ನಿಸರ್ಗದೊಡನೆ ಮನುಷ್ಯ ಬದುಕತೊಡಗಿದಾಗ ಉಂಟಾದ ಆಯಾಸ, ಭಯ, ಆನಂದ, ಉತ್ಸಾಹದ ಪ್ರತೀಕವಾಗಿ ನೂರಾರು ಚಟುವಟಿಕೆಗಳು ಕಾಣಿಸಿಕೊಂಡವು. ಒಟ್ಟು ಇಂತಹ ಚಟುವಟಿಕೆಗಳ ಮೊತ್ತವನ್ನು “ಕಲೆ” ಎಂಬ ಪದದ ವಿಸ್ತಾರದಲ್ಲಿ ನಾವು ಗಮನಿಸುತ್ತೇವೆ.ಕಸೂತಿ ಕಲೆಯನ್ನು ಕುರಿತು ಭಿನ್ನ ಭಿನ್ನ ದೃಷ್ಟಿಕೋನ, ಶಾಸ್ತ್ರಗಳ ಹಿನ್ನೆಲೆಯಲ್ಲಿ ಗಮನಿಸಿದಾಗ ಅರ್ಥಸ್ಪಷ್ಟತೆಯುಂಟಾಗುತ್ತದೆ.

ಜನಪದರ ಶೈಲಿಯ ಹಿನ್ನೆಲೆಯಲ್ಲಿ ಗಮನಿಸಿದಾಗ ಮಾನವ ಬದುಕಿನ ಪ್ರಾಚೀನತೆಯನ್ನು “ಆದಿ ಮಾನವ ಹಂತ” ದ್ದೆಂದು ಗಣಿಸಿ ಅವನ ಬದುಕಿನ ಚಿತ್ರವನ್ನು ಊಹಿಸಿ ಕಲ್ಪಿಸಿದಾಗ, ಭಯ ಆತಂಕಗಳಿಗೆ ಅವನು ತೋರುತ್ತಿದ್ದ ಪ್ರತಿಕ್ರಿಯೆ, ದೇವ – ದೈವದ ನಂಬಿಕೆ ಹೀಗೆ ಧರ್ಮದ ಚೌಕಟ್ಟನ್ನು ಹಾಕಿಕೊಂಡಾಗ ಅವರ ಧಾರ್ಮಿಕ ಆಚರಣೆಗಳು ಕಲೆಯ ರೂಪ ತಾಳಿದವು. ಹಾಗಾಗಿ ಕಲೆಯ ಉಗಮವನ್ನು ಧಾರ್ಮಿಕ ಆಚರಣೆಯ ಹಾಗೂ ದೈವ ಆರಾಧನೆಯ ಹಿನ್ನೆಲೆಯಲ್ಲಿ ಪರಿಗಣಿಸಬೇಕಾಗುತ್ತದೆ. ಬಹಿರಂಗದಲ್ಲಿ ಈ ಕಲೆಗೆ ಸೌಂದರ್ಯ ದೃಷ್ಟಿ ಮುಖ್ಯವಾಗುತ್ತದೆ. ಆದ್ದರಿಂದ ಧಾರ್ಮಿಕ ಅಂತರಂಗ, ಅಲಂಕಾರಿಕ ಬಹಿರಂಗವನ್ನು ಈ ಕಲೆ ಪಡೆದಿದೆ.

ಮಾನವ ಸಂಸ್ಕೃತಿ ಕಾಲಕ್ರಮೇಣ ರೂಪುಗೊಂಡ ಬಗೆಯನ್ನು ಮಾನವಶಾಸ್ತ್ರ ವಿವರಿಸುತ್ತದೆ. ಬಿಸಿಲು, ಗಾಳಿ, ಮಳೆ, ಚಳಿಗಳಿಂದ ಶರೀರದ ರಕ್ಷಣೆ ಪಡೆಯಲೆಂದು ಪ್ರಾರಂಭವಾದ ಉಡುಪು ಕಾಲಕ್ರಮೇಣ ಧಾರ್ಮಿಕ, ರಾಜಕೀಯ, ಸಾಮಾಜಿಕ ಅಂತಸ್ತಿನ ಗುರುತಾಯಿತು. ಪ್ರಾದೇಶಿಕವಾಗಿ, ಜಾನಾಂಗಿಕವಾಗಿ ವೈವಿಧ್ಯತೆ, ವೈಭವಗಳಿಂದ ಬೆಳೆದು ನಿಂತಿತು. ಉಡುಪು ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕಸೂತಿಯಂತಹ ಹೆಣಿಕೆಯನ್ನೊಳಗೊಂಡ ಅಂದವಾದ ಉಡುಪು ತೊಟ್ಟು ಒಯ್ಯಾರ ಪ್ರದರ್ಶನ ಮಾಡುವುದು, ಉಡುಪುಗಳ ಅವಶ್ಯಕತೆಯ ಕಾರಣಗಳಲ್ಲಿ ಒಂದು. ಇದು ‘ನಾರ್ಸಿಸಿಸಂ’ ಅಥವಾ ಸ್ವದೇಹಾರಾಧನೆಯ ಇನ್ನೊಂದು ರೂಪ ಎಂಬ ಅಭಿಪ್ರಾಯವಿದೆ.

ಕಲೆ ಮಾನವ ಮನಸ್ಸನ್ನು ಮುದಗೊಳಿಸಿ ವಿಶಿಷ್ಟವಾದ ಸಂಸ್ಕಾರವನ್ನು ಒದಗಿಸುತ್ತದೆ ಎಂಬ ಮಾತನ್ನು ವಿಶ್ಲೇಷಣೆಗೆ ಒಳಪಡಿಸಬಹುದು. ಮಾನವ ಮನಸ್ಸಿನಲ್ಲಿ ಕಲೆಯ ಉಗಮವನ್ನು ಕಂಡು ಹಿಡಿಯಲು ಸಾಧ್ಯ. ಮನಸ್ಸಿನ ಸೂಕ್ಷ್ಮ ಚಲನ – ವಲನಗಳ ಅಭಿವ್ಯಕ್ತಿಯೇ ಕಲೆ. ಕಸೂತಿ ಕಲೆ ಒಂದು ಮನಸ್ಸಿನಲ್ಲಿ ಉಗಮಿಸಿ ಇನ್ನೊಂದು ಮನಸ್ಸನ್ನು ತುಂಬುತ್ತದೆ. ಮನಃಶಾಸ್ತ್ರದ ಹಿನ್ನೆಲೆಯಲ್ಲಿ ನೋಡಿದಾಗ ಕಸೂತಿಯಿಂದ ಎರಡು ಬಗೆಯ ಆನಂದ ದೊರೆಯುತ್ತದೆ. ಹೆಣೆಯುವವರಲ್ಲಿ ತೋರುವ ಸಮಾಧಾನ ಮತ್ತು ನೋಡುವವರಲ್ಲಿ ಕಾಣುವ ಸಂತೃಪ್ತಿ ಮುಖ್ಯವಾಗುತ್ತದೆ.

ಸಮಾಜಶಾಸ್ತ್ರಜ್ಞರು ಕಲೆಯ ಉಗಮವನ್ನು ಮಾನವನ ಸಾಮಾಜಿಕ ಜೀವನದ ವಿಕಾಸದಲ್ಲಿ ಕಾಣುತ್ತಾರೆ. ಕಸೂತಿ ಹಾಕಿದ ಉಡುಪುಗಳನ್ನು ಧರಿಸುವುದು ನಾಗರೀಕರಲ್ಲಿ ಇಂದು ಅತಿ ವಿಶೇಷವೆನಿಸಿದೆ. ಉಪಯುಕ್ತ ವಸ್ತ್ರಗಳಲ್ಲೆಲ್ಲಾ ಕಸೂತಿಯ ಸಾಂಪ್ರದಾಯಿಕ ವಿನ್ಯಾಸಗಳನ್ನು ಹಾಗೂ ಯಂತ್ರ ಕಸೂತಿಯಲ್ಲಿ ವಿವಿಧ ನಮೂನೆಗಳನ್ನು ಕಾಣಬಹುದು. ವಾಣಿಜ್ಯ ದೃಷ್ಟಿಯಿಂದ ಇಂದು ಈ ಕಲೆಗೆ ಹೆಚ್ಚಿನ ಮಹತ್ವ ಬರುತ್ತಿದ್ದು, ಪ್ರತಿಷ್ಠೆಯ ಸಂಕೇತವಾಗಿ ಸಾಂಸ್ಕೃತಿಕ ಹಿರಿಮೆಯನ್ನು ಪಡೆದುಕೊಳ್ಳುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.