ಕನ್ನಡ ಜನಪದ ಕಾವ್ಯಾಭ್ಯಾಸದಲ್ಲಿ ಚರ್ಚಿಸಬೇಕಾದ ಅನೇಕಸಂಗತಿಗಳಿವೆ. ಇಲ್ಲಿ ಯಾವುದು ‘ಜನಪದ ಭಾಷೆ’, ಯಾವುದು ‘ಆಡುಭಾಷೆ’ ಎಂಬುದರ ಖಚಿತವಾದ ತಿಳುವಳಿಕೆಯ ಕೊರತೆ ಕಂಡುಬರುತ್ತದೆ. ಸಹಜವಾದ ತಿಳುವಳಿಕೆಯೆಂದರೆ ‘ಜನರಾಡುವ ಭಾಷೆ’ ಅದು ‘ಜನಪದ ಭಾಷೆ’ ಎಂದು. ಎಂತಲೇ ಜನಸಾಮಾನ್ಯರ ‘ಆಡುಭಾಷೆ’ಯ ಕೆಲ ಮಾತುಗಳನ್ನು ತಮ್ಮ ಕೃತಿಗಳಲ್ಲಿ ಬಳಸಿಕೊಂಡ ಆಯಾ ಕಾಲದ ಕನ್ನಡ ಕವಿಗಳ ಕಾವ್ಯಗಳನ್ನು – ‘ಜನಪದ ಭಾಷೆಯ ಸಮರ್ಥ ಬಳಕೆಯ ಕಾವ್ಯ’ ಎಂದು ಹೊಗಳುತ್ತ ಬರಲಾಗಿದೆ.

ವೌಖಿಕ ಭಾಷೆಗಳಾದ ಆಡುಭಾಷೆ, ಜನಪದಭಾಷೆ, ಹಾಗೂ ಲಿಖಿತಮೂಲದ ಮುದ್ರಿತ ರೂಪದಲ್ಲಿರುವ ಗ್ರಾಂಥಿಕ ಭಾಷೆ ಈ ಮೂರನ್ನೂ ನಾವು ಒಂದೆಡೆ ಇಟ್ಟು ಗಮನಿಸಿದಾಗ ಇವುಗಳ ಸ್ವರೂಪದ ಬಗೆಗೆ ಮನವರಿಕೆಯಾಗುತ್ತದೆ. ಏಕೆಂದರೆ ಈ ಮೂರು ಭಾಷೆಗಳು ಬೇರೆ ಬೇರೆ ಉದ್ದೇಶಗಳಿಗಾಗಿ, ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗುವ ಮಾಧ್ಯಮ ಗಳಾಗಿವೆ.

ಆಡುಭಾಷೆ:

ದೈನಂದಿನ ವ್ಯವಹಾರಕ್ಕಾಗಿ ಬಳಸುವ ಭಾಷೆ ಆಡುಭಾಷೆ ಎನಿಸಿಕೊಳ್ಳುತ್ತದೆ. ಈ ಆಡುಭಾಷೆಗೆ ನೈಸರ್ಗಿಕವಾದ ಎರಡು ಆಯಾಮಗಳಿವೆ. ಒಂದು ಪರಸ್ಪರ ವ್ಯವಹಾರ, ಎರಡನೆ ಯದು ಕಾವ್ಯ(ಸಾಹಿತ್ಯ)ಸೃಷ್ಟಿ. ಮೊದಲ ಹಂತದಲ್ಲಿ ಇವೆರಡೂ ವೌಖಿಕ ರೂಪದಲ್ಲಿಯೇ ನಡೆಯುತ್ತವೆ. ಅಕ್ಷರಸ್ಥರು – ಅನಕ್ಷರಸ್ಥರು, ಪಟ್ಟಣಿಗರು – ಹಳ್ಳಿಗರು ಬಳಸುವ ಆಡುಭಾಷೆಗಳು ತಮ್ಮ ಗುಣದಲ್ಲಿ ವೈವಿಧ್ಯತೆಗಳನ್ನು ಹೊಂದಿರುತ್ತವೆ. ಪ್ರಾದೇಶಿಕ ವ್ಯತ್ಯಾಸಗಳಂತೂ ತೀರಾ ಸಾಮಾನ್ಯ. ಅದಕ್ಕಾಗಿ ಯಾವುದೇ ಪ್ರದೇಶ ಅಥವಾ ಯಾವುದೇ ಸ್ಥರದಲ್ಲಿರುವವನು ವ್ಯವಹರಿಸಲು ಬಳಸುವ ಭಾಷೆ ಅದು ‘ಆಡುಭಾಷೆ’ಯೇ ಎನಿಸಿಕೊಳ್ಳುತ್ತದೆ.

ಸಮಾಜದ ಸಾಮಾನ್ಯ ಮತ್ತು ಬಹುಮುಖ್ಯ ಘಟಕಗಳಾದ ಹಳ್ಳಿಯ ಜನ ಸಮುದಾಯ ಗಳಲ್ಲಿ ಬಹುತೇಕ ಜನ ಈಗಲೂ ಅನಕ್ಷರಸ್ಥರು. ಕೇವಲ ಕೆಲವರು ಮಾತ್ರ ಅಕ್ಷರಸ್ಥರು. ಹೆಚ್ಚಿನ ಶಿಕ್ಷಣ ಪಡೆದವನು ಹಳ್ಳಿಯಿಂದ ದೂರಾಗುತ್ತಾನೆ. ಅಲ್ಪ ಸ್ವಲ್ಪ ಶಿಕ್ಷಣ ಪಡೆದ – ಮಧ್ಯಮ ವರ್ಗದ ವಿದ್ಯಾವಂತನು ತನ್ನ ಸಾಮಾನ್ಯ ಉದ್ಯೋಗದೊಂದಿಗೆ (ಒಕ್ಕಲುತನ, ವ್ಯಾಪಾರ, ಒಮ್ಮಾಮ್ಮೆ ಕನ್ನಡ ಶಾಲೆಯ ಮಾಸ್ತರಕಿಯೂ ಆಗಬಹುದು), ಹಳ್ಳಿಯಲ್ಲಿ ವಾಸಿಸುವ ವ್ಯಕ್ತಿ ಆ ಜೀವನದಲ್ಲಿ ಬೆರೆತುಹೋಗುತ್ತಾನೆ. ಇವರೆಲ್ಲ ವ್ಯವಹರಿಸುವ ಭಾಷೆ ಸಾಮಾನ್ಯರೂಪದ ಆಡುಭಾಷೆ.

ಪಟ್ಟಣಿಗರು (ನಗರೀಕರಣಕ್ಕೆ ಒಳಗಾದವರು) ನಾಗರಿಕವೆನ್ನಬಹುದಾದ ಸುಧಾರಿತ ಜೀವನ ನಡೆಸುವವರು, ಉನ್ನತ ಶಿಕ್ಷಣ ಪಡೆದವರು ಬಳಸುವ ಭಾಷೆಗೂ ಹಳ್ಳಿವಾಸಿಗಳು ಬಳಸುವ ಸಾಮಾನ್ಯ ಹಾಗೂ ಸಹಜ ಭಾಷೆಗೂ ವ್ಯತ್ಯಾಸ ಕಾಣುವುದನ್ನು ನಾವು ಗಮನಿಸಬೇಕು. ನಾಗರಿಕನೊಬ್ಬ (ಈ ಮೇಲೆ ಸೂಚಿಸಿದ ಹಳ್ಳಿಯಿಂದ ಬೇರ್ಪಟ್ಟವರು) ಹೆಚ್ಚು ಸಂಸ್ಕರಿಸಿದ (ಒಮ್ಮಮ್ಮೆ ಕೃತಕ ಮತ್ತು ಸವಕಳಿ ಎನ್ನಬಹುದಾದ) ಭಾಷೆಯನ್ನು, ಕೆಲವೊಮ್ಮೆ ಗ್ರಾಂಥಿಕ ಪದ ಪ್ರಯೋಗಗಳಿಂದ ಮಿಶ್ರಿಸಿ ಸಂಭಾಷಿಸುತ್ತಾನೆ.

ನಗರೀಕರಣಗೊಂಡವನ ಆಡುಭಾಷೆಗಿಂತ ಗ್ರಾಮಾಂತರ ಪ್ರದೇಶದ ಜನಸಾಮಾನ್ಯರ ಆಡುಭಾಷೆ ಹೆಚ್ಚು ಸಹಜ, ಅಧಿಕ ಶಕ್ತಿಶಾಲಿಯಾಗಿರುವುದು ಗಮನಾರ್ಹ. ಏಕೆಂದರೆ ಕೃತಕತೆ (ತಿದ್ದಿ – ಸುಧಾರಿಸಿ ಮಾತನಾಡುವ ರೀತಿ) ಇಲ್ಲಿ ತಲೆಹಾಕದು. ಜೊತೆಗೆ ವೌಖಿಕವಾಗಿಯೇ ಸೃಷ್ಟಿಗೊಂಡು ಬಳಕೆಯಲ್ಲಿರುವ ಗಾದೆ, ಪಡೆನುಡಿ, ಬೈಗುಳ, ದೃಷ್ಟಾಂತ ಈ ಎಲ್ಲವುಗಳೂ ಜನಸಾಮಾನ್ಯರ ಭಾಷೆಯಲ್ಲಿ ಸಂದರ್ಭಕ್ಕೆ ತಕ್ಕಂತೆ ವಿಪುಲವಾಗಿ ಬಳಕೆಯಾಗುತ್ತವೆ. ಅದಕ್ಕಾಗಿ ಜನಸಾಮಾನ್ಯರ ಆಡುಭಾಷೆಗೊಂದು ವಿಶಿಷ್ಟವಾದ ಶಕ್ತಿ, ಮೊನಚು ಪ್ರಾಪ್ತವಾಗಿರುತ್ತದೆ.

ಆದರೆ ಈ ಗಾದೆ, ಪಡೆನುಡಿ, ಬೈಗುಳ, ದೃಷ್ಟಾಂತ ಮುಂತಾದ ಸೃಜನಾತ್ಮಕ ರೂಪಗಳ ಬಳಕೆಯ ವ್ಯವಹಾರ – ‘ನಾಗರಿಕ ಭಾಷೆ’ಯಲ್ಲಿ ಇಲ್ಲ. ಅಲ್ಲಿ ಅದು ಶಿಷ್ಟ ಸಾಹಿತ್ಯದಿಂದ ಹೆಚ್ಚಿನದನ್ನು ಏನಾದರೂ ಪಡೆಯುವದಕ್ಕಿಂತ ಕ್ವಚಿತ್ತಾಗಿ ಜನಪದ ಸೃಜನಾತ್ಮಕ ರೂಪಗಳ ಹಿತಮಿತವಾದ ಬಳಕೆಯನ್ನೇ ಪಡೆಯುತ್ತದೆ. ಪಡೆನುಡಿ, ಗಾದೆಗಳಂಥ ಜನಪದದ ಮಾದರಿಗಳನ್ನು ನಗರೀಕರಣಗೊಂಡವರೂ ವಿರಳವಾಗಿ ಬಳಸುವುದನ್ನು ಕಾಣುತ್ತೇವೆ.

ಗ್ರಾಂಥಿಕ ಭಾಷೆ :

ಆಡುಭಾಷೆ ಕನಿಷ್ಟ ಪಕ್ಷ ಒಂದು ಸಾಮಾನ್ಯ ಉದ್ದೇಶಕ್ಕಾಗಿಯಾದರೂ ಲಿಖಿತರೂಪಕ್ಕೆ ವಾಲಿದಾಗ, ಉದಾಹರಣೆಗೆ ಪತ್ರಲೇಖನ, ಖರೀದಿಪತ್ರ ಮುಂತಾಗಿ ಸಾಮಾನ್ಯ ಉದ್ದೇಶಕ್ಕೆ ಬಳಕೆಯಾಗುವಾಗ – ಅದು ಅಲ್ಪಮಟ್ಟಿಗಾದರೂ ಬದಲಾವಣೆ ಹೊಂದುತ್ತದೆ. ಈ ಕನಿಷ್ಟತಮವಾದ ಬದಲಾವಣೆಯಲ್ಲಿ ‘ಗ್ರಾಂಥಿಕ ಭಾಷೆ’ಯ ಛಾಯೆ ಕಾಣಿಸಿಕೊಳ್ಳುತ್ತದೆ.

ಸಾಹಿತ್ಯದಂಥ ಗಂಭೀರ ಸೃಷ್ಟಿಯಲ್ಲಿ ಬಳಕೆಯಾಗುವ ಭಾಷೆಯಂತೂ ಸಂಪೂರ್ಣವಾಗಿ ಬದಲಾವಣೆ ಹೊಂದುತ್ತದೆ. ಭಾಷಾಶಾಸ್ತ್ರೀಯ ಮತ್ತು ವ್ಯಾಕರಣಗಳ ಹಿನ್ನೆಲೆಯಲ್ಲಿ, ಪದಗಳ ಆಯ್ಕೆಯಲ್ಲಿ, ಲಯದಲ್ಲಿ, ಹದದಲ್ಲಿ ಅದು ಅತ್ಯುತ್ತಮ ಪ್ರದರ್ಶನವೆನಿಸುತ್ತದೆ. ಇದು ಒಬ್ಬ ವ್ಯಕ್ತಿ ರೂಢಿಸಿಕೊಂಡ ಭಾಷಾ ಶ್ರೀಮಂತಿಕೆ ಮತ್ತು ಅವನ ಪ್ರತಿಭೆಯನ್ನು ಅವಲಂಬಿಸಿರುತ್ತದೆ. ಅು ಈ ಸ್ಥರದಲ್ಲಿ ವ್ಯಕ್ತಿಗತ ಪ್ರಭಾಮುದ್ರೆಒತ್ತಿಕೊಂಡುಬಿಡುತ್ತದೆ. ಅದಕ್ಕಾಗಿಯೇ ನಾವು ಕುವೆಂಪು ಭಾಷೆ, ಬೇಂದ್ರೆ ಭಾಷೆ, ಪಂಪನ ಭಾಷೆ, ರನ್ನನ ಭಾಷೆ ಎಂದು ಹೇಳುವುದು. ಇದು ಶಿಷ್ಟ ಅಥವಾ ಗ್ರಾಂಥಿಕ ಭಾಷೆಯ ಅತ್ಯುನ್ನತ ಸ್ಥಿತಿ.ಇದನ್ನು ನಾವು ಸಾಹಿತ್ಯಿಕ ಭಾಷೆ ಅಥವಾ ಕಾವ್ಯ ಭಾಷೆ ಎಂದು ಕರೆಯಬಹುದು. ಇದು ಆಡುಭಾಷೆ ಪಡೆಯುವ ಒಂದು ಬಗೆಯ ಅವತಾರ.

ಜನಪದಭಾಷೆ :

ಈ ಮೇಲೆ ಗಮನಿಸಿದಂತೆ, ನಾಗರಿಕ ಆಡುಭಾಷೆಯಿಂದ (ಶಿಕ್ಷಣ ಬಲದಿಂದ ಮತ್ತು ನಗರೀಕರಣದಿಂದ ರೂಪುಗೊಂಡ ಭಾಷೆಯಿಂದ) ಶಿಷ್ಟಸಾಹಿತ್ಯ ಹುಟ್ಟು ಪಡೆಯುವಾಗ ಸಾಹಿತ್ಯಿಕ ಭಾಷೆ ಸೃಷ್ಟಿಗೊಳ್ಳುತ್ತದೆ. ಹಾಗೆಯೇ ಜನಸಾಮಾನ್ಯರಿಂದ ಸೃಷ್ಟಿಗೊಳ್ಳುವ ಜನಪದ ಸಾಹಿತ್ಯವೂ ಅವರಾಡುವ ಭಾಷೆಯ ಒಡಲಿನಿಂದ ಸೃಷ್ಟಿಗೊಳ್ಳುವಾಗ ಜನಪದ ಸಾಹಿತ್ಯಭಾಷೆ ಅಥವಾ ಜನಪದ ಕಾವ್ಯಭಾಷೆಹರಳುಗಟ್ಟಿ ನಿಲ್ಲುತ್ತದೆ. ಈ ‘ಜನಪದ ಸಾಹಿತ್ಯಭಾಷೆ’ಯನ್ನೇ ನಾನು ಜನಪದಭಾಷೆ ಎಂದು ಗ್ರಹಿಸಲು ಇಚ್ಛಿಸುತ್ತೇನೆ ಮತ್ತು ಅದು ಹಾಗೆಯೇ ಇದೆ.

ಎರಡು ಬಗೆಯ ಆಡುಭಾಷೆಗಳಿಂದ ಎರಡು ಬಗೆಯ ಸಾಹಿತ್ಯಿಕ ಭಾಷೆಗಳು ಹುಟ್ಟಿಕೊಳ್ಳುವ ಬಗೆಯನ್ನು ಹೀಗೆ ತೋರಿಸಬಹುದಾಗಿದೆ :

ಜನಸಾಮಾನ್ಯರ ಆಡುಭಾಷೆಯ ಒಡಲಲ್ಲಿ ಜನಪದ ಸಾಹಿತ್ಯ ರೂಪುಗೊಳ್ಳುವಾಗ (ಎರಡೂ ವೌಖಿಕ ಪರಂಪರೆಗೆ ಸೇರಿದವು) ‘ಜನಪದ ಭಾಷೆ’ಪ್ರಯೋಗಗೊಳ್ಳುತ್ತದೆ ಎನ್ನುವಲ್ಲಿ – ಜನಪದ ಸಾಹಿತ್ಯಕ್ಕೆ ಬಳಸುವ ಭಾಷೆಗೂ ಜನರಾಡುವ ಭಾಷೆಗೂ ವ್ಯತ್ಯಾಸ ಇರುವ ಕಡೆ ಗಮನ ಸೆಳೆಯಲು ಬಯಸುತ್ತೇನೆ. ಒಂದು ಗಾದೆಯ ನಿರ್ಮಾಣ ಮತ್ತು ಪ್ರಯೋಗದಲ್ಲಿ, ಹೀಗೆಯೇ ಒಗಟು, ಒಡಪು, ಬೈಗುಳ, ಪಡೆನುಡಿ, ಹಾಡು, ಕಥೆ, ಬಯಲಾಟ ಎಲ್ಲದರ ಪ್ರಯೋಗದಲ್ಲಿ ಜನರ ಆಡುಭಾಷೆ ಒಂದು ವಿಶಿಷ್ಟ ಸ್ಥಿತಿಗೆ (ಜನಪದ ಭಾಷೆಯಾಗಿ) ತಿರುಗುತ್ತದೆ. ಅಂದರೆ ಜನಪದ ಸಾಹಿತ್ಯ ಹುಟ್ಟುಪಡೆಯುವಾಗ ಹರಳುಗಟ್ಟುವ ಭಾಷೆ ಜನಪದ ಭಾಷೆ ಎಂಬುದು ಇಲ್ಲಿಯ ಗ್ರಹಿಕೆಯ ಒಟ್ಟು ಅಭಿಪ್ರಾಯ. ‘ಜನಪದ ಭಾಷೆ’ಯು ಜನಸಾಮಾನ್ಯರ ಆಡುಭಾಷೆಯ ಸಂಪೂರ್ಣ ಸತ್ವವನ್ನು ಹೀರಿಕೊಂಡು, ಗ್ರಾಂಥಿಕ ರೂಪದ ಕಡೆಗೆ ತುಸು ವಾಲಿನಿಂತು, ತನ್ನ ವಿಶಿಷ್ಟ ಭಾಷಾಸ್ವರೂಪವನ್ನು ಕಾಯ್ದುಕೊಂಡಿರುವುದನ್ನು ನಾವು ಕಾಣುತ್ತೇವೆ. ಉದಾಹರಣೆಗಾಗಿ –

ಎಲ್ಲಿಗ್ಹೋಗಿದ್ದಿ ನನ್ನ ಬೆಳ್ಳನ ಬಿಳಿ ಎಲಿಯೇ
ಎಲ್ಲರ ನೆದರ ನಿನ ಮ್ಯಾಲೆ ನನ್ನ ಕಂದ
ನೆಲ್ಲಕ್ಕಿ ನೆದರ ತಗದೇನ

೧. ಮನಿ ಮುಂದ ಬಾರಿಗಿಡ ಇರಬಾರ್ದು ಚಿಲ್ಲರ ಯಾಪಾರ ಮಾಡ್ಬಾರ್ದು.

೨. ಬೈದವ್ರ ಬೈನಗಿಡ ಬೈಸ್ಗೊಂಡವ್ರ ಮಾಯಿನ ಗಿಡ.

ಈ ಮೇಲಿನ ಉದಾಹರಣೆಗಳನ್ನು ಗಮನಿಸಿ. ಭಾಷೆ ಸರಳವಾದರೂ ಅದು ಕಾವ್ಯಭಾಷೆಯಾಗಿ ಮಾರ್ಪಟ್ಟಿದೆ. ಹೀಗಾಗಿ ಅದು ಕೇವಲ ಆಡುಭಾಷೆಯಾಗಿ ಮಾತ್ರ ಉಳಿದಿಲ್ಲ. ಆಡುಭಾಷೆಯ ಪದಗಳನ್ನು ಬಳಸಿಕೊಂಡರೂ ನಾವಾಡುವ ವ್ಯವಹಾರ ಭಾಷೆಯಂತೆ ಅಲ್ಲ ಅದು ಎಂಬುದು ಮೊದಲು ನಮ್ಮ ಮನಸ್ಸಿಗೆ ಅರಿಯುತ್ತದೆ. ‘ಆಡಲು ಬಳಸುವ ಭಾಷೆ’ಯಿಂದ ‘ಹಾಡಲು ಬರುವ ಭಾಷೆ’ ನಿರ್ಮಾಣವಾಗಿದೆ. ಹೀಗಾಗಿ ರಚನೆಯಲ್ಲಿ ವ್ಯತ್ಯಾಸ ಹೊಂದಿದೆ. ಸೃಜನೆಯಲ್ಲಿ ಚಮತ್ಕಾರದ ಸ್ಪಶರ್ ಪಡೆದಿದೆ.

ಗಾದೆ ಮಾತುಗಳನ್ನು ಗಮನಿಸಿ, ಒಂದೇ ಸಾಲಿನ ರಚನೆಯಲ್ಲಿ ವಿಶಿಷ್ಟತೆ ಕಾಣುತ್ತದೆ. ಒಂದೊಂದು ಗಾದೆಯಲ್ಲಿ ಎರಡು ಭಾಗಗಳಿರುತ್ತವೆ. ಒಂದನ್ನು ಒಂದು ವಿವರಿಸುತ್ತವೆ, ಅರ್ಥೈಸು ತ್ತವೆ. ಈ ಗಾದೆಗಳ ಗಮ್ಮತ್ತೆಂದರೆ – ಮಾತಿನಲ್ಲಿ ಬಳಸಿದರೆ ಅದಕ್ಕೊಂದು ಶಕ್ತಿ ಬರುತ್ತದೆ, ಕಾವ್ಯದಲ್ಲಿ ಬಳಸಿದರೆ ಅದು ಹಾಡಲು ಬರುತ್ತದೆ. ಒಂದು ಸಲ ಒಂದು ಗಾದೆ ರಚನೆಗೊಂಡಿತೆಂದರೆ, ಪುನಃ ಅದು ಒಡೆದು ಹೋಗಲಾರದು. ಸೃಜನೆಯ ಶಕ್ತಿ ಅಂತಹದಿರುತ್ತದೆ. ಜನಸಾಮಾನ್ಯರ ಆಡುಭಾಷೆಯಿಂದ ಆಯ್ದುಕೊಂಡ ಪದಗಳಾದರೂ ಅವುಗಳ ಹೊಂದಾಣಿಕೆಯಲ್ಲಿ ಭಾಷೆ ಹೊಸತನ ಪಡೆಯುತ್ತದೆ. ಇಂತಹ ‘ಜನಪದ ಕಾವ್ಯಭಾಷೆ’ಅಥವಾ ‘ಜನಪದ ಭಾಷೆ’ಯು – ಹಾಡುವ ಮತ್ತು ನಿರೂಪಿಸುವ ಎರಡು ಬಗೆಯಲ್ಲಿ ಬಳಕೆಯಾಗುತ್ತವೆ. ಹಾಡುವ ಭಾಷೆ – ಹಾಡುವ ಕಾವ್ಯಗಳಲ್ಲಿ ಕಾಣುತ್ತದೆ. ಹಾಡು ಬಿಟ್ಟು ಉಳಿದೆಲ್ಲ ರೂಪಗಳ ಭಾಷೆಯನ್ನು ‘ನಿರೂಪಣಾಭಾಷೆ’ ಎಂದೂ ‘ನುಡಿಯುವ ಭಾಷೆ’ ಎಂದೂ ಕರೆಯಬಹುದಾಗಿದೆ.

ಜನಸಾಮಾನ್ಯರ ‘ಆಡುಭಾಷೆ’ಯನ್ನು ಅಭ್ಯಸಿಸಲು ಹೊರಟ ಭಾಷಾಶಾಸ್ತ್ರಜ್ಞರು ಜನರ ‘ವ್ಯವಹಾರ ಭಾಷೆ’ಯ ಪ್ರಯೋಗಗಳನ್ನು (ಆಡುಮಾತಿನ ವಾಕ್ಯಗಳನ್ನು, ಬಿಡಿಬಿಡಿ ಪದಗಳನ್ನು) ಬಳಸಿಕೊಳ್ಳುತ್ತಾರೆ. ‘ಜನಪದ ಭಾಷೆ’ಯನ್ನು ಅಭ್ಯಾಸ ಮಾಡಹೊರಟವರು ಜನಪದ ಸಾಹಿತ್ಯದ ಸಾಹಿತ್ಯಕ ರೂಪಗಳನ್ನು (ಕಥೆ, ಗಾದೆ, ಒಗಟು, ಒಡಪು, ಗೀತೆ ಮುಂತಾಗಿ) ತಮ್ಮ ಪ್ರಯೋಗಕ್ಕಾಗಿ ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಇದರಿಂದ ‘ಜನಸಾಮಾನ್ಯರ ಆಡುಭಾಷೆ’ ಮತ್ತು ‘ಜನಪದ ಸಾಹಿತ್ಯ ಭಾಷೆ’ ಇವೆರಡರಲ್ಲಿ ವ್ಯತ್ಯಾಸವಿರುವುದನ್ನು ನಾವು ಸ್ಪಷ್ಟವಾಗಿ ಅರಿಯುತ್ತೇವೆ. ಅದಕ್ಕಾಗಿ ನಾವು ಇನ್ನು ಮುಂದೆ ಜನಪದ ಭಾಷೆಎಂಬ ಪ್ರಯೋಗವನ್ನು ‘ಜನಪದ ಸಾಹಿತ್ಯಭಾಷೆ’ ಅಥವಾ ‘ಜನಪದ ಕಾವ್ಯಭಾಷೆ’ ಎಂಬ ಅರ್ಥ ಬರುವ ನಿಶ್ಚಿತರೂಪದಲ್ಲಿ ಬಳಸಬಹುದಾಗಿದೆ.

ಜನಪದ ದೃಷ್ಟಿ ಮತ್ತು ಶಿಷ್ಟ ದೃಷ್ಟಿ :

ನಾವು ಹೊಂದಿಕೊಂಡ ಸಾಮಾಜಿಕ ಪರಿಸರ ಮತ್ತು ಸಂದರ್ಭಗಳು ಸಂಪೂರ್ಣವಾಗಿ ನಮ್ಮ ದೃಷ್ಟಿಯನ್ನು ಬದಲಿಸಿಬಿಡುತ್ತವೆ. ಹೆಚ್ಚಿನ ಶಿಕ್ಷಣ ಪಡೆದು, ಹಳ್ಳಿಯ ಸಾಮಾನ್ಯ ಮತ್ತು ಸಹಜ ಜೀವನದಿಂದ ದೂರಸರಿದು, ಪಟ್ಟಣವಾಸಿಯಾಗಿ, ನಾಗರಿಕ ಜೀವನಕ್ಕೆ ಹೊಂದಿಕೊಂಡು, ಗಂಭೀರವಾದ ಅಧ್ಯಯನದಲ್ಲಿ ತೊಡಗಿ – ಶಿಷ್ಟಸಾಹಿತ್ಯ ಕೃಷಿಗೆ ಒಪ್ಪಿಸಿಕೊಂಡ ಒಬ್ಬ ಲೇಖಕನ ದೃಷ್ಟಿ ಸಂಪೂರ್ಣವಾಗಿ ಶಿಷ್ಟದೃಷ್ಟಿಯಾಗಿ ಮಾರ್ಪಡುತ್ತದೆ. ತಾನು ಚಿಂತನೆಗೆ ಎತ್ತಿಕೊಂಡ ಒಂದು ವಸ್ತುವನ್ನು ಆತ ತನ್ನದೇ ಆದ ವೈಯಕ್ತಿಕ ದೃಷ್ಟಿಕೋನದಿಂದ ನೋಡಲು ಬಯಸುತ್ತಾನೆ. ಈ ಪರಿಣಾಮವಾಗಿಯೇ ಪಂಪನ ಭಾರತ, ರನ್ನನ ಭಾರತ, ವಾಲ್ಮೀಕಿ ರಾಮಾಯಣ, ಕುವೆಂಪು ರಾಮಾಯಣ – ಎಂದು ನಾವು ಗುರುತಿಸುವುದು.

ಹೀಗೆ ಹೇಳುವಾಗ ರಾಮಾಯಣವನ್ನೋ ಮಹಾಭಾರತವನ್ನೊ ಗೊತ್ತಾದ ಒಬ್ಬ ಕವಿ ಹೇಗೆ ಕಂಡಿದ್ದಾನೆ ಎಂಬುದೇ ನಮ್ಮ ಭಾವನೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಆತನ ಆ ಕೃತಿಯನ್ನು ಹಾಗೆ ನೋಡಲು ಮತ್ತು ವಿಮರ್ಶಿಸಲು ಕಾರಣವಾಗುತ್ತದೆ. ಹೀಗೆ ಒಬ್ಬನ ದೃಷ್ಟಿ ಒಮ್ಮೆ ಶಿಷ್ಟವಾಯಿತೆಂದರೆ ಅವನು ಪುನಃ ದೇಸೀ ದೃಷ್ಟಿ (ಸಮಷ್ಟೀ ಮೂಲ ದೃಷ್ಟಿ)ಯಿಂದ ಒಂದು ವಸ್ತುವನ್ನು ಗಮನಿಸಲು ಸಾಧ್ಯವಾಗಲಾರದು. ಆ ಕಾರಣವಾಗಿ ಜಾನಪದ ಸಾಹಿತ್ಯ ಕೃತಿ ರಚನೆ ಮಾಡಲು ಅವನಿಂದ ಆಗದು. ಇದಕ್ಕೆ ಕಾರಣ ಅವನು ವ್ಯಕ್ತಿಗತವಾಗಿ ಬೆಳೆಸಿಕೊಂಡ ವ್ಯಷ್ಟಿ ಪ್ರಜ್ಞೆಯೇ ಕಾರಣವಾಗುತ್ತದೆ.

ಹಾಗೆಯೇ ಜನಪದ ದೃಷ್ಟಿ ಬೆಳೆಸಿಕೊಂಡು, ಜನಪದ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದ ವ್ಯಕ್ತಿಗೆ ಉತ್ತಮವಾದ ಒಂದು ಶಿಷ್ಟಕೃತಿಯನ್ನು ರಚಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ಇಬ್ಬರೂ (ಜನಪದ ಸಾಹಿತಿ ಮತ್ತು ಶಿಷ್ಟ ಸಾಹಿತಿ) ತಮ್ಮ ವಲಯದಲ್ಲಿಯೇ ಉಳಿದು ಇನ್ನೊಂದು ವಲಯದ ಪರಿಕರಗಳನ್ನು ಬಳಸಿಕೊಳ್ಳಲು ಪ್ರಯತ್ನಿಸಬಹುದಾಗಿದೆ. ಅಂದರೆ ಶಿಷ್ಟಸಾಹಿತಿ ಜಾನಪದ ಸಂಗತಿಗಳನ್ನು, ಜನಪದ ಸಾಹಿತಿ ಶಿಷ್ಟಸಂಗತಿಗಳನ್ನು ಅನುಕರಿಸಲು, ಬಳಸಿಕೊಳ್ಳಲು ಪ್ರಯತ್ನಿಸಬಹುದಾಗಿದೆ. ಪರಸ್ಪರ ನಡೆಯುವ ಈ ಆಕರ್ಷಣೆಯಿಂದಾಗುವ ವಾಲುವಿಕೆಯನ್ನು ಒಂದು ರೇಖಾಚಿತ್ರದ ಮೂಲಕ ಹೀಗೆ ತೋರಿಸಬಹುದಾಗಿದೆ :

. ಜನಪದ ಕೃತಿ.

. ಶಿಷ್ಟ ಕೃತಿ

. ಜನಪದ ಕವಿ ಶಿಷ್ಟದ ಕಡೆಗೆ ವಾಲಿದಾಗ, ಶಿಷ್ಟ ಕವಿ ಜನಪದದ ಕಡೆಗೆ ವಾಲಿದಾಗ ಉಂಟಾಗುವ ಪರಿಣಾಮವನ್ನು ತೋರಿಸುತ್ತದೆ.

ದೊಡ್ಡಾಟದ ಸಭಾದ ಮಾತುಗಳನ್ನು ಮತ್ತು ನಾಮಾಂಕಿತದ ಮಾತುಗಳನ್ನು ನೋಡಿದಾಗ, ಜಾನಪದ ಕವಿಯು ದೇಸೀ ಪರಿಸರದಿಂದ ಸ್ವಲ್ಪ ಶಿಷ್ಟದೆಡೆ ವಾಲಿ ನಿಲ್ಲಲು ಬಯಸಿದ್ದು ಗೊತ್ತಾಗುತ್ತದೆ. ಉದಾಹರಣೆಗಾಗಿ ಗಮನಿಸಿ :

. ನಾಮಾಂಕಿತದ ಮಾತು :

ಭೀಮ :ಎಲೈ ಸಾರಥಿ ನಾನು ದಾರೆಂದರೆ ಈ ನವಖಂಡ ಮಂಡಲದಲ್ಲಿ ಪ್ರಚಂಡ ಗಂಡುಗಲಿಗಳ ತಂಡವೆಂಬೊ ಮಧ್ಯ ಉದ್ಧಂಡ ಬೈರುಂಡ ಹಿಡಿಂಬ ಬಕಾಸುರರ ಸೊಕ್ಕೆಂಬ ಕಾಳ್ಗತ್ತಲಿಗೆ ಚಂಡಮಾರ್ತಾಂಡನೆಂದು ಕೊಂಡಾಡುವ ಜನರ ಮಂಡಳಿಯಿಂದೊಪ್ಪುವ ಕಲಿ ಭೀಮಸೇನನೆಂದು ತಿಳಿ ಎಲೈ ಸೇವಕಾ ಭೈತೃಣ ಪಾವಕ. (ಪ್ರೇಮಿಲಿ ಬಬ್ರುವಾಹನ, ಪು.೮)

. ಸಭಾದ ಮಾತು :

ರಾಮ: ಎಲೈ ಪರಿಚಾರಕಾ, ನಾನು ಈ ಸರಸ ಸಭೆಗೆ ಬಂದ ತಾತ್ಪರ್ಯವೇನೆಂದರೆ ನನ್ನ ಬಂಧುರ ಅನುಜರನ್ನು ಪಡಗಡಣ ಹಿಂದೊಡಗೂಡಿಸಿ ಚತುರ್ ದಿಕ್ಕಿನೊಳ್, ಮಿಕ್ಕಿದ ಬಹುರಂಗೆದ್ದು ಅವರಿಂದ ಕಪ್ಪನೊಪ್ಪಿಸಿಕೊಂಡು ಬಾಯೆಂದು ಕಳುಹಿಸಿದ್ದೆನು. ಅವರು ಸರಿಯಾದ ಕಾಲಕ್ಕೆ ದಿಗ್ವಿಜಯ ಮಾಡಿಕೊಂಡು ಬಂದ ಪ್ರಯುಕ್ತ ಆದರದಿಂದ ಅವರನ್ನೊಡಗೂಡಿ ಈ ಸಭೆಗೆ ಬರೋಣಾಯಿತು ಸೇವಕಾ. (ಯಯಾತಿ, ಪು.೩೬.).

ಲಕ್ಷ್ಮಣ : ಎಲಾ ಕಿಂಕರನೆ, ನಾನು ಈ ಸಭೆಗೆ ಬಂದ ಕಾರಣವೇನೆಂದರೆ, ಯನ್ನ ಅಣ್ಣನಾದ ಪಂಕಜನಾಭನ ಆಜ್ಞೆಯನ್ನು ಶಿರಸಾವಹಿಸಿ ಶಂಕಿಸದೆ ತೆಂಕಣ ದಿಕ್ಕಿಗೆ ಹೋಗಿ ಮಲೆತುನಿಂತ ವೈರಿಗಳ ಅಹಂಕಾರ ಮುರಿದು ಅವರನ್ನು ನಮ್ಮ ಅಂಕಿತರ ವಶವಾಡಿ ಅವರಿಂದ ಅಗಣಿತ ಸಂಪತ್ತನ್ನು ಕಪ್ಪುಕಾಣಿಕೆಯಾಗಿ ಒಪ್ಪಿಸಿಕೊಳ್ಳುತ್ತ ಜೈಭೇರಿ ಹೊಡೆಯುತ್ತ ಪುರ ಪ್ರವೇಶಮಾಡಿ ರಘುವಂಶ ಚಂದ್ರನ ಅಪ್ಪಣೆಯಿಂದ ಈ ಸಭಾಸ್ಥಾನಕ್ಕೆ ಬರೋಣವಾಯಿತಲಾ ಸೇವಕಾ. (ಯಯಾತಿ, ಪು.೩೭).

ಈ ದೊಡ್ಡಾಟದ ಮಾತುಗಳನ್ನು ಗಮನಿಸಿದರೆ, ಇಲ್ಲೆಲ್ಲಾ ಜನಪದದ ಸಾಮಾನ್ಯ ಮಾತುಗಾರಿಕೆಯಿಂದ ದೂರಸರಿದು, ಭಾಷಾಪ್ರೌಢಿಮೆ ಮೆರೆಯುವ ಕಸರತ್ತನ್ನು ಜಾನಪದ ಕವಿಗಳು ಮಾಡಿರುವುದು ಕಂಡುಬರುತ್ತದೆ. ಇದನ್ನು ದೊಡ್ಡಾಟದ ಮಾತಿನ ಶೈಲಿ ಎನ್ನಬಹುದೇ ಹೊರತು ಈ ಕೃತಿಗಳು ಶಿಷ್ಟಸಾಹಿತ್ಯಕ್ಕೆ – ಗ್ರಾಂಥಿಕ ಭಾಷೆಗೆ ಉದಾಹರಣೆಗಳಾಗಲಾರವು.

ಬೇಂದ್ರೆ ಅಂಥವರ ಕೃತಿಗಳನ್ನು ಕಂಡಾಗ ಶಿಷ್ಟ ಪರಿಸರದಿಂದ ದೇಸೀ ಪರಿಸರದ ಕಡೆಗೆ ಎಳೆತಗೊಂಡಿರುವುದು ಕಂಡುಬರುತ್ತದೆ. ಆದರೆ ಅದೊಂದು ಪ್ರಯತ್ನವೆನಿಸಬಹುದು. ತಾನು ಪಳಗಿದ ಕೆಲಸದಲ್ಲಿ ಒಂದು ಹೊಸ ಪ್ರಯೋಗವೆನ್ನಬಹುದು. ಆದರೆ ಶಿಷ್ಟಸಾಹಿತಿಯಿಂದ ಒಂದು ಅಪ್ಪಟ ಜನಪದ ಕೃತಿ, ಜಾನಪದ ಕವಿಯಿಂದ ಒಂದು ಅಪ್ಪಟ ಶಿಷ್ಟ ಕೃತಿ ಹೊರಬರಲು ಎಂದೂ ಸಾಧ್ಯವಾಗುವದಿಲ್ಲ.

ಕಡಿಮೆ ಶಿಕ್ಷಣಪಡೆದೂ ತನ್ನ ಅಗಾಧವಾದ ಪ್ರತಿಭೆ ಮತ್ತು ಚಿಂತನಾಶಕ್ತಿಯೊಂದಿಗೆ, ಸತತವಾಗಿ ಗಂಭೀರವಾದ ಅಭ್ಯಾಸದಲ್ಲಿ ಮುಳುಗಿದ್ದರೆ ಅವನು ಶಿಷ್ಟನಾಗಿಯೇ ಬೆಳೆಯಲು ಮತ್ತು ಮುಂದುವರೆಯಲು ಸಾಧ್ಯವಿದೆ. ಡಾ ಶಿವರಾಮ ಕಾರಂತ ಅವರಂಥವರನ್ನು ಈ ಮಾತಿಗೆ ಉದಾಹರಣೆಯಾಗಿ ಕೊಡಬಹುದು. ಆದರೆ ಅವರು ಸತತವಾದ ಅಭ್ಯಾಸದಿಂದ ತೀರಾಶಾಸ್ತ್ರೀಯವಾಗಿ ಯಕ್ಷಗಾನಕಲೆಯನ್ನು ಬೆಳೆಸಿದರು. ಆದರೆ ಯಕ್ಷಗಾನ ಕೃತಿರಚನೆ ಗೈಯಲು ಅವರಿಂದ ಸಾಧ್ಯವಾಗಲಿಲ್ಲ ಎಂಬುದನ್ನು ಗಮನಿಸಬೇಕು. ಇಲ್ಲಿ ಮಧುರಚೆನ್ನರೂ ಒಂದು ಅಪರೂಪದ ಉದಾಹರಣೆಯಾಗುತ್ತಾರೆ. ಅವರು ಹಳ್ಳಿಯ ಸಾಮಾನ್ಯ ಜೀವನ, ಜನಪದ ಸಾಹಿತ್ಯದೊಂದಿಗೆ ನಿರಂತರ ಸಂಬಂಧಹೊಂದಿಯೂ ಆಂತರ್ಯದಲ್ಲಿ ಆಧ್ಯಾತ್ಮಿಯಾಗಿ ಬೆಳವಣಿಗೆ ಹೊಂದಿದುದರಿಂದ ಅನುಭಾವಿ ಕವಿಯಾದರೇ ಹೊರತು ಜನಪದ ಕವಿ ಆಗಲಿಲ್ಲ.

ಇದಕ್ಕೆ ವಿರುದ್ಧವಾಗಿ ತಕ್ಕಮಟ್ಟಿಗೆ ಶಿಕ್ಷಣಪಡೆದೂ ಒಬ್ಬ ಪ್ರತಿಭಾವಂತನು ಹಳ್ಳಿಯಲ್ಲಿ ಸಾಮಾನ್ಯ ಜೀವನದೊಂದಿಗೆ ಇದ್ದರೆ, ಆತನ ಬದುಕು ನಿರಂತರವಾಗಿ ಜಾನಪದ ಬದುಕೇ ಆಗುವುದರಿಂದ – ಶಿಕ್ಷಣ ಅವನಲ್ಲಿ ಕೇವಲ ಅಕ್ಷರಜ್ಞಾನದ ಬಲವಾಗಿ ಮಾತ್ರ ಉಳಿದುಕೊಳ್ಳಲು ಸಾಧ್ಯವಿದೆ. ಇಂಥವರಿಂದ ಜನಪದ ಕೃತಿರಚನೆ ಸಾಧ್ಯವಿದೆ. ಯಾವನು ಒಮ್ಮೆ ಹೀಗೆ ಹಳ್ಳಿಯ ಜೀವನಕ್ಕೆ ಹೊಂದಿಕೊಂಡು ಜಾನಪದ ಕಲೆ, ಸಾಹಿತ್ಯಗಳ ಸಂಪರ್ಕದಲ್ಲಿ ಮುಳುಗಿದನೆಂದರೆ ಅವನ ದೃಷ್ಟಿ ಸಂಪೂರ್ಣವಾಗಿ ಜಾನಪದವಾಗಿಯೇ ಬೆಳೆಯಲು ಸಾಧ್ಯವಿದೆ. ಇಂತಹ ಈತನಿಂದ ಶಿಷ್ಟಕೃತಿ ರಚನೆ ಸಾಧ್ಯವಾಗಲಾರದು. ಚೌಪದನಗಳನ್ನು ಮತ್ತು ದೊಡ್ಡಾಟಗಳನ್ನು ಬರೆದ ಕವಿಗಳನ್ನು ಇಲ್ಲಿ ಉದಾಹರಣೆಗಾಗಿ ಉಲ್ಲೇಖಿಸಬಹುದಾಗಿದೆ.

ಇಲ್ಲಿಯವರೆಗೆ ಚರ್ಚಿಸಿದ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಒಬ್ಬ ಶಿಷ್ಟಕವಿಯಿಂದ ರಚಿಸಲ್ಪಟ್ಟ ಕೃತಿಗಳು ಎಂದೂ ಜನಪದ ಕೃತಿಗಳಾಗಲಾರವು. ಅವರು ಬಳಸಿದ ಆಡುಭಾಷೆ (ಜನಪದ ಭಾಷೆಯಲ್ಲ), ಕೆಲ ಜನಪದ ತಂತ್ರ, ವಸ್ತು ಮುಂತಾದವುಗಳ ಬಳಕೆಗಳು ಸಾಹಿತ್ಯ ರಚನೆಯಲ್ಲಿ ಹೊಸ ಪ್ರಯತ್ನಗಳೆನಿಸುತ್ತವೆಯೇ ಹೊರತಾಗಿ, ಆಪ್ಪಟ ಜಾನಪದ ಕೃತಿಗಳೆನಿಸಲಾರವು. ಪಂಪನ ‘ದೇಸಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು’ – ಎಂಬ ಮಾತನ್ನು ಇಲ್ಲಿ ನೆನೆಸಿಕೊಂಡರೆ – ಪಂಪನಿಂದಲೂ ಅಲ್ಲ ಅವನಿಗಿಂತ ಮುಂಚಿನಿಂದಲೂ ಕನ್ನಡದ ಕವಿಗಳು ದೇಸಿಯ ಬಗ್ಗೆ ತೋರಿದ ಒಲವು, ಅದರ ಆಕರ್ಷಣೆಗೆ ಒಳಗಾದುದರ ಪ್ರತೀಕವೆನಿಸುತ್ತದೆ.