ಭಾರತೀಯ ‘ಶಿಕ್ಷಿತ ಸಮಾಜ’ವು ಕಾವ್ಯ ಕಟ್ಟುವ ಮತ್ತು ಬೆಳೆಸುವ ಕವಿಯ ಸಾಮರ್ಥ್ಯದ ಸಂಗತಿಗಳನ್ನು – ಪ್ರತಿಭೆ, ವ್ಯತ್ಪತ್ತಿ ಮತ್ತು ಅಭ್ಯಾಸಗಳೆಂದು ಗುರುತಿಸುತ್ತದೆ. ವ್ಯತ್ಪತ್ತಿ ಮತ್ತು ಅಭ್ಯಾಸಗಳನ್ನು ಹೇಳುವಾಗ ಸಾಮಾನ್ಯವಾಗಿ ‘ವ್ಯತ್ಪತ್ತಿ ಸಾಮರ್ಥ್ಯ’ ಮತ್ತು ‘ಅಭ್ಯಾಸ ಬಲ’ ಎಂದು, ‘ಸಾಮರ್ಥ್ಯ’ ಮತ್ತು ‘ಬಲ’ ಎನ್ನುವ ಎರಡು ಪದಗಳನ್ನು ಸೇರಿಸಿ ಬಳಸಲಾಗುತ್ತದೆ. ‘ಸಾಮರ್ಥ್ಯ’ ಎಂದರೂ ಒಂದೇ ‘ಬಲ’ ಎಂದರೂ ಒಂದೇ. ‘ಪ್ರತಿಭೆ’ಯೂ ಕವಿಗೆ ನೈಸರ್ಗಿಕ ವಾಗಿ ಬಂದ ಒಂದು ವಿಶೇಷ ಶಕ್ತಿಯೇ. ‘ವ್ಯತ್ಪತ್ತಿಸಾಮರ್ಥ್ಯ’ ಮತ್ತು ‘ಅಭ್ಯಾಸಬಲ’ಗಳು – ಕವಿಯು ಪ್ರಯತ್ನಪೂರ್ವಕವಾಗಿ ಗಳಿಸಿಕೊಂಡ ವಿಶೇಷ ಶಕ್ತಿಗಳೇ ಆಗಿವೆ. ಅಂದರೆ ಇವೆಲ್ಲವೂ ಒಟ್ಟಿಗೆ ‘ಕವಿಯ ಸಾಮರ್ಥ್ಯ’ಗಳೇ ಆಗುತ್ತವೆ.

ಪ್ರತಿಭೆ (ಕವಿತ್ವ, ಶಕ್ತಿ) ಎನ್ನುವ ನೈಸರ್ಗಿಕ ಶಕ್ತಿ, ಜೊತೆಗೆ ವ್ಯತ್ಪತ್ತಿಯ ಗಳಿಕೆಗಾಗಿ – ಲೋಕಜ್ಞಾನ, ಶಾಸ್ತ್ರಗಳ ವಿದ್ಯಾಪ್ರಾಪ್ತಿ ಮತ್ತು ಮಹಾಕಾವ್ಯ ಇತಿಹಾಸಾದಿಗಳ ಅಧ್ಯಯನ, ಮತ್ತು ಸತತವಾದ ಅಭ್ಯಾಸ – (ಅಂದರೆ ಮಾತು, ಮನಸ್ಸು ಮತ್ತು ದೇಹಗಳ ಶುಚಿತ್ವಕ್ಕಾಗಿ ನಿರಂತರ ಪ್ರಯತ್ನ) – ಇವುಗಳನ್ನು ಗಣಿಸುವ ಪದ್ಧತಿ ಸಂಸ್ಕೃತ ಕಾವ್ಯಮೀಮಾಂಸಕಾರರಲ್ಲಿ ಪ್ರಾರಂಭದಿಂದಲೂ ಕಾಣಿಸುತ್ತದೆ. ಏಕೆಂದರೆ ಭಾಮಹ ಮತ್ತು ದಂಡಿ ಅವರಲ್ಲಿಯೇ ಇವುಗಳ ಪ್ರಸ್ತಾಪ ಸ್ಪಷ್ಟವಾಗಿ ದೊರೆಯುತ್ತದೆ.

ಸಂಸ್ಕೃತ ಕಾವ್ಯಮೀಮಾಂಸಕಾರರು ಹೇಳುವ ಈ ಮೂರು ಕಾವ್ಯದಕಾರಣಗಳ ನಿಜಸ್ವಭಾವವನ್ನು ಗಮನಿಸಿ ಇವುಗಳನ್ನು ಎರಡು ಗುಂಪುಗಳಲ್ಲಿ ವಿಭಾಗಿಸಬಹುದಾಗಿದೆ. ಒಂದು ಆಂತರಿಕ ಕಾರಣ, ಇನ್ನೊಂದು ಬಾಹ್ಯಕಾರಣ. ಕಲಾವಿದನಲ್ಲಿ ಕಾಣಿಸಿಕೊಳ್ಳುವ ಪ್ರತಿಭೆ ನೈಸರ್ಗಿಕ ಶಕ್ತಿಯಾಗಿದ್ದು, ಇದು ಅವನ ಅಂತರಂಗದಲ್ಲಿ ಜನ್ಮದೊಂದಿಗೇ ಬಂದಿರುವುದರಿಂದ ಇದನ್ನು ‘ಆಂತರಿಕ ಕಾರಣ’ ಎಂದೂ ವ್ಯತ್ಪತ್ತಿ ಮತ್ತು ಅಭ್ಯಾಸಗಳನ್ನು ಪ್ರತಿಭಾವಂತನೊಬ್ಬ ಪ್ರಯತ್ನೂರ್ವಕವಾಗಿ ಗಳಿಸಿಕೊಳ್ಳಬೇಕಾದ ಶಕ್ತಿಗಳಾದ್ದರಿಂದ ಇವನ್ನು ‘ಬಾಹ್ಯಕಾರಣ’ ಗಳೆಂದೂ ಗಣಿಸಬಹುದಾಗಿದೆ. ಈ ಆಂತರಿಕ ಮತ್ತು ಬಾಹ್ಯಕಾರಣಗಳ ಸಮಾಗಮದಿಂದಾಗಿ ಕಲೆಯ ಸೃಜನಕ್ರಿಯೆ ನಡೆಯುತ್ತದೆ. ಹೀಗಾಗಿ ಇದೊಂದು ಒಟ್ಟಾರೆಯಾಗಿ ನೈಸರ್ಗಿಕ ಕ್ರಿಯೆಯಾಗಿ ತೋರುತ್ತದೆ. ಈ ಜಗತ್ತಿನ ನಿಯಮ ಹೇಗಿದೆ ಎಂದರೆ, ಯಾವಾಗಲೂ ಭಿನ್ನಗುಣಗಳುಳ್ಳ ಎರಡು ಶಕ್ತಿಗಳ ಪರಸ್ಪರ ಸಮಾಗಮದಿಂದಲೇ ಒಂದು ಹೊಸದರ ಹುಟ್ಟಿಗೆ ಕಾರಣವಾಗುತ್ತದೆ. ಹೀಗೆ ಎರಡು ಶಕ್ತಿಗಳ ಸಮಾಗಮದಿಂದಲೇ ಜೀವಜಂತುಗಳ ಉತ್ಪತ್ತಿ ನಡೆಯುತ್ತದೆ. ಈ ನಿಸರ್ಗದಲ್ಲಿ ಯಾವುದೇ ಒಂದು ಹೊಸಹುಟ್ಟಿಗೆ ಇಂತಹ ಕ್ರಿಯೆ ನಡೆಯಲೇ ಬೇಕು. ಹಗಲು – ರಾತ್ರಿ, ನೆಲ – ಮುಗಿಲು, ಕಪ್ಪು – ಬಿಳುಪು ಹೀಗೆಯೇ ಇಂತಹ ಜೋಡಿ ಸಂಗತಿಗಳಿಂದಾಗಿಯೇ ಒಂದೊಂದು ಹೊಸಸಂಗತಿ ಸೃಷ್ಟಿಯಾಗುತ್ತದೆ. ಕನಿಷ್ಟ ಒಂದು ಚಪ್ಪಾಳೆ ಹುಟ್ಟಬೇಕೆಂದರೂ ಎರಡು ಕೈಗಳು ಕೂಡಲೇಬೇಕು. ಇಂತಹ ಒಂದು ನಿಸರ್ಗದ ನಿಯಮ ದಿಂದಾಗಿಯೇ (ಆಂತರಿಕ ಮತ್ತು ಬಾಹ್ಯ ಶಕ್ತಿಗಳ ಸಮಾಗಮದಿಂದಾಗಿಯೇ) ಕಾವ್ಯವೂ ಹುಟ್ಟಿಬರುತ್ತದೆ.

ಒಟ್ಟು ಕಾವ್ಯಮೀಮಾಂಸಾ ಚರ್ಚೆಯಲ್ಲಿ ಈ ಮೂರು ಶಕ್ತಿ – ಸಾಮರ್ಥ್ಯಗಳ ಚರ್ಚೆ ಇದ್ದರೂ ಅವುಗಳ ಮೂಲಗುಣವನ್ನು ಗಮನಿಸಿ, ಹೀಗೆ ಈ ಸಾಮರ್ಥ್ಯಗಳಲ್ಲಿ ಕಂಡುಬರುವ ಪರಸ್ಪರ ಭಿನ್ನಗುಣಗಳನ್ನು ಗಣಿಸಿ ಅವುಗಳನ್ನು ಎರಡು ಗುಂಪುಗಳಲ್ಲಿ ವಿಭಾಗಿಸಿಕೊಳ್ಳುವ, ಮತ್ತು ಅಲ್ಲಿ ನಡೆಯುವ ಕ್ರಿಯೆಯ ನೈಸರ್ಗಿಕ ಗುಣವನ್ನು ಗುರುತಿಸುವ ಮಾತು ಸಂಸ್ಕೃತ ಕಾವ್ಯಮೀಮಾಂಸಕರಲ್ಲಾಗಲೀ ಅಥವಾ ಪ್ರಪಂಚದ ಬೇರೆಡೆಯ ಶಾಸ್ತ್ರಕಾರರಲ್ಲಾಗಲಿ ಸ್ಪಷ್ಟವಾಗಿ ಕಾಣಲಾರೆವು.

ಆದರೆ ಸಂಸ್ಕೃತ ಕಾವ್ಯಮೀಮಾಂಸಕಾರರಲ್ಲಿ – ಪ್ರತಿಭೆ ಒಂದಿದ್ದರೆ ಸಾಕು, ಉಳಿದೆರಡರ ಅವಶ್ಯಕತೆ ಇಲ್ಲವೆಂದೂ ವ್ಯತ್ಪತ್ತಿ ಸಾಮರ್ಥ್ಯ ಮತ್ತು ಅಭ್ಯಾಸ ಬಲಗಳು ಇದ್ದರೆ ಸಾಕು ಪ್ರತಿಭೆ ಇಲ್ಲದಿದ್ದರೂ ನಡೆಯುತ್ತದೆಂದೂ ಹೇಳುವ ಒಂದು ಕುತೂಹಲಕರ ಚರ್ಚೆ ಕಾಣುತ್ತದೆ. ಈ ಚರ್ಚೆಯಲ್ಲಿ ಅವರಿಗೆ ಗೊತ್ತಿಲ್ಲದೆ ಈ ಶಕ್ತಿಗಳನ್ನು ಎರಡು ಗುಂಪುಗಳಲ್ಲಿ ಕಾಣುವ ಕೆಲಸ ನಡೆದಿದ್ದರೂ ಈ ಬಗೆಗೆ ಅವರಿಗೆ ಸ್ಪಷ್ಟವಾದ ತಿಳುವಳಿಕೆ ಇಲ್ಲವೆಂಬುದು ಅವರ ಚರ್ಚೆಯಿಂದ ಸ್ಪಷ್ಟವಾಗುತ್ತದೆ.

ಭಾಮಹ, ವಾಮನರು ಪ್ರತಿಭೆಯ ಮಹತ್ವವನ್ನು ಎತ್ತಿ ಹೇಳುತ್ತಾರೆ. ಭಾಮಹ ಹೇಳುತ್ತಾನೆ: ‘ಒಳ್ಳೆಯ ಕವಿತ್ವವಿಲ್ಲದ ಮಾತಿನ ಜಾಣ್ಮೆ ಯಾವ ಲೆಕ್ಕ’(ಕನ್ನಡ ಕಾವ್ಯಾಲಂಕಾರ, ಪು.೪) ‘ಮಂದಬುದ್ಧಿಗಳು ಬೇಕಾದರೂ ಗುರುಗಳ ಉಪದೇಶದಿಂದ ಶಾಸ್ತ್ರವನ್ನು ಅಭ್ಯಾಸ ಮಾಡಬಹುದು. ಆದರೆ ಕಾವ್ಯ ಹುಟ್ಟುವುದು ಎಲ್ಲೊ ಲಕ್ಷಕ್ಕೊಬ್ಬ ಪ್ರತಿಭಾಶಾಲಿಯಿಂದ ಮಾತ್ರ’ (ಕ.ಕಾ., ಪು.೫) ಎನ್ನುತ್ತಾನೆ.

ದಂಡಿಯು ಪ್ರತಿಭೆ, ವ್ಯತ್ಪತ್ತಿ ಸಾಮರ್ಥ್ಯ ಮತ್ತು ಅಭ್ಯಾಸಬಲಗಳು ಕಾವ್ಯಕ್ಕೆ ಕಾರಣಗಳು ಎಂಬುದನ್ನು ಪ್ರಥಮಬಾರಿಗೆ ಕ್ರೋಡೀಕರಿಸಿ ಹೇಳುತ್ತಾನೆ (ಕಾವ್ಯಾದರ್ಶ, ೧ – ೧೦೩). ಆದರೆ ನೈಸರ್ಗಿಕವಾದ ಪ್ರತಿಭೆ ಇಲ್ಲದಿದ್ದರೂ ಕೂಡ ವ್ಯತ್ಪತ್ತಿ (ನೈಪುಣ್ಯತೆ) ಮತ್ತು ಅಭ್ಯಾಸ (ರೂಢಿ)ಗಳ ಬಲದಿಂ – ಪ್ರತಿಭೆ ಶಕ್ತಿ ತುಂಬುತ್ತದೆ ಎಂದು – ಭಾಮಹನ ಅಭಿಪ್ರಾಯಕ್ಕೆ ವಿರುದ್ಧವಾಗಿ ಮಾತನಾಡುತ್ತಾನೆ. ಇಲ್ಲಿ ಪ್ರಾರಂಭದ ಶಾಸ್ತ್ರಕಾರರ ವಾದದಲ್ಲಿಯೇ ಪ್ರತಿಭೆಯ ಪರವಾಗಿ ಒಬ್ಬರು, ವ್ಯತ್ಪತ್ತಿ ಮತ್ತು ಅಭ್ಯಾಸಬಲಗಳ ಪರವಾಗಿ ಮತ್ತೊಬ್ಬರು ವಾದಿಸುವುದನ್ನು ಗಮನಿಸುತ್ತೇವೆ. ಪ್ರಾರಂಭದಲ್ಲಿ ಹುಟ್ಟಿಕೊಂಡ ಈ ವಾದವನ್ನು ಮುಂದಿನವರು ಬೆಳೆಸುತ್ತ ಹೋಗುತ್ತಾರೆ.

ಮುಂದೆ ಬಂದ ವಾಮನ ಕವಿತ್ವ ಬೀಜಂ ಪ್ರತಿಭಾನಮ್(ಕಾ.ಸೂ.ವೃ.೧೬), ಅದಿಲ್ಲದಿದ್ದರೆ ಕಾವ್ಯ ಹುಟ್ಟಿದರೂ ಹಾಸ್ಯಾಸ್ಪದವಾಗುತ್ತದೆ ಎನ್ನುತ್ತಾನೆ. ಮುಂದೆ ಬಂದ ಜಗನ್ನಾಥನು ಪ್ರತಿಭೆಯ ಕಡೆಗೇ ವಾಲಿ: ತಸ್ಯ ಕಾರಣಂ ಕವಿಗತಾ ಕೇವಲಾ ಪ್ರತಿಭಾ – (ರ.ಗಂ., ಪು.೮) ಎಂದು ಹೇಳಿ ಪ್ರತಿಭೆಯ ಪರವಾಗಿ ವಾದಿಸುತ್ತಾನೆ. ತನ್ನ ವಾದಕ್ಕೆ – ಬಾಲ್ಯದಲ್ಲಿಯೇ ಕಾಣಿಸಿಕೊಳ್ಳುವ ಪ್ರತಿಭೆಯ ಕೆಲಸದ ಕಡೆ ಬೊಟ್ಟು ಮಾಡಿ, ಅಲ್ಲಿ ವಿದ್ಯ ಮತ್ತು ಅಭ್ಯಾಸ (ರೂಢಿ)ಗಳೆರಡೂ ಇಲ್ಲದಿದ್ದರೂ ಕಾವ್ಯ ಹುಟ್ಟುತ್ತದೆ ಎನ್ನುತ್ತಾನೆ (ರ.ಗಂ., ಪು.೪, ೫). ಹೀಗೆ ಭಾಮಹ, ವಾಮನ, ರಾಜಶೇಖರ, ಜಗನ್ನಾಥ ಪಂಡಿತರು ಪ್ರತಿಭೆಯೆಡೆ ವಾಲಿದರೆ ದಂಡಿ ಮಾತ್ರ – ಪ್ರತಿಭೆಯ ಗೈರುಹಾಜರಿಯಲ್ಲಿ ವಿದ್ಯೆ ಮತ್ತು ಅಭ್ಯಾಸಗಳು ಆ ಕೆಲಸ ಮಾಡುವ ಕಡೆ ಲಕ್ಷ ಹಾಕುತ್ತಾನೆ.

ಆದರೆ ಕಾವ್ಯಕ್ಕೆ ಮೂರೂ ಕಾರಣಗಳು ಅವಶ್ಯವೆಂದು ಹೇಳುವ ಇಬ್ಬರು ನಮಗೆ ದೊರೆ ಯುತ್ತಾರೆ. ‘ಕಾವ್ಯಕ್ಕೆ ಈ ಮೂರೂ ಕಾರಣಗಳು ಅವಶ್ಯ. ಒಂದೊಂದೇ ಇದ್ದರೆ ಸಾಲದು’ ಎಂಬ ನಿರ್ಣಯವನ್ನು ಮಮ್ಮಟನು ಕೊಡುತ್ತಾನೆ. ಕೊನೆಗೆ ಮಮ್ಮಟನಂತೆ ಸುವರ್ಣಮಾ ಧ್ಯಮ ಮಾರ್ಗವನ್ನು ಹಿಡಿದ ಹೇಮಚಂದ್ರನು ಕಾವ್ಯಕ್ಕೆ ಮೂರೂ ಕಾರಣಗಳ ಮಹತ್ವವನ್ನು ಹೇಳುತ್ತಾನೆ. ಮತ್ತು ಆ ಮೂರೂ ಒಟ್ಟುಗೂಡಿ ಕೆಲಸ ಮಾಡುವ ರೀತಿಯನ್ನು ಚರ್ಚಿಸುತ್ತಾನೆ. ಪ್ರತಿಭೆಗೆ ಉಪಕಾರಕಗಳಾಗಿ ಅದಕ್ಕೆ ಸಂಸ್ಕಾರ ಕೊಡುವಲ್ಲಿ ವ್ಯತ್ಪತ್ತಿ ಮತ್ತು ಅಭ್ಯಾಸಗಳು ಕೆಲಸಮಾಡುತ್ತವೆ ಎಂದು ಹೇಳುತ್ತಾನೆ: ‘‘ಕಾವ್ಯಕ್ಕೆ ಪ್ರತಿಭೆ ಕಾರಣ. ಅದು ವ್ಯತ್ಪತ್ತಿ ಅಭ್ಯಾಸಗಳಿಂದ ಸಂಸ್ಕಾರ ಹೊಂದಬೇಕು....ಆದಕಾರಣ, ಅವು ಕಾವ್ಯಕ್ಕೆ ಪ್ರತ್ಯಕ್ಷ ಕಾರಣವಾಗುವುದಿಲ್ಲ; ಆದರೆ ಪ್ರತಿಭೆಗೆ ಉಪಕಾರಕಗಳಾಗುತ್ತವೆ....ವ್ಯತ್ಪತ್ತಿಯಿಂದ ಸಂಸ್ಕಾರ ಹೊಂದಿದ ಪ್ರತಿಭೆ ಅದನ್ನು ಮೀರದಂತೆ ಕಾವ್ಯವನ್ನು ಕಟ್ಟುತ್ತದೆ…. ಅಭ್ಯಾಸದಿಂದ ಸಂಸ್ಕಾರ ಹೊಂದಿದ ಪ್ರತಿಭೆ ಕಾವ್ಯಾಮೃತವನ್ನು ಕರೆಯುವ ಕಾಮಧೇನುವಾಗುತ್ತದೆ’’ (ಭಾ.ಕಾ.ಮೀ.ಪು – ೧೩೩) ಎನ್ನುತ್ತಾನೆ ಹೇಮಚಂದ್ರ. ಹೀಗೆ ಹೇಮಚಂದ್ರನು ಎರಡು ಗುಂಪಾದ ವಾದವಿವಾದವನ್ನು ಒಂದೆಡೆಗೇ ಸೇರಿಸುತ್ತಾನೆ. ಅಂದರೆ ಪ್ರತಿಭೆಯ ಜೊತೆಗೇ ವ್ಯತ್ಪತ್ತಿ ಮತ್ತು ಅಭ್ಯಾಸಗಳೆರಡನ್ನೂ ಸೇರಿಸಿ, ಒಂದೇ ಗುಂಪಾಗಿ ಪರಿಗಣಿಸುತ್ತಾನೆ. ಈಗ ನಾವು ಗಮನಿಸಬೇಕಾದ ಸಂಗತಿಗಳೆಂದರೆ:

೧. ಭಾಮಹ, ವಾಮನ, ರಾಜಶೇಖರ ಮತ್ತು ಜಗನ್ನಾಥ ಪಂಡಿತರು ಕಾವ್ಯ ಕ್ರಿಯೆಗೆ ಪ್ರತಿಭೆ ಒಂದಿದ್ದರೆ ಸಾಕು ಎನ್ನುತ್ತಾರೆ.

೨. ದಂಡಿ ಮಾತ್ರ ಪ್ರತಿಭೆ ಇಲ್ಲದಿದ್ದರೂ ನಡೆಯುತ್ತದೆ ಎನ್ನುತ್ತಾನೆ.

೩. ಮಮ್ಮಟನು ಮೂರೂ ಕಾರಣಗಳು ಅವಶ್ಯವೆಂದು ಹೇಳಿದರೆ, ಹೇಮಚಂದ್ರನು ವ್ಯತ್ಪತ್ತಿ ಮತ್ತು ಅಭ್ಯಾಸಗಳು ಪ್ರತಿಭೆಯ ಸಂಸ್ಕಾರ ವಿಶೇಷಗಳು ಎಂದು ಹೇಳಿ – ಪ್ರತಿಭೆಯ ಗುಂಪಿಗೇ ಅವನ್ನು ಸೇರಿಸುತ್ತಾನೆ.

ಪ್ರತಿಭೆ ಒಂದೇ ಕಾವ್ಯದ ಹೇತು ಎನ್ನುವಲ್ಲಿ, ಮತ್ತು ಪ್ರತಿಭೆ ಇಲ್ಲದಿದ್ದರೂ ನಡೆಯುತ್ತದೆ ಎನ್ನುವಲ್ಲಿ – ಎರಡು ವಾದಗಳು ಕಾಣಿಸುತ್ತವೆ. ಅಥವಾ ಪ್ರತಿಭೆಯ ಗುಂಪಿಗೇ ವ್ಯತ್ಪತ್ತಿ ಮತ್ತು ಅಭ್ಯಾಸಗಳನ್ನು ಸೇರಿಸುವುದರಿಂದ ಒಟ್ಟಿಗೆ ಒಂದೇ ಗುಂಪಾಗಿ ಇವನ್ನು ಗಣಿಸಿದಂತಾಗುತ್ತದೆ. ಹೀಗೆ ಕೆಲವರು ಮೂರು ಹೇತುಗಳಲ್ಲಿ ಒಂದು ಪ್ರಮುಖವೆಂದೂ ಒಬ್ಬಿಬ್ಬರು ಪ್ರತಿಭೆ ಇಲ್ಲದಿದ್ದರೂ ನಡೆಯುತ್ತದೆ ಎಂದೂ ಮತ್ತೊಬ್ಬನು ಇವೆಲ್ಲವುಗಳನ್ನೂ ಒಂದೇ ಕಡೆ ಸೇರಿಸುವುದನ್ನೂ ಗಮನಿಸಿದರೆ ಅವರ ಈ ಚರ್ಚೆಯ ಹಿಂದೆ ಒಂದು ತಾತ್ವಿಕ ಚಿಂತನೆಯ ಕೊರತೆ ಎದ್ದು ಕಾಣುತ್ತದೆ.

ಈ ಹಿಂದೆ ಗುರುತಿಸಿದಂತೆ ಒಂದು ಹೊಸ ಹುಟ್ಟಿಗೆ ಎರಡು ಸಂಗತಿಗಳ ಸಮಾಗಮ ಅವಶ್ಯ. ಗಂಡು – ಹೆಣ್ಣು, ಒರಳು – ಒನಕೆ, ಆಕಾಶ – ಭೂಮಿ, ಹುಣ್ಣಿವೆ – ಅಮವಾಸ್ಯೆ, ಹಗಲು – ರಾತ್ರಿ, ಬೀಸುವಕಲ್ಲಿನ ಎರಡು ಹೋಳುಗಳು, ಕೊನೆಗೆ ಶಬ್ದ ಹುಟ್ಟಲು – ಚಪ್ಪಾಳೆಗಾಗಿ ಎರಡು ಕೈಗಳು ಪರಸ್ಪರ ಸೇರಲೇಬೇಕು. ಈಗ ನಮ್ಮ ಮುಂದೆ ಇರುವ ಪ್ರಶ್ನೆ ಎಂದರೆ – ಕಾವ್ಯ ಅಥವಾ ಕಲೆ ಹುಟ್ಟಲು ಪ್ರತಿಭೆ ಒಂದೇ ಅಥವಾ ‘ಪ್ರತಿಭೆ ಜೊತೆಯಾಗಿ ಗಣಿಸುವ ಒಂದೇ ಗುಂಪು’ ಕಾರಣವಾಗುತ್ತದೆ ಎಂಬ ಚಿಂತನೆಯ ನ್ಯೂನ್ಯತೆ ಏನು? ಎಂಬುದು.

ಈ ಹಿನ್ನೆಲೆಯಲ್ಲಿ ಜನಪದ ಕವಿಯೊಬ್ಬನ ಈ ಕೆಳಗಿನ ಒಂದೆರಡು ಸಾಲುಗಳನ್ನು ವಿವರವಾಗಿ ಗಮನಿಸುವುದು ಇಲ್ಲಿ ಮುಖ್ಯವೆಂದು ತೋರುತ್ತದೆ.

 

ಕವಿ ಮಾಡಾ ಕಳಾ ಬ್ಯಾರಿ ತಿಳಿ ಮರ್ಮ
ಪದಾ ಮಾಡಾ ಹದಾ ಬ್ಯಾರಿ ಓದು ಬ್ರಹ್ಮಾ    (ಹರದೇಶಿ ನಾಗೇಶಿ, ೫)

೧ನೇ ಸಾಲು:

ಕಾವ್ಯ ಸೃಜಿಸುವ ‘ಕಲಾ ನಿರ್ಮಾಣ ಶಕ್ತಿ’ಯ ಗುಣವೇ ಭಿನ್ನವಾಗಿರುವುದು
ಕವಿಯ ಅಂತಃ ಸತ್ವವಾಗಿರುವ ಈ ಶಕ್ತಿಯ ರಹಸ್ಯವನ್ನು ತಿಳಿ.

೨ನೇ ಸಾಲು:

ಕಾವ್ಯ ಕಟ್ಟುವ ಅನುಭವ ನೈಪುಣ್ಯತೆಯೇ ಭಿನ್ನವಾಗಿದ್ದು,
ಅದಕ್ಕಾಗಿ ಈ ಬದುಕನ್ನು ಗ್ರಹಿಸುವ ಪ್ರಯತ್ನ ಮಾಡು.

ಈ ಮೇಲೆ ಉಲ್ಲೇಖಿಸಿದ ಎರಡು ಸಾಲುಗಳಲ್ಲಿಯ ಪ್ರತಿ ಪದಗಳೂ ಅರ್ಥವತ್ತಾಗಿವೆ. ‘ಕವಿ’ ಮತ್ತು ‘ಪದಾ’ ಎನ್ನುವ ಪದಗಳು ಕಾವ್ಯವನ್ನೇ ನಿರ್ದೇಶಿಸುತ್ತವೆ. ‘ಕಳಾ’ ಎಂದರೆ ‘ಮೂಲ ಜೀವಕಾಳ’, ‘ಮೂಲ ಸೆಲೆ’, ‘ಕಲೆಯನ್ನು ಸೃಜಿಸುವ ಮೂಲ ಶಕ್ತಿ’ ಎಂದು ಅರ್ಥವಾಗುತ್ತದೆ. ಹೀಗಾಗಿ ‘ಕಳಾ’ ಎನ್ನುವುದು ಕವಿಯಲ್ಲಿರುವ ‘ಕವಿತೆ ಸೃಷ್ಟಿಸುವ ನೈಸರ್ಗಿಕ ಶಕ್ತಿ’ಯನ್ನು ಹೇಳುತ್ತದೆ. ಈ ‘ಕಳಾ’ದ ಒಂದು ಗುಣವೆಂದರೆ ಮರ್ಮ(ರಹಸ್ಯ) ವಾಗಿರುವುದು. ‘ತಿಳಿ’ ಮತ್ತು ‘ಓದು’ ಎಂಬ ಎರಡು ಪದಗಳ ಅರ್ಥದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ‘ತಿಳಿ’ ಎಂದರೆ ಒಳಗಿನದನ್ನು (ಅಂತರಂಗದಲ್ಲಿರುವ ಶಕ್ತಿಯನ್ನು) ಅರಿಯುವುದು. ‘ಓದು’ ಎಂದರೆ ಹೊರಗಿನ ಪ್ರಪಂಚದ ಜ್ಞಾನವನ್ನು ಅನುಭವಕೋಶಕ್ಕೆ ತುಂಬಿಕೊಳ್ಳುವುದು. ‘ಹದಾ’ ಎನ್ನುವುದು ಕವಿತೆ ಅಂಕುರಿಸಲು ಗಳಿಸುವ ಮನಸ್ಸಿನ ಅನುಭವ – ಪರಿಣತಿಯಾಗಿದೆ.

‘ಕವಿ ಮಾಡಾ ಕಳಾ’ ಮತ್ತು ‘ಪದಾ ಮಾಡಾ ಹದಾ’ ಎಂಬ ಈ ಎರಡು ಮಾತುಗಳನ್ನು ಗಮನಿಸಬೇಕು. ಇಲ್ಲಿ ‘ಕಳಾ’ ಮತ್ತು ‘ಹದ’ ಎಂಬ ಎರಡು ಪದಗಳು ಬಹುಮುಖ್ಯವಾದ ಸಂಗತಿಗಳನ್ನು ಹೇಳುತ್ತಿವೆ. ‘ಕಳಾ’ ಎನ್ನುವುದು ‘ಕಲಾ’ ಅರ್ಥಾತ್ ಕಲೆಯ ಪರ್ಯಾಯ ಪದವೂ ಆಗಿದೆ. ಜೊತೆಗೆ ಅದು ಬಹುಮುಖ್ಯವಾಗಿ ‘ಕಳಾಸ’ ಎಂದರೆ ‘ಜೀವಶಕ್ತಿ’ಯ ಬಗೆಗೆ ಲಕ್ಷ ಸೆಳೆಯುತ್ತದೆ. ಹೀಗಾಗಿ ‘ಕವಿತಾ’ ಮಾಡುವ ‘ವಿಶೇಷ ಶಕ್ತಿ’ಯನ್ನು ಅದು ಪ್ರಸ್ತಾಪಿಸುತ್ತದೆ.

‘ಹದಾ’ ಎನ್ನುವುದು ಹಾಕಿದ ಬೀಜ ಮೊಳೆಯುವ ಮಣ್ಣಿನ ಸ್ಥಿತಿಯನ್ನು ಹೇಳುತ್ತದೆ. ಒಬ್ಬ ಒಕ್ಕಲಿಗನು ನೇಗಿಲು, ಕುಂಟಿ, ರೆಂಟಿ ಹೊಡೆದು ತನ್ನ ಹೊಲವನ್ನು ಹದಗೊಳಿಸುವ, ಗೊಬ್ಬರ ಹಾಕಿ, ನೀರು ಹಾಯಿಸಿ ನೈಸರ್ಗಿಕ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಾನೆ. ‘ಹದ’ದ ಸ್ಥಿತಿ ಎಂದರೆ ಬೀಜ ಬಿತ್ತಿದರೆ ಸಾಕು ಖಾತ್ರಿಯಾಗಿ ಅದು ಮೊಳೆಯು ತ್ತದೆ ಮತ್ತು ಒಳ್ಳೆಯ ಬೆಳೆಯಾಗಿ ಬೆಳೆಯುತ್ತದೆ. ಹೀಗಾಗಿ ಕವಿಯ ಮನಸ್ಸಿನ ತಯಾರಿಯ ಸ್ಥಿತಿಯನ್ನು ‘ಹದ’ ಹೇಳುತ್ತಿದೆ ಎನಿಸುತ್ತದೆ. ಅದು ಒಂದು ವಿಷಯವು ಮನಸ್ಸಿನಲ್ಲಿ ನಾಟಿ, ಮೊಳಕೆ ಒಡೆಯುವ ಸಾಮರ್ಥ್ಯದ ಸ್ಥಿತಿಯ ಗುಣವನ್ನು ಹೇಳಿಕೊಡುತ್ತದೆ.

‘ಓದು’ವುದೆಂದರೆ ಹದಕ್ಕಾಗಿ ಪ್ರಯತ್ನಿಸುವುದು ಎಂದಂತಾಗುತ್ತದೆ. ಲೋಕಾನುಭವ ವನ್ನು ವೃದ್ಧಿಸಿಕೊಳ್ಳಲು ಮಾಡುವ ಪ್ರಯತ್ನವೇ ‘ಓದು’, ಅಂದರೆ ‘ಓದು’ ಲೋಕಾನುಭವವನ್ನು ಗ್ರಹಿಸುವ ಪ್ರಕ್ರಿಯೆಯಾಗಿದೆ. ಈ ಮೂಲಕ ಸಂಗ್ರಹಗೊಳ್ಳುವ ಅನುಭವ – ನೈಪುಣ್ಯತೆ ‘ಹದ’ ಎನಿಸಿಕೊಳ್ಳುತ್ತದೆ. ಜನಪದದ ಒಬ್ಬ ಕವಿಯಿಂದ ಬಲು ಸಹಜವಾಗಿ ಬಂದ ಒಂದು ಮಾತು ಕಲೆಯ ಬೀಜವನ್ನು ಬಿತ್ತುವ ಮತ್ತು ಅದನ್ನು ಮೊಳೆಸುವ – ಬೆಳೆಸುವ ಸಾಮರ್ಥ್ಯದ ಬಗ್ಗೆ ಹೇಳುತ್ತದೆಂಬುದು ಗಮನಾರ್ಹ ಸಂಗತಿ.

ಶಿಕ್ಷಿತ ಸಮಾಜ ಹೆಸರಿಟ್ಟು ಕರೆಯುವ ಕವಿಯ ಅಥವಾ ಕಲಾವಿದನ ವಿಶೇಷ ಸಾಮರ್ಥ್ಯ ಗಳನ್ನು ಜನಪದ ಕವಿಯೊಬ್ಬ ‘ಕಳಾ’ ಮತ್ತು ‘ಹದ’ ಎನ್ನುವ ಪದಗಳಿಂದ ಸೂಚಿಸುತ್ತಾನೆ. ಜನಪದಸಮಾಜ ಸ್ವೀಕರಿಸಿದ ಈ ಮಾತುಗಳಲ್ಲಿ ಎರಡು ಸ್ಪಷ್ಟ ಕಲ್ಪನೆಗಳಿರುವುದು ಕಂಡು ಬರುತ್ತದೆ. ಒಂದು ‘ಕಳಾ’ ಎಂದರೆ ‘ಬೀಜ; ಮೊಳಕೆ ಯೊಡೆಯುವ ಆಂತರಂಗಿಕ ಸಾಮರ್ಥ್ಯ ವುಳ್ಳ ಶಕ್ತಿ’. ಇನ್ನೊಂದು ‘ಹದ’, ಮೊಳಕೆಯೊಡೆಯಲು ಅವಶ್ಯವಾದ, ಪ್ರಯತ್ನ ಪೂರ್ವಕವಾಗಿ ಗಳಿಸಿಕೊಳ್ಳುವ ‘ಭೂಮಿಕೆ’. ಒಂದು ಹೊಸದರ ಹುಟ್ಟಿಗೆ ಎರಡು ಸಂಗತಿಗಳ ಸಮಾಗಮ ಅವಶ್ಯವಾದದ್ದು ಎಂಬ ಆಲೋಚನೆಯ ಹಿನ್ನೆಲೆಯಲ್ಲಿ – ಕಲೆ ಹುಟ್ಟಲು ಕೂಡ ಇಂತಹ ಎರಡು ಸಂಗತಿಗಳ ಸಮಾಗಮ ಆಗಲೇ ಬೇಕು ಎಂಬ ಕಲ್ಪನೆ ಇಲ್ಲಿ ಕಾಣಿಸಿಕೊಂಡಿದೆ. ಹೀಗೆ ಈಗಾಗಲೇ ತನ್ನಲ್ಲಿರುವ ಅಂತಃಶಕ್ತಿ (ಕವಿತಾಶಕ್ತಿ), ಮತ್ತು ಹೊರಗಿನ ಪ್ರಪಂಚದ ಅನುಭಗಳು(ಹದ) ಪರಸ್ಪರ ಎದುರಾಗಿ ಸಮಾಗಮವಾದಾಗ ಹೊಸದೊಂದು ಹುಟ್ಟುತ್ತದೆ; ಅದು ಕಾವ್ಯವಾಗಿರಬಹುದು, ಪದವಾಗಿರಬಹುದು. ಇಲ್ಲಿ ಹೆಣ್ಣು – ಗಂಡು, ದಿನ – ರಾತ್ರಿ, ಆಕಾಶ – ಬೂಮಿ, ಹೊಲ – ಬೀಜ ಈ ಮುಂತಾದವುಗಳ ಕಲ್ಪನೆ ಇದ್ದು, ಇವುಗಳ ಸಮಾಗಮ ದಿಂದ ಹೊಸದೊಂದು ಹುಟ್ಟುಪಡೆಯುವಂತೆ, ಅಂತಃಶಕ್ತಿ ಮತ್ತು ಲೋಕಾನುಭವಗಳ ಬೆರೆಯುವಿಕೆಯಿಂದ ಕಾವ್ಯ (ಕಲೆ) ಸೃಜಿಸುತ್ತದೆ ಎಂಬುದು ವೈಜ್ಞಾನಿಕ ಸತ್ಯವೆಸಿಸುತ್ತದೆ.

ಕಲಾವಿದನ ನೈಸರ್ಗಿಕ ಅಂತಃ ಶಕ್ತಿ (ಪ್ರತಿಭೆ) ಒಂದು ಕಡೆಯಾಗಿ, ಆತನು ಬದುಕಿನಲ್ಲಿ ಗಳಿಸಿಕೊಳ್ಳುವ ಅನುಭವ ಸಾಮರ್ಥ್ಯಗಳು (ವ್ಯತ್ಪತ್ತಿ, ಅಭ್ಯಾಸಗಳು) ಇನ್ನೊಂದು ಕಡೆಯಾಗಿ ಎರಡು ಗುಂಪುಗಳು ಪರಸ್ಪರ ಎದುರಾಗಿ ಸಮಾಗಮ ಹೊಂದುತ್ತವೆ. ಇದರಿಂದಾಗಿಯೇ ಒಂದು ಹೊಸ ಕಲೆಯ ಹುಟ್ಟು ಕಾಣಿಸಿಕೊಳ್ಳುತ್ತದೆ.

ಶಿಕ್ಷಿತಸಮಾಜ ಹುಟ್ಟು ಹಾಕಿರುವ – ಕಾವ್ಯಕ್ಕೆ ಕಾರಣವಾಗುವ ಸಂಗತಿಗಳ ಚರ್ಚೆಯಲ್ಲಿ, ಹೀಗೆ ಎರಡು ಸಂಗತಿಗಳ ಸಮಾಗಮದ ಕಲ್ಪನೆಯ ಕೊರತೆ ಎದ್ದುಕಾಣುತ್ತದೆ. ಮತ್ತು ವ್ಯತ್ಪತ್ತಿ ಸಾಮರ್ಥ್ಯ ಮತ್ತು ಅಭ್ಯಾಸಬಲಗಳು ಕೇವಲ ಓದಿನಬಲವನ್ನೇ ಮುಖ್ಯಗುರಿಯಾಗಿಸಿ ಕೊಂಡಿವೆ ಎಂದು ಅವರು ಗ್ರಹಿಸುತ್ತಾರೆ ಮತ್ತು ಹಾಗೆ ವಿವರಿಸುತ್ತಾರೆ. ಆದರೆ ವೌಖಿಕ ಪರಂಪರೆಯಲ್ಲಿ ಓದಿನ ಬಲಕ್ಕಿಂತಲೂ ಮುಖ್ಯವಾಗಿ ಲೋಕಾನುಭಬವಕ್ಕೆ ಹೆಚ್ಚು ಒತ್ತು ಬೀಳುವುದನ್ನು ನಾವು ಕಾಣುತ್ತೇವೆ. ಕಲಾವಿದನ ಅಂತಃಶಕ್ತಿಯೊಂದಿಗೆ ಸಮಾಗಮಗೊಳ್ಳು ವುದು ಲೋಕಾನುಭವ ಎಂಬುದು ಇಲ್ಲಿಯ ಮುಖ್ಯವಿಚಾರವಾಗಿದೆ.

ನೈಸರ್ಗಿಕ ಶಕ್ತಿಯಾಗಿ, ಹುಟ್ಟಿನೊಂದಿಗೆ ಶರೀರದ ಗುಪ್ತನಿಧಿಯಂತೆ ಅಂಟಿಕೊಂಡು ಬಂದಿರುವ ಪ್ರತಿಭೆಯು ಒಬ್ಬ ಕಲಾವಿದನಲ್ಲಿ ಬಾಲ್ಯದಿಂದಲೂ ಚುರುಕಾಗಿರಬಹುದು, ಇಲ್ಲವೆ ಯಾವುದೋ ಒಂದು ಸಂದರ್ಭದಲ್ಲಿ ವ್ಯಕ್ತಗೊಂಡು, ನಿರಂತರವಾಗಿ ಅವನಲ್ಲಿ ಕೆಲಸ ಮಾಡಬಹುದು. ಇಂತಹ ನೈಸರ್ಗಿಕ ಶಕ್ತಿ – ಎಲ್ಲ ಕ್ಷೇತ್ರದ ಜನಗಳಲ್ಲಿ ಕಾಣಬರುತ್ತದೆ: ವೈದ್ಯಕೀಯ, ತಾಂತ್ರಿಕ, ರಾಜಕೀಯ, ತತ್ತ್ವಜ್ಞಾನ, ವಿಜ್ಞಾನ – ಹೀಗೆ ಮನುಷ್ಯ ಬದುಕಿನ ಅನೇಕ ಕ್ಷೇತ್ರಗಳಲ್ಲಿ ಕಾಣಿಸಿಕೊಂಡು ಅಗಾಧವಾದ ಹೊಸ ಹೊಳಹುಗಳಿಂದ ಮತ್ತು ಅಪರಿಮಿತವಾದ ಕರ್ತೃತ್ವಶಕ್ತಿಯಿಂದ ಕಾಣಿಸಿಕೊಳ್ಳುತ್ತದೆ. ನಮಗೆ ಸಂಬಂಧಿಸಿದ್ದು ಕಲಾಲೋಕದಲ್ಲಿ ಕಾಣಿಸುವ ಪ್ರತಿಭೆ. ಇದನ್ನು ‘ಸೃಜಿಸುವ ಪ್ರತಿಭೆ’ ಮತ್ತು ‘ಭಾವಿಸುವ ಪ್ರತಿಭೆ’ ಎಂಬುದಾಗಿ ಎರಡು ಬಗೆಯಲ್ಲಿ ಗುರುತಿಸುವ ಕೆಲಸವನ್ನು ಅಲಂಕಾರಿಕರು ಮಾಡಿದ್ದಾರೆ. ರಾಜಶೇಖರನು(೧೦ನೇ ಶತಮಾನದ ಆದಿ) ಪ್ರತಿಭೆಯನ್ನು ಕಾರಯಿತ್ರಿ ಮತ್ತು ಭಾವಯಿತ್ರಿ ಎಂದು ಎರಡು ಬಗೆಯಾಗಿ ಗುರುತಿಸುತ್ತಾನೆ. ಕೋಲ್‌ರಿಜನು ಪ್ರೈಮರಿ ಮತ್ತು ಸೆಕೆಂಡರಿ ಎಂದು ಪ್ರತಿಭೆಯನ್ನು ಗುರುತಿಸುತ್ತಾನೆ. ಪ್ರೈಮರಿ ಇಮ್ಯಾಜಿನೇಶನ್ ಎಂಬುದು ಎಲ್ಲರಲ್ಲಿ ಕಾಣುವ ಸಾಮಾನ್ಯ ಪ್ರಜ್ಞೆ. ಇದೇ ಅರಿಯುವ ಶಕ್ತಿ. ರಾಜಶೇಖರನು ಹೆಸರಿಸುವ ಭಾವಯಿತ್ರಿಯ ಕೆಲಸವೂ ಇದೆಯೇ. ಆದರೆ ಅವನು ಇದರ ಶಕ್ತಿಯನ್ನು ಕಾವ್ಯದ ಹೊರಗೆ ಹೋಗಿ ಗುರುತಿಸುವುದಿಲ್ಲ. ಕೋಲ್‌ರಿಜನ ಸೆಕೆಂಡರಿ ಇಮ್ಯಾಜಿನೇಶನ್ ಮತ್ತು ರಾಜಶೇಖರನು ಗುರುತಿಸುವ ಕಾರಯಿತ್ರಿ ಬಹುಬಗೆಯಲ್ಲಿ ಒಂದೇ ಆಗಿವೆ. ಆದರೆ ರಾಜಶೇಖರಿನಿಗಿಂತ ನಮ್ಮ ಜನ ಹೆಚ್ಚು ಚರ್ಚೆ ಮಾಡುವುದು ಕೋಲ್‌ರಿಜನ ವಿಚಾರಗಳನ್ನೇ.

ಈ ಪ್ರತಿಭೆಯನ್ನು ಪರಿಚಯಿಸುವಲ್ಲಿ ಭಟ್ಟತೌತನ ಮಾತು ಬಹಳ ಉಪಯೋಗಿ ಯಾಗಿದೆ. ಪ್ರಜ್ಞಾ ನವನವೋಲ್ಲೇಖಶಾಲಿನಿ ಪ್ರತಿಭಾಮತಾಮತ್ತು ಈ ಮಾತಿನ ಪಾಠಾಂತರ ವೆಂದು ಗುರುತಿಸಲಾಗುವ ಪ್ರಜ್ಞಾ ನವನವೋನ್ಮೇಷಶಾಲಿನಿ ಪ್ರತಿಭಾಮತಾ ಎಂಬ ಎರಡೂ ಮಾತುಗಳು ಪ್ರತಿಭೆು ಒಂದೊಂದು ವಿಶೇಷಗುಣವನ್ನು ಗುರುತಿಸುತ್ತವೆ. ಹೊಸಹೊಸದನ್ನು ರಚಿಸುವ ಮತ್ತು ಹೊಸಹೊಸದನ್ನು ಹೊಳೆಯಿಸುವ ಶಕ್ತಿಯೇ ಪ್ರತಿಭೆಎನ್ನುತ್ತಾನೆ ಭಟ್ಟತೌತ. ಇಂತಹ ಪ್ರತಿಭೆಯ ಶಕ್ತಿಯಲ್ಲಿ ಹಲವಾರು ಸ್ಥರಗಳಿರುತ್ತವೆ. ಅದು ತನ್ನ ಶಕ್ತಿಗೆ ತಕ್ಕಂತೆ ಕೆಲಸ ಮಾಡುವುದರಿಂದಲೇ ಹಲವಾರು ನಮೂನೆಯ ಕೃತಿಗಳು ಸೃಷ್ಟಿಗೊಂಡಿರುತ್ತವೆ. ಈ ಪ್ರತಿಭೆಗಳು ತೀರ ವೈಯಕ್ತಿಕವಾಗಿ ಗುರುತಿಸುವಷ್ಟು ಅನನ್ಯತೆಯನ್ನು ಹೊಂದಿರುತ್ತವೆ. ಅಂತಲೇ ಪಂಪನ ಕಾವ್ಯ, ಕುಮಾರವ್ಯಾಸನ ಕಾವ್ಯ ಎಂದು ಬೇರೆ ಬೇರೆಯಾಗಿ ಗುರುತಿಸುತ್ತೇವೆ. ಅದು ಪಂಪನ ಪ್ರತಿಭೆ, ಕುಮಾರವ್ಯಾಸನ ಪ್ರತಿಭೆ ಎನ್ನುವಷ್ಟು ವ್ಯಕ್ತಿಯ ಮುದ್ರೆಯನ್ನು ಪಡೆದಿರುತ್ತದೆ.

ಪಾಶ್ಚಾತ್ಯರಲ್ಲಿ ಉಪಯೋಗಿ ಕಲೆ ಮತ್ತು ಲಲಿತಕಲೆ ಎಂದು ಕಲೆಗಳನ್ನು ಎರಡು ಬಗೆಯಾಗಿ ವಿಭಾಗಿಸುವದನ್ನು ಕಾಣುತ್ತೇವೆ. ಮನುಷ್ಯನ ಸಾಮಾನ್ಯಗುಣ ಸೃಜನಾತ್ಮಕ ವಾಗಿದ್ದು, ಅದು ತಾನು ಸೃಜಿಸುವ ಪ್ರತಿಯೊಂದು ವಸ್ತುವೂ ಕಲಾತ್ಮಕ (ಸುಂದರ) ವಾಗಿರ ಲೆಂದು ಆತ ಬಯಸುತ್ತಾನೆ. ಉಡುವ ಬಟ್ಟೆ, ಮಾಡುವ ರೊಟ್ಟಿ, ಬಳಸುವ ಹಂಚು, ಪೆನ್ನು, ಪೆನ್ಸಿಲ್ ಎಲ್ಲವೂ ಚಂದವಾಗಿರಬೇಕು. ಕುಡಗೊಲು, ಕುರುಪಿ, ಮಂಚ, ಕುರ್ಚಿ, ಮೇಜು ಇಂಥವುಗಳಲ್ಲಿ ಉಪಯೋಗೀ ಗುಣ ಮುಖ್ಯವಾಗಿರುತ್ತದೆ. ಆದರೆ ಸೃಜನಾತ್ಮಕ ಗುಣವು ಅಗಾಧವಾಗಿ ಕೆಲಸಮಾಡಿ, ಉಪಯೋಗದ ಗುಣ ಕಡಿಮೆಯಾಗಿ ತೋರುವ ವಸ್ತುಗಳನ್ನು ಲಲಿತಕಲೆಗಳೆಂದು ಗುರುತಿಸುವ ಪರಿಪಾಠ ಪ್ರಪಂಚದ ತುಂಬಾ ಕಾಣುತ್ತದೆ. ಈ ಕಲೆಗಳ ಸೃಷ್ಟಿ ಕ್ರಿಯೆ ಮತ್ತು ಅಲ್ಲಿ ಹೊರಡುವ ಸೌಂದರ್ಯ – ಸತ್ವಗಳು ಅಪರೂಪವೆನಿಸುವಂತಿರುತ್ತವೆ. ಆದರೆ ಇವುಗಳು ತೀರ ಅಪರೂಪವೆನಿಸಿದರೆ ಅಂತಹ ಕಲೆ ಕೇವಲ ಮಾದರಿ ಎನಿಸುತ್ತದೆ.

ಪ್ರತಿಭೆಯ ಶಕ್ತಿ ಎಲ್ಲಾ ಕಲಾವಿದರಲ್ಲಿ ಒಂದೇ ಬಗೆಯಾಗಿ ತೋರುವುದಿಲ್ಲ ಎಂಬುದನ್ನು ಈ ಮೇಲೆ ಉಲ್ಲೇಖಿಸಿದೆ. ಪ್ರತಿಯೊಬ್ಬರ ದೈಹಿಕ ರೂಪಗಳು ಹೇಗೆ ಭಿನ್ನವಾಗಿರುತ್ತವೆಯೋ ಹಾಗೆಯೇ ಕಲಾವಿದರ ಅಂತಃಶಕ್ತಿಯಾದ ಪ್ರತಿಭೆಯ ಸಾಮರ್ಥ್ಯವೂ ಅವರವರಲ್ಲಿ ಭಿನ್ನಭಿನ್ನವಾಗಿರುತ್ತದೆ. ಹೀಗೆ ವಿಭಿನ್ನವಾಗಿರುವ ಈ ನೈಸರ್ಗಿಕ ಶಕ್ತಿಯನ್ನು ಆದರ ಸಾಮರ್ಥ್ಯಕ್ಕೆ ತಕ್ಕಂತೆ ‘ಪ್ರತಿಭೆ’ಯೆಂದೂ ‘ಕಲ್ಪನ’ ಎಂದೂ ‘ಸ್ಫೂರ್ತಿ’ ಎಂದೂ ನಾನಾ ಹೆಸರು ಗಳಿಂದ ಕರೆಯುವ ರೂಢಿ ಇದೆ. ಆದರೆ ಅದು ಅಪರೂಪದ ಶಕ್ತಿಯಾಗಿರುವುದು ಮಾತ್ರ ನಿಜ.

ಪ್ರತಿಭೆಯು ಕಲಾವಿದನ ಅಂತಃಶಕ್ತಿಯಾಗಿದ್ದು, ಅದನ್ನು ನಾವು ಗುರುತಿಸುವುದು ಅದರ ಕ್ರಿಯಾತ್ಮಕ ಗುಣದಿಂದಾಗಿ. ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜಗುರು ಇಬ್ಬರೂ ಸಂಗೀತಗಾರರು. ಆದರೆ ಒಬ್ಬರ ಶಕ್ತಿ ಇನ್ನೊಬ್ಬರಂತಿಲ್ಲ. ಮಲ್ಲಿಕಾರ್ಜುನ ಮನ್ಸೂರರ ದೇಶವ್ಯಾಪಿ ಖ್ಯಾತಿ ಬಸವರಾಜ ರಾಜಗುರು ಅವರಿಗೆ ಲಭಿಸಲಿಲ್ಲ. ಶ್ರವಣ ಬೆಳ್ಗೊಳದ ಗೊಮ್ಮಟನ ಮೂರ್ತಿ ಸೃಜಿಸಿದ ಪ್ರತಿಭೆಯ ಶಕ್ತಿ – ಸಾಮರ್ಥ್ಯದಷ್ಟು, ಧರ್ಮಸ್ಥಳದಲ್ಲಿರುವ ಗೊಮ್ಮಟನ ಶಿಲ್ಪದಲ್ಲಿ ಕಾಣುವುದಿಲ್ಲ. ಹಾಗೆಯೇ ನಾವು ಎಲ್ಲ ಕಾಲದ, ಎಲ್ಲ ಬಗೆಯ ಕಲಾವಿದರ ಶಕ್ತಿಯಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ. ಈ ಮಾತು ಕಾವ್ಯನಿರ್ಮಾಣದಲ್ಲೂ ಅಷ್ಟೇ ನಿಜವಾದದ್ದು. ಹಳೆಗನ್ನಡದಲ್ಲಿ ಪಂಪ, ನಡುಗನ್ನಡದಲ್ಲಿ ಹರಿಹರ, ಹೊಸಗನ್ನಡದಲ್ಲಿ ಕುವೆಂಪು – ಇವರಲ್ಲಿ ಕಾಣಿಸಿಕೊಂಡ ಪ್ರತಿಭೆಯನ್ನು ಆಯಾಕಾಲದ ಕವಿಗಳೆಲ್ಲರಲ್ಲಿ ಕಾಣಲಾಗದು. ‘ಸೃಷ್ಟಿಸುವ ಶಕ್ತಿ’ ವೈವಿಧ್ಯತೆಯಿಂದ ಕೂಡಿರುವುದು ಸಾಮಾನ್ಯ. ಒಂದು ಗಿಡದ ಹಣ್ಣಿನ ರುಚಿಯಂತೆ ಅದೇ ಬಗೆಯ ಇನ್ನೊಂದು ಗಿಡದ ಹಣ್ಣಿನ ರುಚಿ ಸಮಾನವಾಗಿರಲು ಸಾಧ್ಯವಿಲ್ಲ. ಇದು ಸೃಷ್ಟಿಯ ನಿಯಮ – ಲಕ್ಷಣ. ಈ ನಿಸರ್ಗದ ನಿಯಮವು ಹೀಗೆ ಎಲ್ಲಾ ಕಡೆ ಕಾಣುವಂತೆ ನಿಸರ್ಗದತ್ತವಾದ, ಸೃಜಿಸುವ ಸಾಮರ್ಥ್ಯವುಳ್ಳ ಪ್ರತಿಭೆಯಲ್ಲೂ ಇರುವುದು ಸಹಜ. ಇದೇ ಅದರ ಮೂಲಗುಣವೂ ಹೌದು.

ಅಂತರಂಗದಲ್ಲಿ ಇಂತಹ ಅಪರೂಪದ ಶಕ್ತಿಯಿದ್ದರೆ ಆ ಕಲಾವಿದನಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಅಗಾಧವಾದ ಪರಿಣಾಮವನ್ನು ಅದು ಬೀರುತ್ತದೆ ಮತ್ತು ಆತನನ್ನು ಒಬ್ಬ ಸಂವೇದನಾಶೀಲನನ್ನಾಗಿ ಪರಿವರ್ತಿಸುತ್ತದೆ. ಪ್ರತಿಭಾವಂತನೆಂದರೆ ಕೇವಲ ಒಂದು ಕಲೆಯನ್ನು ನಿರ್ಮಾಣ ಮಾಡುವವನು ಎಂದರ್ಥವಲ್ಲ. ಅವನ ಮೈ – ಮನಗಳ ಕಣಕಣದಲ್ಲೂ ಪ್ರತಿಭೆ ಪಸರಿಸಿ, ಅವನ ಭಾವಭಾವನೆಗಳ ಮತ್ತು ಅವನ ಅಂಗಾಂಗಗಳ ಕಣಕಣಗಳಲ್ಲೂ ಆವರಿಸಿ ತನ್ನ ವಶಕ್ಕೆ ತೆಗೆದುಕೊಂಡಿರುತ್ತದೆ. ಸಂಗೀತದ ಪ್ರತಿಭೆ ಇದ್ದವನಲ್ಲಿ ಅದರ ಬಗೆಗೆ ಅವನಲ್ಲಿ ಒಲವು ಉಂಟಾಗುವಂತೆ ಮಾಡಿರುತ್ತದೆ. ರಾಗ – ಲಯಗಳ ಬಗೆಗಿನ ಸ್ವಾಭಾವಿಕ ಅರಿವು ಅಷ್ಟೇ ಅಲ್ಲ ಅವನ ಕಂಠದ ಧ್ವನಿಯನ್ನು ಸೃಜಿಸಿ ಹಿಡಿಯುವ ಸಾಮರ್ಥ್ಯವಾಗಿ (ಗಂಟಲಿನ ಶಕ್ತಿಯಾಗಿ) ಕೆಲಸ ಮಾಡುತ್ತದೆ. ಹೀಗೆಯೇ ಶಿಲ್ಪಿ ಮತ್ತು ಚಿತ್ರಕಲಾವಿದನಲ್ಲಿ ‘ಈಕ್ಷಿಸುವ ಅಂತಃಶಕ್ತಿ’ಯಲ್ಲದೆ ಅವನ ದೃಷ್ಟಿ ಮತ್ತು ಕೈ – ಬೆರಳುಗಳನ್ನು, ಒಬ್ಬ ನಟ ಮತ್ತು ನೃತ್ಯಗಾರನಲ್ಲಿ ಅಭಿನಯ ಸಾಮರ್ಥ್ಯ ಮತ್ತು ಅವನ ಇಚ್ಛೆಯಂತೆ ಅಭಿನಯಿಸುವಲ್ಲಿ ಸಹಕರಿಸುವ ಅಂಗಾಂಗಗಳನ್ನು ಪ್ರತಿಭೆ ಕರುಣಿಸಿರುತ್ತದೆ. ಹೀಗೆಯೇ ಭಿನ್ನಭಿನ್ನ ಕಲಾವಿದರಲ್ಲಿ ಅವರವರ ಪ್ರತಿಭೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ, ಪರಿಣತಿಯನ್ನು ವ್ಯಕ್ತಪಡಿಸುವ ಪ್ರತಿಭೆಯ ಕ್ರಿಯಾಂಗಗಳಾಗಿ ಅವನ ಮನಸ್ಸು ಮತ್ತು ದೇಹಾಂಗಗಳು ಪರಿವರ್ತನೆಯಾಗಿರುತ್ತವೆ.

ತನ್ನ ದೇಹ ಮತ್ತು ಮನಸ್ಸುಗಳನ್ನು ಕಲಾಚಿಂತನೆಯಲ್ಲಿ ಹೆಚ್ಹೆಚ್ಚು ತೊಡಗಿಸಿದಷ್ಟು, ಪಳಗಿಸಿದಷ್ಟು ತಮ್ಮ ಕಲೆಯಲ್ಲಿ ನೈಪುಣ್ಯತೆಯನ್ನು ಮೆರೆಯಲು ಕಲಾವಿದನಿಗೆ ಸಾಧ್ಯವಾಗುತ್ತದೆ. ಆತನು ತನ್ನ ಕ್ಷೇತ್ರದಲ್ಲಿ ನೈಪುಣ್ಯತೆಯನ್ನು ಸಾಧಿಸಲು ಆವಶ್ಯಕವಾಗಿ ಮತ್ತು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ಆ ಕ್ಷೇತ್ರದ ಹೆಚ್ಚಿನ ತಿಳುವಳಿಕೆ ಪಡೆಯುವುದು, ದಿನ ನಿತ್ಯವೂ ಆ ಕೆಲಸದಲ್ಲಿ ನಿರತನಾಗಿ ನಿಷ್ಠೆಯಿಂದ ದುಡಿಯುವುದು ಅವಶ್ಯ. ಇದು ಬಾಲ್ಯದಲ್ಲಿ ನಡೆಯುವ ಶಿಕ್ಷಣವೇ ಆಗಿದೆ. ಈ ಶಿಕ್ಷಣವು ನಿರಂತರವಾಗಿ ಒಂದು ಅವಧಿಯವರೆಗೆ ನಡೆಯಲೇಬೇಕು. ಈ ನಿರಂತರವಾದ ಶಿಕ್ಷಣದಿಂದ ಕಲಾವಿದನಲ್ಲಿ ಕುದುರುವ ವಿಶೇಷತೆಯನ್ನೇ ನೈಪುಣ್ಯತೆಯೆಂದೂ ಇದನ್ನೇ ‘ವ್ಯತ್ಪತ್ತಿ ಸಾಮರ್ಥ್ಯ’ ಎಂದೂ ಸಂಸ್ಕೃತ ಅಲಂಕಾರಿಕರು ಕರೆದಿದ್ದಾರೆ.

ಈ ನೈಪುಣ್ಯತೆಗಾಗಿ ದಿನನಿತ್ಯವೂ ನಡೆಯುವ ಕಲಾವಿದನ ಪ್ರಯತ್ನವೇ ಅಭ್ಯಾಸ (ರೂಢಿ)ಎನಿಸಿಕೊಳ್ಳುತ್ತದೆ. ಒಬ್ಬ ಕಲಾವಿದನಲ್ಲಿ ಸಂಗ್ರಹ ವಾದ ಈ ವಿಶೇಷ ಸಾಮರ್ಥ್ಯ ಮತ್ತು ವಿಶೇಷ ವ್ಯಕ್ತಿತ್ವವು ಮತ್ತೆ ನಿರಂತರವಾದ ದಿನನಿತ್ಯದ ಮೆಲಕು ಹಾಕುವಿಕೆಯಿಂದ ಅರ್ಥಾತ್ ತನ್ನ ಶುದ್ಧನಡತೆಯಿಂದ ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಆತ ಮಾಡಲೇಬೇಕು. ಅದಕ್ಕಾಗಿ ಆತ ತನ್ನ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಗುರುಹಿರಿಯರ ಸೇವೆ, ಮುಖ್ಯ ಗ್ರಂಥಗಳ ಆಗಾಗಿನ ಅವಲೋಕನ, ತನ್ನ ಕಾಯ, ವಾಕ್ ಮತ್ತು ಮನಸ್ಸುಗಳನ್ನು ನಿರಂತರವಾಗಿ ಹಿಡಿತದಲ್ಲಿಟ್ಟು ಕೊಳ್ಳುವ ಸತ್ಪ್ರಯತ್ನ ಅವಶ್ಯವಾಗಿ ಬೇಕು. ಈ ಎಲ್ಲವನ್ನೂ ಅಂದರೆ ಉತ್ಪತ್ತಿಯನ್ನು ಕಾಯ್ದುಕೊಳ್ಳುವ ಕಲಾವಿದನ ದಿನನಿತ್ಯದ ಪ್ರಯತ್ನವನ್ನೇ ಅಭ್ಯಾಸಬಲ ಎಂದು ಕರೆಯುವುದು.

ಭಾಮಹ, ದಂಡಿ ಅವರಿಂದಲೇ ಕಾವ್ಯದ ಕಾರಣಗಳನ್ನು ಗುರುತಿಸುವ ಕೆಲಸ ಪ್ರಾರಂಭ ವಾಗುತ್ತದೆ. ಕಾವ್ಯದ ಕಾರಣಗಳ ಬಗ್ಗೆ ಬಹಳ ವಿವರವಾಗಿ ಮತ್ತು ಸಮಗ್ರವಾಗಿ ಚರ್ಚಿಸಿದವ ನೆಂದರೆ ಭಾಮಹನೆ. ಅವನು ಕ್ರಮವಾಗಿ ಕವಿಯ ಶಾಸ್ತ್ರಜ್ಞಾನವನ್ನೂ (೧ – ೩), ಕವಿತ್ವದ ಮಾತಿನ ಜಾಣ್ಮೆಯನ್ನೂ (೧ – ೪), ಲಕ್ಷಕೊಬ್ಬರಲ್ಲಿರುವ ಪ್ರತಿಭೆಯನ್ನೂ (೧ – ೫) ಪ್ರತ್ಯೇಕವಾಗಿ ಪ್ರಸ್ತಾಪಿಸುತ್ತಾನೆ. ಮತ್ತೆ ಇನ್ನೆರಡು ಶ್ಲೋಕಗಳಲ್ಲಿ ಶಾಸ್ತ್ರ ಜ್ಞಾನದ ಬಗ್ಗೆ (೧ – ೧೦) ಮತ್ತು ವೃದ್ಧರ ಸೇವೆ, ಕಾವ್ಯಪಠಣ ಮುಂತಾಗಿ ಅಭ್ಯಾಸಬಲಗಳ ಬಗ್ಗೆ (೧ – ೧೧) ಪ್ರಸ್ತಾಪಿಸುತ್ತಾನೆ. ಭಾಮಹನು ನಾಲ್ಕೈದು ಶ್ಲೋಕಗಳಲ್ಲಿ ಬಿಡಿಬಿಡಿಯಾಗಿ ಹೇಳಿದ ಕಾವ್ಯದ ಕಾರಣಗಳನ್ನು ದಂಡಿ ಕ್ರೋಡೀಕರಿಸಿ ಒಂದೇ ಶ್ಲೋಕದಲ್ಲಿ ಹೇಳುತ್ತಾನೆ.

ನೈಸರ್ಗಿಕೀ ಪ್ರತಿಭಾ ಶ್ರುತಂ ಬಹುನಿರ್ಮಲಮ್
ಅಮಂದಶ್ಚಾಭಿಯೋಗೋಸ್ಯಾಃ ಕಾರಣಂ ಕಾವ್ಯಸಂಪದಃ (ಕಾವ್ಯಾದರ್ಶ, ೧೦೩)

(ಸ್ವಭಾವ ಸಿದ್ಧವಾದ ಪ್ರತಿಭೆ, ಅಸ್ಖಲಿತವಾದ ವಿದ್ಯೆ, ಸಂತತವಾದ ಅಭ್ಯಾಸ, ಈ ಮೂರೂ ಕಾವ್ಯಸಂಪತ್ತಿಗೆ ಕಾರಣ).

ಮುಂದಿನ ಅಲಂಕಾರಿಕರು ಇದನ್ನು ಒಪ್ಪಿ ಚರ್ಚಿಸುತ್ತಾರೆ. ಮಮ್ಮಟನ ಶ್ಲೋಕ ದಂಡಿಯ ಶ್ಲೋಕಕ್ಕಿಂತ ಸ್ಪಷ್ಟವಾಗಿದೆ :

ಶಕ್ತಿರ್ನಿಪುಣತಾ ಲೋಕಶಾಸ್ತ್ರಕಾವ್ಯಾದ್ಯವೇಕ್ಷಣಾತ್
ಕಾವ್ಯಜ್ಞ ಶಿಕ್ಷಯಾಭ್ಯಾಸಃ ಇತಿ ಹೇತುಸ್ತದುದ್ಭವೇ (ಕಾವ್ಯಪ್ರಕಾಶ, )

‘ಶಕ್ತಿ ; ಲೋಕ, ಶಾಸ್ತ್ರ, ಕಾವ್ಯ, ಮುಂತಾದವುಗಳ ವಿಶೇಷ ಪರಿಚಯದಿಂದ ಬಂದ ನೈಪುಣ್ಯ; ಕಾವ್ಯಶಿಕ್ಷಣದ ಮೇರೆಗೆ ಅಭ್ಯಾಸ; ಈ ಮೂರೂ ಕೂಡಿ ಕಾವ್ಯದ ಉತ್ಪತ್ತಿಗೆ ಕಾರಣಸಾಮಗ್ರಿ ಯೆನಿಸುತ್ತದೆ (ಕಾವ್ಯ ಪ್ರಕಾಶ, ಪು.೭ – ೮).

ಭಾಮಹ, ದಂಡಿ ಅವರನ್ನು ಅನುಸರಿಸುವ ಕನ್ನಡದ ಶಾಸ್ತ್ರಕಾರರಾದ ಶ್ರೀವಿಜಯ ಮತ್ತು ನಾಗವರ್ಮ ಇಬ್ಬರ ಜೊತೆ ಕೇಶಿರಾಜನು ಕೂಡ ಕಾವ್ಯಕ್ಕೆ ಕಾರಣಗಳನ್ನು ಹೇಳುವಾಗ ಸಂಸ್ಕೃತ ಅಲಂಕಾರಿಕರ ಮಾತುಗಳನ್ನೇ ಉಚ್ಛರಿಸುತ್ತಾರೆ. ಕನ್ನಡದ ಈ ಮೂವರು ಶಾಸ್ತ್ರಕಾರರು – ಈ ವಿಷಯದಲ್ಲಿ ಸ್ವತಂತ್ರ ವಿಚಾರಗಳೇನನ್ನೂ ವ್ಯಕ್ತಪಡಿಸಿದಂತಿಲ್ಲ. ಅವರೆಲ್ಲ ಭಾಮಹ ಮತ್ತು ದಂಡಿಯ ಅಭಿಪ್ರಾಯಗಳನ್ನು ಸಂಗ್ರಹಿಸಿಕೊಡುವ ಕೆಲಸ ಮಾಡಿದ್ದಾರೆ. ಕನಿಷ್ಠಪಕ್ಷ ಪ್ರತಿಭೆ, ವ್ಯತ್ಪತ್ತಿ ಮತ್ತು ಅಭ್ಯಾಸಗಳ ಮಹತ್ವವನ್ನು ಅವರು ಚರ್ಚಿಸುವ ಗೋಜಿಗೆ ಹೋಗಿಲ್ಲ.

ಶ್ರೀವಿಜಯ :

ಪ್ರತಿಭಾವತ್ವಮುಮಕೃತಕ
ಚತುರತೆಯುಂ ಪರಮ ಬುಧ ಜನೋಪಾಸನಮುಂ
ಶ್ರುತಪರಿಚಯಮುಂ ತರ್ಕುಂ
ಪ್ರತೀತಿಯಂ ವಾಗ್ವಿದಗ್ಧತಾ ನಿಪುಣತೆಯೊಳ್‌    (ಕವಿರಾಜಮಾರ್ಗ:೧೧)

(ಪ್ರತಿಭೆಯ ಅಸ್ತಿತ್ವ; ಸಹಜವಾದ ಚತುರತೆ, ವಿದ್ವಜ್ಜನರ ಸೇವೆ, ಶಾಸ್ತ್ರಗಳ ಪರಿಚಯ – (ಎಲ್ಲವೂ ಸೇರಿ) ವಾಕ್ಪ್ರೌಢಿಮೆಯ ಅತಿಶಯ – ಜ್ಞಾನವನ್ನು (ಒಬ್ಬನಿಗೆ) ತಂದು ಕೊಡುವವು, ಪು – ೩, ),

…..ಪರಮಾಗಮ ಕೋ
ವಿದನಪ್ಪುದು ಪೂರ್ವಕಾವ್ಯರಚನೆಗಳಂ ತಾಂ
ಮೊದಲೊಳ್ ಜಾಣುಂ ಬೆಡಂಗುಮಕ್ಕುಮೆ ಕೃತಿಯೊಳ್(ಕವಿರಾಜಮಾರ್ಗ, )

(……..ಮನುಷ್ಯನು ಶ್ರೇಷ್ಠ ಶಾಸ್ತ್ರಪಾರಂಗತನಾಗಬೇಕು. ಹಿಂದಿನ ಕಾವ್ಯರಚನೆಗಳನ್ನು ಮೊದಲು ಕಲಿಯದಿದ್ದ ವನಿಗೆ (ತಾನು ರಚಿಸುವ) ಕೃತಿಯಲ್ಲಿ ನುಡಿಯ ಜಾಣ್ಮೆಯಾಗಲಿ ಸೊಬಗಾಗಲಿ ಬರುವುದೇ?, ಪು – ೩.)

ನಾಗವರ್ಮ:

ಪ್ರತಿಭಾನಂ ಕಾವ್ಯವಿದ್ಯಾಪ್ರಚಯ ಪರಿಚಯಂ ವೃದ್ಧಸೇವಾನುರಾಗಂ
ಸತತಾಭ್ಯಾಸ ಪ್ರಯ್ನಂ ಕವಿತೆಗೆ ನಿಯತಂ ಕಾರಣಂ.…..
(ಕಾವ್ಯಾವಲೋಕನ, ೪೨೪, ಪು೯೨).

ಕೇಶಿರಾಜ :

ಪ್ರತಿಭೆಯುಂ ಅಭ್ಯಾಸಮುಂ ವಿದ್ವತ್ಸೇವೆಯುಂ
ಕಾವ್ಯಪರಿಚಯಮುಂ ಕವಿತೆಗೆ ಕಾರಣಂ’.
(ಶಬ್ದಮಣಿ ದರ್ಪಣ, ಸೂ.೧೪೪ ಪ್ರಯೋಗ).

ಇನ್ನು ಕನ್ನಡದ ಕವಿಗಳಿಗೆ ಬಂದರೆ ಕಾವ್ಯದ ಕಾರಣಗಳನ್ನು ಗುರುತಿಸುವಲ್ಲಿ ಸಂಸ್ಕೃತ ಕಾವ್ಯಮೀಮಾಂಸಕಾರರು ಹೇಳುವ ಪ್ರತಿಭೆ, ವ್ಯತ್ಪತ್ತಿ ಮತ್ತು ಅಭ್ಯಾಸ ಈ ಮೂರನ್ನೂ ಒಟ್ಟಿಗೆ ಸೇರಿಸಿ ಹೇಳುವ ಮಾತುಗಳು ಯಾರಲ್ಲಿಯೂ ನಮಗೆ ದೊರೆಯುವುದಿಲ್ಲ. ರಾಘವಾಂಕ ಒಬ್ಬನು ಮಾತ್ರ ಹಾಗೆ ಹೇಳಲು ಹೊರಟಿದ್ದಾನೆನಿಸುತ್ತದೆ. ಆದರೆ ಆತನು ಹೆಚ್ಚುವಿವರ ಗೊಳಿಸುವುದು ವ್ಯತ್ಪತ್ತಿ ಲಕ್ಷಣವನ್ನು ಮಾತ್ರ :

ವ್ಯಾಕರಣ ಪರಿಣತನ್ ಅಲಂಕಾರ ಪರಿಚಿತನ್
ನೇಕ ರಸ ನಿಪುಣನ್ ಅಭಿಧಾನ ಪ್ರವೀಣನ್
ಲ್ಲಾ ಕಲಾಕುಶಲನೆನಿಪಾತಂ ಕವೀಶನ್……. (.ಕಾ.೨೫)

ಕನ್ನಡದ ಕವಿಗಳಲ್ಲಿ ಪ್ರಮುಖರಾದ ೧೦ನೇ ಶತಮಾನದ ಪಂಪ ಮತ್ತು ರನ್ನರು ಕವಿಯ ವಿಶೇಷ ಶಕ್ತಿಯಾದ ಪ್ರತಿಭೆಯ ಬಗ್ಗೆ ಮಾತ್ರ ಉಲ್ಲೇಖಿಸುತ್ತಾರೆ. ಪಂಪನ ಲಲಿತ ಪದ ಪ್ರಸನ್ನ ಕವಿತಾಗುಣ’ (ವಿ.ವಿ.೧೨) ಎಂಬ ಮಾತು ಭಾಮಹನ ರಹಿತಾ ಸತ್ಕವಿತ್ವೇನ ಕೀದೃಶೀ ವಾಗ್ವಿದಗ್ಧತಾ’()(ಉತ್ತಮವಾದ ಕವಿತ್ವವಿಲ್ಲದವನ ಮಾತಿನ ಜಾಣ್ಮೆ ಯಾವಲೆಕ್ಕಕ್ಕೂ ಇರದು) ಎಂಬ ಮಾತಿನ ಅನುವಾದದಂತಿದೆ. ಇದು ನಿಚ್ಚಂ ಪೊಸತರ್ಣವಂಬೊಲತಿ ಗಂಭೀರಂ ಕವಿತ್ವಂ..’ (.ಪು.೨೭)ಎಂದು ಪ್ರತಿಭೆಯ ಗುಣವನ್ನು ಹೇಳುವ ರೀತಿ ಅದೇ ಸಂಸ್ಕೃತ ಮಾತಿನ ಪಡಿಯಚ್ಚಿನಂತೆಯೇ ಇದೆ.