ನಗರ ನಾಗರಿಕತೆಯ ರಭಸಮಯ ಗೊಂದಲದ ಸದ್ದು ಸೋಂಕದ ದೂರದ ಹಳ್ಳಿಯೊಂದರಲ್ಲಿ, ಮೂಡಣದ ಹಣೆಯಲ್ಲಿ ಬೆಳ್ಳಿಮೂಡಿ, ಹೊಲ ಗದ್ದೆಗಳ ಪೈರಿನ ಮೇಲೆ ತಂಗಾಳಿ ತೀಡಿ, ಮೌನ ಗರ್ಭಿತವಾದ ಮುಂಜಾವಿನಲ್ಲಿ ಕೋಳಿಯ ತುತ್ತೂರಿ ಮೊಳಗಿ ಬೆಳಕು ಮೂಡುವ ಹೊತ್ತಿನಲ್ಲಿ, ಮನೆಯೊಂದರಿಂದ ಬೀಸುವ ಕಲ್ಲಿನ ಗರಗಟದ ನಾದದೊಂದಿಗೆ ಅತಿ ಮಂಜುಳವಾದ ಹೆಣ್ಣು ದನಿಯೊಂದು ಅಲೆ ಅಲೆಯಾಗಿ ತೇಲಿಬರುತ್ತಿದೆ :

ಬೆಳಗಾಗ ನಾನೆದ್ದು ಯಾರ‍್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ |
ಎಳ್ಳುಜೀರಿಗೆ ಬೆಳೆಯೊಳ ಭೂಮಿತಾಯ
ಎದ್ದೊಂದು ಗಳಿಗೇ ನೆನೆದೇನ
(ಜನಪದಗೀತೆ : ಪು.೭)

ಎಂದು. ಮುಂಬೆಳಗಿನ ಪ್ರಶಾಂತ ಗಂಭೀರವಾತಾವರಣದಲ್ಲಿ ಬೀಸುಗಲ್ಲಿನ ನಾದದ ಜೊತೆಗೆ ತೇಲಿಬರುವ ಈ ಮಧುರವಾಣಿ ನಮ್ಮನ್ನು ವಿಸ್ಮಯಗೊಳಿಸುತ್ತದೆ. ಏನು ಹಾಡಿದು, ಯಾವ ಧಾಟಿಯಿದು, ಏನು ಮೋಡಿಯಿದು ! ಯಾವ ಪಂಡಿತ ಕವಿಯೂ ತನ್ನ ಕಾವ್ಯದಲ್ಲಿ, ಈ ಭೂಮಿತಾಯನ್ನು ಕಂಡಿಲ್ಲವಲ್ಲ. ಪಂಡಿತ ಕವಿಗಳು ಕಂಡ ‘ಭೂರಮೆ’ಯೋ ‘ವಿಷಯವನಿತೆಯೋ’ ಎಲ್ಲಿ? ಈ ಹಳ್ಳಿಯ ಹೆಣ್ಣುಮಗಳ ಹಾಡಿನಲ್ಲಿ ಮೈದೋರುವ ಎಳ್ಳು ಜೀರಿಗೆ ಬೆಳೆಯುವ ಭೂಮಿತಾಯಿ ಎಲ್ಲಿ ? ಈ ಹಾಡುಗಳನ್ನು ಬರೆದವರು ಯಾರು?

ಬರೆದವರು ಯಾರೋ – ಹೆಸರಿಲ್ಲದ, ಹೆಸರೊಲ್ಲದ ನೂರಾರು ಅಜ್ಞಾತ ಕವಿಗಳು! ಯಾವ ರಾಜಮಹಾರಾಜರ ಅರಮನೆಯ ನೆಳಲಿನ ಸೋಂಕೂ ಇಲ್ಲದ, ತಮ್ಮ ಹಾಡಿನ ಮಹತ್ತನ್ನು ತಾವೇ ತಿಳಿಯದ ಮುಗ್ಧ ಜನತೆ ಈ ಹಾಡುಗಳನ್ನು ಕಟ್ಟಿತು. ಈ ಹಾಡುಗಳ ಅಧಿದೈವ ಭೂಮಿತಾಯಿ; ಈ ಹಾಡುಗಳ ಸ್ಫೂರ್ತಿ ಕಾಯಕ. ಬೀಸುವಾಗ, ಕುಟ್ಟುವಾಗ, ನೆಡುವಾಗ, ಉಳುವಾಗ, ಕಳೆ ಕೀಳುವಾಗ, ಪೈರು ಕೊಯ್ಯುವಾಗ, ಕಾಳು ತೂರುವಾಗ, ತೊಟ್ಟಿಲನ್ನು ತೂಗುವಾಗ – ಮಾಡುವ ಕೆಲಸದೊಂದಿಗೇ ಮೂಡಿಬಂದ ಹಾಡುಗಳಿವು; ಕೆಲಸದೊಂದಿಗೆ ಮೂಡಿ ಮಾಡುವ ಕೆಲಸವನ್ನು ಹಗುರವನ್ನಾಗಿ ಮಾಡಿದ ಶಕ್ತಿಗಳಿವು. ಅಂದಂದಿನ ಅನುಭವಕ್ಕೆ ತಾನು ಕವಿ ಎಂಬ ಹೆಮ್ಮೆಯ ಸೋಂಕಿಲ್ಲದ ಜೀವ ಪಡಿಮಿಡಿದ ಕಿಡಿಗಳಿವು. ನೆಲಕ್ಕೆ ಹಸಿರು ಮೂಡುವಷ್ಟು ಸಹಜವಾಗಿ, ಮೋಡಕ್ಕೆ ಹನಿಯೊಡೆಯುವಷ್ಟು ಸಹಜವಾಗಿ, ಗಿಡಕ್ಕೆ ಹೂವರಳುವಷ್ಟು ಸಹಜವಾಗಿ ಮೂಡಿದ ಮುಕ್ತಕಗಳಿವು. ಶತಶತಮಾನಗಳಿಂದ ಎದೆಯಿಂದ ಎದೆಗೆ ಪರಂಪರಾಗತವಾಗಿ ಸಾಗಿಬಂದ ಅಚ್ಚಳಿಯದ ಆಸ್ತಿಗಳಿವು.

ಒಂದು ಕಡೆ ಪಂಡಿತರಿಗೂ ವಿವಿಧ ಕಳಾಮಂಡಿತರಿಗೂ ಪ್ರಿಯವಾದ ಪ್ರೌಢ ಕಾವ್ಯ ಅರಮನೆಯ ಮಹಾ ಕವಿಗಳಿಂದ ರಚಿತವಾಗುತ್ತಿದ್ದರೆ, ಮತ್ತೊಂದು ಕಡೆ ಮುಗ್ಧವಾದ ಜನತೆ ತನ್ನ ಸಾಮಾನ್ಯ ಶ್ರೀಮದನುಭವವನ್ನು ಜನಪದ ಗೀತೆಗಳಲ್ಲಿ ಮೂಡಿಸುತ್ತಿತ್ತು. ಇವುಗಳಲ್ಲಿ ಪಂಡಿತಪ್ರಿಯವಾದ ಸಂಸ್ಕೃತ ಭೂಯಿಷ್ಠ ಪದ ಚಮತ್ಕಾರಗಳಿಲ್ಲ; ಇಲ್ಲಿನ ಮಾತು ಜನಸಾಮಾನ್ಯರ ಆಡು ಮಾತು. ಇಲ್ಲಿ ಚಿತ್ರಿತವಾಗಿರುವುದು ರಾಜ ಮಹಾರಾಜರ ವಸಂತವಿಹಾರವೋ, ವಿಜಯಯಾತ್ರೆಯೋ ಅಲ್ಲ; ದೈನಂದಿನ ಸಾಮಾನ್ಯ ಸಂಗತಿ. ಇಲ್ಲಿ ಯಾವ ಅಷ್ಟಾದಶ ವರ್ಣನೆಗಳ ಸಂಪ್ರದಾಯದ ಬಂಧನವೂ ಇಲ್ಲ; ಇಲ್ಲಿರುವುದು ನಿಜವಾದ ಜೀವನದ ಅಕೃತಕವಾದ ನಿರೂಪಣೆ. ಈ ಅನುಭವ ಯಾವ ಸನ್ಮಾನ ಪ್ರಶಸ್ತಿಗಳ ಪ್ರೇರಣೆಯಿಂದಾಗಲೀ, ಬರೆಯುವುದಾದರೆ ನೀನೇ ಬರೆಯಬೇಕೆಂದು ‘ಪಂಡಿತರ್ ತಗುಳ್ದು ಬಿಚ್ಚಳಿಸೆ” ಕಾವ್ಯವಾದುದಲ್ಲ; ತುಂಬಿದ ಅನುಭವ ತನಗೆ ತಾನೇ ಬಿಡುಗಡೆಗೊಂಡು ತನಗರಿಯದೆಯೇ ಕಾವ್ಯವಾಗಿದೆ. ಬರೆದವರೂ ಬಹುಮಟ್ಟಿಗೆ ನಮ್ಮ ಅಕ್ಕ-ತಂಗಿ-ತಾಯಂದಿರು. ಹೆಣ್ತನದ ಮಾರ್ದವತೆಯಿಂದ ಮೂಡಿದ ಈ ಹಾಡುಗಳಲ್ಲಿ ವೈವಿಧ್ಯತೆಯಿದೆ; ಒಲವಿದೆ, ಚೆಲುವಿದೆ; ನಲವಿದೆ, ನವ್ಯತೆಯಿದೆ; ಸರ್ವಾಕರ್ಷಕ ಶಕ್ತಿಯಿದೆ.

ಬದುಕನ್ನು ಕುರಿತು, ಬದುಕಿನ ಎಲ್ಲ ಮುಖಗಳನ್ನು ಕುರಿತು, ಈ ಜನಪದ ಕವಿಗಳಿಗೆ ಆತ್ಮೀಯತೆ ಇದೆ. ಈ ಆತ್ಮೀಯತೆಗೆ ಆಧಾರ ಜೀವನ ಪ್ರೀತಿ. ಈ ಪ್ರೀತಿಯ ಬೆಳಕು ತುಳುಕುವುದು ತಾಯ್ತನದ ಕಣ್ಣುಗಳಿಂದ. ಪ್ರೀತಿಯ ಮಾತೃಹೃದಯ ಎಲ್ಲಕಡೆಯೂ ಆತ್ಮೀಯತೆಯಿಂದ ಒಂದಾಗಿ ಸೌಂದರ್ಯವನ್ನು ಕಾಣುತ್ತದೆ. ಕಂಡ ಚೆಲುವನ್ನು ತನ್ನ ಅನುಭವಗಳಿಂದ ಬಣ್ಣಿಸುತ್ತದೆ. ಪ್ರಕೃತಿಲೋಕದ, ಮಾನವಲೋಕದ ಮತ್ತು ತಾನು ಭಾವಿಸುವ ದೇವಲೋಕದ ಎಲ್ಲ ಚೇತನಗಳ ಬಗೆಗೂ ಈ ಜೀವ ನಂಟನ್ನು ನೇಯುತ್ತದೆ. ಬೆಳುದಿಂಗಳನ್ನು ಕಂಡು –

ಬಾರಯ್ಯ ಬೆಳುದಿಂಗಳೇ
ನಮ್ಮೂರ ಹಾಲಿನಂಥ ಬೆಳುದಿಂಗಳೇ

ಎನ್ನುತ್ತದೆ. ಬೆಳುದಿಂಗಳನ್ನು ಬದುಕಿನ ನಂಟನೆಂಬಂತೆ ಪ್ರೀತಿಯಿಂದ ‘ಬಾರಯ್ಯ’ ಎನ್ನುತ್ತದೆ. ತನ್ನ ಊರಿನ ಹಾಲಿನ ನೆನಪನ್ನು ತರುವ ಈ ಬೆಳುದಿಂಗಳು ಕವಿಯ ಅಕ್ಕರೆಯ ಆಹ್ವಾನದಲ್ಲಿ ಒಂದು ವ್ಯಕ್ತಿಯಾಗುತ್ತದೆ. ಗೌರಿ ಹಬ್ಬದ ಕತೆಯಲ್ಲಿಯೂ ಇದೇ ಆತ್ಮೀಯತೆ ಕಾಣುತ್ತದೆ. ಕೈಲಾಸದ ಮಹಾರಾಣಿಯಾದ ಪಾರ್ವತಿಗೆ ತನ್ನ ತೌರೂರಾದ ಭೂಲೋಕಕ್ಕೆ ಹೋಗಬೇಕೆಂದು ಆಸೆಯಾಯಿತಂತೆ. ಅವಳು ಶಿವನನ್ನು ಒಂದು ದಿನ ಕುರಿತು ಕೇಳಿದಳಂತೆ –

ಹರದಿ ಪಾರ್ವತಿದೇವಿ ಪರಮ ಸಂತೋಷದಲಿ
ಸರಸವಾಡುತ ತನ್ನ ಪುರುಷನೊಡನೆ
ವರ ಭಾದ್ರಪದ ಶುದ್ಧ ತದಿಗೆ ನಾಳೆ ದಿವಸ
ಅರಸರೇ ತೌರೂರಿಗ್ಹೋಗಿ ಬರುವೆ.
(ನಾಡಪದಗಳು : ಪು. ೧೯೬)

ಎಂದು. ಸರಿ, ಶಿವ ಅವಳನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿದನಂತೆ. ಪಾರ್ವತಿ ತೌರೂರಿಗೆ ಹೋಗಿಬರುತ್ತಾಳೆ. ಇದೊಂದು ಕಥನ ಕವನ. ಈ ಕವನದಲ್ಲಿ ಕವಿ ಒಂದು ತತ್ವವನ್ನು ಹೇಳಿದ್ದಾನೆ. ಹೇಳುವುದರಲ್ಲೂ ಅದನ್ನು ಅತಿ ಸರಳವಾಗಿ ಹೇಳಿದ್ದಾನೆ. ಪಾರ್ವತಿ ಕೈಲಾಸದ ಮಹಾರಾಣಿಯಾದರೂ ಮಣ್ಣಿನ ಮಗಳು; ಅವಳು ಲೋಕಮಾತೆಯಾದರೂ ತೌರೂರಿನ ಹಂಬಲವನ್ನು ತುಂಬಿಕೊಂಡ ಹೆಣ್ಣು! ಅವಳ ತೌರೂರು ಈ ಭೂಮಿ. ಅದರ ಮೇಲಿನ ಅಕ್ಕರೆಗಾಗಿ ಅವಳು ವರುಷಕ್ಕೊಮ್ಮೆ ಗೌರಿ ಹಬ್ಬದಲ್ಲಿ ಇಲ್ಲಿಗೆ ಬರುತ್ತಾಳೆ. ಹೀಗಾಗಿ ಅವಳ ತೌರೂರಿನವರಾದ ನಮಗೆಲ್ಲಾ ಪಾರ್ವತಿ ಅಕ್ಕನಾಗಬೇಕು; ಅವಳ ಕೈ ಹಿಡಿದ ಶಿವ ನಮಗೆ ಭಾವನಾಗಬೇಕು! ನೆಲ ಮುಗಿಲಿಗೆ ಬಾಂಧವ್ಯವನ್ನು ಬೆಸೆಯುವ ಈ ಶಿವ ಪಾರ್ವತಿಯರ ಪ್ರೀತಿಯ ಬೆಳುದಿಂಗಳಿನಲ್ಲಿ ನಾವು ಕೈಲಾಸದ ನಂಟರಾಗಿಬಿಟ್ಟಿದ್ದೇವೆ! ಈ ಒಂದು ಸುಂದರ ಆತ್ಮೀಯ ಭಾವನೆಯನ್ನು ಜನಪದ ಕವಿ ಈ ಹಾಡಿನಲ್ಲಿ ಹೇಳಿದ್ದಾನೆ. ಈ ಕವಿಗಳ ಕಣ್ಣಿಗೆ ದೇವರೆಂದರೆ, ಕೇವಲ ಪೂಜನೀಯವಾದ ಆದರೆ ನಮ್ಮಿಂದಾಚೆಗೆ ಎಲ್ಲೋ ಇರುವ ಶಕ್ತಿಯಲ್ಲ. ದೇವರೂ ನಮ್ಮವನೇ, ಅಣ್ಣನೋ, ಅಕ್ಕನೊ, ಭಾವನೋ ಇದ್ದಂತೆ – ಅಷ್ಟು ಹಿತವಾದವನು, ಪ್ರಿಯವಾದವನು, ಸಮೀಪದವನು, ಎನ್ನುವ ಆತ್ಮೀಯತೆ ತುಂಬಿಕೊಂಡಿದೆ. ಬೀರೇ ದೇವರೋ, ತಿರುಪತಿ ತಿಮ್ಮಪ್ಪನೋ, ಕಬ್ಬಲ್ಲ ಬೆನುವನೋ, ಮೈಸೂರು ಚಾಮುಂಡಿಯೋ, ನಂಜನಗೂಡಿನ ನಂಜುಂಡನೋ ಇವರೆಲ್ಲ ಬಲು ಹತ್ತಿರದವರು. ನಂಜನಗೂಡಿನ ದೇವರನ್ನು ಕುರಿತು –

ನಂಜನಗೂಡಾಗೆ ನಮಗ್ಯಾರೆ ನೆಂಟರು
ನಂಜಪ್ಪಕಾಣೆ ಮನೆ ಸ್ವಾಮಿ –    (ನಾಡಪದಗಳು : ಪು. ೧೦೧)

ಎನ್ನುವ ಮಾತಿನಲ್ಲಿ ಕೇವಲ ಸಲಿಗೆಯ ಭಾವವನ್ನು ಮಾತ್ರವಲ್ಲ, ಬದುಕಿನ ಪರಮ ಸತ್ಯವನ್ನೇ ಈ ಕವಿಗಳು ನುಡಿದಿದ್ದಾರೆ. ಈ ಭಾವನೆಗಳು ದೇವರ ಮಹತ್ತನ್ನು ತಗ್ಗಿಸದೆ, ಮಾನವ ವ್ಯಕ್ತಿಗಳಂತೆ ಮೂರ್ತೀಕರಿಸಿ ದೇವರು ಬಲು ಹತ್ತಿರದವನೆಂಬಂತೆ ಚಿತ್ರಿಸಿ ಮಾನವತ್ವದ ಬೆಲೆಯನ್ನು ಹೆಚ್ಚಿಸಿವೆ – ಎನ್ನಿಸುತ್ತದೆ. ಕೇವಲ ಸುಂದರವಾದ, ಕಾಪಾಡುವ ಶಕ್ತಿಗಳನ್ನು ಮಾತ್ರ ತನಗೆ ಬೇಕಾದವರೆಂಬಂತೆ, ನಂಟನೆಂಬಂತೆ ಭಾವಿಸುವುದರಲ್ಲಿ ಮಾತ್ರ ಇವರ ಪ್ರೀತಿ ನಿಲ್ಲುವುದಿಲ್ಲ. ಮೃತ್ಯುವನ್ನು ‘ಜವರಾಯ’ನೆಂದು ಕರೆದು, ಅವನು ಮನೆಯ ಬಾಗಿಲಿಗೆ ಬಂದಾಗಲೂ-

ಎಂದೂ ಬಾರದ ಜವರಾಯ | ಇಂದೇಕೆ ಬಂದೀರಿ
ಕೊಳ್ಳಯ್ಯ ನೀರ ಕುಡಿನೀರ-       (ನಾಡಪದಗಳು : ಪು ೨೬)

ಎನ್ನುತ್ತದೆ. ಕರಾಳವಾದ ಮೃತ್ಯುವನ್ನೂ ಮನೆಯ ನೆಂಟನೆಂಬಂತೆ ಆಹ್ವಾನಿಸಿ ಉಪಚರಿಸುತ್ತದೆ! ಈ ಚೇತನಕ್ಕೆ ಎಲ್ಲವೂ ಶುಭ; ಎಲ್ಲವೂ ಪ್ರಿಯ; ಎಲ್ಲವೂ ಆತ್ಮೀಯ. ಏಕೆಂದರೆ ಕ್ಷಣಿಕವಾದ ತುಮುಲಗಳಿಗೆ ಬೆದರಿ ನಿಲ್ಲುವ ಅಳ್ಳೆದೆಯ ಸೋಂಕು ಇಲ್ಲಿಲ್ಲ; ಇಲ್ಲಿರುವುದು ಎಲ್ಲವನ್ನೂ ಪ್ರೀತಿಯ ತೋಳಿನಲ್ಲಿ ತಬ್ಬುವ ಕೆಚ್ಚು. ಬಂದುದೆಲ್ಲವೂ ದೈವದ ಪ್ರೀತಿಯ ಲೀಲೆ ಎಂಬ ಅನುಭವವಿರುವುದರಿಂದಲೇ….

ಕರುಣ ಬಂದರೆ ಕಾಯೊ ಮರಣ ಬಂದರೆ ಒಯ್ಯೊ |
ಕರುಣಿ ಕಲ್ಯಾಣ ಬಸವಣ್ಣ | ಕಾಸಿ ಲಿಂಗ
ಕಡಿತನಕ ಕಾಯೊ ಅಭಿಮಾನ    (ಗರತಿಯ ಹಾಡು : ಪು. ೫)

ಎನ್ನುತ್ತದೆ. ದೈವೀ ಶ್ರದ್ಧೆಯಿಂದ ತುಂಬಿದ ಈ ಚೇತನ, ಪ್ರೀತಿಯ ಮೂಲಕ ಎಲ್ಲದರೊಂದಿಗೆ ಆತ್ಮೀಯತೆಯನ್ನು ಸಾಧಿಸಿರುವುದರಿಂದಲೇ ಅದು ಎಲ್ಲೆಲ್ಲಿಯೂ ಚೆಲುವನ್ನು ಕಾಣಲು ಸಮರ್ಥವಾಗಿರುವುದು.

ಜನಪದ ಗೀತಗಳಲ್ಲಿ ಬಹುಮಟ್ಟಿಗೆ ಮಿಡಿಯುತ್ತಿರುವುದು ಹೆಣ್ಣಿನ ಪಾಡು. ತಾಯಾಗಿ, ತಂಗಿಯಾಗಿ, ಅಕ್ಕನಾಗಿ, ಸೊಸೆಯಾಗಿ ತೋರುವ ಹೆಣ್ಣಿನ ಭಾವತರಂಗಗಳೇ ಈ ಕವಿತೆಯ ವಸ್ತು. ಈ ಹೆಣ್ಣುಮಕ್ಕಳು ತಮ್ಮ ಸುತ್ತ ಕಂಡ ಚೆಲುವಿನ ವಸ್ತುಗಳ ನೆನಕೆಯಿಂದ ತಾವು ಕಂಡ ವ್ಯಾಪಾರವನ್ನು ವರ್ಣಿಸುತ್ತಾರೆ. ತನ್ನ ತಮ್ಮನನ್ನು ವರ್ಣಿಸುವ ಅಕ್ಕ ಒಬ್ಬಳು –

ಬಾವೂಲಿ ಇಟ್ಟುಕೊಂಡು ಕಾವೂಲಿ ತಿದ್ದುವ
ಗಾಳಿ ಬಂದತ್ತ ಬಳಕೂತ | ನನ ತಮ್ಮ
ಬಾಳಿಯೆಲಿಗಿಂತ ಬಲು ಚಲುವ   (ಗರತಿಯ ಹಾಡು : ಪು. ೨೪)

ಎಂದು ಸುಳಿಗಾಳಿಗೆ ಬಳುಕಾಡುವ ಬಾಳೆಯ ಎಲೆಯ ಸೊಗಸನ್ನು ಕಂಡ ಅಕ್ಕ, ತನ್ನ ತಮ್ಮನನ್ನು ಬಾಳೆಎಲೆಗೆ ಹೋಲಿಸುತ್ತಾಳೆ; ಅಷ್ಟೇ ಅಲ್ಲ, ಅವನು ಅದಕ್ಕಿಂತ ಚೆಲುವ ಎನ್ನುತ್ತಾಳೆ. ಇಂತಹ ಹೆಣ್ಣು ತನ್ನ ತಮ್ಮ ತೌರಿಗೆ ಬರುವ ಸುಳುವನ್ನು ತಿಳಿದು –

ಎಂದು ಇಲ್ಲದ ನನ್ನ ಎಡಗಣ್ಣ ಹಾರೀತ |
ಚೆಂದರ ಹುಬ್ಬ ಕುಡಿಬೆಳಕ | ನನ ತಮ್ಮ
ಸಂಜೀಗ್ಹಡೆದವ್ನ ಮಗ ಬಂದ      (ಗರತಿಯ ಹಾಡು : ಪು. ೧೮)

ಎನ್ನುತ್ತಾಳೆ. ಹಿಂದಿನ ಪದ್ಯ ತಮ್ಮನ ನಿಲುವನ್ನು ಬಾಳೆ ಎಲೆಗಿಂತ ಚೆಲುವ ಎಂದು ಬಣ್ಣಿಸಿದರೆ, ಇಲ್ಲಿ  ತಮ್ಮನ ಕಣ್ಣನ್ನು ಅದರ ಬೆಳಕನ್ನು ಮಾತ್ರ ಬಣ್ಣಿಸುತ್ತದೆ. ‘ಚಂದರ ಹುಬ್ಬು ಕುಡಿ ಬೆಳಕ’ ಎಂಬ ಪ್ರತಿಮೆ ಮುಖದಲ್ಲಿ ಮುಖ್ಯವಾದ ಚೆಲುವಿನ ಅಂಶವನ್ನು ಗುರುತಿಸಿ ರೂಪಿಸಿದೆ. ರೇಖಾ ಚಂದ್ರನನ್ನು ತಮ್ಮನ ಹುಬ್ಬಿಗೂ ಎಳೆ ಬೆಳುದಿಂಗಳ ಮಂದಸ್ಮಿತವನ್ನು ಅವನ ಕಣ್ ಬೆಳಕಿಗೂ ಹೊಂದಿಸಿಕೊಂಡು ನುಡಿಯುವ ಈ ಮಾತು ಎಂತಹ ಅಪೂರ್ವವಾದ ಚೆಲುವನ್ನು ತೋರುತ್ತದೆ. ತನ್ನ ಅಣ್ಣನ ಸೌಂದರ‍್ಯಪ್ರಿಯತೆಯನ್ನು ಗುರುತಿಸಿದ ತಂಗಿಯೊಬ್ಬಳು –

ತೋಟಕ್ಕೆ ಹೋದಣ್ಣ ಊಟಕ್ಕೆ ಬರಲಿಲ್ಲ |
ತೋಟದಾ ಹೂವ ತಲಿ ತುಂಬ | ಇಟಗೊಂಡು
ಊಟದ್ಹಂಬಲವ ಮರೆತಾನ.       (ಗರತಿಯ ಹಾಡು : ಪು. ೨೨)

ಎನ್ನುತ್ತಾಳೆ. ತೋಟದ ಹೂವನ್ನು ತಲೆ ತುಂಬ ಮುಡಿದ ಅಣ್ಣನಿಗೆ ಊಟದ ಹಂಬಲವೇ ಮರೆತು ಹೋಯಿತಂತೆ. ಊಟದ ಹಂಬಲವನ್ನು ಮರೆತು ಆ ಹೂವುಗಳ ಸೊಗಸಿಗೆ ಮಾರುವೋದ ಅವನ ಸೌಂದರ‍್ಯಪ್ರಿಯತೆಯಾದರೂ ಎಷ್ಟು ದೊಡ್ಡದು ! ಚೆಲುವಾದ ಹೂವುಗಳನ್ನು ಕಂಡರೆ ಅವನಿಗೆ ಅಷ್ಟೊಂದು ಪ್ರೀತಿ; ಆ ಪ್ರೀತಿಯನ್ನು ಗುರುತಿಸಿ ಬಣ್ಣಿಸುವವಳು ಈ ತಂಗಿ! ಅಂತೆಯೆ ತಾಯಿಯಾದವಳು ಮಗುವಿನ ಸೌಂದರ‍್ಯವನ್ನು ಬಣ್ಣಿಸಿರುವ ರೀತಿ ಅಪೂರ್ವವಾಗಿದೆ. ಮಗುವಿನ ಎಲ್ಲ ಚರ್ಯೆಗಳೂ ತಾಯಿಗೆ ಪ್ರಿಯವಾಗಿಯೆ ತೋರುತ್ತವೆ. ಮಗುವಿನ ಚೆಲುವನ್ನು ತಾಯಿ ಹೀಗೆ ವರ್ಣಿಸುತ್ತಾಳೆ –

ಕಾಡ್ಗೀಗ್ಹಚ್ಚಿದ ಕಣ್ಣು, ತೀಡಿ ಮಾಡಿದ ಹುಬ್ಬು
ಮಾವಿನ ಹೋಳು ನಿನ ಕಣ್ಣು | ಕಂದಯ್ಯ
ಮಾವ ಬಣ್ಣಿಸಿ ಕರೆದಾನ –                      (ಗರತಿಯ ಹಾಡು : ಪು. ೪೪)

ಕಾಡಿಗೆ ಹಚ್ಚಿದ ಕಣ್ಣು, ತೀಡಿ ಮಾಡಿದ ಹುಬ್ಬು ಹಾಗಿರಲಿ, ಮಗುವಿನ ಕಣ್ಣನ್ನು ಮಾವಿನ ಹೋಳು ಎನ್ನುವುದು ಎಷ್ಟು ಸೊಗಸಾಗಿದೆ ! ಮಾತೆತ್ತಿದರೆ ಕಮಲವೊಂದನ್ನೆ ತಂದು ಕಣ್ಣಿಗೆ ಹೋಲಿಸುತ್ತಾರೆ ಪ್ರೌಢ ಕವಿಗಳು. ತೊಟ್ಟಿಲೊಳಗೆ ಕೈಕಾಲು ಆಡಿಸುವ ಮಗುವನ್ನು ಕಂಡು ಒಬ್ಬ ತಾಯಿ –

ತೊಟ್ಟಿಲೊಳಗಿನ ಕಂದ ತೋಳ ಬೀಸುವ ಚಂದ |
ರಟ್ಟಿ ನೊಂದಾವು ಎಲೆ ಕಂದ | ನಿಮ್ಮವ್ವ
ದೃಷ್ಟಿ ಮುರಿಲಾಕೆ ಅರಿಯಳು.     (ಗರತಿಯ ಹಾಡು : ಪು. ೫೪)

ಎನ್ನುತ್ತಾಳೆ. ತೊಟ್ಟಿಲ ಒಳಗೆ ತನ್ನಷ್ಟಕ್ಕೆ ತಾನೇ ತೋಳನ್ನು ಬೀಸುವ ಮಗುವಿನ ಚಂದವನ್ನು ಇವಳು ಸವಿದರೂ, ಒಡನೆಯೇ ಅದಕ್ಕೆ ಎಷ್ಟು ನೋಯುತ್ತದೆಯೋ ಎಂದು ಕೊರಗುತ್ತಾಳೆ. ಈ ಮಾರ್ದವತೆಯೇ ಇಂತಹ ಹಾಡುಗಳ ಸೌಂದರ‍್ಯ. ತಾಯಿಯೊಬ್ಬಳು ಮಗುವನ್ನು ಕುರಿತು-

ಆಡಿ ಬಾ ನನ ಕಂದ ಅಂಗಾಲ ತೊಳೆದೇನು |
ತೆಂಗಿನಾ ಕಾಯ ಎಳನೀರ ತಕ್ಕೊಂಡು
ಬಂಗಾರ ಮೋರೆ ತೊಳೆದೇನು –          (ಗರತಿಯ ಹಾಡು : ಪು ೪೫)

ಎನ್ನುತ್ತಾಳೆ. ಮಗು ಆಡಿ ಬಂದರೆ ಅದರ ಅಂಗಾಲನ್ನು ತೊಳೆಯಲು ಸಿದ್ಧವಾದ ತಾಯಿ, ತನ್ನ ಮಗುವಿನ ಬಂಗಾರ ಮೋರೆಯನ್ನು ತೊಳೆಯಲು ತೆಂಗಿನ ಕಾಯ ಎಳನೀರನ್ನು ಬಳಸುತ್ತೇನೆ ಎನ್ನುವುದು ತಾಯಿ ಪ್ರೀತಿಯ ಅಧಿಕ್ಯವನ್ನು ಸೂಚಿಸುತ್ತದೆ. ಮಗುವಿನ ಮುಖವನ್ನು ‘ಬಂಗಾರ ಮೋರೆ’ ಎಂಬ ಮಾತಿನಲ್ಲಿ ವರ್ಣಿಸುವಾಗ ಮಾತು ಅಪ್ರಯತ್ನ ಪೂರ್ವಕವಾಗಿಯೇ ಉಚಿತವಾದ, ಹಿತವಾದ ಉಕ್ತಿಯಲ್ಲಿ ಸಾರ್ಥಕ್ಯವನ್ನು ಪಡೆದಿದೆ ಎನ್ನಿಸುತ್ತದೆ. ಮಕ್ಕಳಿಂದ ಹೆಣ್ಣಿನ ಬದುಕು ಸಫಲ, ಮಕ್ಕಳಿಂದ ಮನೆಗೆ ತಂಪು –

ಕೂಸು ಇದ್ದ ಮನಿಗೆ ಬೀಸಣಿಗೆ ಯಾತಕೆ |
ಕೂಸು ಕಂದಯ್ಯ ಒಳ ಹೊರಗ | ಆಡಿದರೆ
ಬೀಸಣಿಕೆ ಗಾಳಿಸುಳಿದಾವ |       (ಗರತಿಯ ಹಾಡು : ಪು. ೪೫)

ಮನೆಯ ನಂದನಕ್ಕೆ ಮಕ್ಕಳು ಮಂದಾನಿಲ. ಮಗುವೊಂದು ಒಳಗೆ ಹೊರಗೆ ಆಡಿದರೆ ಬೆಂದ ಮನಸ್ಸಿಗೆ ತಂಗಾಳಿಯ ಲೇಪನವಾಗುತ್ತದೆ. ಇಂತಹ ಮಕ್ಕಳು ಏನು ಮಾಡಿದರೂ ಚೆಲುವಾಗಿಯೇ ತೋರುತ್ತವೆ. ಹಟಮಾಡಿ ಅಳುವ ಮಗುವಿನಲ್ಲೂ ತಾಯಿಯ ಕಣ್ಣು ಚೆಲುವನ್ನು ಕಾಣಬಲ್ಲದು

ಅಳುವ ಕಂದನ ತುಟಿಯು ಹವಳದ ಕುಡಿಹಂಗ |
ಕುಡಿ ಹುಬ್ಬು ಬೇವಿನೆಸಳಂಗ | ಕಣ್ ನೋಟ
ಶಿವನ ಕೈ ಅಲಗು ಹೊಳೆದಂಗ  (ಗರತಿಯ ಹಾಡು : ಪು. ೪೩)

ಯಾವ ಮಹಾಕವಿಯೂ ಅಳುವ ಮಗುವಿನ ಇಂತಹ ಚಿತ್ರವನ್ನು ಕೊಟ್ಟಿಲ್ಲ. ಈ ಚೆಲುವನ್ನು ಕಾಣಲು ಪಾಂಡಿತ್ಯವಾಗಲೀ, ಶಾಸ್ತ್ರ ಪ್ರೌಢಿಮೆಯಾಗಲೀ ಬೇಕಾಗಿಲ್ಲ; ಅಳುವ ಮಗುವಿನ ಚೆಲುವನ್ನು ಕಾಣಲು ಬೇಕಾಗಿರುವುದು ತಾಯಿಯ ಕಣ್ಣು. ಇಂತಹ ಚಿತ್ರವನ್ನು ಕೊಡಲು ವಾತ್ಸಲ್ಯ ದೃಷ್ಟಿಗೆ ಮಾತ್ರ ಸಾಧ್ಯ! ಅಳುವ ಕಂದನ ತುಟಿ ಹವಳದ ಕುಡಿ; ಕುಡಿ ಹುಬ್ಬು ಬೇವಿನೆಸಳು. ಈ  ಹೋಲಿಕೆಯ ಸಾರ್ಥಕ್ಯವನ್ನು ವಿವರಿಸಬೇಕಾಗಿಲ್ಲ. ಈ ಎರಡು ಹೋಲಿಕೆಗಳೂ ವ್ಯಕ್ತ ಲೋಕದ, ಬಹಿರಂಗ ಸೌಂದರ‍್ಯಾನುಭವದಿಂದ ತಂದವು; ಮೂರನೆಯದಾದ ‘ಕಣ್ ನೋಟ ಶಿವನ ಕೈ ಅಲಗು ಹೊಳೆದಂಗ’ ಎನ್ನುವುದು ಅವ್ಯಕ್ತ ಸೌಂದರ್ಯದ ಹೊಳಹನ್ನು ರೂಪಿಸುತ್ತದೆ. ಕಂದನ ಕಣ್ಣಿನಲ್ಲಿ ಶಿವನ ಕೈ ಅಲಗಿನ ಹೊಳಹನ್ನು ಕಾಣುವ ತಾಯಿ ದೃಷ್ಟಿ ಬಹು ಹಿರಿಯದು. ಇದು ಕೇವಲ ಕಲ್ಪನಾ ಸೌಂದರ‍್ಯದ ಕೆಲಸವಲ್ಲ; ಚಿತ್ತದ ಸೌಂದರ‍್ಯದ ಮೋಡಿ. ವ್ಯಕ್ತದಲ್ಲಿ ಅವ್ಯಕ್ತದ ಸೂತ್ರವನ್ನು ತಾಯಿಯ ಕಣ್ಣು ಗುರುತಿಸಿ ಹೇಳಿ ನಮ್ಮನ್ನು ರೋಮಾಂಚನಗೊಳಿಸುತ್ತದೆ. ಮಗುವಿನಲ್ಲಿ ದೈವತ್ವದ ಹೊಳಹನ್ನು ತಾಯಿಯಾದವಳು ಕಂಡರೆ, ಮಕ್ಕಳು ತಾಯಿಯಲ್ಲೇ ದೈವತ್ವವನ್ನು ಕಾಣುವುದುಂಟು. ಈ ಭಾವನೆಯೂ ಜನಪದ ಗೀತೆಗಳಲ್ಲಿ ವ್ಯಕ್ತವಾಗಿದೆ. ಒಬ್ಬಳು ಮಗಳು-

ಯಾರ ಇದ್ದರು ನನ್ನ ತಾಯವ್ವನ್ಹೋಲೋರ |
ಸಾವಿರ ಕೊಳ್ಳಿ ಒಲಿಯಾಗ | ಇದ್ದರ
ಜ್ಯೋತಿ ನಿನ್ನ್ಯಾರು ಹೋಲಾರ –           (ಗರತಿಯ ಹಾಡು : ಪು. ೧೧)

ತಾಯಿಯ ಹೊರತು ಉಳಿದ ಬಳಗವೆಲ್ಲ ಸಾವಿರ ಇದ್ದರೂ ಅವರೆಲ್ಲ ಒಲೆಯೊಳಗಿನ ಕೊಳ್ಳಿ ಇದ್ದ ಹಾಗೆ. ಆದರೆ ತಾಯಿ ಜ್ಯೋತಿಯ ಹಾಗೆ. ಬೇರೆಯವರಿಂದ ಮಗಳಿಗೆ ದೊರೆಯುವ ಪ್ರೀತಿಯಲ್ಲಿ ಬೆಳಕಿಗಿಂತ ಉರಿ ಹೆಚ್ಚು, ಕೊಳ್ಳಿಯಂತೆ. ಆದರೆ ತಾಯಿಯ ರುಚಿರ-ಶಾಂತ ಪ್ರೀತಿಯೋ ನಂದಾದೀಪದಂತೆ. ತಾಯಿ ಜ್ಯೋತಿ ಮಾತ್ರವಲ್ಲ, ಗಂಗೆಯಂತೆ-

ತಂದೀಯ ನೆನೆದರೆ ತಂಗಳ ಬಿಸಿಯಾಯ್ತು |
ಗಂಗಾದೇವಿ ನನ್ನ ಹಡೆದವ್ನ | ನೆನೆದರೆ
ಮಾಸಿದ ತಲೆಯು ಮಡಿಯಾಯ್ತು           (ಗರತಿಯ ಹಾಡು)

ಅಂತಹ ಪಾವಿತ್ರ್ಯತೆ ತಾಯ್ತನಕ್ಕೆ ಇದೆ. ಪ್ರೀತಿಯು ಸೃಜಿಸುವ ಈ ಭಾವ ಮೌಲ್ಯವೇ ಜೀವನ ಸೌಂದರ‍್ಯ. ತಾಯಿ, ಮಕ್ಕಳ ವಿಚಾರದಲ್ಲಿ ತೋರುವ ವಾತ್ಸಲ್ಯ; ಮಕ್ಕಳು ತಾಯಿ ವಿಚಾರದಲ್ಲಿ ತೋರುವ ಪೂಜ್ಯತೆ; ಅಕ್ಕ-ತಂಗಿ, ಅಣ್ಣ-ತಮ್ಮಂದಿರು ಪರಸ್ಪರ ತೋರುವ ಅಕ್ಕರೆ – ಈ ಮಧುರ ಬಾಂಧವ್ಯಸೌಂದರ‍್ಯದ ನಿರೂಪಣೆ ತುಂಬ ಸುಂದರವಾಗಿದೆ. ತಾಯ್ತನದಲ್ಲಿ ತನ್ನ ನಿಲುಗಡೆಯನ್ನು ಕಂಡುಕೊಳ್ಳುವ ಈ ಸ್ತ್ರೀತ್ವ ಅಲ್ಪವನ್ನು ಆಶಿಸುವುದಿಲ್ಲ; ಮಹತ್ತನ್ನು ಕೋರುತ್ತದೆ. ತಾಯೊಬ್ಬಳು ತನಗೆ ಎಂಥ ಮಗ ಬೇಕು ಎನ್ನುವುದನ್ನು ದೇವರಲ್ಲಿ ನಿವೇದಿಸುತ್ತಾ –

ಜಿನದತ್ತ ಜಿನಸ್ವಾಮಿ ಹೊನ್ನ ಪಾರ್ಶ್ವನಾಥ
ನಿನ್ನಂಥ ಒಬ್ಬ ಮಗ ಬೇಕ | ಬಸ್ತ್ಯಾನ
ಪದ್ಮಾವತಿಯಂಥ ಸೊಸೆ ಬೇಕ  (ಗರತಿಯ ಹಾಡು : ಪು. ೫೮)

ಎಂದು ಬೇಡುತ್ತಾಳೆ. ಈ ತಾಯ್ತನ ಬೇಡುವುದು ದೇವರಂಥ ಮಗನನ್ನು ! ಮಗುವಿನ ಕಣ್ಣ ಹೊಳಹಿನಲ್ಲಿ ಶಿವನ ಕೈ ಅಲಗಿನ ಹೊಳಹನ್ನು ಕಾಣಬಲ್ಲ ತಾಯಿ, ದೇವರನ್ನೇ ಮಗನನ್ನಾಗಿ ಬಯಸುವುದು ಸೋಜಿಗವೇನಲ್ಲ. ಕೃಷ್ಣಾ, ಮಲಪ್ರಹಾರಿಣೀ ನದೀ ಸಂಗಮದಲ್ಲಿರುವ ಕೂಡಸಂಗಮನ ಲಿಂಗವನ್ನು ಕಂಡು –

ಕೂಡಲ ಸಂಗಯ್ಯ ಹೊಳಿಯಾಗ ಹ್ಯಾಂಗಿದ್ದಿ |
ಹಳ್ಳೊತ್ತಿ ಸಣ್ಣ ಮಳಲೊತ್ತಿ | ಗಂಗೀಯ
ನೀರೊತ್ತಿ ಲಿಂಗ ನೆನೆದಾನ…..   (ಗರತಿಯ ಹಾಡು : ಪು. ೬)

ಎಂದು ತಾಯಿಯೊಬ್ಬಳು ಹೇಳುವ ಮಾತಿನಲ್ಲಿ ದೇವರನ್ನೂ ಮಗುವಿನಂತೆ ಭಾವಿಸುವುದರ ಮಾರ್ದವತೆಯಲ್ಲಿ ತಾಯಿಯ ಕಾರುಣ್ಯ  ಮೈದೋರಿದೆ.

ಮಾನವಲೋಕದ ಹಲವು ಬಿಡಿ ಬಿಡಿ ಚಿತ್ರಗಳನ್ನು ಕೊಡುವುದರಲ್ಲಿ ಈ ಜನಪದ ಕಾವ್ಯಕಲೆ ನುರಿತದ್ದು. ಜನಪದಕವಿಗಳ ಕಣ್ಣು ಯಾವ ವಸ್ತುವಿನಲ್ಲೇ ಆಗಲಿ  ಮುಖ್ಯವಾಗಿ ಮನಸ್ಸಿನ ಮೇಲೆ ಯಾವ ಅಂಶ ಪರಿಣಾಮ ಮಾಡುವುದೋ ಅದನ್ನು ಬಲುಸೊಗಸಾಗಿ ನಿರೂಪಿಸುತ್ತದೆ. ವಸ್ತುವಿನ ಸಮಗ್ರ ಸೌಂದರ‍್ಯಕ್ಕಿಂತ, ವಿವರ ವಿವರವಾದ ಬಣ್ಣನೆಗಿಂತ ಆ ಕ್ಷಣದಲ್ಲಿ ಹೊಳೆದ ಅಂಶಸೌಂದರ‍್ಯವನ್ನು ಬಣ್ಣಿಸುವುದರಲ್ಲಿ ಇದು ನಿಸ್ಸೀಮ ಕಲೆ. ಕಾವ್ಯ ಪದ್ಧತಿಯನ್ನು ಬಲ್ಲ, ಪಾಂಡಿತ್ಯ ವ್ಯುತ್ಪತ್ತಿಗಳಿದ್ದ ಕವಿಗಳು ವಸ್ತುವನ್ನೋ ವ್ಯಕ್ತಿಯನ್ನೋ ಸಮಗ್ರವಾಗಿ, ಅಡಿಯಿಂದ ಮುಡಿಯ ತನಕ ಬಣ್ಣಿಸುವಂತೆ ಈ ಸಹಜ ಕವಿಗಳು ಬಣ್ಣಿಸುವುದಿಲ್ಲ. ಇಲ್ಲಿನ ಕಲ್ಪನೆ ಪಾಂಡಿತ್ಯಾದಿಗಳಿಂದ ಸಂಸ್ಕಾರಗೊಂಡುದಲ್ಲ,  ಪ್ರಾಮಾಣಿಕವಾದ ಅನುಭವದಿಂದ ರೂಪಿತವಾದುದು. ಆದುದರಿಂದಲೇ ತಮ್ಮನ ಮುಖದಲ್ಲಿ ಅಕ್ಕನಿಗೆ ಕಾಣುವುದು ‘ಚಂದರ ಹುಬ್ಬು ಕುಡಿ ಬೆಳಕು.’ ಮಗುವಿನ ಮುಖದಲ್ಲಿ ‘ಹವಳದ ತುಟಿ, ಬೇವಿನೆಸಳಿನಂತೆ ಹುಬ್ಬು, ಶಿವನ ಕೈ ಅಲಗಿನಂಥ ಕಣ್ ಬೆಳಕು’. ಲಕ್ಕವ್ವ ಕಾಲು ತೊಳೆಯುವಾಗ ಈ ಕವಿಗಳ ಕಣ್ಣಿಗೆ ಕಾಣುವುದು ಇಷ್ಟು ಮಾತ್ರ-

ಪಿಲ್ಲಿ ಕಾಲಿನೋಳೆ ಚೆಲ್ಲಿದ ನೆರಿಗ್ಯೋಳೆ
ಕಲ್ಮೇಲೆ ಕಾಲ ತೊಳಯೋಳೆ | ಲಕ್ಕವ್ವ
ಪಿಲ್ಲಿ ಹೊಳೆದವು ಬಿಸಿಲಿಗೆ –        (ನಾಡ ಪದಗಳು : ಪು. ೨೩)

ಲಕ್ಕವ್ವನ ಸಮಗ್ರ ಶರೀರವಲ್ಲ; ಅವಳ ಮುಖವೂ ಅಲ್ಲ. ಅವಳು ಕಲ್ಲಮೇಲೆ ಕಾಲು ತೊಳೆಯುತ್ತಿದ್ದಾಳೆ, ಅದೂ ಬಿಸಿಲಲ್ಲಿ. ಕವಿಯ ಕಣ್ಣು ಕಾಲು ತೊಳೆಯುವ ಕ್ರಿಯೆಯಷ್ಟನ್ನೆ ಗಮನಿಸಿದೆ. ಅಲ್ಲಿ ಕಾಣುವುದು, ಪಿಲ್ಲಿ ಹಾಕಿದ ಕಾಲು; ಚೆಲ್ಲಿದ ನೆರಿಗೆ. ಅವಳು ನಿಂತ ಕಲ್ಲು; ಕಾಲು ತೊಳೆಯುವಾಗ ಬಿಸಿಲಿಗೆ ಹೊಳೆಯುವ ಪಿಲ್ಲಿ: ಇಷ್ಟು ಚಿತ್ರವನ್ನು ಮಾತ್ರ ಈ ಕವಿಯ ಕಣ್ಣು ಚಿತ್ರಿಸಿದೆ. ಸಾಮಾನ್ಯ ಹಳ್ಳಿಯ ಹೆಣ್ಣು ಮಗಳು ಲಕ್ಕವ್ವ ಕಲ್ಲಿನ ಮೇಲೆ ಕಾಲು ತೊಳೆಯುವುದು ಅಂಥ ವಿಶೇಷದ ಸಂಗತಿಯಲ್ಲ; ಕವಿಯ ಕಣ್ಣು ಆ ಪ್ರಸಂಗದಲ್ಲಿ ಮುಖ್ಯವಾದುದನ್ನು ಸ್ವಭಾವೋಕ್ತಿಯಿಂದ ಚಿತ್ರಿಸಿರುವುದೇ ವಿಶೇಷ. ಇದೇ ಕುಶಲತೆ ಹಲಸಂಗಿಯ ಜಕ್ಕವ್ವನನ್ನು ಜಾನಪದ ಕವಿಯೊಬ್ಬ ವರ್ಣಿಸುವ ಮಾತಿನಲ್ಲೂ ಕಾಣಿಸುತ್ತದೆ.

ಮೂಗಿನಾಗ ಮೂಗುತಿ ನಕ್ಕರೆ ಕರಿಹಲ್ಲು
ಅಕ್ಕ ನೀನ್ಯಾರ ಮಗಳವ್ವ | ಹಲಸಂಗಿ
ಗಚ್ಚೀನ ಗುಡಿಯ ಜಕ್ಕವ್ವ           (ಗರತಿಯ ಹಾಡು : ಪು. ೩)

ಹಲಸಂಗಿಯ ಗುಡಿಯಲ್ಲಿ ಜಕ್ಕವ್ವ ಎನ್ನುವುದೊಂದು ಮೂರ್ತಿ. “ಜಕ್ಕವ್ವನ ಮೂರ್ತಿಯಲ್ಲಿ ಮುಖವೆಲ್ಲ ಇರುವುದಾದರೂ ಕಾಣುವುದು ಕರಿ ಹಲ್ಲು ಮೂಗು ಮೂಗುತಿ. ಮೂಗುತಿ ಇರುವ ಕಾರಣದಿಂದ ಮೂಗು, ಹೊಳೆಯುವ ಕಾರಣದಿಂದ ಮೂಗುತಿ, ಕಪ್ಪಾಗಿರುವ ಕಾರಣದಿಂದ ಹಲ್ಲು ಇವನ ಕರಣಗಳನ್ನು ವಿಶೇಷವಾಗಿ ಸೆಳೆಯುತ್ತದೆ. ಇದೇ ರೀತಿಯಲ್ಲಿ ಈ ಕವಿತೆಯ ವರ್ಣನೆ ಮುಖ್ಯವಾಗಿ ಇಂದ್ರಿಯಗಳ ಅನುಭವವನ್ನು ಬಿಡಿಬಿಡಿಯಾಗಿ ಚಿತ್ರಿಸತಕ್ಕದ್ದು. ಅಥವಾ ಇತರ ಅಂಶಗಳನ್ನು ಕಂಡರೂ ಕವಿ ಅದನ್ನು ಉದ್ದೇಶ ಪೂರ್ವಕವಾಗಿ ಹಿಂದಕ್ಕೆ ಇರಿಸುತ್ತಾನೆ”[1]

ಮಾನವ ಲೋಕದ ನಲವನ್ನು ಮಾತ್ರವಲ್ಲ, ನೋವನ್ನೂ ಹಾಡಾಗಿ ತೋಡಿಕೊಂಡಿದೆ ಜನಪದ ಕವಿಗಳ ವಾಣಿ. ಹೆಣ್ಣುಮಕ್ಕಳ ಜೀವನದಲ್ಲಿ ಬರುವ ಮೊದಲ ನೋವು ಹುಟ್ಟಿಬೆಳೆದ ತೌರೂರನ್ನು ತೊರೆದು ಹೋಗುವಾಗ. ಆ ಸಂದರ್ಭದಲ್ಲಿ ಸಂಸಾರದಲ್ಲಿ ಯಾರು ಯಾರ ಮನಸ್ಸಿನಲ್ಲಿ ಏನೇನು ಪರಿಣಾಮಗಳಾಯಿತು ಎನ್ನುವುದನ್ನು ಈ ಗೀತಗಳು ಕರುಣಾಪೂರ್ಣವಾಗಿ ಚಿತ್ರಿಸುತ್ತವೆ. ಮಗಳಿಗೆ ತೌರೂರಿನ ಪ್ರೀತಿ ಬಲುಹಿರಿದು. ತೌರೂರನ್ನು ಕುರಿತು –

ತೌರೂರ ದಾರಿಯಲಿ ಮುಳ್ಳಿಲ್ಲ ಕಲ್ಲಿಲ್ಲ
ಸಾಸುವೆಯಷ್ಟು ಮರಳಿಲ್ಲ | ಬಾನಲ್ಲಿ
ಬಿಸಿಲಿನ ಬೇಗೆ ಸುಡಲಿಲ್ಲ.
(ಜನಪದಗೀತೆ : ಪು. ೨೯)

ಮಗಳು ಹೇಳುವ ಅನುಭವ ಇದು. ತೌರೂರಿನಲ್ಲಿ ಬಾಣಂತಿತನವನ್ನು ಮುಗಿಸಿ ತನ್ನ ಮಗುವಿನೊಡನೆ ಗಂಡನ ಮನೆಗೆ ಹೋಗುವಾಗ –

ತೊಟ್ಟಿಲ ಹೊತ್ತು ಕೊಂಡು ತೌರುಬಣ್ಣ ಉಟ್ಟುಕೊಂಡು |
ಅಪ್ಪ ಕೊಟ್ಟೆಮ್ಮೆ ಹೊಡಕೊಂಡು | ತೌರೂರ
ತಿಟ್ಹತ್ತಿ ತಿರುಗಿ ನೋಡ್ಯಾಳ
(ಜನಪದಗೀತೆ : ಪು. ೩೧)

ಮೂರೇ ಮಾತಿನಲ್ಲಿ ಸಮಗ್ರ ಚಿತ್ರವನ್ನು ಬರೆದು, ಮಗಳು ಒಂದೇ ಒಂದು ಸಲ ತಿಟ್ಟನ್ನು ಇಳಿದರೆ ಮರೆಯಾಗುವ ತೌರೂರನ್ನು ತಿರುಗಿ ನೋಡಿದಳು ಎಂಬ ಮಾತಿನಲ್ಲಿ ಕವಿ ಎಂತಹ ಅಪಾರ ವ್ಯಥೆಯನ್ನು ಧ್ವನಿಸುತ್ತಾನೆ. ಇಷ್ಟೊಂದು ಪ್ರಿಯವಾದ ತೌರೂರು ಕೂಡ ದಾರುಣವಾಗುತ್ತದೆ ತಾಯಿ ಇಲ್ಲದಿದ್ದರೆ. ತಾಯಿಯಿಲ್ಲದ ತೌರೂರಿಗೆ ಹೋಗಿ ಪಡೆದು ಬಂದ ಕಹಿ ಅನುಭವವನ್ನು ಹೆಣ್ಣು ಮಗಳೊಬ್ಬಳು ಹೀಗೆ ತೋಡಿಕೊಳ್ಳುತ್ತಾಳೆ –

ತಾಯಿಲ್ದ ತವರಿಗೆ ಹೋಗದಿರು ನನ ಮನವೆ |
ನೀರಿಲ್ದ ಕೆರಿಗೆ ಕರು ಬಂದ | ತಿರುಗಾಗ
ಆಗ ನೋಡಿದರ ದುಃಖಗಳ.       (ಗರತಿಯ ಹಾಡು : ಪು. ೧೩)

ಇಲ್ಲಿ ಆಕೆ ತನ್ನ ಅನುಭವಕ್ಕೆ ಎಷ್ಟು ಉಚಿತವಾದ ಹೋಲಿಕೆಯಿಂದ ಅಭಿವ್ಯಕ್ತಿಯನ್ನು  ನೀಡಿದ್ದಾಳೆ! ಹೆಣ್ಣಿನ ಜೀವನದಲ್ಲಿ ಇದಕ್ಕೂ ಮಿಗಿಲಾದ ವ್ಯಥೆ ಬಂಜೆತನ. ಬಂಜೆ ತನ್ನ ಬದುಕನ್ನು ಕುರಿತು-

ಬಾಲಕರಿಲ್ಲದ ಬಾಲೆದ್ಯಾತರ ಜನ್ಮ
ಬಾಡಗಿ ಎತ್ತು ದುಡಿದಂಗೆ | ಬಾಳೆಲೆಯ
ಹಾಸ್ಯುಂಡು ಬೀಸಿ ಎಸದಂಗ.         (ಗರತಿಯ ಹಾಡು : ಪು. ೬೭)

ಎಂದು ನಿಂದಿಸಿಕೊಳ್ಳುತ್ತಾಳೆ. ಅಂದಂದಿನ ಮನೋವ್ಯಥೆ ಹಾಡಾಗುವಾಗ, ಅದು ಮೈದಾಳುವ ಉಚಿತವಾದ, ಧ್ವನಿಪೂರ್ಣವಾದ ಉಪಮೆಗಳ ಸೊಗಸು ಅಪೂರ್ವವಾಗಿದೆ.

ಒಂದು ಸಂದರ್ಭವನ್ನೋ, ಅನುಭವವನ್ನೋ ಕಥಾ ಸೂತ್ರವೊಂದರಲ್ಲಿ ನೇರ್ಪಡಿಸಿ ನಿರೂಪಿಸುವ ಹಲವು ಕವಿತೆಗಳಲ್ಲಿ ಈ ಕವಿಗಳ ಕಥನ ಸೌಂದರ‍್ಯವನ್ನು ಕಾಣಬಹುದು ‘ಉತ್ತರೆ ಮಳೆ’ಯನ್ನೆ, ಅತ್ತೆಯ ಕುಹಕದಿಂದ ಗಂಡನ ಮನೆಯನ್ನು ತೊರೆದು ಹೋಗಬೇಕಾಗಿ ಬಂದ ಹೆಣ್ಣೆಂಬಂತೆ ವ್ಯಕ್ತೀಕರಿಸಿ ಕತೆಯನ್ನು ಕಟ್ಟಿದ್ದಾನೆ ಕವಿ, ಗಂಡನ ಮನೆಯಿಂದ ಹೊರಬಂದ ಉತ್ತರ ದೇವಿ-

ಚಿಕ್ಕಿಯ ಬೆಳಕಲ್ಲಿ ಹಾದೀಯ ಸವೆಸುತ್ತ
ಮುಂಗಣ್ಣ ನೀರ ಸುರಿಸುತ್ತ | ಉತ್ತರ ದೇವಿ
ಬಂದಾಳು ಬಾಗೂರ ಬಯಲೀಗೆ.            (ಜನಪದ ಗೀತೆ: ಪು. ೩೪)

ಹೀಗೆ ದುಃಖಿತಳಾಗಿ ನಡೆದಳಂತೆ. ಉತ್ತರ ಮಳೆ ಹೊಯ್ಯುವ ಕಾಲದ ಪ್ರಕೃತಿ ವ್ಯಾಪಾರವನ್ನು ಈ ಕವಿ ಹೀಗೆ ಕಂಡು ಚಿತ್ರಿಸಿದ್ದಾನೆ. ಅಂತೆಯೇ ‘ಜವರಾಯ’ನೆಂಬ ಕವನದಲ್ಲೂ ‘ಒಳ್ಳೊಳ್ಳೆ ಮರನ ಕಡಿಬಂದ’ ಜವರಾಯನಿಗೂ, ಲೋಕದ ಹೆಣ್ಣೊಬ್ಬಳಿಗೂ ಸುಂದರವಾದ ಸಂವಾದ ನಡೆಯುತ್ತದೆ. ಕಡೆಗೆ ಜವರಾಯ ಅವಳನ್ನು ಕರೆದೊಯ್ಯುತ್ತಾನೆ. ಹೀಗೆ ಪ್ರಕೃತಿ ವ್ಯಾಪಾರವನ್ನು ಮಾತ್ರವಲ್ಲ, ನಂಜನಗೂಡ ನಂಜುಂಡನಿಗೂ ಮೈಸೂರ ಚಾಮುಂಡಿಗೂ ನಡೆಯುವ ಪ್ರಣಯವನ್ನು ಕವಿ ಸವಿಸ್ತಾರವಾಗಿ ಬಣ್ಣಿಸುತ್ತಾನೆ. ಮನಸ್ಸಿಗೆ ಹೊಳೆದದ್ದಕ್ಕೆ ಒಂದು ನಿರ್ದಿಷ್ಟವಾದ ರೂಪವನ್ನು ಕೊಡುವ, ಅದರಲ್ಲೂ  ವ್ಯಕ್ತೀಕರಿಸಿ ಹೇಳುವ ನಾಟಕೀಯತೆಯೂ ಈ ಕಾವ್ಯದಲ್ಲಿರುವ ಒಂದು ಸೊಗಸು. ‘ಕೆರೆಗೆ ಹಾರ’ ವೆಂಬ ಕಥನ ಕವನ, ಕೆರೆಗೆ ಆಹುತಿಯಾದ ಸಣ್ಣ ಸೊಸಿ ಭಾಗೀರಥಿಯ ದಾರುಣವಾದ ಕಥೆಯನ್ನು ಚಿತ್ರಿಸುವುದರ ಜೊತೆಗೆ ಹೆಣ್ಣಿನ ಪ್ರೀತಿಗಾಗಿ ಮರಣದಲ್ಲೂ ಅವಳನ್ನು ಹಿಂಬಾಲಿಸಿದ ಗಂಡ ಮಹಾದೇವರಾಯನ ಪಾತ್ರವನ್ನು ಚಿತ್ರಿಸಿ ದಾಂಪತ್ಯ ಪ್ರೇಮದ ಹಿರಿಮೆಯನ್ನು ಸಾರುತ್ತದೆ. ಹೀಗೆಯೆ ಎಷ್ಟೋ ಚಾರಿತ್ರಿಕ ಘಟನೆಗಳನ್ನು ಈ ಕವಿಗಳು ಲಾವಣಿ, ಸಾಂಗತ್ಯಗಳ ಧಾಟಿಯಲ್ಲಿ ಹಿಡಿದಿಟ್ಟಿದ್ದಾರೆ. ಈ ಕಥನದಲ್ಲಿ ಗಾಂಭೀರ‍್ಯ, ಲಾಲಿತ್ಯ, ಕರುಣ, ಹಾಸ್ಯ ಮೊದಲಾದ ಎಲ್ಲ ಅಂಶಗಳೂ ಇವೆ. ಬದುಕಿಗೆ ಸಂಬಂಧಪಟ್ಟ ಎಲ್ಲ ಮುಖಗಳನ್ನು ಈ ಜನಪದ ಕವಿಗಳು ತಮ್ಮದೇ ಆದ ರೀತಿಯಲ್ಲಿ ಹಿಡಿದಿಟ್ಟಿದ್ದಾರೆ.

ಮಾನವ ಲೋಕದಲ್ಲೆಂತೋ ಅಂತೆಯೆ ಪ್ರಕೃತಿ ಲೋಕದ ಚೆಲುವನ್ನು ಈ ಕವಿಗಳ ಕಣ್ಣು ಮೆಚ್ಚಿಕೊಂಡಿದೆ. ಸುತ್ತ ಲೋಕದಲ್ಲಿ ಏನೇನು ಚೆಲುವಾಗಿದೆ ಎನ್ನುವುದನ್ನು ಅವರು ಗುರುತಿಸಿದ್ದಾರೆ –

ಗಿಡದಾಗ ಗಿಡ ಛೆಲುವ ಮಾವಿನ ಗಿಡ ಛೆಲುವ,
ಹಕ್ಕಿ ಪಕ್ಕ್ಯಾಗ ಗಿಣಿ ಛೆಲುವ | ಮ್ಯಾಲೀನ
ಚಿಕ್ಯಾಗ ಛೆಲುವ ಚಂದ್ರಾವ             (ಗರತಿಯ ಹಾಡು : ಪು. ೭೫)

ಎಂದು ಅವರು ಚೆಲುವಿನ ತೀರ್ಮಾನವನ್ನು ಚಿತ್ರಿಸಿದ್ದಾರೆ. ಹಾರಿಬಂದ ಗಿಣಿಯೊಂದನ್ನು ಕಂಡು –

ಹಚ್ಚನ ಮೈಯವ ಹವಳದ ತುಟಿಯವ
ಎತ್ತ ಹೋಗಿದ್ಯೋ ಗಿಣಿ ರಾಮ |…   (ಗರತಿಯ ಹಾಡು : ಪು. ೭೨)

ಎಂದು ಹೆಣ್ಣೊಬ್ಬಳು ವರ್ಣಿಸುವಾಗ, ಹಳ್ಳದ ದಂಡೆಯಲ್ಲಿನ ಗುಬ್ಬಿಗಳನ್ನು ಕಂಡು-

ಹಳ್ಳದ ದಂಡ್ಯಾಗ ಹಸುರು ಬಣ್ಣದ ಗುಬ್ಬಿ |
ಬಿಸಿಲೀಗೆ ಬಾಯ ಬಿಡುತಾದ | ಆ ಗುಬ್ಬಿ
ಕುಶಲದ ನಗುವ ನಗತಾವ

ಎಂದು ಗುಬ್ಬಿಗಳ ನಗೆಯನ್ನು ಕಾಣುವಾಗ – ಆತ್ಮೀಯತೆಯ ಜೊತೆಗೆ, ನಲವನ್ನೂ ಕಾಣುತ್ತಾರೆ. ಗುಬ್ಬಿ ನಗುವುದು ನಾವು ಕಾಣದ ಸಂಗತಿ; ಆದರೆ ಉಲ್ಲಾಸದ ಗಳಿಗೆಯಲ್ಲಿ ಗುಬ್ಬಿ ನಗುವಂತೆ ಈ ಕವಿಗೆ ಕಂಡದ್ದು ಬರಿಯ ಕಲ್ಪನೆಯಲ್ಲ ವಾಸ್ತವ. ‘ಕುಣಿಗಲ್ ಕೆರೆ’ಯನ್ನು ವರ್ಣಿಸುವುದಂತೂ ಈ ಕಾವ್ಯ ಜಾತಿಯಲ್ಲಿ ಅಪೂರ್ವವಾದ ರೀತಿ. ತುಂಬಿದ ಕೆರೆಯನ್ನು ಕಂಡು-

ಮೂಡಲ್ ಕುಣಿಗಲು ಕೆರೆ ನೋಡೋರ್‌ಗೊಂದೈಭೋಗ
ಮೂಡಿ ಬರ‍್ತಾನೆ ಚಂದಿರಮಾ – ತಾನಂದನೋ
ಮೂಡಿ ಬರ‍್ತಾನ ಚಂದಿರಮಾ –

ಎಂದು ಹಾಡುತ್ತಾರೆ. ಈ ತುಂಬಿದ ಕೆರೆ ನೋಡೋರಿಗೆ ಒಂದು ‘ಐಭೋಗ’ವಂತೆ; ಕೆರೆಯನ್ನು ಕಂಡದ್ದರಿಂದಾಗುವ ಆನಂದಾನುಭವ ಈ ‘ಐಭೋಗ’, ಈ ಅನುಭವವನ್ನು ಚಿತ್ರಿಸಲು ಕವಿ ಬಳಸುವ ಉಪಮೆಗಳನ್ನು ನೋಡಿ-

ಬಾಳೆಯ ಹಣ್ಣಿನಂತೆ ಬಾಗಿದ್ ಕುಣಿಗಲು ಕೆರೆ
ಭಾವ ತಂದನೆ ಬಣ್ಣದ್ ಸೀರೆ | ತಾನಂದನೋ
ಭಾವ ತಂದನೆ ಬಣ್ಣದ್ ಸೀರೆ

ನಿಂಬೇಯ ಹಣ್ಣಿನಂತೆ ತುಂಬಿದ್ ಕುಣಿಗಲು ಕೆರೆ
ಅಂದಾ ನೋಡೋಕೆ ಶಿವ ಬಂದ್ರು – ತಾನಂದನೋ
ಅಂದಾ ನೋಡೋಕ್ ಶಿವ ಬಂದ್ರು.

ಈ ಕೆರೆ ಬಾಳೆಯ ಹಣ್ಣಿನಂತೆ ಬಾಗಿದೆಯಂತೆ; ನಿಂಬೆಹಣ್ಣಿನಂತೆ ತುಂಬಿದೆಯಂತೆ. ‘ಮೂಡಿ ಬರ್ತಾನೆ ಚಂದಿರಮಾ’ ಎನ್ನುವುದರಿಂದ ಈ ಕವಿ ಕುಣಿಗಲು ಕೆರೆಯನ್ನು ಕಂಡದ್ದು ಬಹುಶಃ ಬೆಳುದಿಂಗಳಿನಲ್ಲಿ ಇರಬಹುದು. ಬಾಳೆಯ ಹಣ್ಣು ನಿಂಬೆಯ ಹಣ್ಣು ಎಂಬ ಉಪಮೆಗಳು ಬೆಳುದಿಂಗಳಿನಲ್ಲಿ ಕೆರೆ ಕಂಡ ರೀತಿಯಲ್ಲಿ ಸೂಚಿಸುತ್ತವೆ. ಅದರಲ್ಲೂ ‘ಭಾವ ತಂದನೆ ಬಣ್ಣದ್ ಸೀರೆ’ ಎನ್ನುವ ಮಾತು ಬಹು ಸುಂದರವಾದುದು. ಹೆಣ್ಣು ಮಗಳ ಕಣ್ಣಿಗೆ ನಿರಿನಿರಿಯಾಗಿ ತೆರೆತೆರೆಯಾಗಿ ಕಾಣುವ ಕೆರೆಯ ಹರಹು ಬೆಳುದಿಂಗಳಿನಲ್ಲಿ ಥಳಥಳಿಸಿ, ಎಂದೋ ಒಮ್ಮೆ ತನ್ನ ಭಾವ ತಂದುಕೊಟ್ಟ ಬಣ್ಣದ ಸೀರೆಯನ್ನು ನೆನಪಿಗೆ ತರುತ್ತದೆ. ಆದರೆ ಈ ಕೆರೆಯ ಅಂದ ಅಷ್ಟೇ ಅಲ್ಲ, ಇಷ್ಟು ಮಾತಿನಲ್ಲೆ ಮುಗಿಯುವುದಿಲ್ಲ. ನಿಂಬೆಯ ಹಣ್ಣನ್ನೋ, ಬಾಳೆಯ ಹಣ್ಣನ್ನೋ, ಭಾವ ತಂದ ಬಣ್ಣದ ಸೀರೆಯನ್ನೋ ನೆನಪಿಗೆ ತಂದು ಚೆಲುವಾಗುವುದರಲ್ಲೇ ಪರ‍್ಯವಸಾನವಾಗುವುದಿಲ್ಲ. ಈ ಅನುಭೂತಿ ಇನ್ನೂ ಮಿಗಿಲಾದುದು. ಆದುದರಿಂದಲೇ ‘ಅಂದಾ ನೋಡೋಕೆ ಶಿವಬಂದ್ರು’ – ಎನ್ನುತ್ತದೆ. ಇಂಗ್ಲೀಷಿನಲ್ಲಿ “A sight for Gods ಎನ್ನುತ್ತೇವಲ್ಲ, ಆ ಮಾದರಿಯದು ಈ ಮಾತು. ಅಷ್ಟೇ ಅಲ್ಲ, ಅದಕ್ಕೂ ಮಿಗಿಲು. ಈ ಕೆರೆಯ ಅಂದವನ್ನು ನೋಡಲು ಶಿವನೇ ಬಂದನೆಂದ ಮೇಲೆ ಇದರ ಚೆಲುವನ್ನು ಹೇಳಬೇಕೆ? ಇಂತೆಯೇ ಮುಂಬೆಳಗಿನ ಸೊಗಸನ್ನು ಚಿತ್ರಿಸುವಾಗಲೂ ಈ ಕವಿತೆ ಅಪೂರ್ವತೆಯನ್ನು ಸಾಧಿಸುತ್ತದೆ-

ಬೆಳ್ಳಾನೆ ಬೆಳಗಾಗಿ | ಬೆಳ್ಳಿಮೂಡಲವಾಗಿ
ಒಳ್ಳೊಳ್ಳೆ ಮೀನು ಗರಿಗೆದರಿ ಆಡ್ಯಾವ
ಗರತಿ ಗಂಗವ್ವನ ಉಡಿಯಾಗ
(ಗರತಿಯ ಹಾಡು ಪು. ೭೩)

ಬಹು ಸರಳವಾದ ರೀತಿಯಲ್ಲಿ ಬೆಳಗಾದ ಅನುಭವವನ್ನು ನೇರವಾಗಿ ಈ ಕವಿತೆ ನಿರೂಪಿಸುತ್ತದೆ. ಅದರಲ್ಲೂ ‘ಒಳ್ಳೊಳ್ಳೆ ಮೀನು ಗರಿಗೆದರಿ ಆಡ್ಯಾವ ಗರತಿ ಗಂಗವ್ವನ ಉಡಿಯಾಗ’ ಎಂಬ ಮಾತು, ಈ ಚೆಲುವನ್ನು ಕಂಡವಳೂ ಒಬ್ಬಳು ತಾಯಿ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಬೆಳಗಾಗ ತಿಳಿ ನೀರಿನಲ್ಲಿ ಆಡುವ ಮೀನುಗಳನ್ನು ಕಂಡು ಈ ತಾಯಿಗೆ, ತಾಯಿಯ ಮಡಿಲಲ್ಲಿ, ಮೀನಾಡುವ ಮಕ್ಕಳ ಚಿತ್ರ ನೆನಪಿಗೆ ಬರುತ್ತದೆ. ಬೆಳಗಿನ ಪ್ರಶಾಂತತೆಯನ್ನೂ ಶುಭ್ರತೆಯನ್ನೂ ಈ ಚಿತ್ರ ಧ್ವನಿಸುವುದರ ಜೊತೆಗೆ ತಾಯ್ತನದ ಮಮತೆಯನ್ನೂ ಧ್ವನಿಸುತ್ತದೆ. ಅಷ್ಟೇ ಅಲ್ಲ, ಈ ಕವಿತೆ ಚೆಲುವನ್ನು ಸಾಧಿಸುವ ರೀತಿಯೂ ಇದರಲ್ಲಿ ಸ್ಪಷ್ಟವಾಗುತ್ತದೆ. ಈ ಕವಿಗಳು ಒಂದು ಚೆಲುವಿನ ನೆನಕೆಯಿಂದ ಮತ್ತೊಂದರ ಚೆಲುವನ್ನು ಕಾಣುತ್ತಾರೆ. ‘ತಮ್ಮನ ಹುಬ್ಬನ್ನು’ ‘ಚೆಂದದ ಹುಬ್ಬು’ ಎಂದು ಬಿದಿಗೆಯ ಚಂದ್ರನ ಚೆಲುವನ್ನು ನೆನೆಯುವುದು, ತಾಯಿ ಮಗುವಿನ ಹುಬ್ಬಿನ ಚೆಲುವನ್ನು ಕಾಣುವಾಗ ಬೇವಿನೆಸಳನ್ನು ನೆನೆಯುವುದೂ ಹೇಗೋ ಹಾಗೆ, ಕುಣಿಗಲು ಕೆರೆಯನ್ನು ನೋಡುವಾಗ ’ಭಾವ ತಂದ ಬಣ್ಣದ ಸೀರೆ’ಯನ್ನೂ ಆಡುವ ಮೀನನ್ನು ಕಂಡು ಮಕ್ಕಳಾಟವನ್ನು ನೆನೆಯುವುದೂ ಇಲ್ಲಿನ ಸೌಂದರ‍್ಯ ವ್ಯಾಪಾರದ ಮುಖ್ಯ ಲಕ್ಷಣ. ಮಾನವ ಲೋಕವ್ಯಾಪಾರಗಳ ಸವಿನೆನಹಿನಿಂದ ಪ್ರಕೃತಿ ವ್ಯಾಪಾರವನ್ನು, ಪ್ರಕೃತಿ ವ್ಯಾಪಾರಗಳ ನೆನಕೆಯಿಂದ ಮಾನವ ವ್ಯಾಪಾರವನ್ನು ರಂಜಿಸಿ ಒಂದರ ಚೆಲುವಿನಿಂದ ಮತ್ತೊಂದರ ಚೆಲುವನ್ನು ಅಲಂಕರಿಸಿ ಬೇರೊಂದು ಚೆಲುವನ್ನು ಸೃಜಿಸುವುದು ಈ ಕಲೆಯ ಜೀವಾಳ. ಆದರೆ ಪರಸ್ಪರ ನೆನಕೆಯ ಸಾಮರಸ್ಯದಿಂದ ಮೂಡುವ ಈ ಚೆಲುವು ಕೇವಲ ಇಂದ್ರಿಯಾನುಭವದ ಮಟ್ಟದಲ್ಲೇ ವಿರಮಿಸುವುದಿಲ್ಲ. ತಾಯಿಯ ಕಣ್ಣು ಮಗುವಿನ ಮುಖದ ಚೆಲುವಿನಲ್ಲಿ ಹವಳದ ತುಟಿಯನ್ನೋ ಬೇವಿನೆಸಳನ್ನೋ ಕಾಣುವುದರಲ್ಲಿ ನಿಲ್ಲುವುದಿಲ್ಲ; ಶಿವನ ಕೈ ಅಲಗಿನ ಹೊಳಹನ್ನು ಕಾಣುತ್ತದೆ. ಕುಣಿಗಲು ಕೆರೆಯ ಚೆಲುವು ಮಾನವ ಲೋಕದ ನೆನಪುಗಳನ್ನು ತಂದರೂ ಕಡೆಗೆ ಏರಿರುವ ಮಜಲು ಇದರ ಅಂದ ಶಿವನಿಗೆ ಪ್ರಿಯವಾದುದು ಎಂಬಲ್ಲಿಗೆ. ತಿಳಿ ನೀರಿನಲ್ಲಿ ಆಡುವ ಮೀನು ಮಕ್ಕಳಾಟವನ್ನು ನೆನಪಿಗೆ ತಂದರೂ ಆ ಅನುಭವಕ್ಕೆ ನೀರು ಬರಿಯ ನೀರಲ್ಲ. ಗರತಿ ಗಂಗವ್ವನ ಉಡಿ. ಇವರು ಕಾಣುವ ಎಲ್ಲ ಚೆಲುವೂ ಬಹುವೇಳೆ ಶಿವದ ನೆಲೆಯನ್ನು ತಲುಪುತ್ತದೆ – ಕಡೆಯಲ್ಲಿ. ವ್ಯಕ್ತದ ಚೆಲುವಿನಲ್ಲಿ ಅವ್ಯಕ್ತದ ಹೊಳಹನ್ನು ಬಹು ಸುಲಭವಾಗಿ ಗುರುತಿಸುತ್ತದೆ ಇವರ ಕಣ್ಣು ಸೃಷ್ಟಿಸಮಸ್ತದಲ್ಲೂ ವ್ಯಾಪಿಸಿರುವ, ವ್ಯಕ್ತವಾಗಿರುವ ಪರಾ ಸೌಂದರ‍್ಯದ ಅನುಭವವನ್ನು ಬಣ್ಣಿಸುತ್ತದೆ.

ಹೂವಿನಾಗ ಹುದುಗ್ಯಾನ, ಮಾಲ್ಯಾಗ ಮಲಗ್ಯಾನ |
ಮೊಗ್ಗಾಗಿ ಕಣ್ಣತೆರೆದಾನ | ಲಿಂಗಯನ
ನೋಡಟಿಗೆ ನಿದ್ದಿ ಬಯಲಾಗಿ             (ಗರತಿಯ ಹಾಡು : ಪು.೬)

ಒಂದೇ ಪರಾತ್ಪರ ಶಕ್ತಿ ಹೂವಿನಲ್ಲಿ ಹುದುಗಿ, ಮಾಲೆಯಲ್ಲಿ ಮಲಗಿ, ಮೊಗ್ಗಿನಲ್ಲಿ ಕಣ್ಣ್ಣು ತೆರೆದುದನ್ನು ಕಂಡವರು ಇವರು. ಈಶ್ವರೀ ಶಕ್ತಿಯ ವಿಲಾಸವನ್ನು ಕಂಡು ಇವರ ಲೋಕನಿದ್ರೆ ಬಯಲಾಯಿತಂತೆ. ಬದುಕಿನ ನಿದ್ದೆಯಲ್ಲಿ ಅನುಭಾವದ ಎಚ್ಚರವಾಗಿದೆ. ದೈವೀ ಅನುಭಾವದಿಂದ ಎಚ್ಚರಗೊಂಡ ಇವರ ಕಣ್ಣುಗಳು ಇಂದ್ರಿಯ ಸೌಂದರ‍್ಯದಿಂದ ಆತ್ಮ ಸೌಂದರ‍್ಯದವರೆಗಿನ ಚೆಲುವಿನ ನಿಲುವುಗಳನ್ನು ಗುರುತಿಸಿ ಹಾಡಿರುವುದು ಆಶ್ಚರ‍್ಯವೇನಲ್ಲ.

ಜನಪದಕವಿಗಳ ಸೌಂದರ‍್ಯ ದೃಷ್ಟಿಯ ತಳಹದಿ ಸೃಷ್ಟಿಸಮಸ್ತದೊಂದಿಗೆ ಅವರಿಗಿರುವ ಆತ್ಮೀಯತೆ. ಈ ಆತ್ಮೀಯತೆಯಲ್ಲಿ ಮಾತೃಭಾವವೇ ಸ್ಥಾಯಿ. ಈ ವಾತ್ಸಲ್ಯದ ಕಣ್ಣು ಎಲ್ಲ ವಸ್ತುಗಳ ಮೇಲೂ, ತನ್ನ ಪ್ರೀತಿಯ ಬೆಳಕನ್ನು ಚೆಲ್ಲಿ ಚೆಲುವನ್ನಾಗಿ ಮಾಡಿ ಎತ್ತಿ ಹಿಡಿಯುತ್ತದೆ. ಬದುಕಿನ ಎಲ್ಲಭಾವಗಳನ್ನೂ ಹಾಡನ್ನಾಗಿ ಪರಿವರ‍್ತಿಸುತ್ತದೆ; ಈ ಪರಿವರ್ತನೆಯಲ್ಲಿ ಅನಾಯಾಸವಾಗಿ ದೈನಂದಿನ ಸಾಮಾನ್ಯ ಅನುಭವ ಅಲಂಕರಣವಾಗಿ ಒದಗಿಬರುತ್ತದೆ. ಸಾಮಾನ್ಯದಿಂದ ಅಸಾಮಾನ್ಯದವರೆಗೆ, ಅನುಭವದಿಂದ ಅನುಭಾವದವರೆಗೆ ವ್ಯಾಪ್ತವಾದ ಚೆಲುವನ್ನು ಹಿತವಾಗಿ, ಮಿತವಾಗಿ ಶಕ್ತಿ ಪೂರ್ಣವಾಗಿ ಅಭಿವ್ಯಕ್ತಗೊಳಿಸುವ ಈ ಹಾಡುಗಳು ಬಾಳಿಗೊಂದು ಭರವಸೆಯನ್ನೂ, ಬದುಕಿನ ಬಗೆಗೆ ಒಲವನ್ನೂ ಮೂಡಿಸುತ್ತವೆ. ದಿನದಿನದ ನಮ್ಮ ಬಾಳಿನ ಬೀಸುಗಲ್ಲಿಗೆ ಈ ಹಾಡುಗಳು ಸ್ಫೂರ್ತಿಯಾಗಿ ಬರುತ್ತವೆ; ನಾವು ಎಷ್ಟು ಜೋಳವನ್ನು ಬೇಕಾದರೂ ಬೀಸಿ ಹಾಕಬಹುದು. ಎಷ್ಟು ಜೋಳವನ್ನು ಬೀಸಿದರೂ, ಈ ಹಾಡುಗಳು ಮಾತ್ರ ಚಿರಂತನವಾಗಿ ಉಳಿದಿವೆ; ಉಳಿಯುತ್ತವೆ-

ಆದಾವ ನಮ ಜೋಳ ಉಳಿದಾವ ನಮ ಹಾಡು
ಈಗ ಸಾಕವ್ವ ನಿನ ಕಲ್ಲ | ಕೈಯಾನ
ಹಾಕಿದುಂಗರ ಸವೆದಾವ |                (ಗರತಿಯ ಹಾಡು : ಪು. ೯೦)

* * *


[1] ಮಾಸ್ತಿ ವೆಂಕಟೇಶ ಐಯ್ಯಂಗಾರ್ : ಕರ್ಣಾಟಕ ಜನಪದ ಸಾಹಿತ್ಯ, ಪು. ೫೪