಾನವನು ಪ್ರಾರಂಭದಲ್ಲಿ ಒಂದು ಹೆಸರನ್ನು ನೀಡಿ ಪ್ರಕೃತಿಯನ್ನು ಅವಲಂಭಿಸಿ ಜೀವನ ಸಾಗಿಸುತ್ತಿದ್ದನು. ಕಾಲಾನಂತರದಲ್ಲಿ ಅಲ್ಲಿನ ಜನರು ಶತ್ರುಗಳ ಕಾಟ, ನೀರು ಹಾಗೂ ಆಹಾರದ ಕೊರತೆ, ಪ್ರಕೃತಿ ವಿಕೋಪ, ರೋಗರುಜಿನಗಳ ತೊಂದರೆ, ಭೀಕರ ಕ್ಷಾಮ ಮೊದಲಾದ ಕಾರಣಗಳಿಂದ ತಾವು ನೆಲೆಸಿದ್ದ ತಾಣಗಳನ್ನು ಬಿಟ್ಟು ಬೇರೆಡೆ ನೆಲೆಸಿ ಹೊಸ ಗ್ರಾಮಗಳನ್ನು ಸ್ಥಾಪಿಸಿಕೊಂಡರು. ಆದರೆ ಹಿಂದೆ ನಿರ್ಮಿಸಿಕೊಂಡಿದ್ದ ಗ್ರಾಮಗಳ ಕುರುಹು ಹಾಗೂ ಹೆಸರುಗಳು ಹಾಗೆಯೇ ಉಳಿದವು. ಇವುಗಳನ್ನು ಕ್ಷೇತ್ರಕಾರ್ಯುದ ಮೂಲಕ ಗಮನಿಸಬಹುದು.

ಜಗಲೂರು ತಾಲೂಕಿನಲ್ಲಿ ಒಟ್ಟು ೧೭೧ ಗ್ರಾಮಗಳಿವೆ. ಅವುಗಳನ್ನು ಜಗಲೂರು (ಕಸಬಾ), ಬಿಳಿಚೋಡು, ಸೊಕ್ಕೆ ಎಂದು ಮೂರು ಹೋಬಳಿಗಳಲ್ಲಿ ವಿಂಗಡಿಸಲಾಗಿದೆ.[3] ಈ ಗ್ರಾಮಗಳನ್ನು ಪ್ರಾದೇಶಿಕವಾಗಿ ಗಮನಿಸಿದಾಗ ಕೆಲವು ಸ್ಥಳನಾಮಗಳಲ್ಲಿ ಯಾವುದೇ ರೀತಿಯ ಜನಾಂಗ, ಪ್ರಾಣಿಗಳು ವಾಸವಾಗಿರುವುದು ಗಮನಕ್ಕೆ ಬರುವುದಿಲ್ಲ. ಆದರೆ ಆ ಪ್ರದೇಶದ ಹಿಂದೆ ಮಾನವನು ಜೀವನ ನಡೆಸಿರುವುದಕ್ಕೆ ಕೆಲವು ಕುರುಹುಗಳು, ಶಾಸನ ಉಲ್ಲೇಖಗಳು ದೊರೆಯುತ್ತವೆ. ಆದುದರಿಂದ ಜಗಲೂರು ತಾಲೂಕಿನ ಎಲ್ಲಾ ಗ್ರಾಮಗಳದ್ದು ಎರಡು ರೀತಿಯಲ್ಲಿ ನೋಡಬಹುದು. ೧. ಬೇಚರಾಕ್ ಗ್ರಾಮಗಳು, ೨. ಜನವಸತಿ ಗ್ರಾಮಗಳು.

. ಬೇಚರಾಕ್ ಗ್ರಾಮಗಳು

ಜನರು ವಾಸಮಾಡದೇ ಇರುವ ಗ್ರಾಮಗಳನ್ನು ಬೇಚರಾಕ್ ಗ್ರಾಮಗಳೆನ್ನುವರು. ಅವು ಹಿಂದೊಮ್ಮೆ ಜನನಿಬಿಡ ತಾಣಗಳಾಗಿದ್ದು. ಕಾಲಾನಂತರದಲ್ಲಿ ಅಲ್ಲಿನ ಜನರು ಶತ್ರುಗಳ ಕಾಟ ನೀರು ಅಥವಾ ಆಹಾರ ಕೊರತೆ, ಪ್ರಕೃತಿ ವಿಕೋಪ ಮುಂತಾದ ಕಾರಣಗಳಿಂದಾಗಿ ಬೇರೆಡೆಗೆ ಹೋಗಿ ನೆಲೆಸಿದ್ದರಿಂದ ನಿರ್ವಸತಿ ತಾಣಗಳಾಗಿದ್ದವು. ಆದರೆ ಸರ್ಕಾರಿ ದಾಖಲೆಗಳಲ್ಲಿ ಇಂದಿಗೂ ಆ ಗ್ರಾಮಗಳು ಉಲ್ಲೇಖಗೊಂಡಿವೆ. ಅವುಗಳ ಗ್ರಾಮ ಠಾಣ ಹಾಗೂ ಭೂ ವಿವರಗಳು ಗಡಿಭಾಗಗಳು ಅದೇ ಹೆಸರಿನಲ್ಲಿವೆ. ಜಗಲೂರು ತಾಲೂಕಿನಲ್ಲಿ ಒಟ್ಟು ಮುವತ್ತಾರಕ್ಕೂ ಹೆಚ್ಚು ಬೇಚರಾಕ್ ಗ್ರಾಮಗಳನ್ನು ಕಾಣಬಹುದು. ಉದಾ: ಜಯರಾಮನಹಳ್ಳಿ, ಯರಮಲ್ಲನಹಳ್ಳಿ.

. ಜನವಸತಿ ಗ್ರಾಮಗಳು

ಜನರು ವಿಂದು ವಾಸಿಸುತ್ತಿರುವ ತಾಣಗಳೇ ವಸತಿ ಗ್ರಾಮಗಳಾಗಿವೆ. ಈ ಗ್ರಾಮಗಳ ಅಸ್ತಿತ್ವ, ಹೆಸರಿನ ರಹಸ್ಯ, ಭೌಗೋಳಿಕ ಹಿನ್ನೆಲೆ ಸ್ಥಿತಿಗತಿ, ಸವಲತ್ತುಗಳು ಅಲ್ಲಿನ ಗ್ರಾಮ ನಿವಾಸಿಗಳು, ಗ್ರಾಮದೇವತೆಗಳು, ಅವರ ಆಚರಣೆ, ಜೀವನದ ವಿಧಿವಿಧಾನಗಳು ಇತ್ಯಾದಿ ಹಲವು ಅಂಶಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಜಗಲೂರು ತಾಲೂಕಿನಲ್ಲಿ ಒಟ್ಟು ೧೩೫ ಜನವಸತಿ ಗ್ರಾಮಗಳಿವೆ. ಉದಾ: ಅಣಬೂರು, ಜಗಲೂರು, ಹನುಮವ್ವನಾಗತಿಹಳ್ಳಿ ಇತ್ಯಾದಿ.

ಜಗಲೂರು ತಾಲೂಕಿನ ಸ್ಥಳನಾಮಗಳು ಸಾಮಾನ್ಯವಾಗಿ ಭೌಗೋಳಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಭಾಷಿಕ ಹಿನ್ನೆಲೆಯಲ್ಲಿ ನಿಷ್ಪತ್ತಿಗೊಂಡಿವೆ. ಜಗಲೂರು ತಾಲೂಕು ಬಯಲು ಸೀಮೆಯಾಗಿದ್ದು ಇಲ್ಲಿ ಬೆಟ್ಟಗುಡ್ಡ, ನದಿ ಪರ್ವತ ಹಾಗೂ ಅರಣ್ಯ ಪ್ರದೇಶವು ತುಂಬ ಕಡಿಮೆ ಪ್ರಮಾಣದಲ್ಲಿದ್ದು. ಭೌಗೋಳಿಕವಾಗಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಒಣಭೂಮಿ ಅಧಿಕವಾಗಿ ಕಂಡುಬರುತ್ತದೆ. ಆದ್ದರಿಂದ ಇಲ್ಲಿ ನಿಸರ್ಗ ದತ್ತವಾದ ಜಲವಾಚಿ ಸ್ಥಳನಾಮಗಳು ಅಧಿಕ ಸಂಖ್ಯೆಯಲ್ಲಿ ದೊರೆಯದೆ ನಿರ್ಮಾಣವಾಚಿ ಜಲವಾಚಕ ಸ್ಥಳನಾಮಗಳು ಕಂಡುಬರುತ್ತವೆ. ಚಾರಿತ್ರಿಕವಾಗಿ ಜಗಲೂರು ಪಾಳೇಗಾರ ಆಡಳಿತಕ್ಕೆ ಒಳಪಟ್ಟ ಪ್ರದೇಶವಾದ್ದರಿಂದ ಸಾಮಾನ್ಯವಾಗಿ ಪಾಳೇಗಾರ ಹಾಗೂ ಸಾಮಂತರ ರಾಜರ ಹೆಸರುಗಳು ಇಲ್ಲಿನ ಸ್ಥಳನಾಮಗಳಲ್ಲಿ ಕಂಡುಬರುತ್ತವೆ. ಸಾಂಸ್ಕೃತಿಕವಾಗಿ ದೈವವಾಚಕ, ಜಾತಿವಾಚಕ, ವ್ಯಕ್ತಿವಾಚಕ, ಪ್ರಾಣಿಪಕ್ಷಿವಾಚಕ ಸ್ಥಳನಾಮಗಳು ಕಂಡುಬರುತ್ತವೆ. ಭಾಷಿಕವಾಗಿ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿದ ಸ್ಥಳನಾಮಗಳು ಕಂಡುಬರುತ್ತವೆ.

ಜಗಲೂರು ತಾಲೂಕಿನ ಸ್ಥಳನಾಮಗಳಲ್ಲಿ ಪ್ರತ್ಯೇಕವಾಗಿ ವ್ಯಕ್ತಿನಾಮಗಳತ್ತ ಗಮನಹರಿಸಿದಾಗ ಚಿತ್ರದುರ್ಗ ಪಾಳೇಗಾರ ಹಾಗೂ ಸಾಮಂತ ನಾಯಕರ ಹೆಸರಿನ ಸ್ಥಳನಾಮಗಳಲ್ಲದೆ ಸ್ತ್ರೀ ನಾಮವಾಚಕ ಸ್ಥಳನಾಮಗಳು ಅಧಿಕ ಸಂಖ್ಯೆಯಲ್ಲಿರುವುದು ಗಮನಕ್ಕೆ ಬರುತ್ತದೆ. ಇದೊಂದು ಗಮನಾರ್ಹ ವಿಚಾರ. ಶತ್ರು ಸೈನಿಕರನ್ನು ಒನಕೆಯಿಂದ ಜಜ್ಜಿದ ಓಬವ್ವೆಯ ಪ್ರಭಾವ ಈ ಪ್ರದೇಶ ಜನರ ಮೇಲೆ ಸಾಕಷ್ಟು ಆಗಿರಲು ಸಾಧ್ಯವಿದೆ. ಅಲ್ಲದೆ ಸುತ್ತಲಿನ ಪಾಳೆಯಗಾರರನ್ನು ಮಟ್ಟಹಾಕಿದ ಗಂಡುಗಲಿ ಓಬವ್ವನಾಗತಿಯರಂತಹ ರಾಣಿಯರೂ ಆ ಕಾಲದಲ್ಲಿದ್ದರು. ಅವರು ಕಾಲಪ್ರೇಮ, ಜನಪ್ರಿಯತೆ, ಮನೋಸ್ಥೈರ್ಯ, ಸೇವಾಮನೋಭಾವ, ಆಡಳಿತ ಕೌಶಲ್ಯ ಮುಂತಾದ ಗುಣಗಳನ್ನು ಹೊಂದಿದ್ದು ಅಂದಿನ ರಾಜರುಗಳಷ್ಟೇ ಹೆಸರುವಾಸಿಯಾಗಿದ್ದರೆಂಬ ಅಂಶವು ಚಿತ್ರದುರ್ಗ ಪಾಳೇಗಾರರ ವಿರೋಚಿತ ಚರಿತ್ರೆಯನ್ನು ಓದಿದಾಗ ಮನವರಿಕೆಯಾಗುವುದು. ಪಾಳೇಗಾರರು ತಮ್ಮ ಪ್ರಿಯ ಮಡಿದಿಯರ ಹೆಸರುಗಳನ್ನು ಪ್ರೀತಿಗಾಗಿ ಸಂತೋಷಕ್ಕಾಗಿ ಊರುಗಳಿಗೂ ಇಟ್ಟಿರುವ ಸಾಧ್ಯತೆಗಳಿವೆ. ಇಲ್ಲವೆ ತಮ್ಮ ಒಡೆಯರ ಮನವೊಲಿಸಲು, ಸಂತೋಷಪಡಿಸಲು, ಋಣತೀರಿಸಲು ಊರಿನ ಮುಂದಾಳುಗಳೊ, ದಂಡನಾಯಕರೋ. ಸಾಮಂತರೋ ಇಂತಹ ಹೆಸರುಗಳನ್ನು ಕೊಟ್ಟಿರಬಹುದು. ಜೊತೆಗೆ ದಾನ ನೀಡಿದವರ ಇಲ್ಲವೆ ಪಡೆದವರ ಹೆಸರನ್ನು ಆಯಾ ಊರುಗಳಿಗೆ ಇಡುವ ಸಂಪ್ರದಾಯ ಸರ್ವೇಸಾಮಾನ್ಯವಾಗಿದ್ದರಿಂದ ಹಾಗೆ ನಡೆದಿರಲು ಸಾಧ್ಯವಿದೆ. ಹೀಗೆ ನಾಗತಿಯರ ಹೆಸರುಗಳನ್ನು ಹೊತ್ತ ಕೆಲವು ಊರುಗಳು ಈ ತಾಲೂಕಿನಲ್ಲಿವೆ. ಉದಾ: ಕೆಂಚವ್ವನಾಗತಿಹಳ್ಳಿ, ವೀರವ್ವನಾಗತಿಹಳ್ಳಿ, ಹನುಮವ್ವನಾಗತಿಹಳ್ಳಿ.

ಸ್ಥಳನಾಮಗಳ ಭಾಷಿಕ ಅಧ್ಯಯನ

ಮಾನವ ತನ್ನ ಅನಿಸಿಕೆ ಅಭಿಪ್ರಾಯ ಹಾಗೂ ಆಲೋಚನೆಗಳನ್ನು ಇತರರಿಗೆ ವ್ಯಕ್ತಪಡಿಸಲು ಇರುವಂತಹ ಸಾಧನವೇ ಭಾಷೆ.[4] ಸಾಹಿತ್ಯಕ್ಕೆ ಭಾಷೆಯೇ ಮೂಲ ತಳಹದಿ. ಭಾಷೆಯಿಲ್ಲದೆ ಸಾಹಿತ್ಯ ರಚನೆ ಸಾಧ್ಯವೇ ಇಲ್ಲ. ಭಾಷೆ ಸಾಹಿತ್ಯದ ಜೀವನಾಡಿ. ಭಾಷೆ ಸತ್ತ ಮರುದಿನವೇ ಸಾಹಿತ್ಯದ ಜೀವನಕ್ಕೂ ಕೊನೆ. ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಗಳು ಭಾಷೆಯ ಮೂಲಕವೇ ನಡೆಯುತ್ತದೆ. ಸಾಹಿತ್ಯದ ಒಂದು ಭಾಗವಾಗಿರುವ ಸ್ಥಲನಾಮಗಳ ಅಧ್ಯಯನಕ್ಕೂ ಭಾಷೆಯ ಅಧ್ಯಯನಕ್ಕೂ ನಿಕಟ ಸಂಬಂಧವಿದೆ. ಸ್ಥಳನಾಮಗಳ ಅಧ್ಯಯನವೆಂದರೆ ಒಂದರ್ಥದಲ್ಲಿ ಭಾಷೆಯ ಅಧ್ಯಯನವೇ ಆಗಿದೆ. ಸ್ಥಳನಾಮಗಳ ಶೋಧನೆಗೆ ತೊಡಗುವ ಸಂಶೋಧಕನಿಗೆ ಭಾಷೆಯ ವಿವಿಧ ಮಗ್ಗಲುಗಳನ್ನು ಸ್ಪರ್ಶಿಸಿ, ಪದರ, ಪದರುಗಳನ್ನು ತೆರೆದು ನೋಡಿದಂತೆ ಕೆಲವು ಸೂಕ್ಷ್ಮ ಒಳನೋಟಗಳ ಮೂಲಕ ಮಹತ್ವದ ಮಾಹಿತಿಯು ದೊರೆಯುತ್ತದೆ. ಹೀಗಾಗಿ ಸ್ಥಳನಾಮಶಾಸ್ತ್ರ ಮತ್ತು ಭಾಷಾಶಾಸ್ತ್ರ ಒಂದಕ್ಕೊಂದು ಅವಿನಾಭಾವ ಸಂಬಂಧ ಪಡೆದ ವಿಷಯಗಳಾಗಿವೆ.

ಭಾಷಾವಿಜ್ಞಾನಿಗಳು ಊರ ಹೆಸರುಗಳನ್ನು ನಿರ್ದಿಷ್ಟ ಮತ್ತು ವಾರ್ಗಿಕ ಎಂಬೆರಡು ಘಟಕಗಳಲ್ಲಿ ಅಧ್ಯಯನ ಮಾಡುವುದುಂಟು. ಸಾಮಾನ್ಯವಾಗಿ ಊರ ಹೆಸರುಗಳು ಎರಡಕ್ಕಿಂತ ಹೆಚ್ಚು ಘಟಕಗಳನ್ನು ಹೊಂದಿರುತ್ತವೆ. ಅವು ವಿಶಿಷ್ಟದ ಹಿಂದೆ ವಿಶೇಷಣ ಅಥವಾ ಯಾವುದೋ ವಿಷಯ ಸೂಚಕ ಪದಗಳಾಗಿ ಸೇರಿಕೊಂಡಿರುತ್ತವೆ. ಹೀಗೆ ಸೇರಿಕೊಂಡಿರುವುದನ್ನು ನಿರ್ದಿಷ್ಟವೆಂದೇ ಪರಿಗಣಿಸುವುದುಂಟು. ಇಂತಹ ಕ್ರಮವನ್ನೆ ಇಲ್ಲಿ ಅನುಸರಿಸಲಾಗಿದೆ. ನಿರ್ದಿಷ್ಟವೆಂದರೆ ವಿಶಿಷ್ಟ ಎಂದರ್ಥ ಅಂದರೆ ಯಾವುದಾದರೂ ವಿಷಯವನ್ನು ಒಳಗೊಂಡಂಥದು. ವಾರ್ಗಿಕ (ಜನರಿಕ್) ಎಂದರೆ ಊರುಗಳ ಹೆಸರುಗಳ ಉತ್ತರಾರ್ಧ ಘಟಕ. ಇದರಲ್ಲಿ ಊರು, ಹಳ್ಳಿ, ಪುರ, ಗ್ರಾಮ, ನಗರ, ಕಲ್ಲು, ಕೆರೆ, ಮಡಿ, ಪಟ್ಟಣ, ಕೋಟೆ, ಕುಪ್ಪೆ ಈ ಮುಂತಾದ ಘಟಕಗಳಲ್ಲಿ ಒಂದನ್ನೊಳಗೊಂಡು ಕೊನೆಗೊಳ್ಳುವಂಥವು. ನಿರ್ದಿಷ್ಟ ಮತ್ತು ವಾರ್ಗಿಕ ಇವೆರಡು ಪ್ರತ್ಯೇಕ ಆಕೃತಿಮಾಗಳೇ. ಈ ಆಕೃತಿಮಾಗಳು ಸ್ಥಳನಾಮಾಧ್ಯಯನ ಮಹತ್ವದ ಕೊಡುಗೆಯಾಗುತ್ತದೆ.[5] ಭಾಷಿಕ ದೃಷ್ಟಿಯಿಂದ ಜಗಲೂರು ತಾಲೂಕಿನಲ್ಲಿ ಬರುವ ಕೆಲವು ಊರುಗಳನ್ನು ಈ ಘಟಕಗಳನ್ವಯ ವಿಂಗಡಿಸಿದುದನ್ನು ಹಾಗೂ ಅವು ರೂಪ ಹಾಗೂ ಧ್ವನಿ ವ್ಯತ್ಯಾಸ ಪಡೆದುದನ್ನು ಇಲ್ಲಿ ಕೆಲವು ಉದಾಹರಣೆಗಳನ್ನು ನೋಡುವುದರ ಮೂಲಕ ತಿಳಿಯಬಹುದಾಗಿದೆ.

ಊರು: ಇದೊಂದು ಅಚ್ಚ ದ್ರಾವಿಡ ಪದ. ಇದು ಹಳ್ಳಿಗಿಂತ ತುಸು ದೊಡ್ಡದು. ಜನರು ವಾಸ ಮಾಡುವ ಸ್ಥಳ (An inhabited place, a Village, a town, a city) ಎಂಬ ಅರ್ಥವಿದೆ.

ಅಣಬೂರು, ನಿಬಗೂರು, ಜಗಲೂರು, ಮುಚನೂರು….ಇತ್ಯಾದಿ

ಕಟ್ಟೆ: ಇದು ನಿರ್ಮಾಣವಾಚಿ ಜಲಸೂಚಕ ಪದ. ಇದಕ್ಕೆ ಜಗಲಿ, ವೇದಿಕೆ ಒಡ್ಡು ಸೇತುವೆ, ಕೊಳ, ಜಲಾಶಯ, ಮಡಿ ಮುಂತಾದ ಅರ್ಥಗಳಿವೆ.[6] ಮನೆಯ ಮುಂದೆ ಕೂರುವ ಜಗಲಿಗಳೂ ಆಗಿರಬಹುದು. ಹರಿಯುವ ನೀರಿಗೆ ಅಡ್ಡಲಾಗಿ ಕಟ್ಟೆಗಳನ್ನು ಕಟ್ಟಿ ನೀರನ್ನು ಸಂಗ್ರಹಿಸಿ ಅದರ ಉಪಯೋಗ ಪಡೆದು ಜೀವನ ಸಾಗಿಸುವ ಸ್ಥಳವೂ ಆಗಿರಬಹುಸು. ಕ > ಗ ಕಾರವಾಗಿದೆ.

ಕಾನನಕಟ್ಟೆ, ತುಂಬಿನಕಟ್ಟೆ, ಪಲ್ಲಾಗಟ್ಟೆ, ಗಿಡ್ಡನಕಟ್ಟೆ, ತೋರಣಗಟ್ಟೆ. ಮರಿಕಟ್ಟೆ

ಕಲ್ಲು: ಕಲ್ಲಿನಿಂದ ಕೊನೆಗೊಳ್ಳುವ ಊರುಗಳ ಹೆಸರಿಡುವ ಮೊದಲನೇ ಘಟ್ಟವನ್ನು, ಅಂದರೆ ಪ್ರಾಚೀನತೆಯನ್ನು ಸೂಚಿಸುತ್ತಾರೆ. ಸೃಷ್ಟಿಘಟ್ಟದಲ್ಲಿ ಅಲ್ಲಿಯ ನೈಸರ್ಗಿಕ ಸ್ಥಿತಿಯನ್ನೇ ಗ್ರಾಮಕ್ಕೆ ನಾಮವೆಂದು ಇಡಲಾಗಿದೆ. ಇದಕ್ಕೆ ಬಂಡೆ, ಶಿಲೆ ಎಂಬಂರ್ಥಗಳಿವೆ.[7]

ಕುಣಿಕಲ್ಲುಕಟೆ > ಕುಣಿಗಲ್ಲುಕಟ್ಟೆ (ಕ > ಗ)

ಹಾಲೇಕಲ್ಲು

ಕುಂಟೆ: ಜಲವಾಚಿ ಪದ, ನೀರುಕುಣಿ, ಕೊಳ, ಚಿಕ್ಕಕೆರೆ, ವಕ್ರಾಣಿ ಎಂಬಂರ್ಥಗಳಿವೆ.[8] ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ಕುಂಟೆಗಳು ಕಂಡುಬರುತ್ತವೆ.

ಗುಡಿಮಾಕುಂಟೆ, ಮರಿಕುಂಟೆ, ರಸ್ತೆಮಾಕುಂಟೆ

ಕುಂದೆ: ಭೌಗೋಳಿಕ ಲಕ್ಷಣವನ್ನು ಸೂಚಿಸುವ ಪದ. ಕಲ್ಲಿನಿಂದ ಮಾಡಿದ ಕಂಬ ಚಿಕ್ಕ ಬೆಟ್ಟ ಇದು ಕುಂದ, ಕುಂದಿ ಎಂದು ಬಳಕೆಯಾಗುತ್ತದೆ. ಕುಂದಿ ತಗ್ಗು ಭೂಮಿ, ಬಾಗಿದ ನೆಲ.[9] ಕ > ಗ ಬಗಲಾವಣೆಯಿಂದ ಕುಂದ > ಗುಂದ > ಗುಂದಿ > ಗೊಂದಿ ಎಂಬ ಪದ ಬಳಕೆಯಾಗಿದೆ. ಕಮಂಡಲಗೊಂದಿ

ಕೆರೆ: ಇದು ಜಲವಾಚಿ ಪದ. ಕೆರೆ ನಿರ್ಮಾಣಗೊಂಡ ಪ್ರಯುಕ್ತ ಗ್ರಾಮಕ್ಕೆ ಈ ಹೆಸರು ಇರುತ್ತದೆ. ಗ್ರಾಮ ನಿರ್ಮಾಣಗೊಂಡ ಕೆಲಕಾಲದ ಮೇಲೆ ಕೆರೆ ನಿರ್ಮಿಸಲ್ಪಟ್ಟಿದ್ದರೂ ಕೆರೆಯ ಪ್ರಸಿದ್ಧಿಯಿಂದ ಮೂಲಗ್ರಾಮ ನಾಮ ಮಾಯವಾಗಿ ಕೆರೆ ಆಗಿ ಪರ್ಯಾಯ ವಾರ್ಗಿಕವಾಗಿದ್ದುಂಟು.[10] ಕೆರೆ ಎಂದರೆ ಕೊಳ, ಜಲಾಶಯ ಎಂಬಂರ್ಥಗಳಿವೆ.

ದೇವಿಕೆರೆ, ಮೆದಗಿನಕೆರೆ, ಬಿದರಕೆರೆ, ರಸ್ತೆಮಾಚಿಕೆರೆ, ಮಲೆಮಾಚಿಕೆರೆ, ಹೊಸಕೆರೆ

ಕುಪ್ಪೆ: ಭೌಗೋಳಿಕ ಲಕ್ಷಣವನ್ನು ಸೂಚಿಸುವ ಪದ. ಕುಪ್ಪೆ ಎಂದರೆ ಎತ್ತರವಾದ ಸ್ಥಳ, ರಾಶಿ. ಗುಂಪು ಎಂಬರ್ಥಗಳಿವೆ.[11] ಕಣಕುಪ್ಪೆ

ಕೋಟೆ: ನಿರ್ಮಾಣವಾಚಿ. ಸೇನೆಯ ರಕ್ಷಣೆಗೆ ಕಟ್ಟಿದ ಪ್ರಾಕಾರ, ಬಲವಾದ ಗೋಡೆಯ ಆವರಣ, ದುರ್ಗ, ಗಡ, ಕಿಲ್ಲೆ ಎಂಬ ಅರ್ಥಗಳಿವೆ.[12] ಕೋಟೆಗಳಿಗೆ ದುರ್ಗ ಎಂಬ ಅರ್ಥವಿರುವುದರಿಂದ ಕೋಟೆ ಅಥವಾ ದುರ್ಗ ಎಂಬ ಹೆಸರಿನ ಸ್ಥಳಗಳು ಜಗಲೂರು ತಾಲೂಕಿನಲ್ಲಿ ಕಂಡುಬರುತ್ತವೆ.

ಕೋಟೆ: ಕೆಳಗೋಟೆ, ಬಸವನಕೋಟೆ

ದುರ್ಗ: ಗುತ್ತಿದುರ್ಗ, ರಂಗಯ್ಯನ ದುರ್ಗ

ಕೋಡು: ಭೌಗೋಳಿಕ ಲಕ್ಷಣವನ್ನು ಸೂಚಿಸುವ ಪದ ಸಂಸ್ಕೃತದ ‘ಕೂಟ’ ಪದಕ್ಕೆ ಸಮಾನವಾದುದು. ಶಿಖರ, ಬೆಟ್ಟದ ತುದಿ, ಪರ್ವತ, ಕೊಂಬು, ಡೊಂಗೆ ಎಂಬರ್ಥಗಳಿವೆ.

ಅಸಗೋಡು (ಕ > ಗ ಪರಿವರ್ತನೆ)

ಗುಡ್ಡ: ಎತ್ತರವಾದ ಭೂಸ್ಥಿತಿಯನ್ನು ಸೂಚಿಸುವ ಪದ. ಬೆಟ್ಟ, ದಿನ್ನೆ ಎಂಬರ್ಥಗಳಿವೆ. ಕುಪ್ಪೆ, ಗುಡ್ಡಗಾಡು, ಕಾಡು, Hillok, a mountain, a hill ಎಂಬರ್ಥಗಳಿವೆ.

ಕೊಡದಗುಡ್ಡ, ಬಂಗಾರಕ್ಕನ ಗುಡ್ಡ

ಗುಂಡಿ: ಜಲವಾಚಿ ಪದ ಆಳ, ಕುಣಿ, ಕುಳಿ, ಮಣ್ಣನ್ನು ತೆಗೆದು ಹಳ್ಳವಾಗಿರುವ ಪ್ರದೇಶ ಎಂಬರ್ಥಗಳಿವೆ.[13] ಉದಾ. ಅರಿಶಿನಗುಂಡಿ

ಗುತ್ತಿ: ನಿಸರ್ಗವಾಚಿ ಪದ. ಗೊಂಚಲು, ಗುಚ್ಚಿ, ಗೊನೆ, ಪೊದರು, ಕಂಟಿ ಗಿಡಗಳನ್ನು ಕತ್ತರಿಸಿದಾಗ ಉಳಿಯುವ ಬುಡ, ಕೊಳೆ, ಮೋಟು ಎತ್ತರವಾದ ಭೂಮಿ, ದಿಬ್ಬ ಎಂಬ ಅರ್ಥಗಳಿವೆ.[14] ವಾರ್ಗಿಕಗಳು ಕೆಲವೊಮ್ಮೆ ನಿರ್ದಿಷ್ಟವಾಗುವುದುಂಟು. ಇಲ್ಲಿ ಗುತ್ತಿ ಎಂಬುದು ವಿಶಿಷ್ಟ ಪದವಾಗಿ ಬಳಕೆಗೊಂಡು ವಾರ್ಗಿಕದೊಂದಿಗೆ ಸೇರಿದೆ. ಉದಾ. ಗುತ್ತಿದುರ್ಗ

ಗುದ್ದು: ಭೌಗೋಳಿಕ ಸ್ಥಿತಿಯನ್ನು ಸೂಚಿಸುವ ಪದ. ಬಿಲ, ಗುಳಿ, ಪೊಟರೆ, ಪೆಟ್ಟು ಎಂಬರ್ಥಗಳಿವೆ.[15]

ಗೋವ್ + ಗುದ್ದು > ಗೊಟ್‍ಗುದ್ದು > ಗೋಗುದ್ದು

ಗೋವುಗಳು ನಿಂತು ತಗ್ಗು, ಗುಳಿ ಬಿದ್ದಿರುವ ಸ್ಥಳವೇ ಗೋಗುದ್ದು

ಚೇಡು : Surking, bending, contraction ಎಂಬರ್ಥಗಳು ಕಿಟೆಲ್ ಕೋಶದಲ್ಲಿವೆ. ಬಾಣ ಆಯುಧ ತಯಾರಿಸುವ ಪ್ರಯೋಗ ಶಾಲೆ ಎಂದು ಅರ್ಥವಿದೆ. ಚೇಡು > ಬೇಳು > ಚೋಳು > ಚೋಡು ಎಂಬ ರೂಪಗಳನ್ನು ಪಡೆದುಕೊಂಡಿವೆ. ಉದಾ. ಬಿಳಿಚೋಡು

ದೊಣೆ: ಜಲವಾಚಿ ಪದ. ಬೆಟ್ಟದ ಮೇಲಿರುವ ಸ್ವಾಭಾವಿಕವಾದ ಹೊಂಡ, ಕೊಳ, ಮಳೆಯ ನೀರು ಹೋಗಲು ಮಾಡಿರುವ ಕೊಳವೆ, ನಾವೆ, ತೆಪ್ಪ ಎಂಬರ್ಥಗಳಿವೆ.[16] ದೊಣೆ ಎಂಬ ಪದ ಸ್ಥಳನಾಮಗಳಲ್ಲಿ ವಾರ್ಗಿಕವಾಗಿ ಮತ್ತು ವಿಶಿಷ್ಟವಾಗಿ ಎರಡೂ ಕಡೆಗಳಲ್ಲಿ ಬಳಕೆಯಾಗಿದೆ. ಅವುಗಳಲ್ಲಿ ತಾಯಿದೊಣೆ, ದೊಣೆಹಳ್ಳಿಗಳು ಮುಖ್ಯವಾಗಿವೆ.

ಪುರ: ವಸತಿವಾಚಿ ಪದ. ಹಳ್ಳಿ, ಊರುಗಳಿಗಿಂತ ಇದು ಗಾತ್ರದಲ್ಲಿ ದೊಡ್ದದು. ಗ್ರಾಮ ವಿಸ್ತಾರವಾದಂತೆ ಪುರ, ಪಟ್ಟಣ, ನಗರ ಮೊದಲಾದ ವಾರ್ಗಿಕಗಳು ಸೇರಿಕೊಳ್ಳುತ್ತವೆ. ಉದಾ. ಕಲ್ಲೇದೇವರಪುರ, ಜೋತಿಪುರ, ಗುರುಸಿದ್ಧಾಪುರ, ಹನುಮಂತಪುರ

ಮರಡಿ: ಭೂಸ್ಥಿತಿವಾಚಿ ಪದ. ಮರಡಿ, ಮೊರಡಿ ಎಂಬ ರೂಪದಿಂದ ಬಂದಿದೆ. ಮೊರಡಿ ಎಂದರೆ ದಿಣ್ಣೆ, ಗುಡ್ಡ ಎಂತಲೂ ಅರ್ಥಗಳಿವೆ.[17] ಉದಾ. ಹೊನ್ನಮರಡಿ

ಸಮುದ್ರ: ಜಲವಾಚಿ ಪದ. ಇದು ಸಂಸ್ಕೃತ ಭಾಷೆಯ ಪ್ರಭಾವದಿಂದ ಬಂದಿದೆ. ಕಡಲು, ಸಾಗರ, ಮುದ್ರೆಯೊತ್ತಿದ ಎಂಬರ್ಥಗಳಿವೆ.[18] ಸಮುದ್ರ ಎಂಬ ಪದ ಜಲಾಶಯ ಎಂಬ ಅರ್ಥವನ್ನೂ ನೀಡುತ್ತದೆ. ಈ ತಾಲೂಕಿನ ಸ್ಥಳನಾಮಗಳಲ್ಲಿ ಸಮುದ್ರ, ಕೆರೆ, ಕಟ್ಟೆ ಎಂದು ನಿರ್ದೇಶಿಸುತ್ತವೆ. ಉದಾ. ಭರಮಸಮುದ್ರ

ಹಟ್ಟಿ:ವಸತಿವಾಚಿ ಪದ. ದನ, ಕುರಿ ಮೊದಲಾದವುಗಳನ್ನು ಕೂಡಿ ಹಾಕುವ ಸ್ಥಳ. ಕೊಟ್ಟಿಗೆ, ರೊಪ್ಪ, ಚಿಕ್ಕಹಳ್ಳಿ, ಗುಡಿಸಲು, ಶಾಲೆ ಎಂಬರ್ಥಗಳಿವೆ.[19] ಆದಿ ಮಾನವರು ಆರಂಭದಲ್ಲಿ ಪ್ರಾಣಿಗಳನ್ನು ಸಾಕಲು ಪ್ರಾರಂಭಿಸಿದರು. ಆ ಪ್ರಾಣಿಗಳ ರಕ್ಷಣೆಗಾಗಿ ಒಂದು ಕಡೆ ಹಟ್ಟಿಗಳನ್ನು ನಿರ್ಮಿಸಿದರು. ಮುಂದೆ ಅವು ಗ್ರಾಮಗಳಾಗಿ ರೂಪುಗೊಂಡವು. ಉದಾ. ಚಿಕ್ಕಬನ್ನಿಹಟ್ಟಿ, ಹೀರೆಬನ್ನಿಹಟ್ಟಿ

ಹಳ್ಳಿ: ಇದು ವಸತಿವಾಚಿ ಪದ. ಅತ್ಯಂತ ಚಿಕ್ಕದಾದ ಘಟಕವಿದು. ಊರಿಗಿಂತ ಕಿರಿದು, ನಾಲ್ಕಾರು ಮನೆ, ಕೆಲವೊಮ್ಮೆ ಒಂದೇ ಮನೆ ಇರುವ ಹಳ್ಳಿಗಳು ಕಂಡುಬರುತ್ತವೆ. ಪಳ್ಳಿ ಎಂಬರ್ಥ ಕಿಟೆಲ್ ಕೋಶದಲ್ಲಿದೆ.

ಕಟ್ಟಿಗೆಹಳ್ಳಿ, ಬೆಣ್ಣೆಹಳ್ಳಿ, ಕಾಮಗೇತನ ಹಳ್ಳಿ, ಸಿದ್ದಿಹಳ್ಳಿ, ಕುರುಬನಹಳ್ಳಿ, ಸಂಗೇನಹಳ್ಳಿ

ಹೊಳೆ: ಜಲವಾಚಿ ಪದ. ನದಿ, ತೊರೆ ಎಂಬ ಅರ್ಥಗಳಿವೆ.[20] ಹರಿಯುವ ನೀರಿನ ಮೂಲವನ್ನು ತಿಳಿಸುವ ಪದವಿದು. ಉದಾ. ಚಿಕ್ಕಮಲ್ಲನ ಹೊಳೆ, ಹೀರೆಮಲ್ಲನ ಹೊಳೆ

ಸ್ಥಳನಾಮಗಳ ನಿಷ್ಪತ್ತಿ

ಸ್ಥಳನಾಮಗಳ ಅಧ್ಯಯನದಲ್ಲಿ ಪದಗಳ ನಿಷ್ಪತ್ತಿಯನ್ನು ಕುರಿತ ವಿವೇಚನೆಯು ಅತ್ಯಂತ ಪ್ರಮುಖ ಭಾಗ. ಸ್ಥಳನಾಮಗಳನ್ನು ಶಾಸ್ತ್ರ, ಜಾನಪದ ಮತ್ತು ಇತಿಹಾಸಗಳ ದೃಷ್ಟಿಯಿಂದ ಅಭ್ಯಸಿಸುವುದು ಔಚಿತ್ಯಪೂರ್ಣ. ಏಕೆಂದರೆ ಗ್ರಾಮಗಳನ್ನು ಕಟ್ಟಿದವರು ಮತ್ತು ಅವುಗಳಿಗೆ ಹೆಸರನ್ನು ನೀಡಿ ತಲತಲಾಂತರಗಳಿಂದ ನೆನಪಿನಲ್ಲಿ ಜೀವಂತವಾಗಿರಿಸಿಕೊಂಡು, ತಮ್ಮ ಊರಿನ ಶ್ರೇಷ್ಠತೆಯನ್ನು ತಿಳಿಸುತ್ತಾರೆ. ಜಗಲೂರು ತಾಲೂಕಿನ ಸ್ಥಳನಾಮಗಳನ್ನು ಶಾಸ್ತ್ರೀಯ, ಜಾನಪದೀಯ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ಅವುಗಳನ ನಿಷ್ಪತ್ತಿಯನ್ನು ತಿಳಿಯಬಹುದು. ಇಲ್ಲಿ ಕೆಲವು ಪ್ರಮುಖ ಸ್ಥಳನಾಮಗಳ ನಿಷ್ಪತ್ತಿಯನ್ನು ತಿಳಿಸಲು ಪ್ರಯತ್ನಿಸಿದ್ದೇನೆ.

ಜಗಲೂರು

ಇದು ತಾಲೂಕಿನ ಕೇಂದ್ರ ಪಟ್ಟಣ. ೧೮೮೬ರಲ್ಲಿ ಜಗಲೂರು ಸ್ವತಂತ್ರ ತಾಲ್ಲೂಕಾಗಿ ರೂಪಗೊಂಡಿತು. ಕ್ರಿ.ಶ. ೧೮೨೬ರ ನಿಬಗೂರು ಶಾಸನದಲ್ಲಿ ‘ಜಗಲೂರು ಸೀಮೆ’ ಎಮ್ದು ಹಾಗೂ ಜಗಲೂರಿನ ಜೋಗಿದೇವರ ದೇವಸ್ಥಾನದ ಛಾವಣಿ ಕಲ್ಲಿನ ಮೇಲೆ ‘ಜಗಲೂರ ನಾಡು’ ಎಂಬ ಉಲ್ಲೇಖ ದೊರೆಯುತ್ತದೆ.[21] ಈ ಸ್ಥಳನಾಮ ನಿಷ್ಪತ್ತಿಯನ್ನು ಕೆಲವು ಜನಪದೀಯ ಹಾಗೂ ಐತಿಹಾಸಿಕ ಅಂಶಗಳ ಹಿನ್ನೆಲೆಯಲ್ಲಿ ತಿಳಿಯಬಹುದು.

ಜಗಳ + ಊರು – ಜಗ – ಪ್ರಕಾಶ, ಹೊಳಪು, ಲೋಕ, ಜಗಳ – ಕಲಹಮಾಡು, ಕಿತ್ತಾಡು ಎಂಬರ್ಥಗಳಿವೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಚಿತ್ರದುರ್ಗ ಪಾಳೆಯಗಾರರಿಗೂ ಮತ್ತು ಹರಪನಹಳ್ಳಿ ಪಾಳೆಯಗಾರರಿಗೂ ಯುದ್ಧ ಮಾಡಲಿಕ್ಕೆ ಜಗಲೂರು ಸಮೀಪದ ಸ್ಥಳವಾದರಿಂದ ಹಾಗೂ ಜಗಳ ಅಥವಾ ಕಲಹ ಮಾಡಲು ಆಯಕಟ್ಟಿನ ಸ್ಥಲವಾದ್ದರಿಂದ ಜಗಳದ + ಊರು – ಜಗಲೂರು ಎಂದು ಪರಿವರ್ತನೆಯಾಯಿತೆಂಬ ಒಂದು ಐತಿಹ್ಯವಿದೆ.

ಮತ್ತೊಂದು ಅಭಿಪ್ರಾಯದ ಪ್ರಕಾರ ಇಲ್ಲಿ ಜೋಗಪ್ಪ ಎನ್ನುವ ಜೋಗಿ ದೇವರ ದೇವಾಲಯವು ಸಂತೆ ಮೈದಾನದ ರಸ್ತೆಯ ಪಕ್ಕದಲ್ಲಿದೆ. ಈ ದೇವಾಲಯವನ್ನು ಸುಮಾರು ಎರಡು ನೂರು ವರ್ಷಗಳ ಹಿಂದೆ ನಾಡ ಕುಲಕರ್ಣಿ ಪಟ್ಟೆಯಲ್ಲಪ್ಪ ರಚಿಸಿದ್ದರ ಬಗ್ಗೆ ದೇವಾಲಯ ಛಾವಣಿ ಶಿಲಾಶಾಸನ ತಿಳಿಸುತ್ತದೆ. ಈ ಜೋಗಪ್ಪನಿಂದ ಈ ಜಗಲೂರು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಇನ್ನೊಂದು ಅಭಿಪ್ರಾಯದ ಪ್ರಕಾರ ಜಗಳೂರಪ್ಪ ಎಂಬ ಹೆಸರಿನ ಪಾಪದೇವರ ಗುಡಿ ಜಗಲೂರಿನ ಹೊರಕೆರೆಯಲ್ಲಿದೆ. ಜಗಳೂರಜ್ಜನಿಂದ ಈ ಹೆಸರು ಬಂದಿರಬಹುದೆಂದು ಅಭಿಪ್ರಾಯವಿದೆ. ಈ ಎಲ್ಲಾ ಜನಪದ ಹೇಳಿಕೆಗಳಿಗೂ ಜಗಲೂರು ಸ್ಥಳ ಹೆಸರಿಗೂ ಸ್ಪಷ್ಟವಾದ ವಿವರಣೆಯಲ್ಲವೆನಿಸುತ್ತದೆ. ಕಾರಣವೆಂದರೆ ಕ್ರಿ.ಶ. ೧೫೨೬ರ ನಿಬಗೂರು ಶಾಸನದಲ್ಲಿ ‘ಜಗಲೂರು ಸೀಮೆ’ ಎಂದು ಉಲ್ಲೇಖಗೊಂಡಿದ್ದು, ಈ ಮೇಲಿನ ಅಭಿಪ್ರಾಯಗಳೆಲ್ಲವು ಈ ಶಾಸನ ಕಾಲಾವಧಿಯ ನಂತರ ಬಂದಿರುವುದರಿಂದ ಈ ಜೋಗಪ್ಪ ದೇವರಿಂದ, ಜಗಳೂರಜ್ಜನಿಂದ ಹಾಗೂ ಜಗಳವಾಡಲು ಯೋಗ್ಯವಾದ ಸ್ಥಳ ಎಂದು ಹೇಳಿರುವುದು ಜಗಲೂರು ಹೆಸರಿನ ನಿಷ್ಪತ್ತಿ ಬಗೆಗಿರುವ ಉಲ್ಲೇಖಗಳು ಸತ್ಯಕ್ಕೆ ದೂರವಾಗಿವೆ ಎಂದು ಹೇಳಬಹುದು. ಒಂದು ಸ್ಥಳನಾಮ ಸಾಮಾನ್ಯವಾಗಿ ಪ್ರಾದೇಶಿಕ ಲಕ್ಷಣದ ಮುಖಾಂತರ ಹೆಸರು ಪಡೆದಿರುತ್ತದೆ. ಆದುದರಿಂದ ಜಗಲೂರಿನ ಹಳೆ ಊರಿನಲ್ಲಿ ಪ್ರತಿ ಮನೆಯ ಮುಂದೆ ಜಗಲಿ ಇರುವುದು ಹಾಗೂ ಜಗಲಿಯಂತಿರುವ ಎತ್ತರದ ಸ್ಥಳದಲ್ಲಿ ಅಂದರೆ ದಿಬ್ಬದ ಮೆಲೆ ಜಗಲೂರು ನಿರ್ಮಾಣವಾಗಿರುವುದನ್ನು ಕಾಣಬಹುದು. ಈ ಜಗಲಿಯಿಂದ ಜಗಲಿಯ ಊರು > ಜಗಲೂರು > ಜಗಲೂರು ಎಂಬ ಹೆಸರು ಬಂದಿರಬಹುದು.

ಆಸಗೋಡು

ಜಗಲೂರು ತಾಲೂಕಿನ ಬಿಳಿಚೋಡು ಹೋಬಳಿಗೆ ಸೇರಿದ ಐತಿಹಾಸಿಕ ಮಹತ್ವವುಳ್ಳ ಸ್ಥಳ. ಚಾರಿತ್ರಿಕ ಹಿನ್ನೆಲೆಯಲ್ಲಿ ‘ಅಸಗ’ ಎಂದರೆ ಪಾಳಿ ಭಾಷೆಯಲ್ಲಿ ಅಶೋಕ ಎಂದು. ‘ಗೋಡು’ ಎಂದರೆ ಪಟ್ಟಣ ಎಂದು ಅರ್ಥ ಅಸಗೋಡು ಅಶೋಕ ಪಟ್ಟಣ. ಅಂದರೆ ಅಶೋಕನ ಹೆಸರಿನಲ್ಲಿ ಕಟ್ಟಿದ ಊರು ಎಂದು ಹೇಳುತ್ತಾರೆ. ಬಿಳಿಚೋಡಿನ ಒಂದು ಕೈಬರಹದಲ್ಲಿ ಅಶೋಕ ಚಕ್ರವರ್ತಿ ಕೆಲಕಾಲ ಈ ಪ್ರದೇಶದಲ್ಲಿ ತಂಗಿದ್ದನೆಂದು, ಅವನಿಂದ ಈ ಹೆಸರು ಬಂದಿತೆಂದು ಹುಲ್ಲೂರು ಶ್ರೀನಿವಾಸ ಜೋಯಿಸರು ಉಲ್ಲೇಖಿಸಿದ್ದಾರೆ. ಇದು ಪ್ರಾಚೀನ ಪುಣ್ಯಕ್ಷೇತ್ರ, ಶಿವಪುರ, ವೀರಭೂಮಿ, ಐತಿಹಾಸಿಕ ಸ್ಥಳ, ಅಗ್ರಹಾರ ಅಥವಾ ವಿದ್ಯಾಕೇಂದ್ರವಾಗಿತ್ತೆಂದು ಐತಿಹ್ಯವಿದೆ.

ಜನಪದ ಹಿನ್ನೆಲೆಯಲ್ಲಿ ಗಮನಿಸಿದಾಗ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಪುರಾತನ ಕಾಲಕ್ಕೆ ಸೇರಿದ ಸ್ವಯಂಭು ಶಂಭುಲಿಂಗೇಶ್ವರ ದೇವಾಲಯವಿದೆ. ಹಿಂದೊಮ್ಮೆ ವ್ಯಾಪಾರಸ್ಥರು ತಮ್ಮ ಎತ್ತುಗಳ ಮೇಲೆ ಮಾಲನ್ನು ಏರಿಕೊಂಡು ಒಂದು ಈ ಊರಿನಲ್ಲಿ ತಂಗಿ ಸ್ವಯಂಭು ಉದ್ಭವಮೂರ್ತಿಯನ್ನೇ ಒಲೆಗುಂಡನ್ನಾಗಿ ಮಾಡಿಕೊಂಡು ಅಡುಗೆ ಮಾಡಿದರು. ಇದರಿಂದ ಅವರ ಎತ್ತುಗಳ ಕೋಡುಗಳು ಉದುರಿಹೋಗಿ ವ್ಯಾಪಾರಸ್ಥರು ತಮ್ಮ ತಪ್ಪನ್ನು ಒಪ್ಪಿಕೊಂಡು ಶಂಭುಲಿಂಗವನ್ನು ಪೂಜಿಸಲು ತಮ್ಮ ಎತ್ತುಗಳಿಗೆ ಯಥಪ್ರಕಾರವಾಗಿ ಹೊಸಕೋಡುಗಳು ಬಂದವು. ಈ ಕಾರಣದಿಂದ ಈ ಗ್ರಾಮಕ್ಕೆ ಹೊಸಕೋಡು ಎಂದು ಹೆಸರು ಬಂದು ಕಾಲಕ್ರಮೇಣ ಹೊಸಕೋಡು > ಅಸಗೋಡು ಆಯಿತೆಂದು ಐತಿಹ್ಯವಿದೆ.

ಇದೇ ಊರಿನ ಶಂಭುಲಿಂಗ ದೇವಾಲಯದ ಬಳಿ ಇರುವ ಕ್ರಿ.ಶ. ೧೧೧೩ ಶಾಸನದಲ್ಲಿ ‘ಅಸಗಗೋಡು’ ಎಂದು ಉಲ್ಲೇಖವಿರುವುದು ಕಂಡುಬರುತ್ತದೆ. ನಂತರ ಕ್ರಿ.ಶ. ೧೭೧೫ರ ಒಂದು ಶಾಸನದಲ್ಲಿ ‘ಅಸಗೊಡು’ ಎಂದು ಉಲ್ಲೇಖವಾಗಿದೆ.[22] ಅಸಗ + ಗೋಡು > ಅಸಗೋಡು. ಅಗಸ ಎಂಬ ಅಕ್ಷರ ಪಲ್ಲಟದಿಂದ ಅಸಗ ರೂಪ ಪಡೆದಿದೆ. ಅಗಸ ಎಂಬುದು ಒಂದು ಜಾತಿವಾಚಿ ಪದ. ಗೋಡು ಎಂದರೆ ಮಣ್ಣು, ಕೆರೆ ಫಲವತ್ತಾದ ಜೇಡಿಮಣ್ಣು ಎಂಬರ್ಥಗಳಿವೆ. ಈ ಊರಿನ ಸುತ್ತಮುತ್ತಲಿನ ಪ್ರದೇಶವನ್ನು ಭೌಗೋಳಿಕವಾಗಿ ಗಮನಿಸಿದಾಗ ಈ ಊರು ಕೆರೆ ಪಕ್ಕದಲ್ಲಿದ್ದು ಹಾಗೂ ಅಲ್ಲಿನ ಭೂಮಿ ಕಪ್ಪು ಮಣ್ಣಿನಿಂದ ಕೂಡಿದ್ದು ಇದರ ಪ್ರಭಾವದಿಂದ ಗೋಡು ಎಂಬ ಹೆಸರು ಪಡೆದು ಇದಕ್ಕೆ ಅಗಸ ಎಂಬ ಜಾತಿವಾಚಿ ಪದ ವಿಶೇಷಣವಾಗಿ ಸೇರಿ ಅಗಸಗೋಡು > ಅಸಗಗೋಡು > ಅಸಗೋಡು ಎಂಬ ಹೆಸರನ್ನು ಪಡೆದಿರಬಹುದು.

ಕಣಕುಪ್ಪೆ

ಜಗಲೂರು ತಾಲೂಕಿನ ಕಣಕುಪ್ಪೆ ಇಂದು ಸಾಧಾರಣ ಗ್ರಾಮವಾದರೂ ಹಿಂದೆ ಇದು ಐತಿಹಾಸಿಕ ಮಹತ್ವವನ್ನು ಪಡೆದ ಸ್ಥಳ. ೧೮೮೩ರ ವರೆಗೆ ಕಣಕುಪ್ಪೆ ತಾಲೂಕು ಕೇಂದ್ರವಾಗಿತ್ತೆಂದು ನಿಬಗೂರು ಶಾಸನ ತಿಳಿಸುತ್ತದೆ. ಜಗಲೂರು ತಾಲೂಕಿನ ಕ್ರಿ.ಶ. ೧೬೦೪ರ ಸೊಕ್ಕೆ ಹೋಬಳಿ ಮೆದಕೆರಿಪುರ ಗ್ರಾಮದ ಆಂಜನೇಯ ದೇವಾಲಯದಲ್ಲಿರುವ ಶಾಸನದಲ್ಲಿ ‘ಕಣಕುಪ್ಪೆ’ ಎಂಬ ಉಲ್ಲೇಖ ದೊರೆಯುತ್ತದೆ.[23]

ಕಣಕುಪ್ಪೆ ಚಿತ್ರದುರ್ಗ ಪಾಳೇಗಾರರ ಕಾಲದಲ್ಲಿ ಒಂದು ಸೀಮೆಯಾಗಿದ್ದು ಚಿಕ್ಕನಾಯಕ ಈ ಭಾಗವನ್ನು ಆಳುತ್ತಿದ್ದಾಗ ಕೊಮರಪ್ಪ ನಾಯಕರಿಗೆ ಜಗಲೂರು ಸೀಮೆಯ ಕಣಕುಪ್ಪೆ ಗುಡ್ಡದಲ್ಲಿ ಬೇಡಗಳ್ಳರು ಗಂಟುಬಿದ್ದು ಅಲ್ಲಿನ ಜನರಿಗೆ ಉಪಟಳ ನೀಡುತ್ತಿದ್ದಾರೆಂದು ಸುದ್ದಿಬಂತು. ನಂತರ ಕೊಮರಪ್ಪ ನಾಯಕ ಈ ಹಿನ್ನೆಲೆಯಲ್ಲಿ ನಾನೂರು ಸೈನಿಕರಿಂದ ಬೇಡಗಳ್ಳರನ್ನು ಹತ್ತಿಕ್ಕಿದನು. ಆಗ ಈ ಕಣಕುಪ್ಪೆಯ ಗುಡ್ಡಗಳಲ್ಲಿ ವಿಸ್ತಾರವಾದ ಬಯಲು, ಗವಿಗಳು, ಹೊಂಡಗಳು ಇರುವುದನ್ನು ಕಂಡು ಇದೊಂದು ಆಯಕಟ್ಟಿನ ಸ್ಥಳವೆಂದು ಭಾವಿಸಿ ಕೊಮರಪ್ಪ ಕೋಟೆ ನಿರ್ಮಿಸಲು ಪ್ರಾರಂಭಿಸಿದನು. ಹೊಂಡದ ತಳಭಾಗದಲ್ಲಿ ಮಣ್ಣು ತೆಗೆಯುವಾಗ ದೊಡ್ಡ ಶಂಖವೊಂದು ಸಿಕ್ಕಿತು. ಈ ಶಂಖವನ್ನು ಕೊಮರಪ್ಪ ನಾಯಕ ಚಿತ್ರದುರ್ಗ ತಿಮ್ಮಾಜೋಯಿಸರಿಗೆ ತೋರಿಸಿದಾಗ ಇದು ಹಿಂದೆ ಕಣ್ವ ಋಷಿಗಳು ನೆಲೆಸಿದ್ದ ಸ್ಥಳ. ಈ ಶಂಖ ಆ ಋಷಿಗಳದ್ದೆ ಎಂದು ಹೇಳಿದ್ದರಿಂದ ಈ ಕೋಟೆಗೆ ಕಣ್ವರ ಕುಪ್ಪೆ ಎಂದೆ ಹೆಸರಿಟ್ಟರು. ಕ್ರಮೇಣ ಅದು ಜನರ ಬಾಯಲ್ಲಿ ಕಣಕುಪ್ಪೆಯಾಯಿತೆಂದು ಐತಿಹ್ಯವಿದೆ.

ಇಲ್ಲಿನ ಸ್ಥಳೀಯರ ಅಭಿಪ್ರಾಯದ ಪ್ರಕಾರ ಕಣ್ವರಿಗೆ ಮೈಮೇಲೆಲ್ಲಾ ಕುಪ್ಪೆಯೋ ಪಾದಿಯಾಗಿ ಗುಳ್ಳೆ ಇದ್ದುದರಿಂದ ಅದಕ್ಕಾಗಿ ಕಣಕುಪ್ಪೆ ಎಂಬ ಹೆಸರು ಬಂದಿತೆಂದು ಸ್ಥಳೀಯರು ಹೇಳುತ್ತಾರೆ.

ಕಣ + ಕುಪ್ಪೆ > ಕಣಕುಪ್ಪೆ, ಕಣ ಎಂದರೆ ಆಯಕಟ್ಟಿನ ಸ್ಥಳ, ಕಾಳಗದ ಸ್ಥಳ, ರಣರಂಗ. ಕುಪ್ಪೆ ಎಂದರೆ ಎತ್ತರವಾದ ಸ್ಥಳ, ರಾಶಿ, ಗುಂಪು ಎಂಬರ್ಥಗಳಿವೆ. ಒಂದರ್ಥದಲ್ಲಿ ಈ ಎರಡು ಪದಗಳನ್ನು ಗಮನಿಸಿದಾಗ ಎರಡು ಗುಂಪುಗಳ ಮಧ್ಯೆ ಯುದ್ಧ ನಡೆಯಲು ಯೋಗ್ಯವಾದ ಸ್ಥಳವಾದ್ದರಿಂದ ಇದಕ್ಕೆ ಕಣಕುಪ್ಪೆ ಎಂಬ ಹೆಸರು ಬಂದಿರಬಹುದು. ಮತ್ತೊಂದು ಅಭಿಪ್ರಾಯದಲ್ಲಿ ಭೌಗೋಳಿಕವಾಗಿ ಈ ಪ್ರದೇಶವು ಎತ್ತರವಾಗಿದ್ದು ಸಣ್ಣಸಣ್ಣ ಕಲ್ಲಿನ ಕಣಶಿಲೆಯ ಕುಪ್ಪೆಗಳು ಗುಡ್ಡದೋಪಾದಿಯಲ್ಲಿ ಕಾಣುವುದರಿಂದ ಕಣಕುಪ್ಪೆ ಎಂಬ ಹೆಸರು ಬಂದಿರಬಹುದು.

ಪಲ್ಲಾಗಟ್ಟೆ

ಪಲ್ಲಾ + ಕ ಟ್ಟೆ > ಪಲ್ಲಾಗಟ್ಟೆ, ಪಲ್ಲ < ಪರ್ಲ / ಪರ್ರ ಎಂಬ ರೂಪಗಳಿಂದ ಬಂದಿದೆ. ಪರ್ರ ಎಂದರೆ ಉಪ್ಪುನೆಲ, ಚೌಳು ಭೂಮಿ ಎಂಬ ಎಂಬರ್ಥಗಳಿವೆ.[24] ಪ್ರಾದೇಶಿಕವಾಗಿ ಇಲ್ಲಿನ ಸ್ಥಳ ಚೌಳು ಭೂಮಿತಿಂದ ಕೂಡಿದ ಉಪ್ಪು ನೆಲವಾಗಿದೆ. ಈ ಪ್ರದೇಶ ಉಪ್ಪ ಭೂಮಿಯಿಂದ ಕೂಡಿದ್ದರಿಂದ ಉಪ್ಪಾರ ಜನಾಂಗವು ಕಟ್ಟೆಗಳನ್ನು ಕಟ್ಟಿ ಉಪ್ಪು ತಯಾರಿಸಿ ತಮ್ಮ ವೃತ್ತಿಯಿಂದ ಜೀವನ ಸಾಗಿಸುತ್ತಿರಬಹುದು. ಇದರಿಂದ ಇಲ್ಲಿನ ಪ್ರದೇಶವನ್ನು ಪರ್ಲಕಟ್ಟೆ > ಪರ್ಲಗಟ್ಟೆ > ಪಲ್ಲಗಟ್ಟೆ > > ಪಲ್ಲಾಗಟ್ಟೆ ಎಂಬ ಹೆಸರಿನಿಂದ ಕರೆದಿರಬಹುದು.

ಒಟ್ಟಿನಲ್ಲಿ ಸ್ಥಳನಾಮಗಳೆಂದರೆ ಕೇವಲ ಊರ ಹೆಸರುಗಳಲ್ಲ. ಅವು ಆಯಾ ಪ್ರದೇಶಗಳ ಭೌಗೋಳಿಕ, ಐತಿಹಾಸಿಕ ಹಾಗೂ ಸಾಮಾಜಿಕ ವಿಷಯಗಳನ್ನೊಳಗೊಂಡ ಜೀವಂತ ಪಳೆಯುಳಿಕೆಗಳು. ಸಾಂಸ್ಕೃತಿಕ ಘಟಕಗಳು ಎಂಬುದನ್ನು ಸ್ಥಳನಾಮಗಳ ಅಧ್ಯಯನ ಮೂಲಕ ತಿಳಿಯಬಹುದು.

[1] ದೇ.ಜ.ಗೌ., ಸ್ಥಳನಾಮ ವ್ಯಾಸಂಗ, ಸಹ್ಯಾದ್ರಿ ಪ್ರಕಾಶನ, ೧೯೯೦, ಪು. ೧೭

[2] ಇತಿಹಾಸ ದರ್ಶನ, ಸಂ.೨೧, ಹೊನ್ನೆಲೆ ಗ್ರಾಮನಾಮ, ಡಿ.ಬಿ. ಕುಲಕರ್ಣಿ, ೨೦೦೬, ಪು. ೨೪೦, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು. ೨೦೦೬

[3] ಕರ್ನಾಟಕ ಗ್ರಾಮನಾಮ ಸೂಚಿ, ಕನ್ನಡ ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ಪು. ೮೪

[4] ಸಂಗಮೇಶ ಸವದತ್ತಿಮಠ, ಕನ್ನಡ ಭಾಷಾ ವ್ಯಾಸಂಗ, ರೂಪರಶ್ಮಿ ಪ್ರಕಾಶನ ೨೦೦೬, ಪು. ೩

[5] ಕನ್ನಡ ಸಾಹಿತ್ಯ ಸಂಬಂಧ, ಲೇಖನ ಗುಲ್ಬರ್ಗಾ ತಾಲೂಕಿನ ಸ್ಥಳನಾಮಗಳ ಭಾಷಿಕ, ಸಾಂಸ್ಕೃತಿಕ ಅಧ್ಯಯನ,      ವ್ಹಿ.ಜಿ. ಪೂಜಾರ್, ೧೯೯೫, ಪು. ೧೮            

[6] ಸಂಕ್ಷಿಪ್ತ ಕನ್ನಡ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೧, ಪು. ೨೧೧

[7] ಕನ್ನಡ ರತ್ನಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೧, ಪು. ೪೯

[8] ಸಿರಿಗನ್ನಡ ಅರ್ಥಕೋಶ, ಶಿವರಾಮಕಾರಂತ, ಹರ್ಷ ಪ್ರಕಾಶನ, ೧೯೭೧, ಪು. ೧೨೫

[9] ಅದೇ ಪು. ೧೨೬

[10] ಸಾಧನೆ ಸಂ.೧೪, ಕೆರೆ ಗ್ರಾಮನಾಮ ವಿವೇಚನೆ, ಎಲಿಗಾರ ಚೆನ್ನಕ್ಕ, ಸಂಚಿಕೆ ೩

[11] ಶಿವರಾಮ ಕಾರಂತ, ಸಿರಿಗನ್ನಡ ಅರ್ಥಕೋಶ, ಹರ್ಷ ಪ್ರಕಾಶನ, ೧೯೭೧, ಪು. ೧೨೧

[12] ಅದೇ ಪು. ೧೪೧

[13] ಅದೇ ಪು. ೧೬೫

[14] ಸಂಕ್ಷಿಪ್ತ ಕನ್ನಡ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೧, ಪು. ೩೮೬

[15] ಅದೇ ಪು. ೩೮೬

[16] ಅದೇ ಪು. ೬೧೬

[17] ಅದೇ ಪು. ೧೦೬೩

[18] ಶಿವರಾಮ ಕಾರಂತ, ಸಿರಿಗನ್ನಡ ಅರ್ಥಕೋಶ, ಹರ್ಷ ಪ್ರಕಾಶನ, ೧೯೭೧, ಪು. ೫೧೦

[19] ಸಂಕ್ಷಿಪ್ತ ಕನ್ನಡ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೧, ಪು. ೧೩೬೨

[20] ಕನ್ನಡ ರತ್ನಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ೨೦೦೧, ಪು. ೩೬೫

[21] ಎಪಿಗ್ರಾಫಿಯ ಕರ್ನಾಟಕ ಸಂ ೧೧, ಪು. ೨೪೦

[22] ಅದೇ ಪು. ೨೨೪

[23] ಅದೇ ಪು. ೨೩೧

[24] ಗೋಪಾಲಕೃಷ್ಣ, ವಿ., ಸ್ಥಳನಾಮ ಅಧ್ಯಯನಗಳು, ವಿದ್ಯಾಗಿರಿ ಪ್ರಕಾಶನ ೧೯೮೭, ಪು. ೪೩