ನಿರಂತರವಾದ ಬದಲಾವಣೆ:

ಬಹುತೇಕ ಅನಾಮಧೇಯವಾದ ಜನಪದಕಾವ್ಯದ ಬಗೆಗೆ ಜನಪದರಿಗೆ ಮೊದಲಿಂದ ಲೂ ಪರಕೀಯ ಭಾವನೆ ಇರಲಾರದು. ಇದರಿಂದಾಗಿ ಜನಸಾಮಾನ್ಯರು ಜನಪದ ಸಾಹಿತ್ಯದ ಯಾವುದೇ ಒಂದು ತುಕಡಿಯನ್ನು ಇದು ಪರಕೀಯವೆಂದು ಭಾವಿಸುವುದಿಲ್ಲ. ಅದು ತನ್ನದೆಂಬ ಭಾವ ಪ್ರತಿಯೊಬ್ಬನಲ್ಲೂ ಇರುವುದರಿಂದ ತನ್ನ ಭಾಷೆ, ಸಂಸ್ಕೃತಿಗೆ ತಕ್ಕಂತೆ ಅಲ್ಪಬದಲಾ ವಣೆಯ ಹಕ್ಕನ್ನು ಯಾವುದೇ ಹಿಂಜರಿಕೆಯಿಲ್ಲದೆ ಚಲಾಯಿಸುತ್ತಾರೆ. ಇಂತಹ ಬದಲಾವಣೆ ಗಳಿಗೆ ಜನಪದ ಸಾಹಿತ್ಯದ ರೂಪಗಳಲ್ಲೂ ಅವಕಾಶವಿರುತ್ತದೆ. ಉದಾಹರಣೆಗೆ ಮದುವೆಯ ಸಂದರ್ಭದಲ್ಲಿ ಎಣ್ಣೆ ಹಚ್ಚುವ ಹಾಡನ್ನು ಗಮನಿಸಬಹುದು. ಅಲ್ಲಿ ಮದುಮಕ್ಕಳ ಹೆಸರು ಗಳನ್ನು ಸೇರಿಸಿಕೊಳ್ಳಲು ಅವಕಾಶವಿರುತ್ತದೆ.

ಕೆಸರಿಲ್ಲದಂಗಳಕ ಕೆಸರ್ಯಾಕ ಆಗೇವ
ಹೆಸರೀಗೆ ದೊಡ್ಡವರ ಮಗ ಮಿಂದ ಹರ ಹರ ನಮ್ಮ ಶಿವಗ
ಹೆಸರೀಗೆ ದೊಡ್ಡವರ ಮಗ ಮಿಂದ ಅಣ್ಣಪ್ಪ
ಹಸರ ಚತ್ತರಗಿ ನೆರಳೀಗೆಹರ ಹರ ನಮ್ಮ ಶಿವಗ

ಗಲ್ಲೆಂಬು ಹರಿವ್ಯಾಗ ಗಿಲ್ಲೆಂಬು ಮಗಿ ಹಾಕಿ
ನಿಲ್ಲದಲೆ ನೀರ ಬೆರಸ್ಯಾಳಹರ ಹರ ನಮ್ಮ ಶಿವಗ
ನಿಲ್ಲದಲೆ ನೀರ ಬೆರಸ್ಯಾಳ ಶರಣಮ್ಮ
ಪಿಲ್ಲಿ ನೀರಾಗ ಹೊಳದಾವಹರ ಹರ ನಮ್ಮ ಶಿವಗ

ಮದುವೆ ಯಾರ ಅಂಗಳದಲ್ಲಿ ನಡೆದಿರುತ್ತದೋ ಯಾರದು ನಡೆದಿರುತ್ತದೋ ಆ ಮದುಮಕ್ಕಳ, ಅವರ ತಂದೆ ತಾಯಿಗಳ, ಅಕ್ಕತಂಗಿಯರ ಹೆಸರುಗಳು ಅಲ್ಲಿ ಪ್ರಸ್ತಾಪವಾಗು ತ್ತಲೇ ಇರುತ್ತವೆ. ಹೀಗೆಯೇ ಕುಟ್ಟುವ, ಬೀಸುವ, ಗೂಡು ಮುರಿಯುವ ಯಾವುದೇ ಹಾಡಿನಲ್ಲಿ ಹೆಸರು ಸೇರಿಸುವ ಅವಕಾಶವಿದ್ದಾಗಲೆಲ್ಲ ಸಂಬಂಧಿಸಿದವರ ಹೆಸರುಗಳು ಅಲ್ಲಿ ಪ್ರಸ್ತಾಪಿಸಲ್ಪಡು ತ್ತವೆ. ಲಾಲಿಗಳಲ್ಲಿ ಕೂಸಿನ ಹೆಸರುಗಳನ್ನು ಬದಲಾಯಿಸಿಕೊಳ್ಳಲು ಅನುಕೂಲ ವಿರುತ್ತದೆ.

ಹಾಲ ಬೇಡ್ಯತ್ತಾನ ಕೋಲಬೇಡಿ ಕುಣದಾನ
ಮಸರ ಬೇಡಿ ಕೆಸರ ತುಳದಾನ ಸಂಗಣ್ಣನ
ಕುಸಲದ ಗೆಜ್ಜಿ ಕೆಸರಾಗ
ಯಾತಕಳುತಾನೆಂದು ಎಲ್ಲಾರು ಕೇಳ್ಯಾರ
ಕಾಯದ ಹಾಲ ಕೆನಿ ಬೇಡಿ ಕಂದಯ್ಯ
ಕಾಡಿ ಕೈಬಿಟ್ಟು ಇಳಿಯಾನ

ಈ ಮೇಲಿನ ನುಡಿಗಳ ಎರಡನೇ ಸಾಲಿನ ಕೊನೆಗಿರುವ ಸಂಗಣ್ಣನ, ಕಂದಯ್ಯ ಎಂಬ ಪದಗಳ ಬದಲಾಗಿ ತೊಟ್ಟಿಲಲ್ಲಿ ಹಟಮಾಡುತ್ತ ಮಲಗಿರುವ ಯಾವುದೇ ಮಗುವಿನ ಹೆಸರನ್ನು ಸೇರಿಸಿ ಹಾಡಬಹುದಾಗಿದೆ. ಲಾಲಿಗಳ ರಚನೆಯಲ್ಲಿಯೇ ಈ ಅವಕಾಶವಿದೆ. ಗಂಡ ಹೆಂಡತಿಯರ ಹೆಸರು ಹೇಳಲು ಪ್ರಯೋಗವಾಗುವ ಒಡಪುಗಳಂತೂ ಆಯಾ ಹೆಣ್ಣಿನ, ಗಂಡಿನ ಹೆಸರು ಸೇರಿಸಿ ಹೇಳುವ ಪ್ರಕಾವೇ ಆಗಿದೆ.

ಬೆಳದಿಂಗಳ ಬೆಳಕ
ಕಲ್ಲಸಕ್ಕರಿ ಹಳಕ
ನಕ್ಷತ್ರ ಮ್ಯಾಲ ಕುಂತು
ಅಕ್ಷರ ಬರಿತಾರ…….

ಅಂಗಳತುಂಬ ಆಣಿಕಲ್ಲ
ಗಂಗಾಳ ತುಂಬ ಮಲ್ಲಿಗಿ ಹೂ
ಅಂಗಳದಾಗ ನಿಂತಕಾರ
ಗಂಗಾ ಅಂತ ಕರೀತಾನ…..

ಚುಕ್ಕೆಗಳಿರುವ ಸ್ಥಳಗಳಲ್ಲಿ ಹೆಣ್ಣುಮಕ್ಕಳು ತಮ್ಮ ತಮ್ಮ ಗಂಡಂದಿರ ಹೆಸರುಗಳನ್ನು ಹಾಕಿಕೊಳ್ಳುತ್ತಾರೆ. ಒಂದು ಊರನ್ನು ಬಣ್ಣಿಸುವ ಹಾಡಿನಲ್ಲಿ, ಯಾವುದೇ ಊರಿನ ವ್ಯಕ್ತಿಯು ತನ್ನೂರಿನ ಹೆಸರನ್ನು ಸೇರಿಸಿ ಹಾಡಬಹುದಾಗಿದೆ. ಅಲ್ಲದೆ ಜನಪದಕಾವ್ಯದ ಯಾವುದೇ ಭಾಗವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಅವಕಾಶ ಜನಪದರಿಗಿದೆ. ಜೊತೆಗೆ ಅವರವರ ಪ್ರತಿಭೆ, ಭಾಷಾ ಸಮೃದ್ಧಿ, ಸಾಂಸ್ಕೃತಿಕ ಹಿನ್ನೆಲೆ, ಪ್ರಾದೇಶಿಕ ಗುಣ, ಸ್ಮರಣ ಶಕ್ತಿ, ಸಂದರ್ಭ – ಈ ಮತ್ತು ಇಂತಹ ಅನೇಕ ಅಂಶಗಳು ಕಾರಣವಾಗಿ ನಾನಾ ಬಗೆಯ ಭಿನ್ನಪಾಠಗಳು ಜನಪದ ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ನಮಗೆ ದೊರೆಯುತ್ತವೆ.

ಕಥಾ ಪ್ರಕಾರವಂತೂ ಹೇಳುವವನ ಸೃಷ್ಟಿಯೇ ಆಗಿದ್ದು, ಅದೆಲ್ಲ ಅವನ ಸಂಸ್ಕೃತಿ, ವ್ಯಕ್ತಿತ್ವದ ಮೂಲಕವೇ ಹಾಯ್ದು ಬರುತ್ತದೆ. ಒಬ್ಬ ಕಥೆಗಾರ ಬದುಕಿರುವ ಕಾಲದ, ಸ್ಥಳೀಯ ಸಂಸ್ಕೃತಿಯ, ಮತ್ತು ಅವನ ವೈಯಕ್ತಿಕ ಅನಿಸಿಕೆಯ ಅನೇಕ ಅಂಶಗಳು ಅಲ್ಲೆಲ್ಲ ಕಾಣಸಿಗುತ್ತವೆ. ಈ ಸೃಜಿಸುವ ಮತ್ತು ಬಳಸುವ ಸ್ವಾತಂತ್ರ್ಯದಿಂದಾಗಿಯೇ ಜನಪದ ಸಾಹಿತ್ಯ ಇವತ್ತಿಗೂ ಉಳಿದುಕೊಂಡು ಬಂದಿದೆ ಮತ್ತು ಶಿಷ್ಟಸಾಹಿತ್ಯಕ್ಕಿಂತ ಭಿನ್ನವಾದ ಅಸ್ತಿತ್ವವನ್ನು ಹೊಂದಿದೆ.

ಪುನರಾವರ್ತನೆ:

ಪುನರಾವರ್ತನೆ ಜನಪದ ಕಾವ್ಯದ ಮುಖ್ಯ ಲಕ್ಷಣಗಳಲ್ಲಿ ಒಂದು. ಸೊಲ್ಲುಗಳ ಪುನರಾ ವರ್ತನೆಯಾಗುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಹೀಗೆಯೇ ಕೆಲ ಸಾಲುಗಳ, ಸಂಗತಿಗಳ ಪುನರಾವರ್ತನೆಗಳು ಜನಪದ ಕಾವ್ಯದ ರಚನೆಯಲ್ಲಿ ಸಹಜವಾಗಿ ನುಸುಳಿಕೊಂಡಿ ರುತ್ತವೆ. ಹಾಡುವ ಕಾವ್ಯದಲ್ಲಿ ಪುನರಾವರ್ತನೆ ಒಂದು ದೋಷವಲ್ಲ. ಅದು ಬೇಸರ ತರಿಸುವ ಸಂಗತಿಯಾಗಿರದೆ, ಬದಲಾಗಿ ಪ್ರತಿಸಲದ ಪುನರಾವರ್ತನೆಯು ಕಿವಿಗೆ ಕೇಳಲು ಹಿತವೆನಿಸುತ್ತದೆ. ಕಥನಕಾವ್ಯಗಳಲ್ಲಾದರೆ ಒಂದೊಂದು ಭಾಗಗಳೇ ಪುನರಾವರ್ತನೆಗೊಳ್ಳು ತ್ತವೆ. ಉದಾ: ಬಾಣಂತನದ ಸಂದರ್ಭದಲ್ಲಿ ಸೂಲಗಿತ್ತಿ ಸಂಗವ್ವನ ಪ್ರಸಂಗ ಪುನರಾವರ್ತನೆ ಆಗುತ್ತಿರುತ್ತದೆ. ದೀರ್ಘಕಾವ್ಯಗಳು, ಅಂದರೆ ಈಚೆಗೆ ಮಹಾಕಾವ್ಯಗಳೆಂಬ ಹೆಸರಿನ ಮೇಲೆ ಪ್ರಕಟಗೊಂಡ ಕಾವ್ಯಗಳಲ್ಲಿ ಮೇಲಿಂದ ಮೇಲೆ ಕೆಲ ಸಾಲುಗಳನ್ನು, ಸೊಲ್ಲುಗಳನ್ನು, ಪ್ರಾರಂಭದ ನುಡಿಗಳನ್ನು – ಪುನರಾವರ್ತನೆ ಮಾಡಲಾಗುತ್ತದೆ. ‘ಜನಪದ ಹಾಲುಮತ ಮಹಾಕಾವ್ಯ’ದಲ್ಲಿ ಯ ಸಾಲುಗಳು – ಅರ್ಧದಷ್ಟು ಪುನರಾವರ್ತನೆ ಹೊಂದಿ ಇನ್ನರ್ಧ ಸಾಲನ್ನು ಹೊಸದಾಗಿ ಸೇರಿಸಿಕೊಳ್ಳುತ್ತ, ಕಥೆಯನ್ನು ನೇಯುತ್ತ ಸಾಗುತ್ತವೆ :

ಬಾರೋ ಬಾರೋ ಬಾಬಣ್ಣ ಮುಂದಿನ ಸುದ್ದಿ ಹೇಳಯ್ಯ
ಬಂದ ಕಾರಣ ಹೇಳಪ್ಪ ಹೋಗ ಕಾರಣ ಹೇಳಪ್ಪ
ಬಳಗಾರ ಬಾಬಣ್ಣನೆ ಒಳ್ಳೆದು ಒಳ್ಳೆದಂದಾನ
ಒಳ್ಳೆದು ಒಳ್ಳೆದು ಅಂದಾನೆ ಮಂದನಗಿರಿಯ ಒಳಗೇನ
ಮಂದನಗಿರಿಯ ಒಳಗೇನ ಬಳಿಯಾ ವ್ಯಾಪಾರಕ ಹೋಗಿದ್ದ
ಏನಮ್ಮ ತಂಗಿ ಸೂರವ್ವ ತಾಯೇನು ಆಡುತಾಳೇನ
ದೇವಿಧರ್ಮುರ ಮಗಳೇನ ತಾಯೇನು ಹೇಳುತಾಳೇನ
ದೇವರ ಕೊಟ್ಟನಂದಾಳೆ ಸಂಬ ಕೊಟ್ಟನಂದಾಳ
ಸಂಬ ಕೊಟ್ಟನಂದಾಳೆ ಶಿವನ ಕೊಟ್ಟಾನಂದಾಳ
ಏನಮ್ಮ ತಂಗಿ ಸೂರವ್ವ ಊರ ಸುದ್ದಿ ಕೇಳ್ಯಾಳ (ಜ.ಹಾ.ಮ.ಕಾ.೧೩೭ – ೧೩೮)

ಜನಪದ ಕಾವ್ಯ ಹಾಡುವಾಗ ಎಲ್ಲಿ ಹಿಮ್ಮೇಳ ಮುಮ್ಮೇಳಗಳಿರುತ್ತವೆಯೋ ಅಲ್ಲಿಯ ಪ್ರಯೋಗ ಪುನರಾವರ್ತನೆಯಿಂದಲೇ ಕೂಡಿರುತ್ತದೆ. ಮುಮ್ಮೇಳದವರು ಹಾಡಿದ ನುಡಿಯ ಸ್ವಲ್ಪಭಾಗವನ್ನು ಹಿಮ್ಮೇಳ ಪುನರಾವರ್ತಿಸುತ್ತ ಹೋಗುವ ಪದ್ಧತಿ ಪ್ರಪಂಚದ ಎಲ್ಲ ಕಡೆಯ ಹಾಡುಗಳಿಗೂ ಇದೆ. ಈ ನಾನಾ ಬಗೆಯ ಪುನರಾವರ್ತನೆಗಳನ್ನೇ ಗಮನಿಸಿ ಪ್ಯಾರಿ – ಲಾರ್ಡ ಅವರು ‘ವೌಖಿಕ ಸೂತ್ರಾತ್ಮಕ ಸಿದ್ಧಾಂತ’ವನ್ನ್ನು ರೂಪಿಸಿದ್ದಾರೆ. ಇಲ್ಲಿಯ ಮುಖ್ಯ ಶೋಧವೆಂದರೆ – ಹಿಮ್ಮೇಳವು ಸೊಲ್ಲನ್ನು ಅಥವಾ ನುಡಿಯ ಭಾಗಗಳನ್ನು ಪುನರಾರ್ವರ್ತನೆ ಮಾಡುವಾಗ ಮುಖ್ಯ ಹಾಡುಗಾರನಿಗೆ ಮುಂದಿನ ಸಾಲುಗಳನ್ನು ಸೃಜಿಸಿಕೊಳ್ಳಲು ಅವಕಾಶ ದೊರಕುತ್ತದೆ ಎಂಬುದು. ಪುನರಾವರ್ತನೆಯ ಕಾಲವೆಂದರೆ ಅದು ಹಾಡಿನ ಮುಂದಿನ ಸಾಲುಗಳ ನಿರ್ಮಾಣದ ಕಾಲ ಎನ್ನುತ್ತಾರೆ ಪ್ಯಾರಿ – ಲಾರ್ಡ. ಅದಷ್ಟೇ ಅಲ್ಲ, ಮುಮ್ಮೇಳದ ವರಿಗೆ ದಣಿವು ಆರಿಸಿಕೊಳ್ಳಲೂ ಅಲ್ಲಿ ಅವಕಾಶವಿರುವದನ್ನು ನಾವು ಗಮನಿಸಬೇಕು. ಜೊತೆಗೆ ಕೇಳುಗರಿಗೆ ಬೇಸರ ತಪ್ಪಿಸುವ ಬದಲಾವಣೆಯ ಅನುಭವಗಳಾಗಿಯೂ ಅವು ಕೆಲಸ ಮಾಡುತ್ತವೆ ಎಂಬುದನ್ನು ಸೇರಿಸಿಕೊಳ್ಳಬೇಕು.

ಜನಪದಕಾವ್ಯವು ಮೂರ್ತ ಕಲ್ಪನೆಯ ಕಾವ್ಯ:

ಜನಪದ ಕಾವ್ಯ ಮೂ ರ್ತ ಕಲ್ಪನೆಯ ಕಾವ್ಯ. ಅದು ಅಮೂರ್ತ ಕಲ್ಪನೆಯ ಕಾವ್ಯವಲ್ಲ. ಅದರ ಪ್ರತಿಯೊಂದು ಸೃಷ್ಟಿಯಲ್ಲೂ ಒಂದು ದೃಶ್ಯಕಲ್ಪನೆಯನ್ನು ಕಾಣಬಹುದಾಗಿದೆ.

ತೊಟ್ಟಿಲ ಹೊತಗೊಂಡು ತೌರುಬಣ್ಣ ಉಟಗೊಂಡು
ಅಪ್ಪ ಕೊಟ್ಟೆಮ್ಮಿ ಹೊಡಕೊಂಡು ಬಾಲಿ
ತಿಟ್ಹತ್ತಿ ತಿರುಗಿ ನೋಡ್ಯಾಳ

ಈ ಕಾವ್ಯದಲ್ಲಿ ಚೊಚ್ಚಿಲ ಬಾಣಂತನ ಮುಗಿಸಿಕೊಂಡು ಕೂಸು, ತೊಟ್ಟಿಲು, ಎಮ್ಮೆಗಳ ಜೊತೆಗೆ, ತೌರುಬಣ್ಣ ತೊಟ್ಟ ತಾಯಿ – ಸರ್ವಬಳಗದೊಂದಿಗೆ ಊರನ್ನು ದಾಟಿದ, ತಾನು ಮರೆಯಾಗುವವರೆಗೂ ನೋಡುತ್ತ ನಿಂತ ತವರಿನ ಬಳಗಕ್ಕೆ, ತೌರಿಗೆ – ಇನ್ನೇನು ತೆವರೇರಿ ದಾಕೆ ಅದನ್ನು ಇಳಿದರೆ, ಮರೆಯಾಗಿಹೋಗುವ ಕ್ಷಣದಲ್ಲಿ – ತನ್ನೆಲ್ಲ ಕರುಳಿನ ಸಂಬಂಧವನ್ನು ನೆನೆದು ಆ ಕ್ಷಣದಲ್ಲಿ – ತಿರುಗಿ ನೋಡುತ್ತಾಳೆ. ಇದು ಕರುಳಬಳ್ಳಿಯ ಎಳೆಯನ್ನು ತನ್ನ ಜೊತೆಗೆ ಎಳದೊಯ್ಯುವ ಒಂದು ಅಂತಃಕರುಣದ ಎಳೆಯ ಚಿತ್ರವನ್ನು ಬಿಡಿಸಿ ನಿಲ್ಲಿಸುತ್ತ್ತದೆ. ಇಂತಹ ದೃಶ್ಯ ಗುಣವೇ ಜನಪದ ಕಾವ್ಯದ ಮುಖ್ಯಲಕ್ಷಣ. ಅಮೂರ್ತಭಾವನೆಗಳಿಗೆ ಇಲ್ಲಿ ಹೆಚ್ಚಿನ ಎಡೆಯಿಲ್ಲ. ಆದರೆ ಎಲ್ಲಿ ಸಹೃದಯರ ಮುಂದೆ ಕಾವ್ಯ ಪ್ರಯೋಗಗೊಳ್ಳುವುದಿಲ್ಲವೋ ಅಂಥಲ್ಲಿ ಅಪರೂಪಕ್ಕೆ ಅಮೂರ್ತಕಾವ್ಯ ಹುಟ್ಟಿಕೊಳ್ಳುವುದನ್ನು ಗಮನಿಸುತ್ತೇವೆ. ಅಂತಹ ಸಹೃದಯರ ಹಾಜರಾತಿ ಇಲ್ಲದ ಸಂಧರ್ಭಗಳೆಂದರೆ – ಬೀಸುವ (ಕುಟ್ಟುವ), ಹಂತಿ (ಮಟ್ಟಿ, ಬೊಲೋರಿ), ಲಾಲಿ ಮತ್ತು ತತ್ವಪದಗಳನ್ನು ಏಕತಾರಿ ಹಿಡಿದು ಒಬ್ಬನೇ ಹಾಡಿಕೊಳ್ಳುವಾಗ ಅಪರೂಪಕ್ಕೆ ಸಹೃದಯರ ಗೈರುಹಾಜರಿ ಇದೆ. ಇಂಥಲ್ಲಿ ಮಾತ್ರ ಅಪವಾದವಾಗಿ ಅಮೂರ್ತ ಭಾವನೆಗಳನ್ನು ದಟ್ಟವಾಗಿ ಹೊತ್ತ ಕಾವ್ಯ ಸೃಷ್ಟಿಯಾಗುತ್ತದೆ. ಉದಾಹರಣೆಗೆ :

ಕಂದನ ಕುಡು ಶಿವನೆ ಬಂಧನ ಬಡಲಾರೆ
ಹಂಗೀನ ಬಾನ ಉಣಲಾರೆ ಮರ್ತ್ಯದಾಗ
ಬಂಜೆಂಬ ಶಬುದ ಹೊರಲಾರೆ

ಪುನರ್ಸೃಷ್ಟಿ :

‘ಪುನರ್‌ಸೃಷ್ಟಿ’ಎಂಬುದು ಜನಪದಕಾವ್ಯದ ಮುಖ್ಯ ಗುಣ. ಪುನರ್‌ಸೃಷ್ಟಿ ಎಂದರೆ ಪುನರ್‌ಜನ್ಮವಲ್ಲ. ಜನಪದ ಕಾವ್ಯ ಸತ್ತು ಹುಟ್ಟುವುದಿಲ್ಲ. ಅದು ತನ್ನ ಜೀವಂತಿಕೆಯಲ್ಲಿ ಬದಲಾ ವಣೆಗಳನ್ನು ಕಾಣುತ್ತಿರುತ್ತದೆ. ನಿದ್ದೆಗೊಮ್ಮೆ ನಿತ್ಯ ಮರಣ ಎದ್ದಾಗ ನವೀನ ಜನನ ಎಂಬ ಮಾತಿನಂತೆ ಜನಪದಕಾವ್ಯ ಪುನರ್‌ಸೃಷ್ಟಿಯ ಅರ್ಥವನ್ನು ಧ್ವನಿಸುತ್ತದೆ. ಈ ಕ್ರಿಯೆ ಜರುಗುವುದು – ಕಾವ್ಯದ ಪ್ರತಿಬಾರಿಯ ಹಾಡುಗಾರಿಕೆಯಲ್ಲಿ. ಅದೇ ವ್ಯಕ್ತಿ ಯ ಅಥವಾ ಬೇರೆ ವ್ಯಕ್ತಿಯ – ಪ್ರತಿಬಾರಿಯ ಹಾಡುಗಾರಿಕೆಯ ಪ್ರಯೋಗದ ಭಿನ್ನತೆಯನ್ನೇ ‘ಪುನರ್‌ಸೃಷ್ಟಿ’ ಎಂದು ಹೇಳಲಾಗುತ್ತದೆ. ಪ್ರತಿಬಾರಿ ಹಾಡು ಪ್ರಯೋಗವಾಗುವಾಗ ಅದರ ಧಾಟಿ, ಭಾಷೆ, ವಸ್ತು, ಸಂದರ್ಭ, ದೃಶ್ಯ, ಹಾಡುಗಾರಿಕೆಯ ರಾಗ – ತಾನ ಇವೆಲ್ಲವುಗಳು, ಅಂದರೆ ಆ ಹಾಡಿನ ಪೂರ್ವಪ್ರಯೋಗದ ಒಟ್ಟು ಮೊತ್ತದಲ್ಲಿ ಕಾಣಿಸುವ ಬದಲಾವಣೆಗಳು ಪುನರ್‌ಸೃಷ್ಟಿಯ ಕುರುಹುಗಳು. ಒಟ್ಟಾರೆ ಜನಪದ ಸಾಹಿತ್ಯದ ಯಾವುದೇ ಪ್ರಕಾರದ ಪ್ರತಿಬಾರಿಯ ಪ್ರಯೋಗ ಹೊಸದಾಗಿರುತ್ತದೆ. ಅದು ಕೇವಲ ಬಾಯಿಪಾಠ ಒಪ್ಪಿಸುವಂತಹ ಯಾಂತ್ರಿಕ ಕ್ರಿಯೆಯಲ್ಲ, ಅದೊಂದು ಸೃಷ್ಟಿಕ್ರಿಯೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ.

ಪ್ರಸರಣ :

ಪ್ರಸರಣವು ಜನಪದಕಾವ್ಯದ ಜೀವಂತಿಕೆಯ ಲಕ್ಷಣ. ಅದು ನಿರಂತರ ವಾಗಿ ಪ್ರಸರಣ ಹೊಂದುತ್ತಿರುತ್ತದೆ. ಈ ಕ್ರಿಯೆಯಿಂದಾಗಿಯೇ ಅದರಲ್ಲಿ ಅನೇಕ ಬಗೆಯ ಬದಲಾವಣೆ ಗಳುಂಟಾಗುವುದು. ಜನಪದಸಾಹಿತ್ಯದ ಯಾವುದೇ ಒಂದು ತುಕಡಿಯು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಬೆಳೆಸಿದಾಗ ಮತ್ತು ಭಿನ್ನ ಭಿನ್ನ ಜನಾಂಗಗಳಲ್ಲಿ ಪ್ರಯೋಗಗೊಳ್ಳುವಾಗ ಮುಖ್ಯವಾಗಿ ಭಾಷೆ ಮತ್ತು ವಸ್ತುವಿನಲ್ಲಿ ಅನೇಕ ವ್ಯತ್ಯಾಸಗಳನ್ನು ಪಡೆಯುತ್ತದೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಾಡು ಪ್ರಯಾಣ ಬೆಳೆಸಿ, ಪ್ರಯೋಗಗೊಳ್ಳುವಾಗ ಹೊಂದುವ ವ್ಯಾಪಕ ಪುನರ್‌ಸೃಷ್ಟಿಯ ಕ್ರಿಯೆಯಿಂದ ಆಯಾ ಪ್ರದೇಶದ ಪ್ರಾದೇಶಿಕ ಗುಣಗಳು ಸೇರಿಕೊಳ್ಳುತ್ತವೆ.

ಪ್ರಾದೇಶಿಕ ಬಣ್ಣ :

ಪ್ರಸರಣದ ಪ್ರಕ್ರಿಯೆಯಲ್ಲಿ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನಪದ ಕಾವ್ಯವು ಪ್ರಸರಣಗೊಂಡು, ಹೊಸ ಪ್ರದೇಶದಲ್ಲಿ ಪ್ರಯೋಗಗೊಳ್ಳುವಾಗ (ಪುನರ್‌ಸೃಷ್ಟಿ) ಅದು ತನ್ನಲ್ಲಿ ಅಳವಡಿಸಿಕೊಳ್ಳುವ, ಆ ಹೊಸಪ್ರದೇಶಕ್ಕೆ ಸಂಬಂಧಿಸಿದ ಅಂಶಗಳಿಗೆ ‘ಪ್ರಾದೇಶಿಕ ಅಂಶಗಳು’ ಎನ್ನುವುದು. ಈ ಅಂಶಗಳನ್ನು ಗಮನಿಸಿಯೇ ‘ಪ್ರಾದೇಶಿಕ ಬಣ್ಣ’ (Local Colour) ಎಂಬ ಮಾತು ವಾಡಿಕೆಗೆ ಬಂದಿದೆ. ಅಂದರೆ ಪ್ರಾದೇಶಿಕ ಅಂಶಗಳು ಬದಲಾವಣೆ ಹೊಂದಲು, ಕಾವ್ಯ ಕನಿಷ್ಟಪಕ್ಷ ಒಂದು ಸಾಂಸ್ಕೃತಿಕ ವಲಯದಿಂದ ಇನ್ನೊಂದು ಸಾಂಸ್ಕೃತಿಕ ವಲಯಕ್ಕೆ ಪ್ರಯಾಣ ಬೆಳೆಸಿರಬೇಕಾಗುತ್ತದೆ.

ಹಾದೀಗಿ ಕಲ್ಹಾಕಿ ಹಾಡಿ ಬೀಸಕಿನ್ಯಾರ
ಲಾಲ ಕುಂಕುಮದ ಹೆಣಮಗಳುದ್ಯಾಮವ್ವ
ಹಾಡಿ ಬೀಸ್ಯಾಳ ಅರಿಷಿಣ

ಹಾದಿಗಿ ಕಲ್ಲಾಕಿ ಹಾಡಿ ಬೀಸಾಕಿನ್ಯಾರು
ಲಾಲಕುಂಕುಮದ ಹೆಣಮಗಳಮರಿಯಮ್ಮ
ಹಾಡಿ ಬೀಸ್ಯಾಳ ಅರಿಷಿಣ

ಈ ಮೇಲಿನ ತ್ರಿಪದಿಗಳಲ್ಲಿ ಉಲ್ಲೇಖಗೊಂಡ ದ್ಯಾಮವ್ವ ಮತ್ತು ಮರಿಯಮ್ಮ ದೇವತೆಗಳ ಹೆಸರುಗಳನ್ನು ಗಮನಿಸಬೇಕು. ಆಯಾ ದೇವತೆಗಳು ನೆಲೆಸಿರುವ ಊರುಗಳ ಭಿನ್ನ ಪ್ರಯೋಗ ಗಳು ಇವಾಗಿವೆ. ಸಾಂಸ್ಕೃತಿಕವಾಗಿ ಈ ಹೆಸರುಗಳು ಆಯಾ ದೇವತೆಗಳು ನೆಲೆನಿಂತ ಊರುಗಳಿಗೆ ಅಭಿಮಾನದ ಸಂಗತಿಗಳಾಗಿರುತ್ತವೆ.

‘ಹಂತವರು ಹಂತವರು ಕೂಡಿದರ ಕುಂತಂಗ ನಿಂತಂಗ ಆಗ್ತಾದ’, ‘ಹಂತವರು ಹಂತವರು ಕೂಡಿದರ ಸಂತಿ ಮಾಡ್ದಂಗ ಆಗ್ತಾದ’ ಎಂಬ ಈ ಗಾದೆಗಳಲ್ಲಿಯ ಭಿನ್ನತೆಯನ್ನು ಗಮನಿಸಿ. ಒಂದನೆಯದು ಸ್ನೇಹ ಮತ್ತು ಸ್ವಭಾವ ಗಳನ್ನು ಗುರುತಿಸಿ ಅವರವರ ಸಂಗವನ್ನು ಕುರಿತು ಹೇಳುತ್ತಿದೆ. ಎರಡನೆಯದು ಕೇವಲ ಸಂಗವಷ್ಟೇ ಅಲ್ಲ ಬದಲಾದ ಸಾಂಸ್ಕೃತಿಕ ಸಂದರ್ಭ – ಸಂತೆಯಲ್ಲೂ ಈ ಹೋಲಿಕೆಯ ಸ್ವಭಾವದ ಅವಶ್ಯಕತೆಯನ್ನು ಹೇಳುತ್ತಿದೆ. ಹೀಗೆ ಒಂದು ಸಣ್ಣ ಮಾತು ಕೂಡ ಪ್ರದೇಶ ಬದಲಾದಂತೆ (ಅದರ ವಸ್ತುವಿನಲ್ಲಿ, ಸಂಸ್ಕೃತಿಯಲ್ಲಿ )ಹೇಗೆ ಬದಲಾವಣೆಯಾಗಿದೆ ಎಂಬುದನ್ನು ಗಮನಿಸಬಹುದು.

ಬುಟ್ಟಬುಧುವಾರ ದಿನ ಬುದ್ಧಿವಂತಿ ಮೈಯನೆರದು
ಬರ್ತಾರಿಲ್ಲವ ಕೇಳ ಜೀರಗ ದಂಡಿಯ ಹೇಳ
ದಂಡಿಗ್ಹಚ್ಚಂದ ರತನದ್ಹರಳ ಸೋಬಾನ
ಅತ್ತಿ ಮಾವರ ಮ್ಯಾಲೆ ಅಳಿಯ ಶ್ಯಾನೆವ ಮಾಡಿ
ಉಂಗುರುಡುದಾರ ಬೇಡಿ ಶೆಲ್ಯಾ ಶೆಕುಲಾತಿ ಬೇಡಿ
ಇಷ್ಟೆಲ್ಲ ಬೇಡಿ ಹಟ ಮಾಡೆ ಸೋಬಾನ

ಅತ್ತಿ ಮಾವರು ಕೂಡಿ ಅಳಿಯನ ಸನುಮತಿ ಮಾಡಿ
ಉಂಗುರುಡುದಾರ ಹಾಕಿ ಶಲ್ಯಾ ಶಕುಲಾತಿ ಮಾಡಿ
ಊದಿನ ಕಡ್ಡಿಯ ತರಿಸಿ ಊರೆಲ್ಲ ಹಿಡಿಸಿ ಮಕರಂದ ಸೋಬಾನ

ಅತ್ತಿ ಮಾವರ ಮ್ಯಾಲೆ ಅಳಿಯ ಶ್ಯಾನೆವ ಮಾಡಿ
ಬಂಗಾರ ಕಡೆವ ಬೇಡಿ ಕಂಟಿ ಸರಪುಳಿ ಬೇಡಿ
ಇಷ್ಟೆಲ್ಲ ಬೇಡಿ ಹಟ ಮಾಡೆ ಸೋಬಾನ

ಅತ್ತಿ ಮಾವರು ಕೂಡಿ ಅಳಿಯನ ಸನುಮತಿ ಮಾಡಿ
ಬಂಗಾರ ಕಡೆವ ಹಾಕಿ ಕಂಟಿ ಸರಪುಳಿ ಹಾಕಿ
ಊದಿನ ಕಡ್ಡಿಯ ತರಿಸಿ ಊರೆಲ್ಲ ಹಿಡಿಸಿ ಮಕರಂದ ಸೋಬಾನ
(ಹಾಡಿದವರು : ಶೀಮತಿ ಸುಮಿತ್ರಾದೇವಿ ಅಂಗಡಿ)

ಮೇಲಿನ ಹಾಡು ಬಿಜಾಪುರ – ಬಾಗಲಕೋಟ ಜಿಲ್ಲೆಗಳಲ್ಲಿ ಪ್ರಚಾರದಲ್ಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಪ್ರಚಲಿತದಲ್ಲಿರುವ ಈ ಹಾಡಿನ ಪಾಠವೊಂದು ದೊರಯುತ್ತಿದ್ದು, ಅಲ್ಲಿಯ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ಸಂಗತಿಗಳು ಹೇಗೆ ಬದಲಾಗಿ ನಮೂದಾಗಿವೆ ಎಂಬುದನ್ನು ಗಮನಿಸಬೇಕು :

ಬುಧವಾರ ದಿನದಲ್ಲಿ ಋತುಮತಿ ನೆರೆದ್ಯಾಳೆ
ಅವರೂರಿಗೆ ಅವರು ಬರುತ್ತಾರಿಲ್ಲ ಕೇಳ
ಮಂಟಪಕ ಪಚ್ಚೊ ರತ್ನಾದ್ಹರಳೇ ಕೇಳೇಸೋಬಾನೇ

ಅತ್ತಿಮಾವರು ಬಂದು ಡಾಬು ಸರಪಳಿ ತಂದು
ಇಟ್ಟುಕೊಳ್ಳಿರಪ್ಪ ಎಂದು ಬಂಗಾರ ಬಳಿ ಬಂದು
ಕಂಗೂಣಿ ಚೆಂದ – ಹೊಯ
ಇಷ್ಟಕೆ ಚಂದೆ ಬಾಜುಬಂದೆ ಸೋಬಾನ

ವಾರಿಗೆ ಗೆಳತೀರು ಬಂದು ಕುಂತಾರೆ ಖುಶಿಲಿಂದ
ಮೈನೆರೆತಾಕಿ ಮುಂದೆ
ಊರಾಗಿಳಿರಂಬೆ ಮಕರಂಬೆ ಸೋಬಾನವೆ

ಅತ್ತಿಮಾವನ ಕೂಟ ಅಳಿಯ ಮುನಿಸುಗುಟ್ಟಿ
ಕಂಟಿಕೊಪ್ಪವ ಬೇಡಿ ಕೈಯಲಿ ಬಂಗಾರ ಬೇಡಿ
ಜರತರ ರುಮಾಲ ಬೇಡಿ
ಇಷ್ಟೆಲ್ಲಾ ಬೇಡಿ ಹಟಮಾಡಿ ಸೋಬಾನ

ಅತ್ತಿ ಮಾವರು ಬಂದು ಅಳಿಯಾಗೆ ಸನಮತ ಮಾಡಿ
ಕಂಟಿಕೊಪ್ಪವ ಕೊಟ್ಟು ಕೈಯಲಿ ಬಂಗಾರ ಕೊಟ್ಟು
ಜರತರ ರುಮಾಲು ಸುತ್ತಿ
ಮದನಾರಿ ಎಂಬ ಮರಿಯ ಕುದುರೆ ಸೋಬಾನ (ಬಾ. ಹ.ಏ.ಬ. ಜ. ಗೀ.೧೨೨)

ಈ ಹಾಡು ಇನ್ನೂ ಮುಂದುವರೆಯುತ್ತದೆ. ಉದಾಹರಣೆಗೆ ಇಷ್ಟು ಸಾಕು. ಇಲ್ಲಿಯ ಭಾಷೆಯನ್ನು ಗಮನಿಸಿ, ಬಳಕೆಯಾದ ವಸ್ತ್ರ – ಒಡವೆಗಳನ್ನು ಗಮನಿಸಿ, ಎಲ್ಲವೂ ಬದಲಾಗಿವೆ. ಇದು ಜನಪದ ಕಾವ್ಯವು ಬದಲಾದ ಪ್ರದೇಶದ ಸಂಸ್ಕೃತಿಯನ್ನು ಹೊತ್ತು ನಿಲ್ಲುತ್ತದೆ ಎಂಬುದಕ್ಕೆ ಒಂದು ಉದಾಹರಣೆ.

ಜನಪದ ಕವಿಗಳ ದೃಷ್ಟಿಯಲ್ಲಿ ಜನಪದ ಕಾವ್ಯ :

ಸಕ ಲಕ್ಷಣವು ವಸ್ತುಕಕೆ ವರ್ಣಕಕಿಷ್ಟು
ವಿಕಳವಾದರೂ ದೋಷವಿಲ್ಲ (.ವೈ.)

ರತ್ನಾಕರವರ್ಣಿಯ ಈ ಮಾತನ್ನು ಇಲ್ಲಿ ಅನಿವಾರ್ಯವಾಗಿ ಸ್ಮರಿಸಿಕೊಳ್ಳಬೇಕಾಗಿದೆ. ಭಾರತೀಯ ಕಾವ್ಯಮೀಮಾಂಸಕಾರರು ಶಾಸ್ತ್ರೀಯವಾಗಿ ಕಾವ್ಯದ ಸ್ವರೂಪವನ್ನು ನಿರೂಪಿ ಸುವಂತೆ, ಜನಪದ ಕವಿಗಳು ತಮ್ಮ ಕಾವ್ಯದ ಸ್ವರೂಪದ ಬಗ್ಗೆ ವಿವೇಚನೆ ನಡೆಸಿಲ್ಲ. ಇದನ್ನು ನಾವು ಜನಪದ ಕವಿಗಳಿಂದ ನಿರೀಕ್ಷಿಸುವಂತಿಲ್ಲ. ಏಕೆಂದರೆ ಅವರಿಗೆ ಕಾವ್ಯದ ಅನುಭವ – ಪರಿಚಯವಿದ್ದರೂ ಅದನ್ನು ಶಾಸ್ತ್ರೀಯವಾಗಿ ಹೇಳುವ ರೀತಿ ಮತ್ತೆ ಕಾಣಿಸುವುದು ಶಿಕ್ಷಣವೇತ್ತ ಪಂಡಿತರಲ್ಲಿಯೇ. ಕನ್ನಡದ ಶಿಷ್ಟಕವಿಗಳು ಕೆಲವೊಬ್ಬರು ತಮ್ಮ ಕಾವ್ಯ ಎಂತಹದು ಎಂಬ ಬಗ್ಗೆ ತಮ್ಮ ಕೃತಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರೂ ಅವರ ಮಾತುಗಳೆಲ್ಲ ಸಂಸ್ಕೃತ ಅಲಂಕಾರಿಕರ ಮಾತುಗಳಿಗೆ ಪೂರಕವಾಗಿವೆ ಮತ್ತು ಅವರ ಲಕ್ಷಣಗಳಿಗೆ ಉದಾಹರಣೆಗಳಾಗಿವೆ. ಈ ಮಾತಿಗೆ ವಚನಕಾರರು ಮತ್ತು ಜನಪದಕವಿಗಳು ಹೊರತಾಗಿ ನಿಲ್ಲುತ್ತಾರೆ. ಜನಪದ ಕವಿಗಳಂತೂ ಶುದ್ಧ ಪ್ರಯೋಗಶೀಲರು. ಅವರು ತಮ್ಮ ಪ್ರಯೋಗಗಳಲ್ಲಿ ಹೊಸತನ್ನು, ವೈವಿಧ್ಯತೆಯನ್ನು ತರಬಲ್ಲರು. ಆದರೆ ಅದರ ಶಾಸ್ತ್ರೀಯ ಗುಣಗಳನ್ನು ವಿವರವಾಗಿ ಹೇಳುವಲ್ಲಿ ಅವರು ಮನಸ್ಸು ಮಾಡಿಲ್ಲ. ಶಾಸ್ತ್ರ ಸೃಜಿಸುವ ಪ್ರತಿಭೆಯ ಕೆಲಸವನ್ನು ಸೃಜನಾತ್ಮಕ ಪ್ರತಿಭೆ ಮಾಡುವುದು ಅಪರೂಪವೇ. ಎಲ್ಲೋ ಒಬ್ಬಿಬ್ಬರು ಆ ಕೆಲಸವನ್ನು ಮಾಡಬಹುದು. ಹಾಗೆಯೇ ಜನಪದ ಕವಿಗಳಿಂದಲೂ ಶಾಸ್ತ್ರೀಯ ವಿವರಣೆಗಳನ್ನು ನಿರೀಕ್ಷಿಸುವಂತಿಲ್ಲ. ಕಾವ್ಯವೆಂದರೇನು? ಎಂಬ ಪ್ರಶ್ನೆಗೆ ಜನಪದರಲ್ಲಿ ನೇರವಾದ, ಸ್ಪಷ್ಟವಾದ ಉತ್ತರ ಸಿಗಲಿಕ್ಕಿಲ್ಲ. ಆದರೆ ಕಾವ್ಯವೆಂದರೆ ಹೇಗಿರಬೇಕು? ಹೇಗಿದ್ದರೆ ಚೆನ್ನ? ಎಂಬ ಮಾತುಗಳನ್ನು ಜನಪದ ವಿಗಳು ಅಲ್ಲಲ್ಲಿ ವ್ಯಕ್ತಪಡಿ ಸಿರುವುದು ಗಮನಕ್ಕೆ ಬರುತ್ತದೆ. ಇದರಿಂದ ಅವರು ಕಾವ್ಯಸ್ವರೂಪವನ್ನು ಗ್ರಹಿಸಿಕೊಂಡಿರಬ ಹುದಾದ ಬಗೆಯನ್ನು ಊಹಿಸಿಕೊಳ್ಳಲು ಅಲ್ಪಮಟ್ಟಿಗಾದರೂ ಶಕ್ಯವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಬಹುಪ್ರಮುಖ ಸಂಗತಿ ಎಂದರೆ ಸಂಸ್ಕೃತ ಅಲಂಕಾರಿಕರಂತೆ ಜನಪದ ಕವಿಗಳು ಕಾವ್ಯಕ್ಕೆ ಕೇವಲ ಶಬ್ದ – ಅರ್ಥಗಳೇ ಪ್ರಮುಖವೆಂಬ ಮಾತುಗಳನ್ನು ಆಡಿರುವುದು ಗಮನಕ್ಕೆ ಬರುವುದಿಲ್ಲ. ಬದಲಾಗಿ ಕಾವ್ಯದ ಹಿತಕಾರಕ – ಗುಣಗಳ ಬಗ್ಗೆ ಮಾತನಾಡುವುದನ್ನು ನೋಡುತ್ತೇವೆ. ನಿಜವಾದ ಕಾವ್ಯದ ಸ್ವರೂಪವೆಂದರೆ – ಅದು ಉಪಯೋಗಿಯಾದುದು ಮತ್ತು ಹಿತವಾದುದು ಆಗಿರಬೇಕು ಎಂಬ ಮಾತಿಗೆ ಜನಪದ ಕವಿಗಳ ಕಾವ್ಯಕಲ್ಪನೆ ಅಪ್ಪಟ ಸಾಕ್ಷಿಯಂತಿದೆ. ಅಂದರೆ ಅವರಿಗೆ ಮುಖ್ಯವೆನಿಸುವುದು ಕಾವ್ಯದ ತಿರುಳು – ಅನುಭವ. ಈ ಅನುಭವ ಸಹೃದಯರಿಗೆ ಹಿತವಾದಂತಹದಾಗಿರಬೇಕು ಎಂಬ ಜನಪದ ಕವಿಗಳ ಅಭಿಪ್ರಾಯವು ಶಿಷ್ಟ ಶಾಸ್ತ್ರಕಾರರ ಮತ್ತು ಅದನ್ನು ಅನುಸರಿಸುವ ಶಿಷ್ಟಕವಿಗಳ ಮಾತಿಗಿಂತ ಹೆಚ್ಚು ವೈಜ್ಞಾನಿಕವಾದ ತಿಳುವಳಿಕೆಯಿಂದ ಕೂಡಿದೆ.

ಬಾಳಗೋಪಾಳನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ (ಬಾ.ಗೋ.ಲಾ.೬೧)

ಈ ಸಾಲುಗಳಲ್ಲಿ ‘ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆ’ಯನ್ನು ‘ಸಹೃದ ಯನು ಹಾಡು ಕೇಳುವ ಕ್ರಿಯೆ’ಯೊಂದಿಗೆ ಹೋಲಿಸಿ ವಿಷಯವನ್ನು ಹೆಚ್ಚು ಸ್ಪಷ್ಟಪಡಿಸಲು ಪ್ರಯತ್ನಿಸಲಾಗಿದೆ. ಇಲ್ಲಿ ಕೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಒಟ್ಟು ಸ್ವರೂಪ ವನ್ನು ಅರ್ಥವತ್ತಾಗಿ ಧ್ವನಿಸುತ್ತದೆ.

ಕೂಸು ಸಹೃದಯನನ್ನು ಸಂಕೇತಿಸಿದರೆ, ಹಾಲು – ದೋಷದಿಂದ ಮುಕ್ತವಾದ ಶುದ್ಧಕಾವ್ಯ ವನ್ನು ಸಂಕೇತಿಸುತ್ತದೆ. ‘ಹಾಲು ಕುಡಿಯುವ ಕ್ರಿಯೆ’ ಕೂಸಿಗೆ ತೊಡಕಾಗಿರದೆ, ತೊಂದರೆ ದಾಯಕವಾಗಿರದೆ; ಇಷ್ಟವಾದ ಸಹಜವಾದ ಸಲೀಸಾದ ಕೆಲಸವಾಗಿದೆ. ಹಾಲು ಕೂಸಿಗೆ ಹಿತವನ್ನುಂಟು ಮಾಡುತ್ತದೆ, ಜೀವಶಕ್ತಿಯನ್ನು ವೃದ್ಧಿಸುತ್ತದೆ, ಆನಂದವನ್ನುಂಟು ಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು, ಸಹೃದಯನಿಗೆ ಇಷ್ಟವಾ ದುದೂ ಆಗಿರಬೇಕು. ಅವನಿಗೆ ಹಿತವನ್ನುಂಟು ಮಾಡುವಂತಹದೂ ಬದುಕಿಗೆ ಸ್ಫೂರ್ತಿಯನ್ನು ಒದಗಿಸುವಂತಹದೂ ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದೂ ಆನಂದವನ್ನುಂಟು ಮಾಡುವಂತಹದೂ ಆಗಿರಬೇಕು. ಒಟ್ಟಿನ ಮೇಲೆ ಅವನು ಒಳ್ಳೆಯವನಾಗಿ ಬೆಳೆಯಲು ಒಂದು ಆವಶ್ಯಕ ಸಹಕಾರಿಯಾಗುವಂತಹದಾಗಿರಬೇಕು.

ಕವಿ ಆತು ಬಂಗಾರ ತೂಕ ಕಸರಿಲ್ಲ ಅದಕ (ಬೆ.ಜಿ.ಲಾ.೮೯)ಎನ್ನುವಲ್ಲಿ, ಕಾವ್ಯವು ದೋಷದಿಂದ ಮುಕ್ತವಾಗಿರಬೇಕು ಎಂಬ ಮಾತು ಸ್ಪಷ್ಟವಾಗಿದೆ. ಹಾಗಾದಾಗ ಮಾತ್ರ ಅದು ಬಂಗಾರದಂತೆ ಬೆಲೆಯುಳ್ಳುದಾಗುತ್ತದೆ. ಇಂಥ ಕವಿತೆ ಮುತ್ತಿನಂತೆ, ತಿಳಿದವರಿಗೆ ಅಮೃತದಂತೆಹತ್ತುವುದು (ಬಾ.ಗೋ.ಲಾ.೯೯). ಅಂದರೆ ದೋಷದಿಂದ ಮುಕ್ತವಾದ, ಶುದ್ಧ ಕಾವ್ಯವು ಅಮೃತ ಸೇವನೆಯಿಂದ ದೊರೆಯಬಹುದಾದ ಆನಂದವನ್ನು ಕೊಡಬಲ್ಲುದು ಎಂಬ ಮನೋಭಾವ ಇಲ್ಲಿ ವ್ಯಕ್ತವಾಗಿದೆ. ಇಂತಹ ಅಭಿಪ್ರಾಯಗಳನ್ನೇ ವ್ಯಕ್ತಪಡಿಸುವ ಇನ್ನಷ್ಟು ಉದಾಹರಣೆಗಳು ದೊರಕುತ್ತವೆ :

ತಪ್ಪದ ಜನಕ ಶೇಕಮದಾರ ಹೇಳಿದ
ಪೋನಿಸಿದಾಂಗ ಮುತ್ತ (ಬೆ.ಜಿ.ಲಾ.೪೩)

ಖಾಖಿ ಗುರು ಹೀಂಗ ಹೇಳಿದ ವಚನ ಹಾಂ ಹಾಂ
ಸುದ್ದ ಸುರದಂಗ ರತನ (ಜಾ.ಕಿ.೫೫)

ಹುಸೇನಮಿಯ್ಯನ ಕವಿಗಳು ಸುರದಂಗ ರತನ (ಜಾ.ಕಿ.೫೫)

ಈ ಮೇಲಿನ ಸಾಲುಗಳಲ್ಲಿಯ ‘ಪೋನಿಸಿದಾಂಗ ಮುತ್ತ’, ‘ಸುರದಂಗ ರತನ’ ಈ ಮುಂತಾದವು ಕಾವ್ಯದ ಕಾಂತಿ, ಸೌಂದರ್ಯ ಅಲ್ಲದೆ ಶುದ್ಧತೆ, ಸರಳತೆ ಹಾಗೂ ಸಹಜತೆಗಳ ಬಗ್ಗೆ ಆಡಿದ ಮಾತುಗಳಾಗಿವೆ. ಇಲ್ಲಿ ಬಸವಣ್ಣನವರ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬ ವಚನವನ್ನು ನೆನಸಿಕೊಳ್ಳಬೇಕು. ಇಲ್ಲಿ ಕೇವಲ ಶಬ್ದ ಮತ್ತು ಅರ್ಥಗಳ ಮಾತನ್ನು ಅಷ್ಟೇ ಹೇಳುತ್ತಿಲ್ಲ, ಇಡೀ ಕಾವ್ಯದ ಸ್ವರೂಪವನ್ನು ಹೇಳುವ ಮಾತು ಇದಾಗಿದೆ. ಇಂಥಲ್ಲಿಯೇ ಜನಪದರು ಮತ್ತು ವಚನಕಾರರು ಅಭಿಪ್ರಾಯದಲ್ಲಿ ಒಂದಾಗುತ್ತಾರೆ ಮತ್ತು ಸಂಸ್ಕೃತ ಶಾಸ್ತ್ರಕಾರರ ಅಭಿಪ್ರಾಯಗಳ ಮಿತಿಗಳು ನಮಗೆ ಅರಿವಾಗುತ್ತವೆ.

ಒಂದಿಷ್ಟು ಪದಗಳ ಚಂದವಾಗಿ ಹೇಳತೇನ

ಲಾಲಿಸಬೇಕು ಬಡವನ ಶರಣ
ಕುಂತ ದೈವವೆಲ್ಲಾ ಸ್ವಾದ ತಕ್ಕೊಳ್ಳಿರಿ
ಶಾಂತವಾಗಿರಿ ಅಮೃತಪಾನ (ಬಾ.ಗೋ.ಲಾ.)

ಇಲ್ಲಿ ‘ಚಂದವಾಗಿ’, ‘ಸ್ವಾದ’ಮತ್ತು ‘ಅಮೃತಪಾನ’ – ಈ ಪದಗಳನ್ನು ಗಮನಿ ಸಬೇಕು. ಅವು ಕಾವ್ಯದ ಸ್ವರೂಪವನ್ನೂ ಅದರ ಪರಿಣಾಮ ಮತ್ತು ಪ್ರಯೋಜನಗಳೇನೆಂಬುದನ್ನೂ ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತಲಿವೆ. ‘ಚಂದವಾಗಿ’ ಎನ್ನುವ ಮಾತು, ಹಿಂದಿರುವ ‘ಪದಗಳ’ ಎಂಬುದರೊಂದಿಗೆ ಕೂಡಿಕೊಂಡಾಗ – ‘ಕಾವ್ಯವು ಸುಂದರವಾದ ಮಾತುಗಳಿಂದ ಕೂಡಿರ ಬೇಕು’ ಎಂಬ ಅಭಿಮತ ಹೊಮ್ಮುತ್ತದೆ. ಈ ಮಾತಿನೊಂದಿಗೆ ಮೂರನೇ ಸಾಲಿನಲ್ಲಿರುವ ‘ಸ್ವಾದ’ ಪದವು ಸಂಬಂಧ ಬೆಳೆಸಿಕೊಳ್ಳುವುದರಿಂದ ‘ಕಾವ್ಯವು ಸಹೃದಯನಿಗೆ ಹಿತವನ್ನುಂಟು ಮಾಡುವಂತಹದಾಗಿರಬೇಕು’ ಎಂಬುದು ಸ್ಪಷ್ಟವಾಗುತ್ತದೆ. ಅದು ಎಷ್ಟೊಂದು ಹಿತವಾಗಿರು ತ್ತದೆ (ಇರಬೇಕು) ಎಂದರೆ ‘ಅಮೃತಪಾನದಷ್ಟು’ ಎಂಬ ಮಾತು ಇನ್ನಷ್ಟು ಅರ್ಥವತ್ತಾಗಿ ಸುತ್ತದೆ. ‘ಅಮೃತಪಾನ’ದ ಹಿಂದಿನ ಪದ ‘ಶಾಂತವಾಗಿರಿ’ ಎಂಬುವುದು ಕಾವ್ಯದಿಂದ ದೊರೆಯುವ ಪ್ರಯೋಜನ‘ಆನಂದ’ ವೆಂಬುದನ್ನು ಒತ್ತಿಹೇಳುತ್ತದೆ. ‘ಚಂದವಾದ’ ‘ಸ್ವಾದ’ ಕೊಡುವ ‘ಅಮೃತಪಾನ’ದಿಂದ ನಮಗೊದಗುವುದು ‘ಶಾಂತಿ’ ಅರ್ಥಾತ್‌ಆನಂದ. ಕಾವ್ಯವು ಸುಂದರವಾಗಿರಬೇಕು, ಹಿತವಾಗಿರಬೇಕು ಮತ್ತು ಆನಂದವನ್ನುಂಟು ಮಾಡುವಂತಹ ದಾಗಿರಬೇಕು ಎಂಬುದು ಇಲ್ಲಿಯ ಒಟ್ಟಾಭಿಪ್ರಾಯ ವಾಗಿದೆ. ಈ ಆನಂದ ಖಂಡಿತವಾಗಿ ಯೂ ಅಲೌಕಿಕ ಆನಂದವಲ್ಲ. ಅದು ಸಹಜವಾದ ಬದುಕಿಗೆ ಆವಶ್ಯಕವಾದ ಆನಂದವೇ ಸರಿ. ಅಂದರೆ ಕಾವ್ಯದ ಆನಂದ ಬದುಕಿನತ್ತ ಮುಖಮಾಡಿರಬೇಕು. ಎಲ್ಲ ಬಿಟ್ಟು ಆನಂದದ ಕಡೆ ಮುಖ ಮಾಡುವುದನ್ನು ಸಂಸ್ಕೃತ ಅಲಂಕಾರಿಕರು ಹೇಳಿದರೆ, ಬದುಕಿನಲ್ಲಿದ್ದು ಕಾವ್ಯಾನಂದ ವನ್ನು ಹೊಂದುವ ಮಹತ್ವವನ್ನು ಜನಪದರು ಮತ್ತು ವಚನಕಾರರು ಹೇಳುತ್ತಾರೆ. ಇಲ್ಲಿ ಸ್ಪಷ್ಟವಾಗಿ ಕಾವ್ಯದ ಗ್ರಹಿಕೆಯ ಬಗೆಗೇ ವ್ಯತ್ಯಾಸವಾಗುವುದನ್ನು ನಾವು ಕಾಣುತ್ತೇವೆ.

ನಮಗ ಇಲ್ಲ ಅನಬ್ಯಾಡರಿ ಅಷ್ಟು ಜ್ಞಾನ
ಡೊಂಕ ಕಬ್ಬಿನ ಸವಿಯ ತಕ್ಕೊಳ್ಳಿರಿ (ಬಾ.ಗೋ.ಲಾ.)

ಕಬ್ಬು ಡೊಂಕಾಗಿರಬಹುದು, ಆದರೆ ಅದು ನೇರವಾಗಿಬೆಳೆದ ಕಬ್ಬಿಗಿಂತ ಸವಿಯಾದುದು ಎಂಬುದು ಜನಪದರ ಅನುಭವದ ಮಾತು. ಕವಿಯ ಸಂಸ್ಕಾರಬಲಕಬ್ಬಿನ ರುಚಿಯನ್ನು ಕೊಡಬಲ್ಲುದಾಗಿದೆ. ಒಟ್ಟಿನ ಮೇಲೆ ಈ ಎಲ್ಲಾ ಮಾತುಗಳನ್ನು ಗಮನಿಸಿ ಇಷ್ಟು ಹೇಳಬಹುದು: ಕಾವ್ಯವು ದೋಷರಹಿತವಾಗಿ, ಗುಣಯುಕ್ತವಾಗಿರಬೇಕು.ಅದು ಸುಲಲಿತವಾಗಿರಬೇಕು, ಸರಳವಾಗಿರಬೇಕು, ಸುಮಧುರವಾಗಿರಬೇಕು. ಸಹೃದಯನಿಗೆ ಹಿತವನ್ನು, ಆನಂದವನ್ನು, ಬದುಕಿಗೆ ಸ್ಫೂರ್ತಿಯನ್ನು ಕೊಡುವಂತಹದೂ ಆಗಿರಬೇಕು. ಇದು ಕಾವ್ಯ ಹೇಗಿರಬೇಕು? ಎಂಬುದಕ್ಕೆ ಜನಪದ ಕವಿಗಳು ಇಟ್ಟುಕೊಂಡ ಒಂದು ಸಾಧಾರ ಕಲ್ಪನೆಯಾಗಿದೆ.

* * *