ಜಗಲೂರು ತಾಲ್ಲೂಕಿನ ಇತಿಹಾಸವು ಶಿಲಾಯುಗವು ಸಂಸ್ಕೃತಿಯಷ್ಟು ಪ್ರಾಚೀನವಾಗಿದೆ. ಅಸಗೋಡು, ರಂಗಯ್ಯನದುರ್ಗ ಮುಂತಾದ ಕಡೆ ಕಂಡುಬಂದಿರುವ ಬೃಹತ್ ಶಿಲಾಸಮಾಧಿಗಳು ಮೇಲಿನ ಅಂಶವನ್ನು ಸಮರ್ಥಿಸುತ್ತವೆ.[1] ನಂತರ ಕರ್ನಾಟಕವನ್ನಾಳಿದ ಬಹುತೇಕ ಮನಿತನಗಳು ಇಲ್ಲಿ ಆಳ್ವಿಕೆ ನಡೆಸಿರುವುದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದು. ಹಾಗೆಯೇ ಈ ಭಾಗದಲ್ಲಿ ದೊರಕಿರುವ ಸುಮಾರು ೭೦ಕ್ಕೂ ಹೆಚ್ಚು ಶಾಸನಗಳು ಈ ಪರಿಸರದಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಇತಿಹಾಸದ ಮಜಲುಗಳನ್ನು ತೆರೆದಿಡುತ್ತವೆ.[2]

ಜಗಲೂರು ತಾಲ್ಲೂಕಿನ ಇತಿಹಾಸ ಶಿಲಾಯುಗ ಸಾಂಸ್ಕೃತಿಯಷ್ಟು ಪ್ರಾಚೀನವಾಗಿದ್ದರೂ ಕೋಟೆಗಳ ಇತಿಹಾಸ ಆರಂಭವಾಗುವುದು ವಿಜಯನಗರ ಕಾಲದಿಂದ ಎನ್ನಬಹುದು. ವಿಜಯನಗರ ಅರಸರ ಈ ಪ್ರದೇಶವನ್ನು ತಮ್ಮ ಸಾಮ್ರಾಜ್ಯದ ಒಂದು ಭಾಗವೆನ್ನಿಸಿಕೊಂಡು ಆಳ್ವಿಕೆ ನಡೆಸಿದ್ದರು. ಈ ಅವಧಿಯಲ್ಲಿ ಸ್ಥಳೀಯ ದಾಳಿಗಳನ್ನು ಎದುರಿಸಲು ಕೋಟೆ – ಕೊತ್ತಲಗಳನ್ನು ನಿರ್ಮಿಸಿದ್ದರು. ಇವರ ತರುವಾಯ ಬಂದ ಚಿತ್ರದುರ್ಗದ ಪಾಳೆಯಗಾರರು ವಿಜಯನಗರ ಸಂಪ್ರದಾಯವನ್ನೇ ಮುಂದುವರಿಸಿದರು. ಇಲ್ಲಿಯ ಭೌಗೋಳಿಕ ಪರಿಸರವನ್ನು ವ್ಯವಸ್ಥಿತವಾಗಿ ಬಳಸಿಕೊಂಡವರಲ್ಲಿ ಚಿತ್ರದುರ್ಗದ ಪಾಳೆಯಗಾರರು ಮುಖ್ಯರಾಗುತ್ತಾರೆ. ಈ ಭಾಗದಲ್ಲಿ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಇವರು ಸ್ಥಳೀಯ ವಿರೋಧಗಳನ್ನು ಹಾಗೂ ಹೊರಗಿನ ದಾಳಿಗಳನ್ನು ತಡೆಯುವ ಉದ್ದೇಶದಿಂದ ಈ ಭಾಗದಲ್ಲಿ ಅನೇಕ ಕೋಟೆ ಕೊತ್ತಲಗಳನ್ನು ನಿರ್ಮಿಸುವ ಮೂಲಕ ಸಮರ್ಥವಾಗಿ ಈ ಪ್ರದೇಶವನ್ನು ಬಳಸಿಕೊಂಡರು.

ವಾಸ್ತವವಾಗಿ ರಕ್ಷಣಾ ವಾಸ್ತುಶಿಲ್ಪವೆಂದರೆ ಕೋಟೆ – ಕೊತ್ತಲಗಳ ಅಧ್ಯಯನವೇ ಆಗಿದೆ. ಯುದ್ಧತಂತ್ರ ಹಾಗು ರಕ್ಷಣಾ ದೃಷ್ಟಿಯಿಂದ ನಿರ್ಮಿಸಿರುವ ಇಂತಹ ಕೋಟೆ – ಕೊತ್ತಲಗಳು ಮಾನವನ ಜೀವನ ವಿಧಾನಕ್ಕೆ ಸಾಕ್ಷಿಯಾಗಿವೆ. ವಿಶಾಲ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಈ ಕೋಟೆಗಳು ಒಂದು ಸಾಮ್ರಾಜ್ಯದ ಸಾಂಸ್ಕೃತಿಕ ಇತಿಹಾಸದ ಹಿರಿಮೆಗೆ ಸಾಕ್ಷ್ಯಗಳಾಗಿವೆ. ದಾವಣಗೆರೆ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ ಕೊಂಡಿಗಳಾಗಿರುವ ಇಂತಹ ಸ್ಮಾರಕಗಳು ಈಗಾಗಲೇ ವಿನಾಶದ ಅಂಚನ್ನು ತಲುಪಿವೆ. ಜಗಲೂರು ಪರಿಸರದಲ್ಲಿ ಕಂಡುಬರುವ ಕೋಟೆ – ಕೊತ್ತಲಗಳನ್ನು ಪರಿಚಯಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಜಗಲೂರು ತಾಲೂಕು ಪರಿಸರದಲ್ಲಿ ಹಿಂದೆ ಅನೇಕ ಕೋಟೆ – ಕೊತ್ತಲಗಳು ಅಥವಾ ರಕ್ಷಣಾ ಗೋಡೆಗಳು ಇದ್ದವಾದರೂ ಇಂದು ಬಹುತೇಕ ಕಣ್ಮರೆಯಾಗಿವೆ. ರಸ್ತೆ ವಿಸ್ತರಣೆ, ಪ್ರಕೃತಿ ವಿಕೋಪ, ಗ್ರಾಮ ವಿಸ್ತರಣೆ ಹಾಗೂ ಮನುಷ್ಯನ ಸ್ವಾರ್ಥ ಸಾಧನೆಯ ಫಲವಾಗಿ ಇಂತಹ ಅಮೂಲ್ಯ ಸ್ಮಾರಕಗಳ ವಿನಾಶದ ಅಂಚನ್ನು ತಲುಪಿವೆ. ಅಳಿದುಳಿದಿರುವ ಅವಶೇಷಗಳಿಂದಲ್ಲದೆ, ಸ್ಥಳನಾಮ ಹಾಗೂ ಇತರೆ ಸಾಹಿತ್ಯಕ ಆಕರಗಳಿಂದ ಜಗಲೂರು ಪರಿಸರದಲ್ಲಿ ರಕ್ಷಣಾ ವಾಸ್ತುಶಿಲ್ಪದ ಲಕ್ಷಣಗಳನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಜಗಲೂರು ತಾಲ್ಲೂಕಿನಲ್ಲಿ ಒಟ್ಟು ೧೬ ಗ್ರಾಮಗಳು ‘ಪುರ’ ಎಂಬ ಹೆಸರನ್ನು ಸೂಚಿಸುತ್ತವೆ.[3] ಪುರ ಎಂಬ ಪದವು ಕೋಟೆಯಿಂದ ಆವೃತವಾಗಿದ್ದ ಊರು ಅಥವಾ ಪಟ್ಟಣ ಎಂಬುದನ್ನು ಸೂಚಿಸುತ್ತದೆ. ಉಚ್ಚಂಗಿಪುರ (ಹೊಸದುರ್ಗ) ಕೃಷ್ಣಾಪುರ, ರಂಗಾಪುರ, ಓಬಳಾಪುರ ಗ್ರಾಮಗಳಲ್ಲಿ ರಕ್ಷಣಾ ಗೋಡೆಗಳ ಅವಶೇಷಗಳಿವೆ. ಉಳಿದಂತೆ ಗುರುಸಿದ್ಧಾಪುರ, ಗೌರಿಪುರ, ಜಮಾಪುರ, ಜ್ಯೋತಿಪುರ, ಬಸವಪುರ, ಮದಕೆರಿಪುರ, ರಾಜಾಪುರ, ಕಲ್ಲೇದೇವರಪುರ, ಲಕ್ಮಪುರ, ಹನುಮಂತಾಪುರ ಗ್ರಾಮಗಳಲ್ಲಿ ಕೋಟೆ ಅವಶೇಷಗಳು ಇದ್ದವೆಂದು ಸ್ಥಳೀಯರು ಹೇಳುತ್ತಿದ್ದರೂ ಇಂದು ಅವಶೇಷಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ರಂಗಯ್ಯನದುರ್ಗ, ಗುತ್ತಿದುರ್ಗ, ಬಸವನಕೋಟೆ, ಸಿದ್ದಯ್ಯನ ಕೋಟೆ, ಜಗಲೂರು, ಬಿಳಿಚೋಡು, ಭರಮಸಾಗರ, ಕಣಕುಪ್ಪೆಯಲ್ಲಿ ಇಂದು ಅಳಿದುಳಿದ ರಕ್ಷಣಾ ಗೋಡೆಗಳು, ಬುರುಜು ಬತೇರಿಗಳು ಇತರೆ ಅವಶೇಷಗಳನ್ನು ಕಾಣಬಹುದು.

ಕ್ರಿ.ಶ. ೧೫೩೮ರ ಶಾಸನವೊಂದು ಜಗಲೂರಿನಲ್ಲಿ ಕೋಟೆಯನ್ನು ಪುನರ್ ನಿರ್ಮಾಣಮಾಡಿದ ಬಗ್ಗೆ ಮಾಹಿತಿ ನೀಡುತ್ತದೆ.[4] ಮುಖ್ಯವಾಗಿ ಕಣಕುಪ್ಪೆಯಲ್ಲಿ ಕೋಟೆ ಕಟ್ಟಿದ ಬಗ್ಗೆ ಕೈಫಿಯತ್ತೊಂದು ಸಮಗ್ರವಾದ ಮಾಹಿತಿಯನ್ನು ನೀಡುತ್ತದೆ.[5] ಕಣಕುಪ್ಪೆ ಕೋಟೆ ಜಗಲೂರು ತಾಲ್ಲೂಕಿನ ರಕ್ಷಣಾ ವಾಸ್ತುಶಿಲ್ಪದ ಪ್ರತಿನಿಧಿಯಂತಿದ್ದು ಅಧ್ಯಯನಕ್ಕೆ ಯೋಗ್ಯವಾಗುವಂತಹ ಕೆಲವು ಸ್ಮಾರಕಾವಶೇಷಗಳು ಇಂದಿಗೂ ಉಳಿದು ಬಂದಿರುವುದು ವಿಶೇಷ. ಕಣಕುಪ್ಪೆ ಕೋಟೆ ಕೈಫಿಯತ್ತು ಪಾಳೆಗಾರರ ಕಾಲದ ಕೋಟೆ ನಿರ್ಮಾಣದ ವಾಸ್ತು ಶೈಲಿಯ ವಿಭಿನ್ನ ಮುಖಗಳ ಮಾಹಿತಿಯನ್ನು ನಮಗೆ ನೀಡುತ್ತದೆ.

ಕಣಕುಪ್ಪೆ ಕೋಟೆ

ಕಣಕುಪ್ಪೆ ಕೋಟೆ ಜಗಳೂರಿನಿಂದ ವಾಯುವ್ಯಕ್ಕೆ ೬.೮ ಮೀ ದೂರದಲ್ಲಿದೆ. ಈ ಕೋಟೆಯನ್ನು ಮೇಲುದುರ್ಗ, ಮನ್ನಲಗಟ್ಟ ಮತ್ತು ಕೊತ್ತಲಗಟ್ಟ ಎಂಬ ಮೂರು ಗುಡ್ಡಗಳನ್ನು ಬಳಸಿಕೊಂಡು ವಿಸ್ತಾರವಾದ ಗಿರಿದುರ್ಗವನ್ನು ನಿರ್ಮಿಸಲಾಗಿದೆ. ಈ ಪ್ರದೇಶ ಭೂ ನಕ್ಷೆಯಲ್ಲಿ ಉತ್ತರ ಅಕಾಂಶ ೧೪೦.೩೦ ಮತ್ತು ೭೫೦.೧೭ ಪೂರ್ವ ರೇಖಾಂಶದಲ್ಲಿ ನೆಲೆಗೊಂಡಿದ್ದು ಸಮುದ್ರ ಮಟ್ಟದಿಂದ ೨೪೮೭ ಅಡಿ ಎತ್ತರದಲ್ಲಿದೆ.

ಕೋಟೆ ನಿರ್ಮಾಣದ ಹಿನ್ನೆಲೆ

ಕಣಕುಪ್ಪೆ ಕೋಟೆ ನಿರ್ಮಾಣದ ಹಿಂದಿನ ಉದ್ದೇಶ, ಕಾರಣ ಹಾಗೂ ಹಿನ್ನೆಲೆ ಸೇರಿದಂತೆ ಪರಿಪೂರ್ಣ ಮಾಹಿತಿಯನ್ನು ಕಣಕುಪ್ಪೆ ಕೈಫಿಯತ್ತಿನಲ್ಲಿ ವಿವರಿಸಲಾಗಿದೆ.[6] ಕಣಕುಪ್ಪೆ ಕೋಟೆ ನಿರ್ಮಿಸುವುದಕ್ಕಿಂತ ಪೂರ್ವದಲ್ಲಿ ಈ ಭಾಗವು ಚಿತ್ರದುರ್ಗ ಪಾಳೆಗಾರರ ಅಧೀನದಲ್ಲಿತ್ತು. ಕ್ರಿ.ಶ. ೧೬೭೫ರಲ್ಲಿ ಚಿತ್ರದುರ್ಗ ಸಂಸ್ಥಾನದಲ್ಲಿ ನಾಯಕತನಕ್ಕೆ ಉಂಟಾದ ಗೊಂದಲ ಹಾಗೂ ಅವಾಂತರದ ಪರಿಸ್ಥಿತಿಯ ಲಾಭ ಪಡೆದು ಜರಿಮಲೆಯ ಬೇಡರು ಕಣಕುಪ್ಪೆ ಗುಡ್ಡದಲ್ಲಿ (ಈಗ ಕೋಟೆ ಇರುವ ಪ್ರದೇಶ) ಬೀಡುಬಿಟ್ಟು ಉಪದ್ರವ (ಕಿರುಕುಳ) ಕೊಡಲು ಪ್ರಾರಂಭಿಸಿದರು. ಆಗ ತಾನೇ ಚಿತ್ರದುರ್ಗ ನಾಯಕತನ ಪಟ್ಟವನ್ನು ಅಲಂಕರಿಸಿದ ಚಿಕ್ಕಣ್ಣ ನಾಯಕರನ್ನು ಭೇಟಿ ಮಾಡಲು ಹಿರೇ ಕೊಮಾರಪ್ಪವನರು ಚಿತ್ರದುರ್ಗಕ್ಕೆ ತೆರಳಿದ್ದರು.[7] ವಿಷಯ ತಿಳಿದ ಕೋಮಾರಪ್ಪನವರು ಮುನ್ನೂರರಿಂದ ನಾಲ್ಕೂನೂರ ಜನ ಸೈನಿಕರನ್ನು ತೆಗೆದುಕೊಂಡು ಬಂದು ಗುಡ್ಡದಲ್ಲಿ ಉಪದ್ರವ ಕೊಡುತ್ತಿದ್ದ ಬೇಡ ಕಳ್ಳಕಾಕರನ್ನು ಹೊಡೆದೋಡಿಸಿದರು.

ಇದೇ ಸಂದರ್ಭದಲ್ಲಿ ಗುಡ್ಡದ ವಿಸ್ತಾರವಾದ ಬಯಲು, ಗವಿ, ನೀರಿನ ಸಹಜ ಹೊಂಡ, ಕೊಳಗಳಲ್ಲಿದೆ ಅಪಾರವಾದ ನಿಸರ್ಗ ನೀಡಿದ ಸಸ್ಯ ಸಂಪತ್ತುಗಳನ್ನು ಕಂಡು ಇದೊಂದು ಆಯಕಟ್ಟಿನ ಸ್ಥಳವೆಂದು ನಿರ್ಧರಿಸಿ ಇಲ್ಲಿ ಬಲಿಷ್ಟ ಕೋಟೆಯನ್ನು ನಿರ್ಮಿಸಲು ಸಂಕಲ್ಪ ಮಾಡಿದರು. ಇವರ ಸಂಕಲ್ಪದ ಫಲವಾಗಿ ರೂಪುಗೊಂಡ ಕೋಟೆಯೇ ಇಂದಿನ ಸುಂದರವಾದ ಕಣಕುಪ್ಪೆ ಕೋಟೆ.

ಈ ವೇಳೆಗಾಗಲೇ ಹರಪನಹಳ್ಳಿ, ಉಚ್ಚಂಗಿದುರ್ಗ ಹಾಗೂ ಚಿತ್ರದುರ್ಗ ಮನೆತನಗಳ ಮಧ್ಯೆ ಉಂಟಾದ ಹಗೆತನ ಹಾಗು ನಿರಂತರ ಹೋರಾಟಗಳನ್ನು ಹತ್ತಿಕ್ಕಲು ಗಡಿಭಾಗದಲ್ಲಿ ಕೋಟೆ ನಿರ್ಮಾಣದ ಅವಶ್ಯಕತೆ ಹಾಗೂ ಅನಿವಾರ್ಯತೆ ಚಿತ್ರದುರ್ಗದವರಿಗಿತ್ತು. ಅದೇ ವೇಳೆಗೆ ನಡೆದ ಜರಿಮಲೆ ಬೇಡರ ಹಾಗೂ ಉಪದ್ರವದ ಘಟನೆ ಕೋಟೆ ನಿರ್ಮಿಸಲು ಮತ್ತಷ್ಟು ಇಂಬು ನೀಡಿತು. ಈ ಎಲ್ಲಾ ಹಿನ್ನೆಲೆಗಳ ನಡುವೆ ಹಿರೇಕೋಮಾರಪ್ಪನವರ ಅಪೇಕ್ಷೆಯಂತೆ ಕೋಟೆಯನ್ನು ನಿರ್ಮಿಸಲು ದೊರೆ ಚಿಕ್ಕಣ್ಣನಾಯಕರ ಒಪ್ಪಿಗೆಯು ಸಹ ದೊರಕಿತು. ಕೋಟೆ ನಿರ್ಮಿಸಲು ಬೇಕಾದ ಸಂಪತ್ತು, ಸಾಮಗ್ರಿ, ಸಹಕಾರ ಹಾಗೂ ಮಾರ್ಗದರ್ಶನ ಚಿತ್ರದುರ್ಗದಿಂದ ದೊರೆಯಿತು. ತಂದೆ ಮತ್ತು ಮಗನ ಗುರಿ ಉದ್ದೇಶ ಎರಡೂ ಒಂದೇ ಆಗಿದ್ದರಿಂದ ಶಾಲಿವಾಹನಶಕ ೧೫೯೮ ಪಾಲ್ಗುಣ ಶುದ್ಧ ೩ ಗುರುವಾರದಂದು (ಕ್ರಿ.ಶ. ೧೬೭೬) ಕೋಟೆಗೆ ತರ (Foundation) ಹಾಕುವ ಮೂಲಕ ಕೋಟೆ ನಿರ್ಮಾಣಕ್ಕೆ ಚಾಲನೆ ನೀಡಿದರು.

ಚಿತ್ರದುರ್ಗದಲ್ಲಿ ಚಿಕ್ಕಣ್ಣ ನಾಯಕರು (೧೬೭೫ – ೧೬೮೬) ಅಧಿಕಾರದಲ್ಲಿದ್ದಾಗಿನಿಂದ ಆರಂಭವಾದ ಕೋಟೆ ನಿರ್ಮಾಣದ ಕಾಮಗಾರಿಗಳು ದುರ್ಗದ ದೊರೆ ರಾಜಾವೀರ ಮದಕರಿನಾಯಕನ ಕಾಲದವರೆಗೆ ಅಂದರೆ ಕ್ರಿ.ಶ. ೧೭೫೮ ರಿಂದ ೧೭೭೯ರವರೆಗೆ ಕಣಕುಪ್ಪೆಯಲ್ಲಿ ಕೋಟೆ ನಿರ್ಮಾಣ ಕಾರ್ಯವು ಸಾಗಿಬಂದಿರುವುದನ್ನು ಕೈಫಿಯತ್ತು ವಿವರಿಸುತ್ತದೆ. ಈ ಮಧ್ಯೆ ಕಣಕುಪ್ಪೆಯಲ್ಲಿದ್ದುಕೊಂಡು ಅಧಿಕಾರ ನಡೆಸಿ ಕೋಟೆ ನಿರ್ಮಾಣಕ್ಕೆ ಕಾರಣವಾದವರಲ್ಲಿ ಪ್ರಮುಖರಾದವರೆಂದರೆ ಕ್ರಮವಾಗಿ ಹಿರೆಕೋಮಾರಪ್ಪ, ಕಾಟನಾಯಕ, ಚಿಕ್ಕ ಭರಮಪ್ಪನಾಯಕ, ಕಿರೇ ಜಂಪಣ್ಣನಾಯಕರು. ಇವರ ಅಧಿಕಾರ ಅವಧಿಯಲ್ಲಿ ಕೋಟೆ ವಿವಿಧ ಸ್ಮಾರಕಗಳು ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದು ಒಂದು ಸುಂದರ ಕೋಟೆ ನಿರ್ಮಾಣವಾಯಿತೆನ್ನಬಹುದು.

ಕಣಕುಪ್ಪೆ ಎಂಬ ಹೆಸರು ಬರಲು ಕಾರಣ

ಕಣಕುಪ್ಪೆ ಕೋಟೆಯನ್ನು ಆರಂಭಿಸಿದ ಚಿತ್ರದುರ್ಗದ ಪಾಳೆಯಗಾರ ಚಿಕ್ಕಣ್ಣನಾಯಕರ ತಂದೆ ಹಿರೆಕೋಮಾರಪ್ಪನವರು ಮೇಲ್ದುರ್ಗದ ಕೆಳಗೆ ಇರುವ ವಿಶಾಲವಾದ ಪ್ರದೇಶದಲ್ಲಿ (ಈಶ್ವರ ದೇವಾಲಯದ ಸಮೀಪ) ಹೊಂಡವನ್ನು ತೆಗೆಸುತ್ತಿದ್ದಾಗ ದೊಡ್ಡ ಶಂಖವೊಂದು ಸಿಕ್ಕಿತು. ತಕ್ಷಣವೇ ಆ ಶಂಖವನ್ನು ಕಾಮಾಟಿಗನೊಬ್ಬನು (ಕೆಲಸಗಾರ) ಹಿರೇಕೋಮಾರಪ್ಪನವರ ಬಳಿ ತೆಗೆದುಕೊಂಡ ಬಂದು ಕೊಟ್ಟನು. ಶಂಖ ತಂದುಕೊಟ್ಟ ಕಾಮಾಟಿಯ ಪ್ರಾಮಾಣಿಕತೆಗೆ ಮೆಚ್ಚಿ ಕೋಮಾರಪ್ಪನವರು ಉಡುಗೊರೆ ನೀಡಿದರು. ನಂತರ ಶಂಖಕ್ಕೆ ಪೂಜೆ ಸಲ್ಲಿಸಿ ಚಿತ್ರದುರ್ಗದಲ್ಲಿದ್ದ ಜೋಯಿಸ ತಿಮ್ಮಪ್ಪರನ್ನು ಕರೆಸಿ ತೋರಿಸಿದರು. ಶಂಖ ಮತ್ತು ಅದು ದೊರೆತ ಸ್ಥಳವನ್ನು ವೀಕ್ಷಿಸಿದ ಜೋಯಿಸರು ಇದು ಕಣ್ವಋಷಿಗಳ ಶಂಖವೆಂದು ಹಾಗು ಇಲ್ಲಿರುವ ‘ಗವಿ’ ಅವರ ಆಶ್ರಮವೆಂದು ಹೇಳಿದರು. ಅಂದಿನಿಂದ ಈ ಗುಡ್ಡಕ್ಕೆ ‘ಕಣಕುಪ್ಪೆ’ ಎಂದು ಹೆಸರಿಟ್ಟರು. ಅಲ್ಲದೆ ಕಣಕುಪ್ಪೆಯಲ್ಲಿ ಮೂರು ಗುಡ್ಡಗಳಿಗೆ ಮೇಲುದುರ್ಗ, ಮನ್ನಲಗಟ್ಟು ಮತ್ತು ಕೊತ್ತಲಗಟ್ಟು ಎಂಬ ಹೆಸರಿಟ್ಟರೆಂದು ಕೈಫಿಯತ್ತಿನಲ್ಲಿ ದಾಖಲಿಸಲಾಗಿದೆ.[8]

ಕೋಟೆಯ ರಚನೆ

ಚಿತ್ರದುರ್ಗ ಪಾಳೆಯಗಾರರ ರಕ್ಷಣಾ ವಾಸ್ತುಶಿಲ್ಪದ ಪ್ರತಿನಿಧಿಯಂತಿರುವ ಕಣಕುಪ್ಪೆ ಕೋಟೆಯ ಅವರ ರಕ್ಷಣಾ ವಾಸ್ತುಶಿಲ್ಪಕ್ಕೆ ಹಿಡಿದ ಕೈಗನ್ನಡಿಯಂತಿದೆ. ಪಾಳೆಯಗಾರರೆ ಆರಂಭಿಸಿ ಅವರಿಂದಲೇ ಪೂರ್ಣ ಪ್ರಮಾಣದ ವಾಸ್ತು ನಿರ್ಮಾಣವಾಗಿರುವುದು ಈ ಕೋಟೆ ವಿಶೇಷವೆನ್ನಬಹುದು. ಹಾಗಾಗಿ ಪಾಳೆಯಗಾರರ ಕಾಲದ ರಕ್ಷಣಾ ವಾಸ್ತು ಅಧ್ಯಯನಕಾರರಿಗೆ ಇದೊಂದು ಉತ್ತಮ ಪ್ರಾಯೋಗಿಕ ಆಕರವಾಗಬಲ್ಲದು. ಕೋಟೆಯ ರಚನೆ ಹಾಗೂ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಕೋಟೆಯ ಸ್ಥಳೀಯ ಆಕ್ರಮಣಗಳನ್ನು ಉದ್ದೇಶವಾಗಿಟ್ಟುಕೊಂಡು ನಿರ್ಮಿಸಿದಂತೆ ಕಂಡುಬರುತ್ತದೆ. ಕೋಟೆಯ ಕೆಲವು ರಚನಾ ವಿನ್ಯಾಸಗಳು ಚಿತ್ರದುರ್ಗ ಕೋಟೆಯ ಸಂಕೀರ್ಣತೆ (Complexity)ಗಳನ್ನು ಹೋಲುತ್ತವೆ. ವಿಸ್ತೀರ್ಣ ಗಾತ್ರ, ರಚನೆ ಹಾಗೂ ತಂತ್ರಗಾರಿಕೆಗಳಿಂದ ಈ ಕೋಟೆಯು ಚಿತ್ರದುರ್ಗದ ನಂತರದ ಸ್ಥಾನವನ್ನು ಪಡೆಯುತ್ತದೆ.

ಸುಮಾರು ೨೦ ಎಕರೆ ಪ್ರದೇಶದಲ್ಲಿ ವಿಸ್ತರಿಸುವ ಹಾಗು ಒಂದಕ್ಕೊಂದು ತ್ರಿಭುಜಾಕಾರವಾಗಿ ಬೆಸೆದುಕೊಂಡಿರುವ ಮೂರು ಗುಡ್ಡಗಳನ್ನು ಬಳಸಿಕೊಂಡು ಗಿರಿದುರ್ಗ ನಿರ್ಮಿಸಲಾಗಿದೆ. ಕೋಟೆಯ ಪಶ್ಚಿಮಭಾಗದಲ್ಲಿ ಸುಮಾರು ೧ ಕಿ.ಮೀ. ದೂರದಲ್ಲಿರುವ ಗವಿಮಠದಿಂದ ಗುಡ್ಡದ ಮಧ್ಯೆ ಪಾಳೆಯಗಾರರು ವಿಶಾಲವಾದ ಸ್ಥಳದುರ್ಗವನ್ನು ನಿರ್ಮಿಸಿದ್ದರೂ ಇಂದು ಅವಶೇಷಗಳು ಮಾತ್ರ ಉಳಿದುಕೊಂಡಿವೆ. ಈ ಭಾಗದಲ್ಲಿದ್ದ ಕೋಟೆಗೋಡೆ ಬಹುತೇಕ ಕಣ್ಮರೆಯಾಗಿದೆ. ಗಿರಿದುರ್ಗ ಮತ್ತು ಸ್ಥಳದುರ್ಗಗಳ ಪ್ರತೀಕವಾಗಿರುವ ಈ ಕೋಟೆಯನ್ನು ಅನಿಯಮಿತಾಕಾರದಲ್ಲಿ ಕಟ್ಟಲಾಗಿದೆ.

ಮೇಲುದುರ್ಗ, ಮನ್ನಲಗಟ್ಟ ಮತ್ತು ಕೊತ್ತಲಗಟ್ಟ ಎಂಬ ಮೂರು ಗುಡ್ಡಗಳನ್ನು ಬಳಸಿಕೊಂಡು ನಿರ್ಮಿಸಿರುವ ಈ ಕೋಟೆಯಲ್ಲಿ ವಿವಿಧ ವಿನ್ಯಾಸದಲ್ಲಿ ನಿರ್ಮಿಸಿರುವ ಬುರುಜು, ಬತೇರಿ, ಕೋಟೆಗೋಡೆ ಹಾಗೂ ದ್ವಾರಬಾಗಿಲುಗಳು ಮುಂತಾದ ಸ್ಮಾರಕಗಳಿವೆ. ದಕ್ಷಿಣ ದಿಕ್ಕನ್ನು ಹೊರತುಪಡಿಸಿ ಉಳಿದ ಕಡೆ ಕೋಟೆಯ ಗೋಡೆ ಈಗಲೂ ಸುಭದ್ರವಾಗಿಯೇ ಇದೆ. ದಕ್ಷಿಣ ದಿಕ್ಕಿನಲ್ಲಿರುವ ಕಡಿದಾದ ಬಂಡೆ ಕೋಟೆಯ ಅವಶ್ಯಕತೆಯನ್ನು ಇಲ್ಲವಾಗಿಸಿದೆ. ಮೇಲುದುರ್ಗ, ಕೊತ್ತಲಗಟ್ಟ ಮತ್ತು ಮನ್ನಲಗಟ್ಟ ಗುಡ್ಡಗಳ ಮೇಲೂ ಅವಶ್ಯಕತೆಗೆ ಅನುಗುಣವಾಗಿ ಕೋಟೆಯ ರಚನೆಗಳಿವೆ. ಈ ಎಲ್ಲಾ ಸ್ಮಾರಕಗಳನ್ನು ವಿವಿಧ ಉದ್ದೇಶಗಳನಿಟ್ಟುಕೊಂಡು ರಚಿಸಲಾಗಿದೆ. ಮನ್ನಲಗಟ್ಟು ಗುಡ್ಡದ ರಚನೆಗಳು ಆಡಳಿತಾತ್ಮಕ ದೃಷ್ಟಿಯಿಂದ ನಿರ್ಮಿಸಿದ್ದರೆ, ಮೇಲ್ದುರ್ಗದ ರಚನೆಗಳು ಸೈನಿಕರು ವಸತಿಯ ಹಿನ್ನೆಲೆಯಲ್ಲಿ ನಿರ್ಮಿಸಿರುವುದು ಕಂಡುಬರುತ್ತದೆ.

ಕೋಟೆಗೋಡೆ ಹಾಗೂ ಇತರೆ ಸ್ಮಾರಕಗಳು ನಿರ್ಮಿಸಲು ಬೆಟ್ಟದಲ್ಲಿ ದೊರೆಯುವ ಕಲ್ಲುಗಳನ್ನೇ ಉಪಯೋಗಿಸಿದ್ದಾರೆ. ಆ ಮೂಲಕ ಶ್ರಮ ಹಾಗೂ ವೆಚ್ಚವನ್ನು ಕಡಿಮೆ ಮಾಡಿದ್ದಾರೆ. ಕೆಲವು ಕಡೆ ಕಲ್ಲುಗಳನ್ನು ಸೀಳದೆ ಹಾಗೆ ಜೋಡಿಸಿದ್ದಾರೆ. ಮತ್ತೆ ಕೆಲವು ಕಡೆ ಕಲ್ಲನ್ನು ಸೀಳಿ ನಯಗೊಳಿಸಿ ಜೋಡಿಸಿರುವುದು ಕಂಡುಬರುತ್ತದೆ. ಕಲ್ಲುಗಳ ಅಂಚುಗಳು ಸರಿಯಾಗಿ ಹೊಂದಿಕೊಳ್ಳದೇ ಉಂಟಾದ ಸಂಧುಗಳಿಗೆ ಚಕ್ಕೆ ಕಲ್ಲುಗಳನ್ನು ಉಪಯೋಗಿಸಿ ಗೋಡೆಯನ್ನು ಭದ್ರಗೊಳಿಸಿದ್ದಾರೆ. ಕೋಟೆಗೋಡೆ ಸಾಮಾನ್ಯವಾಗಿ ೨೦ ರಿಂದ ೨೫ ಅಡಿ ಎತ್ತರವಿದ್ದು ಸುಮಾರು ೫ ಅಡಿಯಿಂದ ೧೫ ಅಡಿ ಅಗಲವಿದೆ. ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ದ್ವಾರಬಾಗಿಲುಗಳ ಬಳಿ ಮತ್ತು ಕೋಟೆಗೋಡೆಗೆ ಬಂದೂಕು ರಂಧ್ರಗಳಿವೆ.

ಪಶ್ಚಿಮದ ಕೋಟೆಯ ಅಂದರೆ ಗವಿಮಠದ ಮೂಲಕ ಬೆಟ್ಟವನ್ನು ಹತ್ತುವಾಗ ನಮಗೆ ಸಿಗುವ ದಾರಿಯೇ ಕೋಟೆಯ ಪ್ರಮುಖ ರಸ್ತೆ. ಈ ರಸ್ತೆಯು ಸುತ್ತಿ ಬಳಸಿ ಅನೇಕ ತಿರುವುಗಳನ್ನು ಪಡೆದುಕೊಂಡು ಪೂರ್ವ ದಿಕ್ಕಿನಲ್ಲಿರುವ ಜಗಲೂರು ಬಾಗಿಲಿನವರೆಗೆ ಸಾಗುವುದು. ಅಲ್ಲಲ್ಲಿ ರಸ್ತೆಯ ಎರಡು ಬದಿಯಲ್ಲಿ ೪ ಅಡಿ ಎತ್ತರದ (ಈಗ ಇರುವ) ಗೋಡೆಗಳಿದ್ದು ರಸ್ತೆಯ ಮಧ್ಯದಲ್ಲಿ ಹಾಸುಗಲ್ಲುಗಳನ್ನು ಹಾಕಲಾಗಿದೆ.

ಮನ್ನಲಗಟ್ಟು ಗುಡ್ಡದಿಂದ ಕೊತ್ತಲಗಟ್ಟು ಗುಡ್ಡದ ಮಧ್ಯೆ ಕೋಟೆಯ ಸಾಲನ್ನು ನಿರ್ಮಿಸಿ ಎರಡು ಬೆಟ್ಟಗಳನ್ನು ಸಂಪರ್ಕ ಕಲ್ಪಿಸಲಾಗಿದೆ. ಈ ಕೋಟೆ ಸಾಲನ್ನು ನಿರ್ಮಿಸಲು ಅವರು ಅನುಸರಿಸಿರುವ ತಂತ್ರವನ್ನು ಗಮನಿಸಿದರೆ, ಇವರಿಗೆ ಕಲ್ಲು ಕೆಲಸದ ಮುಂದುವರೆದ ಜ್ಞಾನ ಖಚಿತವಾಗಿತ್ತೆಂಬುದು ಸಾಬೀತಾಗುತ್ತದೆ. ಯುದ್ಧತಂತ್ರದ ಬೆಳವಣಿಗೆಯ ಈ ಕ್ರಮಗಳನ್ನು ಆಧಾರವಾಗಿಟ್ಟುಕೊಂಡು ರಚಿಸಿರುವ ಈ ಕೋಟೆ ಸಾಲುಗಳು ಗ್ರೀಕ್ ನ ಸೈಕ್ಲೋಪಿಯನ್ (Cyclopean) ಹಾಗೂ ಮೈಸೇನಿಯನ್ (myceenaean) ಮಾದರಿಯನ್ನು ಹೋಲುತ್ತವೆ.[9]

ರಕ್ಷಣೆಗೆ ಹೆಚ್ಚು ಒತ್ತುಕೊಟ್ಟು ದ್ವಾರಬಾಗಿಲುಗಳನ್ನು ನಿರ್ಮಿಸಲಾಗಿದೆ. ಆ ಮೂಲಕ ಗೋಡೆಯನ್ನು ಹೊಡೆಯಲು ಅಥವಾ ಬೀಳಿಸಲು ಆಗದಂತೆ ಎರಡು ಪಾಶ್ವಗಳಲ್ಲಿನ ಕೋಟೆಗೋಡೆಯನ್ನು ನಿರ್ಮಿಸಲಾಗಿದೆ. ಗಾರೆ, ಮಣ್ಣು ಅಥವಾ ಚಕ್ಕೆ ಕಲ್ಲನ್ನಿಟ್ಟು ಓಡಿಸುವ ಬದಲು ಸಮಾನಾಂತರ ಅಳತೆಯ ಕಲ್ಲುಗಳನ್ನು ಬಳಸಲಾಗಿದೆ. ಈ ಕಲ್ಲುಗಳ ಒಂದು ಮುಖವನು ಉಬ್ಬಾಗಿಸಿ ಹಾಗೂ ಉಬ್ಬಾಗಿರುವ ಅಳತೆಯಲ್ಲಿಯೇ ಮತ್ತೊಂದು ಕಲ್ಲನ್ನು ಕೊರೆದು ತಗ್ಗು ಮಾಡಿ ಎರಡು ಕಲ್ಲುಗಳನ್ನು ಜೋಡಿಸಿ ಬೆಸೆದಿರುವ ತಂತ್ರ ನಿಜಕ್ಕೂ ಅದ್ಭುತವೇ ಸರಿ. ಚಿತ್ರದುರ್ಗ ಕೋಟೆಯಲ್ಲಿ ಇದೇ ರೀತಿಯ ತಂತ್ರಜ್ಞಾನವನ್ನು ಬಳಸಿದ್ದರು. ಅಲ್ಲಿ ಕಬ್ಬಿಣದ ಸರಳುಗಳ ಮೂಲಕ ಕಲ್ಲುಗಳನ್ನು ಬೆಸೆದಿರುವುದನ್ನು ಇಲ್ಲಿ ಸ್ಮರಿಸಬಹುದು.

ಕಣಕುಪ್ಪೆ ಕೋಟೆಯ ನಿಸರ್ಗದತ್ತವಾದ ಮೂರು ಬೆಟ್ಟಗಳನ್ನು ಒಳಗೊಂಡಂತೆ ನಿರ್ಮಿಸಲಾಗಿದೆ. ಮೇಲ್ದುರ್ಗವೆಂದು ಕರೆಯುವ ದಕ್ಷಿಣದಗುಡ್ಡ, ವಾಯುವ್ಯ ಭಾಗದಲ್ಲಿರುವ ಮನ್ನಲಗಟ್ಟು ಗುಡ್ಡ ಹಾಗೂ ಪಶ್ಚಿಮ ಭಾಗದಲ್ಲಿರುವ ಕೊತ್ತಲಗಟ್ಟು ಎಂದು ಕರೆಯುವ ಮೂರು ಗುಡ್ದಗಳಲ್ಲೂ ರಕ್ಷಣಾತ್ಮಕವಾದ ಸ್ಮಾರಕಗಳಿವೆ. ಕೋಟೆಯ ಹೊರಸುತ್ತು ಈ ಮೂರು ಬೆಟ್ಟಗಳನ್ನು ಆವರಿಸಿಕೊಂಡಿದೆ. ಮೇಲ್ದುರ್ಗದ ಗುಡ್ಡಕ್ಕೆ ಉತ್ತರದಲ್ಲಿ ಪೂರ್ವಕ್ಕೆ ವಿಸ್ತರಿಸಿರುವಂತೆ ಪ್ರತ್ಯೇಕವಾಗಿ ಮೂರು ಕೋಟೆ ಸಾಲುಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ಮೇಲ್ದುರ್ಗದ ಬೆಟ್ಟದ ಮೇಲೆ ಸುತ್ತಲೂ ರಕ್ಷಣಾತ್ಮಕ ಕೋಟೆಯ ಸಾಲನ್ನು ನಿರ್ಮಿಸಿರುವರು. ಈ ಕೋಟೆಗೆ ಪೂರ್ವ ಪಶ್ಚಿಮವಾಗಿ ಎರಡು ಪ್ರತ್ಯೇಕ ಗೋಡೆಗಳನ್ನು ರಚಿಸಿ ಮೂರು ಅಂಕಣಗಳನ್ನಾಗಿ ನಿರ್ಮಿಸಲಾಗಿದೆ. ಈ ಅಂಕಣಗಳಿಗೆ ಸಂಪರ್ಕಿಸಲು ಎರಡು ದ್ವಾರಬಾಗಿಲುಗಳಿವೆ. ಎರಡನೆ ಅಂಕಣದಲ್ಲಿ ಅಕ್ಕ, ತಂಗಿಯರೆಂಬ ಎರಡು ನೈಸರ್ಗಿಕ ಹೊಂಡಗಳಿವೆ. ಪಶ್ಚಿಮ ದಿಕ್ಕಿನಲ್ಲಿ ಮತ್ತೊಂದು ಪ್ರತ್ಯೇಕವಾದ ಕೋಟೆ ಸಾಲು ಇದೆ. ಮೊದಲನೆ ಅಂಕಣದಲ್ಲಿ ಹಲವಾರು ಕಟ್ಟಡದ ಅವಶೇಷಗಳಿವೆ.

ಮನ್ನಲಗಟ್ಟು ಗುಡ್ಡಕ್ಕೆ ಹೊಂದಿಕೊಂಡಂತೆ ಪಶ್ಚಿಮ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸುಮಾರು ೫೧೦ ಮೀಟರ್ ಉದ್ದದ ಕೋಟೆ ಗೋಡೆಯನ್ನು ನಿರ್ಮಿಸಲಾಗಿದೆ. ಗುಡ್ಡದ ತುದಿಯಲ್ಲಿ ಚೌಕಾಕಾರದ ಬುರುಜನ್ನು ೨೫x೩೩x೨೦ ಅಳತೆ ನಿರ್ಮಿಸಲಾಗಿದೆ. ಬುರುಜಿನ ಒಳಭಾಗದಲ್ಲಿ ಶತ್ರುಗಳನ್ನು ವೀಕ್ಷಿಸಲು ಚಿಕ್ಕಕಿಂಡಿಯನ್ನು ಬಿಡಲಾಗಿದೆ. ಇದೇ ಬುರುಜು ಪೂರ್ವದ ತುದಿಯಿಂದ ಮತ್ತೊಂದು ಕೋಟೆಸಾಲು ಮೇಲ್ದುರ್ಗದ ಬೆಟ್ಟದ ಕಡೆಗೆ ಸಾಗುತ್ತಿದೆ. ಈ ಕೋಟೆಗೋಡೆ ೨೦ ಅಡಿ ಎತ್ತರವಿದ್ದು. ೬ ಅಡಿ ಅಗಲವಿದೆ. ಗೋಡೆಗೆ ಅಲ್ಲಲ್ಲಿ ಕಾವಲು ಬುರುಜುಗಳಿರುವುದು ಮತ್ತು ಬಂದೂಕು ಕಿಂಡಿಗಳಿರುವುದು ಕಂಡುಬರುತ್ತದೆ.

ಮನ್ನಲಗಟ್ಟು ಗುಡ್ದದ ಸುತ್ತಲೂ ಸು. ೬೧೦ ಮೀಟರ್ ರಕ್ಷಣಾತ್ಮಕವಾದ ಗೋಡೆಯನ್ನು ನಿರ್ಮಿಸಲಾಗಿದೆ. ಕೋಟೆಯ ಮಧ್ಯಭಾಗದಲ್ಲಿ ವಿಶಾಲವಾದ ಕಡಿದಾದ ಬಂಡೆಯ ಬಯಲು ಪ್ರದೇಶವಿದೆ. ಈ ಕೋಟೆಯ ಭಾಗದಲ್ಲಿ ನಾಲ್ಕು ಚೌಕಕಾರದ ಬುರುಜುಗಳಿವೆ. ಕೋಟೆಯ ಪೂರ್ವಭಾಗಕ್ಕೆ ದ್ವಾರಬಾಗಿಲಿದೆ. ಸ್ಥಳೀಯರು ಈ ದ್ವಾರ ಬಾಗಿಲಿಗೆ ಉಚ್ಚಂಗಿ ದ್ವಾರಬಾಗಿಲೆಂದು ಕರೆಯುತ್ತಾರೆ. ದ್ವಾರಬಾಗಿಲಿಗೆ ನಾಲ್ಕು ಬಾಗಿಲವಾಡಗಳಿವೆ. ಬಾಗಿಲು ಎತ್ತರ ೭ ಅಡಿ ಇದೆ. ಬಾಗಿಲಮುಂದೆ ೪ ಅಡಿ ಅಗಲದ ಅಡಿ ಎತ್ತರದ ಕಂಟಾಂಜನವಿದೆ. ಬಾಗಿಲವಾಡದ ಮೆಲೆ ಪದ್ಮದ ಅಲಂಕರಣ ಮತ್ತು ಭುವನೇಶ್ವರಿಯ ಚಿತ್ರವಿದೆ. ಬಾಗಿಲವಾಡದ ಮೆಲೆ ದಕ್ಷಿಣಭಿಮುಖವಾಗಿ ಕೆತ್ತಿರುವ ಹನುಮಂತನ ಉಬ್ಬುಶಿಲ್ಪವಿದೆ. ಇಲ್ಲಿಂದ ಕಲ್ಲು ಬಾಗಿಲಿಗೆ ಪ್ರವೇಶ ಕಲ್ಪಿಸಲಾಗಿದೆ.

ಮನ್ನಲಗಟ್ಟು ಕೋಟೆಯ ಮಧ್ಯಭಾಗದಲಿರುವ ಬಂಡೆಯ ಮೇಲೆ ೨೦ ಅಡಿ ಎತ್ತರ ೪.೫ ಅಗಲ ಹಾಗೂ ೧೦೫ ಸುತ್ತಳತೆಯ ರಕ್ಷಣಾ ಗೋಡೆಯನ್ನು ನಿರ್ಮಿಸಲಾಗಿದೆ. ಕಟ್ಟಡವನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದು, ಮೇಲ್ಭಾಗದಲ್ಲಿ ಕೋವಿ ಕಿಂಡಿಗಳನ್ನು ಬಿಡಲಾಗಿದೆ. ಕಟ್ಟಡದ ದಕ್ಷಿಣಕ್ಕೆ ದ್ವಾರಬಾಗಿಲು ಇದೆ. ಕಟ್ಟಡದ ಒಳಭಾಗದಲ್ಲಿ ಮತ್ತೆ ಮೂರು ಪ್ರತ್ಯೇಕವಾದ ಅಂಕಣಗಳಿವೆ. ಪ್ರತಿ ಅಂಕಣಗಳನ್ನು ತಲುಪಲು ವಿಶಾಲವಾದ ದಾರಿಯನ್ನು ಕಲ್ಪಿಸಿದ್ದಾರೆ. ದಾರಿಯ ೨ ಪಾರ್ಶ್ವಗಳಲ್ಲಿ ಕಟ್ಟಡದ ರಚನೆಗಳಿವೆ. ಅಂಕಣದಲ್ಲಿರುವ ಕಟ್ಟಡಗಳು ನೆಲಸಮಗೊಂಡಿದ್ದು ಅವಶೇಷಗಳು ಮಾತ್ರ ಕಂಡುಬರುತ್ತವೆ. ಸ್ಥಳೀಯರು ಇದನ್ನು ಮುದ್ದಿನ ಮನೆಯೆಂದು ಕರೆಯುತ್ತಾರೆ.

ಮೂರು ಗುಡ್ಡಗಳ ಮಧ್ಯಭಾಗದಲ್ಲಿ ಅನೇಕ ಸ್ಮಾರಕಗಳಿವೆ. ಮೇಲ್ದುರ್ಗ ಮತ್ತು ಮನ್ನಲಗಟ್ಟ ಗುಡ್ಡಕ್ಕೆ ಅಡ್ಡಲಾಗಿ ೨೦ ಅಡಿ ಎತ್ತರದ ಕಲ್ಲಿನ ಗೋಡೆಯನ್ನು ನಿರ್ಮಿಸಲಾಗಿದೆ. ಈ ಗೋಡೆಯ ಹಿಂಭಾಗದಲ್ಲಿ ಅರಮನೆ ಆವರಣ ಎಂದು ಕರೆಯಬಹುದಾದ ಕಟ್ಟಡದ ಅವಶೇಷಗಳಿವೆ. ಇದೇ ಗೋಡೆಗೆ ದಕ್ಷಿಣೋತ್ತರವಾಗಿ ಕಲ್ಲುಬಾಗಿಲನ್ನು ನಿರ್ಮಿಸಲಾಗಿದೆ. ಇದಕ್ಕೆ ಗಾರೆಬಾಗಿಲು ಎಂದು ಸಹ ಕರೆಯುತ್ತಾರೆ. ಇಡೀ ಕೋಟೆಯಲ್ಲಿ ಅತ್ಯಂತ ಸುಂದರವಾದ ರಚನೆಯಿದು. ೫.೫x೮x೧೨ ಅಡಿ ಅಳತೆಯಲ್ಲಿ ದ್ವಾರಬಾಗಿಲನ್ನು ನಿರ್ಮಿಸಿರುವರು. ದ್ವಾರಬಾಗಿಲಿಗೆ ನಾಲ್ಕು ಬಾಗಿಲವಾಡಗಳಿವೆ. ಬಾಗಿಲ ಮೇಲ್ಭಾಗದಲ್ಲಿ ಪದ್ಮದ ಅಲಂಕಾರವಿದೆ. ದ್ವಾರಬಾಗಿಲಿಗೆ ಹೊಂದಿಕೊಂಡಂತೆ ೫.೫x೩x೬ ಅಡಿ ಅಳತೆಯ ದಿಡ್ಡಿಬಾಗಿಲು ಸಹ ಇದೆ. ಸಮೀಪದಲ್ಲಿಯೇ ಹಾಲು ಹೊಂಡ ಎಂದು ಕರೆಯುತ್ತಿರುವ ಸುಂದರವಾದ ಪುಷ್ಕರಣಿ ಇದೆ. ದಕ್ಷಿಣೋತ್ತರವಾಗಿ ೫೦ ಮೀಟರ್ ಪೂರ್ವ – ಪಶ್ಚಿಮವಾಗಿ ೪೦ ಮೀಟರ್ ಅಳತೆಯಲ್ಲಿ ನಿರ್ಮಿಸಿರುವ ಈ ಹೊಂಡ ಇಂದಿನ, ಸುಸ್ಥಿತಿಯಲ್ಲಿದೆ. ಹೊಂಡದ ಸುತ್ತಲೂ ಕಲ್ಲಿನ ಪಾವಟಿಕೆಗಳಿದ್ದು, ಇಳಿಯಲು ಮೆಟ್ಟಿಲುಗಳಿವೆ.

ಹೊಂಡದ ಸಮೀಪದಲ್ಲಿಯೇ ಈಶ್ವರ, ಭೈರವ ದೇವಾಲಯಗಳಿವೆ. ಈ ದೇವಾಲಯಗಳನ್ನು ಕಾಟನಾಯಕನು ನಿರ್ಮಿಸಿದನೆಂದು ಹೇಳಲಾಗಿದೆ. ದೇವಾಲಯದ ಒಳಭಾಗದಲ್ಲಿ ಯಾವುದೇ ಶಿಲ್ಪಿಗಳಲ್ಲಿ. ಎರಡೂ ದೇವಾಲಯಗಳು ಗರ್ಭಗೃಹ ಸುಖನಾಸಿಯನ್ನು ಹೊಂದಿವೆ. ದೇವಾಲಯದ ಹಿಂಭಾಗದಲ್ಲಿ ಸಂತೇ ಮೈದಾನದ ಪ್ರದೇಶವಿದೆ. ದೊರೆ ಕಾಟನಾಯಕನ ಅವಧಿಯಲ್ಲಿ ಈ ಭಾಗದಲ್ಲಿ ಪೇಟೆ ಮನೆಗಳನ್ನು ಕಟ್ಟಿ ಶೆಟ್ಟಿತನಕ್ಕೆ ಗೂರಪ್ಪನೆಂಬುವನನ್ನು ನೇಮಿಸಲಾಗಿತ್ತೆಂದು ಕೈಫಿಯತ್ತಿನಲ್ಲಿ ದಾಖಲಾಗಿದೆ.

ಕೊತ್ತಲಗುಡ್ದದ ಮೇಲೆ ಒಂದು ಅಂಜನೇಯನ ಶಿಲ್ಪ ಹಾಗೂ ಎರಡು ನೈಸರ್ಗಿಕ ನೀರಿನ ಹೊಂಡಗಳನ್ನು ಹೊರತುಪಡಿಸಿ ಮತ್ತಾವುದೇ ಸ್ಮಾರಕಗಳಿಲ್ಲ. ಪೂರ್ವಭಾಗದ ಕೋಟೆ ಪ್ರದೇಶದಲ್ಲಿ ಭೈರವೇಶ್ವರ, ಮಾರಮ್ಮ ಮತ್ತು ಅಂಜನೇಯನ ದೇವಾಲಯಗಳಿವೆ. ಸಮೀಪದಲ್ಲಿಯೇ ಜಗಲೂರಜ್ಜನ ಬಾಗಿಲು ಎಂದು ಕರೆಯುವ ದ್ವಾರಬಾಗಿಲು ಇದೆ.

ಗುಡ್ದದ ಪಶ್ಚಿಮ ಭಾಗದಲ್ಲಿ ವೃತ್ತಾಕಾರದ ಬತೇರಿ ಇದೆ. ಬತೇರಿ ಸಮೀಪದಲ್ಲಿಯೇ ಭರಮಕ್ಕನ ಹೊಂಡ ಮತ್ತು ಆಂಜನೇಯನ ದೇವಾಲಯವಿದೆ. ಹಿಂದೆ ಈ ಕೋಟೆಗೆ ಪ್ರದೇಶ ಮಾಡುವ ದ್ವಾರಬಾಗಿಲು (ಪೇಟೆಬಾಗಿಲು) ಇತ್ತೆಂದು ಹೇಳುತ್ತಾರೆ. ಆದರೆ ಈಗ ಕಂಡುಬರುವುದಿಲ್ಲ. ವೃತ್ತಾಕಾರದ ಬುರುಜಿನಿಂದ ಮನ್ನಲಗಟ್ಟು ಗುಡ್ಡದವರೆಗೆ ಬಿದ್ದ ಮಳೆನೀರು ವ್ಯರ್ಥವಾಗದಂತೆ ದಕ್ಷಿಣೋತ್ತರವಾಗಿ ಕಂದಕವನ್ನು ನಿರ್ಮಿಸಿ ಮಳೆಯ ನೀರು ಕಾಟನಾಯಕ ಕೆರೆಗೆ ತಲುಪುವಂತೆ ಹಾಗೂ ಕಂದಕದಲ್ಲಿ ನೀರು ನಿಲ್ಲುವಂತೆ ವ್ಯವಸ್ಥೆಗೊಳಿಸಿದ್ದಾರೆ.

ಕೆಳಗೋಟೆಯೆಂದು ಕರೆಯುವ ಗುಡ್ಡದ ಈ ವಿಶಾಲ ಪ್ರದೇಶದಲ್ಲಿ ಹಿಂದೆ ಸ್ಥಳದುರ್ಗ ಇದ್ದ ಬಗ್ಗೆ ಕುರುಹುಗಳಿವೆ. ಕಿರೇಜಂಪಣ್ಣನಾಯಕನ ಅವಧಿಯಲ್ಲಿ ನಿರ್ಮಾಣದ ನಿರ್ವಾಣಪ್ಪ ಬಾವಿ ಮತ್ತು ಮೆದಕೇರಪ್ಪನ ಬಾವಿಗಳು ಈ ಭಾಗದಲ್ಲಿವೆ. ಮುಖ್ಯವಾಗಿ ಪ್ರಾಚೀನಕಾಲದ ಗವಿಮಠವಿದೆ. ಚಿಕ್ಕ ಒಂಟಿಗುಡ್ಡದ ಮೇಲಿರುವ ಈ ಮಠದಲ್ಲಿ ದೊಡ್ಡ ಬಂಡೆಯೊಂದು ಇದೆ. ಈ ಬಂಡೆಯ ಕೆಳಭಾಗದಲ್ಲಿ ಗುಹೆಯೊಂದನ್ನು ನಿರ್ಮಿಸಲಾಗಿದೆ. ಗುಹೆಯಲ್ಲಿ ಈಶ್ವರಲಿಂಗವಿದ್ದು, ನಿತ್ಯ ಪೂಜೆ ನಡೆಯುತ್ತಿದೆ. ಗವಿಮಠ ಇಂದು ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಬೆಳೆಯುತ್ತಿದೆ. ಇಲ್ಲಿರುವ ಸ್ವಾಮೀಜಿಗಳಾದ ಶ್ರೀನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಠದ ಜವಾಬ್ದಾರಿ ಹೊತ್ತಿದ್ದು, ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿತ್ಯವು ಬರುವ ಭಕ್ತರಿಗೆ ಇಲ್ಲಿ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹವನ್ನು ನೀಡುತ್ತಿರುವುದು ನಿಜಕ್ಕೂ ಅಭಿನಂದನೀಯ.

ವಿಸ್ಮಯ ಮೂಡಿಸುವ ಕುಡಿಯುವ ನೀರಿನ ವ್ಯವಸ್ಥೆ

ಮನ್ನಲಗಟ್ಟು ಗುಡ್ದದ ಮೇಲ್ಭಾಗದಲ್ಲಿ ಸುಮಾರು ೩೦ ಮೀಟರ್ ನಷ್ಟು ವಿಶಾಲವಾದ ನೈಸರ್ಗಿಕ ಹೊಂಡವಿದೆ. ಕಡಿದಾದ ಬಂಡೆಯನ್ನು ಆಶ್ರಯಿಸಿ ಈಶಾನ್ಯ ಮೂಲೆಯಲ್ಲಿ ೬ ಅಡಿ ಎತ್ತರದ ಗೋಡೆಯನ್ನು ಕಟ್ಟುವ ಮೂಲಕ ಹೊಂಡವನ್ನು ನಿರ್ಮಿಸಿರುವರು. ಬೆಟ್ಟದ ಮೇಲಿಂದ ಬಂಡೆಯ ಮೂಲಕ ಬರುವ ಸ್ವಚ್ಚವಾದ ನೀರು ವ್ಯರ್ಥವಾಗದಂತೆ ನೀರನ್ನು ಬಳಸಲು ಹೊಂಡವನ್ನು ನಿರ್ಮಿಸಿರುವುದು ಗಮನಾರ್ಹ. ಹೊಂಡದ ಗೋಡೆಗೆ ಗಾರೆಗಚ್ಚಿನಿಂದ ಭದ್ರಪಡಿಸಿ ನೀರು ಬಸಿಯದಂತೆ ಕ್ರಮ ಕೈಗೊಳ್ಳಲಾಗಿದೆ. ಸಂಗ್ರಹಿಸಿದ ನೀರನ್ನು ಚಿಕ್ಕ ತೂಬಿನ ಮೂಲಕ ಅರಮನೆಯ ಆವರಣ ಮತ್ತು ವಸತಿ ಪ್ರದೇಶಕ್ಕೆ ಸಾಗಿಸಿರುವ ವ್ಯಸಸ್ಥೆ ನಿಜಕ್ಕೂ ರೋಮಾಂಚನವೇ ಸರಿ. ಬಂಡೆಯನ್ನು ಕೊರೆದು ಕಡದಂಗವನ್ನು ನಿರ್ಮಿಸಿ ಕಡದಂಗದ ಎರಡೂ ಬದಿಗೆ ಕಲ್ಲುಗಳನ್ನಿಟ್ಟು ಗಾರೆಯಿಂದ ಭದ್ರಗೊಳಿಸಿ ಕಾಲುವೆಯನ್ನು ನಿರ್ಮಿಸಿರುವರು. ಮೊದಲೇ ಇಳಿಜಾರು ಪ್ರದೇಶ ಇದಾಗಿರುವುದರಿಂದ ಯಾವುದೇ ಯಂತ್ರಶಕ್ತಿಯ ಸಹಾಯವಿಲ್ಲದೆ ದಿನವಿಡೀ ನೀರನ್ನು ಸಾಗಿಸಬಹುದಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೊಂಡದ ಮುಂಭಾಗದಲ್ಲಿ ಚಿಕ್ಕತೊಟ್ಟಿಯೊಂದನ್ನು ನಿರ್ಮಿಸಿ ಅದರೊಳಗೆ ಕಲ್ಲು ಮತ್ತು ಮರಳನ್ನು ಹಾಕಿ ನೀರು ಬಸಿದು ಹೋಗುವಂತೆ ಮಾಡಿರುವರು. ಇಲ್ಲಿನ ವಿಶೇಷವೆಂದರೆ ಕಾಲುವೆಯಿಂದ ಬಂದ ನೀರಿಗೆ ಮತ್ತೊಂದು ತಿರುವು ನೀಡಿ ವಸತಿ ಪ್ರದೇಶಕ್ಕೆ ಹೋಗುವಂತೆ ಮಾಡಲಾಗಿದೆ. ಎರಡು ಕಾಲುವೆಗೂ ನೀರು ಸಮಪ್ರಮಾಣದಲ್ಲಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಿರುವುದು ವಿಶೇಷ. ಅದರಲ್ಲೂ ಅರಮನೆ ಪ್ರದೇಶದ ಗೋಡೆಯನ್ನು ಬಂಡೆಗೆ ಸನಿಹದಲ್ಲಿ ನಿರ್ಮಿಸಿ ನೀರು ನೇರವಾಗಿ ಅರಮನೆಯ ಒಳಗೆ ಹೋಗುವಂತೆ ಮಾಡುವ ಮೂಲಕ ಮತ್ತೊಮ್ಮೆ ಶ್ರಮವನ್ನು ಕಡಿಮೆಮಾಡಿಕೊಂಡಿದ್ದಾರೆ. ಈ ವ್ಯವಸ್ಥೆಯು ಆಧುನಿಕ ಸಮಾಜಕ್ಕೆ ಒಂದು ಪ್ರಾಯೋಗಿಕ ಪಾಠವೇ ಸರಿ.

ಕೋಟೆ ಸಂರಕ್ಷಣೆಗೆ ಜಾನಪದ ನಂಬಿಕೆಯ ವಿಶಿಷ್ಟ ಆಚರಣೆ

ಕೋಟೆ ಸಹ ಒಂದು ರಕ್ಷಣಾ ಆವರಣಹುಳ್ಳ ಪ್ರದೇಶ. ಮುಖ್ಯವಾಗಿ ರಾಜ ಹಾಗೂ ರಾಜ್ಯಕ್ಕೆ ಒದಗಿಸುವ ಸ್ಥಳ. ಈ ದೃಷ್ಟಿಯಿಂದ ಕೋಟೆ ಪ್ರದೇಶವು ಸುರಕ್ಷಿತವಾಗಿರಲೆಂದು ಭಕ್ತಿ ನಂಬಿಕೆಯ ಪ್ರತೀಕವಾಗಿರುವ ಆಚರಣೆಗಳು ಪ್ರಚಲಿತದಲ್ಲಿರುವುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಕಣಕುಪ್ಪೆ ಕೋಟೆ ನಿರ್ಮಾಣದ ವೇಳೆ ಜಾನಪದ ನಂಬಿಕೆಯ ಆಚಎಅಣೆಗಳಲ್ಲೊಂದಾದ ಸರಗ (ಚೆರಗಾ?)ವನ್ನು ಇಲ್ಲಿ ಚೆಲ್ಲಿದರೆಂದು ಎರಡು ಬಾರಿ ಕೈಫಿಯತ್ತಿನಲ್ಲಿ ಉಲ್ಲೇಖಿಸಲಾಗಿದೆ.[10] ಚೆರಗಾ ಎನ್ನುವುದು ಜಾನಪದ ಜ್ಞಾನದ ವಿಶಿಷ್ಟ ಆಚರಣೆ ಎನ್ನಬಹುದು.[11] ಇಂತಹ ಆಚರಣೆ ಒಳ್ಳೆಯದು ಕೆಟ್ಟದ್ದು ಎನ್ನುವುದಕ್ಕಿತ ನಮ್ಮ ಪರಂಪರೆಯ ಜ್ಞಾನವು ತಲೆಮಾರಿನಿಂದ ತಲೆಮಾರಿನವರೆಗೂ ಸಾಗಿಸುತ್ತಾ ಬಂದಿರುವುದಲ್ಲದೆ ಇಂದಿಗೂ ಜೀವಂತವಾಗಿರುವುದು ವಿಶೇಷವಾಗಿದೆ. ರಕ್ಷಣಾ ವಾಸ್ತುಶಿಲ್ಪದಲ್ಲಿ ಚೆರಗಾ ಆಚರಣೆ ಸಂಪ್ರದಾಯವಾಗಿರುವುದನ್ನು ಗಮನಿಸಿದರೆ ಎಷ್ಟೇ ಬಲಿಷ್ಟವಾಗಿ ಕಲ್ಲಿನ ಕೋಟೆಯನ್ನು ನಿರ್ಮಿಸಿದರೂ ದೇಶಿಯ ಜ್ಞಾನರೂಪದ ಸಾಂಪ್ರದಾಯಿಕ ಪ್ರಕೃತಿ ಅಥವಾ ದೈವೀ ಚಿಕಿತ್ಸಾ ಪದ್ಧತಿಗೆ ಮೊರೆ ಹೋಗಿ ಜೀವನದ ರಕ್ಷಣೆಯನ್ನು ಇಂತಹ ಆಚರಣೆ ಮೂಲಕ ಗಟ್ಟಿಗೊಳಿಸುತ್ತಿರುವುದು ಗಮನಾರ್ಹ.

ಆ ಮೂಲಕ ರಕ್ಷಣಾ ವಾಸ್ತು ಸಹ ಜಾನಪದರ ಒಂದು ಭಾಗವಾಗಿಯೇ ಇಲ್ಲಿ ಮುಂದುವರೆದಿದೆ ಎನ್ನಬಹುದು ಏಕೆಂದರೆ ಜನಪದರು ಕೋಟೆಯೆಂಬ ನಿಸರ್ಗದ ಜವಬ್ದಾರಿಯ ಒಳಗೆ ಜೀವನವನ್ನು ರೂಪಿಸಿಕೊಳ್ಳುತ್ತಿದ್ದರು. ಹಾಗಾಗಿಯೇ ಇಂತಹ ಆಚರಣೆಗಳು ಪಾರಂಪರಿಕ ಜ್ಞಾನದ ಅಚಶೇಷಗಳಾಗಿ ಉಳಿದು ಬಂದಿರುವುದು. ಇವು ಸಹ ರಕ್ಷಣೆಯ ತಂತ್ರಜ್ಞಾನದ ಬಳಕೆಗೆ ಮರೆತ ಪಳೆಯುಳಿಕೆಗಳನ್ನೆಬಹುದು. ಬಲಿಯ ರೂಪದಲ್ಲಿ ನಡೆಯುವ ಇಂತಹ ಆಚರಣೆಗಳು ಭಯ, ಭಕ್ತಿ, ಶ್ರದ್ಧೆ, ನಂಬಿಕೆಯ ಪ್ರತೀಕಗಳಾಗಿವೆ.

ಒಟ್ಟಾರೆ ತಮ್ಮ ನಾಡಿನ ಅಭಿವೃದ್ಧಿಗಾಗಿ, ತಾವು ನೆಲೆಸಿದ ಪರಿಸರದಲ್ಲಿ ಶಾಂತಿ, ನೆಮ್ಮದಿ, ಸಂರಕ್ಷಣೆ ದೊರೆಯಲೆಂದು ಇಂತಹ ವಿಶಿಷ್ಟ ಆಚರಣೆಯನ್ನು ನೆರವೇರಿಸುತ್ತಿದ್ದರು. ಇಂತಹ ನಂಬಿಕೆಯಿಂದಲೇ ಹಿರೇಕೋಮಾರಪ್ಪನವರು ಎರಡು ಬಾರಿ ಕೋಟೆಗೆ ಸರಗಾ ಚೆಲ್ಲಿಸಿರುವುದನ್ನು ಕೈಫಿಯುತ್ತಿನಲ್ಲಿ ಉಲ್ಲೇಖಿಸಲಾಗಿದೆ. ಈ ಅಂಶವನ್ನು ಗಮನಿಸಿದರೆ ರಕ್ಷಣಾ ವಾಸ್ತುಶಿಲ್ಪದ ಸಂರಕ್ಷಣಾ ಸಾಧನಗಳಾಗಿ ಕೇವಲ ಅಸ್ತ್ರ ಮತ್ತು ಶಸ್ತ್ರಗಳಲ್ಲದೇ ಪಾರಂಪರಿಕ ಜ್ಞಾನವೊಂದು ನಿಸರ್ಗವನ್ನು ನಿಯಂತ್ರಿಸುತ್ತಿತ್ತೆನ್ನುವುದು ಸ್ಪಷ್ಟವಾಗುತ್ತದೆ. ರಕ್ಷಣಾ ವಾಸ್ತುಶಿಲ್ಪದಲ್ಲಿ ಚೆರಗಾ ಸಂಪ್ರದಾಯ ಒಂದು ವಿಶಿಷ್ಟ ಆಚರಣೆ. ಜಾನಪದ ಅಧ್ಯಯನದ ಮೂಲಕ ರಕ್ಷಣಾ ವಾಸುಶಿಲ್ಪವನ್ನು ಅಧ್ಯಯನ ಮಾಡುವ ಸಂಶೋಧಕರಿಗೆ ಇದೊಂದು ವಿಶಿಷ್ಟ ಆಕರವಾಗಬಲ್ಲದು.

ಕೋಟೆಯ ದ್ವಾರಬಾಗಿಲುಗಳು

ಕಣಕುಪ್ಪೆ ಕೋಟೆಯಲ್ಲಿ ಒಟ್ಟು ೧೮ ದ್ವಾರ ಬಾಗಿಲುಗಳಿವೆ. ಅವುಗಳೆಂದರೆ ೧) ಮೇಲ್ದುರ್ಗದ ಬಾಗಿಲು ೨) ಕುಂಟಜ್ಜಿ ಬಾಗಿಲು ೩) ಹಾಲು ಹೊಂಡದ ಬಾಗಿಲು ೪) ಕಲ್ಲು ಬಾಗಿಲು ೫) ಏಕನಾಥ (ಉಚ್ಚಂಗಿ) ಬಾಗಿಲು ೬)ದೊಡ್ಡ ಬಾಗಿಲು ೭) ಶಿವಶರಣೆ ದಾನಸಾಲಮ್ಮನ ಬಾಗಿಲು ೮) ಮನ್ನೇಟಿ ಗಟ್ಟಿನ ಬಾಗಿಲು ೯) ಹನುಮನ ಬಾಗಿಲು ೧೦) ವೀರಭದ್ರನ ಬಾಗಿಲು ೧೧) ನಡಲೂರು ಬಾಗಿಲು ೧೨) ಜಗಲೂರಜ್ಜನ ಬಾಗಿಲು ೧೩) ಭೈರವನ ಬಾಗಿಲು ೧೪) ಅಹೋಬಲ ನರಸಿಂಹನ ಬಾಗಿಲು ೧೫) ಕೋಟೆ ಮಾರಮ್ಮನ ಬಾಗಿಲು ೧೬) ಕೊದಂಡರಾಮನ ಬಾಗಿಲು ೧೭) ಬಸವನ ಬಾಗಿಲು ೧೮) ಚೌಡಿಬಾಗಿಲುಗಳೆಂದು ಹೇಳಲಾಗಿದೆ.[12] ಆದರೆ ಈ ಎಲ್ಲಾ ದ್ವಾರಗಳನ್ನು ಈಗ ಗುರುತಿಸುವುದು ಕಷ್ಟ. ನಕ್ಷೆಯಲ್ಲಿ ತೋರಿಸಿರುವಂತೆ ಅಳಿದುಳಿದ ಅವಶೇಷಗಳ ಆಧಾರ ಹಾಗೂ ಸ್ಥಳೀಯರ ಹೇಳಿಕೆಯಂತೆ ಕೆಲವು ದ್ವಾರಬಾಗಿಲುಗಳನ್ನು ಮಾತ್ರ ಗುರುತಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಚಿತ್ರದುರ್ಗ ಪಾಳೆಯಗಾರರು ಕೋಟೆಗಳನ್ನು ಕೇವಲ ಯುದ್ಧಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡದೇ, ಸಾಮಾಜಿಕ ಬದುಕಿನ ಸುರಕ್ಷತೆಯು ದೃಷ್ಟಿಯಿಂದಲೂ ಇವರು ಕೋಟೆಗಳನ್ನು ನಿರ್ಮಿಸುತ್ತಿದ್ದರೆಂದು ಕಣಕುಪ್ಪೆ ಕೋಟೆಯ ಅಧ್ಯಯನದಿಂದ ತಿಳಿದುಬರುತ್ತದೆ. ಇವರ ರಕ್ಷಣಾ ವಾಸ್ತುಶಿಲ್ಪವು ಅವರ ಸಾಂಸ್ಕೃತಿಕ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುವಂತಿದೆ. ಗುರುಕಾರರು, ಕೋಟೆ ನಿರ್ಮಿಸಿದ ವಡ್ಡರು, ಕಾರ್ಮಿಕರೂ ಸೇರಿದಂತೆ ನ್ಯಾಯ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಡೆದುಕೊಂಡುವರಿಗೂ ಸಹ ಉಡುಗೊರೆ ಹಾಗೂ ಗೌರವವನ್ನು ಕೊಟ್ಟಿರುವುದನ್ನು ನೋಡಿದರೆ ಅವರ ಆಡಳಿತವು ಕೂಡ ಧರ್ಮದ ತಳಹದಿಯ ಮೇಲೆ ನಡೆಯುತ್ತಿತ್ತು ಎಂಬುದು ದೃಢವಾಗುತ್ತದೆ.

[1] ಶಿವತಾರಕ್, ಕೆ.ಬಿ, ೨೦೦೧, ಕರ್ನಾಟಕದ ಪುರಾತತ್ವ ನೆಲೆಗಳು, ಪ್ರಸಾರಾಂಗ, ಕನ್ನಡ ವಿ.ವಿ., ಹಂಪಿ. ಪು. ೩೩೦

[2] ರಾಜಶೇಖರಪ್ಪ. ಬಿ, ೨೦೦೧, ಇತಿಹಾಸ ಕಥನ ಸಿ.ವಿ.ಜಿ. ಪಬ್ಲಿಕೇಶನ್, ಬೆಂಗಳೂರು, ಪು. ೧೨೭

[3] ತಿಪ್ಪೇಸ್ವಾಮಿ, ಎಸ್., ೨೦೦೪, ರಕ್ಷಣಾ ವಾಸ್ತುಶಿಲ್ಪ, ಚಿತ್ರದುರ್ಗ ಜಿಲ್ಲೆ, (ಅಪ್ರಕಟಿತ ಮಹಾಪ್ರಬಂಧ) ಕನ್ನಡ ವಿ.ವಿ. ಹಂಪಿ. ಪು. ೯೯

[4] ಎಫಿಗ್ರಾಫಿಯಾ ಕರ್ನಾಟಕ, ಸಂಪುಟ – ೧೧, ಜಗಲೂರು – ೦೪, ಪು. ೫

[5] ಕಲಬುರ್ಗಿ. ಎಂ.ಎಂ., (ಸಂ) ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ, ಕರ್ನಾಟಕ ವಿ.ವಿ. ಧಾರವಾಡ, ಪುಟ.೨೭ – ೩೩.

[6] ಹಿರೇಕೋಮಾರಪ್ಪನವರು, ಚಿತ್ರದುರ್ಗದ ದೊರೆ ಚಿಕ್ಕನಾಯಕನ ತಂದೆ, ಚಿತ್ರದುರ್ಗದಲ್ಲಿ ದೊರೆ ಓಬಣ್ಣನಾಯಕರನ್ನು ಗುರಿಕಾರರು ಹತ್ಯಮಾಡಿದಾಗ ಹಿರೇಕೋಮಾರಪ್ಪನವರು ಮತ್ತು ಮಗ ಚಿಕ್ಕಣ್ಣನಾಯಕರು ಎದರಿ ಹರಪ್ಪನಹಳ್ಳಿಗೆ ಓಡಿಹೋಗಿ ನಂತರ ಕಣಕುಪ್ಪೆಗೆ ಬಂದು ಸೇರಿದರು. ತರುವಾಯ ಚಿತ್ರದುರ್ಗದಲ್ಲಾದ ತೀರ್ಮಾನದಂತೆ ಚಿಕ್ಕಣ್ಣ ನಾಯಕರನ್ನು ಅಧಿಕಾರಕ್ಕೆ        ತರಲು ದಳವಾಯಿಗಳಾದ ದಾಸಣ್ಣ ಮತ್ತು ರಂಗಪ್ಪ ಎನ್ನುವರು ಇವರಿಬ್ಬರಿಗೆ ಹಿಂದೆ ಆದಂತಹ ಘಟನೆಗಳು ಮರುಕಳಿಸದಂತೆ             ನೋಡಿಕೊಳ್ಳುವುದಾಗಿ ನಂಬಿಕೆಕೊಟ್ಟ ಮೇಲೆ ಹಿರೇಕೋಮಾರಪ್ಪನವರು ಚಿಕ್ಕಣ್ಣ ನಾಯಕರನ್ನು ದುರ್ಗದ ದೊರೆಯನ್ನಾಗಿ ಕಳುಹಿಸಿಕೊಟ್ಟು ಕಣಕುಪ್ಪೆಯಲ್ಲಿ ಉಳಿದುಕೊಂಡಿದ್ದರು ನಂತರ ದೊರೆಯ ಅಪೇಕ್ಷೆಯಂತೆ ಕೋಮಾರಪ್ಪನವರು ಚಿತ್ರದುರ್ಗಕ್ಕೆ ಹೋದರು.

[7] ಕಲಬುರ್ಗಿ,ಎಂ.ಎಂ., (ಸಂ)೧೯೯೪, ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ ಪು. ೨೮

[8] ನೋಡಿ http://en.wiki.pedia.org/wiki/cyelopean

[9] ಕಲಬುರ್ಗಿ, ಎಂ.ಎಂ., (ಸಂ) ೧೯೯೪, ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ, ಕನ್ನಡ ವಿ.ವಿ. ಹಂಪಿ, ಪು. ೨೭.

[10] ರಮೇಶ್, ಸ.ಚಿ, ೨೦೦೪, ಕರ್ನಾಟಕ ಜಾನಪದ, ಪ್ರಸಾರಾಂಗ, ಕನ್ನಡ ವಿ.ವಿ.ಹಂಪಿ, ಪುಟ.೪

[11] ಸಿದ್ಧಲಿಂಗಯ್ಯ, ೧೯೯೭, ಗ್ರಾಮದೇವತೆಗಳು, ಮೂಲಭಾರತಿ ಪ್ರಕಾಶನ, ಬೆಂಗಳೂರು, ಪು. ೯೩.

[12] ಕರಿಯಮ್ಮ ಚೌಡಪ್ಪ, (ಸಂ) ೨೦೦೭, ಜಗಲೂರು ವಾಯ್ಸ್, ಚಿಂಚನ ಪ್ರಿಂಟರ್ಸ್, ಜಗಲೂರು, ಪು. ೭೩.

(ಕ್ಷೇತ್ರಕಾರ್ಯದಲ್ಲಿ ನನ್ನೊಂದಿಗೆ ಸಹಕರಿಸಿದ ಗವಿಪಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಹಾಗೂ ಕನ್ನಡ ವಿ.ವಿ.ಯ ನನ್ನ ಗುರುಗಳಾದ ನರಸಿಂಹಮೂರ್ತಿ, ಚೇತನ ಹಾಗೂ ಕಣಕುಪ್ಪೆಯ ಮಂಜುನಾಥ್ ಇವರಿಗೆ ಕೃತಜ್ಞತೆಗಳು.)