ಸಹಸ್ರಾರು ವರ್ಷಗಳ ಸುರ್ದೀರ್ಘ ಹೋರಾಟದ ಫಲವಾಗಿ ಕಾಡುಮಾನವ ನಾಡು ಮಾನವನಾದದ್ದು, ಆ ಬದಲಾವಣೆಯ ಹಾದಿಗುಂಟ ಪರಂಪರಾಗತವಾಗಿ ತನ್ನ ಸಂಸ್ಕೃತಿಯನ್ನು ಹರಿಸುತ್ತಾ ಹೊರಟಿದ್ದು, ತನ್ನ ಮೂಲ ಅಗತ್ಯಗಳನ್ನು ಅನಂತರದ ಅನಿಸಿಕೆಗಳನ್ನು ಪಡೆಯಲು ಪ್ರಯತ್ನಿಸಿದ್ದು, ತನ್ನ ಶ್ರಮ ಹಾಗೂ ಪ್ರತಿಭೆಯ ಫಲವಾಗಿ ಅವುಗಳನ್ನು ಪಡೆದದ್ದು ಎಲ್ಲವೂ ಅಚ್ಚರಿಯ ಸಂಗತಿಗಳು. ನೀರು ಗಾಳಿ ಊಟ ವಸತಿ ಬಟ್ಟೆಗಳಂತಹ ಮೂಲ ಅವಶ್ಯಕತೆಗಳನ್ನು ಭೂತಾಯಿ ಮಡಿಲಿನಿಂದ ಪಡೆದರೆ ಮನಸ್ಸಿನ ಹಸಿವನ್ನು ಸ್ವಪ್ರಯತ್ನದಿಂದ ಆತ ಪೂರೈಸಿಕೊಂಡಿದ್ದಾನೆ. ದೈವದ ಮೇಲಿನ ಭಯ ಭಕ್ತಿಯ ಹಿನ್ನೆಲೆಯಲ್ಲಿ ಸೌಂದರ್ಯದೃಷ್ಟಿಯಂಥ ಒತ್ತಡಗಳ ಕಾರಣವಾಗಿ ಹುಟ್ಟಿಕೊಂಡು ಬಂದಂತಹ ಕಲೆಗಳು ವಿವಿಧ ಮಾಧ್ಯಮಗಳಲ್ಲಿ ಅತ್ಯಂತ ಮಹತ್ವಪೂರ್ಣವೆನಿಸಿವೆ. ಶ್ರಮ ಪರಿಹಾರಕ್ಕಾಗಿ, ವಿರಾಮಕಾಲದ ಪ್ರಯೋಜನಕ್ಕಾಗಿ ಹಲವಾರು ಕಲೆಗಳು ಜನಪದರ ಮಧ್ಯ ತಲೆಯೆತ್ತಿ ಬಂದಿವೆ. ಇವೆಲ್ಲ ಸಂದರ್ಭಗಳಲ್ಲಿ ಅವರ ಸಂಸ್ಕೃತಿ ಹೊರಹೊಮ್ಮಿರುವುದನ್ನು ಕಾಣುತ್ತೇವೆ.

ಮನುಷ್ಯ ತನ್ನ ಕಣ್ಣೆದುರಿಗಿನ ಪ್ರಕೃತಾಂಶಗಳನ್ನ ಕಂಡು ಬೆರಗಾಗಿದ್ದಾನೆ, ಸಂತಸಗೊಂಡಿದ್ದಾನೆ. ಪ್ರಕೃತಿಯ ಬಗೆಗೆ ಆತ ಆಕರ್ಷಿತಗೊಳ್ಳುವ ನೈಸರ್ಗಿಕ ಸ್ವಭಾವದಿಂದ ಅದರೊಂದಿಗೆ ಮಾನವನ ಹೊಂದಾಣಿಕೆ ಏರ್ಪಟ್ಟಿದೆ. ಈ ಸಂಬಂಧದ ದೃಷ್ಟಿಯೇ ಸೌಂದರ್ಯ ದೃಷ್ಟಿ. ಗಿಡ, ಮರ, ಬೆಟ್ಟ, ನದಿ, ಪಶು, ಪಕ್ಷಿಗಳಲ್ಲಿ ದೈವಾಂಶವನ್ನು ಕಾಣುವುದು ಮಾನವನ ಸ್ವಾಭಾವಿಕ ಲಕ್ಷಣವಾಗಿದೆ.

ಅಭಿವ್ಯಕ್ತಿಯೇ ಧರ್ಮವೆನಿಸಿದ ಕಲೆಗೆ, ಅಭಿವ್ಯಕ್ತಿಯ ಬಗೆಗಳು ಹಲವು. ಸಹಜವಾದಷ್ಟು ಸಮರ್ಥವೂ ಆಗಿವೆ. ಧರ್ಮವು ಮಾನವ ಬದುಕನ್ನು ಒಂದು ಸೂತ್ರದಲ್ಲಿ ಬಂಧಿಸಲ್ಪಟ್ಟಿರುತ್ತದೆಯಾದ್ದರಿಂದ ಆ ಪ್ರಜ್ಞೆಯು ಅನೇಕ ಸಂಪ್ರದಾಯಗಳಿಗೆ ಕಾರಣವಾಗಿ ಸಾಹಿತ್ಯ, ಸಂಗೀತ, ಚಿತ್ರಕಲೆ, ಶಿಲ್ಪಕಲೆಗಳು ಹುಟ್ಟಿ ಬೆಳೆದವು.

ಜನಪದ ಕಲೆಯೆಂದರೆ ನಿಸರ್ಗಜನ್ಯ ಕಲೆಯಾಗಿದೆ. ಜನಪದರಲ್ಲಿ ಧಾರ್ಮಿಕ ಹಾಗೂ ಪ್ರಾಕೃತಿಕ ಪ್ರಜ್ಞೆಯು ದಟ್ಟವಾಗಿ ನೆಲೆ ನಿಂತಿರುವುದರಿಂದಲೇ ಆಯಾ ಪ್ರದೇಶದ ಜನಾಂಗವು ತಮ್ಮ ಮತ ಧರ್ಮ ಸಂಪ್ರದಾಯಗಳನ್ನು ಆಧರಿಸಿ, ಭೌಗೋಲಿಕ ಪರಿಸರವನ್ನು ಅವಲಂಬಿಸಿ ಕಲೆಗಳನ್ನು ಸೃಷ್ಟಿಸಿಕೊಂಡಿರುವುದು ಅವರ ನಾಡಿ – ಮಿಡಿತವನ್ನು ಅರ್ಥೈಸಿಕೊಳ್ಳಲು ಇರುವ ಪ್ರಮಾಣವಾಗಿದೆ. ಕನ್ನಡ ನೆಲದಲ್ಲಿ ಜನಪದ ಕಲೆಗಳ ಹೆಜ್ಜೆ ಗುರುತುಗಳು ಹಲವಾರು ಇರುವುದರಿಂದ ಅವುಗಳ ಅಭ್ಯಾಸವೆಂದರೆ ಕನ್ನಡ ನಾಡಿನ ಸಂಸ್ಕೃತಿಯ ಅಭ್ಯಾಸವೇ ಆಗಿದೆ. ಜನಪದ ಚಿತ್ರಕಲೆಯ ಒಂದು ಅಂಗವಾಗಿ ಕಸೂತಿ ಕಲೆಯು ವೈಶಿಷ್ಟ್ಯಪೂರ್ಣವಾಗಿದೆ.

ನಿಸರ್ಗದ ಒಡಲಲ್ಲಿ ಕಾಣುವ ವಸ್ತು ವೈವಿಧ್ಯಗಳ ಪ್ರೇರಣೆಯು ಮೂರ್ತರೂಪಕ್ಕೆ ತಿರುಗಿದುದು ಜನಪದ ಚಿತ್ರಕಲೆಗೆ ಕಾರಣವಾಗಿದೆ. ಜನಪದರು ಬದುಕಿಗಾಗಿ ಪಟ್ಟ ಪಾಡೇ ಕಲೆಯಾಗಿದೆ. ಅವರು ದುಡಿಯುವ ಸಮಯದಲ್ಲಿಯೇ, ಶ್ರಮ ಪರಿಹಾರಕ್ಕಾಗಿ ವಿರಮಿಸುವಾಗಲೋ, ಹಲವಾರು ಕಲೆಗಳು ಅವರ ಮಧ್ಯೆ ತಲಿಯೆತ್ತಿ ಬಂದಿವೆ. ತಾವು ಪಡೆದ ಅನುಭವಗಳು ಅವರ ಚಿತ್ರದ ಸರಳವೋ ಅಥವಾ ಅಂಕುಡೊಂಕಾದ ರೇಖೆಗಳ ಮೂಲಕ ವಿವಿಧ ಮಾಧ್ಯಮಗಳಲ್ಲಿ ವ್ಯಕ್ತಗೊಂಡಿವೆ. ಅವರ ಅನಿಸಿಕೆಗಳು ಕೆಂಪು, ಹಳದಿ, ಹಸಿರು ಮೊದಲಾದ ದಟ್ಟ ಬಣ್ಣಗಳಲ್ಲಿ ಹೊರಹೊಮ್ಮಿದೆ. ಆದ್ದರಿಂದ ಬದುಕಿನ ಎಲ್ಲ ರಂಗಗಳ ವಿವಿಧಾಂಗಗಳೇ ಜನಪದ ಚಿತ್ರಕಲೆಯ ಮುಖ್ಯ ಲಕ್ಷಣವೆನಿಸಿವೆ.

ಸಂಪ್ರದಾಯನಿಷ್ಠವಾಗಿರುವ ಜನಪದ ಚಿತ್ರಕಲೆಯಲ್ಲಿ ಮಹಿಳೆಯರದು ಸಿಂಹಪಾಲು. ರೇಖಾವಿನ್ಯಾಸಗಳು, ಬಣ್ಣಗಾರಿಕೆಯ ಪ್ರಖರತೆ, ವಸ್ತುವಿನ ಆಯ್ಕೆ ಜನಪದೀಯ ರೀತಿಯದು. ಬದುಕಿನ ಕ್ರಿಯೆಗಳು ಬಣ್ಣದಲ್ಲಿ ಮೂಡಿರುತ್ತವೆ. ಜನಪದ ಚಿತ್ರಕಲೆಯನ್ನು ಸೌಂದರ್ಯ ಮೂಲ, ಧರ್ಮಮೂಲ ಹಾಗೂ ವೃತ್ತಿಮೂಲವೆಂದು ವಿಂಗಡಿಸಲಾಗಿದೆ.

ಪ್ರಮುಖವಾಗಿ ಸೌಂದರ್ಯ್ಯಪ್ರಜ್ಞೆಯಿಂದ ಪರಿಗಣಿಸಲಾದ ಜನಪದ ಚಿತ್ರಕಲೆಯನ್ನು ಪ್ರಯೋಜನಮೂಲ ಮತ್ತು ಮನರಂಜನ ಮೂಲವೆಂದು ವಿದ್ವಾಂಸರು ವಿಭಾಗಿಸುತ್ತಾರೆ. ಮನಸ್ಸಿನ ವಿಕಾಸವೆಂದರೆ ಬದುಕಿನ ವಿಕಾಸ. ಮನಸ್ಸಿಗೆ ಮೆಚ್ಚುಗೆಯಾಗುವ ವಿವಿಧ ವಿನ್ಯಾಸಗಳನ್ನು ಜನಪದರು ತಮ್ಮದಾಗಿಸಿಕೊಂಡರು. ಹೀಗೆ ಮಾನವನು ನಿರಂತರ ಹೋರಾಟ ಮಾಡುತ್ತಲೇ ಬಾಳುವಾಗ ಜೊತೆ ಜೊತೆಯಲ್ಲಿ ಕಲಾತ್ಮಕ ಅಂಶಗಳ ಸಂಯೋಜನೆಯನ್ನು ರೂಪಿಸಿಕೊಂಡ ಪರಿಣಾಮವಾಗಿ ಅವರು ತೊಟ್ಟುಕೊಳ್ಳುವ ಬಟ್ಟೆ ಹಾಸಿಗೆ ಹೊದಿಕೆಗಳು ನೆಲ ಗೋಡೆ ಅಲ್ಲದೇ ದೇಹದ ವಿವಿಧ ಭಾಗಗಳಲ್ಲಿ ತಮ್ಮ ಅನುಭವಕ್ಕೆ ತಕ್ಕಂತೆ ಚಿತ್ರಾಲಂಕಾರವನ್ನು ಸೃಜಿಸಿಕೊಂಡರು. ಸೌಂದರ್ಯ್ಯಪ್ರಜ್ಞೆಯ ಚಿತ್ರಕಲೆಯು ಧಾರ್ಮಿಕ ಹಿನ್ನೆಲೆ ಮತ್ತು ಪ್ರಯೋಜನಮೂಲವನ್ನು ಹೊಂದಿದುದಾಗಿದೆ. ತಮ್ಮ ಉಡುಪುಗಳು ದೇಹ, ಮನೆಯ ನೆಲ, ಗೋಡೆ ಇವುಗಳು ಸುಂದರವಾಗಿ ಆಕರ್ಷಕವಾಗಿ ಕಾಣುವಂತೆ ಮಾಡುವುದು ಅವರ ಬಯಕೆಯಾಗಿತ್ತು. ಈ ಬಗೆಯ ಚಿತ್ರಕಲೆಯಲ್ಲಿ ಗೃಹಲಂಕರಣ ಚಿತ್ರ ವಿನ್ಯಾಸಗಳು, ನೆಲ ಗೋಡೆಯ ಮೇಲಿನ ಚಿತ್ರ ವಿನ್ಯಾಸಗಳು, ಚರ್ಮದ ಮೇಲಿನ ಚಿತ್ರ ವಿನ್ಯಾಸಗಳು,ತಾಳೆಗರಿ ಕಾಗದ ಕಡತ ರಟ್ಟಿನ ಮೇಲಿನ ಚಿತ್ರ ವಿನ್ಯಾಸಗಳು, ಬಟ್ಟೆ ದಾರ ಸಾಧನದ ಚಿತ್ರ ವಿನ್ಯಾಸಗಳು ಹಾಗೂ ಇತರ ಸಾಧನದ ಚಿತ್ರ ವಿನ್ಯಾಸಗಳೆಂದು ಗುರುತಿಸಬಹುದಾಗಿದೆ.