“ಗುಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತಗಿಯೇ…”
ಭೋರೆಂಬ ಸುರಿಮಳೆ ; ಕಾರೆಂಬ ಕತ್ತಲು,
ಹೆಪ್ಪುಗಟ್ಟಿದ ಕಪ್ಪು ಕರಗಿ ಮಳೆ ಹನಿಯಾಗಿ
ರಪರಪನ ಬಡಿದಿದೆ.

ಮಿಂಚು ನಾಗರ ಸಂಚು ಮುಗಿಲುದ್ದ ನಾಲಗೆ ಚಾಚಿ
ಹರಿದಾಡಿದೆ.
ಮುಚ್ಚಿರುವ ಬಾಗಿಲೆಡೆ ನನ್ನ ದನಿ ಕೊರಗಿದೆ :
“ಗುಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತಗಿಯೇ…”

ಇಲ್ಲ, ಕೇಳುವಂತಿಲ್ಲ ನನ್ನ ದನಿ.
ಮಳೆಗೆ ನಾಂದುಡಿಗೆ ಮೆತ್ತಿಕೊಂಡಿದೆ ಮೈಗೆ ; ಗಂಟಲು
ಕಟ್ಟಿಹೋಗಿದೆ ಛಳಿಗೆ ; ನನ್ನ ದನಿ ಕೇಳಿಸದು ಒಳಗೆ.
ಕಲ್ಲು ಕಟ್ಟಡದೊಳಗೆ ಭದ್ರವಾಗಿರುವರಿಗೆ
ನನ್ನ ದನಿ ಕೇಳುವುದೆ !
ಕೇಳಿದರು ಬಡಿದ ಕದ ತೆರೆವುದೇ !

“Knock and it shall be opened unto you”
ದಬ್ಬಿದರೆ ತೆರೆವ ಬಾಗಿಲೇ ಇದು !
ಅಂದು ಅಲಿಬಾಬನಿಗೆ ತೆರೆದಿತ್ತಲ್ಲ
ಅದರ ಪರಿಯೇ ಬೇರೆ.
ಎಷ್ಟೊಂದು ಬಾಗಿಲನು ದಬ್ಬಿ ಬಂದಿದ್ದೇನೆ ನಾನು
ಸುರಿವ ಮಳೆಯೊಳಗೆ ;
ಇಲ್ಲ, ನನ್ನ ದನಿ ಕೇಳಿಸಲಿಲ್ಲ ಯಾರಿಗೂ
ಈ ಕತ್ತಲೊಳಗೆ.

Where have you built thy Church ?
Upon the rock or upon the sand ?
ಕಿವಿಗೆ ಬೀಳುವ ಮುನ್ನ ಭೋರೆಂಬ ಸುರಿಮಳೆ, ಕಾರೆಂಬ ಕತ್ತಲು ;
ಕುರುಡುಗಾಳಿಯ ಮೊರೆತ ಸುತ್ತಲೂ ಮುತ್ತಲೂ,
ಮಿದುವಾದ ನೆಲದೆದೆಗೆ ಒಂದೇ ಸಮನೆ ಸುತ್ತಿಗೆಯೆತ್ತಿ
ಬಡಿಯುತಿದೆ ಕತ್ತಲೆಯ ಶಿಲುಬೆ ಮಳೆ,
ಹಾಗೆಯೇ ಕುಸಿಯುತಿದೆ ತಲೆಯೆತ್ತಿ ನಿಂತ ಬೆಳೆ.

ಈ ಮೊದಲೆ ಯಾರ‍್ಯಾರೊ ಬಂದು ಹೇಳಿದ್ದುಂಟು :
ಮನೆ ಭದ್ರವಿಲ್ಲ ; ಮಳೆಗಾಲ ಬಂದಾಗ ಬಲು ಕಷ್ಟ.
ಕೇಳಿದೆನೆ ನಾನು ?
“ನಾಳೆ ಜಲ ಪ್ರಳಯ ; ಕಟ್ಟು ತೆಪ್ಪವ ; ಬಿಡು ಭಯವ !
ನಾ ಬಂದು ದಾಟಿಸುತ್ತೇನೆ ಆ ಜಲವ”-

ಇಲ್ಲ ; ಮನುವಿನ ಕಿವಿಗೆ ಕಿರು ಮೀನು ಹೇಳಿದ ಮಾತು
ನನಗೆ ಕೇಳಿಸಲಿಲ್ಲ.
ಇಗೋ, ಈಗ ಜಡಿಮಳೆಯ ಇರುಳಿನಡಿ ಬಂದು
ಯಾರದೋ ಬಾಗಿಲ ಮುಂದೆ ನಿಂತಿದ್ದೇನೆ.
ಚಿಕ್ಕಂದು ಅಜ್ಜಿ ಹೇಳಿದ ಕಥೆಯ ನೆನೆಯುತ್ತಿದ್ದೇನೆ ;
ಕಾಗಕ್ಕನದು ಸಗಣಿ ಮನೆ ; ಗುಬ್ಬಕ್ಕನದು ಕಲ್ಲಿನದು.
ಒಂದು ದಿನ ಕಾರೆಂಬ ಕತ್ತಲು, ಭೋರೆಂಬ ಸುರಿಮಳೆ
ಸಗಣಿಮನೆ ಕೊಚ್ಚಿ ಹೋಯಿತು ಮಳೆಗೆ, ಕಾಗಕ್ಕ
ಬಂದು ಕರೆಯುತ್ತಿದ್ದಾಳೆ ಗುಬ್ಬಕ್ಕನಿರುವ ಕಲ್‌ಮನೆಯ
ತಲೆ ಬಾಗಿಲೊಳಗೆ :
“ಗುಬ್ಬಕ್ಕಾ ಗುಬ್ಬಕ್ಕಾ ಬಾಗಿಲು ತಗಿಯೇ..’