ಮನುಷ್ಯನ ಕ್ರಿಯಾಶೀಲ ಮನಸ್ಸು ಜಡದಿಂದ ಚೈತನ್ಯಕ್ಕೆ ಸಾಗಲು ಪ್ರಯತ್ನಿಸುತ್ತಿರುವುದರಿಂದ ತನ್ನ ಪರಿಸರ ಪ್ರಕೃತಿಯಲ್ಲಿನ ಆ ಅನ್ವೇಷಣೆಗೆ ಆತ ಪಟ್ಟ ಪರಿಶ್ರಮವೇ ಕಲೆಗಳ ಹುಟ್ಟಿಗೆ ಕಾರಣವಾಗಿದೆ. ಬದುಕನ್ನು ಸುಂದರವಾಗಿಸುವತ್ತ, ಸಾರ್ಥಕವಾಗಿಸುವತ್ತ ಸಾಗುವ ಹಂತದಲ್ಲಿ ಉಂಟಾದ ಆಯಾಸ ಆನಂದ ಭಯ ಉತ್ಸಾಹ ಇವುಗಳ ಪ್ರತೀಕವಾಗಿ ಕಾಣಿಸಿಕೊಂಡ ನೂರಾರು ಚಟುವಟಿಕೆಗಳನ್ನು ‘ಕಲೆ’ ಎಂಬ ಪದದ ವ್ಯಾಪ್ತಿಯಲ್ಲಿ ವಿದ್ವಾಂಸರು ಗಮನಿಸುತ್ತಾರೆ. ಇಂಥ ಕಲೆಗಳ ವಿಕಾಸವು ಆಯಾ ಸಂಸ್ಕೃತಿಯನ್ನು ಅಲ್ಲಿಯ ವೈಶಿಷ್ಟ್ಯತೆಯನ್ನು ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಕಲೆಗೆ ಅಭಿವ್ಯಕ್ತಿಯೇ ಧರ್ಮ. ಕಲೆಗಳಲ್ಲಿ ಲಲಿತಕಲೆಯನ್ನು ಶುದ್ಧಕಲೆ ಎಂದೂ, ಕುಶಲಕಲೆಯನ್ನು ಪ್ರಯೋಜಕ ಕಲೆಯೆಂದೂ ಕರೆಯುವ ರೂಢಿಯಿದೆ. ಕಾವ್ಯ, ಸಾಹಿತ್ಯ, ಸಂಗೀತ ಹಾಗೂ ನೃತ್ಯ ಮತ್ತು ಚಿತ್ರ ಕಲೆಗಳು ಭಾವನಿಷ್ಠವೂ ಮನಸ್ಸಿಗೆ ಆನಂದದಾಯಕವೂ ಆಗಿದ್ದು ಅವು ಲಲಿತ ಕಲೆಗಳೆಸಿದರೆ, ಶಿಲ್ಪ ಮೂರ್ತಿಶಿಲ್ಪ ಕಟ್ಟಿಗೆ ಕೆತ್ತನೆ ಮೊದಲಾದ ಕಲೆಗಳು ಶಿಲ್ಪಿ ಕುಂಬಾರ ಕಮ್ಮಾರ ಬಡಿಗ ಅಕ್ಕಸಾಲಿ ಮತ್ತು ಚಮ್ಮಾರರಿಗೆ ವೃತ್ತಿಯೆನಿಸಿ ಕಲಾತ್ಮಕತೆಯನ್ನು ಹಾಗೂ ಪ್ರಯೋಜನಾತ್ಮ ಕತೆಯನ್ನು ಪಡೆದುಕೊಂಡಿರುವುದರಿಂದ ಇವು ಕುಶಲಕಲೆಗಳೆಸಿವೆ. ಕಲಾ ಪ್ರಕಾರಗಳಲ್ಲಿ ಪ್ರಾಚೀನ ಕಾಲದಿಂದಲೂ ಹೆಚ್ಚು ಮನ್ನಣೆಗೆ ಪಾತ್ರವಾದ ಚಿತ್ರಕಲೆಯು ಅರವತ್ನಾಲ್ಕು ಕಲೆಗಳಲ್ಲಿ ಒಂದಾಗಿದೆ. ಚಿತ್ರಕಲೆಯು ಸರ್ವ ಕಲೆಗಳಲ್ಲಿ ಶ್ರೇಷ್ಠವಾದದ್ದೆಂದು ಪರಿಗಣಿತವಾಗಿದ್ದು, ಧರ್ಮ ಅರ್ಥ ಕಾಮಕ್ಕೆ ಸಾಧನವೆಂಬ ನಂಬಿಗೆಯಿದೆ. ಚಿತ್ರಕಲೆಯ ಪರಿಜ್ಞಾನ ವಿಲ್ಲದೇ ಕರಕುಶಲತೆಗಳು ನಿರ್ಮಾಣವಾಗುವುದು ಸಾಧ್ಯವಿಲ್ಲದ ಕಾರಣ ಸಮಸ್ತ ಕಲೆಗಳಿಗೆ ಚಿತ್ರಕಲೆಯೇ ಆಧಾರವಾಗಿದೆ.

ಕಲೆಗಳಲ್ಲಿ ಶಿಷ್ಟಕಲೆ ಮತ್ತು ಜಾನಪದಕಲೆ ಎಂಬುದಾಗಿ ಪರಿಗಣಿಸಲಾಗುತ್ತಿದ್ದು ಇವು ಜನಾಂಗದ ಆತ್ಮನಿವೇದನೆಗಳೆನಿಸಿವೆ. ಚಿತ್ರಕಲೆಯನ್ನು ಶಿಷ್ಟಪದ ಚಿತ್ರಕಲೆ, ಜನಪದ ಚಿತ್ರಕಲೆ ಎಂದು ವರ್ಗೀಕರಿಸಲಾಗಿದೆ. ನಾಗರಿಕ ಜನರ ಲಕ್ಷಣಯುಕ್ತವಾದ ಪ್ರಮಾಣಬದ್ಧವಾದ ಚಿತ್ರಕಲೆಯು ಶಿಷ್ಟಪದ ಚಿತ್ರಕಲೆಯೆನಿಸಿದರೆ, ಗ್ರಾಮೀಣರ ಮನಸ್ಸನ್ನು ಸೆರೆಹಿಡಿದ, ಅವರು ರಚಿಸಿದ ಅಂದ – ಚಂದದ ಚಿತ್ರಕಲೆ, ಲಕ್ಷಣಮುಕ್ತವಾದುದು ಜನಪದ ಚಿತ್ರಕಲೆಯೆನಿಸಿದೆ. ಕಲಾತ್ಮಕ, ಪ್ರಯೋಜನಾತ್ಮಕ ಹಿನ್ನೆಲೆಯ ಜನಪದ ಚಿತ್ರಕಲೆಯು ಜನಪದರ ಸಹಜತೆ, ಮುಗ್ಧತೆಗಳನ್ನು ಪ್ರತಿಬಿಂಬಿಸುವ, ಅವರ ಅನುಭವಗಳಿಗೆ ಮೂರ್ತರೂಪ ಒದಗಿಸುವ, ಅವರ ದುಡಿಮೆಯ ಸಮಯದಲ್ಲಿಯೇ ಸೃಷ್ಟಿಯಾದ ಕಲೆಯಾಗಿದೆ. ನಿಸರ್ಗದ ಮಡಿಲಲ್ಲಿ ಸಹಜ ಬದುಕು ಬಾಳುವವರ ಕಲೆಯು ಧಾರ್ಮಿಕ ಹಿನ್ನೆಲೆಯಲ್ಲಿ ಬೆಳೆದು ಬಂದಂಥದು. ಜನಪದ ಚಿತ್ರಕಲೆಯು ವಿವಿಧ ಮಾಧ್ಯಮಗಳಲ್ಲಿ ವ್ಯಕ್ತವಾಗಿದ್ದು, ನೆಲ ಗೋಡೆ, ಚರ್ಮ, ತಾಳೆಗರಿ, ರಟ್ಟು, ಮೊದಲಾದವುಗಳ ಮಾದ್ಯಮದಂತೆ ಬಟ್ಟೆ ಮತ್ತು ದಾರ ಸಾಧನದ ಚಿತ್ರಕಲೆಯು ವೈಶಿಷ್ಟ್ಯಪೂರ್ಣವಾದುದು.

ಬಟ್ಟೆ ಮಾಧ್ಯಮದಲ್ಲಿ ದಾರ ಸೂಜಿಗಳಿಂದ ನಿರ್ಮಿತವಾದ ಕಲೆ “ಕಸೂತಿ”ಯೆನ್ನಿಸಿದೆ. ಹೊಲಿಗೆಯ ಮುಂದುವರಿಕೆಯಾದ ಹೆಣಿಗೆಯಿಂದ ಅಲಂಕೃತಗೊಂಡ ಬಟ್ಟೆಗಳು ಕಸೂತಿಯಲ್ಲಿ ಬರುತ್ತವೆ. ಕೈಕಸೂತಿಯು ಜನಪದ ಮಾದರಿಯದಾದರೆ ಯಂತ್ರ ಕಸೂತಿ ನಾಗರಿಕ ಮಾದರಿಯದಾಗಿದೆ. ಬಟ್ಟೆಯ ಮೇಲೆ ವಿವಿಧ ವಿನ್ಯಾಸಗಳನ್ನು ಬಣ್ಣ ಬಣ್ಣದ ದಾರದಿಂದಲೂ, ದಾರದಲ್ಲಿಯೇ ಬೇರೆ ಬೇರೆ ವಿನ್ಯಾಸಗಳನ್ನು ಕೊಕ್ಕೆ ಸೂಜಿಯಿಂದಲೂ ಹೆಣೆಯುವುದಕ್ಕೆ ಕೈ ಕಸೂತಿ ಎಂದಿದ್ದರೆ, ಯಂತ್ರದ ಮೂಲಕ ಕಸೂತಿಯನ್ನು ತೆಗೆಯುವುದು ಈಗೀಗ ಹೆಚ್ಚು ಪ್ರಚಲಿತಗೊಂಡಿದೆ. ಪ್ರಾಚೀನಕಾಲದಿಂದಲೂ ಕರ್ನಾಟಕದಲ್ಲಿ ಕಸೂತಿ ಕಲೆಯು ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದು, ವಿಶೇಷವಾಗಿ ಗಾವಂತಿ, ಮುರುಗಿ, ನೇಗಿ, ಮೆಂತ್ಯೆ ಎಂಬ ನಾಜೂಕಿನ ಹೊಲಿಗೆಗಳಿಂದ ರಚನೆಗೊಂಡ, ಜನಪದರ ಪ್ರತಿಭೆ – ಶ್ರದ್ಧೆಗಳಿಗೆ ಸಾಕ್ಷಿಯಾಗಿ ಇಂದಿಗೂ ಪ್ರತಿಷ್ಠೆಯ ಸಂಕೇತವಾಗಿ ಉಳಿದುಕೊಂಡಿರುವ ಈ ಕಲೆಯ ಅಭ್ಯಾಸವನ್ನು ಇಲ್ಲಿ ಒಟ್ಟು ಹನ್ನೆರಡು ವಿಭಾಗಗಳಲ್ಲಿ ಸ್ಥೂಲವಾಗಿ ನಡೆಸಲಾಗಿದೆ. ಅದರ ಸ್ವರೂಪವನ್ನು ಹೀಗೆ ಗುರುತಿಸಬಹುದಾಗಿದೆ. (ಇದಕ್ಕೆ ಡಾ. ಎಸ್‌.ಸಿ. ಪಾಟೀಲರ “ಕರ್ನಾಟಕದ ಜನಪದ ಚಿತ್ರಕಲೆ” ಈ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡಿದ್ದೇನೆ.)

 ಕೊನೆಯಲ್ಲಿ ಕಸೂತಿ ಕಲೆಯ ವೈಶಿಷ್ಟ್ಯ, ಅಸ್ತಿತ್ವ, ಸಹಾಯಕ ಗ್ರಂಥಗಳು ಹೀಗೆ ಜನಪದ ಕಲೆ ಕಸೂತಿ ಬಗೆಗಿನ ವಿವರಗಳನ್ನು ಸಂಗ್ರಹಿಸಲಾಗಿದೆ.

ಕರ್ನಾಟಕ ಕಸೂತಿ ಉಪಯುಕ್ತ, ಗ್ರಾಮೀಣ ಕಲೆಯ ಅಧ್ಯಯನವು ಧಾರವಾಡದ ಸುತ್ತಮುತ್ತ ನಡೆಸಲಾದ ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ರೂಪಿತಗೊಂಡದೆ. ಅಲ್ಲಿಯ ಮಹಿಳೆಯರ ನಂಬಿಕೆಗಳು ಅವರ ಧಾರ್ಮಿಕ, ಸಾಮಾಜಿಕ, ಮಾನಸಿಕ ಭಾವನೆಗಳು ಒಟ್ಟು ಸ್ತ್ರೀ ಜೀವನಚಿತ್ರ ಅವರ ಮನೋಭಿಲಾಷೆಗಳು ಇಲ್ಲಿ ಪ್ರಕಟಗೊಂಡಿವೆ. ಅವರ ಅಭಿರುಚಿ ಆಸಕ್ತಿಗಳು ಸಮ್ಮಿಲಿತಗೊಂಡಿವೆ. “ಜನಪದಕಲೆ ಕಸೂತಿ”ಯ ಕುರಿತ ಇಲ್ಲಿಯ ಪರಿಚಯಾತ್ಮಕ ವಿವರಗಳು ಕರ್ನಾಟಕ ಸಂಸ್ಕೃತಿ ಅಧ್ಯಯನ ದೃಷ್ಟಿಯಿಂದ ಮಹತ್ವದ್ದೆನಿಸಿವೆ.