ಕಸೂತಿಯ ಚಿತ್ರಗಳನ್ನು ಪ್ರಮುಖವಾಗಿ ೧. ಪ್ರಾಕೃತಿಕ ೨. ಧಾರ್ಮಿಕ ೩. ಅಲಂಕಾರಿಕ ಹಾಗೂ ೪. ಇತರ ಎಂದು ವರ್ಗೀಕರಿಸಿಕೊಳ್ಳಬಹುದು.

. ಪ್ರಾಕೃತಿಕ

ಮನುಷ್ಯನಿಗೂ ಪ್ರಕೃತಿಗೂ ಇರುವ ಸಂಬಂಧ ಅನ್ಯೋನ್ಯವಾದುದು. ಗ್ರಾಮೀಣ ಮಹಿಳೆಯರ ಬದುಕು ಪ್ರಕೃತಿಯ ಮಡಿಲಲ್ಲಿ ಸಾಗುತ್ತಿರುವಾಗ ಅದುವೇ ಅವರಿಗೆ ಸ್ಫೂರ್ತಿಯ ನೆಲೆಯಾಗಿ ಪರಿಣಮಿಸಿದೆ. ಹುಲಿ, ಸಿಂಹಗಳಂತಹ ಕ್ರೂರ ಪ್ರಾಣಿಗಳಿಗೆ ಕಸೂತಿಯಲ್ಲಿ ಸ್ಥಾನ ದೊರಕಿದೆ. ನಾನಾ ಬಗೆಯ ಪಕ್ಷಿ ಸಂಕುಲ, ಕುಣಿವ ನವಿಲು, ಹಾರುವ ಹಕ್ಕಿ, ಹಾಡುವ ಕೋಗಿಲೆ, ಹೂ ಬಳ್ಳಿಗಳ ಅಲಂಕರಣ ಕಸೂತಿಗೆ ಆಕರ್ಷಕ ಸಾಮಗ್ರಿಗಳಾಗಿವೆ. ಇಲ್ಲಿಯೂ ೧. ಪ್ರಾಣಿಗಳು ೨. ಪಕ್ಷಿಗಳು ೩. ಗಿಡ, ಹೂ – ಬಳ್ಳಿಗಳು ಎಂಬುದಾಗಿ ವಿಭಾಗಿಸಿಕೊಳ್ಳಲು ಸಾಧ್ಯವಿದೆ.

i) ಪ್ರಾಣಿಗಳು: ಆನೆ, ಕುದುರೆ, ಜಿಂಕೆ, ಹುಲಿ, ಸಿಂಹ ಮೊದಲಾದ ಪ್ರಾಣಿಗಳು ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ಮಹಿಳೆಯ ಮನಸ್ಸಿಗೆ ಧೈರ್ಯ, ಸಂತೋಷಕೊಡುವ ಪ್ರಾಣಿಗಳು ಅವಳ ಕಸೂತಿಯಲ್ಲಿ ಮೂಡಿ ಬಂದಿವೆ. ಸೀತೆಗೆ ಜಿಂಕೆ ಪ್ರಿಯಾವಾದರೆ ಜನಪದ ಮಹಿಳೆಗೂ ಅದು ಪ್ರಿಯವಾದ ಪ್ರಾಣಿಯಾಗಿಬಿಡುತ್ತದೆ. ಭಯ ಹುಟ್ಟಿಸುವ ಹಾವು ರಂಗೋಲಿಯಲ್ಲಿ ಕಾಣಿಸಿಕೊಂಡರೆ ಇಲ್ಲಿ ಇಲ್ಲವೇ ಇಲ್ಲ ಎನ್ನುವಂತಿದೆ. ಆನೆ ಪ್ರಧಾನವಾಗಿ ಕಸೂತಿಯಲ್ಲಿ ಕಾಣಸಿಗುತ್ತದೆ.

ii) ಪಕ್ಷಿ ಮತ್ತು ಕೀಟಗಳು: ವಿಶೇಷವಾಗಿ ನವಿಲು, ಗಿಳಿ, ಗುಬ್ಬಿ, ಪಾರಿವಾಳ, ಹಂಸ, ಇಣಚಿಗಳನ್ನು ಬಣ್ಣ ಬಣ್ಣದ ದಾರಗಳಲ್ಲಿ ಕಸೂತಿ ತೆಗೆಯುವರು. ಕಾಗೆ ಹದ್ದುಗಳು ಅಪಶಕುನ ಎಂಬ ಭಾವನೆಯಿಂದಲೇ ಬಹುತೇಕವಾಗಿ ಮಹಿಳೆಯರು ತಮ್ಮ ಕಸೂತಿಯಲ್ಲಿ ಅವುಗಳನ್ನು ದೂರವಿರಿಸಿದ್ದಾರೆ. ಜೇನ್ನೊಣಗಳಲು ಸಿಹಿ ಜೇನನ್ನು ಕೊಡುವ ಕಾರಣದಿಂದ ಅದಕ್ಕೆ ಮತ್ತು ಕಸೂತಿಗೆ ಸ್ನೇಹವುಂಟು. ಜರಿ ಮತ್ತು ಚೇಳುಗಳನ್ನು ಹಚ್ಚೆಯಲ್ಲಿ ವಿಶಿಷ್ಟವೆಂಬುದಾಗಿ ಪರಿಗಣಿಸಿದರೆ, ಕಸೂತಿಯಲ್ಲಿ ಇವು ಕಾಣಿಸಿಕೊಂಡರೂ ತೀರಾ ಅಪರೂಪ.

iii) ಗಿಡ ಹೂ ಬಳ್ಳಿಗಳು: ಗಿಡ ಬಳ್ಳಿ, ಹಣ್ಣು ಹೂಗಳು, ಮನಸ್ಸಿಗೆ ನೆಮ್ಮದಿಯನ್ನು ಸಮೃದ್ಧತೆಯನ್ನು ಒದಗಿಸುತ್ತವೆ. ತುಳಸಿಗಿಡಕ್ಕೆ ಕಸೂತಿಕಲೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಅದರಂತೆ ಕಮಲದ ಹೂವಿಗೆ ಅಲ್ಲಿ ಪ್ರಾಶಸ್ತ್ಯವಿದೆ. ಇವು ಪವಿತ್ರವೆಂಬ ಕಾರಣದಿಂದಲೇ ಬಟ್ಟೆಯಲ್ಲಿ ಈ ಚಿತ್ರಗಳನ್ನು ಬಿಡಿಸುವಾಗ ಮಹಿಳೆಯರ ಮನಸ್ಸು ಸಂಪೂರ್ಣವಾಗಿ ತೊಡಗಿಕೊಂಡಿರುತ್ತದೆ. ದ್ರಾಕ್ಷಿಬಳ್ಳಿ, ಮೆಂತ್ಯೆಬಳ್ಳಿ, ಬಟಗಡ್ಲಿ ಬಳ್ಳಿ ಚೆನ್ನಂಗಿ ಬಳ್ಳಿ, ಇತ್ಯಾದಿಗಳು ವಿಶೇಷ ಅವಕಾಶ ಪಡೆದಿವೆ. ಮಹಿಳೆಯರ ಕೋಮಲ ಮನೋಭಾವವು ವಿವಿಧ ಬಳ್ಳಿಗಳಲ್ಲಿ ವ್ಯಕ್ತಕೊಂಡಿದೆ. ಮಾವಿನಕಾಯಿ, ಗೋಡಂಬಿ ಚಿತ್ರವಿರುವ ಅಂಚುಗಳು ಸುಂದರವಾಗಿರುತ್ತವೆ. ಮೇಜು, ಕುರ್ಚಿ ಗೋಡೆಗೆ ಹಾಕಬಹುದಾದ ಅಲಂಕಾರವಸ್ತ್ರಗಳು ಈ ಬಗೆಯ ಕಸೂತಿಯಿಂದ ಮೆರೆಯುತ್ತವೆ.

. ಧಾರ್ಮಿಕ

ಜನಪದರು ಅನುಸರಿಸುವ ಧರ್ಮಗಳು ಅವರವರ ನಂಬಿಕೆಗಳು, ಅವರು ಆಚರಿಸುವ ಆಚರಣೆಗಳು ಕಸೂತಿಕಲೆಯಲ್ಲಿ ಪ್ರತಿಬಿಂಬಿತಗೊಂಡಿರುತ್ತವೆ. ಹಬ್ಬ ಜಾತ್ರೆಗಳಲ್ಲಿ ರಥದ ಗೋಪುರದ ಅಲಂಕಾರ, ಎಳೆಯುವ ಚಿತ್ರ, ಶಿವಲಿಂಗ, ಎಣ್ಣೆದೀಪಗಳು, ಮೆರವಣಿಗೆಯ ಆನೆ, ಅಂಬಾರಿ, ಹನುಮಂತನ ಪಲ್ಲಕ್ಕಿ, ರಾಮನತೊಟ್ಟಿಲು, ಮೊದಲಾದ ವಿನ್ಯಾಸಗಳು ಗ್ರಾಮೀಣರ ಧಾರ್ಮಿಕ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಚಾಲುಕ್ಯರ ಕಾಲದಲ್ಲಿ ಮಧುರೈ ತಂಜಾವೂರು, ಇತ್ಯಾದಿ ಸ್ಥಳಗಳಲ್ಲಿ ಕಟ್ಟಿಸಿದ ದೇವಮಂದಿರಗಳ ಶಿಲ್ಪಕಲೆ, ದೇವಸ್ಥಾನ, ಗೋಪುರಗಳು, ದೇವಾಲಯದ ಇತರ ಭಾಗಗಳು, ದೇವತಾರಾಧನೆ ಧಾರ್ಮಿಕ ಉತ್ಸವ ಮೊದಲಾದ ಪವಿತ್ರ ವಿಚಾರಗಳು ಮಹಿಳೆಯರ ಜನಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದವು. ತೇರು, ಶಿವಬಾಸಿಂಗ, ನಂದಿ, ಸ್ವಸ್ತಿಕ, ಹನುಮಂತ, ಸೂರ್ಯ, ಶಂಖ, ರಾಮನತೊಟ್ಟಿಲು, ಕಾಳಿಂಗಕೊಳ, ಅಷ್ಟಕೊಳ, ಮಂಟಪ, ಆನೆ ಅಂಬಾರಿ, ದೀಪ ಸ್ತಂಭಗಳು ಮುಂತಾದವುಗಳು ಹಲವು ನಂಬಿಕೆಗಳಿಗೆ ಸಂಬಂಧಿಸಿದ ಚಿತ್ರಗಳು ಕಸೂತಿ ಕಲೆಯಲ್ಲಿ ಸೇರ್ಪಡೆಯಾಗುತ್ತವೆ. ಸ್ವಸ್ತಿಕದ ಚಿತ್ರ ವಿಶಿಷ್ಟವೆನಿಸಿದೆ. ಧಾರ್ಮಿಕ ಕಸೂತಿ ಚಿತ್ರಗಳಲ್ಲಿ ಪುರುಷರು ಕೂಡ ಪಾಲ್ಗೊಂಡಿದ್ದಾರೆ. ಎತ್ತುಗಳ ಮೇಲೆ ಹಾಕುವ ಜೂಲದ ಚಿತ್ರಗಳು, ಮೈಲಾರದೇವರ ಭಕ್ತರಾದ ಗೊರವಯ್ಯಗಳು ಹಾಕಿಕೊಳ್ಳುವ ವೇಷಭೂಷಣಗಳು ಪುರುಷರ ಕಸೂತಿಗಳೆಂದು ಕರೆಯಲ್ಪಟ್ಟಿವೆ.

ಗ್ರಾಮೀಣ ಮಹಿಳೆಯರು ಬಾಗಿಲಪರದೆಯಂತಹ ವಸ್ತ್ರಗಳ ಮೇಲೆ ತಾವು ನಂಬಿಕೊಂಡ ದೇವತೆಗಳ ಕಸೂತಿ ತೆಗೆಯುತ್ತಾರೆ. ವಿಶೇಷವಾಗಿ ವಿಘ್ನನಿವಾರಕ ಗಣೇಶ, ಲಕ್ಷ್ಮೀದೇವಿ, ಶಿವ, ಸರಸ್ವತಿ, ಬ್ರಹ್ಮ, ವಿಷ್ಣು, ಗ್ರಾಮದೇವತೆಗಳು, ಬಾಳಿಗೆ ಪುನಶ್ಚೇತನ ಒದಗಿಸುವ ಊರಿನ ಉತ್ಸವಗಳ ಚಿತ್ರಗಳು ಅವರ ಬಣ್ಣ ಬಣ್ಣದ ದಾರದಲ್ಲಿ ಕಂಗೊಳಿಸಿವೆ.

ಜನಪದರ ಜೀವನಕ್ಕೆ ನೈತಿಕ ಮೌಲ್ಯಗಳು ಅಮೂಲ್ಯವಾದವುಗಳು, ಉತ್ತಮ ಬಾಳಿಗೆ ಆಸರೆಯಾಗಿರುವಂತಹವು. ಅಂತೆಯೇ ಪೌರಾಣಿಕ ವ್ಯಕ್ತಿಗಳು ಅವರಿಗೆ ಮಾರ್ಗದರ್ಶನ ಮಾಡುತ್ತಿರುವವರು, ಬಲಿ ಚಕ್ರವರ್ತಿ, ಸತ್ಯಹರಿಶ್ಚಂದ್ರ ಮೊದಲಾದ ಆದರ್ಶ ವ್ಯಕ್ತಿಗಳು ಕಸೂತಿಕಲೆಯಲ್ಲಿ ದರ್ಶನವೀಯುತ್ತಾರೆ.

ರಾಮಾಯಣ, ಮಹಾಭಾರತಗಳನ್ನು ಗ್ರಾಮೀಣರು ಗೌರವದಿಂದ ಕಾಣುತ್ತಾರೆ. ಅಶೋಕವನದಲ್ಲಿ ಸೀತೆ, ಪತಿಧ್ಯಾನದಲ್ಲಿ ಮಗ್ನಳಾಗಿರುವ ರೀತಿ ಅವರ ಕಸೂತಿಯಲ್ಲಿ ಮನೋಜ್ಞವಾಗಿರುತ್ತದೆ. ಲವ – ಕುಶರು, ಹನುಮಂತ ಅಲ್ಲದೇ ರಾಮಾಯಣದ ಅನೇಕ ಸನ್ನಿವೇಶಗಳು ಅವರ ಕಲ್ಪನೆಗೆ ನಿಲುಕಿವೆ. ಮಹಾಭಾರತದ ಕಥೆಗಳು, ಉಪಕಥೆಗಳು, ಕೃಷ್ಣನ ಬಾಲಲೀಲೆ, ಗೀತೋಪದೇಶದ ಸಂದರ್ಭ ಇತ್ಯಾದಿಗಳು ಮಹಿಳೆಯರ ಮನಸ್ಸನ್ನು ಸ್ಪಂದಿಸಿದ ಬಗೆ ಅವರ ಕಲೆಯಲ್ಲಿ ವ್ಯಕ್ತಗೊಂಡಿರುವ ರೀತಿ ಆಶ್ಚರ್ಯವನ್ನುಂಟು ಮಾಡುತ್ತದೆ. ಅಕ್ಷರ ಕಲಿಯದ ನಾರಿಯರ ಅನುಪಮ ಅಭಿವ್ಯಕ್ತಿಪ್ರೌಢಿಮೆಯು ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಉಳವಿ, ಮೈಲಾರಗುಡ್ಡ, ಶ್ರೀಶೈಲ, ಹಂಪಿ ತೇರುಗಳನ್ನು ಬಟ್ಟೆಯಲ್ಲಿ ಹಿಡಿದಿಡುವ ಅವರ ರೀತಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

) ಅಲಂಕಾರಿಕ

ಸೌಂದರ್ಯಮೂಲ ಕಸೂತಿ ಕಲೆಯು ತನ್ನ ವಿನ್ಯಾಸ ಹಾಗೂ ಬಣ್ಣಗಳ ಸಂಯೋಜನೆಗಳಿಂದ ನೋಡುವ ಕಣ್ಣು – ಮನಗಳನ್ನು ತುಂಬಿಕೊಳ್ಳುವುದು ಮಾನವ ಸೃಷ್ಟಿಸಂಬಂಧದ ಅದ್ಭುತ ಕೊಡುಗೆಯೆಂದರೆ ತಪ್ಪಾಗದು. ರಥದ ಗೋಪುರವು ಮರದ ರೆಂಬೆಗಳಿಂದ ಹಕ್ಕಿಗಳಿಂದ ಅಲಂಕೃತಗೊಂಡುದು, ವಿವಿಧ ಆಸನಗಳು, ಹೂಕುಂಡಗಳು, ಭೂಮಿತಿ ನಕ್ಷೆಗಳಾದ ವರ್ತುಳ, ಚೌಕಾಕಾರ, ಅಷ್ಟಕೋನ ಅಲ್ಲದೆ ಆಕಾಶಬುಟ್ಟಿ ಅಲಂಕಾರಿಕ ದೀಪಸ್ತಂಭಗಳು ಪ್ರಾಕೃತಿಕ ಹಲವಾರು ಚಿತ್ರಗಳು ಕಲಾಪೂರ್ಣವಾಗಿರುತ್ತವೆ. ಇವುಗಳಿಗೂ ರಂಗೋಲಿಯ ಚಿತ್ರಗಳ ರೇಖಾ ವಿನ್ಯಾಸಗಳಲ್ಲಿ ಹೋಲಿಕೆಯನ್ನು ಗಮನಿಸಬಹುದು. ಕಮಲಾಸನಗಳು, ಹೂವಿನ ಪಟ್ಟಿ, ಗೋಡಂಬಿ ಪಟ್ಟಿಗಳು, ಆಕಾಶಬುಟ್ಟಿ, ಹೂದಾನಿಗಳು, ಜಿಂಕೆ ಹೂದಾನಿ, ನವಿಲು ಹೂದಾನಿಗಳು ಅಲಂಕಾರಿಕ ಕಸೂತಿಗಳೆನಿಸಿವೆ. ಮಕ್ಕಳ ಉಡುಗೆಗಳಲ್ಲಿ ಹಾಸಿಗೆ ಹೊದಿಕೆಗಳಲ್ಲಿ, ಬಾಗಿಲ ತೋರಣ, ತಲೆದಿಂಬಿನ ಚೀಲಗಳಲ್ಲಿ ಈ ಬಗೆಯ ವಿನ್ಯಾಸಗಳು ತುಂಬಾ ಆಕರ್ಷಕವಾಗಿರುತ್ತವೆ.

. ಇತರ

ಐತಿಹಾಸಿಕ, ಸಾಮಾಜಿಕ, ರಾಜಕೀಯಕ್ಕೆ ಸಂಬಂಧಿಸಿದ ಕಸೂತಿ ನಕ್ಷೆಗಳು ಆಯಾ ಪ್ರದೇಶದ ಪ್ರಾದೇಶಿಕ ವೈವಿಧ್ಯಗಳಾಗಿ ಕಸೂತಿ ಕಲೆಯಲ್ಲಿ ಕಂಡುಬರುತ್ತವೆ.

ಬಸವೇಶ್ವರ, ಅಕ್ಕಮಹಾದೇವಿ ಹಾಗೂ ಇನ್ನಿತರ ಶರಣ – ಶರಣೆಯರು, ಬುದ್ಧ ಮಹಾವೀರ, ಪೈಗಂಬರ ಮೊದಲಾದ ಧಾರ್ಮಿಕ ಮಹಾಪುರುಷರು, ಅಶೋಕಚಕ್ರವರ್ತಿ, ಕೃಷ್ಣದೇವರಾಯ, ಟಿಪ್ಪುಸುಲ್ತಾನ, ಸಂಗೊಳ್ಳಿರಾಯಣ್ಣ, ಕಿತ್ತೂರ ಚೆನ್ನಮ್ಮರಂಥಹ ಐತಿಹಾಸಿಕ ವೀರರು ಕಸೂತಿಯಲ್ಲಿ ಕಾಣಿಸಿಕೊಳ್ಳುತ್ತಾರೆ.

ರಾಜಕೀಯ ನಾಯಕರುಗಳೆನಿಸಿದ ಮಹಾತ್ಮಾಗಾಂಧಿ, ನೆಹರು, ಇಂದಿರಾಗಾಂಧಿ, ಸುಭಾಷ್‌ಚಂದ್ರ ಭೋಸ್‌, ಅಂಬೇಡಕರ್ ಮೊದಲಾದವರು, ವಿವೇಕಾನಂದ, ಅರವಿಂದ, ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಟ್ಯಾಗೋರ, ವಿಶ್ವೇಶ್ವರಯ್ಯರಂತಹ ರಾಷ್ಟ್ರೀಯ ವ್ಯಕ್ತಿಗಳನ್ನು ಕಸೂತಿಕಲೆಯಲ್ಲಿ ಮೂಡಿಸಲಾಗುತ್ತದೆ.

ಧಾರವಾಡ ಬೆಳಗಾವಿ ಭಾಗಗಳಲ್ಲಿ ಅಲ್ಲಿಯ ಪುಣ್ಯ ಪುರುಷರು ಮತ್ತು ಪವಿತ್ರ ಕ್ಷೇತ್ರಗಳು ಕಸೂತಿಗೆ ವಸ್ತುವಾಗುತ್ತವೆ. ಮುರುಘಾಮಠ, ಮೃತ್ಯುಂಜಯ ಸ್ವಾಮಿಗಳು, ಗದುಗಿನ ತೋಂಟದಾರ್ಯ ಸ್ವಾಮಿಗಳು, ಗರಗದ ಮಡಿವಾಳಪ್ಪನವರು ಹಾಗೂ ಇನ್ನಿತರ ಮಹಾತ್ಮರು ಸವದತ್ತಿ ಎಲ್ಲಮ್ಮ, ಅಥಣಿಯಶಿವಯೋಗಿಗಳು, ಬಳ್ಳಾರಿ ಭಾಗದಲ್ಲಿ ವಿಜಯನಗರ ಶೈಲಿಯ ಶಿಲ್ಪಗಳ ಮಾದರಿಗಳ ಕಸೂತಿಗಳಿವೆ. ಹಂಪೆಯ ತೇರು, ವಿರುಪಾಕ್ಷೇಶ್ವರ ಗುಡಿ ಮೊದಲಾದವುಗಳನ್ನು ಕಾಣಬಹುದು. ಬಿಜಾಪುರದ ಗೋಳಗುಮ್ಮಟ, ಬಾಗೇವಾಡಿಯ ಬಸವೇಶ್ವರ ಹೀಗೆ ಬಿಜಾಪುರ, ಕಲಬುರ್ಗಿ, ಬೀದರ್, ರಾಯಚೂರ, ಬಳ್ಳಾರಿ ಭಾಗಗಳಲ್ಲಿ ಮುಸ್ಲಿಂ ಶೈಲಿಯ ಅಲಂಕರಣಗಳು, ಚಿತ್ರವಿನ್ಯಾಸಗಳು ಕಂಡುಬರುತ್ತವೆ. ಉತ್ತರ ಕನ್ನಡದ ಇಡಗುಂಜಿ ಗಣಪತಿ, ಶಿರಸಿ ಮಾರಿಕಾಂಬಾ ದೇವಾಲಯ, ಜೋಗ ಜಲಪಾತದ ರುದ್ರ ರಮಣೀಯ ದೃಶ್ಯ, ಗೋಕರ್ಣದ ಮಹಾಬಳೇಶ್ವರ, ಸಾಗರದಂಚಿನಲ್ಲಿ ಸೂರ್ಯಾಸ್ತದ ಮನಮೋಹಹ ದೃಶ್ಯ, ತೆಂಗು ಅಡಿಕೆ ಗಿಡಗಳ ಸಾಲುಗಳು ಕಸೂತಿ ಕಲೆಗೆ ಸ್ಫೂರ್ತಿ ನೀಡಿವೆ.

ಮುಸ್ಲೀಮರು, ಕ್ರಿಶ್ಚಿಯನ್ನರು, ಹಿಂದುಗಳು, ತಮ್ಮ ತಮ್ಮ ಧರ್ಮಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳನ್ನು ಕೆಲವೊಮ್ಮೆ ಸಾಂಕೇತಿಕ ಚಿಹ್ನೆಗಳ ಮೂಲಕ ಕಸೂತಿಯಲ್ಲಿ ಗುರುತಿಸಿರುತ್ತಾರೆ.

ಜನಪದ ಕಸೂತಿಯ ಗಾವಂತಿ, ಮೆಂತ್ಯೆ, ನೇಗಿ, ಹಾಗೂ ಮುರುಗಿ ಈ ಹೊಲಿಗೆಗಳಲ್ಲಿ ಕೆಲವು ವಿನ್ಯಾಸಗಳನ್ನು ಒಂದೇ ಪ್ರಕಾರದ ಹೊಲಿಗೆಯಲ್ಲಿಯೇ ಪೂರ್ಣಗೊಳಿಸಬಹುದು. ಅಥವಾ ಬೇರೆ ಬೇರೆ ಭಾಗಗಳನ್ನು ಬೇರೆ ಬೇರೆ ಹೊಲಿಗೆಗಳಿಂದ, ಬೇರೆ ಬೇರೆ ಬಣ್ಣದ ದಾರಗಳಿಂದ ತುಂಬಬಹುದು. ಸೂಕ್ಷ್ಮವಾಗಿ ಕಾಣುವಂತೆ ಅನೇಕ ವಿನ್ಯಾಸಗಳನ್ನು ಒಂದೆಳೆಯ ಅತಿ ಜಿನುಗಾದ ರೇಶ್ಮೆ ಬಟ್ಟೆಯಲ್ಲಿ ತೆಗೆದ ಕಸೂತಿಯು ಉತ್ಕೃಷ್ಟವಾಗಿರುತ್ತದೆ. ಆಯಾ ವಿನ್ಯಾಸಗಳು, ಬಳಸಲಾದ ಬಟ್ಟೆ ಮತ್ತು ಹೊಲಿಗೆಯ ಪ್ರಕಾರ ಉಪಯೋಗಿಸುವ ದಾರ ಹಾಗೂ ಅದರ ಬಣ್ಣ ಇವುಗಳನ್ನು ಕಸೂತಿ ಕಲೆಯಲ್ಲಿ ಪರಿಣಿತರಾದ ಮಹಿಳೆಯರು ಆಯ್ಕೆ ಮಾಡಿಕೊಳ್ಳುವ ರೀತಿಯು ಇಂದಿನ ಯಂತ್ರ ಕಸೂತಿಗಿಂತ ಮಿಗಿಲಾಗಿದ್ದು, ಅವರ ಪ್ರತಿಭಾಶಕ್ತಿಗೆ ಕನ್ನಡಿಹಿಡಿಯುವಂತಹುದಾಗಿದೆ. ಕೈಯಿಂದ ಮಾಡಿದ್ದಾದುದರಿಂದ ಕೈ ಕಸೂತಿಯೆಂದೇ ಕರೆಯಲ್ಪಡುವ ಇಂತಹ ಕಲೆಯಲ್ಲಿ ಆತ್ಮೀಯತೆ, ಅಂತಃಕರಣ ಅಡಕಗೊಂಡಿದ್ದು ನೋಡುವವರಿಗೂ, ತೊಟ್ಟು ಕೊಳ್ಳುವವರಿಗೂ ಆಪ್ಯಾಯ ಮಾನವೆನಿಸುತ್ತದೆ.

ವಿಶೇಷವೆಂದರೆ ಯಾವ ಜನಾಂಗದವರೂ ಈ ಕಲೆಯನ್ನು ಅತ್ಯಂತ ಪ್ರೀತಿಯಿಂದ ತಮ್ಮದಾಗಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಕಲೆ ಕಸೂತಿಯ ನಯಗಾರಿಕೆ ಅಂದ – ಚಂದ ಮಹಿಳೆಯರ ಸಾಮರ್ಥ್ಯ ಸಾಧನೆಯನ್ನು ಎತ್ತಿ ತೋರಿಸುತ್ತದೆ.

ಪ್ರದರ್ಶನ ಸಂದರ್ಭ

ನಯ ನಾಜೂಕಿನ ಜನಪ್ರಿಯ ಕಲೆಯೆನಿಸಿದ ಕಸೂತಿಯು ಗ್ರಾಮೀಣ ಮಹಿಳೆಯ ಹೆಮ್ಮೆಯ ಕಲೆಯೆನಿಸಿದುದರಿಂದ ಹಲವಾರು ಪ್ರಸಂಗಗಳಲ್ಲಿ ಅವು ಪ್ರದರ್ಶನಗೊಳ್ಳುತ್ತವೆ. ಕರ್ನಾಟಕ ಕಸೂತಿಗೆ ಭಾರತೀಯ ಕಸೂತಿಯ ಕ್ಷೇತ್ರದಲ್ಲಿ ಗಣ್ಯಸ್ಥಾನವಿದೆ. ಅಪರೂಪದ ಚಿತ್ರ ವಿನ್ಯಾಸಗಳು ಕಸೂತಿ ಮಾಧ್ಯಮದಲ್ಲಿ ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡಿವೆ. ಮದುವೆ, ಹಬ್ಬ ಹರಿದಿನಗಳು ಜಾತ್ರೆಯಂಥ ಧಾರ್ಮಿಕ ಹಾಗೂ ವಿಶೇಷ ಸಂದರ್ಭಗಳಲ್ಲಿ ಕಸೂತಿ ಹಾಕಿದ ಬಟ್ಟೆಗಳನ್ನು ಉಟ್ಟುಕೊಳ್ಳುವುದು ಹಾಗೂ ಅವುಗಳ ಕುರಿತು ಮೆಚ್ಚುಗೆ ಪಡೆಯುವುದು ಶತ – ಶತಮಾನಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಉತ್ತರ ಕರ್ನಾಟಕದ ಬಡ ಮಹಿಳೆಯು ಸಹಿತ ತನ್ನ ಸೀರೆ ಹಾಗೂ ಕುಪ್ಪುಸಗಳಿಗೆ, ಮಕ್ಕಳ ಕುಂಚಿಗೆಗೆ ಹೆಣ್ಣು ಮಕ್ಕಳ ಲಂಗದ ಅಂಚಿಗೆ, ಬಾಗಿಲಪರದೆ ದೇವರ ಎಡೆಯ ವಸ್ತ್ರ ಮೊದಲಾದವುಗಳಲ್ಲಿ ಅಂದ ಚಂದದ ಕಸೂತಿ ಹೆಣೆದಿರುತ್ತಾಳೆ. ಪ್ರತಿಯೊಂದು ದೇಶದ ಮಹಿಳೆಯರು ವಿಶೇಷ ಪ್ರಸಂಗಗಳಲ್ಲಿ ತೊಟ್ಟುಕೊಳ್ಳುವ ಉಡುಪುಗಳಲ್ಲಿ ತಮ್ಮ ನಯವಾದ ಕಸೂತಿ ಕೌಶಲವನ್ನು ಪ್ರದರ್ಶಿಸಿರುತ್ತಾರೆ. ಗ್ರಾಮೀಣ ಮಹಿಳೆಯು ದಿನನಿತ್ಯ ಧರಿಸುವ ಸೀರೆಯಾದರೆ ಸೆರಗಿನ ಅಂಚಿಗೆ ಒಂದಿಂಚು ಅಗಲದ ಗುಬ್ಬಿ ಸಾಲನ್ನು ಹಳದಿ ಬಿಳಿ ಬಣ್ಣದಲ್ಲಿ ತೆಗೆಯುತ್ತಾಳೆ. ಹಬ್ಬ ಹರಿದಿನಗಳಲ್ಲಿ, ವಿಶೇಷ ಸಮಾರಂಭಗಳಲ್ಲಿ, ಮಂಗಳ ಕಾರ್ಯಗಳಲ್ಲಿ ತೊಡುವ ಸೀರೆ ಕುಪ್ಪಸಗಳನ್ನು ವಿವಿಧ ಬಗೆಯಕಸೂತಿ ನಕ್ಷೆಗಳಿಂದ ತುಂಬಿಸಿರುತ್ತಾಳೆ. ಅಂಚಿನಲ್ಲಿ ಬಳ್ಳಿಗಳ ಸೂಕ್ಷ್ಮತೆ ಆಕರ್ಷಕವಾಗಿರುತ್ತದೆ.

ಮಹಿಳೆಯರು ದೇವರಿಗೆ ಎಡೆ ಒಯ್ಯುವಾಗ ಕಸೂತಿ ಹಾಕಿದ ವಸ್ತ್ರವನ್ನು ಅದಕ್ಕೆ ಮುಚ್ಚಿರುತ್ತಾರೆ. ತಮ್ಮ ಗಂಡಂದಿರಿಗೆ ಹೊಲಕ್ಕೆ ಬುತ್ತಿಕೊಡಲು ಹೋಗುವಾಗ ಚಂದದ ಕಸೂತಿಯ ಬಟ್ಟೆಯನ್ನು ಬುಟ್ಟಿಗೆ ಹೊದಿಸಿರುತ್ತಾರೆ.

ಬಾಗಿಲು ಪರದೆ, ಕೈಚೀಲ, ದಿಂಬಿನ ಚೀಲ, ಕುಲಾವಿ, ಮೇಜು ಹಾಸುಗಳು ಹೀಗೆ ಅನೇಕ ಗೃಹಾಲಂಕಾರ ವಸ್ತ್ರಗಳಲ್ಲಿ ಅವರು ಕಸೂತಿ ಹಾಕಿರುತ್ತಾರೆ.

ಕಾರಹುಣ್ಣಿಮೆ ಸಂದರ್ಭಗಳಲ್ಲಿ ಅಲ್ಲದೆ ಬಸವಜಯಂತಿ ಸಂದರ್ಭದಲ್ಲಿ ಎತ್ತುಗಳ ಮೇಲೆ ಹಾಕುವ ‘ಜೂಲು’ ಕಸೂತಿಯಿಂದ ಕೂಡಿರುತ್ತದೆ. ಕಂಬಳಿ ಹೊದೆಯುವವರು (ಶಾಲು) ಅದರ ಅಂಚಿನಲ್ಲಿ ತೆಂಗಿನ ಹೂವಿನ ಪಟ್ಟಿ, ಜೋಡು ಮಂತ್ಯೆ ಪಟ್ಟಿ, ಗೋಡಂಬಿ ಅಥವಾ ಗುಂಡಾಳು ಪಟ್ಟಿಯ ಅಂಚನ್ನು ತೆಗೆಸಿರುತ್ತಾರೆ.

ಉತ್ತರ ಪ್ರದೇಶದ ಚಿಕನ್‌ ಕಾರಿ ಕಸೂತಿಯು ಅಂಗಿ, ಟೋಪಿಗಳ ಮೇಲೆ ಆಕರ್ಷಕವಾಗಿ ಕಾಣುತ್ತದೆ.

ಇಟಲಿಯವರು ಹಾಲೆಂಡಿನವರು ತಮ್ಮ ಕಿರೀಟಧಾರಣೆ ಮಹೋತ್ಸವಗಳಿಗಾಗಿ ಉತ್ಕೃಷ್ಟ ಕಸೂತಿ ವಸ್ತ್ರಗಳನ್ನು ತಯಾರಿಸುತ್ತಿದ್ದರು.

ಪಿಠೋಪಕರಣಗಳ ಹಾಸಿಗೆ ಬಟ್ಟೆಗಳ ಮೇಲೆ ಬಣ್ಣಬಣ್ಣದ ‘ಗಬ್ಬಾ’ (ಕಾಶ್ಮಿರದ ಕಸೂತಿ ) ಮಾದರಿಯ ಕಸೂತಿಯನ್ನು ಕಾಣಬಹುದು.

‘ಕಾಶ್ಮೀರ ಶಾಲು’ ಪ್ರಸಿದ್ಧ ಶಾಲುಗಳ ಮೇಲೆ ಹೂಬಳ್ಳಿ ಪಕ್ಷಿಗಳನ್ನು ಅಚ್ಚುಕಟ್ಟಾಗಿ ನಯವಾಗಿ ಬಿಡಿಸಿರುತ್ತಾರೆ. ಇವು ಸೂಜನಕಾರಿ (ಕಾಶ್ಮೀರ) ಕಸೂತಿ ಮಾದರಿಯವು. ಪಂಜಾಬಿನ ಜಾಟರು ಹೂ ಕಸೂತಿಯನ್ನು ಹತ್ತಿಯ ಬಟ್ಟೆ ಹೊದಿಕೆಗಳ ಮೇಲೆ ತೆಗೆಯುತ್ತಾರೆ.

ಒಂದು ಆಕೃತಿಯಲ್ಲಿ ಕತ್ತರಿಸಿದ ಬಟ್ಟೆಯಲ್ಲಿ ಹೂವಿನ ಕಸೂತಿ ಹಾಕಿ, ಬಳ್ಳಿಯಲ್ಲಿ ಅವನ್ನು ಬಂಧಿಸಿ ಮನೆ ಬಾಗಿಲಿಗೆ ತೋರಣದಂತೆ ಹಾಕುತ್ತಾರೆ.

ದಾರದಲ್ಲಿಯೇ ಹೆಣೆದ ಬಾಗಿಲ ಪರದೆ, ಟೇಬಲ್‌ ಕ್ಲಾಥ್‌, ಕುರ್ಚಿ ಅಲಂಕಾರಕ್ಕಾಗಿ ಹೆಣಿಕೆ ಬಟ್ಟೆಯನ್ನು ಬಳಸುತ್ತಾರೆ.

ಈಗೀಗ ಗಂಡಸರ ಶರ್ಟಿನ ಮುಂಗೈಪಟ್ಟಿ ಅಲ್ಲದೆ ಕಾಲರ್ ಭಾಗ ಹಾಗೂ ಎದೆಯ ಮೇಲೆ ಹಾಗೂ ಕಿಸೆಯ ಭಾಗದಲ್ಲಿ ಕಸೂತಿ ಹಾಕುತ್ತಾರೆ.

“ಫರಂಗ್‌” ಇಳಿಮುಖವಾದ ವಿನ್ಯಾಸಗಳನ್ನು ರಾಜಮನೆತನದವರು ಉಡುತ್ತಾರೆ. ‘ಸಿಪಾಕ್‌’ ಎಂಬ ಚೌಕ ವಿನ್ಯಾಸವು ಶಾಂತಿ ಹಾಗೂ ಪವಿತ್ರತೆಯ ಸಂಕೇತ ಎನ್ನಲಾಗಿದೆ. ‘ಸಿಡೋ ಮುತ್ತಿ’ ಎನ್ನುವುದು ಪ್ರತ್ಯೇಕವಾಗಿ ಮದುಮಕ್ಕಳು ಧರಿಸುವ ವಿನ್ಯಾಸ ಎನ್ನಲಾಗಿದೆ.

ಇಂದಿನ ಫ್ಯಾಶನ್‌ ಯುಗದಲ್ಲಿ ನಗರದ ಗಣ್ಯ ಮಹಿಳೆಯರು ತಮ್ಮ ವಿವಿಧ ವಿನ್ಯಾಸಗಳ ಉಡುಪುಗಳಿಗೆ ಅಂದವಾದ ಕಸೂತಿಯನ್ನು ಹಾಕಿಸಿಕೊಳ್ಳುತ್ತಾರೆ. ಅಲ್ಲದೇ ಕಸೂತಿಯ ಸೀರೆಯನ್ನು ಉಡುವುದೂ ಪ್ರತಿಷ್ಠೆಯ ಸಂಕೇತವಾಗಿದೆ.

ನಂಬಿಕೆ ಸಂಪ್ರದಾಯ

ಜನಪದ ನಂಬಿಕೆಗಳು ಅವರ ಮನಸ್ಸಿನ ನಿಯಂತ್ರಣಾಂಶಗಳಾಗಿ ಪರಿಣಮಿಸಿವೆ. ಜನಪದ ಸಂಪ್ರದಾಯಗಳ ಬಗ್ಗೆ ಅವರಲ್ಲಿ ಭಯಭಕ್ತಿ ಅಚಲ ಶ್ರದ್ಧೆಯನ್ನು ಮೂಡಿಸುತ್ತವೆ. ಮನಸ್ಸು ಪ್ರಕೃತಿಯಿಂದ ಅನೇಕ ಪ್ರೇರಣೆಗಳನ್ನು ಪಡೆದುಕೊಂಡಿದ್ದು ಅದರಲ್ಲಿ ಕಸೂತಿಕಲೆಯೂ ಒಂದಾಗಿದೆ. ಈ ಕಲೆಗಳು ಜನಾಂಗದಿಂದ ಜನಾಂಗಕ್ಕೆ ಕೊಡುಗೆಗಳ ರೂಪದಲ್ಲಿ ಮುಂದುವರಿಯುತ್ತ ಬರುತ್ತವೆ. ಕಸೂತಿಕಲೆ ಅಲಂಕಾರ, ಧರ್ಮ, ದೇವತಾರಾಧನೆ, ಸಂಪ್ರದಾಯ ನಂಬಿಕೆಗಳ ಅಡಿಯಲ್ಲಿ ಬೆಳೆದು ಬಂದುದು ಗಮನಾರ್ಹ.

 • ಕಮಲ ಹೂವಿಗೆ ಕಸೂತಿಯಲ್ಲಿ ಹೆಚ್ಚಿನ ಪ್ರಾಶಸ್ತ್ಯ, ಲಕ್ಷ್ಮೀದೇವಿಯ ಪ್ರತೀಕ ಎಂಬ ಭಾವನೆಯಿದೆ.
 • ಮಾರಿಹಬ್ಬಗಳಲ್ಲಿ ಹರಕೆಯ ಕುರಿಗಳನ್ನು ಬಲಿಕೊಡುವಾಗ “ಕರಿಜೂಲು” ಹೊದಿಸಿ ಅಲಂಕರಿಸುತ್ತಾರೆ. ಹಾಗೆ ಅಲಂಕರಿಸುವುದರಿಂದ ಗ್ರಾಮದೇವತೆ ತೃಪ್ತಳಾಗುತ್ತಾಳೆಂಬ ನಂಬಿಕೆ ಇದೆ.
 • ಕನ್ನಡ ನಾಡಿನಲ್ಲಿ ಅಚ್ಚಕರಿಯ ಅಥವಾ ಬಿಳಿಯ ಬಣ್ಣದ ಸೀರೆ ಕುಪ್ಪುಸಗಳ ಮೇಲೆ ಕಸೂತಿಯಿರುವುದು ಶುಭ ಸೂಚಕವೆನಿಸಿದೆ.
 • ಲಂಬಾಣಿ ಸ್ತ್ರೀಯರಲ್ಲಿ ಕಸೂತಿ ಇಲ್ಲದ ಬಟ್ಟೆ ತೊಡಬಾರದು, ತೊಟ್ಟರೆ ಅಪಶಕುನ ಎನ್ನುವ ನಂಬಿಕೆ ಇದೆ.
 • ಗ್ರಾಮೀಣ ಹೆಣ್ಣು ಮಕ್ಕಳಲ್ಲಿ ಕಸೂತಿ ಬಟ್ಟೆಗಳನ್ನು ಮಂಗಳಸೂಚಕವೆಂದು ಭಾವಿಸಿ ಅವುಗಳನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ.
 • ಹಿಂದುಗಳಲ್ಲಿ ಮದುವೆಯಾಗಿ ಗಂಡನಮನೆಗೆ ಹೋಗುವ ಹೆಣ್ಣುಮಗಳಿಗೆ ಕರಿಚಂದ್ರಕಾಳಿ ಸೀರೆಯಮೇಲೆ ಕಸೂತಿ ಹಾಕಿಸಿ ಶುಭ ಸೂಚಕವೆಂದು ಕೊಡುವ ಪದ್ಧತಿ ಇದೆ.
 • ಲಂಬಾಣಿಗಳ ಮದುವೆಯಲ್ಲಿ ಗಂಡು ಹೆಗಲಿಗೆ ಹಾಕಿಕೊಳ್ಳುವ ಬಟ್ಟೆ “ಕೋತಲಿ” ಯನ್ನು ರಂಗುರಂಗಿನ ದಾರಗಳಿಂದ ಕಸೂತಿ ಹಾಕಿ ಅಂದವಾಗಿಸುತ್ತಾರೆ. ಅದರಲ್ಲಿ ಎಲೆ – ಅಡಿಕೆ ಹಾಕಿಕೊಂಡು ಹಿರಿಯರಿಗೆಲ್ಲಾ ಕೊಡುವುದು ಅವರ ಸಂಪ್ರದಾಯ.
 • ಗುಜರಾಥದಲ್ಲಿ ಮದುಮಗಳ ಬಟ್ಟೆಯ ಮೇಲೆ ಕಸೂತಿ ಇರಲೇಬೇಕೆಂಬುದು ನಿರ್ಬಂಧವಾಗಿತೇ ಪರಿಣಮಿಸಿದೆ.
 • ಕನ್ಯೆಯು ಪ್ರಾಪ್ತವಯಸ್ಕಳಾಗುವ ಮೊದಲೇ ಸರಿಯಾಗಿ ಕಸೂತಿ ಕಲಿತುಕೊಳ್ಳುವುದು ನಮ್ಮ ಗ್ರಾಮೀಣರಲ್ಲಿ ಸಂಪ್ರದಾಯವಾಗಿಬಿಟ್ಟಿದೆ.
 • ಕಸೂತಿ ಹಾಕಿದ ಚಿತ್ರಗಳಿಗೆ ಕನ್ನಡಿ ಕಟ್ಟು ಹಾಕಿಸಿ ಮದುವೆಯ ಸಂದರ್ಭದಲ್ಲಿ ಹೆಣ್ಣು ಮಗಳ ಮನೆಯವರು ಗಂಡಿನ ಮನೆಯವರಿಗೆ ಉಡುಗೊರೆಯ ರೂಪದಲ್ಲಿ ಕೊಡುವ ಸಂಪ್ರದಾಯವಿದೆ.
 • ಹಣೆಯ ಮೇಲೆ ಅಡ್ಡಡ್ಡವಾಗಿ ವಿಭೂತಿ ಭಸ್ಮವನ್ನು ಲೀಪಿಸಿಕೊಳ್ಳುವ ಶೈವರಿಗೆ ಕಸೂತಿಯು ಬಹಳ ಪ್ರಿಯವಾಗಿರುವ ಕಾರಣವೆಂದರೆ ಬಳಸುವ ಹೊಲಿಗೆಗಳು ಅಡ್ಡಡ್ಡವಾಗಿರುತ್ತವೆ (ನೇಗಿ ) ಎಂಬ ನಂಬಿಕೆ ಇದೆ.

ಪ್ರತಿಯೊಂದು ಕಸೂತಿ ವಿನ್ಯಾಸವೂ ಉಡುವವರ ಮನಃ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂಬ ಭಾವನೆ ಇದೆ.

ಸಂಭಾವನೆ ಶ್ರಮ

ಕಸೂತಿಯು ಇತರ ಹೊಲಿಗೆಗಳಂತಲ್ಲ. ಅದು ಸೂಕ್ಷ್ಮವೂ, ಕಣ್ಣಿಗೆ ಹೆಚ್ಚು ಶ್ರಮವನ್ನು ಉಂಟುಮಾಡುವಂಥಾದ್ದು, ಹೆಚ್ಚು ಸಮಯದ ಅವಶ್ಯಕತೆ ಇರುವಂತಹುದು. ಸಾಂಪ್ರದಾಯಿಕ ಹಾಗೂ ಪರಂಪರಾಗತವಾಗಿ ಅಜ್ಜಿಯಿಂದ ಮಗಳಿಗೆ, ಮೊಮ್ಮಗಳಿಗೆ ಮುಂದುವರಿಸಿಕೊಂಡು ಹೋಗುವ ವಿಶಿಷ್ಟ ಕಲೆಯಾಗಿದೆ.

ಕರ್ನಾಟಕದ ಕೆಲವು ಗ್ರಾಮೀಣ ಮಹಿಳೆಯರು ಕಸೂತಿ ಹಾಕುವುದನ್ನು ಹವ್ಯಾಸವಾಗಿಯೂ, ಉಪಕಸುಬನ್ನಾಗಿಯೂ ಇಟ್ಟುಕೊಂಡಿದ್ದಾರೆ. ಕಣ್ಣಿಗೆ ಆಯಾಸವಾಗಬಾರದೆಂದು ಈಗೀತ ಮೇಟಿ ಬಟ್ಟೆಯ ತುಂಡನ್ನು ಕಸೂತಿ ಹಾಕಲಿರುವ ಬಟ್ಟೆಗೆ ಜೋಡಿಸಿಕೊಂಡು ಕಸೂತಿ ಪೂರ್ಣವಾದ ಮೇಲೆ ನೆಟ್‌ ಎಳೆಗಳನ್ನು ಒಂದೊಂದಾಗಿ ಎಳೆದುಕೊಂಡುಬಿಡುವರು. ಮಾರ್ಚ್ ದಿಂದ ಜೂನ್‌ವರೆಗೆ ಹೊಲದ ಕೆಲಸಗಳಿಗೆ ಬಿಡುವು. ಈ ಕಾಲಾವಧಿಯಲ್ಲಿ ಕಸೂತಿ ಕೆಲಸ ಮಾಡುತ್ತಾರೆ. ಇವರಿಗೆ ದೊರೆಯುವ ಸಂಭಾವನೆ ಅತ್ಯಲ್ಪ. ಕೆಲವರು ಬೆಳೆದ ಭತ್ತ, ರಾಗಿ, ಜೋಳ, ಶೇಂಗಾ, ಹೆಸರು, ಕಡಲೆಗಳಂತಹ ಧಾನ್ಯಗಳನ್ನು, ಕೆಲವರು ಹಣವನ್ನು, ಅಲ್ಲದೆ ಊಟ ತಿಂಡಿ ಹಬ್ಬಗಳಲ್ಲಿ ಸಿಹಿ ಪದಾರ್ಥಗಳನ್ನು ಕೊಡುತ್ತಿದ್ದರು. ಮೊದಲು ಬರೀ ಸೀರೆಯ ಸೆರಗಿಗೆ ಕಸ ಊತಿ ಬಿಡಿಸಲು ಎರಡು ರೂಪಾಯಿಯಿಂದ ಐದು ರೂಪಾಯಿ ತೆಗೆದು ಕೊಳ್ಳುತ್ತಿದ್ದರಂತೆ. ಈಗ ಸೆರಗಿಗೆ ಮಾತ್ರವಾದರೆ ಕಡಿಮೆಯೂ, ಸೀರೆಯ ಅಂಚು ಮತ್ತು ಸೆರಗಿನ ಭಾಗ ಒಳಮೈ ಕಸೂತಿಯ ವಿನ್ಯಾಸ ಹಾಗೂ ಬಟ್ಟೆಯ ಗುಣಮಟ್ಟ ಹೆಚ್ಚಾದಂತೆ ತಗಲುವ ಅವಧಿ ಹಾಗೂ ಬೆಲೆಯೂ ಹೆಚ್ಚು. ನುರಿತವರು ೩೦೦ ರೂಪಾಯಿಯಿಂದ ೪೦೦ ರೂಪಾಯಿಗಳವರೆಗೆ ಹಾಗೂ ೨, ೪, ೬ ತಿಂಗಳು, ಒಂದು ವರ್ಷದವರೆಗೂ ಅವಧಿ ತೆಗೆದುಕೊಳ್ಳಬಹುದು. ಮಧ್ಯಾಹ್ನದ ಬಿಡುವಿನ ವೇಳೆಯಲ್ಲಿ ಮಾತ್ರ ಹಾಕುವ ಹವ್ಯಾಸವಿಟ್ಟುಕೊಂಡವರಿಗೆ ಹೆಚ್ಚು ಸಮಯ ಬೇಕಾಗುತ್ತದೆ.

ಹಿಂದೆ ಧನಿಕ ಮನೆತನದ ಸ್ತ್ರೀಯರು ಕಸೂತಿ ಹಾಕುವುದರಲ್ಲಿ ಕುಶಲತೆಯನ್ನು ಪಡೆಯುವುದು ಪ್ರತಿದಿನವೂ ಗಂಟೆಗಟ್ಟಲೇ ಕಸೂತಿ ಕೆಲಸದಲ್ಲಿ ನಿರತರಾಗಿರುವುದು ಒಂದು ಪದ್ಧತಿಯೇ ಆಗಿತ್ತು. ಕಸೂತಿ ನಕ್ಷೆಗಳು ಸುಂದರ, ಮನಮೋಹಕ ಅಲ್ಲದೆ ನಾಜೂಕಾಗಿದ್ದು ಮನಸ್ಸಿಗೆ ಮುದನೀಡುತ್ತವೆ. ಆದುದರಿಂದ ಕೆಲವರು ಮೊದ ಮೊದಲು ಮಧ್ಯಾಹ್ನದ ವೇಳೆಯಲ್ಲಿ ಹವ್ಯಾಸಕ್ಕಾಗಿ ಕಸೂತಿ ಹಾಕುವುದನ್ನು ಪ್ರಾರಂಭಿಸಿದರು. ಮುಂದೆ ಈ ಕಲೆಯಲ್ಲಿ ಪ್ರಬುದ್ಧತೆ ಪಡೆದವರು ನೆರೆಮನೆಯವರಿಗೆ ಹೇಳಿಕೊಡುವುದರೊಂದಿಗೆ, ವಿರಾಮ ಕಾಲದ ಸದುಪಯೋಗಕ್ಕಾಗಿ ಕಸೂತಿ ಒಳ್ಳೆಯ ಸಾಧನವಾಯಿತು. ಇತ್ತೀಚೆಗೆ ಸಂಘ ಸಂಸ್ಥೆಗಳು ಈ ಕಲೆಯ ತರಬೇತಿ ಕೊಡುತ್ತಿವೆ.

ಕರ್ನಾಟಕದ ಬೆಳಗಾವಿ, ಬಿಜಾಪೂರ, ಧಾರವಾಡ ಜಿಲ್ಲೆಗಳಲ್ಲಿ ಸ್ವಲ್ಪ ಮಟ್ಟಿಗೆ ನಿಜವಾದ ಉದ್ದೇಶಗಳಿಗೆ ಈ ಕಲೆ ಬಳಕೆಯಾಗುತ್ತಿದ್ದರೂ, ಉಳಿದ ಜಿಲ್ಲೆಗಳಲ್ಲಿ ಹೆಂಗಳೆಯರು ತಮ್ಮ ಬಿಡುವುನ ವೇಳೆಯ ಹವ್ಯಾಸ ಮಾತ್ರವಾಗಿ ಕಸೂತಿಯನ್ನು ಉಳಿಸಿಕೊಂಡಿದ್ದಾರೆ. ವಂಶಪರಂಪರೆಯಿಂದ ಈ ಕಲೆಯು ಉಪಕಸುಬಾಗಿ ಬಂದಿದ್ದರೂ ಅಂಥವರು ಈಗ ಬದುಕುವುದು ದುಸ್ಸಾಧ್ಯವಾಗಿದೆ. ಕಲಾತ್ಮಕವಾಗಿ ಪ್ರಸಿದ್ಧಿಗೊಂಡು ಗ್ರಾಮೀಣ ಕಸೂತಿ ಕಲೆ ವಾಣಿಜ್ಯೋದ್ಯಮದಲ್ಲಿ ಕಾಲಿರಿಸಲು ಈಗೀಗ ಆರಂಭಿಸಿದ್ದು ಕರ್ನಾಟಕದ ರಾಜ್ಯ ಅಭಿವೃದ್ಧಿ ನಿಗಮದವರು ನಶಿಸುತ್ತಿರುವ ಕಲೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ. ಮೀರಜ್‌, ಸಾಂಗ್ಲಿ, ಬಿಜಾಪೂರ, ಹುಬ್ಬಳ್ಳಿ, ಧಾರವಾಡ ಹತ್ತಿರ ಗ್ರಾಮೀಣ ಭಾಗಗಳಾದ ನರೇಂದ್ರ, ನರಗುಂದ, ನವಲಗುಂದ, ಅಮ್ಮಿನಭಾವಿ, ಮುಮ್ಮಿಗಟ್ಟಿ, ಗೋವನಕೊಪ್ಪ, ಎತ್ತಿನಗುಡ್ಡ, ನಿಗದಿ, ಮುಗದ್‌, ಕೆಲಗೇರಿ, ಹಾವೇರಿ, ಗದಗ, ಕಲಘಟಗಿ, ಮನಗುಂಡಿ, ಮನಸೂರ, ಮುಂಡರಗಿಗಳಲ್ಲಿ ಕಸೂತಿಕಲೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ.