ಮನುಷ್ಯನ ಸೌಂದರ್ಯದೃಷ್ಟಿ ತೀರ ಸಾಮಾನ್ಯವಾದುದಾಗಿದೆ. ಅದು ಅವನ ಹುಟ್ಟುಗುಣಗಳಲ್ಲಿ ಒಂದು. ಅದಕ್ಕಾಗಿಯೇ ಅವನು ನೋಡುವ, ಮಾಡುವ, ಕೇಳುವ, ಸ್ಪರ್ಶಿಸುವ, ಘ್ರಾಣಿಸುವ, ರುಚಿಸುವ – ಸಂಗತಿಗಳಲ್ಲೆಲ್ಲ ‘ಸ್ವಾದದ ಸುಖ’ ಬಯಸುತ್ತಾನೆ. ಈ ಸಾಮಾನ್ಯ ಗುಣವಾದ ಗ್ರಹಿಸುವ ಸುಖದ ಕಲ್ಪನೆಯೇ ಭಾರತೀಯ ಕಲಾಲೋಕದ ಚಿಂತನೆಯಲ್ಲಿ ಅಲೌಕಿಕ ಸ್ಪರ್ಶದ ‘ಆನಂದ ಗುಣ’ವಾಗಿ ಕಾಣುತ್ತದೆ. ಐದು ಕರಣಗಳಲ್ಲಿ ಅತ್ಯಂತ ಸೂಕ್ಷ್ಮವಾದುವು ಕಣ್ಣು ಮತ್ತು ಕಿವಿಗಳು. ಕಲಾನುಭವಕ್ಕೆ ದ್ವಾರಗಳು ಇವೆರಡು ಮಾತ್ರ. ಚಂದವಾದುದನ್ನು ನೋಡಿ, ಕೇಳಿ ಆನಂದಿಸುವ ಗುಣವನ್ನು ಮನುಷ್ಯ ಮೊದಲಿನಿಂದಲೂ ರೂಢಿಸಿಕೊಂಡು ಬಂದಿದ್ದಾನೆ. ಹೀಗೆ ಅವನು ಕಂಡ ಪ್ರಕೃತಿಯ ಚಂದ ಮತ್ತು ಅದರಿಂದ ಹೊರಡುವ ನಾನಾಬಗೆಯ ನಾದಗಳಲ್ಲಿಯ ಇಂಪು – ಇವುಗಳನ್ನು ನೋಡಿ ಕೇಳಿ ಆನಂದಿಸಲು ಬಯಸುತ್ತಾನೆ. ಪ್ರಕೃತಿಯ ಈ ಆನಂದವನ್ನೀಯುವ ಕಲಾಪ್ರಕಾರಗಳಂಥವನ್ನು ತಾನೇ ನಿರ್ಮಿಸಿ, ತನಗೆ ಬೇಕಾದಾಗ, ಗೊತ್ತಾದ ಸ್ಥಳದಲ್ಲಿ ಈಕ್ಷಿಸಲು ಮತ್ತು ಕೇಳಲು ಬಯಸಿದ ಫಲವಾಗಿಯೇ – ಲಲಿತಕಲೆಗಳು ಬೆಳೆದುಕೊಂಡು ಬಂದವು.

ಲಲಿತ ಕಲೆಗಳ ಮುಖ್ಯಲಕ್ಷಣವೆಂದರೆ ಅವುಗಳ ಪ್ರದರ್ಶನಗುಣ. ಚಿತ್ರ ಕಲೆ, ಶಿಲ್ಪಕಲೆ, ವಾಸ್ತುಕಲೆ – ಇವುಗಳನ್ನು ನೋಡಿ ; ಸಂಗೀತ, ನೃತ್ಯ, ನಾಟಕ – ಇವುಗಳನ್ನು ನೋಡಿ ಮತ್ತು ಕೇಳಿ, ಅಂದರೆ ಈ ಎಲ್ಲ ಕಲೆಗಳು ಪ್ರದರ್ಶನಗೊಂಡಾಗ, ಆಸ್ವಾದಿಸಿ ಆನಂದಿಸುವುದು ಮನುಷ್ಯನ ಸಹಜಗುಣ ಮತ್ತು ಧರ್ಮವಾಗಿ ಬೆಳೆದುಬಂದಿದೆ. ಸಂಗೀತವು ಕಲಾವಿದನ ಬಾಯಿಂದ ಸುಮಧುರವಾಗಿ ಆಲಾಪಗೊಂಡಾಗ ಇಲ್ಲವೆ ಹಾಡಿದಾಗ (ಪ್ರದರ್ಶನಗೊಂಡಾಗ), ನೃತ್ಯ ಮತ್ತು ನಾಟಕಗಳು ಅಭಿನಯಿಸಿದಾಗ (ಪ್ರದರ್ಶನಗೊಂಡಾಗ)ಮಾತ್ರ ನಾವು ನೋಡಿ, ಕೇಳಿ ಆನಂದಿಸುತ್ತೇವೆ. ಚಿತ್ರ, ಶಿಲ್ಪ ಮತ್ತು ವಾಸ್ತುಗಳಂತೂ ಸದಾಪ್ರದರ್ಶನಗೊಂಡೇ ಇರುವ ಲಲಿತಕಲೆಗಳು. ಇಂತಹ ಲಲಿತಕಲೆಗಳ ಗುಂಪಿಗೆ ಏಳನೆಯದಾಗಿ ಸಾಹಿತ್ಯವನ್ನು ಸೇರಿಸಲಾಗುತ್ತದೆ.

ಕಣ್ಣು ಮತ್ತು ಕಿವಿಗಳ ಮೂಲಕ ಆಸ್ವಾದನ ಕ್ರಿಯೆನಡೆಯುವುದು ಎಂದರೆ ಅಲ್ಲಿ ನೋಡುಗ ಇಲ್ಲವೆ ಕೇಳುಗ ಇಂಥವನೇ ಇರಬೇಕೆಂಬ ಕರಾರುಗಳಿಲ್ಲ. ಆತ ಶಿಕ್ಷಣವೇತ್ತ ನಾಗಿರಬಹುದು ಅಥವಾ ಅಶಿಕ್ಷಿತನಾಗಿರಬಹುದು, ಮಗುವಾಗಿರಬಹುದು ಅಥವಾ ಮುದುಕ ನಾಗಿರಬಹುದು. ಲಲಿತಕಲೆಗಳ ಪ್ರದರ್ಶನಗಳನ್ನು ಗ್ರಹಿಸಲು (ನೋಡಲು, ಕೇಳಲು) ಸಹೃದಯರ ಈ ವಿಭಿನ್ನ ಲಕ್ಷಣಗಳು ತೊಡಕನ್ನುಂಟುಮಾಡಲಾರವು. ಇವರ ಗ್ರಹಿಕೆ (ಅನುಭವ) ಒಂದೇ ಬಗೆಯಾಗಿರಲಿಕ್ಕಿಲ್ಲ. ಆದರೆ ಪ್ರತಿಯೊಬ್ಬರೂ ಪರಿಣಾಮವನ್ನು ಅನುಭವಿ ಸಿಯೇ ಇರುತ್ತಾರೆ. ಇದು ಲಲಿತಕಲೆಗಳನ್ನು ಈಕ್ಷಿಸಿದ ಮತ್ತು ಕೇಳಿದ ಯಾರ ಅನುಭವಕ್ಕಾದರೂ ಬರುವ ಮಾತು.

ಈ ಎಲ್ಲ ಅಂಶಗಳನ್ನು ಗಮನಿಸಿ, ಏಳನೆಯ ಲಲಿತಕಲೆಯಾದ ಸಾಹಿತ್ಯದ ಕಡೆ ಲಕ್ಷಹಾಕಿದರೆ, ಉಳಿದ ಆರು ಲಲಿತಕಲೆಗಳ ಮುಂದಿನ ಸಹೃದಯನ – ನೋಡುವ ಮತ್ತು ಕೇಳುವ ಕ್ರಿಯೆಗಳು ನಡೆಯುವುದು ಜನಪದಸಾಹಿತ್ಯ ಲೋಕದಲ್ಲಿ ಮಾತ್ರ. ಜನಪದ ಸಾಹಿತ್ಯದ ಪ್ರಕಾರಗಳು ಉಳಿದ ಲಲಿತ ಕಲೆಗಳಂತೆ ಸಹಜವಾಗಿಯೇ ಪ್ರದರ್ಶನಗೊಳ್ಳುವ ಸಾಧ್ಯತೆಯನ್ನು ಪಡೆದಿವೆ. ಹಾಡನ್ನು ಹಾಡಲಾಗುತ್ತದೆ; ಕಥೆ ಗಾದೆ ಒಡಪು ಒಗಟು ಮುಂತಾದವುಗಳನ್ನು ಹೇಳಲಾಗುತ್ತದೆ. ಹಾಡುವ, ಹೇಳುವ ಈ ಪ್ರದರ್ಶನ ಸಾಧ್ಯತೆಯ ಗುಣಗಳು ಜನಪದ ಸಾಹಿತ್ಯದ ಸಹಜ ಗುಣಗಳಾದ್ದರಿಂದ ನೋಡುವ ಕೇಳುವ ಸಾಧ್ಯತೆಗಳುಳ್ಳ ಲಲಿತಕಲೆಗಳ ಪಟ್ಟಿಯಲ್ಲಿ ಸ್ಥಾನಪಡೆಯಲು ಜನಪದ ಸಾಹಿತ್ಯಕ್ಕೆ ಮಾತ್ರ ಸಾಧ್ಯವಿದೆ.

ಹಾಗೆ ನೋಡಿದರೆ ಜನಪದ ಸಾಹಿತ್ಯ ಮತ್ತು ಜನಪದ ಕಲೆಗಳೇ ಮೂಲಭೂತವಾಗಿ ಲಲಿತಕಲೆಗಳು. ಇಲ್ಲಿಂದಲೇ ಬೆಳೆದು ನಿಂತ ಅಭಿಜಾತ ಕಲೆಗಳಲ್ಲಿ ಶಿಷ್ಟಸಾಹಿತ್ಯ ಒಂದನ್ನು ಹೊರತು ಪಡಿಸಿ, ಉಳಿದ ಕಲೆಗಳು ತಮ್ಮ ಮೂಲದ ವೌಖಿಕ ಪರಂಪರೆಯ ಗುಣಗಳಾದ ಪ್ರದರ್ಶನಗುಣ ಮತ್ತು ನೋಡುವ – ಕೇಳುವ ಕ್ರಿಯೆಗಳಿಂದ ದೂರವಾಗದೇ ಉಳಿದವು. ಹೆಚ್ಹೆಚ್ಚು ಸೂಕ್ಷ್ಮವಾಗುತ್ತ ಬೆಳೆಯುತ್ತ ಹೋಗಿ ಪರಿಣಿತರ ಕೈಯಲ್ಲಿ ಅಗಾಧವೆನಿಸುವಷ್ಟು ಬೆಳೆದು ಬದಲಾಗಿ ನಿಂತರೂ ತಮ್ಮ ಮೂಲ ನೈಸರ್ಗಿಕ ಗುಣಗಳಾದ ‘ಸಹಜ ಸಂದರ್ಭ ಮತ್ತು ಸಹಜ ಪ್ರದರ್ಶನ’ ಇವುಗಳ ಜೊತೆ ಸಂಬಂಧವನ್ನು ಇಟ್ಟುಕೊಂಡೇ ಬಂದವು.

ಅಭಿಜಾತ ಲಲಿತಕಲೆಗಳಂತೆ ಜನಪದ ಸಾಹಿತ್ಯವೂ ಯಾವುದೇ ತಾರತಮ್ಯವಿಲ್ಲದೆ ನೋಡುಗ ಮತ್ತು ಕೇಳುಗನ ಮೇಲೆ ಪರಿಣಾಮ ಬೀರುತ್ತದೆ. ತಾಜಮಹಲಿನ ಸೌಂದರ್ಯ, ಗೊಮ್ಮಟೇಶ್ವರನ ಭವ್ಯತೆಗಳು ಮಗುವಿನಿಂದ ಮುದಕರ ಮೇಲೆ, ಶಿಕ್ಷಿತ ಅಥವಾ ಅಶಿಕ್ಷಿತರ ಮೇಲೆ ಯಾವುದೇ ವಿವರಣೆ ಬಯಸದೆ, ಪರಿಣಾಮವನ್ನು ಬೀರುತ್ತವೆ. ಹಾಗೆಯೇ ಜನಪದ ಸಾಹಿತ್ಯದ ಪ್ರಕಾರಗಳು ಪ್ರದರ್ಶನಗೊಂಡಾಗ ಯಾವುದೇ ಭೇದವಿಲ್ಲದೆ ನೋಡುಗ ಇಲ್ಲವೆ ಕೇಳುಗನ ಮೇಲೆ ಪರಿಣಾಮವನ್ನು ಬೀರುತ್ತವೆ.

ಈ ಲಲಿತಕಲೆಗಳ ಒಂದು ಮುಖ್ಯಗುಣವೆಂದರೆ ಅವುಗಳಲ್ಲಿ ನಿಸರ್ಗದ ಸಂಬಂಧ ಢಾಳವಾಗಿ ಕಾಣುವುದು. ತಾಜಮಹಲ, ಗೊಮ್ಮಟನ ಶಿಲ್ಪ, ಅಜಂತಾ ಗುಹೆಗಳು – ಇಲ್ಲೆಲ್ಲ ವಾಸ್ತು, ಶಿಲ್ಪ, ಚಿತ್ರಕಲೆಗಳು – ವಿಸ್ತಾರವಾದ ಕ್ಯಾನವಾಸಿನ ಹಿನ್ನೆಲೆಯಲ್ಲಿ – ಅವುಗಳ ಸೌಂದರ್ಯ ಬೀರುವ ಆಶ್ಚರ್ಯ ಅಗಾಧತೆಗಳು – ಬಹಳಮುಖ್ಯವಾಗಿ ಸಮುದ್ರ, ಬೆಟ್ಟ, ಆಕಾಶ, ಭೂಮಿಗಳು ಬೀರುವ ಅಗಾಧತೆಯನ್ನು ಹೋಲುತ್ತವೆ. ಈ ಬಗೆಯ ಪರಿಣಾಮ ಯಾವುದೇ ವಯಸ್ಸಿನ ಮತ್ತು ಮನಸ್ಸಿನ ಮೇಲೆ ಬೀರಬಹುದಾದ ಪರಿಣಾಮವೆನಿಸುತ್ತದೆ. ಇಲ್ಲಿ ಶಿಕ್ಷಣದಂತಹ ವಿಶೇಷ ಕಲಿಕೆ – ಪರಿಣತಿ ಅವಶ್ಯವೆನಿಸುವುದಿಲ್ಲ. ಏನೂ ಅರಿಯದ ಮಗುವು ಕೂಡ ಇಂತಹ ಲಲಿತಕಲೆಗಳ ಎದುರಿಗೆ ಮತ್ತು ನಿಸರ್ಗದ ಅದ್ಭುತ ಸಂಗತಿಗಳ ಎದುರಿಗೆ ಆಶ್ಚರ್ಯ ಅಗಾಧತೆ ಆನಂದಗಳಿಗೆ ಒಳಗಾಗುತ್ತದೆ. ಇಂತಹದೇ ಆಶ್ಚರ್ಯ ಅದ್ಭುತ ಆನಂದಗಳಿಗೆ ಮಗು ಈಡಾಗುವುದು ಜನಪದ ಸಾಹಿತ್ಯದ ಸಂಬಂಧದಲ್ಲಿ.

ಮಗು ಹುಟ್ಟಿದಾರಭ್ಯ ಜನಪದದ ಹಾಡುಕೇಳಲು ಆರಂಭವಾಗುತ್ತದೆ. ಸುಮಾರು ಎರಡುವರ್ಷಗಳ ಅವಧಿಯವರೆಗೆ ಹಾಡು, ನಂತರ ಕಥೆ, ಜೊತೆಜೊತೆಗೆ ಶಿಶುಪ್ರಾಸಗಳು ಹೀಗೆ ಜನಪದ ಸಾಹಿತ್ಯದ ಒಂದೊಂದೇ ಪ್ರಕಾರಗಳು ಮಗುವಿನ ಕಿವಿಗೆ ಬೀಳುತ್ತಲೇ ಹೋಗುತ್ತವೆ. ಇಲ್ಲೆಲ್ಲ ಮಗುವಿಗೆ ಹಾಡು, ಕಥೆ, ಶಿಶುಪ್ರಾಸಗಳು ಅರ್ಥವಾಗುತ್ತವೆಂದು ಅಲ್ಲ. ಆದರೂ ಮಗು ಅವನ್ನು ಕೇಳುತ್ತದೆ, ಕಿರಿಕಿರಿ ಮರೆಯುತ್ತದೆ, ಆಡುತ್ತದೆ, ನಿದ್ರೆ ಹೋಗುತ್ತದೆ. ಇಲ್ಲೆಲ್ಲ ಮಗುವಿನ ಮೇಲೆ ಆಗುವ ಪರಿಣಾಮ ಎಂತಹದು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ನಿಸರ್ಗದ ಬೆಟ್ಟ, ಸಮುದ್ರಗಳ ಮುಂದೆ ನಿಂತಾಗ, ಮಾನವ ನಿರ್ಮಿತ ಬೃಹತ್ ಕಲಾಕೃತಿಗಳಾದ ತಾಜಮಹಲ್, ಗೊಮ್ಮಟನ ಶಿಲ್ಪದ ಮುಂದೆ ನಿಂತಾಗ ಮಗುವಿನ ಮನಸ್ಸಿನಲ್ಲುಂಟಾಗುವ ಪರಿಣಾಮವೇ ಜನಪದದ ಹಾಡು, ಕಥೆ, ಶಿಶುಪ್ರಾಸ ಕೇಳಿದಾಗ ಆ ಮಗುವಿನಲ್ಲುಂಟಾಗುವ ಅನುಭವ – ಅದೇ ಆಶ್ಚರ್ಯ, ಅಂತಹದೇ ಅಗಾಧತೆ ಆನಂದ ಮುಂತಾದವುಗಳು. ಇಲ್ಲೆಲ್ಲ ನಡೆಯುವ ಕ್ರಿಯೆ ಮುಖ್ಯವಾಗಿ ನೋಡುವುದು ಮತ್ತು ಕೇಳುವುದು. ಈ ನೋಡುವ ಮತ್ತು ಕೇಳುವ ಅವಕಾಶಗಳು ಶಿಷ್ಟಸಾಹಿತ್ಯಕ್ಕೆ ಇಲ್ಲವಾಗಿ ಅದರಲ್ಲಿ ಲಲಿತಕಲೆಯ ಗುಣಗಳು ಇಲ್ಲದಂತಾಗುತ್ತವೆ.

ಲಲಿತ ಎಂದರೆ ಸುಲಭವಾದುದು ಮತ್ತು ಸುಂದರವಾದುದು. ಮಧುರ ಇಲ್ಲಿಯ ಒಟ್ಟು ಗುಣ. ಈ ಮಧುರತೆ ಎನ್ನುವುದು ಜೇನಿನ ಹಾಗೆ. ಆಸ್ವಾದನೆಗೆ ಸುಲಭ ಮತ್ತು ರುಚಿ, ಆರೋಗ್ಯಕ್ಕೆ ಹಿತ. ಮಗುವಿಗೆ ತಾಯಿಯ ಎದೆಹಾಲಿನಂತೆ. ಬಾಯಿಗೆ ಸಿಹಿ, ಜೀರ್ಣಕ್ಕೆ ಸುಲಭ, ಚೈತನ್ಯದ ಚಿಲುಮೆ. ಮಹಲಿಂಗರಂಗ ಹೇಳುವ –

ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದ
ಲಿಳಿಸಿದುಷ್ಣದ ಹಾಲಿನಂದದಿ ಸುಲಭವಾಗಿರ್ಪ
ಲಲಿತವಹ ಕನ್ನಡದ ನುಡಿಯಲಿ (ಅನುಭವಾಮೃತ, )

ಎಂಬ ಮಾತನ್ನು ಗಮನಿಸಬೇಕು. ಇದು ‘ಲಲಿತ’ ಎಂದರೇನೆಂದು ವಿವರಿಸುವ ಮಾತಾಗಿದೆ. ಈ ಗುಣ ಲಲಿತಕಲೆಗಳ ಗುಣ. ಇದುವೇ ವೌಖಿಕಪರಂಪರೆಯ ಸಹಜಗುಣ. ವೌಖಿಕಪರಂಪರೆಯಲ್ಲಿ ಇರುವ ಕಲೆಗಳಿಗೆ ಮಾತ್ರ ಈ ನೋಡುವ ಮತ್ತು ಕೇಳುವ ಸಹಜ ಗುಣಗಳಿರಲು ಸಾಧ್ಯ ಎನ್ನುವುದನ್ನು ಗಮನಿಸಿದಾಗ ಶಿಷ್ಟಸಾಹಿತ್ಯ ಹೇಗೆ ಲಲಿತಕಲೆಗಳಿಂದ ಹೊರಗುಳಿಯುತ್ತದೆ ಎಂಬುದು ಮನದಟ್ಟಾಗುತ್ತದೆ.

ಚಿತ್ರ, ಶಿಲ್ಪ, ವಾಸ್ತು, ನೃತ್ಯ, ಸಂಗೀತ, ನಾಟಕ – ಈ ಆರು ಲಲಿತ ಕಲೆಗಳು ಸಹಜವಾಗಿಯೇ ಜನಪದ ಲೋಕದ ಕಲೆಗಳಿಂದ ಸ್ಪೂರ್ತಿಪಡೆದು, ಹೆಚ್ಚು ಅಭಿಜಾತವಾಗಿ ಬೆಳೆದವುಗಳು. ಹೀಗಾಗಿ ಲಲಿತಕಲೆಗಳಲ್ಲಿ ವೌಖಿಕಪರಂಪರೆಯೇ ಮೂಲಗುಣವಾಗಿ ಉಳಿದುಕೊಂಡಿದೆ. ನೋಡುವ – ಕೇಳುವ ಈ ವೌಖಿಕ ಕ್ರಿಯೆಗಳ ಮಟ್ಟದಲ್ಲೇ ಅವುಗಳ ಸ್ವಾದ್ಯದ ಸಹಜತೆ ಉಳಿದಿರು ವುದರಿಂದ, ಶಿಕ್ಷಣವೇತ್ತನಲ್ಲದ ಸಾಮಾನ್ಯನ ಆಸ್ವಾದಕ್ಕೆ ಸಾಧ್ಯವಾಗುವ ಗುಣ ಲಲಿತಕಲೆಗಳಲ್ಲಿ ಉಳಿದುಕೊಂಡಿದೆ. ಪರಿಣಿತರಿಂದ ಪರಿಷ್ಕರಣಕ್ಕೊಳಗಾದರೂ ಲಲಿತಗುಣಗಳಿಂದ ಅವು ವಂಚಿತವಾಗದೆ ಉಳಿದಿರುವುದರಿಂದ ಅವುಗಳ ಬೇಡಿಕೆ ಇವತ್ತಿಗೂ ಜನಸಾಮಾನ್ಯರ ಸಮಾಜದಲ್ಲಿ ವ್ಯಾಪಕವಾಗಿದೆ.

ಆದರೆ ಶಿಷ್ಟ ಸಾಹಿತ್ಯವು ವೌಖಿಕ ಎಳೆಯಿಂದ ಸಂಪೂರ್ಣವಾಗಿ ಕಳಚಿಕೊಂಡು ಬಿಟ್ಟು, ಲಿಖಿತ ಮಾಧ್ಯಮವನ್ನು ಅವಲಂಬಿಸಿರುವುದರಿಂದ ಪ್ರದರ್ಶನ ಸ್ವಭಾವದಿಂದ ದೂರಾಗಿ ನಿಲ್ಲುತ್ತದೆ. ಇದರಿಂದ ನೋಡುವ ಮತ್ತು ಕೇಳುವ ವೌಖಿಕ ಸಾಧ್ಯತೆಗಳಿಂದ ವಂಚಿತವಾಗಿ, ಜನಸಾಮಾನ್ಯರ ಸಂಪರ್ಕದಿಂದ ದೂರಾಗಿ, ಅದು ಲಲಿತಕಲೆಗಳ ಗುಂಪಿನಿಂದ ಹೊರಗುಳಿಯು ತ್ತದೆ. ಶಿಕ್ಷಣ ಇಲ್ಲಿಯ ಕನಿಷ್ಟ ಅರ್ಹತೆಯಾಗಿ, ಓದು ಇಲ್ಲಿಯ ಅನಿವಾರ್ಯವಾದ ಪ್ರಯತ್ನವಾಗಿ, ತನ್ಮಯತೆ ಸಹೃದಯನ ಆವಶ್ಯಕ ಸಂಸ್ಕಾರವಾಗಿ ನಿಲ್ಲುತ್ತವೆ. ಈ ಗುಣಗಳಿಂದಲೇ ಶಿಷ್ಟಸಾಹಿತ್ಯ ಸಾಮಾನ್ಯರ ವಲಯದಿಂದ ದೂರ ಸರಿದು, ಪಂಡಿತರ ವಲಯಕ್ಕೆ ಸೀಮಿತವಾಗುತ್ತದೆ. ವಯಸ್ಸು ಮತ್ತು ಶಿಕ್ಷಣಗಳು ಅನಿವಾರ್ಯ ಅರ್ಹತೆಗಳಾಗಿ – ಮಕ್ಕಳು ಮತ್ತು ನಿರಕ್ಷರಿಗಳ (ಅಲ್ಪ ಶಿಕ್ಷಿತರ) ವಲಯದಿಂದ ದೂರವಾಗುತ್ತದೆ. ಈ ವ್ಯತ್ಯಾಸವು ಅನೇಕ ಜನ ಕವಿಗಳ ಮಾತಿನಲ್ಲಿಯೇ ಅಭಿವ್ಯಕ್ತಗೊಂಡುದನ್ನು ಕಾಣುತ್ತೇವೆ. ಮಧುರ ಕವಿ ಹೇಳುತ್ತಾನೆ – ತನ್ನ ಕಾವ್ಯ ‘ಪಂಡಿತರುಂ ವಿವಿಧಕಳಾಮಂಡಿತರುಂ ಕೇಳತಕ್ಕ ಕೃತಿ’ ಎಂದು.

ಆದರೆ ಕಾವ್ಯವನ್ನು ವಾಚಿಸುವ ಸಾಧ್ಯತೆಯಬಗ್ಗೆ, ಸಹೃದಯರು ಅಂತಹ ಕಾವ್ಯವನ್ನು ಕೇಳುವ ಸಾಧ್ಯತೆಯ ಬಗ್ಗೆ ಲಾಕ್ಷಣಿಕರೂ ಕವಿಗಳೂ ಉಲ್ಲೇಖಿಸುತ್ತಾರೆ. ತೀ ನಂ ಶ್ರೀ ಅವರು ‘ಭಾರತೀಯ ಕಾವ್ಯಮೀಮಾಂಸೆ’ಯಲ್ಲಿ ಉಲ್ಲೇಖಿಸುವ-

ಅರಸಿಕೇಷು ಕವಿತ್ವನಿವೇದನಂ
ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ (ಪು. ೧೬೨)

ಎಂಬ ಶ್ಲೋಕವು ಕವಿಯ ಮಾತಾಗಿರುವುದು ಗಮನಾರ್ಹ. ಇಲ್ಲಿ ‘ನಿವೇದನಂ’ ಎಂಬ ಮಾತನ್ನು ಗಮನಿಸಿದರೆ, ಅದು ಕಾವ್ಯದ ವಾಚಿಸುವ ಸಾಧ್ಯತೆಯನ್ನು ಹೇಳುತ್ತಿದೆ ಎನಿಸುತ್ತದೆ. ಪಂಪನು ತಾನು ಯಾರ್ಯಾರಿಗಾಗಿ ಕಾವ್ಯ ಬರೆದೆ ಎನ್ನುವಲ್ಲಿ ಬಾಜಿಸಲ್ ಬರೆಯಲ್ ಕೇಳಲ್ ಒಡರ್ಚುವಂಗಮ್’(ಪಂ.ಭಾ.೧೪೬೫)ಎನ್ನುತ್ತಾನೆ. ಇಲ್ಲಿಯ ಬಾಜಿಸಲ್(ವಾಚಿಸಲು) ಮತ್ತು ಕೇಳಲ್ ಎಂಬ ಮಾತುಗಳನ್ನು ಗಮನಿಸಬೇಕು. ಅಲ್ಲಿ ಪಂಪನು ಕಾವ್ಯದ ವಾಚಿಸುವ ಮತ್ತು ಅದನ್ನು ಕೇಳುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದಾನೆ. ಹೀಗೆ ವಾಚಿಸುವ ಮತ್ತು ಕೇಳುವ ಸಾಧ್ಯತೆಯ ಬಗ್ಗೆ ಮುಂದಿನ ಅನೇಕ ಜನ ಕನ್ನಡ ಕವಿಗಳು ಮಾತನಾಡಿದ್ದಾರೆ. ಕೇಳಲೊಡಂ ಕಿವಿ ಸವಿಯೊಳಗಾೞದೊಡಂ (ಗಿ..೨೧)ಎನ್ನುತ್ತಾನೆ ಹರಿಹರ. ಚಾಮರಸನು ದಾಯಿಗರು ಲಾಲಿಸುವುದೀ ಪ್ರಭುಲಿಂಗಲೀಲೆಯನು’ (೧೧)ಎನ್ನುತ್ತಾನೆ. ವೇದಪಾರಾಯ ಣದ ಫಲ…..ಭಾರತದೊಳಂದಕ್ಷರವ ಕೇಳ್ದಂಗೆ’ (೨೦)ಎನ್ನುತ್ತಾನೆ ಕುಮಾರವ್ಯಾಸ. ಜಿನಕಥೆಯನು ಕೇಳಿದವರ ಪಾಪ ಬೀಜನಿರ್ನಾಶನವಹುದು’ (.ವೈ. ಮಂಗಳಸಂಧಿ, ೧೩)ಎನ್ನುತ್ತಾನೆ ರತ್ನಾಕರವರ್ಣಿ. ಪಿರಿದನುರಾಗದೋದುವರ ನಾಲಗೆಗಳ್ಗಮರ್ದಾದುದೊಲ್ದು ಕೇ/ಳ್ವರ ಕಿವಿಗಳ್ಗೆ ಮಾಣಿಕದ ಮಂಜರಿಯಾದುದು’ (ಲೀ. ಪ್ರ.೭೭) ಎನ್ನುತ್ತಾನೆ ನೇಮಿಚಂದ್ರ.

ಈ ಎಲ್ಲ ಕವಿಗಳು – ಓದುವ ಸಾಧ್ಯತೆಯೊಂದಿಗೆ ವಾಚಿಸುವ ಸಾಧ್ಯತೆಯನ್ನೂ ಪ್ರಸ್ತಾಪಿಸು ತ್ತಾರೆ. ಜೊತೆಗೆ ಕೇಳುಗರ ಪ್ರಸ್ತಾಪವನ್ನೂ ಮಾಡುತ್ತಾರೆ. ಇಲ್ಲಿ ವಾಚಿಸುವ ಮತ್ತು ಕೇಳುವ ಸಾಧ್ಯತೆಗಳು ಕಾಣಿಸಿಕೊಂಡರೂ ಪ್ರೌಢವಾದ ಕಾವ್ಯಗಳನ್ನು ಓದುವವರು ಎಂತಹರು? ಮತ್ತು ಕೇಳುಗರು ಯಾವ ಅರ್ಹತೆಯನ್ನುಳ್ಳವರು? ಎಂಬ ಸಂಗತಿಗಳು ವಿವೇಚಿಸಬೇಕಾದವುಗಳೇ.

ವಾಚಿಸುವ ಕೆಲಸವಂತೂ ಕವಿಯದು. ತಪ್ಪಿದರೆ ಪಂಡಿತರಿಂದ ಆಗಬೇಕು. ಮತ್ತೆ ಇಲ್ಲಿಯ ಕೇಳುಗರು ಎಂತಹರು? ಎಂಬುದೊಂದು ಪ್ರಶ್ನೆ. ಇಂತಹ ಪ್ರೌಢಕಾವ್ಯ ಕವಿ ಅಥವಾ ಪಂಡಿತನಿಂದ ಪ್ರದರ್ಶನಗೊಂಡಾಗ ಸಾಮಾನ್ಯರಿಗೆ ತಿಳಿಯುವುದೇ? ಅಥವಾ ಕೇಳಿದಷ್ಟಕ್ಕೇ ಆನಂದವೀಯುವ ಗುಣ ಈ ಕಾವ್ಯದ ವಾಚಿಸುವ (ಪ್ರದರ್ಶನ)ಗುಣದಲ್ಲಿದೆಯೇ? ಎಂದು ಚಿಂತಿಸಿದರೆ, ಅದಂತೂ ಸಾಧ್ಯವಿಲ್ಲದ ಮಾತು ಎನಿಸುತ್ತದೆ. ಜೆೃನ, ವೀರಶೈವ, ವೈದಿಕ ಕಾವ್ಯಗಳಲ್ಲೆಲ್ಲ ಈ ಮಾತುಗಳು ಕಾಣಿಸಿಕೊಂಡಿವೆ. ಕೆಲ ಕಾವ್ಯಗಳಂತೂ ತಿಂಗಳಾನುಗಟ್ಟಲೆ ಓದಿ ವಿವರಿಸಿ ಹೇಳುವ ಪುರಾಣ – ಪ್ರವಚನಕ್ಕಾಗಿ ಬಳಸಲಾಗುತ್ತವೆ. ಸಾವಿರಾರು ಜನ ಕೇಳುಗರು ಅಲ್ಲಿ ಕೂಡಬಹುದು. ಆದರೆ ಅಲ್ಲಿ ಜನರಿಗೆ ತಲುಪುವುದು ಪ್ರವಚನದ ವಿವರಣೆಯೇ ಹೊರತು ನೇರವಾಗಿ ಕಾವ್ಯವಲ್ಲ. ಅದಕ್ಕಾಗಿ ಇಲ್ಲಿ ಕೇವಲ ವಾಚಿಸುವ ಮತ್ತು ಕೇಳುವ ಕ್ರಿಯೆಗಳು ನಡೆದಾಗ ಯಾರ್ಯಾರಿರು ತ್ತಾರೆಂಬುದಕ್ಕೆ ‘ಪಂಡಿತರು ವಿವಿಧಕಳಾ ಮಂಡಿತರು ಕೇಳತಕ್ಕ ಕೃತಿಗಳು’ ಇವು ಎಂಬುದನ್ನು ಸ್ವತಃ ಈ ಬಗೆಯ ಕವಿಗಳೇ ಹೇಳಿರುವುದು ನಿಜಸಂಗತಿ ಎನಿಸುತ್ತದೆ. ಹೀಗಾಗಿ ವಾಚಿಸುವ ಮತ್ತು ಕೇಳುವ ಕೆಲಸಗಳು ಇಲ್ಲಿ ನಡೆದರೂ ಮತ್ತೆ ಅವು ನಡೆದಿರುವುದು ಪಂಡಿತ ಮಂಡಳಿಯ ಎದುರಿಗೇ ಎಂಬ ಸೀಮಿತ ಅರ್ಥ ಬರುತ್ತದೆ. ಹೀಗಾಗಿ ಶಿಷ್ಟಕಾವ್ಯಗಳು ಸಾಮಾನ್ಯರಿಂದ ದೂರವೇ ಉಳಿದಂತಾಗುತ್ತದೆ.

ಇಷ್ಟಾಗಿಯೂ ಕೆಲವರು ‘ಕವಿರಾಜ ಮಾರ್ಗ’ದ ಕುರಿತೋದದೆಯುಂ ಕಾವ್ಯ ಪ್ರಯೋಗಪರಿಣತ ಮತಿಗಳ್’(೩೮)ಎಂಬ ಮಾತನ್ನು ಮುಂದೆ ಮಾಡಿಕೊಂಡು – ‘ನಿರಕ್ಷರಿಗಳೂ ಕಾವ್ಯಬರೆಯಬಲ್ಲರೆಂದು ಮಾರ್ಗಕಾರನೇ ಹೇಳಿದ್ದಾನೆ’ ಎಂದು ವಾದಿಸುತ್ತಾರೆ.

ಪದನಱಿದು ನುಡಿಯಲುಂ ನುಡಿ
ದುದನಱಿದಾರಯಲುಮಾರ್ಪರಾ ನಾಡವರ್ಗಳ್

ಎಂಬ ಮಾತಿನಂತೆ ತನ್ನ ನಾಡಿನ ಜನಗಳ ಗುಣ ಸಾಮಾನ್ಯವಾಗಿ ಜಾಣತನವಾಗಿದೆ ಎಂಬುದು ಮಾರ್ಗಕಾರನ ಅಭಿಪ್ರಾಯ.

ಚದುರರ್ ನಿಜದಿಂ ಕುಱಿತೋ
ದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್

ಎನ್ನುವ ಈ ಮಾತಿನಲ್ಲಿ ‘ಚದುರರ್’, ‘ಕಾವ್ಯಪ್ರಯೋಗ ಪರಿಣತಮತಿಗಳ್’ಎನ್ನುವವರು ಯಾರು ? ಎಂಬುದಕ್ಕೆ ‘ಕುರಿತೋದದವರು’ ಎಂಬ ಉತ್ತರ ಸ್ಪಷ್ಟವಾಗಿಯೇ ಇದೆ. ಇಂಥವರು ಕಾವ್ಯವನ್ನು ಅರಿತರೆ, ಪ್ರಯೋಗಮಾಡಿದರೆ ಅದು ಜನಪದ ಕಾವ್ಯವೇ ಆಗಿರಲು ಸಾಧ್ಯವಿದೆ. ಅವರು ಅರಿಯುವ ಮತ್ತು ಪ್ರಯೋಗಿಸುವ ಕಾವ್ಯ ಶಿಷ್ಟಕಾವ್ಯವಾಗಿರಲು ಸಾಧ್ಯವಿಲ್ಲ ಎಂಬುದಕ್ಕೆ ಮತ್ತೆ ಪ್ರತ್ಯೇಕ ವಿವರಣೆ ಅಗತ್ಯವಿಲ್ಲವೆಂದು ತೋರುತ್ತದೆ.

ಅಭಿನವಗುಪ್ತನು ಹೇಳುವ ಸಹೃದಯನ ಲಕ್ಷಣಗಳನ್ನು ಉಲ್ಲೇಖಿಸುವ ತೀನಂಶ್ರೀ ಅವರು ಅವನ ಮಾತನ್ನೇ ತತ್ವಶಃ ಒಪ್ಪಿ ಸ್ವೀಕರಿಸುತ್ತಾರೆ.

ಯೇಷಾಂ ಕಾವ್ಯಾನುಶೀಲನವಶಾತ್
ವಿಶದೀಭೂತೇ ಮನೋಮುಕುರೇ
ವರ್ಣನೀಯ ತನ್ಮ ಯೀಭವನಯೋಗ್ಯತಾ
ತೇ ಹೃದಯ ಸಂವಾದಭಾಜಃ ಸಹೃದಯಾಃ

(ಕಾವ್ಯಗಳನ್ನು ಪರಿಶೀಲಿಸಿ, ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದ, ವರ್ಣಿತ ವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವರೇ ಸಹೃದಯರು(ಕವಿಯೊಂದಿಗೆ) ಹೃದಯದ ಹೊಂದಿಕೆಯನ್ನುಳ್ಳವರು. – ಭಾ.ಕಾ.ಮೀ. ಪು.೧೬೧).

ತೀನಂಶ್ರೀ ಅವರು ಈ ಮಾತನ್ನೇ ಸಂಪೂರ್ಣವಾಗಿ ಒಪ್ಪಿ ಕೊಳ್ಳುತ್ತಾರೆ. ಅವರ ಅರ್ಥದಲ್ಲಿ ಈ ಮೇಲೆ ಹೇಳಿರುವ ಲಕ್ಷಣವಂತನು ಮಾತ್ರ ಸಹೃದಯ. ಅಭಿನವಗುಪ್ತನ ಈ ಬಗೆಯ ವ್ಯಾಖ್ಯಾನವನ್ನು ಕನ್ನಡದಲ್ಲಿ ಕೊನೆಯ ಮಾತೆಂದು ಒಪ್ಪಿಕೊಳ್ಳುವಲ್ಲಿ ತೀನಂಶ್ರೀ ಅವರೇ ಮೂಲಭೂತ ಕಾರಣಕರ್ತರಾಗುತ್ತಾರೆಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಇಲ್ಲಿಯವರೆಗೆ ಸಹೃದಯನ ಬಗೆಗೆ ಮಾತನಾಡಿದ ಎಲ್ಲರೂ ತೀನಂಶ್ರೀ ಅವರ ವಿವರಣೆಯನ್ನು ಅಕ್ಷರಶಃ ಅನುಸರಿಸಿದ್ದಾರೆ. ಹೀಗಾಗಿ ತೀನಂಶ್ರೀ ಅವರ ‘ಭಾರತೀಯ ಕಾವ್ಯಮೀಮಾಂಸೆ’ ಪ್ರಕಟವಾದಾಗಿ ನಿಂದಲೂ ಅಭಿನವಗುಪ್ತನ ವಿವರಣೆಯು ಕನ್ನಡ ಸಾಹಿತ್ಯದ ಮನಸ್ಸು ಮತ್ತು ಬುದ್ಧಿಯನ್ನು ಹಿಡಿದು ಆಳಿದೆ.

ಇದು ಇಂದಿನ ಮಾತಲ್ಲ ; ಕನ್ನಡದಲ್ಲಿ ಸಂಸ್ಕೃತ ಕಾವ್ಯಮೀಮಾಂಸಕರ ಪ್ರಭಾವ ಮೊದಲಿ ನಿಂದಲೂ ಇದ್ದೇ ಇದೆ. ‘ಕವಿರಾಜಮಾಗರ್’ವು ದಂಡಿ ಮತ್ತು ಭಾಮಹರ ಕಾವ್ಯಶಾಸ್ತ್ರಗಳನ್ನು ಅನುಸರಿಸಿದ್ದನ್ನು ಕಂಡರೆ ಈ ಮಾತು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಕನ್ನಡ ಸಾಹಿತ್ಯದ ಇಡೀ ಪರಂಪರೆಯೇ ಆನಂದದ ಕಡೆ ಹೆಚ್ಚು ವಾಲಿರುವುದು. ಆನಂದವೆಂಬುದು ಸಹೃದಯನ ಮಗ್ನಗೊಳ್ಳುವ ಗುಣವನ್ನು ಅವಲಂಬಿಸಿದೆ. ಮಗ್ನತೆ ಎಂಬುದು ‘ಕಲೆಗಾಗಿ ಕಲೆ’ ಎಂಬ ಸಿದ್ಧಾಂತದ ಮೂಲಾಂಶವಾಗಿದೆ. ‘‘ನಮ್ಮನ್ನು ಸಂತೋಷಗೊಳಿಸುವ ಎಲ್ಲ ಸಂಗತಿಗಳಲ್ಲಿ ಮಗ್ನತೆಯೇ ಕಲೆಯೆಂಬುದು ಕಲೆಗಾಗಿ ಕಲೆಯ ಸಿದ್ಧಾಂತದಿಂದ ತೋರಿಬರು’’ತ್ತದೆ (ಕಲೆಎಂದರೇನು, ಪು.೧೬೯) ಎಂದು ಟಾಲಸ್ಟಾಯ್ ಅವರು ಅಭಿಪ್ರಾಯ ಪಡುತ್ತಾರೆ.

ನಮ್ಮ ಕಲೆಯ ಗುರಿ ಆನಂದ ಶಾಂತಿ ಭಕ್ತಿ – ಮುಂತಾಗಿ ಹೀಗೇಕಾಯಿತೆಂದು ಆಲೋಚಿಸಿ ದರೆ, ಅದಕ್ಕೆ ಕಾರಣ ಭಾರತೀಯ ತತ್ತ್ವಜ್ಞಾನಗಳ ಪ್ರಭಾವವೆಂದೇ ಹೇಳಬೇಕಾಗುತ್ತದೆ. ಭಾತೀಯ ತತ್ವಜ್ಞಾನಗಳ ಕೊನೆಯ ಗುರಿ ಮೋಕ್ಷಸಾಧನೆ, ಬಯಲಿನಲ್ಲಿ ಲೀನವಾಗುವುದು, ಬ್ರಹ್ಮಾನಂದದಲ್ಲಿ ಕೂಡುವುದು ; ಹೀಗೆಲ್ಲ ಅಲೌಕಿಕ ಭಾವನೆಯೇ ಆಗಿದೆ. ಭಾರತೀಯ ಎಲ್ಲ ಧರ್ಮಗಳ ತತ್ವಜ್ಞಾನಗಳ ಗುರಿ ಒಂದೇ ಆಗಿರುವುದರಿಂದ, ನಮ್ಮ ಕವಿ ಮತ್ತು ಶಾಸ್ತ್ರಕಾರರು ಹೆಚ್ಚು ಆಧ್ಯಾತ್ಮಿಕದೆಡೆಗೆ ಒಲವುಳ್ಳವರಾಗಿರುವುದರಿಂದ, ಕಾವ್ಯ ಮತ್ತು ಕಲೆಗಳ ಧೋರಣೆಯಲ್ಲಿ ಆನಂದ ಪ್ರಮುಖವಾಗಿ ಸ್ಥಾನಪಡೆಯಲು ಕಾರಣವಾಗಿರುವ ಸಾಧ್ಯತೆ ಇದೆ. ಪ್ರಾರಂಭದಿಂದಲೂ ಕನ್ನಡ ಸಾಹಿತ್ಯದ ಮೇಲೆ ಗಾಢಪ್ರಭಾವ ಬೀರುತ್ತ ಬಂದ, ಕನ್ನಡ ಕವಿಗಳ ದೃಷ್ಟಿಯನ್ನು ನಿಯಂತ್ರಿಸಿದ ಸಂಸ್ಕೃತ ಕಾವ್ಯಮೀಮಾಂಸಕಾರರಂತೂ ಹೆಚ್ಚು ಜನ ತತ್ತ್ವಜ್ಞಾನಿಗಳೇ. ಭರತಮುನಿಗಳಿಂದಲೇ ಆ ಪರಂಪರೆ ಮೊದಲಾಗುವುದನ್ನು ಗಮನಿಸಬೇಕು. ಆದರೂ ಪ್ರಾಪಂಚಿಕ ಬದುಕಿನ ಬಗ್ಗೆ ಒಂದಿಷ್ಟು ಆಸಕ್ತಿ ತಾಳುವ ಧೋರಣೆಯನ್ನು ಕನ್ನಡಕವಿಗಳಲ್ಲಿ ಕಂಡರೂ ಕೊನೆಗೆ ಅವರೆಲ್ಲರೂ ಅಲೌಕಿಕ ಆನಂದದ ಕಡೆಗೇ ಕೈಯೆತ್ತಿ ನಿಲ್ಲುವುದನ್ನು ಕಾಣುತ್ತೇವೆ. ಕನ್ನಡ ಕವಿಗಳು ಲೌಕಿಕ – ಅಲೌಕಿಕ ಎರಡೂ ದಡಗಳ ಮೇಲೆ ಕೈಯೂರಿ ನಡೆದರೂ ಅವರಿಗೆ ಹೆಚ್ಚು ಅಪ್ಯಾಯಮಾನವೆನಿಸಿದವು ಧಾರ್ಮಿಕ ದಡಗಳೇ. ಅದಕ್ಕಾಗಿ ಕಾವ್ಯದ ಬಗೆಗಿನ ಸಾಮಾನ್ಯ ಮಾತುಗಳನ್ನು – ಪಂಪನಿಂದ ಹಿಡಿದುಕೊಂಡು ಹರಿಹರ, ಕುಮಾರವ್ಯಾಸ ುುಂತಾದ ಪ್ರಮುಖರೆಲ್ಲರೂ ತಮ್ಮತಮ್ಮ ಧಾರ್ಮಿಕ ಕೃತಿಗಳಲ್ಲಿಯೇ ಮಾತನಾಡಿದ್ದು ಹೆಚ್ಚು.

ಆದರೆ ವಚನಕಾರರು ಮಾತ್ರ ಒಂದು ಧರ್ಮವನ್ನು ಮತ್ತು ತತ್ವಜ್ಞಾನವನ್ನು ಹುಟ್ಟುಹಾಕಿದರೂ ಮನೆ ಗೆದ್ದು ಮಾರು ಗೆದೆಎಂಬಂತೆ ಇಹದ ಸತ್ಯವನ್ನು ಒತ್ತಿ ಹೇಳಿದುದರಿಂದ ಆನಂದಕ್ಕಿಂತ ಬದುಕು ಅವರಿಗೆ ದೊಡ್ಡದಾಗಿ ಕಂಡಿತು. ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರುಎಂಬ ದೃಷ್ಟಿಯಿಂದಾಗಿ ಈ ಬದಲಾವಣೆಯಾಯಿತೆಂದು ತೋರುತ್ತದೆ. ಹೀಗಾಗಿಯೇ ವಚನಗಳಲ್ಲಿ ಇಹವನ್ನು ಗೆಲ್ಲುವ ಕಾಯಕ – ದಾಸೋಹ ಪರಿಕಲ್ಪನೆಗಳನ್ನು ಕೊಡಲು ಶರಣರಿಗೆ ಸಾಧ್ಯವಾಯಿತು. ನುಡಿದಂತೆ ನಡೆಎಂದು, ನುಡಿಗೆ ನಡೆಗೆ ಸಮಾನವಾದ ಗಮನವನ್ನು ಕೊಟ್ಟರು. ಕೇವಲ ನುಡಿಗೆ (ಮಾತಿಗೆ) ಮತ್ತು ಅರ್ಥಕ್ಕೆ ಮಹತ್ವವನ್ನು ಕೊಡಲಿಲ್ಲ. ಹೀಗಾಗಿ ಭಾರತೀಯ ಕಾವ್ಯಮೀಮಾಂಸೆಯ ಆಚೆಗೆ ವಚನಗಳು ಉಳಿಯುತ್ತವೆ. ಆನು ಒಲಿದಂತೆ ಹಾಡುವೆಎಂಬ ಧೋರಣೆ ಬಸವಣ್ಣನವರದು.

ನಾವು ಜನಪದಕ್ಕೆ ಬಂದರೆ ಇಲ್ಲಿ ನಾನಾತರದ ಜನರೆಲ್ಲ ಒಂದಾಗಿ ಬಾಳುವ ಭಾವನೆ ಇರುವುದರಿಂದ ಯಾವುದೇ ಒಂದು ಧಾರ್ಮಿಕ ಭಾವನೆ ಇಲ್ಲಿ ಆಳದೆ ‘ಸಮಷ್ಠಿಪ್ರಜ್ಞೆ’ ಆಳುವುದರಿಂದ ಸಾಮೂಹಿಕ ಚಿಂತನೆಯೇ ಇಲ್ಲಿ ಪ್ರಮುಖವೆನಿಸುತ್ತದೆ. ಹೀಗಾಗಿ ಸಾಮೂಹಿಕ ಒಪ್ಪಂದಗಳು ನಂಬುಗೆಗಳು ಇಲ್ಲಿ ಹೆಚ್ಚು ಪ್ರಮುಖವೆನಿಸಿ, ಆನಂದಕ್ಕಿಂತ ಬದುಕು (ವಿಷಯ) ಹೆಚ್ಚು ಮಹತ್ವದ್ದೆನಿಸುತ್ತದೆ. ಶಿಷ್ಟಕಾವ್ಯ ಸ್ವರೂಪದಲ್ಲಿ ಪ್ರಮುಖವೆನಿಸುವ ಶಬ್ದಾರ್ಥಗಳು ಮತ್ತು ಪ್ರಯೋಜನದಲ್ಲಿ ಪ್ರಮುಖವೆನಿಸುವ ‘ಅಲೌಕಿಕ ಆನಂದ’ ಇಲ್ಲಿ ಹಿಂದೆ ಸರಿದು, ಸಂದರ್ಭ (ವಸ್ತು) ಮತ್ತು ಸಮೂಹಪ್ರಜ್ಞೆಗಳು ಮುಂದಾಗಿ ಸ್ಥಾನಪಡೆಯುತ್ತವೆ. ಜನಪದ ಕಲೆ ಸಾಹಿತ್ಯದ ಒಟ್ಟು ವ್ಯಾಪಾರವು ಶಿಷ್ಟಕಾವ್ಯದ ಸಂಗತಿಗಳಿಗಿಂತ ಭಿನ್ನವಾಗಿ ತೋರುತ್ತದೆ. ಆದರೆ ಲಲಿತಕಲೆಗಳ ಸಾಮಾನ್ಯ ಸ್ವರೂಪಕ್ಕೆ ಜನಪದ ಸಾಹಿತ್ಯ ಸ್ವರೂಪ ಸಮೀಪವೆನಿಸುತ್ತದೆ. ಗೊಮ್ಮಟೇಶ್ವರ, ತಾಜಮಹಲುಗಳ ಶಿಲ್ಪ ಮತ್ತು ವಾಸ್ತುಗಳ ಸೃಷ್ಟಿಯಲ್ಲೆಲ್ಲ ಒಂದೊಂದು ಧಾರ್ಮಿಕ ಹಿನ್ನೆಲೆ ಕೆಲಸಮಾಡಿದ್ದರೂ ಅದನ್ನು ಮೀರಿ ಆ ಕಲೆಗಳ ಆಕರ್ಷಣೆ ಪ್ರಭಾವ ಕಾಣುತ್ತದೆ. ಹೀಗೆಯೇ ಪ್ರತಿಭಾವಂತರ ಚಿತ್ರಕಲೆ, ಸಂಗೀತ, ನೃತ್ಯ, ನಾಟಕಗಳು – ಸಾಮಾನ್ಯನಿಗೆ ಆಕರ್ಷಿಸುವುದನ್ನು ಕಾಣುತ್ತೇವೆ. ಆದರೆ ಲಿಖಿತ ಮೂಲದ ಸಾಹಿತ್ಯದಲ್ಲಿ ಶಿಕ್ಷಣ ಮತ್ತು ಧರ್ಮಗಳು ಸಾಮಾನ್ಯವಾಗಿ ಅಡ್ಡಬರುತ್ತವೆ. ಇವುಗಳನ್ನು ಮೀರಿನಿಲ್ಲುವ ಗುಣದ ಬದಲಾಗಿ ಅವುಗಳಿಂದ ಬಂಧಿತವಾದ ಗುಣವೇ ಅಧಿಕವಾಗಿ ಕಾಣುವುದರಿಂದ ಶಿಷ್ಟಸಾಹಿತ್ಯವು ಲಲಿತಕಲೆಗಳಿಂದ ದೂರವಾಗೇ ಉಳಿಯುತ್ತದೆ.

* * *