ಮೀಮಾಂಸೆಎಂದರೆ ಚರ್ಚೆ ಎಂದು ಅರ್ಥ. ‘ಕಲಾಮೀಮಾಂಸೆ’ ಎಂದರೆ ಕಲೆಗೆ ಸಂಬಂಧಿಸಿದ ಯಾವುದೇ ಬಗೆಯ ತಾತ್ವಿಕಚರ್ಚೆ ಎಂದು ಅರ್ಥವಾಗುತ್ತದೆ. ಹಾಗೆಯೇ ‘ಕಾವ್ಯಮೀಮಾಂಸೆ’ ಎಂದರೆ ಕಾವ್ಯಕ್ಕೆ ಸಂಬಂಧಿಸಿದ ಯಾವುದೇ ಬಗೆಯ ತಾತ್ವಿಕಚರ್ಚೆ ಎಂದಾಗುತ್ತದೆ. ಕಾವ್ಯಮೀಮಾಂಸೆಯ ಮೂಲಭೂತ ತಾತ್ವಿಕವಿವೇಚನೆಗಳೆಲ್ಲ ಕವಿ, ಕಾವ್ಯ ಮತ್ತು ಸಹೃದಯನ ಸುತ್ತಲೇ ಇರುವಂತಹವು. ಪ್ರಾರಂಭದಲ್ಲಿ ಕವಿ, ಕಾವ್ಯ, ಸಹೃದಯ – ಈ ಪರಿಕಲ್ಪನೆಗಳ ಸ್ವರೂಪಗಳ ಚರ್ಚೆಯೇ ಇಲ್ಲಿಯ ಮೂಲಭೂತ ತಾತ್ವಿಕ ಚರ್ಚೆಗೆ ಬುನಾದಿ ಹಾಕುತ್ತವೆ. ನಂತರ ಕಾವ್ಯ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯು ಕವಿಯ ನಿರ್ಮಾಣ ಸಾಮರ್ಥ್ಯದ ಸಂಗತಿಗಳನ್ನು ತನ್ನಲ್ಲಿ ಅಡಕವಾಗಿಸಿಕೊಂಡು ಚರ್ಚಿಸುತ್ತದೆ. ಮುಂದೆ ಕಾವ್ಯವನ್ನು ನಿರ್ಮಿಸಿದ ಕವಿಗೂ ಅದನ್ನು ಓದುವ/ಕೇಳುವ ಸಹೃದಯನಿಗೂ ದೊರೆಯುವ ಲಾಭಗಳೇನು? ಅರ್ಥಾತ್ ಕಾವ್ಯ ಸಹೃದಯನ ಮೇಲೆ ಬೀರುವ ಪರಿಣಾಮಗಳೇನು? ಎಂಬ ಸಂಗತಿಗಳ ಚರ್ಚೆ ಇಲ್ಲಿ ಮುಖ್ಯವಾಗುತ್ತದೆ. ಹೀಗೆ ಈ ಐದು ಪ್ರಮುಖಚರ್ಚೆಗಳು ಕಾವ್ಯಮೀಮಾಂಸೆಯ ಮೂಲಭೂತ ತಾತ್ವಿಕಚಿಂತನೆಗಳೆನಿಸುತ್ತವೆ. ಈ ತಾತ್ವಿಕ ಚಿಂತನೆಗಳ ಚರ್ಚೆಯೇ ಕಾವ್ಯಮೀ ಮಾಂಸೆಯ ಮೂಲಕ್ಷೇತ್ರವೆನಿಸುತ್ತದೆ. ಈ ಮೂಲ ತಾತ್ವಿಕಚಿಂತನೆಗಳ ಸಂಬಂಧ ಗಳನ್ನು ಹೀಗೆ ಗೆರೆ ಎಳೆದು ತೋರಿಸಬಹುದಾಗಿದೆ (ರೇಖಾಚಿತ್ರ – ೧ ನೋಡಿ).

ಕಲೆಯನ್ನು ಕುರಿತ ಈ ಮೇಲಿನ ಮೂಲಭೂತವಾದ ಐದು ಅಂಶಗಳ ಚರ್ಚೆಯು ಹದಗೊಳಿಸುವ ಕ್ಷೇತ್ರದ ಮೇಲೆ, ಮುಂದೆ ನಡೆಯುವ ತಾತ್ವಿಕ ಚಿಂತನೆಗಳೆಲ್ಲ (ಉದಾ: ರಸ, ಧ್ವನಿ ಮುಂ.) ಮುಖ್ಯವಾಗಿ ಕಲೆಯನ್ನು ಎದುರಿಗಿಟ್ಟುಕೊಂಡೇ ನಡೆಯುತ್ತವೆ. ಹೀಗೆ ಚರ್ಚಿಸುವಾಗಲೆಲ್ಲ ಕಲೆಯ ಹಿನ್ನೆಲೆಯಲ್ಲಿ, ಕಲೆಯ ಜೊತೆಗಿನ ಕವಿ ಮತ್ತು ಸಹೃದಯರ ಸಂಬಂಧಗಳು ನಿರಂತರವಾಗಿ ಕೆಲಸಮಾಡುತ್ತವೆ. ಕಲೆಯ ಬಗೆಗೆ ಬೆಳೆದುಕೊಂಡುಬಂದ ನಂತರದ ಈ ತಾತ್ವಿಕ ಚಿಂತನೆಗಳನ್ನು ಗಮನಿಸಿದರೆ, ಅಲ್ಲಿ ಪ್ರಮುಖವಾದ ಮೂರು ಬಗೆಯ ಚಿಂತನಾಧಾರೆಗಳನ್ನು ಗುರುತಿಸಬಹುದಾಗಿದೆ. ಈ ತಾತ್ವಿಕಚಿಂತನೆಗಳು ಕಲೆಯ ಪ್ರಮುಖ ವಾದ ಮೂರು ಮುಖಗಳನ್ನು ಆಧರಿಸಿ ಬೆಳೆದಿರುವುದು ಕಂಡುಬರುತ್ತದೆ. ಅವುಗಳೆಂದರೆ: ೧. ಕಲೆಯ ಸೌಂದರ್ಯ ಮುಖ, ೨. ರಚನಾ ಮುಖ ಹಾಗೂ ೩. ಜೀವನ ಮುಖ (ರೇಖಾಚಿತ್ರ – ೨ ನೋಡಿ). ಕಲೆಯ ಈ ಮೂರು ಮುಖ್ಯ ಮುಖಗಳ ತಾತ್ವಿಕ ಚರ್ಚೆಗಳೇ ಆಯಾ ಮುಖದ ಪ್ರಸ್ಥಾನಗಳಾಗಿ ಕಾಣಿಸುತ್ತವೆ. ಕಲಾಮೀಮಾಂಸೆಯ ಈ ಮೂರು ಮುಖದ ಚಿಂತನಾಧಾರೆಗಳನ್ನು ಹೀಗೆ ಗುರುತಿಸಬಹು ದಾಗಿದೆ:

ಚಿತ್ರ: ೦೧

೧. ಕಲಾಮೀಮಾಂಸೆ ಅಥವಾ ಸೌಂದರ್ಯ ಕಲಾಶಾಸ್ತ್ರ

೨. ರಾಚನಿಕ ಕಲಾಮೀಮಾಂಸೆ ಅಥವಾ ರಾಚನಿಕ ಕಲಾಶಾಸ್ತ್ರ

೩. ಜೀವನ ಕಲಾ ಮೀಮಾಂಸೆ ಅಥವಾ ಜೀವನ ಕಲಾಶಾಸ್ತ್ರ

ಎಲ್ಲಾ ಲಲಿತಕಲೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಮೇಲಿನಂತೆ ಹೆಸರುಗಳನ್ನು ಇಟ್ಟುಕೊಳ್ಳಬಹುದು. ‘ಸೌಂದರ್ಯ ಕಲಾಮೀಮಾಂಸೆ’ (ಸೌಂದರ್ಯ ಕಲಾಶಾಸ್ತ್ರ) ಮತ್ತು ‘ರಾಚನಿಕ ಕಲಾಮೀಮಾಂಸೆ’ (ರಾಚನಿಕ ಕಲಾಶಾಸ್ತ್ರ ) ಎಂಬ ಹೆಸರುಗಳಂತೂ ಈಗಾಗಲೇ ಪ್ರಚಲಿತದಲ್ಲಿವೆ. ಅವು ಎಷ್ಟೊಂದು ನಮಗೆ ಪರಿಚಿತವಾಗಿವೆ ಎಂದರೆ ಈ ಹೆಸರುಗಳಲ್ಲಿಯ ‘ಕಲಾ’ ಎಂಬ ಪದವನ್ನೂ ಇಲ್ಲದೆ ಕೇವಲ ‘ಸೌಂದರ್ಯ ಮೀಮಾಂಸೆ’ (ಸೌಂದರ್ಯಶಾಸ್ತ್ರ) ಎಂದೂ ‘ರಾಚನಿಕ ಮೀಮಾಂಸೆ’ (ರಾಚನಿಕಶಾಸ್ತ್ರ) ಎಂದೂ ಕರೆಯುವಷ್ಟು ನಮಗೆ ಅವು ಪರಿಚಿತವಾಗಿ ಬಿಟ್ಟಿವೆ. ಈಗ ಹೊಸದಾಗಿ ಬಳಸಬೇಕಾದ ಪದವೆಂದರೆ, ಕಲೆಯು ದಾಖಲಿಸುವ ಜೀವನ ಮುಖದ ಕ್ಷೇತ್ರ ಮಾತ್ರ. ಜೀವನವನ್ನು ದರ್ಶಿಸುವ ಕಲೆಯ ಈ ಮುಖವನ್ನು ‘ಜೀವನ ಕಲಾಮೀಮಾಂಸೆ’ ಅಥವಾ ‘ಜೀವನ ಕಲಾಶಾಸ್ತ್ರ’ ಎಂಬ ಹೆಸರಿನಿಂದ ಗುರುತಿಸುವುದು ಸೂಕ್ತವೆನಿಸುತ್ತದೆ. ಸಂಕ್ಷಿಪ್ತವಾಗಿ ಇದನ್ನು ‘ಜೀವನ ಮೀಮಾಂಸೆ’ ಎಂದು ಕರೆಯಬಹುದಾಗಿದೆ.

ಚಿತ್ರ: ೦೨

 

ಕೇವಲ ಕಾವ್ಯದ ಚರ್ಚೆ ಒಂದನ್ನೇ ಗಮನಿಸಿ ಈ ಮೇಲಿನ ಕಲಾಮೀಮಾಂಸೆಯ ಮೂರು ಧಾರೆಗಳ ಹೆಸರುಗಳಲ್ಲಿ ‘ಕಲಾ’ ಎಂಬುದರ ಸ್ಥಾನದಲ್ಲಿ ‘ಕಾವ್ಯ’ ಎಂಬ ಪದವನ್ನು ಸೇರಿಸಿ ಈ ಕೆಳಗಿನಂತೆ ಹೆಸರಿಸಿಕೊಳ್ಳಬಹುದಾಗಿದೆ :

೧. ಸೌಂದರ್ಯ ಕಾವ್ಯಮೀಮಾಂಸೆ ಅಥವಾ ಸೌಂದರ್ಯ ಕಾವ್ಯಶಾಸ್ತ್ರ

೨. ರಾಚನಿಕ ಕಾವ್ಯಮೀಮಾಂಸೆ ಅಥವಾ ರಾಚನಿಕ ಕಾವ್ಯಶಾಸ್ತ್ರ

೩. ಜೀವನ ಕಾವ್ಯಮೀಮಾಂಸೆ ಅಥವಾ ಜೀವನ ಕಾವ್ಯಶಾಸ್ತ್ರ

. ಸೌಂದರ್ಯಕಾವ್ಯಮೀಮಾಂಸೆ :

ಸೌಂದರ್ಯಮೀಮಾಂಸೆಯಲ್ಲಿ ಕಾವ್ಯದ ಸೌಂದರ್ಯಮುಖವನ್ನು ಪ್ರಮುಖವಾಗಿ, ಉಳಿದ ಅಂಶಗಳನ್ನು ಗೌಣವಾಗಿ ಕಾಣಲಾಗುತ್ತದೆ. ಸೌಂದರ್ಯದ ದೃಷ್ಟಿಯೇ ಆನಂದದ ದೃಷ್ಟಿ. ಕಾವ್ಯದ ಈ ಸೌಂದರ್ಯಮುಖವನ್ನು ಸವಿಯುವವನು ಸಹೃದಯ. ಹೀಗಾಗಿ ಕಾವ್ಯದ ಸೌಂದರ್ಯ ಹಾಗೂ ಸಹೃದಯನು ಈ ಕಾವ್ಯಸೌಂದರ್ಯವನ್ನು ಆಸ್ವಾದಿಸುವ ಸಂಬಂಧದಲ್ಲಿ ಸೌಂದರ್ಯ ಮೀಮಾಂಸೆಯ ಚರ್ಚೆಗಳು ಬೆಳೆದುನಿಲ್ಲುತ್ತವೆ. ಸಹೃದಯನು ಆಸ್ವಾದಿಸುವ ಕಾವ್ಯದ ಬಾಹ್ಯ ಮತ್ತು ಅಂತರಂಗದ ಒಂದು ಸಾಮಾನ್ಯಗುಣವಾದ ಸೌಂದರ್ಯದ ಮುಖವನ್ನೇ ಉತ್ಪ್ರೇಕ್ಷಿಸಿ ಅದನ್ನೇ ಪ್ರಮುಖವೆಂದು ಗ್ರಹಿಸುವುದು ಈ ದೃಷ್ಟಿಯ ಗುಣ. ಅಲ್ಲದೆ ಕಲೆಯನ್ನು ಕೇವಲ ಸೌಂದರ್ಯದ ಖಣಿ ಎಂದು ಭಾವಿಸಿ, ಅದರಿಂದ ಬೇರಾವ ಪ್ರಯೋಜನವನ್ನೂ ಪ್ರಮುಖವಾಗಿ ಅಪೇಕ್ಷಿಸದೆ, ಕೇವಲ ‘ಕಲೆಗಾಗಿ ಕಲೆ’ ಎಂಬ ಸೌಂದರ್ಯಮುಖದ ಕಲಾಮೀಮಾಂಸೆಯೇ ಇಲ್ಲಿ ಮುಖ್ಯವಾಗಿ ನಡೆಯುತ್ತದೆ. ಇದರ ಅಲೌಕಿಕ ದೃಷ್ಟಿಯ ಚರ್ಚೆಯಿಂದಾಗಿ ಇಲ್ಲಿಯ ಗಮನ ಆಧ್ಯಾತ್ಮದ ಕಡೆಗೆ ವಾಲಿನಿಲ್ಲುತ್ತದೆ. ಕಾವ್ಯದ ಬಗೆಗೆ ಸಂಸ್ಕೃತ ಅಲಂಕಾರಿಕರಿಂದ ಬೆಳೆದುಬಂದ ಮುಖ್ಯ ಪ್ರಸ್ಥಾನಗಳಾದ ಅಲಂಕಾರ, ರೀತಿ, ಔಚಿತ್ಯ, ವಕ್ರೋಕ್ತಿ, ಧ್ವನಿ ಹಾಗೂ ರಸಸಿದ್ಧಾಂತಗಳೆಲ್ಲ ಕಾವ್ಯವನ್ನು ಕೇವಲ ಒಂದು ಸುಂದರವಾದ ಕಲೆ ಎಂದು ಭಾವಿಸಿ ಚರ್ಚಿಸಿದ ‘ಸೌಂದರ್ಯ ಶಾಸ್ತ್ರದ’ ವಿವೇಚನೆಗಳೇ ಆಗಿವೆ.

[1]

. ರಾಚನಿಕಕಾವ್ಯಮೀಮಾಂಸೆ :

ಇಲ್ಲಿ ಕಲೆಯ ರೂಪ, ಪ್ರಕಾರ ಮತ್ತು ಅದರ ವಿಶಿಷ್ಟ ರಚನಾರೀತಿಗಳು ಸೈದ್ಧಾಂತಿಕ ಚರ್ಚೆಗೆ ಒಳಗಾಗುತ್ತವೆ. ಈ ಬಗೆಯ ಚಿಂತನೆಗಳಿಂದಲೇ ಕಲೆಯ ರಾಚನಿಕ ಪ್ರಸ್ಥಾನಗಳು ಸೃಷ್ಟಿಗೊಳ್ಳುತ್ತವೆ. ಇಂತಹ ಸಿದ್ದಾಂತಗಳೆಲ್ಲವನ್ನು ಒಟ್ಟಾರೆಯಾಗಿ ಸೇರಿಸಿ ‘ರಾಚನಿಕ ಕಲಾ ಮೀಮಾಂಸೆ’ ಅಥವಾ ‘ರಾಚನಿಕ ಕಲಾಶಾಸ್ತ್ರ’ ಎಂದು ಕರೆಯಬಹುದಾಗಿದೆ. ವಿಶೇಷವಾಗಿ ಕಾವ್ಯದ ರಚನೆಯ ಅಂಶಗಳನ್ನೊಳಗೊಂಡು, ರಚನಾಶಾಸ್ತ್ರವಾಗಿ ಛಂದಸ್ಸು ಬೇಳವಣಿಗೆ ಹೊಂದಿ, ಪ್ರತ್ಯೇಕ ಶಾಸ್ತ್ರವಾಗಿಯೇ ನಿಂತಿದೆ. ಛಂದಸ್ಸನ್ನುಳಿದಂತೆ ಕಾವ್ಯದ ಬೇರೆ ಸಂಗತಿಗಳ, ಮತ್ತು ಸಾಹಿತ್ಯದ ಬೇರೆ ಪ್ರಕಾರದ ರೂಪ ಮತ್ತು ರಚನಾ ಸಂಗತಿಗಳ ತಾತ್ವಿಕ ಚಿಂತನೆಗಳು, ರಾಚನಿಕ ಪ್ರಸ್ಥಾನಗಳಾಗಿ ಬೆಳೆದು ನಿಲ್ಲುತ್ತವೆ. ಜನಪದ ಸಾಹಿತ್ಯ ಕ್ಷೇತ್ರದ – ಗಾದೆ, ಒಗಟು, ಕಥೆ, ಮಹಾಕಾವ್ಯ ಮುಂತಾದವುಗಳ ರಾಚನಿಕ ಸಿದ್ಧಾಂತಗಳು ಪಾಶ್ಚಾತ್ಯರಲ್ಲಿ ಬೆಳೆದು ಬಂದಿದ್ದು ಅವೆಲ್ಲವನ್ನೂ ಈ ಕ್ಷೇತ್ರದಡಿಯಲ್ಲಿ ಗಣಿಸಬಹುದಾಗಿದೆ.

. ಜೀವನಕಾವ್ಯಮೀಮಾಂಸೆ :

ಬದುಕನ್ನು ಗ್ರಹಿಸುವ ಕಲಾವಿದನ ‘ಲೌಕಿಕದೃಷ್ಟಿ’ಯೇ ಕಲೆಯ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಕಲಾವಿದನ ಈ ‘ಲೌಕಿಕ ದೃಷ್ಟಿ’ ಯು ಅವನ ‘ವ್ಯಕ್ತಿತ್ವ’ದ ದ್ಯೋತಕವಾಗಿರುತ್ತದೆ. ಲಿಖಿತಮೂಲದ ಕಾವ್ಯದ ಮತ್ತು ಚಿತ್ರ, ಶಿಲ್ಪ, ವಾಸ್ತು, ಸಂಗೀತ, ನೃತ್ಯ ಮತ್ತು ನಾಟಕ ಈ ಮೊದಲಿನ ಆರು ಲಲಿತ ಕಲೆಗಳಲ್ಲಿ – ‘ಕಲಾವಿದನ ದೃಷ್ಟಿ’ ಅಥವಾ ‘ಕಲಾವಿದನ ವ್ಯಕ್ತಿತ್ವ’ವೇ ‘ಕಲಾಸೃಷ್ಟಿಯ ಸಂದರ್ಭ’ವಾಗಿ ಕೆಲಸ ನಿರ್ವಹಿಸುತ್ತದೆ. ಈ ‘ಸಂದರ್ಭದ ಸಂಗತಿ’ಗಳಾದ – ಕಲಾವಿದನು ಬದುಕಿದ್ದ ಕಾಲ, ಪ್ರದೇಶ, ಸಂಸ್ಕೃತಿ (ಧಾರ್ಮಿಕ, ಸಾಮಾಜಿಕ, ರಾಜಕೀಯ) ಹಾಗೂ ಆರ್ಥಿಕ ಈ ಪ್ರಮುಖ ಸಂಗತಿಗಳ ಪ್ರತಿನಿಧಿಯಾಗಿ ಕಲೆ ಸೃಷ್ಟಿಗೊಳ್ಳುತ್ತದೆ. ಅಂದರೆ ಕಲಾವಿದನು ಬದುಕಿದ್ದ ಸಂದರ್ಭದ ಸಂಗತಿಗಳೆಲ್ಲ (ವಸ್ತು) ಅವನ ವ್ಯಕ್ತಿತ್ವದ (ಅನುಭವದ) ಮೂಲಕ ಆಯ್ಕೆಗೊಂಡು, ಕಲೆಯ ರೂಪದಲ್ಲಿ ಅಭಿವ್ಯಕ್ತಿಗೊಳ್ಳು ತ್ತವೆ. ಹೀಗಾಗಿ ಇಲ್ಲಿ ಕಲಾವಿದನ ವ್ಯಕ್ತಿತ್ವವೆಂಬ ‘ಸಂದರ್ಭ’ವೇ ಕಲಾಭಿವ್ಯಕ್ತಿಯ ಮುಖ್ಯ ನೆಲೆಯಾಗಿ ನಿಲ್ಲುತ್ತದೆ.

ಜನಪದ ಸಾಹಿತ್ಯದಲ್ಲಾದರೆ ಇಲ್ಲಿಯ ಸಾಹಿತ್ಯ ಪ್ರಕಾರಗಳು ಪ್ರಯೋಗಗೊಳ್ಳುವ ಸಾಂಸ್ಕೃತಿಕ ಸಂದರ್ಭಗಳೇ ಆಯಾ ಪ್ರಕಾರದ ಸೃಷ್ಟಿಗೆ ಕಾರಣವಾಗಿರುತ್ತವೆ. ಈ ಎಲ್ಲ ಸಾಂಸ್ಕೃತಿಕ ಸಂದರ್ಭಗಳು ಬದುಕಿನ ಬಹುಮುಖ್ಯ ಘಟ್ಟಗಳೇ ಆಗಿರುತ್ತವೆ. ಅದಕ್ಕಾಗಿ ಜನಪದ ಸಾಹಿತ್ಯ ಪ್ರಕಾರಗಳು ಸಾಮೂಹಿಕ ಸಂದರ್ಭದ ಕೂಸುಗಳೇ ಆಗುವುದರಿಂದ, ಇಲ್ಲಿಯ ಮುಖ್ಯ ಉದ್ದೇಶ ಬದುಕನ್ನು ದಾಖಲಿಸುವುದೇ ಆಗಿರುತ್ತದೆ. ಕಾರಣ ‘ವ್ಯಕ್ತಿ ಸಂದರ್ಭ’ (ಶಿಷ್ಟ ಸಾಹಿತ್ಯದ್ದು) ಮತ್ತು ‘ಸಾಂಸ್ಕೃತಿಕ ಸಂಧರ್ಭ’ (ವೌಖಿಕ ಸಾಹಿತ್ಯದ್ದು) ಈ ಅಂಶಗಳನ್ನು ಪ್ರಮುಖವಾಗಿ ಇಟ್ಟುಕೊಂಡ ತಾತ್ವಿಕ ಚಿಂತನೆಗೆ ‘ಜೀವನ ಕಲಾಮೀಮಾಂಸೆ’ ಅಥವಾ ‘ಜೀವನ ಕಾವ್ಯಮೀಮಾಂಸೆ’ ಎಂದು ಕರೆಯಬಹುದಾಗಿದೆ.

ಇಲ್ಲಿ ಚರ್ಚೆಗೊಳ್ಳುವ ಸಂಗತಿಗಳೆಲ್ಲ ಕಲೆಯಲ್ಲಿ ಒಡಮೂಡಿಬಂದ ಬದುಕಿನ ಸಂಗತಿಗಳಾಗುವುದರಿಂದ, ಈ ಬಗೆಯ ತಾತ್ವಿಕ ಚಿಂತನೆಯು ‘ಕಲೆಯ (ಕಾವ್ಯದ) ಜೀವನ ಮುಖಿ ಚರ್ಚೆ’ಯೇ ಆಗಿರುತ್ತದೆ. ಹೀಗಾಗಿ ಇದನ್ನು ‘ ಜೀವನ ಕಲಾಮೀಮಾಂಸೆ’ಎಂದೂ ಕರೆಯಬಹುದಾಗಿದೆ. ಈ ‘ಕಲಾ ಜೀವನ’ವು ಕಲಾವಿದನು ತಾನು ಜೀವಿಸಿದ್ದ ಆಗಿನಕಾಲದ ಬದುಕನ್ನು ತನ್ನ ವಿಶಿಷ್ಟ ದೃಷ್ಟಿಯಿಂದ ಕಂಡರಿಸಿದ್ದಾಗಿರುತ್ತದೆ.ಒಂದು ಬಗೆಯಲ್ಲಿ ಈ ಬಗೆಯ ಅಭಿವ್ಯಕ್ತಿ ಕಲಾವಿದನ (ಕವಿಯ) ಆ ಕಾಲಮಾನದ – ಧೋರಣೆಯೂ ಆಗಿರುತ್ತದೆ. ಕಲೆಯ ಈ ಎಲ್ಲ ಅಂಶಗಳನ್ನು ಸೇರಿಸಿ ಒಟ್ಟಿಗೆ ‘ ಕಲೆಯ ತಿರುಳು’ ಎಂದು, ಕಾವ್ಯಕ್ಕೆ ಸಂಬಂಧಿಸಿ ‘ಕಾವ್ಯದ ತಿರುಳು’ ಎಂದು ಗುರುತಿಸಬಹುದು. ಈ ‘ಕಲಾತಿರುಳೇ’ (ಕಾವ್ಯದ ತಿರುಳೇ) ಮುಖ್ಯವಾಗಿ ಕಲಾವಿದನ – ಕವಿಯ ತನ್ನ ಕಾಲದ ಜೀವನದ ಬಗೆಗಿನ ಆತನ ಒಟ್ಟು ಗ್ರಹಿಕೆಯಾಗಿರುತ್ತದೆ.

ಕಲಾತಿರುಳನ್ನು ಗಮನಿಸಿ ಹುಟ್ಟುವ ಇಂತಹ ಚಿಂತನೆಗಳು ಗಮನಾರ್ಹವೆನಿಸುತ್ತವೆ. ಮುಖ್ಯವಾಗಿ ಕಲೆಯ ವ್ಯಾಪಕ ಚರ್ಚೆಗೆ ಗ್ರಾಸ ಒದಗುವುದೇ ಕಲೆಯ ತಿರುಳಿನಲ್ಲಿ. ಅರ್ಥಾತ್ ಕಲೆಯ ಲೌಕಿಕಮುಖದಲ್ಲಿ. ಲಲಿತಕಲೆಗಳಲ್ಲಿ ಮೊದಲಿನ ಐದು ಕಲೆಗಳಲ್ಲಿ – (ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ನೃತ್ಯ) ಸೌಂದರ್ಯದ ಮುಖವೇ ಪ್ರಮುಖವಾಗಿದ್ದು, ಸೌಂದರ್ಯದ ಮೂಲಕವೇ ಬದುಕನ್ನು ದರ್ಶಿಸುವ ಕೆಲಸ ನಡೆಯುತ್ತದೆ. ಹೀಗಾಗಿ ಸೌಂದರ್ಯದ ವೈಭವದ ುುಂದೆ ಬದುಕಿನ ಸಂಗತಿಗಳು ಅಲ್ಲಿ ತೆಳುವಾಗಿ ಬಿಡುತ್ತವೆ. ಆದರೆ ನಾಟಕವು ಇದಕ್ಕೆ ಅಪವಾವಾಗಿದೆ ಎನ್ನಬೇಕು. ನಾಟಕ ಹಾಗೂ ಕಾವ್ಯಕ್ಷೇತ್ರದಲ್ಲಿ ಬದುಕಿನ ಸಂಗತಿಗಳೇ ಮುಖ್ಯವಾಗಿ ನಿರೂಪಣೆಗೊಂಡಿದ್ದು, ಸೌಂದರ್ಯದ ಸಾಧನಗಳು ಅಲ್ಲಿ ಮಾಧ್ಯಮಗಳಂತೆ ಕೆಲಸ ನಿರ್ವಹಿಸುತ್ತವೆ. ಹೀಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಜೀವನಮುಖಿ ಚರ್ಚೆ ಬೆಳೆಯಲು ಅವಕಾಶ ವಿರುತ್ತದೆ.

ಕಾವ್ಯಮೀಮಾಂಸೆಯ ಮುಂದಿನ ಬೆಳವಣಿಗೆಯಾಗಿ ‘ಮೀಮಾಂಸಾ ಪ್ರಸ್ಥಾನಗಳು’ ಬೆಳೆದುಬರುತ್ತವೆ. ಉದಾಹರಣೆಗೆ ಭಾರತೀಯರಲ್ಲಿ ಬೆಳೆದು ಬಂದ ರಸ, ಧ್ವನಿ, ವಕ್ರೋಕ್ತಿ, ರೀತಿ, ಅಲಂಕಾರ ಈ ಮುಂತಾದವು ಸೌಂದರ್ಯ ಕಾವ್ಯಮೀಮಾಂಸೆಯ ಮುಂದಿನ ಬೆಳವಣಿಗೆಗಳಾಗಿವೆ. ಈ ತಾತ್ವಿಕ ಬೆಳವಣಿಗೆಗಳೇ ಕೃತಿ ಪರೀಕ್ಷೆಗೆ ಬಳಕೆಯಾಗುತ್ತವೆ. ಕಾವ್ಯದಲ್ಲಿ – ರಸ ಪ್ರಸಂಗಗಳೆಂದೂ ಧ್ವನಿ ಎಂದೂ ಅಲಂಕಾರವೆಂದೂ ಅನೇಕಬಗೆಯ ಲೇಖನಗಳು ಕನ್ನಡದಲ್ಲಿ ಬಂದುದನ್ನು ಕಾಣುತ್ತೇವೆ. ಅಂದರೆ ಇವೆಲ್ಲ ವಿಮರ್ಶಾ ಬರಹಗಳೇ ಆಗಿವೆ. ಈ ಬಗೆಯ ವಿಮರ್ಶೆಗೆ ಬಳಕೆಯಾಗುವ ಸಿದ್ಧಾಂತಗಳನ್ನೇ ‘ವಿಮರ್ಶಾಸಿದ್ಧಾಂತಗಳು’ ಎನ್ನುವುದು. ಅಂದರೆ ಇಲ್ಲಿ ರಸ ಸಿದ್ಧಾಂತ, ಧ್ವನಿ ಸಿದ್ಧಾಂತ – ಮುಂತಾದವುಗಳು ವಿಮರ್ಶಾ ಸಿದ್ಧಾಂತಗಳೆಂದೇ ಕರೆಸಿಕೊಳ್ಳುತ್ತವೆ. ಹೀಗಾಗಿ ಪಾಶ್ಚಾತ್ಯರಲ್ಲಿ ವಿಮರ್ಶಾ ಸಿದ್ಧಾಂತಗಳೆಂದು ಪ್ರಸಿದ್ಧಿಗೆ ಬಂದ ಐ.ಎ.ರಿಚರ್ಡ್ಸ್, ಟಿ.ಎಸ್. ಎಲಿಯಟ್, ಎಡ್ವರ್ಡ್ ಬುಲ್ಲೊ, ಲಾಂಗಿನಸ್ ಮುಂತಾದವರ ಪ್ರಸಿದ್ಧ ವಿಮರ್ಶಾ ಸಿದ್ಧಾಂತಗಳೆಲ್ಲ ನಿಜವಾಗಿಯೂ ಕಾವ್ಯಮೀಮಾಂಸೆಯ ತಾತ್ವಿಕ ಬೆಳವಣಿ ಗೆಯ ಫಲಗಳೇ ಆಗಿವೆ. ವ್ಯತ್ಯಾಸವೆಂದರೆ ಇವೆಲ್ಲ ನಮ್ಮಲ್ಲಿಯ ಸಂಸ್ಕೃತ ಕಾವ್ಯಮೀಮಾಂಸಕರ ರಸ, ಧ್ವನಿ, ಅಲಂಕಾರಗಳಂತೆ ‘ಸೌಂದರ್ಯ ಮೀಮಾಂಸೆ’ಯ ಬೆಳವಣಿಗೆಗಳಾಗಿರದೆ ಅವೆಲ್ಲ ಇಲ್ಲಿ ಹೊಸದಾಗಿ ಗುರುತಿಸಿಕೊಂಡ ‘ಜೀವನ ಕಾವ್ಯಮೀಮಾಂಸೆ’ಯ ತಾತ್ವಿಕ ಬೆಳವಣಿಗೆಗಳಾಗಿವೆ ಎಂಬುದು ಪ್ರಮುಖ ಸಂಗತಿಯಾಗಿದೆ.

ಮುಖ್ಯವಾಗಿ ಕವಿ, ಕಾವ್ಯ, ಸಹೃದಯ ಈ ಪರಿಕಲ್ಪನೆಗಳಿಗೆ ಒಳಪಡುವ ತಾತ್ವಿಕ ಚಿಂತನೆಗಳು ಮಾತ್ರ ಕಾವ್ಯಮೀಮಾಂಸೆಯ ಕ್ಷೇತ್ರಕ್ಕೆ ಒಳಪಡುತ್ತವೆ. ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನಲ್ಲದೆ ಕೆಲವು ಸಾಮಾಜಿಕ ಅಧ್ಯಯನಗಳಲ್ಲಿ ಪ್ರಸಿದ್ಧಿಗೆ ಬಂದ ಸಿದ್ಧಾಂತಗಳನ್ನು ಮತ್ತು ಕೆಲಪ್ರಸಿದ್ಧ ಸಮಾಜಚಿಂತಕರ ವಾದಗಳನ್ನು ವಿಮರ್ಶೆಗಾಗಿ ಬಳಸಿಕೊಳ್ಳುವುದನ್ನು ಕಾಣುತ್ತೇವೆ. ಮನಶಾಸ್ತ್ರೀಯ ಸಿದ್ಧಾಂತ, ಮಾನವಶಾಸ್ತ್ರೀಯ ಸಿದ್ಧಾಂತ, ದಲಿತವಾದ, ಸ್ತ್ರೀವಾದ, ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಲೋಹಿಯಾವಾದ ಈ ಮುಂತಾದ ಸಿದ್ಧಾಂತ ಮತ್ತು ವಾದಗಳನ್ನು ಸಾಹಿತ್ಯಕ್ಕೆ ಅನ್ವಯಿಸಿಕೊಂಡು ವಿಮರ್ಶೆಮಾಡುವುದು ಇಂದು ಸಾಮಾನ್ಯವಾಗಿದೆ. ಆದರೆ ಇವು ‘ಕಾವ್ಯಮೀಮಾಂಸಾಸಿದ್ಧಾಂತ’ಗಳಲ್ಲ ಎಂಬುದನ್ನು ಗಮನಿಸಬೇಕು. ಇವೆಲ್ಲ ಮೂಲಭೂತವಾಗಿ ‘ಸಾಮಾಜಿಕ ಸಿದ್ಧಾಂತ’ಗಳು ಅಥವಾ ‘ಸಾಮಾಜಿಕವಾದ’ಗಳೆ ಆಗಿರುತ್ತವೆ. ಪ್ರಾಸಂಗಿಕವಾಗಿ ಕಾವ್ಯದ ತಿರುಳನ್ನು, ಕವಿಯ ಧೋರಣೆಗಳನ್ನು ಪರೀಕ್ಷಿಸಲು ಇಂತಹ ಪ್ರಯತ್ನಗಳು ನಡೆದಿರುತ್ತವೆ. ಹೀಗಾಗಿ ಇವುಗಳನ್ನು ಪರ್ಯಾಯವಾಗಿ ‘ವಿಮರ್ಶಾ ಸಿದ್ಧಾಂತ’ ಗಳೆಂದು ಕರೆಯಬಹುದು, ಆದರೆ ಇವು ಸಾಹಿತ್ಯಸಿದ್ಧಾಂತಗಳಲ್ಲ ಎಂಬುದನ್ನು ನೆನಪಿನಲ್ಲಿಟ್ಟಿರಬೇಕಾಗುತ್ತದೆ.

ಅಂದರೆ ಒಟ್ಟಾರೆಯಾಗಿ ಕಾವ್ಯಮೀಮಾಂಸೆಯ ಸಿದ್ಧಾಂತಗಳೇ ಅಧಿಕೃತವಾಗಿ ವಿಮರ್ಶಾಸಿದ್ಧಾಂತಗಳೆನಿಸುತ್ತವೆ. ‘ಸಾಮಾಜಿಕಸಿದ್ಧಾಂತ’ಗಳು ಇಲ್ಲವೆ ‘ಸಾಮಾಜಿಕವಾದ’ಗಳು ಪ್ರಾಸಂಗಿಕವಾಗಿ ವಿಮರ್ಶೆಗೆ ಬಳಸುವ ಮಾನದಂಡಗಳಾಗುತ್ತವೆ ಎಂಬ ಸ್ಪಷ್ಟ ಅರಿವು ನಮಗೆ ಇರಬೇಕಾದುದು ಅವಶ್ಯ.

ಕಾವ್ಯಕ್ಷೇತ್ರದಲ್ಲಿ ಜೀವನಕಾವ್ಯಮೀಮಾಂಸೆಯ ತಾತ್ವಿಕಪರಿಕಲ್ಪನೆಗಳು – ಸಿದ್ಧಾಂತಗಳು, ತತ್ವಗಳು – ವಾದಗಳು ಪಾಶ್ಚಾತ್ಯರಲ್ಲಿ ವಿಮರ್ಶಾ ಕ್ಷೇತ್ರವನ್ನು ಬೆಳಗಿಸಿವೆ, ಬೆಳೆಸಿವೆ. ಭಾರತೀಯ ರಲ್ಲಿ ಕಲೆಯ ಈ ಸಂದರ್ಭದ ಮಗ್ಗುಲಿನ ಪ್ರಸ್ಥಾನಗಳು ಬೆಳೆದುಬರಲೇ ಇಲ್ಲ. ಕಾವ್ಯದ ಈ ಲೌಕಿಕಮುಖದ ಬಗ್ಗೆ ಪಾಶ್ಚಾತ್ಯರಲ್ಲಿ ಮೊದಲಿನಿಂದಲೂ ಹೆಚ್ಚಿನ ಗಮನವಿರುವುದು ಕಂಡುಬರುತ್ತದೆ. ಹೀಗಾಗಿ ಅವರಲ್ಲಿ ಕಲೆಯ ಲೌಕಿಕ ಮುಖವಾದ ಈ ಮಗ್ಗುಲಿನ ಅಂದರೆ ಜೀವನ ಕಾವ್ಯಮೀಮಾಂಸೆಯ ಚರ್ಚೆಗಳು ಸಾಕಷ್ಟು ನಡೆದಿವೆ.

ಕಲೆಯ ಬಗೆಗಿನ ಚಿಂತನೆಗಳಲ್ಲೆಲ್ಲ ಕಲೆಯೊಂದಿಗೆ ನಿಸರ್ಗದ ಗುಣಗಳನ್ನು ಹೋಲಿಸಿ ನೋಡುವ, ಆ ಮೂಲಕ ಕಲೆಗೂ ನಿಸರ್ಗಕ್ಕೂ ಇರುವ ಸಂಬಂಧವನ್ನು ವಿವರಿಸುತ್ತಲೇ ಕಲೆ ಹಾಗೂ ನಿಸರ್ಗದ ಗುಣಗಳು ಬದುಕಿನಲ್ಲಿ ಹೇಗೆ ಬೆಸೆದುಕೊಂಡಿರುತ್ತವೆ ಎಂಬ ಸೂಕ್ಷ್ಮವನ್ನು ಎತ್ತಿ ತೋರಿಸುವ ಪ್ರಯತ್ನಗಳು ಪಾಶ್ಚಿಮಾತ್ಯರ ಚರ್ಚೆಗಳಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಆದರೆ ಸಂಸ್ಕೃತ ಅಲಂಕಾರಿಕರಲ್ಲಿ ಹೀಗೆ ಕಾವ್ಯದ ಚರ್ಚೆಯಲ್ಲಿ ನಿಸರ್ಗದ ಗುಣಗಳನ್ನು ಬದುಕಿನಲ್ಲಿ ಕಂಡರಿಸುವ ಚರ್ಚೆಗಳು ಕಾಣುವುದೇ ಇಲ್ಲ. ಏಕೆಂದರೆ ಅವರೆಲ್ಲ ಗಮನಿಸಿದ್ದು ಕಾವ್ಯದ ಸೌಂದರ್ಯದ ಮುಖವನ್ನು ಮಾತ್ರ.

ಪಾಶ್ಚಾತ್ಯರಲ್ಲಿ ‘ಜೀವನಮುಖಿ’ ದೃಷ್ಟಿಯ ಸಿದ್ಧಾಂತಗಳು ಸಾಕಷ್ಟು ಸೃಷ್ಟಿಗೊಂಡಿವೆ. ಕಾವ್ಯಮೀಮಾಂಸೆಯ ಈ ಮುಖದ ಪ್ರಸ್ಥಾನಗಳು ಪಾಶ್ಚಾತ್ಯರಲ್ಲಿ ‘ಸಾಹಿತ್ಯ ವಿಮರ್ಶಾ ಸಿದ್ಧಾಂತಗಳು’ ಎಂದು ಪ್ರಸಿದ್ಧಿ ಪಡೆದಿವೆ. ಆದುದರಿಂದ ಅಲ್ಲಿ ವಿಮರ್ಶೆಯು ಛಂದಸ್ಸಿನಂತೆ ಒಂದು ಪ್ರತ್ಯೇಕ ಶಾಸ್ತ್ರವೆಂದು ಭಾವಿಸುವಷ್ಟು ಬೆಳೆದುಬರಲು ಕಾರಣವಾಗಿದೆ. ‘ಕಾವ್ಯಮೀಮಾಂಸೆ ಮತ್ತು ‘ಸಾಹಿತ್ಯವಿಮರ್ಶೆ’ಯ ಸಿದ್ಧಾಂತಗಳು ಒಂದೆಡೆ ಕೂಡುತ್ತವೆ’ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗುವುದನ್ನು ಕಾಣಬಹುದಾಗಿದೆ. ಆದರೆ ಎಲ್ಲಿ ಕೂಡುತ್ತವೆ, ಹೇಗೆ ಕೂಡುತ್ತವೆ ಎಂಬ ಖಚಿತ ಮಾತುಗಳು ಸಂಸ್ಕೃತ ಕಾವ್ಯಮೀಮಾಂಸೆಯ ಚರ್ಚೆಯ ಲ್ಲಾಗಲಿ, ಪಾಶ್ಚಾತ್ಯ ಕಾವ್ಯಮೀಮಾಂಸೆಯ ಚರ್ಚೆಯಲ್ಲಾಗಲೀ ನಮಗೆ ಎಲ್ಲೂ ಕಂಡು ಬರುವುದಿಲ್ಲ. ವಿಮರ್ಶೆಯ ಪ್ರಸ್ಥಾನಗಳು ಕಾವ್ಯಮೀಮಾಂಸೆಯ ಬೆಳೆದ ಭಾಗಗಳೇ ಆಗಿವೆಎಂಬ ವಿಚಾರವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಹೀಗಾಗಿ ನನ್ನ ದೃಷ್ಟಿಯಲ್ಲಿ ‘ವಿಮರ್ಶಾ ಕ್ಷೇತ್ರವನ್ನು ಪ್ರತ್ಯೇಕ ಶಾಸ್ತ್ರ’ವೆಂದು ಗಣಿಸಲು ಆಗುವುದೇ ಇಲ್ಲ. ಏಕೆಂದರೆ ಕಾವ್ಯಮೀಮಾಂಸೆಯ ಮುಖಗಳಾದ – ಸೌಂದರ್ಯ ಕಾವ್ಯಮೀಮಾಂಸೆ, ರಚನಾ ಕಾವ್ಯಮೀ ಮಾಂಸೆ ಹಾಗೂ ಜೀವನ ಕಾವ್ಯಮೀಮಾಂಸೆ – ಈ ಮೂರು ಮುಖಗಳ ಪ್ರಸ್ಥಾನಗಳೇ ಕಲಾಪರೀಕ್ಷೆಗಾಗಿ ಬಳಸಿಕೊಳ್ಳಲಾಗುವ ವಿಮರ್ಶಾಸಿದ್ಧಾಂತಗಳೆಂದು ಕರೆಸಿಕೊಳ್ಳುತ್ತವೆ ಎಂಬುದು ನನ್ನ ಪ್ರಮುಖ ಚಿಂತನೆಯಾಗಿದೆ.

ಭಾರತೀಯರಲ್ಲಿ ಕಾವ್ಯದ ತಿರುಳಿನ (ವಸ್ತುವಿನ) ವಿಶ್ಲೇಷಣೆಯ ದೃಷ್ಟಿಗಿಂತ ಅದನ್ನು ನಿರ್ವಹಿಸುವ ಸೌಂದರ್ಯ ಸಾಧನಗಳ (ಅಲಂಕಾರ, ರೀತಿ, ಔಚಿತ್ಯ, ವಕ್ರೋಕ್ತಿ, ಧ್ವನಿ, ರಸ) ಬಗ್ಗೆಯೇ ಸಂಪೂರ್ಣವಾಗಿ ತಾತ್ವಿಕ ಚರ್ಚೆಗಳು – ಸಿದ್ಧಾಂತಗಳು ಬೆಳೆದುಬಂದಿವೆ. ಸೌಂದರ್ಯ ಕಾವ್ಯಮೀಮಾಂಸೆಯ ಈ ಪ್ರಸ್ಥಾನಗಳನ್ನು ಬಳಸಿಕೊಂಡು – ಕನ್ನಡದಲ್ಲಿ ಈ ದೃಷ್ಟಿಯ ವಿಮರ್ಶೆ ತಕ್ಕಮಟ್ಟಿಗೆ ಬೆಳೆದುಕೊಂಡು ಬಂದಿದೆ. ಇಲ್ಲಿ ಗಮನಿಸಬೇಕಾದ ಒಂದು ಸಂಗತಿ ಎಂದರೆ ಈ ಸೌಂದರ್ಯಮೀಮಾಂಸೆಯ ಪ್ರಸ್ಥಾನಗಳಿಗೆ ಸೌಂದರ್ಯ ದೃಷ್ಟಿಯೇ ಒಂದು ಸೀಮಿತ ವಲಯವಾಗಿ ಬಿಡುತ್ತದೆ. ಹೀಗಾಗಿ ವ್ಯಾಪಕದೃಷ್ಟಿಯ ಮಿತಿ ಇಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಸೌಂದರ್ಯದ ಪ್ರಸ್ಥಾನಗಳು ಅಲೌಕಿಕ ದೃಷ್ಟಿ ಹೊಂದಿದ್ದು, ತತ್ವಶಾಸ್ತ್ರದ ಸಂಪರ್ಕ ಪಡೆದು, ಬದುಕಿನ ಬಹುಮುಖ್ಯ ಚರ್ಚೆಬೆಳೆಯಲು ಇಲ್ಲಿ ಅವಕಾಶ ಇಲ್ಲದಂತೆ ಆಗಿಬಿಡುತ್ತದೆ. ಆದರೆ ‘ಜೀವನ ಕಾವ್ಯಮೀಮಾಂಸೆ’ ದೃಷ್ಟಿಯಲ್ಲಿ ಸೌಂದರ್ಯ ಸಾಧನಗಳ ಪ್ರಭಾವ ಕಮ್ಮಿಯಾಗಿ, ಬದುಕಿನ ಸಂಗತಿಗಳೇ ಮುಖ್ಯವಾಗಿದ್ದು, ಅವೇ ಇಲ್ಲಿ ನೇರವಾಗಿ ನಮ್ಮ ಗಮನ ಸೆಳೆಯು ವುದರಿಂದ ಇಲ್ಲಿ ಹೊಸ ದೃಷ್ಟಿಯ ವಿಮರ್ಶೆಯ ದಾರಿಗಳು ಸರಳವಾಗಿ ತೆರೆದುಕೊಳ್ಳುತ್ತವೆ. ಹೀಗಾಗಿ ಇಲ್ಲಿಯ ಚರ್ಚೆಗೆ ಬದುಕೇ ತೆರೆದುಕೊಂಡಿರುತ್ತದೆ. ಸೌಂದರ್ಯ ಮೀಮಾಂಸೆಗಿರುವ ಮಿತಿಗಳು ಇಲ್ಲಿ ಒದಗಿ ಬರಲಾರವು.

ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ನಡೆದದ್ದು – ಕಾವ್ಯಕ್ಷೇತ್ರದ ರೂಪ, ಪ್ರಕಾರಗಳ ರಚನೆಗೆ ಸಂಬಂಧಿಸಿದಂತೆ – ಛಂದಶಾಸ್ತ್ರದ ಚರ್ಚೆ ಮಾತ್ರ. ಅದೂ ಮತ್ತೆ ಸಂಸ್ಕೃತದ ಪ್ರಭಾವದಡಿಯಲ್ಲೇ. ಕನ್ನಡದಲ್ಲಿ ಬೆಳೆದುಬಂದ ಸಾಹಿತ್ಯದ ಬೇರೆ ಪ್ರಕಾರದ ಸಾಹಿತ್ಯ ರೂಪಗಳ ರಚನೆಯ ಬಗ್ಗೆಯಂತೂ ನಮ್ಮಲ್ಲಿ ಕಿಂಚಿತ್ತೂ ಚರ್ಚೆ ನಡೆದಿಲ್ಲ. ಪಾಶ್ಚಾತ್ಯರಲ್ಲಿ ಸಾಹಿತ್ಯದ ರೂಪ, ಪ್ರಕಾರ ಮತ್ತು ರಚನಾ ಶೈಲಿಗಳಿಗೆ ಸಂಬಂಧಿಸಿದಂತೆ ರಾಚನಿಕ ಚರ್ಚೆಗಳು ಸಾಕಷ್ಟು ನಡೆದಿವೆ. ಕನ್ನಡ ಜನಪದ ಸಾಹಿತ್ಯದಲ್ಲಿ ಅನೇಕ ಸ್ವತಂತ್ರ ಸಾಹಿತ್ಯ ಪ್ರಕಾರಗಳಿರುವುದರಿಂದ ಇಲ್ಲಿ ‘ರಾಚನಿಕ ಕಾವ್ಯಮೀಮಾಂಸೆ’ ಯ ಸೈದ್ಧಾಂತಿಕ ಚರ್ಚೆಗಳನ್ನು ಬೆಳೆಸಲುಸಾಧ್ಯವಿದೆ.

ಕಾವ್ಯಮೀಮಾಂಸೆಯ ಕಲೆ – ಕಲಾವಿದ – ಸಹೃದಯ ಈ ಮೂರು ಪರಿಕಲ್ಪನೆಗಳ ಮೂಲಭೂತ ಚಿಂತನೆಗಳನ್ನು ವಿಮರ್ಶಾಕ್ಷೇತ್ರದಲ್ಲಿ ‘ಪ್ರಮುಖ ಪರಿಕಲ್ಪನೆಗಳು’ ಎಂದು ಗುರುತಿಸಲಾಗುತ್ತದೆ. ಕಾವ್ಯಮೀಮಾಂಸೆಯ ಬೆಳವಣಿಗೆಯ ಕ್ಷೇತ್ರಗಳಾದ – ಸೌಂದರ್ಯ ಮೀಮಾಂಸೆ’, ‘ರಾಚನಿಕ ಮೀಮಾಂಸೆಹಾಗೂ ಜೀವನ ಮೀಮಾಂಸೆ – ಈ ಮೂರು ಕ್ಷೇತ್ರಗಳ ಕಾವ್ಯಮೀಮಾಂಸಾ ಸಿದ್ಧಾಂತಗಳನ್ನು ವಿಮರ್ಶೆಗಾಗಿ ಬಳಸಿಕೊಳ್ಳುವಾಗ, ವಿಮರ್ಶಾ ಪರಿಭಾಷೆಯಲ್ಲಿ ಕ್ರಮವಾಗಿ ಹೀಗೆ ಗುರುತಿಸುವ ವಾಡಿಕೆಯಿದೆ: ಸೌಂದರ್ಯ ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನು ವಾಚಕಕೇಂದ್ರಿತ ವಿಮರ್ಶೆಸಿದ್ಧಾಂತಗಳೆಂದೂ ರಾಚನಿಕ ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನು ಕೃತಿಕೇಂದ್ರಿತ ವಿಮರ್ಶೆಸಿದ್ಧಾಂತ ಗಳೆಂದೂ ಜೀವನ ಕಾವ್ಯಮೀಮಾಂಸೆಯ ಸಿದ್ಧಾಂತಗಳನ್ನು – ಕವಿಯಧೋರಣೆ ಮತ್ತು ಕಾಲದ ಸಾಮಾಜಿಕ ಮುಖವನ್ನು ಪ್ರತ್ಯೇಕಿಸಿ, ಎರಡು ಪ್ರಕಾರಗಳಾಗಿ – ಕರ್ತೃಕೇಂದ್ರಿತ ವಿಮರ್ಶೆಮತ್ತು ಸಮಾಜ ಕೇಂದ್ರಿತ ವಿಮರ್ಶೆಸಿದ್ಧಾಂತಗಳೆಂದೂ ಗುರುತಿಸುವ ವಾಡಿಕೆ ಕಂಡು ಬರುತ್ತದೆ.

* * *
[1] ಸಂಸ್ಕೃತದ ಅಲಂಕಾರ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟ ಡಾಕೆ. ಕೃಷ್ಣಮೂರ್ತಿ ಅವರ ಅಭಿಪ್ರಾಯ ಹೀಗಿದೆ : ‘‘ಭಾರತೀಯ ಕಾವ್ಯಮೀಮಾಂಸೆ, ಭಾರತೀಯ ಸೌಂದರ್ಯಮೀಮಾಂಸೆಯ ಒಂದು ಗಣನೀಯ ಮುಖವೇ ಹೊರತು ಸ್ವತಂತ್ರವಾದ, ಸಾಮಾನ್ಯ ಕಲಾತತ್ತ್ವಕ್ಕೆ ವಿಭಿನ್ನವಾದ ಒಂದು ಪ್ರಸ್ಥಾನವಲ್ಲ. ಸಂಗೀತ, ಚಿತ್ರ, ಶಿಲ್ಪ – ಈ ಎಲ್ಲ ಕಲೆಗಳಿಗೂ ಸಮಾನವಾಗಿ ಅನ್ವಯಿಸುವ ಸೌಂದರ್ಯ ತತ್ತ್ವವು ಕಾವ್ಯಮೀಮಾಂಸೆ ಶಾಸ್ತ್ರಕ್ಕೂ ಅಷ್ಟೇ ಯಥಾರ್ಥವಾಗಿ ಅನ್ವಯಿಸುತ್ತದೆ’’ (ಭಾ.ಕಾ.ಮೀ. ತತ್ತ್ವ ಮತ್ತು ಪ್ರಯೋಗ, ಪು.೧).

ಹಿಂದಿಯ ಪ್ರಸಿದ್ಧ ಲೇಖಕರಾದ ಡಾ ಮಮತಾ ಚತುರ್ವೇದಿ ಅವರು ಕೂಡ ಇಂತಹದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ: ‘‘ಭಾರತೀಯ ಸೌಂದರ್ಯಶಾಸ್ತ್ರದ ವಾಸ್ತವ ಹಾಗೂ ವಿಕಸಿತ ರೂಪ ಕಾವ್ಯಶಾಸ್ತ್ರದಲ್ಲಿಯೇ ದೊರೆಯುತ್ತದೆ. ಹಾಗೆ ನೋಡಿದರೆ ಈ ಸೌಂದರ್ಯಶಾಸ್ತ್ರ ಒಂದು ಸ್ವತಂತ್ರಭಾಗವಾಗಿ ಸ್ಥಾಪನೆಗೊಂಡಿಲ್ಲ. ಹೊರತಾಗಿ ಸೌಂದರ್ಯದ ಮೂಲತತ್ವಗಳು, ವಿವಿಧ ಆಯಾಮಗಳು ಹಾಗೂ ಅಂಗಗಳ ವಿವೇಚನೆ ಹಾಗೂ ವಿಶ್ಲೇಷಣೆಯನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಆಳವಾಗಿ ಮಾಡಲಾಗಿದೆ. ಪ್ರಾಚೀನ ಕಾವ್ಯಶಾಸ್ತ್ರದಲ್ಲಿ ೫ ಪ್ರಮುಖ ಸಿದ್ಧಾಂತಗಳಿವೆ : ೧.ರಸ ಸಿದ್ಧಾಂತ, ೨.ಧ್ವನಿ ಸಿದ್ಧಾಂತ,೩.ಅಲಂಕಾರ ಸಿದ್ಧಾಂತ, ೪.ರೀತಿ ಸಿದ್ಧಾಂತ, ೫. ಔಚಿತ್ಯ ಸಿದ್ಧಾಂತ’’ (ಸೌಂದರ್ಯ ಶಾಸ್ತ್ರ , ಪು. ೨೭೨).