೧೯೦೬ನೇ ಇಸವಿ. ಏಪ್ರಿಲ್ ತಿಂಗಳ ಒಂದು ದಿನ ಸಂಜೆ ಸಮಯ. ಬಂಗಾಳ ಪ್ರಾಂತದ ನಾಡಿಯ ಜಿಲ್ಲೆಯ ಗೋದೈ ನದಿಯ ದಡದಲ್ಲಿದ್ದ ಕೋಯಾ ಹಳ್ಳಿಯ ಪ್ರಶಾಂತ ವಾತಾವರಣ ವಿಚಿತ್ರ ಕೂಗಿನಿಂದ ಕದಡಿ ಹೋಯಿತು. ಹಳ್ಳಿಯ ಜನರೆಲ್ಲರೂ ಶಬ್ದ ಕೇಳಿಬಂದ ಆ ಪೊದೆ ಮರಗಳ ಕಡೆಗೆ ಧಾವಿಸಿ ಬಂದರು. ಆದರೆ ದಿಕ್ಕುಗಾಣದೆ ಅವರು ಬಹಳ ದೂರದಲ್ಲಿಯೇ ನಿಲ್ಲಬೇಕಾಯಿತು. ಅವರು ತಮ್ಮ ಜೀವಮಾನದಲ್ಲಿಯೇ ಕಾಣದಿದ್ದ ಭಯಂಕರ ದೃಶ್ಯ.

ಹುಲಿಯೊಂದರ ಜೊತೆಗೆ ಯುವಕನೊಬ್ಬ ಹೋರಾಡುತ್ತಿದ್ದಾನೆ.

ಭಯಂಕರವಾದ ಹುಲಿ – ಒಂಬತ್ತು ಅಡಿ ಉದ್ದದ ಬಲಶಾಲಿ ಹುಲಿ. ಯುವಕನ ಕೈಯಲ್ಲಿ ಒಂದು ಚಾಕು ಮಾತ್ರ.

ಆ ಕಾಳಗ ಸುಮಾರು ಇಪ್ಪತ್ತು ನಿಮಿಷಗಳವರೆಗೆ ನಡೆಯಿತು. ಒಮ್ಮೆ ಆ ಕ್ರೂರ ಮೃಗದ ಮೇಲುಗೈಯಾದರೆ, ಒಮ್ಮೆ ಆ ಯುವಕನದು ಮೇಲುಗೈ. ರಕ್ತದ ತುಂತುರುಗಳಿಂದ ನೆಲ ಕೆಂಪಾಯಿತು. ಕೊನೆಗೆ ಆ ಧೀರ ಯುವಕ ಜಯಶಾಲಿಯಾಗಿ ನೆತ್ತರಿನ ಮಾಲೆ ಧರಿಸಿ ಮುಗುಳ್ನಗೆ ಸೂಸುತ್ತಾ ಬಂದ.

ತೀವ್ರವಾಗಿ ಗಾಯಗೊಂಡ ಆ ಯುವಕನನ್ನು ಸತ್ತ ಹುಲಿಯ ಜೊತೆಗೆ ಕಲ್ಕತ್ತಾಕ್ಕೆ ಕರೆತಂದರು. “ಈತ ಉಳಿಯಬೇಕಾದರೆ ಈತನ ಬಲಗಾಲು ಕತ್ತರಿಸಬೇಕಾಗುತ್ತದೆ” ಎಂದು ಡಾಕ್ಟರ್ ಹೇಳಿದರು. ಆ ಧೀರ ಯುವಕ ಅದಕ್ಕೆ ಒಪ್ಪಲಿಲ್ಲ. “ನಾನು ಯಾವ ಅಂಗವನ್ನೂ ಕಳೆದುಕೊಳ್ಳದೆ ಉಳಿಯಬೇಕು” ಎಂದ. ಏಕೆಂದರೆ ಆತ ಇನ್ನೂ ಬ್ರಿಟಿಷ್ ಸಿಂಹದ ಜೊತೆಗೆ ಕಾದಾಡಬೇಕಾಗಿತ್ತು. ಚಮತ್ಕಾರವೆಂಬಂತೆ ಆ ಯುವಕ ಸುಧಾರಿಸಿಕೊಂಡು. ಸರ್ಜನ್ ಆಗಿದ್ದ ಸುರೇಶ್ ಸರ್ವಾಧಿಕಾರಿ ಈ ಘಟನೆ ಬಗ್ಗೆ ಬರೆಯುತ್ತಾ “ಕೇವಲ ಮನೋಬಲದಿಂದಲೇ ಆ ಯುವಕ ತನ್ನ ಮರಣಾಂತಿಕ ಗಾಯಗಳನ್ನು ವಾಸಿಮಾಡಿಕೊಂಡ” ಎಂದು ಒಪ್ಪಿದರು.

ಆ ಯುವಕ ‘ಬಾಘಾ ಜತೀನ್ಟ’ (‘ಬಾಘಾ’ ಅಂದರೆ ಹುಲಿ) ಎಂದು ಪ್ರಸಿದ್ಧನಾದನು.

ಶಿಕ್ಷಣ ನೌಕರಿ

ಜತೀನ್ ೧೮೭೯ರ ಡಿಸೆಂಬರ್ ತಿಂಗಳಲ್ಲಿ ಹುಟ್ಟಿದನು. ಆತನ ತಂದೆಯ ಹೆಸರು ಉಮೇಶಚಂದ್ರ. ತಾಯಿಯ ಹೆಸರು ಸರಸ್ವತಿದೇವಿ. ಜತೀನ್ ಐದು ವರ್ಷದ ಬಾಲಕನಾಗಿದ್ದಾಗಲೇ ತಂದೆ ತೀರಿಕೊಂಡರು. ಆದ್ದರಿಂದ ಜತೀನನ ಪಾಲನೆ ಪೋಷಣೆಯ ಭಾರ ತಾಯಿಯ ಮೇಲೆ ಬಿತ್ತು. ಆಕೆ ಆತನಿಗೆ ರಾಮಾಯಣ ಮಹಾಭಾರತದ ಕಥೆಗಳನ್ನು ಹೇಳಿದಳು. ವೀರರ ಸಾಹಸಗಳನನು ವಿವರಿಸಿದಳು. ಆ ಬಾಲಕ ಕಥೆಗಳನ್ನು ಕೇಳಿ ಮೈಮರೆಯುತ್ತಿದ್ದ. ಹೀಗೆ ಬಾಲ್ಯದಲ್ಲಿಯೇ ಜತೀನ್ ಒಳ್ಳೆಯ ಶಿಕ್ಷಣವನ್ನು ಪಡೆದ.

ತಂದೆ ಸತ್ತ ಕೆಲವು ವರ್ಷಗಳಲ್ಲಿಯೇ ತಾಯಿ ತೀರಿ ಕೊಂಡಳು. ಆದ್ದರಿಂದ ಸೋದರಮಾವನ ಪ್ರೀತಿಯ ಪೋಷಣೆಯಲ್ಲಿ ಜತೀನ್ ಅರಳಿದ. ವಿಧವೆಯಾದ ಅಕ್ಕ ವಿನೋದಬಾಲಾ ಸಹೋದರ ಜತೀನನ್ನು ಅಕ್ಕರೆಯಿಂದ ಕಾಣುತ್ತಿದ್ದಳು. ಆಕೆ ಆತನಿಗೆ ವ್ಯಾಯಾಮ, ಲಾಠಿ, ಕತ್ತಿ ಯುದ್ಧಗಳಲ್ಲಿ ಶಿಕ್ಷಣ ಕೊಡಿಸಿದಳು. ಚಿಕ್ಕಂದಿನಲ್ಲಿಯೇ ಜತೀನ್ ಈಜಾಡುವುದನ್ನು ಕಲಿತ.

ಸೋದರಮಾವನ ಹತ್ತಿರ ಒಂದು ಬಿಳಿ ಕುದುರೆ ಇತ್ತು. ಆ ಬಿಳಿ ಕುದುರೆ ಸವಾರಿ ಮಾಡುತ್ತ ಜತೀನ್ ಬಹಳ ದೂರ ಹೋಗುತ್ತಿದ್ದ. ಅದಲ್ಲದೆ ಮಾವನ ಹತ್ತಿರವಿದ್ದ ಬಂದೂಕನ್ನು ಅನೇಕ ಸಲ ಪ್ರಯೋಗ ಮಾಡಿದ. ಗುರಿ ಹೊಡೆಯವುದರಲ್ಲಿಯೂ ಆತನದು ಪಳಗಿದ ಕೈ.

ಜತೀನನ ಶಿಕ್ಷಣ ಕೋಯಾ ಗ್ರಾಮದಲ್ಲಿಯೇ ಪ್ರಾರಂಭವಾಯಿತು. ಆದರೆ ಆ ಹಳ್ಳಿಯಲ್ಲಿ ಇಂಗ್ಲೀಷ್ ಶಿಕ್ಷಣದ ಸೌಲಭ್ಯವಿರದ ಪ್ರಯುಕ್ತ ಜತೀನ್ ಕೃಷ್ಣನಗರದಲ್ಲಿದ್ದು ಅಭ್ಯಾಸ ಮುಂದುವರಿಸಿದ, ಆತನ ಬುದ್ಧಿ ಚುರುಕು. ಅಭ್ಯಾಸದಲ್ಲಿ ಆತ ಎಲ್ಲರಿಗಿಂತಲೂ ಮೇಲು. ಆದ್ದರಿಂದ ಎಲ್ಲ ಶಿಕ್ಷಕರಿಗೂ ಆತ ಅಚ್ಚುಮೆಚ್ಚಿನ ಶಿಷ್ಯ.

ಕೃಷ್ಣಸಾಗರದ ಕಾಲೇಜಿನಲ್ಲಿ ಒಂದು ವ್ಯಾಯಾಮ ಶಾಲೆಯಿತ್ತು. ಆದರೆ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಿಗೆ ಅಲ್ಲಿ ಪ್ರವೇಶವಿರಲಿಲ್ಲ. ಜತೀನ್ ಕಾಲೇಜಿನ ಪ್ರಿನ್ಸಿಪಾಲರನ್ನು ಕಂಡು ಹರಕುಮುರುಕು ಇಂಗ್ಲೀಷಿನಲ್ಲಿ “ನನಗೆ ನಿಮ್ಮ ವ್ಯಾಯಾಮ ಶಾಲೆ ಸೇರಲು ಆಸೆ” ಎಂದ. ಆ ಆಂಗ್ಲ ಪ್ರಿನ್ಸಿಪಾಲರು ಜತೀನನಲ್ಲಿ ಆತ್ಮವಿಶ್ವಾಸವಿತ್ತು. ಅವರು ಜತೀನಗೆ ವ್ಯಾಯಾಮದ ಶಿಕ್ಷಕರನ್ನು ಕಾಣಲು ತಿಳಿಸಿದರು. ವ್ಯಾಯಾಮ ಶಿಕ್ಷಕರಾದ ಸುರೇಂದ್ರನಾಥ ವಂದೋಪಾಧ್ಯಾಯ ಜತೀನನ ನಿಷ್ಠೆಯನ್ನು ಕಂಡು ತಮ್ಮ ವ್ಯಾಯಾಮ ಶಾಲೆಯಲ್ಲಿ ಸೇರಿಸಿಕೊಂಡರು.

ಬ್ರಿಟಿಷ್ ಸರ್ಕಾರದಲ್ಲಿ ನೌಕರಿ ಮಾಡುವುದೆಂದರೆ ಆಗ ಹೆಮ್ಮೆಯ ವಿಷಯವಾಗಿತ್ತು ಅನೇಕ ಹಿರಿಯರು ಜತೀನಗೆ ನೌಕರಿಗೆ ಸೇರಿಕೊಳ್ಳಲು ಹುರುದುಂಬಿಸಿದರು. ಜತೀನ್ ಶೀಘ್ರಲಿಪಿ, ಟೈಪ್ ಮಾಡುವುದು ಎರಡನ್ನು ಕಲಿತು ಬ್ರಿಟಿಷ್ ಕಂಪನಿಯೊಂದರಲ್ಲಿ ತಿಂಗಳಿಗೆ ಐವತ್ತು ರೂಪಾಯಿ ದೊರಕುವ ನೌಕರಿ ಪಡೆದುಕೊಂಡನು.

ಜತೀನ್ ಮೊದಲ ಬಾರಿಗೆ ಸಂಬಳ ತೆಗೆದುಕೊಂಡು ಮನೆಗೆ ಹೊರಟಿದ್ದ. ದಾರಿಯಲ್ಲಿ ಮಿತ್ರನೊಬ್ಬ ಸಿಕ್ಕ. ತನ್ನ ತಾಯಿ ಕಾಯಿಲೆ ಬಿದ್ದಿದ್ದಾಳೆಂದು, ಚಿಕಿತ್ಸೆಗಾಗಿ ಹಣವಿಲ್ಲವೆಂದು ತಿಳಿಸಿದ. ಜತೀನನಿಗೆ ಮನಸ್ಸು ಕರಗಿತು. ತಕ್ಷಣ ತನ್ನ ಕೈಯಲ್ಲಿದ್ದ ಸಂಬಳವನ್ನೆಲ್ಲಾ ಆ ಮಿತ್ರನಿಗೆ ಕೊಟ್ಟುಬಿಟ್ಟ.

ಮುಂದೆ ಜತೀನಗೆ ತಿಂಗಳೊಂದಕ್ಕೆ ೧೨೦ ರೂಪಾಯಿ ಸಂಬಳದ ಮೇಲೆ ಬಂಗಾಳ ಸರ್ಕಾರದಲ್ಲಿ ನೌಕರಿ ದೊರೆಯಿತು.

ಕೊಬ್ಬಿದವರಿಗೆ ಪಾಠ

ಒಂದು ದಿನ ಜತೀನ್ ಕಲ್ಕತ್ತಾದ ಗೋರಾ ಬಜಾರನಲ್ಲಿ ಒಂದು ವಿಚಿತ್ರ ದೃಶ್ಯ ಕಂಡ. ಒಬ್ಬ ಆಂಗ್ಲ ಮದೋನ್ಮತ್ತನಾಗಿ ತನ್ನ ದೊಣ್ಣೆ ಬೀಸುತ್ತ ದಾರಿಯಲ್ಲಿ ಬಂದ ಪ್ರತಿಯೊಬ್ಬನಿಗೂ, ಹಿರಿಯರು, ಕಿರಿಯರೆನ್ನದೆ, ಸ್ತ್ರೀ ಮಕ್ಕಳೆನ್ನದೆ ಏಟು ಹಾಕುತ್ತಿದ್ದ. ಹಾಗೆಯೇ ಏಟುಗಳನ್ನು  “ಇದು ನಲವತ್ತೈದು”, “ಇದು ನಲವತ್ತಾರು” ಎಂದು ಗಟ್ಟಿಯಾಗಿ ಎಣಿಸುತ್ತಿದ್ದ. ಜತೀನ್ ಒಂದು ಕ್ಷಣ ಆ ದೃಶ್ಯವನ್ನು ವೀಕ್ಷಿಸಿದ. ಆ ಮೇಲೆ ಆ ಮದೋನ್ಮತ ಆಂಗ್ಲನ ಹತ್ತಿರ ಹೋಗಿ ದೊಣ್ಣೆ ಕಸಿದು ಅವನನ್ನು ದೊಪ್ಪನೆ ಕೆಡವಿ “ಇದು ನಲವತ್ತೊಂಬತ್ತು” ಎಂದು ಸೇರಿಸಿದ.

ಗೋದೈ ನದಿಯ “ರಕ್ತಪಾತದ ಸೇತುವೆಯ ಘಟನೆ” ಜತೀನನ ಸ್ಮೃತಿಪಟಲದ ಮೇಲೆ ಅಚ್ಚಳಿಯದೆ ಮೂಡಿತ್ತು. ಗೋದೈ ನದಿ ಪೂರ್ವ ಬಂಗಾಳಿದಲ್ಲಿ ಹರಿಯುತ್ತಿರುವ ಪದ್ಮಾ ನದಿಯ ಒಂದು ಉಪನದಿ. ಆ ನದಿಯ ಮೇಲೆ ಬ್ರಿಟಿಷ್ ಸರ್ಕಾರ ಸೇತುವೆಯನ್ನು ನಿರ್ಮಿಸಲು ಭಾರತೀಯರನ್ನು ನೇಮಿಸಿತ್ತು. ಜನ ಎಷ್ಟೇ ಶ್ರಮಪಟ್ಟರೂ ನದಿಯ ಪ್ರವಾಹ ಅವರನ್ನು ಹಿಮ್ಮೆಟ್ಟಿಸಿ ಸೇತುವೆಯ ಕಾರ್ಯ ಮುಗಿಯದಂತೆ ಮಾಡುತ್ತಿತ್ತು.

ಸರ್ಕಾರ ಜನರಿಗೆ ಬೆದರಿಸಿತು : “ಈ ಸಲ ಹಿಮ್ಮೆಟ್ಟಿ ಬಂದರೆ ನಿಮ್ಮನ್ನು ಕೊಂದು ಹಾಕುತ್ತೇವೆ.”

ಮತ್ತೆ ಪ್ರವಾಹ ಬಂದಕೂಡಲೇ ಜನ ಹಿಮ್ಮಟ್ಟಿ ಬಂದರು. ಆಂಗ್ಲ ಅಧಿಕಾರಿಗಳು ಗುಂಡು ಹಾರಿಸಿ ಹತ್ತು ಹನ್ನೆರಡು ಜನರ ಕೊಲೆ ಮಾಡಿದರು.
ಜತೀನ್ ಈ ಮೂಕ ಜನರ ಬಗ್ಗೆ ಮರುಗಿದ. ಆಂಗ್ಲರ ಪೈಶಾಚಿಕ ಕೃತ್ಯಗಳನ್ನು ತನ್ನ ದೇಶಬಾಂಧವರ ಸಮ್ಮುಖದಲ್ಲಿಯೇ ಕೃತ್ಯಗಳನ್ನು ತನ್ನ ದೇಶಬಾಂಧವರ ಸಮ್ಮುಖದಲ್ಲಿಯೇ ತಡೆಯಲು ನಿರ್ಧರಿಸಿದ. ಆತ ಶೂರ, ಧೀರ, ಅಪ್ರತಿಮ ಸಾಹಸಿ. ಜತೀನಿನ ಸಹವಾಸದಲ್ಲಿ ಹೇಡಿಯೂ ಪರಾಕ್ರಮಿಯಾಗುತ್ತಿದ್ದ ಎಂದು ಜನ ಹೇಳುತ್ತಿದ್ದರು.

೧೯೦೫ನೆ ಇಸವಿ. ಇಂಗ್ಲೆಂಡಿನ ರಾಜಕುಮಾರ ಕಲ್ಕತ್ತಾದ ಬೀದಿಗಳಲ್ಲಿ ಹಾಯ್ದು ಹೋಗುವವನಿದ್ದ. ಸಾವಿರಾರು ಜನ ಅವನನ್ನು ನೋಡಲು ಸೇರಿದ್ದರು. ಸ್ತ್ರೀಯರು ಮಕ್ಕಳು ಕಾಲುದಾರಿಯ ಮೇಲೆ ನಿಂತಿದ್ದರು. ಬೀದಿಯ ಮೂಲೆಯೊಂದರಲ್ಲಿ ಹೆಣ್ಣುಮಕ್ಕಳಿಂದ ತುಂಬಿದ ಕೋದುಗಾಡಿಯೊಂದು ನಿಂತಿತ್ತು. ಒಮ್ಮಿಂದೊಮ್ಮೆ ಆರು ಜನ ಆಂಗ್ಲ ತರುಣರು ರಾಜಕುಮಾರನನ್ನು ಚೆನ್ನಾಗಿ ನೋಡುವ ಉದ್ದೇಶದಿಂದ ಕೋಚುಗಾಡಿಯನ್ನೇರಿ ಅದರ ಮೇಲ್ಛಾವಣಿಯ ಮೇಲೆ ಕುಳಿತರು. ಅವರಿಗೆ ಸ್ತ್ರೀಯರನ್ನು ಪೀಡಿಸುವ ಇಚ್ಛೆಯಾಯಿತು. ಆದ್ದರಿಂದ ಅವರು ತಮ್ಮ ಬೂಟುಗಾಲುಗಳನ್ನು ಸ್ತ್ರೀಯರ ಮುಖಕ್ಕೆ ಅಡ್ಡವಾಗಿ ಚಾಚಿದರು. ಅವರು ಸಿಳ್ಳುಹೊಡೆಯುತ್ತ ಬೂಟುಗಾಲನ್ನು ಅಲ್ಲಾಡಿಸುತ್ತ ಕುಳಿತ ದೃಶ್ಯವನ್ನು ಕಂಡು ಜತೀನ್ ಅವರ ಮೇಲೆ ಜಿಗಿದ. ಜನ ಯಾವುದನ್ನೂ ಅರಿಯುವುದಕ್ಕಿಂತ ಮುಂಚೆಯೆ ಆ ಆರು ಆಂಗ್ಲ ದಾಂಡಿಗರು ಬೀದಿಯಲ್ಲಿ ಉರುಳಿದರು. ಜತೀನನ್ನು ಬಡಿಯಲು ಅವರು ಪ್ರಯತ್ನಿಸಿ ವಿಫಲರಾದರು. ಮತ್ತೊಮ್ಮೆ ಏಟು ತಿಂದು ಜನಸಂದಣಿಯಲ್ಲಿ ಮಾಯವಾದರು.

ಈ ಘಟನೆ ನಡೆದು ಎರಡು ವರ್ಷಗಳ ತರುವಾಯ ಜತೀನ್ ರೈಲು ಪ್ರವಾಸ ಮಾಡುತ್ತ ರಾಣಾಘಾಟಿಗೆ ಹೊರಟಿದ್ದ. ಆಗಿನ ಕಾಲದಲ್ಲಿ ಮೂರನೇ ದರ್ಜೆಯ ಬೋಗಿಗಳಲ್ಲಿ ಒಂದಕ್ಕೊಂದರ ಮಧ್ಯೆ ಕಬ್ಬಿಣದ ಸರಳುಗಳು ಇರುತ್ತಿದ್ದವು. ಒಬ್ಬ ಮುದುಕ ತನ್ನ ಮಗಳೊಂದಿಗೆ ಜತೀನನ ಪಕ್ಕದಲ್ಲಿದ್ದ ಬೋಗಿಯಲ್ಲಿ ಪ್ರವಾಸ ಮಾಡುತ್ತಿದ್ದ. ಇಬ್ಬರು ಬಿಳಿಯರು ಈ ಬೋಗಿಯನ್ನೇರಿ ಬೇರೆ ಖಾಲಿ ಜಾಗವಿದ್ದರೂ ಈ ವೃದ್ಧನ ಮಗಳ ಹತ್ತಿರ ಕುಳಿತು ಅವಳನ್ನು ಕೆಣಕಹತ್ತಿದರು. ಆ ಬಡಪಾಯಿ ಬಿಳಿಯರಿಗೆ ಚೆನ್ನಾಗಿ ವರ್ತಿಸಲು ಪ್ರಾರ್ಥಿಸಿಕೊಂಡ ಉಳಿದ ಪ್ರಯಾಣಿಕರಿಗೂ ಅವರ ದುರ್ವರ್ತನೆ ತಡೆಯಲು ಬೇಡಿಕೊಂಡ. ಆದರೆ ಪ್ರಯಾಣಿಕರೆಲ್ಲರೂ ಮೂಕ ಪ್ರೇಕ್ಷಕರಾಗಿ ಕುಳಿತರು. ಬಿಳಿಯರು ಆಳುವ ಜನ ತಾನೆ, ಅವರದು ತಪ್ಪು ಎಂದು ಹೇಳುವ ಧೈರ್ಯ ಯಾರಿಗೆ?

ಜತೀನ್‌ಸ್ಥಳದಿಂದಲೇ ಗರ್ಜಿಸಿದ. ಬಿಳಿಯರಿಗೆ ಕುಳಿತಲ್ಲಿಗೆ ಧಾವಿಸಿ ಬಂದು ತನ್ನ ವಜ್ರಮುಷ್ಠಿಯಿಂದ ಅವರನ್ನು ಗುದ್ದಿದ ಆ ಫಟಿಂಗರು ನೆಲಕ್ಕುರುಳಿದರು. ಜತೀನ್ ಅವರೀರ್ವರ ಮೇಲೆ ಕಾಲಿಟ್ಟು ಆ ಹುಡುಗಿ ಹಾಗೂ ಅವಳ ವೃದ್ಧ ತಂದೆಯನ್ನು ಕ್ಷಮಾಪಣೆ ಕೇಳುವವರೆಗೆ ಅವರನ್ನು ಬಿಡಲಿಲ್ಲ.

ಮತ್ತೊಂದು ಸಲ ಜತೀನ್ ಡಾರ್ಜಿಲಿಂಗಿಗೆ ಪ್ರಯಾಣ ಹೊರಟಿದ್ದ. ಆತನ ರೈಲುಗಾಡಿಯಲ್ಲಿ ಬ್ರಿಟಿಷ್ ಸೈನ್ಯದ ನಾಲ್ಕು ಜನ ಅಧಿಕಾರಿಗಳಿದ್ದರು. ಈ ಅಧಿಕಾರಿಗಳು ಮದದಿಂದ ಪ್ಲಾಟ್ ಫಾರಂ ಮೇಲೆ ಶತಪಥ ಹಾಕುತ್ತಿದ್ದರು. ಜತೀನ್ ಮರಣೋನ್ಮೂಖನಾದ ಪ್ರಯಾಣಿಕನೊಬ್ಬನಿಗೆ ನೀರು ತರಲು ಅಲ್ಲಿ ಇಳಿದ. ಅವಸರದಲ್ಲಿ ಬರುವಾಗ ಸ್ವಲ್ಪ ನೀರು ಆಂಗ್ಲ ಅಧಿಕಾರಿಯೊಬ್ಬನ ಮೈಮೇಲೆ ಬಿತ್ತು. ಕೂಡಲೇ ಆ ಅಧಿಕಾರಿ ತನ್ನ ಲಾಠಿಯಿಂದ ಜತೀನನ ಬೆನ್ನಿಗೆ ಏಟು ಹಾಕಿದ. ಜತೀನ್ ಹಿಂದಿರುಗಿ ನೋಡಲಿಲ್ಲ. ಪ್ರಯಾಣಿಕನಿಗೆ ನೀರು ಕೊಟ್ಟ. ಅನಂತರ ಹಿಂದಕ್ಕೆ ಬಂದು ಆ ಅಧಿಕಾರಿಯನ್ನ ಹಿಡಿದ. ಆ ನಾಲ್ಕು ಜನ ಅಧಿಕಾರಿಗಳು ಕೂಡಿ ಜತೀನನ ಮೇಲೆ ದಾಳಿ ಮಾಡಿದರು. ಆದರೆ ಅವರೆಲ್ಲರೂ ನೆಲಕ್ಕೆ ಉರುಳಿದರು. ಒಬ್ಬನಂತೂ ನೋವಿನಿಂದ ಕಿರುಚಿದ. ಅಲ್ಲಿ ದೊಡ್ಡ ಗೊಂದಲವೆದ್ದಿತು. ಪೋಲೀಸರು ಜತೀನನ್ನು ಬಂಧಿಸಿದರು. ಜತೀನ್ ಸರ್ಕಾರಿ ಕೆಲಸದ ನಿಮಿತ್ತ ನಾನು ಡಾರ್ಜಿಲಿಂಗಿಗೆ ಹೊರಟಿದ್ದೇನೆ. ನನ್ನ ಬಂಧನದಿಂದ ಸರ್ಕಾರಿ ಕೆಲಸಕ್ಕೆ ಅಡಚಣೆ ಉಂಟಾದರೆ ಅದಕ್ಕೆ ನಿಮ್ಮದೇ ಹೊಣೆ ಎಂದ. ಕೂಡಲೇ ಪೋಲೀಸರು ಅವನು ಪ್ರಯಾಣ ಮುಂದುವರಿಸಲು ಬಿಟ್ಟರು.

ಆದರೆ ನ್ಯಾಯಾಲಯದಲ್ಲಿ ಈ ಘಟನೆಯ ಬಗ್ಗೆ ವಿಚಾರಣೆ ಪ್ರಾರಂಭವಾಯಿತು. ನ್ಯಾಯಾಧೀಶರು ಬ್ರಿಟಿಷರೇ. ಏಟು ತಿಂದ ಅಧಿಕಾರಿಗಳಿಗೆ “ನೀವು ನಾಲ್ಕು ಜನರು ಈ ಭಾರತೀಯನಿಂದ ಹೊಡೆಯಿಸಿಕೊಂಡಿರಾ?” ಎಂದು ಕೇಳಿದರು.

“ಹೌದು” ಎಂದು ನಾಲ್ವರೂ ಉತ್ತರ ಕೊಟ್ಟರು.

ನ್ಯಾಯಾಧೀಶರು ಕ್ಷಣಕಾಲ ಮೌನವಾಗಿ ಕುಳಿತು, “ಎಂದರೆ ನೀವು ನಾಲ್ಕು ಜನ ಸದೃಢ ಬ್ರಿಟಿಷ್ ಸೈನ್ಯಾಧಿಕಾರಿಗಳು ಒಬ್ಬ ದೇಶೀಯನ ಮುಂದೆ ಹೇಡಿಗಳಾದಿರಾ?” ಎಂದು ಕೇಳಿದರು.

“ಹೌದು ಎಂದು ಅವರು ತಡವರಿಸಿದರು.

ಆ ಆಂಗ್ಲ ನ್ಯಾಯಾಧೀಶರು ತಮ್ಮ ಹೆಮ್ಮೆಯನ್ನು ಬದಿಗಿರಿಸುತ್ತಾ, “ಈ ಸಮಯದಲ್ಲಿ ವಿಚಾರಣೆ ಮುಂದುವರಿಸಿದರೆ ನಮ್ಮ ಜನರ ಮೇಲೆ ಈ ಘಟನೆ ಎಂಥ ದುಷ್ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿಯದು. ನಾಲ್ಕು ಜನ ಬ್ರಿಟಿಷ್ ಸೈನ್ಯಾಧಿಕಾರಿಗಳು ಒಬ್ಬ ಭಾರತೀಯನ ಕೈಯಲ್ಲಿ ಏಟು ತಿಂದು ಸೋತರು ಎಂದರೆ ರಾಷ್ಟ್ರೀಯವಾದಿಗಳಿಗೆ ಎಂಥ ಸ್ಫೂರ್ತಿ ಸಿಕ್ಕೀತು” ಎಂದರು.

ವಿಚಾರಣೆ ಅಲ್ಲಿಗೇ ಮುಗಿಯಿತು.

ಹಿರಿಯ ಜೀವನಗಳ ಬೆಳಕು

ಜತೀನನ ಅದೃಷ್ಟ -ಚಿಕ್ಕ ವಯಸ್ಸಿನಿಂದಲೇ ಹಲವು ಹಿರಿಯರ ಭೇಟಿಯಾಯಿತು, ಅವರ ಮಾರ್ಗದರ್ಶನ ಸಿಕ್ಕಿತು. ಬಾಲಕನಾಗಿದ್ದಾಗಲೇ ಆತ ಭಗಿನಿ ನಿವೇದಿತಾ ಅವರ ಪರಿಚಯ ಪಡೆದು ಕಲ್ಕತ್ತಾದಲ್ಲಿ ಸಾಂಕ್ರಾಮಿಕ ರೋಗ ಪೀಡಿತರಾದ ಜನರಿಗೆ ಪರಿಹಾರ ನೀಡುವ ಕಾರ್ಯದಲ್ಲಿ ನೆರವಾದ. ನಿವೇದಿತಾ ಈ ಯುವಕನಿಗೆ ಸ್ವಾಮಿ ವಿವೇಕಾನಂದರ ಜೊತೆಗೆ ಭೇಟಿ ಮಾಡಿಸಿದಳು. ಕೊನೆಯಲ್ಲಿ ರಾಷ್ಟ್ರೀಯತೆಯ ಪ್ರವಾದಿಯಾದ ಶ್ರೀ ಅರವಿಂದರ ಮಾರ್ಗದರ್ಶನದಲ್ಲಿ ಜತೀನ್ ಕಾರ್ಯೋನ್ಮೂಖನಾದ.

೧೯೦೩ರಲ್ಲಿ ಜತೀನ್ ಶ್ರೀ ಅರವಿಂದರನ್ನು ಭೇಟಿಯಾದ. ಅವರು ಜತೀನನಲ್ಲಿ ಅಪ್ರತಿಮ ದೇಶಭಕ್ತಿಯನ್ನು, ಸಂಘಟನಾ ಸಾಮರ್ಥ್ಯವನ್ನು ಗುರುತಿಸಿದರು. ಈ ಭೇಟಿಯಿಂದ ಜತೀನನಲ್ಲಿ ಸುಪ್ತವಾಗಿದ್ದ ಚೇತನ ಪುಟಿದೆದ್ದಿತು.

ಜತೀನನ್ನು ಅರವಿಂದರ ಬಲಗೈ ಎಂದು ಜನ ಹೇಳುತ್ತಿದ್ದರು. ಅವರು ಪಾಂಡಿಚೇರಿಗೆ ಹೋಗುವುದಕ್ಕಿಂತ ಮುಂಚೆ ಜತೀನನ್ನೆ ಮುಖಂಡನನ್ನಾಗಿ ಮಾಡಿಕೊಳ್ಳಬೇಕೆಂದು ಕ್ರಾಂತಿಕಾರರಿಗೆ ಹೇಳಿ ಹೋದರು.

ಈ ಪ್ರಕಾರ ಶ್ರೀ ಅರವಿಂದನ ಆಶೀರ್ವಾದದಿಂದಲೇ ಜತೀನ್ ಕ್ರಾಂತಿಕಾರಿ ಜೀವನ ಕೈಗೊಂಡಿದ್ದು.

ಕ್ರಾಂತಿಕೇಸರಿಗಳ ನಡುವೆ

ಬ್ರಿಟಿಷ್ ಸರ್ಕಾರ ಬಂಗಾಳ ಪ್ರಾಂತವನ್ನು ಎರಡು ಭಾಗ ಮಾಡಿತು. ದೇಶದಲ್ಲೆಲ್ಲ ಅದಕ್ಕೆ ವಿರೋಧ ಎದ್ದಿತು. ಕ್ರಾಂತಿಕಾರರು ಬಂಗಾಳ ವಿಭಜನೆಯಿಂದುಂಟಾದ ಸ್ಥಿತಿಯ ಲಾಭವನ್ನು ಪಡೆದು ವಿದೇಶಿ ಸಾಮ್ರಾಜ್ಯಕ್ಕೆ ತಿರಸ್ಕಾರ ಹುಟ್ಟಿಸಿದರು. ಬ್ರಿಟಿಷ್ ಸರ್ಕಾರ ತುಂಬ ಕ್ರೂರವಾಗಿ ನಡೆದುಕೊಂಡಿತು. ಇದರಿಂದ ಕ್ರಾಂತಿಕಾರರಿಗೆ ಪ್ರಚೋದನೆ ಸಿಕ್ಕಿತು. ಬ್ರಿಟಿಷ್ ಸರ್ಕಾರಕ್ಕೆ ಬುದ್ದಿ ಕಲಿಸಬೇಕಾದರೆ ಹಿಂಸೆಯಿಂದಲೇ ಸಾಧ್ಯ ಎನಿಸಿತು ಕ್ರಾಂತಿಕಾರಿಗಳಿಗೆ.

ಖುದಿರಾಯ ಮತ್ತು ಪುಫುಲ್ಲ ಚಾಕಿ ಎಂಬ ಕ್ರಾಂತಿ ವೀರರು ಕಿಂಗ್ಸ್ ಫರ್ಡ ಎಂಬ ನ್ಯಾಯಾಧೀಶನನ್ನು ಕೊಲ್ಲಲು ತೀರ್ಮಾನಿಸಿದರು. ಆತ ಕ್ರಾಂತಿಕಾರರಿಗೆ ಕಟುಶಿಕ್ಷೆ ವಿಧಿಸುವ ನ್ಯಾಯಾಧೀಶನೆಂದು ಪ್ರಸಿದ್ಧನಾಗಿದ್ದ. ಅವನ ಮೇಲೆ ಬಾಂಬೆಸೆದರು. ಆದರೆ ಅವರ ತಪ್ಪುಗ್ರಹಿಕೆಯಿಂದ ಆ ಬಾಂಬ್ ಸ್ಫೋಟನೆಯಿಂದ ಬೇರೆಯವರು ಸತ್ತರು.

ಬ್ರಿಟಿಷ್ ಸರ್ಕಾರ ಇದರಿಂದ ಬೆಂಕಿಯಾಯಿತು. ಕ್ರಾಂತಿಕಾರಿ ತಂಡಗಳ ನಾಯಕರನ್ನು ಶಿಕ್ಷೆಗೊಳಪಡಿಸಲಿಕ್ಕೆ ಬಹುಪ್ರಯಾಸಪಟ್ಟಿತು. ಅರವಿಂದರ ಬಾಂಬ್ ಕಾರ್ಖಾನೆ ಶೋಧಿಸಲ್ಪಟ್ಟಿತು. ವಂದೇ ಮಾತರಂ ಎಂಬ ಪತ್ರಿಕೆಯಲ್ಲಿ ಪ್ರಚೋದನಾತ್ಮಕ ಲೇಖನಗಳನ್ನು ಬರೆದುದಕ್ಕೆ ಸರ್ಕಾರ ಅರವಿಂದರನ್ನು ಬಂಧಿಸಿ ವಿಚಾರಣೆ ಪ್ರಾರಂಭಿಸಿತು.

ಆಗ ಅಶು ಬಿಸ್ವಾಸ್ ಎಂಬುವರು ಸರ್ಕಾರಿ ವಕೀಲರು. ಅವರು ಕ್ರಾಂತಿಕಾರರಿಗೆ ಸಾಧ್ಯವಾದಷ್ಟು ಮಟ್ಟಿಗೆ ಕಠಿಣ ಶಿಕ್ಷೆ ಕೊಡಿಸಲು ಉತ್ಸುಕರಾಗಿದ್ದರು. ಜತೀನನ ಗುಪ್ತಸಂಸ್ಥೆ ಅವರಿಗೆ ಎಚ್ಚರಿಕೆ ಕೊಟ್ಟಿತು. ಅಶು ಬಿಸ್ವಾಸ್ ಹೆದರಲಿಲ್ಲ.

ಅಶು ಬಿಸ್ವಾಸರಿಗೆ ಪಾಠ ಕಲಿಸಲು ಜತೀನ್ ನಿರ್ಧರಿಸಿದ. ಆತ ಈ ವಿಚಾರ ವ್ಯಕ್ತಪಡಿಸಿದ ಕೂಡಲೇ ಚಾರು ಎಂಬ ಹೊಸ ಸದಸ್ಯ ಆ ಕಾರ್ಯವನ್ನು ತನಗೆ ವಹಿಸಿಕೊಡಬೇಕೆಂದು ಜತೀನನ್ನು ಒತ್ತಾಯಪಡಿಸಿದ ಚಾರುವಿನ ಬಲಗೈಗೆ ಪಾರ್ಶ್ವವಾಯು ಬಡಿದಿತ್ತು. ಆದ ಕಾರಣ ಆತನ ಬಲಗೈಗೆ ಗುಂಡುತುಂಬಿದ ರಿವಾಲ್ವರ್ ಕಟ್ಟಲಾಯಿತು. ಚಾರು ನ್ಯಾಯಾಲಯಕ್ಕೆ ತೆರಳಿದ. ವಿಚಾರಣೆ ಪ್ರಾರಂಭವಾಗಿತ್ತು. ನ್ಯಾಯಾಲಯದಲ್ಲಿ ಕಿಕ್ಕಿರಿದ ಜನಸಂದಣಿ, ಚಾರು ತನ್ನ ಪಾರ್ಶ್ವವಾಯು ಬಡಿದ ಬಲಗೈಯನ್ನು, ಎಡಗೈಯಿಂದ ಎತ್ತಿಕೊಂಡು ಅಶು ಬಿಸ್ವಾಸರನ್ನು ಗುಂಡಿಕ್ಕಿ ಕೊಂದ. ನ್ಯಾಯಾಲಯದಲ್ಲೆಲ್ಲ ಅಲ್ಲೋಲ ಕಲ್ಲೋಲ. ಆ ಗೊಂದಲದ ವಾತಾವರಣದಲ್ಲಿಯೂ ನಿಶ್ಚಲವಾಗಿ ಮುಗುಳ್ನಗೆ ಸೂಸುತ್ತಾ ನಿಂತವನೆಂದರೆ ಚಾರು ಒಬ್ಬನೆ. “ಯಾವ ವಿಚಾರಣೆಯೂ ಬೇಡ. ಅದೆಲ್ಲಾ ಬರೀ ನಟನೆ. ನೀವು ನನ್ನನ್ನು ಗಲ್ಲಿಗೇರಿಸಲು ಸ್ವಾಗತವಿದೆ” ಎಂದು ಹೇಳಿದ. ಅನಂತರ ಕ್ರಾಂತಿಕಾರಿಗಳ ಕಡು ವಿರೋಧಿಯಾದ ಹಿರಿಯ ಪೋಲೀಸ್ ಅಧಿಕಾರಿ ಶಮ್ ಸುಲ್ ಆಲಂ ಎಂಬಾತನೂ ಕ್ರಾಂತಿಕಾರರಿಗೆ ಆಹುತಿಯಾದ.

ಇದರಿಂದ ಸರ್ಕಾರಿ ವಲಯಗಳಲ್ಲಿ ಹಿಂದೆಂದೂ ಕಾಣದಂತಹ ಗೊಂದಲವೆದ್ದಿತು. ಜತೀನ್ ಹಾಗೂ ಆತನ ಅನುಯಾಯಿಯಾಗಿದ್ದ ಮಾನವೇಂದ್ರನಾಥ ರಾಯ್ ಶಿಬೂರಿನಲ್ಲಿದ್ದ ಹತ್ತನೆ ನಂಬರಿನ ಜಾಟ್ ರೆಜಿಮೆಂಟಿನ ಸೈನಿಕರಲ್ಲಿ ಅತೃಪ್ತಿಯನ್ನು ಹುಟ್ಟಿಸಿದ್ದರು. ಬ್ರಿಟಷ್ ಸರ್ಕಾರ ಪೋಲೀಸರ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ಜತೀನನ ಕೆಲವು ಅನುಯಾಯಿಗಳು ಬಂಧಿಸಲ್ಪಟ್ಟವರಲ್ಲಿ  ಒಬ್ಬ ಸರ್ಕಾರಿ ಸಾಕ್ಷಿದಾರನಾದ. ಪೋಲೀಸರು ಯುಗಾಂತರ ಎಂಬ ಪತ್ರಿಕೆಯ ಸುಳ್ಳು ಪ್ರತಿಯೊಂದನ್ನು ತಯಾರಿಸಿ ಅದರಲ್ಲಿ ಕ್ರಾಂತಿಕಾರಿ ಮುಖಂಡನ ಸುಳ್ಳು ಹೇಳಿಕೆ ಪ್ರಕಟಿಸಿದ್ದರು. ಜತೀನ್ ಕ್ರಾಂತಿಕಾರಿಗಳ ಮುಖಂಡನೆಂದು ಸರ್ಕಾರಿ ಸಾಕ್ಷಿದಾರ ಹೇಳಿದ. ಅದುವರೆಗೂ ನಡೆದ ಕೊಲೆ ಸುಲಿಗೆಗಳಿಗೆ, ದರೋಡೆಗಳಿಗೆ ಅಪ್ರತ್ಯಕ್ಷವಾಗಿ ಜತೀನನೇ ಕಾರಣನೆಂದು ಸರ್ಕಾರ ಜತೀನನ್ನು ಬಂಧಿಸಿತು.

ಹದಿನೈದು ತಿಂಗಳ ಕಾಲ ಜತೀನನ್ನು ಪೋಲೀಸರು ಯಮಯಾತನೆಗೆ ಗುರಿಪಡಿಸಿದರು. ಆದರೆ ಆತನ ಧೀರ ನಿಶ್ಚಲ ವ್ಯಕ್ತಿತ್ವದ ಮುಂದೆ ಅವರ ಆಟ ನಡೆಯಲಿಲ್ಲ. ಕೊನೆಗೆ ಪೋಲಿಸರು ಗತ್ತು ಬದಲಾಯಿಸಿದರು. ಕೆಲವು ದಿನ ಅವರು ಜತೀನನನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡರು. ಒಂದು ದಿನ ಒಬ್ಬ ಪೊಲೀಸ್ ಅಧಿಕಾರಿ ಬಹಳ ಸ್ನೇಹಿತನಂತೆ ನಟಿಸಿದ. “ಸರ್ಕಾರಕ್ಕೆ ಸಹಾಯ ಮಾಡು. ನಿನಗೆ ಬೇಕಾದದ್ದು ಸಿಕ್ಕುತ್ತದೆ. ಕೈತುಂಬ ಹಣ ಸಿಕ್ಕುತ್ತದೆ. ಸುಖವಾಗಿರಬಹುದು” ಎಂದ.

“ಬಾಯಿ ಮುಚ್ಚು!” ಎಂದು ಅಬ್ಬರಿಸುತ್ತ ಜತೀನ್ ಮೇಜನ್ನು ಗುದ್ದಿದ.

ಪೋಲೀಸರು ಹತಾಶರಾದರು. ಜತೀನನ ಬಗ್ಗೆ ಮಾಡಲಾದ ಆಪಾದನೆಗಳ ಬಗ್ಗೆ ಸಾಕ್ಷ್ಯವೇ ಇರಲಿಲ್ಲ. ಪೊಲೀಸರು ಆತನನ್ನು ೧೯೧೧ ರ ಫೆಬ್ರವರಿ ಹನ್ನೊಂದರಂದು ಬಿಡುಗಡೆ ಮಾಡಿದರು.

ಬ್ರಿಟಿಷ್ ಸರ್ಕಾರ ಜತೀನನ ಚಟುವಟಿಕೆಗಳನ್ನು ಗಮನಿಸುತ್ತಲೇ ಇತ್ತು. ಕೊನೆಗೆ ಆತನನ್ನು ಸರ್ಕಾರಿ ನೌಕರಿಯಿಂದ ವಜಾಮಾಡಿತು.

ವಿದೇಶಗಳಿಂದ ನೆರವು

ಜತೀನ್ ಕ್ರಾಂತಿಕಾರಕ ಚಟುವಟಿಕೆಗಳನ್ನು ಮುಂದುವರಿಸಲು ಗುಪ್ತ ಸಂಸ್ಥೆಯೊಂದನ್ನು ಸ್ಥಾಪಿಸಿದನು. ಕ್ರಾಂತಿಕಾರರಿಗೂ ಜೀವನಕ್ಕೆ ಹಣ ಬೇಕಲ್ಲವೇ! ಅದಕ್ಕಾಗಿ ಸಾರ್ವಜನಿಕ ಕಟ್ಟಡಗಳ ನಿರ್ಮಾಣ ಕೆಲಸ ಕೈಗೊಂಡ ಹೊರನೋಟಕ್ಕೆ ಆತ ಪ್ರಪಂಚದ ವ್ಯವಹಾರಗಳಿಗೆ ಸಿಕ್ಕ ಮನುಷ್ಯ; ಒಳಗೆ ಕ್ರಾಂತಿಯ ಜ್ವಾಲೆ ಪ್ರಜ್ವಲಿಸುತ್ತಿತ್ತು. ಜತೀನನ ಸಂಸ್ಥೆಯಲ್ಲಿ ಅನೇಕ ಜನ ಸ್ವಾತಂತ್ರ್ಯ ಯೋಧರು ತರಬೇತು ಪಡೆದರು, ವ್ಯಾಯಾಮದಿಂದ ಅವರೆಲ್ಲರ ಶರೀರ ಪರಿಪುಷ್ಪವಾಗಿತ್ತು. ಗೀತೆಯನ್ನು ಅಭ್ಯಾಸಮಾಡಿ ಅವರ ಮನಸ್ಸು ಪರಿಪಕ್ವವಾಗಿತ್ತು.

ಸ್ವಾತಂತ್ರ್ಯ ಸಮರಕ್ಕಾಗಿ ಜತೀನ್ ಎರಡು ಮಾರ್ಗಗಳನ್ನು ಅನುಸರಿಸಿದ. ಭಾರತೀಯರಲ್ಲಿ ಬಲವಾದ ರಾಷ್ಟ್ರೀಯತೆಯನ್ನು ಬೆಳೆಸಿ ವಿದೇಶಿ ಸಾಮ್ರಾಜ್ಯದ ವಿರುದ್ಧ ಸೈನಿಕ ಕ್ರಾಂತಿಯನ್ನೆಬ್ಬಿಸುವುದು ಒಂದು; ಭಾರತಕ್ಕೆ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದ ಬ್ರಿಟಿಷ್ ವಿರೋಧಿ ದೇಶಗಳ ನೆರವನ್ನು ಪಡೆದು ಕ್ರಾಂತಿಯನ್ನು ಬಲಪಡಿಸುವುದು, ಮತ್ತೊಂದು.

ಜತೀನನನ್ನು ಪೊಲೀಸರು ಬಂಧಿಸಿದರು.

೧೮೫೭ರಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಕಾಲದಿಂದಲೂ ಕ್ರಾಂತಿಕಾರರಿಗೆ ಒಂದು ಕನಸಿತ್ತು. ಹೊರಗಿನ ದೇಶಗಳ ಸಹಾಯದಿಂದ ದೇಶವನ್ನು ಸ್ವತಂತ್ರಗೊಳಿಸುತ್ತೇವೆ ಎಂದು. ಅವರು ರಷ್ಯದ ಸಹಾಯ ಪಡೆಯಬಹುದು ಎಂದು ಬ್ರಿಟಿಷ್ ಸರ್ಕಾರಕ್ಕೂ ಹೆದರಿಕೆ. ಆದರೆ ಅದು ಸಾಧ್ಯವಾಗಲಿಲ್ಲ. ಮುಂದೆ ರಷ್ಯ-ಜಪಾನುಗಳ ಯುದ್ಧದಲ್ಲಿ ರಷ್ಯಕ್ಕೆ ಭಾರಿ ಸೋಲು ಉಂಟಾಯಿತು; ಇದರಿಂದ ಕ್ರಾಂತಿಕಾರರ ಕನಸು ನನಸಾಗಲಿಲ್ಲ. ಆದರೂ ಕ್ರಾಂತಿಕಾರರ ಕನಸು ನನಸಾಗಲಿಲ್ಲ. ಆದರೂ ಕ್ರಾಂತಿಕಾರರೂ ವಿದೇಶಗಳ ಬೆಂಬಲ ದೊರಕಿಸುವುದರ ಸಲುವಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಈ ವಿಷಯದಲ್ಲಿ ರಾಜಾ ಮಹೇಂದ್ರಪ್ರತಾಪ ಹಾಗೂ ರಾಸ್ ಬಿಹಾರಿ ಬೋಸ್ ಪ್ರಮುಖ ವ್ಯಕ್ತಿಗಳಾಗಿದ್ದರು. ರಾಜಾ ಮಹೇಂದ್ರ ಪ್ರತಾಪ ಪ್ರಸಿದ್ಧ ಕ್ರಾಂತಿಕಾರರು. ಅವರು ರಷ್ಯದಲ್ಲಿದ್ದುಕೊಂಡು, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಷ್ಯನ್ನರ ಸಹಾಯ ದೊರಕಿಸುವ ಪ್ರಯತ್ನ ಮಾಡುತ್ತಿದ್ದರು. ರಾಸ್ ಬಿಹಾರಿ ಬೋಸ್ ಬಂಗಾಳ ಮತ್ತು ಪಂಜಾಬ್ ಗಳ ಕ್ರಾಂತಿಕಾರಿಗಳ ಮುಖಂಡರಾಗಿದ್ದರು. ಭಾರತೀಯರು ಶಸ್ತಾಸ್ತ್ರಗಳನ್ನು ಉಪಯೋಗಿಸಿಯೂ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು ಎಂದು ಇವರ ಅಭಿಪ್ರಾಯ.

 

"ಬಾಯಿಮುಚ್ಚು!" ಎಂದು ಅಬ್ಬರಿಸುತ್ತ ಜತೀನ್‌ಮೇಜನ್ನು ಗುದ್ದಿದ.

ಲಾರ್ಡ್ ಹಾರ್ಡಿಂಜ್ ಭಾರತದ ವೈಸರಾಯ್ ಆದರು. ೧೯೧೨ನೆಯ ಡಿಸೆಂಬರ್ ೨೩ ರಂದು ದೆಹಲಿಯಲ್ಲಿ ಆನೆಯ ಮೇಲೆ ಭಾರಿ ಮೆರವಣಿಗೆಯಲ್ಲಿ ಹೊರಟರು. ಅವರ ಮೇಲೆ ಬಾಂಬ್ ಬಿತ್ತು.

ಆ ಬಾಂಬ್ ದಾಳಿಗೆ ರಾಸ್ ಬಿಹಾರಿ ಬೋಸರೆ ಕಾರಣರೆಂದು ಬ್ರಿಟಿಷ್ ಸರ್ಕಾರ ತೀರ್ಮಾನಿಸಿತು. ಸರ್ಕಾರ ಅವರನ್ನು ಹಿಡಿಯಲು ಪ್ರಯತ್ನಿಸಿತು. ಬೋಸರು ತಪ್ಪಿಸಿಕೊಂಡು ಜಪಾನಿಗೆ ಹೊರಟು ಹೋದರು. ಜಪಾನಿನ ಸಹಾಯದಿಂದ ರಾಷ್ಟ್ರವನ್ನು ಸ್ವತಂತ್ರಗೊಳಿಸುವ ಪ್ರಯತ್ನ ಮುಂದುವರಿಸಿದರು. ಇದರಂತೆ ಜತೀನ್ ವಿದೇಶಗಳ ಸಹಾಯ ಪಡೆಯಲು, ಹಾಗೂ ವಿದೇಶಗಳಲ್ಲಿ ನೆಲೆಸಿದ್ದ ಭಾರತೀಯರ ಜೊತೆಗೆ ಸಂಪರ್ಕವಿಟ್ಟುಕೊಳ್ಳಲು ಹವಣಿಸಿದನು. ಆದರೆ ವಿದೇಶಿ ಸರ್ಕಾರಗಳ ಜೊತೆಗೆ ಸಂಪರ್ಕ ಇಟ್ಟುಕೊಳ್ಳಲು ಹಣ ಇರಲಿಲ್ಲ. ಇಂದುಭೂಷಣ ಮಿತ್ರ ಎಂಬ ತರುಣ ಜತೀನನ ಅನುಯಾಯಿಯಾಗಿದ್ದ. ಆತ ಒಬ್ಬ ಜಮೀನುದಾರನ ಹತ್ತಿರ ಗುಮಾಸ್ತನಾಗಿ ಆಸ್ತಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ. ಒಂದು ದಿನ ಸಮಯ ಸಾಧಿಸಿ ಆತ ಆಸ್ತಿಗೆ ಸಂಬಂಧಪಟ್ಟ ಒಂದು ಲಕ್ಷ ಹನ್ನೊಂದು ಸಾವಿರ ರೂಪಾಯಿಗಳನ್ನು ಜತೀನ್ ಗೆ ಕೊಟ್ಟು ಪರಾರಿಯಾದ. ಕೂಡಲೇ ಆತನನ್ನು ಬಂಧಿಸಲಾಯಿತು. ಆತನನ್ನು ಅನೇಕ ಯಾತನೆಗಳಿಗೆ ಗುರಿಪಡಿಸಿದರು. ಆದರೆ ಆತ ಗುಟ್ಟು ಬಿಟ್ಟುಕೊಡಲಿಲ್ಲ. ಈ ಹಣದಿಂದಲೇ ಜತೀನನು ಅನೇಕ ತರುಣರನ್ನು ಯುರೋಪ್ ಮತ್ತು ಅಮೇರಿಕಗಳಿಗೆ ಕಳುಹಿಸಿದ. ಅಲ್ಲಿಂದ ಭಾರತಕ್ಕೆ ಸಹಾಯ ಪಡೆಯಬೇಕು ಎಂದು ಅವನ ಉದ್ದೇಶ.

ಅದೇ ಸಮಯದಲ್ಲಿ ಜತೀನ್ ಹಾಗೂ ಮಾನವೇಂದ್ರನಾಥ ರಾಯ್ ಕೂಡಿ ಕಲ್ಕತ್ತಾದಲ್ಲಿ ಜರ್ಮನ್ ಕಾನ್ಸಲ್ ಜನರಲ್‌ರನ್ನು ಭೇಟಿಯಾದರು. ಜರ್ಮನ್ ಸರ್ಕಾರ ಸಾಧ್ಯವಾದ ಸಹಾಯ ಮಾಡಲು ಒಪ್ಪಿತು.

ಅಮೇರಿಕದಲ್ಲಿದ್ದು ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಸಂಘಟಿಸುವ ಪ್ರಯತ್ನ ಮಾಡುತ್ತಿದ್ದವರಲ್ಲಿ ಒಬ್ಬರು ಲಾಲಾ ಹರದಯಾಳ್, ಅವರು ಇಂಗ್ಲೆಂಡಿಗೆ ಹೋಗಿದ್ದರು. ಅಲ್ಲಿನ ಶಿಕ್ಷಣ ನಿಲ್ಲಿಸಿ ಮರಳಿ ಭಾರತಕ್ಕೆ ಬಂದರು. ಭಾರತೀಯರು ಇಂಗ್ಲೀಷರ ಆಡಳಿತವನ್ನು ಒಪ್ಪಿಕೊಂಡು ಗುಲಾಮರಾಗಿರುವುದು ಸರ್ಕಾರಕ್ಕೆ ಬೇಕು, ಇದಕ್ಕೆ ಅನುಕೂಲವಾದ ಶಿಕ್ಷಣವನ್ನೇ ಭಾರತೀಯರಿಗೆ ಕೊಡುತ್ತದೆ ಎಂದು ಜನರಿಗೆ ತೋರಿಸಿಕೊಟ್ಟರು. ಸ್ವಾತಂತ್ರ್ಯಪ್ರೇಮ, ದೇಶಾಭಿಮಾನ ಇದನ್ನು ಬೆಳೆಸಲು ತಾವೇ ಒಂದು ಶಾಲೆಯನ್ನು ಸ್ಥಾಪಿಸಿದರು. ೧೯೧೨ರಲ್ಲಿ ಅವರು ಅಮೇರಿಕಕ್ಕೆ ಹೋಗಿ ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ಕಳುಹಿಸಲು ಪ್ರಯತ್ನಿಸಿದರು.

ಇದಾದ ಎರಡು ತಿಂಗಳಲ್ಲಿಯೇ ಮಾನವೇಂದ್ರನಾಥ ರಾಯ್ “ಬರ್ಡ್ ಆಂಡ್ ಕಂಪೆನಿ” ಎಂಬ ಸಂಸ್ಥೆಯನ್ನು ಲೂಟಿಮಾಡಿ ಅಪಾರ ಸಂಪತ್ತಿನೊಂದಿಗೆ ಪರಾರಿಯಾದನು. ಆ ಹಣ ಕ್ರಾಂತಿಯ ಸಂಘಟನೆಗೆ ಉಪಯೋಗವಾಯಿತು. ವಿದೇಶಗಳಲ್ಲಿದ್ದ ಕ್ರಾಂತಿಕಾರಿಗಳಿಂದ ಸಹಾಯವನ್ನು ಪಡೆಯಲು ಜತೀನ್ ಹ್ಯಾರಿ ಆಂಡ್ ಕಂಪೆನಿ ಎಂಬ ಆಮದು ರಫ್ತಿನ ಸಂಸ್ಥೆಯೊಂದನ್ನು ಸ್ಥಾಪಿಸಿದನು. ವಿದೇಶಗಳಿಂದ ಹಣ, ಗುಪ್ತಮಾಹಿತಿ ಹಾಗೂ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವುದೇ ಈ ಸಂಸ್ಥೆಯ ಉದ್ದೇಶವಾಗಿತ್ತು. ಆದರೆ ಜತೀನ್ ಕೇವಲ ವಿದೇಶಿ ಸಹಾಯವನ್ನು ಅವಲಂಬಿಸಿರಲಿಲ್ಲ. ಅನುಕೂಲವಾದ ಕಡೆಗಳಲ್ಲೆಲ್ಲಾ ಬಂದೂಕುಗಳನ್ನು ಖರೀದಿ ಮಾಡುತ್ತಿದ್ದ. ಕ್ರಾಂತಿಕಾರರೆಲ್ಲಾ ಸುಂದರಬನದಲ್ಲಿ ಗುರಿ ಹೊಡೆಯುವ ಶಿಕ್ಷಣ ಪಡೆದರು. ಸುಂಕದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶ್ರೀಸ್ ಮಿತ್ರ ಎಂಬುವನು ಜತೀನನ ಅನುಯಾಯಿಯಾಗಿದ್ದನು. ಆತ ಸರ್ಕಾರ ತರಿಸಿಕೊಂಡಿದ್ದ ಆಯುಧಗಳನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಕಣ್ಮರೆಯಾದ. ಆ ಆಯುಧಗಳೆಲ್ಲ ಕ್ರಾಂತಿಕಾರರಿಗೆ ದೊರಕಿದವು. ಈ ಪ್ರಕಾರ ಕ್ರಾಂತಿಯ ಸಿದ್ಧತೆ ನಡೆಯಿತು.

೧೯೧೫ರ ಫೆಬ್ರವರಿ ೨೧ ರಂದು ಪಂಜಾಬಿನಲ್ಲಿ ಕ್ರಾಂತಿಯ ಉದ್ಘಾಟನೆಯಾಗಬೇಕೆಂದು ತರುಣ ಕ್ರಾಂತಿಕಾರರು ನಿಶ್ಚಯಿಸಿದರು. ಭಾರತದಲ್ಲಿದ್ದ ಎಲ್ಲ ಗುಪ್ತ ಸಂಸ್ಥೆಗಳಿಗೆ ಸಂದೇಶ ಹೋಯಿತು. ಆದರೆ ಯಾರೋ ಒಬ್ಬರು ಈ ವಿಷಯವನ್ನು ಪೋಲೀಸರಿಗೆ ತಿಳಿಸಿಬಿಟ್ಟರು. ಈ ಪಿತೂರಿಯಲ್ಲಿದ್ದವರನ್ನೆಲ್ಲಾ ಪೋಲೀಸರು ಬಂಧಿಸಿದರು. ಲಾಹೋರ್ ಒಳಸಂಚಿನ ವಿಚಾರಣೆಯಲ್ಲಿ ಇಪ್ಪತ್ತನಾಲ್ಕು ಜನರಿಗೆ ಮರಣ ದಂಡನೆಯಾಯಿತು. ಇಪ್ಪತ್ತಾರು ಜನರನ್ನು ಅಂಡಮಾನಿಗೆ ಗಡೀಪಾರು ಮಾಡಿದರು.

ಗಲ್ಲಿಗೇರಿದವರಲ್ಲಿ ಕರ್ತಾರ ಸಿಂಹ ಎಂಬಾತ ಒಬ್ಬ.

ಕ್ಷಮೆ ಕೇಳಿಕೋ, ಪ್ರಾಣ ಉಳಿಯುತ್ತದೆ ಎಂದು ಸರ್ಕಾರದ ಕಡೆಯವರು ಅವನಿಗೆ ಆಸೆ ತೋರಿಸಿದರು.

ಅವನೆಂದ : “ನನಗೆ ಒಂದು ಪ್ರಾಣವಲ್ಲ, ಹತ್ತು ಪ್ರಾಣಗಳಿದ್ದಿದ್ದರೂ ಅಷ್ಟನ್ನೂ ಸಂತೋಷದಿಂದ ನನ್ನ ತಾಯ್ನಾಡಿಗೆ ಒಪ್ಪಿಸುತ್ತಿದ್ದೆ.”

ಈ ಪ್ರಕಾರ ಪಂಜಾಬಿನಲ್ಲಿಯೇ ಕ್ರಾಂತಿ ಕುಸಿದು ಬಿದ್ದುದರಿಂದ ಬಂಗಾಳ ಹಾಗೂ ಇನ್ನಿತರ ಕಡೆಯ ಕ್ರಾಂತಿಕಾರರೂ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸಿಕೊಂಡರು.

ಅದೇ ವೇಳೆಗೆ “ಬರ್ಡ್ ಆಂಡ್ ಕಂಪೆನಿ”ಯ ಮೇಲೆ ಆಕ್ರಮಣ ನಡೆಸಿದ ಆಪಾದನೆ ಮೇಲೆ ಮಾನವೇಂದ್ರನಾಥ್ ಬಂಧಿಸಲ್ಪಟ್ಟ. ಜತೀನ್ ಅವನನ್ನು ನ್ಯಾಯಲಯಕ್ಕೆ ಒಯ್ಯುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ ಅವನನ್ನು ಬಿಡುಗಡೆ ಮಾಡಬೇಕೆಂದು ಪ್ರಯತ್ನಿಸಿದ. ಕಾರ್ಯ ಕೈಗೊಡುವುದಿತ್ತು. ಆದರೆ ವಾಹನ ಇನ್ನೊಂದು ಮಾರ್ಗವಾಗಿ ಹೊರಟುಹೋದದ್ದರಿಂದ ಯೋಜನೆ ಸಫಲವಾಗಲಿಲ್ಲ. ಜತೀನನ ಅನುಯಾಯಿಗಳಲ್ಲಿ ಒಬ್ಬಾತ “ಬರ್ಡ ಅಂಡ್ ಕಂಪನಿ”ಯ ಮೇಲೆ ದಾಳಿ ಮಾಡಿದ್ದು ತನ್ನ ಹೊಣೆಗಾರಿಕೆ ಎಂದು ಹೇಳಿಕೆ ಕೊಟ್ಟ. ಇದರಿಂದ ರಾಯನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

ರಾಯನನ್ನು ಬಂಧಿಸಿದ ಪೋಲೀಸ್ ಅಧಿಕಾರಿ ಸುರೇಶ ಮುಖರ್ಜಿ ಎಂಬಾತ. ಕ್ರಾಂತಿಕಾರರು ಅವನ ಮೇಲೆ ಕಣ್ಣಿಟ್ಟಿದ್ದರು.  ಒಬ್ಬ ಕ್ರಾಂತಿಕಾತಿ ಬೇಕೆಂದೇ ಅವನೆದುರಿಗೆ ಸುಳಿದಾಡಿದ. ಮುಖರ್ಜಿ ಅವನನ್ನು ಹಿಡಿಯಲು ಹೋಗಿ ಅವನ ಗುಂಡಿಗೆ ಆಹುತಿಯಾದ. ಹಲಧರ ಎಂಬ ಇನ್ನೊಬ್ಬ ಅಧಿಕಾರಿ ಕ್ರಾಂತಿಕಾರರ ಆ ಸ್ಥಳಕ್ಕೆ ಹೋಗಿ ಮತ್ತೆಂದೂ ಮರಳಿ ಬರಲೇ ಇಲ್ಲ!

ಪೋಲೀಸರು ದಿಗಿಲುಬಿದ್ದರು ಜತೀನನ ಬಗ್ಗೆ ಮಾಹಿತಿ ಒದಗಿಸಿಕೊಟ್ಟವರಿಗೆ ಭಾರಿ ಬಹುಮಾನ ಕೊಡಲಾಗುವುದೆಂದು ಭಿತ್ತಿಪತ್ರಗಳಲ್ಲಿ ಪ್ರಕಟಿಸಿದರು. ಜತೀನನ ಸಂಗಡಿಗರು ಆತನಿಗೆ ಕಲ್ಕತ್ತ ಬಿಟ್ಟು ಹೋಗಲು ತಿಳಿಸಿದರು. ಅದೇ ಸಮಯದಲ್ಲಿ ಒರಿಸ್ಸಾ ಪ್ರಾಂತದ ಬಾಲಸೋರ್ ಕರಾವಳಿಯಲ್ಲಿ ವಿದೇಶಗಳಿಂದ ಶಸ್ತ್ರಾಸ್ತ್ರಗಳು ಬರುವ ವಿಷಯ ತಿಳಿದುಬಂತು. ಜತೀನ್ ಮತ್ತು ಅವನ ಗೆಳೆಯರು ಬಾಲಸೋರ್ ಪಟ್ಟಣದ ಹತ್ತಿರವಿರುವ ಗೋಪಾಲಡಿಹಾ ಎಂಬ ಜಹಗೀರನ ಮುಖ್ಯ ಸ್ಥಳಕ್ಕೆ ಬಂದು ನೆಲೆಸಿದರು.

ಅದೇ ಸ್ಥಳದ ಚಕ್ರವರ್ತಿ ಎಂಬರೊಬ್ಬರು ಜತೀನನಿಗೆ ಅರಣ್ಯದ ಸ್ವಲ್ಪ ಪ್ರದೇಶವನ್ನು ಬಿಟ್ಟುಕೊಟ್ಟು ಅವರಿಗೆ ಎಲ್ಲಾ ವ್ಯವಸ್ಥೆ ಮಾಡಿದರು. ಜತೀನ್ ಅರಣ್ಯ ಪ್ರದೇಶದಲ್ಲಿದ್ದರೂ ಕಲ್ಕತ್ತಾದ ಕ್ರಾಂತಿಕಾರಿಗಳ ಜೊತೆಗೆ “ಯೂನಿವರ್ಸಲ್ ಎಂಪೋರಿಯಮ್” ಎಂಬ ಸಂಸ್ಥೆಯ ಮುಖಾಂತರ ಸಂಪರ್ಕವನ್ನಿಟ್ಟುಕೊಂಡಿದ್ದ. ಜತೀನ ಹಾಗೂ ಅವನ ಸಂಗಡಿರು ಹೊಸ ಹೆಸರನ್ನು ಇಟ್ಟುಕೊಂಡರು. ಸಾಧು ಬಾಬಾ ಎಂದು ಹೆಸರಿಟ್ಟುಕೊಂಡ ಜತೀನ್ ಅದಕ್ಕನುಗುಣವಾಗಿ ಜನರಿಗೆ ಸೇವೆಸಲ್ಲಿಸಲು ಪ್ರಾರಂಭಿಸಿದ.

ಮೇವರಿಕೆ ಎಂಬ ಜರ್ಮನ್ ಹಡಗು ಆಯುಧಗಳನ್ನು, ಮದ್ದುಗುಂಡುಗಳನ್ನು ಹೊತ್ತುಕೊಂಡು ೧೯೧೫ರ ಏಪ್ರಿಲ್ ತಿಂಗಳು ತಿಂಗಳು ಸ್ಯಾನ್ ಫ್ರಾನ್ಸಿಸ್ಕೊ ನಗರವನ್ನು ಬಿಟ್ಟಿತು. ಮಾನವೇಂದ್ರನಾಥ ರಾಯ್ ಶಸ್ತ್ರಾಸ್ತ್ರಗಳ ವ್ಯವಹಾರವನ್ನು ಮುಗುಸಿಕೊಂಡು ಬಟೇವಿಯಾದಿಂದ ಭಾರತಕ್ಕೆ ಮರಳಿ ಬಂದ. ಆದರೆ ವಿಧಿ ಮೇವರಿಕನ ವಿರುದ್ಧವಾಗಿತ್ತು. ಬ್ರಿಟಿಷ್ ನೌಕೆಗಳು ಗುಪ್ತವಾಗಿ ಆ ಹಡಗನ್ನು ಅನುಸರಿಸಿದವು. ಹಡಗಿನ ಕ್ಯಾಪ್ಟನನಿಗೆ ಗಂಡಾಂತರದ ಅರಿವಾಗುತ್ತಲೇ ಆತ ಎಲ್ಲ ಕಾಗದ ಪತ್ರಗಳನ್ನು, ಮದ್ದು ಗುಂಡುಗಳನ್ನು ಶಾಂತ ಸಾಗರದಲ್ಲಿ ಸುರಿದುಬಿಟ್ಟ. ಕೊನೆಗೆ ಆ ಹಡಗನ್ನು ಇಂಡೊನೇಷ್ಯದ ಬಂದರಿನಲ್ಲಿ ವಶಪಡಿಸಿಕೊಳ್ಳಲಾಯಿತು. ಈ ಸಮಾಚಾರ ಜತೀನಗೆ ಮುಟ್ಟಿತು. ನಿರಾಸೆಯ ಯಾವ ಚಿಹ್ನೆಯನ್ನೂ ತೋರದೆ ಆತ “ಇದು ದೇವರ ಆಜ್ಞೆ, ಹೊರಗಿನ ಯಾವ ಸಹಾಯವಿಲ್ಲದೆ ನಾವು ರಾಷ್ಟ್ರವನ್ನು ಸ್ವತಂತ್ರಗೊಳಿಸಬೇಕಾಗಿದೆ” ಎಂದು ನುಡಿದ.

ಬೇಟೆ ಪ್ರಾರಂಭ 

ಕಡೆಗೆ ಪೋಲೀಸರಿಗೆ “ಯೂನಿವರ್ಸಲ್ ಎಂಪೋರಿಯಂ” ಸಂಸ್ಥೆಯ ವಿಷಯ ತಿಳಿಯಿತು.

೧೯೧೫ರ ಸೆಪ್ಟೆಂಬರ್ ನಾಲ್ಕರಂದು ಜಿ.ಡಿ.ಡನ್ ಹ್ಯಾಮ್ ಎಂಬ ಪೋಲೀಸ್ ಅಧಿಕಾರಿ ಹಾಗೂ ಪೋಲೀಸ್ ಕಮೀಷನರ್ ಚಾರ್ಲ್ಸ್ ಟೇಗಾರ್ಟ್ ಕೂಡಿ ಬಾಲಸೋರಿಗೆ ಬಂದರು. ಅಲ್ಲಿ ಅವರು ಯೂನಿವರ್ಸಲ್ ಎಂಪೋರಿಯಂ ಸಂಸ್ಥೆಯನ್ನು ಸಾಂದ್ಯತವಾಗಿ ಶೋಧಿಸಿದರು. ಆದರೆ ಏನೂ ಸಿಕ್ಕಲಿಲ್ಲ. ಹತಾಶರಾಗಿ ಅವರು ಹೊರಡುತ್ತಿದ್ದಾಗ, ಕಾಗದದ ಒಂದು ಸಣ್ಣ ಚೂರು ಅವರ ಕಣ್ಣಿಗೆ ಬಿತ್ತು. ಅದರ ಮೇಲೆ “ಕಾಪ್ಟಿಪಡಾ” ಎಂದು ಬರೆಯಲಾಗಿತ್ತು. “ಕಾಪ್ಟಿಪಡಾ” ಒರಿಸ್ಸಾ ಪ್ರಾಂತದ ಬಾಲಸೋರ್ ಪಟ್ಟಣದ ಹತ್ತಿರವಿರುವ ಯಾರ ಸುಳಿವೂ ಹತ್ತಲಿಲ್ಲ. ಆದರೂ ಅವರು ಈ ಕಾಗದವನ್ನಿಟ್ಟುಕೊಂಡರು.

ಆ ಮೇಲೆ ಆ ಪೋಲೀಸ್ ಅಧಿಕಾರಿಗಳು ಬಲ್ಲೂರ್, ನೀಲಗಿರಿ ಹಾಗೂ ಮಯೂರಭಂಜದ ಪೋಲೀಸ್ ದಳಗಳಿಗೆ ಎಚ್ಚರಿಕೆ ಕೊಟ್ಟು ಕಾಪ್ಟಿಪಡಾಕ್ಕೆ ಧಾವಿಸಿ ಬಂದರು. ಪೋಲೀಸರು ಅರಣ್ಯ ಪ್ರದೇಶದಲ್ಲಿದ್ದ ಜತೀನನ ಗುಡಿಸಲಿಗೆ ಮುತ್ತಿಗೆ ಹಾಕಿದರು. ಒಳಗಿನಿಂದ ಬಾಗಿಲು ಹಾಕಿತ್ತು. ಬಿಳಿಯ ಅಧಿಕಾರಿಗಳಿಗೆ ಗುಡಿಸಲಿನ ಬಾಗಿಲು ತೆರೆಯುವುದಕ್ಕೆ ಧೈರ್ಯವಾಗಲಿಲ್ಲ. ಆದ್ದರಿಂದ ಅವರು ಆ ಕೆಲಸವನ್ನು ಭಾರತೀಯ ಪೊಲೀಸ್ ಅಧಿಕಾರಿಗೆ ವಹಿಸಿಕೊಟ್ಟರು. ಆತ ಬಾಗಿಲನ್ನು ಒದ್ದು ಬೀಳಿಸಿದ. ಒಳಗೆ ಯಾರೂ ಇರಲಿಲ್ಲ. ಆದರೆ ಕೆಲವು ಪುಸ್ತಕಗಳು, ಔಷಧಿಗಳು, ಬಂದೂಕಿನ ಗುಂಡುಗಳು ಅಲ್ಲಿ ದೊರಕಿದವು.

ಆದಾದ ಮೇಲೆ ಪೋಲೀಸರು ಜತೀನನ ಆಶ್ರಯದಾತನಾದ ಮಣೀಂದ್ರ ಚಕ್ರವರ್ತಿಯ ಮನೆಯನ್ನು ಶೋಧಿಸಿ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದರು. ಆತ ಅವರೆಲ್ಲರೂ ಬೇಟೆಗೆ ಹೋಗಿದ್ದಾರೆಂದು ತಿಳಿಸಿದ. ಬೇರೆ ಏನನ್ನೂ ಹೇಳಲಿಲ್ಲ.

ಪೋಲೀಸ್ ಕಮಿಷನರ್ ಸಿಪಾಯಿಗಳನ್ನೂ, ಚೌಕಿದಾರರನ್ನೂ ಎಲ್ಲ ದಿಕ್ಕುಗಳಲ್ಲಿ ಕಳುಹಿಸಿ, ಹಳ್ಳಿಗಳಿಗೆ ಡಕಾಯಿತರು ಬರುತ್ತಿದ್ದಾರೆ ಎಂದು ಎಚ್ಚರಿಕೆ ಕೊಟ್ಟ. ಜತೀನ್ ಮತ್ತು ಅವನ ಸಂಗಡಿಗರು ನೋಡಲು ಹೇಗಿದ್ದಾರೆ ಎಂಬ ವಿವರಣೆ ಕಳುಹಿಸಿದ. ಜತೀನನ ಬಗ್ಗೆ ಮಾಹಿತಿ ಒದಗಿಸಿದವರಿಗೆ ಹತ್ತು ಸಾವಿರ ರೂಪಾಯಿಗಳ ಭಾರಿ ಬಹುಮಾನ ಎಂದು ಸಾರಿದ. ಈ ಹತ್ತು ಸಾವಿರದ ಸುದ್ದಿ ಹತ್ತು ಲಕ್ಷ ಜನರಲ್ಲಿ ಪ್ರಸಾರವಾಯಿತು. ಕಾಪ್ಟಿ ಪಡಾದ ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಶೋಧಿಸಿದರೂ ಪೊಲೀಸರಿಗೆ ಯಾವ ಪ್ರಯೋಜನವೂ ಆಗಲಿಲ್ಲ. ಜತೀನ್ ತನ್ನ ಸಂಗಡಿಗರೊಂದಿಗೆ ಮಣೀಂದ್ರ ಚಕ್ರವರ್ತಿಯ ಮನೆಯಲ್ಲಿಯೇ ಕುಳಿತಿದ್ದ!

ಸೆಪ್ಟೆಂಬರ್ ಎಂಟರಂದು ಪೋಲೀಸರು ಕಾಪ್ಟಿಪಡಾದಿಂದ ಹಿಡಿದು ಬಾಲಸೋರಿನವರೆಗೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಬಲೆಯನ್ನು ಹಾಕಿದರು. ಜತೀನನ ಅನುಯಾಯಿಗಳಾದ ಚಿತ್ತಪ್ರಿಯ ಹಾಗೂ ಮನೋರಂಜನ್ ಕಣ್ಣೀರು ಸುರಿಸುತ್ತ ತಮ್ಮನ್ನು ತಮ್ಮ ಪಾಡಿಗೆ ಬಿಟ್ಟುಬಿಡಬೇಕೆಂದು ಕೇಳಿಕೊಂಡರು. ಒಬ್ಬೊಂಟಿಗನಾಗಿದ್ದರೆ ಜತೀನ್ ಸರಳವಾಗಿ ಪಾರಾಗಬಹುದೆಂದು ಅವರಿಗೆ ದೃಢ ವಿಶ್ವಾಸವಿತ್ತು. “ದಾದಾ, ನೀನು ಬದುಕಿ ಉಳಿದರೆ ಮತ್ತೆ ಎಲ್ಲವನ್ನು ಸಂಘಟಿಸಬಹುದು” ಎಂದು ಅವರು ಹೇಳಿದರು.

ಮುಗ್ಧ ಮಕ್ಕಳ ಮಾತುಗಳನ್ನು ಕೇಳಿ ಮುಗುಳ್ನಗುವ ತಂದೆಯಂತೆ ನಕ್ಕ ಜತೀನ್. ಅವರನ್ನು ಬಿಟ್ಟುಕೊಡಲಿಲ್ಲ. ಅವರಿಬ್ಬರ ಜೊತೆಗೆ ಮತ್ತೊಂದು ಸ್ಥಳಕ್ಕೆ ಹೋಗಿ ಅಲ್ಲಿಯ ಇಬ್ಬರು ಸಂಗಾತಿಗಳನ್ನು ಕರೆದುಕೊಂಡು ಹೊರಟ.

ಅಭೇದ್ಯ ಪೋಲೀಸ್ ಕಾವಲು ಇದ್ದರೂ ಜತೀನ ಮತ್ತು ಅವನ ಅನುಯಾಯಿಗಳು ಐವತ್ತು ಗಂಟೆಗಳ ಕಾಲ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದರು. ಪೋಲೀಸರ ವ್ಯೂಹವನ್ನು ಭೇದಿಸಿಕೊಂಡು ಹೋಗಬಲ್ಲವರಾಗಿದ್ದರೂ ಅವರು ಜನರಿಗೆ ಹೆದರುವ ಪ್ರಸಂಗ ಬಂತು. ಇವರು ಡಕಾಯಿತರು ಎಂದು ಪೋಲೀಸರು ಪ್ರಚಾರ ಮಾಡಿದ್ದರು.

ಆದರೂ ಜತೀನನ ಗುಂಪು ದಣಿದು ಸುಸ್ತಾಗಿ ಬುದ್ಧಬಲಂಗಾ ನದಿಯ ಗಡಕ್ಕೆ ಬಂದಿತು. ನದಿ ದಾಟಬೇಕು. ಅಂಬಿಗನನ್ನು ಕೇಳಿದರು. ಅವನಿಗೆ ಇವರ ವಿಷಯ ಸಂಶಯ ಬಂದಿತು. ಕೂಡಲೆ ಅಲ್ಲಿ ಜನ ನೆರೆದರು. ಪೋಲೀಸರು ವಿವರಿಸಿದ ಮುಖಲಕ್ಷಣಗಳು ಇವರಲ್ಲಿ ಕಂಡುಬಂದವು. ಸಜೀವವಾಗಿ ಆಗಲಿ, ನಿರ್ಜೀವವಾಗಿ ಆಗಲಿ ಇವರನ್ನು ಹಿಡಿದುಕೊಟ್ಟರೆ ಸಾವಿರಾರು ರೂಪಾಯಿಗಳ ಬಹುಮಾನ! ಸರ್ಕಾರದ ಭರವಸೆ ಜನರ ಮನಸ್ಸಿನಲ್ಲಿ ಮನೆಮಾಡಿತ್ತು.

ಈಗಾಗಲೇ ಹಳ್ಳಿಯ ಜನ ಸಮೀಪದ ಪೋಲೀಸ್ ಠಾಣೆಗೆ ಸಂದೇಶ ಕಳಿಸಿಬಿಟ್ಟಿದ್ದರು. ಪೋಲೀಸ್ ದಫೇದಾರ ಜನರನ್ನು ಕೂಡಿಕೊಂಡು ಅವರನ್ನು ತಡೆಯುವ ಪ್ರಯತ್ನ ಮಾಢಿದ. ಜತೀನ್ ಮತ್ತು ಆತನ ಸಂಗಡಿಗರು ಜನರ ಜೊತೆಗೆ ಕಾದಾಡ ಬೇಕಾಯಿತು. ಹಳ್ಳಿಗರು “ಡಕಾಯಿತರು, ಡಕಾಯಿತರು” ಎಂದು ಕೂಗಿದರು. ಅಲ್ಲಿ ಜನರ ದೊಡ್ಡ ಗುಂಪು ಸೇರಿತು.

ಜತೀನ ತಾವು ಡಕಾಯಿತರಲ್ಲ ಎಂದು ಜನರಿಗೆ ಮತ್ತೆ ಮತ್ತೆ ಹೇಳಿದ. ಆ ಗೊಂದಲದಲ್ಲಿ ಅವನ ಮಾತನ್ನು ಯಾರೂ ಕಿವಿಗೆ ಹಾಕಿಕೊಳ್ಳಲಿಲ್ಲ.

ಈಗ ಜತೀನನ ಗುಂಪಿಗೆ ಏನು ಮಾಡಬೇಕೆಂದು ತೋರಲಿಲ್ಲ. ತಕ್ಷಣ ತಪ್ಪಿಸಿಕೊಳ್ಳುವುದು ಅಗತ್ಯವಾಗಿತ್ತು. ಜತೀನನ ಸಂಗಡಿಗರು ಕೆಲವು ಹುಸಿಗುಂಡು ಹಾರಿಸಿದರು. ಒಮ್ಮಿಂದೊಮ್ಮೆ ಯಾವನೋ ಒಬ್ಬ ಕೂಗಿ ಅವರ ಹತ್ತಿರ ನಿಜವಾದ ಗುಂಡುಗಳೇ ಇಲ್ಲವೆಂದು ಹೇಳಿದ. ಮತ್ತೊಬ್ಬ ಮನೋರಂಜನನನ್ನು ಹಿಡಿದೆಳೆದ. ಮನೋರಂಜನ್ ಅವನನ್ನು ಗುಂಡಿಕ್ಕಿ ಕೊಂದು ಹಾಕಿದ. ಜನರು ಅಲ್ಲಿಗೆ ಸ್ತಬ್ಧರಾಗಿ ನಿಂತುಬಿಟ್ಟರು. ಜತೀನ್ ಮತ್ತು ಅವನ ಸಂಗಡಿಗರು ಅಲ್ಲಿಂದ ಹೊರಟರು. ಐದು ಮೈಲಿ ನಡೆದು ಒಂದು ಮರದ ಬುಡಕ್ಕೆ ಬಂದು ಕುಳಿತರು. ಅರವತ್ತು ಗಂಟೆಗಳ ಕಾಲ ಆಹಾರ ನಿದ್ರೆಗಳಿಲ್ಲದೆ ಅವರು ಬಹಳ ದಣಿದಿದ್ದರು. ಒಂದು ಫರ್ಲಾಂಗ್ ದೂರವಿದ್ದು ಒಂದು ಅಂಗಡಿಗೆ ಹೋಗಿ ಕೆಲವು ತಿಂಡಿಪದಾರ್ಥಗಳನ್ನು ಅವರು ಕೊಂಡುಕೊಂಡರು. ಚಿಲ್ಲರೆ ಇಲ್ಲದೆ ಇದ್ದುದರಿಂದ ಅಂಗಡಿಯವನ ಹತ್ತಿರ ಹತ್ತು ರೂಪಾಯಿ ನೋಟನ್ನು ಹಾಗೇ ಬಿಟ್ಟುಹೋದರು.

ಅಂಗಡಿಯವರಿಗೆ ಅನುಮಾನ ಬಂದಿತು. ಅವರನ್ನು ದಿಟ್ಟಿಸಿನೋಡಿದ. “ಡಕಾಯಿತರು, ಡಕಾಯಿತರು” ಎಂದು ಕೂಗಿ ಗೊಂದಲವೆಬ್ಬಿಸಿದ. ಮತ್ತೆ ಜನ ಕೂಡಿದರು. ಫೋಲೀಸ್ ಇನ್ಸೆಪೆಕ್ಟರನೂ ಅಲ್ಲಿಗೆ ಧಾವಿಸಿ ಬಂದು ಜತೀನನ ಕೈಹಿಡಿದು ನಿಲ್ಲಿಸಿದ. ಜತೀನ್ ಅವನನ್ನು ನೂಕಿದಾಗ ಹತ್ತಾರು ಗಜ ದೂರದಲ್ಲಿ ಇನ್ಸೆಪೆಕ್ಟರ್ ಉರುಳಿಬಿದ್ದ.

ಮತ್ತೆ ಐವರೂ ನದಿಯ ದಡಕ್ಕೆ ಬಂದರು. ಅಲ್ಲಿ ನಾವೇ ಇರಲಿಲ್ಲವಾದ್ದರಿಂದ ಮದ್ದುಗುಂಡುಗಳ ಚೀಲವನ್ನು ಬೆನ್ನಿಗೆ ಹಾಕಿಕೊಂಡು ನದಿಯನ್ನು ಈಜಿದರು. ಚಾಸಕಂಡ ಎಂಬ ಹಳ್ಳಿಯ ಸಮೀಪ ಒಂದು ಮಣ್ಣಿನ ದಿಬ್ಬವಿತ್ತು. ದಿಬ್ಬದ ಎದುರುಗಡೆ ಒಂದು ಹೊಂಡವಿದ್ದು ದಟ್ಟವಾದ ಮುಳ್ಳು ಕಂಟೆಗಳಿಂದ ಆ ಸ್ಥಳ ಮರೆಯಾಗಿತ್ತು. ಅಲ್ಲಿ ಜತೀನ್ ಮತ್ತು ಆತನ ಸಂಗಡಿಗರು ಅಡಗಿ ಕುಳಿತರು.

ಬಾಲಸೋರಿನಲ್ಲಿ ಪೋಲೀಸರ ಅಪೂರ್ವ ಸಿದ್ಧತೆಗಳು ನಡೆದವು. ಸೈನಿಕ ದಳದ ಸಾರ್ಜೆಂಟ್ ರುಥರ್ ಫರ್ಡ್, ಮ್ಯಾಜಿಸ್ಟ್ರೇಟ್ ಕಿಲ್ಬಿ ಮತ್ತು ಇನ್ನಿತರ ಹಿರಿಯ ಪೋಲೀಸ್ ಅಧಿಕಾರಿಗಳು ಪೋಲೀಸ್ ಹಾಗೂ ಸೈನಿಕ ದಳಗಳೊಂದಿಗೆ ಚಾಸಕಂಡ ಹಳ್ಳಿಗೆ ಬಂದರು. ಆಗ ಮಧ್ಯಾಹ್ನವಾಗಿತ್ತು. ಒಬ್ಬ ಗುಪ್ತಚರ ಮಣ್ಣಿನ ದಿಬ್ಬದ ಕಡೆ ಕೈಮಾಡಿ ತೋರಿಸಿದ. ಅಸಂಖ್ಯ ಜನ ಈ ಪೋಲೀಸ್ ಕಾರ್ಯಾಚರಣೆಯನ್ನು ನೋಡಲು ಅಲ್ಲಿ ನೆರದಿದ್ದರು. ಕಿಲ್ಬಿ ಕ್ರಾಂತಿಕಾರರಿಗೆ ಎಚ್ಚರಿಕೆ ನೀಡುತ್ತ ಮೊದಲು ಗುಂಡು ಹಾರಿಸಿದ. ಕ್ರಾಂತಿಕಾರರು ಆಹಾರ ನಿದ್ರೆಗಳಿಲ್ಲದೆ ದಣಿದಿದ್ದಾರೆ, ಅವರೆಲ್ಲರೂ ಶರಣಾಗತರಾಗಬಹುದು ಎಂದು ಕಿಲ್ಬಿ ನಂಬಿದ್ದ. ಆದರೆ ಹಾಗಾಗಲಿಲ್ಲ.

ಸ್ವಲ್ಪ ಹೊತ್ತು ಕಾದಮೇಲೆ ಕಿಲ್ಬಿ ಮತ್ತು ರುಥರ್ ಫರ್ಡ್ ಗುಂಡು ಹಾರಿಸುತ್ತಾ ಮುನ್ನುಗ್ಗಹತ್ತಿದರು. ಕ್ರಾಂತಿಕಾರರಿಂದ ಯಾವ ಪ್ರತೀಕಾರವೂ ಬರಲಿಲ್ಲ.

ಇದರಿಂದ ಜತೀನನ ಗುಂಪಿನ ಹತ್ತಿರ ದೂರ ಗುರಿ ಹೊಡೆಯುವ ಬಂದೂಕುಗಳಿಲ್ಲ ಎಂದು ಪೋಲೀಸರು ಭಾವಿಸಿದರು. ಆದ್ದರಿಂದ ಪೋಲೀಸರು ಬಹಳ ಸಮೀಪ ಬಂದರು. ಅವರು ದಿಬ್ಬ ಏರುತ್ತಿದ್ದಂತೆ ಗುಂಡಿನ ಸುರಿಮಳೆ ಎದುರಿಸಬೇಕಾಯಿತು. ಆದ್ದರಿಂದ ಪೋಲಿಸರಿಗೆ ಮುಂದೆ ಒಂದು ಹೆಜ್ಜೆಯನ್ನಿಡುವುದೂ ಸಾಧ್ಯವಾಗಲಿಲ್ಲ. ಗಾಬರಿಗೊಂಡ ಅಧಿಕಾರಿಗಳು ಸಿಪಾಯಿಗಳಿಗೆ ಭೂಮಿಯ ಮೇಲೆ ಮಲಗಲು ತಿಳಿಸಿದರು. ಪೋಲೀಸರು ಹಾಗೂ ಸೈನಿಕರು ಎಷ್ಟೇ ಪ್ರಯತ್ನಿಸಿದರೂ ಅವರಿಗೆ ಮುಂದೆ ಹೋಗುವುದು ಸಾಧ್ಯವಾಗಲಿಲ್ಲ. ಅಧಿಕಾರಿಗಳೆಲ್ಲರೂ ಜತೀನನ ಯುದ್ಧ ತಂತ್ರಕ್ಕೆ ಮೆಚ್ಚಿದರು. ಸುಮಾರು ಹನ್ನೆರಡು ಜನ ಪೋಲೀಸರು ಈ ಕಾರ್ಯಾಚರಣೆಯಲ್ಲಿ ಪ್ರಾಣ ತೆತ್ತರು.

ಸುಮಾರು ಮೂರು ಗಂಟೆಗಳ ಕಾಲ ಕಾದಾಟ ನಡೆಯಿತು. ಜತೀನ್ ಇನ್ನೂ ಹೆಚ್ಚಿನ ಕಾಲ ಪೋಲೀಸರನ್ನು ತಡೆಯಬಹುದಾಗಿತ್ತು. ಆದರೆ ಮದ್ದು ಗುಂಡುಗಳ ಸಂಗ್ರಹ ಮುಗಿಯಿತು. ಕ್ರಾಂತಿಕಾರರು ಹೊಸದೊಂದು ಚೀಲ ಬಿಚ್ಚಲು ಪ್ರಯತ್ನಿಸಿದರು. ಆದರೆ ಚರ್ಮದ ಚೀಲದ ಕೀಲಿಕೈ ಕಳೆದುಹೋಗಿದ್ದರಿಂದ ಆ ಚೀಲವನ್ನು ಬಿಚ್ಚಲು ಸಾಧ್ಯವಾಗಲಿಲ್ಲ. ಜತೀನ್ ಮತ್ತು ಅವನ ಸಂಗಡಿಗರು ಚೀಲ ಹರಿಯುವ ಪ್ರಯತ್ನದಲ್ಲೇ ಇದ್ದರು. ಅವರ ಗಾಯಗಳಿಂದ ರಕ್ತ ಸುರಿಯುತ್ತಿತ್ತು. ಕಿಲ್ಬ ಹಾಗೂ ರುಥರ್ ಫರ್ಡ್ ಈ ಸಮಯ ಸಾಧಿಸಿ ದೊಡ್ಡ ದಾಳಿ ಪ್ರಾರಂಭಿಸಿದರು. ಒಬ್ಬ ಪೋಲೀಸ್ ಸಿಪಾಯಿ ಮರವೇರಿ ಚಿತ್ತಪ್ರಿಯನನ್ನು ಗುಂಡಿಕ್ಕಿ ಕೊಂದ.

ಜತೀನ್ ತನ್ನ ಒಂದು ಕೈಗೆ ಗುಂಡು ತಗುಲಿದರೂ, ಎದೆಯಿಂದ ರಕ್ತ ಸುರಿಯುತ್ತಿದ್ದರೂ, ಚಿತ್ತಪ್ರಿಯನ ಶಿರವನ್ನು ತನ್ನ ತೊಡೆಯ ಮೇಲಿಟ್ಟುಕೊಂಡ, ಹಾಗೆಯೇ ಎದುರಾಳಿಗಳತ್ತ ಗುಂಡು ಹೊಡೆಯುತ್ತ ಕುಳಿತ! ಕೊನೆಗೆ ಎಲ್ಲ ಮದ್ದುಗುಂಡು ಮುಗಿದುಹೋಯಿತು. ಜತೀನನಿಗೆ ತೀವ್ರ ಗಾಯಗಳಾಗಿದ್ದವು. ಸ್ವಲ್ಪ ಹೊತ್ತಿನವರೆಗೆ ಯಾವ ಶಬ್ದವೂ ಕೇಳಿಬರಲಿಲ್ಲ. ಪೋಲೀಸರು, ಸೈನಿಕರು ನುಗ್ಗಿಬಂದು ಕ್ರಾಂತಿಕಾರರನ್ನು ಬಂಧಿಸಿದರು. ಜತೀನನಿಗೆ ಬಹಳ ನೀರಡಿಕೆಯಾಗಿತ್ತು. ಕಿಲ್ಬಿ ನೀರು ತಂದು ಕುಡಿಸಿ ಜತೀನನ ಸಂಗಡ ಆದರಪೂರ್ವಕವಾಗಿ ಮಾತನಾಡಿದ. ಜತೀನ್ ಆತನಿಗೆ ಕೃತಜ್ಞತೆಗಳನ್ನು ಅರ್ಪಿಸಿದ.

ಆಮೇಲೆ ಜತೀನ್ ಹಾಗೂ ಆತನ ಸಂಗಡಿಗರನ್ನು ಪೋಲೀಸರ ಭದ್ರವಾದ ಕಾವಲಿನಲ್ಲಿ ಬಾಲಸೋರ್ ಆಸ್ಪತ್ರೆಗೆ ಸೇರಿಸಲಾಯಿತು. ದಾರಿಯಲ್ಲಿ ಮಳೆ ಬರುತ್ತಿದ್ದುದರಿಂದ ಕಿಲ್ಬಿ ಜತೀನನ ದೇಹವನ್ನು ತನ್ನ ಕೋಟಿನಿಂದ ಮುಚ್ಚಿದ. ಜತೀನ್ ಎಚ್ಚರವಾಗಿಯೇ ಇದ್ದ. “ನೀವು ಏನನ್ನಾದರೂ ಹೇಳುತ್ತೀರಾ ಮಿಸ್ಟರ್ ಮುಖರ್ಜಿ?” ಎಂದು ಕಿಲ್ಬಿ ಕೇಳಿದ.

“ಹೌದು, ನನ್ನ ಜೊತೆಗಿದ್ದ ಈ ತರುಣರಿಗೆ ಬ್ರಿಟಿಷ್ ರಾಜ್ಯದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಿರಿ. ಎಲ್ಲ ಘಟನೆಗಳಿಗೆ ನಾನೇ ಹೊಣೆಗಾರನಿದ್ದೇನೆ” ಎಂದು ಜತೀನ್ ಹೇಳಿದ.

ಬಾಲಸೋರಿನ ಆಸ್ಪತ್ರೆಯಲ್ಲಿ ಜತೀನನಿಗೆ ಶಸ್ತ್ರಕ್ರಿಯೆ ಮಾಡಿ ಹೊಟ್ಟೆಯೊಳಗಿನಿಂದ ಗುಂಡುಗಳನ್ನು ತೆಗೆಯಲಾಯಿತು. ರಾತ್ರಿಯಿಡೀ ಜಾಗರಣೆ ಮಾಡಿದ ಕಿಲ್ಬಿ ಮತ್ತು ಇನ್ನಿತರ ಅಧಿಕಾರಿಗಳಿಗೆ ಜತೀನ್ ಬದುಕಿ ಉಳಿಯುತ್ತಾನೆ ಎಂದು ಸಂತೋಷವಾಯಿತು.

ಆದರೆ ೧೯೧೫ರ ಸೆಪ್ಟೆಂಬರ್ ೧೦ ರಂದು ಜತೀನನ ಗಾಯದ ಹೊಲಿಗೆಗಳು ಬಿಚ್ಚಿಬಿಟ್ಟಿದ್ದರಿಂದ ಡಾಕ್ಟರರು ನಿರಾಶೆಗೊಂಡರು. ಅವನ ಶಕ್ತಿ ಕುಂದುತ್ತ ಬಂತು. ಹಿರಿಯ ಪೋಲೀಸ್ ಅಧಿಕಾರಿ ಸರ್ ಚಾರ್ಲ್ಸ್ ಟೇಗಾರ್ಟ್ ಎಂಬಾತ ಜತೀನನ ಅಂತ್ಯ ಸಮಯದಲ್ಲಿ ಹತ್ತಿರದಲ್ಲೇ ಇದ ” ಮುಖರ್ಜಿ, ನಾನು ನಿಮಗೇನು ಮಾಡಬಲ್ಲೇ!” ಎಂದು ಕೇಳಿದ.

ಜತೀನ್  ಮುಗುಳ್ನಕ್ಕು, “ಏನೂ ಇಲ್ಲ. ನಿಮಗೆ ನಾನು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈಗ ಎಲ್ಲವೂ ಮುಗಿದುಹೋಗಿದೆ. ಗುಡ್ ಬೈ” ಎಂದು ಹೇಳಿದ ಆಗಲೇ ಆ ಕ್ರಾಂತಿವೀರನ ಪ್ರಾಣಪಕ್ಷಿ ಹಾರಿ ಹೋಯಿತು.

ಆಗ ಆತನಿಗೆ ಮೂವತ್ತಾರು ವರ್ಷ ವಯಸ್ಸು.

ಟೇಗಾರ್ಟ್ ಜತೀನನ ಬಗ್ಗೆ ಮಾತನಾಡುತ್ತಾ, “ಆತ ಅತ್ಯಂತ ಶೂರ ವ್ಯಕ್ತಿ” ಎಂದು ಉದ್ಗಾರ ತೆಗೆದ.

ಮುಂದೆ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜತೀನನ ಸಂಗಡಿಗರಾದ ನಿರೇನ್ ಹಾಗೂ ಮನೋರಂಜನ್‌ಗೆ ಮರಣ ದಂಡನೆ ವಿಧಿಸಲಾಯಿತು.

“ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಕೊನೆಗೊಳ್ಳಲಿ” ಎಂದು ಘೋಷಿಸುತ್ತ ಅವರು ಪ್ರಾಣ ತೆತ್ತರು, ಹುತಾತ್ಮರಾದರು. ಜೊತೀಶ್ ಎಂಬ ಕ್ರಾಂತಿಕಾರನನ್ನು ಅಂಡಮಾನಿನ ಜೈಲಿಗೆ ಕಳಿಸಿದರು. ಆಮೇಲೆ ಆತ ಬರಹಾಂಪುರ ಜೈಲಿನಲ್ಲಿ ತೀರಿಕೊಂಡ. ಆತನ ಕೊನೆಯ ಕೃತಿ ಎಂದರೆ ಸೆರೆಮನೆಯ ಗೋಡೆಯ ಮೇಲೆ ಜತೀನನಿಗೆ ಶ್ರದ್ಧಾಂಜಲಿ ಅರ್ಪಿಸುವ ವಾಕ್ಯಗಳನ್ನು ಕೊರೆದದ್ದು.

೧೯೧೦ರಲ್ಲಿ ಆಲಿಪುರದ ಸೆಂಟ್ರಲ್ ಜೈಲಿನಲ್ಲಿದ್ದಾಗ ಜತೀನ್ ತನ್ನ ಸೋದರಿ ವಿನೋದಬಾಲಾಗೆ ಬರೆದ ಮಾತುಗಳು ಅವನ ಬಾಳನ್ನೇ ಸಂಗ್ರಹಿಸಿ ಹೇಳುತ್ತವೆ. ಮುಂದಿನ ಪೀಳಿಗೆಗಳಿಗೆ ಸ್ಪೂರ್ತಿಯಾಗಿವೆ.

“ಈ ಜಗತ್ತಿನ ಘಟನೆಗಳು, ಪದಾರ್ಥಗಳು ಎಲ್ಲ ಎಷ್ಟು ಕ್ಷಣಿಕ ಎಂದು ನೀನೇ ಕಂಡಿದ್ದೀಯೆ. ಕ್ಷಣಿಕವಾದ ಬಾಳನ್ನು ಮಹತ್ತರವಾದ ಗುರಿಗಾಗಿ ಸಮರ್ಪಿಸುವ ಅವಕಾಶ ದೊರೆತವನದೇ ಭಾಗ್ಯ.”

ನಮಗೀಗ ಸ್ವಾತಂತ್ರ್ಯ ದೊರೆತಿದೆ, ಹಿಂಸೆಯ ಅಗತ್ಯವಿಲ್ಲ. ಆದರೆ ಭಾರತ ಗುಲಾಮಗಿರಿಗೆ ಸಿಕ್ಕಾಗ ನಿರ್ಭಯವಾಗಿ ಹೋರಾಡಿ ಪ್ರಾಣವನ್ನು ಅರ್ಪಿಸಿದ ಇಂತಹ ಧೀರರಿಗೆ ನಮ್ಮ ಮೆಚ್ಚುಗೆ, ಕೃತಜ್ಞತೆ ಸಲ್ಲಬೇಕು.