ಬಟ್ಟೆಯ ಮೇಲೆ ಸೂಜಿ – ದಾರ ಅಥವಾ ಬಂಗಾರ ಬೆಳ್ಳಿ ಎಳೆಗಳಿಂದ ಮಾಡುವ ಅಲಂಕಾರ ಬಹಳ ಪ್ರಾಚೀನ ಕಾಲದಿಂದಲೂ ಇದೆ. ತಮ್ಮ ಹಾಗೂ ಮಕ್ಕಳ ಬಟ್ಟೆಗಳನ್ನು ಕಸೂತಿಯಿಂದ ಅಲಂಕರಿಸುವುದು ಪ್ರಾಚೀನ ಕರ್ನಾಟಕದ ಮಹಿಳೆಯರ ಹವ್ಯಾಸವಾಗಿದ್ದು, ಸೂಜಿಯ ನೆರವಿನಿಂದ ಬಟ್ಟೆಯ ಮೇಲೆ ಬಣ್ಣ ಬಣ್ಣದ ರೇಶಿಮೆ ಎಳೆಗಳಿಂದ ತಮ್ಮ ಭಾವನೆಗಳನ್ನು ಮೂಡಿಸುತ್ತಿದ್ದರು.

ಕರ್ನಾಟಕದಲ್ಲಿ ಕಸೂತಿ ಕಲೆಯು “ಕರ್ನಾಟಕ ಕಸೂತಿ” ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಈ ಕಸೂತಿಯು ಹೆಚ್ಚಾಗಿ ಆಷ್ಟ್ರಿಯಾ, ಹಂಗರಿ, ಹಾಗೂ ಸ್ಪೇನ್‌ ದೇಶಗಳ ಕಸೂತಿಯನ್ನು ಹೋಲುತ್ತದೆ. ಜನಪದ ಕಲೆ ಕರ್ನಾಟಕ ಕಸೂತಿಯು ಹಲವಂಶಗಳಲ್ಲಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.

ಕ್ರಿ.ಶ. ೧೭ನೇ ಶತಮಾನದ ಮೈಸೂರೊಡೆಯರ ಆಶ್ರಯದಲ್ಲಿದ್ದ ಕವಿಯಿತ್ರಿ ಹೊನ್ನಮ್ಮ, ಆಗ ೬೪ ಕಲೆಗಳನ್ನು ತಿಳಿದಿದ್ದ ಮಹಿಳೆಯರು ಆ ಸ್ಥಾನದಲ್ಲಿದ್ದರೆಂದು ತಿಳಿಸುತ್ತಾಳೆ. ಈ ವಿದ್ಯೆಗಳಲ್ಲಿ ಕಸೂತಿಯನ್ನೂ ಸಹ ಪರಿಗಣಿಸಲಾಗಿದೆ. ಚಾಲುಕ್ಯ ಹಾಗೂ ವಿಜಯನಗರ ರಾಜ್ಯ ಆಡಳಿತದಲ್ಲೂ ಈ ಕಲೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿತ್ತು. ಬೇಲೂರು, ಹಳೇಬೀಡು, ಬದಾಮಿ, ಹಂಪೆ, ಮಧುರೈ ತಂಜಾವೂರು ಮೊದಲಾದ ಸ್ಥಳಗಳಲ್ಲಿಯ ಶಿಲ್ಪಕಲೆ, ದೇವಾಲಯ, ಗೋಪುರಗಳು, ಧಾರ್ಮಿಕ ಆಚರಣೆಗಳು ಅಂದಿನ ಮಹಿಳೆಯರ ಮೇಲೆ ಪ್ರಭಾವ ಬೀರಿದ್ದವು. ಪುರುಷ ಕಲಾವಿದರು ಕಲ್ಲಿನಲ್ಲಿ ಮೂರ್ತಿಗಳನ್ನು ಪ್ರಮಾಣಬದ್ಧವಾಗಿ ಕಟೆಯಲೆತ್ನಿಸುತ್ತಿರುವಾಗ ಸ್ತ್ರೀಯರು ತಮ್ಮ ಕಲಾ ಕೌಶಲವನ್ನು ಬಟ್ಟೆಯ ಮೇಲೆ ಸೂಜಿ ದಾರಗಳಿಂದ ತೋರಿಸುತ್ತಿದ್ದರು. ಈ ಕಲೆ ಕೈಯಿಂದ ಕೈಗೆ, ಕಿವಿಯಿಂದ ಕಿವಿಗೆ ಸಾಗುತ್ತಿತ್ತು. ನಾಡಿನ ಬಹುತೇಕ ಹೆಣ್ಣು ಮಕ್ಕಳು ತಮ್ಮ ಮನೆಯ ಜನರ ಬಟ್ಟೆಗಳನ್ನು ಅಂದ ಚಂದದ ಕಸೂತಿಯಿಂದ ಅಲಂಕರಿಸುತ್ತಿದ್ದರು. ನೆಲವುಳುವ ಬಸವಣ್ಣನೂ ಕಸೂತಿವಸ್ತ್ರ ಧರಿಸುತ್ತಿದ್ದದು. ಕರ್ನಾಟಕ ಕಸೂತಿಯಲ್ಲಿ ಗೋಪುರ, ಕಲಶ, ತುಳಸಿಕಟ್ಟಿ, ಹೂಬಳ್ಳಿ, ಗಿಳಿ, ಆನೆ, ತೊಟ್ಟಿಲುಗಳು ರೂಪಿತಗೊಂಡವು. ಬಿಳಿ ಕೆಂಪು, ಹಳದಿ, ಹಸಿರು, ಬಣ್ಣಗಳು ಮುಖ್ಯವಾದವು. ಕರ್ನಾಟಕಕ್ಕೆ ರೇಶ್ಮೆಯು ಮೊದಲು ಕಲ್ಕತ್ತಾದಿಂದ ಬರುತ್ತಿತ್ತು. ಬಿಜಾಪುರದಲ್ಲಿ ಅದನ್ನು ತೊಳೆದು ಒಣಗಿಸುತ್ತಿದ್ದರಂತೆ. ಈಗ ಮೈಸೂರಿನ ರೇಶ್ಮೆ ಉತ್ತಮವಾಗಿದೆ. ರೇಶ್ಮೆಯಲ್ಲಿ ಕಸೂತಿಯು, ಅಂದವಾಗಿಯೂ ನಾಜೂಕಾಗಿಯೂ ಕಾಣಿಸುತ್ತದೆ. ಕನ್ನಡ ನಾಡಿನಲ್ಲಿ ತಯಾರಾಗುತ್ತಿದ್ದ ಕರಿಯ ಚಂದ್ರಕಾಳಿ ಸೀರೆಯ ಮೇಲೆ ಕರ್ನಾಟಕಕಸೂತಿಯ ಎಲ್ಲ ನಮೂನೆಗಳನ್ನು ನೋಡಬಹುದಿತ್ತು. ಪರಸ್ಪೇಟಿ ದಡಿಯ ಹದಿನೆಂಟು ಮೊಳದ ಇಳಕಲ್‌ ಸೀರೆಯ ಅಚ್ಚ ಕೆಂಪು ಮತ್ತು ಬಿಳಿ ರೇಶ್ಮೆ ಎಳೆಗಳಿಂದ ಕೂಡಿದ ಸೆರಗಿನ ಮೇಲಂಚಿಗೆ ಹೂವಿನಸಾಲು, ಗೋಡಂಬಿಯ ಪಟ್ಟಿ ಗೋಪುರಗಳು ಗಿಳಿ ಸಾಲನ್ನು ಹಾಕುತ್ತಿದ್ದರು. ಸೀರೆಯ ಉದ್ದಕ್ಕೂ ಬಿಳಿಯ ನಕ್ಷತ್ರಗಳ ಮಧ್ಯೆ ದೊಡ್ಡ ನಕ್ಷೆಗಳು ಅಲಂಕೃತಗೊಂಡಿರುತ್ತಿದ್ದವು. ಹಳ್ಳಿಯ ಮಹಿಳೆ ಯರು ಸೆರಗನ್ನು ತಲೆಗೆ ಹೊದ್ದುಕೊಳ್ಳುವುದರಿಂದ ಕಸೂತಿಯ ಸುಂದರ ಭಾಗವು ಅವರ ಭುಜ ಹಾಗೂ ತಲೆಯಹಿಂಭಾಗದಲ್ಲಿ ಎದ್ದುಕಾಣುತ್ತದೆ. ಯಾವುದೇ ವಸ್ತ್ರವಿರಲಿ, ಭಾರತೀಯ ಕಸೂತಿ ಕ್ಷೇತ್ರದಲ್ಲಿ “ಕರ್ನಾಟಕ ಕಸೂತಿ”ಗೆ ವಿಶಿಷ್ಟ ಸ್ಥಾನವಿದೆ. ಈ ಕಸೂತಿಯು ಉತ್ತರ ಕರ್ನಾಟಕದ ಒಂದು ಶುದ್ಧ ಜಾನಪದ ಕಲೆಯಾಗಿದ್ದು ಹೆಚ್ಚಾಗಿ ಧಾರವಾಡ ಜಿಲ್ಲೆಯ ಸುತ್ತಮುತ್ತ ಕಾಣಬಹುದಾದುರಿಂದ ಇದು “ಧಾರವಾಡ ಕಸೂತಿ” ಎಂದೂ ಪ್ರಸಿದ್ಧಿ ಪಡೆದಿದೆ.

ಹೊಲಿಗೆಗಳಲ್ಲಿ ಅತಿ ಸೂಕ್ಷ್ಮವಾಗಿರುವ ಧಾರವಾಡ ಅಥವಾ ಕರ್ನಾಟಕ ಕಸೂತಿಯು ತನ್ನ ಸಾಂಪ್ರದಾಯಿಕ ಸ್ವರೂಪವನ್ನು ಉಳಿಸಿಕೊಂಡು ಬಂದಿದ್ದು, ಸೀರೆ ಕುಪ್ಪಸ ಹಾಗೂ ಮನೆಯನ್ನು ಅಲಂಕರಿಸಲು ಬಳಸುವ ವಿವಿಧ ವಸ್ತುಗಳ ಮೇಲೆ ಕಲಾಕಾರರ ಹಸ್ತ ಕೌಶಲ, ಕಲ್ಪನಾಸಾಮರ್ಥ್ಯ ಅವರು ಚಿತ್ರಿಸುವ ವಿವಿಧ ವಿನ್ಯಾಸಗಳಲ್ಲಿ ಪಡಿಮೂಡಿದೆ. ವಿಶಿಷ್ಟವಾಗಿ ಮಹಿಳೆಯರ ಸ್ವತ್ತಾದ ಕಸೂತಿಗೂ ಅವರ ಧಾರ್ಮಿಕ ಮನೋಭಾವಕ್ಕೂ, ನಿಸರ್ಗಕ್ಕೂ ಅಂಟಿದ ನಂಟು ಆಪ್ಯಾಯಮಾನವಾಗಿದೆ.

ಪ್ರಕಾರ

ಕಸೂತಿ ವಿನ್ಯಾಸಗಳನ್ನು ಕ್ರಮಬದ್ಧವಾದ ಉದ್ದ, ಅಡ್ಡ, ಓರೆ, ಹೊಲಿಗೆಗಳಿಂದ ಸರಳವೂ ಸಂಕೀರ್ಣವೂ ಆದ ಉತ್ಕೃಷ್ಟ ಮಾದರಿಗಳಲ್ಲಿ ಬಿಡಿಸಲಾಗುತ್ತದೆ. ಜ್ಯಾಮಿತಿಯ ಬಗ್ಗೆ ಗೊತ್ತಿರದ ಗ್ರಾಮೀಣ ಮಹಿಳೆಯರ ಪ್ರಮಾಣಬದ್ಧವಾದ ವೈವಿಧ್ಯಮಯವಾದ, ಧಾರ್ಮಿಕ ಪ್ರಾಕೃತಿಕ ಹಾಗೂ ಇತರ ನೋಟಗಳು ಸೊಗಸಾಗಿ ಪ್ರತಿಬಿಂಬಿತಗೊಳ್ಳುವ ಕಸೂತಿ ಕಲೆಯು ಅವರ ಸೃಜನಾತ್ಮಕತೆಗೆ ಸಾಕ್ಷಿಯಾಗಿ ದೇಶವಿದೇಶಗಳ ಕಲಾವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿತಗೊಳ್ಳುತ್ತಿದೆ.

“ಕರ್ನಾಟಕ ಕಸೂತಿ”ಯಲ್ಲಿ ಗಾವಂತಿ, ಮುರುಗಿ, ನೇಗಿ, ಮೆಂತ್ಯೆ ಎಂಬ ನಾಲ್ಕು ಪ್ರಕಾರದ ಹೊಲಿಗೆಗಳಿವೆ.

ಗಾವಂತಿ (ಗಾಂವಟಿ, ದೇಶೀ)

“ಗಂಟು” ಎಂಬ ಶಬ್ದದಿಂದ ಗಾವಂತಿ ಹೊಲಿಗೆ ರೂಪುಗೊಂಡಿರುವಂತಿದೆ. ಒಂದು ದಿಕ್ಕಿನಲ್ಲಿ ಸಮಳೆಗಳನ್ನು ಹಾಕುತ್ತ ಹೋಗಿ, ಅವುಗಳ ನಡುವಿನ ಅಂತರವನ್ನು ಹಿಮ್ಮುಖವಾಗಿ ತುಂಬುತ್ತಾ ಬರುವುದರಿಂದ “ಡಬಲ್‌ ಸಮ ಎಳೆ” ಎಂದೂ ಕರೆಯುತ್ತಾರೆ. ಉದ್ದ, ಅಡ್ಡ, ಓರೆಯಾಗಿಯೂ ಈ ಹೊಲಿಗೆಯಿಂದ ಬಿಡುಸುವ ನಕ್ಷೆಗಳ ಮಾದರಿಗಳು ರೇಖಾಕಾರದಲ್ಲಿ ಕಾಣಿಸುತ್ತವೆ.

“ಹಳ್ಳಿಯ ಕಸೂತಿ” ಎಂದು ಕರೆಸಿಕೊಳ್ಳುವ ಇದು ಕರ್ನಾಟಕದ ಇತರ ಕಸೂತಿಗಳಿಗಿಂತ ಭಿನ್ನವಾಗಿದೆ. ಅತ್ಯಂತ ಸುಂದರವೂ ನಯ – ನಾಜೂಕಿನದೂ ಎಂದು ಪ್ರಸಿದ್ಧಿ ಪಡೆದ ಈ ಕಸೂತಿಯು ಎಲ್ಲಿಂದ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎಂಬುದನ್ನು ಗುರುತಿಸಲು ಆಗುವುದಿಲ್ಲ. ಅಷ್ಟು ಸೂಕ್ಷ್ಮವಾಗಿರುವ ಕಸೂತಿಯಲ್ಲಿ ಹೊಸೆಯದ ರೇಶ್ಮೆ ಎಳೆಯನ್ನು ಗಂಟು ಹಾಕದೆ ಬಟ್ಟೆಯ ಎಳೆಗಳನ್ನು ಎಣಿಸಿ, ನಕ್ಷೆಯನ್ನು ಚಿತ್ರಿಸಿಕೊಳ್ಳದೇ ನೇರವಾಗಿ ನಕ್ಷೆಯ ಆಕಾರವನ್ನು ಕಲ್ಪಿಸಿಕೊಂಡು ನೀಟಾಗಿ ಹಾಕುವುದು ವೈಶಿಷ್ಟ್ಯವಾಗಿದೆ. ಕೆಳಗಿನ ಬದಿ ಮತ್ತು ಮೇಲಿನ ಬದಿಯನ್ನು ಬೇಕಾದ ಹಾಗೆ ನೋಡಿದರೂ ವಿನ್ಯಾಸ ಒಂದೇ ರೀತಿಯಾಗಿ ಕಾಣಿಸುತ್ತದೆ. ಈ ಕಸೂತಿಯಲ್ಲಿಯ ಕಲಾತ್ಮಕತೆ ಬೆರಗುಗೊಳಿಸುವಂತಹುದು. ಕಮಲ, ಪದ್ಮ, ಕಲಶ, ಹೂಬಳ್ಳಿ, ನಕ್ಷತ್ರ, ನಂದಿ, ಈಶ್ವರ, ಪಕ್ಷಿ, ಗಿಳಿ, ನವಿಲು ಹೀಗೆ ನೂರಾರು ಬಗೆಯ ಚಿತ್ರಗಳನ್ನು ಗಾವಂತಿ ಹೊಲಿಗೆಯಲ್ಲಿ ಮೂಡಿಸಲು ಸಾಧ್ಯ.

ಮುರುಗಿ (ಮುರ್ಗಿ)

ಮುರುಗಿ ಅಥವಾ ಏಣಿ ಅಥವಾ ಮೆಟ್ಟಿಲಾಕಾರದಲ್ಲಿ ಡಬಲ್‌ ಸಮ ಎಳೆಯನ್ನು ತುಂಬುವುದರಿಂದ ಈ ಹೊಲಿಗೆಗೆ ಮುರುಗಿ ಹೊಲಿಗೆ ಎಂದು ಕರೆಯುತ್ತಾರೆ. ಎಳೆಗಳನ್ನು ಹೆಣೆಯುತ್ತಾ ಹೋದಮತೆ ಕೊನೆಗೆ ನಿಂತಂತೆಯೂ ಮೇಲೆ ಕಸೂತಿಯ ಅರ್ಧ ಭಾಗದಂತೆ ಕಾಣಿಸುತ್ತದೆ. ಬಟ್ಟೆಯ ಮೇಲೆ ಮುರುಗಿಯಾದ ಎಳೆಗಳು ನೋಡಲು ಅಂದವಾಗಿರುತ್ತವೆ. ಗುಡಿ, ಗೋಪುರ, ಕಟ್ಟೆ, ಭಾವಿ, ತೊಟ್ಟಿಲು, ಶಿವಲಿಂಗ, ನಂದಿ, ಕಮಲ ಹೂ, ತೆನೆ, ಮಂಟಪ, ರಥ, ಮೊದಲಾದ ಹಲವಾರು ಚಿತ್ರ ವಿನ್ಯಾಸಗಳನ್ನು ಮುರುಗಿ ಹೊಲಿಗೆಯಿಂದ ಹಾಕಬಹುದು.

ನೇಗಿ (ನೇಱ್ಗಿ )
ಅಡ್ಡ ದಿಸೆಯಲ್ಲಿ ಸಮ ಎಳೆಗಳನ್ನು ಹಾಕಿದ ನಕ್ಷೆಯ ನಮೂನೆಗಳು ನೇಯ್ಗೆ ಬಟ್ಟೆಗಳನ್ನು ಹೋಲುವುದರಿಂದ ಈ ಹೊಲಿಗೆಗೆ ‘ನೇಗಿ’ ಎಂಬ ಹೆಸರು ಬಂದಿದೆ. ಇದಕ್ಕೆ “ರಪು” ಎಂತಲೂ ಕರೆಯುತ್ತಾರೆ. ಬಟ್ಟೆಯ ಮೇಲೆ ತೆಗೆದ ಯಾವುದೇ ವಿನ್ಯಾಸವೂ ಬಟ್ಟೆಯ ಕೆಳಗೂ ಮಾಡುತ್ತದೆ. ಆದರೆ ದಾರದ ಎಳೆಗಳು ಮೇಲೆ ಉದ್ದವಾಗಿದ್ದರೆ ಕೆಳಗಡೆಗೆ ಗಿಡ್ಡವಾಗಿಯೂ, ಮೇಲೆ ಗಿಡ್ಡವಾಗಿದ್ದರೆ ಕೆಳಗಿನ ಭಾಗದಲ್ಲಿ ಉದ್ದವಾಗಿಯೂ ಕಾಣಿಸುತ್ತವೆ. ಚಿತ್ರ ಒಂದೆಯಾಗಿ ಕಂಡರೂ ಮೇಲೆ ಮತ್ತು ಕೆಳ ಭಾಗದಲ್ಲಿ ಎಳೆಗಳು ವಿರುದ್ಧ ದಿಕ್ಕಿನಲ್ಲಿರುತ್ತವೆ. ಗೋಪುರ, ರಥ, ಹೂಬಳ್ಳಿ, ಪಶುಪಕ್ಷಿ, ಮೊದಲಾದ ವಿನ್ಯಾಸಗಳನ್ನು ಈ ಹೊಲಿಗೆಯಿಂದ ತೆಗೆಯಬಹುದು.

ಮೆಂತ್ಯೆ (ಮೇಂಥಿ, ಮೆಂಥೆ)

ಮೆಂತ್ಯೆ ಕಾಳನ್ನು ಈ ಹೊಲಿಗೆ ಹೋಲುತ್ತದೆಯಾದ್ದರಿಂದ ಇದಕ್ಕೆ ಕ್ರಾಸ್‌ ಹೊಲಿಗೆಯೆಂತಲೂ ಕರೆಯುತ್ತಾರೆ. ನೋಡಲು ದಟ್ಟವಾಗಿ ಕಾಣುವ ನಕ್ಷೆಗಳನ್ನು ಬಿಡಿಸಲು ಹೆಚ್ಚು ನೂಲು ಅಥವಾ ರೇಶ್ಮೆ ಬೇಕಾಗುತ್ತದೆ. ನೂಲಿನ ಬಟ್ಟೆಯ ಮೇಲೆ ಅಂದವಾಗಿ ಕಾಣುವ ಈ ಹೊಲಿಗೆಯನ್ನು ರೇಶ್ಮೆ ವಸ್ತ್ರಗಳ ಮೇಲೆಯೂ ಪ್ರಶಸ್ತವಾಗಿ ಕಾಣುವಂತೆ ಹೆಣೆಯುತ್ತಾರೆ. ಇದಕ್ಕೆ ವಿಶೇಷವಾಗಿ ಕನ್ನಡದಲ್ಲಿ ಕತ್ತರಿ ಹೊಲಿಗೆ ಎಂದು ಕರೆಯುತ್ತಾರೆ. ಬಟ್ಟೆಯ ವರ್ಣ ತಿಳಿಯಾಗಿದ್ದರೆ ದಟ್ಟ ಬಣ್ಣದ ದಾರದಿಂದ ಕಸೂತಿ ತೆಗೆಯುವರು. ತೊಟ್ಟಿಲು ತುಳಸಿಕಟ್ಟೆ, ತೇರು, ಬಾಸಿಂಗ ಮತ್ತು ಚೌರಂಗಭಾವಿ, ನಾಯಿ, ಮೊಲ, ಬೆಕ್ಕು, ಭೂಮಿತಿ ಆಕೃತಿ ಹಾಗೂ ಬೆಡಗಿನ ಚಿತ್ರಗಳಿಗೆ ಈ ಹೊಲಿಗೆ ಯೋಗ್ಯವಾಗಿದೆ.

ಗ್ರಾಮೀಣ ಮಹಿಳೆಯರಲ್ಲಿ ತಾವು ಹಾಕುವ ಕಸೂತಿ ನಕ್ಷೆಯ ಬಗೆಗೆ ಇರುವ ಕಲ್ಪನಾಶಕ್ತಿ ಅಗಾಧವಾದುದು. ಬಟ್ಟೆಯ ಎಳೆಗಳನ್ನು ತಮ್ಮ ಕಲ್ಪನೆಯ ಚಿತ್ರದ ಗಾತ್ರಕ್ಕೆ ತಕ್ಕಂತೆ ಎಣಿಸಿಕೊಂಡು ನೇರವಾಗಿ ದಾರವನ್ನು ತುಂಬುತ್ತಾರೆ. ಹೆಚ್ಚು ಅಲಂಕಾರಿಕವಾಗಿ ಕಾಣಲು ಬಣ್ಣದ ದಾರಗಳೊಂದಿಗೆ ಸಣ್ಣ ಸಣ್ಣ ಮಣಿಗಳು, ಟಿಕಳಿಗಳು, ಬಣ್ನದ ಗುಂಡಿ, ಕಡ್ಡಿಗಳು ಕಿರುಗೆಜ್ಜೆಗಳು ಇತ್ಯಾದಿ ವಸ್ತುಗಳನ್ನು ಚಿತ್ರಿಸುತ್ತಾರೆ. ಬಾತುಕೋಳಿ, ಆನೆ, ಶಿವಲಿಂಗ, ಹನುಮಂತ, ಲಕ್ಷ್ಮಿ, ಹೀಗೆ ವಿವಿಧ ಧಾರ್ಮಿಕ ಹಾಗೂ ನಿಸರ್ಗ ದೃಶ್ಯಗಳನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಹೆಣೆಯುತ್ತಾರೆ. ಇಂಥ ಹೆಣಿಕೆಯ ವಸ್ತ್ರಗಳಿಗೆ ಕಟ್ಟುಹಾಕಿಸಿ ಗೋಡೆಗೆ ತೂಗುಬಿಡುತ್ತಾರೆ. ಜನಪದ ಕಸೂತಿಯಲ್ಲಿ ನಿರುಪಯೋಗಿ ವಸ್ತ್ರಗಳೆನಿಸಿದ ಬಳೆಯ ಚೂರು, ಹಳೆಯ ಕಾಳದ ತೂತಿನ ಬಿಲ್ಲೆಗಳು, ಕವಡೆಗಳು, ಗಾಜಿನ ಚೂರುಗಳು ಮೊದಲಾದವುಗಳ ಬಳಕೆ ಸರ್ವೇಸಾಮಾನ್ಯ.

ಪರಿಕರ

ತಮ್ಮ ಅಭಿರುಚಿಯ ಸುಂದರ ಚಿತ್ರಗಳು ಮನಮೋಹಕವಾಗಿ ಕಾಣಿಸಬೇಕು. ಶಾಶ್ವತವಾಗಿ ಉಳಿದುಕೊಳ್ಳಬೇಕೆಂಬುದು ಹಳ್ಳಿಯ ಹೆಣ್ಣು ಮಕ್ಕಳ ಅಪೇಕ್ಷೆಯಾಗಿರುವುದರಿಂದ ಬಟ್ಟೆ, ದಾರ ಇಲ್ಲವೇ ರೇಶ್ಮೆಯ ದಾರ, ಬಟ್ಟೆಯ ಬಣ್ಣದ ಬಗ್ಗೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ. ರಚನೆಯಲ್ಲಿ ಮುಖ್ಯವಾಗಿ ಬಟ್ಟೆ, ದಾರ, ಸೂಜಿ, ಅಂಗುಸ್ಥಾನ ಈ ಮೊದಲಾದ ಸಾಮಗ್ರಿಗಳು ಅಗತ್ಯವಾಗಿವೆ. ನಕ್ಷೆಯ ಪುಸ್ತಕ ಮತ್ತು ಇತರ ಅಲಂಕಾರಿಕ ವಸ್ತುಗಳು ಮೊದಲಾದ ಪರಿಕರಗಳು ಹೆಚ್ಚು ಉಪಯುಕ್ತವಾಗಿವೆ.

ಬಟ್ಟೆ

ಗ್ರಾಮೀಣ ಮಹಿಳೆಯರು ತಮ್ಮ ರೇಶ್ಮೆ ಸೀರೆಯ ಸೆರಗಿನಲ್ಲಿ ಕಸೂತಿ ಬಿಡಿಸಿದ ರೀತಿಯನ್ನು ಗಮನಿಸಿದರೆ, ಮಕ್ಕಳ ಕುಂಚಿಗೆ, ಕಣದ ಕುಪ್ಪಸ, ಕಂಬಳಿಗಳ ಮೇಲಿನ ಕಸೂತಿಗಳು ಈ ಕಲೆಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತವೆ. ಸಾದಾ ಹತ್ತಿಬಟ್ಟೆ, ಮೇಟಿ ಬಟ್ಟೆ, ಸ್ಯಾಟಿನ್‌ ಬಟ್ಟೆಗಳನ್ನು ಬಳಸುತ್ತಾರೆ. ಯುರೋಪಿನಲ್ಲಿ ನಾರಗಸೆಯ ನಾರಿನಿಂದ ಮಾಡಿದ ಲಿನೆನ್‌ ಬಟ್ಟೆಯ ಮೇಲೆ ನವುರಾದ ತೆಳ್ಳನೆ ಬಟ್ಟೆಯ ಮೇಲೆ ಅಲ್ಲದೇ ನೃತ್ಯಗಾತಿಯರ ಉಡುಗೆಗಳ ಮೇಲೆ ಕಸೂತಿ ಹಾಕುವರು. ಇದು ೭ – ೮ನೇ ಶತಮಾನದಲ್ಲಿ ರೂಢಿಯಲ್ಲಿದ್ದಿತು. ಭಾರತೀಯ ಮಹಿಳೆಯರು ಉಡುವ ಸೀರೆಯಲ್ಲಿ ವೈವಿಧ್ಯಮಯವಾದ ವಿನ್ಯಾಸಗಳನ್ನು ಕಾಣಬಹುದು.

ದಾರ

ಹಿಂದೆ ಕಸೂತಿಗಾಗಿ ಸೀರೆಯ ಸೆರಗಿನ ‘ಕರಿ’ಯಲ್ಲಿನ ದಾರವನ್ನು ಹಾಗೂ ರೇಶ್ಮೆಯನ್ನು ಬಳಸುತ್ತಿದ್ದರು. ಈಗ ನೂಲು, ಉಣ್ಣಿಯ ದಾರಗಳನ್ನು ಉಪಯೋಗಿಸುತ್ತಾರೆ. ಹೊಸೆಯದ ರೇಶೆ, ಎಳೆಗಳಿಂದ ತೆಗೆದ ಕಸೂತಿ ನಯ – ನಾಜೂಕಾಗಿರುತ್ತದೆ. ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಈಗ ಹೊಸೆದ ಆಯಾಂಕರ್ ಡೋಲಿ ದಾರಗಳನ್ನು ಬಳಸುತ್ತಾರೆ. ಚಿನ್ನ ಬೆಳ್ಳಿ ಹಾಗೂ ಇತರ ಲೋಹಗಳ ಸೂಕ್ಷ್ಮವಾದ ಎಳೆಗಳನ್ನು ಬೆಲೆಯುಳ್ಳ ವಸ್ತ್ರಗಳಲ್ಲಿ ಮತ್ತು ಜರಿಯ ಕಸೂತಿ ದಡಿಯ ಸೀರೆ ಹಾಗೂ ಬಟ್ಟೆಗಳನ್ನು ಉದಾಹರಿಸಬಹುದು. ಬಣ್ಣದ ನೂಲಿನಿಂದ ಕಸೂತಿ ಬಿಡಿಸಿದ್ದು ಎದ್ದು ಕಾಣುವಂತಿರಬೇಕು, ಶಾಶ್ವತವಾಗಿ ಉಳಿಯಬೇಕು ಎನ್ನುವ ಕಾರಣದಿಂದ ಪ್ರಾಚೀನರು ಹೆಚ್ಚಾಗಿ ನಿಸರ್ಗ ಬಣ್ಣವನ್ನೇ ಬಳಸಿದರು. ಹಸಿರು, ಕೆಂಪು, ಕೇಸರಿ, ಜಾಂಬಳಿ, ನೀಲಿ – ಕೇಸರಿ, ಬಣ್ಣದ ನೂಲುಗಳು ಹೊಂದಾಣಿಕೆಯಾಗುವಂತೆ ನಕ್ಷೆಗಳನ್ನು ಬಿಡಿಸುತ್ತಾರೆ. ಬಣ್ಣದ ದಾರಗಳ ಸಂಯೋಜನೆಯ ಗ್ರಾಮೀಣ ಹೆಣ್ಣು ಮಕ್ಕಳ ಜಾಣ್ಮೆ ಅವರ ಕಲಾಭಿರುಚಿಯನ್ನು ಎತ್ತಿ ತೋರಿಸುತ್ತದೆ.

ಕನ್ನಡಿಗರ ಕಸೂತಿಯಲ್ಲಿ ಬಿಳಿ – ಕೆಂಪು, ಹಳದಿ – ಹಸಿರು ಬಣ್ಣದ ದಾರವು ಪ್ರಮುಖವಾಗಿದೆ. ಸಿದ್ಧ ದಾರಗಳನ್ನು ಹಾಗೂ ಉಲ್ಲನ್‌ ಜಿನುಗು, ದಪ್ಪ ಎಳೆಗಳ ಬಳಕೆಯೂ ಈಗ ಹೆಚ್ಚಾಗಿದೆ.

ಸೂಜಿ

ಸಾದಾ ಬೇರೆ ಬೇರೆ ನಂಬರಿನ ಸೂಜಿಗಳು, ಕೊಕ್ಕೆ ಸೂಜಿ, ಉಲ್ಲನ್‌ ಹೆಣಿಕೆ ಕಡ್ಡಿಗಳನ್ನು ವಿವಿಧ ಬಗೆಯ ಕಸೂತಿ ತೆಗೆಯಲು ಉಪಯೋಗಿಸುತ್ತಾರೆ.

ಕತ್ತರಿ

ಈ ಹಿಂದೆ ಈಳಿಗೆ, ಕುಡುಗೋಲುಗಳಿಂದ ಬಟ್ಟೆ ಹಾಗೂ ದಾರವನ್ನು ಕತ್ತರಿಸುತ್ತಿದ್ದರು. ಈಗ ಸಣ್ಣ ದೊಡ್ಡ ಕತ್ತರಿಗಳು, ಹಾಗೂ ಬ್ಲೇಡುಗಳನ್ನು ಬಳಸುತ್ತಾರೆ.

ಅಂಗುಸ್ಥಾನ

ಕೈಗೆ ಸೂಜಿ ನೆಡಬಾರದೆಂದು ಕೈ ಬೆರಳಿಗೆ ಲೋಹದ ಸಾಧನವಾದ ಅಂಗುಸ್ಥಾನದ ಬಳಕೆ ಆರಂಭವಾದುದು ಇತ್ತೀಚೆಗಷ್ಟೇ. ಅಂದರೆ ಬಟ್ಟೆ ಮುದುಡದೇ ದಾರದ ವಿನ್ಯಾಸ ನೀಟಾಗಿ ಕುಳಿತುಕೊಳ್ಳುತ್ತದೆ.

ನಕ್ಷೆ ಹಾಕುವ ಪೆನ್ಸಿಲ್

ಕರ್ನಾಟಕ ಕಸೂತಿಯಲ್ಲಿ ಎಳೆಗಳನ್ನು ಎಣಿಸಿ ತಮ್ಮ ಕಲ್ಪನೆಯ ಚಿತ್ರವನ್ನು ಹೆಣೆಯಲಾಗುತ್ತದೆ. ಸಮಯದ ಉಳಿತಾಯ ಹಾಗೂ ಶ್ರಮದ ಸರಳತೆಗೋಸ್ಕರ ಕೆಲವರು ಬಟ್ಟೆಯ ಮೇಲೆ ದೊಡ್ಡ, ಸಣ್ಣ ಚಿತ್ರಗಳನ್ನು ಇದ್ದಿಲುತುಂಡು ಇಲ್ಲವೆ ವಿಭೂತಿಯಿಂದ ತೆಗೆಯುತ್ತಿದ್ದರು. ಈಗ ಪೆನ್ಸಿಲ್ಲುಗಳನ್ನು ಬಳಸುತ್ತಾರೆ.

ನಕ್ಷೆಗಳ ಪುಸ್ತಕ

ಭಾರತದ ಬೇರೆ ಬೇರೆ ಪ್ರಾಂತಗಳಲ್ಲಿ ಕಸೂತಿ ನಕ್ಷೆಗೆ ತಮ್ಮದೇ ಆದ ವೈಶಿಷ್ಟ್ಯವಿದೆ. ಬಟ್ಟೆಯ ಹಿನ್ನೆಲೆಯ ಬಣ್ಣಕ್ಕೆ ಒಪ್ಪುವಂತೆ ಹೊಳಪಿನ ಬಣ್ಣ ಬಣ್ಣದ ದಾರಗಳ ಕಸೂತಿಯು ಮನಮೋಹಕ. ಜನಪದರಲ್ಲಿ ಕನ್ಯೆಗೆ ಪ್ರಾಪ್ತವಯಸ್ಸಾಗುವ ಮೊದಲೇ ಕಸೂತಿಯನ್ನು ಕಲಿಸಿಕೊಡುವುದು ಸಂಪ್ರದಾಯವಾಗಿತ್ತು. ತಾಯಿ,ಅಜ್ಜಿ, ಮುತ್ತಜ್ಜಿಯರು ಕಸೂತಿ ಹಾಕಿ ಕಾಯ್ದಿರಿಸಿದ ಮಾದರಿಗಳಿಂದ ವಿನ್ಯಾಸಗಳನ್ನು ಆಯ್ದುಕೊಳ್ಳುತ್ತಿದ್ದರು. ಕಸೂತಿ ಕಲೆಯನ್ನು ಬಲ್ಲವರೆಲ್ಲರ ಬಳಿಯೂ ಒಂದು ಮೀಟರಿನಷ್ಟು ಸಾದಾ ನೂಲು ಬಟ್ಟೆಯ ಮೇಲೆ ಎಲ್ಲ ಬಗೆಯ ನಮೂನೆಗಳು ದಾಖಲಾಗಿರುತ್ತವೆ. ಮುಂದಿನ ಪೀಳಿಗೆಯು ಕಸೂತಿ ಕಲೆಯನ್ನು ಮುಂದುವರೆಸಿಕೊಂಡು ಹೋಗಲು ಒಂದು ಆಧಾರ ಪುಸ್ತಕದ ರೀತಿಯಲ್ಲಿ ಇದು ಕಾಯ್ದಿರಿಸಲ್ಪಟ್ಟಿರುತ್ತದೆ. ಕಡಿಮೆ ಎಂದರೂ ನೂರಿಪ್ಪತ್ತೆರಡು, ನೂರೈವತ್ತು ನಕ್ಷೆಗಳು ಈ ಪುಸ್ತಕದಲ್ಲಿ ದೊರೆಯುತ್ತವೆ. ಮೇಟಿ ಬಟ್ಟೆಯ ಹೊತ್ತಿಗೆಯೂ ಕೆಲವರ ಮನೆಯಲ್ಲಿ ಕಾಣಸಿಗುತ್ತದೆ. ಈ ಕಲೆಯಲ್ಲಿ ನಿರತರಾದವರು ಯಾವುದೇ ಹೊಸ ವಿನ್ಯಾಸವನ್ನು ನೋಡಿದ ಕೂಡಲೇ ತಮ್ಮ ನಮೂನೆ ಹೊತ್ತಿಗೆಯಲ್ಲಿ ಅದನ್ನು ಸೇರ್ಪಡೆ ಮಾಡುವ ಪರಿಪಾಠವಿಟ್ಟು ಕೊಂಡಿರುತ್ತಾರೆ. ಕೆಲವು ಕಡೆಗೆ ನಕ್ಷೆ ಹಾಕಿದ ಬಟ್ಟೆಗಳಿಗೆ ಕಟ್ಟು ಹಾಕಿಸಿ ಶಾಶ್ವತವಾಗಿ ತಮ್ಮ ಮನೆಯ ಗೋಡೆಗೆ ನೇತುಹಾಕಿರುತ್ತಾರೆ.

ಇತರ ಅಲಂಕಾರಿಕ ವಸ್ತುಗಳು

ಕಸೂತಿ ಹೆಚ್ಚು ಅಲಂಕಾರಯುತವಾಗಿ ಕಾಣಲು ಬಣ್ಣದ ಸಣ್ಣ ಸಣ್ಣ ಮಣಿಗಳನ್ನು ಟಿಕಳಿಗಳನ್ನು ಬಳಸಲಾಗುತ್ತದೆ. ಚಿಕ್ಕ ಗೆಜ್ಜೆಗಳು, ಬಿಳಿ ಮುತ್ತುಗಳು, ಕನ್ನಡಿ ಚೂರುಗಳು, ಗುಂಡಿಗಳು ಸಹಿತ ಕಾಣಿಸಿಕೊಳ್ಳುತ್ತವೆ. ಮೊದಲು ತೂತಿನ ಬಿಲ್ಲೆಗಳನ್ನು ಮತ್ತು ಬಳೆಗಳನ್ನು, ಲಂಬಾಣಿಗರು ವಿಶೇಷವಾಗಿ ತಮ್ಮ ಉಡುಪುಗಳಿಗೆ ಕವಡೆಗಳನ್ನು, ಕಿರುಗೆಜ್ಜೆಗಳನ್ನು ಹಚ್ಚಿರುತ್ತಾರೆ.

ಚಿತ್ರ ವಿನ್ಯಾಸ

ದೇವಾಲಯ, ಮೂರ್ತಿ ಶಿಲ್ಪಗಳಿಂದ ಹಿಡಿದು ಎಳೆಯ ಮಗುವಿಗೆ ಆಶ್ರಯ ಕೊಡುವ ತೊಟ್ಟಿಲವರೆಗೆ, ಆನೆಯಿಂದ ಪುಟ್ಟ ಅಳಿಲಿನವರೆಗೆ ಜನಪದ ಕಸೂತಿ ಕಲೆಯ ಚಿತ್ರ ವಿನ್ಯಾಸಗಳು ಹರಡಿಕೊಂಡಿವೆ. ತಾಯಿ ತನ್ನ ದಿನದ ದುಡಿಮೆಯ ನಂತರದ ಬಿಡುವಿನ ವೇಳೆಯಲ್ಲಿ ಮಕ್ಕಳು ತೊಡುವ ಬಟ್ಟೆಯ ಮೇಲೆ ಅವುಗಳಿಗೆ ಪ್ರಿಯವಾದ ಮುದನೀಡುವ ಹೂ, ದ್ರಾಕ್ಷಿ, ತೊಂಡೆ ಬಳ್ಳಿಗಳು, ಗಿಳಿ, ಆನೆ, ಹಸು, ಹೀಗೆ ವಿವಿಧ ಪ್ರಾಣಿ ಪಕ್ಷಿಗಳ ಚಿತ್ರಗಳನ್ನು ಕಸೂತಿಯಲ್ಲಿ ಬಿಡಿಸುತ್ತಿದ್ದರು. ಮನಸ್ಸು ಮತ್ತು ಪ್ರಕೃತಿಯ ಗಾಢಸಂಬಂಧದ ಕಲ್ಪನೆಯನ್ನು ಕಲೆಯಲ್ಲಿ ಮೂಡಿಸುವ ಅವಳ ಜಾಣ್ಮೆ ಮೆಚ್ಚುವಂಥದ್ದು. ದೇವ – ದೇವತೆಗಳೊಂದಿಗಿನ ಗ್ರಾಮೀಣರ ಒಲವು ಅವರ ಕಸೂತಿಯಲ್ಲಿನ ದೇವಾಲಯ, ರಥ ಮೊದಲಾದ ವಿನ್ಯಾಸಗಳಲ್ಲಿ ಸ್ಪಷ್ಟವಾಗಿದೆ. ಹಲವು ಬಗೆಯ ರೂಪು – ರೇಷೆಗಳು ಕಸೂತಿ ನಕ್ಷೆಗಳಲ್ಲಿ ಪ್ರತಿಬಿಂಬಿತಗೊಂಡಿವೆ. ಗೋಪುರ, ಕಲಶ, ತುಳಸಿಕಟ್ಟೆ, ಕಾಳಿನ ತೆನೆಗಳನ್ನು ಬಟ್ಟೆ ಮಾಧ್ಯಮದಲ್ಲಿ ಮೂಡಿಸುವ ಕಲೆ ಅವಳಿಗೆ ಕರಗತವಾಗಿದೆ. ಈ ಎಲ್ಲ ಚಿತ್ರ ವಿನ್ಯಾಸಗಳು ಹೆಂಗಳೆಯರ ಮನಸ್ಸಿನ ಕೋಮಲ ಅಭಿವ್ಯಕ್ತಿಯಾಗಿರುವುದರಿಂದ ಗ್ರಾಮೀಣ ಸಂಸ್ಕೃತಿಯ ಸ್ಪಷ್ಟ ನೋಟವೂ ಓದುಗರಿಗೆ ದಕ್ಕುತ್ತದೆ.

ಕನ್ನಡ ನಾಡಿನಲ್ಲಿ ಬಹು ಹಿಂದಿನಿಂದಲೂ ಇಳಕಲ್‌ ಕರಿಚಂದ್ರಕಾಳಿ ಸೀರೆಯಲ್ಲಿ ಎಳೆಗಳನ್ನು ಎಣಿಸಿ ರೇಶ್ಮೆಯ ಒಂದೆಳೆ ಎರಡೆಳೆ ದಾರದಿಂದ ಸೆರಗಿನ ಮೇಲಂಚಿಗೆ ಹೂವಿನ ಸಾಲು ಗೋಡಂಬಿಯ ಪಟ್ಟಿ, ಗೋಪುರ ಸಾಲು, ಪುಟ್ಟ ಗಿಳಿ ಸಾಲುಗಳಷ್ಟೆ ಅಲ್ಲ ಸೀರೆಯ ಉದ್ದಗಲಕ್ಕೂ ಬಿಳಿಯ ರೇಶ್ಮೆಯ ಚಿಕ್ಕ ದೊಡ್ಡ ಚುಕ್ಕೆಗಳು ಹಾಗೂ ಪುಟ್ಟ ವಿನ್ಯಾಸಗಳನ್ನು ಹಾಕಲಾಗುತ್ತಿದೆ. ಈ ಬಗೆಯ ಸೀರೆಗಳು ಇಂದು ಎಲ್ಲಾದರೊಂದು ನೋಡಲು ಸಿಗುತ್ತವೆ. ಈಗ ಇಂಥ ಸೀರೆಗಳನ್ನು ಉಡುವುದೇ ಒಂದು ಘನತೆಯ ಸಂಕೇತವಾಗಿದೆ.

ಜಗತ್ತಿನ ಬುಡಕಟ್ಟು ಜನಾಂಗದವರು ಒಂದೊಂದು ಪ್ರಾಣಿಯನ್ನು ತಮ್ಮ ಕುಲದೇವತೆಯೆಂದು ಭಾವಿಸಿ ಆರಾಧನೆ ಮಾಡುವುದನ್ನು ಕಾಣುತ್ತೇವೆ. ವೃಕ್ಷಾರಾಧನೆಯು ಪ್ರಾಚೀನವಾದುದೇ. ತುಳಸಿಹಬ್ಬ ಇನ್ನಿತರ ಅನೇಕ ಹಬ್ಬಗಳು ಪ್ರಕೃತಿಯ ಆರಾಧನೆಯೇ ಆಗಿವೆ. ಅನಾದಿಕಾಲದಿಂದಲೂ ಮನುಷ್ಯನಿಗೂ ಪ್ರಕೃತಿಗೂ ಇರುವ ಅವಿನಾಭಾವ ಸಂಬಂಧವನ್ನು ಇವು ಸಂಕೇತಿಸುತ್ತವೆ. ಹಾರಾಡುವ ಗಿಳಿ, ಗುಬ್ಬಿ, ಪಾರಿವಾಳ, ನರ್ತಿಸುವ ನವಿಲು, ಹುಲಿ, ಸಿಂಹ, ಆನೆ, ಕುದುರೆ, ಪ್ರಾಣಿ, ಪಕ್ಷಿಗಳು ಯಾವಾಗಲೂ ಸಜ್ಜನತೆ, ಸಾತ್ವಿಕತೆ, ಗಾಂಭೀರ್ಯ, ಗೌರವಗಳ ಪಕ್ಷ ವಹಿಸುತ್ತವೆ. ಸಾಂಪ್ರದಾಯಿಕ ಕಸೂತಿಯು ಸಂಕೀರ್ಣವೂ, ಸುಂದರವೂ ಆಗಿದೆ. ವಿಶಿಷ್ಟ ಕಲೆಯೆನಿಸಿದ ಕಸೂತಿ ಸಾಧನೆಗೆ ಕಲ್ಪನಾಶಕ್ತಿ, ಅನ್ವೇಷಕ ಬುದ್ಧಿ ಬೇಕು.

ಧಾರ್ಮಿಕ ನಂಬುಗೆ, ಯಾತ್ರೆ, ಅರ್ಚನೆ, ಆಚರಣೆ, ತೇರು, ಪಲ್ಲಕ್ಕಿ ಅಂಬಾರಿ, ಗೋಪುರ, ಇತ್ಯಾದಿ ಜನಪದ ಶೈಲಿಯ ಮಾದರಿಗಳು ಇಲ್ಲಿ ಎಡೆಪಡೆದಿವೆ. ರಾಮಾಯಣ, ಮಹಾಭಾರತ, ಪೌರಾಣಿಕ ಪ್ರಸಂಗಗಳು, ದೇವತೆಗಳು, ಕೃಷ್ಣಾವತಾರದ ದೃಶ್ಯಗಳು, ಹೀಗೆ ಗ್ರಾಮೀಣರಿಗೆ ನಮ್ಮ ಕಾವ್ಯ ಪುರಾಣಗಳ ಪರಿಚಯವಿದೆ. ಈ ತಾತ್ವಿಕ ಹಿನ್ನೆಲೆಯಲ್ಲಿ ಅವರ ಜೀವನ ವಿಧಾನದ ಸ್ಪಷ್ಟ ತಿಳುವಳಿಕೆಯು ಅವರ ಕಸೂತಿಗಳಲ್ಲಿ ಒಡಮೂಡಿದೆ. ಹರಿಶ್ಚಂದ್ರನ ಸತ್ಯ, ಬಲಿಚಕ್ರವರ್ತಿಯ ತ್ಯಾಗ, ಸೀತೆಯ ಪಾತಿವ್ರತ್ಯ, ಹನುಮಂತನ ಸ್ವಾಮಿಭಕ್ತಿ, ಇವೆಲ್ಲಾ ಗ್ರಾಮೀಣರಿಗೆ ದಾರಿತೋರಿವೆ. ಮಹಿಳೆಯರು ತಾವು ಕಲ್ಪಿಸಿದಂತೆ ಬಾಗಿಲ ಪರದೆ, ಮೇಲು ಹೊದಿಕೆ, ದೇವರ ಎಡೆತಾಟನ್ನು ಮುಚ್ಚುವ ವಸ್ತ್ರಗಳಲ್ಲಿ ಕಸೂತಿ ಹಾಕುತ್ತಾರೆ. ಹಿತೋಪದೇಶಗಳ ಸಂದರ್ಭ, ಕೃಷ್ಣ ಅರ್ಜುನನಿಗೆ ಸಾರಥಿಯಾದ ಚಿತ್ರಣ, ಪಗಡೆಯಾಟದ ಹಾಸಿನ ಚಿತ್ರಣಗಳೆಲ್ಲಾ ಜನಪದ ಚಿತ್ರಕಲೆಯ ವೈಶಿಷ್ಟ್ಯವಾಗಿವೆ. ಆಯಾ ಧರ್ಮದವರು ತಮ್ಮ ಧಾರ್ಮಿಕ ಸ್ಥಳಗಳು, ದೈವಗಳನ್ನು ಕಸೂತಿ ಕಲೆಯ ಮೂಲಕ ಶಾಶ್ವತವಾಗಿಸುತ್ತಾರೆ. ಕಲೆಯು ಧಾರ್ಮಿಕ ಹಿನ್ನೆಲೆಯಲ್ಲಿ ಹೇಗೆ ಮಾರ್ಪಾಡು ಹೊಂದುತ್ತದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಕಸೂತಿಯ ಚಿತ್ರಗಳನ್ನು ಪ್ರಮುಖವಾಗಿ ೧. ಪ್ರಾಕೃತಿಕ ೨. ಧಾರ್ಮಿಕ ೩. ಅಲಂಕಾರಿಕ ಹಾಗೂ ೪. ಇತರ ಎಂದು ವರ್ಗೀಕರಿಸಿಕೊಳ್ಳಬಹುದು.