ಭಾರತೀಯ ಇತಿಹಾಸ ರಚನಾಶಾಸ್ತ್ರದ ಸಂದರ್ಭದಲ್ಲಿ ನಾವು ಮುಖ್ಯವಾಗಿ ಎರಡು ಬಗೆಯ ಅಧ್ಯಯನ ಕ್ರಮಗಳನ್ನು ಗಮನಿಸಬಹುದು. ಮೊದಲನೆಯ ಸ್ಥೂಲಸ್ತರದ ಚರಿತ್ರೆಯಾದರೆ ಎರಡನೆಯ ಸೂಕ್ಷ್ಮಸ್ತರದ ಚರಿತ್ರೆ. ಸ್ಥೂಲಸ್ತರದ ಚರಿತ್ರೆ ಅಧ್ಯಯನ ಕ್ರಮವೆಂದರೆ ದೊಡ್ಡ ಸಾಮ್ರಾಜ್ಯ ಹಾಗೂ ವಿಸ್ತಾರವಾದ ರಾಜ್ಯಗಳ ಚರಿತ್ರೆಯ ಅಧ್ಯಯನ ಕ್ರಮವಾಗಿದೆ. ಇಂತಹ ಅಧ್ಯಯನ ಕ್ರಮವು ೧೮ ನೇ ಶತಮಾನದಿಂದಲೂ ನಡೆಯುತ್ತಾ ಬಂದಿದೆ. ಆದರೆ ಸೂಕ್ಷ್ಮಸ್ತರದ ಅಧ್ಯಯನವು ಇದಕ್ಕಿಂತ ಭಿನ್ನವಾದುದು. ಒಂದು ಸಂಸ್ಕೃತಿಯ ಬೆಳವಣಿಗೆಯ ದೃಷ್ಟಿಯಿಂದ ಇಂತಹ ಸೂಕ್ಷ್ಮಸ್ತರದ ರಾಜಕೀಯ, ಸಾಮಾಜಿಕ, ಆರ್ಥಿಕ ಘಟನೆಗಳು ಪ್ರಮುಖ ಪಾತ್ರವಹಿಸುತ್ತವೆ.

ಜಗಲೂರು ತಾಲೂಕಿನ ಅಧ್ಯಯನದಿಂದ ಸಾಮಾನ್ಯ ಜನರ ಬದುಕು ಹಾಗೂ ಪ್ರಾದೇಶಿಕ ಸಂಸ್ಕೃತಿಯ ಬೆಳವಣಿಗೆಯನ್ನು ಗುರುತಿಸಬಹುದು.

ಭಾರತದ ಉಪಖಂಡದಲ್ಲೆಲ್ಲಾ ಸರ್ವೇಸಾಮಾನ್ಯವಾಗಿ ಭೂಹಿಡುವಳಿಗಳ ಸ್ವರೂಪವು ಹೆಚ್ಚು ಕಡಿಮೆ ಒಂದೇ ರೀತಿ ಇರುವುದನ್ನು ನಾವು ಗುರುತಿಸಬಹುದು. ರಾಜಕೀಯ ಸಾಮಾಜಿಕ, ಆರ್ಥಿಕ ಮತ್ತಿತರ ಕಾರಣಗಳಿಂದ ಭೂಹಿಡುವಳಿಗಳನ್ನು ರಾಜ್ಯವು ವ್ಯಕ್ತಿ ಮತ್ತು ಸಮುದಾಯಗಳಿಗೆ ಶತಮಾನಗಳಿಂದಲೂ ನೀಡುತ್ತಾ ಬಂದಿದೆ. ಜಗಲೂರು ಪ್ರದೇಶವೂ ಇದರಿಂದ ಹೊರತೇನಲ್ಲ, ಪ್ರತಿ ಪ್ರದೇಶದ ಸಮುದಾಯಗಳ ಸ್ಥಾನ – ಮಾನಗಳು ನಿರ್ಧಾರವಾಗಿರುವುದೇ ಕೃಷಿಗೊಳಪಟ್ಟ ಭೂಮಿಯ ಒಡೆತನದ ಆಧಾರದ ಮೇಲೆಯೇ ಹೀಗಾಗಿ ಆಯಾಯ ಪ್ರದೇಶಗಳ ಸಾಮಾಜಿಕ ಸಂಬಂಧಗಳು ನಿರ್ಣಯಕ್ಕೆ ಒಳಪಡುವುದು ಭೂಮಿಯ ಮೇಲೆ ಹೊಂದಿರುವ ಒಡೆತನದಿಂದ ಎಂಬುದನ್ನು ನಾವಿಲ್ಲಿ ಗಮನಿಸಬೇಕು.

ಚಿತ್ರದುರ್ಗ ಜಿಲ್ಲೆಯ ಜಟಂಗಿ ರಾಮೇಶ್ವರ, ಬ್ರಹ್ಮಗಿರಿ ಮತ್ತು ಸಿದ್ಧಾಪುರಗಳಲ್ಲಿ ದೊರೆತ ಶಾಸನಗಳ ಮೂಲಕ ಅಶೋಕನ ಕಾಲದ ಪ್ರಾಚೀನ ಭಾರತದ ಚರಿತ್ರೆಯು ಇತಿಹಾಸಕಾರರಲ್ಲಿ ಅನೇಕ ಬಗೆಯ ಚರ್ಚೆಗಳನ್ನು ಹುಟ್ಟುಹಾಕಿವೆ. ಈ ಪ್ರದೇಶದ ಆಡಳಿತವನ್ನು ನಂತರದ ವರ್ಷಗಳಲ್ಲಿ ಶಾತವಾಹನರು, ಕದಂಬರು, ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಹೊಯ್ಸಳರು ಹಾಗೂ ವಿಜಯನಗರದ ಅರಸರು ಜಗಲೂರು ಪ್ರದೇಶವನ್ನು (ಚಿತ್ರದುರ್ಗ) ತಮ್ಮ ರಾಜ್ಯದ ಒಂದು ಭಾಗವನ್ನಾಗಿಸಿಕೊಂಡು ಆಡಳಿತ ನಡೆಸಿದರು. ೧೩೩೬ರ ಶಾಸನವು ವಿಜಯನಗರದ ಪ್ರತಿನಿಧಿಯಾಗಿ ಮಲ್ಲಿನಾಥ ಒಡೆಯನೆಂಬುವನು ಬೆಮ್ಮತ್ತಕಲ್ಲು ನಾಡನ್ನು ಕೇಂದ್ರವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದ್ದನೆಂಬುದನ್ನು ತಿಳಿಸುತ್ತದೆ.

ವಿಜಯನಗರದ ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿದ್ದರೂ ಗ್ರಾಮ ಹಂತದಿಂದ ಪ್ರಾಂತ್ಯಗಳವರೆಗೂ ಭೂಹಿಡುವಳಿಗಳ ಹಂಚಿಕೆಯಲ್ಲಿ ಪ್ರಾಂತ್ಯಾಧಿಕಾರಿಗಳು ಪ್ರಮುಖ ಪಾತ್ರವಹಿಸುತ್ತಿದ್ದರು. ಇದು ವಿಕೇಂದ್ರಿಕರಣದ ಒಂದು ಪ್ರಾಯೋಗಿಕ ಉದಾಹರಣೆ. ಈ ಹಿನ್ನೆಲೆಯಲ್ಲಿ ಬರ್ಟನ್ ಸ್ಪೈನ್ ರವರು ವಿಜಯನಗರ ಸಾಮ್ರಾಜ್ಯವನ್ನು ತುಂಡುರಾಜ್ಯಗಳ ಒಕ್ಕೂಟವೆಂದು ಹೇಳಿರುವುದನ್ನು ನಾವು ಗಮನಿಸಬೇಕು. ರಾಜಕೀಯ ಪರಮಾಧಿಕಾರವು ತುಂಡು ತುಂಡಾಗಿ ಒಡೆದು ಹೋಗಿರುವುದು ಕರ್ನಾಟಕದಲ್ಲಿ ಮಧ್ಯಯುಗದ ನಿಯಂತ್ರಣದ ಆಡಳಿತ ವ್ಯವಸ್ಥೆ ಉದಯಿಸಲು ದಾರಿ ಮಾಡಿಕೊಟ್ಟಿತು.[1] ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನವು ಜಗಲೂರು ಪ್ರದೇಶದ ಕೃಷಿ ಸಮುದಾಯಗಳು ಯಾವ ಯಾವ ರೀತಿಯ ಭೂಹಿಡುವಳಿಗಳನ್ನು ಯಾವ ಯಾವ ಕಾರಣಗಳಿಂದ ಅನುಭವಿಸುತ್ತಾ ಬಂದಿವೆ ಎಂಬುದನ್ನು ವಿಶ್ಲೇಷಿಸಲಾಗಿದೆ. ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದಂತೆ ರಾಜಕೀಯ ಕೇಂದ್ರಿಯ ನಿಯಂತ್ರಣ ವ್ಯವಸ್ಥೆ ಮತ್ತೆ ಕಾಣಿಸಿಕೊಳ್ಳಲಿಲ್ಲ. ಹೀಗಾಗಿ ಕರ್ನಾಟಕದಾದ್ಯಂತ ಸಣ್ಣಪುಟ್ಟ ಪಾಳೆಯಗಾರರು ತಲೆ ಎತ್ತಿದ್ದರು. ಚಿತ್ರದುರ್ಗ ಪ್ರದೇಶದಲ್ಲಿ ಅಸ್ತಿತ್ವಕ್ಕೆ ಬಂದ ನಾಯಕನಹಟ್ಟಿ, ಹರತಿ, ಮತ್ತೋಡು, ಸಂತೆಬೆನ್ನೂರು ಮುಂತಾದವರಲ್ಲಿ ಚಿತ್ರದುರ್ಗ ನಾಯಕರ ಅರಸರು ಪ್ರಮುಖರಾಗಿದ್ದರು. ಈ ಪ್ರದೇಶಕ್ಕೆ ಜಗಲೂರು ಪರಿಸರವು ಬಹು ದೀರ್ಘಕಾಲದವರೆಗೆ ಸೇರಿತ್ತು. ಇವರು ಚಿತ್ರದುರ್ಗವನ್ನು ಕೇಂದ್ರವಾಗಿರಿಸಿಕೊಂಡು, ಸುಮಾರು ೨೧೧ ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಈ ನಾಯಕರಿಗೆ ಕಾಮಗೇತಿ ವಂಶೀಯರು ಹಾಗೂ ಮಹಾನಾಯಕಾಚಾರ್ಯರೆಂಬ ಬಿರುದಿತ್ತು. ಕಾಮಗೇತಿ ಕಸ್ತೂರಿ ಎಂಬ ಪ್ರಶಸ್ತಿಯೂ ಇತ್ತು.[2]

ಚಿತ್ರದುರ್ಗ ಪ್ರದೇಶದ ನಾಯಕತ್ವಕ್ಕೆ ಬದಲಾದ ತಳಹದಿಯನ್ನು ಹಾಕಿದವನು ತಿಮ್ಮಣ್ಣನಾಯಕ. ಇವನು ವಿಜಯನಗರ ಅರಸರ ಆದೇಶವನ್ನು ಪಾಲಿಸುವುದರ ಜೊತೆಗೆ ಅವರು ನಡೆಸಿದ ಯುದ್ಧಗಳಲ್ಲಿ ಭಾಗವಹಿಸಿದ್ದನು. ೧೭೭೯ರ ಮಾರ್ಚಿಯಲ್ಲಿ ೫ನೇ ಮದಕರಿನಾಯಕನನ್ನು ಕೊನೆಗಾಣಿಸಿ, ಚಿತ್ರದುರ್ಗ ಪ್ರದೇಶವನ್ನು ವಶಪಡಿಸಿಕೊಂಡ ಹೈದರಾಲಿಯು ಷೇಖ್ ಅಯಾಜ್ ನನ್ನು ಇಲ್ಲಿಯ ಸಿವಿಲ್ ಮತ್ತು ಮಿಲಿಟರಿ ಗವರ್ನರಾಗಿ ನೇಮಕ ಮಾಡಿದನು. ಸಂಧು ಅಯಾಜಿಯನ್ನು ಖಿಲ್ಲೇ ಬಂದೋಬಸ್ತಿಗೆ ನೇಮಿಸಿ, ಮುಲ್ಕಿ ಬಾಜಿಗೆ ಕಳ್ಳಿನರಸಪ್ಪನನ್ನು ನೇಮಿಸಿತು. ಚಿತ್ರದುರ್ಗ ಪ್ರದೇಶವು ಮೈಸೂರು ಸಂಸ್ಥಾನದ ಒಂದು ಸುಭಾ ಅಥವ ಪ್ರಾಂತ್ಯವಾಯಿತು. ಹೈದರನ ಮರಣಾ ನಂತರ ಚಿತ್ರದುರ್ಗದ ಆಡಳಿತದ ಕಡೆ ಟಿಪ್ಪು ತನ್ನ ಗಮನ ಹರಿಸಿದನು. ಕ್ರಿ.ಶ. ೧೭೮೨ರಲ್ಲಿ ಟಿಪ್ಪುಸುಲ್ತಾನನು ಚಿತ್ರದುರ್ಗದ ಆಡಳಿತವನ್ನು ನೋಡಿಕೊಳ್ಳಲು ಜೈನುಲ್‍ಅಜಿ ದೀನ್ ಭಕ್ಷಿಯಾಗಿ ನೇಮಿಸಲ್ಪಟ್ಟಿದ್ದನು. ಅದೇ ರೀತಿಯಾಗಿ ದಿವಾನ್ ಸಿಪಾದರ್ ರಿಸಲ್ದಾರ್ ಮೊದಲಾದ ಅಧಿಕಾರಿಗಳು ನೇಮಿಸಲ್ಪಟ್ಟರು. ಟಿಪ್ಪುಸುಲ್ತಾನ ಚಿತ್ರದುರ್ಗಕ್ಕೆ ಫರಕ್ಕಬಾದ್ ಎಂಬ ಹೆಸರು ಇಟ್ಟನು.

ಕ್ರಿ.ಶ. ೧೭೯೯ರಲ್ಲಿ ಟಿಪ್ಪುವನ್ನು ಕೊನೆಗಾಣಿಸಿದ ಬ್ರಿಟಿಷ್ ಗವರ್ನಾರ್ ಜನರಲ್ ವೆಲ್ಲೆಸ್ಲಿ ಮೈಸೂರು ಸಂಸ್ಥಾನದಲ್ಲಿ ಒಡೆಯರ ಮನೆತನವನ್ನು ಪುನರ್ ಸ್ಥಾಪಿಸಿದನು. ಆಗ ಚಿತ್ರದುರ್ಗವು ಮೈಸೂರು ಸಂಸ್ಥಾನದ ಒಂದು ವಿಭಾಗವಾಯಿತು. ರೆಸಿಡೆಂಟ್ ಬ್ಯಾರಿಕ್ಲೋಸ್ ಮತ್ತು ದಿವಾನ್ ಪೂರ್ಣಯ್ಯನವರು ಮುಮ್ಮಡಿ ಕೃಷ್ಣರಾಜರೊಡನೆ ಚರ್ಚಿಸಿ ಚಿತ್ರದುರ್ಗದ ಆಡಳಿತಾಧಿಕಾರಿಯಾಗಿ ಲೆಪ್ಟಿನೆಂಟ್ ಕರ್ನಲ್ ಕ್ಲೋಸ್ ಅವರನ್ನು ನೇಮಕ ಮಾಡಿದ್ದರು. ೧೮೭೭ರಲ್ಲಿ ಹಿಂದಿನ ರೆವಿನ್ಯೂ ಸರ್ವೆ ನಕ್ಷೆಯಲ್ಲಿ ಕಂಡುಬರುವಂತೆ ಹಿಂದಿನ ಕಣಕುಪ್ಪೆ ತಾಲೂಕಿನ ಸರಹದ್ದುಗಳನ್ನು ಸೇರಿಸಿ ಜಗಲೂರು ತಾಲೂಕು ಎಂದು ಹೊಸ ತಾಲೂಕು ಕೇಂದ್ರ ರಚಿತವಾಯಿತು. ಜಗಲೂರು, ಮೊಳಕಾಲ್ಮೂರುಗಳನ್ನಾಗಿ ಏಪ್ರಿಲ್ ೧೮೮೬ರಲ್ಲಿ ರಚಿಸಲಾಯಿತು.

೧೮೮೧ರಿಂದ ೧೯೪೭ ರವರೆಗಿನ ಜಿಲ್ಲಾ ಆಡಳಿತದ ಸ್ವರೂಪವು ಬ್ರಿಟಿಷ್ ಕಮೀಷನರ್ ಕಾಲದಂತೆ ಮುಂದುವರೆದಿತ್ತು. ಇಲ್ಲಿ ಮುಖ್ಯವಾಗಿ ಜಿಲ್ಲೆಯನ್ನು ಒಂಭತ್ತು ತಾಲೂಕು ಕೇಂದ್ರಗಳಾಗಿ ವಿಭಾಗ ಮಾಡಲಾಗಿದ್ದು ಇದರಲ್ಲಿ ಜಗಲೂರು ತಾಲೂಕು ಸೇರಿತ್ತು. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕಿನಲ್ಲಿ ಅಮಲ್ದಾರರು ಹೋಬಳಿ ಮಟ್ಟದಲ್ಲಿ ಷೇಖ್‍ದಾರರು. ಗ್ರಾಮದಲ್ಲಿ ಪಟೇಲರು ಶಾನುಭೋಗರು ಆಡಳಿತಾತ್ಮಕ ಕಾರ್ಯ ನಿರ್ವಹಣೆಯನ್ನು ವಹಿಸಿಕೊಂಡಿದ್ದರು.

೧೮ನೇ ಶತಮಾನದ ಪ್ರಾರಂಭದಿಂದಲೂ ಜಗಲೂರು ತಾಲೂಕಿನ ಗ್ರಾಮಗಳ ಆಡಳಿತವನ್ನು ಪಟೇಲ ಅಥವಾ ಗೌಡರೇ ನೋಡಿಕೊಳ್ಳುತ್ತಿದ್ದರು, ಗ್ರಾಮದ ಆಡಳಿತವು ಸಂಸ್ಥಾನದ ಆಡಳಿತಕ್ಕಿಂತ ದೊಡ್ಡದೆಂಬ ಭಾವನೆ ಬೇರೂರಿತ್ತು.

ಆಡಳಿತ ವಿಭಾಗಗಳು

ಜಗಲೂರು ತಾಲೂಕು ಕ್ರಿ.ಶ. ೧೨ನೇ ಶತಮಾನದಿಂದಲೂ ಹಲವು ಪ್ರದೇಶದ ಆಡಳಿತಕ್ಕೆ ಸೇರಿತ್ತು.

. ಜಗಲೂರು ಸೀಮೆ : ಇಂದು ಜಗಲೂರು ತಾಲೂಕು ದಾವಣಗೆರೆ ಜಿಲ್ಲಾ ಕೇಂದ್ರಕ್ಕೆ ಸೇರಿದೆ. ೧೯೯೭ಕ್ಕೆ ಮೊದಲು ಇದು ಚಿತ್ರದುರ್ಗ ಜಿಲ್ಲೆಯ ಒಂಭತ್ತು ತಾಲೂಕು ಕೇಂದ್ರಗಳಲ್ಲಿ ಒಂದಾಗಿದ್ದಿತು. ಉದಾಹರಣೆಗೆ ಕ್ರಿ.ಶ.೧೨೩೫ ರಲ್ಲಿ ಹೊಯ್ಸಳರ ೩ನೇ ಸೋಮೇಶ್ವರನು ನೊಳಂಬವಾಡಿ ೩೦,೦೦೦ ಮತ್ತು ಗಂಗವಾಡಿ ೯೬,೦೦೦ ಪ್ರದೇಶಗಳನ್ನು ಆಳ್ವಿಕೆ ಮಾಡುತ್ತಿದ್ದನು. ಅದಕ್ಕೆ ಜಗಲೂರು ಪ್ರದೇಶ ಸೇರಿತ್ತು. ಕ್ರಿ.ಶ. ೧೫೨೬ ರ ನಿಬಗೂರು ಶಾಸನದಲ್ಲಿ ಜಗಲೂರು ಸೀಮೆಯೆಂದು ಕರೆಯಲ್ಪಟ್ಟಿದೆ. ಕೃಷ್ಣದೇವರಾಯನ ಕಾಲದ ಈ ಶಾಸನವು ತಿಳಿಸುವಂತೆ ಅಂದಿನ ಜಗಲೂರು ಸೀಮೆಯನ್ನು ರಂಗನಾಥ ರಾವುತನ ಮಗ ವಿಶ್ವನಾಥ ರಾವುತನು ಆಡಳಿತ ನಡೆಸುತ್ತಿದ್ದನು. ಇವರು ಆರ್ಯ ಕ್ಷತ್ರಿಯ ಸಮುದಾಯಕ್ಕೆ ಸೇರಿದವರೆಂದು ಹೇಳುತ್ತದೆ.[3] ಕ್ರಿ.ಶ.೧೬೮೦ ರ ಶಾಸನವು ಜಗಲೂರು ನಾಡು ಎಂದು ಉಲ್ಲೇಖಿಸಲ್ಪಟ್ಟಿದೆ. ಕ್ರಿ.ಶ. ೧೬೮೩ರಲ್ಲಿ ಶಾಸನವೊಂದು ಕಸವನಹಳ್ಳಿ ಗ್ರಾಮವು ಜಗಲೂರು ಸೀಮೆಗೆ ಸೇರಿದ ಗ್ರಾಮವೆಂಬುದಾಗಿ ಹೇಳಿದೆ. ಹೀಗಾಗಿ ಹೊಯ್ಸಳರ ಕಾಲದಿಂದ ಚಿತ್ರದುರ್ಗ ನಾಯಕ ಅರಸರ ಕಾಲದವರೆಗೂ ಇದು ಒಮ್ದು ಪ್ರಮುಖ ಆಡಳಿತ ಕೇಂದ್ರವಾಗಿತ್ತು.

. ಬಿಳಿಚೋಡು ಸೀಮೆ : ಇದು ಜಗಲೂರು ತಾಲೂಕಿಗೆ ಸೇರಿರುವ ಹೋಬಳಿ ಕೇಂದ್ರ. ವಿಜಯನಗರದ ಸದಾಶಿವರಾಯನ ಕಾಲದಲ್ಲಿ ಅವನ ಅಮರನಾಯಕರಲ್ಲಿ ಒಬ್ಬನಾದ ಭೈಯಪ್ಪ ನಾಯಕರ ಮಕ್ಕಳು ಹಡಪದ ಕೃಷ್ಣಪ್ಪ ನಾಯಕರ ಅಮರ ಮಾಗಣಿಗೆ ಈ ಬಿಳಿಚೋಡು ಸೀಮೆ ಸೇರಿತ್ತು.[4] ಕ್ರಿ.ಶ. ೧೫೫೬ರ ಶಾಸನದಲ್ಲಿ ಇದು ಕೊಟ್ಟೂರು ಚಾವಡಿಯ ಉಚ್ಚಂಗಿ ವೆಂಠೆಗೆ ಸೇರಿದ ಬಿಳಿಚೋಡು ಸೀಮೆಯಾಗಿತ್ತು.[5] ಬಿಳಿಚೋಡು ಸೀಮೆಯ ಪಾರುಪತ್ತೇಗಾರರು ಕ್ರಿ.ಶ. ೧೬೦೬ರಲ್ಲಿ ಶ್ರೀಮನ್ ಮಹಾಮಂಡಲೇಶ್ವರ ರಾಜಾಧಿರಾಜ ರಾಜಪರಮೇಶ್ವರ ವೀರಪ್ರತಾಪ ರತ್ನಸಿಂಹಾಸನರೂಢರಾದ ಶ್ರೀವೆಂಕಟಪತಿ ಮಹಾರಾಯರ ಕಾರ್ಯುಕ್ಕೆ ಕರ್ತರಾದ ಶ್ರೀಮಾನ್ ಮಹಾನಾಯಕಾಚಾರ್ಯ ಕಾಮಕೇತಿ ಚಿಕ್ಕಣ್ಣನಾಯಕರ ಅಯ್ಯನವರ ಕಾರ್ಯಕ್ಕೆ ಕರ್ತರಾದ ಬಿಳಿಚೋಡು ಸೀಮೆಯ ಪಾರುಪತ್ಯಗಾರರು, ನೆರೆಯ ಮಲ್ಲಶೆಟ್ಟಿಯರು ಬಿಳಿಚೋಡು ಸೀಮೆಯ ಕೆಲಸಗಳಿಗೆ “ಗ್ರಾಮದೆರೆ” ಎಂಬ ತೆರಿಗೆ ಬಿಟ್ಟ ಬಗ್ಗೆ ಉಲ್ಲೇಖವಿದೆ. ಈ ಬಿಳಿಚೋಡು ಸಂತತಿಯವರೇ ಚಿತ್ರದುರ್ಗದ ನಾಯಕರಾಗಿ ಮುಂದುವರೆಯುತ್ತಾರೆ. ಇವರ ಪೂರ್ವ ಚರಿತ್ರೆಯು ಕೂಡ್ಲಿಗಿ ಬೆಟ್ಟದ ಸಾಲು ಅನೇಕಲ್ಲು ಗುಡ್ಡದಲ್ಲಿ ಪ್ರಾರಂಭವಾಗಿ ಜರಿಮಲೆ ದುರ್ಗದವರೆಗೂ ಸಾಗುತ್ತದೆ. ಈ ಬೆಟ್ಟದ ತಪ್ಪಲಿನಲ್ಲಿ ಜಡೆಕಲ್‍ದುರ್ಗಕ್ಕೆ ಈ ಕಡೆಯಿಂದ ಸಬ್ಬಾಗಡಿ ಒಬ್ಬನಾಯ್ಕ, ಜಡವೇನಾಯ್ಕ, ಬುಳ್ಳನಾಯ್ಕ ಎನ್ನುವ ಮೂರುಜನ ಅಣ್ಣ ತಮ್ಮಂದಿರು ತಮ್ಮ ಕಂಪಳ ಸಮೇತ ವಲಸೆ ಬಂದು ಬಿಳಿಚೋಡಿನಲ್ಲಿ ರೊಪ್ಪಹಾಕಿದರು. ಮುಂದೆ ಶಾಗಲೆ ಗ್ರಾಮಕ್ಕೆ ಜಡವೇನಾಯಕರು, ಮತ್ತಿ ಗ್ರಾಮಕ್ಕೆ ಸಬ್ಬಗಡಿ ಓಬನಾಯ್ಕರು ವಲಸೆಹೋದರು. ಬುಳ್ಳನಾಯಕರು ಮಾತ್ರ ಬಿಳಿಚೋಡಿನಲ್ಲಿ ಉಳಿದರು. ಇವರ ಮಕ್ಕಳು ಚಿಕ್ಕಹನುಮನಾಯಕರು ಒಬಣ್ಣನಾಯಕರು, ಮುಂದೆ ಭರಮಣ್ಣನಾಯಕರ ತಂದೆ ಕಸ್ತೂರಿ ರಂಗಪ್ಪನಾಯಕರು, ಭರಮಣ್ಣ ನಾಯಕರ ಮಗ ಹಿರೇಮದಕರಿ ನಾಯಕರ ಮೊಮ್ಮಗ ಕಸ್ತೂರಿ ರಂಗಪ್ಪನಾಯಕ ಹೀಗೆ ಬಿಳಿಚೋಡಿನ ಸಂತತಿಯೇ ಚಿತ್ರದುರ್ಗದಲ್ಲಿ ಕೊನೆಯವರೆಗೂ ಆಳ್ವಿಕೆ ನಡೆಸಿತು.[6]

. ಅಸಗೋಡು : ಇದು ಜಗಲೂರು ತಾಲೂಕಿಗೆ ಸೇರಿದ ಪ್ರಮುಖ ಗ್ರಾಮ. ಕಲ್ಯಾಣ ಚಾಲುಕ್ಯರ ಸಾಮಂತರಾದ ನೊಳಂಬ ಅರಸರು ಅಸಗಗೋಡು ಶ್ರೀಸ್ವಯಂಭು ಕಲಿದೇವಸ್ವಾಮಿಗೆ ಭೂದಾನ ನೀಡಿದ ಬಗ್ಗೆ ಶಾಸನದಲ್ಲಿ ವಿವರವಿದೆ. ೧೩ನೇ ಸಂಖ್ಯೆಯ ವೀರಗಲ್ಲು ಸಹ ಅಸಗಗೋಡು ಪಟ್ಟಣವಾಗಿದ್ದ ಬಗೆ ಮಾಹಿತಿ ನೀಡುವುದು. ಚಿತ್ರದುರ್ಗದ ನಾಯಕ ಶ್ರೀ ಮನ್ ಮಹಾನಾಯಕಚಾರ್ಯ್ಯ ಕಾಮಗೇತಿ ಕಸ್ತೂರಿ ರಂಗಪ್ಪನಾಯಕಾಚಾರ್ಯ್ಯ ಮದಕರಿನಾಯಕ ರಾಜ ಭರಮಣ್ಣನಾಯಕರು ವಿಶ್ವಾಮಿತ್ರಗೋತ್ರದ ಅಸಗೋಡು ಸ್ಥಳದ ಶಾನುಭೋಗರು ನರಸಪ್ಪನ ಪುತ್ರರಾದ ಅಚಪನ ಪುತ್ರರಾದ ಉಗ್ರಾಣದ ರಂಗಪ್ಪಗೆ ಬರಶಿಕೊಟ್ಟ ಅಗ್ರಹಾರ ಗ್ರಾಮದ ಶಾಸನದಲ್ಲಿ ಬಿಳಿಚೋಡು ಸೀಮೆಯೊಳಗಣ ಕಲ್ಲೇನಹಳ್ಳಿ ಗ್ರಾಮವನ್ನು ದಾನನೀಡಿದ ವಿವರವಿದೆ. ಇದು ಅಸಗಗೋಡು ಸ್ಥಳಕ್ಕೆ ಸೇರಿತ್ತು.

. ಕಣಕುಪ್ಪೆ : ಕಣಕುಪ್ಪೆಯು ವಿಜಯನಗರ ನಂತರ ಒಂದು ಆಡಳಿತ ಕೇಂದ್ರವಾಗಿತ್ತು. ಅಲ್ಲಿ ಅರಮನೆ, ಕೋಟೆ, ಕೊತ್ತಲ, ಬುರುಜು, ಬತೇರಿ, ಗುಡಿ, ಕೆರೆ, ಬಾವಿ ಮುಂತಾದವುಗಳಿವೆ. ಇವುಗಳನ್ನು ಕಟ್ಟಿದ ಪಾಳೆಯಗಾರರು ಕೆಂಚನಹಳ್ಳಿಯಲ್ಲಿ ನೆಲೆಸಿದ್ದರೆಂದು ಸ್ಥಳೀಯರು ಈಗಲೂ ಹೇಳುತ್ತಾರೆ. ಕ್ರಿ.ಶ. ೧೬೫೪ರ ಶಾಸನದಲ್ಲಿ ಶ್ರೀಮನ್ಮಹಾನಾಯಕಾಚಾರ್ಯ್ಯ ಕಸ್ತೂರಿ ನಾಯಕರು ಉರುವಕೊಂಡೆ ಬೋಮಯಗೆ ಸೊಕ್ಕೆ, ಬಂಟನಹಳ್ಳಿ, ಅಂಗುಟಿ ಬೆಂಚೆ, ಲಕ್ಷಮಾಪುರ, ಕ್ರಿಷ್ಣಾಪುರ, ಐದು ಗ್ರಾಮದ ಮಧ್ಯದಲ್ಲು ಕಣಕುಪ್ಪೆ ದಳವಾಯಿ ಚಿಂನಯ ಪಾರುಪತ್ಯೆಗಾರರು, ತಿಂಮಪ ಬೊಮಯ್ಯಗೆ ಕೆಂಕೆ ಭೂಮಿ ಬೊಂಮನಹಳ್ಳಿಯನ್ನು ಭೂದಾನ ನೀಡಿದ ವಿವರವಿದೆ.[7] ಹೀಗಾಗಿ ಕಣಕುಪ್ಪೆ ವಿಜಯನಗರ ಕಾಲದಿಂದಲೂ ಚಿಕ್ಕ ಕೇಂದ್ರವಾಗಿ ಕಾರ್ಯನಿರ್ವಹಿಸಿದ್ದುದು ಗೊತ್ತಾಗುತ್ತದೆ.

. ಅಣಬೂರು ಸ್ಥಳ : ಈಗ ಜಗಲೂರು ತಾಲೂಕಿಗೆ ಸೇರಿದ ಚಿಕ್ಕಗ್ರಾಮ. ಕ್ರಿ.ಶ. ೧೬೮೩ರ ಶಾಸನವು ಶ್ರೀಮನ್ಮಹಾನಾಯಕಾಚಾರ್ಯ ಕಮಗೆತ್ತಿ ಕಸ್ತೂರಿ ಚಿಕ್ಕಂಣನಾಯಕರು ರಾಜ್ಯವಾಳುವಾಗ ಪಾರುಪತ್ಯೆಗಾರ ಬುತೈನವರ ತಾಯಿಯ ಹೆಸರಲ್ಲಿ ಅಣಬೂರ ಸ್ಥಳದಲ್ಲಿ ಮಠ ಮತ್ತು ದೇವಸ್ಥಾನಕ್ಕೆ ಹನುಮನನಾಗತಿಹಳ್ಳಿ, ವೀರಾಪುರ ಮುಂತಾದ ಮೂರು ಗ್ರಾಮಗಳನ್ನು ಸ್ಥಳೀಯ ಗೌಡರ ಮುಂದಾಳತ್ವದಲ್ಲಿ ದಾನ ನೀಡಿದ ವಿವರವಿದೆ. ಜಗಲೂರಿನ ಈಶಾನ್ಯ ಉತ್ತರಿದಿಕ್ಕಿನ ಹಲವಾರು ಹಳ್ಳಿಗಳು ಈ ಅಣಬೂರು ಸ್ಥಳಕ್ಕೆ ಸೇರಿದ್ದವು. ಕ್ರಿ.ಶ. ೧೬೯೦ರ ಶಾಸನವು ಅಣಬೂರು ಸ್ಥಳದ ಉಲ್ಲೇಖ ನೀಡುತ್ತದೆ.[8]

ಭೂಹಿಡುವಳಿ ವ್ಯವಸ್ಥೆ

ಜಗಲೂರು ಪ್ರದೇಶದಲ್ಲಿ ವಿಜಯನಗರ ಮತ್ತು ನಂತರದ ಭೂಹಿಡುವಳಿಗಳನ್ನು ಸಾಗುವಳಿಯಾದ ಮತ್ತು ಸಾಗುವಳಿಯಾಗದ ಬೀಳು ಭೂಮಿ ಎಂಬುದಾಗಿ ಗುರುತಿಸಬಹುದು. ಬೀಳು ಭೂಮಿಯಲ್ಲಿ ಅರಣ್ಯ ಪ್ರದೇಶ, ಬಂಜರುಭೂಮಿ ಗುಡ್ಡ ಬೆಟ್ಟಗಳು ಸೇರುತ್ತವೆ. ಸಾಗುವಳಿಯಾದ ಭೂಮಿಯನ್ನು ಮೊದಲನೆಯದಾಗಿ ಕಂದಾಯದ ಭೂಮಿಗಳು. ಎರಡನೆಯದು ಕೆಲವು ಉದ್ದೇಶಗಳಿಗಾಗಿ ದಾನ ನೀಡಿದ ಇನಾಮ ಭೂಮಿಯಾಗಿತ್ತು. ಈ ಪ್ರದೇಶದಲ್ಲಿ ರೂಢಿಯಲ್ಲಿದ್ದ ಭೂಹಿಡುವಳಿಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ೧. ಇನಾಂ ಭೂಮಿ ೨. ಸಾಮಾನ್ಯ ಭೂಮಿ. ಇನಾಂ ಭೂಹಿಡುವಳಿಗಳನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ಮೊದಲನೆಯದರಲ್ಲಿ ‘ಉಪಕಾರಿ’ ಭೂಹಿಡುವಳಿಗಳು ಸೇರಿವೆ. ಎರಡನೆಯದರಲ್ಲಿ ‘ಸೇವಾ’ ಭೂಹಿಡುವಳಿಗಳು ಸೇರಿವೆ. ಉಪಕಾರಿ ಭೂಹಿಡುವಳಿಗಳು ೧. ಬ್ರಹ್ಮಾದಾಯ ೨. ದೇವಾದಾಯ ೩. ಮಠಪುರ ಭೂಮಿ ಎಂದು ಮೂರು ವಿಧಗಳಲ್ಲಿ ಗುರುತಿಸಬಹುದು.[9]

. ಬ್ರಹ್ಮಾದಾಯ ಭೂಹಿಡುವಳಿಗಳು : ಈ ಬ್ರಹ್ಮಾದಾಯ ಭೂಹಿಡುವಳಿಗಳು ಬ್ರಾಹ್ಮಣರಿಗೆ ದಾನ ನೀಡಿದ ಭೂಹಿಡುವಳಿಗಳಾಗಿದ್ದವು. ಬ್ರಾಹ್ಮಣರು ಸಾಮಾನ್ಯವಾಗಿ ವೇದ, ಉಪನಿಷತ್ತು, ಸೂತ್ರ, ಪುರಾಣ ಮುಂತಾದ ಅರು ವಿಧದ ತತ್ವಶಾಸ್ತ್ರದಲ್ಲಿ ವಿಸ್ವಾಂಸರಾಗಿದ್ದೂ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರು. ಇಂತಹ ಬ್ರಾಹ್ಮಣ ವಿದ್ವಾಂಸರಿಗೆ ಭೂಹಿಡುವಳಿಗಳನ್ನು ದಾನ ನೀಡುತ್ತಿದ್ದರು. ಇವುಗಳಿಗೆ ಬ್ರಹ್ಮಾದಾಯ ಭೂಹಿಡುವಳಿಗಳೆಂದು ಕರೆಯುತ್ತಿದ್ದರು. ಇದೇ ರೀತಿ ಬ್ರಾಹ್ಮಣ ಸಮುದಾಯಕ್ಕೆ ದಾನ ಕೊಟ್ಟ ಗ್ರಾಮಗಳನ್ನು ಅಗ್ರಹಾರಗಳೆಂದು ಕರೆಯುತ್ತಿದ್ದರು. ಉದಾಹರಣೆಗೆ ಶಾಲಿವಾಹನ ಶಕವರ್ಷ ೧೪೪೮ರಲ್ಲಿ ಜಗಲೂರು ಸೀಮೆಯ ನಾಯಕರುಗಳಾದ ವಿಶ್ವನಾಥ ರಾವುತರ ಮಗ, ರಂಗನಾಥ ರಾವುತನು ಗ್ರಾಮವನ್ನು ದಾನ ನೀಡುವಾಗ ಶ್ರೀಕೃಷ್ಣದೇವರಾಯ ಮಹಾರಾಯರಿಗೆ ಧರ್ಮವಾಗಬೇಕೆಂದು ಹೇಳಿದ್ದಾನೆ. ಅದರಲ್ಲಿ ಬ್ರಾಹ್ಮಣರ ಭೋಜನ ಷಡ್ ದರುಶನ ಮೊದಲಾದವುಗಳು ನಡೆಯುವುದಕ್ಕೆ ಜಗಲೂರು ಸೀಮೆಯೊಳಗಣ ನಿಬಗೂರು ಗ್ರಾಮವನ್ನು ದಾನಕೊಟ್ಟಿರುವುದಾಗಿ ಶಾಸನದಲ್ಲಿ ಹೇಳಿದೆ. ಕ್ರಿ.ಶ.೧೬೪೦ನೆಯ ವಿಳಂಬ ಸಂವತ್ಸರದಲ್ಲಿ ವಿಶ್ವಮಿತ್ರಗೋತ್ರದ ಸೂರಪ್ಪನಾಯಕರ ರಾಮಣ್ಣಾನಾಯಕರಿಗೆ ವಾಲ್ಮೀಕಿಗೋತ್ರದ ಭರಣ್ಣನಾಯಕರು ಬರೆಸಿಕೊಟ್ಟ ಶಾಸನದಲ್ಲಿ ನಮ್ಮ ಹಿರಿಯರುಗಳಿಗೆ ಪುಣ್ಯವಾಗಬೇಕೆಂದು ನಾವು ಆಳುವ ಬೇತೂರು ಸೀಮೆಯೊಳಗಿನ ‘ಚಿಕ್ಕಬೂದಿಹಾಳು’ ಎಂಬ ಗ್ರಾಮವನ್ನು ಕೃಷ್ಣಾರ್ಪಣವಾಗಿ ಕೊಟ್ಟಿದ್ದೇವೆಂದು ತಿಳಿಸಲಾಗಿದೆ.

. ದೇವಾದಾಯ ಭೂಮಿ : ಇವು ದೇವಾಲಯಗಳ ಅಭಿವೃದ್ಧಿಗೋಸ್ಕರ ನೀಡಿದ ಭೂಹಿಡುವಳಿಗಳಾಗಿವೆ. ದೇವಾಲಯಕ್ಕೆ ದಾನ ನೀಡಿದ ಭೂಮಿಯಿಂದ ಬಂದ ಆದಾಯದಲ್ಲಿ ದೇವರ ಪೂಜೆ ಹಬ್ಬ, ಜಾತ್ರೆ, ಉತ್ಸವಗಳನ್ನು ನಡೆಸಲು ಉಪಯೋಗಿಸಲಾಗಿತ್ತು. ಉದಾಹರಣೆಗೆ ಕ್ರಿ.ಶ. ೧೧೮೯ರಲ್ಲಿ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದು ರಾಜಮಯ್ಯನಾಯಕನು ಕದಂಬಳಿಗೆ ಸಾವಿರ, ಕೋಗಳಿ ಐದನೂರು ನಾಡನ್ನು ಆಳುತ್ತಿದ್ದನು. ಈತನು ಭುವನ ತ್ರೈಲೋಕ್ಯಕರ್ತಾರ ಪಂಡಿತರಿಗೆ ಮತ್ತು ಅಸಗಗೋಡನ ಕಲಿದೇವರಿಗೆ ಭೂದಾನ ನೀದಿದ್ದನೆಂದು ಜಗಲೂರು ೧೨ನೇ ಶಾಸನದಲ್ಲಿ ಉಲ್ಲೇಖವಿದೆ. ಕ್ರಿ.ಶ. ೧೨೭೯ರ ಒಂದು ಶಾಸನದಲ್ಲಿ ಮಹಾದುರ್ಗಾಧಿಪತಿಯಾದ ಹೆಮ್ಮಾಡಿದೇವನು ಕೊಟ್ಟೂರು ವೃತ್ತಿಯ ತನ್ನ ಸಾಮಂತನಾದ ಮೊಮ್ಮಯ ಕ್ಷೇತ್ರದ ಮಾರಯ್ಯ ಬಿದರಕೆರೆ ಶ್ರೀರಂಗಗೌಡ ಕಂಪಣಾಚಾರ್ಯ ಅಜೀಯರು, ಮೂವತ್ತಾರು ರಾಜಗುರುಗಳು ಹಾಗೂ ಕಲಿದೇವರ ಅಸ್ಥಾನಿಕರ ಸಾಕ್ಷಿಯಾಗಿ ಭೂದಾನ ನೀಡಿದ ವಿವರವಿದೆ (ಎ.ಕ.೧೧, ಶಾಸನ ಸಂಖ್ಯೆ ೧೨)

. ಮಠಪುರ ಭೂಮಿ : ಮಠಗಳು ನೀಡುವ ಶಿಕ್ಷಣ, ಸಾಮಾಜಿಕ ಸೇವೆಯನ್ನು ಗಮನಿಸಿ ಭೂಮಿರೂಪದ ಧಾನವನ್ನು ನೀಡಲಾಗುತ್ತಿತ್ತು. ಇವುಗಳ ಒಡೆತನದಲ್ಲಿರುವ ಭೂಹಿಡುವಳಿಗಳನ್ನು ಮಠಪುರಭೂಮಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕ್ರಿ.ಶ. ೧೬೮೦ರಲ್ಲಿ ಶ್ರೀಕಾಮಗೇತಿ ಕಸ್ತೂರಿ ರಂಗಪ್ಪನ ದಳವಾಯಿ ಭರಮಪ್ಪನವರು ಜಗಲೂರು ವಿರಕ್ತಮಠಕ್ಕೆ ಹಡದ ಗ್ರಾಮವನ್ನು ದಾನ ನೀಡಿದ್ದಾನೆ (ಎ.ಕ. ೧೧, ಶಾಸನ ಸಂಖ್ಯೆ ೪೫) ಭರಮಸಾಗರದ ವಿರುಪಾಕ್ಷಪ್ಪನ ಮನೆಯ ಹತ್ತಿರವಿರುವ ಶಾಸನದಲ್ಲಿ ಹಂತ್ತಿನ ಮಠಕ್ಕೆ ಭೂದಾನ ನೀಡಿದ ಉಲ್ಲೇಖವಿದೆ (ಎ.ಕ. ೧೧, ಶಾಸನ ಸಂಖ್ಯೆ ೧೭) ಭರಮಣ್ಣನಾಯಕರು ಉಗ್ರಾಣದ ರಂಗಪ್ಪಗೆ ಬರೆಸಿಕೊಟ್ಟ ಅಗ್ರಹಾರದ ಗ್ರಾಮದ ಶಾಸನದಲ್ಲಿ ಬಿಳಿಚೋಡು ಸೀಮೆಯೊಳಗಣ ಕಲ್ಲೇನಹಳ್ಳಿ ಗ್ರಾಮವನ್ನು ದಾನ ನೀಡಿರುವ ವಿವರವಿದೆ. ವಿಜಯನಗರ ಕಾಲದಲ್ಲಿ ಈ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳಾದ ಅಗ್ರಹಾರ ಮತ್ತು ಮಹಾನಾಡು ಎಂಬ ಸ್ಥಳೀಯ ಸಂಸ್ಥೆಗಳಿದ್ದವು. ಅಗ್ರಹಾರಗಳು ಸಹ ಭೂಹಿಡುವಳಿಗಳನ್ನು ಹೊಂದಿರುವುದರ ಜೊತೆಗೆ ಅವುಗಳ ಅಭಿವೃದ್ಧಿಗೆ ಗಮನಹರಿಸಿದ್ದವು. ಅವುಗಳೇ ಕೃಷಿ ಉತ್ಪನ್ನದ ಪಾಲಿನ ಭಾಗವನ್ನು ನಿರ್ಧರಿಸುತ್ತಿದ್ದವು. ಮಹಾನಾಡು ಅನೇಕ ಗ್ರಾಮಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಯಾಗಿತ್ತು. ಕೃಷಿ ವಿಸ್ತರಣೆಯ ಹೆಚ್ಚಳವನ್ನು ಪುರೋಹಿತಶಾಹಿ ಸಂಸ್ಥೆಗಳಾದ ಅಗ್ರಹಾರ, ಮಠ ದೇವಸ್ಥಾನಗಳಿಗಾಗಿ ಭೂಮಿಯನ್ನು ತೆರಿಗೆರಹಿತವಾಗಿ ಬಿಟ್ಟಿರುವುದು ಮೇಲಿನ ಉದಾಹರಣೆಗಳಿಂದ ಸ್ಪಷ್ಟಪಡಿಸಬಹುದು. ೧೬ನೇ ಶತಮಾನದ ಸಮಾಜದಲ್ಲಿ ದೇವಸ್ಥಾನಗಳು ರಾಜಕೀಯ ಶಕ್ತಿಯನ್ನು ನ್ಯಾಯಬದ್ಧಗೊಳಿಸುವ ಹಾಗೂ ರೈತರ ಅಧೀನತೆಯನ್ನು ಬಲವಂತವಾಗಿ ನೆಲೆಗೊಳಿಸುವ ಸಾಧನವಾಗಿದ್ದವು. ಹೀಗೆ ಮಠ, ದೇವಸ್ಥಾನಗಳು, ಬ್ರಾಹ್ಮಣರು ಭೂಮಾಲೀಕರಾಗಿ ಉತ್ಪಾದನಾ ಸಾಧನದ ಒಡೆಯರಾದುದರಿಂದ ಯುದ್ಧ ಹಾಗೂ ಬೇರೆ ಕೆಲವು ಪ್ರಕ್ಷೋಭೆಗಳಿಂದ ಪಾರಾಗುವುದು ಅವರಿಗೆ ಸಾಧ್ಯವಿತ್ತು. ದೇವಾಲಯ ವ್ಯವಸ್ಥೆಯ ವಿಸ್ತರಣೆ, ವೃತ್ತಿ ಜೀವಿಗಳು ಮತ್ತು ಕುಶಲ ಕರ್ಮಿಗಳನ್ನು ಗುಲಾಮರನ್ನಾಗಿ ಮಾಡುವ ಪ್ರಕ್ರಿಯೆ ಪೂರಕವಾಗಿ ನಡೆದಿತ್ತೆಂಬುದು ತಿಳಿಯುತ್ತದೆ. ಇಲ್ಲಿ ಕಾರ್ಯನಿರ್ವಹಿಸುವ ಕೃಷಿ ಆಳುಗಳ ಪರಿಸ್ಥಿತಿಯು ಜೀತದಾಳುಗಳಿಗಿಂತ ಬೇರೆಯಾಗಿರಲಿಲ್ಲ. ಇಂತಹ ಭೂಹಿಡುವಳಿಗಳು ರಾಜ್ಯಕ್ಕೆ ಯಾವ ರೀತಿಯ ತೆರಿಗೆಯನ್ನು ನೀಡದೆ ಅನುಭವಿಸುತ್ತಿದ್ದವು. ಈ ವ್ಯವಸ್ಥೆಯನ್ನು ಕುರಿತು ಸಿದ್ದಲಿಂಗಸ್ವಾಮಿಯವರು ಅಭಿಪ್ರಾಯಪಡುವಂತೆ “ಬ್ರಾಹ್ಮಣರು ನೆರೆಹೊರೆಯ ಕಾಡುಗಳನ್ನು ಹಾಗೂ ಫಲವತ್ತಾದ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ಬಂದರು. ಇದು ಬ್ರಾಹ್ಮಣಶಾಹಿ ಸಿದ್ಧಾಂತದ ಪ್ರಭಾವ ಹಾಗೂ ಸಾಮಾಜಿಕ ಅಸಮಾನತೆಯನ್ನು ಒಪ್ಪುವ ಮನೋಭಾವವದಿಂದಾಗಿ ರೈತ ಹೊರಬಂದು ವ್ಯವಸ್ಥೆಯನ್ನು ವಿರೋಧಿಸಲಿಲ್ಲ. ಹೀಗಾಗಿ ಭಯ ಮತ್ತು ಮೋಸದ ನೆರಳಿನಲ್ಲಿ ಈ ಊಳಿಗಮಾನ್ಯ ಧಾರ್ಮಿಕ ಸಿದ್ಧಾಂತ ಬೆಳೆಯಲು ಅವಕಾಶವಾಯಿತು” ಎಂದಿದ್ದಾರೆ. ಈ ಮಾತು ಜಗಲೂರು ಪ್ರದೇಶಕ್ಕೂ ಅನ್ವಯಿಸುತ್ತದೆ.

ಜಗಲೂರು ಪ್ರದೇಶದಲ್ಲಿ ಭೂಹಿಡುವಳಿಗಳನ್ನು ಸಾಮಾನ್ಯವಾಗಿ ಬಿತ್ತುವ ಬೀಜ ಪದ್ಧತಿಯಲ್ಲಿ ಅಳತೆ ಮಾಡುವ ಕ್ರಮವಿದ್ದಿತು. ಉದಾಹರಣೆಗೆ ಶಾಸನಗಳಲ್ಲಿ ಒಂದು ಖಂಡುಗ ಭೂಮಿ ಎಂಬಂತಹ ಮಾತುಗಳು ಬರುತ್ತವೆ. ಒಂದು ಖಂಡುಗ ಭೂಮಿ ಎಂದರೆ ಆ ಪ್ರಮಾಣದ ಬೀಜವನ್ನು ಬಿತ್ತುವ ಭೂಮಿ ಎಂದರ್ಥ. ಈ ಪ್ರದೇಶದಲ್ಲಿ ಕರೆ, ಬಾವಿಗಳಿಂದಲೂ ವ್ಯವಸಾಯ ಮಾಡುತ್ತಿದ್ದರು. ಶಾಸನಗಳಲ್ಲಿ ಕಪಿಲೆ ಬಾವಿಯ ನೀರಾವರಿ ಮತ್ತು ಏತದ ನೀರಾವರಿ ಪ್ರಸ್ತಾಪ ಬರುತ್ತದೆ. ಕಪಿಲೆ ಅಥವಾ ಬಕೀಟಿನ ಸಾಧನದಿಂದ ಮೇಲಕ್ಕೆ ಎತ್ತುಗಳ ಸಹಾಯದಿಂದ ನೀರನ್ನು ಎಳೆಯಬಹುದಾಗಿತ್ತೆಂದು ಬುಕಾನನ್ ಹೇಳಿದ್ದಾನೆ. ಏತದ ಬಾವಿಯಿಂದ ನೀರನ್ನು ಮನುಷ್ಯರು ಸೂಕ್ತವಾದ ಉಪಕರಣಗಳನ್ನು ಬಳಸಿ ಮೇಲಕ್ಕೆ ಎತ್ತುತ್ತಿದ್ದರು. ಹೀಗೆ ಈ ಪ್ರದೇಶದ ನೀರಾವರಿ ವ್ಯವಸ್ಥೆಯಲ್ಲಿ ಕೆರೆಗಳು ಮತ್ತು ಬಾವಿಗಳು ಪ್ರಧಾನ ಪಾತ್ರವಹಿಸಿದ್ದವು. ಈ ಪ್ರದೇಶದಲ್ಲಿ ಆಡಳಿತ ನಡೆಸಿದ ವಿಜಯನಗರ ಅರಸರು, ನಾಯಕರು ಭೂಹಿಡುವಳಿಯನ್ನು ಬೇರೆಯವರ ಒಡೆತನಕ್ಕೆ ನೀಡುವಾಗ ಅದು ಕ್ರಯ, ಭೋಗ್ಯ ಮತ್ತು ದಾನ ಇವೇ ಮೊದಲಾದ ವಿಧಾನಗಳನ್ನು ಶಾಸನಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.[10]

ಕೃಷಿ ಪ್ರಧಾನವಾದ ಸಮಾಜದಲ್ಲಿ ಭೂ ಒಡೆತನ ಭೂಮಾಲಿಕರಿಗೆ ಪ್ರತಿಷ್ಟೆಯ ಸಂಕೇತದ ಆರ್ಥಿಕ ಸುಭದ್ರತೆಯ ಕರುಹು ಆಗಿದ್ದಿತು. ಬಹುತೇಕ ಸಮುದಾಯದವರು ಭೂ ಒಡೆಯರಾಗಿದ್ದರು. ಆದರೆ ಕೆಲವರು ಸ್ವತಃ ಕೃಷಿ ಮಾಡುತ್ತಿರಲಿಲ್ಲ. ಇದೇ ಪ್ರದೇಶದಲ್ಲಿ ಸಣ್ಣ ಭೂಹಿಡುವಳಿಗಾರರು ಗೇಣಿದಾರರಾಗಿ ಅಥವಾ ಕೂಲಿಗಾಗಿ ದುಡಿಯುತ್ತಿದ್ದರು. ಇವರ ಜೊತೆಗೆ ಇತರೆ ಕೆಳಹಂತದ ಜಾತಿಗಳು ಸೇರಿದ್ದವು. ಗೇಣಿದಾರರ ವರ್ಗವಲ್ಲದೆ ಅಸ್ಪೃಶ್ಯ ಜಾತಿಗಳು ಇದ್ದವು. ಗೇಣಿದಾರರಿಗಿಂತ ಇತರ ಜಾತಿಗಳ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು.

ಸೇವಾ ಭೂಹಿಡುವಳಿ : ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಅಥವಾ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಗಳಿಗೆ ನೀಡುತ್ತಿದ್ದ ಭೂ ಹಿಡುವಳಿಯನ್ನು “ಸೇವಾ ಭೂಹಿಡುವಳಿ” ಎಂದು ಕರೆಯುತ್ತಿದ್ದರು. ಗ್ರಾಮದಲ್ಲಿ ವಾಸಿಸುವ ಜೋಯಿಸ, ಬಡಗಿ, ಕಮ್ಮಾರ, ಕುಂಬಾರ, ಅಕ್ಕಸಾಲಿ, ತೋಟಿ, ತಳವಾರ, ಒಲೆಕಾರ, ಪೂಜಾರಿ, ಕ್ಷೌರಿಕ ಇವರೇ ಮೊದಲಾದ ಅಯಗಾರರು ತಾವು ಸಲ್ಲಿಸುತ್ತಿದ್ದ ಸೇವೆಗೆ ಭೂಮಾನ್ಯ ಪಡೆಯುತ್ತಿದ್ದರು. ಇದು ಸಂಪೂರ್ಣವಾಗಿ ತೆರಿಗೆ ರಹಿತವಾಗಿರುತ್ತಿತ್ತು. ಉದಾಹರಣೆಗೆ ಶಾಸನದಲ್ಲಿ ನಿಬುಗರ ಹನುಮಂತ ದೇವರ ಗುಡಿಯ ಕಟ್ಟಿದ ಕೇ.ಗೌಡ ಅರುವತ್ತು ವೊಕ್ಕಲು ಬಡಗಿಲಿಂಗೋಜಗೆ ಕೊಟ್ಟ ಭೂದಾನದ ಉಲ್ಲೇಖವಿದೆ, ಶ್ರೀಮನ್ ಕಟಿಗೇಹಳ್ಳಿ ಬಸವನಗುಡಿ ಕೆಲಸ ಮಾಡಿದ್ದಕ್ಕೆ ನಿಬಗುರು ಕುಂಬರದ ಸಪಗೆ ಲಿಂಗಣಗೌಡ ಕೊಟ್ಟ ಮಾನ್ಯ ಎಂದು ಶಾಸನದಲ್ಲಿ ವಿವರವಿದೆ. (ಎ.ಕ. ೧೧, ಸಂ. ೪೦) ಶಾಲಿವಾಹನ ಶಕೆ ೧೫೯೦ರಲ್ಲಿ ೫ನೇ ಮದಕರಿನಾಯಕರು ಸಜಲಗಿಡ….. ಪೆಂನಯ್ಯಗೆ ಕೊಟ್ಟ ಬಿಲ್ಲಮಾನ್ಯ (ಎ.ಕ. ೧೧, ಸಂ. ೨೭) (ನಾಯಕನ ಪಟ್ಟಿ ಹತ್ತಿಹ) ಪಲ್ಲಾಗಟ್ಟಿ ಗ್ರಾಮಕ್ಕೆ ಪೂರ್ವದಲ್ಲಿ ಮುನಿಯಪ್ಪನ ಹೊಲದಲ್ಲಿರುವ ಶಾಸನದಲ್ಲಿ (ಎ.ಕ. ೧೧, ಸಂ.೨೧) ಊರ ಪ್ರಜೆಗಳು ಹನ್ನೆರಡು ಆಯಗಾರರು ಒಪ್ಪಿಕೊಟ್ಟ ಭೂಮಾನ್ಯ ಎಂಬ ವಿವರವಿದೆ.

. ಸಾಮಾನ್ಯ ಭೂಮಿ : ಜಗಲೂರು ಪ್ರದೇಶದಲ್ಲಿಯೂ ಸಾಗುವಳಿಯಾದ ಭೂಹಿಡುವಳಿಗಳನ್ನು, ಬೆದ್ದಲು ಮತ್ತು ತೋಟ ಎಂಬುದಾಗಿ ವರ್ಗೀಕರಿಸಲಾಗಿತ್ತು. ತೋಟಗಳನ್ನು ಮಾವಿನ ತೋಟ ಹೂವಿನ ತೋಟ, ತೆಂಗಿನ ತೋಟ ಮುಂತಾಗಿ ಕರೆಯುತ್ತಿದ್ದರು. ಬಿತ್ತನೆಯ ಪ್ರಮಾಣದ ಮೇಲೆ ಖಂಡುಗ, ಸಲಿಗೆ, ಮತ್ತರು ಇತ್ಯಾದಿ ಅಳತೆಗಳ ಅಧಾರದಲ್ಲಿ ಭೂಹಿಡುವಳಿಗಳ ಉತ್ಪಾದಕತೆಯನ್ನು ನಿರ್ಧರಿಸಲಾಗುತ್ತಿತ್ತು. ಚಿತ್ರದುರ್ಗದ ನಾಯಕ ಅರಸರ ಆಡಳಿತಾವಧಿಯಲ್ಲಿ ವ್ಯಕ್ತಿಯೊಬ್ಬನು ಭೂಮಿ ರೂಪದ ಆಸ್ತಿಯ ಭೂ ಒಡೆತನ ಹೊಂದಿದ್ದು, ಈ ವೇಳೆಯಲ್ಲಿ ಖುಷ್ಕಿ, ತರಿ, ಭಾಗಾಯ್ತ ಭೂ ಹಿಡುವಳಿಗಳಿದ್ದವು. ಉದಾಹರಣೆಗೆ ನಾಯಕ ಅರಸರ ಕಾಲದಲ್ಲಿ ಕಂದಾಯ ಪಡೆಯುವ ಭೂಹಿಡುವಳಿಗಳನ್ನು ಗದ್ದೆ, ಹೊಲ, ಬೆದ್ದಲು, ತೋಟ ತುಡಿಕೆ ಎಂದು ಕರೆಯುತ್ತಿದ್ದರು. ಜಗಲೂರು ಪ್ರದೇಶದ ಕೆರೆಗಳ ಆಶ್ರಯದಲ್ಲಿ ಗದ್ದೆಗಳು ಇದ್ದವು. ಕೆರೆಗಳು ಇಲ್ಲದೆ ಮಳೆಯನ್ನೆ ಅವಲಂಬಿಸಿದ ವ್ಯವಸಾಯ ಪದ್ಧತಿಯನ್ನು ಕಾಡರಂಭವೆಂದೂ, ಕೆರೆ ಮೊದಲಾದ ಜಲಾಶಯಗಳನ್ನು ಧರಿಸಿ ನಡೆಸುತ್ತಿದ್ದ ವ್ಯವಸಾಯ ಪದ್ಧತಿಗೆ ನೀರಾರಂಭ ಎಂದೂ ಕರೆಯುತ್ತಿದ್ದರು. ಸಾಮಾನ್ಯವಾಗಿ ಈ ಭಾಗದ ಕಲ್ಯಾಣದ ಚಾಲುಕ್ಯರ ಶಾಸನದಲ್ಲಿ ಕಂಡುಬರುವಂತೆ ಕೆರೆಯ ಕೆಳಗೆಗದ್ದೆ, ಕಂಬ ೧೬, ತೆಂಕಲು ಕೆಂಗಾಡು ಮತ್ತರು ಎಂದೂ, ಶಾಸನದಲ್ಲಿ ಬರುವ ಕಂಬ ಮತ್ತರು ಎಂಬ ಶಬ್ದಗಳು ಸ್ಪಷ್ಟವಾಗಿ ಭೂಹಿಡುವಳಿಯ ವಿಸ್ತಾರವನ್ನು ಸೂಚಿಸುತ್ತವೆ. ಹಾಗೆಯೇ ಶಾಸನದಲ್ಲಿ ಬರುವಂತೆ ಸೀಮೆ ಒಳಗಾದ ಗದ್ದೆ ಬೆದ್ದಲು, ಕಾಡಾರಂಭ, ನೀರಾರಂಭ, ಹತ್ತುಕೊಳಗ ಗದ್ದೆ , ಖಂಡುಗದ ಭೂಮಿ, ಬಿಟ್ಟಗದ್ದೆ, ಖಂಡುಗ ವೆರಡ್ತು ಹಿರಿಯ ಕೆರೆಯ ಕೆಳಗೆ ಗದ್ದೆ ನೈವೇದ್ಯಗೆ ಬಿಟ್ಟಗದ್ದೆ ಕಂದೂರು ಪಡುವಣ ತುಂಬಿನ ಗದ್ದೆ ಎಂಬುದಾಗಿ ಕರೆಯುತ್ತಿದ್ದರು.[11]

ಒಂದು ಗ್ರಾಮದ ಭೂಹಿಡುವಳಿಯನ್ನು ಲಿಂಗಮುದ್ರೆ ಕಲ್ಲುಗಳ ಮೂಲಕ ಗುರುತಿಸಿ ಒಂದು ಗ್ರಾಮದಿಂದ ಮತ್ತೊಂದು ಗ್ರಾಮವನ್ನ್ನು ಪ್ರತ್ಯೇಕಿಸುವ ಕ್ರಮವು ಜಾರಿಯಲ್ಲಿತ್ತು. ಉದಾಹರಣೆಗೆ ಶಕವರ್ಷ ೧೪೪೮ರ ಶಾಸನದಲ್ಲಿ ದಾನ ನೀಡಿರುವ ನಿಬಗೂರು ಗ್ರಾಮದ ನಾಲ್ಕು ಗಡಿಗಳ ವಿವರವಿದೆ. ಮೂಡಲು ಕಟ್ಟಿಗೆಹಳ್ಳಿಯ ಹೊಲದ ಮೇರೆ ತೆಂಕಲು, ಬಿದರಕೆರೆಯ ಹೊಲದ ಗಡಿ, ಪಡುವಲು ಅದೇ ಬಿದರಕೆರೆ ಹೊಲ ಮೇರೆ ಮೂಡಲು ವಾಯುವ್ಯಕ್ಕೆ ಆಗ್ನೇಯ ಬಡಗಲು ಈಶಾನ್ಯ, ಕೋಡಿಹಳ್ಳಿಯ ಹೊಲದ ಮೇರೆ ಹೀಗೆ ಒಂದು ಗ್ರಾಮದ ಎಲ್ಲಾ ದಿಕ್ಕುಗಳನ್ನು ಸ್ಪಷ್ಟವಾಗಿ ಸೂಚಿಸುವ ಲಿಂಗಮುದ್ರೆ ಕಲ್ಲುಗಳನ್ನು ನೆಟ್ಟು ಗುರುತಿಸುವ ಕ್ರಮ ಜಾರಿಯಲ್ಲಿತ್ತು. ಕೆಲವು ಭಾರಿ ಭೂಮಿಯ ವಿಸ್ತೀರ್ಣವನ್ನು ಬಿತ್ತುವ ಬೀಜದ ಪ್ರಮಾಣದಿಂದ ನಿರ್ಧರಿಸಲಾಗುತ್ತಿತ್ತು. ಜಗಲೂರು ಪ್ರದೇಶದ ಭೂಮಿಯ ಫಲವತ್ತತೆಯನ್ನು ಗಮನಿಸಿ ಎರೆಭೂಮಿ, ಕೆಂಪು ಭೂಮಿ, ಮರಳು ಭೂಮಿ, ಕಲ್ಲಚ್ಚು ಮುಂತಾಗಿ ಕರೆಯುವ ಕ್ರಮವು ರೂಢಿಯಲ್ಲಿತ್ತು. ಈ ಪ್ರದೇಶವನ್ನಾಳಿದ ಅರಸರು ಕೃಷಿ ಅಭಿವೃದ್ಧಿಗೋಸ್ಕರ ಹಲವು ಕೆರೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ೧೭೦೩ರಲ್ಲಿ ಭರಮಪ್ಪನಾಯಕನ ಕಾಲದಲ್ಲಿ ಭರಮಸಾಗರದ ಕೆರೆ, ಅಬ್ಬೆನಾಯಕನ ಹಳ್ಳಿಕೆರೆ, ಹೊಸಕೆರೆ ಮೊದಲಾದ ಕೆರೆಗಳು ಭೂಮಿಗೆ ನೀರುಣಿಸುತ್ತಿದ್ದವು.

ಕಂದಾಯ ಪದ್ಧತಿ : ಜಗಲೂರು ಪ್ರದೇಶದಲ್ಲಿಯೇ ಪ್ರತಿ ೮ ಅಥವಾ ೧೬ ಹಳ್ಳಿಗೆ ಒಂದರಂತೆ ಸ್ಥಾಪನೆಯಾದ ಹೋಬಳಿಗಳು ಕೇವಲ ಆಡಳಿತಾತ್ಮಕ ವಿಭಾಗೀಕರಣವಲ್ಲದೆ ಕಂದಾಯ ಸಂಗ್ರಹಣೆಯ ಘಟಕಗಳೂ ಆಗಿದ್ದವು. ಮಾಗಣೆ ಎನ್ನುವುದು ಒಂದು ಆಡಳಿತ ವಿಭಾಗ ಎಂಬುದು ಶಾಸನದಿಂದ ತಿಳಿಯುತ್ತದೆ. ಗ್ರಾಮವು ಆಡಳಿತದ ಚಿಕ್ಕ ಘಟಕವಾಗಿತ್ತು. ಪ್ರತಿಯೊಂದು ಸೀಮೆ ಅಥವಾ ಗ್ರಾಮಗಳ ಆಡಳಿತವನ್ನು ಪಾರುಪತ್ಯೆಗಾರರು, ನಾಡಗೌಡರು, ದಳವಾಯಿ, ಗೌಡ, ಶಾನುಭೋಗರು ನೋಡಿಕೊಳ್ಳುತ್ತಿದ್ದರು. ಬಿ.ಎಲ್.ರೈಸ್ ಅವರು ಚಿತ್ರದುರ್ಗ ನಾಯಕರು ಪ್ರತಿ ನೇಗಿಲು ಒಂದಕ್ಕೆ ಒಂದೂವರೆ ದುರ್ಗಿ ಪಗೋಡ ಕಂದಾಯ ವಿಧಿಸುತ್ತಿದ್ದರು ಎಂದಿದ್ದಾರೆ.

ಮೇಲಿನ ಅಧ್ಯಯನದಲ್ಲಿ ಜಗಲೂರು ಪ್ರದೇಶವು ವಿವಿಧ ರಾಜಕೀಯ ಪ್ರಭುತ್ವದ ಆಡಳಿತಕ್ಕೆ ಒಳಪಟ್ಟಿತ್ತು. ಈ ಪ್ರದೇಶವು ಆರ್ಥಿಕ ದೃಷ್ಟಿಯಿಂದ ಕೆಳದಿ ಇಲ್ಲವೇ ಕರಾವಳಿ ಪ್ರದೇಸದಷ್ಟು ಸಂಪದ್ಭರಿತವಾಗಿರಲಿಲ್ಲ. ಇಲ್ಲಿ ಆಡಳಿತ ನಡೆಸಿದ ಸ್ಥಳೀಯ ನಾಯಕರ ಕಾಲದಿಂದ ಸ್ವಾತಂತ್ರ್ಯದ ನಂತರವೂ ಹೆಚ್ಚಾಗಿ ಖುಷ್ಕಿ ಭೂಹಿಡುವಳಿಗಳನ್ನು ಒಳಗೊಂಡಿದೆ. ಆದರೂ ಕರ್ನಾಟಕದ ಆಯಕಟ್ಟಿನ ಭಾಗದಲ್ಲಿರುವುದರಿಂದ ಜಗಲೂರು ಸ್ವಾತಂತ್ರ್ಯದ ನಂತರವೂ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಜಗಲೂರು ಪ್ರದೇಶದ ಸ್ಥಳೀಯ ನಾಯಕರು ವಿಜಯನಗರ ಅರಸರಿಂದ ಅಮರ ಮಾಗಣಿಯಾಗಿ ಭೂಮಿ ಪಡೆದಿದ್ದರು. ಆ ಮೂಲಕ ರಾಜಕೀಯ ಅಸ್ತಿತ್ವ ಪಡೆದ ನಾಯಕರು ಇಲ್ಲಿನ ಭೂ ಸಂಬಂಧ ವಿಷಯಗಳ ಕಡೆಯೂ ಗಮನಹರಿಸಿದರು. ಖಾಸಗಿ ಭೂ ಒಡೆತನವನ್ನು ರಕ್ಷಿಸುವುದರೊಂದಿಗೆ ಇನಾಂ ಭೂಹಿಡುವಳಿಗಳನ್ನು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ನೀಡುವ ಮೂಲಕ ಅವುಗಳ ಮನ್ನಣೆಗೆ ಪಾತ್ರರಾಗಿದ್ದರು. ಈ ಮೂಲಕ ಅಂದಿನ ಸಮಾಜದ ಮೇಲೆ ವರ್ಗದ ಜಾತಿಯ ಹಿತವನ್ನು ಕಾಪಾಡುವ ಉದ್ದೇಶವಿತ್ತು. ಉಳಿದಂತೆ ಇವರ ಕಾಲದಲ್ಲಿಯೂ ಖುಷ್ಕಿ, ತರಿ, ಬಾಗಾಯ್ತು ಎಂದು ಭೂಮಿಯನ್ನು ಅವುಗಳ ಗುಣಮಟ್ಟಕ್ಕನುಗುಣವಾಗಿ ವಿಭಾಗಿಸಿ ಭೂಕಂದಾಯ ಪಡೆಯುವ ಕ್ರಮ ಜಾರಿಯಲ್ಲಿತ್ತು.

[1] ವಿಜಯ್, ಟಿ.ಪಿ., ೧೯೯೯ ಬಟರನ್ ಸ್ಟೇನ್ ಮತ್ತು ವಿಜಯನಗರ ಸಾಮ್ರಾಜ್ಯ, ರಹಮತ್ ತರೀಕೆರೆ (ಸಂ) ಕನ್ನಡ ಅಧ್ಯಯನ,                 ‘ಬಿಸಿಲು’ ಸಂಚಿಕೆ ತ್ರೈಮಾಸಿಕ ಪತ್ರಿಕೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಪು. ೯ – ೧೦

[2] ಪುಟ್ಟಣ್ಣ, ಎಂ.ಎಸ್., ೧೯೯೭, ಚಿತ್ರದುರ್ಗ ಜಿಲ್ಲೆಯ ಪಾಳೆಯಗಾರರು, ಕಾವ್ಯಾಲಯ ಪ್ರಕಾಶನ, ಮೈಸೂರು, ಪು. ೮

[3] ಕೃಷ್ಣಮೂರ್ತಿ, ಪಿ.ವಿ. ಚಿತ್ರದುರ್ಗ ಜಿಲ್ಲೆಯ ವಿಜಯನಗರ ಕಾಲದ ಆಡಳಿತ ವಿಭಾಗಗಳು, ಎಂ.ಎಂ. ಕಲಬುರ್ಗಿ (ಸಂ), ೧೯೯೯,                ಪ್ರಾಚೀನ ಕರ್ನಾಟಕ ಆಡಳಿತ ವಿಭಾಗಗಳು, ಭಾಗ – ೧, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೨೧೩

[4] ಗಿರಿಜಾ, ಟಿ. ೧೯೯೧, ಚಿತ್ರದುರ್ಗ ಜಿಲ್ಲಾ ದರ್ಶಿನಿ, ರೇಖಾ ಪ್ರಕಾಶನ, ದಾವಣಗೆರೆ, ಪು. ೪೨೩

[5] ಗೋಪಾಲ, ಬಿ.ಆರ್. (ಸಂ) ವಿಜಯನಗರ ಇನ್‌ಸ್ಕ್ರಿಪ್ಷನ್ಸ್, ಸಂಪುಟ – ೨, ರೈಸ್, ಬಿ.ಎಲ್. ಎ.ಕ ಸಂಪುಟ ೧೧, ಜಗಲೂರು ಶಾಸನ ಸಂ ೧೨, ೪೬,

[6] ಗಿರಿಜಾ, ಟಿ. ಅದೇ, ಪು. ೩೧೭

[7] ರೈಸ್, ಬಿ.ಎಲ್. ಎ.ಕ ಸಂಪುಟ ೧೧, ಜಗಲೂರು ಶಾಸನ ಸಂಖ್ಯೆ ೨೮

[8] ಅದೇ ಶಾಸನ ಸಂಖ್ಯೆ ೩೭

[9] ವೆಂಕಟರತ್ನಂ, ಎ.ವಿ., ೧೯೭೨, ಲೋಕಲ್ ಸೆಲ್ಪ್ ಗೌರ್ನಮೆಂಟ್ ಇನ್ ವಿಜಯನಗರ ಎಂಪೈರ್, ಮೈಸೂರು, ವಿಶ್ವವಿದ್ಯಾನಿಲಯ, ಮೈಸೂರು, ಪು. ೧೪

[10] ಹಯವದನರಾವ್, ಸಿ. ೧೯೩೦, ಮೈಸೂರು ಗೆಜೆಟಿಯರ್, ಸಂ.೨, ಮೈಸೂರು ಸರಕಾರ, ಮೈಸೂರು, ಪು. ೨೫೦೭, ೧೨, ೧೩

[11] ಸತ್ಯನ್, ಬಿ.ಎನ್. (ಸಂ), ೧೯೬೭, ಚಿತ್ರದುರ್ಗ ಜಿಲ್ಲಾ ಗೆಜೆಟಿಯರ್, ಪು. ೨೫೬