ಜನಪದ ಕಾವ್ಯವನ್ನು ಕುರಿತಂತೆ ನಮ್ಮಲ್ಲಿ ಮೊದಲಿನಿಂದಲೂ ಒಳ್ಳೆಯ ಭಾವನೆಯ ಕೊರತೆ ಎದ್ದು ಕಾಣುತ್ತದೆ. ನಮ್ಮಲ್ಲಿ ಜನಪದ ಕಾವ್ಯವನ್ನು ಅತಿಯಾಗಿ ಪ್ರೀತಿಸಿ, ಅದರ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿ, ಇದು ಅತ್ಯಂತ ಶ್ರೇಷ್ಠಕಾವ್ಯವೆಂದು ಅಟ್ಟಕ್ಕೇರಿಸುವ ವರ್ಗ ಒಂದಿದೆ. ಈ ಕಾವ್ಯವನ್ನು ಸಂಶಯದ ದೃಷ್ಟಿಯಿಂದ ಕಂಡು, ಅದನ್ನು ಅಸಡ್ಡೆಯಿಂದ ಹೀಯಾಳಿಸುವ ವರ್ಗ ಇನ್ನೊಂದಿದೆ. ಈ ಎರಡೂ ಗುಂಪುಗಳ ಅಭಿಪ್ರಾಯಗಳು ಸಿದ್ಧನಿರ್ಣಯಗಳು. ಸಾರಾಸಗಟಾಗಿ ಆಡಿದ ಮಾತುಗಳು. ಆದರೆ ಜನಪದಕಾವ್ಯವನ್ನು ಕುರಿತು ಎಂದಿಗಿಂತಲೂ ಇಂದು ಹೆಚ್ಚು ವೈಜ್ಞಾನಿಕವಾಗಿ ಚಿಂತಿಸಬೇಕಾಗಿದೆ. ಅದನ್ನು ಅತಿಯಾಗಿ ವ್ಯಾಮೋಹಿಸುವುದಾಗಲೀ ಅಸಡ್ಡೆಯಿಂದ ಕಾಣುವುದಾಗಲೀ ಎರಡೂ ಅಪಾಯಕಾರಿ ಗುಣಗಳೆನಿಸುತ್ತವೆ.

ಮೊದಲ ಗುಂಪಿನ ಜನರು ಕವಿರಾಜಮಾರ್ಗಕಾರನು (ಕ್ರಿ.ಶ. ೮೫೦) ಹೇಳಿದ –

ಪದನರಿದು ನುಡಿಯಲುಂ ನುಡಿ
ದುದನರಿದಾರಯಲುಮಾರ್ಪರಾ ನಾಡವರ್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್(ಕವಿರಾಜಮಾರ್ಗ, ೩೮)                                          

ಎಂಬ ಮಾತನ್ನು ನಂಬಿ, ‘ಇದು ನಿರಕ್ಷರ ಕುಕ್ಷಿಗಳ ಕಾವ್ಯ, ಯಾವತ್ತೂ ಬೀದಿಗಿಳಿಯದ, ಹೆಣ್ಣುಮಕ್ಕಳ ಕಾವ್ಯ’ ಎಂದೆಲ್ಲ ಹೇಳಿ, ಅಭಿಮಾನದಿಂದ ಬೀಗುತ್ತಾರೆ. ಭಾವಾವೇಶದಲ್ಲಿ ಜನಪದಕಾವ್ಯದ ನೈಜಸ್ಥಿತಿಯನ್ನು ಅರಿಯಲು ಅಸಮರ್ಥರಾಗಿದ್ದಾರೆ. ಮಾರ್ಗಕಾರನು ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್ ಎಂದು ಹೇಳಿದ್ದು ತುಂಬಾ ಅಭಿಮಾನದಿಂದ, ತನ್ನ ನಾಡವರ ಬಗ್ಗೆ ತನಗಿರುವ ವಿಶ್ವಾಸದಿಂದ. ಕಾಲಮಾನದ ಫಲವಾಗಿ ಹುಟ್ಟಿಕೊಂಡ ಮಾತದು. ಮಾರ್ಗಕಾರನಿಗಿದ್ದ ಅನಿವಾರ್ಯತೆಗಳು ಇವತ್ತು ನಮಗೆ ಇಲ್ಲ. ಆ ಮಾತುಗಳನ್ನು ಐತಿಹಾಸಿಕ ಸತ್ಯಕ್ಕೆ ಸಾಕ್ಷಿಯಾಗಿ ಇಟ್ಟುಕೊಂಡು, ಇವತ್ತಿನ ಪರಿಸರದಲ್ಲಿ – ಜನಪದಕಾವ್ಯದ ನಿಜಸ್ಥಿತಿ ಏನು? ಎಂಬುದನ್ನು ನಾವು ಅರಿಯಬೇಕಾಗಿದೆ.

‘ಕುರಿತೋದದ’ ಎಂಬ ಮಾತು ಜನಪದ ಕವಿಗಳ ನಿರಕ್ಷರತೆಯನ್ನು ಮಾತ್ರ ಹೇಳುತ್ತದೆ. ಮತ್ತು ಜನಪದರು ಮುಖ್ಯವಾಗಿ ಅಕ್ಷರಜ್ಞಾನದ ಆಕರಗಳಾದ ಗ್ರಂಥಜ್ಞಾನದಿಂದ ವಂಚಿತರಾಗುವುದನ್ನು ಸೂಚಿಸುತ್ತದೆ. ಅಕ್ಷರಜ್ಞಾನ ಅನುಭವ ಗಳಿಕೆಗೆ ಅನುಕೂಲ ಮಾತ್ರವಾಗಿದೆ, ಆದರೆ ಅದೊಂದೇ ಅನಿವಾರ್ಯವಾಗಿಲ್ಲ. ಜೀವನದ ಅನುಭವವು ಅವರಲ್ಲಿ ಸಮೃದ್ಧತೆಯನ್ನು ತುಂಬುತ್ತದೆ. ಅದು ಕಾವ್ಯಕಟ್ಟಲು ಜನಪದರಲ್ಲಿ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂಬ ಅಭಿಪ್ರಾಯ ಕವಿರಾಜಮಾರ್ಗಕಾರನದಾಗಿದೆ.

ಕುರಿತೋದದ ಪರಿಣತ ಮತಿಗಳ ಕಾವ್ಯಎಂಬ ಕವಿರಾಜಮಾರ್ಗಕಾರನ ಮಾತನ್ನು ಸ್ವಲ್ಪವಿವರಿಸಿ ನೋಡಿದರೆ ಅಲ್ಲಿ ಬರುವ ಅರ್ಥವು ಇನ್ನೂ ವ್ಯಾಪಕಾರ್ಥವನ್ನು ಹೊಂದಿದೆ ಎನಿಸುತ್ತದೆ. ಅವನ ಮಾತಿನಲ್ಲಿ ಮೂರು ಬಹುಮುಖ್ಯ ಪದಗಳಿರುವುದನ್ನು ಗಮನಿಸಬೇಕು. ಒಂದು ‘ಕುರಿತೋದದ’, ಮತ್ತೊಂದು ‘ಪರಿಣತ’, ಇನ್ನೊಂದು ‘ಮತಿ’. ಈ ಮೂರಕ್ಕೂ ಬಲು ವಿಶಿಷ್ಟವಾದ ಅರ್ಥಗಳಿವೆ. ಮತಿ ಎಂಬುದು ಪ್ರತಿಭೆಗೆ ಇರುವ ಇನ್ನೊಂದು ಹೆಸರು. ಪ್ರಜ್ಞೆ ಎಂಬುದು ಮತಿಯ ಅರ್ಥವಾಗಿದ್ದು, ಅದು ಪ್ರತಿಭೆಯ ಶಕ್ತಿಯನ್ನೇ ನಿರ್ದೇಶಿಸುತ್ತದೆ. ಪರಿಣತಿ ಎಂಬುದು ಶಾಸ್ತ್ರಕಾರರು ಹೇಳುವ ವ್ಯತ್ಪತ್ತಿಸಾಮರ್ಥ್ಯದ ಗಳಿಕೆಯಾಗಿದೆ. ಹೀಗಾಗಿ ಕುರಿತೋದದ ಎಂಬುದು ಅಕ್ಷರಜ್ಞಾನದ ಬಲದ, ಅಂದರೆ ಕೃತಿಜ್ಞಾನದ ಕೊರತೆಯನ್ನು ಮಾತ್ರ ನಿರ್ದೇಶಿಸುತ್ತದೆ. ಹೀಗಾಗಿ ಈ ಮೇಲೆ ಹೇಳಿದಂತೆ, ಜನಪದ ಪ್ರತಿಭಾ(ಮತಿ)ವಂತರಲ್ಲಿ ಕಾಣುವ ಪರಿಣತಿ ಅದು ಜೀವನಾನುಭವವೇ ಆಗಿದ್ದು, ಕೃತಿಜ್ಞಾನದ ಬಲ ಅಂಥವರಿಗೆ ಅನಗತ್ಯವಾದುದು (ಅನಿವಾರ್ಯವಲ್ಲ) ಎಂಬ ಅರ್ಥ ಕವಿರಾಜಮಾರ್ಗಕಾರನ ಮಾತಿನಲ್ಲಿ ಹೊರಡುತ್ತದೆ.

ಕವಿರಾಜಮಾರ್ಗಕಾರನ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ಎಂಬ ಮಾತಿಗೆ ಈವರೆಗೆ ನಾವು ಹೇಳುತ್ತ ಬಂದ ಅರ್ಥವೇ ಒಂದು ತಪ್ಪು ವಿವರಣೆ ಎನಿಸುತ್ತದೆ. ಪ್ರತಿಭೆ (ಮತಿ) ಇದ್ದರೆ ಸಾಕು, ಜೀವನದ ಅನುಭವವು ಕಾವ್ಯಕ್ಕೆ ವಸ್ತುವನ್ನು ಒದಗಿಸಬಲ್ಲುದು, ಕಾವ್ಯವನ್ನು ಕಟ್ಟಬಲ್ಲದು. ಇದೊಂದು ಕವಿರಾಜಮಾರ್ಗದಲ್ಲಿ ಕಾಣುವ ಗಮನಾರ್ಹ ಚಿಂತನೆಯಾಗಿದೆ. ಇದಕ್ಕೆ ವಚನಕಾರರಲ್ಲಿ ಬಹಳ ಸ್ಪಷ್ಟವಾದ ಅನುಮೋದನೆ ಇದೆ. ಈ ಅಭಿಪ್ರಾಯಕ್ಕೆ ಜನಪದ ಪ್ರತಿಭಾವಂತರ ಕೃತಿಗಳು ಪ್ರಮಾಣಗಳಾಗಿ ದೊರೆಯುತ್ತವೆ. ಅದಕ್ಕಾಗಿ ಜನಪದ ಕವಿ ಮತ್ತು ಕಾವ್ಯದ ಬಗೆಗಿನ ಈವರೆಗಿನ ಭಾವನೆಗಳನ್ನು ಸ್ವಲ್ಪ ದೂರ ಸರಿಸಿ, ಗ್ರಾಮೀಣ ಪ್ರತಿಭಾವಂತರ ಮತ್ತು ಅವರ ಸಾಹಿತ್ಯದ ನೈಜತೆಯನ್ನರಿಯಲು ನಾವಿಂದು ಮುಂದಾಗಬೇಕಾಗಿದೆ.

ಹಾಗೆ ನೋಡಿದರೆ ಎಲ್ಲ ಜನಪದ ಕವಿಗಳು ನಿರಕ್ಷರಿಗಳೇನಲ್ಲ. ಅಲ್ಪಮಟ್ಟಿಗೆ ಅಕ್ಷರಜ್ಞಾನ ಹೊಂದಿದವರಿಂದಲೂ ಅಲ್ಪಮಟ್ಟಿಗೆ ಓದಿಕೊಂಡವರಿಂದಲೂ ಜನಪದಕಾವ್ಯ ಸೃಷ್ಟಿಗೊಂಡಿದೆ, ಸೃಷ್ಟಿಗೊಳ್ಳುತ್ತಿದೆ. ಹೀಗಾಗಿ ವಿದ್ಯಾವಂತ ಮತ್ತು ಅವಿದ್ಯಾವಂತ ಇಬ್ಬರಿಂದಲೂ ಈ ಕಾವ್ಯ ಸೃಷ್ಟಿಗೊಂಡಂತಾಗಿದೆ. ಈ ದೃಷ್ಟಿಯಿಂದ ಕೇವಲ ವಿದ್ಯಾವಂತರಿಂದ ಸೃಷ್ಟಿಗೊಂಡು, ವಿದ್ಯಾವಂತರ ನಡುವೆಯೇ ಬಳಕೆಯಲ್ಲಿರುವ ಶಿಷ್ಟಕಾವ್ಯಕ್ಕಿಂತಲೂ ಜನಪದಕಾವ್ಯವು ಹೆಚ್ಚು ವ್ಯಾಪಕವಾದ ಜನಸಮುದಾಯದ – ವಿದ್ಯಾವಂತ ಮತ್ತು ಅವಿದ್ಯಾವಂತ ಈ ಎರಡೂ ಬಗೆಯ ಜನಪದರ – ಪ್ರೀತಿಯನ್ನು ಪಡೆದುದಾಗಿದೆ.

ಜನಪದ ಕಾವ್ಯದ ಬಗೆಗೆ ಅಸಡ್ಡೆ ಭಾವನೆಗಳನ್ನು ಹೊಂದಿದ ಎರಡನೇ ಗುಂಪಿನವರ ಅಭಿಪ್ರಾಯವು ೧೪ನೇ ಶತಮಾನದಷ್ಟು ಹಿಂದೆ ತನ್ನ ಹಳಮೆಯನ್ನು ಗುರುತಿಸಿಕೊಳ್ಳುತ್ತದೆ. ಮಧುರನೆಂಬ ಕವಿಯು ಜನಪದ ಕವಿ ಮತ್ತು ಕಲಾವಿದರನ್ನು ಕುರಿತು ಹೀಗೆ ಹೇಳುತ್ತಾನೆ:

ಪಂಡಿತರುಂ ವಿವಿಧಕಳಾ
ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೋಳ್
ಕಂಡರ್ ಕೇಳ್ವೊಡೆ ಗೊರವರ
ದುಂಡಿಚಿಯೇ ಬೀದಿವರೆಯೇ ಬೀರನ ಕಥೆಯೇ (ಧರ್ಮನಾಥ ಪುರಾಣ)

ಮಧುರನು ಈ ಮೇಲಿನ ಮಾತಿನಲ್ಲಿ ಮಾರ್ಗ ಕಾವ್ಯ, ಕಲೆ ಮತ್ತು ಕಲಾಕಾರರನ್ನು ಎತ್ತಿಹಿಡಿಯಲು ಹೋಗಿ, ಜನಪದಕಾವ್ಯ, ಕಲೆ, ಕಲಾಕಾರರನ್ನು ಹೀಯ್ಯಳಿಸಿದ್ದಾನೆ. ಉದ್ದೇಶಪೂರ್ವಕವಾಗಿ ಮಧುರನು ಈ ಅಭಿಪ್ರಾಯಕ್ಕೆ ಬಂದಿರಲಿಕ್ಕಿಲ್ಲ. ಏಕೆಂದರೆ ಆತ ಹೇಳಹೊರಟಿರುವುದು ಜನಪದ ಕಾವ್ಯವನ್ನು ಕುರಿತು ಅಲ್ಲ, ಶಿಷ್ಟಕಾವ್ಯವನ್ನು ಕುರಿತು. ಒಂದರ ಮಹತಿಯು ಅದರ ಗುಣದಲ್ಲಿರುತ್ತದೆಯೇ ಹೊರತು ಇನ್ನೊಂದರ ತೆಗಳುವಿಕೆಯಲ್ಲಲ್ಲ. ಮಹತ್ತಾದುದು ತನ್ನ ಷ್ಟ ಕ್ಕೆ ತಾನು ತನ್ನ ಉತ್ತಮಿಕೆಯನ್ನು ಸಾರುತ್ತಿರಬೇಕು. ಮಧುರನು ಮಾರ್ಗಕಾವ್ಯ ಕಲೆಗಳ ಮಹತಿಯನ್ನು ಹೇಳುವ ಆವೇಗದಲ್ಲಿ ಮಾತನಾಡಿದ್ದಾನೆ. ತಾನು ನೇರವಾಗಿ ಹೇಳಬೇಕಾದುದನ್ನು ಹೇಳದೆ, ಜನಪದ ಕಾವ್ಯವನ್ನು, ಕಲಾವಿದರನ್ನು ಅನಾವಶ್ಯಕವಾಗಿ ಹೀಗಳಿದಿದ್ದಾನೆನಿಸುತ್ತದೆ. ಈ ದೃಷ್ಟಿಯಲ್ಲಿ ಮಧುರನ ಮಾತು ನಿಷ್ಪಕ್ಷವಾದು ದೆಂದು ಅನಿಸುವುದಿಲ್ಲ. ಹೀಗಾಗಿ ಜನಪದ ಕಾವ್ಯ, ಕಲೆ, ಸಹೃದಯರನ್ನು ಕುರಿತ ಮಧುರ ಕವಿಯ ಅಭಿಪ್ರಾಯ ಒಂದು ಮಹತ್ವದ ಸಂಗತಿಯಾಗಲಾರದು. ಆದುದರಿಂದ ಅದಕ್ಕೆ ಯಾವುದೇ ತರದ ಸಮರ್ಥನೆ ಬೇಕಾಗಿಲ್ಲ ಎನಿಸುತ್ತದೆ. ಒಂದು ಮಾತನ್ನು ಓದುಗರು ಗಮನಿಸಬೇಕು – ಮಧುರನ ಮಾತು ಹೇಗೋ ವಿದ್ವಾಂಸರ ಕೈಗೆ ಸಿಕ್ಕು ಪ್ರಚಾರಪಡೆದಿದೆ. ಆದರೆ ಈ ಬಗೆಯ ಅಭಿಪ್ರಾಯಗಳನ್ನು ಕನ್ನಡದ ಬಹುತೇಕ ಕವಿಗಳು ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಶಿಷ್ಟಪ್ರತಿಭಾವಂತರಲ್ಲಿ ಲಿಖಿತ ಮತ್ತು ಅಭಿಜಾತ ಪರಂಪರೆಯ ಬಗ್ಗೆ ಶ್ರೇಷ್ಠತೆಯ ವ್ಯಸನ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವೌಖಿಕ ಪರಂಪರೆಯ ಬಗೆಗೆ ಒಂದು ಬಗೆಯ ಅಸಡ್ಡೆಯ ಭಾವನೆ ಇದ್ದೇಯಿದೆ. ಇಂದು ಅದು ದೂರಾಗಬೇಕಾದ, ವೌಖಿಕ ಪರಂಪರೆಯ ಜ್ಞಾನದ ಮಹತ್ವ ತಿಳಿಯಬೇಕಾದ ಅವಶ್ಯಕತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ.

ಜನಪದ ಕಾವ್ಯವನ್ನು ಕುರಿತು ಬರೆಯುವಾಗ ಮಾತನಾಡುವಾಗ, ಬಾರಿಬಾರಿಗೂ ಮಧುರ ಕವಿಯ ಮಾತನ್ನು ಉದ್ಧರಿಸಿ, ಒಂದೆರಡು ಸೊಗಸಾದ ತ್ರಿಪದಿಗಳನ್ನು ಹಾಡಿ, ಗಾದೆಗಳನ್ನು ಚಟಪಟಿಸಿ – ‘ನಿರಕ್ಷರ ಕುಕ್ಷಿಗಳ ಈ ಸಾಹಿತ್ಯವು ಯಾವುದಕ್ಕೂ ಯಾವ ಮಟ್ಟದಲ್ಲೂ ಕಡಿಮೆಯಿಲ್ಲ’ ಎಂದು ಅಭಿಮಾನ ಪಡುವ; ಅಭಿಮಾನ ಪಡುವಷ್ಟರಿಂದಲೇ ಸಮಾಧಾನ ಹೊಂದುವ; ಸಮಾಧಾನ ಹೊಂದಿ ಅಷ್ಟಕ್ಕೆ ಕೈ ತೊಳೆದುಕೊಳ್ಳುವ – ಜನಪದ ಸಾಹಿತ್ಯದ ಮುದ್ದಿನ ಪ್ರೇಮಿಗಳು – ಇಂದು ಮಧುರನ (ಮತ್ತು ಅಂತಹ)ಅಪಸ್ವರವೊಂದು ಅನಿಷ್ಟವೆಂದು ಭಾವಿಸಬೇಕಾಗಿದೆ. ಏಕೆಂದರೆ ಜನಪದ ಕಾವ್ಯವಾಗಲೀ ಕಲೆಗಳಾಗಲೀ ಆ ಮಧುರನು ಹೇಳಿದಂತೆ ಕೀಳಲ್ಲವೆಂಬುದು ನಮಗಿಂದು ಮನವರಿಕೆಯಾಗಿದೆ. ಮತ್ತೆ ಮತ್ತೆ ಅದೇ ಮಾತನ್ನು ಉಲ್ಲೇಖಿಸುವುದು ಅರ್ಥಹೀನವೆನಿಸುತ್ತದೆ. ಇದನ್ನು ತಿಳಿದೂ ಹಾಗೆ ಮಾಡುವುದಾದರೆ ಅದು ಜನಪದ ಕವಿಗಳಿಗೆ ಕಲಾಕಾರರಿಗೆ ಮೇಲಿಂದ ಮೇಲೆ ಅವಹೇಳನ ಮಾಡಿದಂತಾಗುತ್ತದೆ.

ಜೊತೆಗೆ ನಿರಕ್ಷರ ಕುಕ್ಷಿಗಳ ಸಾಹಿತ್ಯ ಎಂಬ ಮಾತೂ ಅಸಹ್ಯವೆಂಬುದನ್ನು ತಿಳಿಯಬೇಕು. ಅದು ಜನಪದ ಕವಿಗಳನ್ನು ಹೀನಾಯವಾಗಿ ಕಾಣುವಂತಹ ಮಾತಾಗುತ್ತದೆ. ಕೆಲವರು ಅಕ್ಷರ ತಿಳಿದಿರಬಹುದು, ಇನ್ನೂ ಕೆಲವರು ತಿಳಿದಿರಲಿಕ್ಕಿಲ್ಲ. ಆದರೆ ಅವರೆಲ್ಲ ಒಳ್ಳೆಯ ಸಂವೇದನಾಶೀಲರು, ಪ್ರತಿಭಾವಂತರು ಆಗಿದ್ದರು, ಆಗಿರುತ್ತಾರೆ ಎಂಬುದನ್ನು ಅಲ್ಲಗಳೆಯಲು ಆಗದು. ಅದಕ್ಕಾಗಿ ಇಂಥ ಸಲ್ಲದ ಮಾತುಗಳನ್ನು ಪುನಃ ಪುನಃ ಉದ್ಧರಿಸುತ್ತ ಸಂತೃಪ್ತಿ ಪಟ್ಟುಕೊಳ್ಳುವುದನ್ನು ನಿಲ್ಲಿಸಿ, ಜನಪದಕಾವ್ಯವನ್ನು ಆದಷ್ಟು ಅರಿಯುವತ್ತ ಗಮನ ಹರಿಸುವುದು ಈ ಸಂದರ್ಭದಲ್ಲಿ ಅವಶ್ಯವೆನಿಸುತ್ತದೆ.

‘‘ಇದು ಶ್ರೇಷ್ಠ ಕಾವ್ಯವಾಗಿರಲಿಕ್ಕಿಲ್ಲ. ನಮ್ಮನ್ನು ಜೀವನದ ಆಳಕ್ಕೆ ಕೊಂಡೊಯ್ದು, ಮೂಲಭೂತ ಸಮಸ್ಯೆಗಳ ಚಿಂತನೆಗೆ ತೊಡಗಿಸಲಿಕ್ಕಿಲ್ಲ. ಬದುಕಿನ ಹೊಸ ಸಾಧ್ಯತೆಗಳ ಅರಿವನ್ನು ಹೆಚ್ಚಿಸಲಿಕ್ಕಿಲ್ಲ

[1] ಎಂಬಂತಹ ಸಂಶಯಗಳ ಸಂಕೋಲೆಯಲ್ಲಿ ಸಿಕ್ಕಿಸಿ, ಈ ಕಾವ್ಯದ ಜೀವವನ್ನು ಎಳೆದಾಡುವುದು ಬೇಡ. ‘‘ಜನಪದ ಕಾವ್ಯ ಕೆಲವು ಗಂಭೀರವಾದ ಪರಿಮಿತಿಗಳುಳ್ಳದ್ದು, ಶ್ರೇಷ್ಠ ಕಾವ್ಯಕ್ಕೆ ಅನ್ವಯಿಸುವ ಮಾನದಂಡಗಳಿಂದ ಅದನ್ನು ಅಳೆದು ನೋಡಿದಾಗ ಹಲವು ರೀತಿಯಲ್ಲಿ ಅದು ನಿರೀಕ್ಷಿತ ಮಟ್ಟಕ್ಕೆ ಬರುವುದಿಲ್ಲ’’[2] ಎನ್ನುವಂತಹವು ಜನಪದ ಕಾವ್ಯದ ಬಗೆಗಿನ ಅಜ್ಞಾನದ ಮಾತುಗಳೆನಿಸುತ್ತವೆ. ಒಟ್ಟಿನ ಮೇಲೆ ಇವೆಲ್ಲ ಜನಪದಕಾವ್ಯವನ್ನು ಕೇವಲ ರಂಜಕವೆಂದು ಭಾವಿಸಿದ ಪರಿಣಾಮದಿಂದುದಿಸಿದ ಮಾತುಗಳೆನಿಸುತ್ತವೆ. ನಾವು ಕನ್ನಡ ಸಾರಸ್ವತ ಲೋಕದ ಮಹಾಕವಿಗಳ ಮೇರು ಕೃತಿಗಳನ್ನೇ ನೋಡಿದಾಗ, ಅವರು ನಮ್ಮ ಬದುಕಿನ ಹೊಸ ಸಾಧ್ಯತೆಗಳೊಂದಿಗೆ ಎಷ್ಟರಮಟ್ಟಿಗೆ ಸ್ಪಂದಿಸುವರು ಎಂಬುದು ಇಂದು ಪ್ರಶ್ನೆಯಾಗಿದೆ. ಇಂದಿನ ಸಾಹಿತ್ಯಿಕ ಮಾನದಂಡಗಳಿಂದ ಅಳೆಯಿಸಿಕೊಳ್ಳಬಲ್ಲ ಶಕ್ತಿ ಈಗಿನ ನವ್ಯಕವಿಗಳಿಂದ ಉದುರುತ್ತಿರುವ ಕಾವ್ಯದಲ್ಲಿ ಎಷ್ಟರ ಮಟ್ಟಿಗೆ ಕಾಣಿಸುತ್ತದೆ ಎಂಬುದನ್ನು ಇಂಥಲ್ಲಿ ಪ್ರಶ್ನಿಸಬೇಕಾಗುತ್ತದೆ.

ಜನಪದ ಸಾಹಿತ್ಯದಲ್ಲಿ ಸಮರ್ಥಕಾವ್ಯಕ್ಕೇನೂ ಕಡಿಮೆಯಿಲ್ಲ. ಆದರೆ ಅದರ ಬಹುಭಾಗವು ಭಾವಾತಿರೇಕದಿಂದ ಕೂಡಿದೆ. ಬರೀ ರಾಗ ತೆಗೆದಾಗ ಮಾತ್ರ ಇದು ಹಾಡು ಎಂದು ಗೊತ್ತಾಗುವಂತಹವುಗಳೂ ಇವೆ. ಎಲ್ಲ ಸಾಹಿತ್ಯಗಳಲ್ಲಿಯಂತೆ ಕನ್ನಡ ಜನಪದ ಸಾಹಿತ್ಯದಲ್ಲೂ ಬಗ್ಗಡವೆನಿಸುವ ಕಾವ್ಯವೂ ಇದೆ. ಕೆಲವು ಕೇವಲ ಕಾಮಾಸಕ್ತಿಯನ್ನು ಕೆದಕುವ ಅಶ್ಲೀಲ ಪದಗಳ ಗುಂಪುಗಳಾಗಿವೆ. ಇವು ಸಂಯಮ ಮತ್ತು ನೈತಿಕ ಸ್ಥೈರ್ಯ ಕಳೆದುಕೊಂಡು, ಔಚಿತ್ಯದ ಹದ್ದುಮೀರಿ, ಸ್ವೇಚ್ಛೆಯಾಗಿ ಬಿಡುವುದರಿಂದ ಅಪಾಯಕಾರಿ ಎನಿಸುತ್ತವೆ. ಇಂಥ ಕಾವ್ಯದಲ್ಲಿ ನಿರ್ಭಿಡೆಯಿಂದ ಪ್ರಯೋೀಗಗೊಂಡ ಅಶ್ಲೀಲಪದಗಳು ಅತಿರೇಕಕ್ಕಿಳಿದು, ಶ್ರೋತೃವಿನ ಸಹನೆಯನ್ನೇ ಅಲುಗಾಡಿಸುತ್ತವೆ. ವಿಕೃತ ಪ್ರಣಯ, ಕಾಮ, ಹಾದರ ಮುಂತಾದವುಗಳನ್ನು ಅತಿಯಾಗಿ ಬಣ್ಣಿಸುವ ಗೀತೆ ಗುಣದಲ್ಲಿ ಕೀಳಾಗುತ್ತದೆ.

ಆದರೆ ಒಂದು ಉತ್ತಮ ಕಾವ್ಯದೊಂದಿಗೆ ಇಂತಹ ನಿರುಪಯೋಗಿ ಕಾವ್ಯವೂ ಬೆಳೆದು ಬರುವುದು ಅಸಹಜವೇನಲ್ಲ. ಜನಪದ ಸಾಹಿತ್ಯದಲ್ಲಿ ನಮ್ಮ ಹೃದಯ ಶ್ರೀಮಂತಿಕೆಯನ್ನು ತುಂಬುವ ಉತ್ತಮಕಾವ್ಯ ಹೇರಳವಾಗಿ ಸೃಷ್ಟಿಗೊಂಡಿದೆ. ಭಾರತೀಯ ಮನೋಭಾವದ ಪರಂಪರೆಯಲ್ಲಿ ಬೆಳೆದುಕೊಂಡು ಬಂದ ಸಂಪ್ರದಾಯ – ನಂಬುಗೆ, ಆಚಾರ – ವಿಚಾರ, ರೀತಿ – ನೀತಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ವೌಲ್ಯಗಳನ್ನು ಜನಪದ ಕವಿಗಳು ತಮ್ಮ ಕಾವ್ಯಕ್ಕೆ ಮೂಲ ಆಶಯಗಳನ್ನಾಗಿ ಮಾಡಿಕೊಂಡಿದ್ದಾರೆ. ಸತ್ಯ ಅಹಿಂಸೆ ಪರೋಪಕಾರ ತ್ಯಾಗ ಮುಂತಾದ ಸಾರ್ವತ್ರಿಕ ವೌಲ್ಯಗಳನ್ನು ನಿರೂಪಿಸಿದ್ದಾರೆ. ಇಂತಹ ಕಾವ್ಯವನ್ನು ಕಡೆಗಣಿಸಿದಷ್ಟು ನಮಗೆ ಖಂಡಿತ ನಷ್ಟವೆಂದು ತೋರುತ್ತದೆ.

ಇಂದು ಜನಪದ ಕಾವ್ಯದ ನೈಜ ವೌಲ್ಯಮಾಪನವಾಗಬೇಕಾಗಿದೆ. ಇಲ್ಲಿಯವರೆಗೆ ಈ ಕೆಲಸಕ್ಕೆ ಯಾವ ಸಮರ್ಥ ವಿಮರ್ಶಕರೂ ಮನಸ್ಸು ಮಾಡಿಲ್ಲ. ಆ ಮನೋಧರ್ಮ ಇಂದು ದೂರಾಗಬೇಕಾದುದು ತುರ್ತೆನಿಸುತ್ತದೆ. ಆಧುನಿಕ ವಿಮರ್ಶಕರು ಈ ಕಾವ್ಯದ ಬಗ್ಗೆ ತೋರಿಸುತ್ತಿರುವ ಅನಾದರ, ಅದನ್ನು ಒಂದು ಪಾಪದ ಮಗುವಿನಂತೆ ಕಾಣುತ್ತಿರುವ ಮನೋಭಾವ, ಅವರ ಸಂಕುಚಿತ ಭಾವನೆಯೋ ಅಲಕ್ಷ್ಯತನವೋ ಆಗಿರಬೇಕು. ಇನ್ನೊಂದು ಗುಂಪು ಅದನ್ನು ಅತಿಯಾಗಿ ಮುದ್ದಿಸುತ್ತಿದೆ. ತನ್ನ ಬಾಹುಗಳ ಮುದ್ದಿನ ಅಪ್ಪುಗೆಯಲ್ಲಿ ಅದರ ಉಸಿರುಗಟ್ಟುತ್ತಿರುವುದನ್ನು ಅವರು ಅರಿಯದಾಗಿದ್ದಾರೆ. ಹೀಗೆ ವಿಭಿನ್ನವಾದ ಆದರೂ ಅಷ್ಟೇ ಅಪಾಯಕಾರಿಯಾದ ಎರಡೂ ಮನೋಭಾವಗಳು ಈ ಕಾವ್ಯದ ನಿಜಸ್ಥಿತಿ ಏನೆಂಬುದನ್ನು ಅರಿಯುವುದು ಇಂದು ಅವಶ್ಯವಾಗಿದೆ.

ಜನಪದ ಕಾವ್ಯದ ಹುಟ್ಟು ನಿನ್ನೆಮೊನ್ನೆಯದಲ್ಲ. ಅದು ಅನಾದಿಕಾಲದಿಂದಲೂ ಬೆಳೆದು ಬಂದುದೆಂದು ಹೇಳಿದರೆ ನಾನು ಹೊಸದೇನನ್ನೂ ಹೇಳಿದಂತಾಗಲಿಲ್ಲ. ಹಾಗೆ ಹೇಳಿದರೂ ನನ್ನ ಮಾತಿಗೆ ಯಾವ ಮಹತ್ವವೂ ಬರುವುದಿಲ್ಲ. ನಮ್ಮ ಪ್ರಜ್ಞೆ – ಅರಿವುಗಳಿಗೆ ಜನಪದ ಕಾವ್ಯದ ಹುಟ್ಟಿನ ದೂರನ್ನು ನಿಖರವಾಗಿ ಸಾರಿಹೇಳಲು ಯಾವ ಖಚಿತ ಸಾಕ್ಷಿಗಳೂ ಸಿಕ್ಕುವುದಿಲ್ಲ. ಅದು ಗಂಗಾ – ಯಮುನೆಯರೊಂದಿಗಾಗಲಿ, ಹಿಮಾಲಯದೊಂದಿಗಾಗಲಿ, ಕೊನೆಗೆ ವಾನರ – ಮಾನವನಾಗುವುದರೊಂದಿಗಾಗಲಿ ಬೆಳೆದುಬಂದಿತೆಂದು ಹೇಳಿದೆ ನನ್ನ ಮಾತಿನ ಧಾಟಿಯ ಹುಟ್ಟೂ ಆಗಿನದೆಂದೇ ಹೇಳಬೇಕಾಗುತ್ತದೇನೊ. ಆದರೆ ಜನಪದ ಕಾವ್ಯ ಸಾಗಿಬಂದ ಸುದೀರ್ಘ ಪ್ರಯಾಣವನ್ನು ಮಾತ್ರ ಯಾರೂ ಅಲ್ಲಗಳೆಯುವಂತಿಲ್ಲ. ಇಷ್ಟೊಂದು ದೂರದ ಪ್ರಯಾಣದಲ್ಲಿ ಅದು ಅನೇಕ ಏರಿಳಿತಗಳನ್ನು ಕಂಡಿರಬೇಕು.

ಯಾವುದೇ ಒಂದು ಪ್ರಕಾರದ ಕಾವ್ಯ – ಅದು ಬಳಕೆಯಲ್ಲಿರುವ ಭಾಗಗಳಲ್ಲೆಲ್ಲಾ ಸುಮಾರಾಗಿ ಸಮಾನ ಗುಣಧರ್ಮಗಳಲ್ಲಿ ಬೆಳೆದಿರುವದನ್ನು ನೋಡಿದರೆ, ಹಲವಾರು ವಿಶಿಷ್ಟ ಚೌಕಟ್ಟುಗಳು(ಕಾವ್ಯದ ರೂಪಗಳು) ಬಳಕೆಯಲ್ಲಿವೆಯೆಂದರೆ, ಆ ಕಾವ್ಯದ್ದೇ ಆದ ಒಂದು ಸಂಪ್ರದಾಯ ಮಾರ್ಗದ ಹಿನ್ನೆಲೆಯಲ್ಲಿ – ಸಮಾನಸೂತ್ರಗಳು, ವಿಧಿನಿಷೇಧಗಳು, ಕಟ್ಟುಪಾಡು ಗಳು ಇರದೇ ಇರಲು ಸಾಧ್ಯವಿಲ್ಲ. ಜನಪದ ಕಾವ್ಯ ಈ ಮಾತಿಗೆ ಹೊರತಾಗಿಲ್ಲ. ರಿವಾಯತ ವೆಂದರೆ ಹೀಗೆ, ಹಂತಿಪದಗಳು ಹೀಗಿರಬೇಕು, ಸೋಬಾನೆಗಳು ಹೀಗೆ, ಲಾವಣಿ – ಗೀಗೀಗಳು ಹೀಗೆ ಇರಬೇಕೆಂಬ ನಿಯಮಗಳಿವೆ. ಒಂದು ಸಾಲಿಗೆ ಇಷ್ಟು ಪ್ರಾಸ, ಒಂದು ನುಡಿಗೆ ಇಷ್ಟು ಸಾಲುಗಳು, ಒಂದು ಹಾಡಿಗೆ ಇಂತಿಷ್ಟು ನುಡಿಗಳು – ಇರಬೇಕು ಎಂಬ ಅನೇಕ ಸಾಮಾನ್ಯ ನಿಯಮಗಳೂ ಕಾಣಸಿಗುತ್ತವೆ. ಇಂತಿಂಥ ಅಕ್ಷರಗಳು ಹೀಗೆ ಹೀಗೇ ಬಳಸಬೇಕೆಂಬ ನಿಖರವಾದ ವಿಧಿ – ನಿಯಮಗಳೂ ಇವೆ. ಒಂದೊಂದು ರಸಕ್ಕೆ, ಪ್ರಸಂಗಕ್ಕೆ ನಿಗದಿಯಾದ ಧಾಟಿಯನ್ನೇ ಬಳಸಬೇಕೆಂಬ ಕರಾರುವಾಕ್ಕಾದ ಕಲ್ಪನೆಗಳವೆ.[3]

ಶಿಷ್ಟ ಮತ್ತು ಜನಪದ ಕಾವ್ಯದ ನಿರ್ಮಿತಿಯ ಸಂದರ್ಭಗಳು, ನಿಯಮಗಳು ಬಹಳಷ್ಟು ವ್ಯತ್ಯಾಸಗಳಿಂದ ಕೂಡಿವೆ ಎಂಬುದು ಸ್ಪಷ್ಟವಾಗಿಯೇ ಇದೆ. ಆದುದರಿಂದ ಜನಪದ ಕವಿಗಳು ತಮ್ಮ ಕಾವ್ಯದ ಬಗ್ಗೆ ಇಟ್ಟುಕೊಂಡ ಕಲ್ಪನೆ – ನಂಬುಗೆಗಳನ್ನು, ಹಾಕಿಕೊಂಡ ನಿಯಮಗಳನ್ನು ತಿಳಿಯಬೇಕು. ಈ ಕಾವ್ಯ ಎಂತಹ ವಾತಾವರಣದಲ್ಲಿ ನಿರ್ಮಾಣಗೊಂಡಿತೆಂಬುದನ್ನು ಅರಿಯಬೇಕು. ಅದರ ಆಗುಹೋಗುಗಳನ್ನು ಗಮನಕ್ಕೆ ತಂದುಕೊಳ್ಳಬೇಕು. ಇಲ್ಲದಿದ್ದರೆ ಆ ಕಾವ್ಯದ ಬಗೆಗೆ ನಾವು ಮಾತನಾಡುವುದಾದರೂ ಏನನ್ನು ?.

ಶಿಷ್ಟಕಾವ್ಯವನ್ನು ವಿಮರ್ಶಿಸಲು ಅದರದೇ ಆದ ಕಾವ್ಯಮೀಮಾಂಸೆಯನ್ನು ತಿಳಿದಿರು ವುದು ಅವಶ್ಯ. ಆ ಮೀಮಾಂಸೆಯ ಸೂತ್ರಗಳು ತಿಳಿಸುವ ಮಿತಿಯಲ್ಲಿಯೇ ನಾವು ಕಾವ್ಯವನ್ನು ಅರ್ಥೈಸಲು ಪ್ರಯತ್ನಿಸುತ್ತೇವೆ. ಹಾಗೆಯೇ ಜನಪದಕಾವ್ಯವನ್ನು ವಿಮರ್ಶಿಸಬೇಕಾದರೆ, ಆ ಕಾವ್ಯದ ಇತಿಮಿತಿಗಳು ಅವಲಂಬನೆಯಾಗಿರುವ (ಜನಪದರು ತಮ್ಮ ಕಾವ್ಯಕ್ಕೆ ಹಾಕಿಕೊಂಡಿರ ಬಹುದಾದ) ವಿಧಿನಿಯಮಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಆ ನಿಯಮಗಳನ್ನು ಗಮನದಲ್ಲಿ ಇರಿಸಿಕೊಂಡು ಜನಪದ ಕಾವ್ಯವನ್ನು ವಿಮರ್ಶಿಸಲು ಹೊರಟರೆ ಮಾತ್ರ ಅದನ್ನು ನ್ಯಾಯಬದ್ಧವಾಗಿ ತೂಕ ಮಾಡಲು ಸಾಧ್ಯವಾಗುತ್ತದೆ.

ಧಾನ್ಯ ಅಳೆಯುವ ತಕ್ಕಡಿಯಲ್ಲಿ ಬಂಗಾರ ಅಳೆಯಲು ಬರುವುದಿಲ್ಲ, ಹಾಗೆಯೇ ಬಂಗಾರ ತೂಗುವ ತಕ್ಕಡಿಯಲ್ಲಿ ಧಾನ್ಯ ತೂಗಲೂ ಸಾಧ್ಯವಿಲ್ಲ. ಈ ಎರಡೂ ತಕ್ಕಡಿಗಳ ಕೆಲಸ ಒಂದೇ ಆದರೂ ಭಾರದ ಪ್ರಮಾಣವನ್ನು ಕಂಡುಹಿಡಿಯುವ ತೂಕದ ಸಾಧನಗಳು ಮತ್ತು ನಿಯಮಗಳು ಒಂದರಕ್ಕಿಂತ ಇನ್ನೊಂದರಲ್ಲಿ ಹೆಚ್ಚು ಸೂಕ್ಷ್ಮವಾಗುತ್ತ, ಬಿಗುವಾಗುತ್ತ ಹೋಗಿರುತ್ತವೆ. ಅಂದರೆ ಇವೆರಡರಲ್ಲಿ ಯಾವುದೊಂದು ಮುಖ್ಯವೆಂದಾಗಲಿ, ಇನ್ನೊಂದು ಅಮುಖ್ಯವೆಂದಾಗಲಿ ಅಲ್ಲ. ಶ್ರೇಷ್ಠ ಕನಿಷ್ಠದ ಪ್ರಶ್ನೆಯೂ ಇಲ್ಲಿಲ್ಲ. ಅಂತೆಯೇ ಎಲ್ಲ ಬಗೆಯ ಕಾವ್ಯಗಳಿಗೂ ಸಮಾನ ಸೂತ್ರಗಳಿರುವುದು ಸಾಧ್ಯವಿಲ್ಲ. ಅವು ಒಂದೇ ಎಂಬಂತೆ ಭಾಸವಾದರೂ ಸೂಕ್ಷ್ಮವಾಗಿ ಗಮನಿಸಿದರೆ – ಸಂದರ್ಭ, ಸಂವಹನ ಹಾಗೂ ಇತಿಮಿತಿಗಳಲ್ಲಿ ವ್ಯತ್ಯಾಸಗಳು ಕಾಣಿಸುತ್ತವೆ. ಹೀಗಾಗಿ ಶಿಷ್ಟಕಾವ್ಯಕ್ಕಿಂತ ಅಲ್ಪಮಟ್ಟಿಗಾದರೂ ಭಿನ್ನವಾಗಿರಬಹು ದಾದ, ತನ್ನದೇ ಆದ ಮೀಮಾಂಸಾ ಸೂತ್ರಗಳನ್ನು ಜನಪದ ಕಾವ್ಯ ಹೊಂದಿರಬಹುದಾದುವನ್ನು ಪರಿಶೋಧಿಸಬೇಕಾದುದು ಅವಶ್ಯವೆನಿಸುತ್ತದೆ.

* * *


[1] ಗಿರಡ್ಡಿ ಗೋವಿಂದರಾಜ, ಜನಪದ ಕಾವ್ಯ, ಪು.೭೪, ಕವಿವಿ, ಧಾರವಾಡ, ೧೯೭೧

[2] ಅದೇ, ಪು.೭೨.

[3] ಜನಪದ ಕವಿಗಳು ಪ್ರತಿಭಾಪ್ರದರ್ಶನದ ಪೈಪೋಟಿಗಿಳಿಯುವುದು ತೀರ ಸಹಜವಾದ ಸಂಗತಿ. ಅನೇಕ ಆಹ್ವಾನಗಳು ಅವರ ಪ್ರತಿಭೆಯನ್ನು ಚುರುಕುಗೊಳಿಸುತ್ತಲೇ ಇರುತ್ತವೆ. ಈ ಸ್ಪರ್ಧಾ ಮನೋಭಾವದಿಂದ ಕವಿಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಕಾವ್ಯ ರಚನೆಯಲ್ಲಿ ಇಂತಹ ಅನೇಕ ಕಠಿಣ ನಿಯಮಗಳು ತಲೆಹಾಕಿರಬಹುದಾಗಿದೆ.