ನಮ್ಮೀ ಜನಗಣಮನ ಅಧಿನಾಯಕ
ಎಲ್ಲಿದ್ದಾನೆ !

ಇದ್ದಾನೆ ; ಇಲ್ಲೇ ಇದ್ದಾನೆ ;
ಕೈಯಲಿ ಕಲ್ಲನು ಹಿಡಿದಿದ್ದಾನೆ
ಬೀದಿ ದೀಪಗಳ, ಕಿಟಕಿ ಗಾಜುಗಳ
ಒಡೆದಿದ್ದಾನೆ
ಬಸ್ಸಿಗೆ ಬೆಂಕಿ ಹಚ್ಚಿದ್ದಾನೆ
ಪುಸ್ತಕಗಳ ಎಸೆದಿದ್ದಾನೆ ಮರಗಳ ಮುರಿದಿದ್ದಾನೆ
ಹೂಗಳ ಹೊಸಕಿದ್ದಾನೆ.
ವರುಷಕ್ಕೊಂದೆರಡಾದರು ಲಂಕಾದಹನದ
ನಾಟಕ ಆಡುತ್ತಾನೆ.
ಸದಾ, ಎಚ್ಚರವಾಗಿದ್ದಾನೆ.
*     *     *
ನಮ್ಮೀ ಜನಗಣಮನ ಅಧಿನಾಯಕ
ಎಲ್ಲಿದ್ದಾನೆ ?

ಎಲ್ಲೆಲ್ಲೂ ಇದ್ದಾನೆ.
ನಂಬದೆ ಕರೆದರು, ಕರೆಯದೆ ಇದ್ದರು
ಕಂಬ ಕಂಬದಲಿ ಕೂತಿದ್ದಾನೆ
ಕೊಂಬೆಗು ಕೊಂಬೆಗು ನೆಗೆಯುತ್ತಾನೆ
ಗೋಸುಂಬೆಯ ಕೋಟನು ತೊಟ್ಟಿದ್ದಾನೆ
ಮುಖಕ್ಕೆ ಮೈಕನು ಕಟ್ಟಿದ್ದಾನೆ
ಮೇಲ್ ಮನೆಯಲ್ಲೂ ಕೆಳ ಮನೆಯಲ್ಲೂ
ಒಳಮನೆಯಲ್ಲೂ
ಆ ಅವನೇ ತುಂಬಿದ್ದಾನೆ.
ಪಂಜಾಬ ಸಿಂಧು ಗುಜರಾತ ಮರಾಠಾ
ದ್ರಾವಿಡ ಉತ್ಕಲ ವಂಗ
ಎಲ್ಲೆಲ್ಲೂ ಇವನೇ, ಈ
ಭೂಪತಿ ರಂಗ
*     *     *

ಎಚ್ಚರವಾಗಿರು, ನಮ್ಮೀ ಜನಗಣಮನ
ಅಧಿನಾಯಕ
ಇಲ್ಲೇ ಇದ್ದಾನೆ.
‘ಜಯಹೇ’ ಅನ್ನದೆ ಇದ್ದರೆ
ನಿನಗೂ, ನೀ ಯಾರೆಂಬುದ
ಕಾಣಿಸುತಾನೆ.