ಸ್ತ್ರೀಯರ ಕೈಗೂಸಾಗಿ ಬೆಳೆದ ಕಸೂತಿ ಕುಶಲ ಕಲೆಯ ಉಗಮಸ್ಥಾನ ಉತ್ತರ ಕರ್ನಾಟಕ ಎನ್ನುತ್ತಾರೆ. ಮಹಿಳೆಯರ ತೀವ್ರತರ ಕಾಳಜಿಯು ಇಲ್ಲಿ ಬೆನ್ನಿಗೆ ಆಧಾರವಾಗಿದೆ. ಈ ಕಲೆಯಲ್ಲಿ ಮೈಮರೆತ ಮಹಿಳೆ ಕೆಲ ಕಾಲವಾದರೂ ತನ್ನ ದಿನನಿತ್ಯದ ಜಂಜಡಗಳಿಂದ ಮುಕ್ತಳಾಗಿರಬಲ್ಲಳು. ಮನದ ಅಳಲನ್ನು ಸ್ವಲ್ಪ ಕಾಲ ಮರೆಯಬಲ್ಲಳು. ಅವಳ ವಿರಾಮಕಾಲದ ಕಲೆಯಾಗಿ, ಆಯಾ ಜನಾಂಗದ ಧಾರ್ಮಿಕ ಸಾಮಾಜಿಕ ಭಾವನೆಗಳ ಪ್ರತಿನಿಧಿಯಾಗಿ, ಅವರ ನಂಬಿಕೆ ಆಚಾರ ವಿಚಾರಗಳನ್ನು ಪ್ರಕಟಪಡಿಸುವ ಮಾಧ್ಯಮವಾಗಿ, ಅಲಂಕಾರಿಕವಾಗಿ ಹೊರಹೊಮ್ಮುವ, ಒಟ್ಟು ಅವಳ ಪ್ರತಿಭೆ ಕಲ್ಪನೆ ಧರ್ಮ ಸಂಸ್ಕಾರಗಳು ಅವಳ ಕಸೂತಿಕಲೆಯಲ್ಲಿ ವ್ಯಕ್ತಗೊಂಡಿವೆ. ಗ್ರಾಮೀಣ ಕಲೆ ಕಸೂತಿಯು ಇಂದು ಪರಪ್ರಾಂತ್ಯದವರಿಂದ, ಪಾಶ್ಚಾತತ್ಯರಿಂದ ಮನ್ನಣೆ ಗಳಿಸಿದೆ. ಧಾರವಾಡದ ಕಸೂತಿ ಸೀರೆಗಳು ಮಹಾರಾಷ್ಟ್ರ ಉತ್ತರ ಭಾರತಗಳಿಗೆ ಅಮೇರಿಕಾ ಜಪಾನ್‌ಗಳಿಗೆ ಕಳಿಸಲಾಗುತ್ತಿದೆ. ಇತ್ತೀಚಿಗೆ ಮಹಿಳೆಯರ ಸಹನೆ ಕಲ್ಪನಾಶಕ್ತಿ ಸೃಜನಾತ್ಮಕ ದೃಷ್ಟಿಯು ಸಾಂಪ್ರದಾಯಿಕ ಕಲೆಯನ್ನು ಆಧುನಿಕ ಮಾದರಿಯಲ್ಲಿ ಪರಿವರ್ತಿಸಲು ತೊಡಗಿದೆ.

ಕರ್ನಾಟಕದ ಕಸೂತಿ, ಕನ್ನಡ ಕಸೂತಿ ಹಳ್ಳಿಯ ಕಸೂತಿ, ಸಾಂಪ್ರದಾಯಿಕ ಕಸೂತಿ, ಎಂದು ಕರೆಸಿಕೊಳ್ಳುವ ಈ ಕಲೆಯ ನಕ್ಷೆಗಳು ಪಶುಪಕ್ಷಿ, ಮನುಷ್ಯ ಚಿತ್ರಗಳು, ಸ್ಮೃತಿ ಚಿತ್ರಗಳು, ಪ್ರಕೃತಿ ಚಿತ್ರಗಳು, ಸುಳುವಿನ ವಿನ್ಯಾಸಗಳು, ಭೂಮಿತಿ ನಕ್ಷೆಗಳು (ತ್ರಿಕೋನ, ಆಯತ, ಚೌಕೋನ, ವರ್ತುಳ, ಪಟ್ಟೆ) ಮೊದಲಾದವುಗಳನ್ನು ಒಳಗೊಂಡಿದೆ. ಒಂದೊಂದು ಚಿತ್ರವೂ ಸಾಂಕೇತಿಕವಾದುದು.

ಮಹಿಳೆಯರೇ ಕಸೂತಿಯನ್ನು ಮೊದಲಿನಿಂದ ಬಿಡಿಸುತ್ತಿದ್ದುದರಿಂದ ಅದು ಅವರದೇ ಕಲೆ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. ಆದರೆ ಅಪರೂಪವಾದರೂ ಪುರುಷರು ಎತ್ತುಗಳ ಮೇಲೆ ಹಾಕುವ ಜೂಲ ಹಾಗೂ ಗೊರವಯ್ಯಗಳು ತೊಡುವೆ ವೇಷಭೂಷಣಗಳಲ್ಲಿ ಕಸೂತಿ ಹಾಕುತ್ತಾರೆ. ಕಸೂತಿಯ ನಯಗಾರಿಕೆ, ಅಂದ – ಚಂದ, ಕಲ್ಪನಾ ಸಾಮರ್ಥ್ಯ, ಸಾಧನೆ ಅದ್ಭುತವಾಗಿದೆ.

ರಾಜಸ್ಥಾನದಲ್ಲಿ ಮದುವೆಗಾಗಿ ವರ್ಷ ತಿಂಗಳುಗಳ ಹಿಂದಿನಿಂದಲೂ ಲಂಗ, ದಾವಣಿ, ಅದಕ್ಕೆ ಕನ್ನಡಿ ಚೂರುಗಳು, ಟಿಕಳಿಗಳಿಂದ ಹೂಬಳ್ಳಿ ತಯಾರಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮೊದಲು ಸೀರೆಯ ಸೆರಗಿನ “ಕರಿ” ಎಳೆಯಿಂದಲೇ ಕಸೂತಿ ಹಾಕುತ್ತಿದ್ದರು. ಈಗ ಆಯಾ ಪ್ರದೇಶದಲ್ಲಿ ದೊರೆಯುವ ದಾರ ಮತ್ತಿತರ ಸಾಮಗ್ರಿಗಳು, ಪೇಟೆಯಲ್ಲಿ ಸಿಗುವ ದಾರದ ರೀಲುಗಳನ್ನು ಕಸೂತಿಗಾಗಿ ಕೊಂಡೊಯ್ಯುತ್ತಾರೆ.

ಮಹಿಳೆಯರ ಮನಃಶ್ಯಾಂತಿಯ ಪ್ರತೀಕವಾಗಿ ಮಂಗಲಕರ ಚಿಹ್ನೆಯಾಗಿ, ಗೃಹಲಂಕರಣ ವಸ್ತುವಗಿ ಕಸೂತಿ ಕಲೆ ಶೋಭಿಸುತ್ತದೆ. ಆತ್ಮದ ಅಭಿವ್ಯಕ್ತಿಗೆ ಕಸೂತಿಕಲೆ ಒಂದು ಮಾಧ್ಯಮ. ಸೃಷ್ಟಾತ್ಮಕ ಕಲೆ. ಮಂಗಳಕರ, ಅಲಂಕಾರಿಕ, ಶುಭ, ಸೌಭಾಗ್ಯ, ಜೀವನ ಶ್ರದ್ಧೆ ತೋರುವ ಮಧ್ಯವರ್ತಿ ಇದಾಗಿದೆ.

ವೈಜ್ಞಾನಿಕ ಬೆಳವಣಿಗೆಯಿಂದಾಗಿ ಈ ಕಲೆಯು ಯಂತ್ರಕಸೂತಿಯಾಗಿ ವಾಣಿಜ್ಯ ಮಹತ್ವ ಪಡೆದುದರ ಕಾರಣ ಜನಪದ ಕಸೂತಿ ಕಲೆಯು ಕ್ರಮೇಣ ಕ್ಷೀಣವಾಗುವ ಹಂತ ಮುಟ್ಟುತ್ತಿರುವುದು ಆತಂಕಕರ ಭಾವನೆ ಮೂಡಿಸುತ್ತಿದೆ. ಯಾವುದೇ ಜನಾಂಗದ ಸಂಸ್ಕೃತಿ ಅಧ್ಯಯನಕ್ಕೆ ಮುಖ್ಯ ಆಕರಸಾಮಗ್ರಿಯೊದಗಿಸುವ ಕಸೂತಿ ಕಲೆಗೆ ನವಚೈತನ್ಯ ನೀಡಿ ಉಳಿಸಿಕೊಳ್ಳಬೇಕಾಗಿದೆ. ಪ್ರಬುದ್ಧ ಕಲಾಕಾರರು ತಮ್ಮ ಕುಟುಂಬದವರಿಗೆ ನೆರೆಹೊರೆಯವರಿಗೆ ಕಸೂತಿಯನ್ನು ಹೇಳಿಕೊಡುತ್ತಾರೆ. ಜಾನಪದ ವಸ್ತು ಸಂಗ್ರಹಾಲಯಗಳಲ್ಲಿ ಜನಪದ ಕಸೂತಿಗಳನ್ನು ರಕ್ಷಿಸಿಡಲಾಗುತ್ತಿದೆ. ಕೊಕ್ಕೆ ಸೂಜಿಯ ವಸ್ತ್ರಗಳನ್ನು ವಿಧವಿಧವಾಗಿ ಹೆಣೆಯುತ್ತಿದ್ದ ಗ್ರಾಮೀಣರು ಹಿಂದಿನ ತೂತಿನ ಬಿಲ್ಲೆಗಳನ್ನು ಅಳವಡಿಸಿ ಹೆಣೆದ ವಸ್ತ್ರಗಳನ್ನು ಜೋಪಾನವಾಗಿಡುತ್ತಿದ್ದುದನ್ನು ಈಗಲೂ ಅಲ್ಲಲ್ಲಿ ನೋಡಬಹುದು. ಉದ್ಯಮರಂಗವನ್ನು ಪ್ರವೇಶಿಸಿದ ಕಸೂತಿ ಕಲೆಯು ಹವ್ಯಾಸವಾಗಿಯೂ, ಗೃಹ ಕೈಗಾರಿಕೆಯಾಗಿಯೂ ಮುಂದುವರೆದಿದೆ. ಬೆಳಗಾವಿ, ಧಾರವಾಡ, ಬಿಜಾಪುರ ಜಿಲ್ಲೆಯ ಹಳ್ಳಿಗಳಲ್ಲಿ ಶಹರಗಳಲ್ಲಿ ಮಹಿಳೆಯರು ದೈನಂದಿನ ಚಟುವಟಿಕೆಯಾಗಿ ಇದನ್ನು ಪರಿಗಣಿಸಿದ್ದಾರೆ. ಕರ್ನಾಟಕ ರಾಜ್ಯ ಗೃಹ ಕೈಗಾರಿಕಾ ನಿಗಮದವರು, ಧಾರವಾಡದ ಜನತಾ ಶಿಕ್ಷಣ ಸಮಿತಿ, ವಿನಯಾ ಹ್ಯಾಂಡಿಕ್ಯಾಪ್ಟ್ಸ್ ಸಹಕಾರಿ ಸಂಘಗಳು ಸ್ಟೈಫಂಡ್‌ ಕೊಟ್ಟು ಹತ್ತು ತಿಂಗಳ ತರಬೇತಿಯನ್ನು ಕಸೂತಿಗಾಗಿ ಹಾಕಿಕೊಂಡಿದ್ದಾರೆ.

ಫ್ಯಾಶನ್ ಜಗತ್ತಿನಲ್ಲಿ ಸ್ತ್ರೀಪುರುಷರ ಉಡುಗೆ, ಕರವಸ್ತ್ರ, ಕೈಚೀಲ, ಪರ್ಸ, ಪರದೆ, ನ್ಯಾಪ್‌ಕಿನ್‌, ಸಲ್ವಾರ್ ಕಮೀಜ್‌, ತಲೆದಿಂಬಿನ ಕವರುಗಳಲ್ಲಿ ಕಸೂತಿ ಹಾಕಿಸುತ್ತಾರೆ. ಆದರೆ ಕಂಪ್ಯೂಟೀಕರಣ, ಔದ್ಯೋಗೀಕರಣವು ಸಾಂಪ್ರದಾಯಿಕ ಕಲೆಗಳನ್ನು ಕತ್ತಲೆಗೆ ಸರಿಸುವ ಅಪಾಯ ಮಾತ್ರ ಇಲ್ಲದಿಲ್ಲ. ಮನುಷ್ಯನ ಕಲಾಭಿರುಚಿ, ಸೃಜನಸಾಮರ್ಥ್ಯಗಳ ಸಂಕೇತವಾಗಿ ಕಸೂತಿ ಕಲೆ ಯಾಂತ್ರಿಕ ಹಾಗೂ ನೀರಸವಾಗದಂತೆ ಉಳಿಸಿಕೊಳ್ಳಬೇಕಾದುದು ಇಂದು ನಮ್ಮೆಲ್ಲರ ಕರ್ತವ್ಯವಾಗಿದೆ.

ನಶಿಸಿಹೋಗುತ್ತಿರುವ ಕಸೂತಿ ಕಲೆಯನ್ನು ಉಳಿಸಿ ಬೆಳೆಸಲು ಅನೇಕರು ಶ್ರಮಿಸುತ್ತಿದ್ದಾರೆ. ಹುಬ್ಬಳ್ಳಿಯ ಶ್ರೀಮತಿ ಜ್ಯೋತಿ ಮಡಿಮನ್‌, ಧಾರವಾಡದ ಕು: ಸುಮಂಗಲಾ ಮೂಲಿಮನಿ, ಶ್ರೀಮತಿ ರತ್ನಾ ಧೂಳಿಕೊಪ್ಪ, ಶ್ರೀಮತಿ ಮಧುಮತಿ ಹುಯಿಲಗೋಳ, ಗುಲಬರ್ಗಾದ ಶ್ರೀಮತಿ ಅನಿತಾ ಚೌಡಾಪುರ ಮೊದಲಾದವರು ಹಾಗೂ ಡಾ. ಮೃದುಲ್‌ ಕಿರ್ಲೋಸ್ಕರ್, ಶ್ರೀಮತಿ ವಿಜಯಾ ಹಿರೇಮಠ ಇವರು ಮುಂಬೈಯಲ್ಲಿ ಕಸೂತಿ ಸೀರೆಗಳ ಪ್ರದರ್ಶನವನ್ನು ಯಶಸ್ವಿಯಗಿ ಏರ್ಪಡಿಸಿದ್ದಾರೆ.

ನರೇಂದ್ರದ ತೊಂಬತ್ತೈದು ವರ್ಷದ ಗಂಗವ್ವ ರೈತಮಹಿಳೆ ದೃಷ್ಟಿ ಮಸಕಾಗಿದ್ದರೂ ಹವ್ಯಾಸಕ್ಕಾಗಿ ಈ ಕಲೆಯಲ್ಲಿ ನಿರತರಾಗಿದ್ದಾರೆ. ತಾವು ಬಿಡಿಸಿದ ನಕ್ಷೆಗಳಿಗೆ ಫ್ರೇಮ್‌ ಹಾಕಿಸಿ ಮನೆಯ ಗೋಡೆಗೆ ನೇತು ಹಾಕಿದ್ದಾರೆ.

ವಿಜಾಪುರದ ಎಂಬತ್ತೈದು ವರ್ಷದ ವೃದ್ಧೆ ಶ್ರೀಮತಿ ಭಾಗೀರಥಿ ವೀರಭದ್ರೇಶ್ವರ ಚಿಲ್ಲಾಳಶೆಟ್ಟಿಯವರು ಅರವತ್ತು ವರ್ಷಗಳ ಹಿಂದೆ ಬಿಡಿಸಿದ ಕಸೂತಿ ನಕ್ಷೆಗಳ ನಮೂನೆಯನ್ನು ಅವರ ಮೊಮ್ಮಗಳು ಶ್ರೀಮತಿ ಭಾರತಿ ಚಿಮ್ಮಡ, ಧಾರವಾಡದವರು ಬಹಳ ಕಾಳಜಿ ಹಾಗೂ ಆಸ್ಥೆಯಿಂದ ಕಾಯ್ದಿರಿಸಿದ್ದಾರೆ. ಅವರು ತಯಾರಿಸಿದ ಮೂರು ನಮೂನೆಗಳಲ್ಲಿ ನೂರಿಪ್ಪತ್ತೈದರಿಂದ ನೂರೈವತ್ತು ಕಸೂತಿ ನಕ್ಷೆಗಳಿವೆ.

ಧಾರವಾಡದ ಕೊಪ್ಪದಕೇರಿಯ ಶ್ರೀ ಎಸ್‌.ಜಿ.ಪಾಟೀಲರವರು ೧೯೦೪ ರಲ್ಲಿ ತಮ್ಮ ಅಕ್ಕನವರು ಕಸೂತಿ ಬಿಡಿಸಿದ ದೊಡ್ಡ ಜಮಖಾನೆಯ ಉದ್ದಗಲದ ಬಟ್ಟೆಯನ್ನು ಹೆಚ್ಚು ಆಸ್ಥೆಯಿಂದ ಕಾಯ್ದಿರಿಸಿದ್ದಾರೆ. ಈ ಕಲೆಗೆ ರಾಷ್ಟ್ರೀಯ ಮಟ್ಟದಲ್ಲಿ ಆರೇಳು ಸಲ ಪ್ರಶಸ್ತಿ ಸಿಕ್ಕಿದೆ. ಅದರಲ್ಲಿ ಬಿಡಿಸಿದ ಪ್ರಾಣಿ, ಪಕ್ಷಿಗಳು ಹಾಗೂ ಭಗವದ್ಗೀತೆಯ ಶ್ಲೋಕಗಳು ಅತಿ ನಾಜೂಕಾಗಿಯೂ ವರ್ಣಸಂಯೋಜನೆಯ ಮೋಹಕವಾಗಿಯೂ ಇದೆ.

ಹುಬ್ಬಳ್ಳಿಯಲ್ಲಿ ನೆಲೆಸಿರುವ ಶ್ರೀಮತಿ ಮಾಳೆಯವರ ಕಸೂತಿ ಕಲೆಯು ತುಂಬಾ ಮೆಚ್ಚುವಂತಹುದು.

(ಮೇಲಿನ ಮಾಹಿತಿಗಳು “ಕನ್ನಡ ನಾಡಿನ ಕಸೂತಿ” ವಿಜಯಾ ಹಿರೇಮಠ ಹಾಗೂ ಗೀತಾ ಮಹಾಳೆ – ಇವರ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.)

ಶ್ರೀಮತಿ ಅನಿತಾ ಚೌಡಾಪೂರಕರ, ಬೆಂಗಳೂರಿನವರು, ೧೯೯೨ – ೯೩ರ ಸಾಲಿನಲ್ಲಿ ಅವರು ಕಸೂತಿ ಕಲೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ರಾಜ್ಯ ಕೈಮಗ್ಗ ಮತ್ತು ಕರಕುಶಲ ನಿಗಮದಿಂದ ಕಸೂತಿ ಸೀರೆಗೆ ಸರ್ಟಿಫಿಕೇಟ್‌ ಲಭಿಸಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಜಯನಗರದ ನಿವಾಸಿ ರಾಜೇಶ್ವರಿ ಸಾಲಿಮಠ ಎರಡು ಬಾರಿ ದಸರಾಪ್ರಶಸ್ತಿ ಪಡೆದಿದ್ದಾರೆ. ಅಖಿಲ ಭಾರತ ಮಟ್ಟದ ಕಸೂತಿ ಕಲೆಯ ಸ್ಪರ್ಧೆಯಲ್ಲಿ ಇವರ ಕೃತಿಗಳು ಪ್ರದರ್ಶನಗೊಂಡಿವೆ. “ಸುರಭಿ” ಕಾರ್ಯಕ್ರಮದಲ್ಲಿ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಇವರೆಲ್ಲರ ಪ್ರಯತ್ನಗಳು, ಸಾಧನೆ ಜನಪದಕಲೆ ಕಸೂತಿಯನ್ನು ಉಳಿಸಿ ಬೆಳೆಸುವತ್ತ ಮುನ್ನಡೆದಿದೆ.