ಪ್ರತಿಭೆ ಎನ್ನುವ ಪದ ಭಾಮಹನಲ್ಲಿಯೇ ದೊರೆಯುತ್ತದೆ. ಕಾವ್ಯಂ ತು ಜಾಯತೇ ಜಾತು ಕಸ್ಯಚಿತ್ ಪ್ರತಿಭಾವತಂ’()(‘ಕಾವ್ಯಹುಟ್ಟುವುದು ಎಲ್ಲೋ ಒಬ್ಬ ಪ್ರತಿಭಾಶಾಲಿಯಿಂದ ಮಾತ್ರ’) ಎನ್ನುವುದು ಭಾಮಹನ ಅಭಿಮತ. ಈ ಪ್ರತಿಭೆಯನ್ನು – ಕವಿತ್ವ, ಶಕ್ತಿ – ಎಂಬ ಹೆಸರುಗಳಿಂದ ಕರೆಯುವ ರೂಢಿಯೂ ಮೊದಲಿಂದಲೂ ಇದೆ.

ಪ್ರತಿಭೆಯು ಯಾವುದೇ ಕಲಾವಿದನಲ್ಲಿರುವ ಸಾಮರ್ಥ್ಯ. ಇದು ಅವನಲ್ಲಿ ಜನ್ಮತಃ (ಹುಟ್ಟು ಕಾರಣವಾಗಿ – ಹುಟ್ಟಿನಿಂದಲೇ) ಬರುವುದರಿಂದ ಇದನ್ನು ‘ಶಕ್ತಿ’ ಎಂದು ಕರೆದಂತೆ ತೋರುತ್ತದೆ. ಇದನ್ನು ಜನ್ಮಾಂತರದಿಂದ ಬಂದ ಸಂಸ್ಕಾರವಿಶೇಷವೆಂದೂ (ವಾಮನ) ಹೇಳಲಾಗುತ್ತದೆ. ಏನಿದ್ದರೂ ಅದು ಹುಟ್ಟಿನಿಂದಲೇ ಬರುವ ನೈಸರ್ಗಿಕ ಶಕ್ತಿ ಎಂಬುದಂತೂ ನಿಜ. ದಂಡಿ ಇದನ್ನು ನೈಸರ್ಗಿಕೀ ಪ್ರತಿಭಾ’ (೧೦೩)ಎಂದು ಬಹುಸ್ಪಷ್ಟವಾಗಿ ಗುರುತಿಸುತ್ತಾನೆ. ಕನ್ನಡದ ಕವಿ ರನ್ನ – ಪ್ರತಿಭೆ ನಿಸರ್ಗಮುಂಟು’ (.ಯು.೫೦)ಎಂದು ದಂಡಿಯ ಮಾತನ್ನು ಸ್ಪಷ್ಟವಾಗಿ ಪುನರುಚ್ಛರಿಸುತ್ತಾನೆ. ನೇಮಿಚಂದ್ರ (೧೨೦೦) ನು ಬೆಲೆಯಿಂದಕ್ಕುಮೆ ಕೃತಿ ಗಾ/ವಿಲ ಭುವನದ ಭಾಗ್ಯದಿಂದ ಅಕ್ಕುಂ..’ (ನೇಮಿನಾಥ ಪುರಾಣ, ೪೫ )ಎಂದು ಉದ್ಗಾರ ತೆಗೆಯುತ್ತಾನೆ. ಅಂದರೆ ಕಾವ್ಯಕಟ್ಟುವ ಈ ಶಕ್ತಿ ‘ಭುವನದ ಭಾಗ್ಯದ ಫಲ’, ಎಂದರೆ ಕವಿ ಈ ಭೂಮಿಯ ಮೇಲೆ ಹುಟ್ಟಿದ ಫಲವಾಗಿ, ಅವನ ಇಲ್ಲಿಯ ಜನನವೇ ಕಾರಣವಾಗಿ ಅವನೊಂದಿಗೆ ಬಂದಿರುವಂತಹದು ಎಂದಂತಾಗುತ್ತದೆೆ. ಜನ್ನನು (೧೨೩೦) ಕವಿತಾಶಕ್ತಿ ಸುರೇಂದ್ರಧೇನು, ಅದು ಪುಣ್ಯಾಯುಕ್ತಂ’ (.ನಾ.ಪು. ೬೦) ಎನ್ನುತ್ತಾನೆ. ಷಡಕ್ಷರದೇವ ಕಲಿಸಿದೊಡಂ ಬರ್ಕುಮೆ /ಲ್ಲಲಿತ ಕವಿತ್ವಂ..’(ರಾಜಶೇಖರ ವಿಳಾಸ, ೩೦)ಎನ್ನುವಲ್ಲಿ ಕಾವ್ಯಸೃಜಿಸುವ ಶಕ್ತಿ ಅದು ಕಲಿಸಿದರೆ ಬರುವಂತಹದಲ್ಲ, ಹುಟ್ಟಿನಿಂದಲೇ ಬರುವಂತಹದು ಎಂಬುದು ಅವನ ಅಭಿಪ್ರಾಯವಾಗಿದೆ.

ನಡುಗನ್ನಡದ ಭಕ್ತಿಸಂಪ್ರದಾಯಕ್ಕೆ ಸೇರಿದ ಕವಿಗಳಂತೂ ಈ ಕವಿತ್ವ ಶಕ್ತಿ ‘ದೇವರ ದೇಣಿಗೆ’ ಎಂದು ನಂಬುತ್ತಾರೆ. ಅಷ್ಟೇ ಅಲ್ಲ ‘ಸ್ವತಃ ದೇವರೇ’ ಎಂದೂ ಹೇಳಿಕೊಳ್ಳುತ್ತಾರೆ. ರುದ್ರಭಟ್ಟ, ರತ್ನಾಕರವರ್ಣಿ, ಲಕ್ಷ್ಮೀಶ, ಕುಮಾರವ್ಯಾಸ, ಚಾಮರಸ ಮತ್ತು ಷಡಕ್ಷರದೇವ ಮುಂತಾದ ಕವಿಗಳು ತಾವು ಕಾವ್ಯ ರಚಿಸುತ್ತಿರುವುದು ತಮ್ಮ ಆರಾಧ್ಯದೈವದ ಬಲದಿಂದ ಎಂದೂ ಆ ದೈವವೇ ತಮ್ಮಳಗಿದ್ದು (ದೇವಾಂಶ)ಕಾವ್ಯ ನುಡಿಯುತ್ತಿದೆ ಎಂದೂ ಭಾವಿಸಿ ತಮ್ಮ ಭಾವನೆಗಳನ್ನು ಅಭಿವ್ಯಕ್ತಪಡಿಸುತ್ತಾರೆ.

………………………………………….ಕಾವ್ಯ ಸಮಾಧಿಯಿಂ ಪರಂ
ಜ್ಯೋತಿಮುಕುಂದನೆನ್ನ ಬಗೆಯೊಳ್ ನಿಲೆ ನಿರ್ಮಳ ತತ್ತ್ವಬೋಧಮು
ದ್ದ್ಯೋತಿಪುದೆಂಬುದಂ ಬಯಸಿ ಪೇಳಲೊಡರ್ಚಿದೆನೀ ಪ್ರಬಂಧಮಂ
(ರುದ್ರಭಟ್ಟ, .ವಿ.೧೭)

ಬಿನ್ನಹಗುರುವೆ ಧ್ಯಾನಕೆ ಬೇಸರಾದಾಗ
ನಿನ್ನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ್ಯ ನನ್ನೊಡೆಯ (ರತ್ನಾಕರವರ್ಣಿ, .ವೈ.)

…………………………………ಗೀ
ರ್ವಾಣಪುರನಿಲಯ ಲಕ್ಷ್ಮ್ಮೀವರಂ ತಾನೆ ಸಂಗೀತ ಸುಕಲಾ ನಿಪುಣನು
ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ
ವಾಣಿಯಿಂ ಕತೆಯಂ ಪೇಳಿಸಿದ.……………        (ಲಕ್ಷ್ಮೀಶ, ಜೈ.ಭಾ.)

………..ಸುಮಾರ್ಗದೊಳ್ ನಡೆವ ಸತ್ಪುರುಷನ
ಭೀರದೆಸೆಯಂ ಪೋಲ್ವ ಕಾವ್ಯ ಪ್ರಬಂಧಮಂ
ಶಾರದೆಯ ಕರುಣದಿಂ ಪೇಳ್ವೆನಾಂ……….. (ಲಕ್ಷ್ಮೀಶ, ಜೈ.ಭಾ.)

ವೀರನಾರಾಯಣನೆ ಕವಿ ಲಿಪಿ
ಕಾರ ಕುಮಾರವ್ಯಾಸ (ಕುಮಾರವ್ಯಾಸ, .ಭಾ..ಮಂ.)

ಲಾಗಿನಿಂದಲಿ ಗುರುಗುಹೇಶ್ವರ
ನಾಗಳೆನ್ನನು ನುಡಿಸಿದಡೆ ನುಡಿ
ದಾಗುಮಾಡಿಯೆ ಪೇಳ್ವೆ………. (ಚಾಮರಸ, ಪ್ರ.ಲಿ.ಲೀ.)

ಅರಾರೇಱರ್ಶಾಸ್ತ್ರ
ಶ್ರೀರೋಹಣಗಿರಿಯನಲ್ಲಿ ನವಕವಿತಾಚಿಂ
ತಾರತ್ನಂ ದೊರೆಗುಮೆ ಮಾ
ರಾರಿಯ ಕೃಪೆಯಿಲ್ಲದಂಗೆ ಧರಣೀತಳದೊಳ್     (ಷಡಕ್ಷರದೇವ, ರಾ.ವಿ.೨೯)

ದಂಡಿಯ ‘ನೈಸರ್ಗಿಕೀ ಚ ಪ್ರತಿಭಾ’ ಎಂಬ ಮಾತು ಕನ್ನಡದ ಕವಿಗಳ ಒಪ್ಪಿಗೆಯವರೆಗೂ ಬಂದಿದ್ದನ್ನು ಗಮನಿಸಿದ್ದೇವೆ. ಅದು ಮುಂದೆ ವಾಮನನ ಮಾತಿನಲ್ಲಿ ‘ಜನ್ಮಾಂತರದಿಂದ ಬಂದ ಸಂಸ್ಕಾರ ವಿಶೇಷ’ ಎಂದು ಬಣ್ಣಿಸಿಕೊಂಡಂತೆ ‘ಪ್ರತಿಭೆ ಭುವನದ ಭಾಗ್ಯ’ ಎಂದು ಕನ್ನಡಿಗರಿಂದ ಸ್ವೀಕಾರವಾಯಿತು. ಮುಂದೆ ನಡುಗನ್ನಡದ ಕಾಲಕ್ಕೆ ಪ್ರತಿಭೆ ಎನ್ನುವುದು ‘ದೈವಶಕ್ತಿ’ಎಂಬ ಅಭಿಪ್ರಾಯ ಬಂದಿತು. ಜನಪದರ ಮನೋಭಾವ ಯಾವಾಗಲೂ ‘ಭಕ್ತಿ’ಯಿಂದೊಡ ಗೂಡಿದ್ದೇ ಆಗಿದೆ. ಆದರೆ ಬರಹ ಮೂಲದ ಕನ್ನಡದ ಕವಿಗಳಂತೆ ‘ದೈವವೇ ಕವಿತಾ ಶಕ್ತಿ’ ಎಂಬ ನಿಲುವಿನ ಬದಲಾಗಿ, ‘ಕವಿತ್ವಶಕ್ತಿ ಎನ್ನುವುದು ಕಲಾವಿದನಲ್ಲಿ ದೈವದತ್ತವಾಗಿ ಕಾಣಿಸುವುದು’ ಎಂಬ ಭಾವನೆಯನ್ನು ಜನಪದರು ವ್ಯಕ್ತಪಡಿಸುವುದನ್ನು ಕಾಣುತ್ತೇವೆ.

ಕುಟ್ಟು ಬೀಸುವ ಹಾಡು ಯಾವಾಕಿ ಕಲಿಸ್ಯಾಳ
ಕೃಷ್ಣನ ತಂಗಿ ಸುಭದ್ರಿ ಕಲಿಸ್ಯಾಳ (.ಹಾ.೩೯)

ಮೆಲ್ಲಗೆ ಬಾರೆ ಸರಸತಿಯೆ ನಮ ದನಿ
ಮಲ್ಲಿಗೆ ಸರವ ತಗದಂಗ (ಸೋ.ಚಿ..)

…………………….ಗಣಪ್ಪನ ನೆನದರ
ಚಿಂತಿಲ್ಲದ ಹಾಡ ಹಾಡಿಸುವನೊ (ಗಂ..ಹಾ..)

ಇಂದಿರೇಶನ ದಯದಿಂದ ಹಾಡುವೆನು (ಜಾ..೧೨)

ಶ್ರೀಗುರು ಕರುಣದಿ ಈಗ ಪೇಳುವೆನು (.ಹಾ.)

ಈ ಮೇಲಿನ ಜನಪದರ ಮಾತುಗಳನ್ನು ಗಮನಿಸಿದರೆ ಅವರೆಲ್ಲ ಹೇಳುವುದು ‘ದೈವದ ಬಲದಿಂದ ಹಾಡುವೆನು’ ಎಂದು. ಇಲ್ಲಿ ಎರಡು ಮಾತುಗಳನ್ನು ಗಮನಿಸಬೇಕು:

೧. ದೈವದ ಕರುಣೆಯಿಂದ ಹಾಡುವವನು ಸ್ವತಃ ಕಲಾವಿದನೆ. ದೈವವೇ ಒಳಗಿನಿಂದ ಹಾಡುತ್ತಿಲ್ಲ.

೨. ಹಾಡುವ ವಿಶೇಷ ಶಕ್ತಿ ಮತ್ತು ಹಾಡುವ ಸುಮಧುರ ಕಂಠ ಎರಡೂ ವಿಶೇಷವಾಗಿ ಪ್ರಸ್ತಾಪವಾಗುವುದನ್ನು ಗಮನಿಸಬೇಕು.

ಇಲ್ಲಿ ನಡುಗನ್ನಡ ಕವಿಗಳಂತೆ ‘ದೈವವೇ ಒಳಗಿನಿಂದ ವ್ಯಕ್ತವಾಗುತ್ತದೆ’ ಎಂಬ ಭಾವನೆಗೆ ಭಿನ್ನವಾದ ಭಾವನೆ ಇದೆ. ಇಲ್ಲಿ ‘ದೈವದ ಕರುಣೆ ಮಾತ್ರ ಇದೆ’ – ‘ದೈವವೇ ಹಾಡುತ್ತಿಲ್ಲ’. ಅಂದರೆ ಶಿಷ್ಟ ಕವಿಗಳಲ್ಲಿ ಕಾವ್ಯನಿರ್ಮಾಣ ಎನ್ನುವುದು ಸಂಪೂರ್ಣವಾಗಿ ದೇವರ ಸೃಷ್ಟಿ ಎಂಬಂತೆ ಹೇಳಲಾಗುತ್ತದೆ. ಕಲಾವಿದ ಕೇವಲ ಮಾಧ್ಯಮ ಮಾತ್ರನಾಗುತ್ತಾನೆ. ಆದರೆ ಜನಪದರ ವಿಚಾರದಂತೆ – ‘ದೇವರು ತನಗೆ ವಿಶೇಷ ಶಕ್ತಿಯನ್ನು ಒದಗಿಸಿದ್ದಾನೆ, ಅದನ್ನು ಪಡೆದವ ನಾನು’ ಎಂಬ ವಿಶೇಷ ಭಾವ ಕಾಣುತ್ತದೆ. ಹೀಗಾಗಿ ‘ಪ್ರತಿಭೆ’ ಎನ್ನುವುದು ದೈವದತ್ತವಾದುದು ಅರ್ಥಾತ್ ನಿಸರ್ಗದತ್ತವಾದುದು; ‘ಜನ್ಮದೊಂದಿಗೆ ದೈಹಿಕ ಗುಣವಿಶೇಷವಾಗಿ’ ಅಥವಾ ‘ಜನ್ಮಾಂತರದಿಂದ ಬಂದ ಸಂಸ್ಕಾರ ವಿಶೇಷವಾಗಿ’ ಎಂಬ ಮಾತುಗಳಿಗೆ ಅದು ಸಮಾನವಾಗಿದೆ. ಒಟ್ಟಿನಲ್ಲಿ ನಾವು ಇಲ್ಲಿ ಗಮನಿಸಬೇಕಾದ ಮಾತೆಂದರೆ, ‘ಕಾವ್ಯಕಟ್ಟುವ, ಹಾಡುವ ಶಕ್ತಿ ವಿಶೇಷವಾಗಿರುತ್ತದೆ ಮತ್ತು ಅದು ಸಾಮಾನ್ಯಕ್ಕಿಂತ ಅದ್ಭುತವಾಗಿರುತ್ತದೆ’ ಎಂದು ಜನಪದರು ಗಮನಿಸಿದ್ದಾರೆ ಎಂಬುದು.

ಮುತ್ತು ಮಾಣಿಕ ಸರಗೋಳು
ಕವಿಯ ಮತಿ ಬಹು ವಿಖ್ಯಾತಿ (ಬಾ.ಗೋ.ಲಾ.೧೦೩)

ಕಾವ್ಯವೆನ್ನುವುದು ‘ಮುತ್ತು ಮಾಣಿಕದಂತಹ ಮಾತುಗಳ ಮಾಲೆ’ಯಾಗಿದ್ದು, ಈ ಅಮೂಲ್ಯ ಮಾಲೆಯನ್ನು ನಿರ್ಮಾಣ ಮಾಡುವುದು ‘ಕವಿಯ ಮತಿ’ ಎಂಬುದನ್ನು ಎತ್ತಿ ಹೇಳುತ್ತಾರೆ. ‘ಮತಿ’ ಎನ್ನುವುದು ‘ಪ್ರಜ್ಞೆ’ ಎಂಬುದಕ್ಕೆ ಸಮಾನವಾಗಿದೆ. ‘ಪ್ರತಿಭೆಯನ್ನು ಹೊಸದಾಗಿ ಸ್ಫುರಿಸುವ ಪ್ರಜ್ಞೆ’ ಎಂದು ಬಣ್ಣಿಸಲಾಗುತ್ತದೆ. ಹೀಗಾಗಿ ‘ಕವಿಯ ಮತಿ’ ಎನ್ನುವುದು ಅವನಲ್ಲಿರುವ ‘ಕವಿತಾ ಶಕ್ತಿ’ಯನ್ನೇ ಹೇಳುತ್ತದೆಂಬುದು ಸ್ಪಷ್ಟವಾಗಿದೆ. ‘ಕವಿ ಹುಟ್ಟತಾವ ಕಲ್ಪನದಿಂದ’ (ಬಾ.ಗೋ.ಲಾ.೩) ಎನ್ನುವಲ್ಲಿಯ ‘ಕಲ್ಪನ’ ಎನ್ನುವ ಪದವಂತೂ ಕವಿತಾಶಕ್ತಿಯನ್ನು ನಿರ್ದೇಶಿಸಿಯೇ ಹೇಳುತ್ತದೆ.

ಪದ ಬಂದರ್ಹೇಳು ಬಾರದಿದ್ದರ ಶರಣಾಗು
ಪದವುಂಟು ನನ್ನ ಎದೆಯಲ್ಲಿ (.ಹಾ.೩೯)

‘ಪದವುಂಟು ನನ್ನ ಎದೆಯಲ್ಲಿ’ ಎನ್ನುವ ಮಾತು ತೀರ ಮಹತ್ವದ ಮಾತಾಗಿದೆ. ಕಾವ್ಯ ಇರುವ ಸ್ಥಾನವನ್ನು ಅಥವಾ ಕಾವ್ಯ ಅಂತರಂಗದಿಂದ ಹಾಯ್ದುಬರುವ ಮಾರ್ಗವನ್ನು ಅದು ಹೇಳುತ್ತಿದೆ. ಕಾವ್ಯಕ್ಕೆ ಭಾವದ ಸ್ಪರ್ಶವುಂಟಾಗುವ ಸ್ಥಿತಿಯನ್ನು ಅದು ಹೇಳುತ್ತಿದೆ ಎನಿಸುತ್ತದೆ. ಹೀಗಾಗಿ ಕಾವ್ಯಶಕ್ತಿಯ ಹಲವಾರು ಆಯಾಮಗಳಲ್ಲಿ ಒಂದಿಷ್ಟನ್ನು ಗುರುತಿಸಲು ಸಾಧ್ಯವಾಗಿರುವುದು ಇಲ್ಲಿ ಗಮನಕ್ಕೆ ಬರುತ್ತದೆ.

ತಾಳಮಾನ ಸರಿಸವನಱಿಯೆ
ಓಜೆ ಬಜಾವಣೆಯ ಲೆಕ್ಕವನಱಿಯೆ
ಅಮೃತಗಣ ದೇವಗಣವನಱಿಯೆ
ಕೂಡಲ ಸಂಗಮದೇವಾ, ನಿನಗೆ ಕೇಡಿಲ್ಲವಾಗಿ
ಆನು ಒಲಿದಂತೆ ಹಾಡುವೆನು (ಬಸವಣ್ಣ, ೪೯೪)

ಬಸವಣ್ಣ ನವರ ಈ ಮೇಲಿನ ವಚನದ ಮಾತುಗಳನ್ನು ಗಮನಿಸಿದರೆ – ಅವರು ಕವಿ ಎನಿಸಿಕೊಳ್ಳುವ ಒಬ್ಬನ ತಯಾರಿಯ ಬಗೆಗೆ ಅರ್ಥಾತ್ ಅವನ ಸಾಮರ್ಥ್ಯದ ಬಗೆಗೆ – ಆ ಕಾಲದಲ್ಲಿದ್ದ ಕಲ್ಪನೆಗಳನ್ನು ಎದುರಿಗಿಟ್ಟುಕೊಂಡು ಈ ಮಾತುಗಳನ್ನು ಹೇಳುತ್ತಿದ್ದಾರೆ ಎನಿಸುತ್ತದೆ. ಅಂದರೆ ಒಬ್ಬ ಕವಿಯಾದವನಿಗೆ ಕೇವಲ ಪ್ರತಿಭೆ ಇದ್ದರೆ ಸಾಲದು, ಅಭ್ಯಾಸ ಬಲ ಮತ್ತು ವ್ಯತ್ಪತ್ತಿ ಸಾಮರ್ಥ್ಯಗಳು ಬೇಕು ಎಂಬ ಸಂಸ್ಕೃತ ಅಲಂಕಾರಿಕರ ವ್ಯಾಪಕವಾದ ಒತ್ತಡವನ್ನು ಇಡೀ ಭಾರತ ದೇಶವೇ ತಲೆಬಾಗಿ ಸ್ವೀಕರಿಸಿದ ದಿನಗಳವು. ಇಂದಿಗೂ ಆ ಸ್ಥಿತಿ ಬದಲಾವಣೆಯೇನೂ ಆಗಿಲ್ಲ. ಪ್ರತಿಭೆ ಅವಶ್ಯವಾಗಿದ್ದು, ಅಭ್ಯಾಸಬಲ ಮತ್ತು ವ್ಯತ್ಪತ್ತಿ ಸಾಮರ್ಥ್ಯಗಳಿಲ್ಲದಿದ್ದರೂ ಕಾವ್ಯ ಬರೆಯಬಹುದೆಂಬ ರಿಯಾಯತಿಯ ಮಾತುಗಳನ್ನು ಸಂಸ್ಕೃತ ಅಲಂಕಾರಿಕರು ಆಡಿದರೂ, ಅವರ ಒತ್ತಾಯದ ಅರ್ಹತೆಯ ಮಾತನ್ನು ಪರಿಪೂರ್ಣ ವಾಗಿ ನಿರಾಕರಿಸಿ ನಿಲ್ಲುವ ಧೈರ್ಯವನ್ನು ಯಾವ ಕವಿಯೂ, ಶಾಸ್ತ್ರಕಾರನೂ ಮಾಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಬಸವಣ್ಣನವರು ಪರಂಪರೆಯ ‘ಕವಿಯ ಅರ್ಹತೆ’ಯ ಒತ್ತಡವನ್ನು ಸಂಪೂರ್ಣವಾಗಿ ಅಲ್ಲಗಳೆದು ಮೀರಿನಿಲ್ಲುತ್ತಾರೆ. ಸಂಸ್ಕೃತ ಅಲಂಕಾರಿಕರ ವ್ಯತ್ಪತ್ತಿ ಸಾಮರ್ಥ್ಯ ಮ್ತು ಅಭ್ಯಾಸ ಬಲಗಳು ಮುಖ್ಯವಾಗಿ – ಲಿಖಿತಪರಂಪರೆಗೆ ಸೇರಿದ ಮಾತುಗಳು. ಅಲ್ಲೆಲ್ಲ ನಾವು ಗಮನಿಸುವುದು ಗ್ರಂಥಪಠಣದ ಮೂಲಕವೇ ಅನುಭವವನ್ನು ತುಂಬಿಕೊಳ್ಳುವ ಬಗೆಯನ್ನು. ವಚನಕಾರರು ವೌಖಿಕ ಪರಂಪರೆಯನ್ನು ಒಪ್ಪಿಕೊಂಡವರು. ಹೀಗಾಗಿ ಲಿಖಿತ ಮೂಲದ ನೈಪುಣ್ಯತೆ ಮತ್ತು ಅಭ್ಯಾಸಗಳನ್ನು ಅವರು ಸ್ಪಷ್ಟವಾಗಿ ತಳ್ಳಿಹಾಕುವುದು ಸಹಜವೆನಿಸುತ್ತದೆ.

ಸಹಜಕವಿಗೆ ಯಾವ ವಿಶೇಷ ಅಭ್ಯಾಸದ ಮತ್ತು ಶಾಸ್ತ್ರಗಳ ತಿಳಿವಳಿಕೆಯ ಅಗತ್ಯವಿಲ್ಲ ಎಂಬ ಭಾವವೇ ಅವರ ಈ ಮೇಲೆ ಉಲ್ಲೇಖಿಸಿದ ವಚನದಲ್ಲಿ ಒಡಮೂಡಿ ನಿಂತಿದೆ. ಈ ವಚನದಲ್ಲಿ ನೇರವಾಗಿ ಪ್ರತಿಭೆಯ ಪ್ರಸ್ತಾಪವೂ ಇಲ್ಲದಿರುವುದನ್ನು ಗಮನಿಸಬೇಕು.ಇಡೀ ವಚನಸಾಹಿತ್ಯದಲ್ಲಿ ಪ್ರತಿಭೆಯ ಪ್ರಸ್ತಾಪ ಇಲ್ಲದ್ದನ್ನು ಪ್ರಮುಖವಾಗಿ ಗಮನಿಸಬೇಕು. ಶಿಕ್ಷಿತ ಸಮಾಜ ರೂಪಿಸಿಕೊಂಡ – ಕವಿಯ ಇತರ ಅರ್ಹತೆಗಳಾದ ಅಭ್ಯಾಸಬಲ ಮತ್ತು ವ್ಯತ್ಪತ್ತಿ ಸಾಮರ್ಥ್ಯ ಇವುಗಳ ಅನಿವಾರ್ಯತೆಯನ್ನು ಬಸವಣ್ಣನವರು ಕಿತ್ತಿಹಾಕುತ್ತಾರೆ. ಈ ಮೂಲಕ ತನ್ನ ಜೊತೆಗಿರುವ ಪ್ರತಿಭಾವಂತ ಜನಸಾಮಾನ್ಯರನ್ನು – ವಚನಗಳನ್ನು ಬರೆಯುವಂತೆ ಪ್ರೇರೇಪಿಸು ತ್ತಾರೆ, ಪ್ರೋತ್ಸಾ ಹಿಸುತ್ತಾರೆ.

ಇದು ಕವಿಯ ಅರ್ಹತೆಗಳೆಂದು ಸಂಸ್ಕೃತ ಅಲಂಕಾರಿಕರು ಹಾಕಿದ ಶಾಸ್ತ್ರದ ಎಲ್ಲೆಯನ್ನು ಮೆಟ್ಟಿ ನಿಂತ ಮಾತಾಯಿತು. ಪರಿಣಾಮವಾಗಿ ಅನೇಕ ಜನ ಅನಕ್ಷರಸ್ಥಶರಣರೂ ಕೆಲವೊಂದಾ ದರೂ ವಚನಗಳನ್ನು ರಚನೆಮಾಡಲು ಸಾಧ್ಯವಾಗುವಂತಾಯಿತು. ಅಂದರೆ ಅಭ್ಯಾಸಬಲ ಮತ್ತು ವ್ಯತ್ಪತ್ತಿ ಸಾಮರ್ಥ್ಯಗಳೆಂಬ ಹೇರಿಕೆಗಳ ಅನಗತ್ಯತೆಯನ್ನು ಎತ್ತಿ ಹೇಳಿದ್ದರಿಂದಲೇ ಈ ಸಾಧನೆ ಸಾಧ್ಯವಾಯಿತು ಎಂಬುದನ್ನು ಗಮನಿಸಬೇಕು. ವಚನಕಾರರು ಲಿಖಿತಪರಂಪರೆಗಿಂತ ವೌಖಿಕಪರಂಪರೆಯನ್ನು ಒಪ್ಪಿಕೊಂಡವರು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಬಸವಣ್ಣನವರ ಜೊತೆಗೆ ಚನ್ನಬಸವಣ್ಣ, ಸಿದ್ಧರಾಮ, ಅಲ್ಲಮಪ್ರಭು, ಮಡಿವಾಳ ಮಾಚಿದೇವ ಮುಂತಾದ ಪ್ರಮುಖ ವಚನಕಾರರು ಪ್ರತಿಭೆಯ ಪ್ರಸ್ತಾಪವನ್ನು ಸಂಪೂರ್ಣವಾಗಿ ಕೈಬಿಟ್ಟು, ಅಭ್ಯಾಸ ಬಲ ಮತ್ತು ವ್ಯತ್ಪತ್ತಿ ಸಾಮರ್ಥ್ಯಗಳ ಅಗತ್ಯತೆಯನ್ನು ಸ್ಪಷ್ಟವಾಗಿ ಅಲ್ಲಗಳೆಯುವ ಮಾತುಗಳು ವಚನಸಾಹಿತ್ಯದಲ್ಲಿ ನಮಗೆ ದೊರೆಯುತ್ತವೆ.

ವಚನದಂತಹ ವೌಖಿಕ ಮಾಧ್ಯಮಕ್ಕೆ ಪ್ರತಿಭೆಯಂತಹ ವಿಶೇಷ ಶಕ್ತಿಯ ಅವಶ್ಯಕತೆಯೇ ಶರಣರಿಗೆ ಕಾಣಲಿಲ್ಲವೆಂದು ತೋರುತ್ತದೆ. ಜೊತೆಗೆ ಯಾರಲ್ಲಿಯೂ ಇಲ್ಲದ ಏನೋ ವಿಶೇಷ ಶಕ್ತಿ ಕೇವಲ ಅಕ್ಷರಭ್ಯಾಸಿಗೆ ಮಾತ್ರ ದೊರೆಯುತ್ತದೆ ಎಂಬ ಮಾತು ಶರಣರಿಗೆ ಒಪ್ಪಿಗೆಯಾಗಿಲ್ಲ. ವೌಖಿಕ ಪರಂಪರೆಯ ಸಾಹಿತ್ಯರೂಪಗಳನ್ನು ಗಮನಿಸಿದರೆ ಈ ಮಾತು ನಮಗೆ ಸ್ಪಷ್ಟವಾಗು ತ್ತದೆ. ಒಂದು ಸಾಲಿನ ಗಾದೆ, ಎರಡು ಸಾಲಿನ ದ್ವಿಪದಿ, ಮೂರು ಸಾಲಿನ ತ್ರಿಪದಿ ಇಷ್ಟು ಮಾತ್ರ ವೌಖಿಕ ಪರಂಪರೆಯ ಕಾವ್ಯದ ಸಾಧ್ಯತೆ. ಈ ಸಾಲುಗಳೇ ವೃದ್ಧಿಗೊಂಡು ವೈವಿಧ್ಯಮಯ ವಾದ ಛಂದೋರೂಪಗಳು ಹುಟ್ಟುತ್ತವೆ. ಒಗಟು, ಒಡಪುಗಳು ಕೂಡ ಇದೇ ಮಾದರಿಗೆ ಸೇರುತ್ತವೆ. ಮತ್ತು ಇವುಗಳ ಮುಖ್ಯಗುಣ ಈ ಚಿಕ್ಕಚಿಕ್ಕ ರೂಪಗಳ ಪ್ರತ್ಯೇಕ ಅಸ್ತಿತ್ವ. ಅುಭವವನ್ನು ಅಭಿವ್ಯಕ್ತಿಸಲು ಇಂತಹ ಸಣ್ಣ ರೂಪಗಳೇ ಯೋಗ್ಯ. ದಿನನಿತ್ಯದ ವಿಶೇಷ ಅನುಭವಗಳ ಅಭಿವ್ಯಕ್ತಿಗೆ ಕಥೆಯಂತಹ ದೀರ್ಘ ರಚನೆಗಳ ಅವಶ್ಯಕತೆ ಇಲ್ಲ ಎಂಬುದು ಶರಣರ ವಿಚಾರವಾಗಿರುವಂತಿದೆ. ಇಲ್ಲಿ ಅನುಭಾವ ಎಂಬುದು ಲೌಕಿಕ ಜ್ಞಾನವೂ ಕಾವ್ಯವನ್ನು ಕಟ್ಟುವ ಅಂತಃಶಕ್ತಿಯಾಗಿ ಶರಣರು ಗ್ರಹಿಸಿದಂತಿದೆ.

ಈ ಎಲ್ಲ ಮಾತುಗಳ ಹಿನ್ನೆಲೆಯಲ್ಲಿ ಶರಣರು ಕವಿ ಮತ್ತು ಕಾವ್ಯ ಈ ಎರಡರ ಸಂಪೂರ್ಣ ಬದಲಾದ ಚಿತ್ರವನ್ನು ಕಾಣಲು ಬಯಸಿರುವುದನ್ನು ನಾವು ಅರಿಯುತ್ತೇವೆ. ಇಲ್ಲೆಲ್ಲ ಅವರ ಮನಸ್ಸಿನಲ್ಲಿ ತುಂಬಿಕೊಂಡಿರುವವು ದೇಸೀಯ ಪರಿಕಲ್ಪನೆಗಳು ಎಂಬುದನ್ನು ಗಮನಿಸಬೇಕು. ಸಮಾಜದ ಯಾವುದೇ ಸ್ಥರದಿಂದ ಬಂದ ಒಬ್ಬ ಸಹಜ ಸಾಮಾನ್ಯನು ಕೂಡ ಶಿಕ್ಷಿತ ಸಮಾಜದ ಪ್ರತಿಭಾವಂತನಂತಹ ಅಭ್ಯಾಸಬಲ, ವ್ಯತ್ಪತ್ತಿ ಸಾಮರ್ಥ್ಯಗಳಿಲ್ಲದೆ ಕಾವ್ಯ ರಚಿಸಲು ಸಾಧ್ಯವೆಂಬ ಅರಿವು ಶರಣರಿಗೆ ಮೂಡಿದ್ದೇ ದೇಸೀ ವೌಖಿಕ ಪರಂಪರೆಯ ಸಾಹಿತ್ಯದ ಸಾಧ್ಯತೆಗಳ ಹಿನ್ನೆಲೆಯಲ್ಲಿ.

ಕಾವ್ಯದ ಕಾರಣಗಳಿಗೆ ಸಂಬಂಧಿಸಿದ ಅಭ್ಯಾಸಬಲ ಮತ್ತು ವ್ಯತ್ಪತ್ತಿಸಾಮರ್ಥ್ಯ ಈ ಎರಡೂ ಪರಿಕಲ್ಪನೆಗಳಿಗೆ ಪರ್ಯಾಯವೆಂಬಂತೆ ಶರಣರು ಬಳಸುವ ಪದವೆಂದರೆ ‘ಅನುಭಾವ’ ಎಂಬುದು. ಇದು ಜೀವನಾನುಭವದಿಂದ ಪಡೆಯುವ ಅಂತರಂಗ ಬಹಿರಂಗ ಶುದ್ಧಿಯ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ; ಅದು ಜೀವನದ ಸಿದ್ಧಿಯನ್ನು ವನಿಸುತ್ತದೆ.

ಅನುಭಾವವೆಂಬುದು ನೆಲದ ಮರೆಯ ನಿಧಾನ ಕಾಣಿರೋ
ಅನುಭಾವವೆಂಬುದು ಅಂತರಂಗದ ಶುದ್ಧಿ ಕಾಣಿರೋ (ಚೆನ್ನಬಸವಣ್ಣ, ೩೪೩)

ಇದು ಚೆನ್ನಬಸವಣ್ಣನವರು ಹೇಳುವ ಅನುಭಾವದ ಪರಿಚಯ. ಅದನ್ನು ‘ಮಹಾಘನ’ ವೆಂತಲೂ ಅವರು ಕರೆಯುತ್ತಾರೆ. ಇಂತಹ ಅನುಭಾವವು ಶರಣರ ಸತ್ಸಂಗದಿಂದ, ಅವರ ಒಡನಾಟದಿಂದ, ಚರ್ಚೆಯಿಂದ ಬರುವಂತಹದು, ಹೊರತಾಗಿ ಓದಿನ ಬಲದಿಂದಲ್ಲ.

ಇಂತೀ ಅನುಭಾವದ ಓದಿನ ಅಕ್ಷರಾಭ್ಯಾಸವ ಸಾಧಿಸಿ ತರ್ಕಿಸಿ
ನಿಂದಿಸಲಾಗದುಸಂಗನ ಶರಣರಿಗಲ್ಲದೆ ಅನುಭಾವವಿಲ್ಲ (ಬಸವಣ್ಣ, ೬೭೮)

ಬಸವಣ್ಣನವರ ಈ ಮಾತಿನಲ್ಲಿ ಎರಡು ಮಹತ್ವದ ವಿಚಾರಗಳಿವೆ – ಒಂದು ಓದಿನ ಅಕ್ಷರಭ್ಯಾಸದಲ್ಲಿ ಈ ಅನುಭಾವ ದೊರೆಯದು; ಎರಡನೆಯದು ಶರಣರಿಗೆ (ತನ್ನೊಳಗನರಿದ ಅನುಭಾವಿ)ಮಾತ್ರ ಅನುಭಾವ ಸಾಧಿಸುವುದು. ಸಜ್ಜನರಿಗೆ ಮಾತ್ರ ಸಾಧ್ಯವಾಗುವ, ಕೇವಲ ಓದಿಗೆ ಮಾತ್ರ ನಿಲುಕದ ಈ ‘ಪರಿಣತಿ’ (ಮಹಾಘನ, ತನ್ನೊಳಗಿನ ಅರಿವು) ಹೊಂದಿದವ ಮಾತ್ರ ವಚನರಚನೆ ಮಾಡಲು ಸಾಧ್ಯವೆಂಬ ಗ್ರಹಿಕೆ ಶರಣರದು.

ವೇದ ವಿಪ್ರರ ಬೋಧೆ, ಶಾಸ್ತ್ರ ಸಂತೆಯ ಮಾತು
…………………………………..
ತರ್ಕ ವ್ಯಾಕರಣ ಕವಿತ್ವಪ್ರೌಢಿ,
ಇಂತಿವರಂಗದ ಮೇಲೆ ಲಿಂಗವಿಲ್ಲದ ಭಾಷೆ
ಇದು ಕಾರಣ
ತನ್ನೊಳಗನರಿದ ಅನುಭಾವಿಯಿಂದ ಘನವಿಲ್ಲೆಂದ ಕಲಿದೇವ (ಮಡಿವಾಳ, ೭೪೦)

ಇಲ್ಲಿಯ ‘ತರ್ಕ ವ್ಯಾಕರಣ ಕವಿತ್ವ ಪ್ರೌಢಿ’ ಎಂಬುದನ್ನು ಗಮನಿಸಬೇಕು. ಮಡಿವಾಳ ಮಾಚಿದೇವರು ಸ್ಪಷ್ಟವಾಗಿ ಸಂಸ್ಕೃತ ಅಲಂಕಾರಿಕರು ಗುರುತಿಸುವ ಅಭ್ಯಾಸಬಲ ಮತ್ತು ಶಾಸ್ತ್ರ ತಿಳುವಳಿಕೆಗಳನ್ನು, ಅಂದರೆ ಕವಿತೆ ಬರೆಯಲು ಬೇಕಾದ ಪ್ರೌಢಿಮೆಯನ್ನು ಅರ್ಥಾತ್ ಓದಿನ ತಿಳುವಳಿಕೆಯಿಂದ ಸಾಧಿಸುವ ಸಾಮರ್ಥ್ಯವನ್ನು (ವ್ಯತ್ಪತ್ತಿ) ಕುರಿತೇ ಹೇಳುತ್ತಿದ್ದಾರೆ. ಇಂತಹರ ‘ಭಾಷೆ’ ಎಂತಹದೆಂದರೆ ‘ಲಿಂಗವಿಲ್ಲದ ಭಾಷೆ’ ಎನ್ನುತ್ತಾರೆ ಮಾಚಿದೇವ. ಅಂದರೆ ‘ಅನುಭಾವ ವಿಲ್ಲದ ಭಾಷೆ’ ಅದು. ಅದಕ್ಕಾಗಿಯೇ ‘ತನ್ನೊಳಗನರಿದ ಅನುಭಾವಿಯಿಂದ ಘನವಿಲ್ಲ’ ಎಂಬುದು ಇವರ ಸ್ಪಷ್ಟ ಅಭಿಪ್ರಾಯ. ಈ ಅನುಭಾವಿಯೇ ಶರಣ, ಈತನೇ ಕವಿ.

ಮಡಿವಾಳ ಮಾಚಿದೇವ ‘ಶಾಸ್ತ್ರ ಸಂತೆಯ ಮಾತು’ ಎನ್ನುತ್ತಾನೆ. ಲಿಂಗಮ್ಮ ಇಂತಹ ಶಾಸ್ತ್ರಕಾರರನ್ನು ಮುಂದುವರೆದು ಇವರು ‘ಸಂತೆಯ ಸೂಳೆಯರು’ ಎನ್ನುತ್ತಾಳೆ. ‘ಅನುಭಾವ’ ವಿಲ್ಲದ ಶಾಸ್ತ್ರಕಾರರು (ಕೇವಲ ಓದಿನ ಬಲವುಳ್ಳವರು) –

ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು
ಸಂತೆಯ ಸೂಳೆಯರಂತೆ (ಲಿಂಗಮ್ಮ, ೧೦೮)

ಅಂದರೆ ಅನುಭಾವಿಗಳಲ್ಲದವರ – ಬರೀ ಶಾಸ್ತ್ರಾಭ್ಯಾಸವುಳ್ಳವರ ಮಾತುಗಳು ಸಂತೆಯಂತೆ; ಅಂದರೆ ಕೇವಲ ಸಪ್ಪಳ ಮಾತ್ರ ಮಾಡುವಂತಹ ಮಾತುಗಳವು. ಆದುದರಿಂದ ಶಾಸ್ತ್ರಕಾರರು ‘ಸಂತೆಯ ಸೂಳೆಯರು’ ಎಂಬ ರೂಪಕದ ಮಾತಿನಿಂದ ಅವರನ್ನು ಗುರುತಿಸುತ್ತಾಳೆ ಲಿಂಗಮ್ಮ.

ಶರಣರ ಅನುಭಾವದ ಬಗೆಗಿನ ಒಟ್ಟು ವಿಚಾರಗಳನ್ನು ಗಮನಿಸಿದರೆ – ಅದು ಶರಣನ (ಕವಿಯ)ಸಾಮರ್ಥ್ಯವಾಗಿ, ಕಾವ್ಯದಲ್ಲಿ ಒಡಮೂಡಿ ನಿಲ್ಲುವ ತಿರುಳಾಗಿ (ಕಾವ್ಯಾನುಭವ ವಾಗಿ) ತೋರುತ್ತದೆ. ಬದುಕಿನ ಅನುಭವಗಳನ್ನು ಶರಣನೊಬ್ಬನು ತನ್ನ ವಿಶೇಷ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವುದು ‘ಅನುಭಾವ’ ಎಂದಿಟ್ಟುಕೊಂಡರೆ ಸಾಕೆಂದು ತೋರುತ್ತದೆ. ಈ ‘ಅನುಭಾವ’ವನ್ನೇ ಕೃತಿಯ ಆದರ್ಶವಾಗಿ ಚಿತ್ರಿಸುತ್ತಾನೆ ಕಲಾವಿದ. ಇಂತಹ ಕಲಾವಿದನ ಜ್ಞಾನ ಅರ್ಥಾತ್ ಅನುಭಾವಕ್ಕೆ ಲೌಕಿಕ ಮತ್ತು ಅಲೌಕಿಕ ಎಂಬ ಎರಡು ಮುಖಗಳನ್ನು ಕಾಣಬಹು ದಾಗಿದೆ. ವಚನಗಳಲ್ಲಿ ಈ ಎರಡು ಬಗೆಯ ಅನುಭಾವದ ಪ್ರಸ್ತಾಪವೂ ಇದೆ. ಇಂತಹ ‘ಅನುಭಾವ’ವೇ ಶರಣನ (ಕವಿಯ) ತಯಾರಿ. ಇದು ಓದಿನ ಬಲದಿಂದ ಬರುವಂತಹದಲ್ಲ. ಬದಲಾಗಿ ಶರಣರ ಒಡನಾಟದಿಂದ, ಅವರೊಡನೆ ನಡೆಸುವ ಚರ್ಚೆಯಿಂದ ಬರುವಂತಹದು. ಇದನ್ನು ಗಮನಿಸಿದರೆ ಈ ವಿಚಾರಗಳು ವೌಖಿಕ ಮುಖಿಯೇ ಹೊರತು ಲಿಖಿತಮುಖಿ ಅಲ್ಲವೆಂಬುದು ಸ್ಪಷ್ಟವಾಗಿದೆ. ಇಷ್ಟಕ್ಕೂ ಇದು ಸಾಮಾನ್ಯವಾದ ಚರ್ಚೆಯಲ್ಲ, ಬರೀ ಹರಟೆಯಲ್ಲ.

ಅನುಭಾವವೆಂಬುದು ರಚ್ಚೆಯ ಮಾತೆ?
ಅನುಭಾವವೆಂಬುದು ಸಂತೆಯ ಸುದ್ದಿಯೆ?
ಅನುಭಾವವೆಂಬುದೇನು ಬೀದಿಯ ಪಸರವೆ?
……………………..
ಕಂಡಕಂಡಲ್ಲಿ ಗೋಷ್ಠಿ, ನಿಂದ ನಿಂದಲ್ಲಿ ಅನುಭಾವ
ಬಂದಬಂದಲ್ಲಿ ಪ್ರಸಂಗವ ಮಾಡುವ ನಿರ್ಬುದ್ಧಿ ನೀಚರ ಮೆಚ್ಚ (ಚೆನ್ನಬಸವಣ್ಣ, ೩೪೩)

ಎನ್ನುತ್ತಾರೆ ಚೆನ್ನಬಸವಣ್ಣನವರು. ಕೃತಿಯಲ್ಲಿರುವ ಅನುಭಾವದ ಸ್ಥಿತಿ – ‘ನೆಲದ ಮರೆಯ ನಿಧಾನದಂತೆ’, ಕವಿಯಲ್ಲಿ ಅವನ ಕವಿತ್ವ ಸಾಮರ್ಥ್ಯವಾಗಿ ಇರುವ ಸ್ಥಿತಿ – ‘ಅಂತರಂಗ ಬಹಿರಂಗ ಶುದ್ಧಿ’. ಹೀಗಾಗಿ ಅನುಭಾವವು ‘ಮಹಾಘನ’ ವೆನ್ನುತ್ತಾರೆ ಚೆನ್ನಬಸವಣ್ಣ. ಶರಣರ ಪ್ರತಿಯೊಂದು ಪರಿಕಲ್ಪನೆಗಳಿಗೂ ಲೌಕಿಕ – ಅಲೌಕಿಕ ಎರಡರ ಸ್ಪರ್ಶಗಳಿರುತ್ತವೆ. ಕಾಯಕ, ದಾಸೋಹ, ಲಿಂಗ, ಜಂಗಮ ಇವೆಲ್ಲಕ್ಕಿರುವಂತೆ ‘ಅನುಭಾವ’ಕ್ಕೂ ಈ ಎರಡು ಮುಖಗಳಿವೆ. ಜೀವನದ ಅನುಭವಗಳನ್ನು ಕೃತಿಯ ಆದರ್ಶಗಳಾಗಿ ಚಿತ್ರಿಸುವಲ್ಲಿ ಕೆಲಸ ಮಾಡುವುದು ಕವಿಯ ಅನುಭಾವ. ಇದೇ ಕಾವ್ಯದ ಬಹುಮುಖ್ಯ ಕಾರಣ ಮತ್ತು ಹೂರಣ. ಅಂದರೆ ಕಾವ್ಯಕ್ಕೆ ವಸ್ತುವಾಗುವುದೂ ಅನುಭವವೇ, ಕವಿಯಲ್ಲಿ ಕಾವ್ಯಕಟ್ಟುವ ಸಾಮರ್ಥ್ಯವಾಗಿ ಕೆಲಸ ಮಾಡುವುದೂ ಅನುಭವವೇ.

ಅಕ್ಷರ ಲೋಕದ ಅಭ್ಯಾಸದ ರೀತಿಯೇ ಬೇರೆ, ವೌಖಿಕ ಲೋಕದ ಅನುಭವ ಗಳಿಸುವ (ಅಭ್ಯಾಸದ) ರೀತಿಯೇ ಬೇರೆ. ಅದಕ್ಕಾಗಿಯೇ ಬಸವಣ್ಣನವರು ‘ತಾಳಮಾನ ಸರಿಸವನರಿಯೆ’ ಎಂಬ ವಚನ ಹೇಳಿದಂತೆ ತೋರುತ್ತದೆ. ವೌಖಿಕ ಸಂಪ್ರದಾಯದ ಕಲಾಕಾರ – ಆತ ಒಬ್ಬ ಡೊಂಬರಾಟಕ್ಕೆ ಸೇರಿದವನಾಗಿರಬಹುದು, ಶಿಲ್ಪಿಯಾಗಿರಬಹುದು; ಲಾವಣಿಕಾರ, ಗೊಂದಲಿಗ ಅಥವಾ ಯಾವುದೇ ಪ್ರಕಾರದ ಸಂಪ್ರದಾಯ ಹಾಡುಗಾರರು – ಜೋಗತಿ ಯರು, ಭೂತ್ಯಾಗಳು, ಮೈಲಾರಲಿಂಗನ ಭಕ್ತರು ಇತ್ಯಾದಿ ತಂಡಗಳನ್ನು ಗಮನಿಸಬಹುದು. ಈ ಪಂಗಡಗಳಲ್ಲಿದ್ದವರು ಮಕ್ಕಳಿರುವಾಗಿನಿಂದಲೇ ಈ ಗುಂಪಿನಲ್ಲಿ ತೊಡಗಿ ಅನುಭವ ಪಡೆಯುತ್ತ ಪಳಗಿರುತ್ತಾರೆ. ಹಿಮ್ಮೇಳದವರಾಗಿ – ದನಿಗೂಡಿಸಲು, ತಾಳಹಾಕಲು, ಕುಣಿಯಲು ವಾದ್ಯಬಾರಿಸಲು – ಒಂದೊಂದಾಗಿ ಕಲಿಯುತ್ತ, ಈ ಎಲ್ಲ ಅಭ್ಯಾಸಬಲದ ಅನುಭವದಿಂದ (ಪರಿಣತಿ, ನೈಪುಣ್ಯತೆ, ವ್ಯತ್ಪತ್ತಿ ಸಾಮರ್ಥ್ಯಏನೆಲ್ಲ ಹೆಸರಿನಿಂದ ಕರೆಯಬಹುದು) ಮುಂದೆ ಅವರೇ ಅಲ್ಲಲ್ಲಿ ಕೇಳುವ ಪುರಾಣ ಪುಣ್ಯಕಥೆ ಮುಂತಾದವುಗಳಿಂದ ವಿಷಯವನ್ನು ಸಂಗ್ರಹಿಸಿಕೊಳ್ಳುತ್ತಾರೆ. ಹೀಗೆ ಉದ್ದೇಶಪೂರ್ವಕವಾಗಿಯಲ್ಲದಿದ್ದರೂ ಸಹಜವಾಗಿ ಮತ್ತು ಪ್ರಾಸಂಗಿಕವಾಗಿ ಅವರಿಗೆ ಅನುಭವ (ಅಭ್ಯಾಸ)ಬಲ ಒದಗಿ ಬರುತ್ತದೆ.

ಹಳ್ಳದ ದಂಡಿಗಿ ಲಕ್ಕಿಯ ಗಿಡ ಹುಟ್ಟಿ
ಲೆಕ್ಕಿಲ್ಲದ ಹಾಡ ನನ ಬಲ್ಲಿ ನನ ಜಾಣ
ಲೆಕ್ಕಣಿಕಿ ತಂದು ಬರದೊಯ್ಯ (..ಹಂ.ಹಾ.೨೦೯)

ಹಾಡ ಬಲ್ಲವನೆಂದು ಹಾರ್ಯಾರಿ ಬೀಳಬ್ಯಾಡ
ಹಾಡಿನ ಹಗಿಯ ನನಬಲ್ಲಿ ಎಲೊ ಜಾಣ
ಹಳಿಮಾಪ ತಂದು ಅಳದೊಯ್ಯ (..ಹಂ.ಹಾ.೨೦೯)

ಕವಿ ಮತ್ತು ಹಾಡುಗಾರ ಒಬ್ಬನೇ ಆಗಿರುವ ಜನಪದ ಕಾವ್ಯ ಪ್ರಪಂಚದಲ್ಲಿ ಈ ಮೇಲಿನ ನುಡಿಗಳಲ್ಲಿಯ ‘ಲೆಕ್ಕಿಲ್ಲದ ಹಾಡ ನನಬಲ್ಲಿ’, ‘ಹಾಡಿನ ಹಗಿಯ ನನಬಲ್ಲಿ’ ಎನ್ನುವ ಮಾತುಗಳು ಪರಿಶೀಲನಾರ್ಹವಾಗಿವೆ. ಇವು ಕೇವಲ ತನ್ನಲ್ಲಿರುವ ಹಾಡಿನ ಸಂಗ್ರಹವನ್ನು ಹೇಳುತ್ತವೆಯೆ? ಅಥವಾ ಅಭ್ಯಾಸದ ಬಲವನ್ನು ಹೇಳುತ್ತವೆಯೇ? ನಾವು ಇಷ್ಟು ಹೇಳಬಹುದು: ಒಬ್ಬನು ಕವಿಯಾಗಬೇಕಾದರೆ ‘ಅವನು ಕನಿಷ್ಟ ನೂರು ಧಾಟಿಗಳನ್ನು ಅಥವಾ ನೂರು ಹಾಡುಗಳನ್ನು ಅರಿತಿರಬೇಕು’ ಎಂಬ ಅನುಭವದ ಮಾತು ಜನಪದರಲ್ಲಿದೆ. ಹೀಗೆ ನಿರಂತರವಾದ ಒಡನಾಟದಿಂದಲೇ ಒಬ್ಬನಲ್ಲಿ ‘ಅನುಭವ’ ತುಂಬುತ್ತ ಹೋಗುವುದು. ಈ ‘ಹಾಡಿನ ಹಗಿಯ ನನ ಬಲ್ಲಿ’ ಹಾಗೂ ‘ಲೆಕ್ಕಿಲ್ಲದ ಹಾಡ ನನ ಬಲ್ಲಿ’ ಎನ್ನುವ ಮಾತುಗಳು ಈ ಅನುಭವ ತುಂಬುತ್ತ ಹೋಗುವ, ತುಂಬಿಹೋಗಿರುವ ಸ್ಥಿತಿಯನ್ನು ಹೇಳುತ್ತವೆ. ಕವಿಯಾಗುವವನಿಗೆ ಕನಿಷ್ಟ ನೂರು ಧಾಟಿಗಳು ಗೊತ್ತಿರಬೇಕು, ನೂರು ಹಾಡುಗಳು ಅವನಿಗೆ ಹಾಡಲು ಬರುತ್ತಿರಬೇಕು, ಪ್ರಾಸ ಯತಿಗಳನ್ನು ತಿಳಿದಿರಬೇಕು ಎಂಬ ಅನೇಕ ಮಾತುಗಳು ಜನಪದರಲ್ಲಿ ಕೇಳಿಬರುತ್ತವೆ. ಇವೆಲ್ಲ ಒಬ್ಬ ಕವಿಯ ಅನುಭವ ಬಲವನ್ನು ಹೇಳುತ್ತವೆ ಎಂಬ ಮಾತು ಸ್ಪಷ್ಟವಾಗಿದೆ.

* * *