ಹಾಡುವ ಕಾವ್ಯಓದುವ ಕಾವ್ಯ :

ಜನಪದ ಕಾವ್ಯ ಮುಖ್ಯವಾಗಿ ಹಾಡುವ ಕಾವ್ಯ. ಶಿಷ್ಟ ಕಾವ್ಯ ಓದುವ ಕಾವ್ಯ. ಜನಪದ ಕಾವ್ಯವು ತಾನು ಹುಟ್ಟಿದ ಸಂದರ್ಭದಲ್ಲಿ ಪ್ರಯೋಗಗೊಳ್ಳುವಾಗ ತನ್ನ ನೈಸರ್ಗಿಕ ಸ್ವರೂಪದಲ್ಲಿರುತ್ತದೆ. ಇದು ಜನಪದಕಾವ್ಯದ ಔನ್ನತ್ಯದ ಮತ್ತು ಪರಿಪೂರ್ಣ ಸ್ಥಿತಿಯಾದರೆ, ಓದುವುದು ಶಿಷ್ಟಕಾವ್ಯದ ಔನ್ನತ್ಯದ ಮತ್ತು ಪರಿಪೂರ್ಣ ಸ್ಥಿತಿಯಾಗಿದೆ. ಹೀಗಾಗಿ ಒಂದು ಹಾಡುವ ಕಾವ್ಯವಾದರೆ ಇನ್ನೊಂದು ಓದುವ ಕಾವ್ಯವಾಗಿದೆ. ಜನಪದ ಹಾಡುವ ಕಾವ್ಯದ ಜನಪ್ರಿಯತೆ ಬಹುವ್ಯಾಪಿ. ಹಾಡು ನಡೆಯುವ ಸಂದರ್ಭದಲ್ಲೇ ಕೇಳುಗರೂ ಬಂದಿರುತ್ತಾರೆ. ಹೀಗಾಗಿ ಸಮೂಹದ ಎದುರಿಗೆ ಈ ಕಾವ್ಯ ಬಳಕೆಯಾಗುತ್ತಿರುತ್ತದೆ. ಇದು ಸರಳವಾಗಿ ಎಲ್ಲರ ಗಮನಕ್ಕೂ ಇರುವ ವಿಷಯವೇ.

ಶಿಷ್ಟಕಾವ್ಯಕ್ಕಿರುವ ಓದುವ ಅಥವಾ ವಾಚಿಸುವ ಸಾಧ್ಯತೆಗಳನ್ನು ಒದಗಿಸಿದವು ಜನಪದ ಕಾವ್ಯದ ಮಾದರಿಗಳೇ. ಕಾವ್ಯ ಪ್ರಯೋಗಗೊಳ್ಳುವ ಎರಡು ಸಾಧ್ಯತೆಗಳಾದ ಹಾಡುವ ಮತ್ತು ನುಡಿಯುವ ಸಾಧ್ಯತೆಗಳಿರುವ ಎರಡೂ ಬಗೆಯ ಕಾವ್ಯಮಾದರಿಗಳ್ನು ಜನಪದಕಾವ್ಯಕ್ಷೇತ್ರ ಹೊಂದಿದೆ. ಜನಪದ ಕಾವ್ಯದಲ್ಲಿರುವ ಕೆಲವು ನುಡಿಯುವ ಕಾವ್ಯದ ಮಾದರಿಗಳಿಗೆ ಉದಾಹರಣೆಗಳಾಗಿ ಶಿಶುಪ್ರಾಸಗಳೂ ದೀಪಾವಳಿಯ ಸಮಯದಲ್ಲಿ ದನಗಳಿಗೆ ದೀಪ ಬೆಳಗು ವಾಗ ಅನ್ನುವ ಆಣಿ – ಪೀಣಿ (ಅಂಟಿಗೆ ಪಂಟಿಗೆ) ಪದಗಳೂ ಜನಪದ ಕಥೆಗಳಲ್ಲಿ ಬರುವ ಸೂತ್ರರೂಪದ ಮಾದರಿಗಳೂ ನುಡಿಯುವ ಕಾವ್ಯ ಪ್ರಕಾರಕ್ಕೆ ಸೇರಿದ ಉದಾಹರಣೆಗಳಾಗಿವೆ. ಹಾಗೆ ನೋಡಿದರೆ ಒಗಟು ಮತ್ತು ಒಡಪುಗಳನ್ನು ಕೂಡ ಇದೇ ಮಾದರಿಗೆ ಸೇರಿಸಬಹು ದಾಗಿದೆ. ಇಲ್ಲಿ ಕೆಲವು ಉದಾಹರಣೆಗಳನ್ನು ಗಮನಿಸಬಹುದಾಗಿದೆ:

. ಶಿಶು ಪ್ರಾಸಗಳು :

ಚಂದಪ್ಪ ಚಂದಪ್ಪ ಚಲುವಾ
ಚುಂಗಾ ಬಿಟಗೊಂಡು ಬರುವಾ
ಎಂಟೆತ್ತಿನ ಬಂಡಿ
ಬಂಡಿಮ್ಯಾಗ ಗಿಂಡಿ
ಗಿಂಡಿ ಮ್ಯಾಲ ನವಿಲು
ನವಲ ಪುಚ್ಚಾ ಕಿತ್ತಿ
ಚಿಗರಿ ಕೋಡಿಗ್ಹಚ್ಚಿ
ಚಿಗರಿ ಚಿಗರಿ ಚಿಕ್ಕಣ್ಣ
ಅವರಿಕಾಳ ಮುಕ್ಕಣ್ಣ ೧

ಬಸು ಬಸು ಸಣ್ಣಾಂವ ಸಣ್ಣಾಂವ
ಪೆಪ್ಪರಮೆಂಟ ತಿನ್ನಾಂವ ತಿನ್ನಾಂವ
ಅಗ್ಗಿನಗಾಡ್ಯಾಗ ಕುಂಡ್ರಾಂವ ಕುಂಡ್ರಾಂವ

ಮುಂಬಯಿ ಶಾರ ನೋಡಾಂವ ನೋಡಾಂವ
ಹೇಣ್ತಿ ಕರಕೊಂಡು ಜಿಗ್ಯಾಂವ ಜಿಗ್ಯಾಂವ ೨

. ಆಣಿಪೀಣಿ

ಹೊತ್ತ ಮುಣಗಿತೋ ಲಾಲ ಹನ್ನೆರಡೆತ್ತಿನ ಬಾಲಾ
ಬಾಲದ ಮ್ಯಾಲ ಬಂಡಿ ಬಂಡಿಮ್ಯಾಲ ನಾನು
ನನ್ನ ಮ್ಯಾಲ ನವಲ ನವಲ ಪುಚ್ಚ ಕಿತ್ತಿ
ಚಿಗರಿ ಕೋಡಿಗೆ ಕಟ್ಟಿ ಚಿಗರೊಡೊ ಜಾಣಾ
ಅದಕೇನ ದಾಡಿ ಹುಣಚಿ ರಾಡಿ ಆಣಿ ಪೀಣಿ ಜಾಣಿಗೋ ೧

ಹಂಡಾಕಳೋ ಬಂಡಾಕಳೋ
ಕಲಬುರ್ಗಿ ದಾರ್ಯಾಗ ಕಳ್ಳಾರು ಕಡದಾರು
ಬ್ಯಾಡರು ಬಿಡಿಸ್ಯಾರು ಮುತ್ತಿನಂಥಾ ಪಾರ್ಯಾಳ
ಮುಗಿಮುಗಿದು ಬಿದ್ದಾವು
ಆಣಿ ಪೀಣಿ ಜಾಣಿಗೋ ಕೊಬ್ಬರಿಬಟ್ಲಾ ಬಾಣಿಗೋ ೨
(ಜಾ. ಜೀ.೧೩೫)

. ಜನಪದ ಕಥೆಗಳಲ್ಲಿ ಕಾಣಿಸುವ ಸೂತ್ರರೂಪದ ಪ್ರಾಸಗಳು :

ಸತ್ತಿಲ್ಲ ಮುತ್ಯಾ ಕೆಟ್ಟಿಲ್ಲ ಮುತ್ಯಾ
ಗುಂಡ ಗುಂಡ ತೆನಿ ತಿಂದು
ಗುಂಡದಾನ ನೀರ ಕುಡ್ದು
ಅಂಟದ ಕಾಲಿಗ ಜೋಕಾಲಿ ಆಡಿ
ಪುಂಡಿ ಕಟಗ್ಯಾಗ ಫುಗಡಿ ಆಡಿ
ಗಾಣ್ಗ್ಯಾರ ಮನ್ಯಾಗ ಎಣ್ಣಿ ಹಚ್ಗೊಂಡು
ಗೌಡ್ರಮನ್ಯಾಗ ಎರ್ಕೊಂಡು
ಕಂಬಾರ ಮನ್ಯಾಗ ಕಾಸ್ಗೊಂಡು
ಕುಂಬಾರ ಮನ್ಯಾಗ ಕತ್ಲ್ಯಾಗ ಸೀರಿ ಊಟ್ಗೋಕತ್ತೀನಿ ನೋಡು

ಜನಪದದ ಹಾಡುವ ಕಾವ್ಯವು ಇಂದಿನ ಶಾಲೆ ಕಾಲೇಜು ವಿಶ್ವವಿದ್ಯಾಲಯಗಳ ಪಠ್ಯಕ್ರಮದಲ್ಲಿ ಸೇರಿರುವುದರಿಂದ ಅಲ್ಲಿ ಅದು ‘ಓದುವ ಕಾವ್ಯ’ವಾಗಿ ಪ್ರಯೋಗ ಗೊಳ್ಳುತ್ತಿದೆ. ಏಕೆಂದರೆ ಈಗಿನ ಶಿಕ್ಷಣಪದ್ಧತಿಯಲ್ಲಿಯ ವರ್ಗಕೋಣೆಗಳು ಶಿಷ್ಟಕಾವ್ಯ ಹುಟ್ಟುಹಾಕಿದ ಸಂದರ್ಭಗಳಾಗಿವೆ. ಕಾರಣ ಅಲ್ಲಿಯ ಪಾಠದ ರೀತಿಯು ಓದಿ ಹೇಳುವ ಪದ್ಧತಿಯಾಗಿರುವದ ರಿಂದ ಜನಪದ ಕಾವ್ಯಕ್ಕೆ ಈ ಪರಿಸ್ಥಿತಿ ಬಂದು ಒದಗಿದೆ. ಬದಲಾದ ಒಂದು ಸಂದರ್ಭದಲ್ಲಿ ಜನಪದ ಹಾಡು ಬಳಕೆಯಾಗುವಾಗ ಸಂಪೂರ್ಣವಾಗಿ ಅದರ ಸ್ವರೂಪವೇ ಬದಲಾಗುತ್ತದೆ. ಹಾಡುವ ಕಾವ್ಯವು ಓದುವಕಾವ್ಯವಾಗಿ ಬಳಕೆಯಾಗಿರುತ್ತದೆ.

ಸಾಂಸ್ಕೃತಿಕ ಸಂಗತಿ ಮುಂದಾಗಿ, ಶಬ್ದಾರ್ಥಗಳು ಹಿಂದಾಗಿ :

ಜನಪದ ಕಾವ್ಯ ಹುಟ್ಟಿಕೊಳ್ಳುವ ಸಂದರ್ಭ – ಮಾನವಜೀವನದ ಅಂಗವಾಗಿರು ವುದರಿಂದ ಆ ಸಂರ್ಭದ ಕೂಸಾದ ಜನಪದ ಕಾವ್ಯ ಮಾನವ ಜೀವನದ ಅನಿವಾರ್ಯ ಅಂಗವಾಗಿ ಬಿಡುತ್ತದೆ. ಹೀಗೆ ಮಾನವನ ಜೀವನದ ಅಂಗವಾಗಿ ಹುಟ್ಟಿಕೊಂಡ ಜನಪದಕಾವ್ಯದಲ್ಲಿ ಸಾಹಿತ್ಯಿಕ ಅಂಶಗಳಿಗಿಂತಲೂ ಸಾಂಸ್ಕೃತಿಕ ಅಂಶಗಳು ಸಹಜವಾಗಿಯೇ ದಟ್ಟವಾಗಿರುತ್ತವೆ. ಆದುದರಿಂದ ಜನಪದ ಹಾಡನ್ನು ಕಾವ್ಯ ಎಂದು ಕರೆಯಲು ಆಗದುಎಂಬ ಒಂದು ಆಕ್ಷೇಪಣೆಯನ್ನು ಎತ್ತಲಾಗುತ್ತದೆ. ಇಲ್ಲಿ ಶಿಷ್ಟಕಾವ್ಯದ ಪ್ರಸ್ತಾಪವಿಲ್ಲವಾದರೂ ಅರಿತೋ ಅರಿಯದೆಯೋ ಜನಪದ ಹಾಡನ್ನು ಶಿಷ್ಟಕಾವ್ಯಕ್ಕೆ ಹೋಲಿಸಿ, ಇದು ಇಂತಹ ಕಾವ್ಯವಲ್ಲ ವಾದ್ದರಿಂದ ಇದು ಕಾವ್ಯವೇ? ಎಂಬ ಸಂಶಯಕ್ಕೆ ಬರಲಾಗಿದೆ. ಶಿಷ್ಟಕಾವ್ಯದ ಜೊತೆಗೆ ಹೋಲಿಸಿ ನೋಡುವಾಗಿನ ದೃಷ್ಟಿ, ಜನಪದ ಕಾವ್ಯವನ್ನು ಯಾವ ಸ್ಥಿತಿಯಲ್ಲಿ ಗಮನಿಸಿದೆ ಎಂಬವುದು ಗಮನಾರ್ಹ. ಬಹುಶಃ ಜನಪದ ಕಾವ್ಯದ ಮುದ್ರಣದ ಪ್ರತಿಯನ್ನು ನೋಡಿದಾಗ ಇಂತಹ ಸಂಶಯ ಹುಟ್ಟಿಕೊಳ್ಳಲು ಸಾಧ್ಯವಿದೆ. ಮೇಲಾಗಿ ಪಠ್ಯಕ್ಕೆ ಅಳವಟ್ಟ ಜನಪದ ಕಾವ್ಯವನ್ನು ವರ್ಗಗಳಲ್ಲಿ ಓದಿ ಹೇಳುವ ಪರಿಸ್ಥಿತಿವುಂಟಾಗಿರುವ ಬಗ್ಗೆ ಈಗಾಗಲೇ ಪ್ರಸ್ತಾಪಿಸಲಾಗಿದೆ. ಅಲ್ಲಿ ಅದು ಓದುವ ಕಾವ್ಯವಾಗಿ ಬಳಕೆಯಾಗುವುದು ಅನಿವಾರ್ಯ.

ಶಿಷ್ಟಕಾವ್ಯದ ಸಾರ್ಥಕತೆ ಇರುವುದು ಓದುವುದರಲ್ಲಿ. ಏಕೆಂದರೆ ಅದು ಓದುವುದಕ್ಕಾಗಿ ಹುಟ್ಟಿದ ಕಾವ್ಯ. ಅದೇ ಅದರ ಅತ್ಯಂತ ಸಹಜ ಸ್ಥಿತಿ. ಅದರೆ ಜನಪದಕಾವ್ಯದ ನಿಜವಾದ ಸಾರ್ಥಕತೆ ಇರುವುದು ಹಾಡುಗಾರಿಕೆಯಲ್ಲಿ. ಹೀಗಾಗಿ ಜನಪದಕಾವ್ಯ ಹಾಡಿದಾಗಲೇ ಅದರ ನಿಜವಾದ ಔನ್ನತ್ಯ ಗೊತ್ತಾಗುವುದು. ಹೀಗಿರುವುದರಿಂದ ಶಿಷ್ಟಕಾವ್ಯದೊಂದಿಗೆ ಮುದ್ರಿತ ರೂಪದ ಜನಪದಕಾವ್ಯವನ್ನು ಅಪ್ರಜ್ಞಾಪೂರ್ವಕ ವಾಗಿಯೂ ಹೋಲಿಸುವಾಗ ಅದು ಸಂಪೂರ್ಣವಾಗಿ ತನ್ನ ನೈಸರ್ಗಿಕ ಗುಣದಿಂದ ದೂರವಾಗಿರುತ್ತದೆ. ಸಾಂಸ್ಕೃತಿಕ ಸಂದರ್ಭ, ಕ್ರಿಯೆ (ದೃಶ್ಯ), ಸಂಗೀತ, ಕುಣಿತ ಮುಂತಾದವನ್ನು ಕಳೆದುಕೊಂಡು ನಿಶ್ಯಕ್ತವಾಗಿರುತ್ತದೆ. ಆದರೆ ಈ ಸ್ಥಿತಿಯಲ್ಲಿ (ಕೇವಲ ಮುದ್ರಿತ ಪ್ರತಿ) ಇರುವ ಈ ಕಾವ್ಯ ಎದುರಿಸಬೇಕಾಗಿರುವುದು, ಶಿಷ್ಟಕಾವ್ಯದ ಅತ್ಯಂತ ಸಹಜ ಸ್ಥಿತಿಯನ್ನು, ಈ ಹೋಲಿಕೆ ಒಂದು ದೃಷ್ಟಿಯಿಂದ ಅಸಮಂಜಸ ವಾದುದು. ಜನಪದ ಕಾವ್ಯದ ಸಹಜ ಸ್ಥಿತಿಯೊಂದಿಗೆ ಶಿಷ್ಟಕಾವ್ಯವನ್ನು ಹೋಲಿಸಿದಾಗ ಇಂತಹ ಅಸಮಂಜಸತೆ ಅಲ್ಲೂ ಎದ್ದು ಕಾಣುತ್ತದೆ. ಜನಪದ ಕಾವ್ಯದ ಸಾಂದರ್ಭಿಕ ಹಾಡುಗಾರಿಕೆಯ ಮುಂದೆ ಶಿಷ್ಟಕಾವ್ಯದ ಸ್ಥಾನ ಎಲ್ಲಿ ಎಂಬುದನ್ನು ಇಂಥಲ್ಲಿ ತುಲನೆ ಮಾಡಿ ಪರಿಶೀಲಿಸಬೇ ಕಾಗುತ್ತದೆ. ಶಿಷ್ಟಕಾವ್ಯದ ಹಾಗೂ ಜನಪದ ಕಾವ್ಯದ ಸಹಜ ಸ್ಥಿತಿಗಳಲ್ಲಿ ಅವುಗಳಲ್ಲಿ ತೋರುವ ವ್ಯತ್ಯಾಸವನ್ನು ಒಂದುರೇಖಾಚಿತ್ರದ ಮೂಲಕ ತೋರಿಸಬಹುದಾಗಿದೆ:

  : ಶಿಷ್ಟಕಾವ್ಯದ ನೈಜ (ಮುದ್ರಿತ)ಸ್ಥಿತಿ.

ಬಿ : ಜನಪದಕಾವ್ಯದ ಮುದ್ರಿತ ಪ್ರತಿ.

ಜೆ : ಜನಪದಕಾವ್ಯದ ನಿಜಸ್ಥಿತಿಯನ್ನು ಗುರುತಿಸಲು ಹಿಂದೆ ಹೋಗಬೇಕು. ೧, ೨, ೩ಇವು – ಈ ಕಾವ್ಯ ಕಳೆದುಕೊಂಡ ಸಂಗೀತ, ಕ್ರಿಯೆ(ದೃಶ್ಯ), ಸಂದರ್ಭಗಳನ್ನು ಸೂಚಿಸುತ್ತವೆ. ಇವುಗಳೆಲ್ಲವನ್ನು ಒಳಗೊಂಡ ಜನಪದಕಾವ್ಯದ ನಿಜಸ್ಥಿತಿಯ ಸ್ಥಾನವನ್ನು ಜೆನಿರ್ದೇಶಿ ಸುತ್ತದೆ.

ಜೆ : ಈಗ ಜೆ ಮತ್ತು ಗಳ ನಡುವಿನ ಅಂತರವು – ಈ ಎರಡೂ ಕಾವ್ಯಗಳ ನಿಜವಾದ ಅಂತರವನ್ನು ತೋರಿಸುತ್ತದೆ.

ಎಸ್ : ವು ಶಿಷ್ಟಕಾವ್ಯದ ನೈಜರೂಪ. ಅದಕ್ಕೆ ೧, ೨, ೩ – ಅಂದರೆ ಸಂಗೀತ, ಕ್ರಿಯೆ(ದೃಶ್ಯ), ಸಂದರ್ಭಗಳು ಸೇರಿಕೊಂಡಾಗಿನ ಸ್ಥಾನವನ್ನು ಎಸ್ಪ್ರತಿನಿಧಿಸುತ್ತದೆ.

ಎಸ್ : ಶಿಷ್ಟಕಾವ್ಯದ ಮುಂದುವರಿಕೆಯ ದಾರಿಯಾಗಿದೆ.

ಜೆಎಸ್ : ಈಗ ಸಂಗೀತ, ಕ್ರಿಯೆ(ದೃಶ್ಯ) ಮತ್ತು ಸಂದರ್ಭದಲ್ಲಿ ಜನಪದಕಾವ್ಯ ಇರುವ ನೈಜಸ್ಥಿತಿಗೆ, ಶಿಷ್ಟಕಾವ್ಯ ಆ ಸ್ಥಿತಿಯನ್ನು ಪ್ರಯತ್ನಪೂರ್ವಕವಾಗಿ     ಮುಟ್ಟಿದಾಗ – ಅವು ನಿಲ್ಲುವ ದೂರದ ಅಂತರವನ್ನು ಜೆಎಸ್ ತೋರಿಸುತ್ತವೆ.

ಈ ಎರಡೂ ಕಾವ್ಯಗಳ ಸ್ವರೂಪ – ಲಕ್ಷಣಗಳಲ್ಲಿ ತೋರುವ ವ್ಯತ್ಯಾಸಗಳನ್ನು ಹೀಗೆ ಪಟ್ಟಿಮಾಡಬಹುದಾಗಿದೆ :

ಜನಪದಕಾವ್ಯ ಶಿಷ್ಟಕಾವ್ಯ
೧. ಸಮಷ್ಠಿ ಪ್ರಜ್ಞೆ – ವ್ಯಷ್ಠಿ ಅನಿಸಿಕೆ
೨. ಸಮಷ್ಠಿ ಹಾಗೂ ವ್ಯಷ್ಠಿ ಸೃಷ್ಟಿ – ವ್ಯಷ್ಠಿ ಸೃಷ್ಟಿ
೩. ಅಕ್ಷರಸ್ಥ, ಅನಕ್ಷರಸ್ಥರ ಕಾವ್ಯ (ಕವಿ, ಸಹೃದಯ) – ವಿದ್ಯಾವಂತರ ಕಾವ್ಯ (ಕವಿ, ಸಹೃದಯ)
೪. ವೌಖಿಕ, ಕ್ವಚಿತ್ತಾಗಿ – ಬರಹಸಂಪ್ರದಾಯ – ಸಂಪೂರ್ಣ ಗ್ರಾಂಥಿಕ – ಬರಹ ಸಂಪ್ರದಾಯ
೫. ಬದಲಾಗುತ್ತಿರುತ್ತದೆ – ಸ್ಥಿರ
೬. ಮೂರ್ತರೂಪ(ದೃಶ್ಯಕಾವ್ಯ) – ಅಮೂರ್ತಕಾವ್ಯ
೭. ಹಾಡುವ ಕಾವ್ಯ – ಓದುವ ಕಾವ್ಯ
೮. ಅನಾಮಧೇಯ, ನಾಮಧೇಯ – ಸಂಪೂರ್ಣ ನಾಮಧೇಯ
೯. ಪನರ್‌ಸೃಷ್ಟಿ – ಇಲ್ಲ
೧೦. ಸಾಂಸ್ಕೃತಿಕ ಹಿನ್ನೆಲೆ – ಇಲ್ಲ
೧೧. ಸಂಗೀತದ ಹಿನ್ನೆಲೆ – ಇಲ್ಲ
೧೨. ಕುಣಿತ – ಇಲ್ಲ
೧೩. ಪ್ರಾದೇಶಿಕ ಬಣ್ಣ – ಇಲ್ಲ
೧೪. ಪುನರಾವರ್ತನೆ – ಇಲ್ಲ

ನೈಸರ್ಗಿಕ ಗುಣಬದುಕಿನ ಒಂದಂಗವಾಗಿ ಜನಪದ ಕಾವ್ಯದ ಸೃಷ್ಟಿ :

ಜನಪದ ಕಾವ್ಯವು ಬರೆಯಬೇಕೆಂದು ಉದ್ದೇಶಪೂರ್ವಕವಾಗಿ ಬರೆದ ಕಾವ್ಯವಲ್ಲ. ಇದೊಂದು ನಿರುದ್ದಿಶ್ಯ ಕಾವ್ಯವೇ ಸರಿ. ಬದುಕಿನೊಂದಿಗೆ ಅನಿವಾರ್ಯವಾಗಿ ಹುಟ್ಟಿಕೊಂಡ ಸಾಹಿತ್ಯವಿದು. ಅದಕ್ಕಾಗಿ ಇದರ ಸ್ವರೂಪದ ಲೆಕ್ಕಾಚಾರದಲ್ಲಿ ಮೊದಲು ಗಣನೆಗೆ ತೆಗೆದು ಕೊಳ್ಳಬೇಕಾದ ಸಂಗತಿ ಎಂದರೆ ಅದರ ನೈಸರ್ಗಿಕಗುಣ.ನಿಸರ್ಗದತ್ತ ಕೊಡುಗೆಗಳಾದ ಆಹಾರ – ನೀರು – ಗಾಳಿಗಳಂತೆ ನಮ್ಮ ಬದುಕಿಗೆ ಜನಪದಸಾಹಿತ್ಯವೂ ಅವಶ್ಯ. ಗುಡ್ಡ – ಗವಿ, ಗಿಡ – ಮರಗಳಂತೆ ಮನುಷ್ಯನಬದುಕಿಗೆ ವರವಾಗಿ, ಅನಿವಾರ್ಯವಾಗಿ, ಸಹಜವಾಗಿ ಒದಗಿ ಬಂದದ್ದು ಜನಪದಸಾಹಿತ್ಯ. ಬದುಕು ಬದಲಾದಂತೆ ಜನಪದಸಾಹಿತ್ಯದ ಸೃಷ್ಟಿ ಮತ್ತು ಉಪಯೋಗ ಬದಲಾಗುತ್ತಿದ್ದರೂ ಸುದೀರ್ಘವಾದ ಮಾನವ ಬದುಕಿನ ಜೊತೆ ಹುಟ್ಟಿಕೊ ಳ್ಳುತ್ತ, ಅದನ್ನು ಕೈಹಿಡಿದು ನಡೆಸಿಕೊಂಡು ಬಂದ ಚಾರಿತ್ರಿಕ ವೌಲ್ಯ ಈ ಸಾಹಿತ್ಯಕ್ಕಿದೆ. ಅದಕ್ಕಾಗಿ ನೈಸರ್ಗಿಕವಾದ ಬದುಕಿನ ಗುಣಗಳು ಜನಪದಸಾಹಿತ್ಯಕ್ಕಿವೆ ಎಂಬುದನ್ನು ಗಮನಿಸಬೇಕು.

ನೈಸರ್ಗಿಕ ವಿಜ್ಞಾನ ವಿಷಯಗಳಾದ ಖಗೋಳಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ ಮುಂತಾದವುಗಳು ನಿಸರ್ಗದತ್ತವಾದ ಕೊಡುಗೆಗಳ ಅಭ್ಯಾಸವನ್ನು ಮಾಡುತ್ತವೆ. ಅದರಂತೆಯೇ ಮಾನವನ ನೈಸರ್ಗಿಕ ಬದುಕನ್ನು ಜನಪದಶಾಸ್ತ್ರ ಅಭ್ಯಸಿಸುತ್ತದೆ. ಆದುದರಿಂದ ನೈಸರ್ಗಿಕ ಸ್ವರೂಪವನ್ನು ಹೊಂದಿದ ಜನಪದಸಾಹಿತ್ಯವನ್ನು ಅಭ್ಯಸಿಸಲು ವೈಜ್ಞಾನಿಕದೃಷ್ಟಿ ಅವಶ್ಯ. ಈ ಸಾಹಿತ್ಯವು ವೈದ್ಯಕೀಯ (ಮೆಡಿಕಲ್) ಅಧ್ಯಯನದಂತೆ. ಶರೀರವನ್ನು ಬಗೆದು ಅಭ್ಯಸಿಸುವ ಈ ಅಧ್ಯಯನದಲ್ಲಿ ಹೇಗೆ ಶೀಲ – ಅಶ್ಲೀಲಗಳ ಪ್ರಶ್ನೆ ಉದ್ಭವಿಸುವುದಿಲ್ಲವೋ ಹಾಗೆಯೇ ಜನಪದ ಸಾಹಿತ್ಯದಲ್ಲೂ ಬೇಕು – ಬೇಡಗಳ ಪ್ರಶ್ನೆಗಳಿಲ್ಲ. ಏಕೆಂದರೆ ಶಿಷ್ಟಸಾಹಿತ್ಯವು ಜೀವನದ ಪಡಿನೆಳಲಾದರೆ, ಜನಪದಸಾಹಿತ್ಯವು – ಜೀವನದ ಒಂದು ಭಾಗವೇ ಆಗಿದ್ದು ಕೊಂಡು, ಆಯಾ ಕಾಲದ ಬದುಕು ಏನಿರುತ್ತದೋ ಅದನ್ನು ದಾಖಲಿಸುವ ಕೆಲಸವನ್ನು ಮಾಡುತ್ತಿರುತ್ತದೆ. ಹೀಗಿರುವುದರಿಂದ ಇದು ಇಂತಹದು ಅಂತಹದು ಎಂದು ಮೂಗು ಮುರಿಯುವ ಅವಶ್ಯಕತೆಯೇ ಬೀಳಲಾರದು. ಬದುಕೆಂಬ ಶರೀರದ ಗಮ್ಮತ್ತನ್ನು ಅರಿಯಲು, ಆ ಶರೀರವನ್ನು, ಅದರ ಜೀವವನ್ನು ದಾಖಲಿಸಿಕೊಂಡು ಬಂದ ಜನಪದಸಾಹಿತ್ಯದ ಅಭ್ಯಾಸ ಅನಿವಾರ್ಯವೆನಿಸುತ್ತದೆ. ಉದಾಹರಣೆಗಾಗಿ – ಗಾದೆಗಳ ಕ್ಷೇತ್ರವನ್ನೇ ನಾವು ಗಮನಿಸಿದರೆ ಅದು ಸರಳವಾಗಿ ನಮ್ಮನ್ನು ಛೇಡಿಸುತ್ತದೆ, ಅಣಕಿಸುತ್ತದೆ. ನಮ್ಮ ಸ್ವಭಾವವನ್ನು ಚುಚ್ಚುತ್ತದೆ, ಜಾತಿಯನ್ನು ಕೆಣಕುತ್ತದೆ. ನಮ್ಮ ಮೈಯನ್ನು, ಮನಸ್ಸನ್ನು ಬಗೆದು ಹಾಕಿ ಗಾಳಿಗೆ ಹಿಡಿಯುತ್ತದೆ. ಇಲ್ಲಿ ಜಾತಿ ನಿಂದನೆ, ವ್ಯಕ್ತಿನಿಂದನೆ ಎಂಬುದು ಗೌಣ; ಲೆಕ್ಕಕ್ಕೆ ಹಿಡಿಯಬಾರದ ಸಂಗತಿಗಳು. ಅಲ್ಲಿ ನಡೆದಿರುವುದು ನಮ್ಮ ಗುಣಗಳ ಶಸ್ತ್ರಚಿಕಿತ್ಸೆ. ನಮ್ಮ ನಡತೆ, ಮನಸ್ಸುಗಳ ರೋಗದ ದುರಸ್ತಿ. ಹೀಗೆಯೇ ಒಂದು ಕಥೆ, ಒಂದು ಹಾಡು, ಒಂದುಮಾತು ಎಲ್ಲವೂ ನೇರ, ನೈಜ; ಸರಳ, ನೈಸರ್ಗಿಕ ಸ್ವರೂಪವನ್ನು ಹೊಂದಿರುತ್ತವೆ.

ಜನಪದರ ಬದುಕಿನ ಒಂದು ಸಣ್ಣ ಬದಲಾವಣೆಯ ಸಾಮಾನ್ಯ ಸಂಗತಿಯಲ್ಲೂ ಜನಪದ ಕಾವ್ಯದ ಹುಟ್ಟು ಕಾಣಿಸಿಕೊಳ್ಳುತ್ತದೆ. ಜನನ – ಸಾವು, ಮದುವೆ – ಮುಂಜಿವೆ, ಒಂದು ವೃತ್ತಿು ಆರಂಭ – ಮುಕ್ತಾಯ, ಬೀಜದ ಬಿತ್ತಣಿಕೆ – ಬೆಳೆಯ ರಾಶಿ; ಹೀಗೆ ತನ್ನ ಬದುಕಿನಲ್ಲಿ ಸಣ್ಣ ಬದಲಾವಣೆಯಾಗಿ ಕಾಣುವ ಹುಣ್ಣಿವೆ – ಅಮವಾಸೆ, ಹಬ್ಬ – ಹರಿದಿನ ಇಂತಹ ಏನೇ ಆದರೂ ಮನುಷ್ಯ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಹಾಡುತ್ತಾನೆ – ಕುಣಿಯುತ್ತಾನೆ, ನಗುತ್ತಾನೆ – ಅಳುತ್ತಾನೆ. ಇಂಥಲ್ಲೆಲ್ಲ ಹಾಡು ಕಥೆಗಳು ಹುಟ್ಟಿಕೊಳ್ಳುವುದು ಸಾಮಾನ್ಯ.

ಮನುಷ್ಯನ ಉತ್ಕೃಷ್ಟ ಸಂಸ್ಕೃತಿ ನಿರ್ಮಾಣಗೊಂಡುದೇ ಬಿಡುವಿನ ವೇಳೆಯಲ್ಲಿ ಎಂಬುದು ಶಿಷ್ಟರ ಒಂದು ಅನಿಸಿಕೆ. ತಾಜಮಹಲ ಆಗಿರಬಹುದು ಗೋಳಗುಮ್ಮಟ ಆಗಿರ ಬಹುದು ಇವುಗಳ ಕಲ್ಪನೆ ಹುಟ್ಟಿದ್ದೇ ಬಿಡುವಿನ ವೇಳೆಯಲ್ಲಿ ಎಂಬುದು ನಾಗರಿಕ ವ್ಯಾಖ್ಯಾನ. ಇಂತಹ ಬಿಡುವಿನ ಸೃಜನೆಗಳಲ್ಲಿ ಲಿಖಿತ ಸಾಹಿತ್ಯವೂ ಒಂದು. ಆದರೆ ಜನಪದ ಕಾವ್ಯ (ಸಾಹಿತ್ಯ) ಹುಟ್ಟಿದ್ದು ಬಿಡುವಿನ ವೇಳೆಯಲ್ಲಿ ಅಲ್ಲ. ಸಂಸಾರದ ಜಂಜಾಡದಲ್ಲಿ ಜನಪದರಿಗೆ ಬಿಡುವೆಂಬು ದಿಲ್ಲ. ಕಾರಣ ಜನಪದ ಸಾಹಿತ್ಯದ ಬಹುತೇಕ ಭಾಗ ನಿರ್ಮಾಣಗೊಂಡುದು ಜನಪದರ ಕೈ ಖಾಲಿ ಇಲ್ಲದಾಗಲೇ. ಯಾವುದೋ ಒಂದು ಕೆಲಸ ಸಾಗಲು, ಇಲ್ಲವೆ ಜನಪದರು ಖುಷಿ ಪಡುವ ಒಂದು ಸಾಂಸ್ಕೃತಿಕ ಸಮಾರಂಭ ಜರುಗಲು, ಒಂದು ಆವಶ್ಯಕ ಸಾಥಿಯಾಗಿ – ಮತ್ತು ಇಂಥ ಸಂದರ್ಭಗಳ ಅನಿವಾರ್ಯವಾದ ಒಂದು ಅಂಗವಾಗಿ ಜನಪದ ಕಾವ್ಯ ಹುಟ್ಟುತ್ತಿರುತ್ತದೆ. ಉದಾಹರಣೆಗೆ – ಹೊಸದೊಂದು ಮಗು ತಾಯಿ ಗರ್ಭದಿಂದ ಭೂಮಿಗೆ ಇಳಿದುಬಂದಾಗ, ಕೂಸಿನ ಮತ್ತು ತಾಯಿಯ ಸಂರಕ್ಷಣೆಗಾಗಿ ಅನೇಕ ಜನಪದ ಚಿಂತನೆಗಳು ಹುಟ್ಟಿಕೊಂಡಂತೆ, ಮಗುವಿಗೊಂದು ಹೆಸರಿಡಲು ಜೋಗುಳ ಕಾರ್ಯಕ್ರಮ ಹುಟ್ಟಿಕೊಂಡು, ಹಾಡು ಅಲ್ಲಿ ಅನಿವಾರ್ಯವಾಗಿ ಕಾಣಿಸಿಕೊಂಡಿತು. ಹೀಗೆ ಜನಪದ ಸಾಹಿತ್ಯವೆಂಬುದು ಬದುಕಿನ ಒಂದು ಅಂಗವಾಗಿ ಹುಟ್ಟಿ – ಬದುಕಿಗಾಗಿ ಬಳಕೆ ಯಾಗುವ ಸಾಹಿತ್ಯವೆನಿಸುತ್ತದೆ. ಅದಕ್ಕಾಗಿ ಅದರಲ್ಲಿ ಬದುಕಿನಂತಹ ನೈಸರ್ಗಿಕ ಗುಣಗಳಿರುವುದು ಸಹಜವಾಗಿದೆ.

ಗ್ರಾಮವಾಸಿ ನಿರಕ್ಷರಿಗಳ ಸೃಷ್ಟಿ :

ಜನಪದಕಾವ್ಯವು ಮುಖ್ಯವಾಗಿ ಗ್ರಾಮವಾಸಿಗಳ ಕೊಡುಗೆ. ಹೀಗಾಗಿ ಜನಪದ ಸಾಹಿತ್ಯದ ಜನನ ಸ್ಥಳವೆಂದರೆ ಹಳ್ಳಿಗಾಡು ಎನ್ನುವದರಲ್ಲಿ ಎರಡುಮಾತಿಲ್ಲ. ಶಿಷ್ಟಸಾಹಿತ್ಯ ಉಗಮವಾಗುವುದು ನಗರಪ್ರದೇಶಗಳಲ್ಲಿ. ಅದಕ್ಕಾಗಿ ಗ್ರಾಮೀಣ ಸಂಸ್ಕೃತಿಯನ್ನು ಜನಪದ ಸಾಹಿತ್ಯ ಪ್ರತಿನಿಧಿಸುತ್ತದೆ. ಭಾರತೀಯ ಸಂದರ್ಭವನ್ನು ಗಮನಿಸಿದರೆ, ಬಹುತೇಕ ಹಳ್ಳಿಯ ಜನ ನಿರಕ್ಷರಿಗಳು. ಅಲ್ಪ ಶಿಕ್ಷಣಪಡೆದವನೂ ಹಳ್ಳಿಗಳ ವಾತಾವರಣದಲ್ಲಿ ಅನಕ್ಷರರಲ್ಲಿಯೇ ಬೆರೆತುಹೋಗುತ್ತಾನೆ. ಜನಪದಕಾವ್ಯ ಇಂತಹ ನಿರಕ್ಷರಿಗಳಿಂದ ಸೃಜಿಸಲ್ಪಟ್ಟದ್ದು. ಕಾವ್ಯ ನಿರ್ಮಾಣವಾಗುವುದು ಪ್ರತಿಭಾವಂತರಿಂದ. ಓದಿನ ಬಲ ಇಲ್ಲದೆ ರಚನೆಗೊಳ್ಳುವ ಕಾವ್ಯ – ಬದುಕಿನ ಬಲವನ್ನೇ ಹೊಂದಿರುತ್ತದೆ. ಈ ಕಾರಣವಾಗಿ ಇಂತಹ ಕಾವ್ಯ ಸಾಮಾನ್ಯರ ಬದುಕನ್ನು ಪ್ರತಿನಿಧಿಸುತ್ತದೆ, ಸ್ಪಂದಿಸುತ್ತದೆ.

ಸಮಷ್ಠೀ ಪ್ರಜ್ಞೆ :

ಜನಪದ ಸಾಹಿತ್ಯದಲ್ಲಿ ಸಮಷ್ಠೀ ಪ್ರಜ್ಞೆ ಬಹುಮಹತ್ವದ ಸಂಗತಿ. ಇಲ್ಲಿ ತೋಡಿಕೊಳ್ಳು ವುದು ಕವಿಯ ವೈಯಕ್ತಿಕ ಅನುಭವವಾಗಿರದೆ, ಸಾರ್ವಜನಿಕರ ಅನುಭವವೇ ಅಲ್ಲಿ ಹರಿದು ಬಂದಿರುತ್ತದೆ. ಆದರೆ ಶಿಷ್ಟಕಾವ್ಯದಲ್ಲಿ ಬರುವುದು ಒಬ್ಬನ ವೈಯಕ್ತಿಕ ಮೂಸೆಯಲ್ಲಿ ಗಟ್ಟಿಗೊಂಡ ಅನುಭವ. ಅವನ ವೈಯಕ್ತಿಕ ಮುದ್ರೆಯ ಹಿಂದೆ ಸಾರ್ವತ್ರಿಕ ಅನುಭವವಿರುತ್ತದೆ. ಅಥವಾ ಹಾಗೆ ಗಮನಿಸಬೇಕಾಗುತ್ತದೆ. ಜನಪದಕಾವ್ಯ ಮೂರ್ತರೂಪ ಪಡೆಯುವಲ್ಲಿ ಸಮಷ್ಟೀ ಅನುಭವ ಮುಂದಾಗಿ, ವೈಯಕ್ತಿಕತೆ ಹಿಂದಾಗಿರುತ್ತದೆ. ಜನಪದ ಸಾಹಿತ್ಯದ ಒಂದು ಸಣ್ಣಗಾದೆ, ಒಂದು ತ್ರಿಪದಿ, ಒಂದು ಕಥೆ – ಹುಟ್ಟಿಕೊಳ್ಳುವುದೂ ಒಬ್ಬನಿಂದಲೇ. ಆದರೆ ಮುಖ್ಯವಾಗಿ ಆತ ಗ್ರಾಮಾಂತರ ಪ್ರದೇಶದ ಸಹಕಾರ ಬಾಳ್ವೆ ಬದುಕುತ್ತಿರುವುದರಿಂದ ಅವನ ನೋವು – ನಲಿವುಗಳು ವೈಯಕ್ತಿಕ ಮಟ್ಟದಲ್ಲಿ ಅಭಿವ್ಯಕ್ತಿಗೊಳ್ಳದೆ ಅವು ಜನಸಾಮಾನ್ಯರ ನೋವು – ನಲಿವಿನ ರೂಪದಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಹೀಗಾಗಿ ಜನಪದಕಾವ್ಯ (ಸಾಹಿತ್ಯ) ಹೆಚ್ಚು ಸಾರ್ವಜನಿಕವಾಗಿರುತ್ತದೆ. ಅದಕ್ಕಾಗಿಯೇ ಇದನ್ನು ಸಮಷ್ಠೀಪ್ರಜ್ಞೆಯ ಕಾವ್ಯ ಎನ್ನುವುದು.

ಅನಾಮಧೇಯತೆ :

ಲೇಖಕನ ಮುದ್ರೆ ಇರದ ಅನಾಮಧೇಯತೆಜನಪದ ಸಾಹಿತ್ಯದ ಬಹುದೊಡ್ಡ ಗುಣ. ಜನಪದ ಕಾವ್ಯದಲ್ಲಿ ಹೆಣ್ಣು ಮಕ್ಕಳ ಸೃಷ್ಟಿಯೇ ಜಾಸ್ತಿಯಾಗಿದೆ. ಇದಂತೂ ಸಂಪೂರ್ಣ ವಾಗಿ ಅನಾಮಧೇಯವಾಗಿದೆ. ಭಾರತೀಯ ಸಂದರ್ಭದಲ್ಲಿ ನಮ್ಮ ಹೆಣ್ಣುಮಕ್ಕಳ ಹೆಸರು ಕೂಡ ಇನ್ನೊಬ್ಬರ ಬಾಯಿಂದ ಬರಬಾರದು ಎಂಬ ಭಾವನೆ ನಮ್ಮದು. ಜೊತೆಗೆ ಕೀರ್ತಿಯ ಹುಚ್ಚು ಜನಪದರಿಗೆ ಕಡಿಮೆ. ಗಂಡುಮಕ್ಕಳ ಜನಪದ ಸಾಹಿತ್ಯವೂ ಅನಾಮಧೇಯವೇ. ಆದರೆ ಅಲ್ಪಮಟ್ಟಿಗೆ ಅಕ್ಷರಜ್ಞಾನವುಳ್ಳ ಕವಿಗಳು ಇತ್ತೀಚೆಗೆ ನಿರ್ಮಿಸುತ್ತಿರುವ – ದೊಡ್ಟಾಟ, ಸಣ್ಣಾಟ, ಗೀಗೀ, ಭಜನೆ (ತತ್ವಪದಗಳು)ಹಾಗೂ ಮೋಹರಂ – ಈ ಪ್ರಕಾರಗಳಲ್ಲಿ ಮಾತ್ರ ಹಾಡುಗಾರರ ಮುದ್ರೆ ಇರುವುದನ್ನು ನಾವು ಗಮನಿಸುತ್ತೇವೆ. ಅಲ್ಪಮಟ್ಟಿನ ಅಕ್ಷರ ಜ್ಞಾನವಿದ್ದವರಿಗೆ ಅಕ್ಷರಜ್ಞಾನವೊಂದು ಅನುಕೂಲಸಾಧನವಾಗಿ ಮಾರ್ಪಡುತ್ತದೆ.