ಮಾನವನ ಎಲ್ಲಾ ಕಲಾಪ್ರಕಾರಗಳಿಗೆ ಜಾನಪದ ಪ್ರವೃತ್ತಿಗಳೇ ಮೂಲವೆನಿಸಿದ್ದು, ಅಲಂಕರಣಪ್ರಿಯನಾದ ಮಾನವನು ಪ್ರಕೃತಿಯ ಚೆಲುವನ್ನು ಕಂಡು ಹಿಗ್ಗಿದ್ದಾನೆ. ತಾನೂ ಅಲಂಕರಿಸಿಕೊಂಡು ಸುತ್ತ – ಮುತ್ತಲನ್ನೂ ಸುಂದರವಾಗಿ ಕಾಣುವಂತೆ ಮಾಡುವುದು ಆತನ ಸಹಜ ಸ್ವಭಾವವೆನಿಸಿದೆ. ಹಚ್ಚೆ – ಹಾಕಿಸಿಕೊಳ್ಳುವುದು, ಅಂಗಳವನ್ನು ರಂಗೋಲಿಯಿಂದ ಶೃಂಗರಿಸುವುದು, ತನ್ನ ಉಡುಪನ್ನು ಹೆಚ್ಚು ಹೆಚ್ಚು ಆಕರ್ಷಕಗೊಳ್ಳುವಂತೆ ಕಸೂತಿ ಕಲೆಯಿಂದ ಅಂದಗೊಳಿಸುವುದು, ಇವೆಲ್ಲಾ ಅಲಂಕಾರಕ್ಕೂ ಕಲೆಗೂ ಮನುಷ್ಯನಿಗೂ ತೀರಾ ನಂಟು ಎಂಬುದನ್ನು ಸಿದ್ಧಪಡಿಸುತ್ತವೆ. ವಿವಿಧ ವರ್ಣಗಳಿಂದ ಅಲಂಕರಣಗೊಂಡ ದೇಹ ಹಾಗೂ ಪರಿಸರ ಅವನನ್ನು ಆನಂದ ತುಂದಿಲನಾಗುವಂತೆ ಮಾಡಿದೆ. ಭಾರತದ ಕೆಲ ಬುಡಕಟ್ಟುಗಳಲ್ಲಿ ಈಗಲೂ ಹಚ್ಚೆ ಹಾಕಿಸಿಕೊಳ್ಳುವುದು ಒಂದು ಪದ್ಧತಿಯಾಗಿ ಉಳಿದು ಬಿಟ್ಟಿದೆ. ರಂಗೋಲಿಯ ಉಗಮ ಪ್ರಾಚೀನವಾದದ್ದು. ಹೆಂಗಳೆಯರು ತಮ್ಮ ಮನದ ಕಲ್ಪನೆಯಂತೆ ರಂಗೋಲಿಯಲ್ಲಿ ಮೂಡಿಸುವ ನಾನಾ ಚಿತ್ತಾರಗಳು ಅವುಗಳಿಗೆ ಬಣ್ಣ ತುಂಬುವ, ಜೀವಂತಿಕೆಯನ್ನು ಒದಗಿಸುವ ಕಲೆಯ ಉಲ್ಲೇಖ ಪುರಾಣ ಕಾವ್ಯ ಇತಿಹಾಸಗಳಲ್ಲಿ ದೊರಕುತ್ತದೆ. ಗೆರೆ, ಚುಕ್ಕೆ ಹಾಕಿ ಬಿಡಿಸುವ ರಂಗೋಲಿ ಕಲೆ ಅಲಂಕಾರ ಪ್ರದರ್ಶನಕ್ಕಾಗಿ ಎಂದುಕೊಂಡರೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆ ಸಂಪ್ರದಾಯಗಳಲ್ಲಿ ಸಾಂಕೇತಿಕವಾಗಿ ರಂಗೋಲಿಯನ್ನು ಬಿಡಿಸುವುದುಂಟು. ವಿಭಿನ್ನ ಭೌಗೋಳಿಕ ಪರಿಸರದಲ್ಲಿ ವಾಸಿಸುತ್ತಿರುವ ಜನ ಆಯಾ ಪರಿಸರದ ಅಗತ್ಯಕ್ಕೆ ಅನುಗುಣವಾಗಿ ಉಡುಗೆ ಧರಿಸುವಾಗಲೂ ಆ ಉಡುಗೆ ಅಲಂಕಾರಗೊಳ್ಳಲು ಕಸೂತಿಯಂತಹ ಕಲೆಯನ್ನು ಕಲಿತುಕೊಂಡರು.

ಹಚ್ಚೆಯು ಚರ್ಮದ ಮೇಲಿನ ಶಾಶ್ವತ ಕಲೆಯೆನಿಸಿದೆ. ರಂಗೋಲಿ ಧಾರ್ಮಿಕ ಮೂಲವಾಗಿ ಅಲಂಕಾರ ಕಲೆಯೆನಿಸಿದೆ. ಕಸೂತಿಯು ಸೌಂದರ್ಯ ಮೂಲವೂ ಧಾರ್ಮಿಕ ಹಿನ್ನೆಲೆಯಲ್ಲಿ ಪಡೆದ ಕಲೆಯೂ ಆಗಿದೆ. ನೊಣ, ಜಿಗಣೆ, ಚೇಳು, ಜರಿಯಂತಹ ಚಿತ್ರಗಳು ಕಸೂತಿಯಲ್ಲಿ ಸಾಮಾನ್ಯವಾಗಿ ಕಾಣಿಸುವುದಿಲ್ಲಾ. ರಂಗೋಲಿಯಲ್ಲಿನ ಹಾಗೂ ಹಚ್ಚೆಯಲ್ಲಿಯ ಹಾವು ಕಸೂತಿಯಲ್ಲಿ ಕಂಡಿಲ್ಲ. ತಾವು ತೊಡುವ, ಬಳಸುವ ಬಟ್ಟೆಗಳಲ್ಲಿ, ಮಕ್ಕಳು ಮಡಿಲಲ್ಲಿ ಮತ್ತು ಅಂಗಳದಲ್ಲಿ ಆಡುತ್ತಿರುವಾಗ ಭಯ ಹುಟ್ಟಿಸುವಂತಹ ಚಿತ್ರಗಳು ಕಾಣಬಾರದೆಂಬ ಭಾವನೆಯಿಂದಲೇ ಹಾವು, ಹರಿದಾಡಿ ಹಾನಿಯುಂಟು ಮಾಡುವ ಹುಳಗಳು ಕಸೂತಿ ಕಲೆಯಿಂದ ದೂರ ಉಳಿದಿರಬೇಕು. ಹಚ್ಚೆ ಮತ್ತು ಕಸೂತಿಯಲ್ಲಿ ನವೀನ ನಮೂನೆಗಳಿವೆ. ಹೆಣಿಕೆಗೆ ತಕ್ಕಂತೆ ಕಸೂತಿಯಲ್ಲಿ ಚಿತ್ರಗಳು ಕ್ರಮಬದ್ಧವಾಗಿರುತ್ತವೆ. ರಂಗೋಲಿ ಹಾಗೂ ಕಸೂತಿಯಲ್ಲಿ ತುಳಸಿಕಟ್ಟೆ ಹೆಚ್ಚಾಗಿ ಕಾಣಿಸಿಕೊಂಡಿದೆ. ರಂಗೋಲಿ ಮತ್ತು ಹಚ್ಚೆಗಳು ಹಿಂದೂಗಳಲ್ಲಿ ಕಾಣಿಸಿಕೊಂಡರೆ ಕಸೂತಿ ಎಲ್ಲ ಧರ್ಮದವರಲ್ಲಿ ಕಾಣಿಸಿಕೊಂಡಿದೆ.

ಹಚ್ಚೆ, ರಂಗೋಲಿ, ಕಸೂತಿ, ಚಿತ್ರ ವಿನ್ಯಾಸಗಳಲ್ಲಿ ಅಲ್ಲಲ್ಲಿ ಹೋಲಿಕೆಗಳಿವೆ. ಈಗ ರಂಗವಲ್ಲಿಯಲ್ಲಿ ಚುಕ್ಕೆ ಇಟ್ಟು ಗೆರೆಯೆಳೆದರೆ, ಕಸೂತಿಯಲ್ಲಿ ಎಳೆಗಳನ್ನು ಎಣಿಸಿ ಹಾಕುತ್ತಾರೆ. ಹಚ್ಚೆ ರಂಗೋಲಿಗಳಲ್ಲಿ ರೇಖೆಯು ಸ್ವತಂತ್ರವಾಗಿ, ನೇರ, ಅಂಕುಡೊಂಕಾಗಿ ಚಲಿಸಲು ಅವಕಾಶವಿದೆ. ಕಸೂತಿಯಲ್ಲಿ ಸಾಮಾನ್ಯ ಎಳೆಗಳನ್ನು ಎಣಿಸಿ ಹಾಕುವುದರಿಂದ ನೇರ, ಉದ್ದ, ಅಡ್ಡ, ಕತ್ತರಿಯಾಗಿ ಏಣಿಯಾಕಾರದಲ್ಲಿ ವಿನ್ಯಾಸಗಳು ಚಲಿಸುತ್ತವೆ.

ಹಚ್ಚೆ – ರಂಗೋಲಿ ಕಸೂತಿ, ಅಲ್ಲದೇ ಮದರಂಗಿ ಕಲೆಯಲ್ಲಿ ವಿವಿಧ ನಮೂನೆಗಳು ಇದ್ದು ಈಗೀಗ ಹೊಸ ನಮೂನೆಗಳು ಇಲ್ಲಿ ಸೇರ್ಪಡೆಯಾಗುತ್ತಿವೆ. ಮನಸ್ಸನ್ನು ಅರಳಿಸುವ, ಧಾರ್ಮಿಕ ಹಿನ್ನೆಲೆಯ ಈ ಅಲಂಕಾರ ಕಲೆಗಳು ಇಂದು ಹಲವು ಭಾಗಗಳಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪ್ರಸಂಗವಿದೆ.