ಸಂಸ್ಕೃತ ಕಾವ್ಯಶಾಸ್ತ್ರಕಾರರು ‘ಕಾವ್ಯದಕಾರಣ’ಗಳನ್ನು ಗುರುತಿಸುವಾಗ ಮತ್ತು ಪ್ರಯೋಜನಗಳನ್ನು ಹೇಳುವಾಗ ಕವಿಯ ಸಂಗತಿಗಳ ಬಗೆಗೆ ಚರ್ಚೆ ಮಾಡುತ್ತಾರೆ. ಕಾರಣ ಗಳನ್ನು ಗುರುತಿಸುವಾಗ ಪ್ರಮುಖವಾಗಿ ಪ್ರತಿಭೆ ಇದ್ದವನು ಮಾತ್ರ ಕವಿ ಎನ್ನುವ ಭಾಮಹನು, ‘ದಡ್ಡರು ಕೂಡ ಗುರುಗಳ ಆಶೀರ್ವಾದದಿಂದ ಶಾಸ್ತ್ರಾಭ್ಯಾಸವನ್ನು ಮಾಡಬಹುದು. ಆದರೆ ಕಾವ್ಯ ಹುಟ್ಟುವುದು ಮಾತ್ರ ಕೇವಲ ಪ್ರತಿಭಾವಂತನಾದವನಿಂದ ಮಾತ್ರ’ ಎನ್ನುತ್ತಾನೆ. ಭಟ್ಟತೌತ ಹೇಳುತ್ತಾನೆ :

ಪ್ರಜ್ಞಾ ನವನವೋಲ್ಲೇಖಶಾಲಿನಿ ಪ್ರತಿಭಾ ಮತಾ
ತದನುಪ್ರಾಣನಾಜೀವದ್ವರ್ಣನಾನಿಪುಣಃ ಕವಿಃ
ತಸ್ಯ ಕರ್ಮ ಸ್ಮೃತಂ ಕಾವ್ಯಂ….

(‘‘ಹೊಸಹೊಸ ಭಾವಗಳನ್ನು ಸಂತತವಾಗಿ ಕಾಣುವ, ಕಟ್ಟುವ ಪ್ರಜ್ಞೆಯೇ ಪ್ರತಿಭೆ.
ಈ ಪ್ರತಿಭೆಯ ಉಸಿರಿನಿಂದ ಜೀವತುಂಬಿ ವರ್ಣಿಸಬಲ್ಲ ನಿಪುಣನೇ ಕವಿ.
ಕವಿ ಕರ್ಮವೇ ಕಾವ್ಯ’’, ಭಾ.ಕಾ.ಮೀ.೧೧೮).

ಕವಿಯ ಉಸಿರು ಪ್ರತಿಭೆ, ವರ್ಣಿಸಬಲ್ಲ ನಿಪುಣನು ಕವಿ, ಕವಿಯ ಕಾರ್ಯ ಕಾವ್ಯ ಕಟ್ಟುವುದು – ಎಂಬ ಈ ಮಾತುಗಳಲ್ಲಿ ಪ್ರತಿಭೆಯೆಂಬ ನೈಸರ್ಗಿಕ ಶಕ್ತಿವುಳ್ಳವನು ಮಾತ್ರ ಕವಿ ಎಂಬ ಸ್ಪಷ್ಟ ಅಭಿಪ್ರಾಯವಿದೆ. ಆತನಲ್ಲಿ ವರ್ಣಿಸಬಲ್ಲ ನೈಪುಣ್ಯತೆ ಇದ್ದು, ಕಾವ್ಯ ಎನ್ನುವುದು ಅವನ ಕ್ರಿಯೆಯ ಫಲವಾಗಿದೆ ಎನ್ನುತ್ತಾನೆ ಭಟ್ಟತೌತ.

ಅಂದರೆ ವ್ಯತ್ಪತ್ತಿ ಮತ್ತು ಅಭ್ಯಾಸಗಳೆಂಬ ಪ್ರಯತ್ನಗಳು ಪ್ರತಿಭೆಗೆ ಪೂರಕವಾಗಿ ನಡೆಯುವ ಕೆಲಸಗಳು ಎಂಬುದು ಇಲ್ಲಿ ಸ್ಪಷ್ಟವಾಗಿದೆ. ಆದರೂ ವಿದ್ಯ ಮತ್ತು ತನ್ನ ದಿನನಿತ್ಯದ ಒಳ್ಳೆಯ ರೂಢಿಗಳನ್ನು ಅಭ್ಯಾಸ ಮಾಡಿಕೊಳ್ಳಬೇಕಾದವನು ಕವಿಯೇ. ಇವೆರಡೂ ಅವನ ವಿಶೇಷ ಪ್ರಯತ್ನಗಳು.

ಕಾವ್ಯದ ಪ್ರಯೋಜನದ ಕಾಲಕ್ಕೆ ಕೀರ್ತಿ ಮತ್ತು ಧನದ ಲಾಭಗಳು ಲಭಿಸುವುದು ಕವಿಗೆ ಎಂಬುದನ್ನು ಹೇಳುತ್ತಾರೆ. ಅದನ್ನು ಕನ್ನಡದ ಕವಿ ಪಂಪ ‘ಕವಿತೆಯೊಳ್ ಆಸೆಗೈಯ್ವ ಫಲಮಾ ವುದೋ ಪೂಜೆ ನೆಗಳ್ತೆ ಲಾಭಂ ಎಂಬಿವೆ ವಲಂಎಂದು ಉದ್ಗಾರ ತೆಗೆಯುತ್ತಾನೆ.

ಕವಿಯನ್ನು ಹೊಗಳುವ ಕೆಲಮಾತುಗಳು ಕಂಡುಬರುತ್ತವೆ.ಅಪಾರೇ ಕಾವ್ಯಸಂಸಾರೇ ಕವಿರೇವ ಪ್ರಜಾಪತಿಃ (ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಸೃಷ್ಟಿಕರ್ತ)ಎನ್ನುತ್ತಾನೆ ಆನಂದವರ್ಧನ. ಕವಿ ಒಬ್ಬ ಅನಭಿಷಿಕ್ತ ದೊರೆಎನ್ನುತ್ತಾನೆ ಷೆಲ್ಲಿ. ಕವಿತ್ವವು ಭುವನದ ಭಾಗ್ಯಎನ್ನುತ್ತಾನೆ ಕನ್ನಡದ ಕವಿ ನೇಮಿಚಂದ್ರ. ಹೀಗೆ ಕವಿಯನ್ನು ಕುರಿತು ಭಾರತೀಯರು, ಪಾಶ್ಚಾತ್ಯರು ಅನೇಕ ರೀತಿಯಲ್ಲಿ ಗುಣಗಾನ ಮಾಡಿದ್ದಾರೆ, ಉದ್ಗಾರ ತೆಗೆದಿದ್ದಾರೆ.

ಪ್ರತಿಭಾವಂತನಾದ ಕವಿಯ ಮುಖ್ಯಗುಣವನ್ನು ಗುರುತಿಸುವಲ್ಲಿ ಸಂಸ್ಕೃತ ಶಾಸ್ತ್ರಕಾರರು ಗುರುತಿಸುವುದು ಅವನ ಮಾತಿನ ಜಾಣ್ಮೆಯನ್ನು. ಪ್ರತಿಭೆಯಿಂದ ಕವಿಗೆ ಒದಗುವುದು ‘ಮಾತಿನ ಜಾಣ್ಮೆ’ ಎಂಬುದು ಎಲ್ಲರ ಅಭಿಪ್ರಾಯ. ರಹಿತಾ ಸತ್ಕವಿತ್ವೇನ ಕೀದೃಶೀ ವಾಗ್ವಿದಗ್ಧತಾ’ (ಒಳ್ಳೆಯ ಕವಿತ್ವವಿಲ್ಲದ ಮಾತಿನ ಜಾಣ್ಮೆ ಯಾವ ಲೆಕ್ಕ) ಎನ್ನುತ್ತಾನೆ ಭಾಮಹ (ಕ. ಕಾ.೧ – ೪).

ಪ್ರತಿಭಾವತ್ವಮುಮಕೃತಕ
ಚತುರತೆಯುಂ ಪರಮ ಬುಧ ಜನೋಪಾಸನಮುಂ
ಶ್ರುತಪರಿಚಯಮುಂ ತರ್ಕುಂ
ಪ್ರತೀತಿಯಂ ವಾಗ್ವಿದಗ್ಧತಾ ನಿಪುಣತೆಯೊಳ್‌    (ಕವಿರಾಜಮಾರ್ಗ:೧೧)                                         

(ಪ್ರತಿಭೆಯ ಅಸ್ತಿತ್ವ; ಸಹಜವಾದ ಚತುರತೆ, ವಿದ್ವಜ್ಜನರ ಸೇವೆ, ಶಾಸ್ತ್ರಗಳ ಪರಿಚಯ – (ಎಲ್ಲವೂ ಸೇರಿ) ವಾಕ್ಪ್ರೌಢಿಮೆಯ ಅತಿಶಯ – ಜ್ಞಾನವನ್ನು (ಒಬ್ಬನಿಗೆ) ತಂದು ಕೊಡುವವು, ಪು – ೩).

ಅಂದರೆ ಇಡೀ ಕಾವ್ಯದ ಕಾರಣಗಳೆಂದು ಗುರುತಿಸುವ ಮೂರೂ ಶಕ್ತಿಗಳು ಒಟ್ಟುಗೂಡಿ ಕವಿಗೆ ಮಾತಿನ ಪ್ರೌಢಿಮೆಯನ್ನು ತಂದು ಕೊಡುತ್ತವೆ ಎಂದು ಕವಿರಾಜಮಾರ್ಗಕಾರನು ಗುರುತಿಸುತ್ತಾನೆ. ನೇಮಿಚಂದ್ರನು ಕವಿಯ ಈ ಕಾವ್ಯಕಟ್ಟುವ ನಿಪುಣತೆಯನ್ನು, ವಾಕ್ ಪ್ರೌಢಿಮೆಯನ್ನು ಕುರಿತು ಹೀಗೆ ಬರೆಯುತ್ತಾನೆ :

ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿಸಂತತಿ ವಾಮನಕ್ರಮಂ
ಮುಟ್ಟುಗೆ ಮುಟ್ಟದಿರ್ಕೆ ನಭಮಂ ಹರನಂ ನರನೊತ್ತಿ ಗಂಟಲಂ
ಮೆಟ್ಟುಗೆ ಮೆಟ್ಟದಿರ್ಕೆ ಕವಿಗಳ್ ಕೃತಿಬಂಧದೋಳಲ್ತೆ ಕಟ್ಟಿದರ್
ಮುಟ್ಟಿದರಿಕ್ಕಿ ಮೆಟ್ಟಿದರಿದೇನಳವಗ್ಗಳಮೋ ಕವೀಂದ್ರರಾ
(ಲೀಲಾವತಿ ಪ್ರಬಂಧಂ, ೧೧)

ಕವಿಯು ತನ್ನಲ್ಲಿರುವ ಅಪೂರ್ವವಾದ ಪ್ರತಿಭೆಯಿಂದ ಅಪರೂಪದ ಸಂವೇದನಾಶೀಲ ನಾಗಿ ಪರಿವರ್ತನೆ ಹೊಂದುತ್ತಾನೆ. ಅವನ ಮನಸ್ಸು ಅಷ್ಟೇ ಅಲ್ಲ ಅವನ ದೇಹ ಕೂಡ ತೀರ ಸೂಕ್ಷ್ಮವಾಗಿ ಪರಿವರ್ತನೆ ಹೊಂದುತ್ತದೆ. ಹೀಗೆ ಅವನ ದೇಹ ಮತ್ತು ಮನಸ್ಸುಗಳೆರಡೂ ಅವನ ಪ್ರತಿಭೆಗೆ ತಕ್ಕಂತೆ ಕೆಲಸ ಮಾಡುತ್ತವೆ. ಸಂಗೀತದ ಪ್ರತಿಭೆವುಳ್ಳವನಿಗೆ ಕಂಠದ ಸಿರಿ (ದೈಹಿಕ ಬದಲಾವಣೆ) ಒದಗಿ ಬರುವಂತೆ, ನೃತ್ಯ ಪ್ರತಿಭೆಗೆ ಅಂಗಾಂಗಗಳು, ಚಿತ್ರ ಮತ್ತು ಶಿಲ್ಪ ಪ್ರತಿಭೆಗೆ ಕಣ್ಣು ಮತ್ತು ಕೈಬೆರಳುಗಳು ಅತ್ಯಂತ ಸೂಕ್ಷ ಸಂವೇದನಾಶೀಲ ಅಂಗಾಂಶಗಳಾಗಿ ಬದಲಾವಣೆ ಹೊಂದುತ್ತವೆ. ಅಂದರೆ ಒಬ್ಬ ಕಲಾವಿದನಲ್ಲಿ ಪ್ರತಿಭೆಯಿಂದಾಗಿ ಅವನ ಮಾನಸಿಕ ಮತ್ತು ದೈಹಿಕ ಗುಣಗಳು ತೀರ ಸೂಕ್ಷ್ಮವಾಗುತ್ತವೆ ಮತ್ತು ಪ್ರತಿಭೆಗೆ ಅನುಕೂಲವಾಗಿ ವರ್ತಿಸುತ್ತವೆ. ಜೊತೆಗೆ ಆಯಾ ಪ್ರತಿಭೆಗೆ ತಕ್ಕ ವಿದ್ಯ ಮತ್ತು ಅಭಿರುಚಿಗಳು ಪ್ರತಿಭಾವಂತನಲ್ಲಿ ದಾಹಗಳಾಗಿ, ವರ್ತನೆಗಳಾಗಿ ಕಾಣುತ್ತವೆ.

ಶಿಷ್ಟಲೋಕದ ಕವಿಯು ಬಹುತೇಕವಾಗಿ ಏಕಮುಖ ಪ್ರತಿಭೆಯುಳ್ಳವನಾಗಿ ಕಾಣು ತ್ತಾನೆ. ಅವನ ದೃಷ್ಟಿ ಮತ್ತು ಮನಸ್ಸುಗಳು – ಲೋಕವನ್ನು ಹೊಸರೀತಿಯಿಂದ ಗ್ರಹಿಸುತ್ತವೆ ಮತ್ತು ಹೊಸರೀತಿಯಿಂದ ರಚಿಸುತ್ತವೆ. ಅವನ ಪ್ರತಿಭೆಯ ಕೆಲಸವೆಂದರೆ ‘ಹೊಸಹೊಸದನ್ನು ಹೊಳೆಯಿಸುವುದು ಮತ್ತು ಹೊಸಹೊಸದನ್ನು ಬರೆಯಿಸುವುದು’. ಜನಪದ ಲೋಕದ ಕವಿಯಾದರೆ ಆತ ಬಹುಮುಖ ಪ್ರತಿಭೆಯ ಕಲಾವಿದನಾಗಿ ಕಾಣುತ್ತಾನೆ. ಅವನ ಪ್ರತಿಭೆಯು ಕನಿಷ್ಟ ಹಾಡು ರಚಿಸುವ ಮತ್ತು ಹಾಡುವ ಎರಡು ಆಯಾಮಗಳನ್ನು ಪಡೆದಿರುತ್ತದೆ. ಅನೇಕ ಸಲ ಅದು ಇನ್ನೂ ಹೆಚ್ಚಿನ ವೈವಿಧ್ಯತೆಯುಳ್ಳುದೂ ಆಗಿರುವ ಸಂಭವವಿರುತ್ತದೆ. ಆತ ಹಾಡುತ್ತಾನೆ ಎಂದರೆ ಅವನಿಗೆ ವಾದ್ಯಬಾರಿಸುವ ಕಲೆ ಗೊತ್ತಿರುವುದು ಸಾಮಾನ್ಯ. ಆತ ಬಯಲಾಟದ ಕವಿಯಾದರಂತೂ ಬಯಲಾಟದ ಕೃತಿ ರಚನೆ ಅಷ್ಟೇ ಅಲ್ಲ, ಹಾಡುವ, ಬಾರಿಸುವ, ಕುಣಿಯುವ, ಪಾತ್ರವಹಿಸುವ, ನಿರ್ದೇಶಿಸುವ ಹೀಗೆ ಅನೇಕ ಬಗೆಯಲ್ಲಿ ಕೆಲಸಮಾಡುವ ಪ್ರತಿಭೆ ಅವನಲ್ಲಿ ಚಿಗುರೊಡೆಯುತ್ತದೆ. ನಾವು ಇದೆಲ್ಲವನ್ನೂ ಲೆಕ್ಕಕ್ಕೆ ಹಿಡಿಯಲೇಬೇಕಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ ಕಾಣಿಸುವ ಒಬ್ಬ ಜನಪದ ಕವಿ ನಿರ್ವಹಿಸುವ ಕೆಲಸಗಳು ವೈವಿಧ್ಯಮಯವಾಗಿರುತ್ತವೆ. ಹೀಗಾಗಿ‘ವಾಕ್ಚಾತುರ್ಯ’ವೊಂದನ್ನೇ ಗುರುತಿಸಲು ಸಾಧ್ಯವಾಗಿರುವ ಸಂಸ್ಕೃತ ಕಾವ್ಯಶಾಸ್ತ್ರಕಾರರ ದೃಷ್ಟಿ ಮತ್ತು ಶಿಷ್ಟಕವಿಗಳ ಪ್ರತಿಭೆ ಏಕಮುಖವಾಗಿ ಹರಿಯುವುದೇ ಜಾಸ್ತಿ.

ಇದೆಲ್ಲ ಒಳ್ಳೆಯ ಕವಿಗೆ ಸಂಬಂಧಪಟ್ಟ ವಿಚಾರ. ಇದನ್ನು ಬಿಟ್ಟರೆ ಶಿಷ್ಟಕವಿಗಳಲ್ಲಿ ಕಾಣುವುದು ಕುಕವಿ ನಿಂದೆ. ಕವಿಯಲ್ಲದವನು ಪ್ರಯತ್ನಪೂರ್ವಕವಾಗಿ ಕಾವ್ಯಬರೆದರೂ ಅದು ಕಾವ್ಯವಲ್ಲ ಎಂದು ಹೇಳುತ್ತ, ಕುಕವಿಗೆ ಬೇಕಾಬಿಟ್ಟೆ ತೆಗಳುವ ಕೆಲಸವನ್ನೇ ಮಾಡುತ್ತಾರೆ. ಈ ಸಂಪ್ರದಾಯ ಕನ್ನಡದ ಶಾಸ್ತ್ರಕಾರರಾದ ಕವಿರಾಜಮಾರ್ಗಕಾರ ಮತ್ತು ಕಾವ್ಯಾವಲೋಕನಕಾರ ಇಬ್ಬರಿಂದಲೂ ನಡೆಯುತ್ತದೆ. ಅವರು ಸಂಸ್ಕೃತ ಕಾವ್ಯಮೀಮಾಂಸಾಕಾರರು ಹೇಳುವ ಮಾತುಗಳನ್ನೇ ಹೆಚ್ಚುಕಡಿಮೆ ಪುನರಾವರ್ತನೆ ಮಾಡುತ್ತಾರೆ. ಅದೇ ದಾರಿಯನ್ನೇ ಕನ್ನಡದ ಕವಿಗಳು ಹಿಡಿಯುತ್ತಾರೆ. ‘‘ಕವಿಯಲ್ಲದವನ ಶಾಸ್ತ್ರಜ್ಞಾನ ದರಿದ್ರನ ದಾನಾಸಕ್ತಿಯಂತೆ, ನಪುಂಸಕನ ಯುದ್ಧವಿದ್ಯೆಯಂತೆ, ಹೆಡ್ಡನ ಜಾಣ್ಮೆಯಂತೆ’’ (.ಕಾ.)ಎನ್ನುತ್ತಾನೆ ಭಾಮಹ. ಕವಿರಾಜಮಾರ್ಗಕಾರ ಹೀಗೆ ಹೇಳುತ್ತಾನೆ :

ಪಸರಿಸಿದಾ ಬಗೆ ಮನದೊಳ್ಪೊಸತಾಗೆ ನೆಗೞ್ಚಲರಿಯನಾ ರಚನೆಯೊಳೇಂ
ಬಸನಂ ತನಗಿನಿತಱ ಬೇವಸಮೇಂ ಕವರ್ದರುಮೊಳರೆ ಕವಿಯಲ್ಲದರಂ
                                                                        (.ರಾ.ಮಾ. ೧೨)

(ಯಾವನು ತನ್ನ ಮನಸ್ಸನ್ನು ತುಂಬಿಕೊಂಡ ಆಶಯ ಹೊಸದೆನಿಸುವಂತೆ ರಚನೆೆ ಗೈಯಲಾ ರನೋ ಅವನಿಗೆ ಆ ಕಾವ್ಯ ರಚನೆಯ ದಂದುಗವೇಕೆ? ಆ ಪರಿಯ ಕ್ಲೇಶವೇಕೆ? ಕವಿಯಲ್ಲದವರನ್ನು (ಕಂಡು) ಯಾರಾದರೂ ಸಿಡುಕುತ್ತಾರೆಯೆ)

ಪಂಪನು ಇಂತಹ ಕವಿಗಳನ್ನು ದೋಷಾವಿಷಯಮನೆ ಪೊರ್ದಿರ್ಪುವಲ್ತೆ ಕುಕವಿ ಬಕಂಗಳ್’ (.ಪು.೨೨)ಎನ್ನತ್ತಾನೆ. ರನ್ನನು ಇಂತಹರನ್ನು ಗೂಡಾರದ ಕವಿಗಳು (.ಪು.೮೬)ಎನ್ನುತ್ತಾನೆ. ಇಂತಹರ ರಚನೆಗಳು ದುಷ್ಕವಿತೆಗಳ್’ (ಗಿ..೨೨) ಎನ್ನುತ್ತಾನೆ ಹರಿಹರ. ಹೀಗೆಯೇ ಸಾಗುತ್ತದೆ ಕುಕವಿಗಳ ಮತ್ತು ಅವರ ಕಾವ್ಯಗಳ ನಿಂದನೆ. ಬಹುಶಃ ಇದು ಕವಿಗಳಲ್ಲಿ ಕಾಣಿಸಿಕೊಳ್ಳುವ ಪರಸ್ಪರ ಈರ್ಷೆಯ ಮತ್ಸರದ ಸಂಘರ್ಷವೆಂದು ತೋರುತ್ತದೆ. ಆದರೆ ಇಂತಹ ಟೀಕೆಗಳನ್ನು ಪಂಪ, ರನ್ನ, ಹರಿಹರನಂತಹ ಕವಿಗಳೂ ಮಾಡಬೇಕೆ? ಎಂಬುದೊಂದು ಪ್ರಶ್ನೆಯಾಗಿ ಕಾಡುತ್ತದೆ. ಬಹುಶಃ ಕೆಟ್ಟ ಕವಿಗಳು ಉತ್ತಮ ಕವಿಗಳಿಗೆ ಕೊಡುವ ಕಾಟಗಳಿಂದಾಗಿಯೇ ಈ ಕುಕವಿಗಳೆಂಬ ಒಂದು ವರ್ಗವನ್ನು ಕವಿಗಳೂ ಶಾಸ್ತ್ರಕಾರರೂ ಗುರುತಿಸಿಕೊಂಡು ಟೀಕಿಸುತ್ತ ಬಂದಂತೆ ತೋರುತ್ತದೆ.

ಬಹು ಸಹಜವಾದ ಈ ತಿಕ್ಕಾಟ ಜನಪದ ಲೋಕದಲ್ಲೂ ಕಾಣಿಸಿಕೊಳ್ಳುತ್ತದೆ. ಇಲ್ಲೂ ಸತ್ಕವಿ ಪ್ರಶಂಸೆ ಕುಕವಿ ನಿಂದೆಗಳು ವ್ಯಾಪಕವಾಗಿ

ಕಾಣಿಸುತ್ತವೆ. ಆ ಬಗೆಗೆ ಒಂದೆರಡು ದೀರ್ಘ ಲಾವಣಿಗಳೇ ನಮಗೆ ದೊರೆಯುತ್ತವೆ. ಅವನ್ನು ಈ ಅಧ್ಯಾಯದ ಕೊನೆಯಲ್ಲಿ ಕೊಡಲಾಗಿದೆ. ಇಲ್ಲಿರುವ ಮುಖ್ಯಪ್ರಶ್ನೆಯೆಂದರೆ ಕಾವ್ಯವೆನ್ನುವುದು ‘ಕವಿಯ ಕೂಸು’ ಎಂಬ ಗ್ರಹಿಕೆಯ ಕೊರತೆ. ಅದೇನಿದ್ದರೂ ಸಂಸ್ಕೃತ ಕಾವ್ಯಮೀಮಾಂಸಕಾರರಿಗೆ ಕಾವ್ಯವೆನ್ನುವುದು ಪ್ರತಿಭೆಯ ಚಮತ್ಕಾರ ಅಷ್ಟೆ. ಆದರೆ ಇಂದು ವೌಖಿಕ ಕಾವ್ಯದ ಹಿನ್ನೆಲೆಯಲ್ಲಿ ಈ ವಿಷಯದ ಚರ್ಚೆ ಮಾಡುವಾಗ ನಮಗೆ ಎದುರಾಗುವುದು – ವೌಖಿಕ ಕಾವ್ಯವು ಕವಿಯ ನಿರ್ಮಿತಿ ಎನ್ನುವುದಕ್ಕಿಂತ ಅದು ‘ಸಂದರ್ಭದ ಕೂಸು’ ಎಂದು ಗುರುತಿಸುವುದು. ಶಿಷ್ಟಕಾವ್ಯವಾದರೆ ಅದು ಕವಿ ಎಂಬ ‘ಏಕವ್ಯಕ್ತಿ ಸಂದರ್ಭದ ಕೂಸು’, ಜನಪದ ಕಾವ್ಯ ‘ಸಮೂಹ ಸಂದರ್ಭದ ಕೂಸು’. ಕವಿ ಇಲ್ಲಿ ಸಂದರ್ಭದ ಒಂದಂಶವಾಗಿ ಮಾತ್ರ ಕಾಣುತ್ತಾನೆ.

ಶಿಷ್ಟಕಾವ್ಯದಲ್ಲಿ ಒಟ್ಟು ಕಾವ್ಯದ ನಿರ್ಮಿತಿಯನ್ನು ಗಮನಿಸಿದರೆ, ಅಲ್ಲಿ ಲೋಕದ ಸಂಗತಿಗಿಂತ ಕವಿಯು ವೈಯಕ್ತಿಕವಾಗಿ ಅದನ್ನು ಹೇಗೆ ಗ್ರಹಿಸಿದ್ದಾನೆ ಎಂಬ ಸಂಗತಿ ಮುಖ್ಯವಾಗಿ, ಲೋಕದ ಛಾಪು ಕಡಿಮೆಯಾಗಿ ಕವಿಯ ವೈಯಕ್ತಿಕ ಗ್ರಹಿಕೆ ಮುಖ್ಯವಾಗಿ ನಿಲ್ಲುತ್ತದೆ. ಹೀಗಾಗಿ ಒಟ್ಟು ಕಾವ್ಯವೆಂಬುದು ಕವಿಯ ಗ್ರಹಿಕೆ ಮತ್ತು ಕವಿಯ ನಿರ್ಮಾಣವಾಗಿ ಕಾಣಲಾಗುತ್ತದೆ. ಜನಪದದಲ್ಲಿಯೂ ರಚಿಸುವ ಕವಿ ಒಬ್ಬನೇ ಆದರೂ ಅವನ ದೃಷ್ಟಿ ವೈಯಕ್ತಿಕ ವಾಗಿರದೆ, ಸಮೂಹದ ದೃಷ್ಟಿ ಉಳಿಸಿಕೊಂಡಿರುತ್ತಾನೆ. ನಾಲ್ಕುಜನ ಏನನ್ನು ಗ್ರಹಿಸಲು ಸಾಧ್ಯವೋ ಅದನ್ನು ಆತ ಹೇಳಲು ಬಯಸುತ್ತಾನೆ. ಅವನದು ಸಮೂಹದ ಬಯಕೆಯೇ ಆಗಿರುತ್ತದೆ. ಹೀಗಾಗಿ ಅವನದು ಸಮೂಹದ ದೃಷ್ಟಿ ಆಗಿರುವುದರಿಂದ, ಮತ್ತು ತನ್ನ ಕಾವ್ಯವನ್ನು ಸಮೂಹಕ್ಕೆ ಒಪ್ಪಿಸಿ ಬಿಡುವುದರಿಂದ ಅಲ್ಲಿ ಸ್ಥಳೀಯವಾಗಿ ಸಹಜವಾದ ಮಾರ್ಪಾಡುಗಳಿಗೆ ಅವಕಾಶವಿರುವುದರಿಂದ ಆತ ರಚಿಸುವ ಕಾವ್ಯ ‘ಸಮೂಹ ಸಂದರ್ಭದ ಕೂಸು’ ಎಂದು ಹೇಳುತ್ತೇವೆ. ಅಂದರೆ ರಚನೆ ಹಿಂದಾಗಿ, ಕವಿಯ ಸ್ವಂತ ಬಯಕೆ ಮತ್ತು ಗ್ರಹಿಕೆಗಿಂತ ಸಮೂಹದ ಬಯಕೆ ಮತ್ತು ಗ್ರಹಿಕೆಗಳನ್ನು ಉಳಿಸಿಕೊಂಡು ಬರುವ ಕಾಳಜಿ ಅಲ್ಲಿ ಎದ್ದು ತೋರುವುದರಿಂದ ಅದು ‘ಸಮೂಹ ಪ್ರಜ್ಞೆಯ ಕಾವ್ಯ’ ಎನಿಸುತ್ತದೆ. ಹೀಗೆ ಹೇಳುವಾಗಲೂ ಇಲ್ಲಿ ಕವಿ ಉಳಿಸಿ ಕೊಂಡು ಬರುವ ಈ ಸಮೂಹ ದೃಷ್ಟಿ ಪ್ರಮುಖವಾಗುತ್ತದೆ. ಹೀಗಾಗಿಯೇ ಅನಾಮಧೇಯತೆ ಅಲ್ಲಿ ಗೋಚರಿಸುತ್ತದೆ. ಅಂದರೆ ರಚಿಸಿದವರ ಹೆಸರು ರಚನೆಯ ಕೊನೆಯಲ್ಲಿ ಕಾಣುವುದಿಲ್ಲ. ಆದರೆ ಶಿಷ್ಟದಲ್ಲಿ ಇದು ಪಂಪನ ಕಾವ್ಯ, ಇದು ಕುಮಾರವ್ಯಾಸನ ಕಾವ್ಯ, ಹರಿಹರನ ಕಾವ್ಯವೆಂದು ಗುರುತಿಸುವಲ್ಲಿ ಅವರ ವೈಯಕ್ತಿಕವಾದ ವ್ಯಕ್ತಿತ್ವದ ಪ್ರಶ್ನೆಯೇ ಅಲ್ಲಿ ಮುಖ್ಯವಾಗಿರುತ್ತದೆ.

ಹೀಗಿದ್ದೂ ಟಿ.ಎಸ್.ಎಲಿಯಟ್ ಅವರಂತಹ ಜಗತ್ ಪ್ರಸಿದ್ಧ ಮೀಮಾಂಸಕರು, ‘ಕವಿ ವ್ಯಕ್ತಿಯೇ ಬೇರೆ, ಲೋಕ ವ್ಯಕ್ತಿಯೇ ಬೇರೆ’; (‘ಕವಿ ಪಂಪನೇ ಬೇರೆ, ವ್ಯಕ್ತಿ ಪಂಪನೇ ಬೇರೆ’) ಎಂಬಂತಹ ನಿಲುವನ್ನು ತಮ್ಮ ಪ್ರಸಿದ್ಧ ಸಿದ್ಧಾಂತವಾದ ‘ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ’ ಎಂಬ ಬರಹದಲ್ಲಿ ತಾಳುತ್ತಾರೆ. ‘ಕವಿಯ ವ್ಯಕ್ತಿತ್ವವೆಂಬುದು ಕಾವ್ಯ ನಿರ್ಮಿತಿಯ ಕಾಲಕ್ಕೆ ಕೇವಲ ಮಾಧ್ಯಮವಾಗಿ ಮಾತ್ರ ಕೆಲಸ ಮಾಡುತ್ತದೆ’ ಎಂಬ ಅಭಿಪ್ರಾಯ ಅವರದಾಗಿದೆ. ಇದು ಸಂಸ್ಕೃತಿಯ ತೊಡಕೇನೋ ಎನಿಸುತ್ತದೆ.

ಈ ಹಿಂದೆಯೇ ಹೇಳಿರುವಂತೆ ಪ್ರತಿಭಾವಂತನ ದೇಹ – ಮನಸ್ಸುಗಳು ಸಹಜವಾಗಿಯೇ ಅವನ ಪ್ರತಿಭೆಗೆ ತಕ್ಕಂತೆ ಬೆಳವಣಿಗೆ ಹೊಂದುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಜೊತೆಗೆ ಕವಿಯಾದವನು ಪಡೆಯುವ ವಿದ್ಯ, ಬೆಳೆಸಿಕೊಳ್ಳುವ ರೂಢಿಗಳು ಅವನ ಪ್ರತಿಭಾಸ್ವಭಾವಕ್ಕೆ ತಕ್ಕಂತೆಯೇ ಇರುತ್ತವೆ. ಅಂದರೆ ಕವಿಯು ಪಡೆಯುವ ವಿದ್ಯ ಮತ್ತು ದಿನನಿತ್ಯದ ರೂಢಿಗಳು (ಅಭ್ಯಾಸ)ಪ್ರತಿಭೆಯ ದಾಹವನ್ನು ತೀರಿಸಿಕೊಳ್ಳುವ ಪ್ರಯತ್ನ ಮತ್ತು ಬಲಗಳೇ ಆಗಿರುತ್ತವೆ. ಆತ ಲೋಕದಲ್ಲಿ ಜೀವಿಸುವಾಗಲೂ ಸಮಾಜದಲ್ಲಿ ಅವನನ್ನು ಕಾಣುವ ರೀತಿ ಖಂಡಿತ ಭಿನ್ನವಾಗಿರುತ್ತದೆ. ಈ ಭಿನ್ನತೆಯನ್ನು ಕವಿ ಅಥವಾ ಕಲಾವಿದ ಸಹಜವಾಗಿ ಕಾಯ್ದುಕೊಂಡು ಬರುತ್ತಾನೆ. ಸಾಮಾನ್ಯವಾಗಿ ಒಂದು ಸಣ್ಣ ರೋಗಕ್ಕೆ ಒಬ್ಬನಿಗೆ ಔಷಧಿ ತಿಳಿದಿದೆ ಎಂದರೆ, ಹಳ್ಳಿಯ ಸಮಾಜದಲ್ಲಿ ಅವನಿಗೆ ಅಷ್ಟರ ಮಟ್ಟಿಗೆ ಗೌರವ ವಿಶೇಷವಾಗಿರು ತ್ತದೆ. ಹೀಗಾಗಿ ಅವನ ವರ್ತನೆ ಭಿನ್ನವಾಗುತ್ತದೆ, ವ್ಯಕ್ತಿತ್ವದಲ್ಲಿ ವ್ಯತ್ಯಾಸ ಕಾಣಿಸಿಕೊಳ್ಳುತ್ತದೆ. ಅದನ್ನಾತ ಉಳಿಸಿಕೊಂಡು ಬರಲು ಇಚ್ಛಿಸುತ್ತಾನೆ. ಹೀಗೆಯೇ ಒಬ್ಬ ಕಲಾವಿದನ ಬಗ್ಗೆಯೂ ಸಮಾಜ ಗೌರವಭಾವನೆಯನ್ನು ತಳೆದಿರುತ್ತದೆ. ಹೀಗೆಂದ ಮಾತ್ರಕ್ಕೆ ಅವನಿಗೆ ಮನುಷ್ಯನ ಸಹಜ ಗುಣಗಳು ಇರಬಾರದೆಂದಲ್ಲ. ಅದರ ಜೊತೆಗೆ ಖಂಡಿತವಾಗಿ ಅವನ ವ್ಯಕ್ತಿತ್ವದಲ್ಲಿ ಬದಲಾವ ಣೆಗಳು ಕಾಣಿಸಿಕೊಳ್ಳಲೇಬೇಕು, ಕಾಣಿಸಿಕೊಳು್ಳತ್ತವೆ. ಆದರೆ ತನ್ನ ವ್ಯಕ್ತಿತ್ವದ ಎತ್ತರವನ್ನು ಕಾಯ್ದುಕೊಳ್ಳುವ ಎಚ್ಚರ ಕವಿ – ಕಲಾವಿದರಲ್ಲಿಬೇಕು. ಅದಿಲ್ಲವೆಂದರೆ ಆತ ತನ್ನನ್ನು ತಾನು ವಂಚಿಸಿಕೊಂಡಂತೆಯೇ.

ಪ್ರತಿಭಾವಂತನ ಹೀನಗುಣಗಳನ್ನು ಸಮಾಜ ಸಹಿಸಿಕೊಳ್ಳಬೇಕು ಎಂಬುದು ಸರಿಯಾದ ಗ್ರಹಿಕೆಯಲ್ಲ. ಆತ ಎಲ್ಲರಂತೆ ರಾಗ – ದ್ವೇಷಗಳಿಗೆ ಸಹಜವಾಗಿ ಈಡಾಗುತ್ತಾನೆ, ಅದಕ್ಕಾಗಿ ಕವಿ ವ್ಯಕ್ತಿ ಬೇರೆ, ಲೋಕವ್ಯಕ್ತಿ ಬೇರೆ ಎನ್ನುವಂತಹವು ಕೇವಲ ತರ್ಕದ ಮಾತುಗಳೆನಿಸುತ್ತವೆ. ಅಗಾಧ ಪ್ರತಿಭೆಯನ್ನು ಹೊಂದಿಯೂ ಲಂಪಟನಾದವನನ್ನು ಸಹಜವಾದ ರಾಗ – ದ್ವೇಷದ ವ್ಯಕ್ತಿ ಎಂದು ಸಮಾಜ ಗ್ರಹಿಸಬೇಕೆಂದು ಬಯಸುವುದು ಬೇಜವಾಬ್ದಾರಿ ಮಾತೆನಿಸುತ್ತದೆ. ಹಾಗೆಂದರೆ ಆತ ಸಹಜವಾದ ತಪ್ಪುಗಳನ್ನು ಮಾಡಲೇಬಾರದೆಂದಲ್ಲ. ಸಮಾಜದ ಮರ್ಯಾದೆಗೆ ಒಳಗಾದ ವ್ಯಕ್ತಿ ಮಾಡುವ ಸಹಜ ತಪ್ಪುಗಳನ್ನು ಬಲು ಸರಸದಿಂದಲೇ ಸಹಿಸುವ ಶಕ್ತಿ ಸಮಾಜಕ್ಕೆ ಸಹಜವಾಗಿಯೇ ಇದೆ. ಆ ತಪ್ಪುಗಳು ಸಹಜವಾಗಿರಬೇಕು, ಅಪರೂಪವಾಗಿರಬೇಕು; ಪ್ರತಿಭಾವಂತನು ಬೆಳೆಸಿಕೊಂಡ ಕುಹಕ ಗುಣಗಳಾಗಿರಬಾರದು, ಅಥವಾ ಆತ ತನ್ನ ವ್ಯಕ್ತಿತ್ವವನ್ನು ಕಡೆಗಣಿಸಿ ಖಾಯಂ ಆಗಿ ರೂಢಿಸಿಕೊಂಡ, ತನ್ನ ಗೌರವವನ್ನು ತಾನೇ ಕಾಪಾಡಿಕೊಳ್ಳಲು ಅಸಮರ್ಥ ವಾದ ವರ್ತನೆಗಳಾಗಿರಬಾರದು.

ಪ್ರತಿಭಾವಂತನ ನಡೆ – ನುಡಿ ಒಂದಾಗಿರಬೇಕು ಎಂದು ಸಮಾಜ ಬಯಸುವುದು ಸಹಜ. ಪ್ರತಿಭಾವಂತನಾಗಿಯೂ ಅದನ್ನು ಮೀರುವ ಲಂಪಟನೋ ಅಪರಾಧಿಯೋ ಆಗಿದ್ದರೆ ಸಮಾಜ ಅದನ್ನು ಸಹಿಸಿಕೊಳ್ಳಬೇಕು ಎಂದು ಹೇಳುವುದು ಸಮಂಜಸವೆನಿಸಲಾರದು. ತಂದೆ ಮಾಡುವ ತಪ್ಪುಗಳನ್ನು ಮಕ್ಕಳು ಸಹಿಸಿಕೊಳ್ಳುವಲ್ಲೂ ಒಂದು ಮಿತಿ ಇರುತ್ತದೆ. ತಪ್ಪುಗಳ ಮಿತಿಮೀರಿದಾಗ ತಂದೆ ಎಂಬ ಸಂಬಂಧವನ್ನೂ ಮೀರಿ ನಿಲ್ಲುವ ಸಾಮಾಜಿಕ – ನೈತಿಕ ನೀತಿವೊಂದಿದೆ. ಪ್ರತಿಯೊಬ್ಬ ಕಲಾವಿದನಿಗೆ ಒಂದು ಸಾಮಾಜಿಕ ನೀತಿ ಇರುತ್ತದೆ. ಈ ಸಾಮಾಜಿಕ ನೀತಿಯನ್ನು ಕಡೆಗಣಿಸುವವ ಎಂತಹ ಪ್ರತಿಭಾವಂತನಾದರೂ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಆತನನ್ನು ಅಪಾಯಕಾರಿ ಎಂದೇ ಭಾವಿಸಬೇಕಾಗುತ್ತದೆ.

ಜನಪದ ಸಮಾಜದಲ್ಲಿ ಒಬ್ಬ ಕವಿಯ ಮಹತ್ವವಿರುವುದು ಆತನ ವ್ಯಕ್ತಿತ್ವವನ್ನು ಅವಲಂಬಿಸಿದೆ. ಅದಕ್ಕಾಗಿಯೇ ಇಲ್ಲಿ ಅನೇಕ ಜನ ಸಂತ ಕವಿಗಳು ಕಾಣುತ್ತಾರೆ. ತತ್ತ್ವಪದ ಕಾರರನ್ನು, ಸೂಫಿಸಂತರನ್ನು ಈ ಮಾತಿಗೆ ಉದಾಹರಣೆಯಾಗಿ ಕಾಣಬಹುದಾಗಿದೆ. ಜನಪದ ಕವಿಯೊಬ್ಬನಿಗೆ ಸಮಾಜ ಕೊಡುವ ಮರ್ಯಾದೆ ದೊಡ್ಡದಾಗಿರುತ್ತದೆ. ಅದನ್ನಾತ ಉಳಿಸಿ ಕೊಂಡುಹೋಗಲು ಪ್ರಯತ್ನಿಸುತ್ತಾನೆ. ಆತನಿಗೆ ಕಾವ್ಯ ಕಟ್ಟುವುದು ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವದ್ದು ತನ್ನ ಮರ್ಯಾದೆಯನ್ನು ಉಳಿಸಿಕೊಂಡು ಹೋಗುವುದು. ಆತನ ವ್ಯಕ್ತಿತ್ವದಿಂದಾಗಿ ಕಾವ್ಯ, ಕಾವ್ಯದಿಂದಾಗಿ ಆತನ ವ್ಯಕ್ತಿತ್ವ ಸಾಮಾಜಿಕ ಮರ್ಯಾದೆಗೆ ಗುರಿಯಾಗುತ್ತಿರುತ್ತವೆ. ಇದಕ್ಕೆ ಉದಾಹರಣೆಯಾಗಿ ಮಹಾಗಾಂವದ ಮೀರಾಸಾಬ, ಸಾವಳಗಿಯ ಮಹಮ್ಮದಸಾಬ, ಕಡಕೋಳದ ಮಡಿವಾಳಪ್ಪ, ಸಿರಗಾಪುರ ಬಂಡೆಪ್ಪ ಹೀಗೆ ಸಾಲ್ಹಿಡಿದು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಮರ್ಯಾದೆಯನ್ನು ಕಳೆದುಕೊಂಡು ಜೀವಿಸುವ ಕವಿಗಳು ಜನಪದದಲ್ಲಿ ಕಡಿಮೆ; ಇಲ್ಲವೆನ್ನುವುದೇ ಹೆಚ್ಚು ಸರಿ ಎನಿಸುತ್ತದೆ. ಏಕೆಂದರೆ ಜನಪದರು ವ್ಯಕ್ತಿತ್ವಹೀನನನ್ನು ಮರ್ಯಾದೆಯಿಂದ ಕಾಣಲಾರರು. ಶಿಷ್ಟಲೋಕದಲ್ಲಿ ಪ್ರತಿಭಾವಂತರು ಆಗಾಗ ತಮ್ಮ ಲಂಪಟತನ, ಮೋಸ, ವಂಚನೆಗಳಿಂದ ಪ್ರಸಿದ್ಧರಾಗಿರುತ್ತಾರೆ. ಅಂಥವರ ಕಾವ್ಯ – ಕೃತಿಗಳು ಸಮಾಜದಲ್ಲಿ ಯಾವ ಕಿಮ್ಮತ್ತನ್ನೂ ಪಡೆದಿರುವುದಿಲ್ಲ. ಒತ್ತಾಯಪೂರ್ವಕವಾಗಿ ಹಾಗೆ ಕಾಣುವಂತೆ ಪ್ರಯತ್ನಿಸುತ್ತಿದ್ದರೂ ಅದು ಕೇವಲ ತಾತೂ ್ಪರ್ತಿಕ ಮಾತ್ರ.

ನಡೆ – ನುಡಿಗಳ ಬಗೆಗೆ ಹೆಚ್ಚು ಚರ್ಚೆ ಮಾಡಿದವರು ವಚನಕಾರರು. ನಡೆ – ನುಡಿ ಒಂದಾದವನು ಮಾತ್ರ ಶರಣ (ಕವಿ) ಎನ್ನುವುದು ಅವರ ಭಾವನೆ. ಶರಣನೇ ಇಲ್ಲಿ ವಚನಗಳನ್ನು ಅರ್ಥಾತ್ ಕಾವ್ಯಗಳನ್ನು ಬರೆದ ಕವಿ. ‘ಶರಣನ ನುಡಿಯೆಂತೋ ನಡೆ ಹಾಗೆ, ಅವನ ನಡೆಯೆಂತೋ ನುಡಿ ಹಾಗೆ’ ಎನ್ನುತ್ತಾರೆ ಬಸವಣ್ಣನವರು.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯ ೮೦೩

ಶರಣನ ನುಡಿಚೆನ್ನ, ಅವನ ನಡೆ ಚೆನ್ನ’ (೭೯೫).
ನುಡಿದಂತೆ ನಡೆಯದಿದ್ದಡೆ
ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯ’ (೪೧೮)

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವೆ     (೪೪೧)

ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ
ಹಿಡಿದಿರ್ದ ಲಿಂಗವು ಘಟಸರ್ಪನಯ್ಯ (೬೪೬)

ನಡೆದು ತಪ್ಪುವನೆ ಶರಣನು? ನುಡಿದು ಹುಸಿವನೆ ಶರಣನು?’(೬೭೪)

ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟು ಸಂದೇಹವುಳ್ಳಡೆ
ಹಲುದೋರೆ ಮೂಗ ಕೊಯಿ, ಕೂಡಲಸಂಗಮದೇವಾ(೭೧೧)

ಹಿಗೆ ನಡೆ – ನುಡಿ ಒಂದಾಗಿರುವುದು ಕವಿಯ ವ್ಯಕ್ತಿತ್ವದ ಅನಿವಾರ್ಯ ಗುಣ. ಸಮಾಜಕ್ಕೆ ಏನಾದರೂ ಕೊಡುವವನು, ಸಮಾಜ ಬಯಸುವಂತಿರಬೇಕು. ಧರ್ಮೋಪದೇಶ ಮಾಡುವ ವನು ಸನ್ಯಾಸ ಸ್ವೀಕರಿಸಿ ಕಾವಿ ತೊಡುವುದು ಅನಿವಾರ್ಯ. ಧರ್ಮದಿಂದ ನಡೆಯುವುದು ಅವನ ಕರ್ತವ್ಯ. ಹೀಗಾದರೆ ಅವನ ಉಪದೇಶ ಸಮಾಜಕ್ಕೆ ನಾಟುತ್ತದೆ. ಹಾಗೆಯೇ ಪ್ರತಿಭಾವಂತ ನಾದ ಕವಿ (ಕಲಾವಿದ) ಕನಿಷ್ಟ ಸಾಮಾಜಿಕ ನೀತಿಯನ್ನು ಅನುಸರಿಸು ವುದು ಅನಿವಾರ್ಯ. ಅದು ಅವನ ವ್ಯಕ್ತಿತ್ವವನ್ನು ಢಾಳವಾಗಿ ಬೆಳಗಿಸುತ್ತದೆ. ಹೇಗೆ ಪ್ರತಿಭಾವಂತನಲ್ಲದವನ ಕಾವ್ಯ ದೋಷಯುಕ್ತವಾಗಿ ನಿರ್ಮಾಣವಾಗುತ್ತದೋ ಹೇಗೆ ಅತ್ಯಲ್ಪ ಊನವು ಶರೀರದ ಸೌಂದರ್ಯವನ್ನು ಇಡಿಯಾಗಿ ಹಾಳುಗೆಡುವುದೆಂದು ಶಾಸ್ತ್ರಕಾರರು ಬಗೆಯುವರೋ ಹಾಗೇ ವ್ಯಕ್ತಿತ್ವಹೀನನ ಕಾವ್ಯವು ಸಮಾಜದಿಂದ ನಿರಾಕರಣೆಗೆ ಒಳಗಾಗುತ್ತದೆ. ಮತ್ತು ಇಂಥವನಿಂದ ಮಹತ್ತಾದುದನ್ನು ಕೊಡಲು ಸಾಧ್ಯವಾಗುವುದೂ ಇಲ್ಲ.

ಕವಿ ಬದುಕಿದ್ದಾಗ ಅಥವಾ ಬರೆದಿಟ್ಟ ಅವನ ಕೆಲ ಜೀವನದ ವಿವರಗಳಿಂದ ಸ್ವಲ್ಪ ಅನುಕೂಲವಾದರೂ ಅದರಿಂದ ಮುಂದೆ ಹೆಚ್ಚಿನ ಉಪಯೋಗವಾಲಿಕ್ಕಿಲ್ಲ ಎಂಬ ತರ್ಕವೂ ನಮ್ಮ ಮುಂದೆ ಬರುವುದು ಸಾಮಾನ್ಯ. ಆದರೆ ಅವನ ಭೌತಿಕ ಶರೀರ ನಾಶವಾದರೂ ಅವನು ಸೃಜಿಸಿದ, ಆತನದೇ ಭಾವ ಮತ್ತು ಬೌದ್ಧಿಕ ವಂಶದ ಕುಡಿಯಾದ (ಕೂಸಾದ ) ಕಾವ್ಯ ಅವನ ವ್ಯಕ್ತಿತ್ವದ ಮುದ್ರೆಯೊತ್ತಿಕೊಂಡೇ ಇರುತ್ತದೆ. ಕೀಳುಗುಣದ ಕಾವ್ಯವನ್ನು ಸಮಾಜವು ತನ್ನ ಶಾಶ್ವತವಾದ ಕೊಡುಗೆಯಲ್ಲಿ ಸ್ಥಾನ ಕೊಡುವುದೇ ಇಲ್ಲ. ಹೀಗಾಗಿ ಕಾವ್ಯವೆನ್ನುವುದು ಎಲಿಯಟ್ ಮಹಾಶಯ ಹೇಳುವಂತೆ ಕವಿಯ ವ್ಯಕ್ತಿತ್ವದಿಂದ ಜಾರಿಬೀಳುವ ವಸ್ತುವಲ್ಲ, ಅದು ಅವನ ಅನುಭವದ – ಜ್ಞಾನದ – ವ್ಯಕ್ತಿತ್ವದ ಕೂಸಾಗಿಯೇ ಇದ್ದು, ಕವಿಯ ಬುದ್ಧಿ – ಭಾವಗಳ ವಂಶವಾಹಿನಿಯನ್ನು ಮುಂದುವರೆಸುವ ಮಹತ್ವದ ಧಾರೆಯೇ ಆಗಿರುತ್ತದೆ. ಉತ್ತಮ ಕವಿಯ ಕಾವ್ಯ ಅವನ ವ್ಯಕ್ತಿತ್ವದೊಂದಿಗೆ ಬೆಳಗಿದಾಗ ಖಂಡಿತ ಅದು ಶಾಶ್ವತವಾದ ವೌಲ್ಯವನ್ನು ಸಾರುತ್ತದೆ, ವೌಲಿಕವಾಗಿರುತ್ತದೆ. ಅದು ಎಂತಹ ಕಾವ್ಯವಾಗಿರುತ್ತದೆ ಎಂಬುದಕ್ಕೆ ಬಸವಣ್ಣನವರ ಈ ವಚನ ನಮಗೆ ಸಾಕ್ಷಿಯಾಗಿ ಕಾಣುತ್ತದೆ.

ಕೆಱೀ ಹಳ್ಳ ಬಾವಿಗಳು ಮೈದೆಗೆದಡೆ
ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು
ವಾರಿಧಿ ಮೈದೆಗೆದಡೆ ರತ್ನಂಗಳ ಕಾಣಬಹುದು
ನಮ್ಮ ಕೂಡಲ ಸಂಗನ ಶರಣರು ಮನದೆಱೀದು ಮಾತನಾಡಿದಡೆ
ಲಿಂಗವ ಕಾಣಬಹುದು ೮೬೨

 

ಅವರವರ ವ್ಯಕ್ತಿತ್ವದಂತೆ ಅವರ ಕಾವ್ಯ ಎನ್ನುವುದಕ್ಕೆ ಈ ವಚನ ಸಾಕ್ಷಿಯಾಗಿದೆ. ಇದೆಲ್ಲ ಆಯಾ ಕವಿಯ ವ್ಯಕ್ತಿತ್ವವನ್ನವಲಂಬಿಸಿರುವ ಗುಟ್ಟು.

* * *

ಜನಪದ ಲೋಕದಲ್ಲೂ ಕುಕವಿಗಳ ನಿಂದೆ ಕಂಡು ಬರುತ್ತದೆ ಎಂಬ ಮಾತನ್ನು ಹಿಂದೆಯೇ ಹೇಳಿದೆ. ಜನಪದರು ಕವಿಯ ಪ್ರತಿಭೆಯನ್ನನುಸರಿಸಿ ವರಕವಿ ಮತ್ತು ನರಕವಿ (ಕುಕವಿ) ಎಂದು ಇಬ್ಬಗೆಯ ಕವಿಗಳನ್ನು ಗುರುತಿಸುತ್ತಾರೆ. ‘ಕವಿತಾಶಕ್ತಿ’ಯನ್ನು ದೇವರ ದೇಣಿಗೆ (ವರ)ಎಂದು ನಂಬುತ್ತಾರೆ. ಒಳ್ಳೆಯ ಪ್ರತಿಭಾನ್ವಿತ ಕವಿಗೆ ದೇವರೇ ವರರೂಪವಾಗಿ ‘ಕವಿತಾಶಕ್ತಿ’ ಕೊಟ್ಟನೆಂದು ಭಾವಿಸುತ್ತಾರೆ. ಈ ಕಾರಣಗಳಿಂದಲೇ ‘ವರಕವಿ’ ಎಂಬ ಹೆಸರು ವಾಡಿಕೆಗೆ ಬಂದಂತೆ ತೋರುತ್ತದೆ. ಇದಕ್ಕೆ ಸಬಲವಾದ ಕಾರಣವೆಂದರೆ ಪ್ರತಿಯೊಬ್ಬ ಜನಪದ ಕವಿ ಒಂದು ದೈವದ ಆರಾಧಕನಾಗಿ ಇದ್ದು, ಆ ದೈವದ ಅನುಗ್ರಹದ ಬಲದಿಂದಲೇ ತಾನು ಹಾಡು ರಚಿಸುತ್ತಿರುವುದಾಗಿ, ಹಾಡುತ್ತಿರುವುದಾಗಿ ಹೇಳಿಕೊಂಡಿರುವುದು.

[1] ಇನ್ನೂ ಕೆಲವು ಕಡೆ ಆ ದೈವವೇ ತನ್ನ ನಾಲಿಗೆಯಿಂದ ಹಾಡು ನುಡಿಸುತ್ತಿದೆ – ನುಡಿಯುತ್ತಿದೆ ಎಂಬ ಭಾವವನ್ನು ವ್ಯಕ್ತಪಡಿಸಿರುವುದು ಗಮನಕ್ಕೆ ಬರುತ್ತದೆ. ಈ ಎಲ್ಲ ಮಾತುಗಳಿಂದ ‘ವರಕವಿ’ಯ ಲಕ್ಷಣ ಗಳನ್ನು ಊಹಿಸಿ ಹೇಳುವುದಾದರೆ; ಅವನೊಬ್ಬ ಒಳ್ಳೆಯ ಸಚ್ಚಾರಿತ್ರ್ಯ ವ್ಯಕ್ತಿತ್ವವುಳ್ಳವನಾಗಿರು ತ್ತಾನೆ. ಅವನ ಕಾವ್ಯ ಸಹಜವಾಗಿರುತ್ತದೆ. ಸುಮಧುರವಾಗಿರುತ್ತದೆ. ಪ್ರತಿಭಾಪೂರ್ಣವಾಗಿ ರುತ್ತದೆ. ಹೀಗಿರುವುದರಿಂದ ಅವನ ಕವಿತ್ವದ ಓಘಕ್ಕೆ ಜನಪದರು ಮನಸೋಲುತ್ತಾರೆ. ಅದೋಷ ಕವಿ ಎಂದು ಬಗೆಯುತ್ತಾರೆ. ಸುಸ್ವರವುಳ್ಳ ಕಂಠವೂ ವರಕವಿಯ ಲಕ್ಷಣಗಳಲ್ಲಿ ಒಂದಾಗಿ ಸೇರುತ್ತದೆ. ಕಾವ್ಯವನ್ನು ‘ಶುದ್ಧವಾಗಿ’ ಬರೆಯಬೇಕು ಎಂಬುದು ಜನಪದರ ನಿಲುವು. ಬಹುಶಃ ಈ ಮಾತು ‘ಮಡಿಯಿಂದ’[2] ಎಂಬ ಅರ್ಥದೊಂದಿಗೆ ‘ಆತ್ಮಶುದ್ಧಿ’ಯಿಂದ ಎಂಬ ಅರ್ಥವನ್ನೂ ಕೊಡುತ್ತದೆ. ಇಲ್ಲಿಯೂ ಒಂದು ಸಚ್ಚಾರಿತ್ರ್ಯವುಳ್ಳ ವ್ಯಕ್ತಿತ್ವವನ್ನೇ ಅವರು ಬಗೆಯು ತ್ತಿರುವರೆಂಬ ಮಾತು ಸ್ಪಷ್ಟವಾಗುತ್ತದೆ.

ಒಬ್ಬ ಸಾಧಾರಣ ಕೃತಿಕಾರ, ಪ್ರಯತ್ನಪೂರ್ವಕವಾಗಿ ಕಾವ್ಯ ರಚಿಸುವವನನ್ನು ‘ನರಕವಿ’ ಅಥವಾ ‘ಕುಕವಿ’ ಎಂದು ಕರೆಯುತ್ತಾರೆ. ಈ ಕವಿ ತನ್ನಲ್ಲಿ ಅಷ್ಟೇನೂ ಪ್ರತಿಭೆಯಿಲ್ಲದಿದ್ದರೂ ವ್ಯತ್ಪತ್ತಿ ಸಾಮರ್ಥ್ಯ ಪಕ್ವವಾಗಿಲ್ಲದಿದ್ದರೂ ಪ್ರಯತ್ನಪೂರ್ವಕವಾಗಿ ಏನೆಲ್ಲ ಸಾಧಿಸಬೇಕೆಂದು ಹೊರಡುತ್ತಾನೆ. ತನ್ನ ಒಣ ಪಾಂಡಿತ್ಯವನ್ನು ಶುಷ್ಕವಾಗಿ ಪ್ರದರ್ಶಿಸತೊಡಗುತ್ತಾನೆ. ಹೀಗಾಗಿ ಸಹಜವಾಗಿಯೇ ಕಾವ್ಯ ರಚನೆಯಲ್ಲಿ ಸೋಲುತ್ತಾನೆ, ಎಡುವುತ್ತಾನೆ, ನಗೆಗೀಡಾಗುತ್ತಾನೆ. ಈ ಸೋಲಿನ ಅವಮಾನದಿಂದ ಅವನಲ್ಲಿ ಮಾತ್ಸರ್ಯದ ಭಾವನೆ ಅಂಕುರಿಸುತ್ತದೆ. ಪರನಿಂದೆಗೆ ತೊಡಗಿಸುತ್ತದೆ. ಈ ಎಲ್ಲ ಕಾರಣಗಳಿಂದ ಅವನು ‘ನರಕವಿ’ ಅಥವಾ ‘ಕುಕವಿ’ ಎಂಬ ಅಭಿದಾನಕ್ಕೆ ಪಾತ್ರನಾಗುತ್ತಾನೆ. ದುರಂತ ನಾಯಕನಂತೆ ಮೊಂಡನಾಗಿ ಮೆರೆಯುತ್ತಾನೆ. ಹೀಗೆ ವರಕವಿ ದೋಷರಹಿತನಾಗಿ, ನರಕವಿ ದೋಷಯುಕ್ತನಾಗಿ ತೋರುತ್ತಾನೆ. ಅದಕ್ಕಾಗಿ ಜನಪದರು ಕವಿಯ ವ್ಯಕ್ತಿತ್ವ, ವಸ್ತುವಿನ ಆಯ್ಕೆ ಇವುಗಳಿಂದ ಮೊದಲ್ಗೊಂಡು ಬರವಣಿಗೆಯ ಓಘದವರೆಗೆ ವರಕವಿಯನ್ನು ಮೆಚ್ಚುವುದು ಸಹಜವೆನಿಸುತ್ತದೆ.

‘ಕವಿ – ಕಾವ್ಯ’ದಲ್ಲಿ ‘ದೋಷ – ಅದೋಷ’ಗಳನ್ನು ಕಂಡುಕೊಳ್ಳುವ ಜನಪದರ ನಿಲುವಿನ ಬಗೆಗೆ ಇಲ್ಲಿ ಒಂದೆರಡು ಮಾತುಗಳನ್ನು ಹೇಳಬೇಕೆನಿಸುತ್ತದೆ. ದೋಷಾದೋಷ ನಿರ್ಣಯಗಳ ಬಗ್ಗೆ ಪ್ರತ್ಯೇಕ ಲಕ್ಷಣಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಈ ಮಾತು ಭಾರತೀಯ ಕಾವ್ಯಮೀಮಾಂಸಾಕಾರರೂ ಒಪ್ಪಿರುತ್ತಾರೆ. ಗುಣ – ದೋಷಗಳು ತೀರ ನಿಕಟ ಸಂಬಂಧವನ್ನು ಹೊಂದಿರುವುದರಿಂದ, ಅವುಗಳಲ್ಲಿ ಒಂದನ್ನು ಬಿಟ್ಟು ಮತ್ತೊಂದನ್ನು ತಿಳಿದುಕೊಳ್ಳುವುದು ಅಸಾಧ್ಯವೆನಿಸುತ್ತದೆ. ‘‘ಭರತನು ದೋಷ ವಿಪರ್ಯವೇ ಗುಣವೆಂದು ಹೇಳಿದರೆ, ಗುಣ ವಿಪರ್ಯವೇ ದೋಷವೆಂದು ವಾಮನನು ಸೂತ್ರ ಬರೆಯುತ್ತಾನೆ. ಆದುದರಿಂದ ಕಾವ್ಯದಲ್ಲಿ ಗುಣ – ದೋಷಗಳ ಖಚಿತ ಜ್ಞಾನಕ್ಕೆ ಎರನ್ನೂ ಕೂಡಿಸಿಯೇ ಅರ್ಥಮಾಡಿಕೊಳ್ಳ ಬೇಕಾಗುತ್ತದೆ.’’[3] ಹೀಗಿರುವುದರಿಂದ ಜನಪದದಲ್ಲಿ, ಕವಿಯ ವ್ಯಕ್ತಿತ್ವದಿಂದ ಮೊದಲ್ಗೊಂಡು, ಕಾವ್ಯದ ಅಂಗ ಅಂಗಗಳಲ್ಲೂ ದೋಷ – ಅದೋಷಗಳನ್ನು ಕಾಣುವ ಪ್ರವೃತ್ತಿಯಿರುವುದು ಸಮಂಜಸವಾದುದೆಂದೇ ಹೇಳಬೇಕಾಗುತ್ತದೆ.

ಈ ವಿಷಯದ ಬಗ್ಗೆ ಲಬ್ಧವಾಗುವ ಒಂದೆರಡು ಹಾಡುಗಳನ್ನು ಇಲ್ಲಿ ಕೊಡಲಾಗಿದೆ. ಅವನ್ನು ಅವಲೋಕಿಸಿದರೆ ಸುಮಾರಾಗಿ ಕವಿ – ಕಾವ್ಯದ ಬಗ್ಗೆ, ದೋಷ – ಅದೋಷಗಳ ಬಗ್ಗೆ ಜನಪದ ಕವಿಗಳ ಗ್ರಹಿಕೆ ಏನೆಂಬುದರ ಕಲ್ಪನೆ ಅಲ್ಪಮಟ್ಟಿಗಾದರೂ ಕಲ್ಪಿಸಿಕೊಳ್ಳಬಹುದಾಗಿದೆ.

[1] ದೈವವೇ ತನಗೆ ವರರೂಪವಾಗಿ ‘ಕವಿತಾಶಕ್ತಿ’ ಒದಗಿಸಿತೆಂಬ ಮುಂತಾದ ಭಾವನೆಗಳನ್ನು ವ್ಯಕ್ತಪಡಿಸುವ ಕೆಲವು ನುಡಿಗಳನ್ನು ‘ಕಾವ್ಯದ ಕಾರಣ’ ಎಂಬ ಪ್ರಕರಣದಲ್ಲಿ ಕೊಡಲಾಗಿದೆ. ಕೆಲವು ಕವಿಗಳು ತಮ್ಮ ಗುರುವಿನ ಬಲದಿಂದ, ಆಶೀರ್ವಾದದಿಂದ ತನ್ನಲ್ಲಿ ಕವಿತಾಶಕ್ತಿ ಒಡಮೂಡಿ ಬಂದಿತೆಂದು ನಂಬುವುದೂ ಗಮನಕ್ಕೆ ಬರುತ್ತದೆ.

[2] ಕುಮಾರವ್ಯಾಸನ ಬಗ್ಗೆ ಪ್ರಚಲಿತವಿರುವ ಒಂದು ಸಂಗತಿ : ಆತ ನಾರಾಯಣಪ್ಪನ ಗುಡಿಯಲ್ಲಿ ಹಸಿ ಮೈಯಿಂದಲೇ ಕಾವ್ಯ ಬರೆಯಲು ಕುಳಿತುಕೊಳ್ಳುತ್ತಿದ್ದನು. ಮೈಮೇಲಿನ ಒದ್ದೆ ಬಟ್ಟೆ ಆರುತ್ತ ಬಂದಂತೆ ಕಾವ್ಯದ ಬರವಣಿಗೆಯನ್ನು ನಿಲ್ಲಿಸುತ್ತಿದ್ದನು.

[3] ಡಾ ಕೆ.ಕೃಷ್ಣಮೂರ್ತಿ, ಭಾರತೀಯ ಕಾವ್ಯಮೀಮಾಂಸೆ – ತತ್ತ್ವ ಮತ್ತು ಪ್ರಯೋಗ, ಪು.೨೨, ಬೆಂ.ವಿ.ವಿ.೧೯೭೧.