ಆಂಗ್ಲಭಾಷೆಯ ‘culture’ ಎಂಬ ಪದಕ್ಕೆ ಸಮರ್ಥಕವಾಗಿ ಕನ್ನಡದಲ್ಲಿ ‘ಸಂಸ್ಕೃತಿ’ ಎಂಬ ಪದ ಬಳಕೆಯಲ್ಲಿರುವುದು ತಿಳಿದ ಸಂಗತಿ. ಸಂಸ್ಕೃತಿ ಮಾನವನ ಅವಿಭಾಜ್ಯ ಅಂಗ. ಇದರ ಅರ್ಥ ಮತ್ತು ವ್ಯಾಪ್ತಿ ವಿಶಾಲವಾದದ್ದು ಮತ್ತು ಬಹುಮುಖಿ ಆಯಾಮಗಳಿಂದ ಕೂಡಿರುವಂಥಾದ್ದು. ನಿರಂತರ ಬೆಳವಣಿಗೆ ಇದರ ವಿಶೇಷತೆ. ಸಂಸ್ಕೃತಿಯ ಕುರಿತು ವಿದ್ವಾಂಸರು ಬಹುಹಿಂದಿನಿಂದಲೇ ತಮ್ಮ ದೃಷ್ಟಿಕೋನಗಳಲ್ಲಿ ವ್ಯಾಖ್ಯಾನಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಜನಪದರ ಪ್ರಾಚೀನ ನಡವಳಿಕೆ, ಆಚಾರ – ವಿಚಾರ, ಹಾಗೂ ಜೀವನ ವಿಧಾನದ ಪ್ರತಿಬಿಂಬವೇ ಸಂಸ್ಕೃತಿ ಎನ್ನಬಹುದು. ಸಂಸ್ಕೃತಿಯಲ್ಲಿ ಜನರ ರೂಢಿ ಸಂಪ್ರದಾಯ, ವೇಷ ಭಾಷೆ, ಆಚರಣೆ, ನಂಬಿಕೆಗಳು, ಐತಿಹ್ಯಗಳು, ಕಲೆ ಮತ್ತು ವಾಸ್ತುಶಿಲ್ಪ, ಮೂರ್ತಿಶಿಲ್ಪ, ಜಾತ್ರೆಗಳಲ್ಲಿ ಜನಸಮುದಾಯಗಳ ಸಹಭಾಗಿತ್ವವೂ ಸೇರಿದಂತೆ ಅನೇಕ ಅಂಶಗಳು ಸಮ್ಮಿಳಿತಗೊಂಡಿರುತ್ತವೆ. ಜಾಗತೀಕರಣದ ಪರಿಕಲ್ಪನೆ ಇಂದು ಹೆಮ್ಮೆರವಾಗಿ ಬೆಳೆದು ಜಗತ್ತಿನ ಎಲ್ಲ ರಂಗಗಳನ್ನೂ ತನ್ನೆಡೆಗೆ ಸೆಳೆಯುತ್ತಿರುವಾಗ ಸಂಸ್ಕೃತಿಯನ್ನು ಪರಿವರ್ತಿಸುವ ನಿಟ್ಟಿನಲ್ಲಿ ಇದು ತೀವ್ರತರವಾದ ಪರಿಣಾಮವನ್ನು ಬೀರುತ್ತಿರುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಅಧ್ಯಯನಗಳು ಮಹತ್ವ ಪಡೆದುಕೊಳ್ಳುತ್ತಿರುವುದು ಗಮನೀಯ. ಪ್ರಸ್ತುತ ಜಗಲೂರು ತಾಲೂಕಿನಲ್ಲಿರುವ (ದಾವಣಗೆರೆ ಜಿಲ್ಲೆ) ಕಲ್ಲೇದೇವರಪುರ ಗ್ರಾಮವು ಪ್ರಾಚೀನ ಕಾಲದಿಂದಲೂ ಧಾರ್ಮಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹು ಮಹತ್ವ ಪಡೆದ ತಾಣ. ಜಗಲೂರಿನಿಂದ ೨೦ ಕಿ.ಮೀ. ದೂರದಲ್ಲಿರುವ ಇದು ಜನಗಿಹಳ್ಳದ ಬಲದಂಡೆಯಲ್ಲಿದೆ. ಈ ಗ್ರಾಮದ ದೇವಾಲಯಗಳ ವಾಸ್ತುಶಿಲ್ಪ, ಮೂರ್ತಿಶಿಲ್ಪ, ಕಲ್ಲೇಶ್ವರ ದೇವರ ಜಾತ್ರಾ ವಿಶೇಷತೆ, ಆಚರಣೆಗಳನ್ನು ಕುರಿತು ಚರ್ಚಿಸುವುದು ಈ ಲೇಖನದ ಮುಖ್ಯ ಉದ್ದೇಶ.

ಚಿತ್ರದುರ್ಗ ಜಿಲ್ಲೆಯ ಪ್ರಾಗಿತಿಹಾಸ ಮತ್ತು ಆದಿ ಇತಿಹಾಸಕಾಲದ ಅನೇಕ ನೆಲೆಗಳ ಜೀವಸೆಲೆಯಾಗಿದ್ದ ಜನಗಿಹಳ್ಳವು ಇದು ಕಲ್ಲೇದೇವರಪುರ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಶಾಸನಗಳಲ್ಲಿ ಈ ಹಳ್ಳವನ್ನು ‘ಹನೆಯತೊರೆ’ ಎಂದು ಉಲ್ಲೇಖಿಸಲಾಗಿದೆ.[1] ಇತ್ತೀಚಿನವರೆಗೆ ಪ್ರಾಗಿತಿಹಾಸ ಕಾಲದ ಯಾವುದೇ ಪ್ರಕಾರದ ಅವಶೇಷಗಳು ಈ ಗ್ರಾಮದಲ್ಲಿ ಪತ್ತೆಯಾಗಿಲ್ಲವಾದರೂ ಇದು ಪ್ರಾಗಿತಿಹಾಸ ಸಂಸ್ಕೃತಿಯ ಮಾನವನ ಚಟುವಟಿಕೆಗಳಿಗೆ ಒಳಪಟ್ಟಿತ್ತೆನ್ನಬಹುದು. ಇಲ್ಲಿಗೆ ಸಮೀಪದ ಸಂಗೇನಹಳ್ಳಿಯ ವಿಶಾಲ ಕೆರೆಯ ಮಧ್ಯೆ ಇರುವ ನಡುಗಡ್ಡೆಯಲ್ಲಿ ನೂತನ ಶಿಲಾಯುಗದ ಸಂಸ್ಕೃತಿಯನ್ನು ವಿವರಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ಬೂದಿದಿಬ್ಬದ ಉಂಡೆಗಳು, ಉಜ್ಜಿ ನಯಗೊಳಿಸಿದ ಕಲ್ಲಿನ ಕೊಡಲಿಗಳು, ಬೂದು, ಕಪ್ಪು, ಕೆಂಪುವರ್ಣದ ಬಿಳಿವರ್ಣದ ರೇಖಾಚಿತ್ರಗಳಿರುವ ಹೊಳಪುಳ್ಳ ಮಡಕೆಯ ಚೂರುಗಳು ಮತ್ತು ಹುಟ್ಟು ಬಂಡೆಗಳ ಮೇಲೆ ಕುಟ್ಟಿ ಮೂಡಿಸಿದ ವಿವಿಧ ಪ್ರಾಣಿಗಳು, ಮನುಷ್ಯ ಹಾಗೂ ಇತರೆ ಜ್ಯಾಮಿತಿ ವಿನ್ಯಾಸದ ರೇಖಾಕೃತಿಗಳು ಪತ್ತೆಯಾಗಿವೆ.[2] ಚಿತ್ರದುರ್ಗ ಸಮೀಪದ ಕುಂಚಿಗನಹಾಳು ಕಣಿವೆ. ಬೆಳಗಟ್ಟ ಪರಿಸರದ ಎದ್ದುಲಬಂಡೆ, ದೊಡ್ಡ ಸಿದ್ದವನಹಳ್ಳಿಯ ಪರಿಸರದಲ್ಲಿ ದೊರೆತ ರೇಖಾಕೃತಿಗಳಲ್ಲಿ ಮತ್ತು ಇಲ್ಲಿನ ರೇಖಾಕೃತಿಗಳಲ್ಲಿ ಬಹುಮಟ್ಟಿನ ಹೋಲಿಕೆ ಇರುವುದು ಗಮನಾರ್ಹ. ಕಲ್ಲೇದೇವರಪುರ ಗ್ರಾಮದ ಹೊರವಲಯದಲ್ಲಿ ಇತ್ತೀಚೆಗೆ ಆದಿ ಇತಿಹಾಸ ಕಾಲದ ಕೆಂಪುವರ್ಣದ ಮೃತ್ಪಾತ್ರೆಯ ಚೂರುಗಳು ಲಭ್ಯವಾಗಿವೆ. ಚಂದ್ರವಳ್ಳಿ, ಚಿಪ್ಪಿನಕೆರೆ, ಮತ್ತು ಆಕನೂರುಗಳಂತಹ ಆದಿ ಇತಿಹಾಸ ಕಾಲದ ನೆಲೆಗಳ ಪರಿಸರದಲ್ಲಿರುವ ಈ ಗ್ರಾಮ ಬಹು ಹಿಂದೆಯೇ ಮಾನವನ ಒಡನಾಟಕ್ಕೆ ಇಳಪಟ್ಟದ್ದು ದೃಢಪಡುತ್ತದೆ.

ದೇವಾಲಯಗಳು

ಒಂದು ಪ್ರದೇಶದ ಸಾಂಸ್ಕೃತಿಕ ಅಧ್ಯಯನದಲ್ಲಿ ದೇವಾಲಯಗಳ ಪಾತ್ರ ಅಗ್ರಗಣ್ಯವಾಗಿದ್ದು, ಮಹತ್ವದ ವಿಶ್ಲೇಷಣೆಗಳಿಗೆ ಒಳಪಡುತ್ತವೆ. ಅರಸರ ಆಶ್ರಯ, ಪಾಲನೆ ಮತ್ತು ಪೋಷಣೆಯ ಫಲವಾಗಿ ಬೃಹತ್ತಾಗಿ ಬೆಳೆದ ದೇವಾಲಯಗಳು ಮಧ್ಯಕಾಲದ ವೇಳೆಗೆ ಸಮಾಜದ ಕೇಂದ್ರಬಿಂದುಗಳಾಗಿ ಜನುಮದಲ್ಲಿ ಅಚ್ಚಳಿಯದ ಸ್ಥಾನ ಪಡೆದವು. ಕಲ್ಲೇದೇವರಪುರ ಗ್ರಾಮದಲ್ಲಿ ಕಲ್ಲೇಶ್ವರ, ತ್ರಿಕೂಟಲಿಂಗೇಶ್ವರ, ಅಳಳ್ಳಿಬಸವಣ್ಣ ಮತ್ತು ಗುಗ್ಗರಿ ಬಸವಣ್ಣ ದೇವಾಲಯಗಳಿವೆ.

ಕಲ್ಲೇಶ್ವರ ದೇವಾಲಯ

ಕಲ್ಲೇದೇವರಪುರ ಹಾಗೂ ಸುತ್ತಮುತ್ತಲಿನ ಜನರ ಬಹುಮುಖ್ಯ ಆರಾಧ್ಯದೈವ ಕಲ್ಲೇಶ್ವರದೇವರ ದೇವಾಲಯವಿರುವುದು ಗ್ರಾಮದ ಮಧ್ಯಭಾಗದಲ್ಲಿ. ಶಾಸನಗಳಲ್ಲಿ ಉಲ್ಲೇಖಿತವಾಗಿರುವಂತೆ ಇದರ ಹೆಸರು ಕಲ್ಲಿನಾಥ.[3] ಕಲ್ಲಿನಾಥ ದೇವರಿಂದ ಈ ಗ್ರಾಮವು ಕಲ್ಲಿನಾಥಪುರ, ಕಲ್ಲೇದೇವರಪುರ ಎಂಬ ಹೆಸರು ಪಡೆದಿದೆ.

ನಾಡಿನ ಎಲ್ಲೆಡೆಯಲ್ಲಿಯೂ ದೇವಾಲಯಗಳಿಗೆ ಐತಿಹ್ಯಗಳಿರುವಂತೆ ಕಲ್ಲೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ಜನಪದರಲ್ಲಿ ಐತಿಹ್ಯವೊಂದು ಪ್ರಚಲಿತದಲ್ಲಿದೆ. ಪ್ರಸ್ತುತ ದೇವಾಲಯವಿರುವ ಪ್ರದೇಶವು ಹಿಂದೊಮ್ಮೆ ಕಾಡು ಪೆಳೆಗಳಿಂದ ಆವೃತವಾಗಿತ್ತು. ದೂರದೇಶದಿಂದ ವ್ಯಾಪಾರ ಮಾಡುತ್ತಾ ಬಂದ ಮಲ್ಲಸೆಟ್ಟಿಯೆಂಬ ವರ್ತಕನು ದಣಿವಾರಿಸಿಕೊಳ್ಳಲು ಈ ಪ್ರದೇಶದಲ್ಲಿ ನೆಲೆಯೂರಿದ. ತೀವ್ರ ಸುತ್ತಾಟದಿಂದ ಬಳಲಿದ್ದ ಅವನು ತನ್ನ ಹಸಿವನ್ನು ನೀಗಿಸಿಕೊಳ್ಳಲು ಅಲ್ಲಿಯೇ ಇದ್ದ ಲಿಂಗಾಕೃತಿಯ ಕಲ್ಲಿನ ಬದಿಯಲ್ಲಿ ಇನ್ನೆರಡು ಕಲ್ಲುಗಳನ್ನಿಟ್ಟು ಒಲೆಯೂಡಿ ಮೃತ್ಪಾತ್ರೆಯಲ್ಲಿ ಅಡುಗೆ ಮಾಡತೊಡಗಿದ. ಮಣ್ಣಿನ ಪಾತ್ರೆಯಲ್ಲಿ ಬೇಯುತ್ತಿದ್ದ ಅನ್ನವು ಇದ್ದಕ್ಕಿದ್ದಂತೆ ರಕ್ತವಾಗಿ ಮಾರ್ಪಟ್ಟಿತಂತೆ. ಇದನ್ನು ಚೆಲ್ಲಿದ ವ್ಯಾಪಾರಿ ಪುನಃ ಅಡುಗೆ ಮಾಡಲು ಮುಂದಾದಾಗ ಇದೇ ಘಟನೆ ಪುನರಾವರ್ತನೆಯಾಯಿತು. ಇದರಿಂದ ಚಿಂತಾಕ್ರಾಂತನಾದ ವ್ಯಾಪಾರಿ ದೇವರ ಮೋರೆ ಹೋದನು. ಅಗ ದೇವರು ಅಪ್ರಾಪ್ತ ಬಾಲಕನಲ್ಲಿ ಮೈದುಂಬಿ ಬಂದು ನೀನು ಒಲೆಗುಂಡೆದು ಭಾವಿಸಿದ ನಾನು ಒಲೆಗುಂಡಲ್ಲ, ನಾನು ಕಲ್ಲಿನಾಥ, ಕಲ್ಲಿನಾಥನಾಗಿ ಉದ್ಭವನಾಗಿದ್ದೇನೆ ಎಂದು ಉದ್ಗರಿಸಿತಂತೆ. ಮಲ್ಲಸೆಟ್ಟಿಯು ತಿಳಿಯದೆ ತನ್ನಿಂದಾದ ತಪ್ಪಿಗಾಗಿ ದೇವರಲ್ಲಿ ಕ್ಷಮೆಕೋರಿದನು. ಆಗ ಲಿಂಗದ ಕಲ್ಲಿನಿಂದ ಒಂದು ತುಂಡು ಸಿಡಿದು ‘ನೀನು ವ್ಯಾಪಾರ ಮಾಡುವಾಗ ಈ ಕಲ್ಲನ್ನೇ ತೂಕದ ಕಲ್ಲನ್ನಾಗಿ ಬಳಸು’ ಎಂದು ಆದೇಶವಿತ್ತಿತಂತೆ. ಇದನ್ನು ಪಾಲಿಸಿದ ವ್ಯಾಪಾರಿಗೆ ವೃತ್ತಿಯಲ್ಲಿ ಲಾಭವಾಗಿ ಮಲ್ಲಸೆಟ್ಟಿಯು ದೇವಾಲಯ ಕಟ್ಟಿಸುವುದುರ ಮೂಲಕ ಭಕ್ತಿಯನ್ನು ಪ್ರದರ್ಶಿಸಿದನೆಂಬುದು ಪ್ರತೀತಿ.

ಪೂರ್ವಾಭಿಮುಖವಾಗಿರುವ ಕಲ್ಲೇಶ್ವರ ದೇವಾಲಯದ ಮೂಲ ತಳವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ, ನವರಂಗ, ಮುಖಮಂಟಪ ಮತ್ತು ನಂದಿ ಮಂಟಪಗಳಿವೆ. ಇವುಗಳಿಗೆ ಸೇರಿದಂತೆ ಇತ್ತೀಚೆಗೆ ಅನೇಕ ಭಾಗಗಳನ್ನು ಕಟ್ಟಿಸಿರುವರು. ಗರ್ಭಗೃಹದಲ್ಲಿರುವ ಒಂದು ಅಡಿ ಎತ್ತರದ ಶಿವಲಿಂಗಕ್ಕೆ ಬೆಳ್ಳಿಯ ಮುಖವಾಡವನ್ನು ಅಳವಡಿಸಿದ್ದಾರೆ. ಗರ್ಭಗೃಹ ಮತ್ತು ಅಂತರಾಳದ ಬಾಗಿಲುವಾಡಗಳಿಗೆ ಹೊದಿಸಿರುವ ಹಿತ್ತಾಳೆಯ ಕವಚಗಳಲ್ಲಿ ಶೈವ ದ್ವಾರಪಾಲಕರು, ಹೂಬಳ್ಳಿಗಳು, ಅಲಂಕರಣಗಳು, ಲಲಾಟದಲ್ಲಿ ಗಜಲಕ್ಷ್ಮಿಯ ಉಬ್ಬು ರಚನೆಯನ್ನು ಕಾಣಬಹುದು. ನವರಂಗದ ನಾಲ್ಕೂದಿಕ್ಕಿಗೆ ಮೊದಲು ದ್ವಾರಗಳಿದ್ದವು. ಆದರೆ ಪ್ರಸ್ತುತ ಉತ್ತರದಿಕ್ಕಿನ ದ್ವಾರಕ್ಕೆ ಹೊಂದಿಕೊಂಡಂತೆ ಕೊಠಡಿ ಕಟ್ಟಿರುವರು. ನವರಂಗದಲ್ಲಿ ನಾರುಗಲ್ಲಿನಲ್ಲಿ (Soap Stone) ಕಡೆದ ಗಂಟೆಯಾಕೃತಿಯ ನಾಲ್ಕು ಕಂಬಗಳಿವೆ. ತಿರುಗಣೆ ಯಂತ್ರದಿಂದ ತಯಾರಿಸಿರುವ ಈ ಕಂಬಗಳಲ್ಲಿ ಚಚ್ಚೌಕ ಪೀಠ, ಚೌಕಾಕಾರ, ವೃತ್ತಾಕಾರದ ಬಳೆಗಳ ರಚನೆ, ಘಂಟಾಕಾರ, ಚೌಕಾಕಾರದ ಫಲಕ ಮತ್ತು ಬೋದುಗೆಗಳಿವೆ. ನವರಂಗದ ಛತ್ತಿನಲಿರುವುದು ಅಧೋಮುಖ ಪದ್ಮದ ರಚನೆ. ನವರಂಗದ ದಕ್ಷಿಣ ದ್ವಾರವು ತ್ರಿಶಾಖಾ ರೀತಿಯದು. ಇದರಲ್ಲಿ ಬಳ್ಳಿಗಳಿಂದ ಕೂಡಿದ ಲತಾ ಶಾಖೆ, ಸ್ತಂಭದಿಂದಾದ ಸ್ತಂಭಶಾಖೆ, ವ್ಯಾಳದಿಂದೊಡಗೂಡಿದ ವ್ಯಾಳಶಾಖೆಗಳಿವೆ. ಪೇದ್ಯಭಾಗದಲ್ಲಿರುವ ಶೈವದ್ವಾರಪಾಲಕರು ಅಲಂಕೃತವಾಗಿದ್ದು, ಕಿರೀಟಮುಕುಟ, ಕರ್ಣಕುಂಡಲ, ಹಾರ, ಸರ, ನಡುಪಟ್ಟಿ, ಕಾಲುಕಡಗ, ನೂಪುರಗಳನ್ನು ಧರಿಸಿರುವರು. ಕೈಗಳಲ್ಲಿ ತ್ರಿಶೂಲ, ಢಮರು, ಗದೆ ಮತ್ತು ಅಭಯಹಸ್ತದಲ್ಲಿರುವರು. ಲಲಾಟ ಫಲಕದಲ್ಲಿರುವುದು ಗಜಲಕ್ಷ್ಮಿಯ ಬಿಂಬ. ದಕ್ಷಿಣದಿಕ್ಕಿನ ಮುಖಮಂಟಪದಲ್ಲಿನ ನಾಲ್ಕು ಕಂಬಗಳು ನವರಂಗದಲ್ಲಿನ ಕಂಬಗಳಂತೆಯೇ ಇವೆ. ನವರಂಗದ ಮುಂದಿನ ಮುಖಮಂಟಪವು ವಿಜಯನಗರೋತ್ತರ ಕಾಲದಲ್ಲಿ ನಿರ್ಮಾಣವಾಗಿದೆ. ಇಲ್ಲಿನ ನಾಲ್ಕು ಕಂಬಗಳನ್ನು ಚೌಕ ಮತ್ತು ಅಷ್ಟ ಪಾರ್ಶ್ವಗಳಲ್ಲಿ ಕೆತ್ತಿರುವರು. ಇಲ್ಲಿ ಇತ್ತೀಚಿಗೆ ವಿಸ್ತರಿಸಿ ಕಟ್ಟಿದ ಕೊಠಡಿಗಳಲ್ಲಿ ವೀರಭದ್ರ ಮತ್ತು ಗೌರಮ್ಮನ ಶಿಲ್ಪಗಳನ್ನು ಪ್ರತಿಷ್ಠಾಪಿಸಿರುವರು. ಮುಖಮಂಟಪದ ದ್ವಾರವು ಲತಾಶಾಖೆ, ಸ್ಥಂಭಶಾಖೆಗಳಿಂದ ಅಲಂಕೃತವಾಗಿದೆ. ಲಲಾಟದಲ್ಲಿರುವುದು ಗಣೇಶನ ಉಬ್ಬುಶಿಲ್ಪ, ದೇಗುಲದ ದಕ್ಷಿಣ ಮತ್ತು ಪೂರ್ವಕ್ಕೆ ದೊಡ್ಡನಂದಿ ವಿಗ್ರಹಗಳಿವೆ.

ದೇವಾಲಯದ ಅಧಿಷ್ಠಾನದಲ್ಲಿ ಉಪಾನ, ಕಂಠ, ತ್ರಿಪಟ, ಕುಮುದ, ಜಗತಿಯ ರಚನೆಗಳಿವೆ. ಅಲಂಕಾರರಹಿತ ಭಿತ್ತಿಯಮೇಲೆ ಚಜ್ಜವಿದೆ. ಗರ್ಭಗೃಹದ ಮೇಲಿರುವುದು ಕದಂಬ ನಾಗರ ಅಥವಾ ಫಾಂಸನಾ ಮಾದರಿಯ ಶಿಖರ. ಒಂದರ ಮೇಲೆ ಒಂದರಂತೆ ಕಿರಿದಾಗುತ್ತಾ ಸಾಗಿರುವ ನಾಸಿ, ಅಲಂಕಾರಯುಕ್ತ ಕಪೋತಗಳುಳ್ಳ ಪಿರಮಿಡ್ಡಿನಾಕಾರದ ಶಿಖರವಿದು. ಇದರ ಮೇಲೆ ಗ್ರೀವದ ತರುವಾಯ ಚೌಕಘಂಟಾ ಮತ್ತು ಕಲಶವಿದೆ. ಇದು ಹಂಪಿಯ ಹೇಮಕೂಟ ಪರಿಸರದ ದೇವಾಲಯಗಳ ಶಿಖರಗಳನ್ನು ನೆನಪಿಗೆ ತರುತ್ತದೆ. ಗರ್ಭಗೃಹದ ಮುಂಬದಿಯ ಸುಖನಾಸದ ಮೇಲೆ ಸಿಂಹದೊಂದಿಗೆ ಸೆಣಸುತ್ತಿರುವ ಸಳ (ಹೊಯ್ಸಳರ ಲಾಂಛನ)ನ ದುಂಡು ಶಿಲ್ಪವಿದ್ದು, ಸಳನ ಶಿಲ್ಪ ಭಗ್ನವಾಗಿದೆ. ಕಲ್ಲೇಶ್ವರ ದೇಗುಲದ ಗರ್ಭಗೃಹ, ಅಂತರಾಳ, ನವರಂಗದ ರಚನೆಗಳು ಕಾಲಮಾನದ ದೃಷ್ಠಿಯಿಂದ ಹೊಯ್ಸಳರ ಅವಧಿಯ ನಿರ್ಮಿತಿಗಳು. ಮುಖಮಂಟಪ ಮಾತ್ರ ವಿಜಯನಗರೋತ್ತರ ಕಾಲದ್ದು. ಬಹುಶಃ ದೇವಾಲಯ ಜೀರ್ಣೋದ್ಧಾರಗೊಂಡ ಅವಧಿಯಲ್ಲಿ ಈ ಭಾಗ ನಿರ್ಮಾಣವಾಗಿರಬಹುದು.

ದೇವಾಲಯಗಳ ನಿರ್ಮಾಣದ ನಂತರ ಅರಸರು ದಾನದತ್ತಿಗಳನ್ನು ಅದರ ನಿರ್ವಹಣೆಗಾಗಿ ನೀಡುತ್ತಿದ್ದರು. ಕಲ್ಲೇದೇವರಪುರದ ಕಲ್ಲೇಶ್ವರ ದೇಗುಲದ ದಕ್ಷಿಣ ದಿಕ್ಕಿನ ಮುಖಮಂಟಪದಲ್ಲಿನ ಶಾಸನ[4] ದೇವಗಿರಿಯ ಸೇವುಣರದೊರೆ ರಾಮಚಂದ್ರನ ದೇವನದು. ಇದರ ಕಾಲ ಕ್ರಿ.ಶ.೧೨೭೯. ರಾಮಚಂದ್ರ ದೇವನ ಸಾಮಂತ ಹೆಮ್ಮಾಡಿದೇವ ಕೊಟ್ಟೂರು ವ್ರಿತ್ರಿಯ ಮಾಲೂರು ಗ್ರಾಮದ ಭೂಮಿಯನ್ನು ಕಲ್ಲಿನಾಥನಿಗೆ ದಾನ ನೀಡಿದ್ದುದನ್ನು ಈ ಶಾಸನ ತಿಳಿಸುತ್ತದೆ. ತಿರುಮಲಭಟ್ಟರು ಕಲ್ಲಿನಾಥನ ಅಭಿಷೇಕಕ್ಕೆಂದೇ ಗದ್ದೆಯೊಂದನ್ನು ನೀಡಿದ್ದರು.[5] ಕಲ್ಲಿನಾಥ ದೇವರ ರಂಗಭೋಗಕ್ಕೆ ಕೆಲವು ಮತ್ತರು ಭೂಮಿಯನ್ನು ಬೀಚಗೌಡನೆಂಬುವನು ದತ್ತಿ ನೀಡಿದ್ದನು.[6] ಶಾಸನದಲ್ಲಿನ ಅಕ್ಷರಗಳ ತೃಟಿತತೆಯಿಂದ ದಾನದ ಪ್ರಮಾಣ ತಿಳಿಯುತ್ತಿಲ್ಲ.

ತ್ರಿಕೂಟ ಲಿಂಗೇಶ್ವರ

ಕಲ್ಲೇಶ್ವರ ದೇವಾಲಯದ ಆವರಣಕ್ಕೆ ಹೊಂದಿಕೊಂಡಂತೆ ಉತ್ತರಾಭಿಮುಖವಾಗಿರುವುದೇ ತ್ರಿಕೂಟ ಲಿಂಗೇಶ್ವರ ದೇವಾಲಯ. ಹೆಸರೇ ಸೂಚಿಸುವಂತೆ ಇದು ತ್ರಿಕೂಟ ಅಂದರೆ ಮೂರು ಗರ್ಭಗೃಹಗಳಿಂದ ಕೂಡಿರುವಂಥಾದ್ದು. ಶಾಸನದಲ್ಲಿ ಉಕ್ತವಾಗಿರುವಂತೆ ಈ ದೇಗುಲ ಪ್ರಾಚೀನ ಹೆಸರು ಮಣಲೇಶ್ವರ.[7] ಕ್ರಮೇಣ ಈ ಹೆಸರು ಮರೆಯಾಗಿ ತ್ರಿಕೂಟೇಶ್ವರ ಎಂಬ ಹೆಸರು ಬಂದಿದೆ. ದೇವಾಲಯವು ತಲಾ ಮೂರು ಗರ್ಭಗೃಹ ಮತ್ತು ಅಂತರಾಳಗಳು ಹಾಗೂ ಇವುಗಳನ್ನು ಒಳಗೊಂಡಂತೆ ನವರಂಗವಿದೆ. ದೇವಾಲಯದ ಉತ್ತರಾಭಿಮುಖವಾಗಿರುವುದು ಮುಖ್ಯ ಗರ್ಭಗೃಹ, ಇದರಲ್ಲಿನ ಲಿಂಗವನ್ನು ಬ್ರಹ್ಮ ಎಂದೂ, ಪಶ್ಚಿಮಾಭಿಮುಖವಾಗಿರುವ ಗರ್ಭಗೃಹದಲ್ಲಿನ ಲಿಂಗವನ್ನು ವಿಷ್ಣು ಎಂದೂ, ಪೂರ್ವಾಭಿಮುಖವಾಗಿರುವ ಗರ್ಭಗೃಹದಲ್ಲಿನ ಲಿಂಗವನ್ನು ಮಹೇಶ್ವರ ಎಂದೂ ಕರೆಯುವುದು ವಾಡಿಕೆ. ಕಲ್ಯಾಣ ಚಾಲುಕ್ಯ ಶೈಲಿಯ ಈ ಲಿಂಗಗಳ ಎತ್ತರ ಕ್ರಮವಾಗಿ ೨.೫, ೨.೩, ೨.೮, ಅಡಿಗಳಿವೆ. ಮೂರು ಗರ್ಭಗೃಹಗಳ ಬಾಗಿಲುವಾಡದಲ್ಲಿ ಅರೆಗಂಬ ಪೂರ್ಣಕುಂಬಗಳ ರಚನೆಗಳಿವೆ. ಲಲಾಟ ಫಲಕದಲ್ಲಿ ಯಾವುದೇ ಬಿಂಬವಿಲ್ಲ. ದ್ವಾರಗಳ ಮೇಲ್ಪದಿಯ ಉತ್ತರಾಂಗ ಭಾಗದಲ್ಲಿರುವ ಶಿಖರದ ರಚನೆಗಳು ಔತ್ತರೇಯ ಮಾದರಿಯವು. ಅಂತರಾಳಕ್ಕೆ ಹೊಂದಿಕೊಂಡಂತಿರುವ ನವರಂಗದಲ್ಲಿ ತಿರುಗಣೆ ಯಂತ್ರದಿಂದ ಕಡೆದ ಗಂಟೆಯಾಕೃತಿಯ ನಾಲ್ಕು ಕಂಬಗಳಿವೆ. ಇವುಗಳಿಗೆ ಬಳಸಿದ ಶಿಲೆ ನಾರುಗಲ್ಲು. ಸ್ಥಳೀಯವಾಗಿ ಲಭ್ಯವಿರದ ಈ ಶಿಲೆಯನ್ನು ಬೇರೆಡೆಯಿಂದ ತಂದು ದೇವಾಲಯ ನಿರ್ಮಿಸಲಾಗಿದೆ. ನವರಂಗದ ಭಿತ್ತಿಯಲ್ಲಿ ೬ ದೇವಕೋಷ್ಟಗಳಿದ್ದು, ಇವುಗಳ ಮೇಲೆ ನಾಗರ ಮಾದರಿಯ ಶಿಖರಗಳಿವೆ. ತ್ರಿಕೂಟ ದೇವಾಲಯದಲ್ಲಿ ಮಹಿಷಾಸುರ ಮರ್ಧಿನಿ, ನಾರಾಯಣ, ಸರಸ್ವತಿಯ ಶಿಲ್ಪಗಳಿರುವುದು ವಾಡಿಕೆ. ಆದರೆ ಇಲ್ಲಿನ ಶಿಲ್ಪಗಳೆಲ್ಲ ಕಲ್ಲೇಶ್ವರ ದೇವಾಲಯದಲ್ಲಿವೆ. ನವರಂಗದ ದ್ವಾರವು ಅಲಂಕೃತ ಕೆತ್ತನೆಗಳಿಂದ ಕೂಡಿದ್ದು, ಶೈವ ದ್ವಾರಪಾಲಕರು ತಮ್ಮ ಕೈಗಳಲ್ಲಿ ತ್ರಿಶೂಲ, ಡಮರು, ಗದೆ ಮತ್ತು ಅಭಯ ಹಸ್ತದಲ್ಲಿ ನಿಂತಿರುವರು. ಉಳಿದಂತೆ ತ್ರಿಶಾಖೆಗಳಿರುವ ದ್ವಾರದಲ್ಲಿ ಬಳ್ಳಿಯ ಸುರುಳಿಗಳೊಡನೆ ಚಿತ್ರಿಸಿರುವ ವ್ಯಾಳದಿಂದೊಡನೆಗೂಡಿದ ವ್ಯಾಳಶಾಖೆ, ವಜ್ರದ ಪಟ್ಟಿಕೆಯಿಂದಾದ ವಜ್ರಶಾಖೆ, ಸ್ಥಂಭದಿಂದಾದ ಸ್ಥಂಭ ಸಾಖೆಗಳಿವೆ. ಲಲಾಟಫಲಕದಲ್ಲಿ ಸಂಪತ್ತಿಗೆ ಹೆಸರಾದ ಗಜಲಕ್ಷ್ಮಿಯ ಬಿಂಬವಿದೆ. ದ್ವಾರದ ಮೇಲಿನ ಕೈಪಿಡಿಯ ಗೋಡೆಯ ಕೂಡಿನಲ್ಲಿ ಕಾರ್ತೀಕೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವರು. ದೇಗುಲ ಅಧಿಷ್ಟಾನ ಮಣ್ಣಲ್ಲಿ ಹೂತಿದ್ದು, ಭಿತ್ತಿಯು ಅಲಂಕಾರ ರಹಿತವಾಗಿದೆ. ಗರ್ಭಗೃಹಗಳ ಮೇಲ್ಪದಿಯಲ್ಲಿ ಫಾಂಸನಾ ಮಾದರಿಯ ಶಿಖರಗಳಿದ್ದ ಕುರುಹುಗಳಿವೆ. ಆದರೆ ಅವುಗಳಾವುವೂ ಉಳಿದು ಬಂದಿಲ್ಲ.

ಕಾಲದ ದೃಷ್ಠಿಯಿಂದ ಈ ದೇವಾಲಯ ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ನಿರ್ಮಾಣವಾದದ್ದು ಮಣಲೇಶ್ವರ ದೇವರ ಅಂಗಭೋಗ, ರಂಗಭೋಗ ಮತ್ತು ನಂದಾದೀವಿಗೆಗೆ ದತ್ತಿ ನೀಡಿದ್ದನ್ನು ಕ್ರಿ.ಶ. ೧೨೩೫ ಶಾಸನ ತಿಳಿಸುತ್ತದೆಯಾದರೂ, ಅದರ ಅಕ್ಷರಗಳ ತೃಟತತೆಯಿಂದ ಯಾರು ಏನನ್ನು ದಾನ ನೀಡಿದರು?, ಅದನ್ನು ಯಾರು ಸ್ವೀಕರಿಸಿದರು? ಎಂಬುದನ್ನು ತಿಳಿಯಲಸಾಧ್ಯ.[8]

ಅಳ್ಳಳ್ಳಿ ಬಸವಣ್ಣ ದೇವಾಲಯ

ಕಲ್ಲೇದೇವರಪುರ ಗ್ರಾಮದ ದಕ್ಷಿಣ ದಿಕ್ಕಿನ ಹೊರವಲಯದ ಜಮೀನಿನಲ್ಲಿ ಪೂರ್ವಾಭಿಮುಖವಾಗಿರುವ ಪುಟ್ಟದೇವಾಲಯವಿದು. ಸುಮಾರು ೬ ಅಡಿ ಎತ್ತರದ ಸ್ಥಂಭದ ಮೇಲೆ ಕಲ್ಲು ಚಪ್ಪಡಿಗಳನ್ನು ಬಳಸಿ ಪೆಟ್ಟಿಗೆಯಾಕಾರದ ಪುಟ್ಟ ಗುಡಿ ಕಟ್ಟಿರುವರು. ಇದು ನೋಡಿದ ತಕ್ಷಣ ಚಿತ್ರದುರ್ಗ ಬೆಟ್ಟದಲ್ಲಿನ ಒಂಟಿಕಲ್ಲು ಬಸವನ ದೇಗುಲವು ನೆನಪಾಗುವುದು. ಇದರಲ್ಲಿ ಪುಟ್ಟ ನಂದಿ ವಿಗ್ರಹವನ್ನು ಪ್ರತಿಷ್ಠಾಪಿಸಿರುವರು.

ಗುಗ್ಗರಿ ಬಸವನ ದೇವಾಲಯ

ಗ್ರಾಮದ ಉತ್ತರದಿಕ್ಕಿಗೆ ಇರುವ ಈ ದೇಗುಲ ಪೂರ್ವಾಭಿಮುಖವಾಗಿದೆ. ಇದರಲ್ಲಿ ಎರಡು ಅಡಿ ಎತ್ತರದ ಪುಟ್ಟ ನಂದಿಯ ಶಿಲ್ಪವಿದು. ನಂದಿ ಶಿಲ್ಪವನ್ನು ಜನಪದರು ಬಸವ, ಬಸವಣ್ಣ ಎಂದೆಲ್ಲಾ ಕರೆಯುತ್ತಾರೆ. ಪ್ರತಿವರ್ಷವೂ ಹಂಪೆಯ ಹುಣ್ಣಿಮೆಯಂದು ಗುಗ್ಗರಿ ಉತ್ಸವ ಈ ದೇಗುಲದಲ್ಲಿ ಜರುಗುವುದರಿಂದ ಇದಕ್ಕೆ ಗುಗ್ಗರಿ ಬಸವಣ್ಣ ಎಂಬ ಹೆಸರು ಪಡೆದಿದೆ.

ಮೂರ್ತಿಶಿಲ್ಪ

ನಾಡಿನಲ್ಲಿ ದೇವತಾರಾಧನೆ ಮತ್ತು ದೇವಾಲಯಗಳ ನಿರ್ಮಾಣಕಾರ್ಯ ಎಂದು ಆರಂಭವಾಯಿತೋ ಅಂದಿನಿಂದಲೇ ದೇವತಾಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ ಸಾಗಿಬಂದಿದೆ. ಯಾವುದೇ ದೇವಾಲಯವಾದರೂ ಒಂದಲ್ಲಾ ಒಂದು ಸಾಂಕೇತಿಕ ಮೂರ್ತಿಯನ್ನು ಹೊಂದಿರುವುದು ಸ್ಪಷ್ಟ. ಕಲ್ಲೇದೇವರಪುರದಲ್ಲಿ ಯತಿ, ಸಪ್ತಮಾತೃಕೆಯರು, ನಾರಾಯಣ, ವೀರಭದ್ರ, ಕಾರ್ತೀಕೇಯ, ದಕ್ಷಬ್ರಹ್ಮ ಮತ್ತು ನಂದಿಯ ಶಿಲ್ಪಗಳಿವೆ.

ಯತಿ ಶಿಲ್ಪ

ಕಲ್ಲೇಶ್ವರ ದೇಗುಲದ ನವರಂಗದ ಉತ್ತರಕ್ಕೆ ಇತ್ತೀಚೆಗೆ ವಿಸ್ತರಿಸಿ ಕಟ್ಟಿರುವ ಚಿಕ್ಕಕೊಠಡಿಯಲ್ಲಿ ಯತಿಯೊಬ್ಬನ ಶಿಲ್ಪವಿದೆ. ದಕ್ಷಿಣದಿಕ್ಕಿಗೆ ಮುಖಮಾಡಿರುವ ಈ ಶಿಲ್ಪ ಹಸಿರು ಶಿಲೆಯದು ಹಾಗೂ ಸ್ಥಳೀಯರು ಗುರುತಿಸುವಂತೆ ಈ ಶಿಲ್ಪ ಸಿದ್ಧಪ್ಪನದು. ಇದು ೨ ಅಡಿ ಎತ್ತರ, ೧ ಅಡಿ ಅಗಲವಿದೆ. ಶಿಲ್ಪದ ಲಕ್ಷಣಗಳನ್ನು ಗಮನಿಸಿದರೆ ಈತನ ಕಿವಿಯಲ್ಲಿ ದೊಡ್ಡದಾದ ಕರ್ಣಕುಂಡಲ, ಕೊರಳಲ್ಲಿ ಸರ, ರುದ್ರಾಕ್ಷಿಯ ಮಾಲೆ, ಕೈಗಳಲ್ಲಿಯೂ ರುದ್ರಾಕ್ಷಿಯ ಕೆಯೂರ ಮತ್ತು ಕಂಕಣಗಳನ್ನೂ ಕಾಲಿಗೆ ಕಾಲ್ಗಡಗವನ್ನೂ ಧರಿಸಿರುವನು. ಈತನು ಮುಖಭಾವದಲ್ಲಿ ದೊಡ್ಡಕಣ್ಣು, ದಪ್ಪನೆಯತುಟಿ, ಊದು ಕೆನ್ನೆಗಳು ಇರುವಂತೆ ಶಿಲ್ಪಿಯು ಖಂಡರಿಸಿದ್ದಾನೆ. ಸುಖಾಸೀನನಾಗಿ ಕುಳಿತ ಇವನು ತನ್ನ ಎಡಗೈಯನ್ನು ಆರಾಮವಾಗಿ ಮಂಡಿಯ ಮೇಲಿರುವಂತೆ ಇಳಿಬಿಟ್ಟಿರುವನು. ಶಿಲ್ಪದಲ್ಲಿ ಗಮನ ಸೆಳೆಯುವ ಲಕ್ಷಣವೆಂದರೆ, ಬಲಗೈಯಲ್ಲಿ ಹಿಡಿದಿರುವ ದಂಡ. ಇದರ ಉದ್ದ ೧.೧ ಅಡಿ. ಹರಡಿರುವ ಈತನ ಕೇಶರಾಶಿಯು ನೆರಿಗೆ ನೆರಿಗೆಯಂತೆ ಬಾಚಿದಂತಿದ್ದು ಆತನ ಎರಡೂ ಭುಜಗಳ ಮೇಲೆ ಇಳಿಬಿದ್ದಿದೆ. ಈತನ ನೀಳಜಡೆ ದಂಡ ಮತ್ತು ರುದ್ರಾಕ್ಷಿಯ ಮಾಲೆಗಳು ಈತ ಶೈವ ಪಂಥೀಯನೆಂಬುದನ್ನು ಶೃತಪಡಿಸುತ್ತವೆ. ಭುಜ ಮತ್ತು ಬೆನ್ನನ್ನು ಸುತ್ತುವರೆದಿರುವ ಒಂದು ಎಳೆಯ ಉಪವೀತವನ್ನು ಧರಿಸಿರುವನು. ಬಲಗೈಯಲ್ಲಿ ಹಿಡಿದಿರುವ ದಂಡ ಈ ಶಿಲ್ಪದಲ್ಲಿನ ಮುಖ್ಯ ಆಕರ್ಷಣೆ. ದಂಡ ಅಧಿಕಾರದ ಸಂಕೇತ. ಕರ್ನಾಟಕದ ಕೆಲವು ಶಾಸನಗಳಲ್ಲಿ ಮತ್ತು ಸಾಹಿತ್ಯ ಕೃತಿಗಳಲ್ಲಿ ದಂಡ ಮತ್ತು ಕಟ್ಟಿಗೆಯವರ ಉಲ್ಲೇಖಗಳಿವೆ. ಕ್ರಿ.ಶ. ೧೧೧೮ ರ ಶಿಕಾರಿಪುರ ಶಾಸನವೊಂದು ಅಗ್ರಹಾರದಲ್ಲಿ ವಾಸಿಸುತ್ತಿದ್ದ ಕಟ್ಟಿಗೆ ಮದುವಯ್ಯನನ್ನು ಹೆಸರಿಸುತ್ತದೆ.[9] ವಿಜಯನಗರ ಕಾಲದ ಶಾಸನಗಳಲ್ಲಿ ಕಟ್ಟಿಗೆ ಅಹಮದ್ ಖಾನ್ ಮತ್ತು ಕಟ್ಟಿಗೆ ಲಿಂಗಪ್ಪ ಎಂಬೀರ್ವರ ಉಲ್ಲೇಖಗಳಿವೆ.[10] ಇವರೀರ್ವರು ಅಧಿಕಾರವರ್ಗದವರೆಂಬುದು ಸುವಿಧಿತ.

ಪೆರಿಯಾ ಪುರಾಣವು, ಶ್ರೀಪರ್ವತದ ಮಹಿಮೆಯನ್ನು ಕೊಂಡಾಡುವಾಗ ಪರಮೇಶ್ವರನ ಅರಮನೆಯ ಕಾವಲು ನಾಯಕ ನಮ್ಮೊಡೆಯ ನಂದಿದೇವರು ಎಂದೂ, ಈ ಕೈಲಾಸ ಮಹಾಪರ್ವತದ ರಕ್ಷಕ ನಂದೀಶ್ವರನು ದಟ್ಟವಾದ ನೀಳ್ಜಡೆಯವನಾದ ಪರಶಿವನ ಅನುಗ್ರಹದಿಂದ ಸೇವೆ ಮಾಡಲೋಸುಗ ಚೂರಿ ಮತ್ತು ಬೆತ್ತಗಳನ್ನು ಪಡೆದುಕೊಂಡನೆಂದು ವರ್ಣಿಸುತ್ತದೆ.[11] ಇದು ಶೈವಕ್ಷೇತ್ರದ ರಕ್ಷಕನ ಕೈಯಲ್ಲಿ ದಂಡವಿರುವುದನ್ನು ಸೂಚಿಸುವುದು. ಚಿತ್ರದುರ್ಗದ ದವಳಪ್ಪನ ಗುಡ್ಡದ ಕಟ್ಟಿಗೆ ಸಂಗಣ್ಣನ ಶಿಲ್ಪದ ಕೈಯಲ್ಲಿರುವ ದಂಡವೂ ಸಹ ಅಧಿಕಾರದ ಸಂಕೇತವೇ ಸರಿ. ಇದು ೧೨ ನೇ ಶತಮಾನದ ಶೈವಪೀಠಗಳ ರಕ್ಷಣಾ ವ್ಯವಸ್ಥೆಯ ಸ್ಥೂಲನೋಟ ನೀಡುತ್ತದೆ. ಈ ಮೇಲಿನ ವಿವರಣೆಗಳು ದಂಡವು ಅಧಿಕಾರದ ಸಂಕೇತವೆಂಬುದನ್ನು ಸೂಚಿಸುತ್ತದೆ. ಇದರಂತೆ ಈ ದಂಡಹಿಡಿದ ಶಿಲ್ಪವೂ ಸಹ ಈ ದೇವಾಲಯದ ಮೇಲ್ವಿಚಾರಕನಾಗಿದ್ದು, ದಂಡ ಈತನಿಗಿದ್ದ ಅಧಿಕಾರದ ಸಂಕೇತ ಎನ್ನಬಹುದು.

ವೀರಭದ್ರ

ಸಂಹಾರ ರೂಪದ ದೈವ ವೀರಭದ್ರ. ದಕ್ಷಬ್ರಹ್ಮನನ್ನು ರಕ್ಷಿಸಲು ಶಿವನ ಕೋಪದ ಫಲವಾಗಿ ಉದಿಸಿದ ಉಗ್ರರರೂಪವಿದು. ಕಲ್ಲೇಶ್ವರ ದೇವಾಲಯದ ಮುಖಮಂಟಪದಲ್ಲಿ ಉತ್ತರಾಭಿಮುಖವಾಗಿ ವೀರಭದ್ರನ ಮೂರ್ತಿಯನ್ನು ಪ್ರತಿಷ್ಠಾಪಿಸಿರುವರು. ಕಪ್ಪುಶಿಲೆಯಲ್ಲಿ ಕಡೆದ ಈ ಶಿಲ್ಪದ ಎತ್ತರ ೬ ಅಡಿಗಳು. ತ್ರಿಭಂಗಿಯಲ್ಲಿ ನಿಂತಿರುವ ವೀರಭದ್ರನು ತನ್ನ ನಾಲ್ಕೂ ಕೈಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಖೇಟವನ್ನು ಹಿಡಿದಿದ್ದಾನೆ. ತಲೆಗೆ ಕಿರೀಟಮುಕುಟ, ಕಿವಿಯಲ್ಲಿ ದೊಡ್ಡದಾದ ಕರ್ಣಕುಂಡಲಗಳಿವೆ. ಮುಖದಲ್ಲಿ ರೌದ್ರಭಾವ ತೋರಿಸುವಂತೆ ಕೋರೆಹಲ್ಲುಗಳು ದುಂಡಾದ ದೊಡ್ಡ ಕಣ್ಣುಗಳಿವೆ. ಉಳಿದಂತೆ ಕೊರಳಲ್ಲಿ, ಹಾರ, ಸರ ಯಜ್ಞೋಪವೀತ, ಉದ್ದನೆಯ ರುಂಡಮಾಲೆ, ಭುಜವಲ್ಯ, ಕಂಕಣ, ಕೆಯೂರವನ್ನೂ ನಡುವಿನಲ್ಲಿ ನಡುಪಟ್ಟಿಯನ್ನು ಕಾಲಿಗೆ ಕಾಲುಕಡಗಗಳನ್ನು ಧರಿಸಿರುವನು. ವೀರಭದ್ರನು ತೊಟ್ಟ ಉಡುಗೆಯು ಅವನ ಎರಡೂ ತೊಡೆಗಳನ್ನು ಸುತ್ತುವರೆದಿದ್ದು, ಕೀರ್ತಿಮುಖ ಮತ್ತು ಮಣಿಗಳಿಂದ ಅಲಂಕೃತವಾಗಿದೆ. ಕೆಳಬದಿಯಲ್ಲಿ ಟಗರಿನ ರುಂಡದ ದಕ್ಷಬ್ರಹ್ಮನು ಸಮಭಂಗಿಯಲ್ಲಿ ಅಂಜಲಿ ಮುದ್ರೆಯಲ್ಲಿ ನಿಂತಿದ್ದಾನೆ. ಶೈಲಿಯ ದೃಷ್ಟಿಯಿಂದ ಈ ಶಿಲ್ಪ ಹೊಯ್ಸಳರ ಅವಧಿಯದು.

ಸಪ್ತಮಾತೃಕೆಯರ ಶಿಲ್ಪಗಳು

ಸಪ್ತಮಾತೃಕೆಯರು ಎಲ್ಲ ವರ್ಗದವರಿಂದಲೂ ಆರಾಧನೆಗೊಳ್ಳುವ ದೇವತೆಗಳು, ಸ್ಥಳೀಯವಾಗಿ ಇವರನ್ನು ಅಮ್ಮನವರೆಂದೂ, ಮುತ್ತೈದೆಯರೆಂದೂ ಕರೆಯುವುದು ವಾಡಿಕೆ. ರಕ್ತಬೀಜಾಸುರನೊಡನೆ ಕೌಶಿಕದುರ್ಗಿ ಹೋರಾಡುತ್ತಿರುವಾಗ ಆ ಅಸುರನ ರಕ್ತ ನೆಲಕ್ಕೆ ಸೋಂಕಿದ ತಕ್ಷಣ ಮತ್ತೊಬ್ಬ ಬೀಜಾಸುರ ಜನಿಸಿ ದೇವಿಯೊಡನೆ ಹೋರಾಟಕ್ಕಿಳಿಯುತ್ತಿದ್ದ. ಆಗ ದೇವಿಯು ತನ್ನ ಸಹಾಯಕ್ಕಾಗಿ ಸೃಷ್ಠಿಸಿಸ ೭ ಜನ ದೇವತೆಗಳೇ ಸಪ್ತಮಾತೃಕೆಯರಾದರು. ತ್ರಿಕೂಟ ಲಿಂಗೇಶ್ವರ ದೇಗುಲದ ನವರಂಗದಲ್ಲಿ ಸಪ್ತಮಾತೃಕೆಯರ ಶಿಲ್ಪಪಟ್ಟಿಕೆ ಇದೆ. ಇದರಲ್ಲಿ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ಇಂದ್ರಾಣಿ, ವಾರಾಹಿ ಮತ್ತು ಚಾಮುಂಡಿಯರಿದ್ದಾರೆ. ಇದರೊಡನೆ ಗಣೇಶ ಮತ್ತು ಶಿಲ್ಪಗಳಿರುವುದು ವಾಡಿಕೆ. ಲಲಿತಾಸನದಲ್ಲಿ ಕುಳಿತಿರುವ ಈ ಶಿಲ್ಪಗಳ ಕೆಳಭಾಗದಲ್ಲಿ ಆಯಾ ದೇವತೆಗಳ ವಾಹನಗಳನ್ನು ಖಂಡರಿಸಿರುವರು.

ಕಾರ್ತಿಕೇಯ

ತ್ರಿಕೂಟ ಲಿಂಗೇಶ್ವರ ದೇಗುಲದ ದ್ವಾರದ ಮೇಲೆ ಇತ್ತೀಚೆಗೆ ಕಟ್ಟಿದ ಕೂಡಿನಲ್ಲಿ ಕಾರ್ತಿಕೇಯನ ಮೂರ್ತಿಯನ್ನು ಪ್ರತಿಷ್ಟಾಪಿಸಲಾಗಿದೆ. ಕಪ್ಪುಶಿಲೆಯಲ್ಲಿ ಕಡೆದ ಈ ಶಿಲ್ಪದ ಎತ್ತರ ಸುಮಾರು ಮೂರು ಅಡಿಗಳು. ಕಾರ್ತಿಕೇಯನು ತನ್ನ ವಾಹನ ಮಯೂರದ ಮೇಲೆ ಲಲಿತಾಸನದಲ್ಲಿ ಆಸೀನವಾಗಿರುವನು. ಮೂರು ಮುಖಗಳನ್ನು ಹೊಂದಿರುವ ಕಾರ್ತಿಕೇಯನು ಕಿರೀಟಮುಕುಟ, ಕರ್ಣಕುಂಡಲ,ಕೊರಳಲ್ಲಿ ಕಂಠಿಹಾರ, ಭುಜಾಭರಣ, ಕೆಯೂರ ಕಾಲುಕಡಗಗಳನ್ನು ಧರಿಸಿರುವನು. ಶಿಲ್ಪದ ಲಕ್ಷಣಗಳನ್ನು ಗಮನಿಸಿದರೆ ಕ್ರಿ.ಶ. ೧೧ನೇ ಶತಮಾನದಲ್ಲಿ ಕಡೆದ ಶಿಲ್ಪವಾಗಿದೆ.

ನಾರಾಯಣ

ಕಲ್ಲೇಶ್ವರ ದೇವಾಲಯದ ನವರಂಗದಲ್ಲಿ ಪಶ್ಚಿಮಾಭಿಮುಖವಾಗಿರುವ ಶಿಲ್ಪ ನಾರಾಯಣನದು. ಇದು ೨.೬ ಅಡಿ ಎತ್ತರ, ೨ ಅಡಿ ಅಗಲವಿದೆ. ಹಸಿರು ಮಿಶ್ರಿತ ಕಪ್ಪುಶಿಲೆಯಲ್ಲಿ ಕಡೆದ ಇದರ ಪ್ರಭಾವಳಿ ಮತ್ತು ಎರಡು ಕೈಗಳು ಭಗ್ನವಾಗಿವೆ. ಉಳಿದ ಎರಡು ಕೈಗಳಲ್ಲಿ ಶಂಖ ಮತ್ತು ಅಭಯ ಮುದ್ರೆಯಲ್ಲಿವೆ. ಕಿರೀಟ ಮುಕುಟ, ಕರ್ಣಕುಂಡಲ, ಉಪವೀತ, ಹಾರ, ನೂಪುರ, ಕಾಲುಕಡಗಗಳನ್ನು ಧರಿಸಿರುವನು. ಶಿಲ್ಪದ ಕೆಳಭಾಗದಲ್ಲಿ ಶ್ರೀದೇವಿ ಮತ್ತು ಭೂದೇವಿಯರ ಪುಟ್ಟ ಶಿಲ್ಪಗಳಿವೆ.

ನಂದಿ ಶಿಲ್ಪಗಳು

ಕಲ್ಲೇಶ್ವರ ದೇವಾಲಯದ ಪೂರ್ವ ದಿಕ್ಕಿಗೆ ತೊಟ್ಟಿಪೆಳೆ ಬಸವಣ್ಣ ಮತ್ತು ದಕ್ಷಿಣದಿಕ್ಕಿಗೆ ಅಳಳ್ಳಿ ಬಸವಣ್ಣ ಎಂದು ಕರೆಯುವ ಎರಡು ಬೃಹತ್ ಶಿಲ್ಪಗಳಿವೆ. ಈ ಎರಡೂ ವಿಗ್ರಹಗಳ ಎತ್ತರ ೪ ಅಡಿಯಿದ್ದು, ೫ ಅಡಿ ಉದ್ದ ಇವೆ. ವಿಶೇಷವೆಂದರೆ ಈ ಎರಡೂ ವಿಗ್ರಹಗಳು ತಮ್ಮ ಎಡ ಮುಂಗಾಲಲ್ಲಿ ಬಾಲಕರ ರುಂಡಗಳನ್ನು ತುಳಿದುಕೊಂಡಿರುವುದು. ಇದಕ್ಕೆ ಸ್ಥಳೀಯರು ಆರೋಪಿಸುವ ಕಥೆ ಈ ರೀತಿಯದು.

ಊರಿನ ಭಕ್ತನೊರ್ವನ ದನಗಳು ಕರುಹಾಕದೇ ಹಾಲು ನೀಡದೇ ಇದ್ದಾಗ ತನ್ನ ಹಸುಗಳು ಕರುಗಳಿಗೆ ಜನ್ಮವಿತ್ತು ಹಾಲು ನೀಡುವಂತಾದರೆ ಅದರ ಮೊದಲ ಗಿಣ್ಣನ್ನು ನಂದಿಗೆ ಮೀಸಲು ನೀಡುವುದಾಗಿ ಹರಕೆ ಹೊತ್ತನಂತೆ. ಇದಾದ ಕೆಲ ದಿನಗಳಲ್ಲಿ ಭಕ್ತನ ಹಸುಗಳು ಕರುಹಗಳಿಗೆ ಜನ್ಮವಿತ್ತು ಹಾಲು ನೀಡತೊಡಗಿದವು. ಆದರೆ ದೇವರನ್ನು ಮರೆತ ಭಕ್ತ ಅದರ ಹಾಲನ್ನು ಉಪಯೋಗಿಸಿದ ಕೆಲವು ದಿನಗಳ ನಂತರ ತನ್ನ ಹರಕೆ ನೆನಪಾದಾಗ ತಾನು ಬರದೇ ತನ್ನ ಮಗನ ಕೈಯಲ್ಲಿ ಬಸವಣ್ಣನಿಗೆ ಮೀಸಲು ಗಿಣ್ಣು ಕಳುಹಿಸಿದ. ಹರಕೆ ತೀರಿಸದೆ ತಪ್ಪು ಎಸಗಿದುದಲ್ಲದೆ ತಾನು ಬರದೇ ತನ್ನ ಮಗನನ್ನು ಕಳುಹಿಸಿದ ಭಕ್ತನ ಮೇಲೆ ಕೋಪಗೊಂಡ ನಂದಿ ಆ ಮಗನನ್ನು ತನ್ನ ಮುಂಗಾಲಲ್ಲಿ ತುಳಿದುಕೊಂಡಿತಂತೆ. ಆ ಮಗುವಿನ ರುಂಡವೇ ಇದು ಎಂಬುದು ಸ್ಥಳೀಯರ ನಂಬಿಕೆ. ಇದಕ್ಕೆ ಅನುಗುಣವಾಗಿ ಕಲ್ಲೇಶ್ವರನನ್ನು ತಮ್ಮ ಮನೆದೇವರನ್ನಾಗಿ ಹೊಂದಿದ ಭಕ್ತರು ತಮ್ಮ ಮನೆಯ ಹಸುಗಳು ಕರುಗಳಿಗೆ ಜನ್ಮವಿತ್ತರೆ ಅದರ ಮೊದಲ ಗಿಣ್ಣನ್ನು ನಂದಿ ಶಿಲ್ಪಗಳಿಗೆ ಎಡೆ ನೀಡುವುದು ಇಂದಿಗೂ ಪ್ರಚಲಿತದಲ್ಲಿರುವ ಪದ್ಧತಿ. ಈ ಶಿಲ್ಪಗಳು ಕಣಶಿಲೆಯಲ್ಲಿ ಕಡೆದವುಗಳು. ಹಣೆಯಲ್ಲಿ ಹಣೆಪಟ್ಟಿ, ಕರ್ಣಾಭರಣ, ಗಂಟೆಸರ, ಲೊಡಗಸರ, ಕೊರಳಲ್ಲಿ ಹಗ್ಗಗಳಿಂದ ಈ ಶಿಲ್ಪಗಳು ಅಲಂಕರಣಗೊಂಡಂತೆ ಖಂಡರಿಸಲಾಗಿದೆ. ಶೈಲಿಯ ದೃಷ್ಠಿಯಿಂದ ಇವು ವಿಜಯನಗರ ಕಾಲದವುಗಳು.

ದಕ್ಷಬ್ರಹ್ಮ

ಚಿತ್ರದುರ್ಗದ ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿರುವ ದಕ್ಷಬ್ರಹ್ಮನ ವಿಗ್ರಹವು ಮೂಲತಃ ಕಲ್ಲೇದೇವರಪುರ ಗ್ರಾಮದ್ದು.[12] ಕಣಶಿಲೆಯಲ್ಲಿ ಕಡೆಯಲಾದ ಈ ಶಿಲ್ಪ ೨೯ ಸೆಂ.ಮೀ. ಉದ್ದ, ೨೧ ಸೆಂ.ಮೀ. ಅಗಲ ಮತ್ತು ಅಡಿ ೧೩ ಸೆಂ.ಮೀ. ದಪ್ಪವಿದೆ. ಗಾಳಿ ಮಳೆಗೆ ಸಾಕಷ್ಟು ಸವೆದಿರುವ ಈ ಶಿಲ್ಪವು ಸುಖಾಸೀನ ಭಂಗಿಯಲ್ಲಿದ್ದು, ಮೇಲ್ನೋಟಕ್ಕೆ ಇದು ಗಣೇಶನ ಶಿಲ್ಪದಂತೆ ಕಾಣಿಸುತ್ತದೆಯಾದರೂ ಅದರ ಸೂಕ್ಷ್ಮನೋಟದಿಂದ ದಕ್ಶಬ್ರಹ್ಮನ ಟಗರಿನ ನೀಳಮುಖ, ತಿರುವಿದ ಕೋಡುಗಳು ಕಾಣುತ್ತವೆ. ಸಾಕಷ್ಟು ಸವಕಳಿಯಾದ ಇದು ವಿಜಯನಗರ ಕಾಲದ ಶಿಲ್ಪವಾಗಿದೆ.

ಈ ಶಿಲ್ಪಗಳೊಡನೆ ಪುಟ್ಟದಾದ ಗಣೇಶ, ಮಹಿಷಾಸುರ ಮರ್ಧಿನಿ, ಮತ್ತು ಭಗ್ನಗೊಂಡ ಸರಸ್ವತಿಯ ಶಿಲ್ಪಗಳಿವೆ.

ವೀರಗಲ್ಲುಗಳು

ವೀರನೊಬ್ಬನ ಸ್ಮಾರಕವಾಗಿ ನಿಲ್ಲಿಸಿದ ಶಿಲೆಗಳೇ ವೀರಗಲ್ಲುಗಳು. ಇವು ವೀರತ್ವದ ಸಂಕೇತಗಳು. ವ್ಯಕ್ತಿಯೋರ್ವ ತನ್ನ ಪ್ರಾಣವನ್ನು ಸಾರ್ವಜನಿಕ ಆಸ್ತಿ, ಸ್ತ್ರೀ, ದನಕರುಗಳ ರಕ್ಷಣೆಗಾಗಿ ಶತೃಗಳೊಡನೆ ಹೋರಾಡುತ್ತಿರುವುದನ್ನು ಇವು ಸೂಚಿಸುತ್ತವೆ. ಕಲ್ಲೇದೇವರಪುರ ಗ್ರಾಮದ ಎರಡು ವೀರಗಲ್ಲುಗಳು ‘ತುರುಗೋಳ್’ ಪ್ರಕಾರದವು. ಇವುಗಳ ಹೆಸರೇ ಸೂಚಿಸುವಂತೆ ತುರುಗಳ ರಕ್ಷಣೆಗಾಗಿ ಕಾದಾಡಿ ಮಡಿದ ವೀರನಿಗೆ ಸಂಬಂಧಪಟ್ಟ ಸ್ಮಾರಕಗಳು.

ನೇ ವೀರಗಲ್ಲು

ಈ ವೀರಗಲ್ಲಿನಲ್ಲಿ ನಾಲ್ಕು ಹಂತಗಳಿವೆ. ಕೆಳಗಿನ ಹಂತದಲ್ಲಿ ವೀರನು ಬಿಲ್ಲುಬಾಣಗಳನ್ನು ಹಿಡಿದು ಶತೃಗಳೊಡನೆ ಕಾದಾಡುವ ದೃಶ್ಯವನ್ನು ಚಿತ್ರಿಸಿದ್ದರೆ, ಎರಡನೇ ಹಂತದಲ್ಲಿ ಏಳು ತುರುಗಳನ್ನು ಕಡೆದಿರುವರು. ಮೂರನೇ ಹಂತದಲ್ಲಿ ವೀರನು ಮಂಟಪದಲ್ಲಿ ಪದ್ಮಾಸನದಲ್ಲಿ ಕುಳಿತಿರುವನು. ಅವನ ಪಕ್ಕದಲ್ಲಿ ನಿಂತ ಅಪ್ಸರೆಯರು ಚಾಮರ ಬೀಸುತ್ತಿರುವರು. ಇದು ವೀರನನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವುದರ ಸಂಕೇತ. ನಾಲ್ಕನೇ ಹಂತದಲ್ಲಿ ಶಿವಲಿಂಗವೊಂದರ ಮುಂದೆ ಪ್ರಣಾಮಮುದ್ರೆಯಲ್ಲಿ ಕುಳಿತಿರುವಂತೆಯೂ, ಯತಿಯೋರ್ವ ಶಿವಲಿಂಗವನ್ನು ಪೂಜಿಸುತ್ತಿರುವಂತೆಯೂ ಚಿತ್ರಿಸಿರುವರು.

ನೇ ವೀರಗಲ್ಲು

ಇದರಲ್ಲಿ ಮೂರು ಹಂತಗಳಿದ್ದು, ಕೆಳಗಿನ ಹಂತದಲ್ಲಿ ವೀರನು ಶತೃಗಳೊಡನೆ ಹೋರಾಡುತ್ತಿರುವನು ಮಧ್ಯದ ಹಂತದಲ್ಲಿ ವೀರನು ಮಂಟಪದಲ್ಲಿ ಕುಳಿತಿರುವಂತೆಯೂ, ಮೇಲಿನ ಹಂತದಲ್ಲಿ ಸ್ವರ್ಗಸ್ತನಾಗಿರುವಂತೆಯೂ ಚಿತ್ರಿಸಲಾಗಿದೆ.

ಕಾಳಾಮುಖರು ಮತ್ತು ಜಮದಗ್ನಿ ಋಷಿಯ ಮಠ

ದೇವಸ್ಥಾನದ ಬಹುಮುಖ್ಯ ಅಂಗ ಮಠ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಅಥವಾ ಒಂದೇ ಆವರಣದ ದಕ್ಷಿಣ ದಿಕ್ಕಿನಲ್ಲಿ ಮಠಗಳು ಇರುತ್ತವೆ. ಆದ್ದರಿಂದ ಇವೆರಡೂ ಅಭಿನ್ನ. ಮಠ ಎಂಬ ಪದಕ್ಕೆ ಸನ್ಯಾಸಿ, ಗುರು, ಯತಿಗಳು, ವಾಸಿಸುವ ಸ್ಥಳ ಎಂಬ ಅರ್ಥವಿದೆ. ಕರ್ನಾಟಕದಲ್ಲಿ ಕ್ರಿ.ಶ. ೮ನೇ ಶತಮಾನದ ವೇಳೆಗೆ ದೇವಾಲಯಗಳ ಅವಿಭಾಜ್ಯ ಅಂಗಗಳಾಗಿ ಮಠಗಳು ಬೆಳೆದವು.

ಕ್ರಿ.ಶ. ೧೫೨೬ರ ನಿಬಗೂರು ಶಾಸನವು[13] ತಿಳಿಸುವಂತೆ ಕಲ್ಲೇದೇವರಪುರದ ಅಧಿಪತಿಯಾದ ಕಲ್ಲಿನಾಥನ ಸನ್ನಿಧಿಯಲ್ಲಿ ಜಮದಗ್ನಿಯ ಋಷಿಯ ಮಠವಿತ್ತು. ಇದು ಶಿಕ್ಷಣಕೇಂದ್ರ ಮತ್ತು ಪ್ರಸಾದ ನಿಲಯವಾಗಿ ಕಾರ್ಯನಿರ್ವಹಿಸುತ್ತಿದ್ದುದ್ದು ಗಮನಾರ್ಹ ಸಂಗತಿ. ಇಲ್ಲಿನ ೩೫ ಜನ ಬ್ರಾಹ್ಮಣ ವಿದ್ಯಾರ್ಥಿಗಳು ಷಡ್ ದರ್ಶನಗಳನ್ನು ಅಧ್ಯಯನ ಮಾಡುತ್ತಿದ್ದರು. ಕೃಷ್ಣದೇವರಾಯರಿಗೆ ಪುಣ್ಯವಾಗಲೆಂದು ಅರೆಯ ಕ್ಷತ್ರಿಯರಾದ ವಿಶ್ವನಾಥರಾವುತರ ಮಗ ರಂಗನಾಥ ರಾವುತರು ಇಲ್ಲಿನ ಪ್ರಸಾದನಿಲಯದ ನಿರ್ವಹಣೆಗಾಗಿ ನಿಬಗೂರು ಗ್ರಾಮವನ್ನು ದಾನ ನೀಡಿದ್ದುದನ್ನು ಈ ಶಾಸನವು ತಿಳಿಸುತ್ತದೆ. ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ದಕ್ಷಿಣದಿಕ್ಕಿಗೆ ಸುಮಾರು ೩ ಅಡಿ ಎತ್ತರದ ಕಲ್ಲಿನ ಅಧಿಷ್ಟಾನವಿದೆ. ಈ ಅಧಿಷ್ಟಾನದ ಸ್ಥಳವೇ ನಿಬಗೂರು ಶಾಸನದಲ್ಲಿ ಉಕ್ತವಾಗಿರುವ ಜಮದಗ್ನಿ ಋಷಿಯ ಮಠವಾಗಿದ್ದರಬಹುದು. ಸ್ಥಳೀಯವಾಗಿ ಜನತೆ ಈ ಸ್ಥಳವನ್ನು ಪ್ರಸ್ತುತ ಮಠವೆಂದು ಸಂಭೋಧಿಸುತ್ತಿರುವುದು ಗಮನೀಯ ಅಂಶ.

ಇನ್ನು ಜಮದಗ್ನಿ ಋಷಿಯತ್ತ ಗಮನಹರಿಸುವುದು ಅವಶ್ಯಕ ಜಮದಗ್ನಿ ಋಷಿಯಾರು?ಅವನ ಪರಂಪರೆ ಏನು? ಎಂಬ ಸಂಗತಿಯ ಬಗ್ಗೆ ಯಾವುದೇ ಪ್ರಸ್ತಾಪ ಈ ಶಾಸನದಲ್ಲಿಲ್ಲ. ತನ್ನ ಶ್ರೇಷ್ಟ ಪಾಂಡಿತ್ಯ, ವ್ಯಕ್ತಿತ್ವ, ಅಧಿಕಾರ ಪ್ರಭಾವದಿಂದ ಕೂಡಿದ ವ್ಯಕ್ತಿಯೊಬ್ಬ ಈ ಪರಿಸರದ ಶೈವ ಕೇಂದ್ರವನ್ನು ತನ್ನ ಹತೋಟಿಯಲ್ಲಿಟ್ಟು ಕೊಂಡಿದ್ದ ಪಕ್ಷದಲ್ಲಿ ಆತನ ಹೆಸರಿನಿಂದಲೇ ಈ ಸ್ಥಳಗಳನ್ನು ಜನರು ಗುರುತಿಸುವುದು ತೀರಾ ಸಹಜ[14] ಅಂತೆಯೇ ಜಮದಗ್ನಿ ಋಷಿಯ ನೆನಪಿಗಾಗಿ ಅವನಿದ್ದ ಮಠವನ್ನು ಅವನ ಹೆಸರಿನಿಂದಲೇ ಕರೆದಿರಬಹುದು. ಅನಂತರವೂ ಆತನ ನೆನಪನ್ನು ಹಾಗೆಯೇ ಉಳಿಸುವ ದೃಷ್ಟಿಯಿಂದ ಇದನ್ನು ಹಾಗೆಯೇ ಮುಂದುವರೆಸಿಕೊಂಡು ಬಂದಿರಲೂಬಹುದು.

ಕರ್ನಾಟಕದ ಶಾಸನಗಳಲ್ಲಿ ಸ್ಥಾನ ನೈಷ್ಟಿಕ ಸ್ಥಾನ, ಸ್ಥಾನಪತಿ, ಸ್ಥಾನಿಕ ಎಂಬ ಹೆಸರುಗಳನ್ನು ಪದೇ ಪದೇ ಕಾಣಿಸಿಕೊಳ್ಳುತ್ತವೆ. ಶೈವಗುರುಗಳು ವಾಸವಾಗಿದ್ದ ದೇವಸ್ಥಾನಗಳು ‘ಸ್ಥಾನ’ಗಳು, ಇವುಗಳ ಮೇಲ್ವಿಚಾರಣೆಯ ಹೊಣೆ ಹೊತ್ತಿರುವವರು ಸ್ಥಾನಪತಿಗಳು ಅಥವಾ ಸ್ಥಾನಿಕರು. ಒಬ್ಬರಿಗಿಂತ ಹೆಚ್ಚಿನ ಗುರುಗಳಿದ್ದರೆ ಅವರಲ್ಲಿ ಹಿರಿಯವನೇ ಸ್ಥಾನಿಕ ಅಥವಾ ಸ್ಥಾನಪತಿ ಎನಿಸಿಕೊಳ್ಳುತ್ತಿದ್ದನೆಂಬುದು ದೃಡಪಟ್ಟ ಸಂಗತಿ. ಶೈವಗುರುಗಳು ಅಖಂಡ ಬ್ರಹ್ಮಾಚಾರಿಗಳಾಗಿದ್ದುಕೊಂಡು ಬ್ರಹ್ಮಾಚಾರಿ ವಿದ್ಯಾರ್ಥಿಗಳಿಗೇ ವಿದ್ಯಾಧಾನ ಮಾಡುತ್ತಿದ್ದ ಸ್ಥಾನವೇ ‘ನೈಷ್ಠಿಕ ಸ್ಥಾನ’[15] ಇವರು ಕಾಳಾಮುಖರಾಗಿರುತ್ತಿದ್ದರು. ಕರ್ನಾಟಕದಲ್ಲಿ ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರ ಅವಧಿಯ ಶೈವ ಕ್ಷೇತ್ರಗಳಲ್ಲಿ ಕಾಳಾಮುಖರ ಪ್ರಭಾವ ಅಗಾಧವಾಗಿತ್ತು. ಮುಖದ ಮೇಲೆ ಕರಿಯ ಗೆರೆಗಳನ್ನು ಹಚ್ಚಿಕೊಳ್ಳುತ್ತಿದ್ದರಿಂದ ಇವರನ್ನು ಕಾಳಾಮುಖರು ಎಂದು ಕರೆಯುತ್ತಿದ್ದರು. ಇವರ ಹೆಸರುಗಳು ಅಂತ್ಯಗೊಳ್ಳುವುದು ಶಕ್ತಿ, ಪಂಡಿತ, ದೇವ, ಭಟ್ಟಾರಕ, ಜೀಯ, ಶಿವ ಮುನಿ ಇತ್ಯಾದಿಯಿಂದ. ಕಲ್ಲೇದೇವರಪುರದ ಶಾಸನಗಳಲ್ಲಿ ಈ ಬಗೆಯ ಹೆಸರಿನಿಂದ ಅಂತ್ಯಗೊಳ್ಳುವ ಹೆಸರುಗಳಿವೆ. ಕ್ರಿ.ಶ. ೧೨೩೫ರ ಶಾಸನದಲ್ಲಿ “ಪಾದಾ ಪದ್ಮಾರಾಧಕ…… ಕ್ತಿ ಪಂಡಿತರ ಕಾಲುತೊಳೆದದು.”[16] ಎಂದೂ, ತೇದಿರಹಿತ ಶಾಸವೊಂದರಲ್ಲಿ “…..ಶಕ್ತಿ ವಿರಚಿತ ….ಧರ್ಮಕಥನಂ” ಎಂದೂ, ಕ್ರಿ.ಶ. ೧೨೭೯ರ ರಾಮಚಂದ್ರದೇವನ ಶಾಸನದಲ್ಲಿ “ಕಲಿದೇವರ ಸ್ಥಾನಿಕ…..ಳುಯಿತಿರು..ಗಳ ಮುಂದಿಟ್ಟುಕೊಟ್ಟ ಶಾಸನ”[17] ಎಂದೂ, ಅದೇ ಗ್ರಾಮದ ಮತ್ತೊಂದು ತೇದಿರಹಿತ ಶಾಸನದಲ್ಲಿ “ಕಲಿದೇವರ ದೀಪಾರಧ…… ಸಿಜೀಯ…. ಕೊಟದ”[18] ಎಂಬ ಉಲ್ಲೇಖಗಳಿವೆ. ಈ ಮೇಲೆ ಉಲ್ಲೇಖಿಸಿದ ಎಲ್ಲಾ ಶಾಸನಗಳಲ್ಲೂ ಯತಿಗಳ ಹೆಸರುಗಳು ತೃಟಿತವಾಗಿರುವುದು ದುರದೃಷ್ಟಕರ ಸಂಗತಿ. ಕ್ರಿ.ಶ. ೧೦ ಮತ್ತು ೧೧ ನೇ ಶತಮಾನದ ಈ ಪರಿಸರದಲ್ಲಿನ ಶಾಸನಗಳು ಚದುರಗೋಳ[19] ಮತ್ತು ಅಸಗೋಡು[20] ಗ್ರಾಮಗಳಲ್ಲಿ ಕಾಳಾಮುಖರ ಮಠಗಳಿದ್ದು, ಪ್ರಸಿದ್ಧ ಶಿಕ್ಷಣ ಕೇಂದ್ರಗಳಾಗಿದ್ದವು. ಚಂದ್ರವಳ್ಳಿಯಲ್ಲಿನ ಅಂಕಲಿಮಠ ಮತ್ತು ಧವಳಪ್ಪನಗುಡ್ಡಗಳೂ ಕಾಳಾಮುಖರ ಪ್ರಮುಖ ನೆಲೆಗಳಾಗಿದ್ದುವು. ಶಿವಭಕ್ತರಲ್ಲದವರ ಪ್ರವೇಶವನ್ನು ನಿರ್ಬಂಧಿಸುವ ಶಾಸನವನ್ನು ಹೊಂದಿರುವ ಧವಳಪ್ಪನ ಗುಡ್ಡ ಕರ್ನಾಟಕದ ಕಟ್ಟಾ ಶೈವಾರಾಧನೆಯ ಬಹುಮುಖ್ಯ ಕೇಂದ್ರವಾಗಿತ್ತು.[21] ಕಲ್ಲೇದೇವರಪುರದ ಜಮದಗ್ನಿ ಋಷಿಯ ಮಠ ಸಹ ಕಲ್ಯಾಣದ ಚಾಲುಕ್ಯರ ಅವಧಿಯಿಂದಲೇ ಈ ಪರಿಸರದಲ್ಲಿ ಇದ್ದಿರಬಹುದು. ಈ ಮೇಲೆ ವಿವರಿಸಿದ ಶೈವಯತಿಯ ಶಿಲ್ಪವೂಸಹ ಒಬ್ಬ ಕಾಳಾಮುಖ ಯತಿಯಾದಾಗಿದ್ದು, ಈ ಮಠದ ಮತ್ತು ದೇಗುಲದ ಸ್ಥಾನಿಕನಾಗಿ ಕಾರ್ಯ ನಿರ್ವಹಿಸಿರಬಹುದು.

ಜಾತ್ರಾ ವಿಶೇಷತೆ ಮತ್ತು ಜನರ ಸಹಭಾಗಿತ್ವ

ಸಂಸ್ಕೃತದ ಯಾತ್ರೆಗೆ ಅನ್ವರ್ಥವಾಗಿ ಬಳಕೆಯಲ್ಲಿರುವ ಪದ ಜಾತ್ರೆ. ವರ್ಷಕೊಮ್ಮೆ ನಿಗದಿಯಾದ ಅವಧಿಯಲ್ಲಿ ಮತ್ತು ಸ್ಥಳದಲ್ಲಿ ಒಂದುದಿನ ಅಥವಾ ಒಂದಕ್ಕಿಂತ ಹೆಚ್ಚು ದಿನ ಭಕ್ತ ಸಮೂಹದೊಡನೆಗೂಡಿ ನಡೆಸುವ ಉತ್ಸವ ಜಾತ್ರೆಯೆಂದೆನಿಕೊಳ್ಳುತ್ತದೆ. ಇದು ತಲೆಮಾರಿನಿಂದ ತಲೆಮಾರಿಗೆ ಮೌಖಿಕ ಹಾಗೂ ಕ್ರಿಯಾತ್ಮಕ ಅಭಿವ್ಯಕ್ತಿಯಲ್ಲಿ ಪಾರಂಪರಿಕವಾಗಿ ಸಾಗಿಬರುವಂತಹದ್ದು. ಪ್ರತಿನಿತ್ಯ ಪ್ರಕೃತಿಯ ಒಡಲಲ್ಲಿ ಶ್ರಮವಹಿಸಿ ದುಡಿಯುವ ಜನತೆ ಆ ಬದುಕಿನಿಂದ ಸ್ವಲ್ಪಕಾಲ ವಿರಾಮ ಪಡೆಯಲು ಹಬ್ಬ ಹರಿದಿನ, ಉತ್ಸವ, ಜಾತ್ರೆಗಳಂಥ ಸಾಮಾಜಿಕ ಆಚರಣೆಗಳನ್ನು ಕಂಡುಕೊಂಡರು. ಇವುಗಳು ವೈಯಕ್ತಿಕತೆಗಿಂತ ಬಹುಪಾಲು ಸಮುದಾಯಗಳ ಸಮಷ್ಠಿಯ ಹಿತಾಸಕ್ತಿಯತ್ತ ಒಲವು ಮೂಡಿಸುವಂಥವುಗಳು. ಧಾರ್ಮಿಕ ವಾತಾವರಣವೇ ಇಲ್ಲಿ ಪ್ರಧಾನವಾದರೂ ಅನೇಕ ಕೊಡುಕೊಳ್ಳುವಿಕೆಗಳು ಜರುಗುತ್ತವೆ. ಎಲ್ಲ ಜನ ಸಮುದಾಯಗಳ ಸಹಭಾಗಿತ್ವ ಇದರ ಯಶಸ್ಸಿನ ಹಿಂದಿರುತ್ತದೆ. ಗ್ರಾಮದ ಎಲ್ಲ ಜನಸಮುದಾಯಗಳಿಗೆ ಇಂಥದ್ದೇ ಕೆಲಸವೆಂದು ಮೊದಲೇ ನಿರ್ಧಾರ ಮಾಡಿರುತ್ತಾರೆ. ಎಲ್ಲ ಸಮುದಾಯಗಳ ಜನರು ತಮ್ಮ ಕೌಟುಂಬಿಕ ಪರಿಧಿಯನ್ನು ದಾಟಿ ಒಟ್ಟಾಗಿ ಸೇರಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಭಾವೈಕ್ಯತೆಯ, ಚೈತನ್ಯದ ಚಿಲುಮೆಯಾಗಿ, ಜನಮದಲ್ಲಿ ಸೌಹಾರ್ದ, ಸಾಮರಸ್ಯ ಸಹಬಾಳ್ವೆಯ ಭಾವನೆ ಬೆಳೆಸಿ, ಜಾತಿ ಜಾತಿಗಳ ನಡುವಿನ ಮೇಲುಕೀಳು ಎಂಬ ಭಾವನೆ ತೊಡೆದು ಹಾಕುವಲ್ಲಿ ಜಾತ್ರೆಯ ಪ್ರಭಾವ ಅಗಣಿತವಾದುದೇ ಸರಿ.

ಕಲ್ಲೇದೇವರಪುರ ಹಾಗೂ ಸುತ್ತಮುತ್ತಲಿನ ಜನರ ಆರಾಧ್ಯದೈವ ಕಲ್ಲೇಶ್ವರ ದೇವರು. ಪ್ರತಿವರ್ಷ ವೈಶಾಖ ಹುಣ್ಣಿಮೆಯಲ್ಲಿ ಕಲ್ಲೇಶ್ವರನ ಜಾತ್ರೆ ಆರು ದಿನಗಳ ಕಾಲ ನಡೆಯುತ್ತದೆ. ಪ್ರತಿದಿನವೂ ಒಂದೊಂದು ವಿಶೇಷ ಉತ್ಸವ ನಡೆಸುವುದು ಪಾರಂಪರಿಕವಾಗಿ ಸಾಗಿಬಂದ ಪದ್ದತಿ.

ಮೊದಲನೆ ದಿನದಂದು ಕಲ್ಲೇಶ್ವರಸ್ವಾಮಿಗೆ ವಿಶೇಷಪೂಜೆ ಸಲ್ಲಿಸುವುದರ ಮೂಲಕ ಜಾತ್ರೆಗೆ ಅಧಿಕೃತವಾಗಿ ಚಾಲನೆ ನೀಡುವರು. ಕಂಕಣಧಾರಣೆಯಲ್ಲಿ ಪ್ರಧಾನ ಪಾತ್ರ ಪೂಜಾರಿ ದಂಪತಿಗಳದ್ದು. ಇವರೊಡನೆ ಇತರರು ಸೇರಿ ಸುಮಾರು ಹದಿನೈದು ಜನರು ಒಪ್ಪತ್ತಿರುವರು. ಪೂಜಾರಿ ಕಲ್ಲಪ್ಪನವರ ಮನೆಯಲ್ಲಿ ಕಂಕಣವನ್ನು ಕಟ್ಟಲು ಸಿದ್ಧಮಾಡಿಕೊಂಡಾಗ ಬಾಳೆಹನ್ನೂರು ಮತ್ತು ಉಜ್ಜಿನಿ ಮಠದ ಶರಣರು ಬಂದು ಪೂಜಾರಿ ದಂಪತಿಗಳಿಗೆ ಕಂಕಣ ಕಟ್ಟುವರು. ಬಹುತೇಕ ಜಾತ್ರೆಗಳಲ್ಲಿ ಒಬ್ಬರಿಗೊಬ್ಬರು ಕಟ್ಟುವ ಪದ್ಧತಿಯನ್ನು ಕಾಣುತ್ತೇವೆ. ಆದರೆ ಶರಣರು ಪೂಜಾರಿ ದಂಪತಿಗಳಿಗೆ ಕಂಕಣ ಕಟ್ಟುವುದು ಈ ಜಾತ್ರೆಯ ವಿಶೇಷತೆ. ಇದರ ತರುವಾಯ ತೇರಿಗೆ ಕಂಕಣ ಕಟ್ಟಿ, ಪೂಜಾರಿಯ ಮನೆಗೆ ಬಂದು ಕಳಸ ಸ್ಥಾಪನೆ ಮಾಡುವರು. ಹೊಳೆಪೂಜೆ ಮುಗಿಸಿ ಬಂದ ಮುತ್ತೈದೆಯರು ಮದಲಿಂಗಶಾಸ್ತ್ರ ಪೂಜೆ ನೆರವೇರಿಸುವರು. ಮದಲಿಂಗಶಾಸ್ತ್ರವನ್ನು ಐದು ಬಾರಿ ಮಾಡುವರು. ಅಂದು ಅಕ್ಕಿ, ಬೇಳೆ, ಬೆಲ್ಲ ಸಹಿತ ಹೊಸಬಟ್ಟೆ ಮತ್ತು ಧೂಳೆಡೆಯನ್ನು ತಂದು ದೇವರಿಗೆ ಪೂಜೆಮಾಡಿ ಸಮರ್ಪಿಸುವರು. ಅಂದು ಪೂಜಾರರ ಮನೆಯಲ್ಲಿ ಕೇರೂಟ ಮಾಡುವರು. ಇದು ಅಂದಿನ ಒಪ್ಪತ್ತಿನ ಊಟವಾಗಿದೆ.

ಎರಡನೇ ದಿನ ವಿಶೇಷ ಉತ್ಸವ ಮದಲಿಂಗಶಾಸ್ತ್ರ ಮತ್ತು ಗಜೋತ್ಸವ. ಆನೆ ಈ ದಿನ ಕಲ್ಲೇಶ್ವರನ ವಾಹನ. ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ ಗಜದ ಮೇಲೆ ಕೂರಿಸಿ ಪೂಜಿಸುವರು. ಅಂದು ಕಲ್ಲೇಶ್ವರ ಸ್ವಾಮಿಗೆ ಬಾಸಿಂಗ ಕಟ್ಟಿ ಮದಲಿಂಗನನ್ನಾಗಿ ಮಾಡುವರು. ಮೂರನೇ ದಿನದ ಉತ್ಸವ ಅಶ್ವೋತ್ಸವ. ಕುದುರೆ ಈ ದಿನ ಕಲ್ಲೇಶ್ವರನ ವಾಹನ. ಕಲ್ಲೆಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿ, ಅಶ್ವದ ಮೇಲೆ ಕೂರಿಸಿ ಪೂಜಿಸುವರು. ನಾಲ್ಕನೇ ದಿನದ ಉತ್ಸವ ವೃಷಭೋತ್ಸವ. ಈ ದಿನ ಕಲ್ಲೇಶ್ವರನ ವಾಹನ ವೃಷಭ. ಉತ್ಸವ ಮೂರ್ತಿಯನ್ನು ಅಲಂಕರಿಸಿ ವೃಷಭದ ಮೇಲೆ ಕೂರಿಸುವರು. ಈ ನಾಲ್ಕೂ ದಿನದಂದು ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡುವುದಿಲ್ಲ.

ಐದನೇ ದಿನದ ಉತ್ಸವವೇ ರಥೋತ್ಸವ ಅಥವಾ ತೇರು ಎಳೆಯುವುದು. ರಥ ಅಥವಾ ತೇರು ಎಂಬ ಶಬ್ದಗಳನ್ನು ನಾವು ರೂಢಿಯಲ್ಲಿ ಅರ್ಥಬೇಧವಿಲ್ಲದೆ ಸಮಾನಾರ್ಥಕ ಪದಗಳಾಗಿ ಬಳಸುತ್ತೇವೆ. ಶಬ್ದಕೋಶದ ದೃಷ್ಟಿಯಲ್ಲಿಯೂ ಇವೆರರಡೂ ಸಮಾನಾರ್ಥಕ ಪದಗಳೇ ಆಗಿವೆ. ರಥ ತೇರು ಆದಾಗ ಶಬ್ದಪಲ್ಲಟದೊಡನೆ ಅರ್ಥಪಲ್ಲಟ ಆಗಿದೆಯೆಂಬುದು ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರ ಅಭಿಮತ.[22] ಚಾಂದ್ರಮಾನ ಯುಗಾದಿಯ ದಿನದಂದೇ ಕಲ್ಲೇಶ್ವರ ಸ್ವಾಮಿಯ ತೇರನ್ನು ಪೂಜಿಸಿ ತೇರಿನ ಮನೆಯಿಂದ ಹೊರಗೆ ಎಳೆಯುತ್ತಾರೆ. ಪ್ರಸ್ತುತದ ತೇರು ಇತ್ತೀಚಿನದು. ಹಳೆಯ ತೇರು ದೇವಾಲಯದ ಆವರಣದಲ್ಲಿದ್ದು, ಅದನ್ನು೮ ಬಳಸುತ್ತಿಲ್ಲ. ಹೊಸ ತೇರನ್ನು ನಾಲ್ಕು ಕಲ್ಲಿನ ಗಾಲಿಗಳು ಹೊತ್ತುನಿಂತಿವೆ. ಇದರಲ್ಲಿ ಸಿಂಹ, ಕುದುರೆ, ವಿಷ್ಣುವಿನ ವಿವಿಧ ಅವತಾರಗಳಾದ ಕೂರ್ಮಾವತಾರ, ಮತ್ಸ್ಯಾವತಾರ, ನಾರಾಯಣ, ಕೃಷ್ಣನ ಅವತಾರಗಳಿವೆ. ಶಿವ, ಪಾರ್ವತಿ, ಉಮಾಮಹೇಶ್ವರ, ನಂದಿ, ಗಣೇಶ, ಲಕ್ಷ್ಮಿ, ಸರಸ್ವತಿ, ಹಸುಗಳ ಪ್ರತಿಮೆಗಳನ್ನು ಕೆತ್ತಿರುವರು. ತೇರಿನ ದಿನಕ್ಕಿಂತ ಮೊದಲೇ ಅದನ್ನು ಸ್ವಚ್ಛಗೊಳಿಸಿ ಅದರ ಹೊರಮೈಗೆ ಪಾರದರ್ಶಕ ಎಣ್ಣೆಯನ್ನು ಲೇಪಿಸುತ್ತಾರೆ. ನಂತರ ಕಟ್ಟುತ್ತಾರೆ. ಒಟ್ಟಾರೆ ತೇರಿನದಿನ ಅಡಿಯಿಂದ ಮುಡಿಯವರೆಗೂ ವಧುವಿನಂತೆ ಸಿಂಗರಿಸಿರುತ್ತಾರೆ.

ತೇರಿನ ದಿನ ಪೂರ್ವಾಹ್ನ ಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಪೂಜೆಗಳನ್ನು ಮಾಡುವರು. ನಂತರ ಜಮಾಪುರದಿಂದ ತಂದ ಎಡೆಯನ್ನು ಸ್ವಾಮಿಗೆ ಅರ್ಪಿಸುವರು. ಇದು ಬಹು ಹಿಂದಿನಿಂದಲೂ ನಡೆದುಬಂದ ಪದ್ಧತಿ. ಅಪರಾಹ್ನದ ವೇಳೆಗೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಅಳ್ಳಳ್ಳಿ ಬಸವನ ದೇಗುಲದ ಬಳಿಗೆ ತಂದು ಪೂಜಿಸಿ ಪುನಃ ಸಾಲಂಕೃತ ತೇರಿನ ಬಳಿಗೆ ಹೊತ್ತೊಯ್ಯುವರು. ದೇವರ ಉತ್ಸವಮೂರ್ತಿಯನ್ನು ತೇರಿನಲ್ಲಿ ಕೂರಿಸಿದ ತಕ್ಷಣ ಪೂಜೆ ಪ್ರಾರಂಭಿಸುವರು. ದೇವಾಲಯದ ಅರ್ಚಕರು ಮತ್ತು ಗ್ರಾಮದ ಜೋಗಳ್ಳಿಯವರ ವಂಶದಿಂದ ಎಡೆತಂದು ತೇರಿಗೆ ಹಾಕುವರು. ಈ ಎಡೆಗಳನ್ನು ‘ಧೂಳೆಡೆ’ ಮತ್ತು ‘ಗಾಲಿ ಎಡೆ’ ಎಂದು ಕರೆಯುವುದು ವಾಡಿಕೆ. ತೇರಿಗೆ ಮೊದಲ ಪೂಜೆಯನ್ನು ಹುಚ್ಚಪ್ಪಜ್ಜನ ವಂಶಜರು ಸಲ್ಲಿಸುವರು. ಸ್ಥಳೀಯರು ತಿಳಿಸುವಂತೆ ಹುಚ್ಚಪ್ಪಜ್ಜ ಕಲ್ಲೇಶ್ವರನ ಅನನ್ಯ ಭಕ್ತ. ಇವನ ಅನನ್ಯ ಭಕ್ತಿಯ ಪ್ರತೀಕವಾಗಿ ಇಂದಿಗೂ ಈತನ ಗದ್ದುಗೆ ತೇರು ಹರಿಯುವ ಬಯಲಿನಲ್ಲಿದೆ. ಪೂಜೆಯ ನಂತರ ಈ ಎಡೆಗಳನ್ನು ಆಯಗಾರರು ಹಂಚಿಕೊಳ್ಳುವರು. ತರುವಾಯ ಮೂಲಾ ನಕ್ಷತ್ರ ಬಂದ ತಕ್ಷಣವೇ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ತೇರನ್ನು ಎಳೆಯಲು ಪ್ರಾರಂಭಿಸುವರು. ಇದೇ ದಿನ ಇದೇ ನಕ್ಷತ್ರದಲ್ಲಿ ಚಿಗಟೇರಿ (ಹರಪ್ಪನಹಳ್ಳಿ ತಾಲೂಕು) ನಾರದಮುನಿ ಸ್ವಾಮಿಯ ಜಾತ್ರೆಯೂ ಜರುಗುವುದು ಗಮನಾರ್ಹ. ಈ ಹಿನ್ನೆಲೆಯಲ್ಲಿ ಜನಪದರು ಈ ಎರಡೂ ದೈವಗಳನ್ನು ಸಹೋದರರೆಂದು ಸಂಭೋಧಿಸುತ್ತಾರೆ. ಕಲ್ಲೇಶ್ವರ ಸ್ವಾಮಿಯ ತೇರು ಮುಂದೆ ಮುಂದೆ ಚಲಿಸುತ್ತಿದ್ದಂತೆಯೇ ತೇರನ್ನೆಳೆಯಲು ನಾಮುಂದು, ತಾಮುಂದು ಎಂದು ನೂಕುನುಗ್ಗಲು ಆರಂಭವಾಗುತ್ತದೆ. ನೂಕಾಟದ ಮಧ್ಯದಲ್ಲಿ ತೇರು ಗತಿಶೀಲವಾಗಿಯೇ ಇರುತ್ತದೆ. ತೇರಿನತ್ತ ಮಂಡಕ್ಕಿ, ಮೆಣಸು, ಬಾಳೆಹಣ್ಣುಗಳನ್ನು ಎಸೆಯುತ್ತಾರೆ. ತೇರು ಹುಚ್ಚಪ್ಪಜ್ಜನ ಗದ್ದುಗೆಯವರೆಗೂ ಸಾಗುವುದು. ಅಲ್ಲಿ ಮತ್ತು ಗುಗ್ಗರಿ ಬಸವಣ್ಣನ ದೇಗುಲದಲ್ಲಿ ಅರ್ಚಕರು ಪೂಜಿಸಿ ಪುನಃ ತೇರನ್ನೇರುವರು. ಅಲ್ಲಿಂದ ತೇರು ವಾಪಾಸು ಹರಿದು ತನ್ನ ಮೂಲ ಸ್ಥಾನಕ್ಕೆ ಬಂದು ನಿಲ್ಲುವುದು. ಒಟ್ಟಾರೆ ಹೇಳುವುದಾದರೆ ರಥೋತ್ಸವ ನಿಜವಾಗಿಯೂ ನೇತ್ರಾನಂದಕರ ದೃಶ್ಯ. ತೇರಿನಿಂದ ಇಳಿಸಿದ ಕಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ಅಲಂಕರಿಸಿದ ಉಯ್ಯಾಲೆಯಲ್ಲಿ ಕೂರಿಸುವರು. ಪುತ್ರ ಸಂತಾನವಿಲ್ಲದ ಸ್ತ್ರೀಯರು ಈ ಉಯ್ಯಾಲೆಯನ್ನು ಪೂಜಿಸಿ ಮೂರುಬಾರಿ ಭಕ್ತಿಯಿಂದ ಪ್ರದಕ್ಷಿಣೆ ಹಾಕಿದರೆ ಅವರಿಗೆ ಪುತ್ರ ಸಂತಾನ ಭಾಗ್ಯ ದೊರೆಯುತ್ತದೆಂಬುದು ಜನರ ನಂಬಿಕೆ. ಅಂದು ರಾತ್ರಿ ಜನರು ದೇವರನ್ನು ಸುತ್ತಿಸುತ್ತಾ ಕೋಲಾಟ ಆಡುವರು.

ಆರನೇ ದಿನದ ವಿಶೇಷತೆ ಅಡ್ಡಪಲ್ಲಕ್ಕಿ ಉತ್ಸವ ಅಡ್ಡಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಮೆರವಣಿಗೆ ಮಾಡುವುದೇ ಇದರ ವಿಶೇಷತೆ. ಅಡ್ಡಪಲ್ಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿರಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡುತ್ತಾ ತೇರಿನ ಬಳಿಗೆ ಬಂದು, ತೇರನ್ನು ಪೂಜಿಸಿ, ಪುನಃ ದೇಗುಲಕ್ಕೆ ಉತ್ಸವ ಮೂರ್ತಿಯನ್ನು ಕರೆದೊಯ್ಯುವರು. ಅಂದು ಓಕುಳಿ ಆಡಿದ ತರುವಾಯ ಜಿನಗಿಹಳ್ಳಕ್ಕೆ ಗಂಗಾ ಪೂಜೆಗೆ ಉತ್ಸವಮೂರ್ತಿಯನ್ನು ಹೊತ್ತೊಯ್ಯುವುದು ವಾಡಿಕೆ. ಅಲ್ಲಿಂದ ಬಂದ ಸ್ವಾಮಿಯನ್ನು ಪುನಃ ತೂಗುಯ್ಯಾಲೆಯಲ್ಲಿ ಕೂರಿಸುವರು. ಇದರ ನಂತರ ಉತ್ಸವ ಮೂರ್ತಿಯನ್ನು ಪೂಜಿಸಿ ಮೂಲಸ್ಥಾನಕ್ಕೆ, ಅಂದರೆ ದೇವಾಲಯಕ್ಕೆ ತಂದು ಕೂರಿಸುವುದರ ಮೂಲಕ ವೈಭವಯುಕ್ತ ಜಾತ್ರೆಗೆ ತೆರೆ ಎಳೆಯುವರು. ಇದರ ತರುವಾಯ ದನಗಳ ಜಾತ್ರೆ ಕಲ್ಲೇದೇವರಪುರದಲ್ಲಿ ಹದಿನೈದು ದಿನಗಳ ಕಾಲ ನಡೆಯುತ್ತದೆ, ಕರ್ನಾಟಕದ ವಿವಿಧ ಭಾಗಗಳಿಂದಲ್ಲದೇ ಹೊರ ರಾಜ್ಯಗಳಿಂದ ಬಂದ ವ್ಯಾಪಾರಿಗಳು ದನಗಳನ್ನು ವ್ಯಾಪಾರ ಮಾಡಲು ಮುಂದಾಗುತ್ತಾರೆ. ಇಲ್ಲಿ ಕೊಡುಕೊಳ್ಳುವಿಕೆಗಳು ದೊಡ್ಡ ಪ್ರಮಾಣದಲ್ಲಿಯೇ ಜರುಗುತ್ತವೆ. ಉತ್ತಮ ತಳಿಯ ಎತ್ತುಗಳಿಗೆ ಬಹುಮಾನಗಳನ್ನು ಕೊಡುವರು. ಈ ಮೂಲಕ ಜಾತ್ರೆಗಳು ವಾಣಿಜ್ಯ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತವೆ.

ಶ್ರಾವಣಮಾಸದ ಆಚರಣೆಗಳು

ಶ್ರಾವಣಮಾಸ ನಾಡಿನ ಪಶುಸಂಗೋಪನೆ ಮತ್ತು ರೈತ ಕುಂಟುಂಬಗಳಿಗೆ ಬಹು ಮಹತ್ವದ ಅವಧಿ. ಈ ಮಾಸದಲ್ಲಿ ಪ್ರತಿನಿತ್ಯ ಕಲ್ಲೇಶ್ವರಸ್ವಾಮಿಗೆ ಬೆಳಗಿನ ಸಮಯದಲ್ಲಿ ರುದ್ರಾಭಿಷೇಕ ಮಾಡುವರು. ಈ ಮಾಸದಲ್ಲಿ ಮೊದಲನೇ ದಿನದ ಮೊದಲ ಪೂಜೆ ಸಲ್ಲುವುದು ಅರ್ಚಕರ ವಂಶಜರಿಂದ. ಶ್ರಾವಣಮಾಸದ ಮೂರನೇ ವಾರದಲ್ಲಿ ಸ್ವಾಮಿಯ ತ್ರಿಶೂಲ, ಬೆತ್ತ, ಪಾದರಕ್ಷೆಗಳ ಸಹಿತ ಹೋಳಿಗೆ ಎಡೆಯನ್ನು ತೆಗೆದುಕೊಂಡು ಗುಹೇಶ್ವರ ಬೆಟ್ಟದಲ್ಲಿನ ಗುಹೇಶ್ವರ ಲಿಂಗವನ್ನು ಪೂಜಿಸಿ ಬರುವುದು ವಾಡಿಕೆ.

ಕಾರ್ತೀಕ ಮಾಸದ ಆಚರಣೆಗಳು

ಕಾರ್ತೀಕ ಮಾಸದಲ್ಲಿ ಕಲ್ಲೇಶ್ವರ ಸ್ವಾಮಿಗೆ ವಿಶೇಷ ಆಚರಣೆ, ದೀಪೋತ್ಸವ. ಇದು ಜರುಗುವುದು ಕಾರ್ತಿಕ ಮಾಸದ ಮೊದಲ ವಾರದಲ್ಲಿ. ದೀಪಗಳನ್ನು ಬೆಳಗಿಸುವುದರ ಮೂಲಕ ಇದು ಜರುಗುವುದು. ಇದೇ ಮಾಸದ ಕೊನೆಯ ವಾರದಂದು ಹಿಟ್ಟಿನ ಹುಣ್ಣಿಮೆಯನ್ನು ಮಾಡುವ ಪದ್ದತಿಯಿದೆ. ಇದೂಸಹ ಈ ಮಾಸದ ಹುಣ್ಣಿಮೆಯ ದಿನದಂದೇ ನಡೆಯುತ್ತದೆ. ಈ ಆಚರಣೆಗೆ ಸಂಬಂಧಿಸಿದಂತೆ ಜನಪದರಲ್ಲಿ ಪ್ರಚಲಿತದಲ್ಲಿರು ಐತಿಹ್ಯ ಈ ರೀತಿಯದು. ಬಹುಹಿಂದೆ ಕಾರ್ತೀಕ ಮಾಸದಲ್ಲಿ ಗ್ರಾಮದ ಹೂವಿನ ಮಲ್ಲವ್ವ ಮತ್ತು ಹಿಟ್ಟಿನ ಮಲ್ಲವ್ವ ಎಂಬ ಸಹೋದರಿಯರು ಸ್ವಾಮಿಯ ನೈವೇದ್ಯಕ್ಕೆ ಮೀಸಲಿಟ್ಟಿದ್ದ ಹಿಟ್ಟನ್ನು ಸೇವಿಸಿದ್ದರಿಂದ ಅವರು ಕಲ್ಲಾದರು ಎಂಬುದೇ ಈ ಐತಿಹ್ಯ. ಇದರ ನೆನಪಾಗಿ ಇಂದಿಗೂ ಜನತೆ ಭಯಭಕ್ತಿಯಿಂದ ಹುಣ್ಣಿಮೆಯಂದು ಹೊಸ ನವಣೆ ಅಕ್ಕಿಯನ್ನು ಕುಟ್ಟಿ ಹಿಟ್ಟು ತಯಾರಿಸುವರು. ನಂತರ ಅದನ್ನು ಪ್ರಸಾದವಾಗಿಭಕ್ತ ಸಮೂಹಕ್ಕೆ ಹಂಚುತ್ತಾರೆ. ಹಾಗಾಗಿಯೇ ಇದು ಹಿಟ್ಟಿನ ಹುಣ್ಣಿಮೆಯೆಂದೇ ಪ್ರಸಿದ್ಧಿ ಪಡೆದಿದೆ.

ಗುಗ್ಗರಿ ಹುಣ್ಣಿಮೆ

ಪ್ರತಿವರ್ಷ ಕಾಳ ಹುಣ್ಣಿಮೆಯಲ್ಲಿ ಗುಗ್ಗರಿ ಬಸವಣ್ಣನ ದೇವಾಲಯದಲ್ಲಿ ಗುಗ್ಗರಿ ಉತ್ಸವ ಜರುಗುತ್ತದೆ. ಈ ಉತ್ಸವದಲ್ಲಿ ಗ್ರಾಮದಲ್ಲಿರುವ ಮನೆಗಳಿಂದ ಐದು ಬಗೆಯ ಧಾನ್ಯಗಳನ್ನು ಸಂಗ್ರಹಿಸುತ್ತಾರೆ. ಅದನ್ನು ಬೇಯಿಸಿ ಗುಗ್ಗರಿಯ ರಾಶಿ ಹಾಕುವರು. ಅಂದು ಕಲ್ಲೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತುತಂದ ಪೂಜಿಸಿದ ನಂತರ ಇಡೀ ರಾತ್ರಿ ಸ್ವಾಮಿಯನ್ನು ಸುತ್ತುತ್ತಾ ಕೋಲಾಟ ಆಡುವರು. ಮರುದಿನ ಬೆಳಿಗ್ಗೆ ಗುಗ್ಗರಿಯನ್ನು ಗ್ರಾಮಸ್ಥರಿಗೆ ಪ್ರಸಾದವಾಗಿ ಹಂಚುವರು. ಪುನಃ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವುದರ ಮೂಲಕ ಗುಗ್ಗರಿ ಉತ್ಸವವನ್ನು ಮುಕ್ತಾಯಗೊಳಿಸುವರು.

ಈ ಮೇಲ್ಕಾಣಿಸಿದ ವಿಶೇಷ ಆಚರಣೆಗಳೊಡನೆ ಪ್ರತಿ ಸೋಮವಾರ, ಮಕರ ಸಂಕ್ರಾಂತಿ, ಶಿವರಾತ್ರಿ, ಯುಗಾದಿ, ವಿಜಯದಶಮಿ, ದೀಪಾವಳಿ ಮುಂತಾದ ಹಬ್ಬಗಳಂದು ವಿಶೇಷ ಪೂಜೆಗಳನ್ನು ಏರ್ಪಡಿಸುವರು.

ಕ್ರಿ.ಶ. ೧೨೭೯ರ ಕಲ್ಲೇದೇವರಪುರ ಶಿಲಾಶಾಸನ[23] ಈ ಪರಿಸರದ ಧಾರ್ಮಿಕ ಇತಿಹಾಸದ ದೃಷ್ಟಿಯಿಂದ ಮಹತ್ವ ಪಡೆದಿದೆ. ಕಾಳಾಮುಖರು, ನಾಥಸಿದ್ಧರು ಹಾಗೂ ವೀರಶೈವ ಶರಣರ ಸಂಪ್ರದಾಯಗಳನ್ನು ಸಮನ್ವಯಗೊಳಿಸಿಕೊಂಡವರು ಈ ಆಸುಪಾಸಿನಲ್ಲಿದ್ದರೆಂಬುದಕ್ಕೆ ಈ ಶಾಸನವೇ ಉಜ್ವಲ ಸಾಕ್ಷಿ. ಇದು ‘ಶಿವಯೋಗಿ ಚಕ್ರವರ್ತಿ’ ಎನಿಸಿದ ಪ್ರಸಾದದೇವ ಎಂಬ ಒರ್ವ ಯತಿಯ ಮೇಲೆ ಶೈವ, ವೀರಶೈವ ಹಾಗೂ ನಾಥರ ಪ್ರಭಾವ ಆಗಿದ್ದನ್ನು ತಿಳಿಸುತ್ತದೆ. ಅವನು ರಸ, ರಸಾಯನ, ಅಂಜನ, ಮೂಲಕ ಮತ್ತು ಇಂದ್ರಜಾಲದಲ್ಲಿ ಸಿದ್ಧಿ ಪಡೆದಿದ್ದನು. ಈ ಶಾಸನವು ವೀರಶೈವ ಶರಣರಾಕದ ಚೆನ್ನಯ್ಯ, ಕಕ್ಕಯ್ಯ ಮತ್ತು ಬಸವಣ್ಣನವರ ಹೆಸರುಗಳನ್ನು ಹರಹುತ್ತದೆ. ಇದರಲ್ಲಿ ಬಸವಣ್ಣನವರನ್ನು ಬಸವರಾಜ ಎಂದು ಉಲ್ಲೇಖಿಸಲಾಗಿದೆ. ಇದರೊಡನೆ ಗೋರಖನಾಥ, ಚತುರರಗಿನಾಥ, ಆದಿಗದೆ ಎದುನಾಥ, ವಿಸ್ತಾರದೇವಿನಾಥ, ಕಾಹಳಿನಾಥ, ಸುರ್ಪ್ಪಾಣನಾಥ, ಲೋಕನಾಥ ಮತ್ತು ನರನಾಥ ಎನ್ನುವ ನಾಥಸಿದ್ದರ ಹೆಸರುಗಳೂ ಈ ಶಾಸನದಲ್ಲಿವೆ. ಇದು ಈ ಭಾಗದಲ್ಲಿ ವೀರಶೈವ ಜೊತೆಗೆ ನಾಥಸಿದ್ದರ ಪ್ರಭಾವವಿದ್ದುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಕಲ್ಲೇದೇವರಪುರ ಗ್ರಾಮವು ಮಧ್ಯಯುಗೀನ ಕಾಲದ ಬಹುಮುಖ್ಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿತ್ತು. ಇದು ಕಾಳಾಮುಖರ, ನೆಲೆಯಾಗಿ, ಶಿಕ್ಷಣಕೇಂದ್ರವಾಗಿ, ಪ್ರಸಾದ ನಿಲಯವಾಗಿ ಪ್ರಸಿದ್ಧಿಪಡೆದಿತ್ತು. ಕಲ್ಲೇಶ್ವರ ದೇವಾಲಯದ ಆವರಣದಲ್ಲಿಯೇ ಮಠವಿದ್ದು, ಅದು ೧೫೨೬ರ ವೇಳೆಗೆ ಜಮದಗ್ನಿ ಋಷೀಶ್ವರರ ಮಠ ಎಂಬ ಹೆಸರು ಪಡೆದು ಪ್ರಸಿದ್ಧವಾಯಿತು. ಈ ದೇಗುಲದಲ್ಲಿನ ಯತಿಯ ಶಿಲ್ಪವು ಈ ಮಠದ ಮತ್ತು ದೇಗುಲದ ಸ್ಥಾನಿಕನದು. ಈ ವೇಳೆಗಾಗಲೇ ಈ ಪರಿಸರದಲ್ಲಿ ವೀರಶೈವ ಶರಣರ ಮತ್ತು ನಾಥಸಿದ್ದರ ಪ್ರಭಾವವಿದ್ದುದೂ ಸ್ಪಷ್ಟಸಂಗತಿ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)

[1] ಎಪಿಗ್ರಾಪಿಯಾ ಕರ್ನಾಟಿಕ, ಸಂಪುಟ – ೧೧, ಜಗಲೂರು – ೧೪

[2] ದಿನಾಂಕ ೬.೪.೧೯೯೬ರ ಕನ್ನಡ ಪ್ರಭ ದಿನಪತ್ರಿಕೆ

[3] ಎ.ಕ., ಪೂರ್ವೋಕ್ತ, ೩೦, ೩೧, ೩೪ ಮತ್ತು ೪೧

[4] ಅದೇ, ಪು. ೩೦

[5] ಅದೇ, ಪು. ೩೧

[6] ಅದೇ, ಪು. ೩೪

[7] ಅದೇ, ಪು. ೩೩

[8] ಅದೇ

[9] ಅದೇ, ಸಂಪುಟ – ೮, (ಹಳೆಯದು), ಶಿಕಾರಿಪುರ – ೧೧೭

[10] ಲಕ್ಷ್ಮಣ್ ತೆಲಗಾವಿ, ೧೯೮೯, ‘ಚಿತ್ರದುರ್ಗ ಕೋಟೆ ಮತ್ತು ಬೆಟ್ಟಪರಿಸರದ ಮೂರು ವ್ಯಕ್ತಿ ಶಿಲ್ಪಗಳು,’ ಇತಿಹಾಸ ದರ್ಶನ, ಸಂಪುಟ – ೧೪, ಪು. ೧೪೨

[11] ಅದೇ

[12] ಶಂಕರ ಎಸ್. ಅಥಣಿ, ‘ದಕ್ಷಬ್ರಹ್ಮನ ಒಂದು ಅಪರೂಪದ ವಿಗ್ರಹ,’ ಸತ್ಯಶುದ್ಧಕಾಯಕ, ಸಂ – ೭, ಪು ೩೭, ೩೯, ಇದರ ಎ.ಸಿ.ಸಿ. ಸಂಖ್ಯೆ – ೫೩೮

[13] ಎ.ಕ. ಪೂರ್ವೋಕ್ತ, ಜಗಲೂರು ೪೧

[14] ಲಕ್ಷ್ಮಣ್ ತೆಲಗಾವಿ, ಪೂರ್ವೋಕ್ತ, ಪು. ೧೪೩

[15] ಚಿದಾನಂದಮೂರ್ತಿ ಎಂ., ೨೦೦೨, ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ. ಪು. ೧೫೫

[16] ಎ.ಕ., ಪೂರ್ವೋಕ್ತ, ೩೩

[17] ಅದೇ, ೩೦

[18] ಅದೇ,

[19] ಅದೇ, ೯, ೧೦, ೧೨

[20] ಅದೇ, ಪು. ೮

[21] ನಾಗರಾಜಪ್ಪ ಎಸ್., ೨೦೦೮, ಚಿತ್ರದುರ್ಗ ಪರಿಸರದ ದೇವಾಲಯಗಳು, ಅಪ್ರಕಟಿತ ಎಂ.ಫಿಲ್. ಪ್ರೌಢಪ್ರಬಂಧ, ಪು. ೯೭ – ೧೦೩

[22] ಧ್ರುವರಾಜ ನಾ. ಗದಗಕರ, ೧೯೯೯, ದೇಗುಲರಥಶಿಲ್ಪ, ಪು. ೩೫

[23] ಎ.ಕ., ಪೂರ್ವೋಕ್ತ, ೩೦