ಜಟ್ಟಿತಾಯಮ್ಮ ಎಂಬ ಹೆಸರನ್ನು ಕೇಳಿದ ಕೂಡಲೇ ಇದೇನು ವಿಚಿತ್ರವಾದ ಹೆಸರು ಎಂದು ಎಲ್ಲರಿಗೂ ಈ ಹೆಸರಿನ ಬಗೆಗೆ ಕುತೂಹಲ ಮೂಡುವುದು ಸ್ವಾಭಾವಿಕ. ಜಟ್ಟಿತಾಯಮ್ಮನವರಿಗೆ ನಿಜವಾಗಿ ಇಟ್ಟ ಹೆಸರು ಲಕಷ್ಮೀದೇವಮ್ಮ ಎಂದು. ಆದರೆ ಮನೆಯವರೆಲ್ಲಾ ಅವರನ್ನು ಚಿಕ್ಕಂದಿನಲ್ಲಿ ತಾಯಿ ಎಂದೇ ಮುದ್ದಿನಿಂದ ಕರೆಯುತ್ತಿದ್ದುದರಿಂದ ಅದೇ ಹೆಸರು ರೂಢಿಯಲ್ಲಿ ಉಳಿದು ತಾಯಮ್ಮ ಎಂದೇ ಬಳಕೆಗೆ ಬಂತು.

ಅದೇ ರೀತಿ ತಾಯಮ್ಮನವರ ತಂದೆಯವರು ಜಟ್ಟಿ ವಂಶದವರಾಗಿದ್ದುದರಿಂದ ಅವರಿಗೆ ಜಟ್ಟಿ ಎಂಬುದೂ ಹೆಸರಿನ ಹಿಂದೆ ಸೇರಿಕೊಂಡು ಜಟ್ಟಿತಾಯಮ್ಮ ಎಂಬ ಹೆಸರೇ ಶಾಶ್ವತವಾಗಿ ಉಳಿಯಿತು.

ಹಿಂದೆ ಯದುವಂಶದ ಅರಸರು ಮೈಸೂರು ಸೀಮೆಯನ್ನು ಅಳುತ್ತಿದ್ದ ಕಾಲದಲ್ಲಿ ತಮ್ಮ ಖಾಸಾ ಊಳಿಗತವರ ಪೈಕಿ ಕೆಲವು ಮಂದಿ ಜಟ್ಟಿಗಳನ್ನು ಕೂಡಾ ಇಟುಕೊಂಡಿದ್ದರು. ಈ ಜನರು ಅರಮನೆಯಲ್ಲಿ ಅರಸರಿಗೆ ಮೈ ಕೈಗಳಿಗೆ ಎಣ್ಣೆ ಹಚ್ಚಿ ಮಸಾಜ್‌ ಮಡಿ ಅವರನ್ನು ಉಪಚರಿಸುತ್ತಿದ್ದರು. ಆ ಪಂಗಡದ ಊಳಿಗದವರನ್ನು ಜಟ್ಟಿಗಳೆಂದು ಕರೆಯುತ್ತಿದ್ದರು. ಲಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅರಮನೆಯಲ್ಲಿ ಈ ಜಟ್ಟಿ ವೃತ್ತಿಯನ್ನು ಅವಲಂಬಿಸಿಕೊಂಡಿದ್ದವರಲ್ಲಿ ದಾಸಪ್ಪ ಎಂಬುವವರೂ ಒಬ ಬರಾ ಗಿದ್ದರು. ಅವರು ತಮ್ಮ ಈ ವೃತ್ತಿಯಲ್ಲಿ ಅಪಾರ ನಿಷ್ಠೆ, ಶ್ರದ್ಧೆ ಇಟ್ಟುಕೊಂಡಿದ್ದು ಒಡೆಯರಿಗೆ ಸೇವೆ ಮಾಡುತ್ತಿದ್ದರು. ದೊರೆಗಳ ಅಪಾರ ಮೆಚ್ಚುಗೆ ಗಳಿಸಿದ್ದ ದಾಸಪ್ಪನವರನ್ನು ದೊರೆಗಳು ಪ್ರೀತಿಯಿಂದ ದಾಸದಟ್ಟಪ್ಪ ಎಂಧೇ ಕರೆಯುತ್ತಿದ್ದರು. ಆ ದಾಸಜಟ್ಟಪ್ಪನವರ ಪುತ್ರಿಯೇ ಜಟ್ಟಿತಾಯಮ್ಮ.

ನಾಡಿನ ನೃತ್ಯಲೋಕದಲ್ಲಿ ಒಂದು ಅಪೂರ್ವ ನಕ್ಷತ್ರದಂತೆ ಮಿನುಗಿ ಮಿಂಚಿ ಮೆರೆದು ಇಂದಿಗೂ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದರುವ ಜಟ್ಟಿತಾಯಮ್ಮನವರು ಮೈಸೂರಿನಲ್ಲಿ ೧೮.೧೦.೧೮೫೭ರಂದು ಜನಿಸಿದರು. ಅದು ಒಂದು ಪರ್ವ ದಿನ ಎಂದೇ ಹೇಳಬೇಕಾಗುತ್ತದೆ. ನಾಡಿನ ನೃತ್ಯಕ್ಷೇತ್ರಕ್ಕೆ ಒಂದು ಹೊಸ ಆಯಾಮವನ್ನೇ ಕೊಟ್ಟ ಕೀರ್ತಿ ಜಟ್ಟಿತಾಯಮ್ಮನವರದ್ದಾಗಿರುವುದರಿಂದ ತಾಯಮ್ಮನವರ ಜನನದಿಂದ ಮೈಸೂರು ಭಾರತದ ಸಾಂಸ್ಕೃತಿಕ ಭೂಪಟದಲ್ಲಿನಿರಂತರವಾಗಿ ಎದ್ದು ಕಾಣುವಂತಾಗಲು ಸಾಧ್ಯವಾಯಿತು.

ಬೆಳೆಯುವ ಪೈರು ಮೊಳಕೆಯಲ್ಲಿ ಎಂಬ ಮಾತಿನಂತೆ ಲಕ್ಷ್ಮೀದೇವಮ್ಮ ದೊಡ್ಡ ಕಲಾವಿದೆಯಾಗಿ ರೂಪುಗೊಳ್ಳುವ ಎಲ್ಲಾ ಲಕ್ಷಣಗಳು ಬಾಲ್ಯದಲ್ಲೇ ಕಾಣಿಸುತ್ತಿತ್ತು. ಆಕೆಗೆ ತನ್ನ ಆರನೆಯ ವಯಸ್ಸಿನಲ್ಲೇ ಸಂಗೀತ ಮತ್ತು ನೃತ್ಯಕಲೆಯ ಬಗ್ಗೆ ಅಪಾರ ಅಭಿರುಚಿ, ಅಭಿಮಾನ ಇತ್ತು. ಲಕ್ಷ್ಮೀದೇವಮ್ಮಳಿಗೆ ತಂದೆಯೇ ಸಂಗೀತದ ಮೊದಲ ಗುರುಗಳು. ಅವರಿಂದ ಕೆಲವು ಭಕ್ತಿಪದಗಳನ್ನು ಕಲಿತು ಈಕೆ ಭರವಸೆ ಮೂಡಿಸಿದಳು. ಮೊದಲಕಿಗೆ ಉಪಾದ್ರು ಎಂಬ ಗುರುಗಳಿಂದ ಕ್ರಮಬದ್ಧ ಸಂಗೀತಾಭ್ಯಾಸ ಆರಂಭವಾಯಿತು. ಸಂಸ್ಕೃತ ಶ್ಲೋಕಗಳು, ವರ್ಣಗಳನ್ನು ಬೇಗ ಬೇಗೆನೆ ಕಲಿತ ಲಕ್ಷ್ಮೀದೇವಮ್ಮಳಿಗೆ ಶೃಂಗೇರಿ ಮಠದ ನವ ವ್ಯಾಕರಣ ಪಂಡಿತರಾಗಿದ್ದ ಶ್ರೀ.ಎಂ. ಸುಬ್ರಹ್ಮಣ್ಯ ಶಾಸ್ತ್ರಿಗಳಿಂದ ಸಂಸ್ಕೃತದಲ್ಲಿ ಪಾಠವಾಯಿತು. ಕಷ್ಣಕರ್ಣಾಮೃತದ ಶ್ಲೋಕಗಳು, ಅಮರ ಶತಕ ಇತ್ಯಾದಿ ಈಕೆಗೆ ಬಾಯಿ ಪಾಠವಾದವು. ಮೈಸೂರಿನ ಆಸ್ಥಾನ ವಿದ್ವಾಂಸರಾಗಿದ್ದು ಬಾಲಚಂದ್ರ, ಚಂದ್ರ, ಹಾಗೂ ಚಾಮೇಂದ್ರ, ಎಂಬಿತ್ಯಾದಿ ಅಂಕಿತದಲ್ಲಿ ಹಲವಾರು ಕನ್ನಡ ಜಾವಳಿಗಳನ್ನು ರಚಿಸಿ ಖ್ಯಾತರಾಗಿರುವ ಚಂದ್ರಶೇಖರ ಶಾಸ್ತ್ರಿಗಳಿಂದಲೂ ಕರಿಬಸಪ್ಪ ಶಾಸ್ತ್ರಿಗಳಿಂದಲೂ ಪಾಠಗಳು ನಡೆಯಿತು. ಸುಬ್ಬರಾಯಪ್ಪನವರಿಂದಭರತನಾಟ್ಯದಲ್ಲಿ ಪ್ರಾರಂಭಿಕ ಶಿಕ್ಷಣ ಲಭಿಸಿತು. ಕವೀಶ್ವರ ಗಿರಿಯಪ್ಪನವರಿಂಧ ಅಭಿನಯದಲ್ಲಿ ಪಾಠ ಆಯಿತು. ನಂತರ ಕೆಲವುಕಲಾ ವಾಗ್ಗೇಯಕಾರರಾಗಿದ್ದ ಮೈಸೂರು ವಾಸುದೇವಚಾರ್ಯರಿಂದಲೂ ಸಂಗೀತ ತರಬೇತಿ ಗಳಿಸಿದ ಹೆಮ್ಮೆ ಜಟ್ಟಿತಾಯಮ್ಮನವರದ್ದಾಗಿದೆ.

ಜಟ್ಟಿತಾಯಮ್ಮನವರು ಸ್ವಲ್ಪಕಾಲ ಮೈಸೂರು ಅರಮನೆಯಲ್ಲಿ ಆಸ್ಥಾನ ವಿದುಷಿಯಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಜಟ್ಟಿತಾಯಮ್ಮನವರಿಗೆ ಈ ಪದವಿ ಮನೆ ಬಾಗಿಲಿಗೇ ಬಂತು. ತಾಯಮ್ಮನವರಿಗೆ ಹದಿನೈದು ವರ್ಷ ವಯಸ್ಸಿರಬಹುದು ಆಗಲೇ ಇವರ ಕಲಾನೈಪುಣ್ಯತೆ ಹಾಗೂ ಅಪ್ಪಣೆಯಂತೆ ಅರಮನೆಯ ಬಕ್ಷಿಯವರು ತಾಯಮ್ಮನವರ ಮನೆಗೇ ಬಂದು ತಾಯಮ್ಮನವರ ನೃತ್ಯವನ್ನು ಮಹಾಸ್ವಾಮಿಯವರ ಖಾಸಾ ಸಜ್ಜೆಯಲ್ಲಿ ಏರ್ಪಡಿಸಲು ಅಪ್ಪಣೆ ಆಗಿರುವ ವಿಷಯವನ್ನು ಜಟ್ಟಿದಾಸಪ್ಪನವರಿಗೆ ತಿಳಿಸಿದರು.

ಮಹಾರಾಜ ಚಾಮರಾಜೇಂದ್ರ ಒಡೆಯರ ಮುಂದೆ ತಾಯಮ್ಮನವರು ಕಲಾಪೂರ್ಣವಾದ ಆಕರ್ಷಕ ನೃತ್ಯಪ್ರದರ್ಶನ ನೀಡಿದರು. ಕಲಾರಾಧಕರಾಗಿದ್ದ ಒಡೆಯರಿಗೆ ಈಕೆಯ ನೃತ್ಯ ತುಂಬಾ ಮೆಚ್ಚುಗೆಯಾಯಿತು. ನರ್ತಕಿಗೆ ಸೂಕ್ತ ಇನಾಮನ್ನು ನೀಡಿ ತಕ್ಷಣದಿಂದಲೇ ಆಸ್ಥಾನ ವಿದುಷಿಯಾಗಿ ಆಕೆಯನ್ನು  ನೇಮಕ ಮಾಡಿದರು. ಆದರೆ ಕಲಾಪ್ರಪೂರ್ಣೆಯಾದ ತಾಯಮ್ಮನವರಿಗೆ ಏಇಕೋ ಏನೋ ಅರಮನೆಯ ವಾತಾವರಣ ಅಷ್ಟಾಗಿ ಒಗ್ಗಲಿಲ್ಲ. ಕೆಲವೇ ತಿಂಗಳುಗಳಲ್ಲಿ ಅರಮನೆಯ ಹುದ್ದೆಯಿಂದ ಸ್ವಂತ ಇಚ್ಛೆಯ ಮೇಲೆ ನಿವೃತ್ತಿ ಪಡೆದರು. ಆದರೆ ಮುಂದೆ ಪುನಃ ೧೯೦೦ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ವಿವಾಹ ಸಂದರ್ಭದಲ್ಲಿ ತಾಯಮ್ಮನವರು ನೃತ್ಯ ಪ್ರದರ್ಶನ ನೀಡಿ ಅಪಾರ ಪ್ರಶಂಸೆಗೆ ಪಾತ್ರರಾದರು.

೧೮೭೬ರಲ್ಲಿ ತಾಯಮ್ಮನವರಿಗೆ ಸಂಜೀವಜಟ್ಟಿ ಉರುಫ್‌ ರಂಗಾಜಟ್ಟಿಯವರೊಡನೆ ವಿವಾಹವಾಯಿತು. ಆದರೆ ಅವರ ದುರ್ದೈವವೋ ಎಂಬಂತೆ ಕಾಲಚಕ್ರ ಉರುಳಿದಂತೆ ಸುಮಧುರ ಸಂಗೀತದಂತಿದ್ದ ಸಂಸಾರದಲ್ಲಿ ಮೇಲಿಂದ ಮೇಲೆ ದುರಂತಗಳು ಸಂಭವಿಸಿ ತಾಯಮ್ರಮನವರು ಭಾರೀ ದುಃಖ ಅನುಭವಿಸುವಂತಾಯ್ತು. ಪತಿ ಸಂಜೀವ ಜಟ್ಟಿಯವರು ಅಕಾಲ ಮರಣಕ್ಕೀಡಾದರು. ಈ ಕದುಃಖವೇ ಅನುಭವಿಸಲು ಸಾಧ್ಯವಾಗದಂಥಾದ್ದು. ಆದರೆ ಅದರಿಂದ ಚೇತರಿಸಿಕೊಳ್ಳುವ ಮೊದಲೇ ಅತ್ಯುತ್ತಮ ನೃತ್ಯಕಲಾವಿದೆಯಾಗಿ ಖ್ಯಾತಿ ಗಳಿಸಬೇಕಾಗಿದ್ದ ಹಿರಿಯ ಮಗಳು ರಂಗನಾಯಕಮ್ಮ ಕೂಡ ನಿಧನರಾದರು. ಪತಿಯ ನಿಧನದ ಆಘಾತವನ್ನು ಮರೆಯಲು ತಾಯಮ್ಮನವರು ನೃತ್ಯಕಲೆಯ ಮೊರೆ ಹೋಗಿದ್ದರು. ತಾಯಮ್ಮ ಹಾಗೂ ಮಗಳು ರಂಗನಾಯಕಮ್ಮನವರು ಸಂಪೂರ್ಣವಾಗಿ ತಮ್ಮ ಮನಸ್ಸನ್ನು ನೃತ್ಯದ ಕಡೆ ಹರಿಸಿ ಜತೆ ಜತೆಯಾಗಿ ನೃತ್ಯ ಪ್ರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಆದರೆ ಜತೆಯಲ್ಲಿ ಸರಿಸಮ ಪ್ರತಿಭೆಯಿಂದ ನೃತ್ಯ ಮಾಡುತ್ತಿದದ ನೃತ್ಯದಲ್ಲಿ ಪ್ರೌಢತೆ೪ ಪಡೆದ ರಂಗನಾಯಕಮ್ಮನೂ ಆಕಾಲ ಮರಣಕ್ಕೀಡಾದಾಗ ಮಾತ್ರ ತಾಯಮ್ಮನವರ ದುಃಖ ಹೇಳತೀರದು. ಅದೇ ರೀತಿ ರಂಗನಾಯಕಮ್ಮ ಸತ್ತು ಕೆಲವೇ ತಿಂಗಳುಗಳಲ್ಲಿ ಇನ್ನೊಬ್ಬ ಮಗಳು ಬಾಲಮ್ಮಳೂ ನಿಧನಳಾದರಳು. ಈಗ ಮಾತ್ರಾ ತಾಯಮ್ಮನವರಿಗೆ ಸಂಸಾರದ ಈ ಜಂಜಾಟದಿಂದ ಸಂಸಾರದ ಬಗ್ಗೆ ಸಂಪೂರ್ಣ ವೈರಾಗ್ಯ ಭಾವ ಬೆಳೆಯಿತು. ಒಂದರ ಮೇಲೆ ಒಂದರಂತೆ ಬಂದು ಮೇಲೆರಗಿದ ಈ ಬರಸಿಡಿಲಿನಿಂದ ಆಕೆಯ ಮನಸ್ಸು ಘಾಸಿಗೊಂಡಿತು. ಸುಖ, ದುಃಖ, ಸೌಭಾಗ್ಯ, ದೌರ್ಭಾಗ್ಯಗಳ ಬಗ್ಗೆ ಗಮನಹರಿಸುವುದನ್ನು ಬಿಟ್ಟು  ವಿರಾಗಿಯಂತೆ ಓರ್ವ ಸನ್ಯಾಸಿನಿಯಂತೆ ತಾಯಮ್ಮನವರು ಬದುಕಲು ಆರಂಭಿಸಿದರು. ಅವರ ಮನಸ್ಸು ಆಧ್ಯಾತ್ಮಿಕಿದ ಕಡೆಗೆ ಹೊರಳಿತು. ದೈವಭಕ್ತಿ ಹೆಚ್ಚಿತು. ಜೀವನದಲ್ಲಿ ಸಾತ್ವಿಕತೆ ಹೆಚ್ಚಿತು. ಮನ್ಸಸಂತೋಷಕ್ಕೆ, ಆತ್ಮತೃಪ್ತಿಗಾಗಿ ಕಲೆಯನ್ನು ಬಳಸಿಕೊಂಡರು. ಕಲೆಗಾಗಿಯೇ ಬದುಕನ್ನು ಮೀಸಲಿರಿಸಿ ಅದಕ್ಕಾಗಿ ಹಗಲಿರುಳೂ ಶ್ರಮಸಿದರು.

ಜಟ್ಟಿತಾಯಮ್ಮನವರು ಉತ್ತಮ ಮಟ್ಟದಲ್ಲಿ ಪ್ರದರ್ಶನ ನೀಡುವ ಕಲಾವಿದೆಯಾಗಿದ್ದರು. ಮಾತ್ರವಲ್ಲದೆ ಅತ್ಯುತ್ತಮ ಮಟ್ಟದಲ್ಲಿ ಶಿಷ್ಯರನ್ನು ತರಬೇತಿಗೊಳಿಸುವ ಸಾಮರ್ಥ್ಯವನ್ನು ಹೊಂದಿದ್ದ ಪ್ರತಿಭಾನ್ವಿತ ಶಿಕ್ಷಕಿಯೂ ಆಗಿದ್ದರು. ಅವರ ಪಾಠ ಪದ್ಧತಿ ಎಂದರೆ ಒಂದು ರೀತಿಯಲ್ಲಿ ಪ್ರಾಚೀನ ಗುರುಕುಲ ಪದ್ಧತಿಯೇ ಆಗಿತ್ತು.

ಪಾಠ ಹೇಳಿಸಿಕೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು ಬೆಳಗಿನ ಜಾವ ಐದು ಗಂಟೆಗೇ ಅವರ ಮನೆಗೆ ಹೋಗಬೇಕಾಗುತ್ತಿತ್ತು. ಸಾಧಾರಣವಾಗಿ ಯಾವಾಗಲೂ ವಿದ್ಯಾರ್ಥಿಗಳು ಬೆಳಗಿನ ಜಾವದ ಪಾಠವೆಂದರೆ ಅಂಗಸಾಧನೆ. ದೇಹದ ಮೂಲಭೂತವಾದ ಚಲನೆಗಳಿಗೆ ರೂಪಕೊಡುವ ವ್ಯಾಯಾಮಗಳನ್ನು ಹೇಳಿಕೊಡುತ್ತ ಅಭ್ಯಾಸ ಮಾಡಿಸುತ್ತಿದ್ದರು. ಒಂದು ಶರಾಯಿ, ಅಂಗಿ, ಸೊಂಟಕ್ಕೆ ಬಿಗಿಯಾಗಿ ದಟ್ಟಿ ಕಟ್ಟಿಕೊಂಡು ಶಿಷ್ಯೆಯರು ಕೈ ಕಾಲು ಅಂಗಸಾಧನಕ್ಕೆ ಸಿದ್ಧವಾಗುತ್ತಿದ್ದರು. ಇದರಲ್ಲಿ ಮುಖ್ಯವಾಗಿ ಮೊದಲಿಗೆ ಬಸ್ಕಿ ಹೊಡೆಸುವುದು, ದಂಡಿ ತೆಗೆಸುವುದು, ಕೈಗಳನ್ನು ವೃತ್ತಾಕಾರವಾಗಿ ರಭಸವಾಗಿ ಹಿಂದಕ್ಕೆಕ ಮುಂದಕ್ಕೆ ಬಲ ಎಡ ಭಾಗಗಳಲ್ಲಿ ಸುತ್ತಿಸುವುದು, ಕುಳಿತುಕೊಂಡು ಕುಪ್ಪಳಿಸುವುದು, ಕಾಲನ್ನು ಸುತ್ತುವುದು, ಸೊಂಟವನ್ನು ಎಡ ಬಲ ಪಾರ್ಶ್ವಗಳಿಗೆ, ಮುಂದಕ್ಕೆ, ಹಿಂದಕ್ಕೆ ಬಗ್ಗಿಸುವುದು ಇತ್ಯಾದಿಗಳ ತರಬೇತಿ ನಡೆಯುತ್ತಿತ್ತು. ನಂತರ ಏಕಾಗ್ರತೆ ಹೆಚ್ಚಿಸುವಂತಹ ಕೆಲವು ಅಂಗಸಾಧನೆಗಳನ್ನು ಕಲಿಸಿಕೊಡುತ್ತಿದ್ದರು. ಉದಾಹರಣೆಗೆ-ತೊಗರೀಬೇಳೆ, ಹಂಚಿನಕಡ್ಡಿ, ಆಗಿನ ಎರಡಾಣೆ, ನಾಲ್ಕಣೆ ಅಥವಾ ಒಂದು ರೂಪಾಯಿ ನಾಣ್ಯವನ್ನು ಕೈಯಿಂದ ಮುಟ್ಟದೆ ಕಣ್ಣಿನಿಮದ ತೆಗೆಯುವುದನ್ನು ಅವರೇ ಮಾಡಿ ತೋರಿಸುತ್ತಿದ್ದರು. ಅದಾದ ನಂತರ ಬೆಳಗಿನ ಉಪಾಹಾರ ಆಗುತ್ತಿತ್ತು. ಮಕ್ಕಳಿಗೆ ಅವರವರ ಪೋಷಕರು ಆ ಸಮಯಕ್ಕೆಕ ಸರಿಯಾಗಿ ಉಪಾಹಾರವನ್ನು ಅಲ್ಲಿಗೇ ತರುತ್ತಿದ್ದರು. ಗುರು ಶಿಷ್ಯರೆಲ್ಲರೂ ಒಟ್ಟಾಗಿ ಅವರವರ ಮನೆಯಿಂದ ತಂದ ಉಪಾಹಾರವನ್ನು ಸೇವಿಸುತ್ತಿದ್ದರು. ಒಮ್ಮೊಮ್ಮೆ ಎಲ್ಲರಿಗೂ ತಾಯಮ್ಮನವರೇ ಉಪಾಹಾರ ನೀಡಿದ್ದೂ ಉಂಟು.

ಬೆಳಗಿನ ಉಪಾಹಾರದ ನಂತರದ ಪಾಠ ಅಡವುಗಳಿಂದ ಆರಂಭ. ತಟ್ಟು, ಮೆಟ್ಟು, ನಾಟು, ಜಾರಡು, ಹಾರಡು ಮಂಡಿ ಇತ್ಯಾದಿಗಳಲ್ಲಿ ಸುಮಾರು ಎಂಬತ್ತು ಅಡವುಗಳನ್ನು ತರಬೇತಿ ಕೊಡುತ್ತಿದ್ದರು. ಅಡವುಗಳನ್ನು ಅಭ್ಯಾಸ ಮಾಡಿಸುವಗ ಪ್ರತಿ ಮಗುವಿನ ಅಂಗರಚನೆಗೆ ಸೂಕ್ತವೆನಿಸುವಂತೆ ಅವುಗಳಲ್ಲಿ ತರಬೇತಿಗೊಳಿಸುತ್ತಿದ್ದರು. ಬೆನ್ನು ಬಗ್ಗಿಸಬಾರದು. ಕೈಗಳು ತೋಳಿಗಿಂತ ಎತ್ತರಕ್ಕೆ ಹೋಗಬಾರದು, ಅರೆಮಂಡಿ ಸರಿಯಾಗಿ ಇರಬೇಕು ಇತ್ಯಾದಿ ಸೂಚನೆಗಳನ್ನು ಮಕ್ಕಳಿಗೆ ಹೇಳುತ್ತ ಈ ಅಡವುಗಳನ್ನೆಲ್ಲಾ ತ್ರಿಕಾಲದಲ್ಲಿ ತರಬೇತಿ ಕೊಡುತ್ತಿದ್ದರು.

ಅಡವುಗಳ ಪಾಠದ ನಂತರ ವಿನಾಯಕ ಸ್ತುತಿ, ಜತಿಸ್ವರ, ಇತ್ಯಾದಿ ಇತರ ನೃತ್ಯ ಬಂಧಗಳನ್ನು ಮಾಡಿಸುತ್ತಿದ್ದರು. ಶ್ಲೋಕಗಳ ಪಾಠಕ್ಕೆಕ ಮೊದಲು ಅವುಗಳನ್ನು ಸ್ಲೇಟಿನಲ್ಲಿ ಬರೆಸಿ ಬಾಯಿಪಾಠ ಮಾಡಿಸಿ ನಂತರವೇ (ಅಂದರೆ ಶುದ್ಧವಾಗಿ ಬಾಯಿಯಲ್ಲಿ ಹೇಳಲಿಕ್ಕೆ ಬಂದ ನಂತರ) ಅದಕ್ಕೆ ಅಭಿನಯ ಕಲಿಸುತ್ತಿದ್ದರು. ತಾಯಮ್ಮನವರು ಸಂಗೀತವು ನೃತ್ಯದ ಜೀವಾಳ ಎಂದೂ ನಂಬಿಕೆ ಇಟ್ಟವರಾಗಿದ್ದರು. ಸಂಗೀತಾಭ್ಯಾಸ ಇಲ್ಲದೆ ಕಲಿತ ನೃತ್ಯ ನಿಷ್ಪ್ರಯೋಜಕ ಎಂದು ಅರಿತಿದ್ದರು. ಪ್ರತಿ ಶಿಷ್ಯೆಯರಿಗೂ ಮೊದಲು ಹಾಡಲು ಬರಲೇಬೇಕು. ಹಾಡುವಾಗಲೂ ತಾಳ,ಲಯ, ಶ್ರುತಿ ವ್ಯತ್ಯಾಸವಾಗಲೇ ಕೂಡದು. ಉಚ್ಚಾರಣೆಯಲ್ಲೂ ಅಷ್ಟೆ. ಸಾಹಿತ್ಯ ಶುದ್ದಿ ಇರಬೇಕೆಂಬುದನ್ನು ಒತ್ತಿ ಹೇಳುತ್ತಿದ್ದರು. ಸಾಹಿತ್ಯದ ಅರ್ಥ, ಪ್ರತಿಪದಾರ್ಥ ಮತ್ತು ಭಾವಾರ್ಥಗಳನ್ನು ವಿದ್ಯಾರ್ಥಿಗಳು ಸರಿಯಾಗಿ  ಅರಿತುಕೊಂಡ ಮೇಲೆಯೇ ಅವುಗಳಿಗೆ ಅಭಿನಯವನ್ನು ಹೇಳಿಕೊಡುತ್ತಿದ್ದರು. ಪಾಠ ಯಾವುದೇ ಆಗಿದ್ದರೂ ಅದನ್ನು ಮನನ ಮಾಡಿಕೊಂಡು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಪುಸ್ತಕದಲ್ಲಿ ಅಲ್ಲ ಎಂದು ಯಾವಾಗಲೂ ಹೇಳುತ್ತಿದ್ದರಂತೆ. ಸಾಹಿತ್ಯದಲ್ಲಿ ಅಪಶಬ್ದದ ಬಳಕೆ, ಸಂಗೀತದಲ್ಲಿ ಅಪಶೃತಿ ಇವೆರಡನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಜತಿಗಳನ್ನು ಬಾಯಿಯಲ್ಲಿ ಹೇಳಬೇಕಾದರೆ ಎಲ್ಲಿ ಅವುಗಳಿಗೆ ಹೆಚ್ಚು ಒತ್ತುಕೊಡಬೇಕು. ಎಲ್ಲಿ ಲಘುವಾಗಿ ಸರಳವಾಗಿ ಹೇಳಬೇಕು. ಉಚ್ಚಾರಣೆಯಿಂದ ಜತಿಗಳಿಗೆ ಹೇಗೆ ಕಳೆಕಟ್ಟಿಸಬೇಕೆಂದು ಸ್ವಾರಸ್ಯಕರವಗಿ ವಿವರಿಸುತ್ತಿದ್ದರು. ಇನ್ನೊಂದು ಮುಖ್ಯ ಅಂಶವೇನೆಂದರೆ ಕಿರಿಯ ವಿದ್ಯಾರ್ಥಿಗಳು ಯಾವಾಗಲೂ ಹಿರಿಯರಿಗೆ ಪಾಠ ಆಗುವಾಗ ಕುಳಿತು ಅದನ್ನು ನೋಡಲೇಬೇಕಾಗಿತ್ತು. ನೋಡಿ ಕಲಿತುಕೊಳ್ಳುವಂತಾದ್ದು ನೃತ್ಯದಲ್ಲಿ ತುಂಬಾ ಇದೆ ಎಂದು ತಾಯಮ್ಮನವರು ಯಾವಾಗಲೂ ಹಿರಿಯರಿಗೆ ಪಾಠ ಆಗುವಾಗ ಕುಳಿತು ಅದನ್ನು ನೋಡಲೇಬೇಕಾಗಿತ್ತು. ನೋಡಿ ಕಲಿತುಕೊಳ್ಳುವಂತಾದ್ದು ನೃತ್ಯದಲ್ಲಿ ತುಂಬಾ ಇದೆ ಎಂದು ತಾಯಮ್ಮನವರು ಯಾವಾಗಲೂ ಮಕ್ಕಳಿಗೆ ಹೇಳುತ್ತಿದ್ದರು. ಸಂಗೀತ ವಿದ್ಯಾರ್ಥಿಗಳಿಗೆ ಕೇಳ್ಮೆ ಎಷ್ಟು ಮುಖ್ಯವೋ ಹಾಗೆಯೇ ನೃತ್ಯ ವಿದ್ಯಾರ್ಥಿಗಳಿಗೆ ಬೇರೆಯವರು ಮಾಡುವ ನೃತ್ಯ ನೋಡುವುದು ಕೂಡಾ ಒಳ್ಳೆಯ ಪಾಠಕ್ರಮ ಎಂಬುದು ಅವರ ನಂಬಿಕೆಯಾಗಿತ್ತು.

ತಾಯಮ್ಮನವರು ತರಬೇತಿಗೊಳಿಸಿದ ಶಿಷ್ಯರ ಸಂಖ್ಯೆ ನೂರಾರು ಅಥವಾ ಸಾವಿರಾರು ಎಂದು ಹೇಳಲು ಸಾಧ್ಯವಿಲ್ಲವಾದರೂ ಅವರು ತಯಾರಿಸಿದ ಕೆಲವು ಕಲಾವಿದರುಗಳು ಇಂದಿಗೂ ನೃತ್ಯಕ್ಷೇತ್ರದಲ್ಲಿ ಮುತ್ತು  ರತ್ನಗಳಂತೆ ಹೊಳೆಯುತ್ತಿದ್ದಾರೆ. ಮೊದಲು ಕೆಲವು ಕಾಲ ಮೈಸೂರು ಶಿವರಾಂ ಪೇಟೆಯಲ್ಲಿದ್ದ ನೀಲಮ್ಮ ಹಾಗೂ ಹೊಳೆನರಸೀಪುರದ ಜಯಮ್ಮ ಎಂಬುವವರು ಉತ್ತಮ ಮಟ್ಟದಲ್ಲಿ ನೃತ್ಯಮಾಡುತ್ತಿದ್ದರು. ಅದೇ ರೀತಿ ಮತ್ತೊಬ್ಬ ಶಿಷ್ಯೆ ಮೂಗೂರು ಸುಂದರಮ್ಮನವರು ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ಕೆಲಕಾಲ ಅವರು ನೃತ್ಯ ಶಾಲೆಯೊಂದನ್ನು ಕೂಡಾ ಮೈಸೂರಿನಲ್ಲಿ ನಡೆಸಿದರು. ಖ್ಯಾತ ನೃತ್ಯ ಕಲಾವಿದರಾಗಿದ್ದ ಉದಯಶಂಕರ್, ರಾಮ್‌ ಗೋಪಾಲ್‌ ಇವರುಗಳು ಕೂಡಾ ತಾಯಮ್ಮನವರಿಂದ ನೃತ್ಯಾಭ್ಯಾಸ ಮಾಡಿದ್ದಾರೆ. ತಮಿಳು ನಾಡಿನಿಂದ ಕೂಡ ಕೆಲವರು ಬಂದು ಮೈಸೂರು ಶೈಲಿಯ ಇವರ ನೃತ್ಯವನ್ನು ಕಲಿತ ನಿದರ್ಶನಗಳೂ ಇವೆ. ಮೂಗೂರು ಸುಂದರಮ್ಮ ಮೈಸೂರಿನ ಖ್ಯಾತ ಚಿತ್ರಕಲಾವಿದರೂ ಆಗಿದ್ದ ಎಸ್‌.ಎನ್‌. ಸ್ವಾಮಿ ಹಾಗೂ ಇತ್ತೀಚೆಗೆ ನಿಧನರಾದ ಪದ್ಮಭೂಷಣ ಡಾ.ಕೆ. ವೆಂಕಟಲಕ್ಷಮ್ಮ ಇವರುಗಳು ಹೆಚ್ಚು ಕಾಲ ತಾಯಮ್ಮನವರಿಂದ ನೃತ್ಯ ಶಿಕ್ಷಣ ಪಡೆದ ಭಾಗ್ಯಶಾಲಿಗಳಾಗಿದ್ದಾರೆ.

ಈಗಿನಂತೆ ಆಗ ನಮ್ಮದೇ ಆದ ಸರ್ಕಾರವಾಗಲೀ ಸರ್ಕಾರದ ಅಂಗ ಸಂಸ್ಥೆಗಳಾದ ಅಕಾಡೆಮಿಗಳಾಗಲ ಈ ಇರಲಿಲ್ಲ. ರಾಜ ಮಹಾರಾಜರು ನೀಡುವ ಬಿರುದು ಬಾವಲಿಗಳೇ ಕಲಾವಿದರಿಗೆ ದೊಡ್ಡ ಅರ್ಹತೆ ಆಗಿರುತ್ತಿತ್ತು. ಅದೇ ರೀತಿ ಸಮಾಜದ ಉನ್ನತ ಹುದ್ದೆಯಲ್ಲಿರುವ ಗಣ್ಯರ ಶ್ಲಾಘನೆ ಪ್ರಶಂಸೆಗಳೇ ಪರಮ ಉತ್ಕೃಷ್ಟವಾದ ಯೋಗ್ಯತೆ ಎನಿಸುತ್ತಿತ್ತು. ಕಿರಿಯ ವಯಸ್ಸಿನಲ್ಲೇ ಮಹಾರಾಜರಿಂದ ಪ್ರಶಂಸೆ ಗಳಿಸಿದ ಜಟ್ಟಿತಾಯಮ್ಮನವರು ಅಂತಹ ಹಲವು ಹತ್ತು ತೆರನಾದಂತಹ ಶ್ಲಾಘನೆಗಳಿಗೆ ಪಾತ್ರರಾಗಿದ್ದಾರೆ.

೧೯೪೫ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನ ಸಮಾರಂಭವೊಂದರಲ್ಲಿ ಜಟ್ಟಿತಾಯಮ್ಮನವರು ಆಕರ್ಷಕವಾದ ಅಭಿನಯ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟರು. ಆಗ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಅಧ್ಯಕ್ಷರಾದ ಡಾ||ಎಸ್‌. ರಾಧಾಕೃಷ್ಣನ್‌ರವರು ಆಶ್ಚರ್ಯಚಕಿತರಾದರಲ್ಲದೆ ಈ ಮಹಾನ್‌ ಕಲಾವಿದೆಯ ನೈಪುಣ್ಯತೆಯನ್ನು ಕೊಂಡಾಡಿದರು. ಇದೇ ಸಂದರ್ಭದಲ್ಲಿ ಅವರು ತಾಯಮ್ಮನವರಿಗೆ ನಾಟ್ಯಸರಸ್ವತಿ ಎಂಬ ಬಿರುದನ್ನು ನೀಡಿ ಗೌರವಿಸಿದರು. ಅಂದಿನಿಂದ ಜಟ್ಟಿತಾಯಮ್ಮನವರು ನಾಟ್ಯ ಸರಸ್ವತಿ ಜಟ್ಟತಾಯಮ್ಮ ಎನಿಸಿದರು.

ಕೀರ್ತಿಶೇಷರಾದ ಸಂಗೀತ ಕಲಾನಿಧಿ ಶ್ರೀ.ಕೆ. ವಾಸುದೇವಾಚಾರ್ಯರು ತಾಯಮ್ಮನವರಿಗೆ ರಾಗ ಮಾಲಿಕೆಯ ಒಂದು ವಾಮನ ಸ್ತೋತ್ರವನ್ನು ಬಹುಮಾನವಾಗಿ ಕೊಟ್ಟಿದ್ದರಂತೆ. ತಮಿಳುನಾಡಿನ ಹಿರಿಯ ನೃತ್ಯಕಲಾವಿದರುಗಳೇ ತಾಯಮ್ಮನವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರು. ಆಗಿನ ಖ್ಯಾತ ನಾಟ್ಯಾಚಾರ್ಯರಾಗಿದ್ದ ಪಂದನಲ್ಲೂರು ಶೈಲಿಯ ಗುರು ಮೀನಾಕ್ಷಿಸುಂದರಂ ಪಿಳ್ಳೈಯವರು ಕೂಡಾ ತಾಯಮ್ಮನವರ ಪಾಂಡಿತ್ಯವನ್ನು ಶ್ಲಾಘಿಸಿದ್ದರು. ಶ್ರೀ. ಟಿ.ಪಿ.ಕೈಲಾಸಂ ಅವರು ಸಹ ತಾಯಮ್ಮನವರು ಏನಾದರೂ ಫ್ರಾನ್ಸ್ ದೇಶದಲ್ಲಿ ಇದ್ದಿದ್ದರೆ ಅಲ್ಲಿ ಅವರ ಅಭಿಮಾನಿಗಲು ಅವರ ಜ್ಞಾಪಕಾರ್ಥವಾಗಿ ಒಂದು ಚಿನ್ನದ ಪ್ರತಿಮೆಯನ್ನೇ ಮಾಡಿಸಿ ಪ್ಯಾರಿಸ್ಸಿನ ಪ್ರಮುಖ ರಸ್ತೆಯಲ್ಲಿ ಇಡುತ್ತಿದ್ದರು ಎಂದು ಹೇಳಿ ತಾಯಮ್ಮನವರ ಕಲೆಯ ಮೌಲ್ಯದ ಬಗ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ಜಟ್ಟಿತಾಯಮ್ಮನವರಿಗೆ ಕರ್ನಾಟಕ ಸಂಗೀತದೊಂದಿಗೆ ಹಿಂದುಸ್ತಾನೀ ಸಂಗೀತದಲ್ಲೂ ತಕ್ಕಮಟ್ಟಿಗಿನ ಪರಿಶ್ರಮವಿತ್ತು. ಖ್ಯಾತ ಹಿಂದುಸ್ತಾನಿ ಗಾಯಕಿ ಗೋಹರ್ ಜಾನ್‌ರವರು ಮೈಸೂರಿನಲ್ಲಿ ಬಂದು ಉಳಿದಿದ್ದ ಕಾಲದಲ್ಲಿ ಅವರಿಂದ ಕೆಲವು ಠುಮ್ರಿ ಮತ್ತು ಗಝಲ್‌ಗಳನ್ನು ತಾಯಮ್ಮನವರು ಕಲಿತುಕೊಂಡು ಅವುಗಳನ್ನು ಕೂಡಾ ತಮ್ಮ ಅಭಿನಯಕ್ಕೆ ಬಳಸಿಕೊಂಡರು.

ಹೀಗೆ ಜಟ್ಟಿತಾಯಮ್ಮನವರು ಇಂದು ನಮ್ಮ ಜೊತೆ ದೈಹಿಕವಾಗಿ ಇಲ್ಲದಿದ್ದರೂ, ಅವರ ಸಿದ್ಧಿ ಮತ್ತು ಸಾಧನೆಗಳ ಉಪಯೋಗಗಳನ್ನು ಅವರ ಶಿಷ್ಯಪರಂಪರೆಯ ಮೂಲಕ ಇಂದಿಗೂ ನಾವು ಪಡೆಯಲು ಸಾಧ್ಯವಾಗಿದೆ.