ನೀರು ಭೂಮಿಯ ಮೇಲಿನ ಜೀವಿಗಳಿಗೆ ಅತ್ಯಂತ ಅಮೂಲ್ಯವಾದ ವಸ್ತು. ನೀರಿಲ್ಲದೆ ಪ್ರಪಂಚದ ಯಾವ ಜೀವಜಂತುಗಳು ಬದುಕುಳಿಯಲು ಸಾಧ್ಯವಿಲ್ಲ. ಹಾಗಾಗಿ ನೀರನ್ನು ಪಂಚಭೂತಗಳಲ್ಲಿ ಒಂದೆರಡು ಕರೆಸಿಕೊಂಡಿದೆ. ಮಾನವನು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದಲೂ ಅವನು ಹೆಚ್ಚಾಗಿ ನೀರಿನ ಆಸರೆಗಳಲ್ಲೇ ಬಾಳಿ ಬದುಕಿದ್ದಾನೆ. ಇದಕ್ಕೆ ಆ ಭಾಗದಲ್ಲಿ ದೊರೆತಿರುವ ಮಾನ ನೆಲೆಯ ಕುರುಹುಗಳೇ ಸಾಕ್ಷಿಗಳಾಗಿವೆ. ‘ನೂತನ ಶಿಲಾಯುಗದ ಮಾನವನು ಮಳೆಯ ನೀರಿನ ಉಪಯೋಗವನ್ನು ಮಾಡಲು ಮೊದಲಿಗೆ ಅರಿತನು’.[1] ಭೂಮಿಯ ಮೇಲೆ ಉಂಟಾದ ತಗ್ಗುಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದನ್ನು ಕಂಡು ಮಾನವನು ಮಳೆ ಇಲ್ಲದ ಸಮಯದಲ್ಲಿ ಅದನ್ನು ಉಪಯೋಗಿಸಲು ಪ್ರಾರಂಭಿಸಿದನು. ಹೀಗೆ ನೀರಿನ ಬಳಕೆಯ ತಂತ್ರವನ್ನು ಅರಿತ ಇವನು ತಾಮ್ರಯುಗ ಹಾಗೂ ಬೃಹತ್ ಶಿಲಾಯುಗದಲ್ಲಿ ಪ್ರಾಕೃತಿಕವಾಗಿ ಬೆಟ್ಟಗುಡ್ಡಗಳಿಂದ ಬರುವ ಮಳೆಯ ನೀರಿಗೆ ಕೆಳಭಾಗದಲ್ಲಿ ಅಡ್ಡಕಟ್ಟೆ ಹಾಕಿ ನೀರನ್ನು ಸಂಗ್ರಹಿಸಿ ನಿತ್ಯಬಳಕೆಗೆ ಹಾಗೂ ವ್ಯವಸಾಯಕ್ಕೆ ಬಳಸಿರುವ ಹಲವಾರು ಉದಾಹರಣೆಗಳು ದಕ್ಷಿಣ ಭಾರತದಲ್ಲಿ ಉತ್ಖನನಗೊಂಡ ಬೃಹತ್ ಶಿಲಾಯುಗದ ನೆಲೆಗಳಲ್ಲಿ ಪತ್ತೆಯಾಗಿವೆ. ಹೀಗೆ ನೀರನ್ನು ಸಂಗ್ರಹಿಸುವ ತಂತ್ರಗಾರಿಕೆ ಹಾಗೂ ಚಿಕ್ಕಪುಟ್ಟ ಕೆರೆ – ಕಟ್ಟೆ, ಜಲಾಶಯಗಳ ಇತಿಹಾಸವನ್ನು ಬೃಹತ್ ಶಿಲಾಯುಗಕ್ಕೆ ಪೂರ್ವದಿಂದಲೂ ಗುರುತಿಸಬಹುದಾಗಿದೆ.

ನೀರಾವರಿಯು ಮುಖ್ಯವಾಗಿ ನದಿ, ಬಾವಿ, ಕೆರೆಗಳನ್ನು ಅವಲಂಬಿಸಿದ್ದಿತು. ಕೆರೆ, ಕಟ್ಟೆ, ಕೊಳ, ಕುಂಟೆ, ಸಮುದ್ರ, ದೊಣೆ, ಹೊಕ್ಕರಣೆ (ಪುಷ್ಕರಣಿ) ಇತ್ಯಾದಿಯಾಗಿ ನೀರಾವರಿ ಆಶ್ರಯಗಳನ್ನು ಕುರಿತು ಕರ್ನಾಟಕದ ಶಾಸನಗಳು ಉಲ್ಲೇಖಿಸಿವೆ.[2] ಅದರಲ್ಲೂ ಕೆರೆಗಳು ಪ್ರಾಚೀನ ಕರ್ನಾಟಕದ ನಿರಾವರಿ ಸಾಧನಗಳಲ್ಲಿ ಅತ್ಯಂತ ಪ್ರಮುಖವಾದವು.[3] ಕನ್ನಡನಾಡಿನಲ್ಲಿ ಕೆರೆ ನಿರ್ಮಾಣದ ಇತಿಹಾಸ ಕದಂಬರ ಪೂರ್ವದಲ್ಲೇ ಇತ್ತೆಂಬುದು ತಿಳಿದುಬರುವುದು. ಬನವಾಸಿ ನಗರದಲ್ಲಿ ಕ್ರಿ.ಶ. ಆರಂಭದ ಶತಮಾನದಲ್ಲೇ ಚಟುನಾಗಶ್ರೀಯ ಕಾಲದಲ್ಲಿ ಅತೀ ಪ್ರಾಚೀನ ನೀರಾವರಿ ಯೋಜನೆ ಇದ್ದಿತ್ತೆಂದು ಶಿಲಾಶಾಸನಗಳಿಂದ ತಿಳಿದುಬರುತ್ತದೆ. ಅದರೊಂದಿಗೆ ಕರ್ನಾಟಕದ ಪ್ರಾಚೀನ ಕೆರೆಗಳಲ್ಲಿ ಬಹುಮುಖ್ಯವಾದ ಚಂದ್ರವಳ್ಳಿ ಕೆರೆಯನ್ನು ಮಯೂರವರ್ಮನು ಬಲಪಡಿಸಿದನೆಂದು ಆ ಕೆರೆಯ ಬಳಿಯ ಶಾಸದಿಂದ ತಿಳಿದು ಬರುವುದು.[4] ಕರ್ನಾಟಕದ ಅರಸು ಮನೆತನಗಳಾದ ಗಂಗರು, ಬಾದಾಮಿ ಚಾಲುಕ್ಯರು, ಕಲ್ಯಾಣಿ ಚಾಲುಕ್ಯರು, ಹೊಯ್ಸಳರು ಹಾಗೂ ವಿಜಯನಗರದ ಅರಸರು ಕರ್ನಾಟಕದಲ್ಲಿ ಅನೇಕ ಕೆರೆ – ಕಟ್ಟೆ, ಕಾಲುವೆ, ಅಣೆಕಟ್ಟುಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ, ಕಲ್ಯಾಣಿ ಚಾಲುಕ್ಯರ (ಕ್ರಿ.ಶ.೧೦ – ೧೨ ನೇ ಶತಮಾನ) ಕಾಲದಲ್ಲಿ ಅಪಾರ ಪ್ರಮಾಣದಲ್ಲಿ ಕೆರೆಗಳ ನಿರ್ಮಾಣವನ್ನು ಕಾಣಬಹುದು. ಅವರ ಕಾಲವನ್ನು ‘ಕೆರೆಗಳ ಸುವರ್ಣಯುಗ’ವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.[5] ವಿಜಯನಗರ ಕಾಲದಲ್ಲಿ ತಮ್ಮ ಇಡೀ ಸಾಮ್ರಾಜ್ಯದಾದ್ಯಂತ ಕೆರ್ಎ ಮತ್ತು ಅಣೆಕಟ್ಟೆಗಳನ್ನು ಕಟ್ಟಿಸಿರುವರು. ಕೆರೆ ನಿರ್ಮಾಣ ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿಯನ್ನು ಹೊಂದಿದ್ದುದು ಇಂದಿಗೂ ಅವರು ನಿರ್ಮಿಸಿದ ಕೆರೆಗಳು ಬಳಕೆಯಲ್ಲಿರುವುದೇ ಸಾಕ್ಷ್ಯವಾಗಿವೆ. ವಿಜಯನಗರೋತ್ತರದ ಕರ್ನಾಟಕದಲ್ಲಿ ಪಾಳೆಯಗಾರರು ಹಾಗೂ ಚಿಕ್ಕಪುಟ್ಟ ಅರಸು ಮನೆತನಗಳು ಹಳೆಯ ಕೆರೆಗಳನ್ನು ದುರಸ್ಥಿ ಮಾಡಿಸುವುದು ಹಾಗೂ ಹೊಸ ಕೆರೆಗಳ ನಿರ್ಮಾಣ ಹಾಗೂ ದುರಸ್ಥಿ ಕಾರಯದಲ್ಲಿ ತೊಡಗಿರುವುದು ಹಲವು ಸಾಹಿತ್ಯಕ ಹಾಗೂ ಪುರಾತತ್ವೀಯ ದಾಖಲೆಗಳಿಂದ ತಿಳಿದುಬರುವುದು.

ಪ್ರಸ್ತುತ ಪ್ರಬಂಧದಲ್ಲಿ ಜಗಲೂರು ತಾಲೂಕಿನ ಕೆರೆ ನೀರಾವರಿಯನ್ನು ಕುರಿತು ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ಜಗಲೂರು ತಾಲೂಕು ದಾವಣಗೆರೆಯ ೬ ತಾಲೂಕುಗಳಲ್ಲಿ ಒಂದಾಗಿದ್ದು ಚಾರಿತ್ರಿಕವಾಗಿ ಹಾಗೂ ಭೌಗೋಳಿಕವಾಗಿ ಚಿತ್ರದುರ್ಗದೊಂದಿಗೆ ಹೆಚ್ಚು ಒಡನಾಟ ಹೊಂದಿರುವ ಪ್ರದೇಶವೆಂದು ಹೇಳಬಹುದು. ಭೌಗೋಳಿಕವಾಗಿ ಉಬ್ಬುದಿಣ್ಣೆ, ತಗ್ಗುಗಳಿಂದ ಕೂಡಿದ ಮೈದಾನ ಪ್ರದೇಶವಾಗಿದೆ. ಇದರ ವಾಯುವ್ಯ ಭಾಗಗಳಲ್ಲಿ ಸಣ್ಣ ಬೆಟ್ಟಗುಡ್ಡಗಳಿವೆ. ಅದರೊಂದಿಗೆ ಕೆಲವು ಕಣಿವೆಗಳಿವೆ. ಜಗಲೂರಿನ ಕೃಷಿಯೋಗ್ಯ ಭೂಮಿಯಲ್ಲಿ ಕಾಲುಭಾಗ ಕಪ್ಪು ಮಣ್ಣಿನಿಂದ ಕೂಡಿದ್ದು ಉಳಿದ ಭಾಗ ಮರಳು ಮಿಶ್ರಿತ ಕೆಂಪು ಭೂಮಿಯಾಗಿದೆ. ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದು ವಾರ್ಷಿಕ ಸರಾಸರಿ ೫೫೦ ಮಿ.ಮೀ ಮಳೆಯಾಗುತ್ತದೆ. ಮಳೆಯಾಧಾರಿತ ಭೂಮಿ ಹೆಚ್ಚು ಇದ್ದು ಕೆಲವೊಂದು ಕೆರೆ – ಕಟ್ಟೆಗಳ ನಿರ್ಮಾಣಕ್ಕೆ ಯೋಗ್ಯವಾದ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ಇಲ್ಲಿನ ಪ್ರಾಕೃತಿಕವಾದ ಬೆಟ್ಟ – ಗುಡ್ಡಗಳಲ್ಲಿ ಬಿದ್ದು ಹರಿದು ಬರುವ ಮಳೆಯ ನೀರು ಹಳ್ಳಕೊಳ್ಳಗಳು ಉಂಟಾಗಿದ್ದು ಅವುಗಳಿಗೆ ಅಡ್ಡಲಾಗಿ ಚಿಕ್ಕಪುಟ್ಟ ಕೆರೆಕಟ್ಟೆಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಈ ತಾಲೂಕಿನಲ್ಲಿ ಯಾವುದೇ ದೊಡ್ಡ ನದಿಗಳು ಇಲ್ಲ. ಆದರೆ ಪ್ರಾಕೃತಿಕವಾಗಿ ಮಳೆಯ ನೀರನ್ನು ಆಶ್ರಯಿಸಿರುವ ಸಣ್ಣ ಕೆರೆಗಳನ್ನು ಕಾಣಬಹುದು. ತಾಲೂಕಿನಾದ್ಯಂತ ಸುಮಾರು ೨೮ ಸಣ್ಣ ಕೆರೆಗಳನ್ನು ಕಾಣಬಹುದು. ಅವುಗಳಲ್ಲಿ ಬಹುತೇಕ ಕೆರೆಗಳು ೪೦ ರಿಂದ ೨೦೦ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸು ಸಾಮರ್ಥ್ಯವನ್ನು ಹೊಂದಿದೆ. ಅಂತಹ ಕೆರೆಗಳಲ್ಲಿ ಸಂಗೇನಹಳ್ಳಿ ಕೆರೆ ೬೪೭ ಹೆಕ್ಟೇರ್, ಮಾಗಡಿ ಕೆರೆ ೨೦೦ ಹೆಕ್ಟೇರ್, ತುಪ್ಪದಹಳ್ಳಿ ಕೆರೆ ೪೬೦ಹೆಕ್ಟೇರ್ ಹಾಗೂ ಗಡಿಮಾಕುಂಟೆ ಕೆರೆ ೪೦೮ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದು ನೀರಾವರಿ ವಿಭಾಗದ ಮಾಹಿತಿಯಾಗಿದೆ.

ಜಗಲೂರು ತಾಲೂಕಿನ ಶಿಲಾಶಾಸನಗಳು ಹಾಗೂ ಚಾರಿತ್ರಿಕ ದಾಖಲೆಗಳು ಇಲ್ಲಿನ ಕೆರೆ, ಕಟ್ಟೆ, ತೊರೆಗಳನ್ನು ಕುರಿತಂತೆ ಉಲ್ಲೇಖಿಸುತ್ತವೆ. ಅವುಗಳಲ್ಲಿ ಅರಕೆರೆ,[6] ಚರ್ವ್ವನ ಕೆರೆ,[7] ಗನ್ನನಕೆರೆ,[8] ಗದಿಗಿನ ಕೆರೆ,[9] ಪರಿಯಾ ಕೆರೆ,[10] ಮತ್ತಗಟ್ಟ ಕೆರೆ,[11] ಬಿರೂರ ಕೆರೆ,[12] ಹೊಸಕೆರೆ,[13] ಹನತೊರೆ,[14] ಹೀಗೆ ಹಲವು ಕೆರೆಗಳು, ತೊರೆಗಳು ಶಾಸನೋಕ್ತವಾಗಿವೆ. ಅಲ್ಲದೆ ಇಲ್ಲಿನ ಶಾಸನಗಳಲ್ಲಿ ದೇವಾಲಯಗಳಿಗೆ ಗದ್ದೆ, ಬೆದ್ದಲು ಭೂಮಿಗಳನ್ನು ದಾನ ನೀಡಿರುವುದು[15] ಶಾಸನೋಕ್ತವಾಗಿದ್ದು ಅವುಗಳು ಕ್ರಮವಾಗಿ ದೇವಮಾತೃಕ ಹಾಗೂ ನದೀಮಾತೃಕ ಎಂಬ ಸಾಗುವಳಿ ಜಮೀನುಗಳ ವರ್ಗೀಕರಣವನ್ನು, ಅದರೊಂದಿಗೆ ನೀರಾವರಿ ಸಂಗತಿಗಳನ್ನು ನಮಗೆ ತಿಳಿಸುತ್ತವೆ. ಅಷ್ಟೆ ಅಲ್ಲದೇ ಜಗಲೂರು ತಾಲೂಕಿನ ಕೆಲವು ಶಾಸನೋಕ್ತ ಸ್ಥಳನಾಮಗಳಾದ ದೇವಿಗೆರೆ, ಕೃಷ್ಣ ಸಮುದ್ರ, ಬಿದರಕೆರೆ ಮುಂತಾದವುಗಳು ಕೆರೆಗಳ ಇರುವಿಕೆಯನ್ನು ಸೂಚಿಸುತ್ತವೆ. ಕೆಲವು ಪ್ರಾಚೀನ ಕೆರೆಗಳ ಬಗ್ಗೆ ತಿಳಿಯಬಹುದು.

. ಅಸಗೋಡು ಕೆರೆ

ಜಗಲೂರು ತಾಲೂಕಿನ ಪ್ರಾಚೀನ ಕೆರೆಗಳಲ್ಲಿ ಅಸಗೋಡು ಕೆರೆಯು ಒಂದಾಗಿದೆ. ಅಸಗ ಎಂದರೆ ಅಶೋಕ ಗೋಡು ಎಂದರೆ ಪಟ್ಟಣ ಎಂಬ ಒಂದು ಅರ್ಥವಾದರೆ, ಮತ್ತೊಂದು ಅರ್ಥದಲ್ಲಿ ಗೋಡು ಎಂದರೆ ಕೆರೆ, ಬಾವಿ, ಕುಂಟೆ, ನದಿಯ ತಳದಲ್ಲಿ ನಿಲ್ಲುವ ಜೇಡಿಮಣ್ಣು ಎಂದೆಲ್ಲಾ ಅರ್ಥಗಳನ್ನು ನೀಡಲಾಗಿದೆ. ಈ ಕೆರೆ ಪರಿಸರದಲ್ಲಿ ಪ್ರಾಚೀನ ದೇವಾಲಯಗಳು, ಶಿಲಾಶಾಸನಗಳು, ಕೆರೆಯ ತೂಬಿನ ಬಳಿ ಇರುವ ವೀರಗಲ್ಲು ಮುಂತಾದ ದಾಖಲೆಗಳು ಈ ಕೆರೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಸಹಾಯಕವಾಗಿವೆ. ಈ ಕೆರೆಯ ತೂಬಿನ ಬಳಿ ಇರುವ ವೀರಗಲ್ಲು ಕ್ರಿ.ಶ. ೧೦೧೦ರ ಕಾಲದ್ದಾಗಿದೆ.[16] ಅಲ್ಲದೆ ಇಲ್ಲಿಯ ಶಂಭುಲಿಂಗ ದೇವಾಲಯದ ಕ್ರಿ.ಶ. ೧೦೫೪ರ ಶಾಸನದಲ್ಲಿ ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರೈಲೋಕ್ಯಮಲ್ಲ ೧ನೇ ಸೋಮೇಶ್ವರನ ಕಾಲದಲ್ಲಿ ಅವನ ಅಧೀನನಾಗಿ ನೊಳಂಬ ಪಲ್ಲವ ವಂಶದವನಾದ ನಾರಸಿಂಗದೇವ ಎಂಬುವವನ ಮಗನಾದ ಚೋರಯದೇವನು ‘ಉಚ್ಚಂಗಿ – ೩೦’ರ ಪ್ರಾಂತ್ಯವನ್ನು ಆಳುತ್ತಿದ್ದಾಗ ಅವನೂ ಮತ್ತು ಕದಂಬಳಿಗೆ ೧೦೧೦ರ ನಾಡಿನ ಮನ್ನೆಯನಾದ ನಾಗತಿಯರಸನೂ ಸೇರಿ, ಅಸಗೋಡಿನ ಸ್ವಯಂಭು ದೇವಾಲಯವನ್ನು ನಿರ್ಮಿಸಿದ ಸೂತ್ರದಾರಿ ಅಭೋಜ ಅಂಬುವವನಿಗೆ ೧ ಮತ್ತರು ಗದ್ದೆಯನ್ನು ೧೨ ಮತ್ತರು ಬೆದ್ದಲು ಭೂಮಿಯನ್ನು ದಾನವಾಗಿ ನೀಡಲಾಗಿದೆ.[17] ಈ ಭೂಮಿಗಳು ಇದೇ ಕೆರೆಯ ಭಾಗದ ಭೂಮಿಗಳಾಗಿದ್ದು ಈ ಕೆರೆಯ ಪ್ರಾಯಶಃ ಕಲ್ಯಾಣ ಚಾಲುಕ್ಯರ ಕಾಲದಲ್ಲೇ ನಿರ್ಮಾಣಗೊಂಡಿರಬಹುದು ಹೇಳಬಹುದು. ಈ ಕೆರೆಯನ್ನು ೧೯೪೦ರಲ್ಲಿ ಮೈಸೂರು ಸಂಸ್ಥಾನದ ಕಾಲದಲ್ಲಿ ದುರಸ್ಥಿಗೊಳಿಸಲಾಗಿದೆ.[18] ಈ ಕೆರೆಯು ೮೧.೬೦ ಹೆಕ್ಟೇರ್ ಜಲಾನಯನ ಪ್ರದೇಶವಾಗಿದ್ದು, ೩೦ ಹೆಕ್ಟೇರ್ ಭೂಮಿಗೆ ನೀರೊದಗಿಸುವ ಸಾಮರ್ಥ್ಯವನ್ನು ಹೊಂದಿದೆ.

. ಹೊಸಕೆರೆ

ಇದು ವಿಜಯನಗರ ಕಾಲದ ಕೆರೆಯಾಗಿದೆ. ಶಾಸನೋಕ್ತವಾಗಿರುವ ಈ ಕೆರೆಯು ಹಾಗೂ ಇದರ ಪರಿಸರವು ಗ್ರಾಮವೂ ಆಗಿದೆ. ಕ್ರಿ.ಶ. ೧೫೫೧ರ ವಿಜಯನಗರದ ಸದಾಶಿವರಾಯನು ಆಳುವಾಗ ಪಾಂಡ್ಯನಾಡಿನ ಉಚ್ಚಂಗಿ ವೇಂಠೆಗೆ ಸೇರಿದ ಬಿಳಿಚೇಡು ಸೀಮೆಯ ಹೊಸಕೆರೆಯನ್ನು ಸೇರಿದಂತೆ ೧೭ ಸರ್ವಮಾನ್ಯರ ಅಗ್ರಹಾರವಾಗಿ ಮಾಡಿದನು ಹಾಗೂ ಹೊಸಕೆರೆಯನ್ನು ‘ಕೃಷ್ಣಸಮುದ್ರ’ ಎಂಬುದಾಗಿ ಹೆಸರು ಬದಲಾಯಿಸಿದ್ದನ್ನು ಕಾಣಬಹುದು. ಇಲ್ಲಿನ ಕೆರೆಯು ೮೫ ಎಂ.ಸಿ.ಎಫ್.ಟಿ. ನೀರಿನ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ೮೮೭೪೦ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುತ್ತದೆ.

. ಬಿದರಕೆರೆ

ಬಿದರಕೆರೆಯು ಈಗಾಗಲೇ ತಿಳಿದಂತೆ ಶಾಸನೋಕ್ತ ಗ್ರಾಮ ಹಾಗೂ ಇಲ್ಲಿನ ಕೆರೆಯು ಪ್ರಾಚೀನವಾದದ್ದು. ಕ್ರಿ.ಶ. ೧೫೨೬ರ ಕೃಷ್ಣ ದೇವರಾಯನ ಶಾಸನವನ್ನೊಳಗೊಂಡಂತೆ ವಿಜಯನಗರ ಕಾಲದ ಹಲವು ಶಾಸನಗಳಲ್ಲಿ ಈ ಗ್ರಾಮದ ಹೆಸರು ಕಂಡುಬರುವುದು. ಕ್ರಿ.ಶ.೧೫೨೬ ಕೃಷ್ಣದೇವರಾಯನ ಕಾಲದಲ್ಲಿ ಇಲ್ಲಿ ಆಳುತ್ತಿದ್ದ ಸಾಮಂತದೊರೆಯು ಬ್ರಾಹ್ಮಣರ ಭೋಜನ ಹಾಗೂ ಅನ್ನಛತ್ರಕ್ಕಾಗಿ ಬಿದರಕೆರೆಯ ನಾಲ್ಕು ದಿಕ್ಕಿನ ಹೊಲವನ್ನು ತೋಟ ತುಡಿಕೆಯನ್ನು ದಾನ ನೀಡಲಾಗಿದೆ.[19] ಈ ಮಾಹಿತ ಬಿದರಕೆರೆಯು ವಿಜಯನಗರ ಕಾಲದ ಕೆರೆಯೆಂದು ಹೇಳುವಲ್ಲಿ ಸಹಾಯಕವಾಗಿದೆ.

. ಭರಮಸಮುದ್ರ ಕೆರೆ

ಪ್ರಸ್ತುತ ಮುದಕನಹಳ್ಳಿ ಎಂದು ಕರೆಯಲ್ಪಡುತ್ತಿರುವ ‘ಭರಮಸಮುದ್ರ’ ಎಂಬ ಹಳ್ಳಿಯ ಹಲವು ಶಿಲಾಶಾಸನಗಳಲ್ಲಿ ಉಲ್ಲೇಖಿತವಾದ ಒಂದು ಚಾರಿತ್ರಿಕ ಪರಿಸರ.[20] ಶಾಸನಗಳಲ್ಲಿ ಇದಕ್ಕೆ ಭರಮಸೋಮುದ್ರ ಹಾಗೂ ಭರಮಸಮುದ್ರ ಎಂಬ ಹೆಸರುಗಳು ಇವೆ. ಹೀಗೆ ಹೆಸರು ಬರಲು ಕಾರಣ ಚಿತ್ರದುರ್ಗದ ಪಾಳೆಯಗಾರರಲ್ಲೆ ಪ್ರಬಲ ನಾಯಕನಾದ ಭರಮಣ್ಣ ನಾಯಕನಿಂದ ಎಂದು ಹೇಳಬಹುದು. ಅವನ ಕಾಲದಲ್ಲಿ ಇಡೀ ಸಂಸ್ಥಾನದಲ್ಲಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದನು. ಅವುಗಳಲ್ಲಿ ಕೆರೆಗಳ ನಿರ್ಮಾಣ ಹಾಗೂ ನೀರಾವರಿಗೆ ನೀಡಿದ ಉತ್ತೇಜನ ಬಹು ಮೆವ್ವತಕ್ಕದ್ದು. ಇವನು ಸಂಸ್ಥಾನದಾದ್ಯಂತ ಸುಮಾರು ೨೦ ಕೆರೆಗಳನ್ನು ನಿರ್ಮಿಸಿದನೆಂದು ಪಾಳೆಯಗಾರರ ಚಾರಿತ್ರಿಕ ದಾಖಲೆಗಳಲ್ಲಿ ಹೇಳಿದೆ.[21] ಅವುಗಳಲ್ಲಿ ಜಗಲೂರು ಸೀಮೆಯ ಭರಮಸಮುದ್ರ ಕೆರೆಯ ಮುಖ್ಯವಾದುದು.[22] ಈ ಕೆರೆಯ ನಿರ್ಮಾಣದಿಂದಾಗಿ ಈ ಪ್ರದೇಶಕ್ಕೆ ಭರಮಸಮುದ್ರ ಎಂಬ ಹೆಸರು ಬಂದಿದೆ.[23] ಕೆರೆಯ ಏರಿಯು ಅಂಕುಡೊಂಕಾಗಿ ನಿರ್ಮಾಣಗೊಂಡಿದ್ದು, ಆ ಏರಿಗೆ ದೊಡ್ಡ ಹಾಗೂ ಚಿಕ್ಕಗಾತ್ರದ ಒರಟು ದಂಡುಶಿಲೆಯ ಬಳಸಿ ನಿರ್ಮಿಸಿದ್ದಾರೆ. ಈ ಕೆರೆಯು ೧೨೩ ಎಂ.ಸಿ.ಎಫ್.ಟಿ.ಯಷ್ಟು ನೀರು ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ ಹಾಗೂ ೧೦೨.೮೩ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಪಾಳೆಯಗಾರರ ಕಾಲದಲ್ಲಿ ಮೇಲೆ ಹೇಳಿದಷ್ಟೇ ಅಲ್ಲದೇ ಇನ್ನೂ ಹೆಚ್ಚು ಪ್ರಮಾಣದಲ್ಲಿ ಕೆರೆಗಳ ನಿರ್ಮಾಣಗೊಂಡಿವೆ. ಕಣಕುಪ್ಪೆ ಎಂಬಲ್ಲಿ ಕಾಟನಾಯಕ ಎಂಬುವವನು ಕಟ್ಟಿಸಿದ ಕೆರೆಯು ಕಾಟನಾಯ್ಕನ ಕೆರೆ ಎಂದೇ ಪ್ರಸಿದ್ಧಿ ಪಡೆದಿದೆ.[24] ಪಾಳೆಯಗಾರರ ಕಾಲದಲ್ಲಿ ಕೆರೆಗಳ ಕಾಮಗಾರಿ ಎಷ್ಟೊಂದು ಕೌಶಲ್ಯಪೂರ್ಣವಾಗಿತ್ತೆಂದರೆ, ಕೆರೆಯಿಂದ ತೂಬಿನ ಮೂಲಕ ಕಾಲುವೆಗೆ ನೀರು ಹಾಯಿಸುವುದು, ಗದ್ದೆಭೂಮಿಗಳಿಗೆ ಆ ನೀರು ಸರಿಯಾಗಿ ವಿತರಣೆಯಾಗುವಂತೆ ನೋಡಿಕೊಳ್ಳುವುದು ಈ ಕೆಲಸಕ್ಕಾಗಿಯೇ ನೀರಗಂಟಿ ಎಂಬ ಸ್ಥಾನವೊಂದನ್ನು ಕಲ್ಪಿಸಲಾಗಿತ್ತಲ್ಲದೆ, ಗ್ರಾಮಾಡಳಿತದ ವ್ಯವಸ್ಥೆಯಲ್ಲಿ ೧೨ ಜನ ಕೈವಾಡದವರು (ಆಯಗಾರರು) ಎಂದು ಕರೆಯಲಾಗುತ್ತಿದ್ದ ಪ್ರಮುಖರಲ್ಲಿ ನೀರಗಂಟಿಯು ಒಬ್ಬನಾಗಿರುತ್ತಿದ್ದ.

ಜಗಲೂರು ಪರಿಸರದಲ್ಲಿ ಕೇವಲ ಕೆರೆಗಳಲ್ಲದೆ ಪಾಳೆಯಗಾರರ ಕಾಲದಲ್ಲಿ ಇಲ್ಲಿ ನಿರ್ಮಾಣಗೊಂಡ ಹೊಂಡಗಳು, ಪುಷ್ಕರಣಿಗಳು, ಬಾವಿಗಳು ಪ್ರಾಚೀನ ಕಾಲದ ಜಲ ನಿರ್ವಹಣೆಯ ಕುರುಹುಗಳಾಗಿ ಕಂಡುಬರುತ್ತವೆ. ಅವುಗಳಲ್ಲಿ ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಚಿತ್ರದುರ್ಗ ಪಾಳೆಯಗಾರನಾದ ಬಿಚ್ಚುಗತ್ತಿ ಭರಮಣ್ಣ ನಾಯಕನ ೧೬೯೧ – ೧೭೨೧ ಕಾಲದಲ್ಲಿ ದಳವಾಯಿ ಮುದ್ದಣ್ಣನ ನೇತೃತ್ವದಲ್ಲಿ ಕಟ್ಟಿದ ಕೊಣಚಗಲ್ ರಂಗನಾಥಸ್ವಾಮಿ ಬೆಟ್ಟದಲ್ಲಿರುವ ಹೊಂಡವು ದಳವಾಯಿ ಮುದ್ದಣ್ಣನ ಹೊಂಡವೆಂದು ಪ್ರಸಿದ್ಧಿ ಪಡೆದಿದೆ. ನಕ್ಷತ್ರಾಕಾರದ ರಚನೆಯನ್ನು ಹೊಂದಿರುವ ಈ ಹೊಂಡವು ೧೫೦ ಅಡಿಗಳ ಆಳ, ೨೦೦ ಅಡಿಗಳ ವಿಸ್ತೀರ್ಣ ೬೦ ಮೆಟ್ಟಿಲುಗಳನ್ನು ಹೊಂದಿದ್ದು ತುಂಬಾ ಕಲಾತ್ಮಕವಾಗಿದೆ. ಕೊಣವಗಲ್ಲು ರಂಗನಾಥಸ್ವಾಮಿ ಬೆಟ್ಟದಲ್ಲಿರುವ ಇದನ್ನು ಧಾರ್ಮಿಕ ಕ್ರಿಯಾ ವಿಧಿಗಳಿಗೆ ಬರುವ ಭಕ್ತಾಧಿಗಳು, ಯಾತ್ರಾರ್ಥಿಗಳ ನೀರಿನ ನಿರ್ವಹಣೆಗಾಗಿ ಪಾಳೆಯಗಾರರು ನಿರ್ಮಿಸಿರಬಹುದು. ಅದೇ ರೀತಿ ಕಣಕುಪ್ಪೆ ಕೋಟೆ ಪರಿಸರದಲ್ಲೂ ಸುಮಾರು ೩ ರಿಂದ ೪ ಹೊಂಡಗಳಿವೆ. ಅವುಗಳನ್ನು ರಕ್ಷಣಾ ಸಂಬಂಧಿ ಜಲನಿರ್ವಹಣೆಗಾಗಿ ಬಳಸಿರುವ ಸಾಧ್ಯತೆಗಳು ಹೆಚ್ಚು ಇವೆ. ಹೀಗೆ ಜಗಲೂರು ಪರಿಸರದಾದ್ಯಂತ ಪಾಳೆಯಗಾರರ ಕಾಲದಲ್ಲಿ ನಿರ್ಮಾಣಗೊಂಡ ಹೊಂಡಗಳು, ಪುಷ್ಕರಣಿಗಳು, ಬಾವಿಗಳು ಅವರ ಕಾಲದ ಜಲ ನಿರ್ವಹಣಾ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತವೆ.

. ಸಂಗೇನಹಳ್ಳಿ ಕೆರೆ

ಜನಗಿಹಳ್ಳ : ಚಿತ್ರದುರ್ಗ ತಾಲೂಕು ಹಾಗೂ ಜಗಲೂರು ತಾಲೂಕಿನ ಮೂಲಕ ಹರಿಯುವ ಜನಗಿಹಳ್ಳವು ಸಾಂಸ್ಕೃತಿಕವಾಗಿ ಮಹತ್ವ ಪಡೆದಿದೆ. ಇದನ್ನು ಹಗರಿ, ಚಿಕ್ಕಹಗರಿ, ಸಣ್ಣ ಹಗರಿ ಎಂದು ಕರೆಯುವುದುಂಟು. ಅಲ್ಲದೆ ಜನಗಿಹಳ್ಳವೆಂದೂ ಕರೆಯುವುದುಂಟು. ಜನಗಿ ಎಂದರೆ ನೀರು ಬಸಿಯುವುದು, ಜಿನುಗು, ಜೋಗು ಎಂಬ ಅರ್ಥಗಳನ್ನು ನೀಡಲಾಗಿದೆ.[25] ಈ ಜನಗಿಹಳ್ಳವು ಮೂಲತಃ ಚಿತ್ರದುರ್ಗದ ಪಶ್ಚಿಮ ಬೆಟ್ಟಗಳಲ್ಲಿ ಹುಟ್ಟಿ ಚಿತ್ರಳ್ಳಿಯಿಂದ ಹರಿದು ಕಾತ್ರಾಳು ಕೆರೆಯ ಮೂಲಕ ಹರಿದು ಸಂಗೇನಹಳ್ಳಿ ಕೆರೆಗೆ ತಲುಪುತ್ತದೆ. ತರುವಾಯ ಅಲ್ಲಿಂದ ಕಲ್ಲೇದೇವರಪುರ, ದೊಣ್ಣೆಹಳ್ಳಿ, ಚಿಕ್ಕಮಲ್ಲನಹೊಳೆಯ ಮೂಲಕ ಹರಿದು ಬ್ರಹ್ಮಗಿರಿ ಮೊದಲಾದ ಪ್ರಾಚೀನ ಎಡೆಯನ್ನು ದಾಟಿ ಆಂಧ್ರಪ್ರದೇಶದ ಗಡಿಭಾಗದಲ್ಲಿ ಹಗರಿಯನ್ನು ಸೇರಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಬಳಿ ತುಂಗಭದ್ರಾ ನದಿಯನ್ನು ಸೇರುತ್ತದೆ.[26] ಹೀಗೆ ಜನಗಿಹಳ್ಳ ಜಗಲೂರು ತಾಲೂಕಿನಲ್ಲಿ ಹರಿಯುವಾಗ ಅದಕ್ಕೆ ಅಡ್ಡಲಾಗಿ ಹಲವಾರು ಕೆರೆಕಟ್ಟೆಗಳನ್ನು ನಿರ್ಮಿಸಿರುವುದನ್ನು ಕಾಣಬಹುದು. ಅವುಗಳಲ್ಲಿ ಸಂಗೇನಹಳ್ಳಿ ಕೆರೆಯೂ ಒಂದು.

ಜನಗಿಹಳ್ಳ ಹರಿಯುವಾಗ ಅದಕ್ಕೆ ಅಡ್ಡಲಾಗಿ ನಿರ್ಮಿಸಿರುವ ಕೆರೆಗಳಲ್ಲಿ ಅತ್ಯಂತ ಪ್ರಮುಖವಾದದ್ದು ಸಂಗೇನಹಳ್ಳಿ ಕೆರೆ. ಜಗಲೂರಿನ ಶ್ರೀ ಮಹಮ್ಮದ್ ಇಮಾಮ್ ಸಾಹೇಬರಿಂದ ನಿರ್ಮಿಸಲ್ಪಟ್ಟಿತೆಂದು ಹೇಳುವ ಈ ಕೆರೆಯ ಪರಿಸರವು ಪ್ರಾಗೈತಿಹಾಸಿಕ ಕಾಲದಿಂದಲೂ ಮಹತ್ವ ಪಡೆದಿದೆ. ಈ ಭಾಗದಲ್ಲಿ ನೂತನ ಶಿಲಾಯುಗ ಹಾಗೂ ಶಾತವಾಹನ ಕಾಲದ ಹಲವು ಅವಶೇಷಗಳು ಬೆಳಕಿಗೆ ಬಂದಿದ್ದು, ಇದರಿಂದ ಪ್ರಾಕೃತಿಕವಾಗಿ ಹಳ್ಳ ಹರಿಯುವ ಈ ಪ್ರದೇಶದಲ್ಲಿ ನೂತನ ಶಿಲಾಯುಗ, ಬೃಹತ್ ಶಿಲಾಯುಗ[27] ಶಾತವಾಹನ,[28] ಕಾಲದಲ್ಲಿ ಮಾನವನು ಜಲ ಬಳಕೆಗಾಗಿ ಕೆರೆಕಟ್ಟೆಗಳನ್ನು ನಿರ್ಮಿಸಿಕೊಂಡು ನೀರಾವರಿ ಕಾರ್ಯಗಳನ್ನು ಮಾಡಿಕೊಂಡಿರುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತದೆ. ಈ ದೃಷ್ಟಿಯಿಂದ ಸಂಗೇನಹಳ್ಳಿ ಪರಿಸರವು ಅತ್ಯಂತ ಪ್ರಾಚಿನವಾದದ್ದು ಎಂದು ಹೇಳಬಹುದು. ಮತ್ತೊಂದು ವಿಶೇಷತೆಯೆಂದರೆ ಇದರ ನೀರು ನಿಲ್ಲುವ ಕ್ಷೇತ್ರ ಚಿತ್ರದುರ್ಗ ತಾಲೂಕಿನಲ್ಲಿದ್ದು ಅಚ್ಚುಕಟ್ಟು ಜಗಲೂರು ತಾಲೂಕಿನಲ್ಲಿದೆ. ಕೆರೆಯ ರಕ್ಷಣೆಯ ದೃಷ್ಟಿಯಿಂದ ಇದರ ಏರಿಯನ್ನು ಅಂಕುಡೊಂಕಾಗಿ ನಿರ್ಮಿಸಿದ್ದಾರೆ. ಏರಿಗೆ ಒರಟು ದುಂಡುಶಿಲೆ ಹಾಗೂ ಕೆಂಪು ಮಣ್ಣನ್ನು ಬಳಸಿ ನಿರ್ಮಿಸಿದ್ದಾರೆ. ಈ ಕೆರೆಗೆ ಕಾತ್ರಾಳ ಕೆರೆಯಿಂದ ಕೋಡಿ ಬಿದ್ದು ಹೆಚ್ಚಾಗಿ ಹರಿಬರುವ ನೀರು ಹಾಗೂ ಸುತ್ತಮುತ್ತಲಿನ ಪ್ರಾಕೃತಿಕವಾದ ಹಳ್ಳ, ಕೊಳ್ಳ, ಕಣಿವೆಗಳಿಂದ ಬರುವ ನೀರು ಬಹುಮುಖ್ಯ ಮೂಲವಾಗಿದೆ. ಕೆರೆಗೆ ಪ್ರಸ್ತುತ ಎರಡು ತೂಬುಗಳಿದ್ದು ಎಡನಾಲೆ, ಬಲನಾಲೆಗಳು ಸಮನಾಗಿ ೧೨ ಕಿ.ಮೀ. ಇವೆ. ಕೆರೆಯ ಏರಿಯು ೧೧ ಮೀ. ಎತ್ತರ ಹಾಗೂ ೧೩೪೧ ಮೀ. ಉದ್ದವನ್ನು ಹೊಂದಿದೆ. ಈ ಕೆರೆಯು ೩೮೯.೫೫ ಎಂ.ಸಿ.ಎಫ್.ಟಿ. ನೀರಿನ ಸಾಮರ್ಥ್ಯ ಹೊಂದಿದ್ದು, ನೀರಾವರಿ ಅಚ್ಚುಕಟ್ಟು ಒಟ್ಟು ೬೪೭ ಹೆಕ್ಟೇರ್ ಆಗಿದೆ. ಈ ರೀತಿ ಇರುವ ಸಂಗೇನಹಳ್ಳಿ ಕೆರೆಯು ಸಂಗೇನಹಳ್ಳಿಯ ಸುತ್ತಮುತ್ತಲ ರೈತರಿಗೆ ಜೀವನಾಧಾರವಾಗಿದೆ.

. ಗಡಿಮಾಕುಂಟೆ ಕೆರೆ

ಜಗಲೂರಿನ ಶ್ರೀ ಮಹಮ್ಮದ್ ಇಮಾಮ್ ಸಾಹೇಬರು ಜಗಲೂರಿನಲ್ಲಿ ನಿರ್ಮಿಸಿದ ಹಲವು ಕೆರೆಗಳಲ್ಲಿ ಗಡಿಮಾಕುಂಟೆ ಕೆರೆಯೂ ಒಂದು. ಇವರು ತಮ್ಮ ಕಾಲದಲ್ಲಿ ಗಡಿಮಾಕುಂಟೆ ಬಳಿ ಹರಿಯುವ ಹಳ್ಳಕ್ಕೆ ಒಡ್ಡು ಹಾಕಿ ಕೆರೆ ನಿರ್ಮಿಸಿದರು. ನೀರಾವರಿ ವಿಭಾಗದ ಮಾಹಿತಿಯ ಪ್ರಕಾರ ಈ ಕೆರೆಯನ್ನು ನಿರ್ಮಿಸಿದ ಕಾಲ ೧೯೨೯ ಎಂದು ಹೇಳಲಾಗಿದೆ. ಮಣ್ಣು ಮತ್ತು ಒರಟು ದುಂಡುಶಿಲೆಗಳಿಂದ ನಿರ್ಮಿಸಿರುವ ಈ ಕೆರೆಯು ೨೯೧.೦೦ ಎಂ.ಸಿ.ಎಫ್.ಟಿ. ನೀರಿನ ಸಾಮರ್ಥ್ಯವನ್ನು ಹೊಂದಿದೆ. ೧೩೫.೨೦ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುವ ಸಾಮರ್ಥ್ಯವನ್ನು ಈ ಕೆರೆಯು ಹೊಂದಿದೆ. ಈ ಕೆರೆಯ ಏರಿಯ ಮೇಲ್ಭಾಗವು ೨.೫೦ ಮೀಟರ್ ಅಗಲವಾಗಿದೆ. ಈ ಕೆರೆಯ ಕೋಡಿಯಿಂದ ೫೮೬೦ ಕೂಸೆಕ್ಸ್ ನೀರು ಹೋಗುವ ಪ್ರಮಾಣವಿದೆ.

. ತುಪ್ಪದಹಳ್ಳಿ ಕೆರೆ

ಈ ಕೆರೆಯನ್ನು ನಿರ್ಮಿಸಿದವರು ಜಗಲೂರು ಇಮಾಮ್ ಸಾಹೇಬರಾಗಿದ್ದಾರೆ. ೧೯೫೭ರಲ್ಲಿ ನಿರ್ಮಾಣಗೊಂಡಿದೆ. ಈ ಕೆರೆಯು ಜಗಲೂರು ತಾಲೂಕಿನ ಪ್ರಮುಖ ಕೆರೆಗಳಲ್ಲಿ ಒಂದು ೧೩೯೬ ಎಂ.ಸಿ.ಎಫ್.ಟಿ. ನೀರಿನ ಸಂಗ್ರಹಣ ಸಾಮರ್ಥ್ಯವಿರುವ ಮೇಲೆ ಹೇಳಿದ ಕೆರೆಗಳಿಗಿಂತ ದೊಡ್ಡ ಕೆರೆ ಎಂದು ಹೇಳಬಹುದು. ೫೬೦ ಹೆಕ್ಟೇರ್ ಭೂಮಿಗೆ ನೀರುಣಿಸುವ ಸಾಮರ್ಥ್ಯವನ್ನು ಈ ಕೆರೆ ಹೊಂದಿದೆ. ಆದರೆ ಈ ಕೆರೆಗೆ ಬರುವ ನೀರಿನ ಪ್ರಮಾಣ ಮೂಲದಲ್ಲಿ ಬಹಳ ಕಡಿಮೆ ಇದರಿಂದ ನೀರು ಹೆಚ್ಚು ಸಂಗ್ರಹವಾಗುತ್ತಿಲ್ಲ. ಇದನ್ನು ದುರಸ್ತಿಗೊಳಿಸಿ ಪುನರ್ ಬಳಸುವ ಅವಶ್ಯಕತೆ ಇದೆ.

. ಜಗಲೂರು ಕೆರೆ

ಜಗಲೂರು ಕೆರೆಯನ್ನು ಸಹ ಇಮಾಮ್ ಸಾಹೇಬರು ಕಟ್ಟಿಸಿದ್ದಾರೆ. ಇದು ಜಗಲೂರು ನಗರದ ಹೊರಭಾಗದಲ್ಲಿದೆ. ಎರಡು ತೂಬುಗಳಿದ್ದು ೧೧೯.೩೦ ಎಂ.ಸಿ.ಎಫ್.ಟಿ ನೀರಿನ ಸಾಮರ್ಥ್ಯ ಹೊಂದಿದೆ. ೧೧೨.೫೦ ಹೆಕ್ಟೇರ್ ನೀರುಣಿಸುವ ಸಾಮರ್ಥ್ಯ ಇರುವ ಈ ಕೆರೆಯು ಪ್ರಸ್ತುತ ಬಳಕೆಯಲಿಲ್ಲಾ. ಸಾಕಷ್ಟು ಹಾಳಾಗಿದ್ದು ತೂಬುಗಳು ಹಾಗೂ ನಾಲೆಗಳಲ್ಲಿ ಮಣ್ಣು ತುಂಬಿಕೊಂಡಿದೆ.

ಹೀಗೆ ಜಗಲೂರು ಪರಿಸರದಲ್ಲಿ ಮೇಲೆ ತಿಳಿಸಿದಂತಹ ಪ್ರಾಚಿನ ಕೆರೆಗಳೊಂದಿಗೆ ಚದುರಗೋಳ, ನಿಬಗೂರು, ಬಿಳಿಚೋಡು ಮುಂತಾದ ಕೆರೆಗಳು ಕಂಡುಬರುತ್ತವೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದು, ನೀರಿನ ಮೂಲದಲ್ಲಿ ಕಡಿಮೆಯಾಗಿರುವುದು, ಕೆರೆಕಟ್ಟೆಗಳ ದುರಸ್ಥೀಕರಣ ಮಾಡಿಸದೆ ಸಾಕಷ್ಟು ಹಾಳಾಗಿರುವುದು, ಅವುಗಳೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವುದು ಕೆರೆ ನೀರಾವರಿ ಕುಂಠಿತಗೊಳ್ಳಲು ಮುಖ್ಯ ಕಾರಣಗಳಾಗಿವೆ. ಈ ಎಲ್ಲ ಪ್ರಾಚೀನ ಕೆರೆಗಳನ್ನು ರಕ್ಷಿಸಿ ಅವುಗಳನ್ನು ದುರಸ್ಥಿಗೊಳಿಸಿದರೆ ಅವುಗಳಿಗೆ ಪುನಃ ಕಾಯಕಲ್ಪ ನೀಡಿದಂತಾಗುವುದು.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಕೊಟ್ರಯ್ಯ ಸಿ.ಟಿ.ಎಂ., ೨೦೦೧, ವಿಜಯನಗರ ಸಾಮ್ರಾಜ್ಯದ ನೀರಾವರಿ ವ್ಯವಸ್ಥೆ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೨

[2] ಚಿದಾನಂದಮೂರ್ತಿ ಎಂ. ೨೦೦೨, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಸ್ವಪ್ನ ಬುಕ್ ಹೌಸ್, ಪು. ೪೦೭ – ೪೦೮

[3] ಸೂರ್ಯನಾಥ ಕಾಮತ್ (ಸಂ)., ೧೯೮೪, ಕರ್ನಾಟಕ ರಾಜ್ಯ ಗ್ಯಾಸಟಿಯರ್ – ೧, ಪು. ೫೨೨

[4] ರಾಜಶೇಖರಪ್ಪ ಬಿ., ೨೦೦೨, ಚಿತ್ರದುರ್ಗ ಪ್ರದೇಶದ ಕೆರೆಗಳು; ನಿರ್ವಹಣೆಯ ಐತಿಹಾಸಿಕ ಅವಲೋಕನ, ಕೆರೆ ನೀರಾವರಿ   ನಿರ್ವಹಣೆ ಚಾರಿತ್ರಿಕ ಅಧ್ಯಯನ, ರಾಜಾರಾಮ ಹೆಗಡೆ (ಸಂ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೧೦೮.

[5] ದ್ಯಾಮನಗೌಡ್ರ ವಿ.ಕೆ., ಕೆರೆ – ಕಟ್ಟೆ, ೨೦೦೮, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ, ಹಾನಗಲ್ಲು, ವಾಸುದೇವ ಬಡಿಗೇರ           (ಸಂ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು. ೮೦

[6] ಎಪಿಗ್ರಾಪಿಯ ಕರ್ನಾಟಕ ಸಂ. ೧೧, ಜಗಲೂರು – ೮

[7] ಅದೇ ಸಂಖ್ಯೆ – ೧೦

[8] ಅದೇ

[9] ಅದೇ

[10] ಅದೇ

[11] ಅದೇ

[12] ಅದೇ, ಸಂಖ್ಯೆ ೨೨

[13] ಅದೇ, ಸಂಖ್ಯೆ ೨೪

[14] ಅದೇ, ಸಂಕ್ಯೆ ೪೮

[15] ರಾಜಶೇಖರಪ್ಪ ಬಿ., ೨೦೦೧, ಇತಿಹಾಸ ಕಥನ, ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂಗಳೂರು, ಪು. ೧೩೦ – ೧೩೨

[16] ಗಿರಿಜಾ ಟಿ., ೨೦೦೧, ದಾವಣಗೆರೆ ಇದು ನಮ್ಮ ಜಿಲ್ಲೆ, ನಿಹಾರಿಕಾ ಪ್ರಕಾಶನ, ದಾವಣಗೆರೆ, ಪು. ೬೧೮

[17] ರಾಜಶೇಖರಪ್ಪ ಬಿ., ಪೂರ್ವೋಕ್ತ, ೨೦೦೧, ಪು. ೧೩೦

[18] ದಾವಣೆಗೆರೆಯ ನೀರಾವರಿ ವಿಭಾಗದ ಮಾಹಿತಿ

[19] ಎ.ಕ., ಸಂ.೧೧, ಜಗಲೂರು – ೪೮

[20] ಅದೇ, ಸಂಖ್ಯೆ ೩೬

[21] ರಾಜಶೇಖರಪ್ಪ ಬಿ., ಪೂರ್ವೋಕ್ತ, ೨೦೦೨, ಪು. ೧೧೭

[22] ಅದೇ,

[23] ಗಿರಿಜಾ ಟಿ., ಪೂರ್ವೋಕ್ತ, ೨೦೦೧, ಪು. ೬೪೮

[24] ಅದೇ, ಪು. ೬೨೫

[25] ವಿರೂಪಾಕ್ಷಿ ಪೂಜಾರಹಳ್ಳಿ, ಚಿನ್ನಹಗರಿ ನದಿ ಪರಿಸರದ ಪ್ರಾಚ್ಯವಶೇಷಗಳು; ಒಂದು ಶೋಧನೆ, ಇತಿಹಾಸ ದರ್ಶನ, ಸಂ.,ಪು.            ೨೦

[26] ಅದೇ,

[27] ಗೋಪಾಲ್. ಆರ್. (ಸಂ), ಚಿತ್ರದುರ್ಗ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ, ೨೦೦೫, ಪು. ೨೪

[28] ವಿರೂಪಾಕ್ಷಿ ಪೂಜಾರಹಳ್ಳಿ, ಪೂರ್ವೋಕ್ತ, ಪು. ೨೧.

(ಜಗಲೂರು ತಾಲೂಕಿನಲ್ಲಿ ಕೆರೆ ನೀರಾವರಿ ಕ್ಷೇತ್ರಕಾರ್ಯದಲ್ಲಿ ಸಹಕರಿಸಿದ ಮಧುಸೂದನ್ ಹಾಗೂ ಚಿತ್ರದುರ್ಗ ನೀರಾವರಿ ಇಲಾಖೆಯ ಮಂಜುನಾಥ್ ಅವರಿಗೆ ಧನ್ಯವಾದಗಳು)