ಕನ್ನಡ ಸಾಹಿತ್ಯದ ಇತಿಹಾಸದಲ್ಲಿಯೇ ವಚನಕಾರರು ಮೊದಲನೆಯದಾಗಿ ಕಾವ್ಯ, ಆ ಮೂಲಕ ಕಲೆಗಳು – ಓದುಗ, ಕೇಳುಗ, ನೋಡುಗ ಇವರ ವೈಯಕ್ತಿಕ ವ್ಯಕ್ತಿತ್ವದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಪ್ರಸ್ತಾಪಿಸುತ್ತಾರೆ. ಅವರಿಗೆ ಸಹೃದಯನ ‘ದೇಹಗುಣ’ ಮತ್ತು ‘ಮನಸ್ಸಿನ ಗುಣ’ಗಳ ಮೇಲೆ ಕಾವ್ಯಬೀರುವ ಪರಿಣಾಮಗಳು ಮುಖ್ಯವೆನಿಸುತ್ತವೆ. ಮಾನವನ ವ್ಯಕ್ತಿತ್ವ ಇಬ್ಬಗೆಯ ಗುಣಗಳಿಂದ ಕೂಡಿದೆ. ಒಂದು ‘ದೇಹಗುಣ’ ಇನ್ನೊಂದು ‘ಮನಸ್ಸಿನ ಗುಣ’. ಪಂಚೇಂದ್ರಿಯಗಳು ದೇಹಗುಣಗಳು. ಅರಿಷಡ್ವರ್ಗಗಳು (ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಇವು) ಮನಸ್ಸಿನ ಗುಣಗಳು. ಪ್ಲೇಟೋ ಕಲೆಗಳಿಗೆ ಹೆದರಿದ್ದು – ರುದ್ರನಾಟಕಗಳನ್ನು ನೋಡುತ್ತ ಮತ್ತು ಕೇಳುತ್ತ ಕುಳಿತ ಸಹೃದಯನ ಮನಸ್ಸಿನ ಮೇಲೆ ಅವು ಬೀರಬಹುದಾದ ಪರಿಣಾಮಗಳನ್ನು ಗಮನಿಸಿ. ದೃಢವಾದ ಆದರ್ಶರಾಜ್ಯದ ಕಲ್ಪನೆಯಲ್ಲಿ – ಈ ಕಲೆಗಳು ಮತ್ತು ಕಲಾವಿದರು ದೇಶದ ಯುವಕರ ಸಂಪೂರ್ಣ ವ್ಯಕ್ತಿತ್ವವನ್ನು ಹಾಳು ಮಾಡುತ್ತವೆಂಬ ಅಂಜಿಕೆಯಿಂದ. ಈ ಬಗೆಯ ಕಲೆಯ ಪರಿಣಾಮವನ್ನೇ ಕುರಿತು ಅರಿಸ್ಟಾಟಲ್ ‘ಕೆಥರ್ಸಿಸ್’ ಎನ್ನುವ ಪರಿಕಲ್ಪನೆಯನ್ನು ಗುರುತಿಸಿದ್ದು. ಮುಂದೆ ಕುಳಿತು ನೋಡುವ ಸಹೃದಯನ ಮನಸ್ಸಿನಲ್ಲಿಯ ಭಯ ಮತ್ತು ಅನುಕಂಪ ಭಾವಗಳನ್ನು ಉದ್ದೀಪನ ಗೊಳಿಸಿ, ಅವನ್ನು ಸಹೃದಯನ ವ್ಯಕ್ತಿತ್ವದಿಂದ ಹೊರಹಾಕಿ, ದೈಹಿಕವಾಗಿ ಮಾನಸಿಕವಾಗಿ ಅವರನ್ನು ಸದೃಢರನ್ನಾಗಿಸುತ್ತವೆ ಎನ್ನುತ್ತಾನೆ ಅರಿಸ್ಟಾಟಲ್. ಹೀಗೆ ಪ್ಲೇಟೋನ ‘ ಆದರ್ಶ ಸಿದ್ಧಾಂತ’, ಅರಿಸ್ಟಾಟಲನ ‘ಭಾವವಿರೇಚನ’, ಎಡ್ವರ್ಡ ಬುಲ್ಲೋ ಅವರ ‘ಮಾನಸಿಕ ದೂರ’, ಟಿ.ಎಸ್.ಎಲಿಯೆಟ್ ಅವರ ‘ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ’, ಲಾಂಜಿನಸ್ ಅವರ ‘ಭವ್ಯತಾ ಸಿದ್ಧಾಂತ’ – ಈ ಮುಂತಾದುವೆಲ್ಲ ಕಲೆಗಳು ಸಹೃದಯನ ವ್ಯಕ್ತಿತ್ವದ (ದೇಹ, ಮನಸ್ಸು) ಮೇಲೆ ಬೀರುವ ಪರಿಣಾಮವನ್ನೇ ಗಮನಿಸಿ ಸೃಷ್ಟಿಗೊಂಡ ಸಿದ್ಧಾಂತಗಳಾಗಿವೆ. ಇವುಗಳ ಜೊತೆ ಭಾರತೀಯರ ‘ರಸ’ಸಿದ್ಧಾಂತವನ್ನೂ ಸೇರಿಸಬಹುದಾಗಿದೆ.

ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮೊದಲ ಬಾರಿಗೆ ‘ಕಲೆಗಾಗಿ ಕಲೆ’ ಮತ್ತು ‘ಬದುಕಿಗಾಗಿ ಕಲೆ’ ಎಂಬ ಸಿದ್ಧಾಂತಗಳಿಗೂ ಭಿನ್ನವಾದ, ಸಹೃದಯನ ವ್ಯಕ್ತಿತ್ವದ ಮೇಲೆ ಕಾವ್ಯ ಬೀರುವ – ದೈಹಿಕ ಮತ್ತು ಮಾನಸಿಕ – ಪರಿಣಾಮಗಳ ಬಗ್ಗೆ ಆಲೋಚನೆ ಮಾಡಿದವರು ವಚನಕಾರರು ಮಾತ್ರ. ಅವರು ಆನಂದದ ಬಗ್ಗೆ ಪ್ರಸ್ತಾಪ ಮಾಡಿದರೂ ಅದನ್ನು ಕಲೆಬೀರುವ ಪರಿಣಾಮದ ಸಹಜ ಗುಣವಾಗಿ ಗ್ರಹಿಸುತ್ತಾರೆಯೇ ಹೊರತಾಗಿ ಸಂಸ್ಕೃತ ಅಲಂಕಾರಿಕರಂತೆ ಕೇವಲ ‘ಕಲೆಗಾಗಿ ಕಲೆ’ ಎಂಬ ಸಿದ್ಧಾಂತದ ಹಿನ್ನೆಲೆಯಲ್ಲಿ ಗ್ರಹಿಸುವುದಿಲ್ಲ. ಬಸವಣ್ಣನವರು ಒಂದಡೆ ಹೀಗೆ ಹೇಳುತ್ತಾರೆ:

ಹಾಲತೊರೆಗೆ ಬೆಲ್ಲದ ಕೆಸರು ಸಕ್ಕರೆಯ ಮಳಲು
ತವರಾಜದ ನೊರೆ ತೆರೆಯಂತೆ ಆದ್ಯರ ವಚನ (೨೯೧)

ಎಂದು ವಚನಾನಂದದ ಕಲಾಸೌಂದರ್ಯದ ಸ್ಥಿತಿಯನ್ನು ಹೇಳುತ್ತಾರೆ. ಅದರ ಜೊತೆಗೆ ಇನ್ನೊಂದು ಗುಣವನ್ನು ಗುರುತಿಸುವಲ್ಲಿ ಅವರು ಮರೆಯುವುದಿಲ್ಲ.

ಆದ್ಯರ ವಚನ ಪರುಷ ಕಂಡಣ್ಣಾ
……………………………..
ಅಧರಕ್ಕೆ ಕಹಿ, ಉದರಕ್ಕೆ ಸಿಹಿ
ಕೂಡಲಸಂಗನ ಶರಣರ ವಚನ ಬೇವಸವಿದಂತೆ. (೧೭೧)

ಇಲ್ಲಿ ಉಲ್ಲೇಖಗೊಂಡ ‘ಪರುಷ’ ಎಂಬ ಪದವನ್ನು ಗಮನಿಸಬೇಕು. ಕನ್ನಡ ಕವಿಗಳ ಪಾರಂಪರಿಕ ವಿಚಾರದಂತೆ ಈ ಮಾತು ಬಳಕೆಯಾದರೂ ‘ವಚನ’ ಎನ್ನುವ ಪರುಷದ ಗುಣ ಎಂತಹದೆಂದರೆ – ಅದು ನೇರವಾಗಿ ಸಹೃದಯನ ದೇಹದ ಗುಣದ ಮೇಲೆ ಪರಿಣಾಮ ಬೀರುತ್ತದೆ. ‘ಹಾಲತೊರೆ, ಸಕ್ಕರೆ ಮಳಲು, ತವರಾಜದ ನೊರೆ ತೆರೆ’ ಯಂತಹ ಅಂದರೆ ಸಿಹಿಯಾದ ಮಾತುಗಳಿಂದ ಉಂಟಾಗುವ ಆನಂದವನ್ನು ‘ಕೇವಲ ಆನಂದದ ಪ್ರತೀಕ’ ಎಂಬಂತೆ ಅಲೌಕಿಕವಾಗಗೊಡದೆ, ಅದರ ಸಂಬಂಧವನ್ನು ಎಳೆತಂದು ಸಹಜವಾದ ಕಾವ್ಯಾನಂದಕ್ಕೆ ಜೋಡಿಸಿದ್ದಾರೆ. ಕಾವ್ಯದ ಪರಿಣಾಮವನ್ನು ತೀರ ಸರಳವಾಗಿ ಸ್ಪಷ್ಟವಾಗಿ ಹೇಳಿದವರಲ್ಲಿ ಬಸವಣ್ಣನವರೂ ಒಬ್ಬರು. ಕಾವ್ಯ ‘ಪರುಷ’ದಂತೆ, ನಮ್ಮ ಬದುಕಿಗೆ ಬೇಕಾದುದು ಎಲ್ಲವೂ ಅಲ್ಲಿದೆ. ಅದರ ಕಣಕಣವೂ ತುಟಿಗೆ ಕಹಿ, ಆದರೆ ದೇಹದ ಸ್ವಾಸ್ಥ್ಯಕ್ಕೆ ಸಿಹಿಎನ್ನುವುದು ಬಸವಣ್ಣನವರ ತೀರ ನವೀನ ವಿಚಾರವೆನಿಸುತ್ತದೆ. ಅದು ಕೇವಲ ಬೆಲ್ಲದ ಕಣ್ಣಿ, ಸಕ್ಕರೆಯ ಉಂಡಿ ಮಾತ್ರವಲ್ಲ, ಅದರಲ್ಲಿ ನಮ್ಮ ಸ್ವಾಸ್ಥ್ಯವನ್ನು ಕಾಪಾಡುವ ಸಿದ್ಧೌಷಧಿ ಗುಣಗಳಿವೆ ಎಂಬುದು ಗಮನಾರ್ಹ ಮಾತು. ಅಧರಕ್ಕೆ ಕಹಿ ಉದರಕ್ಕೆ ಸಿಹಿ...ವಚನ ಬೇವ ಸವಿದಂತೆಎನ್ನುವ ಮಾತಿನಲ್ಲಿ – ಕಾವ್ಯವು ಔಷಧಿಯಂತೆ ದೇಹದ ಸ್ವಾಸ್ಥ್ಯವನ್ನು ಕಾಪಾಡಿ, ದೇಹ – ಮನಸ್ಸುಗಳನ್ನು ಪ್ರಸನ್ನವಾಗಿಡುತ್ತದೆಂಬ ಮಾತು – ಅರಿಸ್ಟಾಟಲ್‌ನ ಕೆಥಾರ್ಸಿಸ್ ಪರಿಕಲ್ಪನೆಯೊಂದಿಗೆ ಸಂಬಂಧ ಕಲ್ಪಿಸಲು ದಾರಿಮಾಡಿಕೊಡುತ್ತದೆ. ರುದ್ರನಾಟಕವೂ ಔಷಧಿಯ ಗುಣದಂತೆ ಕೆಲಸ ಮಾಡಿ, ಮನಸ್ಸನ್ನು ಹಗುರ ಮಾಡುವ ಮಾತನಾಡುತ್ತಾನೆ ಅರಿಸ್ಟಾಟಲ್. ಇದು ಬಸವಣ್ಣನವರು ಕಾವ್ಯದ ಪರಿಣಾಮವನ್ನು ಗ್ರಹಿಸಿದ ಫಲ ಎನ್ನಬೇಕು.

ಬಸವಣ್ಣನವರ ಈ ಧ್ವನಿಯನ್ನು ಚೆನ್ನಬಸವಣ್ಣನವರು ತಮ್ಮ ಒಂದು ವಚನದಲ್ಲಿ ಒಂದೊಂದೇ ಒಂದೊಂದೇಯಾಗಿ ತೆರೆದಿಡುತ್ತಾರೆ.

ನಮ್ಮ ಪುರಾತನರ ವಚನವೆ ತಾಯಿತಂದೆ ಎಂದರಿಯರು
ನಮ್ಮ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿಸಿತ್ತು
ನಮ್ಮ ಆದ್ಯರ ವಚನ ಮದಮತ್ಸರ್ಯಾದಿ ಅರಿಷಡ್ವರ್ಗ ಸಪ್ತವ್ಯಸನ ನಿವಾರಿಸಿತ್ತು
ನಮ್ಮ ಆದ್ಯರ ವಚನ ಪಂಚೇಂದ್ರಿಯ ದಶವಾಯುಗಳಿಚ್ಛೆಗೆ
ಹರಿದು ಹಾರುವ ಮನವ ಸ್ವಸ್ಥವಾಗಿ ನಿಲಿಸಿತ್ತು
ನಮ್ಮ ಆದ್ಯರ ವಚನ ಅಂಗೇಂದ್ರಿಯಗಳ ಲಿಂಗೇಂದ್ರಿಯಂಗಳೆನಿಸಿತ್ತು (೧೨೯೪)

ಈ ವಚನದಲ್ಲಿ ಚನ್ನಬಸವಣ್ಣನವರು ಮಮ್ಮಟನಿಗಿಂತಲೂ ಒಂದು ಅಂಶವನ್ನು ತೀರ ಭಿನ್ನವಾಗಿ ಗುರುತಿಸುವುದನ್ನು ಕಾಣಬೇಕು. ಮಮ್ಮಟನು ಕಾವ್ಯದಿಂದ ಸಿಗುವುದು ‘ಕಾಂತಾಸಮ್ಮಿತ ಉಪದೇಶ’ ಎನ್ನುತ್ತಾರೆ. ‘‘ವಚನವೆ ತಾಯಿ – ತಂದೆ’’ ಎನ್ನುತ್ತಾರೆ ಚೆನ್ನಬಸವಣ್ಣ ನವರು. ಇಲ್ಲಿ ಕಲೆಯನ್ನು ಗೌರವಿಸುವ ಭಾವವನ್ನು ಕಾಣುತ್ತೇವೆ. ಅಂದರೆ ಕಾವ್ಯದಲ್ಲಿಯ ಹಿತೋಪದೇಶವನ್ನು ತಾಯಿ – ತಂದೆಯ ಮಾತುಗಳಂತೆ ಗೌರವಿಸುವ ಸ್ವೀಕರಿಸುವ ಅವಶ್ಯಕತೆಯನ್ನು ಚೆನ್ನಬಸವಣ್ಣನವರು ಒತ್ತಿ ಹೇಳುತ್ತಾರೆ.

ವಚನವು ದೇಹದ ಗುಣಗಳಾದ ಪಂಚೇಂದ್ರಿಯಗಳನ್ನು, ಮನದ ಗುಣಗಳಾದ ಅರಿಷಡ್ವರ್ಗಗಳನ್ನು – ನಿಯಂತ್ರಿಸಿ, ಮನುಷ್ಯನ ಜ್ಞಾನದ ಮಾರ್ಗವನ್ನು ತೆರೆಯುವ ಕೆಲಸ ಮಾಡುತ್ತದೆಂಬ ಮಾತು ಕಾವ್ಯಪರಿಣಾಮದ ಶ್ರೇಷ್ಠತೆಯನ್ನು ಸಾರುತ್ತದೆ. ಇಡೀ ಹರಿದು ಹೋಗುವ ದೈಹಿಕ ಮತ್ತು ಮಾನಸಿಕ ಚಂಚಲ ಗುಣಗಳನ್ನು ಹಿಡಿದು ನಿಲ್ಲಿಸಿ, ಜ್ಞಾನದ ನೆಲೆಯ ತೆರೆದು, ಬದುಕಲು ದಾರಿಮಾಡಿಕೊಡುವ ಮಾತು ಕಾವ್ಯದ ಪರಿಣಾಮಗಳಲ್ಲಿ ಶ್ರೇಷ್ಠವಾ ದುದು. ಅದಕ್ಕಾಗಿ ಕಾವ್ಯ ತಾಯಿ – ತಂದೆಗೆ ಸಮಾನವೆಂಬ ಮಾತು ಅರ್ಥಪೂರ್ಣವೆನಿಸುತ್ತದೆ.

ಚೆನ್ನಬಸವಣ್ಣನವರ ‘ದೇಹದ ಗುಣಗಳನ್ನು ನಿಯಂತ್ರಿಸುತ್ತದೆ’ ಎಂಬ ಮಾತಿಗೆ ಮೋಳಿಗೆ ಮಹಾದೇವಮ್ಮಳ ಅಯ್ಯ ನಿಮ್ಮಾದ್ಯರ ವಚನ ಕೇಳಿ/ಎನ್ನಂಗದ ಭಂಗ ಹಿಂಗಿತ್ತು ನೋಡಾ’ (೧೧೩೯) ಎಂಬ ಮಾತು ಸಮಾನವಾಗಿ ತೋರುತ್ತದೆ. ಚೆನ್ನಬಸವಣ್ಣನವರ – ‘ವಚನವು ಮನದ ಗುಣಗಳನ್ನು ನಿಯಂತ್ರಿಸುತ್ತದೆ’ ಎಂಬ ಮಾತಿಗೆ ಅಕ್ಕಮಹಾದೇವಿಯ ಹಾಡಿದರೇನು? ಕೇಳಿದರೇನು? ತನ್ನಲ್ಲುಳ್ಳ ಅವಗುಣವ ಬಿಡದನ್ನಕ್ಕ’(೧೮೭) ಎಂಬ ಮಾತು ಸಮಾನವಾಗಿದೆ. ‘ಅಂಗದ ಭಂಗ’ ಹಿಂಗುವುದು, ‘ಮನಸ್ಸಿನ ಅವಗುಣ’ವ ಕಳೆವುದು – ಎಂದರೆ ದೈಹಿಕ ಮತ್ತು ಮಾನಸಿಕ ಅನಾರೋಗ್ಯವನ್ನು ಹೊರದೂಡುವ ಕ್ರಿಯೆಯನ್ನೇ ಇಲ್ಲೂ (ಮೋಳಿಗೆ ಮಹಾದೇವಮ್ಮ, ಅಕ್ಕಮಹಾದೇವಿ, ಚನ್ನಬಸವಣ್ಣ) ಒತ್ತಿ ಹೇಳಲಾಗಿದೆ. ಹೀಗಾಗಿ ಈ ಮಾತುಗಳು ಕೂಡ ಬಸವಣ್ಣನವರ ಮಾತುಗಳಂತೆ ‘ಕೆಥಾರ್ಸಿಸ್’ ಪರಿಕಲ್ಪನೆಗೆ ಹೋಲುತ್ತವೆ.

ಸಿದ್ಧರಾಮನ ಅನುಭವ ವಚನಗಳ ಹಾಡಿ/ಸುಖದುಃಖಗಳಿಗಬೇದ್ಯವಾಗಿರಬೇಕು’ (೧೫೭೪) ಎಂಬ ಮಾತು, ಚೆನ್ನಬಸವಣ್ಣನವರ ಆದ್ಯರ ವಚನ ಜ್ಞಾನದ ನೆಲೆಯ ತೆಗೆದಿರಿ ಸಿತ್ತು’ (೧೨೯೪) ಎಂಬುದಕ್ಕೆ ಸಮಾನವಾಗಿದೆ. ಶರೀರ ಮತ್ತು ಮನದ ಅವಗುಣಗಳ್ಹೆ ಚ್ಚಾಗಿ ಕಡುದರ್ಪವೇರಿದ ಒಡಲೆಂಬ ಬಂಡಿಗೆ/ಮೃಡಶರಣರ ನುಡಿಗಡಣವೇ ಕಡೆಗೀಲು’ (೭೬೭) ಎನ್ನುತ್ತಾರೆ ಜೇಡರ ದಾಸಿಮಯ್ಯ. ಹೀಗೆ ಒಟ್ಟು ಕಾವ್ಯದ ಪರಿಣಾಮವೆಂದರೆ – ಅದರ ಸಂಪರ್ಕದಿಂದ, ಪಠಣದಿಂದ – ಮನುಷ್ಯನ ಅಂಗೇಂದ್ರಿಯ ಗುಣಗಳೆಲ್ಲ ದೂರಾಗಿ, ಲಿಂಗೇಂದ್ರಿಯ ಗುಣಗಳು ಆವರಿಸಿಕೊಳ್ಳುವ ಮಹತ್ತರ ಕ್ರಿಯೆ ಜರಗುತ್ತದೆ ಎಂದಂತಾಗುತ್ತದೆ. ಇದು ವಚನ ರಚನೆಯ ಧೋರಣೆಯಾಗಿತ್ತು ಎಂಬುದು ಆ ಕಾಲದ ಸಾಂಸ್ಕೃತಿಕ ಬದುಕಿನ ಅನನ್ಯ ಚಿಂತನೆಯಾಗಿ ಕಾಣುತ್ತದೆ.

ಹೀಗೆ ಸಂಪೂರ್ಣವಾಗಿ ಕಾವ್ಯಧೋರಣೆಯೇ ಬದಲಾಗಿ ಕಾಣುವ ಕನ್ನಡದ ಇನ್ನೊಂದು ಸಂದರ್ಭವೆಂದರೆ ದಲಿತ – ಬಂಡಾಯ ಸಾಹಿತ್ಯದ ನಿರ್ಮಿತಿಯ ಕಾಲದ್ದು. ‘ಬಂಡೆಗಳ ಮೇಲೆ ನಾವು ಚಿಗುರೊಡೆಯಬೇಕಾಗಿದೆ’ ಎಂಬ ಧೋರಣೆ ಆ ಸಾಹಿತ್ಯದ ಒಟ್ಟು ರಚನೆಯನ್ನು ಹಿಡಿದು ಆಳಿದೆ. ಸಾಂಪ್ರದಾಯಿಕ, ಪ್ರಗತಿವಿರೋಧಿ ಮನೋಧರ್ಮಕ್ಕೆ ಎದುರಾಗಿ ಸಾಹಿತ್ಯ ಸೃಷ್ಟಿಸಬೇಕೆಂಬ ಚಿಂತನೆ ಅಲ್ಲಿ ಪ್ರಮುಖವಾಗಿ ತೋರುತ್ತದೆ. ಹೀಗಾಗಿ ಬಂಡಾಯ ಕಾವ್ಯದ ಒಟ್ಟು ಧೋರಣೆ ಸಮಾಜಮುಖಿಯಾಗಿರುವುದನ್ನು ಕಾಣುತ್ತೇವೆ. ಪಾರಂಪರಿಕ ಕನ್ನಡ ಸಾಹಿತ್ಯವನ್ನು ಆಳಿದ ಸಂಸ್ಕೃತ ಅಲಂಕಾರಿಕರ ಸೌಂದರ್ಯದೃಷ್ಟಿಯನ್ನು ಹಿಂದೆ ಹಾಕಿ ‘ಜೀವನಕಾವ್ಯಮೀಮಾಂಸೆ’ಯ ಚಿಂತನೆಗಳು ಅಲ್ಲಿ ಒಡಮೂಡಿ ಬಂದಿರುವು ದನ್ನು ಕಾಣುತ್ತೇವೆ.

ಕನ್ನಡದ ನವ್ಯದ ಕಾಲಕ್ಕೆ ಇಂಗ್ಲೀಷ ಸಾಹಿತ್ಯದ ಪ್ರಭಾವದಿಂದಾಗಿ ಕೃತಿರಚನೆಯ ತಂತ್ರದಲ್ಲಿ ಬದಲಾವಣೆ ಕಾಣಿಸಿಕೊಂಡುದು ನಿಜ, ಆದರೆ ಅಲ್ಲೂ ಸೌಂದರ್ಯಶಾಸ್ತ್ರದ ಪರಿಯನ್ನು ಮೀರಲು ಆಗಿಲ್ಲ. ಬದುಕನ್ನು ವಾಸ್ತವ ದೃಷ್ಟಿಯಿಂದ ನೋಡಬೇಕೆಂಬ ಧೋರಣೆ ಕಾಣಿಸಿ ಕೊಂಡರೂ ಆದದ್ದು ಸಾಂಪ್ರದಾಯಿಕ ಮಾರ್ಗದಲ್ಲಿ ಅಲ್ಪ ಸುಧಾರಣೆ ಮಾತ್ರ. ಹೀಗೆ ಕನ್ನಡದ ಶರಣರ ವಚನ ರಚನೆಯ ಕಾಲ ಮತ್ತು ಬಂಡಾಯದ ಕಾಲದಲ್ಲಿ ಕನ್ನಡ ಸಾಹಿತ್ಯ ಸೃಷ್ಟಿಯ ಧೋರಣೆಯಲ್ಲಿ ಸಂಪೂರ್ಣ ಬದಲಾವಣೆಗಳನ್ನು ಕಾಣುತ್ತೇವೆ. ಬೇರೆ ಬೇರೆ ಕಾಲಮಾನದಲ್ಲಿ ಸಹಜವಾದ ಬದಲಾವಣೆಗಳಿಗೆ ಅವಕಾಶ ಇದ್ದೇ ಇದೆ. ಅದು ನಿಸರ್ಗದ ನಿಯಮ. ಈ ಎಲ್ಲ ಕಡೆ ದೃಷ್ಟಿಹಾಯಿಸಿ ಶಾಸ್ತ್ರಾಂಶಗಳನ್ನು ಕಟ್ಟಿಕೊಳ್ಳಬೇಕಾದ ಜವಾಬ್ದಾರಿ ನಮ್ಮದಾಗಿರುತ್ತದೆ. ಬಂಡಾಯ ಸಾಹಿತ್ಯ ಇಷ್ಟೊಂದು ಭರದಲ್ಲಿ ಬೆಳೆದರೂ ನಡೆದಿರುವ ವಿಮರ್ಶೆ ತೀರ ಅತ್ಯಲ್ಪ ಎಂಬ ಕೊರಗು ಆ ಸಂಪ್ರದಾಯದ ಲೇಖಕರಲ್ಲೇ ಕಾಣುತ್ತೇವೆ. ಇದಕ್ಕೆ ಕಾರಣ ನಮ್ಮಲ್ಲಿ ‘ಜೀವನಕಾವ್ಯಮೀಮಾಂಸೆ’ ಬೆಳೆಯದರ ಕೊರತೆ ಎಂದೇ ಹೇಳಬೇಕು. ಯಾವುದೇ ಕಲೆಯ ಅಧ್ಯಯನ ನಡೆಯುವುದು ಆಯಾ ಶಾಸ್ತ್ರ ಹಾಕಿಕೊಡುವ ಚಿಂತನೆಯ ಮಾರ್ಗಗಳನ್ನು ಅನುಸರಿಸಿಯೆ ಎಂಬುದನ್ನು ಗಮನಿಸಬೇಕು. ಕನ್ನಡದಲ್ಲಿ ಸ್ವತಂತ್ರ ಶಾಸ್ತ್ರಗಳನ್ನು ಕಟ್ಟಿಕೊಳ್ಳುವ ಕೊರತೆ ಮೊದಲಿನಿಂದಲೂ ಇದೆ. ಅದು ಈ ಕಾಲಕ್ಕೂ ಭಿನ್ನವಾಗೇನೂ ಇಲ್ಲ.

* * *

ಮಮ್ಮಟನ ಪ್ರಯೋಜನಗಳ ಪಟ್ಟಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಜನಪದ ಕಾವ್ಯ – ಸಾಹಿತ್ಯಲೋಕದ ಕಡೆ ಗಮನಹರಿಸಿದರೆ, ಅಲ್ಲಿ ಕಾವ್ಯದ ಪರಿಣಾಮ ಮತ್ತು ಪ್ರಯೋಜನಗಳು ಎರಡೂ ಸಮಸಮನಾಗಿ ಕಂಡುಬರುತ್ತವೆ. ಆಬಾಲವೃದ್ಧರಾದಿಯಾಗಿ ಅಲ್ಲಿಯ ಸಹೃದಯರ ಗುಂಪಿನಲ್ಲಿ ಕಾಣುತ್ತಾರೆ. ಹೀಗಾಗಿ ಜನಿಸಿದಾರಭ್ಯದಿಂದ ಬಾಲ್ಯಾವಸ್ಥೆಯ ಕೊನೆಯವರೆಗೆ ಪ್ರಯೋಗವಾಗುವ ಜನಪದ ಕಾವ್ಯದ ಪ್ರಕಾರಗಳ ಪರಿಣಾಮವೇ ಅಲ್ಲಿ ಕಂಡುಬರುತ್ತದೆ. ಜೊತೆಗೆ ಕಾವ್ಯದಿಂದ ಮಮ್ಮಟನು ಹೇಳುವ ಪ್ರಯೋಜನಗಳೂ ಇಲ್ಲಿ ಪ್ರಸ್ತುತವೆನಿಸುತ್ತವೆ. ಅದಲ್ಲದೆ ಜನಪದ ಸಾಹಿತ್ಯ ಪ್ರಕಾರಗಳು ಜೀವನದ ಭಾಗಗಳಾಗಿಯೇ ಹುಟ್ಟಿಕೊಳ್ಳುವುದರಿಂದ ಜೀವನದ ಆಯಾ ಸಂದರ್ಭಗಳಲ್ಲಿ ಅವುಗಳ ಬಳಕೆ ವ್ಯಾಪಕವಾಗಿ ಆಗುತ್ತದೆ. ಈ ಬಳಕೆಯ ಪ್ರಯೋಜನವಂತೂ ಶುದ್ಧ ಜೀವನಕ್ಕಾಗಿ, ಜೀವನ ಸಾಗುವುದಕ್ಕಾಗಿ. ಬೇರೆ ಯಾವುದೇ ಕಲಾ ಪ್ರಕಾರದ ಬಳಕೆ ಹೀಗೆ ಕಾಣಿಸುವುದಿಲ್ಲ. ಇಂಥಲ್ಲಿ ಜನಪದ ಸಾಹಿತ್ಯದ ಮಹತ್ವ ಎಲ್ಲ ಕಲೆಗಳಿಗೂ ಮೀರಿನಿಲ್ಲುತ್ತದೆ.

ಲೌಕಿಕ ಬದುಕಿನಲ್ಲಿ ಬಳಕೆ:

ಜನಪದ ಕಾವ್ಯವು ನಮ್ಮ ಬದುಕಿನ ಜೊತೆಗೆ ಸಂಬಂಧ ಹೊಂದಿರುವುದರಿಂದ ನಮ್ಮ ಬದುಕಿನ ಹೆಚ್ಚಾನ್ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜನಪದ ಸಾಹಿತ್ಯದ ಪ್ರಕಾರಗಳ ಪ್ರಯೋಗದಿಂದಲೇ ನಡೆಯುತ್ತವೆ. ಮದುವೆ, ಶೋಬಾನ, ಕುಪ್ಪಸ, ನಾಮಕರಣ – ಇಂತಹ ಯಾವುದೇ ಶುಭಕಾರ್ಯಗಳು ಹಾಡಿಲ್ಲದೆ ಜರುಗಲಾರವು. ಹಾಡಿಲ್ಲದೆ ಮಗುವನ್ನು ತೊಟ್ಟಿಲಿಗಿಟ್ಟು ಹೆಸರಿಡಲಾಗುವುದಿಲ್ಲ. ಈ ಶುಭ ಸಂದರ್ಭದಲ್ಲಿ ಹಾಡಿಲ್ಲವೆಂದರೆ ಅದೊಂದು ಅಮಂಗಳಕರವೆಂಬ ಭಾವನೆ ಜನಪದರಲ್ಲಿದೆ. ಮದುವೆಯ ಪ್ರತಿಯೊಂದು ಕ್ರಿಯೆಗೂ ಹಾಡು ಬೇಕು. ಎಣ್ಣೆ ಹಚ್ಚಲು, ಬೀಗರ ಕರೆಯಲು, ಸೆಂಡಿಗೆ ಕಡಿಯಲು, ಭೂಮ ಒಯ್ಯಲು, ಐರಾಣಿ ತರಲು ಹೀಗೆ ಎಲ್ಲ ಶುಭಕಾರ್ಯಗಳು ನಡೆಯುವುದು, ಅನಾವರಣಗೊಳ್ಳುವುದು ಹಾಡಿನಿಂದಲೇ. ಇವುಗಳ ಜೊತೆಗೆ ಕೆಲಸದ ಸಂದರ್ಭಗಳಾದ – ಹಂತಿ ಹೊಡೆಯುವಲ್ಲಿ, ಕಸ ತೆಗೆಯುವಲ್ಲಿ, ಮಟ್ಟೆ ಹೊಡೆಯುವಲ್ಲಿ, ನಾಟಿ ನೆಡುವಲ್ಲಿ, ಗೂಡು ಮುರಿಯುವಲ್ಲಿ – ಇಂತಹ ಕೆಲಸದ ಸಂದರ್ಭಗಳಲ್ಲೂ ಹಾಡು ಉಪಯೋಗವಾಗುತ್ತದೆ. ನಾಗರಪಂಚಮಿ, ಹೋಳಿ ಹುಣ್ಣಿವೆ, ಸೀಗಿ – ಗೌರಿ, ಮೋಹರಂ ಮುಂತಾದ ಸಾಂಸ್ಕೃತಿಕ ಸಂದರ್ಭಗಳಿಗೂ ಹಾಡು ಬೇಕು. ಮಕ್ಕಳು ಆಡಲೂ ಅವರನ್ನು ಆಡಿಸಲೂ ಹಾಡುಬೇಕು. ಬಯಲಾಟಗಳ ಪ್ರಯೋಗದಲ್ಲಿ, ಕೋಲಾಟಗಳಲ್ಲಿ ಮುಂತಾದ ಕಲಾಪ್ರದರ್ಶನಗಲ್ಲೂ ಹಾಡು ಅವಶ್ಯ. ಹೀಗಾಗಿ ನಮ್ಮ ಬದುಕಿನ ಮಹತ್ವದ ಬೆಳವಣಿಗೆಗಳಲ್ಲಿ ಜನಪದ ಕಾವ್ಯ ಮತ್ತು ಜನಪದ ಸಾಹಿತ್ಯದ ಅನೇಕ ಪ್ರಕಾರಗಳು ಪ್ರಯೋಗವಾಗುವುದನ್ನು ನೋಡುತ್ತೇವೆ. ಬದುಕಿನ ಜೊತೆಗೆ ವ್ಯಾಪಕವಾಗಿ ಬಳಕೆಗೊಳ್ಳುವ ಜನಪದಕಾವ್ಯದ ಉಪಯೋಗ ನಮಗೆ ಅನಿವಾರ್ಯ. ಅದಿಲ್ಲದಿದ್ದರೆ ಬದುಕಿನ ಅನೇಕ ಘಟನೆಗಳು ಭಣಭಣ ಎನ್ನುತ್ತವೆ, ಅಲ್ಲ ನಿಂತುಬಿಡುತ್ತವೆ. ಅದಕ್ಕಾಗಿ ಜನಪದ ಕಾವ್ಯ – ಕಲೆಗಳು ನಿತ್ಯೋಪಯೋಗಿಗಳಾಗಿವೆ.

ಆದರೆ ಶಿಷ್ಟಕಾವ್ಯದ ಪ್ರಯೋಜನ ಹೀಗಲ್ಲ. ನಮ್ಮ ಹಳ್ಳಿಯ ಜನರಿಗೆ ಇನ್ನೂ ಪಂಪ, ರನ್ನ, ಕುಮಾರವ್ಯಾಸ, ಬೇಂದ್ರೆ, ಕುವೆಂಪು ಯಾರೂ ಗೊತ್ತಿಲ್ಲ. ಆದರೂ ಅವರ ಬದುಕಿಗೆ ಯಾವ ಅಡೆತಡೆಯೂ ಆಗಿಲ್ಲ. ಆದರೆ ಜನಪದ ಬದುಕಿನಲ್ಲಿ ಹಾಡಿಲ್ಲವೆಂದರೆ – ಮಗುವಿಗೆ ಹೆಸರಿಲ್ಲ, ಹೆಣ್ಣು ಗಂಡಿಗೆ – ಮದುವೆಯಿಲ್ಲ. ಆದುದರಿಂದ ಜನಪದ ಕಾವ್ಯ ಜನಸಾಮಾನ್ಯರಿಗೆ ತಿಳಿದಿರುವುದು ಅವಶ್ಯ. ಈ ದೃಷ್ಟಿಯಿಂದ ‘ಬದುಕಿಗಾಗಿ ಕಲೆ’ ಎಂಬ ಮಾತು ನೂರಕ್ಕೆ ನೂರು ಸತ್ಯವಾಗಿ ಕಾಣುವುದು ಜನಪದ ಕಾವ್ಯ (ಸಾಹಿತ್ಯ)ದ ಬಗ್ಗೆ ಮಾತನಾಡುವಾಗ.

ಜನಪದಕಾವ್ಯದಪರಿಣಾಮ

ಆಬಾಲ ವೃದ್ಧರ ಮೇಲೆ:

ಶಿಷ್ಟ ಸಾಹಿತ್ಯದ ಪ್ರಯೋಜನಕ್ಕೆ ಒಳಪಡುವ ಸಹೃದಯರು ಎಂತಹರು ಎಂಬುದನ್ನು ಲೆಕ್ಕಹಾಕಿದರೆ, ಬಹುಸಂಖ್ಯಾತ ಜನಸಾಮಾನ್ಯರು ಈ ಗುಂಪಿನಿಂದ ಹೊರಗುಳಿಯುತ್ತಾರೆ. ಅಲ್ಲಿ ಅರ್ಹತೆಯ ಪ್ರಶ್ನೆ ಬಹುಮುಖ್ಯವಾಗುತ್ತದೆ. ಒಂದು ಕಾವ್ಯವನ್ನು ಓದಿ ಗ್ರಹಿಸಬಲ್ಲವ ಸಹೃದಯನೆನಿಸುತ್ತಾನೆ. ಪ್ರೌಢ ಶಿಕ್ಷಣ ಮತ್ತು ಪ್ರಾಪ್ತವಯಸ್ಸು ಇವು ಲಿಖಿತಮೂಲದ ಸಾಹಿತ್ಯ ಗ್ರಹಿಸುವಲ್ಲಿ ಅವಶ್ಯವಾದ ಅರ್ಹತೆಗಳೆನಿಸುತ್ತವೆ. ಆದರೆ ಜನಪದ ಸಾಹಿತ್ಯದ ಸಹೃದಯ (ಕೇಳುಗ, ನೋಡುಗ)ನಿಗೆ ಶಿಕ್ಷಣ ಮತ್ತು ವಯಸ್ಸಿನ ನಿರ್ಬಂಧವೂ ಇಲ್ಲ, ಅವಶ್ಯಕತೆಯೂ ಇಲ್ಲ. ಮಗುವಿಗೆ ವಯಸ್ಸೆಂಬ ಮಾತಿಲ್ಲ. ಹುಟ್ಟಿದಾರಭ್ಯ ಮಗುವಿಗೆ ಕೇಳಲು ದೊರೆಯುವುದು ಸಂಗೀತ ಬೆರೆತ ಜನಪದ ಕಾವ್ಯ ಅರ್ಥಾತ್ ಹಾಡು ಮಾತ್ರ. ಇದರಿಂದ ಮಗು ಶಾಂತವಾಗು ತ್ತದೆ, ಕಿರಿಕಿರಿಯನ್ನು ಕಳೆದುಕೊಳ್ಳುತ್ತದೆ, ನಿದ್ರೆ ಹೋಗುತ್ತದೆ. ಈ ಸಂಗೀತ ಬೆರೆತ ಕಾವ್ಯ (ಹಾಡು) ಇಂತಹ ಚಮತ್ಕಾರದ ಪರಿಣಾಮವನ್ನು ಬೀರುವ ಶಕ್ತಿ ಹೊಂದಿದೆ.

ಲಾಲಿಯ ಹಾಡಿದರ ಲಾಲೀಸಿ ಕೇಳ್ಯಾನ
ತಾಯಿ ಹಂಬಲ ಮರತಾನ ಕಂದಯ್ಯ
ತೋಳ ಬೇಡ್ಯಾನ ತಲೆಗಿಂಬ (.ಹಾ.೯೫)

ಜೋಗೂಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನಕಂದೈಗ
ಜೋಗೂಳದಾಗ ಅತಿ ಮುದ್ದ (.ಹಾ.೯೫)

ಈ ಕಾವ್ಯ ತಾಯಿಗೆ ನೆರವಾಗಿದೆ, ಮಗುವಿನ ಮೇಲೆ ಪರಿಣಾಮ ಬೀರಿದೆ.ಇಲ್ಲಿ ಒಂದು ಮಗುವು ತಾಯಿಯನ್ನು, ಎದೆಹಾಲನ್ನು ಮರೆಯುವಂತಹ ಪರಿಣಾಮವನ್ನು – ಒಂದು ಲಾಲಿಯ ಪ್ರಯೋಗ ಬೀರಿದೆ. ಇಲ್ಲಿ ಕೇವಲ ಸಂಗೀತದ ಪರಿಣಾಮವನ್ನೇ ಲೆಕ್ಕಕ್ಕೆ ಹಿಡಿಯ ಲಾಗದು. ಹಾಗಾದರೆ ಪಂಪನ ಒಂದು ಪದ್ಯವನ್ನೋ ರನ್ನನ – ರವಮಂ ನಿರ್ಜಿತ ಕಂ/ಠೀರವರವಮಂ, ನಿರಸ್ತವ ಘನರವಮಂ ಕೋ/ಪಾರುಣನೇತ್ರಂ ಕೇಳ್ದಾ / ನೀರೊಳಗಿರ್ದುಂ ಬೆಮರ್ತನುರಗ ಪತಾಕಂ’ (ಸಾ.ಭಿ.ವಿ.೨೨)ಎಂಬುದನ್ನು ರಾಗವಾಗಿ ಹೇಳಿ ಮಗುವನ್ನು ಮಲಗಿಸಲು ಸಾಧ್ಯವಿದೆಯೇ? ತೊಟ್ಟಿಲಿನ ಜೀಕುವಿಕೆಯ ಲಯಕ್ಕೆ ಹೊಂದಿಕೆಯಾಗುವುದು ಕೇವಲ ತ್ರಿಪದಿ ಮಾತ್ರ. ಇಲ್ಲಿಯ ಸಂಗೀತ ಬೆರೆತ ಹಾಡು ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮವು ಕಿರಿಕಿರಿಯನ್ನು ದೂರಮಾಡಿ ನೆಲೆಗೊಳಿಸುವ ಮಾನಸಿಕ ನೆಮ್ಮದಿಯ ಸುಖ ವಿಶೇಷವೆನಿಸುತ್ತದೆ.

ಕೂಸಿಗೆ ಸ್ವಲ್ಪ ವಯಸ್ಸಾಗಬೇಕು. ಕೂಡುವಂತೆ, ನಿಲ್ಲುವಂತೆ, ಹೆಜ್ಜೆ ಇಡುವಂತೆ, ಆಡುವಂತೆ – ಆದರೆ ಸಾಕು, ಪ್ರಾರಂಭವಾಗುತ್ತದೆ – ‘ಆನಿ ಬಂತು ಆನಿ, ಯಾವೂರಾನಿ’ ಎಂಬ ರಾಗ. ಇದು ಜನಪದದ ‘ನುಡಿಯುವ ಕಾವ್ಯ’ಪ್ರಕಾರ. ಅಂದರೆ ಮಗುವಿಗೆ ಮಾತು ಬರದ ಮುನ್ನವೇ ಅದು – ಮೊದಲಿಗೆ ಹಾಡುವ ಕಾವ್ಯದ ಶ್ರೋತೃವಾದರೆ, ಕೂಡುವ ಆಡುವ ವಯಸ್ಸಿನಲ್ಲಿ ಅದು ಜನಪದದ ‘ನುಡಿಯುವ ಕಾವ್ಯ’ದ ಶ್ರೋತೃ ಆಗುತ್ತದೆ. ಈ ‘ನುಡಿಯುವ ಕಾವ್ಯ’ದ ಮೂಲಕವಾಗಿಯೇ ಅದು ಸಾವಕಾಶವಾಗಿ ಪ್ರಪಂಚದ ಜ್ಞಾನ ಪಡೆಯಲು ಪ್ರಾರಂಭಿಸುತ್ತದೆ. ಇಷ್ಟೆಲ್ಲ ನಡೆದುದು ಬಹಳವೆಂದರೆ ಅದರ ಎರಡನೇ ವರ್ಷದ ವಯಸ್ಸಿನ ಲ್ಲಿಯೇ. ಒಂದು ವರ್ಷ ಹಾಡಿನ ಶ್ರೋತೃವಾಗಿ, ಇನ್ನೊಂದು ವರ್ಷದಲ್ಲಿ ನುಡಿಯುವ ಕಾವ್ಯದ ಶ್ರೋತೃವಾಗಿ ಪರಿವರ್ತನೆ ಹೊಂದಿದ ಮಗು, ಸುಮಾರಾಗಿ ಈ ಅವಧಿಯಲ್ಲಿಯೇ ಮಾತು ಕಲಿಯಲು ಪ್ರಾರಂಭಿಸಿತೆಂದು ಇಟ್ಟುಕೊಂಡರೆ, ಮತ್ತೆ ಆ ಮಗುವಿಗೆ ಇನ್ನೊಂದು ಸಾಹಿತ್ಯ ಪ್ರಕಾರದ ಪರಿಚಯವಾಗಲು ಪ್ರಾರಂಭವಾಗುತ್ತದೆ; ಅದೇ ಕಥಾಪ್ರಕಾರ.

ಊಟ ಮಾಡುತ್ತ, ಮಲಗುತ್ತ ತನಗೆ ಕಥೆ ಹೇಳಬೇಕೆಂದು ಹಟಮಾಡುತ್ತದೆ. ‘ನುಡಿಯುವ ಕಾವ್ಯ’ ಅಂದರೆ ಶಿಶುಪ್ರಾಸಗಳ ಜೊತೆಗೆ ಆಡಲು, ಹೆಜ್ಜೆ ಇಡಲು, ಪ್ರಪಂಚದ ತಿಳುವಳಿಕೆ ಪಡೆಯಲು ಪ್ರಾರಂಭಿಸಿದ ಮಗು ಒಮ್ಮೆ ಕಥೆ ಕೇಳಲು ಪ್ರಾರಂಭಿಸಿದರೆ ಈ ಪ್ರಪಂಚದ ಸ್ವರೂಪ ಅರಿಯತೊಡಗುತ್ತದೆ. ಪಕ್ಷಿ – ಪ್ರಾಣಿ, ಕ್ರಿಮಿ – ಕೀಟ, ಎಲ್ಲಕ್ಕಿಂತ ಹೆಚ್ಚಾಗಿ ಮಾನವನ ಸ್ವಭಾವ – ಸಂಬಂಧಗಳನ್ನು ಅರಿಯಲು ಪ್ರಾರಂಭಿಸುತ್ತದೆ. ಅಕ್ಷರ ಶೋಧದ ಮುಂಚೆಯಂತೂ ಮಾನವನಿಗೆ ಮಗುವಿನಿಂದ ಮಸಣದವರೆಗಿನ ‘ಜೀವನ ಶಿಕ್ಷಣ’ ದೊರಕಿದ್ದೇ ಈ ಕಥೆಗಳಿಂದ. ಈಗಲೂ ಕಥೆ ಕೇಳದ ಒಂದು ಜೀವ ಈ ಪ್ರಪಂಚದಲ್ಲಿ ದೊರೆಯಲು ಸಾಧ್ಯವಿಲ್ಲ. ಇಂತಹ ಕಥೆಗೆ ಆಬಾಲವೃದ್ಧರಾಗಿ ಎಲ್ಲರೂ ಶ್ರೋತೃಗಳಾಗಿರು ತ್ತಾರೆ. ವಯಸ್ಸು – ಲಿಂಗ, ವರ್ಗ – ವರ್ಣ ಯಾವುದೇ ಭೇದವಿಲ್ಲದೆ ಕಥೆ ಎಲ್ಲರಿಗೂ ಹಿಡಿಸುತ್ತದೆ ಮತ್ತು ಬದುಕಲು ಕಲಿಸುತ್ತದೆ. ಇಲ್ಲೆಲ್ಲ ಜನಪದ ಸಾಹಿತ್ಯದ ಪರಿಣಾಮದ ಫಲವನ್ನೇ ನೋಡಬೇಕು. ಬದುಕಿನ ಒಂದೊಂದು ಕ್ಷಣ ಒಂದೊಂದು ವಯಸ್ಸು, ಒಂದೊಂದು ಸಂದರ್ಭದಲ್ಲಿ ಒಂದೊಂದು ಜನಪದ ಸಾಹಿತ್ಯದ ಪ್ರಕಾರ ಪ್ರಯೋಗಗೊಳ್ಳುತ್ತಲೇ ಇರುತ್ತದೆ. ನೂರಾರು ಜನರು ಶ್ರೋತೃಗಳಾಗುತ್ತ, ಸಂತೋಷ ಮತ್ತು ಶಿಕ್ಷಣ (ಪ್ರಯೋಜನ) ಪಡೆಯುತ್ತ, ಉತ್ತಮ ಬದುಕು ಸಾಗಿಸಲು ತಯಾರಾಗುತ್ತ ಹೋಗುತ್ತಾರೆ.

ಭಾರತೀಯ ಕಾವ್ಯಮೀಮಾಂಸೆ ಅಥವಾ ಶಿಷ್ಟಸಾಹಿತ್ಯವನ್ನು ಲಕ್ಷಿಸಿ ಹೇಳುವ ಕಾವ್ಯಪ್ರಯೋಜನದ ಸಂದರ್ಭದಲ್ಲಿ ಅದರ ಪ್ರಯೋಜನ ಯಾರ್ಯಾರಿಗೆ ಎಂಬ ವಿಚಾರದಲ್ಲಿ, ಕವಿ ಮತ್ತು ಸಹೃದಯ ಇಬ್ಬರನ್ನೇ ಗಮನಿಸಿದಂತಿದೆ. ಅದು ಓದುವ ಕಾವ್ಯವಾದುದರಿಂದ – ಒಬ್ಬನಿಂದ ಕೃತಿ ನಿರ್ಮಾಣವಾದರೆ ಇನ್ನೊಂದು ವರ್ಗದಿಂದ ಅದರ ಓದುವ ಕ್ರಿಯೆ ಜರಗುತ್ತದೆ. ಹೀಗಾಗಿ ಅದರ ಲಾಭದ ಅಂಶದಲ್ಲಿ ಈ ಇಬ್ಬರಿಗೆ ಮಾತ್ರ ಸ್ಥಾನವಿರುವುದು ಸಹಜ.

ಒಟ್ಟಾರೆ ಜನಪದ ಕಾವ್ಯ – ಸಾಹಿತ್ಯ ಅನಾಮಧೇಯವಾಗಿದೆ. ಅಕ್ಷರ ಜ್ಞಾನ ಬಂದನಂತರ ಇತ್ತೀಚಿನ ಕೆಲಪ್ರಕಾರಗಳಿಗೆ ಕವಿಗಳ ಹೆಸರುಗಳು ಕಾಣುತ್ತಿವೆ. ಇಂಥಲ್ಲಿ ಕವಿಯು ಲೆಕ್ಕಕ್ಕೆ ಬರುತ್ತಾನೆ. ಈ ಸಾಹಿತ್ಯದ ಪ್ರಯೋಗದ ಸಂದರ್ಭದಲ್ಲಿ ನಮಗೆ ಪ್ರಮುಖವಾಗಿ ಕಾಣುವ ವ್ಯಕ್ತಿ ಹಾಡುಗಾರ – ನಿರೂಪಕ. ಹೀಗಾಗಿ ಕವಿ, ಹಾಡುಗಾರ – ನಿರೂಪಕ ಹಾಗೂ ಕೇಳುಗ ಅಥವಾ ನೋಡುಗ ಇವನನ್ನು ಬೇಕಾದರೆ ನಾವು ಸಹೃದಯನೆಂದು ಕರೆಯೋಣ. ಹೀಗಾಗಿ ಮೂವರು ಪ್ರಮುಖವಾದ ವ್ಯಕ್ತಿಗಳು ಕಾಣುತ್ತಾರೆ.

ಇವರ ಜೊತೆ ಇನ್ನೂ ಕೆಲವರ ಪ್ರಸ್ತಾಪವನ್ನು ಕಾವ್ಯಪ್ರಯೋಜನದ ವಿಷಯದಲ್ಲಿ ಜನಪದರು ಉಲ್ಲೇಖಿಸುವುದನ್ನು ಕಾಣುತ್ತೇವೆ. ಹಾಡು ಪ್ರಯೋಗಗೊಳ್ಳುವಾಗ ಹಾಡುಗಾರ ಎಂದರೆ ಮುಖ್ಯವಾಗಿ ಮುಮ್ಮೇಳವನ್ನು ಕುರಿತು ಸಂಬೋಧಿಸಿದ ಮಾತು ಇದಾಗಿದೆ. ಮುಮ್ಮೇಳದಲ್ಲಿ ಕನಿಷ್ಠ ಒಬ್ಬ ಅಥವಾ ಇಬ್ಬರು ಹಾಡುಗಾರರು ಇರಬಹುದು. ಇವರ ಜೊತೆಗೆ ಹಿಮ್ಮೇಳದ ಒಂದು ತಂಡವೇ ಅಲ್ಲಿರುವುದನ್ನು ಗಮನಿಸಬೇಕು. ಈ ಗುಂಪನ್ನು ದನಿಗೂಡಿಸುವವರು ಎಂದೂ ಕರೆಯಬಹುದು. ಹೆಣ್ಣುಮಕ್ಕಳ ಹಾಡುಗಾರಿಕೆಯ ಹಿಮ್ಮೇಳವನ್ನು ಈ ಹೆಸರಿನಿಂದ ಕರೆಯುವ ವಾಡಿಕೆ ಇದೆ. ಹೀಗಾಗಿ ಕಾವ್ಯ ಪರಿಣಾಮದ ಒಳಗಡೆ ಈ ಗುಂಪೂ ಸೇರುತ್ತದೆ. ಮತ್ತೆ ಇವರ ಜೊತೆ ಹಾಡು ಪ್ರಯೋಗಗೊಳ್ಳಲು ಕಾರಣರಾದ ಬೇರೆ ಬೇರೆ ಜನರನ್ನೂ ಪ್ರತ್ಯೇಕವಾಗಿ ಗಣಿಸುವ ಪದ್ಧತಿಯನ್ನು ಜನಪದದಲ್ಲಿ ಕಾಣುತ್ತೇವೆ. ಹಾಡು ಕಲಿಸಿದ ಹಿರಿಯರು, ಹಾಡಿಕೆ ಹಚ್ಚಿದ ಮನೆಯವರೂ ಇದರ ಲಾಭದಲ್ಲಿ ಪಾಲುದಾರರಾಗುತ್ತಾರೆ. ಹೀಗೆ ಕಾವ್ಯ ಪ್ರಯೋಜನದ ವಿಷಯದಲ್ಲಿ ಇಷ್ಟೊಂದು ವ್ಯಾಪಕವಾದ ಭಿನ್ನಭಿನ್ನ ಜನರನ್ನು ಜನಪದರು ಸೇರಿಸುತ್ತಾರೆ. ಇವರೆಲ್ಲ ಕಾವ್ಯ – ಹಾಡು ಬದುಕುಳಿಯಲು ಕಾರಣರಾಗುವಂಥವರಾಗಿರುತ್ತಾರೆ.

ಈ ಎಲ್ಲ ದೊಡ್ಡ ಗುಂಪು ಕಾವ್ಯವನ್ನು ಆರಾಧಿಸುವ, ಮರ್ಯಾದೆಯಿಂದ ಕಾಣುವ ಗುಂಪು. ಸಂಸ್ಕೃತ ಕಾವ್ಯಮೀಮಾಂಸಾಕಾರರು ಕೇವಲ ಕಾವ್ಯದ ಪ್ರಯೋಜನದ ಬಗ್ಗೆ ಅಷ್ಟೇ ಲೆಕ್ಕಹಾಕಿದರೆ, ಜನಪದರಲ್ಲಿ ಕಾವ್ಯವನ್ನು ಅನಾದರಿಸುವ ಗುಂಪನ್ನು ಗುರುತಿಸಿ, ಅಂತಹ ಜನರಿಗೆ ಅನಾದರಣೆಯಿಂದ ಅಮಂಗಳಉಂಟಾಗುವುದೆಂದೂ ಪ್ರಸ್ತಾಪಿಸುತ್ತಾರೆ. ಇದು ಕಲೆಯನ್ನು ಆರಾಧಿಸಬೇಕು, ಅದನ್ನು ಮರ್ಯಾದೆಯಿಂದ ಕಾಣಬೇಕು ಎಂಬ ಜನಪದರ ಭಾವನೆಯ ದ್ಯೋತಕವೇ ಆಗಿದೆ. ಹೀಗಾಗಿ ಅನಾದರಣೆಯಿಂದ ತಗಲುವ ಪರಿಣಾಮ ವನ್ನು ಅವರು ಹೇಳುತ್ತಾರೆ.

ಕಲೆಯ ಆರಾಧನೆಯಿಂದ ಅಮಂಗಳ ಪರಿಹಾರ :

ಮಮ್ಮಟನು ಅಮಂಗಳ ಪರಿಹಾರವನ್ನು ತನ್ನ ಪ್ರಸಿದ್ಧ ಕಾವ್ಯಪ್ರಯೋಜನದ ಪಟ್ಟಿಯಲ್ಲಿ ಸೇರಿಸುತ್ತಾನೆ. ಅಲ್ಲಿ ಅವನು ಕೊಡುವ ಉದಾಹರಣೆ ಕವಿಗಳಿಗೆ ಸಂಬಂಧಿಸಿ ಇದೆ. ‘‘ಬಾಣನ ಸಮಕಾಲೀನನಾದ ಮಯೂರನೆಂಬ ಕವಿ ತನಗೆ ಒದಗಿದ್ದ ತೊನ್ನನ್ನು ‘ಸೂರ್ಯಶತಕ’ದ ರಚನೆಯಿಂದ ಕಳೆದುಕೊಂಡನಂತೆ. ಮಮ್ಮ ಟನ ಹೇಳಿಕೆಗೆ ಈ ಐತಿಹ್ಯ ಆಧಾರ’’ (ಭಾ.ಕಾ. ಮೀ.೧೬೭). ನಾವಿಲ್ಲಿ ಹರಿಶ್ಚಂದ್ರ ಕಾವ್ಯವನ್ನು ಬರೆದು ತನ್ನ ಗುರುವಾದ ಹರಿಹರನಿಂದ ಹಲ್ಲು ಕಳೆದುಕೊಂಡ ರಾಘವಾಂಕನ ಉದಾಹರಣೆಯನ್ನು ಕೊಡಬಹುದಾಗಿದೆ. ನಂತರ ರಾಘವಾಂಕನು ಒಂದೊಂದೇ ಧಾರ್ಮಿಕ ಕಾವ್ಯವನ್ನು ಬರೆದಂತೆ ಒಂದೊಂದು ಹಲ್ಲು ಚಿಗಿತು ಬಂದವೆಂಬ ಮಾತು ಮಮ್ಮಟನ ಉದಾಹರಣೆಗೆ ಸಮನಾಗಿದೆ. ಆದರೆ ಇವೆಲ್ಲ ಅಪ್ಪಟ ಜನಪದ ನಂಬುಗೆಗಳಂತೆ ತೋರುತ್ತವೆ. ಸಂಸ್ಕೃತ ಅಲಂಕಾರಿಕರ ಲೆಕ್ಕದಲ್ಲಿ ಇದು ಕವಿಗಳಿಗೆ ಸಂಬಂಧಪಟ್ಟ ಸಂಗತಿಯಾಗಿದೆ. ಆದರೆ ಜನಪದರಲ್ಲಿ ಕಾವ್ಯವನ್ನು ಆರಾಧಿಸುವುದರಿಂದ ಸಹೃದಯರೆಲ್ಲರಿಗೂ ಅನಿಷ್ಟ ಪರಿಹಾರವಾಗುತ್ತದೆ ಎಂಬ ಭಾವನೆಯಿರುವುದನ್ನು ಕಾಣುತ್ತೇವೆ.

ಈ ಮಾತಿಗೆ ಜನಪದರ ಭಾವನೆಗಳನ್ನು ಹೊತ್ತ ನುಡಿಗಳನ್ನು ಮುಂದೆ ಉಲ್ಲೇಖಿಸ ಲಾಗಿದೆ. ಆ ನುಡಿಗಳನ್ನು ಹೊತ್ತ ಕಥನಕಾವ್ಯಗಳನ್ನು ಪುಣ್ಯಕಥಾನಕಗಳು ಎಂದು ಕರೆಯಲಾ ುತ್ತದೆ. ಜನಪದರು ತಮ್ಮ ಅನಿಷ್ಟ ಪರಿಹಾರವಾಗಲಿ ಎಂಬ ಉದ್ದೇಶಗಳಿಂದ, ವಿಶೇಷ ಪೂಜಾ ಸಮಾರಂಭಗಳನ್ನು ನೆರವೇರಿಸಿ, ಪವಿತ್ರಜೀವನದ ಚರಿತ್ರೆಗಳನ್ನು ಹಾಡಿಸುತ್ತಾರೆ. ಈ ಕಥನಕಾವ್ಯಗಳು ಜನಪದರು ಪೂಜ್ಯಭಾವನೆಯಿಂದ ಕಾಣುವ ವ್ಯಕ್ತಿಮಹಿಮೆಗಳಾಗಿರುತ್ತವೆ. ಈ ವ್ಯಕ್ತಿಗಳು – ಧರ್ಮ, ಜಾತಿ, ಜನಾಂಗಗಳ ಪರಿಧಿಗಳನ್ನು ಮೀರಿ ನಿಂತವರಾಗಿರುತ್ತಾರೆ. ಮುತ್ತೈದೆ ಚೆನ್ನಮ್ಮ, ಗುಣಸಾಗರಿ, ಈಸುರಾಯನ ಹಾಡು ಮುಂತಾದ ಕಥನಕವನಗಳನ್ನು ಅವಲೋಕಿಸಿದರೆ ಅವೆಲ್ಲ ಯಾವುದೋ ಅನಿಷ್ಟ ಪರಿಹಾರಕ್ಕಾಗಿ, ವಿಶೇಷ ಪೂಜಾ ಸಮಾರಂಭ ಗಳನ್ನು ಏರ್ಪಡಿಸಿ ಹಾಡಿಸುತ್ತಿದ್ದರೆಂಬುದು ನಮಗೆ ತಿಳಿದುಬರುತ್ತದೆ. ಅದರಲ್ಲೂ ಬಹುಕಾಲ ಮಕ್ಕಳಾಗದೇ ಇದ್ದಾಗ, ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ, ಕಾಡುವುದು ಪ್ರಾರಂಭವಾ ದಾಗ – ಈ ಕಥನಕವನಗಳನ್ನು ಹಾಡಿಸುತ್ತಿದ್ದಿರಬೇಕೆಂಬ ಅನುಮಾನ ತಾಳಲು ನಮಗೆ ಆ ಹಾಡುಗಳಲ್ಲಿ ಉಲ್ಲೇಖಿತ ಪುರಾವೆಗಳು ದೊರೆಯುತ್ತವೆ. ‘ಮುತ್ತೈದೆ ಚೆನ್ನಮ್ಮ’ ಮತ್ತು ‘ಈಸುರಾಯನ ಹಾಡು’ಗಳು ಬಂಜೆಯ ಪ್ರವೇಶದಿಂದಲೇ ಪ್ರಾರಂಭವಾಗುತ್ತವೆ. ಅಲ್ಲೆಲ್ಲ ಹೆಣ್ಣುಮಕ್ಕಳು ದೇವರಿಗೆ ಹರಕೆ ಹೊತ್ತು, ಪೂಜೆ ಸಲ್ಲಿಸಿ, ಗಿಡಮೂಲಿಕೆ ಸೇವಿಸಿ ಮಕ್ಕಳನ್ನು ಪಡೆಯುತ್ತಾರೆ. ಹೀಗೆ ಹುಟ್ಟಿದ ಮಕ್ಕಳೇ ನಾಯಕರಾಗಿ ಹೊರಹೊಮ್ಮುತ್ತಾರೆ.

ಕೊನೆಯಲ್ಲಿ ಈ ಕಥಾನಕಗಳು ತಮ್ಮ ಧ್ಯೇಯವನ್ನು ಸಾರುವಾಗ – ಮುತ್ತೈದೆತನ ಘನವಿರಲಿ, ಬಾಲಾಗ ಆಸಿ ಘನವಿರಲಿ, ಪುತ್ರನ ಸಂತಾನ ಜಯಜಯ – ಮುಂತಾದ ಮಾತುಗಳನ್ನು ಹೇಳುತ್ತವೆ. ಮುಂದೆ ಉಲ್ಲೇಖಿಸುವ ಉದಾಹರಣೆಗಳು ಆ ಕಥಾನಕ ಗಳಿಂದಲೇ ಎತ್ತಿಕೊಂಡವುಗಳಾಗಿವೆ.ಇದೆಲ್ಲವನ್ನು ಗಮನಿಸಿದರೆ ಇವು ಅನಿಷ್ಟ ಪರಿಹಾರಕ್ಕಾಗಿ ಹಾಡುವ ಹಾಡುಗಳಾಗಿವೆ ಎಂಬುದು ಖಚಿತವಾಗುತ್ತದೆ. ಅದಕ್ಕಾಗಿಯೇ ಇವುಗಳನ್ನು ಪುಣ್ಯಕಥಾನಕಗಳು ಎಂದು ಕರೆಯುವುದು. ಈ ಕೆಳಗೆ ಪುಣ್ಯಕಥಾನಕಗಳಲ್ಲಿ ಉಲ್ಲೇಖ ವಾಗುವ ಬೇರೆ ಬೇರೆಯವರಿಗೆ ಉಂಟಾಗುವ ಕಾವ್ಯಪರಿಣಾಮ – ಪ್ರಯೋಜನಗಳ ಬಗ್ಗೆ ಹೇಳುವ ನುಡಿಗಳನ್ನು ಉಲ್ಲೇಖಿಸಲಾಗಿದೆ.