ನೆಲ, ಗೋಡೆ, ಚರ್ಮ ಮೊದಲಾದ ಮಾಧ್ಯಮದಲ್ಲಿ ಜನಪದ ಚಿತ್ರಕಲೆ ಪ್ರವೇಶ ಪಡೆದಂತೆ ಬಟ್ಟೆ ಮತ್ತು ದಾರ ಸಾಧನದ ಮೇಲೆಯೂ ಕಾಣಿಸಿಕೊಂಡಿದೆ. ‘ವಸ್ತ್ರಕಲೆಯ ಈ ಒಂದು ಕಲಾತ್ಮಕ ಅಂಗ ಕಸೂತಿ’ ಎನಿಸಿದೆ. ‘ಬಣ್ಣ ಬಣ್ಣದ ದಾರಗಳಿಂದ ಬಟ್ಟೆಯ ಮೇಲೆ ತಮ್ಮ ಭಾವಗಳನ್ನು ಮೂಡಿಸುವ ಕಲೆಯೇ ಕಸೂತಿ’.

ಧರ್ಮಶ್ರದ್ಧೆ, ಪ್ರಕೃತಿಯ ಸ್ಫೂರ್ತಿ, ಮನುಷ್ಯ ಕಲ್ಪನೆಗಳ ಮೂಲಕ ಸೌಂದರ್ಯ ತುಂಬಿರುವ ಕಲೆಯೇ ಕಸೂತಿ ಕಲೆಯೆನಿಸಿದೆ.

ಉಡುಪು ಮತ್ತು ಅಲಂಕರಣದ ಕಲ್ಪನೆ

ಮಾನವನಿಗೆ ಅನಾಗರಿಕ ನಗ್ನಾವಸ್ಥೆಯಿಂದ ಕಾಲಕ್ರಮದಲ್ಲಿ ಮಾನಾಭಿಮಾನದ ಭಾವಗಳು ಕಾಡತೊಡಗಿದಾಗ ಮೈಮೇಲೆ ಹೊದಿಕೆ ಅಥವಾ ಉಡುಪು ಅನಿವಾರ್ಯವಾಯಿತು. ಬೇಟೆ ಸಂಸ್ಕೃತಿಯಲ್ಲಿ ಮಾನವ ತಾನು ಬೇಟೆಯಾಡಿ ತಂದ ಪ್ರಾಣಿ ಮಾಂಸವನ್ನು ಹಸಿವು ನೀಗಿಸಲು ಉಪಯೋಗಿಸಿದರೆ. ಪ್ರಾಣಿ ಚರ್ಮವನ್ನು ದೇಹಕ್ಕೆ ಸುತ್ತಿಕೊಳ್ಳತೊಡಗಿದ. ಮರದ ತೊಗಟೆ ಮತ್ತು ಎಲೆಯಂಥ ವಸ್ತುಗಳನ್ನು ಮಳೆ ಗಾಳಿ ಛಳಿಯಿಂದ ರಕ್ಷಣೆ ಪಡೆಯಲು ಬಳಸಿಕೊಂಡ. ಕೃಷಿ ಸಂಸ್ಕೃತಿಗೆ ಕಾಲಿಟ್ಟಾಗ ನೂಲಿನ ಬಟ್ಟೆಯ ಶೋಧದಿಂದ ಹೆಚ್ಚು ಸಂಸ್ಕೃತಿವಂತನಾಗಿ ಬದುಕ ಹತ್ತಿದ ಮಾನವ ತಾನು ಧರಿಸುವ ಉಡುಪಿನಲ್ಲಿ ವೈವಿಧ್ಯತೆಯನ್ನು ಬಯಸಿದ. ಸೌಂದರ್ಯದೃಷ್ಟಿ ಜಾಗೃತವಾದಂತೆ ತಾನು ಉಡುವ ಉಡುಪು, ಹಾಸು ಹೊದಿಕೆಗಳು ದೇಹ ರಕ್ಷಣೆಗೆ ಮಾತ್ರವಲ್ಲ ಅಲಂಕಾರ ಸಾಧನವೂ ಹೌದು ಎಂಬ ಭಾವನೆ ಮೂಡಿಸುವುದರಿಂದ ಅನಾದಿಕಾಲದಿಂದಲೂ ಆತ ಆ ಭಾವನೆಗಳಿಗೆ ರೂಪಕೊಡಲು ಪ್ರಯತ್ನಿಸಿದ.

ಆದಿ ಮಾನವನಿಗೆ ತನ್ನ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಂಡ ಮುಂದಿನ ಹಂತದಲ್ಲಿಯೇ ತನ್ನ ಇರುವು ಹೆಚ್ಚು ಆಕರ್ಷಕವಾಗಿರಬೇಕು ಎಂಬ ಅಪೇಕ್ಷೆ ಉಂಟಾದುದು ಪ್ರಕೃತಿಯಿಂದಲೇ. ಜಿಂಕೆ ಚಿರತೆ ಹುಲಿಗಳ ಮೈಮೇಲಿನ ಚರ್ಮದ ಸುಂದರ ಹೊದಿಕೆ, ಎಲೆ – ಹೂಗಳ ಬಣ್ಣ ಬೆಡಗಿನ ಆಕರ್ಷಣೆ ತನಗೂ ಬೇಕೆಂದು ಹಂಬಲಿಸಿದ. ಪ್ರಕೃತಿ ಮತ್ತು ವ್ಯಕ್ತಿಯ ದೈನಂದಿನ ಬದುಕು ಕಲೆಗೆ ಆಶ್ರಯಕೊಟ್ಟಿದೆ. ಕಸೂತಿ ಕಲಾಕೃತಿಯು ನಿಸರ್ಗದ ಅನುಕರಣೆಯಾಗಿ, ಕುಶಲ ಕಲೆಯಾಗಿ ಹವ್ಯಾಸವಾಗಿ ಕ್ರಮೇಣ ವೃತ್ತಿಮೂಲವಾಗಿ ಬದುಕನ್ನು ನಡೆಸುವ ಆಧಾರವಾಗಿ ಅಂದಿನಿಂದ ಇಂದಿನವರೆಗೆ ಉಳಿದುಕೊಂಡು ಬಂದಿದೆ.

ವಿವಿಧ ಕಾಲ ದೇಶ ಮತ್ತು ಜನಾಂಗಗಳಲ್ಲಿ

ಕಸೂತಿ ಕಲೆಯು ಮಾನವ ಸಂಸ್ಕೃತಿ ಕಾಲ ಕ್ರಮೇಣ ಹೇಗೆ ರೂಪುಗೊಂಡಿತೆಂಬುದನ್ನು ತೋರಿಸಬಲ್ಲ ವಿಶಿಷ್ಟ ಕಲಾಪ್ರಕಾರವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಕಂಡುಬರುವ ಜನಪ್ರಿಯ ಕಲೆ ಇದಾಗಿದೆ.

ವೇದ ಉಪನಿಷತ್ತುಗಳು ಭಾರತದ ದಾರ್ಶನಿಕ ಭಾವನೆಗಳಿಗೆ ಉಗಮಸ್ಥಾನವಾಗಿದ್ದು ಋಗ್ವೇದದಲ್ಲಿ ಅನೇಕ ವೃತ್ತಿಗಳ ಉಲ್ಲೇಖ ದೊರೆಯುತ್ತದೆ. ಪೂರ್ವ ವೈದಿಕ ಯುಗದಲ್ಲಿ ಬಾಳಿದ ಜನತೆಯ ಸಂಸ್ಕೃತಿ ಉಚ್ಚಮಟ್ಟದ್ದಾಗಿದ್ದು ಶೃಂಗಾರಪ್ರಿಯರಾಗಿದ್ದ ಅವರು ತಮ್ಮ ಉಡುಪುಗಳಿಗೆ ವಿಶೇಷ ಗಮನ ಕೊಡುತ್ತಿದ್ದರು. ಆ ಕಾಲದಲ್ಲಿ ಜಿಂಕೆಚರ್ಮ ಮತ್ತು ಉಣ್ಣೆಗಳಿಂದ ತಯಾರಾಗುತ್ತಿದ್ದ ಉಡುಪುಗಳಿಗೆ ಚಿನ್ನದ ಎಳೆಗಳಿಂದ ಕಸೂತಿ ಮಾಡುತ್ತಿದ್ದರೆಂಬುದಾಗಿ ತಿಳಿದು ಬರುತ್ತದೆ.

ಋಗ್ವೇದದಲ್ಲಿಯ ‘ಹಿರಣ್ಯವೇಶನ್‌’ ಶಬ್ದವನ್ನಾಧರಿಸಿ ಆ ಕಾಲದಲ್ಲಿ ಭಾರತದಲ್ಲಿ ಚಿನ್ನದ ಕಸೂತಿ ಇತ್ತೆಂದು ಹೇಳಲಾಗುತ್ತದೆ.

ಶಿಲಾಯುಗದ ಎಸ್ಕಿಮೋಗಳಲ್ಲಿ, ನಿಯಾಂಡರತಾಲ್‌ ಮನುಷ್ಯನಲ್ಲಿ ‘ಕ್ರೊಮ್ಯಾಗನ್‌’ ಗುಹೆಯ ಮನುಷ್ಯರಲ್ಲಿ, ‘ಡಾರ್ಡಗ್ನೆ’ ‘ತಾಗುಲ್‌ಲೆಂಡಾ’ ಸ್ಪೇನ್‌ಗಳ ಪ್ರಾಚೀನ ಗುಹೆಯ ಚಿತ್ರಗಳಲ್ಲಿ ಕಸೂತಿಯಂತಹ ಚಿತ್ರಗಳ ಮಾದರಿಗಳಿರುವುದನ್ನು ಗುರುತಿಸಲಾಗಿದೆ. ಈಜಿಪ್ತದ ದೇವತೆ ಹಾಗೂ ವೀರಯೋಧನ ಶಿಲ್ಪಗಳ ಉಡುಪುಗಳನ್ನು ಕಸೂತಿಯಿಂದ ಅಲಂಕರಿಸುತ್ತಿದ್ದುದು ಗೊತ್ತಾಗುತ್ತದೆ. (ಕನ್ನಡ ವಿಶ್ವಕೋಶ ಸಂ.೫ ಪು. ೩೨೩).

ಮೊಹಂಜೋದಾರೋದ ಕಂಚಿನ ಸೂಜಿಗಳನ್ನು ಬಹುತೇಕವಾಗಿ ಕಸೂತಿಗಾಗಿಯೇ ಬಳಸುತ್ತಿದ್ದಿರಬಹುದು. ಸಿಂಧುನದಿ ಹಾಗೂ ತತ್ಕಾಲೀನ ನಾಗರಿಕತೆಗಳ ಶೋಧನೆಯಲ್ಲಿ ಸಿಕ್ಕಿರುವ ಅನೇಕ ಉಡುಪುಗಳಲ್ಲಿ ಉತ್ಕೃಷ್ಟವಾದ ಕಸೂತಿ ನಮೂನೆಗಳು ಇದ್ದಿರುವುದಾಗಿ ತಿಳಿದುಬರುತ್ತದೆ.

ಮಗಧರ ಕಾಲದಲ್ಲಿ ರೇಶ್ಮೆ ಮಸ್ಲಿನ್‌ ಕಸೂತಿಬಟ್ಟೆ ಪ್ರಮುಖ ವಸ್ತುಗಳಾಗಿದ್ದವು. ಪ್ರಪಂಚದ ಅನೇಕ ನಾಗರಿಕತೆಗಳಲ್ಲಿ ಕಸೂತಿಕಲೆಯ ಉತ್ತಮ ನಮೂನೆಗಳು ದೊರೆಯುತ್ತವೆ. ಈಚಿಪ್ತಿನಲ್ಲಿ ರಥದ ಮೇಲಿನ ಹೊದಿಕೆಗಳು ಗುಡಾರಗಳು ಇತರ ಬಟ್ಟೆಗಳ ಮೇಲೆ ಕಸೂತಿಯ ಚಿತ್ರಗಳನ್ನು ಬಿಡಿಸಲಾಗುತ್ತಿದ್ದುದು ಸಮಾಧಿಗಳ ಮೇಲಿನ ಚಿತ್ರಗಳಿಂದ ತಿಳಿದು ಬರುತ್ತದೆ. ವಿದೇಶಿಯರ ಉಡುಗೆ ತೊಡುಗೆಗಳ ಮೇಲೂ ಕಸೂತಿ ಚಿತ್ರಗಳಿರುವುದರಿಂದ ಕಸೂತಿಕಲೆ ತತ್ಕಾಲೀನ ನಾಗರಿಕತೆಗಳಲ್ಲಿ ಇತ್ತೆಂಬುದು ಸ್ಪಷ್ಟವಾಗುತ್ತದೆ.

ಕ್ರಿ.ಪೂ. ಸನ್‌ ೧೦೦೦ದ ಹೊತ್ತಿಗೆ ಚೀನಾದಲ್ಲಿ ಕಸೂತಿ ಇದ್ದುದರ ಕುರುಹುಗಳು ದೊರೆಯುತ್ತವೆ. “ಚೀನಾಂಬರ” ಭಾರತ ಮೊದಲಾದ ದೇಶಗಳಲ್ಲಿ ಖ್ಯಾತಿ ಪಡೆದಿತ್ತು. ಅಲ್ಟ್ರಾಯ್‌ ಪರ್ವತ ಪ್ರದೇಶದಲ್ಲಿ ಮಂಗೋಲಿಯನ್ನರು ಉಪಯೋಗಿಸುತ್ತಿದ್ದ ಸೆಥ್ವಿಯನ್‌ ಮಾದರಿಯ ಉಣ್ಣೆಯ ನಿಲುವಂಗಿಗಳು ದೊರೆತಿದ್ದು, ಸ್ತ್ರೀಯರ ಉಡುಪು ಹಾಗೂ ಚೀಲಗಳ ಮೇಲೆ ಸುಂದರವಾದ ಕಸೂತಿ ಬಿಡಿಸಲಾಗಿದೆ. ಸುಮಾರು ೬ನೆಯ ಶತಮಾನದಲ್ಲಿ ಅನೇಕ ಕ್ರೈಸ್ತಚಿಹ್ನೆಗಳನ್ನು ನಿಲುವಂಗಿಗಳ ಮೇಲೆ ಕಾಣಲಾಗುತ್ತದೆ.

ನೇಪಾಳದಲ್ಲಿ ಬೆಲೆಯುಳ್ಳ ಹಸ್ತಪ್ರತಿಗಳ ಕಟ್ಟುಗಳನ್ನು ಕಸೂತಿ ಮಾಡಿದ ವಸ್ತ್ರಗಳಲ್ಲಿ ಸುತ್ತಿಡಲಾಗುತ್ತಿದ್ದ ವಿಚಾರ ತಿಳಿದುಬರುತ್ತದೆ.

ಕ್ರಿ.ಪೂ. ೬ನೇ ಶತಮಾನದ ಭಾರತದ ವಾಣಿಜ್ಯ ವಸ್ತುಗಳಲ್ಲಿ ಕಸೂತಿ ಮಾಡಿದ ರೇಶ್ಮೆ ಮತ್ತು ಹತ್ತಿ ಬಟ್ಟೆಗಳ ಪ್ರಸ್ತಾಪವಿದೆ. ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರಾದ ಮೆಗಾಸ್ತನೀಸ್‌, ಹೊಯೆನ್‌ತ್ಸಾಂಗ್‌, ನಿಕೋಲೋ, ಮರ್ಕೋಪೋಲೋ ಪ್ರವಾಸಕಥನಗಳಲ್ಲಿ ಭಾರತದಲ್ಲಿ ಕಸೂತಿಯಲ್ಲಿ ಚಿನ್ನದ ಎಳೆ ಹಾಗೂ ರತ್ನಗಳನ್ನು ಉಪಯೋಗಿಸುತ್ತಿದ್ದು, ಅವು ವಿದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದವೆಂದೂ ಹೀಗೆ ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕಸೂತಿಕಲೆ ಪ್ರಚಲಿತವಿದ್ದ ಬಗ್ಗೆ ಪ್ರಸ್ತಾಪವಿದೆ.

ಮೊಘಲ್‌ ಆಳ್ವಿಕೆಯಲ್ಲಿ ಕಸೂತಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಗಿದ್ದು ನಂತರ ಭಾರತೀಯ ಮುಸ್ಲಿಂ ಮತ್ತು ಹಿಂದೂ ಅರಸರು ಈ ಕಲೆಗೆ ಪ್ರಾಧಾನ್ಯ ನೀಡಿದರು.

ಭಾರತದಲ್ಲಿ ಕಸೂತಿ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸಗೊಂಡಿದ್ದು ದಕ್ಷಿಣಕ್ಕಿಂತ ಉತ್ತರ ಭಾಗದಲ್ಲಿ ಹೆಚ್ಚು ಅಸ್ಪದವಿದೆ. “ಝಿರ್ದೊಂಶಿ’ ಮತ್ತು ‘ಶಿಲ್ಮಾಶಿತಾರಾ’ ಎಂಬ ಕಸೂತಿಯನ್ನು ಪುರುಷರೇ ಬೆಳೆಸುತ್ತಾ ಬಂದಿದ್ದಾರೆ. ೧೭ ಮತ್ತು ೧೮ ನೇ ಶತಮಾನಗಳಲ್ಲಿ ‘ಕಸೂತಿ’ ಹಾಕಿದ ಉತ್ತಮ ವಸ್ತುಗಳು ಭಾರತದಿಂದ ವಿದೇಶಗಳಿಗೆ ರಫ್ತಾಗುತ್ತಿದ್ದವು. ಭಾರತದ ಕಸೂತಿ ಕಲೆಯ ಮೇಲೆ ವಿದೇಶಿಯರ ಪ್ರಭಾವವೂ ಇದೆ. ಕಾಶ್ಮೀರದ ಕಸೂತಿಯು ಟಿಬೇಟಿನ ಮೂಲಕ ಚೀನಾದ ಕಸೂತಿಯಿಂದ ಪ್ರಭಾವಿತಗೊಂಡಿದ್ದು ಪಂಜಾಬಿನ ಹೂ ಕಸೂತಿಯ ಮೇಲೆ ಬಲೂಚಿಸ್ಥಾನದ ಕಸೂತಿಯ ಶೈಲಿಗಳು ಸ್ಪೇನ್‌ ಜರ್ಮನಿಗಳಿಂದ ಪ್ರಭಾವಿತಗೊಂಡಿವೆ.

ಈ ಎಲ್ಲಾ ಶೈಲಿಗಳನ್ನು ಮೈಗೂಡಿಸಿಕೊಂಡು ಭಾರತವು ತನ್ನ ವಿಶಿಷ್ಟ ಶೈಲಿಯನ್ನು ಮೆರೆದಿದೆ. ಮಣಿಪುರದ ಸ್ತ್ರೀಯರು ಹಾಕುವ ರೇಶ್ಮೆ ಹೊಲಿಗೆಯ ಕಸೂತಿ ವಿಶಿಷ್ಟವಾದುದು. ಬನಾರಸದ ಕಲಾಬತ್ತಿನ ಕಸೂತಿಯ ಸೀರೆಗಳು ಭಾತತೀಯ ಮಹಿಳೆಯ ಕಲಾಭಿರುಚಿಗೆ ಸಾಕ್ಷಿಯಾಗಿದೆ.

ಕಸೂತಿಗೆ ಭಾರತದ ಎಲ್ಲಾ ರಾಜ್ಯಗಳಲ್ಲಿ ತನ್ನದೇ ಆದ ಪ್ರಾದೇಶಿಕ ವೈಶಿಷ್ಟ್ಯ ಹಾಗೂ ಹೆಸರುಗಳಿವೆ.

ಕಾಶ್ಮೀರ – ಕಸೀದಾ, ಉತ್ತರ ಪ್ರದೇಶ – ಚಿಕನ್‌, ಮಣಿಪುರ – ಪಾನೈಕ, ಪಂಜಾಬ್‌ – ಪೂಲ್ಕರಿ, ಗುಜರಾತ – ಕಥಿ,ರಾಜಸ್ಥಾನ – ಪಿಚವಾಯಿ, ಬಂಗಾಲ – ಕಂಥೆ, ಬಿಹಾರ – ಕಸಿಧಾ, ಒರಿಸ್ಸಾ – ಅಪ್ಲಿಕ್‌ ಹಿಮಾಚಲ್‌ ಪ್ರದೇಶ – ಛಂಬಾ, ಸಿಂಧಪ್ರಾಂತ – ಕಚ್, ಲಖನೌ – ಚಿಕನ್‌ಕಾಲಿ, ಮಹಾರಾಷ್ಟ್ರ – ಕಶಿದಾ, ಕಸುದಾ, ಪರ್ಶಿಯನ್‌ ಮತ್ತು ಹಿಂದಿ – ಕಶೀದಹ ಹಾಗೂ ಕರ್ನಾಟಕದಲ್ಲಿ ಕರ್ನಾಟಕ ಕಸೂತಿ ಎಂಬುದಾಗಿ ಕರೆಯಲಾಗುತ್ತದೆ.

ನಾಗರಿಕತೆಯ ಸೌಲಭ್ಯಗಳಿಂದ ದೂರವಾಗಿ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿರುವ ಜನರ ರೀತಿ – ನೀತಿ, ಉಡುಗೆ – ತೊಡುಗೆ ನಂಬಿಕೆ – ಸಂಪ್ರದಾಯಗಳು ಆದಿ ಮಾನವರನ್ನು ಹೋಲುತ್ತವೆ. ಅವರ ಉಡುಪು ವೈವಿಧ್ಯಮಯವಾಗಿದ್ದು ಅವರ ಅಲಂಕಾರಪ್ರಿಯತೆಯನ್ನು ತೋರಿಸುತ್ತದೆ. ತೊದವ ಹೆಣ್ಣು ಮಕ್ಕಳು ಮನೆಯಲ್ಲಿರುವಾಗ ಅತಿ ಕಡಿಮೆ ಉಡುಪು ಧರಿಸುತ್ತಿದ್ದು ಯಾರಾದರೂ ಒಳಗೆ ಬರುವ ಸೂಚನೆಗೆ ಹೊರಗಡೆ ದೊಣ್ಣೆಯನ್ನು ನಿಲ್ಲಿಸಿರುತ್ತಾರೆ. ಬಂದವರು ಅದನ್ನು ಬಡಿದರೆ ಗಂಡಸರು ಬಂದರೆಂದೇ ಭಾವಿಸಿ ಮೈತುಂಬಾ ದುಪ್ಪಟಿ ಹೊದ್ದುಕೊಳ್ಳುವರು. ಈ ಉಡುಪಿಗೆ ಕೆಂಪು, ನೀಲಿ ಅಥವಾ ಕಪ್ಪು ಬಣ್ಣಗಳ ಪಟ್ಟಿಗಳಿರುತ್ತವೆ. ಈ ಪಟ್ಟಿಗಳನ್ನು ಕಸೂತಿಯಿಂದ ಹಾಕಿರುತ್ತಾರೆ ಎನ್ನಲಾಗಿದೆ.

ಕೆಲ ವರ್ಷಗಳ ಹಿಂದೆ ಕರ್ನಾಟಕಕ್ಕೆ ಬಂದು ನೆಲೆಸಿದ ಟಿಬೇಟಿಯನ್ನರು ಉಲ್ಲನ್ನಿನಿಂದ ಕಸೂತಿ ಹಾಕಿದ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವುದನ್ನು ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ.

ಹಿಮಾಲಯದ ಮಡಿಲಲ್ಲಿ ವಿಶಿಷ್ಟ ಬುಡಕಟ್ಟು ಜನಾಂಗ ಕಿನ್ನರರು (ಪಾಂಡವರ ನಾಡು ಕಿನ್ನಾರು) ಆರ್ಯರು ಭರತ ಖಂಡಕ್ಕೆ ಬರುವ ಪೂರ್ವದಲ್ಲಿಯೇ ಇದ್ದ ಒಂದು ಜನಾಂಗವೆಂದು ಇತಿಹಾಸಕಾರರ ಮತ, ಸಂಸ್ಕೃತ ಸಾಹಿತ್ಯದಲ್ಲಿ ಈ ಜನಾಂಗದ ಉಲ್ಲೇಖವಿದೆ ಎನ್ನಲಾಗಿದೆ. ಈ ಕಿನ್ನಾರ ಜನಾಂಗವು ಉಣ್ಣೆಯಿಂದ ವಿವಿಧ ವಿನ್ಯಾಸಗಳ ಉಡುಪುಗಳನ್ನು ತಯಾರಿಸುವುದು ಅವರ ಪ್ರಮುಖ ಕರಕುಶಲ ಕಲೆಯಾಗಿದೆ. ಉಣ್ಣೆಯಿಂದ ಅವರು ತಯಾರಿಸುವ ಉಡುಪುಗಳಲ್ಲಿ ಮುಖ್ಯವಾಗಿ ಕಸೂತಿ ಹಾಕಿದ ಜಮಖಾನೆಗಳು ಹಾಸಿಗೆಗೆ ಹಾಕುವ ಮತ್ತು ಹೊದೆಯುವ ಅರಿವೆಗಳು ಪ್ರಮುಖವಾದವುಗಳು (ಸಂಯುಕ್ತ ಕರ್ನಾಟಕ ದಿ.೨೦.೩.೯೪ ಮಧುರ)

ಕನ್ನಡ ನಾಡಿನ ಬುಡಕಟ್ಟು ಜನರಾದ ಲಂಬಾಣಿಗರು ರಂಗು ರಂಗಿನ ಉಡುಪುಗಳನ್ನು ಧರಿಸುತ್ತಾರೆ. ವಿವಿಧ ಚಿತ್ತಾರಗಳಿಂದ ಕಸೂತಿ ಹಾಕಿದ ಲಂಗ (ಷೇಟೆಯಾ) ಧರಿಸುತ್ತಾರೆ. ಕಾಜಿನ ಬಿಲ್ಲೆಗಳನ್ನು ಕೂಡಿಸಿ ಕಟೇರಿಯಾ, ನಾಯಿ ಉಗುರು, ಖಿಲಣ, ಚಿಣಗಿ ಹೀಗೆ ವಿವಿಧ ಮಾದರಿಯ ಕಸೂತಿ ತೆಗೆದಿರುತ್ತಾರೆ. ಅಲ್ಲಲ್ಲಿ ಕನ್ನಡಿಯ ಚೂರುಗಳನ್ನು ಇಟ್ಟು ಮಾಡಿರುವ ಕಸೂತಿ ಹಾಕಿದ ರವಿಕೆ (ಕಾಂಚಳಿ)ಯು ಎದೆಯ ಭಾಗ ಮುಚ್ಚುವಂತಿರುತ್ತದೆ. ತಲೆಯ ಮೇಲೆ ಹೊದ್ದುಕೊಳ್ಳುವ ಛಾಟಿಯಾ(ಮೇಲು ಹೊದಿಕೆ)ದ ಮುಂಭಾಗದಲ್ಲಿ ಕಿರುಗೆಜ್ಜೆಗಳನ್ನು ಅಳವಡಿಸಿ ಕಾಜಿನ ಬಿಲ್ಲೆಗಳ ಸುತ್ತ ವಿವಿಧ ಬಣ್ಣದ ದಾರಗಳಿಂದ ಕಸೂತಿ ಹಾಕಿರುತ್ತಾರೆ. ಮದುವೆಯ ಸಂದರ್ಭದ ಕೆಲ ವಸ್ತುಗಳಲ್ಲಿ೮ ಗಂಡು ಹಾಕಿಕೊಳ್ಳುವ ಬಟ್ಟೆಗಳೂ ಕಸೂತಿಯಿಂದ ಅಲಂಕೃತಗೊ ಂಡಿರುತ್ತವೆ. “ಕೋತಳಿ’ ಒಂದು ಮೊಳ ಅಗಲದ ಬಟ್ಟೆ ಹಾಕುವ ಚೀಲವನ್ನು ಕರಿ, ಕೆಂಪು ಬಟ್ಟೆಗಳಿಂದ ಹೊಲಿದು ಅದಕ್ಕೆ ಅಂದವಾದ ಕಸೂತಿ ಹಾಕಿ ತಯಾರಿಸುತ್ತಾರೆ. ಲಂಬಾಣಿಗರ ಬದುಕೇ ಕಸೂತಿ. ಕೆಂಪು ಬಣ್ಣದ ಬಟ್ಟೆ ಇವರ ಪ್ರಾಣ, ಸೂಜಿಯು ಲಂಬಾಣಿ ಹೆಂಗಸರ ಒಡನಾಡಿ. ಸಮಯ ಸಿಕ್ಕಾಗಲೆಲ್ಲಾ ಕಸೂತಿಯಲ್ಲಿ ತಮ್ಮ ಕಲೆಯನ್ನು ಮೂಡಿಸುವ ಲಂಬಾಣಿ ಹೆಂಗಳೆಯರಿಗೆ ಇದು ವಂಶಪಾರಂಪರ್ಯದಿಂದ ಬಂದ ಕಲೆಯಾಗಿದೆ.