ಹಾಡು ಆಲಿಸಿದವರಿಗೆಕೇಳುಗರಿಗೆ :

ಹಾಡಿದವ್ವನಕಿನ್ನ ಕೇಳಿದವ್ವನಕಿನ್ನ

ಸುಮ್ಮನ ಕುಂತವ್ವಗ ಭಲೆ ಪುಣ್ಯಸುಯ್‌
ಸುಮ್ಮನ ಕುಂತವ್ವಗ ಭಲೆ ಪುಣ್ಯ ಶರಣಮ್ಮಾ
ನಿನ ಪುತ್ರನ ಸಂತಾನ ಜಯ ಜಯಸುಯ್‌ (ಆ.ಜ.ಕ.ಗೀ.೭೬)

ಹಾಡು ಕಲಿಸಿದವರಿಗೆಗುರುಗಳಿಗೆ :

ಹಾಡಿದವ್ವನಕಿನ್ನ ಕೇಳಿದವ್ವನಕಿನ್ನ
ಕಲಿಸಿದವ್ವಗ ಭಲೆ ಪುಣ್ಯಸುಯ್‌
ಕಲಿಸಿದವ್ವಗ ಭಲೆ ಪುಣ್ಯ ಚಿಮಣಾಬಾಯಿ
ಪುತ್ರನ ಸಂತಾನ ಜಯ ಜಯಸುಯ್‌ (ಆ.ಜ.ಕ.ಗೀ.೭೬)
ಹಾಲ ಕಾಸುದ ಬಿಟ್ಟು ಕೂಸ ತೂಗುದ ಬಿಟ್ಟು
ವ್ಯಾಳ್ಳೇಕ ನುಡಿಯ ಕಲಸುವಳಸುವ್ವಿ
ವ್ಯಾಳ್ಳೇಕ ನುಡಿಯ ಕಲಸುವಳನಿಂಬೆವ್ವನ
ಬಾಲರ ಸಂತಾನ ಘನವಾಗೆಸುವ್ವಿ (ಜೀ.ಜೋ.ಗ.ಗ.೧೫೫)

ದನಿಗೂಡಿಸಿದವರಿಗೆಜೊತೆ ಹಾಡುಗಾರರಿಗೆ:

ಬಿತ್ತಿದ ಹೊಲದಾಗ ಜತ್ತಿಗಿ ನಾಗೇಂದ್ರನಂಗ
ಎತ್ತರಸಿ ದನಿಯ ರನ್ನದ ಕೋಲು ಕೋಲ
ಎತ್ತರಿಸಿ ದನಿಯ ಕುಡುವ ಶಾಂತವ್ವಗ
ಮುತ್ತೈದಿತನ ಘನವಿರಲೆರನ್ನದ ಕೋಲು ಕೋಲ (ಆ.ಜ.ಕ.ಗೀ.೪೯)

ಹಾಡಿದವ್ವನಕಿನ್ನ ಕೇಳಿದವ್ವನಕಿನ್ನ
ಸೋಬಾನದವ್ವ ದಣದವ್ವ ರನ್ನದ
ಸೋಬಾನದವ್ವ ದಣದವ್ವ ಸಿದ್ದವ್ವಗ
ಮುತ್ತೈದಿತನ ಘನವಿರಲೆರನ್ನದ

ಸೋಬಾನದವ್ವ ದಣದವ್ವ ನೀವಿನ್ನ
ಸೋ ಎನ್ನುವ ಶಬ್ದ ನಿಲಿಸ್ಯಾರ ಅವರಿಬ್ಬರಿಗೆ
ಹಾಲಬಾನಗಳ ಉಣನೀಡಿ ರನ್ನದ
ಹಾಲಬಾನಗಳ ಉಣನೀಡಿಅವರಿಬ್ಬರಿಗೆ
ತೂಗು ಮಂಚದ ಮ್ಯಾಲ ಕುಳ್ಳಿರಿಸಿರನ್ನದ (ಆ.ಜ.ಕ.ಗೀ.೫೦)

ಹಾಡಿಸಿದವರಿಗೆ :

ಎಂದಿಗೆ ಈ ನುಡಿಯ ಸಂದುಕದೊಳಗಿತ್ತ
ಇಂದ್ಯಾವ ಜಾಣಿ ತಗಸ್ಯಾಳಸುವ್ವಿ
ಇಂದ್ಯಾವ ಜಾಣಿ ತಗಸ್ಯಾಳಬಸಮ್ಮನ
ಕಂದನ ಸಂತಾನ ಘನವಾಗೆಸುವ್ವಿ (ಜೀ.ಜೋ.ಗ.ಗ.೧೫೪)

ಸುದೀರ್ಘವಾದ ಕಾವ್ಯಗಳ ಹಾಡುಗಾರಿಕೆಯಲ್ಲಿ – ಹಾಡುಗಾರರಿಗೆ ಶ್ರಮವಾದಾಗ, ಸ್ವಲ್ಪ ಸಮಯ ವಿಶ್ರಾಂತಿಬೇಕು. ಈ ಬಗೆಯ ಹಾಡುಗಾರಿಕೆಯನ್ನು ಹೆಣ್ಣುಮಕ್ಕಳ ಸುದೀರ್ಘವಾದ ಕಥಾನಕಗಳ ಹಾಡುಗಾರಿಕೆಯಲ್ಲಿ ಮತ್ತು ಜನಪದ ಮಹಾಕಾವ್ಯಗಳ ಪ್ರಯೋಗದಲ್ಲಿ ಕಾಣಬಹುದಾಗಿದೆ. ಹೀಗೆ ಹಾಡುಗಾರಿಕೆಯ ಮಧ್ಯ ಬಿಡುವಿನ ವೇಳೆಯಲ್ಲಿ ವಿಭೂತಿ ಹಚ್ಚುವ, ವೀಳೆದೆಲೆ ಹಂಚುವ – ಮುಂತಾಗಿ ಪರಿಚಾರಿಕೆ ಕೆಲಸ ಮಾಡುವವರಿಗೂ ಕಾವ್ಯದಿಂದ ಪ್ರಯೋಜನವುಂಟು ಎಂಬ ಮಾತು ಜನಪದರಲ್ಲಿ ಕಾಣುತ್ತೇವೆ.

ಪರಿಚಾರಿಕೆ ಮಾಡಿದವರಿಗೆ :

ಸಂದಿಗಿ ವಿಭೂತಿ ತಂದು ಕೊಟ್ಟವ್ವಗ
ರೂಢಿಗೀಶ್ವರನ ದಯವಿರಲೆ
ರೂಢಿಗೀಶ್ವರನ ದಯವಿರಲೆನಾಗವ್ವಗ
ಮುಂದ ಪುಣ್ಯದ ಫಲಗೋಳರನ್ನದ (ಆ.ಜ.ಕ.ಗೀ.೫೦)

ಸಂದ್ಯಾಗಿನ ಕೂಕಮ ಮಂದ್ಯಾಗ ತಂದಾಳ
ಕೂಕಮ ಹಚ್ಚವ್ವಗ ಭಲೆ ಪುಣ್ಯಸುಯ್‌
ಕೂಕಮ ಹಚ್ಚವ್ವಗ ಭಲೆ ಪುಣ್ಯಊರ್ಮಿಳಾಬಾಯಿ
ನಿನ ಮುತ್ತೈದಿತನ ಜಯ ಜಯ ಸುಯ್‌ (ಆ.ಜ.ಕ.ಗೀ.೭೭)

ಸಂದ್ಯಾಗಿನ ಎಲಿಯ ಮಂದ್ಯಾಗ ತಂದಾಳ
ಎಲಿ ಕೊಟ್ಟವ್ವಗ ಭಲೆ ಪುಣ್ಯಸುಯ್‌
ಎಲಿ ಕೊಟ್ಟವ್ವಗ ಭಲೆ ಪುಣ್ಯ ಕಸ್ತೂರಿಬಾಯಿ
ನಿನ ಪುತ್ರನ ಸಂತಾನ ಜಯಜಯ ಸುಯ್‌ (ಆ.ಜ.ಕ.ಗೀ.೭೭)

ಕಾವ್ಯ ನಿರಾಕರಣೆಯಿಂದ ಅಮಂಗಳ ಪ್ರಾಪ್ತಿ :

ಈ ಹಾಡುಗಳು ಪ್ರಾರಂಭದಲ್ಲಿ ಇನ್ನೂ ಕೆಲವು ಮಾತುಗಳನ್ನು ಹೇಳುತ್ತವೆ: ಯಾವುದೇ ನೆವದಿಂದ ಹಾಡು ಕೇಳುವುದನ್ನು ಬಿಟ್ಟರೆ – ಯಮಗಂಡ ಕಾದಿದೆಯೆಂದೂ ಹಂದಿ, ನಾಯಿ ಮುಂತಾಗಿ ಕೀಳುಪ್ರಾಣಿ ಜೀವನ ಪ್ರಾಪ್ತವಾಗುವುದೆಂದೂ ಪ್ರಸ್ತಾಪಿಸುತ್ತವೆ. ಜನಪದರು ಗಮನಿಸುವ ಕಾವ್ಯದ ಅನಾದರಣೆಯಿಂದ ತಗಲುವ ಈ ಅಮಂಗಳ – ಅನಿಷ್ಟ ವಿಚಾರವನ್ನು ಮಮ್ಮಟನು ಗಮನಿಸಿಲ್ಲ.

ಹಾಡು ಅನಾದರಿಸಿದವರಿಗೆ :

ಹಾಡುಹಾಡಂದರ ಹಾಡದಿದ್ದರ ಪಾಪ
ಹಾಡುಕೇಳವರ ಪರಚಿತ್ತ ಪರಗ್ಯಾನ
ಅವರ ಬಾಗಿಲ ಮುಂದ ಅವ ಯಮಗೊಂಡ (ಜೀ.ಜೋ.ಗ.ಗ.೨)
ಯಾವಾಗ ಈ ಹಾಡ ಕೇಳ ಬಲ್ಲೆನೆಂದು
ಬಾಗಿಲಿಗೆ ಬಂದು ತಿರುಗೊಮ್ಮೆ ಹೋದವ್ವ
ನಾಯಿಯಾ ಹೊಟ್ಟಿಲೆ ಜನ್ಮಿಸಿ (ಜೀ.ಜೋ.ಗ.ಗ.೨)

ಎಂದಿಗೆ ಈ ಹಾಡ ಸಂದ ಬಲ್ಲೆನೆಂದು
ಅಂಗಳಕ ಬಂದು ತಿರುಗಿದವ್ವ ನೀನೀಗ
ಬೆಂದ ದೇಗುಲದ ಕದವಾದೆ ( ಜೀ.ಜೋ.ಗ.ಗ.೭೩)

ಹಾಡನ್ನು – ಕಾವ್ಯವನ್ನು ಕೇಳುವುದು ಪುಣ್ಯದ ಕೆಲಸ. ಅದನ್ನು ನಿರಾಕರಿಸುವದು ಪಾಪದ ಕೆಲಸ – ಎಂಬ ಅಭಿಪ್ರಾಯ ಜನಪದರದು. ಆದುದರಿಂದ ಕಲೆಯ ಅನಾದರಣೆಗೆ ಮೃತ್ಯುವಿನಂಥ ಕೆಡುಕನ್ನು ಅವರು ಹೇಳುತ್ತಾರೆ. ಇದು ಜನಪದರಲ್ಲಿರುವ ಕಲೆಯ ಆರಾಧನೆಯ ಬಗೆಗಿನ ಮಹತ್ತಾದ ವಿಚಾರವನ್ನು ಹೇಳುತ್ತದೆ. ಮತ್ತು ಈ ಕಾವ್ಯ ಬದುಕುಳಿ ಯುವುದು – ಜನರು ಕೇಳಲಿ, ತಮ್ಮ ಬದುಕಿಗೆ ದಾರಿ ಕಾಣಲಿ ಎಂಬ ಉದ್ದೇಶ ಇದರ ಹಿಂದೆ ಇರುವುದು ಸಹಜವಾಗಿದೆ. ಅದಕ್ಕಿಂತಲೂ ಮಹತ್ವದ ವಿಚಾರವೆಂದರೆ ಈ ಸಾಹಿತ್ಯ ಉಳಿಯುವುದೇ ಅದರ ಪ್ರಸಾರದಿಂದ. ಪ್ರಸಾರವೇ ಇಲ್ಲವೆಂದರೆ ಜನಪದ ಸಾಹಿತ್ಯಕ್ಕೆ ಬದುಕು ಇಲ್ಲ. ಅದಕ್ಕಾಗಿ ತನಗೆ ಗೊತ್ತಿರುವ ಜನಪದದ ಒಂದು ಪ್ರಕಾರವನ್ನು ಇತರರಿಗೆ ಹೇಳುವುದು, ಹಾಗೇ ಹೇಳುತ್ತಿರುವುದನ್ನು ಶ್ರದ್ಧೆಯಿಂದ ಕೇಳುವುದು, ಇಂತಹ ಕೆಲಸಗಳೆಲ್ಲ ಪುಣ್ಯದ ಕೆಲಸಗಳೆಂದೇ ಭಾವಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ನಡತೆ, ಉದಾಹರಣೆಗೆ ತನಗೆ ಬಂದ ಹಾಡು, ಕತೆ ಮುಂತಾದವುಗಳನ್ನು ಇತರರ ಮುಂದೆ ಹೇಳದೇ ಇರುವುದು ಒಂದು ರೀತಿಯಿಂದ ಆ ಸಾಹಿತ್ಯಕ್ಕೆ ಅಪಚಾರ ಬಗೆದಂತೆಯೇ ಎಂದು ಭಾವಿಸಲಾಗುತ್ತದೆ. ಇದು ಜನಪದ ಸಾಹಿತ್ಯದ ಪ್ರಸಾರ ಗುಣಕ್ಕೆ ಅಡ್ಡಿಯಾಗುವ ಕ್ರಿಯೆಯಾದುದರಿಂದ ಈ ವರ್ತನೆ ಶಿಕ್ಷೆಗೆ ಯೋಗ್ಯವೆಂದು ಜಪದರು ಭಾವಿಸುತ್ತಾರೆ. ಇದಕ್ಕೆ ಉದಾಹರಣೆಯಾಗಿ ಈಗಾಗಲೇ ಕೆಲ ಹಾಡಿನ ತುಣುಕುಗಳನ್ನು ನೋಡಲಾಗಿದೆ. ಈ ಉದ್ದೇಶವನ್ನು ಹೊತ್ತ ಕೆಲ ಕಥೆಗಳೂ ದೊರೆಯುತ್ತವೆ:

೧. ಒಬ್ಬ ಜಿಪುಣಗೊಂಡಿಗೆ ನಾಲ್ಕು ಕಥೆಗಳು ಬರುತ್ತಿದ್ದವು. ಆದರೆ ಅವನು ಅವುಗಳನ್ನು ಯಾರ ಮುಂದೆಯೂ ಹೇಳುತ್ತಿರಲಿಲ್ಲ. ಇದರಿಂದ ಕೋಪಗೊಂಡ ಕಥೆಗಳು ಅವನು ಮಲಗಿರುವಾಗ ಅವನ ಹೊಟ್ಟೆಯಿಂದ ಹೊರಗೆ ಬಂದು ಅವನನ್ನು ಕೊಲ್ಲಲು ಆಲೋಚನೆ ಮಾಡುತ್ತವೆ. ಒಂದು ದಾರಿಯ ಮರವಾಗಿ ಅವನ ಮೇಲೆಬಿದ್ದು, ಇನ್ನೊಂದು ಹಾವಾಗಿ ಕಚ್ಚಿ, ಮತ್ತೊಂದು ಹೊಳೆ ದಾಟುವಾಗ ತೆರೆಯಾಗಿ ಬಂದು, ಮೊಗದೊಂದು ಆತ ಊಟ ಮಾಡುವಾಗ ಬಾಯಲ್ಲಿಟ್ಟುಕೊಂಡ ತುತ್ತನ್ನು ಸೂಜಿಮಯವಾಗಿಸಿ ಕೊಲ್ಲಲು ಆಲೋಚಿಸಿದವು. ಅದರಂತೆ ಪ್ರಯತ್ನ ಮಾಡಿದವು. ಆದರೆ ಈ ಸಮಾಚಾರ ತಿಳಿದ ಗೊಂಡಿಯ ಸೇವಕ ಅವನನ್ನು ಉಳಿಸುತ್ತಾನೆ’. (ಭಾರತೀಯ ಜನಪದ ಕಥೆಗಳು, ಪು.೨ – ೩)

೨. ಒಬ್ಬನು ಹಾಡು ಬಂದರೂ ಹಾಡು ಹೇಳುತ್ತಿರುಲಿಲ್ಲ, ಕಥೆ ಬಂದರೂ ಕಥೆ ಹೇಳುತ್ತಿರಲಿಲ್ಲ. ಇವನನ್ನು ಹೇಗಾದರೂ ಮಾಡಿ ಕೊಲ್ಲಬೇಕೆಂದು ಹಾಡು, ಕಥೆಗಳು ಕೂಡಿ ಹಂಚಿಕೆ ಹಾಕಿದವು : ‘ಮುಂಜಾನೆ ಎದ್ದಕೂಡಲೇ ಜೋಡು ಮೆಡುತ್ತಾನೆ, ಆವಾಗ ಅವನಿಗೆ ಚೇಳು ಆಗಿ ಕಡಿಯಬೇಕು. ಹೆಂಡತಿಯನ್ನು ಕರೆಯಲಿಕ್ಕೆ ಹೋಗುತ್ತಾನೆ, ಆವಾಗ ಅಗಸೆ ಅವನ ತಲೆಯ ಮೇಲೆ ಬೀಳುವಂತೆ ಮಾಡಬೇಕು’. ಹೀಗೆನ್ನುವ ಕಥೆಯ ಮಾತನ್ನು ಆಳುಮಗ ಕೇಳಿರುತ್ತಾನೆ. ಆತ ಮಾಲೀಕನನ್ನು ಈ ಎಲ್ಲ ಅಪಾಯಗಳಿಂದ ಪಾರುಮಾಡುತ್ತಾನೆ. ಕೊನೆಗೆ ಕಥೆ ಹೀಗೆ ಸಾರುತ್ತದೆ : ‘ ಕಲಿತ ಕಥೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಹೀಗೆ ಅಪವಾದ ಬರುತ್ತವೆ. ಅವು ಜನ್ಮಕ್ಕೇ ಮೂಲವಾಗುವವು. ಆದ್ದರಿಂದ ಬಂದ ಕಥೆ ಮಂದಿಗೆ ಹೇಳಬೇಕು.’  (ಉತ್ತರ ಕರ್ನಾಟಕದ ಜನಪದ ಕಥೆಗಳು, ೧೬೮, ೧೬೯)

ಈ ಕಥೆಗಳಿಂದ ನಮಗೆ ಗೊತ್ತಾಗುವುದೇನೆಂದರೆ – ಜನಪದ ಸಾಹಿತ್ಯ ಮುಖ್ಯವಾಗಿ ಪ್ರಸಾರವಾಗಬೇಕು. ಜನ ಅದರಿಂದ ಬದುಕಿನ ಶಿಕ್ಷಣ ಪಡೆಯಬೇಕು, ಒಳ್ಳೆಯ ಬದುಕು ಸಾಗಿಸಬೇಕು ಎಂಬುದು. ಅದನ್ನು ತಡೆಯುವುದೆಂದರೆ ಜನಪದರ ಈ ಭಾವನೆಗೆ ಮಾಡುವ ಅಗೌರವವೇ ಸರಿ. ಇಂತಹ ‘ಜನಶಿಕ್ಷಣ’ವನ್ನು ತಡೆಯುವವನಿಗೆ – ಮರಣದಂಡನೆಯಂತಹ ಆಲೋಚನೆ ಮಾಡಲಾಗುತ್ತದೆ ಎಂಬುದಕ್ಕೆ ಈ ಕಥೆಗಳು ಉದಾಹರಣೆಗಳಾಗಿವೆ.ಅದೊಂದು ಆೋಚನೆ ಮಾತ್ರ. ಆದರೆ ಕೊನೆಗೆ ಈ ಸಮಾಚಾರವು ಮಾಲೀಕರಾದವರಿಗೆ ತಿಳಿಯುತ್ತದೆ. ಅಂದರೆ ಕಥೆಗಳು, ತಮ್ಮ ಪ್ರಸಾರವನ್ನು ತಡೆಹಿಡಿದುದಕ್ಕಾಗಿ ಕೊಲ್ಲಲು ಹೊಂಚು ಹಾಕಿದ್ದ ವಿಷಯ ಸಂಬಂಧಿಸಿದವರಿಗೆ ತಿಳಿಯುತ್ತದೆ. ಅರ್ಥಾತ್‌ಅವರು ಜನಪದ ಸಾಹಿತ್ಯದ ಪ್ರಸಾರದ ಮಹತ್ವವನ್ನು ಅರಿಯುತ್ತಾರೆ.

‘ಭಾರತೀಯ ಜನಪದ ಕಥೆಗಳು’ ಎಂಬ ಪುಸ್ತಕದಲ್ಲಿಯೇ ಇಂತಹದೇ ಇನ್ನೊಂದು ಉದಾಹರಣೆ ದೊರೆಯುತ್ತದೆ. ‘ಕೇಳುಗರ ಹುಡುಕಾಟದಲ್ಲೊಂದು ಕತೆ’ (ಪು.೨೮ – ೩೧) ಎಂಬ ಕಥೆಯಲ್ಲಿ – ಒಬ್ಬ ಅಜ್ಜಿ ಒಂದು ದಿನ ಕಥೆ ಹೇಳಬೇಕೆಂದು ಮನೆಮಂದಿಗೆಲ್ಲ ವಿಚಾರಿಸು ತ್ತಾಳೆ. ಆದರೆ ಆಕೆಯ ಮಕ್ಕಳು – ಮೊಮ್ಮಕ್ಕಳು, ಸೊಸೆ, ಕಡೆಗೆ ಹಳ್ಳದ ದಂಡೆಯಲ್ಲಿ ಬಟ್ಟೆ ಒಗೆಯುತ್ತಿರುವ ಒಬ್ಬ ಹೆಂಗಸನ್ನೂ ಕಥೆ ಕೇಳಲು ಕೇಳಿಕೊಳ್ಳುತ್ತಾಳೆ. ಕೊನೆಗೆ ಬ್ರಾಹ್ಮಣರು, ಮರ ಕಡಿಯುವವರು, ಬುಟ್ಟಿ ಹೆಣೆಯುವವರು, ಮಡಿವಾಳರು, ಕುಂಬಾರರು – ಇವರೆಲ್ಲರನ್ನೂ ಕಥೆಕೇಳಲು ಕೇಳಿಕೊಂಡರೂ ಯಾರೂ ತಯಾರಿರಲಿಲ್ಲ. ಹೀಗೆ ಇವರೆಲ್ಲ ಕಥೆಯನ್ನು ಅನಾದರ ಗೊಳಿಸಿದ್ದ ರಿಂದ ಇವರಿಗೆಲ್ಲ ತಕ್ಕ ಶಿಕ್ಷೆಗಳಾಗುತ್ತವೆ.

ಆದರೆ ಆ ಮುದುಕೆಯು ಬಸುರಿ ಹೆಣ್ಣುಮಗಳೊಬ್ಬಳನ್ನು ಭೇಟಿಯಾಗಿ ಕಥೆ ಹೇಳಲು ತೊಡಗುವ ಮುನ್ನವೇ ಆಕೆಗೆ ನಿದ್ರೆ ಆವರಿಸುತ್ತದೆ. ಹೊಟ್ಟೆಯಲ್ಲಿಯ ಮಗು ‘ನಾನು ಕಥೆಯನ್ನು ಕೇಳುತ್ತೇನೆ, ಹೇಳು’ ಎನ್ನುತ್ತದೆ. ಅಜ್ಜಿ ಕಥೆ ಹೇಳುತ್ತಾಳೆ. ಕಥೆ ಹೇಳಿಯಾದ ಮೇಲೆ – ‘ನೀನು ಕಾಲಿಟ್ಟಲ್ಲಿ ನಿರ್ಜನ ಹಳ್ಳಿಗಳು ಸಮೃದ್ಧ ನಗರಗಳಾಗಲಿ, ಹತ್ತಿಯ ಕಾಳುಗಳು ಮುತ್ತುಗಳಾಗಲಿ, ಒಣಗಿದ ಮರಗಳೆಲ್ಲ ಫಲಬಿಡಲಿ, ಮುದಿ ದನಗಳು ಹಾಲು ಕೊಡಲಿ, ಬಂಜೆಯರಿಗೆ ಮಕ್ಕಳಾಗಲಿ, ಕಳೆದು ಹೋದ ಒಡವೆಗಳು ಮತ್ತೆ ಸಿಗಲಿ, ಸತ್ತವರು ಎದ್ದು ಬರಲಿ, ಹಾಗೂ ನಿನ್ನ ಶಕ್ತಿ ಸಾಮರ್ಥ್ಯಗಳಿಂದ ರಾಜನಿಗೆ ಸಂತಸವಾಗಲಿ’ ಎಂದು ಜೋಗುಳ ಹಾಡಿದಳು. ಮುಂದೆ ಈ ಮಗುವನ್ನು ರಾಜನು ಪಡೆದು, ಮದುವೆಯಾಗುತ್ತಾನೆ. ಮುದುಕೆಯ ಹರಕೆಗಳು ಸತ್ಯವಾಗುತ್ತವೆ. ಇದೆಲ್ಲ ಆಗಿದ್ದು ಕಥೆಯನ್ನು ಆದರಿಸಿದ್ದರಿಂದ ಎಂಬ ಭಾವನೆ ಇಲ್ಲಿ ಮುಖ್ಯವಾದದ್ದು. ಹೀಗೆ ಸಾಹಿತ್ಯವನ್ನು ಮರ್ಯಾದೆಯಿಂದ ಕಾಣಬೇಕೆಂಬ ಭಾವನೆ ಜನಮನದಲ್ಲಿರುವುದು ಗಮನಾರ್ಹ ಸಂಗತಿ.

ಇಂತಹದೇ ಇನ್ನೊಂದು ಕಥೆ ‘ಉತ್ತರ ಕರ್ನಾಟಕದ ಜನಪದ ಕಥೆಗಳು’ ಎಂಬ ಸಂಗ್ರಹದಲ್ಲಿ ದೊರೆಯುತ್ತದೆ. ‘ಒಂದು ಹಾಡು ಒಂದು ಕಥೆ’ ಎಂಬ ಈ ಕಥೆಯಲ್ಲಿ – ಒಂದು ಹಾಡು ಹಾಗೂ ಒಂದು ಕಥೆ ಗೊತ್ತಿರುವ ಒಬ್ಬ ಹೆಣ್ಣುಮಗಳು ಅವನ್ನು ಯಾರ ಮುಂದೆಯೂ ಹೇಳುತ್ತಿರಲಿಲ್ಲ, ಹಾಡುತ್ತಿರಲಿಲ್ಲ. ಆಕೆಯನ್ನು ತೊರೆದು ಹೋಗಲು ಅವು ನಿರ್ಧರಿಸಿದವು. ಒಂದು ದಿನ ಕಥೆ ಮನೆಯ ಹೊರಗಾಗಿ ಅವಳ ಮನೆಯ ಅಂಗಳದಲ್ಲಿ ಎರಡು ಬೂಟುಗಳಾಗಿ ಕುಳಿತಿತು. ಹಾಡು ಹೊರಗಾಗಿ ಒಂದು ಕೋಟು ಆಗಿ ಗೂಟಿಗೆ ನೇತುಬಿದ್ದಿತು. ಇದನ್ನು ಗಂಡ ಕಂಡು ಸಂಶಯಪಟ್ಟನು. ಇಬ್ಬರಲ್ಲೂ ಬಿರುಕು ಮೂಡಿತು. ಗಂಡನು ಮಲಗಲು ಹನುಮಂತದೇವರ ಗುಡಿಗೆ ಹೋದನು. ಈಕೆ ಮನೆಯಲ್ಲಿಯೇ ಚಿಂತೆಯಲ್ಲಿ ಮಲಗಿದಳು.

ಆ ಊರೊಳಗಿನ ಹಣತೆಗಳೆಲ್ಲವು ರಾತ್ರಿಕಳೆಯಲು ಹನುಮಂತ ದೇವರ ಗುಡಿಗೆ ತೆರಳುವುದು ವಾಡಿಕೆಯಾಗಿತ್ತು. ಎಲ್ಲ ಮನೆಗಳಿಂದ ಹಣತೆಗಳು ಬಂದು ಬಂದು ನೆರೆದವು. ಒಂದು ಹಣತೆ ಮಾತ್ರ ತಡಮಾಡಿ ಬಂದಿತು. ಉಳಿದ ಹಣತೆಗಳೆಲ್ಲ ಕಾರಣ ಕೇಳಿದವು. ಅದಕ್ಕೆ ಆ ಹಣತೆ ಹೇಳಿತು: ನಮ್ಮ ಮನೆಯಲ್ಲಿ ಗಂಡ – ಹೆಂಡತಿಗೆ ಜಗಳ. ಕಾರಣ, ಹೆಂಡತಿ ತನಗೆ ಬರುವ ಹಾಡು ಕಥೆ ಹೇಳದ್ದಕ್ಕಾಗಿ ಅವು ಬೂಟು, ಕೋಟುಗಳಾಗಿ, ಇಬ್ಬರಲ್ಲೂ ಭಿನ್ನಾಭಿಪ್ರಾಯ ಬರಲು ಕಾರಣವಾಯಿತು ಎಂದು ಹೇಳಿತು. ಅಲ್ಲಿಯೇ ಮಲಗಿದ್ದ ಗಂಡ ವಿಷಯ ತಿಳಿದು ಮನೆಗೆ ಹೋದನು. ಕಥೆ ಹಾಡಿನ ಸುದ್ದಿ ತೆಗೆದು ಹೆಂಡತಿಗೆ ಮಾತಾಡಿಸಿ ನೋಡಿದನು. ಆದರೆ ಆಕೆಗೆ ಬರುತ್ತಿದ್ದ ಕಥೆ ಹಾಡು ಎರಡೂ ಆಕೆಗೆ ಮರೆತು ಹೋಗಿದ್ದವೆಂದು ತಿಳಿಯಿತು. (ಪು.೫೦ – ೫೧). ಈ ಎರಡೂ ಕಥೆಗಳು – ಜನಪದಸಾಹಿತ್ಯದ ಪ್ರಸಾರದ ಮಹತ್ವವನ್ನು ಹೇಳುತ್ತವೆ.

ಜನಪದಕಾವ್ಯದಪ್ರಯೋಜನಗಳು

ಕವಿ ಮತ್ತು ಹಾಡುಗಾರರಿಗೆ ಕೀರ್ತಿ :

ಕೀರ್ತಿ ಮತ್ತು ಹಣದ ಹುಚ್ಚಂತೂ ಜನಪದರಿಗೆ ಇಲ್ಲ. ಈ ಎರಡು ವಿಷಯದಲ್ಲಿ ಮರ್ಯಾದೆ ಎಂಬುದು ಬಹಳ ಮುಖ್ಯವಾಗಿ ಕಾಡುತ್ತದೆ. ಕೀರ್ತಿ ಎಂದರೆ ವ್ಯಾಪಕವಾದ ಪ್ರದೇಶದಲ್ಲಿ ಹೆಸರುವಾಸಿಯಾಗುವುದು. ವೌಖಿಕ ಪರಂಪರೆಯಲ್ಲಿ ಇಂತಹ ವ್ಯಾಪಕವಾದ ಹೆಸರು ಪಡೆಯಲು ಜನಪದಕಲಾವಿದರಿಗೆ ಸಾಧ್ಯವಿಲ್ಲ. ಅವರಲ್ಲಿ ಎಂತಹ ಪ್ರತಿಭಾವಂತನ ಹೆಸರು ಕೂಡ ಸುತ್ತಲೂ ಹತ್ತು ಹರದಾರಿ ದಾಟಿ ಹೋಗದು. ಸುತ್ತ ಹತ್ತು ಹಳ್ಳಿಗೆ, ಸುತ್ತ ನಾಲ್ಕು ಹರದಾರಿಗೆ, ಬಹಳವೆಂದರೆ ಅಪರೂಪಕ್ಕೆ ಸುತ್ತ ಹತ್ತು ಹರದಾರಿಗೆ – ಪ್ರಸಿದ್ಧಿ ಪಡೆಯುವ ಮಾತನಾಡುವುದನ್ನು ನಾವು ಕೇಳುತ್ತೇವೆ. ಏನೆಂದರೂ ಇದು ಸ್ಥಳೀಯ ಪ್ರಖ್ಯಾತಿ ಎಂಬುದು ಸ್ಪಷ್ಟ. ಹೀಗೆ ಕೀರ್ತಿ ಎಂಬ ಖ್ಯಾತಿ ಅವರಿಗೆ ಲಭಿಸದು. ಜೊತೆಗೆ ಜನಪದ ಸಾಹಿತ್ಯವೆಲ್ಲ ಅನಾಮಧೇಯವಾಗಿದೆ. ಇತ್ತೀಚೆಗೆ ಗಂಡುಮಕ್ಕಳು ಸೃಷ್ಟಿಸಿದ ಕೆಲವು ಪ್ರಕಾರಗಳಿಗೆ ಕವಿಯ ಹೆಸರು ಹಾಕಿಕೊಳ್ಳುತ್ತಿದ್ದರೂ ಒಟ್ಟಾರೆಯಾಗಿ ಹೆಣ್ಣುಮಕ್ಕಳು ಸೃಷ್ಟಿಸಿದ ಮತ್ತು ಉಳಿದೆಲ್ಲ ಜನಪದ ಪ್ರಕಾರಗಳು – ಕಥೆ, ಗಾದೆ, ಒಗಟು, ಒಡಪು – ಎಲ್ಲವೂ ಅನಾಮಧೇಯವಾಗಿದ್ದು, ಕೀರ್ತಿ ಎಂಬ ಲಾಭವು ದೂರವೇ ಉಳಿಯುತ್ತದೆ. ಪಂಪನಂತಹ ಕವಿಯೂ ‘ಪೂಜೆ ನೆಗೞ್ತಿ ಲಾಭಂ’ ಎಂಬ ಪ್ರಯೋಜನಗಳಿಗೆ ಮಾರುಹೋಗಿರುವುದನ್ನು ಕೇಳುತ್ತೇವೆ. ಜನಪದರು ತಮ್ಮಲ್ಲಿಯ ಪ್ರತಿಭಾವಂತರನ್ನು ಮರ್ಯಾದೆಯಿಂದ ಕಾಣುತ್ತಾರೆ. ಕಲಾವಿದರೂ ಸಹಜವಾಗಿ ಮರ್ಯಾದೆ ಪಡೆಯುವ ಮನೋಧರ್ಮಕ್ಕೆ ಒಗ್ಗಿ ಹೋಗಿರುತ್ತಾರೆ. ಇದು ಪಂಪನ ‘ಪೂಜೆ’ ಎಂಬ ಮಾತಿಗೆ ಸಮಾನವಾದುದು.

ಜನಪದ ಕಾವ್ಯ ಕ್ಷೇತ್ರದಲ್ಲಿ ಹಾಡು ಕಲಿಸಿದವನೇ ಗುರು. ಇವರನ್ನೇ ಇಲ್ಲಿ ಕವಿಯ ಸಮನಾಗಿ ಕಾಣಲಾಗುತ್ತದೆ. ಕಾರಣ ಇಂತಹ ಗುರುವನ್ನು ಪ್ರತಿ ಹಾಡುಗಾರಿಕೆಯ ಪ್ರಾರಂಭದಲ್ಲಿ ನೆನೆಯುವುದನ್ನು ಕಾಣುತ್ತೇವೆ. ಇದನ್ನೇ ಶಾಶ್ವತ ‘ಪೂಜೆ’ ಮತ್ತು ‘ನೆಗೞ್ತಿೆ’ ಎಂದು ಭಾವಿಸಬೇಕು. ಹಾಡು ಕಲಿಸಿದ ಗುರು ಎದುರಿಗೆ ಇಲ್ಲದಿದ್ದರೂ ಶಿಷ್ಯನಾದವನು ನಿರಂತರವಾಗಿ ಅವನನ್ನು ನೆನೆಯುತ್ತ ಹೋದರೆ, ಒಬ್ಬ ಜನಪದ ಹಿರಿಯನಿಗೆ ಇದಕ್ಕಿಂತ ಬೇರೆ ಸಂತೋಷ ಇರಲಾರದು; ಇದಕ್ಕಿಂತ ಬೇರೆ ಕೀರ್ತಿ ಇರಲಾರದು. ‘ಜನಪದ ಹಾಲುಮತ ಮಹಾಕಾವ್ಯ’ದಲ್ಲಿ ತನಗೆ ಹಾಡನ್ನು ಕಲಿಸಿದ ಸಾಯಿಬಣ್ಣ ಎಂಬುವವನನ್ನು ಹಾಡುಗಾರ ಸಿದ್ದಪ್ಪನು ತನ್ನ ಜೀವಮಾನವಿಡೀ ಹಾಡಿನ ಮೊದಲಿಗೆ ನೆನೆಯುತ್ತ ಬಂದಿರುವನು. ಆ ನುಡಿ ಮುದ್ರಿತ ಪುಸ್ತಕದಲ್ಲೂ ಉಲ್ಲೇಖವಾಗಿದೆ:

ಹಾಡ ಕಲಿಸಿದ ಹರನಿನ್ನ ಹಾಡೇನ ಓದ ಕಲಿಸಿದ ಗುರುವಿನ
ಓದ ಕಲಿಸಿದ ಗುರುವಿನ ಧರ್ಮುರ್ಯಾ ಸಂದಿಗೊಮ್ಮಿ ನೆನದೇವ
ನಮಗೊಂದು ಹಾಡಿನ ವರವ ಕೊಟ್ಟಾರ ನಿಮಗೊಂದು ಮಲ್ಲಿಗಿ ಸರವಯ್ಯ
ನಿಮಗೊಂದು ಮಲ್ಲಿಗಿ ಸರವೋ ಸಾಯಿಬಣ್ಣ ಸಭಾದೊಳಗೆ ಕೊಂಡಾಡೇವ
(ಜನಪದ ಹಾಲುಮತ ಮಹಾಕಾವ್ಯ, ಪು.)

ಹೆಣ್ಣುಮಕ್ಕಳ ಹೆಸರು ಇನ್ನೊಬ್ಬರ ಬಾಯಿಂದ ಬರಬಾರದೆಂಬ ಅಭಿಪ್ರಾಯ ನಮ್ಮದು. ಕಾರಣ ಅವರ ಸೃಷ್ಟಿಗಳಂತೂ ಅನಾಮಧೇಯವಾಗಿವೆ. ಇತ್ತೀಚೆಗೆ ಕೆಲ ಗಂಡಸರ ಹಾಡಿನ ಪ್ರಕಾರಗಳಲ್ಲಿ ಕೊನೆಯಲ್ಲಿ ಕವಿಯ ಹೆಸರನ್ನು ಕಾಣಬಹುದು. ಆದರೆ ಕೀರ್ತಿಗಾಗಿಯೇ ಹಾಗೆ ಮಾಡಿದರೆಂದು ಹೇಳಲಿಕ್ಕಾಗದು. ಒಂದು ವೇಳೆ ಅವರಿಗೆ ಕೀರ್ತಿಯ ಆಸೆಯಿದ್ದಿದ್ದರೆ ಎಷ್ಟೋ ಜನ ಕವಿಗಳು ಕಾವ್ಯದ ಕೊನೆಯಲ್ಲಿ ಸಂಗಡಿಗರ ಹೆಸರನ್ನು ಉಲ್ಲೇಖಿಸುತ್ತಿರಲಿಲ್ಲ. ಕೆಲವರಂತೂ ಜೊತೆ ಹಾಡುಗಾರರ ಹೆಸರನ್ನೇ ಮೊದಲು ಬರುವಂತೆ ಉಲ್ಲೇಖಿಸಿದ್ದುಂಟು.

ಇಂಗಳಗಿ ಬಡೇಸಾಹೇಬ ಪೀರಾಗ ಮಾಡರಿ ನೆಪ್ಪ
ಕೈ ಮುಗದು ಅನ್ನರಿ ತಪ್ಪ ತಪ್ಪ
ಮಲ್ಲಹಸನರು ಹಾಡತಾರ ನಿವ್ವಳಅಕ್ಷರ ಜವಳ
ಸುರಸಿದಂಗ ಹವಳಜಾತ ಮುತ್ತ
ಫಕೀರಣ್ಣ – ಖಾಸೀಮನ ಸರಸವಾಯಿತು ಜತ್ತ (ಹರದೇಶಿ ನಾಗೇಶಿ, ಪು.೯)

‘ಮಲ್ಲಹಸನ’ ಎಂಬುದು ಬೀಬೀ ಇಂಗಳಗಿಯ ಕವಿ ಹಸನಸಾಹೇಬನ ಅಂಕಿತವಾಗಿದೆ. ಇಲ್ಲಿ ತನ್ನ ಸಂಗಡಿಗ ಮಲ್ಲನ ಹೆಸರನ್ನೇ ಮೊದಲು ಹಾಕಿರುವುದನ್ನು ಗಮನಿಸಬಹುದು.

ಧನಲಾಭಮರ್ಯಾದೆ :

ಇನ್ನು ಧನದ ಲಾಭದ ವಿಚಾರದಲ್ಲಿ ಇಂತಹದೆ ಪೂಜೆಯ(ಗೌರವದ)ಭಾವನೆಯೇ ಜನಪದರಲ್ಲಿದೆ. ಅರಸರೂ ಶ್ರೀಮಂತರೂ ಯಾರೂ ಈ ಕಲಾವಿದರನ್ನು ಪೋಷಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಬದುಕಿಗೆ ಸಾಕಾಗುವ ಲಾಭ ಎನ್ನುವಷ್ಟು ಧನ ಇವರಿಗೆ ದೊರೆಯುವುದು ಕಷ್ಟ. ಜನಪದದ ಯಾವುದೇ ಬಗೆಯ ಕಲೆಗಳು ಹವ್ಯಾಸಿ ಸ್ವರೂಪದವು ಗಳಾಗಿವೆ. ಆದರೆ ಅನೇಕ ಜನ ಕಲಾವಿದರು ಕವಿಗಳು ತಮ್ಮ ಕಲೆಗಾರಿಕೆಯನ್ನು ವೃತ್ತಿಯನ್ನಾಗಿಸಿ ಕೊಂಡು ಬದುಕನ್ನು ದುಸ್ತರ ಮಾಡಿಕೊಂಡಿರುವುದನ್ನು ಕಾಣುತ್ತೇವೆ. ತಮ್ಮ ಬದುಕಿನ ಮುಖ್ಯ ಉದ್ಯೋಗದ ಜೊತೆಗೆ, ಅಥವಾ ನಡುವೆ ಬಿಡುವು ಇದ್ದಾಗ, ಜನಪದ ಕಲೆಗಳು ಪ್ರದರ್ಶನ ಗೊಳ್ಳುವ ಕಾಲ. ಆದರೆ ಗೊಂಬೆಯಾಟ, ಗೀಗೀ ಮೇಳದಂತಹ ಕಲಾಪ್ರಕಾರಗಳ ಕಲಾವಿದರು ಕಲೆಯನ್ನೇ ಆಶ್ರಯಿಸಿ ದರಿದ್ರತನ ಸಂಪಾದಿಸಿದುದನ್ನು ಕಾಣುತ್ತೇವೆ.

ಜನಪಕಾವ್ಯವಂತೂ ನಮ್ಮ ಬದುಕಿನೊಂದಿಗೆ ಅನಿವಾರ್ಯವಾದ ಅಂಗವಾಗಿ ಬೆರೆತು ಕೊಂಡು ಬೆಳೆದು ಬಂದಿರುವಂತಹದು. ಮದುವೆಯಲ್ಲಿ ಹಾಡಿಲ್ಲದೆ ಎಣ್ಣೆ ಹಚ್ಚರು, ಬೀಗರ ಕರೆಯರು. ಹಾಡಿಲ್ಲದೆ ಜೋಗುಳವಿಲ್ಲ, ಶುಭಕಾರ್ಯವಿಲ್ಲ. ಹೀಗಿರುವುದರಿಂದ ಹಣದ ಮೂಲ ಉದ್ದೇಶವಂತೂ ಇಲ್ಲಿ ಕಾಣಿಸದು. ಹಾಡುಗಾರರೂ ಕಾರ್ಯಕ್ರಮಗಳಲ್ಲಿ ಆಮಂತ್ರಿ ತರಾಗಿರುತ್ತಾರೆ. ಅವರು ಸಲ್ಲಿಸಿದ ಸೇವೆಗಾಗಿ ಮರ್ಯಾದೆಯಿಂದ ಕಾಣಲು, ಅವರಿಗೆ ಸೀರೆ ಕುಪ್ಪಸ ಮಾಡುವುದು, ದಕ್ಷಿಣೆ ಕೊಡುವುದು ಮುಂತಾದವುಗಳನ್ನು ಮರ್ಯಾದೆಯಾಗಿ, ಸಾಂಪ್ರದಾಯವಾಗಿ ಸ್ವೀಕರಿಸಿದ ಮನೋಭಾವ ನಮಗೆ ಎದ್ದು ಕಾಣುತ್ತದೆಯೇ ಹೊರತಾಗಿ ಹಾಡಿದ್ದಕ್ಕೆ ಬರುತ್ತಿರುವ ಲಾಭ ಎನ್ನುವ ಮನೋಭಾವ ಅಲ್ಲಿ ಕಾಣದು.

ಹಾಡಿದವ್ವಗ ಸೀರಿ ಸೋ ಅಂದವ್ವಗ ಕುಬಸ
ಕೇಳಬಂದವರಿಗೆ ಬಿಳಿಯೆಲಿಯ (ಜೀ.ಜೋ...೬೮)

ಈ ನುಡಿ ಅಂತಹ ಮನೋಭಾವಕ್ಕೆ ಒಂದು ಸಾಕ್ಷಿಯಾಗಿದೆ. ಆದರೆ ಇತ್ತೀಚೆಗೆ ಹಾಡುವುದನ್ನೇ ಉದ್ಯೋಗವಾಗಿಸಿಕೊಂಡ ಕೆಲವು ಪ್ರಕಾರಗಳ ಹಾಡುಗಾರರು ಹಣದ ಆಮಿಷಕ್ಕೆ ಬಲಿ ಬೀಳುತ್ತಿರುವುದು ಕಂಡುಬರುತ್ತಿದೆ. ಆದರೆ ಜನಪದ ಕಾವ್ಯದ ಮೂಲ ಉದ್ದೇಶಗಳಲ್ಲಿ ಅದು ಖಂಡಿತವಾಗಿಯೂ ಕಾಣದ ಅಂಶ. ಗೀಗೀ ಮೇಳದವರನ್ನು ಈಗಲೂ ಜಾತ್ರೆಗಳಲ್ಲಿ ಕರೆಯಿಸುವ ರೂಢಿಯಿದೆ. ಆಗ ಅವರಿಗೆ ವೀಳ್ಯ ಕೊಟ್ಟು ಕರೆಯಿಸುತ್ತಾರೆ ವಿನಃ ಇಂತಿಷ್ಟು ಹಣಕೊಡುವುದಾಗಿ ಮಾತನಾಡುವುದಿಲ್ಲ. ಆದರೆ ಈ ವೌಲ್ಯ ಈಗ ಬದಲಾಗ ಬೇಕಾಗಿದೆ. ಹಿಂದೆ ಹೇಳಿದಂತೆ – ಜನಪದ ಕಲೆಗಳನ್ನು ಹವ್ಯಾಸಿ ಕಲೆಗಳಾಗಿ ಬಳಕೆಯಲ್ಲಿಟ್ಟು ಕೊಂಡರೆ ಧನದ ಲಾಭದ ಪ್ರಶ್ನೆಯಿರುತ್ತಿರಲಿಲ್ಲ. ಆದರೆ ಬಹಳಷ್ಟು ಜನ ಕಲಾವಿದರು ಯಾವುದಾದರೂ ಒಂದು ಕಲೆಯನ್ನು ಅವಲಂಬಿಸಿದ್ದರೆ ಜನಪದರು ಅವರಿಗೆ ಹಣವನ್ನು ಗೌರವಧನವೆಂದು ಕೊಡುವ ಪದ್ಧತಿಯನ್ನು ಹಾಕಿಕೊಳ್ಳಬೇಕು. ಕಾರ್ಯಕ್ರಮದ ಕೊನೆಗೆ ಹಾಡುಗಾರರಿಗೆ ಹಣ ಕೊಡುವುದನ್ನು ಖುಸಿಕೊಡುವುದು ಎನ್ನುತ್ತಾರೆ. ಅಂದರೆ ತಮಗೆ ಆನಂದವನ್ನುಂಟು ಮಾಡಿದವರಿಗೆ ಕೊಡುವ ಪ್ರತಿಮರ್ಯಾದೆಯಿದು. ಇನ್ನಿತರ ಸಂಪ್ರದಾಯ ಹಾಡುಗಾರರ ಬಗ್ಗೆಯೂ ಇದನ್ನೇ ಹೇಳಬಹುದಾಗಿದೆ.

ಕಾಂತಾಸಮ್ಮಿತ ಉಪದೇಶ :

ಮಮ್ಮಟನು ಹೇಳುವ ಕಾಂತಾಸಮ್ಮಿತ ಕಾವ್ಯಪ್ರಯೋಜನಗಳಲ್ಲಿ ಬಹುಮಹತ್ವದ ಸಂಗತಿಯಾಗಿದೆ. ಕಾವ್ಯವು ಕಾಂತೆಯಂತೆ ಮನಕ್ಕೆ ಹಿತವಾಗಿ ಬೋಧಿಸುತ್ತದೆಂಬುದು ಇದರ ಅರ್ಥ. ನೇರವಾಗಿ ಜನಪದ ಕಾವ್ಯ (ಸಾಹಿತ್ಯ) ನೀತಿಬೋಧೆಯನ್ನು ಮಾಡಿ ಜನರಿಗೆ ಸುಮಾರ್ಗದಲ್ಲಿ ನಡೆಯುವಂತೆ ಮಾಡುವ ಧೋರಣೆಯಂತೂ ನಾವು ಜನಪದ ಸಾಹಿತ್ಯದ ತುಂಬಾ ಕಾಣುತ್ತೇವೆ. ಅಕ್ಷರಜ್ಞಾನ ಇಲ್ಲದಾಗಿನಿಂದಲೂ ಆಯಾ ಭಾಷೆಯ ವೌಖಿಕ ಸಾಹಿತ್ಯವೇ ಬದುಕಿಗೆ ಶಿಕ್ಷಣವನ್ನು ಕೊಡುವ ಮಹತ್ತರ ಕೆಲಸ ಮಾಡಿದೆ. ಮುಖ್ಯವಾಗಿ ಕಥೆ ಮತ್ತು ಗಾದೆಗಳು ಬದುಕಿಗೆ ದಾರಿದೀಪಗಳನ್ನು ಒದಗಿಸುವ ಮಹತ್ವದ ಪ್ರಕಾರಗಳು. ಸಾಮಾನ್ಯ ನೀತಿಬೋಧೆಯ ಜೊತೆಗೆ ಜನಪದಕಾವ್ಯ ಸಹೃದಯರ ಮೇಲೆ ಪರಿಣಾಮ ಬೀರುವ ಇನ್ನೊಂದು ಬಗೆಯನ್ನು ಅವರು ಹೇಳುತ್ತಾರೆ. ಅದನ್ನು –

ಕವಿ ಬಾಳಗೋಪಾಳನ ಹಾಡು
ಹೊಡದಂಗ ಮುಂಗಾರಿ ಸಿಡ್ಲ (ಬಾ.ಗೋ.ಲಾ.೧೨೮)

ಎಂಬ ಮಾತಿನಲ್ಲಿ ಕವಿಯು ಕಾವ್ಯದ ತೀವ್ರವಾದ ಪರಿಣಾಮದ ಬಗ್ಗೆ ಮಾತನಾಡಿದ್ದಾನೆ. ಅದು ‘ಆಬಾಲವೃದ್ಧರ ಮೇಲೆ ಸಿಡಿಲೆರಗಿದಂತೆರಗಿ ಅವರಲ್ಲಿ ಬೆಳಕು ತುಂಬುವ ಕೆಲಸ ಮಾಡುತ್ತದೆ’ – ಎಂಬ ಮಾತು. ಶಿಷ್ಟರು ಕಂಡರಿಯದ ಒಂದು ಕಾವ್ಯಪ್ರಯೋಜನವನ್ನು ಜನಪದ ಕವಿಗಳು ಕಂಡುಕೊಂಡ ಒಂದು ನವೀನ ವಿಚಾರವಾಗಿದೆ.

ಎಲ್ಲ ಕಾವ್ಯವೂ ಕಾಂತಾಸಮ್ಮಿತದಂತೆ ಉಪದೇಶ ಮಾಡಲಿಕ್ಕಿಲ್ಲ. ಎಲ್ಲರೂ ಕಾಂತಾಸಮ್ಮಿತ ದಿಂದಲೇ ಮನಸ್ಸು ಬದಲಾಯಿಸುವರೆಂದು ಹೇಳಲೂ ಬರುವುದಿಲ್ಲ. ಅಂಥವರ ಪಾಲಿಗೆ ಕಾವ್ಯ ಅದ್ಭುತ ಅಸ್ತ್ರದಂತೆ ಕೆಲಸ ಮಾಡುವಂತಹದಾಗಿರಬೇಕಾಗುತ್ತದೆ. ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಎಂಬ ಬಂಡಾಯ ಸಾಹಿತ್ಯದ ಆಶಯ ಘೋಷಣೆ ಯನ್ನು ಗಮನಿಸಿದರೆ, ಈ ಕೆಲಸವನ್ನು ಜನಪದಕವಿಗಳು ಎಂದೋ ಕಾರ್ಯರೂಪಕ್ಕೆ ತಂದವರು ಎಂಬುದು ಗಮನಾರ್ಹ. ಈ ಮಾತು ಲಾಂಜಿನಸ್‌ನ ಸಬ್ಲೈಮ್ (ಭವ್ಯತಾ) ಪರಿಕಲ್ಪನೆಗೆ ಹತ್ತಿರವಾಗಿದೆ.

ವ್ಯವಹಾರ ಜ್ಞಾನ :

ಮಮ್ಮಟನ ಪ್ರಕಾರ ಕಾವ್ಯದಿಂದ ದೊರೆಯುವ ವ್ಯವಹಾರಜ್ಞಾನವು ಒಂದು ಮಹತ್ವದ ಲಾಭ. ಶಿಷ್ಟಕಾವ್ಯದ ಅಭ್ಯಾಸದಿಂದ ಬಹುದುರ್ಲಭವಾಗಿ ದೊರೆಯುವ ಲಾಭವಿದು. ಬದುಕಿಗೆ ದೊರೆಯುವ ಮಾರ್ಗದರ್ಶನವೇ ಈ ಮಾತು. ಈ ಸಂಬಂಧದಲ್ಲಿ ಜನಪದ ಕಲಾಲೋಕದಿಂದ ಸಿಗುವ ಬದುಕಿನ ಶಿಕ್ಷಣ ಬಹುದೊಡ್ಡದು. ಇಂದಿಗೂ ಗ್ರಾಮಾಂತರದ ಜನರಿಗೆ – ಒಂದು ಕಥೆ, ಗಾದೆ – ಮುಖ್ಯವಾಗಿ ಅವರ ಬದುಕಿನ ವ್ಯವಹಾರಕ್ಕೆ ಅನುಕೂಲ ವಾಗುತ್ತದೆ. ಅನೇಕ ಸಲ ನ್ಯಾಯನಿರ್ಣಯಗಳಲ್ಲೂ ಕಥೆ – ದೃಷ್ಟಾಂತ, ಗಾದೆಗಳ ಅನುಭವ ಗಳು ನಿರ್ಣಾಯಕಗಳಾಗಿ ಕೆಲಸಮಾಡುತ್ತವೆ. ಕಾವ್ಯಕ್ಷೇತ್ರವಂತೂ ಇದಕ್ಕೆ ಹೊರತಾಗಿಲ್ಲ. ಪರ್ಯಾಯವಾಗಿ ನೀತಿಯನ್ನೇ ಅವು ಬೋಧಿಸುತ್ತವೆ.

ಪರಮಾನಂದ :

ಕೊನೆಗೆ ಕಾವ್ಯದಿಂದ ದೊರಕುವ ಪರಮಾನಂದ(ಸಹಜವಾದ ಲೌಕಿಕ ಆನಂದ, ಅದು ‘ಕಲೆಗಾಗಿ ಕಲೆ’ ಎಂಬ ‘ಕೇವಲ ಆನಂದ’ ವಲ್ಲ) – ಅದು ಶಿಷ್ಟಕಾವ್ಯಕ್ಕೂ ಅಷ್ಟೇ, ಜನಪದಕಾವ್ಯ – ಕಲೆಗೂ ಅಷ್ಟೆ. ಹಾಡು ಕುಣಿತ ನೃತ್ಯ ವೇಷಭೂಷಣ ನಾಟಕ ಚಿತ್ರಕಲೆ ಎಲ್ಲವೂ ಆನಂದವನ್ನೀ ಯುವ ಅಂಶಗಳೇ. ಅಷ್ಟೇ ಅಲ್ಲ ಅವು ಪುಣ್ಯದ ಕೆಲಸಗಳೆಂಬ ಭಾವನೆಯು ಜನಪದರಲ್ಲಿ ಕಾಣುತ್ತೇವೆ. ಇದು ಕಾವ್ಯದಿಂದ ಸಹೃದಯನ ಮನಸ್ಸಿನ ಮೇಲೆ ಆಗುವ ಪರಿಣಾಮವಾಗಿದೆ.

* * *