ಕಾವ್ಯವೆಂಬುದು ಹೇಗಿರಬೇಕು? ಎಂಬುದನ್ನು ಬಸವಣ್ಣನವರು ಸರಳವಾಗಿ ನಿರೂಪಿಸುತ್ತಾರೆ. ಇದರಿಂದ ವಚನಕಾರರ ದೃಷ್ಟಿಯಲ್ಲಿ ಸಂಸ್ಕೃತ ಅಲಂಕಾರಿಕರು ಹೇಳುವ ಕಾವ್ಯದ ವ್ಯಾಖ್ಯೆ ಸರಿಹೋಗಿಲ್ಲ ಎನ್ನಿಸುತ್ತದೆ. ಏಕೆಂದರೆ ಸಂಸ್ಕೃತ ಅಲಂಕಾರಿಕರು ಒತ್ತುಕೊಡುವ ಶಬ್ದ ಮತ್ತು ಅರ್ಥಗಳು – ‘ಅನುಭವ – ಅನುಭಾವ’ವನ್ನು ಅಭಿವ್ಯಕ್ತಿಸಲು ಬೇಕಾಗುವ ಸಹಾಯ ಕಗಳು; ಅವೇ ಸ್ವತಃ ಕಾವ್ಯವಾಗಲಾರವು.

ಈಗ ಮತ್ತೆ ಮುಂದಿನ ಪ್ರಶ್ನೆಯೆಂದರೆ, ಕಾವ್ಯವಾಗುವ ‘ಅನುಭವ – ಅನುಭಾವ’ದ ಮೂಲ ಯಾವುದು? ಅರ್ಥವು ಮಾತಿನ ಉತ್ಪನ್ನ, ಮಾತು – ಅರ್ಥಗಳು ‘ಅನುಭವ – ಅನುಭಾವ’ದ ಉತ್ಪನ್ನ. ‘ಅನುಭವ – ಅನುಭಾವ’ವು ಕವಿಯ ವ್ಯಕ್ತಿತ್ವದ ಉತ್ಪನ್ನ. ಈ ವ್ಯಕ್ತಿಯ ವ್ಯಕ್ತಿತ್ವವೆಂಬ ಸಂದರ್ಭದ ಸಂಬಂಧವಿಲ್ಲದೆ – ಕಾವ್ಯಸ್ವರೂಪ ಪೂರ್ತಿಯಾಗಲು ಸಾಧ್ಯವಿಲ್ಲ. ಅದನ್ನೂ ವಚನಕಾರರ ಮಾತಿನಲ್ಲಿಯೇ ನಾವು ಕಾಣಬಹುದಾಗಿದೆ. ಇದಕ್ಕೆ ಸಾಕ್ಷಿಯಾಗಿ ನಮಗೆ ಬಸವಣ್ಣನವರ ಒಂದು ವಚನ ದೊರೆಯುತ್ತದೆ.

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ
ಕೂಡಲಸಂಗಮದೇವನೆಂತೊಲಿವನಯ್ಯ? (.೮೦೩)

‘ನುಡಿ’ – ಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ, ಸ್ಪಟಿಕದ ಸಲಾಕೆಯಂತೆ ಕೆಲಸ ಮಾಡುವಂತಹದು. ಇಂತಹ ಅದ್ಭುತ – ಹೊಳಪು, ಅಂತಃಶಕ್ತಿ ನುಡಿಯಲ್ಲಿರುತ್ತದೆ. ಇನ್ನೂ ಹೆಚ್ಚೆಂದರೆ ಅದು ಕೇಳುಗರಲ್ಲಿ ಶಿವನಿದ್ದರೆ, ಆತನೂ ತಲೆದೂಗುವಂತೆ ಮಾಡುತ್ತದೆ (ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು). ಅಂದರೆ ಮಾತಿನ ಶಕ್ತಿ ಎಂತಹದಿರುತ್ತದೆ ಎಂದರೆ – ಅದನ್ನು ಕೇಳುವವ ದೇವರಾಗಿದ್ದರೂ, ಅವನನ್ನೂ ತನ್ನ ಪ್ರಭಾವದಡಿ ತಲೆದೂಗುವಂತೆ ಮಾಡುತ್ತದೆ. ಇದು ‘ಕಾವ್ಯಶಬ್ದ’ದ ಪ್ರಭಾವದ ಪರಿ. ಆದರೆ ‘ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವ ನೆಂತೊವನಯ್ಯ?’ ಎಂಬುದು ಇಲ್ಲಿಯ ಮುಖ್ಯ ಪ್ರಶ್ನೆ. ಅಂದರೆ ತಲೆದೂಗುವಂತೆ ಬಣ್ಣದ ಮಾತುಗಳನ್ನು ಹೊಸೆಯುವುದು ಬೇರೆ, ಮನಸಾ ಒಲಿಯುವಂತೆ ಮಾಡುವುದು ಬೇರೆ. ದೇವರು ಮಾತಿಗೆ ತಲೆದೂಗುವುದು ಬೇರೆ, ಆತ ಒಲಿದು ಬರುವುದು ಬೇರೆ. ದೇವರು ಒಲಿದುಬರಬೇಕೆಂದರೆ ‘ನುಡಿ ಮತ್ತು ನಡೆ’ ಒಂದಾಗಬೇಕು ಎಂಬ ಮಾತು ಮುಖ್ಯ. ನುಡಿ ಅರ್ಥಾತ್ ‘ಕಾವ್ಯಶಬ್ದ’ ಕೇವಲ ಅರ್ಥ ಸಾಧ್ಯತೆಯನ್ನು ಹೆಚ್ಚಿಸಿಕೊಂಡರೆ ಸಾಲದು, ಅದು ‘ಸಂದರ್ಭ ಸಾಧ್ಯತೆ’ಯನ್ನು ಅರ್ಥಾತ್ ‘ನುಡಿವವನ ನಡೆ ಎಂಬ ವ್ಯಕ್ತಿತ್ವ’ದ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ಇದನ್ನೇ ಅಲ್ಲಮಪ್ರಭುಗಳು ‘ಮಾತೆಂಬುದು ಜ್ಯೋತಿರ್ಲಿಂಗ’ ಎಂದಂತೆ ತೋರುತ್ತದೆ. ಅಂದರೆ ಮಾತು ಕೇವಲ ಅರ್ಥವತ್ತಾಗಿದ್ದರೆ ಸಾಲದು, ಅದು ಸ್ವತಃ ‘ಲಿಂಗ’ವಾಗಬೇಕು. ಅಂದರೆ ನುಡಿದಂತೆ ನಡೆದವ ‘ಲಿಂಗ’ ಎನಿಸಿಕೊಳ್ಳುತ್ತಾನೆ; ಆ ನುಡಿ ಸ್ವತಃ ತಾನೇ ಆದಾಗಿನ ಸ್ಥಿತಿ ಅದು.

ಈ ‘ನುಡಿ’ಯು ನುಡಿದವನ ಉತ್ಪನ್ನ ಮಾತ್ರ. ಅದು ಅರ್ಥವತ್ತಾಗಿ, ಸುಂದರವಾಗಿ, ರಸ ಧ್ವನಿ ಅಲಂಕಾರ ವಕ್ರೋಕ್ತಿ ಔಚಿತ್ಯ ಹೀಗೆ ಏನೆಲ್ಲ ಕೂಡಿೂಮುತ್ತಿನ ಹಾರದಂತೆ, ಮಾಣಿಕ್ಯದ ದೀಪ್ತಿಯಂತೆ ಸ್ಪಟಿಕದ ಸಲಾಕೆಯಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಇಂತಹ ನುಡಿ – ಕೇವಲ ಮಾನವರನ್ನಷ್ಟೇ ಅಲ್ಲ ಶಿವನನ್ನು ಕೂಡ ತಲೆದೂಗಿಸುವಂತೆ ಮಾಡಿದರೂ ಅದು ನಿರರ್ಥಕವೇ ಎನ್ನುವುದು ಇಲ್ಲಿಯ ಭಾವ. ಏಕೆಂದರೆ ತಲೆದೂಗುವುದು ಆಸ್ವಾದದ – ಆನಂದದ ಸ್ಥಿತಿ, ಒಲಿದು ಒಂದುಗೂಡುವುದು ಬದುಕಿನ ಪರಿ. ಅಂದರೆ ಕಾವ್ಯವೆಂಬುದು ಕೇವಲ ಶಬ್ದ ಮತ್ತು ಅರ್ಥಗಳ ಸಂಯೋಗದಿಂದ ಮುಗಿಯು ವುದಿಲ್ಲ, ಅಲ್ಲಿ ಕವಿಯ ವ್ಯಕ್ತಿತ್ವವೆಂಬ ಸಂದರ್ಭದ ಸಂಬಂಧ ಹೊಸೆದುಕೊಳ್ಳಬೇಕು. ಆಗ ಕಾವ್ಯ ಸ್ವರೂಪದ ಚರ್ಚೆ ಬದುಕಿನ (‘ಅನುಭವ – ಅನುಭಾವ’ದ) ಜೊತೆ ಸಂಬಂಧವನ್ನು ಬೆಸೆದುಕೊಳ್ಳುವ ಸಾಧ್ಯತೆ ತೆರೆದುಕೊಳ್ಳುತ್ತದೆ. ಈ ಮುಖ್ಯ ಕೆಲಸವನ್ನೇ ಸಂಸ್ಕೃತ ಅಲಂಕಾರಿಕರು ನಿರ್ಲಕ್ಷಿಸಿ, ಕಾವ್ಯವನ್ನು ಕೇವಲ ‘ಬಣ್ಣದ ಮಾತಿನ ಪರಿ’ ಎಂಬಂತೆ ಗ್ರಹಿಸಿದ್ದರಿಂದ ಅದರ ನಿಜಸ್ವರೂಪವನ್ನು ಹೇಳಲು ಅವರಿಗೆ ಸಾಧ್ಯವಾಗಿಲ್ಲವೆಂದೇ ಹೇಳಬೇಕಾಗುತ್ತದೆ.

ಒಂದರ ಹುಟ್ಟಿಗೆ ಒಂದು ಸಂದರ್ಭ – ಗರ್ಭ ಅವಶ್ಯ. ಇಲ್ಲಿ ಅಕ್ಷರ ಮೂಲದ ಕಾವ್ಯ ಹುಟ್ಟಲು ‘ಕವಿಯ ವ್ಯಕ್ತಿತ್ವ’ ಒಂದು ಸಂದರ್ಭವಾಗಿ ಕೆಲಸಮಾಡುತ್ತದೆ. ಹೀಗಾಗಿಯೇ ಲಿಖಿತಮೂಲದ ಕಾವ್ಯಗಳನ್ನು ಗುರುತಿಸುವಾಗ ಪಂಪನ ಕಾವ್ಯ, ರನ್ನನ ಕಾವ್ಯ, ಕುವೆಂಪು ರಾಮಾಯಣ, ವಾಲ್ಮೀಕಿ ರಾಮಾಯಣ ಎಂದು ನಾವು ಕರೆಯುವುದು. ಅಂದರೆ ಆಯಾ ಕವಿ ಕಂಡರಿಸಿದ ಕಥೆಗಳು ಅವಾಗಿರುತ್ತವೆ. ಅವನ್ನು ಸೃಜಿಸಿದ ಭಾಷೆ ಮತ್ತು ಇಟ್ಟ ಅರ್ಥಗಳು ಕವಿಯವಾಗಿರುತ್ತವೆ. ಇಂತಹ ಕಾವ್ಯದಲ್ಲಿ ಸಹೃದಯನ ಕೆಲಸವೆಂದರೆ – ಕಾವ್ಯ ಓದಿ, ಅಂದರೆ ಕವಿಯ ಶಬ್ದದ ಸಹಾಯದಿಂದ ಒಳಗಿರುವ ಕವಿಯ ಮನಸ್ಸನ್ನು ಅರಿಯುವುದು. ಅಂದರೆ ಅವನ ಭಾಷೆಯ ಮೂಲಕವಾಗಿ ಅವನಿಡಲು ಪ್ರಯತ್ನಿಸಿದ ಅರ್ಥವನ್ನು ಅರಿಯಲು ಪ್ರಯತ್ನಿಸುವುದು. ಅದಕ್ಕಾಗಿಯೇ ಅವನಿಗೆ ಸಹೃದಯ ಎಂದರೆ ‘ಕವಿಯ ಹೃದಯಕ್ಕೆ ಸಮಾನವಾದ ಹೃದಯವುಳ್ಳವ’ ಎಂದು ಕರೆಯುವುದು. ಅಂದರೆ ಸಹೃದಯನ ಕೆಲಸ ಕವಿಯ ಕಾವ್ಯ(ಶಬ್ದ) ಓದುವ ಮೂಲಕ ಕವಿಯ ಮನಸ್ಸಿನ ಆಳ ಅಗಲಗಳನ್ನು (ಅನುಭವ – ಅರ್ಥಗಳನ್ನು)ಗುರುತಿಸುವುದು. ಇದು ಜಗತ್ತಿನ ಯಾವುದೇ ಬರಹಮೂಲದ ಕಾವ್ಯದ ಸಂಗತಿ ಎನಿಸುತ್ತದೆ.

‘ಕವಿಯ ವ್ಯಕ್ತಿತ್ವ’(ಅನುಭವ)ವೆಂಬ ಸಂದರ್ಭದ ಕೂಸಾದ ಶಿಷ್ಟಕಾವ್ಯದ ಅಭಿವ್ಯಕ್ತಿಯ ಮಾಧ್ಯಮ – ಶಬ್ದ ಮತ್ತು ಅರ್ಥಗಳೇ ಆಗುತ್ತವೆ. ಕವಿ ಹೊಸೆದ ‘ಕಾವ್ಯಶಬ’್ದ ಎಂಬ ದಾರದ ಸಹಾಯದಿಂದ ಪುನಃ ಕವಿಯ ವ್ಯಕ್ತಿತ್ವ (ಮನಸ್ಸು)ವೆಂಬ ಸಂದರ್ಭದ ಆಳವನ್ನು ಹೊಕ್ಕು, ಶೋಧಿಸಬೇಕಾದುದು ಅವನಿಟ್ಟ ಜ್ಞಾನಾನುಭವದ ಅರ್ಥದ ಗುಟ್ಟನ್ನು. ಅಂದರೆ ಒಂದು ಕಾವ್ಯದ ಮುಖ್ಯ ದೃಷ್ಟಿಯೇ ಕವಿಯಾಗುತ್ತಾನೆ. ಆ ಕಾವ್ಯದಲ್ಲಿಯ ಸಾಮಾಜಿಕ ರಾಜಕೀಯ ಚಾರಿತ್ರಿಕ ಹೀಗೆ ಯಾವುದೇ ಸಂಗತಿಯನ್ನು ಅರಿಯಲು ಕವಿಯ ಮನೋಧರ್ಮವೇ ಮೂಲಕಾರಣವಾಗಿರುತ್ತದೆ. ಕವಿ ಬದುಕಿದ ಪ್ರದೇಶ, ಕಾಲ, ಸಮಾಜ, ಸಂಸ್ಕೃತಿ – ಧರ್ಮಗಳು ಅವನ ದೃಷ್ಟಿಯನ್ನು ಹಿಡಿದು ಆಳಿರುತ್ತವೆ, ಮತ್ತು ಆತ ಬರೆಯುವ ಕಾವ್ಯದಲ್ಲಿ ಇವೆಲ್ಲ ಸ್ಥಾನಪಡೆದಿರುತ್ತವೆ. ಹೀಗಾಗಿಯೇ ಪಂಪನ ಭಾರತ, ಕುಮಾರವ್ಯಾಸನ ಭಾರತಗಳು ಬೇರೆ ಬೇರೆಯಾಗಿ ನಿಲ್ಲುತ್ತವೆ. ಒಂದು ಪಂಪನ ವ್ಯಕ್ತಿತ್ವದ ಮುದ್ರೆಯೊತ್ತಿಕೊಂಡದ್ದು, ಇನ್ನೊಂದು ಕುಮಾರವ್ಯಾಸನ ಮುದ್ರೆಯೊತ್ತಿಕೊಂಡದ್ದು. ‘ಕವಿಯ ವ್ಯಕ್ತಿತ್ವ’ದಿಂದ ಹೊರಡುವ ಕಾವ್ಯದ ಶೋಧ ಪುನಃ ಕವಿಯ ವ್ಯಕ್ತಿತ್ವಕ್ಕೇ ಬಂದು ಸೇರುತ್ತದೆ. ಹೀಗಾಗಿ ಲಿಖಿತ ಮೂಲದ ಕಾವ್ಯದ ಸ್ವರೂಪ ಅರಿಯುವಲ್ಲಿ ಕವಿಯ ವ್ಯಕ್ತಿತ್ವವೇ ಕಾವ್ಯದ ಸಂದರ್ಭವಾಗಿ ನಿಲ್ಲುತ್ತದೆ. ಅಂದರೆ ಒಂದು ಕಾವ್ಯದ ಸ್ವೂಪ ಅರಿಯುವುದೆಂದರೆ ಅದರ ಸಂದರ್ಭದ ಸ್ವರೂಪ ಅರಿತಂತೆಯೇ ಆಗುತ್ತದೆ. ಸಂಸ್ಕೃತ ಕಾವ್ಯಮೀಮಾಂಸಕರು ಈ ಮಹತ್ವದ ಸಂಗತಿಯನ್ನು ಗುರುತಿಸದೇ ಕೇವಲ ಶಬ್ದ ಮತ್ತು ಅರ್ಥಗಳಿಗೇ ಸೀಮಿತರಾಗುತ್ತಾರೆ.

ಜನಪದ ಕಾವ್ಯ ಸಂದರ್ಭದ ಕೂಸು :

ಶಿಷ್ಟಕಾವ್ಯವಾಗಿರಬಹುದು ಜನಪದ ಕಾವ್ಯವಾಗಿರಬಹುದು – ಎಲ್ಲವೂ ಸಂದರ್ಭದ ಕೂಸುಗಳೇ. ವ್ಯತ್ಯಾಸವಿರುವುದು ಈ ಸಂದರ್ಭಗಳಲ್ಲಿ. ಶಿಷ್ಟಕಾವ್ಯಕ್ಕೆ ‘ಕವಿಯ ವ್ಯಕ್ತಿತ್ವವೇ ಸಂದರ್ಭ’ವಾಗುವುದರಿಂದ ಅಲ್ಲಿ ಕವಿಯ ಅನುಭವ ಮತ್ತು ಅವನ ಮಾತಿನ ಅರ್ಥದ ಪರಿಕರಗಳು ಮುಖ್ಯವೆನಿಸುತ್ತವೆ. ಜನಪದ ಕಾವ್ಯಕ್ಕೆ – ಸಾಹಿತ್ಯಕ್ಕೆ ಒಬ್ಬ ವ್ಯಕ್ತಿ ಯ ವ್ಯಕ್ತಿತ್ವವೆಂಬ ಸಂದರ್ಭ ಕಾರಣವಾಗದೆ, ಇಲ್ಲಿ ‘ಸಮೂಹ ಸಂದರ್ಭ’(ಸಾಂಸ್ಕೃತಿಕ ಸಂದರ್ಭ)ಗಳು ಮುಖ್ಯವಾಗುತ್ತ್ತವೆ. ಹೀಗಾಗಿ ಇಲ್ಲಿ ‘ಕವಿಯ ವ್ಯಕ್ತಿತ್ವವೆಂಬ ಸಂದರ್ಭ’ ಗೌಣವಾಗಿ ವೈಯಕ್ತಿಕ ಅನುಭವ ಮತ್ತು ಶಬ್ದ – ಅರ್ಥದ ಪರಿಕರಗಳು ಹಿಂದಾಗಿ ನಿಂತು, ‘ಸಾಂಸ್ಕೃತಿಕ ಸಂದರ್ಭ’ ಮುಖ್ಯವಾಗಿ ಸಂಸ್ಕೃತಿ ಸಂಗತಿಗಳು ಮುಂದಾಗಿ ನಿಲ್ಲುತ್ತವೆ.

‘ಸಾಂಸ್ಕೃತಿಕ ಸಂದರ್ಭ’ದ ಮುಖ್ಯ ಲಕ್ಷಣವೆಂದರೆ ಸಮೂಹದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು. ಅಂದರೆ ಜನಪದಕಾವ್ಯ ಸಮೂಹ ಸೃಷ್ಟಿಯಾಗಿರುತ್ತದೆ. ಹಾಗೆಂದರೆ ಇಲ್ಲಿ ಒಮ್ಮೆಗೆ ಹಲವಾರು ಜನ ಕೂಡಿ ಒಂದು ಕಾವ್ಯ, ಕಥೆ ಸೃಜಿಸುತ್ತಾರೆಂದು ಅರ್ಥವಲ್ಲ. ಯಾವಾಗಲೂ ಒಂದರ ಸೃಷ್ಟಿ ಒಬ್ಬನಿಂದಲೇ ಆಗುವುದು. ಆದರೆ ವೈಯಕ್ತಿಕ ವ್ಯಕ್ತಿತ್ವವನ್ನು ಬೆಳೆಸಿಕೊಂಡವ್ಯಕ್ತಿ ತನ್ನ ಸೃಷ್ಟಿಯನ್ನು ವೈಯಕ್ತಿಕವಾಗಿಸಿಕೊಂಡುಬಿಡುತ್ತಾನೆ. ಇದು ಶಿಷ್ಟಕಾವ್ಯದ ಸೃಷ್ಟಿಯಲ್ಲಿ ನಡೆಯುವ ಸಾಮಾನ್ಯ ಕ್ರಿಯೆ. ಆದರೆ ಸಮೂಹದ ಪ್ರಜ್ಞೆವುಳ್ಳ ವ್ಯಕ್ತಿ, ತನ್ನ ವೈಯಕ್ತಿಕ ಅನಿಸಿಕೆಗಿಂತ ‘ಸಮೂಹದ ಬಾಯಿ’ಯಾಗಿ ಕೆಲಸ ಮಾಡುತ್ತಾನೆ. ಈತನ ಸೃಷ್ಟಿಯನ್ನು ಸಮೂಹವು ಒಂದು ಸಂದರ್ಭದಲ್ಲಿ ಬಳಸುವಾಗ ಅದು ‘ಯಾರದೋ ಸೃಷ್ಟಿ’ ಎಂಬ ಭಾವವಿಲ್ಲದೆ ಸ್ವೀಕರಿಸಿ ಬಳಸುತ್ತದೆ ಮತ್ತು ಬದಲಾವಣೆಗೆ ಅವಕಾಶ ಮಾಡಿಕೊಡುತ್ತದೆ. ಪ್ರಯೋಗ ಹೆಚ್ಚಾದಂತೆ ಮೂಲದ ಸೃಷ್ಟಿಯಲ್ಲಿ ಸಮೂಹದ ತಿದ್ದುಪಡಿಗಳು, ಬದಲಾವಣೆಗಳು ಸೇರುತ್ತ ಹೋಗುತ್ತವೆ. ಇಲ್ಲಿಯ ಕವಿಯ ದೃಷ್ಟಿ ವೈಯಕ್ತಿಕವಾಗಿ ಬಲಿತು ನಿಲ್ಲದೆ, ಸಮೂಹದ ದೃಷ್ಟಿಯೇ ಇವನನ್ನು ಹಿಡಿದು ಆಳುತ್ತಿರುತ್ತದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಶಿಷ್ಟನೊಬ್ಬನ ದೃಷ್ಟಿಯು ಶಿಕ್ಷಣ ಮತ್ತು ನಗರಜೀವನದ ಸಂಪರ್ಕದಿಂದಾಗಿ ವ್ಯಕ್ತೀಕರಣಗೊಂಡಿರುತ್ತದೆ. ಅವನದೃಷ್ಟಿ ಬಲಿತು, ಸ್ವಂತ ಅಭಿಪ್ರಾಯಗಳನ್ನು ಹೊಂದುವ, ಅಭಿವ್ಯಕ್ತಿಸುವ ಮಟ್ಟಕ್ಕೆ ತನ್ನ ಜವಾಬ್ದಾರಿಯನ್ನು, ಹಿಡಿತವನ್ನು ಈತ ಬೆಳೆಸಿಕೊಂಡಿರುತ್ತಾನೆ. ಹೀಗಾಗಿ ಶಿಷ್ಟದೃಷ್ಟಿಗೂ ಸಮೂಹದೃಷ್ಟಿಗೂ ವ್ಯತ್ಯಾಸ ಕಂಡುಬರುತ್ತದೆ. ಇಂತಹ ವಿಶಿಷ್ಟ ದೃಷ್ಟಿಗಳೇ ಆಯಾ ಸಾಹಿತ್ಯ ಮತ್ತು ಕಲೆಗಳ ಸೃಷ್ಟಿಯನ್ನು ಹಿಡಿದು ಆಳುತ್ತವೆ, ಸಂದರ್ಭ(ಗರ್ಭ)ಗಳಾಗಿ ಕೆಲಸ ಮಾಡುತ್ತವೆ.

ಈಚೆಗೆ ಅಲ್ಪ ಅಕ್ಷರಜ್ಞಾನ ಪಡೆದವರಿಂದ ಸೃಷ್ಟಿಯಾಗುವ ಕೆಲ ಹೊಸ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ಸೃಷ್ಟಿಕರ್ತರ ಹೆಸರುಗಳು ಕಾಣುತ್ತವೆ. ಗೀಗೀ ಮೋಹರಂ ದೊಡ್ಡಾಟ ಈ ಮುಂತಾದ ಹೊಸ ಪ್ರಕಾರಗಳಲ್ಲಿ ಅಕ್ಷರಜ್ಞಾನ ದಾಖಲೆಗೆ ಮಾತ್ರ ಅನುಕೂಲವಾಗುತ್ತಿದೆ. ಮತ್ತೆ ಪ್ರಯೋಗದಲ್ಲಿ ಬದಲಾವಣೆಗಳಂತೂ ನಿರಂತರವಾಗಿ ಕಾಣುತ್ತವೆ. ಇಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ, ಇಂಥವರಲ್ಲಿ ದೃಷ್ಟಿ ಬಲಿಯದೆ ಮತ್ತೆ ಅವರು ಸಮೂಹದ ದೃಷ್ಟಿಯೇ ಹೊಂದಿರುವುದು. ಹೀಗಾಗಿ ಲಿಖಿತದ ರೂಪದಲ್ಲಿ ಕಾಣಿಸಿಕೊಂಡರೂ ಕವಿಯ ಸಾಮೂಹಿಕ ದೃಷ್ಟಿ, ಅವನ ಕೃತಿಯನ್ನು ಜನಪದ ಕೃತಿಯಾಗಿಸಿಯೇ ಇಟ್ಟಿರುತ್ತದೆ.

ಶಿಷ್ಟಕಾವ್ಯದಲ್ಲಿ ಕವಿಯ ವ್ಯಕ್ತಿತ್ವವೆಂಬ ಸಂದರ್ಭದ ಮೂಲಕ ಹೊರಹೊಮ್ಮುವ ಅವನ ಅನುಭವದ ಅಭಿವ್ಯಕ್ತಿಯಲ್ಲಿ ಶಬ್ದ – ಅರ್ಥಗಳನ್ನು ಸುಂದರಗೊಳಿಸುವ, ಪರಿಣಾಮಕಾರಿ ಯಾಗಿಸುವ ಕೆಲಸದಲ್ಲಿ – ಅಲಂಕಾರ ರೀತಿ ಔಚಿತ್ಯ ವಕ್ರೋಕ್ತಿ ಧ್ವನಿ ರಸಗಳು ಕೆಲಸ ಮಾಡುತ್ತವೆ. ಅಲ್ಲಿ ಶಬ್ದಾರ್ಥಗಳು ಪ್ರಯೋಗಗೊಳ್ಳುವುದೇ ಈ ಎಲ್ಲ ಸಂಗತಿಗಳ ಜೊತೆ ಗೂಡಿಯೇ. ಹಾಗೆಯೇ ಜನಪದ ಕಾವ್ಯ ಪ್ರಯೋಗಗೊಳ್ಳುವುದು – ಸಾಂಸ್ಕೃತಿಕ ಸಂದರ್ಭದ ಮೂಲಕ. ಮುಖ್ಯವಾಗಿ ಆ ಸಂದರ್ಭವೊದಗಿಸುವ ವಸ್ತು ಮತ್ತು ಸಂಗೀತ(ಸೊಬಗು) ಗಳಿಂದ. ಆಯಾ ಸಂದರ್ಭಗಳಲ್ಲಿ – ಹಾಡು ಕಥೆ ಒಗಟು ಒಡಪು ಗಾದೆಗಳು ಸಂದರ್ಭದ ತಿರುಳಿನಿಂದ ಸೃಷ್ಟಿಗೊಂಡು ಅಲ್ಲಿಯ ಸೊಬಗಿನಲ್ಲಿ ಸುಂದರವೆನಿಸುತ್ತವೆ ಮತ್ತು ಪರಿಣಾಮ ಕಾರಿಯಾಗಿರುತ್ತವೆ. ಆದುದರಿಂದ ಸಂದರ್ಭದಲ್ಲಿಯ ವಸ್ತು ಮತ್ತು ಸಂಗೀತದ (ಸೊಬಗಿನ) ಪರಿಕರಗಳು ಜನಪದಸಾಹಿತ್ಯದ ಚರ್ಚೆಯಲ್ಲಿ, ಅದರ ಸ್ವರೂಪ ಅರಿಯುವಲ್ಲಿ ಮುಖ್ಯವೆನಿಸುತ್ತವೆ. ಇಲ್ಲಿ ಸಂದರ್ಭದ ವಸ್ತು, ಸಂಗೀತ(ಸೊಬಗು)ಗಳು ಮುಂದಾಗಿ ಶಬ್ದ ಮತ್ತು ಅರ್ಥಗಳು ಹಿಂದೆ ಜೊತೆಯಾಗಿರುತ್ತವೆ. ಶಿಷ್ಟಸಾಹಿತ್ಯದಲ್ಲಾದರೆ ಶಬ್ದ ಮತ್ತು ಅರ್ಥಗಳು ಮುಂದಾಗಿ ಸಂದರ್ಭ (ಕವಿಯ ವ್ಯಕ್ತಿತ್ವ) ಹಿಂದಾಗಿರುತ್ತದೆ.

ಜನಪದ ಕಾವ್ಯವು ಯಾವುದೋ ಒಂದು ವಿಶಿಷ್ಟ ಸಂದರ್ಭದಲ್ಲಿ ಸಹಜವಾಗಿ ಮೈತಳೆದಿರುವುದನ್ನು ಗುರುತಿಸಬಹುದಾಗಿದೆ. ಹೀಗಾಗಿ ಸಹಜವಾಗಿಯೇ ಆಯಾ ಸಂದರ್ಭಕ್ಕೆ (Cotext)ಸಂಬಂಧಿಸಿದ ವಿಷಯ (Matter)ಈ ಕಾವ್ಯದ ವಸ್ತುವಾಗಿ (Text) ಬಿಡುತ್ತದೆ. ಒಂದು ಸಂದರ್ಭ ಈ ಕಾವ್ಯವನ್ನು ಎಷ್ಟರಮಟ್ಟಿಗೆ ನಿಯಂತ್ರಿಸುತ್ತದೆಂದರೆ, ಅದರ ಭಾವ, ಲಯ, ತಾಳ, ಧಾಟಿ, ರೂಪ, ಛಂದಸ್ಸು, ಭಾಷೆ – ಹೀಗೆ ಜನಪದ ಹಾಡಿನ ಸಂಪೂರ್ಣ ಸ್ವಾಮ್ಯತ್ವದ ಮೇಲೆ ಅದು ತನ್ನ ಪ್ರಭಾವವನ್ನು ಬೀರುತ್ತದೆ. ಆ ಕಾವ್ಯವನ್ನು ತನ್ನದಾಗಿಸಿ ಕೊಳ್ಳುತ್ತದೆ. ಈ ರೀತಿಯಿಂದ ಜನಪದ ಕಾವ್ಯರೂಪಗಳು ಒಂದು ಗೊತ್ತಾದ ಸಂದರ್ಭದ ಮುದ್ರೆಯೊತ್ತಿಸಿಕೊಂಡು, ಆ ಸಂದರ್ಭದ ಕೂಸುಗಳಾಗಿ ಬಿಡುತ್ತವೆ. ಇದು ಜನಪದ ಕಾವ್ಯದ ವೈಶಿಷ್ಟ್ಯವೂ ಹೌದು, ಮಿತಿಯೂ ಹೌದು.

ಲಾಲಿಗಳಲ್ಲಿ ಮಗುವಿನ ಗುಣಗಾನವಿರುವದು, ಹಂತಿಯ ಹಾಡುಗಳಲ್ಲಿ ತಮ್ಮ ಎತ್ತುಗಳ ಒಕ್ಕಲುತನದ ವರ್ಣನೆ ಇರುವುದು, ರಿವಾಯತಗಳಲ್ಲಿ ಕರ್ಬಲಾದ ವಿಷಯ, ಮದುವೆ ಹಾಡುಗಳಲ್ಲಿ ಮದುವೆಯ ಆಚರಣೆ, ಮದುಮಕ್ಕಳ, ಬೀಗರು – ನೆಂಟರ ವಿಷಯಗಳಿ ರುವುದನ್ನು ಗಮನಿಸಬೇಕು. ಜೊತೆಗೆ ಅಲ್ಲಿ ನಡೆಯುವ ಕ್ರಿಯೆ – ಕಾವ್ಯದ ಭಾವ, ಲಯ, ತಾಲ, ಧಾಟಿ, ಛಂದಸ್ಸು, ಭಾಷೆ, ರೂಪ ಮುಂತಾದ ಪರಿಕರಗಳನ್ನು ನಿಯಂತ್ರಿಸುವುದನ್ನು ಕಾಣತ್ತೇವೆ. ಕುಟ್ಟುವಾಗಿನ ಒನಕೆ ಪೆಟ್ಟು, ಬೀಸುವಾಗಿನ ತಿರುಗುವ ಗತಿ, ರಿವಾಯತದಲ್ಲಿಯ ಹೆಜ್ಜೆಯ ಗತ್ತು ಮುಂತಾದವೆಲ್ಲ ಆಯಾ ಸಂದರ್ಭದ ಹಾಡಿನ ಧಾಟಿ, ಲಯಗಳ ಮೇಲೆ ಸಾಧಿಸುವ ಹಿಡಿತ, ಮಾಡುವ ಪರಿಣಾಮ ಬಹುಸ್ಪಷ್ಟವಾಗಿ ಎದ್ದು ಕಾಣುತ್ತ್ತದೆ. ನಾವೇಕೆ ಹೋಳಿ ಹಾಡುಗಳನ್ನು ಹೇಳುತ್ತ ಎಣ್ಣೆ ಹಚ್ಚುವ ಮದುವೆಯ ಕ್ರಿಯೆಯನ್ನು ಜರುಗಿಸುವುದಿಲ್ಲ? ಡೊಳ್ಳಿನ ಜೊತೆಗೆ ರಿವಾಯತ ಹಾಡುಗಳನ್ನು, ಕೋಲಾಟದಲ್ಲಿ ಹಂತಿಯ ಹಾಡುಗಳನ್ನು ಹಾಡುವುದಿಲ್ಲ ಎಂದರೆ – ಆ ಹಾಡಿಗೆ ಭಿನ್ನವಾದ ಸಂದರ್ಭ ಸರಿಹೋಗುವುದಿಲ್ಲ ಎಂದು.

ಒಂದು ಸಲ ಒಂದು ಸಂದರ್ಭದಲ್ಲಿ ಒಂದು ಹಾಡು ಹುಟ್ಟಿಕೊಂಡಿತೆಂದರೆ ಆ ಸಂದರ್ಭವು ತನ್ನಲ್ಲಿ ರೂಪುಗೊಳ್ಳುವ ಹಾಡಿನ ಹುಟ್ಟಿನ ಮೇಲೆ ಮತ್ತು ಬಳಕೆಯ ಮೇಲೆ ಹೊಂದುವ ನಿಯಂತ್ರಣದಷ್ಟೇ ಬಲವಾದ ನಿಯಂತ್ರಣವನ್ನು ಅಲ್ಲಿ ಹುಟ್ಟಿಕೊಂಡ ಹಾಡು ಆ ಸಂದರ್ಭದ ಮೇಲೆ ಹೊಂದಿರುತ್ತದೆ. ಹಾಡಿಲ್ಲದೆ ಶೋಬಾನೆಯಿಲ್ಲ, ಹಾಡದಿದ್ದರೆ ಕೋಲಾಟ ಇಲ್ಲ, ಹಾಡದಿದ್ದರೆ ಹಂತಿ ಇಲ್ಲ. ಏಕೆಂದರೆ ಹಾಡು ಆ ಸಂದರ್ಭದ ಒಂದು ಅನಿವಾರ್ಯ ಅಂಗವಾಗಿ ಬಿಟ್ಟಿರುತ್ತದೆ.

ಜನಪದ ಕಾವ್ಯ ಹುಟ್ಟು ಪಡೆಯುವ ಈ ಎಲ್ಲ ಸಂದರ್ಭಗಳನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದಾಗಿದೆ : ೧. ಸಾಂಸ್ಕೃತಿಕ ಸಂದರ್ಭ, ೨. ದುಡಿತದ ಸಂದರ್ಭ. ದುಡಿತವು ಕೂಡ ಮನುಷ್ಯನ ಸಂಸ್ಕೃತಿಗೇ ಸಂಬಂಧಪಡುವುದರಿಂದ ಈ ಎರಡೂ ಗುಂಪುಗಳನ್ನು ಸೇರಿಸಿ ‘ಸಾಂಸ್ಕೃತಿಕ ಸಂದರ್ಭ’ವೆಂದರೆ ಸಾಕು. ಇದನ್ನು ಹಿಂದೆಯೇ ಹೇಳಿದೆ. ಈಗ ಪರಿಚಯ ವಾಗುವವರೆಗೆ ಮಾತ್ರ ಈ ಎರಡು ಹೆಸರುಗಳನ್ನು ಪ್ರತ್ಯೇಕವಾಗಿ ಬಳಸಲಾಗುವುದು.

ಜನಪದರಿಗೆ ಮನರಂಜನೆಗಾಗಿ ಪ್ರತ್ಯೇಕ ವೇಳೆ ದೊರೆಯುವುದಿಲ್ಲ. ಈ ಅನಿವಾರ್ಯತೆ ಯಿಂದಾಗಿ ಅವರು ತಾವು ತೊಡಗಿದ – ದುಡಿತದ ಅಥವಾ ಸಾಂಸ್ಕೃತಿಕ ಸಂದರ್ಭದಲ್ಲಿಯೇ ಸಂತೋಷವನ್ನು ಪಡೆಯಬೇಕಾಗುತ್ತದೆ. ಹೀಗಾಗಿ ದುಡಿಯುವಾಗ ಅಥವಾ ಆಚರಣೆಗಳಲ್ಲಿ ತೊಡಗಿದಾಗ, ಆಯಾ ದುಡಿಮೆಯ ಮತ್ತು ಆಚರಣೆಯ ಒಂದು ಭಾಗವಾಗಿ ಹಾಡು ಮೂಡಿಬಂದಿತು. ಹೀಗೆ ಮೂಡಿಬಂದ ಹಾಡು – ಕಾವ್ಯ ಆ ಸಂದರ್ಭದ ಕೂಸಾಗಿ ಕಾಣಿಸಿತು. ಅದು ಜನಪದರಿಗೆ ಖುಷಿ ಕೊಡುವ ಸಂಗತಿಯೂ ಆಯಿತು.

ಸಾಂಸ್ಕೃತಿಕ ಸಂದರ್ಭಎನ್ನುವಾಗ ವಿಶೇಷವಾಗಿ ಸಾಂಪ್ರದಾಯಿಕ ಆಚರಣೆ ಮತ್ತು ಧಾರ್ಮಿಕ ಮನೋಭಾವನೆಯ ಸ್ಪರ್ಶವುಳ್ಳ ಸಂದರ್ಭಗಳನ್ನು ಗಮನಕ್ಕೆ ತೆಗೆದುಕೊಳ್ಳ ಬಹುದಾಗಿದೆ. ಹೆಣ್ಣುಮಕ್ಕಳ ಪಾತ್ರ ಪ್ರಮುಖವಾಗಿ ಕಾಣಿಸುವ ಶುಭಕಾರ್ಯದ ಸಂದರ್ಭ ಗಳು (ಮೈನೆರೆದ, ಮದುವೆ, ಶೋಬಾನ, ಕುಪ್ಪಸ, ಜೋಗುಳ) ಇಲ್ಲಿ ಮುಖ್ಯವಾಗುತ್ತವೆ. ಎರಡನೆಯದಾಗಿ ಹಬ್ಬಹರಿದಿನ, ಜಾತ್ರೆ – ಉತ್ಸವಗಳಂಥ ಸಂದರ್ಭಗಳು. ಈ ಎಲ್ಲ ಸಂದರ್ಭ ಗಳಲ್ಲಿ ತೀರ ವೈವಿಧ್ಯಮಯವಾದ ಛಂದಸ್ಸಿನ ರೂಪಗಳು ಹುಟ್ಟುಪಡೆಯುತ್ತವೆ. ಈ ಸಂದರ್ಭಗಳು ತೀರ ಗಂಭೀರ ಸ್ವರೂಪದವುಗಳಾದ್ದರಿಂದ ಆಯಾ ಸಂದರ್ಭವೊದಗಿಸುವ ವಿಷಯಗಳೇ ಅಲ್ಲಿ ಹಾಡಾಗಿ ಹರಿಯುವುದನ್ನು ಕಾಣು್ತೇವೆ. ಉದಾಹರಣೆಗೆ ಮದುವೆಯ ವಿವಿಧಬಗೆಯ ಸಂದರ್ಭಗಳನ್ನು ಗಮನಿಸಿದರೆ, ಎಣ್ಣೆ ಹಚ್ಚುವ ಸಂದರ್ಭದಲ್ಲಿ ಮದುಮಕ್ಕಳೇ ಆ ಸಂದರ್ಭದ ವಿಶೇಷ ಸಂಗತಿಗಳಾಗಿರುತ್ತಾರೆ. ಹಾಡುಗಳು ಅವರನ್ನೇ ಕುರಿತು ಒರೆಯುತ್ತವೆ. ಐರಾಣಿ – ಕುಂಬಾರ ಮನೆಯಿಂದ ಹೊಸ ಗಡಿಗೆ ಸಾಮಾನುಗಳನ್ನು ತರುವ ಸಂದರ್ಭವಾದು ದರಿಂದ ಕುಂಬಾರ ಮತ್ತು ಅವರ ಗಡಿಗೆಗಳೇ ಐರಾಣಿ ಹಾಡುಗಳ ಮುಖ್ಯಸಂಗತಿಗಳಾ ಗುತ್ತವೆ. ಕುಪ್ಪಸದ ಸಂದರ್ಭದಲ್ಲಿ ಚೊಚ್ಚಿಲ ಬಸುರಿಯೇ ಮುಖ್ಯವ್ಯಕ್ತಿಯಾದುದರಿಂದ ಬಸುರಿ ಹೆಣ್ಣಿನ ಹಲವಾರು ಬಗೆಯ ಬಯಕೆಗಳ, ಉಡುಗೆ – ತೊಡುಗೆಗಳ ವರ್ಣನೆಗಳು ಮಾತ್ರ ಅಲ್ಲಿ ಕಾಣಿಸುತ್ತದೆ. ಹೀಗೇ ಹಬ್ಬಹರಿದಿನಗಳ ಪ್ರಮುಖ ಸಂಗತಿಗಳೇ ಆಯಾ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಹಾಡುಗಳಿಗೆ ವಸ್ತುವನ್ನೊದಗಿಸುತ್ತವೆ.

ಜನಪದರದು ಮುಖ್ಯವಾಗಿ ದುಡಿಮೆಯ ಬದುಕು. ಮುಂಜಾನೆ ಎದ್ದರೆ ಸಾಕು ಕೆಲಸಗಳು ಪ್ರಾರಂಭವಾಗುತ್ತವೆ. ಸುದೀರ್ಘವಾದ ವೇಳೆ ತೆಗೆದುಕೊಳ್ಳುವ ದುಡಿಮೆಯ ಸಂದರ್ಭಗಳಲ್ಲಿ, ಮಾನವನ ಕಂಠಧ್ವನಿಗಿಂತ ಕಡಿಮೆ ಧ್ವನಿ ಹೊರಡುವ ಹಾಗೂ ಆ ಧ್ವನಿ ಲಯಬದ್ಧವಾಗಿರುವ ಕೆಲಸದ ಸಂದರ್ಭಗಳಲ್ಲಿ ಹಾಡುಗಳು ಹುಟ್ಟಿಕೊಳ್ಳುತ್ತವೆ. ಬೀಸುವ, ಕುಟ್ಟುವ, ತೊಟ್ಟಿಲು ತೂಗುವ, ಗೂಡು ಮುರಿಯುವ, ಕಳೆ ಕೀಳುವ; ಹಂತಿ, ಮಟ್ಟಿ, ನೇಗಿಲು, ಕುಂಟಿ, ಚಕಡಿ – ಹೊಡೆಯುವ ಸಂದರ್ಭಗಳಲ್ಲಿ ಹಾಡುಗಳು ಕಾಣಿಸಿಕೊಳ್ಳುತ್ತವೆ.

ಇಲ್ಲಿ ಉದಾಹರಣೆಗಾಗಿ ತ್ರಿಪದಿ ಸೃಷ್ಟಿಗೊಳ್ಳುವ ದುಡಿತದ ಸಂದರ್ಭಗಳನ್ನು ಗಮನಿಸ ಬಹುದಾಗಿದೆ. ಜನಪದದ ಎರಡು ದುಡಿತದ ಸಂದರ್ಭಗಳಲ್ಲಿ ತ್ರಿಪದಿ ಹುಟ್ಟಿಕೊಳ್ಳುತ್ತದೆ ಮತ್ತು ಸ್ವತಂತ್ರವಾಗಿ ಪ್ರಯೋಗಗೊಳ್ಳುತ್ತದೆ. ತಾನೇ ಪದವೆಂದು, ಹಾಡು ಎಂದು ಕರೆಸಿಕೊಳ್ಳುತ್ತದೆ. ಅಲ್ಲಿ ಅದು ತನ್ನಷ್ಟಕ್ಕೆ ತಾನು ಪ್ರತ್ಯೇಕ ಅಸ್ತಿತ್ವ ಹೊಂದಿದ್ದು – ಸ್ವತಂತ್ರವಾದ ಅರ್ಥ ಮತ್ತು ವಿವರಣೆಯನ್ನು ಹೊಂದಿರುತ್ತದೆ. ಅಂತಹ ಎರಡು ಸಂದರ್ಭಗಳೆಂದರೆ – ಬೀಸುವ ಸಂದರ್ಭ ಮತ್ತು ಹಂತಿಯ ಸಂದರ್ಭ. ಒಂದು ಹೆಣ್ಣುಮಕ್ಕಳಿಗೆ ಸಂಬಂಧಪಟ್ಟ ಸಂದರ್ಭವಾದರೆ, ಇನ್ನೊಂದು ಗಂಡುಮಕ್ಕಳಿಗೆ ಸಂಬಂಧಪಟ್ಟ ಸಂದರ್ಭವಾಗಿದೆ. ಹಂತಿಯ ಸಂದರ್ಭದಲ್ಲಿ ತ್ರಿಪದಿ ಚರಿತ್ರೆ ಹೇಳುವಲ್ಲಿ ಬಳಕೆಯಾದರೂ ಆ ಚರಿತ್ರೆಗಳು ತೀರ ಸಂಕ್ಷಿಪ್ತವಾಗಿ ರುವುದರಿಂದ ಅಲ್ಲಿಯೂ ಅವುಗಳ ಹುಟ್ಟು ಪ್ರತ್ಯೇಕ ಎನ್ನುವಷ್ಟು ಸ್ವತಂತ್ರವಾಗಿರುತ್ತದೆ.

ಬರೆದರೆ ಮೂರು ಸಾಲಿನ, ಹಾಡಿದರೆ ನಾಲ್ಕು ಸಾಲಿನ ಈ ತ್ರಿಪದಿ ಜನಪದದ ಈ ಎರಡು ಸಂದರ್ಭಗಳಲ್ಲಿ ಮಾತ್ರ ಸ್ವತಂತ್ರವಾಗಿ ಹಾಡುಗಳಂತೆ ಸೃಷ್ಟಿಯಾಗುವುದು ಚಿಂತನಾರ್ಹ ವಾಗಿದೆ. ಜನಪದ ಕಾವ್ಯವು ಸಂದರ್ಭದ ಸೃಷ್ಟಿಯಾಗಿದ್ದು, ಆ ಸಂದರ್ಭ ಒದಗಿಸುವ ವಸ್ತು, ಲಯ ಮತ್ತು ಧಾಟಿಗಳನ್ನು ಅದು ಹೊಂದಿರುತ್ತದೆ ಎಂಬ ಮಾತಿಗೆ ತ್ರಿಪದಿ ಬಹು ಸ್ಪಷ್ಟವಾದ ಸಾಕ್ಷಿಯನ್ನು ಒದಗಿಸುವ ರೂಪವಾಗಿದೆ.

ಇದನ್ನು ಗಮನಿಸಿದಾಗ – ಒಂದೇ ಬಗೆಯ ಹಾಡನ್ನು ಸೃಷ್ಟಿಸುವ ಈ ಎರಡೂ ಸಂದರ್ಭಗಳ – ರಚನೆ ಮತ್ತು ಅಂತಃಸತ್ವ (Structure and Content)ಗಳಲ್ಲಿ ಸಾಮ್ಯತೆ ಇರಲೇಬೇಕಾಗುತ್ತದೆ. ಹಾಗಿಲ್ಲದಿದ್ದರೆ ಅಲ್ಲಿ ಸೃಷ್ಟಿಯಾಗುವ ಸಾಹಿತ್ಯದ ಸ್ವರೂಪ ಒಂದೇ ಬಗೆಯಾಗಿರಲು ಸಾಧ್ಯವಿಲ್ಲ. ಹಂತಿ ಹೊಡೆಯುವಾಗಿನ ಮತ್ತು ಬೀಸುವಾಗಿನ ಸಂದರ್ಭಗಳ – ಭೌತಿಕ ರಚನೆ, ಕ್ರಿಯೆ, ಅಂತಃಸತ್ವ, ಸಾಮಗ್ರಿ, ಸಮಯ ಮತ್ತು ಛಂದಸ್ಸು ಇವುಗಳಲ್ಲಿ ತೀರ ಸಾಮ್ಯವಿರುವುದು ನಮ್ಮ ಗಮನಕ್ಕೆ ಬರುತ್ತದೆ.

೧. ಹಂತಿ ಮತ್ತು ಬೀಸುವ ಎರಡೂ ಕ್ರಿಯೆಗಳು ಜೋಳಕ್ಕೆ ಸಂಬಂಧಿಸಿದವುಗಳು. ಒಂದು ತೆನೆಯಿಂದ ಕಾಳುಗಳನ್ನು ಬೇರ್ಪಡಿಸುವ ಕ್ರಿಯೆಯಾದರೆ, ಇನ್ನೊಂದು ಆ ಕಾಳುಗಳನ್ನು ಬೀಸುವ ಕ್ರಿಯೆಯಾಗಿದೆ.

೨. ವೃತ್ತಾಕಾರದ ರಚನೆ – ಬೀಸುವ ಕಲ್ಲು ಹಾಗೂ ಕಣದ್ದು. ಕೆಳಗಿನ ಕಲ್ಲ್ಲಿಗೆ ಹತ್ತಿಕೊಂಡಿರುವ ಹೊಕ್ಕಳಗುಂಜಿ ಆಧಾರದ ಮೇಲೆಯೇ ಮೇಲಿನ ಕಲ್ಲು ತಿರುಗುವುದು. ನೆಟ್ಟ ಮೇಟಿಯ ಆಧಾರದ ಮೇಲೆಯೇ ಹಂತಿಯ ಎತ್ತುಗಳು ತಿರುಗುವುದು.

೩. ಬೀಸುವ ಕಲ್ಲಿಗೆ ಮುಕ್ಕು ಹಾಕಿದಂತೆ, ಹಂತಿಯಲ್ಲಿ ರಾಗೋಲಿನಿಂದ ಮೇಲಿಂದ ಮೇಲೆ ದನದ ಕಾಲಿಗೆ ತೆನೆಗಳನ್ನು ಎಳೆದು ಹಾಕುವ ಕೆಲಸ ನಡೆದಿರುತ್ತದೆ.

೪. ಬೀಸುವ ಕ್ರಿಯೆ ರಾತ್ರಿ ಮತ್ತು ನಸುಕಿನಲ್ಲಿ ನಡೆಯುತ್ತದೆ. ಹಂತಿಯು ಬೀಸುವ ಈ ಸಮಯವನ್ನ್ನೊಳಗೊಂಡು ಇಡೀ ರಾತ್ರಿ ನಡೆಯುವಂತಹದು.

೫. ಬೀಸುವ ಹೆಣ್ಣು ಮಗಳು ಸ್ತ್ರೀಯ ಬದುಕನ್ನೇ ಹಾಡಿನ ಸಂಗತಿಯನ್ನಾಗಿಸುತ್ತಾಳೆ. ಹಂತಿ ಹಾಡಿನಲ್ಲಿ ಒಕ್ಕಲಿಗನು ತನ್ನ ರೈತಬದುಕನ್ನು ಹಾಡಿಗೆ ವಿಷಯವಾಗಿ ಬಳಸುತ್ತಾನೆ.

೬. ಬೀಸುವ ಹಾಡು ನಡೆದಾಗ ಸಹೃದಯರ ಹಾಜರಿ ಇಲ್ಲ. ಇಲ್ಲಿಯ ತ್ರಿಪದಿಗಳು ಹಾಡುವ ಹೆಣ್ಣಿನ ಆತ್ಮ ನಿವೇದನೆಗಳಂತೆ ಕಾಣುತ್ತವೆ. ಹಂತಿಯ ಸಂದರ್ಭದಲ್ಲೂ ಇಂತಹದೇ ಪರಿಸ್ಥಿತಿ. ದೊಡ್ಡ ರಾಶಿ ಇದ್ದಲ್ಲಿ ಮಾತ್ರ ಜನ ಬಹಳ. ಅದರೆ ಸಣ್ಣ ರೈತರ ರಾಶಿಗೆ ಯಾರೂ ಇರರು. ಹಂತಿ ಹೊಡೆಯುವ ಇಬ್ಬರು, ಬಹಳವೆಂದರೆ ಇನ್ನಿಬ್ಬರು. ಹೀಗೆ ನಾಲ್ಕೈದು ಜನ ಅಲ್ಲಿ ಹಾಜರಿರುವುದು ಸಾಮಾನ್ಯ. ಹೀಗಾಗಿ ಹಂತಿಯ ಸದರ್ಭದಲ್ಲೂ ಬಳಕೆಯಾಗುವ ಹಾಡುಗಳು ಸಹೃದಯರಿಗಾಗಿ ಹುಟ್ಟಿ ಕೊಂಡವುಗಳಲ್ಲ. ಅವು ಕೂಡ ರೈತ ತನ್ನ ಪಾಡನ್ನು ಹೇಳಿಕೊಳ್ಳುವ ಹಾಡುಗಳೇ. ಈ ಎರಡೂ ಸಂದರ್ಭಗಳಲ್ಲಿ ಕೇಳುಗನಿಲ್ಲದೆ ಹಾಡು ಬಳಕೆಯಾಗುತ್ತದೆ.

೭. ಆ ಊರಿನ ಹಿರಿಕಿರಿಯ ದೇವರು, ಭೂಮಿತಾಯಿ, ಸೂರ್ಯ ಚಂದ್ರ ಹೀಗೆ ಸುಮಾರಾಗಿ ಎರಡೂ ಕಡೆ ಸ್ತುತಿಗೆ ಒಂದೇ ವಸ್ತು. ಆದುದರಿಂದ ಒಂದೇ ತ್ರಿಪದಿ ಇಲ್ಲಿ ಎರಡೂ ಕಡೆ ಸ್ತುತಿಯ ರೂಪದಲ್ಲಿ ಬಳಕೆಯಾಗುವುದನ್ನು ಕಾಣುತ್ತೇವೆ. ಉದಾಹರಣೆ :

ಸತ್ಯವಂತರೆಂದು ಶರಣ ಮಾಡಲಿ ಹೋದ
ಮತ್ಯಾಕ ಮಾರಿ ತಿರುವ್ಯಾರ ಬಸವಣ್ಣ
ಮುತ್ತ ತಂದೀದ ಮಗಡಕ

ಆಕಾಶದಡವ್ಯಾಗ ಧೂಪದ ಹೊಗೆ ಎದ್ದು
ಆಯ್ತು ಮಲ್ಲಯ್ಯನ ಶಿವಪೂಜಿ ಆಗಾಗ
ಆಕಾಶದ ಘಂಟಿ ಘಳಲೆಂದು

೮. ಹಂತಿ ಹೊಡೆಯುತ್ತ – ಬೀಸುವ ಕಲ್ಲು ಎಳೆಯುತ್ತ, ರಾಗೋಲಿನಿಂದ ತೆನೆ ಎಳೆಯುತ್ತ – ಕೈಯಿಂದ ಮುಕ್ಕು ಹಾಕುತ್ತ, ರಾತ್ರಿ – ಮಧ್ಯ ರಾತ್ರಿ ತಮ್ಮ ಪಾಡನ್ನು ಹಾಡಿಕೊಳ್ಳುವ ಕ್ರಿಯೆಯು ನಡೆದು – ಎರಡೂ ಕಡೆ ತ್ರಿಪದಿಗಳೇ ಸೃಷ್ಟಿಗೊಳ್ಳುವುದನ್ನು ಕಾಣುತ್ತೇವೆ.

ಹಂತಿ ಮುಖ್ಯವಾಗಿ ಒಂದು ಕೆಲಸದ ಪ್ರಕ್ರಿಯೆ. ಆದುದರಿಂದ ಈ ಕೆಲಸದ ಪ್ರಕ್ರಿಯೆ ಯನ್ನು ದಾಖಲಿಸುವದನ್ನೇ ಹಂತಿಯ ಹಾಡುಗಳು ಮಾಡುತ್ತವೆ. ಜೊತೆಗೆ ಬಿತ್ತಣಿಕೆಗೆ ತಯಾರಿ ನಡೆಸುವಾಗಿನಿಂದಲೂ ಒಂದು ದೈವೀಭಾವನೆಯ ಸಾಂಪ್ರದಾಯಿಕ ಆಚರಣೆಯ ಒಂದು ಎಳೆಯೂ ಇಲ್ಲಿ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಎರಡೂ ಸಂಗತಿಗಳು (ಕ್ರಿಯೆ ಮತ್ತು ಸಂಪ್ರದಾಯ) ನಿರಂತರವಾಗಿ ಸಮನಾಗಿ ಹಂತಿಸಂದರ್ಭದ ಹಾಡುಗಳಲ್ಲಿ ದಾಖಲಾಗಿರು ವುದನ್ನು ನಾವು ಕಾಣುತ್ತೇವೆ.

ಬೆಳೆಗೆ ಸಂಬಂಧಿಸಿದಂತೆ ಅಥವಾ ತನ್ನ ಉದ್ಯೋಗಕ್ಕೆ ಸಂಬಂಧಿಸಿದಂತೆ ಮನ ಬಿಚ್ಚಿ ಹಾಡಿಕೊಳ್ಳುವ ಸಮಯ – ಸಂದರ್ಭಗಳು ರೈತನಿಗೆ ಬಿತ್ತಣಿಕೆಯಿಂದ ಪ್ರಾರಂಭಗೊಂಡು ಎಲ್ಲೂ ಬರುವುದಿಲ್ಲ. ಹೀಗಾಗಿ ಹಂತಿಯಂತಹ ಒಂದು ಸಂದರ್ಭದಲ್ಲಿ ನಿಂತುಕೊಂಡು – ಬಿತ್ತಣಿಕೆಯಿಂದ ಪ್ರಾರಂಭಿಸಿ, ತನ್ನ ರೈತ ಬದುಕನ್ನು, ಬಸವಣ್ಣನ ದುಡಿಮೆಯನ್ನು, ಗೈದ ಶ್ರಮವನ್ನು – ಸಿಂಹಾವಲೋಕನ ಕ್ರಮದಲ್ಲಿ ಎಂಬಂತೆ ಇಲ್ಲಿ ತೋಡಿಕೊಳ್ಳುತ್ತಾನೆ. ಹಂತಿಯ ವಿವಿಧ ಹಂತಗಳಿಗೆ ತಕ್ಕಂತೆ – ಪ್ರಾರಂಭದಲ್ಲಿ ಸ್ತುತಿ, ಕಂಕಿ ತೆಗೆಯುವಾಗ ಅವುಗಳ ಚುಟುಕುಗಳು, ಹಂತಿ ಬಿಡುವ ಕಾಲಕ್ಕೆ ಬೂದುಗ ನಿರ್ಮಾಣದ ಬಗ್ಗೆ, ಮದನ ಮನಗಿಸಿ ಕರಿಬಂಟ ಬರೆದು ಕಡೆಗಾಗುವ ಬಗೆಗೆ – ಹೀಗೆ ನಡೆಯುವ ಕ್ರಿಯೆಗೆ ತಕ್ಕ ಹಾಡುಗಳನ್ನು ಅಲ್ಲಲ್ಲಿ ಹಾಡುತ್ತಾರೆ. ಜೊತೆಗೆ ಮುಂದೆ ಜೋಳ ತೂರುವ, ಹಂತಿಯ ಎತ್ತುಗಳನ್ನು ಶೃಂಗರಿಸಿ ಮೆರವಣಿಗೆ ಮಾಡುವ ಸಂಗತಿಯ ಹಾಡುಗಳೂ ಬರುತ್ತವೆ. ಹೀಗೆ ಭೂತ, ಭವಿಷತ್ತುಗಳನ್ನು ವರ್ತಮಾನದಲ್ಲಿ ನೆನೆಯುವ ಕ್ರಿಯೆ ಮತ್ತು ವರ್ತಮಾನದ ವಿವರಗಳನ್ನೆಲ್ಲ ಬಿಚ್ಚಿ ಹಾಡಿಕೊಳ್ಳುವ ವಿಶಿಷ್ಟತೆ ಕಾಣಿಸಿಕೊಳ್ಳುವುದು ಹಂತಿಯ ಸಂದರ್ಭದ ಹಾಡುಗಳ ವೈಶಿಷ್ಟ್ಯವೆಂದೇ ಹೇಳಬೇಕು.

ಹಂತಿ ಪ್ರಾರಂಭವಾಗಿ ಮುಗಿಯುವವರೆಗಿನ ಕಲ್ಪನೆ ಬರುವಂತೆ – ಈ ಕೆಳಗೆ ಕೆಲವು ಉದಾಹರಣೆಗಳನ್ನು ಕೊಟ್ಟಿದೆ. ರೈತನು ಇಡೀ ವರ್ಷದ ತನ್ನದುಡಿಮೆಯ ಮೆಲುಕು ಹಾಕುವು ದನ್ನು, ಕ್ರಮವಾಗಿ ಅವನು ದಾಖಲೆ ಮಾಡುತ್ತ ಹೋಗುವ ಒಂದು ಚಿತ್ರ ಬರುವಂತೆ ತ್ರಿಪದಿಗಳನ್ನು ಜೋಡಿಸಿದೆ. ಇಲ್ಲಿ ಒಂದು ಸಂದರ್ಭವು ತನ್ನಲ್ಲ್ಲಿ ಹುಟ್ಟುವ ಹಾಡುಗಳ ಮೇಲೆ ಎಷ್ಟೊಂದು ನಿಯಂತ್ರಣ ಹೊಂದಿರುತ್ತದೆ ಎಂಬುದನ್ನೂ ತಿಳಿದುಕೊಳ್ಳಬಹುದಾಗಿದೆ.

ಹಾಡ ಇಲ್ಲಿಗೆ ಸುರುವ ಆಗೊ ನಮ್ಮಗ ವರವ
ಗರುಬ್ಯಾಡ ನಮಗ ಗಣಪಣ್ಣ ನಿನ ಪೂಜಿ
ಅರವಿಟ್ಟು ಮೊದಲೆ ಮಾಡುವೆನೊ

ಉಗಾದಿ ಹಬ್ಬಕ ಹೊಸ ಹೋರಿ ಗಳೆ ಹೂಡಿ
ರೈತ ನಿನರಾಬ ಸುರುವಾಯ್ತು ಬಸವಣ್ಣ
ಕಾಯೊಡದು ಕೈಯ ಮುಗದೇನೋ
ಹರಗಿ ಹದವನಾಯ್ತು ಮಡಿಕಿ ಕುಂಟಿಯನಾಯ್ತು
ಕೊಯ್ಲದ ಕುಂಪಿ ಸುಡೋದಾಯ್ತು ಮೇಘರಾಜ
ನಿನ್ನ ಹಾದಿ ನಾನ ನೋಡೋದಾಯ್ತು

ಕೂರಿಗಿ ಒಯ್ದನ ಹೊಲದಾಗ ಇಳಿಸ್ಯಾನ
ಗಂಗಿ ಹೊಲ ನೋಡಿ ನಿಂತಾನ ಒಕ್ಕಲಿಗ
ಮುಂಚೆ ಕೂರಿಗಿ ಹಿಡದಾನೊ

ಕಣ ಯಾರು ಕಡದಾರ ನೀರ್ಯಾರ ಹೊಡದಾರ
ಹೊಟ್ಟ ಹರವಿ ಮೇಟಿ ಜಡದಾರ ಸಲಗರ
ಮುತ್ತೈದೇರು ಗೂಡ ಮುರದಾರೊ

ಗೂಡ ಸನಿಯಕ ಬಂತು ಹೂಡೊ ಎತ್ತೆಲ್ಲಾವೊ
ಹೂಡುತಲೆ ಬಸವ ನಡಿಬೇಕೊ ಹಂತಿ ಹೊಡಿಬೇಕೊ

ಹಂತಿ ಸುರುವನಾಯ್ತು ಹಾಡಿಕೆ ಮೊದಲಾಯ್ತು
ಸಣ್ಣ ದೊಡ್ಡವರ ದನಿಯಾಯ್ತು ನಮ್ಮೂರ
ಪುಣ್ಯವಂತರ ಹೊಲದಾಗೋ

ಹಂತಿ ಹತ್ತಿಗ ಬಂತು ಕಂಕಿ ಕಡಿಯಕ ಆಯ್ತು
ಕಂಚಿನಾರುತಿ ಬೆಳಗ್ಯಾರ ಬಸವಣ್ಣ
ಹಂತಿಯ ಕೊಳ್ಳ ಹರದಾರೋ

ಮೂರೂ ಸಂಜಿ ಹೊತ್ತು ಮುತ್ತೈದಿ ಬಂದಾಳೊ
ಆರುತಿ ತಳಗಿ ಬಗೈಯ್ಯ ಹಿಡಕೊಂಡು
ತೂರ್ಯಾಳ ಮುತ್ತು ಹೊಲದಾಗ