ಜಾನಪದ ಕ್ಷೇತ್ರದಲ್ಲಿ ಅಮೋಘ ಸೇವೆಯನ್ನು ಸಲ್ಲಿಸಿ ಖ್ಯಾತಿಗಳಿಸಿದ ವೀರಶೈವ ಪುಣ್ಯಪುರುಷರಾದ ಡಾ. ಬಿ.ಎಸ್‌. ಗದ್ದಗಿಮಠ ಅವರು ಹುಟ್ಟಿದ್ದು ಕೆರೂರ ಗ್ರಾಮದಲ್ಲಿ, ಬಿಜಾಪುರ ಜಿಲ್ಲೆಯ ಬದಾಮಿ ತಾಲೂಕಿನ ಚಿಕ್ಕಹಳ್ಳಿಯಿದು. ಶ್ರೀಮತಿ ಶಿವಗಂಗಾದೇವಿ ಮತ್ತು ಶ್ರೀ ಸಾವಳಿಗಯ್ಯನವರು ಇವರ ತಂದೆ-ತಾಯಿಗಳು. ಈ ದಂಪತಿಗಳು ಪುಣ್ಯಗರ್ಭದಲ್ಲಿ “ಚಿಪ್ಪಿನೊಳ್‌ಕಾಸಾರಂ ಪುಟ್ಟುವಂತೆ” ಬಸವರಾಜ (ಬಸಯ್ಯ) ಅವರು ಕ್ರಿ.ಶ. ೧೯೨೦ ರಲ್ಲಿ ಜನಿಸಿದರು. ಕೃಷಿಪ್ರಧಾನ ಮನೆತನ ಇವರದು. ಧರ್ಮದಲ್ಲಿ ಅಪಾರ ನಿಷ್ಠಾವಂತರಾಗಿ ತಮ್ಮ ಪಾಲಕರ ಜೀವನಾದರ್ಶಗಳನ್ನು ಸದಾಕಾಲ ಪಾಲಿಸುವ ಮನೋಭಾವವುಳ್ಳವರಾಗಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ಕೆರೂರನಲ್ಲಿ, ಮಾಧ್ಯಮಿಕ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪಡೆದರು. ಹೈಸ್ಕೂಲಿನಲ್ಲಿ ಓದುತ್ತಿರುವ ಸಂಧರ್ಭದಲ್ಲಿ ಬಸಯ್ಯನವರು ತಮ್ಮ ವಿಶಿಷ್ಟ ಜಾಣ್ಮೆಯಿಂದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಡಾ. ಡೇ ಅವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. “ಬೆಳೆಯುವ ಪೈರು ಮೊಳಕೆಯಲ್ಲಿ ನೋಡು” ಎಂಬಂತೆ ಆದರ್ಶ ವಿದ್ಯಾರ್ಥಿಯಾಗಿ ಸರ್ವ ಗುರುಗಳ ಪ್ರೀತಿಯ ಕಣ್ಮಣಿಯಾದರು. ಸ್ನಾತಕ ಪದವಿಯನ್ನು ಬೆಳಗಾಂವಿಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಮತ್ತು ಸ್ನಾತಕೋತ್ತರ ಪದವಿಯನ್ನು ಕೊಲ್ಲಾಪುರ ವಿಶ್ವವಿದ್ಯಾಲಯದಲ್ಲಿ ಪಡೆದರು. ಪ್ರೊ. ಕೆ.ಜಿ. ಕುಂದಣಗಾರ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಜಾನಪದ ಗೀತೆಗಳು’ ವಿಷಯ ಕುರಿತು ಡಾಕ್ಟರೇಟ ಪದವಿ ಪಡೆದ ಜಾನಪದ ಕ್ಷೀತಿಜದ ಆದ್ಯ ದಿಗ್ಗಜರೆನಿಸಿದರು.