ಭೌಗೋಳಿಕವಾಗಿ ಪರಿಸರದಲ್ಲಿ ದೊರೆಯುವ ಶಿಲೆ, ಮರ, ಮಣ್ಣು, ನೀರು ಮಾನವನಿಗೆ ಅನಾದಿ ಕಾಲದಿಂದಲೂ ಸದಾ ಸಹಕಾರಿಯಾಗಿವೆ. ಇದರಿಂದಾಗಿಯೇ ಇಲ್ಲಿನ ಭೌಗೋಳಿಕ ಪರಿಸರದಲ್ಲಿ ಮಾನವ ಪ್ರಾಗೈತಿಹಾಸಿಕ ಕಾಲದಿಂದಲೂ ನೆಲೆ ನಿಂತಿದ್ದಾನೆ. ಜಗಲೂರು ತಾಲೂಕಿನ ಅರಿಷಿಣಗುಂಡಿ, ಕೊಣಚಗಲ್, ಚದುರಗೊಳ, ಕಣಕುಪ್ಪೆ, ಗುತ್ತಿದುರ್ಗ, ಉಚ್ಚಂಗಿದುರ್ಗ, ಅಸಗೋಡು ಮೊದಲಾದೆಡೆ ಪ್ರಾಚೀನ ಕಾಲದ ಅವಶೇಷಗಳು ದೊರೆತಿವೆ. ಅಷ್ಟೇ ಅಲ್ಲದೆ ಚಾರಿತ್ರಿಕ ಕಾಲಘಟ್ಟದಲ್ಲಿ ಮೌರ್ಯ, ಶಾತವಾಹನ, ರಾಷ್ಟ್ರಕೂಟ, ಕದಂಬ, ಚಾಲುಕ್ಯ, ಹೊಯ್ಸಳ, ಸೇವುಣ, ಕಲ್ಯಾಣ, ನೊಳಂಬ, ಚಾಲುಕ್ಯರ, ಪಾಂಡ್ಯರು, ವಿಜಯನಗರ ಮತ್ತು ವಿವಿಧ ಪಾಳೆಯಗಾರರು ತಮ್ಮ ಅಳ್ವಿಕೆಯನ್ನು ಈ ಭಾಗದವರೆಗೂ ವಿಸ್ತರಿಸಲು ಮತ್ತು ಕಲಾ ಕೇಂದ್ರಗಳಾದ ದೇವಾಲಯಗಳನ್ನು ನಿರ್ಮಿಸಿ ಅವುಗಳನ್ನು ಪೋಷಿಸಲು ಇಲ್ಲಿನ ಭೌಗೋಳಿಕ ಪರಿಸರವೇ ಪರೋಕ್ಷ ಸ್ಪೂರ್ತಿ ನೀಡಿದೆ. ಇದರಿಂದಾಗಿ ಇತರೆಡೆಯಂತೆ ಇಲ್ಲಿಯೂ ವಿವಿಧ ಕಾಲಗಳಲ್ಲಿ ಹಲವಾರು ದೇವಾಲಯಗಳು ನಿರ್ಮಾಣವಾಗಿ ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿವೆ. ಜಗಲೂರು ತಾಲೂಕಿನ ವಿವಿಧೆಡೆ ಧಾರ್ಮಿಕ, ಲೌಕಿಕ, ಸೈನಿಕ ವಾಸ್ತುಶಿಲ್ಪಕ್ಕೆ ಸೇರಿದ ಹಲವಾರು ಕಟ್ಟಡಗಳು ನಮಗೆ ದೊರೆಯುತ್ತವೆ. ಇಲ್ಲಿ ದೊರೆಯುವ ಧಾರ್ಮಿಕ ವಾಸ್ತುಶಿಲ್ಪದ ಪ್ರತೀಕಗಳಾದ ದೇವಾಲಯಗಳನ್ನು ಮಾತ್ರ ಅದರಲ್ಲೂ ಪ್ರಮುಖ ದೇವಾಲಯಗಳನ್ನು ವಿಶ್ಲೇಷಿಸುವುದು ಈ ಲೇಖನದ ಪ್ರಧಾನ ಉದ್ದೇಶ. ಅಲ್ಲದೆ ಈ ತಾಲೂಕಿನಾದ್ಯಂತ ಇರುವ ದೇವಾಲಯಗಳನ್ನು ಅವುಗಳೊಂದಿಗೆ ಪ್ರಾಸಂಗಿಕವಾಗಿ ಅಲ್ಲಿ ದೊರೆಯುವ ಪ್ರಧಾನ ಮೂರ್ತಿ ಇಲ್ಲವೇ ಶಿಲ್ಪಗಳನ್ನು ಪ್ರಾಥಮಿಕವಾಗಿ ಒಂದೆಡೆ ದಾಖಲಿಸುವುದು ಈ ಲೇಖನದ ಮತ್ತೊಂದು ಉದ್ದೇಶವಾಗಿದ್ದು, ಇದು ಅದರ ಮಿತಿ ಎಂದರೆ ತಪ್ಪಾಗಲಿಕ್ಕಿಲ್ಲ.

ಪ್ರಮುಖ ದೇವಾಲಯಗಳು

ಅಲೆಮಾರಿಯಾಗಿದ್ದ ಮಾನವ ಒಂದು ಕಡೆ ನೆಲೆನಿಂತಾಗ, ತನ್ನ ಸುತ್ತಲಿನ ಪ್ರಕೃತಿಯ ಬಗ್ಗೆ ಆತನಿಗೆ ಭಯ, ಗೌರವ, ಭಕ್ತಿಗಳು ಮೂಡಿದವು. ಈ ಹಿನ್ನೆಲೆಯಲ್ಲಿ ಪ್ರಕೃತಿಯ ಎಲ್ಲಾ ವಸ್ತುಗಳು ಅವನಿಗೆ ಪೂಜಾರ್ಹವಾದವು. ಇದರಿಂದಾಗಿಯೇ ಗಿಡ, ಮರ, ನದಿಗಳೆಲ್ಲವೂ ಪೂಜಾಸ್ಥಾನಗಳಾಗಿ ಮಾರ್ಪಟ್ಟವು. ಇನ್ನೂ ಮುಂದುವರೆದು ಪ್ರಕೃತಿಯ ಎಲ್ಲಾ ಚಟುವಟಿಕೆಗಳು ಅವುಗಳ ಕ್ರಿಯಾಶೀಲತೆಯ ಬೆನ್ನ ಹಿಂದೆ ಅವುಗಳನ್ನು ನಿಯಂತ್ರಿಸುವ ಒಂದು ಅಗೋಚರ ಶಕ್ತಿ ಇದೆ ಎಂದು ಕ್ರಮೇಣ ಭಾವಿಸಿ ಅದಕ್ಕೆ ಒಂದು ರೂಪ ಕೊಡಲು ಪ್ರಯತ್ನಿಸಿದ. ಹೀಗೆ ನೀಡಿದ ಒಂದು ರೂಪ ಅಥವಾ ಸಂಕೇತಕ್ಕೆ ರಕ್ಷಣಾರ್ಥವಾಗಿ ಪ್ರತ್ಯೇಕ ಆಲಯ ಕಟ್ಟಲು ಆರಂಭಿಸಿದ. ಇದೇ ದೇವಾಲಯ ರಚನೆಗೆ ನಾಂದಿಯಾಯಿತು. ಕಾಲ ಕಳೆದಂತೆ ಪೂಜಾವಿಧಿಗಳು ನಿರ್ದಿಷ್ಟಗೊಂಡು ಆಚರಣೆಗಳು ಹೆಚ್ಚಿದಂತೆಲ್ಲಾ, ಅದಕ್ಕೆ ತಕ್ಕಂತೆ ದೇವಾಲಯದ ವಿವಿಧ ಭಾಗಗಳ ನಿರ್ಮಾಣವು ಅಧಿಕವಾಯಿತು. ಮಾನವನ ಸುಸಂಸ್ಕೃತ ವಿಚಾರಗಳು ಬೆಳೆದಂತೆಲ್ಲ ದೇವಾಲಯದ ನಿರ್ಮಾಣವು ಅಧಿಕವಾಗಿ, ಅದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವೆನಿಸಿತು. ಅವು ಸಾರ್ವಜನಿಕ ಪೂಜಾಮಂದಿರಗಳಾಗುವುದರೊಂದಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರವಹಿಸಿದವು. ಹಾಗೆಯೇ ಪ್ರಮುಖ ವಿದ್ಯಾಕೇಂದ್ರಗಳಾಗಿ ಮೆರೆಯುವುದರೊಂದಿಗೆ ಸಂಗೀತ, ನೃತ್ಯ ಮುಂತಾದ ಕಲೆಗಳಿಗೆ ಆಸರೆಯಾದವು. ಹೀಗೆ ಸಮಾಜದ ವಿವಿಧ ಉದ್ದೇಶಗಳಿಗೆ ನೆರವಾಗಿ ನಿಂತು, ಒಂದಲ್ಲಾ ಒಂದು ಬಗೆಯಲ್ಲಿ ಸಮಾಜದ ಎಲ್ಲಾ ಸ್ತರದ ಮಾನ್ಯತೆಯನ್ನು ಪಡೆದುದರಿಂದ ಅವು ಅವರ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಸಮಾಜದ ಕೇಂದ್ರಸ್ಥಾನಗಳೆನಿಸಿವೆ. ಅಂತೆಯೇ ದೇವಾಲಯ ನಿರ್ಮಾಣವು ಇಡೀ ಸಮಾಜದ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವೆನಿಸಿತು. ಈ ಭಕ್ತಿ ಮತ್ತು ಶ್ರದ್ಧೆಯಿಂದಲೇ ಇಲ್ಲಿ ಆಳ್ವಿಕೆ ಮಾಡಿದ ರಾಜರು, ರಾಣಿಯರು, ಅವರ ಸಾಮಂತರು ಅಧಿಕಾರಿಗಳು, ಮಂತ್ರಿಗಳು, ಪ್ರಮುಖ ವ್ಯಕ್ತಿಗಳು ಕೂಡ ದೇವಾಲಯಗಳನ್ನು ನಿರ್ಮಿಸಿದ್ದರು, ಇಲ್ಲವೇ ಪ್ರೋತ್ಸಾಹ ನೀಡಿದರು.

ಕಲ್ಲೇದೇವರಪುರ, ಮುಷ್ಠೂರು, ಬಿಳಚೋಡು, ಚದುರಗೊಳ, ಕೊಡದಗುಡ್ಡ, ಕೊಣಚಗಲ್, ಗುತ್ತಿದುರ್ಗ, ಅಸಗೋಡು, ಉಚ್ಚಂಗಿದುರ್ಗ ಹೀರೆಮಲ್ಲನಹೊಳೆ, ಜಗಲೂರು, ಭರಮಸಮುದ್ರ, ಕಾಮಗೇತನಹಳ್ಳಿ, ಅಣಬೂರು, ಕಸುವನಹಳ್ಳಿ, ಗುಹೇಶ್ವರಗುಡ್ಡ, ಉದ್ಗಟ್ಟ, ಸೊಕ್ಕೆ, ಯರ್ಲಕಟ್ಟೆ, ನಿಬಗೂರು, ಕರಡಿದುರ್ಗ, ಕಲ್ಲಹಳ್ಳಿ, ರಾಮಘಟ್ಟ, ಬಾಡ, ಬಸವನಕಟ್ಟೆ, ದಿದ್ದಿಗಿ, ಪಾಲನಾಯಕನಕೋಟೆ, ಕಮಂಡಲಗೊಂದಿ, ಹೊನ್ನಮರಡಿ, ಬಿದರಕೆರೆ, ಅರಿಷಿಣಗುಂಡಿ, ತೋರಣಗಟ್ಟೆ ಮೊದಲಾದೆಡೆ ಚಾರಿತ್ರಿಕ ದೇವಾಲಯಗಳಿದ್ದು. ಅವುಗಳಲ್ಲಿ ಪ್ರಮುಖ ದೇವಾಲಯಗಳನ್ನು ಮಾತ್ರ ಇಲ್ಲಿ ವಿವರಿಸಿದೆ.

. ಕೊಡದ ಗುಡ್ಡದ ಈಶ್ವರ ದೇವಾಲಯ

ಗ್ರಾಮದ ಕೆರೆಯಬಳಿ ಇರುವ ಈ ದೇವಾಲಯವು ಪೂರ್ವಾಭಿಮುಖವಾಗಿದ್ದು ಗರ್ಭಗುಡಿ, ಅಂತರಾಳ ಮತ್ತು ನವರಂಗವನ್ನೊಂದಿದೆ. ಬಳಪದಕಲ್ಲು ಮತ್ತು ಗ್ರಾನೈಟ್ ಶಿಲೆಯನ್ನು ಬಳಸಿ ನಿರ್ಮಿಸಲಾಗಿರುವ ಈ ದೇವಾಲಯದ ಕೆಲವು ಮೂಲ ಭಾಗಗಳು ಇಂದು ಅವನತಿಯ ಹಂತವನ್ನು ತಲುಪಿವೆ. ದೇವಾಲಯದ ಹೊರಭಾಗದ ಅಧಿಷ್ಠಾನವು ಭೂಮಿಯಲ್ಲಿ ಹೂತಿರುವುದರಿಂದ ಅದರ ಭಾಗಗಳ ಗೋಚರಿಸುವುದಿಲ್ಲ. ಇದರ ಭಿತ್ತಿ ಮತ್ತು ಕಪೋತ ಭಾಗಗಳು ಯಾವುದೇ ಶಿಲ್ಪಗಳಿಲ್ಲದೆ ಸರಳವಾಗಿವೆ. ಗರ್ಭಗುಡಿಯ ಮೇಲಿನ ಶಿಖರ ಈಗ ಕಣ್ಮರೆಯಾಗಿದೆ.

ಚೌಕಕಾರದ ಗರ್ಭಗುಡಿಯಲ್ಲಿ ಲಿಂಗವಿದ್ದು, ಅದರ ದ್ವಾರವು ಸರಳವಾಗಿದೆ. ಇದರ ಮುಂದಿನ ಅಂತರಾಳವು ಅಯತಾಕಾರವಾಗಿದ್ದು, ಇದರಲ್ಲಿ ಮಹಿಷಾಸುರ ಮರ್ಧಿನಿ, ನಾಗ – ನಾಗಿಣಿ ಮೊದಲಾದ ಮೂರ್ತಿಗಳನ್ನು ಇಡಲಾಗಿದೆ. ಅಂತರಾಳದ ದ್ವಾರವು ಸ್ತಂಭಶಾಖೆಯಿಂದ ಕೂಡಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ನವರಂಗದಲ್ಲಿ ಚೌಕ ಮತ್ತು ಅಷ್ಟಕೋನ ಹಾಗೂ ವೃತ್ತಾಕಾರದ ನಾಲ್ಕು ಕಂಬಗಳಿದ್ದು ಅವು ಸರಳವಾಗಿವೆ. ಇಲ್ಲಿನ ಕಂಬವೊಂದರ ಚೌಕಾಕಾರದ ಭಾಗದಲ್ಲಿ ಕಲಶದ ರೀತಿಯ ಅಲಂಕಾರವಿದ್ದು, ಅದೇ ಕಂಬದ ‘ದಂಡಾಗ್ರ’ ಭಾಗದಲ್ಲಿ ಮಾತ್ರ ಆಭರಣಗಳ ಅಲಂಕಾರವಿದೆ, ನವರಂಗದ ಮಧ್ಯಭಾಗದಲ್ಲಿ ಚಿಕ್ಕ ನಂದಿಯೊಂದನ್ನು ಇಡಲಾಗಿದೆ. ಗಣೇಶ, ಸಪ್ತಮಾತೃಕೆಯರ ಮೂರ್ತಿಗಳನ್ನು ಇದರ ಸಮೀಪವೇ ಇಡಲಾಗಿದೆ. ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ನವರಂಗದ ಒಳಭಿತ್ತಿಯ ಭಾಗಗಳನ್ನು ನಂತರ ಕಾಲದಲ್ಲಿ ಮಣ್ಣಿನಿಂದ ಗಾರೆ ಹಾಕಿದ್ದಾರೆ.

ಈ ದೇವಾಲಯದ ಮುಂಭಾಗದಲ್ಲಿನ ಕೆರೆ ಕೋಡಿ (ತೂಬು) ಮೇಲೆ ಮಕರ ತೋರಣಯುಕ್ತ ಗಜಲಕ್ಷ್ಮಿ ಪಟ್ಟಿಕೆ ಇದೆ. ಇದರಲ್ಲಿ ಪದ್ಮಹಿಡಿದ ಗಜಲಕ್ಷ್ಮಿ ಮಧ್ಯದಲ್ಲಿ ಕುಳಿತಿದ್ದು, ಆಕೆಯ ಎಡ ಬಲದಲ್ಲಿ ಆನೆಗಳಿವೆ. ಇದೇ ಪಟ್ಟಿಕೆಯಲ್ಲಿ ಎರಡು ಪಕ್ಷಿಗಳು ಆಮೆಯೊಂದನ್ನು ಹೊತ್ತೊಯ್ಯವ ದೃಶ್ಯವಿದೆ. ಇದರ ಕೆಳಭಾಗದಲ್ಲಿ ನಾಯಿ ಇದ್ದು. ಇದರ ಮತ್ತೊಂದು ಭಾಗದಲ್ಲಿ ನಾಯಿಯ ಮೇಲೆ ಕುಳಿತ ಕಪಿ ಧ್ವಜವನ್ನು ಹಿಡಿಯಲು ಯತ್ನಿಸುತ್ತಿರುವಂತೆ ಹಾಗೂ ಮೊಸಳೆಗಳನ್ನು ಈ ಪಟ್ಟಿಕೆಯಲ್ಲಿ ಕೆತ್ತಲಾಗಿದೆ. ಇವು ನಮಗೆ ಪಂಚತಂತ್ರದ ಕಥೆಗಳನ್ನು ನೆನಪಿಸುತ್ತವೆ.

ಈ ದೇವಾಲಯದ ಸರಳವಾದ ದ್ವಾರಗಳು ಕಂಭಗಳ ಮೇಲಿನ ಕಲಶದಂತಹ ಅಲಂಕರಣೆ ಹಾಗೂ ದೇವಾಲಯದ ಮುಂದಿನ ಮಕರ ತೋರಣಯುಕ್ತ ಗಜಲಕ್ಷ್ಮಿ ಪಟ್ಟಿಕೆ ಇವುಗಳು ರಾಷ್ಟ್ರಕೂಟರ ಕೆಲ ದೇವಾಲಯಗಳ ಲಕ್ಷ್ಮಣಗಳಿಗೆ ಹೋಲಿಕೆಯಾಗುತ್ತವೆ. ಆದ್ದರಿಂದ ಈ ದೇವಾಲಯ ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದೆಂದು ಹೇಳಬಹುದು.

. ಕೊಡದ ಗುಡ್ಡದ ವೀರಭದ್ರ ದೇವಾಲಯ

ಗ್ರಾಮದ ಉತ್ತರಭಾಗದಲ್ಲಿರುವ ಬೆಟ್ಟದ ಮೇಲೆ ಈ ದೇವಾಲಯವಿದ್ದು ಗರ್ಭಗುಡಿ, ತೆರೆದ ಅಂತರಾಳ, ನವರಂಗ, ತೆರದ ಮುಖಮಂಟಪ ಮತ್ತು ಅದರ ಮುಂಭಾಗದ ನಂದಿಮಂಟಪಗಳನ್ನು ಒಳಗೊಂಡಿದೆ.

ಅಧಿಷ್ಠಾನವು ಉಪಾನ, ಪದ್ಮ, ಕಪೋತಗಳಿಂದ ಕೂಡಿದೆ. ಈ ದೇವಾಲಯದ ಬಲಭಾಗದ (ದಕ್ಷಿಣಭಾಗ) ಭಿತ್ತಿಯಲ್ಲಿ ಲಜ್ಜಾಗೌರಿ, ನಾಟ್ಯಪುರುಷನನ್ನು ಕೆತ್ತಲಾಗಿದೆ. ಗರ್ಭಗುಡಿಯ ಭಿತ್ತಿಭಾಗದಲ್ಲಿ ಯಾಳಿ, ಉತ್ತರ ಭಾಗದ ಭಿತ್ತಿಯಲ್ಲಿ (ಎಡಭಾಗ) ಶೇಷಶಯನ ವಿಷ್ಣು, ನಾಗಶಿಲ್ಪಗಲನ್ನು ಮನೋಹರವಾಗಿ ಕೆತ್ತಲಾಗಿದೆ. ಭಿತ್ತಿಯ ಮೇಲಿನ ಪ್ರಸ್ತರದಲ್ಲಿನ ಕಪೋತಭಾಗವು ಸ್ವಲ್ಪ ಕೆಳಬಾಗಿದ ರೀತಿಯಲ್ಲಿದ್ದು, ಸರಳವಾಗಿದೆ. ಮುಖಮಂಟಪದ ಸುತ್ತಲಿನ ಮೇಲ್ಛಾವಣಿ ಇಳಿಜಾರಾಗಿದೆ.

ಗರ್ಭಗುಡಿಯು ಚೌಕಕಾರವಾಗಿದೆ. ಇಲ್ಲಿ ಪಶ್ಚಿಮ ಭಾಗದ ಗೋಡೆ ಇಲ್ಲ. ಬದಲಾಗಿ ನೈಸರ್ಗಿಕವಾಗಿ ಉಳಿದುಬಂದಿರುವ ಬಂಡೆಯೊಂದಕ್ಕೆ ಸ್ಥಾನಿಕ ವೀರಭದ್ರ ಮೂರ್ತಿಯನ್ನು ಕೆತ್ತಿ ಉಳಿದಗೋಡೆಗಳನ್ನು ಕಟ್ಟಲಾಗಿದೆ. ಅದರ ದ್ವಾರವನ್ನು ಇತ್ತೀಚೆಗೆ ಹಿತ್ತಾಳೆ ತಗಡಿನಿಂದ ಅಲಂಕರಿಸಿದ್ದಾರೆ. ಅಂತರಾಳವು ತೆರೆದ ರೀತಿಯಲ್ಲಿದ್ದು, ಸರಳ ರೀತಿಯಲ್ಲಿದೆ.

ನವರಂಗದಲ್ಲಿ ನಾಲ್ಕು ವಿಜಯನಗರ ಶೈಲಿಯ ದಪ್ಪನೆಯ ಕಂಬಗಳಿವೆ. ಇವು ಚೌಕ ಅಷ್ಟಕೋನಾಕಾರವಾಗಿದ್ದು ಸರಳವಾಗಿವೆ. ಇವುಗಳ ಮೇಲಿನ ಬೋದಿಗೆಗಳಿಂದ ಇಳಿಬಿದ್ದ ಕಮಲದ ಮೊಗ್ಗಿನ ಅಲಂಕಾರವಿದೆ. ಇಲ್ಲಿನ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ನವರಂಗವನ್ನು ಪ್ರವೇಶಿಸಲು ಮೂಲದಲ್ಲಿ ಪೂರ್ವ, ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ದ್ವಾರಗಳಿದ್ದು. ಈಗ ದಕ್ಷಿಣ ದ್ವಾರವನ್ನು ಮುಚ್ಚಾಲಾಗಿದೆ. ಪೂರ್ವ ಪ್ರವೇಶದ್ವಾರದ ವೇದ್ಯ ಭಾಗದಲ್ಲಿ ಶೈವ ದ್ವಾರಪಾಲಕರಿದ್ದಾರೆ. ಈ ದ್ವಾರವು ಸರಳವಾಗಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ.

ಮುಖಮಂಟಪಕ್ಕೆ ಹೊಂದಿಕೊಂಡಂತಿರುವ ನವರಂಗದ ಹೊರಭಿತ್ತಿಯ ಎಡಭಾಗದಲ್ಲಿ ಕದನದಲ್ಲಿ ತೊಡಗಿರುವ ಆನೆಗಳನ್ನು ಹಾಗೂ ಬಲಭಾಗದಲ್ಲಿ ಒಂದೇ ದೇಹ ಮೂರು ತಲೆಯ ಸಂಯುಕ್ತ ಹಸುವೊಂದನ್ನು ಕೆತ್ತಲಾಗಿದೆ. ಅಲ್ಲದೆ ಒಂದು ಹಸು ಲಿಂಗದ ಮೇಲೆ ಹಾಲು ಸುರಿಸುವಂತೆ, ಮತ್ತೊಂದು ನೀರನ್ನು ಕುಡಿಯುತ್ತಿರುವಂತೆಯೂ, ಇನ್ನೊಂದು ತಲೆ ಎತ್ತಿ ನಿಂತಿರುವಂತೆ ಶಿಲ್ಪಗಳನ್ನು ಕೆತ್ತಲಾಗಿದೆ. ಇದರ ಸಮೀಪವೇ ಒಂದು ‘ಹಲ್ಲಿ’ಯನ್ನು ಸಹಾ ಸುಂದರವಾಗಿ ಬಿಡಿಸಲಾಗಿದೆ.

ಮುಖಮಂಟಪವು ತೆರದ ರೀತಿಯಲ್ಲಿದ್ದು, ಎರಡು ಕಂಬಗಳಿಂದ ಕೂಡಿದೆ. ಇದರ ಮುಚ್ಚಿಗೆಯಲ್ಲಿ ‘ಪದ್ಮ’ವಿದೆ. ದೇವಾಲಯದ ಮುಂಭಾಗಕ್ಕೆ ನಂದಿ ಮಂಟಪವಿದ್ದು ಅದರಲ್ಲಿ ನಂದಿಯೊಂದನ್ನು ಇಡಲಾಗಿದೆ.

ಈ ಮೇಲಿನ ವಾಸ್ತುಲಕ್ಷಣಗಳು ವಿಜಯನಗರ ಶೈಲಿಯ ದೇವಾಲಯಗಳಿಗೆ ಹೋಲಿಕೆಯಾಗುತ್ತವೆ. ಇದೇ ಲಕ್ಷಣವುಳ್ಳ ಮತ್ತೊಂದು ದೇವಾಲಯ ಬಸವೇಶ್ವರ. ಈ ದೇವಾಲಯದ ಸಮೀಪವೇ ಇದೆ. ಕ್ರಿ.ಶ. ೧೪೯೬ರಲ್ಲಿ ಈ ದೇವಾಲಯಕ್ಕೆ ದಾನನೀಡಿದ ವಿವರವನ್ನು ಇಲ್ಲಿನ ಶಾಸನವೊಂದು ಉಲ್ಲೇಖಿಸುತ್ತದೆ.

. ಬಿಳಚೋಡು ಈಶ್ವರ ದೇವಾಲಯ

ಬಳಪದಶಿಲೆ ಮತ್ತು ಕಗ್ಗಲ್ಲು ಬಳಸಿ ನಿರ್ಮಿಸಿರುವ ಈ ದೇವಾಲಯವು ಗ್ರಾಮದ ಮಧ್ಯಭಾಗದಲ್ಲಿದೆ. ಗರ್ಭಗುಡಿ, ಅಂತರಾಳ, ನವರಂಗ ಮತ್ತು ತೆರೆದ ಮುಖಮಂಟಪ ಹೊಂದಿರುವ ಇದು ದಕ್ಷಿಣಾಭಿಮುಖವಾಗಿದೆ. ಹೊರಗಿನಿಂದ ನೋಡಿದರೆ ಬುರುಜು ರೀತಿ ಕಾಣುವ ಈ ದೇವಾಲಯದ ಒಳಭಾಗದಲ್ಲಿ ಸುಂದರ ವಾಸ್ತು ಭಾಗಗಳಿವೆ.

ಅಧಿಷ್ಟಾನ ಹಾಗು ಹೊರಭಾಗದ ಭಿತ್ತಿಭಾಗವನ್ನು ಸಂಪೂರ್ಣವಾಗಿ ಕಗ್ಗಲ್ಲನ್ನು ಉಪಯೋಗಿಸಿ ಬುರುಜು ರೀತಿಯಲ್ಲಿ ನಂತರದ ಕಾಲದಲ್ಲಿ ಕಟ್ಟಲಾಗಿದೆ. ಆದುದರಿಂದ ಅಧಿಷ್ಟಾನದಲ್ಲಿರುವ ವಿವಿಧ ಭಾಗಗಳಾಗಲಿ, ಭಿತ್ತಿಯ ಮೇಲಿನ ಅಲಂಕಾರವಾಗಲಿ ಕಂಡುಬರುವುದಿಲ್ಲ. (ಆದರೆ ಮುಖಮಂಟಪದ ಕೆಲಭಾಗದಲ್ಲಿ ಮಾತ್ರ, ಪದ್ಮ, ತ್ರಿಪಟ್ಟ ಕುಮುದ, ಕಪೋತ, ಕಂಪ ಭಾಗಗಳು ಅಲ್ಪಮಟ್ಟಿಗೆ ಗೋಚರಿಸುತ್ತವೆ) ವಾಸ್ತವವಾಗಿ ಮೂಲ ದೇವಾಲಯವನ್ನು ವಿರೋಧಿಗಳಿಂದ ರಕ್ಷಿಸಲು ನಂತರ ಕಾಲದಲ್ಲಿ ಈ ರೀತಿ ನಿರ್ಮಿಸಿರಬೇಕೆನಿಸುತ್ತದೆ (ಈ ಬಗ್ಗೆ ಸ್ಥಳೀಯರಲ್ಲಿ ಕೆಲ ದಂತ ಕಥೆಗಳಿವೆ.).

ದಕ್ಷಿಣಾಭಿಮುಖವಾಗಿರುವ ದೇವಾಲಯದ ಗರ್ಭಗುಡಿ ಚೌಕಕಾರವಾಗಿದ್ದು, ಅದರಲ್ಲಿ ಲಿಂಗವಿದೆ. ಮುಚ್ಚಿಗೆಯಲ್ಲಿ ಪದ್ಮವಿದ್ದು, ಇದರ ದ್ವಾರವನ್ನು ಸರಳ ಅಲಂಕರಣೆಯಿಂದ ಮಾಡಲಾಗಿದೆ. ಸರಳವಾದ ಅಂತರಾಳವಿದ್ದು ಅದರ ಮುಂದಿನ ನವರಂಗದಲ್ಲಿ ನಾಲ್ಕು ಕಂಬಗಳಿದ್ದು, ಅವು ಚೌಕ, ಅಷ್ಟಕೋನ ಹಾಗು ವೃತ್ತಕಾರದಲ್ಲಿವೆ. ಇಲ್ಲಿನ ಕಂಬ ಮತ್ತು ಬೋದಿಗೆಗಳು ಸರಳ ಅಲಂಕರಣೆಯಿಂದ ಕೂಡಿವೆ. ಇದರ ಮುಚ್ಚಿಗೆಯಲ್ಲಿ ಅರಳಿದ ತಾವರೆಯನ್ನು ಕೆತ್ತಲಾಗಿದೆ. ನವರಂಗದಲ್ಲಿ ಉಮಾಮಹೇಶ್ವರ, ವಿಷ್ಣು, ಹನುಮಂತ, ಸೂರ್ಯ ಮೊದಲಾದ ಮೂರ್ತಿಗಳಿವೆ. ಇದರ ಪ್ರವೇಶದ್ವಾರವು ಲತಾ, ಸ್ತಂಭ, ವ್ಯಾಳಿ ಶಾಖೆಗಳಿಂದ ಕೂಡಿದೆ. ಅಲ್ಲದೆ ಲತಾಶಾಖೆಯು ಲಲಾಟದವರೆಗೆ ಮುಂದುವರಿದಿದೆ. ದ್ವಾರದಲ್ಲಿ ತ್ರಿಶೂಲ, ಡಮರುಗಳನ್ನು ಹಿಡಿದು ಸ್ಥಾನಿಕರಾಗಿರುವ ಶೈವ ದ್ವಾರಪಾಲಕರಿರುವರು. ‘ಲಲಾಟ’ದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಲಲಾಟದ ಮೇಲಿನ ಉತ್ತರಾಂಗಭಾಗದ ಪಟ್ಟಿಕೆಯ ಮಧ್ಯದಲ್ಲಿ ಶಿವನು ಆಸೀನನಾಗಿದ್ದು, ಆತನ ಬಳಿ ನಂದಿ ಇದೆ. ಈತನ ಎಡ ಮತ್ತು ಬಲದಲ್ಲಿ ಧ್ಯಾನಾಸಕ್ತ ಋಷಿಮುನಿಗಳು ಮತ್ತು ವಿವಿಧ ಭಂಗಿಯ ಶಿಲ್ಪಗಳನ್ನು ನಯನ ಮನೋಹರವಾಗಿ ಕೆತ್ತಲಾಗಿದೆ. ಇದು ದೇವಾಲಯದ ವಿಶೇಷ. ಮುಖಮಂಟಪವು ತೆರೆದ ರೀತಿಯಲ್ಲಿದ್ದು, ಒಳಭಾಗದಲ್ಲಿ ಕಕ್ಷಾಸನಗಳಿವೆ. ಎರಡು ಕಂಬಗಳಿಂದ ಕೂಡಿದ ಈ ಮಂಟಪವನ್ನು ಪ್ರವೇಶಿಸಲು ‘ಹಸ್ತಿಹಸ್ತ’ ಫಲಕದೊಡನೆ ಇರುವ ಸೋಪಾನಗಳಿವೆ. ಈ ಮಂಟಪದಲ್ಲಿಯೇ, ನಾಗರಕಲ್ಲು, ನಂದಿ ವೀರಗಲ್ಲು, ಮತ್ತು ಸಪ್ತಮಾತೃಕೆಯರ ಶಿಲಾಫಲಕಗಳನ್ನು ಇಡಲಾಗಿದೆ.

ದೇವಾಲಯದ ಮೇಲಿನ ಮೂಲಶಿಖರ ಭಗ್ನವಾಗಿದ್ದು, ಶಿಖರ ಶೈಲಿಯನ್ನು ಗುರುತಿಸಲು ಕಷ್ಟವಾಗಿದೆ. ದೇವಾಲಯದ ವಾಸ್ತು ಭಾಗಗಳನ್ನು ಹಾಗೂ ಮೂರ್ತಿಶಿಲ್ಪಗಳ ಶೈಲಿಯನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣಿ ಚಾಲುಕ್ಯರ ಕಾಲಾವಧಿಗೆ ಹೋಲಿಕೆಯಾಗುತ್ತದೆ ಎಂದು ಹೇಳಬಹುದು.

. ಕಲ್ಲೇದೇವರಪುರದ ಕಲ್ಲೇಶ್ವರ ದೇವಾಲಯ

ಪೂರ್ವಾಭಿಮುಖವಾಗಿರುವ ಈ ದೇವಾಲಯವು ಗ್ರಾಮದ ಮಧ್ಯದಲ್ಲಿದ್ದು, ಗರ್ಭಗುಡಿ, ಅಂತರಾಳ, ನವರಂಗ, ಮುಖಮಂಟಪಗಳನ್ನು ಒಳಗೊಂಡಿದೆ.

ಹೊರಭಾಗದ ಅಧಿಷ್ಠಾನವು ಉಪಾನ, ಪದ್ಮ, ಕಪೋತ ಭಾಗಗಳನ್ನು ಹೊಂದಿದೆ. ನಂತರ ಕಾಲದಲ್ಲಿ ಈ ಭಾಗವನ್ನು ದುರಸ್ಥಿಗೊಳಿಸಿದ್ದಾರೆ. ಭಿತ್ತಿಭಾಗವು ಅರೆಗಂಬಗಳಿಂದ ಕೂಡಿದ್ದು, ಉಳಿದಂತೆ ಸರಳವಾಗಿದೆ. ಮುಖಮಂಟಪದ ಭಾಗವನ್ನು ಇತ್ತೀಚಿಗೆ ನವೀಕರಿಸಲಾಗಿದೆ. ಭಿತ್ತಿಯ ಮೇಲೆ ಪ್ರಸ್ತರ ಭಾಗವಿದ್ದು, ಅದರಲ್ಲಿನ ಕಪೋತಭಾಗವು ಕೆಳಬಾಗಿದ ರೀತಿಯಲ್ಲಿದ್ದು, ಸರಳವಾಗಿದೆ. ಗರ್ಭಗುಡಿಯ ಮೇಲೆ ಕದಂಬ ನಾಗರಶೈಲಿಯ ಶಿಖರ, ಶಿಖರದ ಮೇಲೆ ಹಿತ್ತಾಳೆ ಕಲಶವಿದೆ. ಶಿಖರದ ಮುಂಭಾಗದಲ್ಲಿ (ಅಂತರಾಳದ ಮೇಲೆ) ಹೊಯ್ಸಳರ ಲಾಂಛನವಾದ ಸಳ ಹುಲಿಯೊಡನೆ ಹೋರಾಡುತ್ತಿರುವ ದೃಶ್ಯವಿರುವ ಮೂರ್ತಿಯನ್ನು ಇಡಲಾಗಿದೆ. ಆದರೆ ಹುಲಿಮಾತ್ರ ಈಗ ಕಾಣಬರುತ್ತಿದ್ದು, ಉಳಿದಭಾಗ ತ್ರುಟಿತವಾಗಿದೆ.

ಚೌಕಕಾರದ ಗರ್ಭಗುಡಿಯಲ್ಲಿ ಲಿಂಗವಿದ್ದು, ಇದರ ಮುಚ್ಚಿಗೆಯಲ್ಲಿ ಅರಳಿದ ಪದ್ಮವಿದೆ. ಇದರ ದ್ವಾರವನ್ನು ಇತ್ತೀಚೆಗೆ ಹಿತ್ತಾಳೆಯ ತಗಡಿನಿಂದ ಅಲಂಕರಿಸಿದ್ದಾರೆ. ಅಂತರಾಳವು ಆಯತಾಕಾರವಾಗಿದ್ದು, ಇಲ್ಲಿನ ದಕ್ಷಿಣಕ್ಕೆ ಪ್ರವೇಶದ್ವಾರಗಳಿವೆ. ಇದರ ಉತ್ತರಭಾಗದಲ್ಲಿ ಚಿಕ್ಕ ಕೋಷ್ಟಗುಡಿ ಇದೆ. ನವರಂಗ ವಿವಿಧ ಭಾಗಗಳಲ್ಲಿ ವಿಷ್ಣು, ನಂದಿ, ಗಣಪತಿ, ವೀರಭದ್ರ ಮೊದಲಾದ ಮೂರ್ತಿಗಳಿವೆ. ಮಧ್ಯದಲ್ಲಿರುವ ನಾಲ್ಕು ಕಂಬಗಳು ಚೌಕ ವೃತ್ತಕಾರವಾಗಿವೆ. ಇವುಗಳ ದಂಡಭಾಗವು ಚೌಕಕಾರವಾಗಿದ್ದು, ಅದರ ಮೇಲಿನ ದಂಡಾಗ್ರ ಭಾಗವು ವೃತ್ತಕಾರವಾಗಿ ಬಳೆ, ಗಂಟೆಯ ಅಲಂಕಾರವನ್ನು ಹೊಂದಿದೆ. ಗಂಟೆಯಾಕಾರದ ಭಾಗದಲ್ಲಿ ಮಣಿಸರ, ಪತ್ರ ಮತ್ತು ಪುಷ್ಪಗಳನ್ನು ಅಲಂಕಾರಿಕವಾಗಿ ಬಿಡಿಸಲಾಗಿದೆ. ಬೋದಿಗೆಗಳು ಮತ್ತು ನವರಂಗದ ದ್ವಾರಗಳು ಸರಳವಾಗಿವೆ. ಇಲ್ಲಿನ ‘ಲಲಾಟ’ದಲ್ಲಿ ಗಣಪತಿಯ ಶಿಲ್ಪವಿದ್ದು, ಅದರ ಕೆಳಗೆ ಎರಡು ಇಲಿಗಳನ್ನು ಚಿಕ್ಕದಾಗಿ ಬಿಡಿಸಲಾಗಿದೆ. ಅಲ್ಲದೆ ಗಣಪತಿಯ ಎಡಬದಿಗೆ ಕುಮಾರಸ್ವಾಮಿಯನ್ನು ಕೆತ್ತಲಾಗಿದೆ.

ಮುಖಮಂಟಪದಲ್ಲಿ ನಾಲ್ಕು ಗ್ರಾನೈಟ್ ಶಿಲೆಯ ಕಂಬಗಳಿವೆ. ಇದರಲ್ಲಿ ನಂತರ ಕಾಲದಲ್ಲಿ ನಿರ್ಮಿಸಿದ ಗೌರಮ್ಮ, ವೀರಭದ್ರನ ಉಪಗುಡಿಗಳಿವೆ. ಇದರ ದ್ವಾರದಲ್ಲಿ ಶೈವ ದ್ವಾರಪಾಲಕರಿರುವರು. ಅವರ ಎಡಬಲದಲ್ಲಿ ಚಾಮರ ಹಿಡಿದ ಹಾಗೂ ಅಂಜಲಿ ಮುದ್ರೆ, ಸ್ತ್ರೀಯರ ಶಿಲ್ಪಗಳನ್ನು ಕೆತ್ತಲಾಗಿದೆ. ಲಲಾಟ ಬಿಂಬದಲ್ಲಿ ಪೂರ್ಣಕುಂಭದ ಅಲಂಕಾರವಿದೆ. ಈ ದೇವಾಲಯದ ಮುಂಭಾಗದಲ್ಲಿ ನಂದಿ ಹಾಗೂ ಉಯ್ಯಾಲೆ ಕಂಬಗಳಿವೆ.

ದೇವಾಲಯದ ಮೇಲಿರುವ ಹೊಯ್ಸಳ ಲಾಂಛನ ಹಾಗು ವಾಸ್ತು ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಹೊಯ್ಸಳರ ಕಾಲಾವಧಿಯಲ್ಲಿ ಈ ದೇವಾಲಯ ನಿರ್ಮಾಣವಾಗಿ ತದನಂತರದ ಅರಸರಿಂದ ಹಲವಾರು ಮಾರ್ಪಾಡುಗಳಿಗೆ ಒಳಗಾಗಿದೆಯೆಂದು ಹೇಳಬಹುದು. ಹೊಯ್ಸಳ ಅರಸರು ಮತ್ತು ನಂತರದ ಅರಸರು ಹಾಗು ಅವರ ಸಾಮಂತರು ಈ ದೇವಾಲಯಕ್ಕೆ ದಾನ ಬಿಟ್ಟ ಬಗ್ಗೆ ಇಲ್ಲಿನ ಶಾಸನಗಳಿಂದ ವಿವರಣೆ ದೊರಕುತ್ತದೆ.

. ಕೊಣಚಗಲ್ ರಂಗನಾಥಸ್ವಾಮಿ ದೇವಾಲಯ

ಕೊಣಚಗಲ್ ಬೆಟ್ಟದ ಮೇಲೆ ಈ ದೇವಾಲಯವಿದ್ದು ಪೂರ್ವಾಭಿಮುಖವಾಗಿದೆ. ಗ್ರಾನೈಟ್ ಶಿಲೆಯನ್ನು ಬಳಸಿ ನಿರ್ಮಿಸಲಾಗಿರುವ ಈ ದೇವಾಲಯವು ಗರ್ಭಗುಡಿ, ಅಂತರಾಳ, ನವರಂಗ ಹಾಗೂ ತೆರದ ಮುಖಮಂಟಪಗಳನ್ನು ಒಳಗೊಂಡಿದೆ.

ಚೌಕಕಾರದ ಗರ್ಭಗುಡಿಯಲ್ಲಿ ಸುಂದರ ರಂಗನಾಥನ ವಿಗ್ರಹವಿದೆ. ಅಂತರಾಳವು ಸರಳವಾಗಿದ್ದು. ಅದರ ದ್ವಾರದಲ್ಲಿ ವೈಷ್ಣವ ದ್ವಾರಪಾಲಕರಿದ್ದಾರೆ. ನವರಂಗದಲ್ಲಿ ನಾಲ್ಕು ಗ್ರಾನೈಟ್‍ಶಿಲೆಯ ಬೃಹತ್ ಕಂಬಗಳಿವೆ. ಇವು ಚೌಕ, ಚತುರಸ್ರವಾಗಿದ್ದು, ಹಲವು ಶಿಲ್ಪಗಳಿಂದ ಅಲಂಕೃತವಾಗಿದೆ. ಅವುಗಳಲ್ಲಿ ಮತ್ಸ್ಯ, ಗರುಡ, ಹನುಮ, ಹಂಸ, ಯಾಳಿ, ಯತಿ, ಲಿಂಗ, ನಂದಿ ಶಂಖ, ಮೃದಂಗ ಭಾರಿಸುವವ, ವಿಷ್ಣು, ಚಕ್ರ, ಲಕ್ಷ್ಮಿನರಸಿಂಹ ಮೊದಲಾದ ಶಿಲ್ಪಗಳು ಪ್ರಮುಖವಾಗಿವೆ. ಕಂಬಗಳ ಮೇಲಿನ ಬೋದಿಗೆಯು ಪುಷ್ಪಗಳ ಅಲಂಕಾರದಿಂದ ಕೂಡಿದೆ. ಮಧ್ಯೆದಲ್ಲಿರುವ ಮುಚ್ಚಿಗೆಯಲ್ಲಿ ಪದ್ಮವಿದ್ದು, ಅಲಂಕರಯುತವಾಗಿದೆ. ನವರಂಗ ಪಶ್ಚಿಮ ಗೋಡೆಯಲ್ಲಿ (ಅಂತರಾಳದ ಹೊರಭಿತ್ತಿ) ಗಣೇಶನ ಶಿಲ್ಪವಿದೆ.

ಈ ನವರಂಗಕ್ಕೆ ಉತ್ತರ ಮತ್ತು ಪೂರ್ವದಲ್ಲಿ ಪ್ರವೇಶದ್ವಾರಗಳಿವೆ. ಉತ್ತರದ್ವಾರದಲ್ಲಿ ವೈಷ್ಣವ ದ್ವಾರಪಾಲಕರಿದ್ದು, ತ್ರಿಭಂಗದಲ್ಲಿ ನಿಂತಿದ್ದಾರೆ. ಉಳಿದಂತೆ ಈ ದ್ವಾರವು ಸರಳ ರೀತಿಯಲ್ಲಿದ್ದು, ಲಲಾಟದಲ್ಲಿ ಗಜಲಕ್ಷ್ಮಿ ಶಿಲ್ಪವನ್ನು ಕೆತ್ತಲಾಗಿದೆ. ಪೂರ್ವದ್ವಾರದಲ್ಲಿ ವೈಷ್ಣವ ದ್ವಾರಪಾಲಕರಿದ್ದಾರೆ. ದ್ವಾರದಲ್ಲಿ ಪುಷ್ಪಷಾಖೆಯಿಂದ ಮಾತ್ರ ಅಲಂಕೃತವಾಗಿದ್ದು, ಉಳಿದ ಶಾಖೆಗಳು ಅಲಂಕೃತವಾಗಿಲ್ಲ. ಮೊದಲಿನ ಎರಡು ಶಾಖೆಗಳು ಲಲಾಟದವರೆಗೂ ಮುಂದುವರಿದಿವೆ. ಲಲಾಟದಲ್ಲಿ ಗಜಲಕ್ಷ್ಮಿಶಿಲ್ಪವಿದೆ.

ಮುಖಮಂಟಪವು ತೆರೆದ ರೀತಿಯಲ್ಲಿದ್ದು, ಅದರಲ್ಲಿ ಎಂಟು ಬೃಹತ್ ಗಾತ್ರದ ಕಂಬಗಳಿವೆ. ಅವು ಚೌಕ, ಚತುರಸ್ರಾಕಾರವಾಗಿದ್ದು, ಚೌಕಕಾರದ ಭಾಗದಲ್ಲಿ ವಿವಿಧ ಶಿಲ್ಪಗಳನ್ನು ಕೆತ್ತಲಾಗಿದೆ. ಅವುಗಳಲ್ಲಿ ಹಣ್ಣು ತಿನ್ನುತ್ತಿರುವ ಕೋತಿ, ಹಾವನ್ನು ಹಿಡಿದಿರುವ ವೀರ, ಅಂಜನೇಯ, ನಂದಿ, ಯತಿಗಳು, ಮೂರು ತಲೆಯ ಹಸುಲಿಂಗಕ್ಕೆ ಹಾಲನ್ನು ಸುರಿಸುತ್ತಿರುವುದು. ಕೈಯಲ್ಲಿ ಬಿಲ್ಲು ಹಿಡಿದು ಹೊರಟ, ಸ್ತ್ರೀ, ಯಾಳಿ ಮುಂತಾದ ಶಿಲ್ಪಗಳು ಮುಖ್ಯವಾಗಿವೆ. ಇದೇ ಮಂಟಪದ ಪಶ್ಚಿಮ ಭಿತ್ತಿಯಲ್ಲಿ (ನವರಂಗ ದ್ವಾರದ ಭಿತ್ತಿಯಲ್ಲಿ) ಜೋಡಿ ಮೀನು ಕದನದಲ್ಲಿ ತೊಡಗಿದ ಅನೆಗಳು, ಎಡಭಾಗದಲ್ಲಿ ಇದು ಬಲಭಾಗ ಭಿತ್ತಿಯಲ್ಲಿ ಮಿಥುನ ಶಿಲ್ಪಗಳಿವೆ.

ಈ ದೇವಾಲಯದ ಹೊರಭಾಗದ ಅಧಿಷ್ಟಾನವು ಯಾವುದೇ ಅಲಂಕಾರವಿಲ್ಲದೆ ಸರಳವಾಗಿದೆ. ಅಲ್ಲದೆ ಭಿತ್ತಿಯಲ್ಲಿಯೂ (ಈ ಹಿಂದೆ ಹೇಳಿದ ಭಾಗಗಳನ್ನು ಹೊರತುಪಡಿಸಿ) ಯಾವುದೇ ಶಿಲ್ಪಗಳಿರುವುದಿಲ್ಲ. ಭಿತ್ತಿಯ ಮೇಲಿನ ಕಪೋತ ಭಾಗವು ಸ್ವಲ್ಪ ಮುಂದೆ ಚಾಚಿದ್ದು, ಅದರಲ್ಲಿ ಯಾವುದೇ ಅಲಂಕಾರವಿಲ್ಲ, ಶಿಖರವನ್ನು ಇತ್ತೀಚಿಗೆ ನಿರ್ಮಿಸಲಾಗಿದೆ. ಮುಖಮಂಟಪದ ಎದುರಿನಲ್ಲಿ ಗರುಡನ ಚಿಕ್ಕ ಗುಡಿಯಿದ್ದು, ಅದರಲ್ಲಿ ಸುಂದರ ಗರುಡ ಮೂರ್ತಿ ಇದೆ. ಇಲ್ಲೆಯೇ ದೀಪಸ್ತಂಭವಿದೆ. ಇಲ್ಲಿನ ವಾಸ್ತು ಮತ್ತು ಶಿಲ್ಪ ಲಕ್ಷಣಗಳ ಅಧಾರದ ಮೇಲೆ ಈ ದೇವಾಲಯ ವಿಜಯನಗರ ಕಾಲದಲ್ಲಿ (೧೫ – ೧೬ ನೇ ಶತಮಾನ) ನಿರ್ಮಾಣವಾಗಿ, ತದನಂತರ ಅಂದರೆ ವಿಜಯನಗರೋತ್ತರ ಕಾಲದಲ್ಲಿ (ಪಾಳೆಯಗಾರರ ಕಾಲದಲ್ಲಿ) ಅಭಿವೃದ್ಧಿಯಾಗಿರಬಹುದೆಂದು ಊಹಿಸಬಹುದಾಗಿದೆ.

ಮೂರ್ತಿಶಿಲ್ಪಗಳು

ದೇವಾಲಯಗಳ ಅವಿಭಾಜ್ಯ ಅಂಗಗಳಾದ ಮೂರ್ತಿಗಳು ಇದೇ ತಾಲೂಕಿನ ಆಸಗೋಡು, ಕಲ್ಲೇದೇವರಪುರ, ಚದುರಗೊಳ, ಗುತ್ತಿದುರ್ಗ, ಕೂದದಗುಡ್ಡ, ಕೊಣಚಗಲ್, ಮುಷ್ಠೂರು, ದೊಣ್ಣೆಹಳ್ಳಿ, ಬಿಳಿಚೋಡು, ನಿಬಗೂರು, ದಿಡಗೂರು, ಅಣಬೂರು, ಸೊಕ್ಕೆ, ರಾಯಘಟ್ಟ ಮೊದಲಾದೆಡೆ ಕಂಡುಬಂದಿವೆ. ಚಾರಿತ್ರಿಕ ಕಾಲಘಟ್ಟಕ್ಕೆ ಸೇರಿದ ಶಿವಲಿಂಗ, ನಂದಿ, ವೀರಭದ್ರ, ಕಾರ್ತಿಕೇಯ, ಭೈರವ, ಉಮಮಹೇಶ್ವರ, ವೀರಭದ್ರ, ಕೇಶವ, ವೇಣುಗೋಪಾಲ, ಮಾಧವ, ಅನಂತಶಯನ, ಕಾಳಿ, ಮೊದಲಾದ ಮೂರ್ತಿಗಳು ದೊರೆತಿದ್ದು, ಅವುಗಳ ಅಧ್ಯಯನದ ದೃಷ್ಠಿಯಿಂದ ಮಹತ್ವ ಪಡೆದಿದ್ದು, ಅವುಗಳಲ್ಲಿ ಕೆಲವು ಮುಖ್ಯ ಶಿಲಾಮೂರ್ತಿಗಳನ್ನು ಮಾತ್ರ ಇಲ್ಲಿ ವಿವರಿಸಲಾಗಿದೆ.

. ಚದುರಗೊಳದ ಭೈರವ

ಕಪ್ಪುಶಿಲೆಯಿಂದ ಕಡೆಯಲಾದ ಈಮೂರ್ತಿ ಗ್ರಾಮದ ಭೈರವ ದೇವಾಲಯದಲ್ಲಿದೆ. ಕ್ರಿ.ಶ. ೮ನೇ ಶತಮಾನಕ್ಕೆ ಸೇರಿರುವ ಈ ಮೂರ್ತಿ ಪಾಣಿಪೀಠದ ಮೇಲೆ ಸ್ಥಾನಿಕವಾಗಿದೆ. ಕಿರೀಟಮುಕುಟ ಧರಿಸಿರುವ ಇದು ಎಂಟುಕೈಗಳನ್ನು ಹೊಂದಿದ್ದು, ಅವುಗಳಲ್ಲಿ ತ್ರಿಶೂಲ, ಡಮರುಗ, ಅಂಕುಶ, ಖಡ್ಗ, ಕಠಾರಿ, ಧನಸ್ಸು, ಕಪಾಲಗಳನ್ನು ಹಿಡಿದಿದೆ. ಸರ್ಪಕುಂಡಲ, ಕೊರಳಹಾರ, ಕಂಠಾಭರಣ, ಉದರಬಂಧ, ಕಟಿಬಂಧ, ಮೊಣಕಾಲವರೆಗೆ ಇಳಿಬಿದ್ದ ಉಪವೀತಗಳನ್ನು ಈ ಮೂರ್ತಿಧರಿಸಿದೆ. ಕೈ ಮತ್ತು ಕಾಲುಗಳಲ್ಲಿ ಕಡಗಗಳಿದ್ದು, ಪಾದಗಳಲ್ಲಿ ಅಲಂಕೃತ ಪಾದರಕ್ಷೆಗಳಿವೆ. ನಗ್ನವಾಗಿ ಸರ್ವದ ಮೇಲೆ ನಿಂತಿರುವ ಈ ಮೂರ್ತಿಯ ಎಡಗಾಲ ಮುಂಭಾಗದಲ್ಲಿ ಸರ್ಪ ಹೆಡೆಬಿಚ್ಚಿ ಹಿಂಭಾಗಕ್ಕೆ ತನ್ನ ಬಾಲವನ್ನು ಚಾಚಿ ಮಲಗಿದಂತೆ ಕೆತ್ತಲಾಗಿದೆ. ಬಲಗಾಲಿನ ಬಳಿ ವಾದ್ಯದವರು, ಎಡಗಾಲಿನ ಬಳಿ ನಾಯಿ ಮತ್ತು ಚಿಕ್ಕ ಪುರುಷ ಶಿಲ್ಪಗಳನ್ನು ನಯನ ಮನೋಹರವಾಗಿ ಕೆತ್ತಲಾಗಿದೆ. ಕೆಳಗಿನ ಪಾಣಿಪೀಠದಲ್ಲಿ ಚೇಳು ಮತ್ತು ಪದ್ಮಗಳ ಕೆತ್ತನೆ ಇದೆ.

. ಬಿಳಚೋಡಿನ ಲಕ್ಷ್ಮಿನಾರಾಯಣ

ಗ್ರಾಮದ ಈಶ್ವರ ದೇವಾಲಯದಲ್ಲಿರುವ ಈ ಮೂರ್ತಿ ಕ್ರಿ.ಶ. ೧೧ನೇ ಶತಮಾನಕ್ಕೆ ಸೇರಿದ್ದು, ಬಳಪದ ಶಿಲೆಯಿಂದ ಈ ಮೂರ್ತಿಯನ್ನು ತಯಾರಿಸಲಾಗಿದೆ. ಲಲಿತಾಸನದಲ್ಲಿ ಪೀಠದ ಮೇಲೆ ಆಸೀನರಾಗಿರುವ ನಾರಾಯಣ ಮೂರ್ತಿ ನಾಲ್ಕು ಕೈಗಳನ್ನೊಂದಿದೆ. ಕಿರೀಟ ಮುಕುಟಧಾರಿಯಾಗಿರುವ ಇದು ಮಕರಕುಂಡಲ, ಕಂಠಾಭರಣ, ಕೊರಳಹಾರ, ಉಅದರ ಬಂಧ, ಯಜ್ಞೋಪವೀತಗಳನ್ನು ಧರಿಸಿದ್ದು, ಕೈಗಳಲ್ಲಿ ಕೇಯೂರ, ಭುಜಬಂಧ, ಕೈಕಡಗಗಳಿವೆ. ಮೇಲಿನ ಕೈಗಳಲ್ಲಿ ಹಿಡಿದ ಆಯುಧ ಗೋಚರಿಸುವುದಿಲ್ಲ. ಕೆಳಗಿನ ಬಲಗೈ ಅರ್ಧಕ್ಕೆ ತ್ರುಟಿತವಾಗಿರುವುದರಿಂದ ಅದು ಯಾವ ಮುದ್ರೆಯಲ್ಲಿದೆ ಅಥವಾ ಆ ಕೈಯಲ್ಲಿ ಹಿಡಿದ ಆಯುಧ ಯಾವುದೆಂದು ಹೇಳುವುದು ಕಷ್ಟ. ಎಡಗೈಯನ್ನು ಲಕ್ಷ್ಮಿಯನ್ನು ಆಲಂಗಿಸಿದಂತಿದ್ದು, ನಡುಬಂಧ, ಅಲಂಕಾರಿಕ ಧೋತಿ, ಕಾಲ್ಗಡಗ, ಪಾದರಸ, ಬೆರಳುಂಗರಗಳಿಂದ ಅಲಂಕೃತವಾಗಿದೆ.

ವಿಷ್ಣುವಿನ ತೊಡೆಯ ಮೇಲೆ ಕುಳಿತ ಲಕ್ಷ್ಮಿ ಕಿರೀಟಮುಕುಟಧಾರಿಯಾಗಿದ್ದು, ಅದರ ಹಿಂಬದಿ ಶಿರವಿದೆ. ಕಿವಿಯಲ್ಲಿ ಚಕ್ರಕುಂಡಲ, ಕೊರಳಲ್ಲಿ ಕಂಠಾಭರಣ, ಕೊರಳಹಾರ, ಯಜ್ಞೋಪವೀತ ಹಾಗು ಕುಚಬಂಧಗಳಿವೆ. ದ್ವಿಭುಜಧಾರಿಯಾದ ಈಕೆಯು ಬಲಗೈಯಿಂದ ನಾರಾಯಣನ ಬಲಭುಜವನ್ನು ಆಲಂಗಿಸಿಕೊಂಡಿರುವಳು. ಎಡಗೈ ಅರ್ಧಭಾಗಕ್ಕೆ ತ್ರುಟಿತವಾಗಿರುವುದರಿಂದ ಆಕೈಯಲ್ಲಿ ಇದ್ದಿರಬಹುದಾದ ಆಯುಧ ಯಾವುದೆಂದು ಇಲ್ಲವೇ ಅದರ ಸ್ವರೂಪವನ್ನು ಹೇಳಲಾಗದು. ವೈಜಯಂತಿ ಹಾರ, ಕಾಲಿನಲ್ಲಿ ಕಡಗ, ಪಾದಸರ ಹಾಗು ಬೆರಳುಂಗುರಗಳಿಂದ ಅಲಂಕೃತವಾಗಿರುವ ಲಕ್ಷ್ಮಿಯು ತನ್ನ ಎಡಗಾಲ ತೊಡೆಯ ಮೇಲೆ ಬಲಗಾಲನ್ನು ಹಾಕಿಕೊಂಡು ಸುಖಾಸೀನವಾಗಿ ಕುಳಿತಿರುವುದು ವಿಶೇಷ. ಈ ಮೂರ್ತಿಯ ಮುಖಭಾವ ಅಲಂಕಾರ, ಶೈಲಿಗಳ ಆಧಾರದ ಮೇಲೆ ಇದು ಕಲ್ಯಾಣಿ ಚಾಲುಕ್ಯರ ಕಾಲವೆಂದು ಹೇಳಬಹುದು.

. ಚದುರಗೊಳದ ಅನಂತಶಯನಮೂರ್ತಿ

ಗ್ರಾಮದ ಕಲ್ಲೇಶ್ವರ ದೆವಾಲಯದ ಬಳಿ ಜಮೀನೊಂದರಲ್ಲಿ ಇರುವ ಈ ಮೂರ್ತಿ ಕ್ರಿ.ಶ. ೧೧ನೇ ಶತಮಾನಕ್ಕೆ (ಕಲ್ಯಾಣಿ ಚಾಲುಕ್ಯ) ಸೇರಿದ್ದು, ಹಸಿರು ಬಳಪದಶಿಲೆಯಿಂದ ತಯಾರಿಸಲಾಗಿದೆ. ಪೀಠದ ಮೇಲೆ ಏಳು ಹೆಡೆ ಬಿಚ್ಚಿದ ಸರ್ಪವಿದ್ದು (ಈಗ ನಾಲ್ಕು ಮಾತ್ರ ಉಳಿದಿದ್ದು, ಉಳಿದವು ತ್ರುಟಿತವಾಗಿದೆ), ಅದರ ಮೇಲ್ಭಾಗದಲ್ಲಿ ವಿಷ್ಣುವು ಎರಡು ಕಾಲನ್ನು ಚಾಚಿ ಶಯನನಾಗಿದ್ದಾನೆ. ಮೂಲದಲ್ಲಿದ್ದ ನಾಲ್ಕು ಕೈಗಳು ಈಗ ತ್ರುಟಿತವಾಗಿವೆ. ಕಿರೀಟಮುಖಿಯಾದ ಈ ಮೂರ್ತಿ ತನ್ನ ಮೇಲಿನ ಬಲಗೈಯನ್ನು ತಲೆಗೆ ಒತ್ತಿಹಿಡಿದಿದ್ದು ಉಳಿದ ಕೈಗಳು ತ್ರುಟಿತವಾಗಿರುವುದರಿಂದ ಅವುಗಳ ಸ್ವರೂಪ ಸ್ಪಷ್ಟವಾಗುವುದಿಲ್ಲ. ಕಿವಿಯಲ್ಲಿ ಪತ್ರಕುಂಡಲ, ಕೊರಳಲ್ಲಿ ಕಂಠಿಹಾರ, ಉದರಬಂಧ, ಯಜ್ಞೋಪವೀತ, ಕಾಲಿನವರೆಗೆ ಇಳಿಬಿದ್ದ ವೈಜಯಂತಿ ಹಾರ, ಹಾಗೂ ಭುಜಕೀರ್ತಿ ಕೇಯೂರಗಳಿಂದ ಅಲಂಕೃತವಾಗಿರುವ ಈ ಮೂರ್ತಿಯ ನಾಭಿಯಿಂದ ಹೊರಬಂದ ಬ್ರಹ್ಮಶಿಲ್ಪ ಈಗ ಭಗ್ನವಾಗಿದೆ. ಮೊಣಕಾಲಿನವರೆಗೆ ಇಳಿಬಿದ್ದ ಪಂಚೆಯನ್ನು ಮಣಿ ಹಾಗೂ ಆಭರಣಗಳಿಂದ ಶಿಲ್ಪ ಬಹುಸೂಕ್ಷ್ಮ ಕೆತ್ತಿದ್ದಾನೆ. ವಿಷ್ಣುವಿನ ಕಾಲಿನ ಬಳಿ ಕೇವಲ ಶ್ರೀದೇವಿಯೊಬ್ಬಳೇ ಕಾಣಬರುತ್ತಿದ್ದು, ಭೂದೇವಿ ತ್ರುಟಿತವಾಗಿರಬೇಕೆನಿಸುತ್ತದೆ. ಮೂರ್ತಿಶಾಸ್ತ್ರ ಮತ್ತು ಶಿಲ್ಪಶಾಸ್ತ್ರದ ಹಿನ್ನೆಲೆಯಲ್ಲಿ ಹಾಗೂ ಅಧ್ಯಯನದ ದೃಷ್ಟಿಯಿಂದ ಈ ಮೂರ್ತಿ ಅತ್ಯಂತ ಮಹತ್ವ ಪಡೆದಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

. ಚದುರಗೊಳದ ಭದ್ರಕಾಳಿ

ಬನಶಂಕರಿ ದೇವಾಲಯದಲ್ಲಿರುವ ಈ ಮೂರ್ತಿಯನ್ನು ಸ್ಥಳೀಯರು ಬನದಮ್ಮ, ಬನಶಂಕರಿ ಎಂದು ಕರೆಯುತ್ತಾರೆ. ಕಪ್ಪುಶಿಲೆಯಿಂದ ತಯಾರಿಸಲ್ಪಟ್ಟ ಇದು ಕ್ರಿ.ಶ. ೯ನೇ ಶತಮಾನಕ್ಕೆ ಸೇರಿದೆ. ಇದು ಪೀಠದ ಮೇಲೆ ಕುಳಿತಿದ್ದು, ಕಿರೀಟಮುಕುಟ ಧರಿಸಿದೆ. ಕಿವಿಯಲ್ಲಿ ಚಕ್ರಮಂಡಲ, ಕಂಠಾಭರಣ, ಕೊರಳಹಾರ, ಕುಚಬಂಧವಿದ್ದು, ಕಾಲಿನವರೆಗೆ ಇಳಿಬಿದ್ದ ರುಂಡಮಾಲೆಯಿಂದ ಅಲಂಕೃತವಾಗಿದೆ. ಚತುರ್ಭುಜಧಾರಿಯಾದ ಈ ಮೂರ್ತಿಯ ಕೈಗಳಲ್ಲಿ ಕೈಕಡಗ, ಕೇಯೂರಗಳಿವೆ. ಈ ಮೂರ್ತಿಯ ಮೇಲಿನ ಕೈಗಳಲ್ಲಿ ಡಮರು, ತ್ರಿಶೂಲ, ಕೆಳಗಿನ ಕೈಗಳಲ್ಲಿ ಖಡ್ಗ ಮತ್ತು ಕಪಾಲಗಳಿವೆ. ನಡುವಿನಲ್ಲಿ ಕಟಿಬಂಧವಿದ್ಧು, ಕಾಲಿನಲ್ಲಿ ಕಾಲ್ಗಡಗಗಳನ್ನು ಧರಿಸಿದ ಈ ಮೂರ್ತಿಯು ಉಗ್ರಸ್ವರೂಪಿಯಾಗಿದೆ.

. ಕೊಡದಗುಡ್ಡದ ಮಹಿಷಮರ್ಧಿನಿ

ಗ್ರಾಮದ ಕೆರೆಯ ಬಳಿ ಇರುವ ಈಶ್ವರ ದೇವಾಲಯದಲ್ಲಿರುವ ಈ ಮೂರ್ತಿಯನ್ನು ಕಪ್ಪುಶಿಲೆಯಿಂದ ತಯಾರಿಸಲಾಗಿದೆ. ಕ್ರಿ.ಶ. ೯ನೇ ಶತಮಾನಕ್ಕೆ ಸೇರಿದ ಇದು ಕರಂಡ ಮಕುಟಧಾರಿಯಾಗಿದೆ. ಕಿವಿಯಲ್ಲಿ ಚಕ್ರಕುಂಡಲಗಳಿದ್ದು, ತಲೆಯ ಹಿಂಬದಿಯಲ್ಲಿ ಶಿರಶ್ಚಕ್ರವಿದೆ. ಕೊರಳಲ್ಲಿ ಕಂಠಾಭರಣದ ಜೊತೆಗೆ ಅನೇಕ ಬಗೆಯ ಹಾರಗಳಿದ್ದು, ಎದೆಯ ಮೇಲೆ ಕುಚಬಂಧವಿದೆ. ಚತುರ್ಭುಜಧಾರಿಯಾದ ಈ ಮೂರ್ತಿಯ ಮೇಲಿನ ಕೈಗಳಲ್ಲಿ ಶಂಖ, ಚಕ್ರ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದ್ದು, ಅಸುರನಿಗೆ ತಾಗಿಸಿದೆ. ಎಡಗೈಯನ್ನು ಅಸುರನ ತಲೆಯ ಮೇಲೆ ಇಡಲಾಗಿದೆ. ಕೈಗಳಲ್ಲಿ ಬಳೆ, ಕೇಯೂರಗಳಿವೆ. ಅಲೀಢ ಭಂಗಿಯಲ್ಲಿರುವ ಈ ಮೂರ್ತಿಯು ಬಲಗಾಲನ್ನು ಪೀಠದ ಮೇಲೆ ಇಟ್ಟಿದ್ದು, ಎಡಪಾದವನ್ನು ಕೋಣನ ಮೇಲೆ ಇಡಲಾಗಿದೆ. ಕಾಲಿನಲ್ಲಿ ಕಡಗ, ಪಾದಸರಗಳಿವೆ. ಇಲ್ಲಿ ಕೋಣನನ್ನು ಹಿಮ್ಮುಖವಾಗಿ ಕೆತ್ತಿರುವುದು ಈ ಮೂರ್ತಿಯ ವಿಶೇಷ. ಅಂದರೆ ಕೋಣ ಬಲಗಾಲಿನ ಕಡೆ (ತಲೆಯನ್ನು ಬಾಗಿಸಿ) ಮುಖಮಾಡಿ ನಿಂತಿದೆ. ಕೋಣನ ತಲೆ ಭಾಗದಿಂದ ಅಸುರನು ಹೊರಬಂದಿದ್ದು, ಈ ಅಸುರನು ಎಡಗೈಯಲ್ಲಿ ಗುರಾಣಿ, ಬಲಗೈಯಲ್ಲಿ ಖಡ್ಗ ಹಿಡಿದು ವೀರಗಚ್ಛೆ ಧರಿಸಿರುವಂತೆ ಕೆತ್ತಲಾಗಿದೆ. ಮಹಿಷಮರ್ಧಿನಿಯ ಕಾಲಿನ ಎಡಬದಿಯಲ್ಲಿ ಸಿಂಹವು ಕೋಣನ ಮೇಲೆ ಆಕ್ರಮಣ ಮಾಡಿದಂತಿದ್ದು, ಸುತ್ತಲೂ ಸಾಧಾ ಶೈಲಿಯ ಪ್ರಭಾವಳಿ ಇದೆ.

ಕೇವಲ ಈ ಮೂರ್ತಿಗಳಷ್ಟೇ ಅಲ್ಲದೆ ಅಧ್ಯಯನ ದೃಷ್ಟಿಯಿಂದ ಮುಖ್ಯವೆನಿಸಿದ ಹಲವಾರು ಮೂರ್ತಿಗಳು ಜಗಲೂರು ತಾಲೂಕಿನ ವಿವಿಧೆಡೆ ದೊರೆಯುತ್ತವೆ. ಮೂರ್ತಿ ಶಾಸ್ತ್ರದ ದೃಷ್ಠಿಯಿಂದ ಪ್ರಮುಖವಾದ ಇವುಗಳು ಅಂದಿನ ಸಮಾಜೋ ಧಾರ್ಮಿಕ ಇತಿಹಾಸವನ್ನು ಪುನರ್ ರಚಿಸಲು ಸಹಾಯಕವಾಗಿವೆ. ಅಲ್ಲದೆ ಇವುಗಳ ಸಹಾಯದಿಂದ ಮೂರ್ತಿಶಾಸ್ತ್ರದ ಬೆಳವಣಿಗೆಯನ್ನು ಸಹಾ ಗುರುತಿಸಬಹುದಾಗಿದೆ.

ಜಗಲೂರು ತಾಲೂಕು ಹಲವಾರು ತೆರನ ವೈಶಿಷ್ಟ್ಯಗಳಿಗೆ ಹೆಸರಾಗಿದೆ. ಇಲ್ಲಿನ ಉತ್ತಮ ಭೌಗೋಳಿಕ ಪರಿಸರವು ಪ್ರಾಗೈತಿಹಾಸಿಕ ಕಾಲದಿಂದಲೂ ಮಾನವನಿಗೆ ಉಪಕಾರಿಯಾಗಿದೆ. ಈ ತಾಲೂಕಿನ ಆಸಗೋಡು, ಅರಿಷಿಣಗುಂಡಿ, ಕೊಣಚಗಲ್ ಹಾಗೂ ಕಣಕುಪ್ಪೆ ಗುತ್ತಿದುರ್ಗ ಉಚ್ಚಂಗಿದುರ್ಗಗಳಲ್ಲಿ ಪ್ರಾಗೈತಿಹಾಸಿಕ ಮಾನವನ ಕುರುಹುಗಳು ದೊರೆತಿವೆ. ಅಲ್ಲದೇ ಇದೇ ಭೌತಿಕ ಪರಿಸರ ಚಾರಿತ್ರಿಕ ಕಾಲಘಟ್ಟದಲ್ಲಿಯೂ ಅನೇಕ ರಾಜಮನೆತನಗಳು ಅಳ್ವಿಕೆ ನಡೆಸಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಮೌರ್ಯ, ಶಾತವಾಹನ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಸೇವುಣ, ನೊಳಂಬರು, ಸಿಂಧರು, ಉಚ್ಚಂಗಿ ಪಾಂಡ್ಯರು, ಹೊಯ್ಸಳರು, ವಿಜಯನಗರದ ಅರಸರು, ಪಾಳೆಯಗಾರರು, ಆಳ್ವಿಕೆ ಮಾಡಿ, ಹಲವಾರು ಪ್ರಜಾಹಿತ ಕಾರ್ಯಕೈಗೊಳ್ಳಲು ಪ್ರೇರೇಪಣೆ ನೀಡಿದೆ.

ಈ ತಾಲೂಕಿನ ವ್ಯಾಪ್ತಿಯಲ್ಲಿ ವಿವಿಧ ಶೈಲಿಗಳ ಹಾಗೂ ವಿವಿಧ ಕಾಲಗಳ ದೇವಾಲಯಗಳು ಕೇಂದ್ರಿಕೃತವಾಗಿರುವುದು ಸರಿಯಷ್ಠೆ. ಇಲ್ಲಿನ ಕೆಲವು ದೇವಾಲಯಗಳನ್ನು ಇಲ್ಲವೇ ದೇವಾಲಯಗಳ ಕೆಲಭಾಗಗಳನ್ನು ಆರಂಭಿಕ ಅರಸರು ನಿರ್ಮಿಸಿದರೆ, ಇನ್ನೂ ಕೆಲವು ದೇವಾಲಯಗಳ ಉಳಿದ ಭಾಗಗಳನ್ನು ನಂತರ ಅಧಿಕಾರಕ್ಕೆ ಬಂದ ಅರಸರು ಅಥವಾ ಅವರ ಸಾಮಂತರೂ ಅಥವಾ ಅವರ ಅಧೀನಾದಿಕಾರಿಗಳು ನಿರ್ಮಿಸಿರುವ ಸಾಧ್ಯತೆ ಇದೆ. ಅದೇ ರೀತಿ ಆ ದೇವಾಲಯಗಳಿಗೆ ಹಲವು ದಾನ – ದತ್ತಿಗಳನ್ನು ನೀಡಿ, ಪ್ರೋತ್ಸಾಹಿಸಿ ದೇವಾಲಯಗಳ ಬೆಳವಣಿಗೆಗೆ ಸಹಕಾರಿಯಾದ್ದಾರೆ. ಇವುಗಳ ನಿರ್ಮಾಣದ ಖಚಿತ ಕಾಲವನ್ನು ಅರಿಯಲು ಶಾಸನಗಳು ಸಹಕಾರಿಯಾಗಿವೆ. ಇಲ್ಲಿ ದೊರೆತ ಕೆಲವು ಶಾಸನಗಳು ವಿವಿಧ ಸ್ಥಳಗಳಲ್ಲಿರುವ ಕೆಲವು ದೇವಾಲಯಗಳು ಅವುಗಳಿಗೆ ನೀಡಿದ ದಾನದತ್ತಿಗಳ ಕುರಿತು ಹೆಚ್ಚಾಗಿ ಪ್ರಸ್ತಾಪಿಸಿವೆ. ಆದರೆ ದೇವಾಲಯಗಳ ನಿರ್ಮಾಣದ ಕುರಿತು ವಿವರ ನೀಡುವ ಶಾಸನಗಳು ಇಲ್ಲಿ ಬಹು ಕಡಿಮೆ ದೊರೆತಿವೆ. ಶಾಸನಾಧಾರಗಳು ಇರದೇ ಇರುವ ದೇವಾಲಯಗಳ ಕಾಲವನ್ನು ಗುರುತಿಸುವಾಗ ದೇವಾಲಯಗಳ ವಾಸ್ತು, ಮೂರ್ತಿಶಿಲ್ಪಗಳ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು, ಅದರೊಂದಿಗೆ ದೇವಾಲಯದ ನಿರ್ಮಾಣದಲ್ಲಿ ಬಳಕೆಯಾದ ಶಿಲೆ, ಅ ದೇವಾಲಯದ ರಚನಾ ಸ್ವರೂಪ ಹಾಗು ವಿವಿಧ ರಾಜವಂಶಗಳ ಶೈಲಿಗಳನ್ನು ಅಧಾರಿವಾಗಿಟ್ಟುಕೊಂಡು ಕಾಲವನ್ನು ಗುರುತಿಸಬೇಕಾಗುತ್ತದೆ. ಇದೇ ಆಧಾರದ ಮೇಲೆ ಈ ತಾಲೂಕಿನ ಕೆಲವು ದೇವಾಲಯಗಳ ಕಾಲವನ್ನು ಗುರುತಿಸಲಾಗಿದೆ.

ಈ ತಾಲೂಕಿನ ಭೂಭಾಗ ಪ್ರಾಚೀನ ಮತ್ತು ಮಧ್ಯಯುಗೀನ ಹಾಗೂ ನಂತರದ ಕಾಲದಲ್ಲಿ ವಿವಿಧ ರಾಜಮನೆತನಗಳ ಅಧೀನಕ್ಕೆ ಒಳಗಾಗಿದ್ದರೂ ಸಹಾ ಎಲ್ಲಾ ರಾಜವಂಶದವರು ಇಲ್ಲಿ ದೇವಾಲಯಗಳನ್ನು ನಿರ್ಮಿಸಿದಂತಿಲ್ಲ. ಇಲ್ಲವೇ ಅವರು ನಿರ್ಮಿಸಿರುವ ದೇವಾಲಯಗಳು ಪ್ರಾಯಶಃ ಹಾಳಾಗಿರುವ ಸಾಧ್ಯತೆ ಇದೆ. ಇಲ್ಲಿ ಕದಂಬ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ವಿಜಯನಗರ, ಪಾಳೆಯಗಾರರ ದೇವಾಲಯಗಳು ಮಾತ್ರ ಪ್ರಸ್ತುತ ಉಳಿದುಬಂದಿವೆ. ಕಲ್ಲೇದೇವರಪುರ, ಬಿಳಚೋಡು, ಕೂಡದಗುಡ್ಡ, ಕೋಣಚಗಲ್, ಚದುರಗೊಳ, ಅಸಗೋಡು ಮೊದಲಾದ ಕಡೆ ದೊರೆತಿರುವ ಶಾಸನಗಳು ಅಂದಿನ ದೇವಾಲಯಗಳು ಸಾಮಾಜಿಕ ಮತ್ತು ಅರ್ಥಿಕ ಜನಜೀವನದಲ್ಲಿ ನಿರ್ವಹಿಸಿದ ಪಾತ್ರ ಮತ್ತು ಜನರ ಮೇಲೆ ಬೀರಿದ ಪ್ರಭಾವವನ್ನು ಸ್ಪಷ್ಟೀಕರಿಸಿವೆ.

ಈ ತಾಲೂಕಿನ ವಿವಿಧೆಡೆ ದೊರೆತಿರುವ ದೇವಾಲಯಗಳನ್ನು ಆಧಾರವಾಗಿಟ್ಟುಕೊಂಡು ಆಯಾ ಸಾಮ್ರಾಜ್ಯಗಳ ಗಡಿಯನ್ನಲ್ಲದೆ ಧಾರ್ಮಿಕ ಇತಿಹಾಸವನ್ನೂ ಪುನರ್ ರಚಿಸಬಹುದಾಗಿದೆ. ಇಲ್ಲಿ ಶೈವ, ವೈಷ್ಣವ, ಶಾಕ್ತಧರ್ಮಕ್ಕೆ ಸಂಬಂಧಿಸಿದ ದೇವಾಲಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಅವಶೇಷಗಳು ದೊರೆತಿದ್ದು, ಆಯಾ ಧರ್ಮಗಳು ಇಲ್ಲಿ ಅಸ್ತಿತ್ವದಲ್ಲಿದ್ದವೆಂದು ಹೇಳಬಹುದು. ಆದರೆ ಆಸಗೋಡಿನಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಕೆಲವು ಕುರುಹುಗಳು ದೊರೆತಿದ್ದು ಅವುಗಳ ಆಧಾರದ ಮೇಲೆ ಈ ಭಾಗದಲ್ಲಿ ಬೌದ್ಧಧರ್ಮ ಅಸ್ತಿತ್ವದಲ್ಲಿತ್ತೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿಯವರೆಗೆ ಈ ತಾಲೂಕಿನಲ್ಲಿ ಜೈನಧರ್ಮಕ್ಕೆ ಸಂಬಂಧಿಸಿದ ಕುರುಹುಗಳು ದೊರೆತಿಲ್ಲ. ಆದರೆ ದಾವಣಗೆರೆ ಜಿಲ್ಲೆಯ ಬೇತೂರು, ಬಸವಾಪಟ್ಟಣ ಮೊದಲಾದೆಡೆ ಜೈನ ಮೂರ್ತಿಗಳು ಹಾಗೂ ಬಾಗಳಿ, ಹಲವಾರು ಮೊದಲಾದೆಡೆ ಜೈನಬಸದಿಗಳು ದೊರೆತಿವೆ. ಇವುಗಳ ಆಧಾರದ ಮೇಲೆ ಚಾರಿತ್ರಿಕ ಕಾಲಘಟ್ಟದಲ್ಲಿ ಜಗಲೂರು ತಾಲೂಕಿನಲ್ಲಿಯೂ ಜೈನ ಬೌದ್ಧಧರ್ಮಗಳು ಇದ್ದಿರಬಹುದೆಂದು ಊಹಿಸಬಹುದು.

ತಾಲೂಕಿನ ವಿವಿಧೆಡೆ ಉಳಿದುಬಂದಿರುವ ಹಲವು ದೇವಾಲಯಗಳಲ್ಲಿ ಇಂದಿಗೂ ಪೂಜೆ ನಡೆಯುತ್ತಿದ್ದು, ಅವುಗಳ ಹಿಂದೆ ಹಲವು ಜನಪದ ನಂಬಿಕೆ, ಐತಿಹ್ಯ, ಪುರಾಣ ಕಥೆಗಳು ಹೆಣೆದುಕೊಂಡಿವೆ. ಇವುಗಳ ಕುರಿತು ಮತ್ತು ದೇವಾಲಯಗಳ ಕುರಿತು ವಿವಿಧ ದೃಷ್ಟಿಕೋನಗಳಿಂದ, ವಿನೂತನ ವಿಧಾನಗಳಿಂದ ಅಧ್ಯಯನ ಮಾಡುವ ಅವಶ್ಯಕತೆ ಇದೆ. ತಾಲೂಕಿನಾದ್ಯಂತ ಇರುವ ಹಲವು ದೇವಾಲಯಗಳಲ್ಲಿ ಕೆಲವು ದೇವಾಲಯಗಳನ್ನು ಇಲ್ಲಿ ವಾಸ್ತು ವೈಶಿಷ್ಟ್ಯಗಳ ಹಿನ್ನೆಲೆಯಲ್ಲಿ ಪ್ರಾಥಮಿಕವಾಗಿ ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಇದರಿಂದ ತಾಲೂಕಿನ ಕೆಲದೇವಾಲಯಗಳ ಚಿತ್ರಣ ಒಂದೆಡೆ ದೊರೆಯಲು ಸಹಾಯಕವಾಗಿದೆ. ಇಲ್ಲಿರುವ ಕೆಲವು ದೇವಾಲಯಗಳು ಕಾಲನ ದವಡೆಗೆ ಸಿಕ್ಕು ಅವನತಿಯ ಹಾದಿಯನ್ನು ಹಿಡಿದಿದ್ದರೆ, ಇನ್ನು ಕೆಲವು ದೇವಾಲಯಗಲನ್ನು ಜನರು ‘ನಿಧಿಯ ಭ್ರಮೆ’ಯಲ್ಲಿ ಹಾಳುಮಾಡುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಅಜ್ಞಾನದಿಂದ ದೇವಾಲಯಗಳಿಗೆ, ಅಲ್ಲಿರುವ ಮೂರ್ತಿಗಳಿಗೆ ಧರ್ಮದ ಹೆಸರಲ್ಲಿ ಎಣ್ಣೆ, ಕುಂಕುಮ ಹಾಕಿ ವಿರೂಪಗೊಳಿಸುತ್ತಿದ್ದಾರೆ. ಇದು ತಪ್ಪಬೇಕು, ಇಲ್ಲದಿದ್ದಲ್ಲಿ ಚರಿತ್ರೆಯ ಆಕರಗಳು ನಮ್ಮ ಕೈತಪ್ಪಿ ಮುಂದಿನ ಪೀಳಿಗೆಗೆ ಕೇವಲ ನೆನಪು ಮಾತ್ರವಾಗಿಬಿಡುತ್ತವೆ. ಆದ್ದರಿಂದ ನಾವೆಲ್ಲರೂ ಇವುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಯತ್ನಿಸೋಣ..

ಆಧಾರ ಗ್ರಂಥಗಳು

೧. Adam Hardy, 1995, Indian Temple Architecture (The Karnataka Dravida Tradition 7th to 13th           centuries)

೨. ಗಿರಿಜಾ.ಟ್., ೨೦೦೧, ದಾವಣಗೆರೆ ಜಿಲ್ಲಾದರ್ಶಿನಿ, ನಿಹಾರಿಕಾ ಪ್ರಕಾಶನ, ದಾವಣಗೆರೆ

೩. ತಿಪ್ಪೇಸ್ವಾಮಿ. ಹೆಚ್. ೨೦೦೧, ದಾವಣಗೆರೆ ಜಿಲ್ಲೆಯ ದೇವಾಲಯಗಳು (ಅಪ್ರಕಟಿತ ಪಿಎಚ್.ಡಿ. ಮಹಾಪ್ರಬಂಧ), ಕನ್ನಡ           ವಿಶ್ವವಿದ್ಯಾಲಯ, ಹಂಪಿ