೧೯೪೭ ರ ಅಗಸ್ಟ್ ೧೫!

ಭಾರತದ ಇತಿಹಾಸದಲ್ಲಿ ಚಿರಸ್ಮರಣೀಯ ದಿನ.

ಹಲವು ದಶಕಗಳ ಹೋರಾಟ ನಡೆಸಿ, ಬ್ರಿಟಿಷರ ದಬ್ಬಾಳಿಕೆಯಿಂದ ಭಾರತ ಮುಕ್ತವಾದ ಮಂಗಳ ದಿನ.

ಸ್ವಾತಂತ್ಯ್ರ ದೊರೆಯಲು ಹೋರಾಡಿದ ಮಹಾನ್ ವ್ಯಕ್ತಿಗಳಲ್ಲಿ ಜತೀಂದ್ರ ಮೋಹನ ಸೇನ್ ಗುಪ್ತ ಒಬ್ಬರು.

ಜನನ ಬಾಲ್ಯ

೧೮೮೫ ರ ಫೆಬ್ರವರಿ ೨೨ ರಂದು ಜತೀಂದ್ರನ ಜನನ ಈಗ ಬಾಂಗ್ಲಾ ದೇಶದಲ್ಲಿರುವ ಚಿತ್ತಗಾಂಗ್ ಜಿಲ್ಲೆಯ ಬರಾಮಾ ಎಂಬ ಹಳ್ಳಿಯಲ್ಲಿ ಆಯಿತು. ತಂದೆ ಜತ್ರ ಮೋಹನ ಸೇನ್ ಗುಪ್ತ ಜನಪ್ರಿಯ ಜಮೀನುದಾರ.

ಜತೀಂದ್ರರ ತಾಯಿ ವಿನೋದಿನಿದೇವಿಗೆ ಜತೀಂದ್ರನನ್ನು ಕಂಡರೆ ತುಂಬ ಪ್ರೀತಿ. ಅವನನ್ನು ಶಾಲೆಗೆ ಸೇರಿಸಲು ಆಕೆ ಒಪ್ಪಲಿಲ್ಲ. ಬದಲಾಗಿ ಮನೆಯಲ್ಲೇ ಪಾಠ ಹೇಳಿಕೊಡಲು ಏರ್ಪಾಟು ಮಾಡಿದಳು.

ತನ್ನ ಏಳನೆಯ ವಯಸ್ಸಿನಲ್ಲಿ ಅವನು ತಾಯಿಯೊಡನೆ ಚಿತ್ತಗಾಂಗಿಗೆ ಬಂದ. ಅಲ್ಲಿಯ ಶಾಲೆಯಲ್ಲಿ ಎರಡು ವರ್ಷ ಓದಿ ಅನಂತರ ಕಲ್ಕತ್ತೆಗೆ ಹೋದ. ಅಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗ ಅವನ ತಂದೆಯ ಮಿತ್ರರು ಜತೀಂದ್ರನನ್ನು ಇಂಗ್ಲೆಂಡಿಗೆ ಕಳುಹಿಸುವಂತೆ ಸಲಹೆ ಮಾಡಿದರು. ಆದರೆ ಮಗನನ್ನು ಅಷ್ಟು ದೂರ ಕಳುಹಿಸಲು ವಿನೋದಿನಿ ದೇವಿ ಒಪ್ಪಲಿಲ್ಲ. ಆದರೂ ಕೆಲವು ಕಾಲದನಂತರ ಆತನ ಸೋದರ ಸಂಬಂಧಿಯೊಬ್ಬ ಇಂಗ್ಲೆಂಡಿಗೆ ಹೋಗಬಯಸಿದಾಗ ತುಂಬ ಪ್ರಯಾಸದಿಂದ ತಾಯಿಯನ್ನು ಒಪ್ಪಿಸಿ ಜತೀಂದ್ರನೂ ಇಂಗ್ಲೆಂಡಿಗೆ ಹೊರಟ.

ಮನಸ್ಸಿಲ್ಲದ ಮನಸ್ಸಿನಿಂದ ಮಗನ ವಿದೇಶ ಪ್ರವಾಸಕ್ಕೆ ವಿನೋದಿನಿ ಅನುಮತಿ ನೀಡಿದಳು. ಮತ್ತೆ ತಾಯಿ ಮಗನ ಭೇಟಿ ಆಗಲೇ ಇಲ್ಲ. ಜತೀಂದ್ರ ಇಂಗ್ಲೆಂಡಿನಲ್ಲಿದ್ದಾಗಲೇ ಆಕೆ ತೀರಿಕೊಂಡಳು.

ಇಂಗ್ಲೆಂಡಿನಲ್ಲಿ ಇದ್ದ ಶಿಕ್ಷಣ ಕ್ರಮ ಭಾರತದಲ್ಲಿದ್ದುದಕ್ಕಿಂತ ಬೇರೆ ರೀತಿಯದಾಗಿತ್ತು. ಅಲ್ಲಿ ವಿದ್ಯಾಭ್ಯಾಸಕ್ಕೆ ಮತ್ತು ಕ್ರೀಡೆಗಳಿಗೆ ಸಮಾನ ಪ್ರೋತ್ಸಾಹ ಕೊಡುತ್ತಿದ್ದರು. ಇದು ಜತೀಂದ್ರನಿತೆ ತುಂಬ ಮೆಚ್ಚುಗೆಯಾಯಿತು. ಕಾಲೇಹಿನಲ್ಲಿ ಆತ ಉತ್ತಮ ವಿದ್ಯಾರ್ಥಿ ಮತ್ತು ಒಳ್ಳೆಯ ಕ್ರೀಡಾಪಟು ಎಂಬ ಹೆಸರನ್ನು ಪಡೆದ.

ಪ್ರೇಮ ವಿವಾಹ

ಇಂಗ್ಲೆಂಡಿನಲ್ಲಿ ಗ್ರೇ ಎಂಬ ಒಬ್ಬ ಮಹಿಳೆಯಿದ್ದಳು. ಆಕೆಗೆ ಭಾರತೀಯ ವಿದ್ಯಾರ್ಥಿಗಳನ್ನು ಕಂಡರೆ ತುಂಬ ಪ್ರೀತಿ. ಅದಕ್ಕಾಗಿ ಅವರಿಗೆ ಆಗಾಗ ತನ್ನ ಮನೆಯಲ್ಲಿ ಔತಣಕೂಟ ಏರ್ಪಡಿಸುತ್ತಿದ್ದಳು.

ಇಂತಹ ಒಂದು ಸಂದರ್ಭದಲ್ಲಿ ಜತೀಂದ್ರನಿಗೆ ಆಕೆಯ ಮಗಳು ನೆಲ್ಲಿ ಎಂಬ ತರುಣಿಯ ಪರಿಚಯವಾಯಿತು. ಅವರ ಪರಿಚಯ ಬೆಳೆದು ಅವರಿಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ ಅದಕ್ಕೆ ಜತ್ರ ಮೋಹನ್ ಮತ್ತು ಗ್ರೇ ಇಬ್ಬರೂ ಒಪ್ಪಲಿಲ್ಲ. ಆಂಗ್ಲ ತರುಣಿ ಹಿಂದು ಸಂಸಾರಕ್ಕೆ ಹೊಂದಿಕೊಳ್ಳುವಳೋ ಇಲ್ಲವೋ ಎಂಬ ಅನುಮಾನದಿಂದ ಜತ್ರ ಮೋಹನ್ ಒಪ್ಪಲಿಲ್ಲ. ತನ್ನ ಒಬ್ಬಳೇ ಮಗಳು ಭಾರತಕ್ಕೆ ಹೊರಟುಹೋದರೆ ಮತ್ತೆ ಅವಳನ್ನು ತಾನು ನೋಡಲು ಅವಕಾಶ ದೊರೆಯುವುದೊ ಇಲ್ಲವೊ ಎಂಬ ಕಳವಳ ಗ್ರೇಗೆ ಇತ್ತು.

ಆದರೆ ಜತೀಂದ್ರ ಮತ್ತು ನೆಲ್ಲಿ ಒಬ್ಬರನ್ನೊಬ್ಬರು ತುಂಬ ಪ್ರೀತಿಸುತ್ತಿದ್ದರು. ಆದರೂ ಅವರ ಹಿರಿಯರ ಮಾತನ್ನೇ ನಡೆಸೋಣ, ಮದುವೆ ಬೇಡ ಎಂದೇ ತೀರ್ಮಾನಿಸಿದರು. ಇಂಗ್ಲೆಂಡನ್ನು ಬಿಟ್ಟು ಹೊರಟ ಜತೀಂದ್ರ, ಅರ್ಧದಾರಿ ಬಂದವನು, ನೆಲ್ಲಿಯನ್ನು ಬಿಟ್ಟಿರಲಾರದೆ, ಬೇರೊಂದು ಹಡಗನ್ನು ಹತ್ತಿ ಇಂಗ್ಲೆಂಡಿಗೆ ಹಿಂತಿರುಗಿದ. ಅವರು ಗುಪ್ತವಾಗಿ ನ್ಯಾಯಾಲಯದಲ್ಲಿ ಮದುವೆ ಮಾಡಿಕೊಂಡರು.

ವಿಷಯ ತಿಳಿದಾಗ ಜತ್ರ ಮೋಹನ್ ಮತ್ತು ಗ್ರೇ ಇಬ್ಬರಿಗೂ ತುಂಬ ಸಿಟ್ಟು ಬಂತು. ಆದರೂ ತಮ್ಮ ಮಕ್ಕಳ ಮೇಲಿನ ಪ್ರೀತಿ ಅವರನ್ನು ಸಮಾಧಾನಪಡಿಸಿ ಅವರಿಬ್ಬರೂ ಜತೀಂದ್ರ – ನೆಲ್ಲಿಯರನ್ನು ಆಶೀರ್ವದಿಸುವಂತೆ ಮಾಡಿತು.

ಜತೀಂದ್ರ ಇಂಗ್ಲೆಂಡಿನಲ್ಲಿದ್ದಾಗಲೇ ಬಿಪಿನ್ ಚಂದ್ರ ಪಾಲ್, ಲಾಲಾ ಲಜಪತರಾಯ್, ಗೋಪಾಲಕೃಷ್ಣ ಗೋಖಲೆ ಮುಂತಾದ ನಾಯಕರು ಅಲ್ಲಿಗೆ ಭೇಟಿ ನೀಡಿ ಸ್ವಾತಂತ್ಯ್ರ ಹೋರಾಟದ ಬಗ್ಗೆ ಭಾಷಣ ಮಾಡುತ್ತಿದ್ದರು. ಇದು ಅಲ್ಲಿಯ ಭಾರತೀಯ ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಹೆಚ್ಚಿಸಿ ಅವರೂ ಹೋರಾಟದಲ್ಲಿ ಧುಮುಕುವಂತೆ ಮಾಡುತ್ತಿತ್ತು.

ರಾಜಕೀಯಕ್ಕೆ ಪ್ರವೇಶ

ಬಾರ್-ಅಟ್-ಲಾ (ವಕೀಲಿ ವೃತ್ತಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಜತೀಂದ್ರ ಮೋಹನರು ೧೯೦೯ ರಲ್ಲಿ ಭಾರತಕ್ಕೆ ಹಿಂತಿರುಗಿದರು. ಕಲ್ಕತ್ತೆಯ ಶ್ರೇಷ್ಠ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

೧೯೧೧ ರಲ್ಲಿ ಅವರು ರಾಜಕೀಯದಲ್ಲಿ ಪಾದಾರ್ಪಣೆ ಮಾಡಿದರು.

೧೯೧೯ರಲ್ಲಿ ತಂದೆಯ ಅಕಾಲ ಮರಣ ಜತೀಂದ್ರರ ಹೊರೆಯನ್ನು ಹೆಚ್ಚಿಸಿತು. ಹಳ್ಳಿಯಲ್ಲಿದ್ದ ಜಮೀನು, ದೊಡ್ಡ ಕುಟುಂಬದ ನಿರ್ವಹಣೆ ಅವರ ಪಾಲಿಗೆ ಬಂತು. ಇದರ ಜೊತೆಯಲ್ಲೇ ಕಲ್ಕತ್ತೆಯಲ್ಲಿ ವಕೀಲಿ ನಡೆಸುವದೂ ಕಷ್ಟವೆನಿಸಿತು. ಅವರು ಹಳ್ಳಿಯಲ್ಲಿನ ಜವಾಬ್ದಾರಿಗಳನ್ನು ಆಪ್ತರೊಬ್ಬರಿಗೆ ವಹಿಸಿದರು.

೧೯೨೧ರಲ್ಲಿ ಗಾಂಧೀಜಿ “ಅಸಹಕಾರ ಚಳವಳಿ” ಆರಂಭಿಸಿದರು. ಬ್ರಟಿಷರೊಡನೆ ಯಾವ ರೀತಿಯಲ್ಲೂ ಸಹಕರಿಸದೆ ಇರುವದು ಈ ಚಳವಳಿಯ ಸ್ವರೂಪ. ಇದರಿಂದ ಶಾಲಾಕಾಲೇಜುಗಳು ಮುಚ್ಚಲ್ಪಟ್ಟವು, ಅನೇಕರು ತಮ್ಮ ವೃತ್ತಿಗಳನ್ನು ತ್ಯಜಿಸಿದರು. ಜತೀಂದ್ರರೂ ಸ್ವಾತಂತ್ರಯ ಹೋರಾಟಕ್ಕೆ ಸಮಾಜದ ಬಡವರ್ಗದ ಜನರನ್ನು ಸಜ್ಜುಗೊಳಿಸಲು ತಮ್ಮ ವಕೀಲ ವೃತ್ತಿಯನ್ನು ನಿಲ್ಲಿಸಿದರು.

ಕಾರ್ಮಿಕ ನಾಯಕ

ಚಿತ್ತಗಾಂಗಿನಲ್ಲಿ ಬರ್ಮ ತೈಲ ಸಂಸ್ಥೆಯ ಒಂದು ಶಾಖೆಯಿತ್ತು. ಅದರ ನೌಕರರಿಗೆ ಸರಿಯಾದ ವೇತನ ಸೌಲಭ್ಯಗಳು ಇರಲಿಲ್ಲ. ಆ ನೌಕರರ ಒಂದು ಸಂಘ ಇಲ್ಲದಿದ್ದುದು ಮಾಲೀಕರಿಗೆ ಅನುಕೂಲವೇ ಆಗಿತ್ತು.

ಈ ಸುದ್ದಿ ತಿಳಿದು ಜತೀಂದ್ರರು ಎಲ್ಲ ನೌಕರರ ಒಂದು ಸಭೆ ಸೇರಿಸಿದರು. ಅದರಲ್ಲಿ ಅವರಿಗೆ ನೌಕರರ ಸಂಘದ ಅಗತ್ಯವನ್ನು ವಿವರಿಸಿದರು. ಐಕ್ಯಮತದ ಮಹತ್ವವನ್ನು ತಿಳಿಯಹೇಳಿದರು. ಇದರಿಂದ ಅಂದೇ “ಬರ್ಮ ತೈಲ ಕಂಪನಿಯ ಸಂಘ” ಎಂಬ ಹೆಸರಿನಲ್ಲಿ ಕಾರ್ಮಿಕ ಸಂಘ ಜನ್ಮ ತಾಳಿತು. ಜತೀಂದ್ರರೇ ಅದರ ಅಧ್ಯಕ್ಷರಾಗಿ ಆಯ್ಕೆಯಾದರು.

ಈ ಸಭೆಯಲ್ಲಿ ಭಾಗವಹಿಸಿದ ಕಾರಣ ಒಬ್ಬ ನೌಕರನನ್ನು ಕೆಲಸದಿಂದ ವಜಾ ಮಾಡಿದರು. ಕೆರಳಿದ ನೌಕರರು ಸಭೆ ಸೇರಿ ಮುಷ್ಕರ ಹೂಡಲು ನಿರ್ಧರಿಸಿದರು.

ಮುಷ್ಕರ ಶಾಂತಿಯುತವಾಗಿ ಇರಬೇಕೆಂದು ಜತೀಂದ್ರರು ಒತ್ತಿ ಒತ್ತಿ ಹೇಳಿದರು. ಕೆಲವೇ ದಿನಗಳಲ್ಲಿ ಇವರ ಜೊತಿಗೆ ಬಂದರಿನ ಕೆಲಸಗಾರರೂ ಸೇರಿ ಮುಷ್ಕರ ಹೂಡಿದರು.

ಚಿತ್ತಗಾಂಗಿನಲ್ಲಿ ಪ್ರತಿಬಂಧಕಾಜ್ಞೆ ಜಾರಿಗೆ ಬಂತು. ಅಂದರೆ ಅದು ಜಾರಿಯಲ್ಲಿರುವಾಗ, ಸಭೆ, ಮೆರವಣಿಗೆಗಳನ್ನು ನಡೆಸುವಂತಿರಲಿಲ್ಲ. ಆದರೂ ೧೯೨೧ ರ ಮೇ ೫ ರಂದು ಸುಮಾರು ಹನ್ನೆರಡು ಸಾವಿರ ಜನರ ಸಭೆ ನಡೆಯಿತು. ಜತೀಂದ್ರರು ಮತ್ತಿತರ ಮುಖಂಡರು ಜನರನ್ನು ಉತ್ತೇಜನಗೊಳಿಸುವ ಭಾಷಣ ಮಾಡಿದರು. ಕೂಡಲೇ ಎಲ್ಲ ಕಡೆಯೂ “ಹರತಾಳ” ಆಚರಿಸಬೇಕೆಂದು ನಿರ್ಧರಿಸಿದರು. ಹರತಾಳವೆಂದರೆ ಕೆಲಸ ಕಾರ್ಯಗಳನ್ನು ಮಾಡದೆ ಇರುವುದು.

ಅದರಂತೆ ಎಲ್ಲ ಅಂಗಡಿಗಳೂ ಮುಚ್ಚಲ್ಪಟ್ಟವು. ವಾಹನ ಸಂಚಾರ ಸ್ತಬ್ಧವಾಯಿತು. ಬ್ರಿಟಿಷರ ಮನೆಗಳಲ್ಲಿ ಚಾಕರಿ ಮಾಡುತ್ತಿದ್ದವರೂ ಕೆಲಸಕ್ಕೆ ಹೋಗಲಿಲ್ಲ. ಜನಜೀವನ ಅಸ್ತವ್ಯಸ್ತಗೊಂಡಿತು. ಇಷ್ಟೆಲ್ಲ ಆದಾಗ ಸಂಸ್ಥೆಯ ಮಾಲೀಕ ವರ್ಗ ಕಣ್ಣು ತೆರೆಯಿತು. ಜತೀಂದ್ರರು ಹಾಕಿದ ಷರತ್ತುಗಳನ್ನು ಒಪ್ಪಿಕೊಂಡು ಅವರೊಡನೆ ಒಂದು ಒಪ್ಪಂದಕ್ಕೆ ಬಂದಿತು.

ಮುಷ್ಕರವನ್ನು ಯಶಸ್ವಿಯಾಗಿ, ಶಾಂತಿಯುತವಾಗಿ ನಡೆಸಿದುದಕ್ಕೆ ಜತೀಂದ್ರರನ್ನು ಎಲ್ಲರೂ ಅಭಿನಂದಿಸಿದರು.

ಟೀ ತೋಟಗಳ ಗುಲಾಮರ ಬಿಡುಗಡೆ

ಪೂರ್ವ ಭಾರತದಲ್ಲಿ ಸಿಲ್ಹೆಟ್ ಎಂಬ ಪ್ರದೇಶವಿದೆ. ಅದು ಟೀ ತೋಟಗಳಿಗೆ ಪ್ರಸಿದ್ಧಿ. ಆ ತೋಟಗಳಿಗೆ ಬಹುತೇಕ ಯರೋಪಿಯನ್ನರೇ ಮಾಲೀಕರಾಗಿದ್ದರು.

ಟೀ ತೋಟಗಳಲ್ಲಿ ಕೆಲಸ ಮಾಡಲು ಜನರು ಬೇಕಾಗಿದ್ದರು. ಅವರನ್ನು ನೇಮಕ ಮಾಡಲು ಯುರೋಪಿಯನ್ನರು ಕೆಲವು ಪ್ರತಿನಿಧಿಗಳನ್ನು ನೇಮಿಸಿಕೊಂಡಿದ್ದರು.

ಆ ಪ್ರತಿನಿಧಿಗಳು ತೀರಾ ಬಡವರಾದವರ ಹತ್ತಿರ ಹೋಗಿ ಮೊದಲು ಅವರ ಸ್ನೇಹ ಬೆಳೆಸುತ್ತಿದ್ದರು. ಆಗಾಗ ಅವರಿಗೆ ಉಡುಗೊರೆಗಳನ್ನು ಕೊಡುವರು. “ನೋಡಿ, ನಮ್ಮ ಟೀ ತೋಟಗಳಲ್ಲಿ ಕೆಲಸ ಮಾಡಿದರೆ ನಿಮಗೆ ಕೈತುಂಬ ಸಂಬಳ ಸಿಕ್ಕುವದು. ನೀವೂ ನಮ್ಮ ಹಾಗೇ ಸುಖವಾಗಿ ಇರಬಹುದು” ಎಂದು ಹೇಳಿ ಆಸೆ ಹುಟ್ಟಿಸುವರು. ಅವರಿಗೆ ಸಂಬಳವನ್ನೂ ಮುಂಗಡವಾಗಿ ಕೊಡುವರು. ಆ ಮುಗ್ಧ ಜನರು ಇದರಿಂದ ಹೆಚ್ಚು ಹಣ ಸಂಪಾದಿಸುವ ಆಸೆಯಿಂದ ಅವರೊಡನೆ ಟೀ ತೋಟಗಳಿಗೆ ಹೋಗುವರು. ಅಲ್ಲಿ ಸೇರಿದ ಮೇಲೆ ಅವರ ಕಷ್ಟ ಕಾರ್ಪಣ್ಯಗಳು ಹೆಚ್ಚುತ್ತಿದ್ದುವು. ಇರಲು ಸರಿಯಾಗಿ ಮನೆ ಇರುತ್ತಿರಲಿಲ್ಲ; ಸಂಬಳ ಸರಿಯಾಗಿ ದೊರೆಯುತ್ತಿರಲಿಲ್ಲ. ಅವರು ಅಲ್ಲಿಂದ ಹಿಂತಿರುಗಲು ಯತ್ನಿಸಿದರೆ ಆಡಳಿತದವರು ಅವರ ಮುಂದೆ ಸಾಲದ ದೊಡ್ಡ ಪಟ್ಟಿ ಇಡುವರು. “ಈ ಮೊದಲು ಕೊಟ್ಟಿದ್ದ ಉಡುಗೊರೆಗಳನ್ನು ಮುಂಗಡ ವೇತನವನ್ನೂ ಹಿಂತಿರುಗಿಸದೆ ಹೋಗಲಾರಿರಿ” ಎಂದು ಹೇಳುವರು. ಅದನ್ನು ಹಿಂತಿರುಗಿಸಲಾರದೆ ಆ ಬಡಪಾಯಿಗಳು ಅಲ್ಲೇ ಉಳಿಯುವರು. ನಿಜವಾಗಿ ಅವರು ಗುಲಾಮರೇ ಆಗಿದ್ದರು.

ಕಾಂಗ್ರಸ್‌ನ ಕಾರ್ಯಕರ್ತರು ಈ ಟೀ ತೋಟಗಳ ನೌಕರರ ಬಳಿ ಹೋಗಿ ಅವರಿಗೆ ಸ್ವಾತಂತ್ಯ್ರದ ಬಗ್ಗೆ ತಿಳಿಹೇಳಿದರು. ಅನೇಕ ವರ್ಷಗಳ ಗುಲಾಮಗಿರಿಯಲ್ಲಿ ನೊಂದಿದ್ದ ಆ ಜನರು ಸ್ವಾತಂತ್ಯ್ರದ ಕನಸು ಕಾಣಲಾರಂಭಿಸಿದರು.

ಕಡೆಗೊಂದು ದಿನ ಅವರೆಲ್ಲ ಒಂದಾಗಿ ಟೀ ತೋಟಗಳನ್ನು ಬಿಟ್ಟು ತಮ್ಮ ಊರಿಗೆ ಹಿಂತಿರುಗಲು ನಿರ್ಧರಿಸಿದರು. ಮಾಲೀಕರು ರೈಲ್ವೆ ಸ್ಟೇಷನ್ ಮಾಸ್ಟರ್ ರವರಿಗೆ “ಈ ಜನಗಳಿಗೆ ಟಿಕೆಟ್ ಮಾರಬೇಡಿ” ಎಂದು ಸೂಚನೆ ಕೊಟ್ಟರು. ಇದರಿಂದ ಅವರು ಕರೀಂಗಂಜ್ ನಿಂದ ಮುಂದೆ ಹೋಗಲು ಯಾವ ವಾಹನ ಸೌಕರ್ಯವೂ ಇಲ್ಲದಂತಾಯಿತು. ಚಾಂದ್ ಪುರ್ ಘಾಟ್ ನತ್ತ ನಡೆದೇ ಹೊರಟರು.

ಸುದ್ದಿ ತಿಳಿದ ಕೂಡಲೇ ಜತೀಂದ್ರರು ಅತ್ತ ಧಾವಿಸಿದರು. ಅವರು ರೈಲ್ವೆ ಕಂಪೆನಿಯ ಪ್ರತಿನಿಧಿ ಮತ್ತು ಮ್ಯಾನೇಜರ್ ಗೆ ತಂತಿ ಕಳುಹಿಸಿದರು. ಟೀ ತೋಟದ ನೌಕರರಲ್ಲಿ ಕೆಲವರು ದೋಣಿಯಲ್ಲಿ ಗೋಲಂದೋ ಎಂಬಲ್ಲಿಗೆ ಹೋದರು. ಆದರೆ ಮಾಲೀಕರೂ ಪೋಲಿಸರೂ ಆ ಮುನ್ನವೇ ಆ ಸ್ಥಳ ತಲುಪಿದ್ದರು! ನೌಕರರಿಗೆ ಹಿಂತಿರುಗುವಂತೆ ಮಾಲೀಕರು ಹೇಳಿದರು. ನೌಕರರು ಜಗ್ಗಲಿಲ್ಲ.

ಅಷ್ಟರಲ್ಲಿ ಜಿಲ್ಲಾ ನ್ಯಾಯಾಧೀಶರು ನಿಷೇಧಾಜ್ಞೆಯೊಂದನ್ನು ಹೊರಡಿಸಿದರು. ಅನೇಕ ನೌಕರರನ್ನು ಬಲಾತ್ಕಾರವಾಗಿ ರೈಲಿನಲ್ಲಿ ಚಾಂದ್ ಪುರಕ್ಕೆ ಕಳುಹಿಸಿದರು. ಅಲ್ಲಿ ಅವರ ಸ್ಥಿತಿ ತೀರಾಅಸಹನೀಯವಾಗಿತ್ತು. ಸುಮಾರು ನಾಲ್ಕು ಸಾವಿರ ಜನ ಒಂದೆಡೇ ಸೇರಿಬಿಟ್ಟಿದ್ದರು. ಅವರಲ್ಲಿ ಹಲವರು ಗೋಲಂದೋಗೆ ಹೋಗುವ ಹಡಗನ್ನು ಹತ್ತಲು ಯತ್ನಿಸಿದಾಗ ಮಾಲೀಕರು ಹಡಗಿಗಿದ್ದ ಮರದ ಸೇತುವೆಯನ್ನು ತೆಗೆಸಿಬಿಟ್ಟರು. ಇದರಿಂದ ಅನೇಕರು ನದಿಯಲ್ಲಿ ಬಿದ್ದುಬಿಟ್ಟರು. ಅನಂತರ ಅವರನ್ನೆಲ್ಲಾ ರೈಲು ನಿಲ್ದಾಣಕ್ಕೆ ಅಟ್ಟಲಾಯಿತು. ಅಲ್ಲಿಯ ಷೆಡ್ ಒಂದರಲ್ಲಿ ಅವರಿಗೆ ಕಾಂಗ್ರಸ್ ಕಾರ್ಯಕರ್ತರು ಆಹಾರ ಸರಬರಾಜು ಮಾಡಿದರು. ಅಂದು ರಾತ್ರಿ ಅವರೆಲ್ಲ ಬಯಲಿನಲ್ಲಿ ನಿದ್ರಿಸಬೇಕಾಯಿತು.

ರಾತ್ರಿ ಒಂದು ಹೊತ್ತಿನಲ್ಲಿ ಸೈನಿಕರು ಬಂದರು. ಮಲಗಿದ್ದವರನ್ನೆಲ್ಲಾ ಹೊಡೆದರು, ಬಡಿದರು; ಒದ್ದರು ಕೂಡ. ಹೆಂಗಸರು – ಮಕ್ಕಳು ಎನ್ನದೆ ಹಿಂಸಿಸಿದರು. ಇದು ಜನರಲ್ಲಿ ಅಶಾಂತಿಯನ್ನು ಹೆಚ್ಚಿಸಿತು. ಒಬ್ಬ ಯುರೋಪಿಯನ್ ಅಧಿಕಾರಿಯೇ ಈ ಅಮಾನುಷ ವರ್ತನೆಯನ್ನು ಟೀಕಿಸಿದನಂತೆ. ಜನರು ಚಾಂದ್ ಪುರ, ಕೊಮಿಲ್ಲಾ, ಚಿತ್ತಗಾಂಗ್ ಗಳಲ್ಲಿ ಹರತಾಳ ಆಚರಿಸಿದರು. ಜತೀಂದ್ರರು ಸಂತ್ರಸ್ತರಿಗೆ ಪರಿಹಾರ ಕಾರ್ಯಕ್ರಮಗಳನ್ನು ಏರ್ಪಾಟು ಮಾಡತೊಡಗಿದರು.

ಸ್ವಂತದ ಸಹಸ್ರಾರು ರೂಪಾಯಿಗಳ ಖರ್ಚು

ಈ ಘಟನೆಯಿಂದ ರೈಲ್ವೆ ನೌಕರರೂ ರೋಸಿಹೋದರು. ಅವರೂ ಮುಷ್ಕರ ಹೂಡಲು ನಿರ್ಧರಿಸಿದರು. ಅವರ ಸಂಘಕ್ಕೂ ಜತೀಂದ್ರರೇ ಅಧ್ಯಕ್ಷರಾಗಿದ್ದರು.

ಅಷ್ಟರಲ್ಲಿ ಟೀ ತೋಟದ ನೌಕರರ ಕಷ್ಟಗಳು ಹೆಚ್ಚಿದವು. ಅವರಲ್ಲಿ ಕಾಲರಾ ರೋಗ ಹರಡಿತು. ಸರ್ಕಾರ ಏನನ್ನೂ ಮಾಡಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಶ್ರಮದಿಂದ ರೋಗ ಹೆಚ್ಚು ಹರಡಲಿಲ್ಲ. ಅನಂತರ ಅವರನ್ನೆಲ್ಲಾ ದೋಣಿಗಳಲ್ಲಿ ಮನೆಗಳಿಗೆ ಕಳುಹಿಸಿದರು.

ರೈಲ್ವೆ ನೌಕರರು ಈಗ ತಮ್ಮ ಬೇಡಿಕೆಗಳಿಗಾಗಿ ಮುಷ್ಕರ ಮುಂದುವರೆಸಿದರು. ಜೊತೆಗೆ ಹಡಗು ನೌಕರರೂ ಮುಷ್ಕರ ಹೂಡಿದರು. ಜತೀಂದ್ರರು ಮುಷ್ಕರ ಶಾಂತಿಯುತವಾಗಿರಲು ತುಂಬ ಶ್ರಮಿಸಿದರು.

ಸುಮಾರು ೨೫,೦೦೦ ಜನ ಸೇರಿದ್ದ ಈ ಮುಷ್ಕರ ತುಸು ದೀರ್ಘಕಾಲವೇ ನಡೆಯಿತು. ಮುಷ್ಕರಗಳ ಕಾಲದಲ್ಲಿ ಎಷ್ಟೋ ಖರ್ಚುಗಳಿಗೆ ಹಣ ಬೇಕಾಯಿತು. ಜತೀಂದ್ರರು ತಮ್ಮ ಹಣವನ್ನೇ ವಿನಿಯೋಗಿಸಿದರು.

ಬಂಗಾಳದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿ ಮುಷ್ಕರ ಹೂಡಿದ್ದು ಇದೇ ಮೊದಲು. ಜತೀಂದ್ರರಿಗೆ ಮುಷ್ಕರ ಇದೇ ರೀತಿ ಮುಂದುವರಿದಲ್ಲಿ ಜನತೆಯ ತಾಳ್ಮೆ ಕೆಡಬಹುದು ಎನಿಸಿತು. ಕೆಲಸವಿಲ್ಲದೆ ಸಾವಿರಾರು ಜನರು ಎಷ್ಟು ದಿನಗಳ ಕಾಲ ಸುಮ್ಮನಿರುತ್ತಾರೆ? ಅವರಿಂದ ಏನಾದರೂ ರಚನಾತ್ಮಕ ಕೆಲಸಗಳನ್ನು ಮಾಡಿಸಲು ಜತೀಂದ್ರರು ನಿರ್ಧರಿಸಿದರು. ಚರಖಾಗಳನ್ನು ತರಿಸಿ ಅವರಿಗೆ ಕೊಡಿಸಿದರು. ಮುಷ್ಕರ ಹೊಡುತ್ತಿದ್ದ ಜನ ಈಗ ಉತ್ಸಾಹದಿಂಧ ನೂಲುವುದನ್ನು ಕಲಿತರು.

ಆದರೆ ಅಷ್ಟು ಜನರಿಗೆ ನೂಲಿ ಸರಬರಾಜು ಮಾಡುವುದು ಮತ್ತು ಅವರು ನೂತ ಬಟ್ಟೆಯನ್ನು ಮಾಡುವುದು ಮತ್ತು ಅವರು ನೂತ ಬಟ್ಟೆಯನ್ನು ಮಾಡುವುದು ಜತೀಂದ್ರರಿಗೆ ಮತ್ತು ಕಾಂಗ್ರೆಸ್ ಗೆ ಕಷ್ಟವಾಯಿತು. ಅಗತ್ಯ ವೆಚ್ಚಗಳಿಗೆಂದು ಜತೀಂದ್ರರು ವಾರಕ್ಕೆರಡು ಸಲ ಅವರಿಗೆ ಹಣ ಕೊಡುತ್ತಿದ್ದರು. ಈ ಹಣ ಎಲ್ಲಿಂದ ಬರುತ್ತಿತ್ತೋ ಯಾರಿಗೂ ತಿಳಿಯುತ್ತಿರಲಿಲ್ಲ. ವಾಸ್ತವವಾಗಿ ಅವರು ತಮ್ಮ ಆಸ್ತಿಯನ್ನು ಅಡವಿಟ್ಟು ಸಾಲ ತರುತ್ತಿದ್ದರು.

ಈ ಮುಷ್ಕರ ಮುಗಿಯುವ ಹೊತ್ತಿಗೆ ಅವರು ಸುಮಾರು ನಲವತ್ತು ಸಹಸ್ರ ರೂಪಾಯಿ ಸಾಲ ಮಾಡಿದ್ದರು. ಈ ವೇಳೆಗೆ ಸರ್ಕಾರ ಜತೀಂದ್ರರು ಮತ್ತಿತರರಿಗೆ ಒಂದು ತಿಂಗಳ ಕಾಲ ಯಾವುದೇ ಸಭೆ ನಡೆಸದಂತೆ ಆಜ್ಞೆ ಮಾಡಿತು. ಜೊತೆಗೇ ಮುಷ್ಕರ ಹೂಡಿದ್ದ ನೌಕರರನ್ನು ಮನೆಗಳಿಂದ ಓಡಿಸಿತು. ಅವರು ತಮ್ಮ ಸ್ವಂತ ಸಾಮಾನು ಸರಂಜಾಮುಗಳನ್ನು ಕೊಂಡೊಯ್ಯಲೂ ಅವಕಾಶ ಕೊಡಲಿಲ್ಲ.

ಇದರಿಂದ ತುಂಬ ಬೇಸರಗೊಂಡು ಜತೀಂದ್ರರು ಸರ್ಕಾರದ ಆಜ್ಞೆಯನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಲು ನಿರ್ಧರಿಸಿದರು. “ಪೋಲಿಸರು ನಿಮ್ಮ ಹಿಂದೆಯೇ ಇರುವರು. ಸ್ವಲ್ಪ ಅವಕಾಶ ದೊರೆತರೂ ಅವರು ನಿಮ್ಮನ್ನು ವಿನಾಕಾರಣ ಕೆರಳಿಸಬಹುದು. ನೀವು ಶಾಂತಿಯಿಂದ ಇರಬೇಕು. ಎಲ್ಲ ಕಷ್ಟಗಳನ್ನೂ ಎದುರಿಸಲು ಸಿದ್ಧವಿರಬೇಕು. ಸೆರೆಮನೆಗೆ ಹೋಗಲು ಸಿದ್ಧವಿರುವವರು ಮಾತ್ರ ಮೆರವಣಿಗೆಯಲ್ಲಿ ಭಾಗವಹಿಸಿ” ಎಂದು ಮುಷ್ಕರಗಾರರಿಗೆ ಅವರು ಹೇಳಿದರು.

ಬಂಧನ

ಸುಮಾರು ೭,೦೦೦ ಜನರ ಭಾರಿ ಮೆರವಣಿಗೆ ಶಾಂತಿಯಿಂದ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಅದರ ಮುಂದೆ ನ್ಯಾಯಾಧೀಶರು, ವರಿಷ್ಠ ಪೋಲಿಸ್ ಅಧಿಕಾರಿಗಳು, ಸುಮಾರು ೫೦ ಸೈನಿಕರು ಪ್ರತ್ಯಕ್ಷರಾದರು. ಜನರಿಗೆ ಚದುರುವಂತೆ ನ್ಯಾಯಾಧೀಶರು ಆಜ್ಞೆ ಮಾಡಿದರು. ಯಾರೂ ಅಲ್ಲಾಡಲಿಲ್ಲ. ಕಡೆಗೆ ಜತೀಂದ್ರ, ಮಹೀಮ್ ಚಂದ್ರ ಮುಂತಾದ ಹಲವು ನಾಯಕರನ್ನು ಬಂಧಿಸಿ, ಉಳಿದವರನ್ನು ಸೈನಿಕರ ಸಹಾಯದಿಂದ ಚದುರಿಸುವಂತೆ ನ್ಯಾಯಾಧೀಶರು ಆಜ್ಞಾಪಿಸಿದರು. 

ಎಲ್ಲ ಕಷ್ಟಗಳನ್ನೂ ಎದುರಿಸಲು ಸಿದ್ಧವಿರಬೇಕು

ಸಾವಿರಾರು ಜನ ಸೆರೆಮನೆಯ ಹೊರಗೆ ಸೇರಿದರು. ಜತೀಂದ್ರ ಮತ್ತಿತರನ್ನು ಅಲ್ಲಿಂದ ನ್ಯಾಯಾಲಯಕ್ಕೆ ಕರೆದೊಯ್ದಾಗ ಜನ ಅವರ ಹಿಂದೆಯೇ ಹೋದರು. ಬಂಧಿತರಿಗೆ ಪೋಲಿಸರು ಆಹಾರವನ್ನೂ ಕೊಡಲಿಲ್ಲ.

ನ್ಯಾಯಾಲಯದ ಹೊರಗೆ ಜನ, “ಜತೀಂದ್ರ ಮೋಹನ್ ಕೀ ಜೈ”, “ವಂದೇ ಮಾತರಂ” ಇತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಗಲಭೆಯಲ್ಲಿ ನ್ಯಾಯಾಧೀಶರಿಗೆ ಕೆಲಸ ಮಾಡಲು ಆಗಲಿಲ್ಲ. ಕಡೆಗೆ ಅವರು ಜತೀಂದ್ರರನ್ನು, “ಕಿಟಕಿಯಲ್ಲಿ ನಿಂತು ಜನರನ್ನು ಸುಮ್ಮನಿರುವಂತೆ ಹೇಳಿ” ಎಂದು ಕೇಳಿದ್‌ಉ. ಜನತೀಂದ್ರರ ಮುಖ ಕಿಟಕಿಯಲ್ಲಿ ಕಂಡ ಮರುಕ್ಷಣವೇ ಜನ ಸುಮ್ಮನಾದರು. ಜನತೆಯ ಮೇಲಿನ ಅವರ ಪ್ರಭಾವ ನ್ಯಾಯಾಲಯದಲ್ಲಿದ್ದ ಎಲ್ಲರನ್ನೂ ಅಚ್ಚರಿಗೊಳಿಸಿತು.

ವ್ಯೆಯಕ್ತಿಕ ಜಾಮೀನು ಕೊಟ್ಟು ಬಿಡುಗಡೆ ಹೊಂದುವಂತೆ ನ್ಯಾಯಾಧೀಶರು ಜತೀಂದ್ರರಿಗೆ ಸಲಹೆ ಮಾಡಿದರು. ಅದಕ್ಕೆ ಅವರು ಒಪ್ಪಲಿಲ್ಲ. ಇತ್ತ ನ್ಯಾಯಾಲಯದ ಬಳಿ ನೆರೆದಿದ್ದ ಜನರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಕಡೆಗೆ ಅವರೆಲ್ಲ ಹಿಂಸಾಕೃತ್ಯಕ್ಕೆ ತೊಡಗಬಹುದೆಂದು ಹೆದರಿ ಚಿತ್ತರಂಜನ ದಾಸರು ಜತೀಂದ್ರರಿಗೆ ಜಾಮೀನು ಕೊಟ್ಟು ಬಿಡುಗಡೆ ಹೊಂದುವಂತೆ ಸೂಚಿಸಿದರು. ದಿತ್ತರಂಜನ ದಾಸರು ಬಂಗಳದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ಅವರ ಒತ್ತಠಯದ ಮೇರೆಗೆ ಜತೀಂದ್ರರು ಜಾಮೀನು ಕೊಟ್ಟು ಬಿಡುಗಡೆ ಹೊಂದಿದರು.

ಜತೀಂದ್ರರು ಬಿಡುಗಡೆ ಹೊಂದಿದಾಗ ಜನ ಅವರನ್ನು ತುಂಬು ಉತ್ಸಾಹದಿಂದ ಸ್ವಾಗತಿಸಿದರು. ಅನಂತರ ಜತೀಂದ್ರರು ಅವರನ್ನೆಲ್ಲ ಕುರಿತು ಭಾಷಣ ಮಾಡಿದರು. ಮಹಾತ್ಮ ಗಾಂಧೀಜಿಯ ಶಾಂತಿ ಮತ್ತು ಅಹಿಂಸಾ ತತ್ವಗಳನ್ನು ಅನುಸರಿಸಿ ಎಂದು ಅವರು ಒತ್ತಿ ಹೇಳಿದರು.

ಜತೀಂದ್ರರು ಜಾಮೀನು ಕೊಟ್ಟದ್ದು ಮೂರು ತಿಂಗಳ ಕಾಲಕ್ಕೆ. ಅಂದರೆ ಆ ಮೂರು ತಿಂಗಳು ಅವರು ಮುಷ್ಕರಕ್ಕೆ ಸಂಬಂಧಿಸಿದ ಮೆರವಣಿಗೆ, ಸಭೆಗಳನ್ನು ನಡೆಸುವಂತಿರಲಿಲ್ಲ. ಇದರಿಂದ ಈ ಸಮಯದಲ್ಲಿ ಮುಷ್ಕರ ಹೂಡಿದ್ದವರ ಪರಿಹಾರಕ್ಕಾಗಿ ಹಣ ಸಂಗ್ರಹ ಮಾಡಲು ಅವರು ನಿರ್ಧರಿಸಿದರು.

ಈ ಮಧ್ಯದಲ್ಲಿ ರೈಲ್ವೆ ಕಂಪನಿ ಬೇರೆ ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಲಾರಂಭಿಸಿತು. ಇದು ಮುಷ್ಕರ ಹೊಡುತ್ತಿದ್ದವರನ್ನು ಬೆದರಿಸುವ ಒಂದು ತಂತ್ರವಾಗಿತ್ತು. ಆಗ ಎಷ್ಟೋ ಜನ ಕೆಲಸಕ್ಕೆ ಹಿಂತಿರುಗಬಯಸಿದರೂ ಅವರಿಗೆ ಪುನಃ ಕೆಲಸ ಕೊಡಲಿಲ್ಲ. 

ಜತೀಂದ್ರರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೇ ರಾಷ್ಟ್ರಧ್ವಜ ಹಾರಿಸಿದರು

ಈಗ ಗಾಂಧೀಜಿಯವರು ಸ್ವತಃ ಚಿತ್ತಗಾಂಗಿಗೆ ಬರಲು ನಿರ್ಧರಿಸಿದರು. ಸುಮಾರು ಎರಡು ಲಕ್ಷ ಜನ ಅವರಿಗೆ ಸ್ವಾಗತ ನೀಡಲು ರೈಲು ನಿಲ್ದಾನದಿಂದ ಜತೀಂದ್ರರ ಮನೆಯವರೆಗೆ ಸಾಲುಗಟ್ಟಿ ನಿಂತಿದ್ದರು. ಈ ಜನರ ಶಿಸ್ತು ಅವರನ್ನು ತುಂಬಾ ಮೆಚ್ಚಿಸಿತು.

ಮೊದಲ ಸೆರೆವಾಸ

ಜತೀಂದ್ರರು ಬರೆದು ಕೊಟ್ಟಿದ್ದ ಜಾಮೀನು ಪತ್ರ ೨೪.೦೯.೧೯೨೧ ಕ್ಕೆ ಮುಗಿಯಿತು. ತಮ್ಮ ನಾಯಕರ ಮೇಲೆ ಇದ್ದ ನಿಬಂಧನೆಗಳು ಮುಗಿದುದಕ್ಕೆ ಕಾರ್ಮಿಕರಿಗೆಲ್ಲ ತುಂಬ ಸಂತೋಷವಾಯಿತು. ಆ ಸಂದರ್ಭವನ್ನು ಸ್ಮರಿಸಲು ಎಲ್ಲರೂ ಜತೀಂದ್ರರ ಮನೆಯ ಬಳಿ ಸಭೆ ಸೇರಿದ್ದರು.

ಇದ್ದಕ್ಕಿದ್ದಂತೆ ಹಲವು ಮಂದಿ ಪೋಲಿಸರು ಬಂದರು. ಅವರು ಜತೀಂದ್ರರನ್ನು ಬಂಧಿಸಲು ನ್ಯಾಯಾಧೀಶರ ಆಜ್ಞೆಯನ್ನು ತಂದಿದ್ದರು. ಸೆರೆಮನೆಗೆ ಹೋಗುವ ಮುನ್ನ ಜತೀಂದ್ರರು ಕಾರ್ಮಿಕರನ್ನು ಶಾಂತಿಯಿಂದಿರುವಂತೆ ಬೇಡಿಕೊಂಡರು. ಜತೀಂದ್ರ ಮತ್ತು ಎತರ ಹದಿನೇಳು ಮಂದಿಯ ವಿಚಾರಣೆ ನಡೆದು, ಮೆರವಣಿಗೆ ನಡೆಸಿದ್ದಕ್ಕೆ ಅವರಿಗೆಲ್ಲ ಮೂರು ತಿಂಗಳ ಕಠಿಣ ಶಿಕ್ಷೆ ವಿಧಿಸಲಾಯಿತು. ಕಲ್ಕತ್ತೆಯ ಸೆರೆಮನೆಗೆ ಅವರನ್ನು ಕರೆದೊಯ್ಯಲಾಯಿತು.

ಜತೀಂದ್ರರು ಇಲ್ಲದಿದ್ದಾಗ ಅವರ ಮುಖ್ಯ ಕೆಲಸಗಳನ್ನು ಅವರ ಪತ್ನಿ ನೆಲ್ಲಿ ಮುಂದಿವರೆಸಿಕೊಂಡು ಬಂದರು.

ಶಾಸನಸಭಾ ಸದಸ್ಯ

೧೯೨೨ರ ಮಧ್ಯಭಾಗದ ವೇಳೆಗೆ ಅಸಹಕಾರ ಚಳವಳಿ ಸಾಕಷ್ಟು ಯಶಸ್ವಿಯಾಗಲಿಲ್ಲವೆಂದು ಮೋತಿಲಾಲ್ ನೆಹರೂ, ಚಿತ್ತರಂಜನ ದಾಸ್ ಮತ್ತು ಹಲವು ನಾಯಕರು ಮನಗಂಡರು. ಅವರು ಶಾಸನಸಭೆಗೆ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸಿ ಅದರ ಮೂಲಕ ಸರ್ಕಾರದ ವಿರುದ್ಧ ಹೋರಾಡಲು ನಿರ್ಧರಿಸಿದರು.

೧೯೨೩ರಲ್ಲಿ ಬಂಗಾಳ ಶಾಸನಸಭೆಗೆ ನಡೆದ ಚುನಾವಣೆಯಲ್ಲಿ ಜತೀಂದ್ರ, ಚಿತ್ತರಂಜನದಾಸ್ ಮುಂತಾದ ೪೦ ಮಂದಿ ಸ್ವರಾಜ್ಯ ಪಕ್ಷದ ಅಭ್ಯರ್ಥಿಗಳು ಗೆದ್ದರು. ಇವರು ಸರ್ಕಾರದ ನಿರ್ಣಯಗಳಿಗೆ ಶಾಸನಸಭೆಯಲ್ಲಿ ಸೋಲು ಉಂಟಾಗುವಂತೆ ಮಾಡುತ್ತಿದ್ದರು. ಸಕಾರಕ್ಕೆ ಪದೇ ಪದೇ ಸೋಲುಂಟಾಗುತ್ತಿತ್ತು.

ಕಲ್ಕತ್ತೆಯ ಮೇಯರ್

೧೯೨೪ರಲ್ಲಿ ಕಲ್ಕತ್ತೆಯ ನಗರ ಕಾರ್ಪೊರೇಷನ್ ಅಸ್ತಿತ್ವಕ್ಕೆ ಬಂದಿತು. ಶ್ರೀ ಚಿತ್ತರಂಜನದಾಸ್‌ ಅದರ ಮೊದಲನೆಯ ಮೇಯರ ಆಗಿ ಆಯ್ಕೆಯಾದರು. ಎರಡನೆಯ ಬಾರಿಯೂ ಮೇಯರ್ ಆದ ಚಿತ್ತರಂಜನ ದಾಸರು ಎರಡು ತಿಂಗಳ ನಂತರ ನಿಧನರಾದರು. ಇದರಿಂದ ಮೂರು ಪ್ರಮುಖ ಸ್ಥಾನಗಳು ಖಾಲಿಯಾದುವು: ಬಂಗಾಳ ಕಾಂಗ್ರೆಸ್ ಸಮಿತಿ ಹಾಗು ಸ್ವರಾಜ್ಯ ಪಕ್ಷದ ಅಧ್ಯಕ್ಷ ಪದವಿ ಮತ್ತು ಕಲ್ಕತ್ತ ನಗರ ಕಾರ್ಪೋರೇಷನ್ನಿನ ಮೇಯರ್ ಸ್ಥಾನ.

ಜತೀಂದ್ರರು ಮೂರು ಸ್ಥಾನಗಳಿಗೂ ಆಯ್ಕೆಯಾದರು. ಮೇಯರ್ ಆಗಿ ಎಷ್ಟು ಜನಪ್ರಿಯರಾದರೆಂದರೆ ಹಿಂದುಗಳು ಮತ್ತು ಮುಸ್ಲಿಮರು ಸ್ನೇಹ ಸೌಹಾರ್ದಗಳಿಗಾಗಿ ಶ್ರಮಿಸಿದರು. ಗಲಭೆಯಾದಾಗ, ತಮ್ಮ ಜೀವಕ್ಕೆ ಅಪಾಯ ಎಂದು ತಿಳಿದಿದ್ದೂ, ಗಲಭೆ ನಡೆಯುತ್ತಿದ್ದ ಸ್ಥಳಕ್ಕೆ ಹೋದರು. ಶಾಂತಿದೂತರಾದರು.

೧೯೩೦ರಲ್ಲಿ ಅವರು ಕಾಯಿದೆ ಭಂಗದ ಚಳವಳಿಯಲ್ಲಿ ಭಾಗವಹಿಸಿದ ಪರಿಣಾಮವಾಗಿ ಸೆರೆಮನೆಯಲ್ಲಿದ್ದರು. ಈ ಸಮಯದಲ್ಲಿಯೇ ಅವರು ಐದನೆಯ ಬಾರಿ ಮೇಯರ್ ಆಗಿ ಆಯ್ಕೆಯಾದದ್ದು.

ಸತತವಾದ ಕೆಲಸಗಳಿಂದ ಜತೀಂದ್ರರ ಆರೋಗ್ಯ ಕೆಟ್ಟಿತ್ತು. ಅವರಿಗೆ ರಕ್ತದ ಒತ್ತಡದ ಖಾಯಿಲೆಯಿತ್ತು. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸಲಹೆ ಮಾಡಿದರು. ೧೯೩೦ ರ ಜನವರಿ ೨೬ ರಂದು ಬಾರತದಾದ್ಯಂತ “ಸ್ವಾತಂತ್ಯ್ರ ದಿನ” ಆಚರಿಸಲು ಕಾಂಗ್ರೆಸ್ ಕರೆಕೊಟ್ಟಿತ್ತು. ಜತೀಂದ್ರರು ಆ ದಿನವನ್ನು ಆಚರಿಸುವವರೆಗೂ ತಾವು ವಿಶ್ರಾಂತಿ ಪಡೆಯಲು ಸಾಧ್ಯವಿಲ್ಲ ಎಂದು ಹಟ ಹಿಡಿದರು. ಕಾರ್ಪೋರೇಷನ್ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ವಿಷಯದಲ್ಲಿ ನಿರ್ಣಯ ಕೈಗೊಳ್ಳಲು ಹಿಂದಿನ ದಿನ ನಡೆದ ಕಾರ್ಪೊರೇಷನ್ನಿನ ಸಭೆಯಲ್ಲಿ ಅವರು ಭಾಗವಹಿಸಿದರು. ವಾಸ್ತವವಾಗಿ ಅವರಿಗೆ ಅಂದು ಕುರ್ಚಿಯಲ್ಲಿ ಕುಳಿತುಕೊಳ್ಳಲೂ ಕಷ್ಟವಾಗಿತ್ತು. ಆದರೆ “ರಾಷ್ಟ್ರಧ್ವಜವನ್ನು ಹಾರಿಸಿ, ಸ್ವಾತಂತ್ಯ್ರದ ಹೋರಾಟಕ್ಕೆ ಕರೆ ಕೊಡುವುದು ನನ್ನ ಕರ್ತವ್ಯ” ಎಂದರು ಅವರು. ಜತೀಂದ್ರರ ಪರವಾಗಿ ಕಲ್ಕತ್ತೆಯ ಉಪಮೇಯರ್ ರವರೇ ಅವರ  ಭಾಷಣವನ್ನು ಓದಿದರು.

ಜತೀಂದ್ರರು ಭಾಷಣದಲ್ಲಿ, “ಬ್ರಿಟಿಷರ ಧ್ವಜಕ್ಕೆ ನಾನು ಅಪಮಾನ ಮಾಡುತ್ತಿಲ್ಲ. ಆದರೆ ಆ ಧ್ವಜವನ್ನು ನಮ್ಮ ದೇಶದಲ್ಲಿ, ನಮ್ಮ ಕಟ್ಟಡಗಳ ಮೇಲೆ ಹಾರಿಸುವುದೆಂದರೆ ನಮಗೆ ಅಪಮಾನ. ನಮ್ಮ ಕಾರ್ಪೊರೇಷನ್ ಕಟ್ಟಡದ ಮೇಲೆ ನಮ್ಮ ಧ್ವಜವೇ ಹಾರಾಡಬೇಕು” ಎಂದರು. ಮಾರನೆಯ ದಿನ ಅವರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಸಾರ್ವಜನಿಕ ಸಮಾರಂಭದಲ್ಲಿ ಧ್ವಜವನ್ನು ಹಾರಿಸಿದರು.

ಎಲ್ಲಿ ವಿಶ್ರಾಂತಿ?

ಸಮುದ್ರಯಾನ ಅವರಿಗೆ ಒಳ್ಳೆಯದು ಎಂದು ವೈದ್ಯರು ಹೇಳಿದ್ದರು. ಆದ್ದರಿಂದ ಜತೀಂದ್ರರು ಸಿಂಗಪುರಕ್ಕೆ ಹೋಗಿಬರಲು ನಿರ್ಧರಿಸಿದರು.

ಈ ಪ್ರಯಾಣದಿಂದ ಅವರ ಆರೋಗ್ಯ ಸುಧಾರಿಸುವ ಆಸೆ ಎಲ್ಲರಿಗೂ ಇತ್ತು. ಫೆಬ್ರವರಿ ೩ ರಂದು ಅವರ ಹಡಗು ರಂಗೂನ್ ತಲಪಿದಾಗ ಅಲ್ಲಿಯ ಜನರು ಜತೀಂದ್ರರನ್ನು ಭಾಷಣ ಮಾಡುವಂತೆ ಕೇಳಿಕೊಂಡರು. ಜತೀಂದ್ರರು ಅವರಿಗೆ ಭಾರತಕ್ಕೆ ಮರಳುವ ಸಂದರ್ಭದಲ್ಲಿ ರಂಗೂನಿಗೆ ಬಂದಾಗ ಭಾಷಣ ಮಾಡುವುದಾಗಿ ಭರವಸೆಯಿತ್ತರು.

ಅಂತೆಯೇ ರಂಗೂನಿಗೆ ಪುನಃ ಫೆಬ್ರವರರಿ ೧೮ರಂದು ಬಂದಾಗ ಅವರಿಗೆ ಭವ್ಯ ಸ್ವಾಗತ ದೊರೆಯಿತು.

ಭಾರತದಿಂದ ಬರ್ಮ ದೇಶವನ್ನು ಬೇರ್ಪಡಿಸಿದ್ದೇ ಆದರೆ ಸ್ವಾತಂತ್ಯ್ರ ಹೋರಾಟದ ಪ್ರಗತಿಗೆ ಧಕ್ಕೆಯಾಗುತ್ತದೆ. ಸ್ವಾತಂತ್ಯ್ರ ಪಡೆಯಲು ಬರ್ಮಿಯರು ಪ್ರತ್ಯೇಕವಾಗಿ ಬ್ರಿಟಿಷರ ವಿರುದ್ಧ ಹೋರಾಡಬೇಕಾಗುತ್ತದೆ. ಆಗ ಸ್ವಾತಂತ್ಯ್ರ ದೊರೆಯುವುದು ತುಂಬ ಕಷ್ಟ. ಆದ್ದರಿಂದ ಏನೇ ಆದರೂ ಬ್ರಿಟಿಷರ ಒತ್ತಾಯಕ್ಕೆ ಮಣಿದು ಭಾರತದಿಂದ ಬೇರ್ಪಡಲು ಒಪ್ಪದಿರಿ” ಎಂದು ಬರ್ಮಿಯರಿಗೆ ಕರೆಕೊಟ್ಟರು.

ಅವರು ಮಾಡಿದ ಮೂರು ಭಾಷಣಗಳನ್ನು ಸರ್ಕಾರದ ಗುಪ್ತಿ ಇಲಾಖೆಯವರು ಬರೆದುಕೊಂಡಿದ್ದರು. ಅನಂತರ ಸರ್ಕಾರ ಜತೀಂದ್ರರನ್ನು ಬಂಧಿಸಲು ಅಗತ್ಯ ಏರ್ಪಾಟುಗಳನ್ನು ಮಾಡಿತು.

ಮಾರ್ಚ್ ೧೩ ರಂದು ಜತೀಂದ್ರರು ಕಲ್ಕತ್ತೆಯ ತಮ್ಮ ನಿವಾಸದಲ್ಲಿ ಕುಳಿತಿದ್ದರು. ಅಲ್ಲಿಗೆ ಕಲ್ಕತ್ತೆಯ ಪೋಲಿಸ್ ಕಮಿಷನರ್ ಮತ್ತು ಇಬ್ಬರು ಬರ್ಮಿ ಪೊಲೀಸರು ಬಂದರು. ಅವರಿಂದ ತಾವು ಬರ್ಮಕ್ಕೆ ಸೆರೆಯಾಳಾಗಿ ಹೋಗಬೇಕೆಂದು ತೊಳಿಯಿತು. ಚಕಿತರಾದ ಜತೀಂದ್ರರು ಜಾಮೀನಿನ ಮೇಲೆ ಬುಡುಗಡೆ ಹೊಂದಲು ನಿರಾಕರಿಸಿದರು.

ಪತಿಯೊಡನೆ ಹೋಗಲು ನೆಲ್ಲಿಗೆ ಅವಕಾಶ ಕೊಡಲಿಲ್ಲ. “ಅವರ ಆರೋಗ್ಯ ಸರಿಯಿಲ್ಲ. ನಾನು ಅವರ ಬಳಿ ಇರುವುದು ಅತ್ಯಗತ್ಯ. ಆದ್ದರಿಂದ ದಯವಿಟ್ಟು ಅವಕಾಶಕೊಡಿ” ಎಂದು ಅವರು ಎಷ್ಟು ಕೇಳಿಕೊಂಡರೂ ಉಪಯೋಗವಾಗಲಿಲ್ಲ.

ಮಾರ್ಚ್ ೧೭ ರಂದು ಜತೀಂದ್ರರಿದ್ದ ಹಡಗು ರಂಗೂನಿಗೆ ಬಂತು. ಅವರನ್ನು ಸ್ವಾಗತಿಸಲು ನೆರೆದಿದ್ದ ಜನರ ಸಂಖ್ಯೆಯನ್ನು ನೋಡಿ ಅಲ್ಲಿನ ಪೋಲೀಸ್ ಅಧಿಕಾರಿ ಗಾಬರಿಗೊಂಡ. ಅದಕ್ಕಾಗಿ ಆತ ಜತೀಂದ್ರರನ್ನು ಬಂದರು ಕಟ್ಟೆಯಿಂದ ಬೇರೊಂದು ಮಾರ್ಗದಲ್ಲಿ ಕರೆದೊಯ್ಯಲು ಏರ್ಪಾಟು ಮಾಡಿದ.

ಜತೀಂದ್ರರನ್ನು ನ್ಯಾಯಾಧೀಶ ಕಾಲಿಸ್ ರ ಮನೆಗೆ ಕರೆದುಕೊಂಡು ಹೋದರು. ಕಾಲಿಸ್ ತುಂಬ ಒಳ್ಳಯೆ ವ್ಯಕ್ತಿ. ಅವರಿಗೆ ವಾಸ್ತವವಾಗಿ ಜತೀಂದ್ರರ ಭಾಷಣದಲ್ಲಿ ಅಪರಾಧವೆನಿಸುವ ಮಾತುಗಳೇನೂ ಕಂಡುಬರಲಿಲ್ಲ. ಆದರೆ ಬರ್ಮದ ಗವರ್ನರರ ಒತ್ತಾಯದ ಕಾರಣ ಅವರು ಅನಿರ್ವಾಯವಾಗಿ ಆ ಪತ್ರಕ್ಕೆ ಸಹಿ ಹಾಕಿದರು.

ಕಾಲಿಸ್ ಜತೀಂದ್ರರನ್ನು ಕೇಳಿದರು:

“ನಾಳೆ ಬೆಳಿಗ್ಗೆ ೧೧ ಗಂಟೆಗೆ ನಿಮ್ಮ ವಿಚಾರಣೆಯಿದೆ. ನೀವು ಜಾಮೀನಿನ ಮೇಲೆ ಬಿಡುಗಡೆ ಹೊಂದಲು ಏಕೆ ಒಪ್ಪುವುದಿಲ್ಲ”?

“ಭಾರತೀಯ ಸತ್ಯಾಗ್ರಹಿಗಳ ವಿಚಾರಣೆ ನಡೆಸಲು ಬ್ರಿಟಿಷ್ ನ್ಯಾಯಾಲುಗಳಿಗೆ ಅಧಿಕಾರವಿಲ್ಲ. ಜಾಮೀನು ಕೊಟ್ಟು ಬಿಡುಗಡೆ ಹೊಂದಿದರೆ ನಿಮ್ಮ ನ್ಯಾಯಾಲಯಗಳಿಗೆ ಮನ್ನಣೆ ಕೊಟ್ಟಂತೆ. ಆದ್ದರಿಂದ ನಾವೂ ಯಾರೂ ಜಾಮೀನು ಕೊಡಲು ಒಪ್ಪುವದಿಲ್ಲ”.

ಮಾರನೆಯ ದಿನ ವಿಚಾರಣೆ ನಡೆದಾಗ ಜತೀಂದ್ರರು ಅಎರತ್ತ ಲಕ್ಷ್ಯ ಕೊಡದಂತೆ ಕುಳಿತಿದ್ದರು. ತಮ್ಮದು ತಪ್ಪಿಲ್ಲವೆಂದು ಹೇಳಲೂ ಇಲ್ಲ.

ಜತೀಂದ್ರರಿಗೆ ಶಿಕ್ಷೆ ವಿಧಿಸಲೇಬೇಕಿತ್ತು. ಆದ್ದರಿಂದ ೧೦ ದಿನಗಳ ಸೆರಮನೆವಾಸವನ್ನು ಒಂದು ಸಣ್ಣ “ಅಪರಾಧ”ಕ್ಕೆಂದು ವಿಧಿಸಿದರು. ಜನರನ್ನು ಸರ್ಕಾರದ ವಿರುದ್ದ ಪ್ರಚೋದಿಸಿದುದೇ ಆ “ಅಪರಾಧ”.

ಮತ್ತೆ ಬಂಧನ

೧೯೩೦ರ ಮಾರ್ಚ್ ೧೨ರಂದು ಗಾಂಧೀಜಿ ಕಾಯಿದೆ ಭಂಗದ ಚಳವಳಿಯನ್ನು ಉದ್ಘಾಟಿಸಿದರು. ಸರಕಾರ ಮಾಡಿದ ಕಾಯಿದೆಗಳನ್ನು ಉಲ್ಲಂಘಿಸುವುದೇ ಈ ಚಳುವಳಿಯ ಉದ್ದೇಶ.

ಜತೀಂದ್ರರು ರಂಗೂನಿನಿಂದ ಏಪ್ರಿಲ್ ೩ ರಂದು ಕಲ್ಕತ್ತಕ್ಕೆ ಹಿಂತಿರುಗಿದರು. ಹಲವು ವಿದ್ಯಾರ್ಥಿಗಳು ಒಂದು ಕಾಯಿದೆ ಭಂಗದ ಚಳವಳಿಯ ಭಾಗವಾಗಿ ಒಂದು ಕಾರ್ಯಕ್ರಮ ನಡೆಸಲು ಜತೀಂದ್ರರ ಅನುಮತಿ ಬೇಡಿದರು. ಸರ್ಕಾರ ಬಹಿಷ್ಕರಿಸಿದ ಪುಸ್ತಕಗಳನ್ನು ಸಾರ್ವಜನಿಕ ಸ್ಥಳದಲ್ಲಿ ಓದುವುದೇ ಆ ಕಾರ್ಯಕ್ರಮ. 

ನಾವು ಯಾರೂ ಜಾಮಿನು ಕೊಡಲು ಒಪ್ಪುವುದಿಲ್ಲ

ಜತೀಂದ್ರರ ಆರೋಗ್ಯದ ದೃಷ್ಟಿಯಿಂದ ಅವರು ಚಳವಳಿಯಲ್ಲಿ ಭಾಗವಹಿಸುವಂತಿರಲಿಲ್ಲ. ಆದರೆ ಯಾರ ಮಾತೂ ಕೇಳದೆ ಅವರೂ ಏಪ್ರಿಲ್ ೧೨ರಂದು ಚಳವಳಿ ನಡೆಸಿ ಬಂಧಿತರಾದರು.

ಸೆಪ್ಟೆಂಬರ್ ೨೫ರಂದು ಅವರ ಬಿಡುಗಡೆಯಾದಾಗ ರಾಷ್ಟ್ರನಾಯಕರೆಲ್ಲ ಸೆರೆಯಲ್ಲಿದ್ದರು. ಆದ್ದರಿಂದ ಜತೀಂದ್ರರು ಭಾರತದಾದ್ಯಂತ ಪ್ರವಾಸ ಮಾಡಿದರು. ಇದರಿಂದ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು.

ಅಕ್ಟೋಬರ್ ೨೫ರಂದು ಜಲಿಯನವಾಲಾ ಬಾಗ್ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದರೆಂದು ಅವರಿಗೆ ಒಂದು ವರ್ಷ ಸೆರೆಮನೆಯ ಶಿಕ್ಷೆಯಾಯಿತು.

ಲಾರ್ಡ್ ಇರ್ವಿನ್ ಎಂಬ ಬ್ರಿಟಿಷ್ ವೈಸ್ ರಾಯ್ (ಭಾರತ ಸರ್ಕಾರದ ಪ್ರಮುಖ) ಮತ್ತು ಗಾಂಧೀಜಿಯವರ ನಡುವೆ ಒಂದು ಒಪ್ಪಂದವಾಯಿತು. ಅದರಂತೆ  ಬಂಧಿತರಾಗಿದ್ದ ಅಹಿಂಸಾವಾದಿಗಳಾದ ಸತ್ಯಾಗ್ರಹಿಗಳ ಬಿಡುಗಡೆಯಾಯಿತು. ಜತೀಂದ್ರರೂ ಬಿಡುಗಡೆ ಮಾಡಲ್ಪಟ್ಟರು. ಸ್ವಾತಂತ್ಯ್ರದ ಬಗ್ಗೆ ಬ್ರಿಟಿಷರೊಡನೆ ಮಾತುಕತೆಗಾಗಿ ಗಾಂಧೀಜಿ ಲಂಡನ್ನಿಗೆ ತೆರಳಿದರು.

ದುರಂತ ಮಾಲಿಕ

೧೯೩೧ರ ಆಗಸ್ಟ್ ನಲ್ಲಿ ಬಂಗಾಳದ ಅನೇಕ ಜಿಲ್ಲೆಗಳು ತೀವ್ರ ಪ್ರವಾಹಕ್ಕೆ ಸಿಲುಕಿದವು. ಜತೀಂದ್ರರು ಪ್ರವಾಹ ಪೀಡಿತರಿಗೆ ನೆರವು ನೀಡಲು ಅತ್ತ ಧಾವಿಸಿದರು. ಪರಿಹಾರ ಕಾರ್ಯಗಳಿಗೆ ಒಂದು ಸಮಿತಿಯ ನೇಮಕವಾಯಿತು. ಜತೀಂದ್ರರು ಸಂಕಟಕ್ಕೆ ಗುರಿಯಾದವರನ್ನು ಸಂತೈಸಿ ಅವರಲ್ಲಿ ಧೈರ್ಯವನ್ನು ತುಂಬತೊಡಗಿದರು. ಈ ವೇಳೆಯಲ್ಲಿಯೇ ಕಲ್ಕತ್ತೆಯಲ್ಲಿ ಒಂದು ದುರ್ಘಟನೆ ನಡೆಯಿತು. ಒಬ್ಬ ಮುಸ್ಲಿಮ್ ಪೊಲೀಸ್ ಅಧಿಕಾರಿಯ ಹತ್ಯೆ ಕೋಮುವಾರು ಗಲಭೆಗಳಿಗೆ ಕಾರಣವಾಯಿತು. ಚಿತ್ತಗಾಂಗಿನಲ್ಲಿ ಹಿಂದು ಮನೆಗಳು ಲೂಟಿಮಾಡಲ್ಪಟ್ಟವು. ಸುದ್ದಿ ತಿಳಿದ ಕೂಡಲೇ ಜತೀಂದ್ರರು ಇತ್ತ ಧಾವಿಸಿ ಬಂದರು.

ಗಾಬರಿಗೀಡಾಗಿದ್ದ ಜನರಿಗೆ ಜತೀಂದ್ರರ ಆಗಮನ ಸಮಾಧಾನ ತಂದಿತು. ಅವರು ಸರ್ಕಾರದಿಂದ ಮತ್ತೆ ಅಂಗಡಿಗಳ ಬಾಗಿಲುಗಳನ್ನು ತೆರೆದರು. ಜನಜೀವನ ಕ್ರಮೇಣ ಮೊದಲಿನಂತೆಯೇ ಇರತೊಡಗಿತು.

ಗಲಭೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜತೀಂದ್ರರು ನಿರ್ಧರಿಸಿದರು. ತೊಂದರೆಗೀಡಾಗಿದ್ದ ಜನರನ್ನು ಭೇಟಿಮಾಡಿ ವಿಷಯ ಸಂಗ್ರಹಿಸಿದರು. ಇದಕ್ಕಾಗಿ ಅವರು ಹಳ್ಳಿಹಳ್ಳಿಗೂ ತುರುಗಿಸಿದರು. ಎಷ್ಟೋ ಕಡೆ ವಾಹನ ಸೌಲಭ್ಯವಿದಲ್ಲದೆ ನಡೆದೇ ಹೋಗಬೇಕಿತ್ತು. ಈ ಶ್ರಮದಿಂದ ತಮ್ಮ ಆರೋಗ್ಯಕ್ಕೆ ಆಗುವ ಹಾನಿಯನ್ನೂ ಅವರು ಲೆಕ್ಕಿಸಲಿಲ್ಲ.

ಈ ಎರಡು ದುರಂತಗಳು ಸಾಲದು ಎಂಬಂತೆ ಮತ್ತೊಂದು ದುರ್ಘಟನೆ ನಡೆಯಿತು. ಹಿಜ್ಲಿ ಎಂಬಲ್ಲಿ ರಾಜಕೀಯ ಖೈದಿಗಳನ್ನು ಸೆರೆಯಲ್ಲಿಡಲಾಗಿತ್ತು. ಈ ಖೈದಿಗಳ ಮೇಲೆ ೧೯.೯.೧೯೩೧ರಂದು ಗುಂಡುಹಾರಿಸಿದ ಪರಿಣಾಮವಾಗಿ ಇಬ್ಬರು ಸತ್ತಿದ್ದರು, ಹತ್ತು ಜನ ಗಾಯಗೊಂಡಿದ್ದರು.

ಜತೀಂದ್ರರು ಮಾರನೆಯ ದಿನ ಅಲ್ಲಿಗೆ ಹೋದರು. ಆದರೆ ಅವರನ್ನು ಸೆರೆಮನೆಯೊಳಗೆ ಬಿಡಲಿಲ್ಲ. ಅವರು ಸತ್ತತವರ ಶರೀರಗಳನ್ನು ಕಲ್ಕತ್ತೆಗೆ ಸಾಗಿಸಲು ಏರ್ಪಾಟು ಮಾಡಿದರು. ಅನಂತರ ಆಸ್ಪತ್ರೆಗೆ ಹೋಗಿ ಗಾಯಗೊಂಡಿದ್ದವರನ್ನು ವಿಚಾರಿಸಿಕೊಂಡರು.

ಇಗ್ಲೆಂಡಿಗೆ

ಹೀಗೆ ಬಿಡುವಿಲ್ಲದೆ ದುಡಿದುದರಿಂದ ಅವರ ಆರೋಗ್ಯ ತುಂಬಾ ಕೆಟ್ಟಿತು. ಸಮುದ್ರಯಾನ ಕೈಗೊಂಡು ವಿಶ್ರಾಂತಿ ಪಡೆಯುವಂತೆ ಅವರ ಸ್ನೇಹಿತರು ಸಲಹೆ ಮಾಡಿದರು.

ಆದರೆ ಅವರು ಈಗ ಆದಾಯವೇ ಇಲ್ಲದೆ ತುಂಬ ಕಷ್ಟದಲ್ಲಿದ್ದರು. ರಾಜಕೀಯ ಕಾರ್ಯಕ್ರಮಗಳಿಂದಾಗಿ ಸಂಪಾದನೆಗೆ ವೇಳೆಯೇ ಇರಲಿಲ್ಲ. ಅವರಿಂದ ಸಾಲ ಪಡೆದಿದ್ದ ಎಷ್ಟೋ ಮಂದಿ ಸಾಲಿ ಹಿಂತಿರುಗಿಸಲಿಲ್ಲ. ಅವರನ್ನು ಒತ್ತಾಯಪೂರ್ವಕವಾಗಿ ಕೇಳಲು ಜತೀಂದ್ರರೂ ಒಪ್ಪಲಿಲ್ಲ.

ಅದೂ ಅಲ್ಲದೆ, ದೇಶದಲ್ಲಿ ಪರಿಸ್ಥಿತಿ ತೃಪ್ತಿಕರವಾಗಿರಲಿಲ್ಲ. ಅಂತಹ ಸಮಯದಲ್ಲಿ ವಿದೇಶಕ್ಕೆ ಹೋಗಲು ಜತೀಂದ್ರರಿಗೂ ಮನಸ್ಸಿರಲಿಲ್ಲ. ಆದರೆ ಅವರ ಆರೋಗ್ಯ ದಿನದಿಂದ ದಿನಕ್ಕೆ ಕೆಡುತ್ತಿತ್ತು. ಹೀಗಾಗಿ ಅವರು ಒಂದಷ್ಟು ಕಾಲ ವಿಶ್ರಾಂತಿ ಪಡೆಯುವುದು ಅತ್ಯಗತ್ಯವಾಗಿತ್ತು.

ಜತೀಂದ್ರು ತಮ್ಮ ಜೀವವನ್ನು ವಿಮೆ ಮಾಡಿಸಿದ್ದರು. ಅಂದರೆ ಜತೀಂದ್ರರ ಜೀವಕ್ಕೆ ಏನಾದರೂ ಅಪಾಯ ಒದಗಿದಲ್ಲಿ ವಿಮೆ ಮಾಡಿಸಿದ ಕಂಪನಿಯು ನಿಗದಿಯಾದ ಹಣವನ್ನು ಅವರ ಕುಟುಂಬಕ್ಕೆ ಕೊಡುತ್ತಿತ್ತು.

ಈ ವಿಮೆಯ ಆಧಾರದ ಮೇಲೆ ಜತೀಂದ್ರರು ವಿಮಾ ಸಂಸ್ಥೆಯಿಂದ ಸಾಲ ತೆಗೆದುಕೊಂಡರು. ಈ ಸಾಲವೇ ಅವರ ಇಂಗ್ಲೆಂಡ್ ಪ್ರವಾಸದ ಖರ್ಚನ್ನು ಪೂರೈಸಿದ್ದು.

೧೯೨೧ ರ ಅಕ್ಟೋಬರ್ ನಲ್ಲಿ ಅವರು ಇಂಗ್ಲೆಂಡಿಗೆ ಹೊರಟರು. ಅವರ ಜೊತೆಯಲ್ಲಿ ನೆಲ್ಲಿ ಕೂಡ ಇದ್ದರು. ಈ ಪ್ರಯಾಣದಿಂದ ಅವರಿಗೆ ಅತ್ಯಗತ್ಯವಾಗಿದ್ದ ವಿಶ್ರಂತಿ ದೊರೆಯಿತು.

ಇಂಗ್ಲೆಂಡಿನಲ್ಲಿ ಜತೀಂದ್ರ – ನೆಲ್ಲಿಯರು ಶ್ರೀಮತಿ ಗ್ರೇ ಅವರ ಮನೆಗೆ ಹೋದರು. ಅನೇಕ ವರ್ಷಗಳ ನಂತರ ಬಂದ ಮಗಳು – ಅಳಿಯನನ್ನು ನೋಡಿ ಆಕೆಗೆ ತುಂಬಾ ಸಂತೋಷವಾಯಿತು.

ತನ್ನ ಅಳಿಯ ರಾಷ್ಟ್ರನಾಯಕನಾಗಿದ್ದು, ಮಗಳೂ ಸಹ ಭಾರತದ ಸ್ವಾತಂತ್ಯ್ರ ಹೋರಾಟಕ್ಕೆ ತನ್ನ ಅಳಿಲು ಸೇವೆ ಸಲ್ಲಿಸುತ್ತಿರುವುದು ಗ್ರೇಗೆ ತುಂಬಾ ಹೆಮ್ಮೆಯೆನಿಸಿತು. ಬ್ರಿಟಿಷರೊಡನೆ ಮಾತುಕತೆ ನಡೆಸಲು ಹೋಗಿದ್ದ ಗಾಂಧೀಜಿಯವರು ಇನ್ನೂ ಲಂಡನ್ನಿನಲ್ಲಿಯೇ ಇದ್ದರು. ಜತೀಂದ್ರರು ಅವರನ್ನು ಭೇಟಿ ಮಾಡಿದರು. ದುರಂತ ಮಾಲಿಕೆಯನ್ನು ಎದುರಿಸಲು ಜತೀಂದ್ರರು ಕೈಗೊಂಸ ಸಕಾಲಿಕ ಕ್ರಮಗಳನ್ನು ಗಾಂಧೀಜಿ ಪ್ರಶಂಸಿಸಿದರು. ಮತ್ತೆ ಜತೀಂದ್ರರು ಕೆಲಸ ಮಾಡಲು ಆರಂಭಿಸಿದರು. ಲಂಡನಿನಲ್ಲಿ ಹಲವಾರು ಕಡೆ ಭಾಷಣಗಳನ್ನು ಖಂಡಿಸಿದರು. “ಈಗ ಭಾರತೀಯರು  ಎಚ್ಚೆತ್ತಿದ್ದಾರೆ. “ನಮ್ಮನ್ನು ಆರು ಸಾವಿರ ಮೈಲಿಗಳ ದೂರದಲ್ಲಿರುವ ದೇಶ ಆಳುವುದು ಸಾಧ್ಯವಿಲ್ಲ” ಎಂದು ಬ್ರಿಟಿಷರಿಗೆ ತಿಳಿಸಲು ಆರಂಭಿಸಿದ್ದಾರೆ” ಎಂದು ಅವರು ಹೇಳಿದರು.

ಗಾಂಧೀಜಿ ಭಾರತಕ್ಕೆ ಹಿಂತಿರುಗಿದಾಗ ಅನೇಕ ನಾಯಕರು ಬಂಧನದಲ್ಲಿರುವುದು ತಿಳಿಯಿತು. ಇದು ಗಾಂಧೀಜಿ – ಇರ್ವಿನ್ ರ ನಡುವೆ ಆಗಿದ್ದ ಒಪ್ಪಂದಕ್ಕೆ ವಿರುದ್ಧವಾಗಿತ್ತು. ಇದನ್ನು ಪ್ರತಿಭಟಿಸಿ ಕೂಡಲೇ ಬಂಧಿತ ನಾಯಕರನ್ನು ಬಿಡುಗಡೆ ಮಾಡಬೇಕೆಂದು ಗಾಂಧೀಜಿ ಒಂದು ಹೇಳಿಕೆಯಿತ್ತರು. ಇದಕ್ಕಾಗಿ ಅವರನ್ನೂ ಬಂಧಿಸಿ ಯರವಾಡ ಸೆರೆಮನೆಗೆ ಕಳುಹಿಸಲಾಯಿತು.

ಭಾರತದ ಸ್ವಾತಂತ್ಯ್ರ ಹೋರಾಟದ ನಾಯಕರನೇಕರು ಸೆರೆಮನೆಯಲ್ಲಿದ್ದರು. ಈ ಎಲ್ಲ ಘಟನೆಗಳನ್ನು ಗಮನಿಸುತ್ತಿದ್ದ ಜತೀಂದ್ರರು ಕೂಡಲೇ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದರು.

ಬಂಧನ

ಇಟಾಲಿಯನ್ ಹಡಗೊಂದರಲ್ಲಿ ಭಾರತಕ್ಕೆ ಅವರು ಹೊರಟರು. ೧೯೩೨ ರ ಜನೆವರಿ ೨೦ ರಂದು ಅವರಿದ್ದ ಹಡಗು ಮುಂಬಯಿ ರೇವನ್ನು ತಲುಪಿತು. ಪೋಲಿಸರು ಕೂಡಲೇ ಹಡಗನ್ನೇರಿ ಜತೀಂದ್ರರನ್ನು ಬಂಧಿಸಲು ಯತ್ನಿಸಿದರು. ಆದರೆ ಹಡಗಿನ ಕ್ಯಾಪ್ಟನ್ ಅನುಮತಿ ಕೊಡಲಿಲ್ಲ. ಇಟಾಲಿಯನ್ ಹಡಗಿನ ಮೇಲೆ ಯಾರನ್ನೂ ಬಂಧಿಸಲು ಬ್ರಿಟಿಷರಿಗೆ ಅಧಿಕಾರವಿರಲಿಲ್ಲ. ಹೀಗಾಗಿ ಜತೀಂದ್ರರು ಹಡಗಿಳಿಯುವವರೆಗೂ ಪೋಲಿಸರು ಕಾಯಬೇಕಾಯಿತು. ಜತೀಂದ್ರರೊಡನೆ ಹೋಗಲು ನೆಲ್ಲಿಗೆ ಅವಕಾಶ ಕೊಡಲಿಲ್ಲ. ಅಷ್ಟೇಕೆ, ಅವರನ್ನು ಕರೆದೊಯ್ಯುತ್ತಿರುವ ಸ್ಥಳವನ್ನು ತಿಳಿಸಲೂ ಪೋಲಿಸರು ನಿರಾಕರಿಸಿದರು. ಡಾರ್ಜಲಿಂಗ್ ಒಂದು ಗಿರಿಧಾಮ. ಬೆಟ್ಟ ಹತ್ತಿದರೆ ಜತೀಂದ್ರರ ಆರೋಗ್ಯ  ಕೆಡುತ್ತಿತ್ತು. ಇದನ್ನರತೂ ಪೋಲಿಸರು ಅವರನ್ನು ಅಲ್ಲಿಗೆ ಕರೆದೊಯ್ದರು. ನಿರೀಕ್ಷಿಸಿದಂತೆ ಅವರ ಆರೋಗ್ಯ ಹದಗೆಟ್ಟಿತು. ತೀವ್ರ ತಲೆನೋವು ಆರಂಭವಾಯಿತು. ಕೂಡಲೇ ಅವರು ನೆಲ್ಲಿಗೆ ತಂತಿ ಕಳುಹಿಸಿ ಅವರನ್ನು ಬರಮಾಡಿಕೊಂಡರು.

ನೆಲ್ಲಿ ತನ್ನ ಪತಿಯ ದುಃಸ್ಥಿತಿಯನ್ನು ನೋಡಿ ತೀವ್ರ ಕಳವಳಗೊಂಡರು. ಬಂಗಾಳದ ಗವರ್ನರ್ ಮತ್ತು ಇತರ ಅಧಿಕಾರಿಗಳಿಗೆ ತಂತಿ ಸಂದೇಶ ಕಳುಹಿಸಿ, ಜತೀಂದ್ರ ಸ್ಥಿತಿಯನ್ನು ತಿಳಿಸಿದರು.

ಮಾರನೆಯ ದಿನ ಯುರೋಪಿಯನ್ ವೈದ್ಯರು ಬಂದು ಜತೀಂದ್ರರನ್ನು ಪರೀಕ್ಷಿಸಿದರು. ಅನಂತರ ಅವರನ್ನು ಅಲ್ಲಿಂದ ಜಲಪೈಗುರಿ ಎಂಬಲ್ಲಿಗೆ ವರ್ಗಾಯಿಸಲಾಯಿತು. ವಿಚಾರಣೆಯೇ ಇಲ್ಲದೆ ಅವರನ್ನು ಸೆರೆಯಲ್ಲಿಟ್ಟ ಕಾರಣ ಅವರ ಕುಟುಂಬಕ್ಕೆ ಒಂದು ಸಾವಿರ ರೂಪಾಯಿಗಲ ಮಾಸಾಶನವನ್ನು ಸರ್ಕಾರ ಕೊಟ್ಟಿತು. ಸುಮಾರು ಒಂಧು ವರ್ಷವಾದ ಮೇಲೆ, ಅಂದರೆ ೧೯೩೩ ರಲ್ಲಿ, ಅವರನ್ನು ಕಲ್ಕತ್ತೆಯ ಆಸ್ಪತ್ರೆಗೆ ಕಳುಹಿಸಿದರು.

೧೯೩೩ ರಲ್ಲಿ ಕಾಂಗ್ರೆಸ್ ಅಧಿವೇಶನ ಕಲ್ಕತ್ತೆಯಲ್ಲಿ ನಡೆಯಬೇಕೆಂದು ತೀರ್ಮಾನವಾಗಿತ್ತು. ಈ ವೇಳೆಗೆ ಅದರ ಅಧ್ಯಕ್ಷರನ್ನೂ ಕಾರ್ಯಕಾರಿ ಸಮಿತಿಯ ಬೇರೆಯವರು ಆಯ್ಕೆಯಾದರೆ ಸರ್ಕಾರ ಅವರನ್ನೂ ಬಂಧಿಸುತ್ತಿತ್ತು.

ಇಂತಹ ಸನ್ನಿವೇಶದಲ್ಲಿ ಜನತೆ ನೆಲ್ಲಿಯನ್ನು ಕಾಂಗ್ರೆಸ್ ಅಧ್ಯಕ್ಷೆಯಾಗುವಂತೆ ಪ್ರಾಥಿ೯ಸಿದರು. ಇದರಿಂದ ಬಂಧಿತರಾಗುವ ಸಂಭವವಿದ್ದರೂ ನೆಲ್ಲಿ ಒಪ್ಪಿದರು. ನಿರೀಕ್ಷಿಸಿದಂತೆ ಬಂಧಿತರಾದರು.

ಪೋಲಿಸ್ ಅಧಿಕಾರಿಯು, “ಅಗತ್ಯ ಬಿದ್ದಾಗ ನ್ಯಾಯಾಲಯಕ್ಕೆ ಬರುವೆ” ಎಂದು ಮುಚ್ಚಳಿಕೆ ಬರೆದು ಕೊಟ್ಟರೆ ಬಿಡುಗಡೆ ಮಾಡುವುದಾಗಿ ತಿಳಿಸಿದ. ಜತಿಂದ್ರರ ಸಲಹೆಯಂತೆ ಆಕೆ ಆ ರೀತಿ ಬರೆದು ಕೊಡಲು ನಿರಾಕರಿಸಿದರು. ಕೆಲರು ದಿನಗಳ ನಂತರ ಆಕೆಯ ಬಿಡುಗಡೆಯಾಯಿತು.

ಧೀರ ಚೇತನ ಇನ್ನಿಲ್ಲ

೦೫.೦೬.೧೯೩೩ರಂದು ಜತೀಂದ್ರರನ್ನು ಕಲ್ಕತ್ತೆಯಿಂದ ರಾಂಚಿಗೆ ಕರೆದೊಯ್ದರು. ಅಲ್ಲಿ ಅವರನ್ನು ಗೃಹಬಂಧನದಲ್ಲಿಟ್ಟರು. ಗೃಹಬಂಧನವೆಂದರೆ ಮನೆಯಲ್ಲಿ ಹೊರಗೆ ಹೊಗಬೇಕಿದ್ದರೆ ಪೋಲಿಸರ ಅನುಮತಿ ಬೇಕು. ಜತಿಂದ್ರರ ಜೊತೆಯಲ್ಲಿ ನೆಲ್ಲಿ ಮತ್ತು ಜತೀಂದ್ರರ ತಮ್ಮನ ಮಗಳು ಐಲೀನ್ – ಇವರಿಬ್ಬರಿರಲು ಅವಕಾಶ ದೊರೆಯಿತು. ಬೇರೆ ಯಾರನ್ನೂ ಭೇಡಿಮಾಡಲು ಅವಕಾಶವಿರಲಿಲ್ಲ. ಪೋಲಿಸ್ ಕಾವಲಿನಲ್ಲ ಆಗಾಗ ಬಂದಷ್ಟು ದೂರ ವಿಹರಿಸಿ ಬರಲು ಅವಕಾಶವಿತ್ತು.

ಈ ರೀತಿ ವಿಹಾರಕ್ಕೆ ಹೋದಾಗ ದಾರಿಯುದ್ದಕ್ಕೂ ಜನ ತಮ್ಮ ಪ್ರೀತಿಯ ನಾಯಕನನ್ನು ನೋಡುತ್ತ ನಿಲ್ಲುವರು. ಅವರೊಡನೆ ಒಂದು ಮಾತು ಆಡಲೂ ಅವಕಾಶವಿರದಿದ್ದುದು ಜತೀಂದ್ರ ಮನಸ್ಸಿಗೆ ತುಂಬಾ ಯಾತನೆಯನ್ನುಂಟು ಮಾಡುತ್ತಿತ್ತು. ಬೇರೆ ಯಾವ ವಿಧವಾದ ಸೌಲಭ್ಯಗಳೂ ಅವರಿಗೆ ಇರಲಿಲ್ಲ. ಸುಮಾರು ಒಂದೂವರೆ ವರ್ಷಗಳ ಕಾಲ ಸೆರೆಮನೆಯಲ್ಲಿ ಜತೀಂದ್ರರು ತುಂಬ ಕಷ್ಟ ಅನುಭವಿಸಿದರು. ಆ ಸಮಯದಲ್ಲಿ ರಕ್ತದ ಒತ್ತಡದ ಖಾಯಿಲೆ ಅವರನ್ನು ಬಾಧಿಸುತ್ತಲೇ ಇತ್ತು.

ಯಾವುದೇ ವಿಚಾರಣೆಯಿಲ್ಲದೆ ಯಾರನ್ನಾದರೂ ಸೆರೆಯಲ್ಲಿಡಲು ಸರ್ಕಾರ ೧೮೧೮ ರಲ್ಲಿ ಒಂದು ಆಜ್ಞೆ ಹೊರಡಿಸಿತ್ತು. ಅದರ ಪ್ರಕಾರ ಜತೀಂದ್ರರನ್ನೂ ಬಂಧಿಸಿದ್ದರು. ಯಾವಾಗಲಾದರೂ ಒಮ್ಮೊಮ್ಮೆ ಅವರ ಬಂಧುಗಳಿಗೆ ಅವರನ್ನೂ ನೋಡಲು ಅವಕಾಶ ಸಿಗುತ್ತಿತ್ತು.

೧೯೩೩ ರ ಜುಲೈ ೨೨, ಎಂದಿನಂತೆ ಅಂದೂ ಜತೀಂದ್ರರು ವಾಯುವಿಹಾರಕ್ಕೆ ಹೊರಟರು. ಮಾರ್ಗ ಮಧ್ಯದಲ್ಲಿ ಕಾರಿನಿಂದಿಳಿದು ಸ್ವಲ್ಪ ಹೊತ್ತು ಹಾಕಿ ಆಟವನ್ನು ನೋಡಿದರು.

ಅಂದು ಅವರಿಗೆ ಬೆಳಗಿಇಂದಲೂ ತೀವ್ರವಾದ ತಲೆನೋವು ಬಾಧಿಸುತ್ತಿತ್ತು. ಅಂದು ರಾತ್ರಿ ಒಂದು ಹೊತ್ತಿನಲ್ಲಿ ಜತೀಂದ್ರರು ಇದ್ದಕ್ಕಿದ್ದಂತೆ ಕಿರುಚಿಕೊಂಡರು. ಕೂಡಲೇ ನೆಲ್ಲಿ ಮತ್ತು ಐಲೀನ್ ಇಬ್ಬರೂ ಅವರ ಬಳಿಗೆ ಓಡಿದರು. ಆ ವೇಳೆಗೆ ಜತೀಂದ್ರರು ಪ್ರಜ್ಞಾಶೂನ್ಯರಾಗಿದ್ದರು.

ಸ್ವಲ್ಪ ಸಮಯದಲ್ಲಿಯೇ ಬಂದ ವೈದ್ಯರು ಅವರ ರಕ್ತನಾಳವನ್ನು ಕತ್ತಿರಿಸಿ ರಕ್ತದ ಒತ್ತಡ ಕಡಿಮೆಮಾಡಲು ಯತ್ನಿಸಿದರು. ಆ ಸಮಯದಲ್ಲಿ ರಕ್ತದ ಒತ್ತಡ ಎಷ್ಟಿತ್ತೆಂದರೆ ನಾಳವನ್ನು ಕತ್ತರಿಸಿದಾಗ ರಕ್ತ ಎದುರು ಗೋಡೆಯ ಮೇಲೆ ಚಿಮ್ಮಿತು!

ಜತೀಂದ್ರರಿಗೆ ಮರಳಿ ಪ್ರಜ್ಞೆ ತರಿಸಲು ವೈದ್ಯರು ತುಂಬ ಶ್ರಮಿಸಿದರು. ಆದರೂ ಫಲಕಾರಿಯಾಗದೆ ಸುಮಾರು ೫ ಗಂಟೆಗಳ ನಂತರ, ಅಂದರೆ ೧೯೩೩ ರಜುಲ್‌ಐ ಇಪ್ಪತ್ತಮೂರರಂದು ಬೆಲಗಿನ ಜಾವ ಜತೀಂದ್ರರರು ಅನು ನೀಗಿದರು. ಆಗ ಅವರಿಗೆ ೪೮ ವರ್ಷ ವಯಸ್ಸು.

ಜತೀಂದ್ರರ ನಿಧನದ ವಾರ್ತೆ ಮಿಂಚಿನಂತೆ ಹರಡಿತು. ಅವರ ಪಾರ್ಥಿವ ಶರೀರವನ್ನು ಕಲ್ಕತ್ತೆಗೆ ಸಾಗಿಸಲು ವಿಶೇಷವಾದ ರೈಲಿನಲ್ಲಿ ಏರ್ಪಾಟಾಯಿತು. ರಾಂಚಿಯಿಂದ ಕಲ್ಕತ್ತೆಯವರೆಗೆ ದಾರಿಯುದ್ದಕ್ಕೂ ಪ್ರತಿ ನಿಲ್ದಾಣದಲ್ಲಿಯೂ ಜನತೆ ರೈಲನ್ನು ನಿಲ್ಲಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದರು.

ಹೌರಾ ಪಟ್ಟಣದ ಪುರಸಭೆಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಯಿತು. ಅಸಂಖ್ಯಾತ ಜನ ಬಂದು ದರ್ಶನ ಪಡೆದರು.

ಅಲ್ಲಿಂದ ಅಂತಿಮ ಯಾತ್ರೆ ಕಲ್ಕತ್ತೆಯತ್ತ ಹೊರಟಿತು. ಕೇವಲ ಅರ್ಧ ಮೈಲಿ ದೂರದ ಸೇತುವೆಯನ್ನು ದಾಟಲು ಮೆರವಣಿಗೆ ಒಂದು ಗಂಟೆಯ ಕಾಲ ಬೇಕಾಯಿತು! ಅಷ್ಟು ಜನ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದರು.

ಜತೀಂದ್ರರ ಮನೆಯ ಬಳಿಗೆ ಬಂದಾಗ ಅವರ ಅಂತಿಮ ದರ್ಶನ ಪಡೆಯಲು ಜತೀಂದ್ರರ ಮನೆಯವರಿಗೇ ಸರಿಯಾಗಿ ಅವಕಾಶವಾಗಲಿಲ್ಲ. ಆ ಜನಸಂದಣಿಯಲ್ಲಿ ಬರಲಾಗದೆ ಅವರು ಕಿಟಕಿಯಲ್ಲಿ ನೋಡಿ ಸಮಾಧಾನ ಪಟ್ಟುಕೊಳ್ಳಬೇಕಾಯಿತು. ಅಂತಿಮವಾಗಿ ಅವರ ದೇಹಕ್ಕೆ ಸಂಸ್ಕಾರ ಮಾಡಿದಾಗ ಮಾರನೆಯ ದಿನ ರಾತ್ರಿ ೯ ಗಂಟೆ ಮೀರಿತ್ತು.

ಭವ್ಯ ವ್ಯಕ್ತಿತ್ವ, ಭವ್ಯ ಜೀವನ

ಜತೀಂದ್ರರದು ರಾಜನಿಲುವು; ಆಕರ್ಷಕ ವ್ಯಕ್ತಿತ್ವ. ವಕೀಲರಾಗಿ ತುಂಬ ಮೆಚ್ಚುಗೆ, ಕೀರ್ತಿ ಗಲಿಸಿದರು. ಕ್ರೀಡೆಗಳಲ್ಲಿ ತುಂಬ ಆಸಕ್ತಿ ಹೊಂದಿದ್ದ ಅವರು ಮೇಯರ್ ಆಗಿದ್ದಾಗ ಕ್ರೀಡೆಗಳಿಗೆ ತುಂಬ ಪ್ರೋತ್ಸಾಹ ನೀಡಿದರು.

ತಮ್ಮ ತ್ಯಾಗ, ಧೀರ ನಿಲುವು ಇವುಗಳಿಂದ ಅವರು ಜನರ ಹೃದಯಗಳನ್ನು ಗೆದ್ದುಕೊಂಡರು. ಜನತೆ ಅವರನದನು ಪ್ರೇಮ ಪೂರ್ವಕವಾಗಿ “ವಂಗ ಕೇಸರಿ” ಎಂದು ಕರೆದರು. “ದೇಶಪ್ರಿಯ” ಎಂಬ ಬಿರುದನ್ನಿತ್ತರು.

ಇಂತಹ ಮಹಾನ್ ವ್ಯಕ್ತಿಗಳ ತ್ಯಾಗಮಯ ಜೀವನವನ್ನು ನಮಗೆ ಪದೇ ಪದೇ ನೆನಪಿಗೆ ತರುವ ಚಿರಸ್ಮರಣೀಯ ದಿನ.

ಅಗಸ್ಟ್ ೧೫.