ಅಸಗೋಡು : ಚಾರಿತ್ರಿಕ ಹಿನ್ನೆಲೆ

‘ಅಸಗ’ ಎಂದರೆ ಪಾಳಿ ಭಾಷೆಯಲ್ಲಿ ಅಶೋಕ ಎಂದರ್ಥ, (ಗೋಡು ಎಂದರೆ ಪಟ್ಟಣ ಗೋಡು ಕೆರೆ, ಬಾವಿ, ಕುಂಟೆ, ಜೇಡು ಮಣ್ಣು, ಇತ್ಯಾದಿ ಅರ್ಥಗಳಿವೆ) ಅಸಗೋಡು – ಅಶೋಕ ಪಟ್ಟಣ, ಅಂದರೆ ಅಶೋಕನ ಹೆಸರಿನಲ್ಲಿ ಕಟ್ಟಿದ ಊರು. (ಬಿಳಿಚೋಡಿನ ಒಂದು ಕೈಬರಹದ ಗ್ರಂಥದಲ್ಲಿ ಅಶೋಕ ಚಕ್ರವರ್ತಿ ಕೆಲಕಾಲ ಈ ಭಾಗದಲ್ಲಿ ತಂಗಿದ್ದನೆಂದು ಉಲ್ಲೇಖಿಸಲಾಗಿದೆ ಎಂದು ಶ್ರೀ ಹು.ಶ್ರೀ ಜೋಯಿಸರು ತಿಳಿಸಿದ್ದಾರೆ) ಇದು ಪ್ರಾಚೀನ ಪುಣ್ಯಕ್ಷೇತ್ರ, ಅಲ್ಲದೆ ಶಿವಪುರ, ವೀರಭೂಮಿ, ಐತಿಹಾಸಿಕ ಸ್ಥಳ, ಅಗ್ರಹಾರ ಹಾಗೂ ವಿದ್ಯಾಕೇಂದ್ರವೂ ಹೌದು.

ಮತ್ತೊಂದು ಐತಿಹ್ಯದ ಪ್ರಕಾರ ಈ ಗ್ರಾಮದ ಪೂರ್ವ ದಿಕ್ಕಿನಲ್ಲಿ ಶಂಭುಲಿಂಗೇಶ್ವರ ಎಂಬ ಪುರಾತನ ಕಾಲಕ್ಕೆ ಸೇರಿದ ದೇವಾಲಯವಿದೆ. “ಹಿಂದೊಮ್ಮೆ ಬೀದಿಕೆಯವರು ಎತ್ತುಗಳ ಮೇಲೆ ಮಾಲನ್ನು ಏರಿಕೊಂಡು ಬಂದು ಈ ಊರಲ್ಲಿ ತಂಗಿ ಶಂಭುಲಿಂಗನ ಉದ್ಭವ ಮೂರ್ತಿಯನ್ನೇ ಒಲೆಗುಂಡನ್ನಾಗಿ ಮಾಡಿಕೊಂಡು ಅಡಿಗೆ ಮಾಡಿದ್ದರಿಂದ ಅವರ ಎತ್ತುಗಳ ಕೋಡು ಉದುರಿ ಹೋದವೆಂದು, ಆಮೇಲೆ ಬೀಡಿಕೆಯವರು ತಮ್ಮ ತಪ್ಪನ್ನು ತಿದ್ದಿಕೊಂಡು ಮತ್ತೊಮ್ಮೆ ಶಂಭುಲಿಂಗಮೂರ್ತಿಗೆ ಪೂಜೆ ಮಾಡಿದ್ದರಿಂದ ತಮ್ಮ ಎತ್ತುಗಳಿಗೆ ಅಸಕೋಡು ಅಥವಾ ಹೊಸಕೋಡುಗಳು ಬಂದವೆಂದೂ, ಆ ಕಾರಣದಿಂದಲೇ ಈ ಊರಿಗೆ ಹೊಸ ಅಥವಾ ಅಸಕೋಡು ಎಂಬ ಹೆಸರು ಬಂದಿದೆ. ಕಾಲಕ್ರಮೇಣದಲ್ಲಿ ಹೊಸಕೋಡು ‘ಅಸಗೋಡು’ ಎಂದು ರೂಪಾಂತರಗೊಂಡಿತು. ಅಲ್ಲದೆ ಇಲ್ಲಿ ಆಳಿದ ‘ಅಸಗ’ ರಾಜನಿಂದಲೂ ಈ ಹೆಸರು ಬಂತೆಂದು ಮತ್ತೆ ಕೆಲವರ ಅಭಿಪ್ರಾಯವಾಗಿದೆ. ಇನ್ನೊಂದು ಅಭಿಪ್ರಾಯದಂತೆ ಅಸಗೋಡಪ್ಪ ಎಂಬ ಹೆಸರಿನ ದೇವಾಲಯದಿಂದ ಈ ಹೆಸರು ಬಂದಿರುವ ಸಾಧ್ಯತೆಯಿದೆ. ಶಂಭುಲಿಂಗ ದೇವಾಲಯದ ಮುಂದಿನ ಕೆರೆ ತೂಬಿನ ಬಳಿ ಕ್ರಿ.ಶ. ೧೦೧೦ಕ್ಕೆ ಸೇರಿದ ವೀರಗಲ್ಲು ಶಾಸನ ತಿಳಿಸುವಂತೆ ಈ ಗ್ರಾಮದ ಗೌಡ ಅಸಗ ಕಾಡಚ್ಚನ ಮಗ ಕಾಡವಾಸನೆಂಬುವನು ಕಿತ್ತೂರು ಗ್ರಾಮದವರಿಗೆ ಸೇರಿದ ಗೋವುಗಳನ್ನು ಕಳ್ಳರು ಕದ್ದೊಯ್ಯುತ್ತಿರುವಾಗ ಅವರೊಡನೆ ಕಿತ್ತೂರಿನ ಬಳಿ ಕಾದಾಡಿ ಗೋವುಗಳನ್ನು ಬಿದಿಸಿ ತರುತ್ತಾನೆ. ಆದರೆ ಕಾದಾಡುವಾಗ ಎದೆಯ ಮೇಲಾದ ವ್ರಣ (ಗಾಯ)ಗಳಿಂದ ನರಳಿ ಸಾಯುತ್ತಾನೆ. ಅವನ ಕೀರ್ತಿ ಸಾರುವ ವೀರಗಲ್ಲೇ ಇದು. ಈ ಶಾಸನದ ಕೆಳಭಾಗದಲ್ಲಿ ಗೋವುಗಳು ನಿಂತಿರುವ ಚಿತ್ರಣ ಪಕ್ಕದಲ್ಲಿ ಕಾದಾಡುವುದು, ಮಧ್ಯದಲ್ಲಿ ಪುಷ್ಪಕ ವಿಮಾನದಲ್ಲಿ ಕರೆದೊಯ್ಯುವುದು, ಮೇಲೆ ಕೈಲಾಸದಲ್ಲಿ ಧ್ಯಾನನಿರತ ವೀರ, ಮೇಲ್ಭಾಗದಲ್ಲಿ ಸೂರ್ಯಚಂದ್ರರ ಚಿತ್ರಣಗಳಿವೆ. ಈ ಅಸಗ ಕಾಡಚ್ಚನ ಹೆಸರಿನಿಮ್ದಲೂ ಈ ಅಸಗೋಡು ಎಂಬ ಹೆಸರು ಬರುವ ಸಾಧ್ಯತೆ ಇದೆ.

ಕ್ರಿ.ಶ. ೭೫೪ರ ಇಲ್ಲಿನ ಶಿಲಾಶಾಸನದಿಂದ ‘ಕಾಳಾಮುಖ ಸ್ಥಾನಂ ನೈಷ್ಠಿಕ ವೇದಿಕರ್ತಾರ ಮಠಂ’ ಎಮ್ದು ಈ ಗ್ರಾಮವನ್ನು ಉಲ್ಲೇಖಿಸಲಾಗಿದೆ. ಇದಕ್ಕೆ ಕಾರಣ ಇಲ್ಲಿಯ ಸ್ವಯಂಭು ಕಲಿದೇವರ (ಶ್ರೀ ಶಂಭುಲಿಂಗೇಶ್ವರ) ಗುಡಿಯನ್ನು ರವುಡಿಗ ಮಬ್ಬೋಜನ ಮಗ ಅಬ್ಯೋಜನು ಕಟ್ಟಿಸಿದನು. ಇದಕ್ಕೂ ಮುಂಚೆ ಸ್ವಯಂಭುಮೂರ್ತಿ ಉದ್ಭವವಾಗಿದ್ದು ಚಿಕ್ಕಗುಡಿಯು ಇದ್ದಿರಬಹುದು. ಕ್ರಿ.ಶ. ೧೦೫೪ರಲ್ಲಿ ಈಶ್ವರ ದೇವಾಲಯವನ್ನು ವಿಸ್ತಾರವಾಗಿ ಕಟ್ಟಿಸಲಾಯಿತೆಂದು ತಿಳಿದುಬರುತ್ತದೆ. ಇಲ್ಲಿ ಭುವನೈಕ್ಯ ಕರ್ತಾರನೆಂಬ ಘನ ವಿದ್ಯಾಪಂಡಿತನು ಈ ದೇವಾಲಯದಲ್ಲಿ ವಿದ್ಯಾಮಂದಿರ ಕಟ್ಟಿಸಿದ. ಈ ತಪಸ್ವಿಯ ಕೀರ್ತಿಯನ್ನು ಕೇಳಿದ ತಪೋಧನರು ವಿದ್ಯಾದಾನ ಮಾಡಲು ಇಲ್ಲಿಯೇ ನೆಲೆಸಿದರು. ವಿದ್ಯಾರ್ಥಿಗಳು ವಿದ್ಯೆಗಾಗಿ ಇಲ್ಲಿಗೆ ಬಂದು ನಿಂತರು. ಆದ್ದರಿಂದಲೇ ವೇದಿ ಕರ್ತಾರಮಠವೆಂದು ಪ್ರಖ್ಯಾತವಾಯಿತು.

ಕಲ್ಯಾಣದ ರಾಜ ಒಂದನೇ ಸೋಮೇಶ್ವರನ (ಎ.ಕ.೧೧, ಶಾ.ಸಂ.೧೦, ಪುಟ ೨೨೫) ಅಧೀನ ಪಲ್ಲವ ನರಸಿಂಗ ದೇವರು ಕೋಗಳಿ ೨೦೦, ಕದಂಬಳಿಗೆ ೧೦೦೦, ಬಲ್ಲಕುಂಡ ೩೦೦ ಆಳ್ವಿಕೆ ಗೈಯತ್ತಿರುವಾಗ ಇವರ ಪುತ್ರ ಬೋರಯ್ಯನೊಂದಿಕಗೆ ಹುಚ್ಚಂಗಿ ಪ್ರಾಂತ್ಯದ ಮಹಾಮಂಡಳೇಶ್ವರ ಆಳುತ್ತಿದ್ದ. ಕದಂಬಳಿಗೆ ೧೦೦೦ ನಾಡಿನ ಮನ್ನೇಯನಾಗಿದ್ದ ಸಾಮಂತ ನಾಗತಿಯರಸನೆನ್ನುವನು ಈ ಸ್ವಯಂಭು ಕಲಿದೇವರ ಕಾರ್ಯಗಳು ಸುಲಲಿತವಾಗಿ ಸಾಗಲು ಹಾಗೂ ವಿದ್ಯಾರ್ಥಿ ಮತ್ತು ಗುರುಗಳಿಗೆ ಸುಖ ವಸತಿ ಮತ್ತು ಆಹಾರಕ್ಕಾಗಿ ಈ ಗ್ರಾಮದ ಪಶ್ಚಿಮದಲ್ಲಿರುವ ‘ಮತಿಗಟ್ಟ’ ಗ್ರಾಮವನ್ನು ದತ್ತಿಬಿಟ್ಟಿದ್ದಾನೆ.

ಚಾಲುಕ್ಯ ವಿಕ್ರಮನ ಕಾಲದ ೩೫ನೇ ಸಂವತ್ಸರ (ಕ್ರಿ.ಶ. ೧೧೧೦) ಪುಷ್ಯ ಅಮವಾಸ್ಯೆ ಸೋಮವಾರ ಉತ್ತರಾಯಣ ಸಂಕ್ರಾಂತಿಯಲ್ಲಿ ಹೆಗ್ಗಡೆ ಹೆಮ್ಮಶೆಟ್ಟಿ ಮತ್ತು ಸಾಮಂತ ಮಲ್ಲರಸರು ಕದಂಬಳಿಗೆ ೧೦೦೦ ಮತ್ತು ನೊಳಂಬವಾಡಿಗೆ ಸೇರಿದ ಊರಿನ ಸುಂಕದ ಉತ್ಪನ್ನದ ೧/೧೦ ಭಾಗವನ್ನು ಈ ದೇವಾಲಯಕ್ಕೆಂದು ಕರ್ತಾರ ಪಂಡಿತರ ದೇವರ ಶಿಷ್ಯ, ವಾದಿ ಪ್ರಳಯ ಕಾಲಭೈರವರಿಗೆ ದಾನ ನೀಡಿದರು. ಇದರಿಂದ ಅಸಗೋಡು ಪ್ರಾಂತ್ಯವನ್ನು ಚಾಲುಕ್ಯರು ಆಳುತ್ತಿದ್ದರೆಂದು ಇವರಲ್ಲಿ ಚಾಲುಕ್ಯ ರಾಜಕುಮಾರನಾದ ದಾಸವರ್ಮನ ಮಗ ಬನೆಯತನನನ್ನು ಶಾಸನ ಉಲ್ಲೇಖಿಸಿದೆ. (ಎ.ಕ. ೧೧, ಪುಟ ೨೨೩)

ಕ್ರಿ.ಶ. ೧೧೦೮ರಲ್ಲಿ ೬ನೇ ವಿಕ್ರಮಾದಿತ್ಯನ ಅಧೀನನಾಗಿದ್ದ ರಾಜಮಯ್ಯ ನಾಯಕನು ಕದಂಬಳಿಗೆ ೧೦೦೦, ಕೋಗಳಿ ೫೦೦ ನಾಡನ್ನು ಆಳುತ್ತಿದ್ದನು. ಈತನು ಭುವನ ತ್ರೈಲೋಕ ಕರ್ತಾರ ಪಂಡಿತರು ಮತ್ತು ಕಲಿದೇವರಿಗೆ ದಾನದತ್ತಿ ನೀಡಿದುದು ತಿಳಿದುಬರುತ್ತದೆ. (ಎ.ಕ. ೧೧, ಸಂಖ್ಯೆ ೧೧, ಸಂ.೧೨, ಪು. ೨೨೬ – ೨೨೭)

ಈ ಮಠಕ್ಕೆ ಕ್ರಿ.ಶ. ೧೧೦೮ ಮತ್ತು ೧೧೧೧ರಲ್ಲಿಯೂ ಸಾಮಂತರೂ, ಶ್ರೀಮಂತರು ಹೇರಳವಾಗಿ ದತ್ತಿಗಳನ್ನು ಬಿಟ್ಟರು. ಇದು “ಕಾಳಮುಖ ಸ್ಥಾನಂ ನೈಷ್ಟಿಕ ವೇದಿಕರ್ತಾರ ಮಠಂ” ಎಂದಿದೆಯೆಷ್ಟೆ. ಕಾಳಾಮುಖರು ನಿಷ್ಟಾವಂತರಾದ ಶೈವರು. ಆದುದರಿಂದ ಲಿಂಗವಂತಧರ್ಮದ ಇತಿಹಾಸಕ್ಕೆ ನಿಕಟವಾದ ಸಂಬಂಧವಿದೆ. ಆದರೆ ಕಾಳಾಮುಖರ ಮಠಗಳು ಲಿಂಗವಂತರವಾಗಿ ಹೇಗೆ ಮಾರ್ಪಟ್ಟವೆಂಬ ಪ್ರಶ್ನೆಯನ್ನು ಎಸ್.ಎಸ್. ಮಾಳವಾಡರು ಎತ್ತಿರುವರು. (ಶ್ರೀ ಹು.ಶ್ರೀ.ಜೋ. ಸಂ.ಲೇಖನಗಳು)

ಅಸಗೋಡಿನ ಸ್ವಯಂಭು ಕಲಿದೇವ ಎಂಬ ಹೆಸರಿಗೆ ಬದಲಾಗಿ ಶಂಭುಸಿದ್ದೇಶ್ವರ ಎಂಬ ಹೆಸರು ಪ್ರತೀತಿಯಾಗಿರುವುದನ್ನು ಗಮನಿಸಿದರೆ ಮರುಳಸಿದ್ಧರ ಪ್ರಭಾವ ಈ ದೇವಾಲಯದ ಮೇಲೆ ಬೀರಿದೆ ಎಂಬುದರಲ್ಲಿ ಸಂದೇಹವಿಲ್ಲ. ಘನಪಂಡಿತನಾದ ಮರುಳಸಿದ್ಧನು ನೈಷ್ಟಿಕ ಬ್ರಹ್ಮಾಚಾರಿಗಳ ಮಠಕ್ಕೆ ಬಹುಶಃ ಸ್ಥಾನಾಪತಿಯಾಗಿದ್ದು ಮಠವನ್ನು ಸುವ್ಯವಸ್ಥಿತಗೊಳಿಸಿರಬೇಕೆಂದು ಭಾಸವಾಗುತ್ತದೆ. ಶೈವರು – ಕಾಳಾಮುಖರು ಮರುಳಸಿದ್ಧರ ಅನುಯಾಯಿಗಳಾದರು. ಈ ದೇವಾಲಯದಲ್ಲಿ ಇಂದಿಗೂ ವೀರಶೈವ ಪೂಜಾರಿಗಳಿರುವುದೇ ಇದಕ್ಕೆ ದೃಷ್ಟಾಂತವಾಗಿದೆ. ಈ ಮಠದಿಂದ ಅಸಗೋಡು ಪುರದೊಳೆಸರಿನಿಂದ ಮರುಳಸಿದ್ದೇಶ್ವರನು ವಸುಮತಿಗೆ ಹೆಸರು ಪಡೆದನು.

೧೯೯೩ರ ಜಗಲೂರಿನಲ್ಲಿ ಜರುಗಿದ ತರಳುಬಾಳು ಹುಣ್ಣಿಮೆಯ ಸಂಚಿಕೆಯಲ್ಲಿ ಶ್ರೀಪಂಡಿತಾರಾಧ್ಯರ ‘ಜಗಲೂರು ತಾಲೂಕಿನ ಮರಳು ಸಿದ್ದೇಶ್ವರ ನೆಲೆಗಳು’ ಎಂಬ ಲೇಖನ ಗಮನಿಸಿದಾಗ ಮರುಳುಸಿದ್ಧನ ಶಿಷ್ಯರಾದ ಈ ಮೂರುಜನ ಶಿಷ್ಯರು ೧೨ನೇ ಶತಮಾನದಲ್ಲಿ ಕೊಲ್ಲಾಪುರದ ಮಾಯಾದೇವಿ ಬಳಿ ಇದ್ದವರು. ಮರುಳಸಿದ್ಧರು ಮಾಯಾದೇವಿಯನ್ನು ವಾದದಲ್ಲಿ ಸೋಲಿಸಿದ ಮೇಲೆ ಮರುಳಸಿದ್ಧರ ಕಡೆಗೆ ಈ ಶಿಷ್ಯರು ಬರುತ್ತಾರೆ. ಜಟ್ಟಿಗ, ಭೈರವ, ಹನುಮ ಇವರ ಹೆಸರಿನ ಗುಂಡುಕಲ್ಲುಗಳು ಇದೇ ಗ್ರಾಮದ ಮಧ್ಯಭಾಗದಲ್ಲಿದ್ದು, ಸ್ಥಳೀಯ ಜನರು ಅವುಗಳನ್ನು ಬ್ರಹ್ಮದೇವರೆಂದೇ ಭಾವಿಸಿದ್ದಾರೆ. ಆದರೆ ಶ್ರೀ ಪಂಡಿತರಾಧ್ಯರು, ಮರುಳಸಿದ್ಧರು ಭೇಟಿನೀಡಿದ ಸ್ಥಳಗಳಲ್ಲಿ ಇವರ ಶಿಷ್ಯರಾದ ಜಟ್ಟಿಗ, ಭೈರವ, ಹನುಮರ ಕುರುಹುಗಳಿರುವುದು ಸಹಜವಾದ ಅಂಶ. ಆದ್ದರಿಂದ ಮರುಳಸಿದ್ಧರು ಇಲ್ಲಿಗೆ ಭೇಟಿಕೊಟ್ಟಿರುವ ಹಿನ್ನೆಲೆಯಲ್ಲಿ ಅವರ ಪ್ರಭಾವ ಇಲ್ಲಿನ ಮಠದ ಮೇಲೆ ಆಗಿದೆ. ಈ ಮಠದ ಸ್ಥಾನಾಧಿಪತಿಯಾಗಿದ್ದರು ಎಂದಿದ್ದಾರೆ. ಆದ್ದರಿಂದ ಈ ದೇವಾಲಯವನ್ನು ಶಂಭುಸಿದ್ಧೇಶ್ವರ ದೇವಾಲಯ ಎಂದು ಕೂಡ ಕರೆಯುವುದು ಇಂದಿಗೂ ವಾಡಿಕೆಯಾಗಿದೆ.

ಅಸಗೋಡಿನ ಪ್ರಮುಖ ದೇವಾಲಯಗಳು

ಶ್ರೀ ಶಂಭುಲಿಂಗೇಶ್ವರ ದೇವಾಲಯ : ಈ ದೇವಾಲಯ ಊರಿನ ಪೂರ್ವ ದಿಕ್ಕಿಗಿದ್ದು, ಎರಡು ಗರ್ಭಗೃಹಗಳಿರುವ ದೇವಾಲಯವಾಗಿದೆ. ಹಳೆ ಗರ್ಭಗೃಹದ ಈಶ್ವರನ ಮುಂದೆ ನಂದಿ ವಿಗ್ರಹವಿದೆ. ಪೂರ್ವದ ಬಾಗಿಲು ಇದರಲ್ಲಿ ೬ ಸಾಧಾರಣ ಕಂಬಗಳಿವೆ. ಸಭಾಮಂಟಪವು ೨೦.೧ x ೧೬.೮ ಅಡಿ ಇದೆ. ಪೂರ್ವಕ್ಕೆ ಪ್ರವೇಶ ದ್ವಾರವಿದೆ. ಈ ದೇವಾಲಯಕ್ಕೆ ಅಂಟಿಕೊಂಡಂತೆ ಹೊಸದೇವಾಲಯವು ನಂತರ ನಿರ್ಮಾಣಗೊಂಡಿದೆ. ಪಶ್ಚಿಮದ ಬಾಗಿಲುಳ್ಳ ಗರ್ಭಗುಡಿ ೯.೩ x ೯.೫ ಅಡಿ ಇದೆ. ಮಧ್ಯದಲ್ಲಿ ಪಾಣಿಪೀಠದಿಂದ ಕೂಡಿದ ಶಂಭುಲಿಂಗವಿದೆ. ಇದಕ್ಕೆ ಏಳು ಎಡೆ ಸರ್ಪದ ಬೆಳ್ಳಿ ಮುಖವಾಡ ಧರಿಸಲಾಗಿದೆ. ಇದರ ಅಂತರಾಳ ಪೂ.ಪ. ೮.೧೧ ಅಡಿ, ಉ.ದ. ೯.೭ ಅಡಿ ಇದೆ. ಮೇಲೆ ಸುಂದರ ಶಿಖರವು ಚೌಕಕಾರವಾಗಿ ಮೇಲೇರಿ ಕಳಸದೊಂದಿಗೆ ಕೊನೆಗೊಂಡಿದೆ. ಇದರ ಸಭಾಮಂಟಪದಲ್ಲಿ ೧೬ ಸುಂದರ ಕಂಬಗಳಿವೆ. ದಕ್ಷಿಣಾಭಿಮುಖವಾಗಿ ಕಿರಿದಾದ ಮುಖ್ಯದ್ವಾರವಿದೆ, ದೇವಾಲಯದ ಹಿಂದೆ ಪ್ರಾಂಗಣದ ಈಶಾನ್ಯ ಮೂಲೆಯಲ್ಲಿ ಭೈರಸಿದ್ದೇಶ್ವರ ಚಿಕ್ಕ ಗುಡಿಯಿದೆ. ಕಪ್ಪು ಶಿಲೆಯಲ್ಲಿ ನಿಂತಿರುವ ಭೈರಸಿದ್ಧೇಶ್ವರ ಎಡಗೈಯಲ್ಲಿ ತ್ರಿಶೂಲ, ಬಲಗೈಯಲ್ಲಿ ಖಡ್ಗವಿದ್ದು ಪಾಣಿ ಬಟ್ಟಲಲ್ಲಿ ದಕ್ಷಿಣಾಭಿಮುಖವಾಗಿ ನಿಂತ ಭಂಗಿಯಲ್ಲಿದೆ. ಇದರ ಗರ್ಭಗೃಹ ೫.೧ ಅಡಿ, ಪೂ.ಪ.೫.೨ ಅಡಿ ಇದೆ, ನಂತರ ಅಂತರಾಳ ಉ.ದ. ೭.೬ ಅಡಿ. ಪೂ.ಪ. ೫.೭ ಅಡಿ ಇದೆ. ಮೇಲೆ ಸುಂದರ ಶಿಖರವಿದೆ. ಶಂಭುಲಿಂಗೇಶ್ವರ ದೇವಾಲಯದ ಮುಖ್ಯ ದ್ವಾರದ ಎದುರಿನಲ್ಲಿ ಎತ್ತರದ ಜಗಲಿ ಮೇಲೆ ದೀಪಸ್ತಂಭವಿದೆ. ದಕ್ಷಿಣದ ಗೋಡೆಗೆ ತಾಗಿಕೊಂಡಿರುವ ಕೆಲ ವೀರಗಲ್ಲುಗಳು ಅಸ್ಪಷ್ಟ ಶಾಸನಗಳು, ವೀರಭದ್ರನ ಶಿಲ್ಪ ಮತ್ತು ನಾಗಶಿಲ್ಪಗಳು ಇವೆ. ನೈರುತ್ಯ ಮೂಲೆಯಲ್ಲಿ ಪೂರ್ವ ಬಾಗಿಲಿರುವ ಚಿಕ್ಕಗುಡಿಯಲ್ಲಿ ದೊಡ್ಡ ಬಸವಣ್ಣನ ವಿಗ್ರಹವಿದೆ. ಈ ಗರ್ಭಗುಡಿ ಪೂ.ಪ. ೮ ಅಡಿ, ಉ.ದ. ೮ ಅಡಿ ಇದೆ. ಒಟ್ಟಾರೆ ಈ ದೇವಾಲಯದ ಪ್ರಾಂಗಣ ಪೂ.ಪ. ೧೦೬.೬ ಅಡಿ, ಉ.ಪ. ೧೦೦ ಅಡಿ ಇದೆ. ಶಂಭುಲಿಂಗೇಶ್ವರನ ತೇರು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರುವ ಹುಣ್ಣಿಮೆಯಾಗಿ ಮೂರನೇ ದಿನದಲ್ಲಿ ಜರುಗುತ್ತದೆ. ಈ ದೇವಾಲಯವು ಚಾಲುಕ್ಯರ ಮತ್ತು ಹೊಯ್ಸಳರ ಶೈಲಿಯನ್ನ ಪ್ರತಿಬಿಂಬಿಸುತ್ತದೆ. ಉಳಿದವುಗಳು ಆಧುನಿಕ ಶೈಲಿಯಲ್ಲಿವೆ.

ಗುಂಡ ಬ್ರಹ್ಮಯ್ಯರ ಶಿಲ್ಪ : ಶಂಭುಲಿಂಗ ದೇವಾಲಯದ ಸಭಾ ಮಂಟಪ ದಕ್ಷಿಣ ಗೋಡೆಯಲ್ಲಿ ಅಳವಡಿಸಲಾಗಿರುವ ಶೂಲ ಬ್ರಹ್ಮ ಶಿಲ್ಪವಿದೆ. ಇದು ಸುಮಾರು ೧ ಅಡಿ ಎತ್ತರ, ೨.೫ರ ಅಗಲವಿದೆ. ಈ ಉಬ್ಬು ಶಿಲ್ಪದಲ್ಲಿ ಗುಂಡುಬ್ರಹ್ಮರು ಅವರ ಸತಿಯರೊಂದಿಗೆ (?) ಎದುರು ಬದುರಾಗಿ ಪ್ರತಿಬಿಂಬಾನು ಕ್ರಮದಲ್ಲಿ ನಿಂತಿದ್ದಾರೆ. ಇಬ್ಬರ ನಡುವೆ ಎರಡು ಶೂಲಗಳಿವೆ. ಬಲಗಡೆಯವನು ಬಲಗೈಯಲ್ಲಿ, ಎಡಗೈಯಲ್ಲಿ ಇಷ್ಟ ಲಿಂಗವನ್ನು ಹಿಡಿದುಕೊಂಡು ತಮ್ಮ ಇನ್ನೊಂದು ಕೈಯನ್ನು ಶೂಲದತ್ತ ಚಾಚಿ ನಿಂತಿದ್ದಾರೆ. ಅವರ ಸತಿಯರು ಮಂಗಳ ದ್ರವ್ಯದ ತಟ್ಟೆಯನ್ನು ಹಿಡಿದಿದ್ದಾರೆ. ಈ ಹೆಂಗಸರು ಸಹಗಮನದ ಸೂಚಕವೆನ್ನುವಂತೆ ಮಾಲೆ ಧರಿಸಿದ್ದಾರೆ. ನೆಲದಿಂದ ಶೂಲದತ್ತ ಜಿಗಿಯುವ ಗುಂಡಬ್ರಹ್ಮಯ್ಯರ ಭಂಗಿಯು ಸಾವಿನ ನಿರ್ಭೀತಿ ಮತ್ತು ಆತ್ಮಾರ್ಪಣೆಯ ಉತ್ಸಾಹವನ್ನು ಪ್ರತಿಬಿಂಬಿಸುತ್ತದೆ.

ಕಡಲೆ ಬಸವೇಶ್ವರ ದೇವಾಲಯ : ಇದು ತ್ರಿಕೂಟ ಚಲನವಾಗಿದ್ದು ದಕ್ಷಿಣದ ಬಾಗಿಲನ್ನು ಹೊಂದಿದೆ. ಈ ದೇವಾಲಯದ ಉತ್ತರದ ಕಡೆ ಗಣೇಶನ ಗರ್ಭಗುಡಿ ಇದ್ದು, ಅದು ಉ.ದ. ೬.೫ ಅಡಿ, ಪೂ.ಪ. ೫.೫ ಅಡಿ ಇದೆ. ಪ್ರಮುಖ ೬ ಸಾಧಾರಣ ಸ್ವರೂಪದ ಕಂಬಗಳಿಂದ ಕೂಡಿದ್ದು ಪೂ.ಪ. ೧೬.೨ ಅಡಿ ಉ.ದ. ೧೫.೯ ಅಡಿಯ ಸಭಾಂಗಣವನ್ನು ಹೊಂದಿದೆ. ಪೂರ್ವದ ಗರ್ಭಗೃಹದಲ್ಲಿ ನಂದಿ ಶಿಲ್ಪವಿದೆ. ಈ ಗರ್ಭ ಗೃಹ ಪೂ.ಪ. ೫.೧೦ ಅಡಿ, ಉ.ದ. ೫.೩ ಅಡಿ ಇದೆ. ಇದರ ಅಂತರಾಳ ಉ.ದ. ೬.೮ ಪೂ.ಪ. ೮ ಅಡಿ ಇದೆ. ಪಶ್ಚಿಮ ಗರ್ಭಗುಡಿಯಲ್ಲಿ ಕಡಲೆ ಬಸವೇಶ್ವರ ಈಶ್ವರ ಲಿಂಗವಿದೆ. ಇದು ಪೂ.ಪ. ೮.೧೧. ಉ.ದ. ೬.೧೧ ಅಡಿಇದೆ. ಅಂತರಾಳ ಉ.ದ. ೬.೮. ಪೂ.ಪ. ೬.೨ ಅಡಿ ಇದೆ. ಇದರ ಹೊರಭಾಗದಲ್ಲಿ ವೀರಗಲ್ಲುಗಳು, ಬ್ರಹ್ಮ, ವಿಷ್ಣು, ಮಹೇಶ್ವರನ ಶಿಲ್ಪಗಳಿವೆ.

ಆಂಜನೇಯ ದೇವಾಲಯ : ಮುಂಭಾಗದಲ್ಲಿ ದಕ್ಷಿಣಕಡೆ ಎತ್ತರದ ಕಲ್ಲಿನ ಹೆಬ್ಬಾಗಿಲನ್ನು ಹೊಂದಿದೆ. ಹೆಬ್ಬಾಗಿಲಿನ ಕೆಳ ಇಕ್ಕೆಲಗಳಲ್ಲಿ ಆನೆ ಸೊಂಡಲಿನ ಸುಂದರ ಶಿಲ್ಪಗಳಿವೆ. ಮೇಲಿನ ಪಟ್ಟಿಯಲ್ಲಿ ರಾಮ ಲಕ್ಷ್ಮಣ ಸೀತೆ ಆಂಜನೇಯ ಮೂರ್ತಿಗಳಿವೆ. ಈ ದೇವಾಲಯದ ಗರ್ಭಗೃಹ ಪೂ.ಪ. ೯, ಉ.ದ. ೯.೩ ಅಡಿಇದೆ. ನಿಂತ ಭಂಗಿಯ ಆಂಜನೇಯ ಮೂರ್ತಿ ಪುಷ್ಕಳವಾಗಿದ್ದು ಸುಮಾರು ೪.೬ ಅಡಿ ಎತ್ತರ ೩ ಅಡಿ ಅಗಲವಿದೆ. ಸಭಾಮಂಟಪವು ಸುಂದರ ನಯವಾದ ೧೬ಕಂಬಗಳನ್ನು ಒಳಗೊಂಡಿದೆ. ಸಭಾಮಂಟಪ ಪೂ.ಪ. ೧೫.೯ ಅಡಿ, ಉ.ದ. ೨೪ ಅಡಿ ಇದೆ. ನೆಲಕ್ಕೆ ಗ್ರಾನೈಟನ್ನು ಹಾಕಲಾಗಿದೆ. ದೇವಾಲಯದ ಹೆಬ್ಬಾಗಿಲಿನ ಎದುರಿನಲ್ಲಿ ಚಿಕ್ಕ ಜಗಲಿಯ ಮೇಲೆ ಎತ್ತರದ ಸುಂದರ ದೀಪಸ್ತಂಭವಿದೆ. ಈ ದೇವಾಲಯವನ್ನು ಕಣಶಿಲೆಯ ಕಲ್ಲುಗಳಿಂದ ಇತ್ತೀಚೆಗೆ ಪುನರುಜ್ಜೀವನಗೊಳಿಸಲಾಗಿದೆ. ದೇವಾಲಯದ ಶಿಖರವು ಚೌಕಕಾರವಾಗಿ ಮೇಲೆರುತ್ತ ಕಳಸದೊಂದಿಗೆ ಪರ್ಯಾವಸಾನಗೊಂಡಿದೆ. ಶಿಖರದ ಸುತ್ತಲೂ ಅನೇಕ ರಾಮಯಣದ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಇದರ ಹೊರಾಂಡ ಪೂ.ಪ. ೩೮.೩ ಅಡಿ, ಉ.ದ. ೬೧.೮ ಅಡಿ ಇದೆ. ಈ ದೇವರ ಉಚ್ಚಾಯವು ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಬರುವ ಹುಣ್ಣಿಮೆಯ ನಂತರದ ಮೂರನೇ ದಿನದಲ್ಲಿ ವಿಜೃಂಭಣೆಯಿಂದ ಜರುಗುತ್ತದೆ.

ವೀರಭದ್ರೇಶ್ವರ : ಇದು ಸುಮಾರು ನೂರು ವರ್ಷದಷ್ಟು ಹಳೆಯ ದೇವಾಲಯವಾಗಿದೆ. ಉತ್ತರಾಭಿಮುಖದ ತೆರೆದ ಬಾಗಿಲಿದೆ. ಇದರ ಗರ್ಭಗುಡಿ ಪೂ.ಪ. ೮.೯ ಅಡಿ, ಉ.ದ. ೮.೯ ಅಡಿ ಇದೆ. ಇದರ ಮಧ್ಯಭಾಗದಲ್ಲಿ ಸುಮಾರು ೪ ಅಡಿ ಎತ್ತರ ೨.೭ ಅಡಿ ಅಗಲದ ವೀರಭದ್ರೇಶ್ವರನು ನಿಂತ ಭಂಗಿಯ ಮೂರ್ತಿ ಇದೆ. ಅದರ ಮುಂದೆ ನಂದಿವಿಗ್ರಹವಿದೆ. ಇದರ ಸಭಾಂಗಣ ೧೨ ಕಂಬಗಳನ್ನು ಒಳಗೊಂಡು ಪೂ.ಪ. ೧೭.೭ ಅಡಿ, ಉ.ದ. ೨೪.೬ ಅಡಿ ಇದೆ. ಶ್ರಾವಣ ಮಾಸದಲ್ಲಿರುದ್ರಭಿಷೇಕ ಮತ್ತು ಯುಗಾದಿ ವೇಳೆಯಲ್ಲಿ ಉಚ್ಚಾಯ ಜರುತ್ತದೆ.

ಆಂಜನೇಯ ದೇವಾಲಯದ ಪಕ್ಕದಲ್ಲಿ ದಕ್ಷಿಣಾಭಿಮುಖವಾಗಿ ಕಲ್ಲೇಶ್ವರನ ಚಿಕ್ಕ ದೇವಾಲಯವಿದೆ. ಕಲ್ಲೇಶ್ವರನ ಮುಂದೆ ನಂದಿ ವಿಗ್ರಹವಿದೆ. ದಕ್ಷಿಣದ ಬಾಗಿಲು ಇದೆ, ಇದನ್ನ ಇತ್ತೀವೆಗೆ ಜಿರ್ಣೋದ್ಧಾರ ಮಾಡಲಾಗಿದೆ. ಅದೇ ರೀತಿ ಊರಿನ ಮಧ್ಯಭಾಗದಲ್ಲಿ ಭೀರಲಿಂಗೇಶ್ವರ ದೇವಾಲಯವನ್ನು ಹೊಸದಾಗಿ ನಿರ್ಮಾಣವಾಗುತ್ತಿದೆ. ಹಾಗೇ ಊರ ಮಧ್ಯದಲ್ಲಿ ಅಸಗೋಡಪ್ಪನ ದೇವಾಲಯ ಮತ್ತು ಊರಿನ ಹಿಂಭಾಗದಲ್ಲಿ ಪುರಾತನ ಬ್ರಹ್ಮಲಿಂಗದೇವಾಲಯಗಳಿವೆ. ಬ್ರಹ್ಮಲಿಂಗದೇವಾಲಯದ ಎದುರಿನಲ್ಲಿ ಗೋಗ್ರಹಮದ ವೀರಗಲ್ಲು ಇದ್ದು, ಇದರ ಎತ್ತರ ೫.೧೦ ಅಡಿ, ಅಗಲ ೨.೫ ಅಡಿ ಇದೆ. ಈ ವೀರಗಲ್ಲಿನ ಕೆಳಭಾಗದಲ್ಲಿ ಎಡಕ್ಕೆ ಹಸುಗಳು ನಿಂತಿವೆ. ಪಕ್ಕದಲ್ಲಿ ಕಾದಾಡುವ ವೀರರು, ಎರಡನೇ ಹಂತದಲ್ಲಿ ವೀರನನ್ನು ಕರೆದೊಯ್ಯುವುದು, ಮೇಲ್ಭಾಗದಲ್ಲಿ ಸೂರ್ಯ ಚಂದ್ರರ ಮಧ್ಯೆ ಶಿವಲಿಂಗವಿದೆ.

ಅಸಗೋಡಿನ ಊರಿನ ಮಧ್ಯೆ ಬರುವ ಕೋಟೆ ಬೃಹನ್ಮಠವು ಸುಮಾರು ೧೫ – ೧೬ ಶತಮಾನಕ್ಕೆ ಸೇರಿದ್ದಾಗಿದೆ. ಇದರ ಪ್ರಾಂಗಣದ ಮಧ್ಯಭಾಗದಲ್ಲಿ ಗುರು ನಂಜೇಶ್ವರ ಶಿವಚಾರ್ಯರ ಸಮಾಧಿ ಗದ್ದುಗೆಯಿದೆ. ಅದರ ಮೇಲೆ ಪಾದುಕೆಗಳಿವೆ. ನಿತ್ಯ ಪೂಜೆ ಸಲ್ಲುತ್ತದೆ. ೯x೯ ಅಡಿ ಅಗಲದ ಸು. ೮೦ ಅಡಿ ಆಳದ ಕಲ್ಲಿನ ಬಾವಿ ಇರುವುದು ವಿಶೇಷ. ಈ ಪ್ರಾಂಗಣಕ್ಕೆ ಈಶಾನ್ಯ ಮತ್ತು ಪೂರ್ವದಲ್ಲಿ ಪ್ರವೇಶ ದ್ವಾರಗಳಿವೆ. ಊರ ಮಧ್ಯದಲ್ಲಿ ಸು. ೧೮ನೇ ಶತಮಾನಕ್ಕೆ ಸೇರಿದ ಪುಷ್ಕರಣೆಯಿದೆ.

ಬಿಳಿಚೋಡು : ಚಾರಿತ್ರಿಕ ಹಿನ್ನೆಲೆ

ಕ್ರಿ.ಶ. ಸುಮಾರು ೧೦ – ೧೧ ನೇ ಶತಮಾನಕ್ಕೆ ಸೇರಿದ ಈ ಊರಿನ ರಾಮೇಶ್ವರ ದೇವಾಲಯದ ಬಳಿಯ ವೀರಗಲ್ಲು ಶಾಸನದ ಪ್ರಕಾರ ಮಡಿವಾಳ ಕೇತನೆಂಬ ವೀರನು ಕಾಳಗದಲ್ಲಿ ಮಡಿದದ್ದಕ್ಕೆ ನಿಲ್ಲಿಸಿರುವ ಶಾಸನಶಿಲ್ಪವಿದು. ಇದರಲ್ಲಿ ಅವನನ್ನು ಅರವತ್ತು ಒಕ್ಕಲು ಪುತ್ರ ಐನೂರ್ವರ ಗಂಧವಾರಣ (ಆನೆ) ಬಿಲ್ಲು ಮುನ್ನೂರ್ವರ ಪತಿಯಾಗಿದ್ದನೆಂದು ವರ್ಣಿಸುತ್ತದೆ. ಅವನು ಹೆಮ್ಮನ ಬೆಲ್ತುರು (ಈಗಿನ ಹೆಮ್ಮನ ಬೇತೂರು)ವಿನ ಕೇತಗಾವುಣ್ಣನೊಂದಿಗೆ ಹೋರಾಡಿ ಜಯ ಪಡೆದು ಸತ್ತನೆಂದೂ ಇವನ ಕುಟುಂಬದವರಿಗೆ ಬಿಣ್ನಚೇಡಿನ ಬತ್ತ ಚಗಾವುಣ್ಣನು ದತ್ತಿ ನೀಡಿದನೆಂದು ತಿಳಿಯುತ್ತದೆ. ಇದರಿಂದ ಬಿಳಿಚೋಡಿನ ಪ್ರಾಚೀನ ಹೆಸರು ಬಿಣ್ನಚೇಡು ಆಗಿತ್ತೆಂದು ತಿಳಿಯುತ್ತದೆ. ಕ್ರಿ.ಶ. ೧೫೧೫ರ ಕೃಷ್ಣದೇವರಾಯನ ಅಧಿಕಾರಿ ಅವರಣೆಯ ಚೆನ್ನರಸನು ಮದುವೆಸುಂಕ ಬಿಡಿಸಿದ ಸಂಗತಿಯನ್ನು ಅವನ ಶಾಸನ ತಿಳಿಸುತ್ತದೆಯಲ್ಲದೆ ಬಿಳಿಚೋಡಿಗೆ ಬಿಣಚೇಡು ಎಂದು ಕರೆದಿದೆ. ಕ್ರಿ.ಶ. ೧೫೧೫ರ ಶಾಸನದಲ್ಲಿ (ಎ.ಕ.೧೨, ಸಂಖ್ಯೆ ೨೪) ಹಸ್ತಿನಾನತಿಯ ವಳಿತದ ಪಾಂಡ್ಯನಾದ, ಉಚ್ಚಂಗಿ ವೇಂಠಿ (ವಿಭಾಗ)ಗೆ ಸೇರುವ ಸ್ಥಳವಾಗಿದ್ದು, ಬಿಳಿಚೇಡ ಸೀಮೆ ಬಿಳಿಚೋಡ ಸೀಮೆ ಬಿಳಿಚೆಡು, ಬಿಳಿಚೋಡು ನಂತರ ಬಿಳಿಚೋಡು ಎಂದು ಆಗಿರುವುದು ತಿಳಿಯುತ್ತದೆ.

ಬಿಳಿಚೋಡಿನ ದೇವಾಲಯಗಳು

ಬಿಳಿಚೋಡಿನ ಪ್ರಮುಖ ದೇವಾಲಯಗಳೆಂದರೆ ಊರ ಮಧ್ಯೆ ಇರುವ ಮೂಲ ರಾಮೇಶ್ವರ ಉಲಾಮಹೇಶ್ವರ ದೇವಾಲಯ, ಆಂಜನೇಯ ದೇವಾಲಯ, ಮೈಲಾರ ಲಿಂಗೇಶ್ವರ, ಶ್ರೀಚನ್ನಕೇಶ್ವರ ದೇವಾಲಯ, ಪಾರ್ಶ್ವನಾಥ ಮಂದಿರ, ಗುರುಸಿದ್ಧಸ್ವಾಮಿ ಮಠಗಳು.

ರಾಮೇಶ್ವರ ದೇವಾಲಯ : ಈ ದೇವಾಲಯವನ್ನು ಚಿತ್ರದುರ್ಗದ ಪಾಳೇಗಾರ ಬಿಚ್ಚುಗತ್ತಿ ಭರಮಣ್ಣನಾಯಕನ (೧೬೮೯ – ೧೭೨೧) ಕಾಲದಲ್ಲಿ ಕಟ್ಟಿಸಲಾಗಿದೆ. ಈ ದೇವಾಲಯದ ಸ್ಥಂಭಶಾಸದಿಂದ ರಾಮೇಶ್ವರ ದೇವರಿಗೆ ಬೆಲಗೂರಿನ ರಾಮಪ್ಪ ನಾಯಕರು ದಾನಕೊಟ್ಟ ವಿಚಾರವಿದೆ. ಸದರಿ ದೇವಾಲಯವು ತ್ರಿಕೂಟಾಚಲವಾಗಿದೆ. ಪಶ್ಚಿಮದ ಮುಖ್ಯ ಗರ್ಭಗೃಹವು ಪೂರ್ವ ಪಶ್ಚಿಮ ೬.೬, ಉತ್ತರ – ದಕ್ಷಿಣ ೬.೮ ಅಡಿ ಇದೆ. ಇಲ್ಲಿ ಚಿಕ್ಕ ನಂದಿಗಳಿವೆ. ಅಂತರಾಳವು ಪೂರ್ವ ಪಶ್ಚಿಮವಾಗಿ ೬.೫ ಅಡಿ, ಉತ್ತರ ದಕ್ಷಿಣವಾಗಿ ೫ ಅಡಿ ಇದೆ. ಉತ್ತರದ ಗರ್ಭಗೃಹವು ಪೂರ್ವ ಪಶ್ಚಿಮ ೬.೮, ಉತ್ತರ ದಕ್ಷಿಣವು ೭.೨ ಅಡಿಗಳಷ್ಟು ವಿಸ್ತಾರವಾಗಿದೆ. ಇದರಲ್ಲಿ ಸುಖಾಸನದಲ್ಲಿ ಕುಳಿತಿರುವ ಗಣೇಶ ಶಿಲ್ಪವಿದೆ. ಅಂತರಾಳವು ಪೂರ್ವ – ಪಶ್ಚಿಮ ೬.೭, ಉತ್ತರ – ದಕ್ಷಿಣ ೫.೯ ಅಡಿ ಇದೆ. ಪೂರ್ವ ಗರ್ಭಗೃಹವು ಈಗ ಖಾಲಿ ಇದೆ. ಮಧ್ಯದ ಸಭಾಪಂಟಪವು ಹದಿನಾರು ಕಂಬಗಳಿಂದ ರೂಪಿತವಾಗಿದೆ. ಪ್ರತಿಕಂಬದ ಕೆಳಭಾಗವು ಚೌಕಾಕಾರವಾಗಿದ್ದು, ಮಧ್ಯದಲ್ಲಿ ದುಂಡಾಕಾರವಾಗಿದ್ದು ಮೇಲ್ಭಾಗದಲ್ಲಿ ವೃತ್ತಾಕಾರದ ನಯವಾದ ಬಳೆಯ ರೂಪವನ್ನು ಹೊಂದಿದೆ. ಅದರ ಮೇಲೆ ಅಷ್ಟಕೋನ ಬೋದಿಗೆಯ ಮೇಲೆ ತೊಲೆಯನ್ನು ಜೋಡಿಸಲಾಗಿದೆ. ಕಂಬಗಳು ಮೃದು ಬೂದುಗಲ್ಲಿನಲ್ಲಿದ್ದು ನಯಗಾರಿಕೆಯನ್ನು ಒಳಗೊಂಡಿವೆ. ಇದರ ದ್ವಾರವು ದಕ್ಷಿಣಾಭಿಮುಖವಾಗಿದೆ. ದ್ವಾರಬಾಗಿಲು ವೈವಿಧ್ಯಮಯವಾದ ಅಲಂಕಾರವನ್ನು ಹೊಂದಿದೆ. ಬಾಗಿಲಿನ ದ್ವಾರಬಂಧದಲ್ಲಿ ಸಾಲಾಗಿ ಕುಳಿತಿರುವ ವಿವಿಧ ಭಂಗಿಯ ಶಿಲ್ಪಗಳಿವೆ. ಮುಖಮಂಟಪವು ಪೂರ್ವಪಶ್ಚಿಮ ೮.೯, ಉತ್ತರ – ದಕ್ಷಿಣ ೯ ಅಡಿ ಇದೆ. ದೆವಾಲಯದ ಹೊರಗಡೆ ವೀರಗಲ್ಲುಗಳು, ಅಸ್ಪಷ್ಟ ಶಾಸನಗಳು ಕಂಡುಬರುತ್ತವೆ.

ಚನ್ನಕೇಶವಸ್ವಾಮಿ ದೇವಾಲಯ : ಈ ದೇವಾಲಯವು ಊರಿನ ಪಶ್ಚಿಮ ದಿಕ್ಕಿನಲ್ಲಿದೆ, ಗರ್ಭಗುಡಿಯು ೭x೭ ಅಡಿ ಇದೆ. ಮಧ್ಯದ ಜಗುಲಿಯ ಮೇಲೆ ಸಮಭಂಗಿಯಲ್ಲಿ ನಿಂತಿರುವ ೪.೬ ಅಡಿ ಎತ್ತರ, ೧.೮ ಅಡಿ ಅಗಲವಿರುವ ಚನ್ನಕೇಶವನ ಶಿಲ್ಪವಿದೆ. ಗರ್ಭಗುಡಿಯ ಬಾಗಿಲು ೪.೬ ಅಡಿ ಅಗಲ ಹಾಗೂ ೬.೯ ಅಡಿ ಎತ್ತರವಿದೆ. ಅದರ ತೋಳುಗಳು ೭ ಇಂಚು ಅಗಲವಾಗಿವೆ. ಗರ್ಭಗುಡಿಯ ಮೇಲೆ ವೃತ್ತಾಕಾರದ ಶಿಖರವು ಕಳಸದಿಂದ ಕಂಗೊಳಿಸುತ್ತದೆ. ನವರಂಗವು ಉತ್ತರ ದಕ್ಷಿಣ ೧೭.೬, ಪೂರ್ವ ಪಶ್ಚಿಮ ೧೫.೬ ಅಡಿ ಇದೆ. ನವರಂಗದಲ್ಲಿ ಸುಂದರ ನಾಲ್ಕು ಕಂಬಗಳಿದ್ದು ಈ ಕಂಬಗಳು ತಳದಲ್ಲಿ ಚೌಕಾಕಾರ ಮೇಲ್ಭಾಗದಲ್ಲಿ ಚೌಕಾಕಾರದ ಬೋದಿಗೆಯನ್ನು ಹೊಂದಿವೆ. ನವರಂಗದ ಎಡಗಡೆ ನಾಗದೇವತೆಗಳ ಶಿಲ್ಪಗಳು, ಬಲಭಾಗದಲ್ಲಿ ಗದ್ದುಗೆಯ ಮೇಲೆ ಕೊಳಲು ನುಡಿಸುತ್ತಿರುವ ವೇಣುಗೋಪಾಲನ ಶಿಲ್ಪವಿದೆ.

ಆಂಜನೇಯ ದೇವಾಲಯ : ಈ ದೇವಾಲಯವು ಸುಮಾರು ೧೫ – ೧೬ನೇ ಶತಮಾನಕ್ಕೆ ಸೇರಿದೆ. ಇದರ ಗರ್ಭಗುಡಿ ಪೂರ್ವ ಪಶ್ಚಿಮವಾಗಿ ೭.೬. ಉತ್ತರ ದಕ್ಷಿಣವಾಗಿ ೭.೬ ಅಡಿ ಇದೆ. ಮಧ್ಯದ ಜಗುಲಿಯ ಮೇಲೆ ಆಂಜನೇಯ ಶಿಲ್ಪವಿದೆ. ಗರ್ಭಗುಡಿಯ ಮೇಲೆ ವೃತ್ತಾಕಾರದ ಶಿಖರ ಮತ್ತು ಕಳಸವನ್ನು ಹೊಂದಿದೆ. ಗರ್ಭಗುಡಿಯ ಕಲ್ಲಿನ ಬಾಗಿಲಿನ ಇಕ್ಕೆಲಗಳಲ್ಲಿ ದ್ವಾರಪಾಲಕರ ವಿಗ್ರಹಗಳಿವೆ. ಇದರ ಸಭಾಪಂಟಪ ಪೂರ್ವಪಶ್ಚಿಮ ೨೪ ಅಡಿ, ಉತ್ತರ ದಕ್ಷಿಣ ೨೪.೭ ಅಡಿ ಇದೆ. ಹನ್ನೆರಡು ಕಂಬಗಳು ಗೋಡೆಗೆ ಅಂಟಿಕೊಂಡು ಚೌಕಾಕಾರವಾಗಿದ್ದು, ಮೇಲ್ಭಾಗದಲ್ಲಿ ಬೋದಿಗೆಗಳನ್ನು ಒಳಗೊಂಡಿವೆ. ಮಧ್ಯದ ಕಂಬಗಳನ್ನು ಕೆಳಗೆ ಚೌಕಾಕಾರ, ಮೇಲೆ ಅಷ್ಠಕೋನದಲ್ಲಿ ಕಡೆದಿರುವರು. ಸಭಾಮಂತಪದ ಮೇಲ್ಛಾವಣಿಯಲ್ಲಿ ಸುಂದರ ಭುವನೇಶ್ಚರಿ ಇದೆ. ಕಂಬಗಳಲ್ಲಿ ಆಂಜನೇಯ ಮತ್ತಿತರೆ ಶಿಲ್ಪಗಳನ್ನು ಸುಂದರವಾಗಿ ಕೆತ್ತಲಾಗಿದೆ. ಇದರ ಪ್ರಾಂಗಣವು ಪೂರ್ವ – ಪಶ್ಚಿಮ ೬೪ ಅಡಿ, ಉತ್ತರ – ದಕ್ಷಿಣ ೮೨ ಅಡಿ ಇದೆ.

ಮೈಲಾರಲಿಂಗೇಶ್ವರ ದೇವಾಲಯ : ಈ ದೇವಾಲಯವು ಊರಿನ ಮಧ್ಯಭಾಗದಲ್ಲಿದೆ. ಇದರ ಗರ್ಭಗುಡಿಯು ಪೂರ್ವ – ಪಶ್ಚಿಮ ೬.೮, ಉತ್ತರ – ದಕ್ಷಿಣ ೬.೮ ಅಡಿ ಇದೆ. ಗರ್ಭಗೃಹದ ಬಲಗಡೆ ೧.೪ ಅಡಿ ಅಗಲ, ೨.೩ ಅಡಿ ಎತ್ತರದ ಮೈಲಾರಲಿಂಗೇಶ್ವರನ ಮೂರ್ತಿಶಿಲ್ಪವಿದೆ. ಅದರ ಎಡಗಡೆ ೧.೫ ಅಡಿ ಅಗಲ, ೨ ಅಡಿ ಎತ್ತರದ ಗಂಗಮಾಳಮ್ಮನ ವಿಗ್ರಹವಿದೆ. ಅಂತರಾಳವು ಪೂರ್ವ – ಪಶ್ಚಿಮ ೬.೩, ಉತ್ತರ – ದಕ್ಷಿಣ ೧೦ ಅಡಿ ಇದೆ. ಅಂತರಾಳದ ಬಲಭಾಗದಲ್ಲಿ ೧.೩ ಅಡಿ ಅಗಲ ೧.೮ ಅಡಿ ಎತ್ತರದ ಗುಡ್ಡದೇಶ್ವರನ ಶಿಲ್ಪವು ಪೂರ್ವಾಭಿಮುಖವಾಗಿ ನಿಂತಿದೆ. ಸಭಾಮಂಟಪವು ೮ ಕಂಬಗಳಿಂದ ನಿರ್ಮಿತವಾಗಿದ್ದು ಪೂರ್ಚ – ಪಶ್ಚಿಮ ೨೪ ಅಡಿ, ಉತ್ತರ – ದಕ್ಷಿಣ ೨೪.೭ ಅಡಿ ಇದೆ. ಅರ್ಧಮಂಟಪವು ೨ ಕಂಬಗಳೊಂದಿಗೆ ಮೇಲ್ಛಾವಣಿ ಹೊಂದಿದೆ.

ಶ್ರೀ ಶ್ರೀ ೧೦೦೮ ಪಾರ್ಶ್ವನಾಥ ದಿಗಂಬರ ೨೩ನೇ ತೀರ್ಥಂಕರ ಮಂದಿರ : ಇದು ಆಧುನಿಕ ಕಾಲದ ಮಂದಿರವಾಗಿದೆ. ಇದರ ಗರ್ಭಗುಡಿಯು ಪೂರ್ವ ಪಶ್ಚಿಮವು ೫.೪, ಉತ್ತರ ದಕ್ಷಿಣ ೬.೬ ಅಡಿ ಇದೆ. ಎತ್ತರದ ಜಗುಲಿಯ ಮೇಲೆ ನಿಂತಭಂಗಿಯಲ್ಲಿರುವ ೨೩ನೇ ತೀರ್ಥಂಕರ ಪಾರ್ಶ್ವನಾಥನ ಸುಂದರ ಕಪ್ಪುಶಿಲೆಯ ದಿಗಂಬರ ಶಿಲ್ಪವಿದೆ. ಸಭಾಮಂಟಪವು ಹದಿನಾರು ಕಂಬಗಳನ್ನು ಒಳಗೊಂಡು ಪೂರ್ವ ಪಶ್ಚಿಮ ೧೩.೪, ಉತ್ತರ ದಕ್ಷಿಣ ೧೭.೩ ಅಡಿ ಇದೆ. ಸಭಾಮಂಟಪದ ಎಡಭಾಗದಲ್ಲಿ ಬ್ರಹ್ಮದೇವ ಮತ್ತು ಕಂಚಿನ ಪಾರ್ಶ್ವನಾಥನ ವಿಗ್ರಹಗಳಿವೆ. ಬಲಭಾಗದಲ್ಲಿ ಮಹಾವೀರ ಮತ್ತು ಪದ್ಮಾವತಿಯರ ವಿಗ್ರಹಗಳಿವೆ. ಮುಖಮಂಟಪವು ಸುಂದರ ಕಂಬಗಳನ್ನೊಳಗೊಂಡು ಪೂರ್ವ ಪಶ್ಚಿಮ ೧೩.೪, ಉತ್ತರ ದಕ್ಷಿಣ ೧೭ ಅಡಿ ಇದೆ. ಇದರ ಪ್ರಾಂಗಣವು ಉತ್ತರ ದಕ್ಷಿಣ ೮೪ ಅಡಿ, ಪೂರ್ವ ಪಶ್ಚಿಮ ೨೬ ಅಡಿ ಇದ್ದು ಉತ್ತರಾಭಿಮುಖದ ದ್ವಾರವನ್ನು ಹೊಂದಿದೆ. ಈ ಮಂದಿರದ ಎಡಭಾಗದಲ್ಲಿ ಸಮುದಾಯಭವನವಿದೆ.

ಬಿಳಿಚೋಡು ಸಂತತಿ

ಚಿತ್ರದುರ್ಗ ಪಾಳೆಯಗಾರರ ಮೂಲಪುರುಷ ಚಿತ್ರನಾಯಕ, ಇವನು ಕಾರಣಾಂತರದಿಂದ ದಿಲ್ಲಿಗೆ ಹೋಗಿದ್ದಾಗ ‘ಮದಿಸಿದ’ ಆನೆಯನ್ನು ಪಳಗಿಸಿದ್ದಕ್ಕಾಗಿ ದಿಲ್ಲಿ ಸುಲ್ತಾನನು ಇವನಿಗೆ ‘ಮದಕರಿ’ ಎಂಬ ಬಿರುದನ್ನು ನೀಡಿದ್ದರಿಂದ ಮುಂದೆ ಚಿತ್ರದುರ್ಗ ಪಾಳೆಯಗಾರರೆಲ್ಲ ಮದಕರಿಗಳೆನಿಸಿದರು. ಚಿತ್ರನಾಯಕನು ಚಿತ್ರದುರ್ಗ ಸಂಸ್ಥಾನಕ್ಕೆ ಬಂದು ನೆಲಸಿದ. ಆದುದರಿಂದ ಇವರ ವಂಶಿಕರನ್ನು ಚಿತ್ರದುರ್ಗದ ಪಾಳೆಯಗಾರರೆಂದು ಕರೆಯಲಾಯಿತು. ಚಿತ್ರದುರ್ಗವನ್ನು ಬೆಮ್ಮತ್ತನಕಲ್ಲು, ಬಿಮ್ಮತ್ತನೂರು ಇತ್ಯಾದಿ ಹೆಸರುಗಳಿಂದ ಚಿತ್ರದುರ್ಗವನ್ನು ಶಾಸಗಳಲ್ಲಿ ಕರೆಯಲಾಗಿದೆ. ಒಟ್ಟು ೧೪ ಜನ ಪಾಳೆಯಗಾರರು ಚಿತ್ರದುರ್ಗವನ್ನು ಆಳ್ವಿಕೆ ಮಾಡಿದ್ದಾರೆ. ಅದರಲ್ಲಿ ಮತ್ತಿ ತಿಮ್ಮಣ್ಣನಾಯಕ ೧೫೬೮ರಲ್ಲಿ ಅಧಿಕಾರಕ್ಕೆ ಬರುತ್ತಾನೆ. ಈತನ ಸ್ಥಳ ದಾವಣಗೆರೆ ತಾಲೂಕಿನ ಮತ್ತಿ ಗ್ರಾಮ. ವಿಜಯನಗರದ ಅರಸರ ಬಳಿ ಅಧಿಕಾರಿಯಾಗಿದ್ದನು. ಇವನು ತನ್ನ ದಕ್ಷತೆಗನುಣವಾಗಿ ಹೊಳಲ್ಕೆರೆ ಪ್ರದೇಶದ ಮಾಗಣಿ ಪಡೆದನು. ಇವನ ನಂತರ ಓಬಣ್ಣ, ರಂಗಪ್ಪ, ಇಮ್ಮಡಿ ಮದಕರಿನಾಯಕ, ಚಿಕ್ಕಣ್ಣನಾಯಕ, ಮುಮ್ಮಡಿ ಲಿಂಗಣ್ಣನಾಯಕ, (೧೬೮೬ – ೧೬೮೯) ಮೊದಲಾದವರು ಅಧಿಕಾರ ನಡೆಸುತ್ತಾರೆ. ಕೊನೆಯ ಕಾಲದಲ್ಲಿ ದುರ್ಗದ ದಳವಾಯಿ ಮುದ್ದಣ್ಣನ ಉಪಟಳದಿಂದ ಈ ಮತ್ತಿವಂಶವು ಕೊನೆಗೊಂಡಿತು. ನಂತರ ಬಿಳಿಚೋಡು ಸಂತತಿ ಪ್ರಾರಂಭವಾಯಿತು.

ಬಿಳಿಚೋಡು ಸಂತತಿ ಕೂಡ್ಲಿಗಿ ಬೆಟ್ಟದ ಸಾಲು ಆನೆಕಲ್ಲು ಗುಡ್ಡದಲ್ಲಿ ಪ್ರಾರಂಭವಾಗಿ ಜರಿಮಲೆ ದುರ್ಗದವರೆಗೆ ಸಾಗುತ್ತದೆ. ಈ ಬೆಟ್ಟದ ತಪ್ಪಲಿನಲ್ಲಿ ಜಡೆಕಲ್ಲು ದುರ್ಗವೆಂಬ ಊರಿದೆ. ಈ ಕಡೆಯಿಂದ ಸಬ್ಬಗಡಿ ಓಬನಾಯ್ಕ, ಜಡವೇ ನಾಯಕ, ಬುಳ್ಳನಾಯಕ ಎನ್ನುವ ಮೂರು ಜನ ಸಹೋದರರು ತಮ್ಮ ಕಂಪಳ ಸಮೇತ ವಲಸೆ ಒಂದು ಬಿಳಿಚೋಡಿನಲ್ಲಿ ರೊಪ್ಪ ಹಾಕಿದರು ಮುಂದೆ ಶಾಗಲಿ ಗ್ರಾಮಕ್ಕೆ ಜಡವೀನಾಯಕರು, ಮತ್ತಿ ಗ್ರಾಮಕ್ಕೆ ಸಬ್ಬಗಡಿ ಓಬನಾಯಕರು ವಲಸೆ ಹೋದರು. ಬುಳ್ಳನಾಯಕರು ಮಾತ್ರ ಬಿಳಿಚೋಡಿನಲ್ಲಿ ನೆಲೆಸಿದರು. ಇವರ ಮಕ್ಕಳು ಚಿಕ್ಕ ಹನುಮನಾಯಕ ಮತ್ತು ಓಬಣ್ಣನಾಯಕರು. ಹೀಗೆ ಬಿಳಿಚೋಡು ಸಂತತಿ ಬೆಳೆಯುತ್ತಾ ಹೋಯಿತು. ಮುಂದೆ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಬಿಳಿಚೋಡು ಸಂತತಿ ಪ್ರವರ್ಧಮಾನಕ್ಕೆ ಬಂದಿತು. ಈತನು ದಳವಾಯಿಗಳ ದಂಗೆಗಳನ್ನು ಹತ್ತಿಕ್ಕಿದ. ಹರಪನಹಳ್ಳಿ, ರಾಯಗುರ್ಗ, ಬಸವಾಪಟ್ಟಣದ ಪಾಳೆಯಗಾರರು, ಮೊಗಲರು – ಹೀಗೆ ಸುತ್ತಲೂ ಶತ್ರುಗಳಿದ್ದರು. ಅತ್ಯಂತ ಧೈರ್ಯ ಹಾಗೂ ದಕ್ಷತೆಯಿಂದ ರಾಜ್ಯವಾಳಿ ಪ್ರಜಾಹಿತ ಕಾರ್ಯಗಳನ್ನು ಮಾಡಿ ದುರ್ಗದಲ್ಲಿ ಶಾಂತಿ ನೆಲೆಸುವಂತೆ ಮಾಡಿದವನು ಭರಮಣ್ಣನಾಯಕ. ಸದಾ ಯುದ್ಧ ನಿರತನಾದ್ದರಿಂದ ಇವನಿಗೆ ಬಿಚ್ಚುಗತ್ತಿ ಭರಮಣ್ಣನೆಂದೇ ಹೆಸರು.

ಶ್ರೀ ಮುರುಗಿ ಶಾಂತವೀರ ಸ್ವಾಮಿಗಳ ಆಶೀರ್ವಾದಕ್ಕೆ ಪಾತ್ರನಾದ ಈತನು ಶ್ರೀಗಳಿಗೆ ಬೆಟ್ಟದ ಮೇಲೆ ೩೦೦ ಅಂಕಣದ ಕಟ್ಟಡ ಹಾಗೂ ಬೆಟ್ಟದ ಕೆಳಗೆ ಒಂದು ಮಠ ಕಟ್ಟಿಸಿಕೊಟ್ಟು ಭರಮಸಾಗರದ ಕೆರೆಯೊಂದಿಗೆ ಸುಮಾರು ೨೦ ಕೆರೆಗಳನ್ನು ನಿರ್ಮಿಸಿದ್ದನು. ಜಗಲೂರು ತಾಲೂಕಿನ ಭರಮಸಮುದ್ರ ಕೆರೆಯೂ ಅದರಲ್ಲೊಂದಾಗಿರುವುದು ವಿಶೇಷ. ಚಿತ್ರದುರ್ಗದ ಸಿಹಿನೀರು ಹೊಂಡ, ಸಂತೆಹೊಂಡ, ಜಗಲುರು ತಾಲೂಕಿನ ಕೊಣಚಗಲ್ಲು ರಂಗನಾಥಸ್ವಾಮಿ ಬೆಟ್ಟದ ಬುಡದಲ್ಲಿರುವ ದಳವಾಯಿ ಮುದ್ದಣ್ಣನ ಹೊಂಡ ಮುಂತಾದ ಹೊಂಡಗಳನ್ನು ಕಟ್ಟಿಸಿ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರನಾಗಿದ್ದಾನೆ. ಕ್ರಿ.ಶ. ೧೭೨೦ – ೨೧ರಲ್ಲಿ ಅದಿವಾಲದ ಲಡಾಯಿಯಲ್ಲಿ ಗೆದ್ದರೂ ಗಾಯಗೊಂಡು ಕಾಲವಶನಾದ ನಂತರ ಇವನ ಮಗ ಹಿರೇಮದಕರಿ ೧೭೨೧ರಲ್ಲಿ ಪಟ್ಟಕ್ಕೆ ಬಂದ. ಈತನು ಹರಪನಹಳ್ಳಿ ಬಿದನೂರು, ಸವಣೂರು, ಸಂತೇಬೆನ್ನೂರು, ಮುಂತಾದ ಪಾಳೆಯಗಾರರೊಡನೆ ಹೋರಾಡಿ ಈಶಾನ್ಯದಲ್ಲಿ ರಾಜ್ಯ ವಿಸ್ತರಿಸಿದ. ಮಾಯಕೊಂಡ ಕೋಟೆಯ ವಶಕ್ಕಾಗಿ ಹರಪನಹಳ್ಳಿ ಸೋಮಶೇಖರನಾಯಕನಿಗೂ ಇವನಿಗೂ ಮಾಯಕೊಂಡದ ಮೈದಾನದಲ್ಲಿ ಘೋರ ಕದನ ನಡೆದು ೧೭೪೮ ವೀರ ಮರ‍ಣವನ್ನಪ್ಪಿದ. (ಈಗಲೂ ಈತನ ಸಮಾಧಿ ಮಾಯಕೊಂಡದಲ್ಲಿದೆ) ರಾಯದುರ್ಗ, ಬಳ್ಳಾರಿ, ಶಿವಮೊಗ್ಗ ಜಿಲ್ಲೆ ಭೂಮಿ ಇವನ ಒಡೆತನದಲ್ಲಿತ್ತು. ಇವನ ವಾರ್ಷಿಕ ಆದಾಯ ೯,೪೦,೦೦೦ ವರಹಗಳಷ್ಟಾಗಿತ್ತು.

ಇಮ್ಮಡಿ ಕಸ್ತೂರಿ ರಂಗಪ್ಪನಾಯಕ ಮಾಯಕೊಂಡದಲ್ಲಿ ತಂದೆಯ ಮರಣಾನಂತರ ಕ್ರಿ.ಶ. ೧೭೪೮ರಲ್ಲಿ ಚಿತ್ರದುರ್ಗದ ಪಾಳೆಯಗಾರನಾಗಿ ಮುಂದೆ ಮರಾಠ ಮುರಾರಿರಾಯನ ಸಹಾಯದೊಂದಿಗೆ, ಹರಪನಹಳ್ಳಿ ಪಾಳೆಯಗಾರರನ್ನು ಸೋಲಿಸಿ ಮಾಯಕೊಂಡವನ್ನು ಮತ್ತೆ ಗೆದ್ದು, ರಾಜ್ಯ ವಿಸ್ತರಿಸಿ ೧೭೫೪ರಲ್ಲಿ ಮರಣ ಹೊಂದಿದ.

ರಾಜವೀರ ಮದಕರಿನಾಯಕ (೧೭೫೪ – ೧೭೭೯): ಇಮ್ಮಡಿ ಕಸ್ತೂರಿ ರಂಗಪ್ಪ ನಾಯಕರಿಗೆ ಪುತ್ರ ಸಂತಾನವಿಲ್ಲದ ಕಾರಣ ಈತನ ಪಟ್ಟದನಾಗತಿ ಗಂಡೋಬಳಮ್ಮ ನಾಗತಿಯೂ ಹಿರೇಮದಕರಿನಾಯಕನ ಸೋದರ ಜಾನಕಲ್ಲಿನ ತೊದಲು ಭರಮಪ್ಪನಾಯಕನ ಮಗ ೧೨ ವರ್ಷದ ಬಾಲಕ ಮದಕರಿನಾಯಕನನ್ನು ಕ್ರಿಶ. ೧೭೫೪ರಲ್ಲಿ ಪಟ್ಟಕ್ಕೆ ತಂದನು. ಪ್ರಖ್ಯಾತಿ ಪಡೆದ ಇವನ ಮೇಲೆ ೧೭೬೨ರಲ್ಲಿ ಹೈದರ್ ಅಲಿ ಒಂದು ಲಕ್ಷ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಸೋತುಹೋದನು. ನಂತರ ಹೈದರ್ ಅಲಿ ೧೭೭೯ರಲ್ಲಿ ಮತ್ತೆ ಚಿತ್ರದುರ್ಗದ ಮೇಲೆ ಮುತ್ತಿಗೆ ಹಾಕಿದ. ಈ ಮುತ್ತಿಗೆಯಲ್ಲಿ ವೀರ ಒನಕೆ ಓಬವ್ವ ವೀರಾವೇಶದಿಂದ ಹೋರಾಡಿ ಸಾವನ್ನಪ್ಪಿದಳು. ವೀರ ಮದಕರಿ ನಾಯಕ ಸೆರೆಸಿಕ್ಕು ಶ್ರೀರಂಗಪಟ್ಟಣದಲ್ಲಿ ವೀರ ಮರಣವನ್ನಪ್ಪಿದ ನಂತರ ಕೆಲ ಕಾಲ ಚಿತ್ರದುರ್ಗ ಟಿಪ್ಪುವಿನ ಅಧೀನವಾಯಿತು.

ಇವರು ಕಾಮಗೇತಿ ವಂಶದ ವಾಲ್ಮೀಕಿ ಗೋತ್ರದವರಾಗಿದ್ದು, ಮತ್ತಿ ಮತ್ತು ಬಿಳಿಚೋಡು ಸಂತತಿಯಾಗಿ ಆಳ್ವಿಕೆ ಮಾಡಿದ್ದಾರೆ. ಇವರು ಶ್ರೀಮನ್ಮಹಾನಾಯಕಾಚಾರ್ಯ, ಕಾಮಗೇತಿ ಕಸ್ತೂರಿ ತಿಲಕ, ಹರಿಹರರಾಯ ಮರ್ಧನ ಇತ್ಯಾದಿ ಬಿರುದುಗಳನ್ನು ಹೊಂದಿದ್ದರು.

ಬಿಳಿಚೋಡು ಮತ್ತು ಚಿನ್ನದ ಮನೆಯವರು : ಭರಮಣ್ಣನಾಯಕ ಕಾಲದಲ್ಲಿ ಚಿತ್ರದುರ್ಗದಲ್ಲಿ ಚಿನ್ನದ ಮನೆಯೆನ್ನುವ ಒಂದು ಕಛೇರಿ ಇದ್ದು. ಅವರ ಮನೆಗೆ ಸಂಬಂಧಪಟ್ಟ ಹಾಗೂ ನಾಗತಿಯರ ಒಡವೆ ಮಾಡಿಸಲು ಎಂಟು ಜನ ಅಕ್ಕಸಾಲಿಗರ ತಂಡವಿತ್ತು. ಈ ಅಕ್ಕಸಾಲಿಗರಿಗೆ ಒಂದು ದಿನಕ್ಕೆ ಎರಡು ಗದ್ಯಾಣ ಸಂಬಳವಿತ್ತು. ಚಿನ್ನ ಕೊಟ್ಟು ತರುವ ಲೆಕ್ಕವಿಡಲು ವಿನ್ನದ ಮನೆಯ ಉಸ್ತುವಾರಿಗಾಗಿ ಬಿಳಿಚೋಡಿನ ದ್ಯಾಮಣ್ಣ ಎಂಬುವರನ್ನು ನೇಮಿಸಲಾಗಿತ್ತು. ಅಂದಿನಿಂದ ಬಿಳಿಚೋಡಿನ ದ್ಯಾಮಣ್ಣನವರ ಮನೆಯವರಿಗೆ ಚಿನ್ನದ ಮನೆಯವರೆಂದೆ ಹೆಸರು ಬಂತು.

ಹಡಪದ ಕೃಷ್ಣನಾಯಕ ಮತ್ತು ಬಿಳಿಚೋಡು : ಕ್ರಿ.ಶ. ೧೫೪೨ – ೧೫೭೦ರಲಿ ವಿಜಯನಗರದ ಸದಾಶಿವರಾಯನ ಕಾಲದಲ್ಲಿ ಈತನ ಅಮರ ನಾಯಕರಲ್ಲಿ ಒಬ್ಬನಾದ ಭೈಯಪ್ಪ ನಾಯಕರ ಮಕ್ಕಳು ಹಡಪದ ಕೃಷ್ಣಪ್ಪ ನಾಯಕರ ಅಮರ ಮಾಗಣಿಗೆ ಈ ಬಿಳಿಚೋಡು ಸೇರಿತ್ತೆಂದು ಈತನ ಶಾಸನದಲ್ಲಿ ತಿಳಿದುಬರುತ್ತದೆ.

ಕ್ರಿ.ಶ. ೧೫೫೪ರ ಕೃಷ್ಣಪ್ಪ ನಾಯಕರ ಕಾರ್ಯಕರ್ತರಾದ ಧಮ್ಮಪ್ಪ ನಾಯಕರು ಬಿಳಿಚೋಡಿನ ಕುರುಬರಿಗೆ ‘ಕುರಿದೆರೆ’ ವಜಾ ಮಾಡಿದ್ದರ ಬಗ್ಗೆ ಇಲ್ಲಿನ ರಾಮೇಶ್ವರ ದೇವಾಲಯದ ಕಂಬ ಶಾಸನದಿಂದ ತಿಳಿದುಬರುತ್ತದೆ. ೧೫೬೦ರಲ್ಲಿ ಕೃಷ್ಣಪ್ಪ ನಾಯಕರು ಬಿಳಿಚೋಡು ಸೀಮೆಯ ಕಾಡಜ್ಜಿ ಗ್ರಾಮವನ್ನು ಹರಿಹರ ದೇವರಿಗೆ ದಾನ ಮಾಡಿದ ವಿಚಾರವನ್ನು ಶಾಸನವೊಂದು (ಎ.ಕ.೧೧, ದಾವಣಗೆರೆ ಸಂಖ್ಯೆ ೧೮) ತಿಳಿಸುತ್ತದೆ. ಇಲ್ಲಿನ ಮೂಲ ರಾಮೇಶ್ವರ ದೇವಾಲಯವನ್ನು (ಉಮಾ ಮಹೇಶ್ವರ) ದೇವಾಲಯವನ್ನು ಬಿಚ್ಚುಗತ್ತಿ ಭರಮಣ್ಣನಾಯಕರು ಕಟ್ಟಿಸಿದ್ದಾರೆಂದು ಹೇಳಲಾಗುತ್ತದೆ. ವಿಜಯನಗರದ ೨ನೇ ಹರಿಹರ ಅರ್ಧ ವರಹ ನಾಣ್ಯ ಇಲ್ಲಿ ದೊರೆತಿವೆ. ನಾಣ್ಯದ ಮೇಲೆ ಮೇಲೆ ಶಿವಪಾರ್ವತಿ ಚಿತ್ರವಿದ್ದು, ಹಿಂಭಾಗದಲ್ಲಿ ‘ಶ್ರೀ ಪ್ರತಾಪ ಹರಿಹರ’ ಎಂಬ ನಾಗರಲಿಪಿಯಲ್ಲಿ ಮೂರು ಸಾಲಿನಲ್ಲಿ ಬರೆಯಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ .ಭೀಮಪ್ಪ ನಾಯಕ : ಎಂಟೆದೆಯ ಭಂಟ ರಾಜಕೀಯ ರಂಗದ ಹೆಬ್ಬುಲಿ ಎಂದು ಖ್ಯಾತರಾದ ಇವರು ಬಿಳಿಚೋಡಿನ ಹನುಮಪ್ಪ ಮತ್ತು ಹನುಮಕ್ಕ ದಂಪತಿಗಳ ೨ನೇ ಪುತ್ರನಾಗಿ ೧೯೦೪ರಲ್ಲಿ ಜನಿಸಿದರು. ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ದಾವಣಗೆರೆಯಲ್ಲಿ ಮುಗಿಸಿದರು. ತುಮಕೂರಿನಲ್ಲಿ ಬಿ.ಎ. ಮತ್ತು ಕಾನೂನು ಪದವಿ ಪಡೆದರು.

ಸರ್ಕಾರದಲ್ಲಿ ೧೫ ವರ್ಷ ಗುಮಾಸ್ತರಾಗಿ ಸೇವೆಗೈದು, ನಂತರ ಕ್ರಿಮಿನಲ್ ಲಾಯರ್ ಆಗಿ ಸೇವೆ ಮಾಡಿದರು. ೧೯೩೯ರ ಅರಣ್ಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ನಂತರ ರಾಷ್ಟ್ರನಾಯಕ ಎಸ್. ನಿಜಲಿಂಗಪ್ಪನವರೊಂದಿಗೆ ೧೯೪೨ರ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಲ್ಲಿ ಭಾಗವಹಿಸಿ ಚಿತ್ರದುರ್ಗ, ಹಾಸನ, ಮತ್ತು ಬೆಂಗಳೂರು ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು. ೧೯೪೮ರಲ್ಲಿ ಚಿತ್ರದುರ್ಗ ಜಿಲ್ಲೆ ಪುರಸಭೆಗೆ ಆಯ್ಕೆಯಾಗಿ ಅಧ್ಯಕ್ಷರಾದರು. ಇವರು ತಮ್ಮ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು. ಉದಾ: ದೊಡ್ಡಪೇಟೆ, ಚಿಕ್ಕಪೇಟೆ, ಬುರ್ಜನಹಟ್ಟಿ, ಕಾಮನಬಾವಿ ಬಡಾವಣೆಗಳಿಗೆ ರಸ್ತೆ ನಿರ್ಮಾಣ ಮಾಡಿದರು. ನಂತರ ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರೆ, ಕುರುವರ್ತಿಕೆರೆ ಮತ್ತು ಅಕ್ಕ ತಂಗಿಯರ ಹೊಂಡಗಳ ಹೂಳು ತೆಗಿಸಿದರು. ಪ್ರಥಮವಾಗಿ ನಗರಕ್ಕೆ ನೀರು ಸರಬರಾಜು ಮತ್ತು ಒಳ ಚರಂಡಿ ವ್ಯವಸ್ಥೆ ಮಾಡಿದರು. ಇವರ ಕಾಲದಲ್ಲಿ ಜೆ.ಸಿ.ಆರ್.ಬಡಾವಣೆ, ವಿ.ಸಿ. ಬಡಾವಣೆ, ಕಾಮನಭಾವಿ ಬಡಾವಣೆಗಳು ನಿರ್ಮಾಣವಾದವು. ವಿಜ್ಞಾನ ಕಾಲೇಜು, ಜಿಲ್ಲಾ ಆಸ್ಪತ್ರೆ, ನಿರ್ಮಾಣವಾದವು. ಎಲ್ಲಾ ಜನಾಂಗದ ವಿದ್ಯಾರ್ಥಿ ನಿಲಯಗಳಿಗಾಗಿ ನಿವೇಶನಗಳನ್ನು ಮಂಜೂರು ಮಾಡಿಸಿದರು. ದಿ. ಮರ್ಚೆಂಟ್ಸ್ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿದರು.

೧೯೫೨ರಲ್ಲಿ ಮೊಳಕಾಲ್ಮೂರು ಕ್ಷೇತ್ರ, ೧೯೫೭ರಲ್ಲಿ ಚಳ್ಳಕೆರೆ ಮತ್ತು ಜಗಲೂರು ಜಂಟಿ ಕ್ಷೇತ್ರಗಳಿಂದ ವಿಧಾನಸಭೆಗೆ ಸ್ಪರ್ಧಿಸಿ ಜಯಗಳಿಸಿದರು. ಆಗ ೧೦೧ ಜೊತೆ ಎತ್ತಿನ ಬಂಡಿಗಳೊಂದಿಗೆ ವಿಜಯೊತ್ಸವವನ್ನು ಆಚರಿಸಲಾಯಿತು. ಮುಂದೆ ಎಸ್. ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಸಹಕಾರ ಸಚಿವರಾಗಿ ಇವರು ಸೇವೆಗೈದರು.

ಕರ್ನಾಟಕ ರಾಜ್ಯ ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಅನುಪಮ ಸೇವೆ ಮಾಡಿದ ಇವರು “ಆಧುನಿಕ ಚಿತ್ರದುರ್ಗ ನಗರದ ಶಿಲ್ಪಿ” ಯಾಗಿ ಜನಮನದಲ್ಲಿದ್ದಾರೆ. ಇವರು ೧೯೬೬ರಲ್ಲಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

ಚಿನ್ನಯ್ಯ ಒಡೆಯರ್

ಇವರು ದಿನಾಂಕ ೧೫.೦೬.೧೯೨೯ರಲ್ಲಿ ಬಿಳಿಚೋಡಿನಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಮುಗಿಸಿ ಕಾನೂನು ಪದವಿಯನ್ನು ಬೆಳಗಾವಿಯಲ್ಲಿ ಪಡೆದರು. ವಕೀಲರಾಗಿ ದಾವಣಗೆರೆಯಲ್ಲಿ ಕೆಲಕಾಲ ಸೇವೆ, ಕುರುಬ ಸಮಾಜದ ಗುರುಗಳಾಗಿ ಬಿಳಿಚೋಡಿನ ಶ್ರೀರೇವಣಸಿದ್ಧೇಶ್ವರ ಮಠದ ಮುಖ್ಯಸ್ಥರಾಗಿದ್ದರು.

ಸ್ವಾತಂತ್ರ್ಯಾ ನಂತರ ಸಕ್ರಿಯ ರಾಜಕರಣದಲ್ಲಿ ಪ್ರವೇಶ ಮಾಡಿ ೧೯೬೮ ಮತ್ತು ೧೯೭೪ರಲ್ಲಿ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ಅಯ್ಕೆಯಾದರು. ರಾಜ್ಯ ಕುರಿ ಮತ್ತು ಕುರಿ ಉತ್ಪನ್ನ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಜಗಲೂರು ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ದಾವಣಗೆರೆ ಲೋಕ ಸಭಾ ಕ್ಷೇತ್ರವನ್ನು ೧೯೮೩, ೧೯೮೫, ಮತ್ತು ೧೯೯೦ರಲ್ಲಿ ಮೂರುಬಾರಿ ಪ್ರತಿನಿಧಿಸಿ ಕಾಂಗ್ರೆಸ್ ಪಕ್ಷದಿಂದ ಜಯಗಳಿಸಿದರು. ಇವರು ೨೦೦೪ರಲ್ಲಿ ಜಾತ್ಯಾತೀತ ದಳದಿಂದ ಸ್ಪರ್ಧಿಸಿ ಸೋಲುಂಡವರಾಗಿದ್ದಾರೆ. ಶ್ರೀಯುತರು ಸರಳ, ಸಜ್ಜನಿಕೆ, ತ್ಯಾಗ ಮತ್ತು ಸೇವಾ ಮನೋಭಾವದವರಾಗಿದ್ದಾರೆ. ಸ್ವಾತಂತ್ರ್ಯದ ಪೂರ್ವೋತ್ತರಗಳನ್ನು ಕಂಡ ಈ ಭಾಗದ ಕೊನೆಯ ರಾಜಕೀಯ ಕೊಂಡಿ ಹಾಗೂ ಕದಂಬ ಸಮಾಜದ ಧಾರ್ಮಿಕ ಗುರುಗಳಾದ ಶ್ರೀಯುತರು ತಮ್ಮ ೯೦ನೇ ವಯಸ್ಸಿನಲ್ಲಿ ದಿನಾಂಕ ೧೯.೧೧.೨೦೦೭ರಂದು (ಸೋಮವಾರ) ದೈವಾಧೀನರಾದರು. ಇದೇ ಗ್ರಾಮದ ವೀರಯೋಧ ಭಾನುಪ್ರಕಾಶ್ ಎಂಬ ಯುವಕ ೧೯೯೯ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಹುತಾತ್ಮನಾಗಿರುವುದು ವಿಷಾದದ ಸಂಗತಿಯೇ ಸರಿ.

ಆಧಾರ ಗ್ರಂಥಗಳು

೧. ಎಪಿಗ್ರಾಫಿಯ ಕರ್ನಾಟಿಕ. ಸಂ. ೧೧

೨. ಲಕ್ಷ್ಮಣ್ ತೆಲಗಾವಿ, ಎಂ.ವಿ. ಶ್ರೀನಿವಾಸ, ಸಂ., ೧೯೭೮, ಹುಲ್ಲೂರು ಶ್ರೀನಿವಾಸ ಜೋಯಿಸರ ಐತಿಹಾಸಿಕ ಲೇಖನಗಳು, ಹು. ಶ್ರೀ. ಜೋ.ಗ್ರಂ.ಪ್ರ. ಸಮಿತಿ, ಚಿತ್ರದುರ್ಗ

೩. ರಾಜಶೇಖರಪ್ಪ, ಬಿ., ೨೦೦೧, ದುರ್ಗದ ಶೋಧನೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

೪. ರಾಜಶೇಖರಪ್ಪ ಬಿ., ೨೦೦೧, ಇತಿಹಾಸ ಕಥನ, ಸಿ.ವಿ.ಜಿ. ಪಬ್ಲಿಕೇಶನ್ಸ್, ಬೆಂಗಳೂರು

೫. ಗಿರಿಜಾ, ಟಿ., ಚಿತ್ರದುರ್ಗ ಜಿಲ್ಲಾ ದರ್ಶಿನಿ, ೧೯೯೧, ರೇಖಾ ಪ್ರಕಾಶನ, ದಾವಣಗೆರೆ

೬. ತರಳಬಾಳು ಸ್ಮರಣ ಸಂಚಿಕೆಯ (ಜಗಲೂರು) ಕೆಲವು ಲೇಖನಗಳು

೭. ಕ್ಷೇತ್ರ ಕಾರ್ಯ ವರದಿ

೮. ಕೆಲ ಪತ್ರಿಕೆಗಳ ವರದಿ ಆಧರಿಸಿದೆ