ಸಾಮಾನ್ಯವಾಗಿ ಕಸೂತಿ ಮತ್ತು ಹೆಣಿಗೆ (ಹೆಣಿಕೆ)ಯನ್ನು ಒಂದೇ ಅರ್ಥದಲ್ಲಿ ಹೇಳಲಾಗುತ್ತಿದೆ. ಕಸೂತಿ ಅಥವಾ ಹೆಣಿಗೆ ಹಾಕುವ ವಿಧಾನದಲ್ಲಿ ಎರಡು ಪ್ರಕಾರಗಳನ್ನು ಗುರುತಿಸಲಾಗುತ್ತಿದ್ದು, ಕೈಕಸೂತಿಯು ಜಾನಪದ ಮಾದರಿಯದಾದರೆ, ಯಂತ್ರದ ಕಸೂತಿಯು ನಾಗರಿಕ ಮಾದರಿಯದಾಗಿದೆ.

ಹೊಲಿಗೆ ಕಲೆಯ ಮುಂದುವರಿಕೆ ಹೆಣಿಗೆಯೆನಿಸಿದೆ. ಹೆಣಿಕೆಯಿಂದ ಅಲಂಕಾರಗೊಂಡ ಬಟ್ಟೆಗಳು ಕಸೂತಿ ಕಲೆಯಲ್ಲಿ ಬರುತ್ತವೆ. ಬಟ್ಟೆಯನ್ನು ಮಡಿಚಿ ಅಥವಾ ತುಂಡು ಬಟ್ಟೆಗಳನ್ನು ಜೋಡಿಸಲು (ಕೌದಿ), ಹೊಲಿದ ಬಟ್ಟೆಯ ಮೇಲೆ ಬಣ್ಣದ ದಾರದಿಂದ ಹಲವು ವಿನ್ಯಾಸಗಳನ್ನು ಹೆಣೆಯಲು ವಿವಿಧ ಹೊಲಿಗೆಗಳನ್ನು ಬಳಸಲಾಗುತ್ತದೆ. ಹೊಲಿಗೆಯಲ್ಲಿ, ಹೆಣಿಕೆಯಲ್ಲಿ ಹಾಗೂ ಕಸೂತಿಯಲ್ಲಿ ಬಟ್ಟೆ, ದಾರ, ಸೂಜಿಯ ಉಪಯೋಗ ಮುಖ್ಯವಾಗುತ್ತದೆ. ಸೂತಿ ಎಂದರೆ ದಾರ. ಅಂತೆಯೇ ಕೈಸೂತಿ – ಕಸೂತಿ ಎಂದಾಗಿದೆ.

ಬಟ್ಟೆಯ ಮೇಲೆ ದಾರದಿಂದ ಮತ್ತು ವಿವಿಧ ಹೊಲಿಗೆಗಳಿಂದ ವಿನ್ಯಾಸಗೊಂಡ ಹೆಣಿಕೆ ಅಥವಾ ಕಸೂತಿ ಒಂದು ಬಗೆಯದಾದರೆ, ದಾರದಲ್ಲಿಯೇ ವಿನ್ಯಾಸಗೊಂಡ ಹೆಣಿಕೆಗಳ ನಮೂನೆಗಳು ಇನ್ನೊಂದು ಪ್ರಕಾರದ್ದು. ದಾರದ ಬದಲಾಗಿ ಉಲ್ಲನ್‌ ಜರಿ ಎಳೆ ಇತ್ಯಾದಿಗಳನ್ನು ಬಳಸಲಾಗುತ್ತದೆ. ದಾರದಲ್ಲಿಯೇ ಹೆಣೆಯುವ ಹೆಣಿಕೆಗಳಲ್ಲಿ ಕೊಕ್ಕೆಸೂಜಿ, ಸೂಜಿ, ಸೂಜನ್‌ಕಡ್ಡಿ ಪಾತ್ರ ಮುಖ್ಯ. ವಿರಳವಾಗಿ ಚರ್ಮ ಅಥವಾ ಇತರ ವಸ್ತುಗಳ ಮೇಲೆ ಮಾಡಿದ ಅಲಂಕಾರಕ್ಕೆ ಕಸೂತಿ ಅಥವಾ ಹೆಣಿಗೆ ಎನ್ನುತ್ತಾರೆ.

ವಿವಿಧ ಪ್ರಕಾರದ ಹೊಲಿಗೆಗಳಾದ ಎಳೆ ಹೊಲಿಗೆ, ಕತ್ತರಿ ಹೊಲಿಗೆ, ಕಾಶ್ಮೀರ ಹೊಲಿಗೆ, ಕಂಬಳಿ ಹೊಲಿಗೆ, ಸರಪಳಿ ಹೊಲಿಗೆ, ರೆಕ್ಕೆ ಹೊಲಿಗೆ, ಅಂಚಿನ ಹೊಲಿಗೆ, ದೇಟಿನ ಹೊಲಿಗೆ, ಗುಂಡಿಮನಿ ಹೊಲಿಗೆ, ಗಂಟಿನ ಹೊಲಿಗೆ, ಎಳೆ ಹೊಲಿಗೆ, ಹೂವಿನ ಹೊಲಿಗೆ, ಜೇನು ಹುಟ್ಟಿನ ಹೊಲಿಗೆ, ಹಗ್ಗದ ಹೊಲಿಗೆ, ಜೇಡದ ಬಲೆ ಹೊಲಿಗೆ, ಮೀನದ ಎಲುಬಿನ ಹೊಲಿಗೆ, ಸುತ್ತಿದ ಹೊಲಿಗೆ ಮುಂತಾದವುಗಳಿಂದ ಬೇರೆ ಬೇರೆ ಹೆಣಿಗೆಗಳನ್ನು ಹೆಣೆಯುತ್ತಾರೆ.

ಬಟ್ಟೆಯ ಮೇಲೆ ದಾರದಿಂದ ಹೆಣೆಯುವುದು

ವಿವಿಧ ಪ್ರಕಾರದ ಹೊಲಿಗೆಗಳಿಂದ ವಿವಿಧ ಬಗೆಯ ಬಟ್ಟೆಯ ಮೇಲೆ ಬಣ್ಣದ ದಾರ ಮತ್ತು ಸೂಜಿಯಿಂದ ಬೇರೆ ಬೇರೆ ವಿನ್ಯಾಸಗಳನ್ನು ತೆಗೆಯುವುದು. ಇದರಲ್ಲಿ ಅನೇಕ ಪ್ರಕಾರದ ಹೆಣಿಕೆಗಳನ್ನು ಅವುಗಳ ಹೊಲಿಗೆಯನ್ನುನುಸರಿಸಿ ನೋಡಬಹುದು. ನಕ್ಷತ್ರದ ಹೆಣಿಕೆ, ಅಂಕುಡೊಂಕಾದ ಸರಪಳಿ ಹೆಣಿಕೆ, ಗರಿಯ ಸರಪಳಿ ಹೆಣಿಕೆ, ಎಲೆಯ ಹೆಣಿಕೆ, ಬಾಣದ ತುದಿಯ ಹೆಣಿಕೆ, ಚೋಳಿನ ಕೊಂಡಿಯ ಹೆಣಿಕೆ, ಉದ್ದಗಿಡ್ಡ ಎಳೆಗಳ ಹೆಣಿಕೆ, ಅಂಚಿನ ಹೆಣಿಕೆ, ಕಡ್ಡಿಯ ಹೆಣಿಕೆ, ಸ್ಯಾಟಿನ್‌ ಹೆಣಿಕೆ, ಗರಿ ಹೆಣಿಕೆ, ಸರಪಳಿಹೆಣಿಕೆ, ಗಂಟಿನ ಹೆಣಿಕೆ, ಗುಂಡಿಮನೆಯ ಹೆಣಿಕೆ ಮೆಂತೆದ ಹೆಣಿಕೆ, ಹೂವಿನ ಹೆಣಿಕೆ ಇತ್ಯಾದಿ.

ನಕ್ಷತ್ರದ ಹೆಣಿಕೆ

ಅಲ್ಜೇರಿಯನ್‌ ಕಣ್ಣಿನ ಹೆಣಿಕೆ, ಈ ಹೆಣಿಕೆಯ ಎಳೆಗಳು, ಮಧ್ಯದ ಒಂದೇ ಮನೆಯಲ್ಲಿ ಕೇಂದ್ರೀಕೃತವಾಗುತ್ತವೆ. ಸಮನಾದ ಎಳೆಗಳನ್ನು ಎಂಟು ದಿಕ್ಕಿನಿಂದ ತೆಗೆದುಕೊಂಡು ಒಂದೇ ಮನೆಯಲ್ಲಿ ಹಾಯಿಸುವುದರಿಂದ ಮಧ್ಯದಲ್ಲಿರುವ ಮನೆ ಕಣ್ಣಿನಂತಾಗುವುದು, ಸೀರೆ, ಕುಪ್ಪಸ, ಮಕ್ಕಳ ಉಡುಪುಗಳ ಒಡಲಲ್ಲಿ ಈ ಹೆಣಿಕೆಯನ್ನು ಹಾಕುವರು.

ಅಂಕುಡೊಂಕಾದ ಸರಪಳಿ

ಎರಡು ಬಟ್ಟೆಗಳನ್ನು ಜೋಡಿಸಿದ ಭಾಗದ ಹೊಲಿಗೆಯು ಕಾಣದಂತೆ ಮಾಡಲು ಈ ಹೆಣಿಕೆಯನ್ನು ಉಪಯೋಗಿಸಬಹುದಾಗಿದೆ. ಬಾಗಿಲಪರದೆ, ಸೀರೆ ಕುಪ್ಪಸಗಳ ಅಂಚುಗಳಲ್ಲಿ ಇದನ್ನು ಹಾಕುತ್ತಾರೆ.

ಗರಿಯ ಸರಪಳಿ

ಪಕ್ಷಿಯ ಗರಿಯ ಹಾಗೆ ಈ ಹೆಣಿಕೆ ಇರುತ್ತದೆ. ಸೀರೆಯ ಅಂಚಿಗೆ ತಲೆದಿಂಬಿನ ಚೀಲಕ್ಕೆ ಹಾಕುವರು.

ಎಲೆಯ ಹೆಣಿಕೆ

ಸುಲಭ ಹಾಗೂ ಬೇಗನೆ ಆಗುತ್ತದೆ. ಬಳ್ಳಿಗಳ ಗೊನೆಗೆ ಹಾಗೂ ಅಂಚಿಗೆ ಈ ಹೆಣಿಕೆ ಉಪಯುಕ್ತ. ಈ ಹೆಣಿಕೆಯೊಂದನ್ನೇ ಹಾಕಿದರೆ ನೊಣದ ಆಕಾರ ಕಾಣುವುದರಿಂದ ಇದಕ್ಕೆ ನೊಣದ ಹೆಣಿಕೆ ಎನ್ನುತ್ತಾರೆ.

ಮುರಿಗೆಯ ಸರಪಳಿ

ಅಲಂಕಾರಕ್ಕಾಗಿ ಬಾಗಿಲು ಕಿಡಕಿಗಳ ಪರದೆಗೆ, ಸೀರೆಗಳ ಅಂಚಿಗೆ, ಟೇಬಲ್‌ ಕ್ಲಾಥ್‌ಗಳಿಗೆ ಹಾಕುತ್ತಾರೆ.

ಜೋಡು ಸರಪಳಿ

ಈ ಹೆಣಿಕೆಯಿಂದ ಪಕ್ಷಿಗಳ ದೇಹವನ್ನು ತುಂಬಹುದಲ್ಲದೇ ಸೀರೆ ಬಾಗಿಲ ಪರದೆಗಳ ಅಂಚನ್ನು ಹೆಣೆಯಬಹುದು.

ಬಾಣದ ತುದಿಯ ಹೆಣಿಕೆ

ಎರಡೂ ಬದಿಗೆ ಸಮ ಅಂತರದಲ್ಲಿ ಎಳೆಗಳನ್ನು ತೆಗೆದುಕೊಂಡು ಮಧ್ಯದಲ್ಲಿ ಒಂದೇ ಮನೆಯಲ್ಲಿ ಹಾಯಿಸಿದರೆ ಈ ಹೆಣಿಕೆಯಾಗುತ್ತದೆ. ಪುಟ್ಟ ಪಕ್ಷಿಗಳ ಗರಿಗಳನ್ನು ಹೆಣೆಯಲು ಇಲ್ಲವೇ ಟೇಬಲ್‌ ಕ್ಲಾಥ್‌ನ್ನು ಅಂಚನ್ನು ಹಾಕಲು ಈ ಹೆಣಿಕೆ ಒಪ್ಪುತ್ತದೆ. ಇಲ್ಲಿ ದಪ್ಪ ದಾರವನ್ನು ಉಪಯೋಗಿಸುವರು.

ಚೋಳಿನ ಕೊಂಡಿಯ ಹೆಣಿಕೆ

ಇಂಗ್ಲೀಷ್‌ ‘ವಾಯ್‌’ (Y) ದಂತೆ ಈ ಹೆಣಿಕೆ ಕಾಣಿಸುತ್ತದೆ. ಬಹಳ ಬೇಗನೆ ಸಾಗುತ್ತದೆ. ಹೂ ಬಳ್ಳಿಗಳ ದೇಟಿಗೆ ಕುಪ್ಪಸದ ಅಂಚಿಗೆ ಸುಂದರವಾಗಿ ಕಾಣಿಸುತ್ತದೆ.

ಉದ್ದಗಿಡ್ಡ ಎಳೆಗಳ ಹೆಣಿಕೆ

ಈ ಹೆಣಿಕೆ ನೋಡಲು ಸ್ಯಾಟಿನದ ಹೆಣಿಕೆಯಂತೆ ಕಾಣಿಸುತ್ತದೆ. ಸ್ಯಾಟಿನ್‌ ಹೆಣಿಕೆಯನ್ನು ಒಂದೇ ಸಮನಾಗಿ ಹೆಣೆಯುವುದರಿಂದ ಅದು ದಪ್ಪ ಕಾಣಿಸುತ್ತದೆ. ಉದ್ದ ಗಿಡ್ಡ ಎಳೆಗಳ ಹೆಣಿಕೆಯಿಂದ ಅಗಲವಾಗಿರುವ ಹೂವನ್ನು ತುಂಬಿದರೆ ನೋಡಲು ವರ್ಣಚಿತ್ರದಂಥೆ ಕಾಣಿಸುತ್ತದೆ.

ಅಂಚಿನ ಹೆಣಿಕೆ

ಟೇಬಲ್‌ ಕ್ಲಾಥ್‌, ಬೆಡ್‌ ಶೀಟ್‌ ಮೊದಲಾದವುಗಳ ಅಂಚನ್ನು ಒಂದು ಇಂಚು ಮಡಿಚಿ ಅಂಚಿನ ಹೊಲಿಗೆ ಹಾಕುವರು.

ಕಡ್ಡಿಯ ಹೆಣಿಕೆ

ಎಲೆ ಮತ್ತು ಹೂವುಗಳ ದೇಟನ್ನು ಹೆಣೆಯಲು ಈ ಹೆಣಿಕೆ ಬಹಳ ಉಪಯುಕ್ತವಾಗುತ್ತದೆ.

ಸ್ಯಾಟಿನ್ ಹೆಣಿಕೆ

ಎಳೆಯ ಹೆಣಿಕೆಯನ್ನು ದೂರ ದೂರ ಹಾಕಬೇಕಾಗುವುದು. ಈ ಹೆಣಿಕೆಯನ್ನು ಒಂದಕ್ಕೊಂದು ಹೊಂದಿಸಿ ನೇಯ್ದುಂತೆ ಹೆಣೆಯಬೇಕು. ಹೂವು ಎಲೆಗಳಿಗೆ, ಹೂ ಬಳ್ಳಿಯ ದೇಟಿಗೆ ಈ ಹೆಣಿಕೆ ಸುಂದರವಾಗಿ ಕಾಣಿಸುತ್ತದೆ.

ಗರಿ ಹೆಣಿಕೆ

ಈ ಹೆಣಿಕೆ ಇಂಗ್ಲೀಷ್‌ ‘ವಿ’ (v) ಯನ್ನು ಒಂದಕ್ಕೊಂದು ಜೋಡಿಸಿದಂತೆ ಕಾಣಿಸುತ್ತದೆ. ಬಹಳ ಬೇಗನೆ ಹೆಣೆಯುಬಹುದಾಗಿದೆ. ಸೀರೆ ಕುಪ್ಪಸ ಟೇಬಲ್‌ ಕ್ಲಾಥ್‌ಗಳ ಅಂಚಿಗೆ ಒಪ್ಪುತ್ತದೆ.

ಸರಪಳಿ ಹೆಣಿಕೆ

ಕಾಶ್ಮೀರ ಶಾಲ್‌, ಕೋಟು, ಕೈಚೀಲಗಳಿಗೆ ಸರಪಳಿ ಹೆಣಿಕೆಯನ್ನು ಬಹಳ ಸುಂದರವಾಗಿ ಹೆಣೆಯುತ್ತಾರೆ. ಬಣ್ಣ ಬಣ್ಣದ ದಾರಗಳಿಂದ ಈ ಹೆಣಿಕೆಯನ್ನು ಹೆಣೆದು ಆಕರ್ಷಕವಾಗಿ ಕಾಣುವಂತೆ ಮಾಡುತ್ತಾರೆ. ಎಲೆ ಹೂವುಗಳನ್ನು ತುಂಬಲು, ಪಕ್ಷಿಗಳನ್ನು ತುಂಬಲು, ಬಾಗಿಲಪರದೆಗಳ ಅಂಚಿಗೆ, ಶಾಲುಗಳಿಗೆ ಹಾಕಿದರೆ ಅಂದವಾಗಿ ಕಾಣಿಸುತ್ತದೆ.

ಗಂಟಿನ ಹೆಣಿಕೆ

ಹೂವಿನ ಮಧ್ಯದಲ್ಲಿರುವ ಪರಾಗವನ್ನು ಈ ಹೆಣಿಕೆಯಿಂದ ತುಂಬುವರು. ಸ್ಟ್ರಾಬೆರಿಯಂತಹ ಹಣ್ಣುಗಳಿಗೆ, ಚಿಕ್ಕ ಚಿಕ್ಕ ಹೂವುಗಳಿಗೆ ಮೊಗ್ಗಿಗೆ ದಂಟಿನ ಹೆಣಿಕೆ ಹಾಕುತ್ತಾರೆ.

ಗುಂಡಿ ಮನೆಯ ಹೆಣಿಕೆ

ಈ ಹೆಣಿಕೆಯಿಂದ ವಿವಿಧ ಬಗೆಯ ಹೆಣಿಕೆಗಳನ್ನು ಸಿದ್ಧಗೊಳಿಸಬಹುದಾಗಿದೆ. ಬಟ್ಟೆಗಳಲ್ಲಿ ಹೂ ಬಳ್ಳಿಗಳ ಚಿತ್ರವನ್ನು ಮೂಡಿಸಿ, ಹೂವಿನ ಅಂಚನ್ನು ಎಲೆಯ ಅಂಚನ್ನು ಗುಂಡಿ ಮನೆಯ ಹೆಣಿಕೆಯಿಂದ ಹೆಣಿದು ಸುತ್ತಲಿನ ಭಾಗವನ್ನು ಕತ್ತರಿಸಿದರೆ ಕಟ್‌ವರ್ಕ್ ಬಹಳ ಅಂದವಾಗಿ ಕಾಣಿಸುತ್ತದೆ. ತುಂಡು ಬಟ್ಟೆಯಿಂದ ಹೂವು, ಎಲೆ, ಪಕ್ಷಿ, ಪ್ರಾಣಿಗಳನ್ನು ಕತ್ತರಿಸಿ ಬಟ್ಟೆಗೆ ಹಚ್ಚಿ ಸುತ್ತಲೂ ಗುಂಡಿಮನೆ ಹೆಣಿಕೆಯನ್ನು ಹಾಕಿದರೆ ಅಂದವಾಗಿ ಕಾಣಿಸುತ್ತದೆ.

ಮೆಂತೆದ ಹೆಣಿಕೆ

ಹಿಂದಿನ ಕಾಲದ ಮಹಿಳೆಯರು ಸೀರೆಯ ಸೆರಗಿನ ತುದಿಗೆ ಮೆಂತೆದ ಸಾಲನ್ನು ಅದರ ಮೇಲೆ ಇದೇ ಹೆಣಿಕೆಯಿಂದ ಪಕ್ಷಿಗಳನ್ನೂ ತೆಗೆಯುತ್ತಿದ್ದರು. ಹೂವು, ಎಲೆ, ಪಕ್ಷಿ, ಪ್ರಾಣಿ, ತೊಟ್ಟಿಲು ಮೊದಲಾದವುಗಳನ್ನು ಕ್ರಮಬದ್ಧವಾಗಿ ಹಾಕುತ್ತಿದ್ದರು.

ಹೂವಿನ ಹೆಣಿಕೆ

ಚಿಕ್ಕ ಚಿಕ್ಕ ಹೂವು ಎಲೆಗಳನ್ನು ಹೆಣೆದರೆ ಆಕರ್ಷಕವಾಗಿ ಕಾಣಿಸುತ್ತದೆ. ಬಟ್ಟೆಗಳಲ್ಲಿ ಕನ್ನಡಿ ಕೂಡ್ರಿಸಿ ಹೆಣೆದು ಅದರ ಸುತ್ತಲೂ ಹೂವಿನ ಹೆಣಿಕೆ ಹಾಕಿದರೆ ಅಂದವಾಗಿ ಕಾಣಿಸುತ್ತದೆ.

ದಾರದಲ್ಲಿಯೇ ಹೆಣೆಯುವುದು

ನೂಲನ್ನು ಅಥವಾ ದಾರವನ್ನು ಎಡಗೈ ತೋರು ಬೆರಳಿಗೆ ಸುತ್ತಿಕೊಂಡು, ಅಲ್ಲಿಂದ ದಾರವನ್ನು ಎಡಗೈಯ ಹೆಬ್ಬೆರಳು ಮತ್ತು ನಡುವಿನ ಬೆರಳುಗಳ ಮೂಲಕ ಸ್ವಲ್ಪ ಸ್ವಲ್ಪ ದಾರವನ್ನು ಬಿಚ್ಚುತ್ತಾ ಬಲಗೈಯಲ್ಲಿ ಹಿಡಿದ ಕೊಕ್ಕೆ ಸೂಜಿಯಿಂದ ಹೆಣೆಯುತ್ತಾ ಹೋಗುತ್ತಾರೆ. ಕೊಕ್ಕೆ ಸೂಜಿಯಲ್ಲಿ ಬೇರೆ ಬೇರೆ ನಂಬರುಗಳಿರುತ್ತವೆ.

ಉಲ್ಲನ್‌ ಹೆಣಿಕೆ ಕಡ್ಡಿಗಳಿಂದ ಸ್ವೇಟರ್, ಶಾಲ್‌ ಮೊದಲಾದವುಗಳನ್ನು ಹೆಣೆಯಬಹುದು. ಈ ಹೆಣಿಗೆ ಹೊರದೇಶದ್ದು. ಪರದೇಶದ ಜನರ ಸಂಪರ್ಕದಿಂದ ಉಣ್ಣೆಯ ಹೆಣಿಗೆ ಭಾರತದಲ್ಲಿ ಪ್ರಚಾರಗೊಂಡಿದೆ. ಇದರಲ್ಲಿ ಅನೇಕ ರೀತಿಯ ಹೆಣಿಕೆಗಳುಂಟು. ಸರಪಳಿ ಹೆಣಿಕೆ, ಗಂಟಿನ ಹೆಣಿಕೆ, ಸ್ಕಾರ್ಫ್, ಟೊಪ್ಪಿಗೆ, ಕಾಲುಚೀಲಗಳನ್ನು ಹೆಣೆಯುತ್ತಾರೆ.

ಯಂತ್ರದ ಕಸೂತಿ

ಯಂತ್ರದ ಸಹಾಯದಿಂದ ಆಧುನಿಕ ರೀತಿಯಲ್ಲಿ ಕಸೂತಿ ಹಾಕಲಾಗುತ್ತದೆ. ಕಡಿಮೆ ವೇಳೆಯಲ್ಲಿ ಹೆಚ್ಚು ಕಸೂತಿಯ ನಕ್ಷೆಗಳನ್ನು ತಯಾರಿಸಬಹುದು. ಕ್ರಿ.ಶ. ೧೮೨೯ ರಲ್ಲಿ ಮೊಟ್ಟ ಮೊದಲು ಕಸೂತಿ ಯಂತ್ರದ ಶೋಧನೆಯಾಯಿತು.