ಜಾನಪದಶಾಸ್ತ್ರಕ್ಕೆ ಸಂಬಂಧಿಸಿದಂತೆ ಪಾಶ್ಚಾತ್ಯರಲ್ಲಿ ಹೆಚ್ಚಿನ ಅಭ್ಯಾಸ ನಡೆದದ್ದು ಸಾಹಿತ್ಯವನ್ನು ಕುರಿತು. ಅದರಲ್ಲೂ ಜನಪದ ಕಥೆಗಳನ್ನು ಕುರಿತು ಹೆಚ್ಚಿನ ಸಿದ್ಧಾಂತಗಳು, ಚರ್ಚೆಗಳು ಹುಟ್ಟಿಕೊಂಡಿವೆ. ಗ್ರೀಮ್ ಸಹೋದರರಿಂದ ಪ್ರಾರಂಭವಾಗಿ ಥಿಯೋಡರ್ ಬೆನ್ಫೆ, ಮ್ಯಾಕ್ಸ್‌ಮುಲ್ಲರ್, ಕಾರ್ಲೆ ಕ್ರಾಹ್ನ, ಆಂಟಿ ಆರ್ನೆ, ಸ್ಟಿಥ್ ಥಾಮ್ಸನ್, ವ್ಹಿ.ಜೆ. ಪ್ರಾಪ್, ಲೆವಿಸ್ಟ್ರಾಸ್, ಅಲ್ಲದೆ ಇನ್ನೂ ಅನೇಕ ಜನರ ಗಮನ ಸೆಳೆದುವು ಜನಪದ ಕಥೆಗಳು; ಅಲ್ಪಮಟ್ಟಿಗೆ ಪುರಾಣ ಕಥೆಗಳು. ಜೂಲಿಯಸ್ ಕ್ರಾಹ್ನ ಜನಪದ ಕಥನಕಾವ್ಯಗಳನ್ನು ಸಂಪಾದಿಸಲೆಂದು ರೂಪಿಸಿದ ‘ಚಾರಿತ್ರಿಕ ಭೌಗೋಳಿಕ ಅಧ್ಯಯನ ವಿಧಾನ’ ಹಾಗೂ ಪ್ಯಾರಿ – ಲಾರ್ಡ್ ಅವರ ‘ವೌಖಿಕ ಸೂತ್ರಾತ್ಮಕ ಸಿದ್ಧಾಂತ’ಗಳು ಇವೆಲ್ಲ ಜನಪದಕಾವ್ಯವನ್ನು ಕುರಿತ ಶಾಸ್ತ್ರೀಯ ಅಧ್ಯಯನಗಳಾಗಿವೆ. ಆದರೆ ‘ಚಾರಿತ್ರಿಕ ಭೌಗೋಳಿಕ ಅಧ್ಯಯನ ವಿಧಾನ’ವು ನಂತರ ಮತ್ತೆ ಜನಪದ ಕಥೆಗಳಿಗೆ ಬಳಕೆಯಾಗಿದೆ.

ಮುಂದೆ ಬಂದ ‘ಸಂದರ್ಭ ಸಿದ್ಧ್ದಾಂತ’ ಮತ್ತು ‘ಪ್ರದರ್ಶನ ಸಿದ್ಧಾಂತ’ಗಳು ಹೆಚ್ಚಾಗಿ ಕ್ಷೇತ್ರಕಾರ್ಯದ ಮಾರ್ಗದರ್ಶೀ ಸೂತ್ರಗಳಂತಿವೆ. ಇವುಗಳ ವಿವರಗಳನ್ನು ಗಮನಿಸಿದರೆ ಇವೆಲ್ಲ ಶ್ರೀಮಂತರ ಮಾತುಗಳಾಗಿ ಕಾಣುತ್ತವೆ. ಈ ದೃಷ್ಟಿಯ ಅಧ್ಯಯನ ಕನಿಷ್ಠಪಕ್ಷ – ದಾಖಲೀಕರಣಕ್ಕಾಗಿ ಒಂದೇ ವೇಳೆಗೆ ಹಲವಾರು ವೀಡಿಯೊಕ್ಯಾಮರಾಗಳನ್ನು ಬಯಸುತ್ತದೆ. ಭಾರತೀಯ ಸಂದರ್ಭದಲ್ಲಿ ಇಂತಹ ಆಲೋಚನೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ನಮ್ಮ ಕ್ಷೇತ್ರಕಾರ್ಯಕರ್ತರ ಆರ್ಥಿಕ ಪರಿಸ್ಥಿತಿಯು ವೀಡಿಯೊಕ್ಯಾಮರಾಗಳನ್ನು ಬಳಸುವಷ್ಟು ಉತ್ತಮವಾಗಿದೆಯೇ? ಅಥವಾ ವೀಡಿಯೊಕ್ಯಾಮರಾಗಳನ್ನು ಬಳಸಿ ದಾಖಲಿಸಿಡುವಷ್ಟು ನಮ್ಮಲ್ಲಿಯ ಜಾನಪದಸಂಗತಿಗಳು ವಿರಳವಾಗಿವೆಯೇ? ಅಥವಾ ಅಷ್ಟೊಂದು ವೇಗವಾಗಿ ನಾಶವಾಗುತ್ತಿವೆಯೇ? ಎಂಬ ಪ್ರಶ್ನೆಗಳು ಇಲ್ಲಿ ಏಳುತ್ತವೆ.

ಅಂದರೆ ವೀಡಿಯೋ ದಾಖಲಾತಿಯೇ ನಮಗೆ ಬೇಕಾಗಿಲ್ಲವೆಂದಲ್ಲ. ಆಯ್ಕೆಯ ಗುಣವನ್ನೇ ಮೀರಿನಿಲ್ಲುವ ಪ್ರದರ್ಶನ ಮತ್ತು ಸಂದರ್ಭ ಸಿದ್ಧಾಂತಗಳ ಬಗ್ಗೆ ಕೆಲಸಂಶಯಗಳನ್ನು ವ್ಯಕ್ತಪಡಿಸಬಹುದಾಗಿದೆ. ಏಕೆಂದರೆ ಈ ಆಲೋಚನೆಗಳು ಎಂಥವರು ಹುಟ್ಟುಹಾಕಿದ ಆಲೋಚನೆಗಳೆಂದರೆ – ಎಲ್ಲಿ ಜಾನಪದ ಸಂಗತಿಗಳು ವಿರಳವಾಗಿರುತ್ತವೆಯೋ ಯಾರ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿರುತ್ತದೆಯೋ ಅಂತಹ ದೇಶದ ನಾಗರಿಕರ ಆಲೋಚನೆಗಳಿವು ಎಂಬುದು ಮೇಲುನೋಟಕ್ಕೆ ಎದ್ದು ಕಾಣುವ ಸಂಗತಿಯಾಗಿದೆ.

ಯಾವುದೇ ತತ್ವ – ವಾದ, ಪರಿಕಲ್ಪನೆ – ಸಿದ್ಧಾಂತ, ಶಾಸ್ತ್ರ ಗಳು ಹುಟ್ಟಿ ಬರುವುದು ಆಯಾ ಸಂಗತಿಗಳ ಹೊಟ್ಟೆಯೊಳಗಿಂದಲೆ. ಯಾವುದೇ ಶಾಸ್ತ್ರೀಯಸಂಗತಿ ಒಡಮೂಡಲು ಒಂದು ಪಠ್ಯದ – ಸಂದರ್ಭ(ಗರ್ಭ)ದ ಅವಶ್ಯಕತೆ ಇರುತ್ತದೆ. ಕಥೆಗಳ ಅಧ್ಯಯನದಿಂದ ಕಥಾಸಿದ್ಧಾಂತ ಗಳು ಹುಟ್ಟಿಬಂದಂತೆ, ಕಾವ್ಯಗಳ ಅಧ್ಯಯನದಿಂದ ಕಾವ್ಯಶಾಸ್ತ್ರದ ಸಿದ್ಧಾಂತಗಳು ಹುಟ್ಟಿಬರುತ್ತವೆ. ತಮ್ಮ ಪ್ರದೇಶದ ಕಥೆಗಳನ್ನು ಅಭ್ಯಾಸ ಮಾಡುವ ಮೂಲಕ – ಗ್ರಿಮ್ ಸಹೋದರರಿಗೆ ಒಂದು ‘ವಾದ’ ಹುಟ್ಟು ಹಾಕಲು ಸಾಧ್ಯವಾದುದಾದರೆ, ನಮ್ಮಲ್ಲಿ ಯ ಕಥೆಗಳನ್ನು ಅಭ್ಯಾಸ ಮಾಡುವ ಮೂಲಕ ನಮಗೂ ಒಂದು ಹೊಸಸಿದ್ಧಾಂತವನ್ನು ಸೃಷ್ಟಿಸಿಕೊಳ್ಳಲು ಏಕೆ ಸಾಧ್ಯವಾಗಲಾರದು?

ಚಿತ್ರ: ೦೧

ಯಾವುದೇ ತತ್ವ – ವಾದ, ಪರಿಕಲ್ಪನೆ – ಸಿದ್ಧಾಂತವು ತಾನು ಸೃಷ್ಟಿಗೊಳ್ಳುವ ಪ್ರದೇಶ, ಆ ಪ್ರದೇಶದ ಸಂಸ್ಕೃತಿ, ಆರ್ಥಿಕಸ್ಥಿತಿ, ಕಾಲ, ಮತ್ತು ಈ ನಾಲ್ಕೂ ಅಂಶಗಳು ಒಟ್ಟುಗೂಡಿ ಹುಟ್ಟುಹಾಕುವ ಪಠ್ಯ (ವಸ್ತು – ಸಂಗತಿ) – ಈ ಐದು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಪಠ್ಯವು ಸೃಷ್ಠಿಗೊಳ್ಳಲಿರುವ ಶಾಸ್ತ್ರದ ಸಂದರ್ಭವಾಗಿ (ಗರ್ಭವಾಗಿ) ಕೆಲಸ ಮಾಡುತ್ತದೆ. ಒಂದು ಹೊಸಪರಿಕಲ್ಪನೆ ಅಥವಾ ತತ್ವವು ಕಾಣಿಸಿಕೊಳ್ಳುವುದು ಈ ಸಂದರ್ಭದಿಂದಲೇ. ಇದನ್ನು ರೇಖಾಚಿತ್ರದ ಮೂಲಕ ಹೀಗೆ ಗುರುತಿಸಬಹುದಾಗಿದೆ (ಮೇಲಿನ ರೇಖಾಚಿತ್ರ ನೋಡಿ):

ಕಾಲ ಮತ್ತು ಸಂಸ್ಕೃತಿಗಳಲ್ಲಿ ಬದಲಾದಂತೆ – ವಾದ, ಸಿದ್ಧಾಂತಗಳ ಪ್ರಸ್ತುತತೆಯೂ ಬದಲಾಗುತ್ತದೆ. ಹುಟ್ಟಿದ ಪ್ರದೇಶಕ್ಕೇ ಹೆಚ್ಚು ಅಪ್ಯಾಯಮಾನವಾಗಿರುವ ಸೈದ್ಧಾಂತಿಕ ಆಲೋಚನೆಗಳು, ಭಿನ್ನಪ್ರದೇಶದಲ್ಲಿ ಅನೇಕಸಲ ಅರ್ಥಕಳೆದುಕೊಳ್ಳುತ್ತವೆ. ಕಾರಣ ಯಾವುದೊ ಕಾಲ, ಯಾವುದೊ ದೇಶ, ನಮ್ಮದಲ್ಲದ ಸಂಸ್ಕೃತಿ, ನಮಗೆ ದಕ್ಕದ ಆರ್ಥಿಕ ಸ್ಥಿತಿಯ ಹಿನ್ನೆಲೆಯಲ್ಲಿ ಹುಟ್ಟಿದ ಸಿದ್ಧಾಂತಗಳನ್ನು ನೆಚ್ಚಿಕೊಂಡು ಕೂಡುವಂತಿಲ್ಲ. ನಮ್ಮ ಅಧ್ಯಯನಗಳೂ ಹೆಚ್ಚು ದೇಸೀ ಕೇಂದ್ರಿತವಾದರೆ, ಹೊಸ ತತ್ವ, ಪರಿಕಲ್ಪನೆಗಳು ನಮ್ಮ ಹೊಳಹಿಗೂ ದೊರಕ ಬಹುದಾಗಿದೆ.

ಉದಾಹರಣೆಗಾಗಿ: ವಚನಚಳುವಳಿ ನಮ್ಮ ಸಂಸ್ಕೃತಿಯ ಒಡಲೊಳಗಿಂದ ಎದ್ದು ಬಂದುದು. ಶರಣರಿಗೆ ತಮ್ಮ ಚಳುವಳಿಯ ಆಶಯಗಳನ್ನು ಹೊತ್ತ ಅನೇಕ ತತ್ವಗಳನ್ನು, ಪರಿಕಲ್ಪನೆಗಳನ್ನು ಕಂಡುಕೊಳ್ಳಲು ಸಾಧ್ಯವಾದುದರ ಪರಿಣಾಮವಾಗಿ ಕಾಯಕ, ದಾಸೋಹ, ನಡೆ – ನುಡಿಗಳಂತಹ ಅನೇಕ ಸಿದ್ಧಾಂತಗಳನ್ನು ಸೃಷ್ಟಿಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ತಾವು ಕಂಡುಕೊಂಡ ಸೈದ್ಧಾಂತಿಕ ಆಲೋಚನೆಗಳ ಹಿನ್ನೆಲೆಯಲ್ಲೆ ಅವರು ಅನೇಕ ವಚನಗಳನ್ನು ರಚಿಸಿದರು. ಹೊಸಗನ್ನಡ ಸಂದರ್ಭದಲ್ಲಿ ಕಾಣಿಸಿಕೊಂಡ ಇನ್ನೊಂದು ಮಹತ್ವದ ಚಳುವಳಿ ಬಂಡಾಯ ಸಾಹಿತ್ಯ ಚಳುವಳಿ. ಬಂಡಾಯ ಸಾಹಿತಿಗಳು ತಮ್ಮ ಸೈದ್ಧಾಂತಿಕ ಆಲೋಚನೆಗಳನ್ನು ಭಾಷಣಗಳ ಮೂಲಕ ಹೇಳಿದ್ದಾರೆ, ಲೇಖನಗಳ ರೂಪದಲ್ಲಿ ದಾಖಲಿಸಿದ್ದಾರೆ. ಆದರೆ ತಮ್ಮ ಸೈದ್ಧಾಂತಿಕ ಆಲೋಚನೆಗಳನ್ನು ತಾವು ಸೃಷ್ಟಿಸಿದ ಸೃಜನಾತ್ಮಕ ಕೃತಿಗಳ ಮೂಲಕ ವ್ಯಕ್ತಪಡಿಸುವಲ್ಲಿ ಹೆಚ್ಚು ಸಾಧ್ಯವಾಗಿಸಿಕೊಂಡಿಲ್ಲವೆನಿಸುತ್ತದೆ. ಅನೇಕ ಜನ ಬಂಡಾಯ ಸಾಹಿತಿಗಳು ತಮಗೆ ಶಾಸ್ತ್ರದ ಅಗತ್ಯವಿಲ್ಲವೆಂದು ವಾದಿಸುವುದನ್ನು ಕೇಳುತ್ತೇವೆ. ಆದರೆ ಒಂದು ಸೈದ್ಧಾಂತಿಕ ಆಲೋಚನೆಯ ಬೀಜಗಳುಳ್ಳ ಸಾಹಿತ್ಯಸೃಷ್ಟಿ ಸಮೃದ್ಧಿಯಾಗಿ ಆಗಬೇಕು. ಹೀಗಾಗ ಬೇಕಾದರೆ ಆ ಸಾಹಿತ್ಯದ ಅಧ್ಯಯನ ನಿರಂತರವಾಗಿ ನಡೆಯಬೇಕು. ಹೀಗೆ ಒಂದು ಕಲಾಕ್ಷೇತ್ರದ ಅಧ್ಯಯನ ನಿರಂತರವಾಗಿ ಶಿಸ್ತಿನಿಂದ ನಡೆಯಬೇಕೆಂದರೆ ಆ ಬಗೆಗಿನ ಶಾಸ್ತ್ರ ಬೆಳೆದುಬರುವುದು ಅನಿವಾರ್ಯ. ಏಕೆಂದರೆ ಶಾಸ್ತ್ರವು ಒಂದು ಅಧ್ಯಯನಕ್ಕೆ ಮಾರ್ಗದರ್ಶನ ಮಾಡುವ, ದಿಕ್ಕು – ದಿಸೆ ತೋರಿಸುವ ಮಹತ್ವದ ಕೆಲಸವನ್ನು ಮಾಡುತ್ತದೆ. ಶಾಸ್ತ್ರಬೆಳೆದು ಬರದ ಯಾವುದೇ ಪ್ರಕಾರದ ಕಲೆಯ ಚರ್ಚೆಯು ಸಮರ್ಪಕವಾಗಿ ಮತ್ತು ಸಮೃದ್ಧವಾಗಿ ಬೆಳೆಯಲು ಸಾಧ್ಯವಿಲ್ಲ. ಚರ್ಚೆ ಬೆಳೆಯದ ಹೊರತು ಆ ಕಲೆಯ ಅಭಿವೃದ್ಧಿಯಲ್ಲಿ ವಿಕಾಸ ಕಾಣಲು ಸಾಧ್ಯವಿಲ್ಲ. ಈ ಕೊರತೆಯನ್ನು ಭಾರತೀಯ ಜಾನಪದ ಕಲಾಕ್ಷೇತ್ರವೂ ಈಗ ಅನುಭವಿಸುತ್ತಿದೆ ಎಂಬುದನ್ನು ಗಮನಿಸಬೇಕು.

ಒಂದು ಗೊತ್ತಾದ ಪ್ರದೇಶದ ವಸ್ತುವನ್ನು ಅಧ್ಯಯನಕ್ಕಾಗಿ ಆಯ್ಕೆಮಾಡಿಕೊಳ್ಳುವ ‘ಸೀಮಿತ ಕ್ರಮವೆ’ ‘ದೇಸಿ’ ಎನಿಸುತ್ತದೆ. ಸಹಜವಾಗಿಯೇ ಈ ಪ್ರದೇಶ ಮತ್ತು ಅಲ್ಲಿ ಸಂಗ್ರಹಿತ ವಸ್ತು ತನ್ನ ತಾಯ್ನಡಿನದಾಗಿರುತ್ತದೆ. ಈ ತಾಯ್ನಡೆಂಬ ‘ತವರಿನಬಣ್ಣ’ ಹೊತ್ತ ಇಲ್ಲಿಯ ಸಂಗತಿಗಳು ಸಹಜವಾಗಿಯೇ ಆ ನಾಡಿನ ಗುಣಗಳನ್ನು ಪಡೆದಿರುತ್ತವೆ. ಇಂಥದನ್ನು ಕುರಿತು ಕೆಲಸಮಾಡುವವನಲ್ಲಿ ತನ್ನದೆಂಬ ‘ತವರಿನಭಾವ’ ಪ್ರಮುಖವಾಗಿ ಕೆಲಸಮಾಡುತ್ತದೆ. ಒಮ್ಮಮ್ಮೆ ಬೆನ್ಫೆ ಅವರಂತೆ, ಮ್ಯಾಕ್ಸ್ ಮುಲ್ಲರ್ ಅವರಂತೆ – ಹೊರದೇಶದ ಸಂಗತಿಗಳನ್ನು ಆಯ್ಕೆ ಮಾಡಿಕೊಂಡಾಗಲೂ ಜೀವಮಾನವಿಡೀ ಒಂದು ಸಂಗತಿಯನ್ನು ತನ್ನ ಅಭ್ಯಾಸದ ಏಕಮಾತ್ರ ಕ್ಷೇತ್ರವಾಗಿ ಆಯ್ದುಕೊಂಡ ಕಾರಣಗಳಿಂದ – ಅಭ್ಯಾಸಿಗ ತನಗರಿವಿಲ್ಲದೆ ಆ ವಸ್ತು ಹೊಂದಿರುವ ಪ್ರದೇಶದ ಜೊತೆಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುತ್ತಾನೆ. ಹೀಗಾಗಿ ಅಷ್ಟರಮಟ್ಟಿಗೆ ಅವು ‘ದೇಸೀ ಅಧ್ಯಯನ’ಗಳೇ ಎನಿಸುತ್ತವೆ. ಏನಿದ್ದರೂ ಇಂಥವು ಅಪರೂಪದ ಉದಾಹರಣೆಗಳಷ್ಟೆ.

ದೇಸೀ ಸಂಗತಿ(ಪಠ್ಯ)ಗಳ ಸಾಂಸ್ಕೃತಿಕ ಅಧ್ಯಯನವು ‘ದೇಸೀ ದೃಷ್ಟಿ’ಯ ಅಧ್ಯಯನ ವೆನಿಸುತ್ತದೆ. ಇಂತಹ ದೇಸೀ ದೃಷ್ಟಿಯ ಅಧ್ಯಯನದ ಫಲ ಒಂದು ಸೈದ್ಧಾಂತಿಕ ಆಲೋಚನೆಯ ಹೊಳಹಿಗೆ ದಾರಿಮಾಡಿಕೊಡುತ್ತದೆ. ಆ ವಸ್ತುವಿನ ಗುಣಗಳೇ ಅದರಿಂದ ಹುಟ್ಟುವ ಸೈದ್ಧಾಂತಿಕ ಆಲೋಚನೆಯ ವ್ಯಾಪಕಗುಣವನ್ನು ನಿರ್ಧರಿಸುತ್ತವೆ. ಕಥೆ, ಗಾದೆ, ಒಗಟುಗಳಾದರೆ ಹೆಚ್ಚುವ್ಯಾಪಕವಾಗಿ, ಹಾಡು ಮತ್ತು ಇನ್ನೂ ಸ್ಥಳೀಯ ಪ್ರಕಾರಗಳನ್ನು ಕುರಿತಾದರೆ ಹೆಚ್ಚುಸೀಮಿತವಾಗಿ (ಹೆಚ್ಚು ಪ್ರಾದೇಶಿಕವಾಗಿ)ಆ ಆಲೋಚನೆಗಳು ಅನ್ವಯಿಸುತ್ತವೆ. ಎಲ್ಲೆಡೆಯೂ ಕಾಣಿಸುವ ಕಥೆ, ಗಾದೆ, ಒಗಟುಗಳಂಥವುಗಳ ವ್ಯಾಪಕತೆಯ ಗುಣವೇ ಅಂತರರಾಷ್ಟ್ರೀಯ ಗುಣಗಳೆನಿಸುತ್ತವೆ. ಪ್ರಾದೇಶಿಕಗುಣವು ಒಂದು ಪ್ರಕಾರದ ವೈಶಿಷ್ಟ್ಯತೆಯಾಗಿ ಕಾಣುತ್ತದೆ. ಪಾಶ್ಚಾತ್ಯರಲ್ಲಿ ಹುಟ್ಟಿದ ಸೈದ್ಧಾಂತಿಕ ಆಲೋಚನೆಗಳು ಕೂಡ ‘ದೇಸೀ ಮಾದರಿ’ಯ ಅಭ್ಯಾಸಗಳಿಂದಲೇ ಹುಟ್ಟಿಕೊಂಡವುಗಳಾಗಿವೆ. ‘ದೇಸಿ’ ಎನ್ನುವುದು ಎರಡು ವಲಯಗಳನ್ನು ಒಳಗೊಂಡಿರುತ್ತದೆ – ಒಂದು ಸೀಮಿತ ಪ್ರದೇಶ, ಇನ್ನೊಂದು ಸೀಮಿತ ವಿಷಯ.

. ಸೀಮಿತ ಪ್ರದೇಶ : ಫಿನ್‌ಲ್ಯಾಂಡ್ ಒಂದು ಸಣ್ಣ ರಾಷ್ಟ್ರ. ಆ ಸೀಮಿತ ಪ್ರದೇಶದಲ್ಲಿ ಸಂಗ್ರಹಿಸಿದ ‘ಕಲೆವಾಲಾ’ದ ಕಥನಕಾವ್ಯಗಳನ್ನು ಸಂಪಾದಿಸಲೆಂದು, ಸಂಗ್ರಹಿತ ಕಥಾನಕಗಳ ಜೋಡಣೆಯ ಆಲೋಚನೆಯಿಂದಲೇ ‘ಚಾರಿತ್ರಿಕ ಭೌಗೋಳಿಕ ಅಧ್ಯಯನ ವಿಧಾನ’ ಹೊರ ಹೊಮ್ಮಿದುದು. ಭಾರತದಂಥ ವಿಸ್ತಾರವಾದ ಪ್ರದೇಶದಲ್ಲಿ ಕೈಕೊಂಡ ಕ್ಷೇತ್ರ ಕಾರ್ಯಕ್ಕೆ ಆ ವಿಧಾನವನ್ನು ಅನ್ವಯಿಸಲು ಆಗುವುದಿಲ್ಲ. ಅದನ್ನು ಅನ್ವಯಿಸಲು ಮತ್ತೆ ನಾವು ಒಂದು ಸೀಮಿತ ಸಣ್ಣಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ.

. ಸೀಮಿತ ವಿಷಯ : ‘ಚಾರಿತ್ರಿಕ ಭೌಗೋಳಿಕ ಅಧ್ಯಯನ ವಿಧಾನ’ ಹುಟ್ಟಿ ಬಂದುದು ಕಥನಕಾವ್ಯಗಳ ಹೊಟ್ಟೆಯಿಂದ. ಅದನ್ನು ಜನಪದ ಕಥೆಗಳಿಗೆ ಅನ್ವಯಿಸಲು ಪ್ರಯತ್ನಿಸಿದ ಜೂಲಿಯಸ್ ಕ್ರಾಹ್ನನ ಮಗ ಕಾರ್ಲೆ ಕ್ರಾಹ್ನ ಯಶಸ್ವಿಯಾಗಲಿಲ್ಲ. ಆದರೆ ಕಥೆಯ ಎಳೆಯೊಂದು – ಕಥನಕಾವ್ಯ ಮತ್ತು ಜನಪದ ಕಥೆಯಲ್ಲಿ ಸಾಮಾನ್ಯ ಗುಣವಾದ್ದರಿಂದ ಜನಪದ ಕಥೆಯ ‘ಮೂಲಮಾದರಿ’ (Arche type)ತಯಾರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಆ ವಿಧಾನ ಸಹಾಯಕವಾಯಿತು.

ರಶಿಯಾದ ಕೇವಲ ಒಂದು ನೂರು ಕಿನ್ನರ ಕಥೆಗಳನ್ನು ತನ್ನ ಪ್ರಯೋಗಕ್ಕೆ ಅಳವಡಿಸಿದ ವ್ಹಿ.ಜೆ. ಪ್ರಾಪ್ ಅವರು ಕಿನ್ನರ ಕಥೆಗಳ ಒಟ್ಟು ರಚನೆಯಲ್ಲಿ ೩೧ ಕ್ರಿಯೆಗಳನ್ನು ಗುರುತಿಸಿದ್ದು, ಈ ಸೂತ್ರವನ್ನು ಬೇರೆ ಪ್ರಕಾರದ ಕಥೆಗಳಿಗೆ ಯಥಾವತ್ ಅನ್ವಯಿಸಲು ಆಗುವುದಿಲ್ಲ. ಆದರೆ ಕಥೆಗಳ ಸಾರ್ವತ್ರಿಕ ಗುಣಗಳಿಂದಾಗಿ, ಬೇರೆ ಪ್ರದೇಶದ ಕಿನ್ನರ ಕೆಗಳಿಗೂ ಅದು ಅನ್ವಯವಾಗುತ್ತದೆ.

ಪುರಾಣಗಳ ಅಭ್ಯಾಸದಿಂದ ಗ್ರಿಮ್ ಸಹೋದರರಿಗೆ ‘ ಪುರಾಣ ಮೂಲವಾದ’ ವನ್ನು, ಭಾರತದ ಕಥೆಗಳ ಅಭ್ಯಾಸದಿಂದ ಬೆನ್ಫೆಗೆ ‘ಭಾರತೀಯ ಮೂಲವಾದ’ವನ್ನು, ವೇದಗಳ ಅಭ್ಯಾಸದಿಂದ ಮ್ಯಾಕ್ಸ್ ಮುಲ್ಲರ್ ಅವರಿಗೆ ‘ಸೌರಪುರಾಣ ಮೂಲವಾದ’ವನ್ನು ಹುಟ್ಟು ಹಾಕಲು ಸಾಧ್ಯವಾಗಿದೆ. ಹೀಗೆಯೇ ಯಾವುದೇ ಸೈದ್ಧಾಂತಿಕ ಆಲೋಚನೆಯನ್ನು ಒಂದು ಗೊತ್ತಾದ ‘ಸೀಮಿತ ಕ್ಷೇತ್ರ’ದ ‘ದೇಸಿ’ ಸಂಗತಿ (ಪಠ್ಯ)ಯೊಂದನ್ನು ಅಭ್ಯಾಸ ಮಾಡುವ ಮೂಲಕ ಮಾತ್ರ ಸೃಷ್ಟಿಸಿಕೊಳ್ಳಲು ಸಾಧ್ಯ ಎಂಬುದನ್ನು ಗಮನಿಸಬೇಕು.

ಕಥೆ, ಗಾದೆ, ಒಗಟುಗಳಿಗೆ ಸಂಬಂಧಿಸಿದ ‘ರಚನಾ ಸಿದ್ಧಾಂತ’ಗಳು ಮಾತ್ರ ಹೆಚ್ಚು ವ್ಯಾಪಕವಾದ ಕ್ಷೇತ್ರದ ಸಂಗತಿಗಳಿಗೆ ಅನ್ವಯಿಸುವಂತಿವೆ. ಒಂದು ರೂಪದ ರಚನೆಯ ವಿಚಾರಗಳನ್ನು, ಆ ರೂಪವು ಪ್ರಪಂಚದ ಬೇರೆಲ್ಲಿದ್ದರೂ ಆ ಸಿದ್ಧಾಂತವನ್ನು ಅನ್ವಯಿಸಬಹು ದಾಗಿದೆ. ಇದು ಸಾಧ್ಯವಾಗಿರಲು ಕಾರಣವೆಂದರೆ, ಪ್ರಪಂಚದ ತುಂಬ – ಜನಪದ ಕಥೆ, ಗಾದೆ ಹಾಗೂ ಒಗಟುಗಳ ರಚನಾರೂಪಗಳು ಒಂದೇ ಬಗೆಯಾಗಿರುವುದು. ಹೀಗಾಗಿಯೇ ಇವುಗಳ ರಚನೆಗೆ ಸಂಬಂಧಿಸಿದ ತಾತ್ವಿಕ ಚಿಂತನೆಗಳು ಎಲ್ಲೆಡೆಯೂ ಸ್ವೀಕಾರವಾಗುವಂತಿವೆ. ಪ್ರಾಪ್‌ನ ಜನಪದ ಕಥೆಗಳ ರಚನಾವಿನ್ಯಾಸ, ಲೆವಿಸ್ಟ್ರಾಸ್ ಅವರ ಪುರಾಣ ರಚನಾ ವಿನ್ಯಾಸ, ಪ್ಯಾರಿ – ಲಾರ್ಡ್ ಅವರ ‘ವೌಖಿಕ ಸೂತ್ರಾತ್ಮಕ ಸಿದ್ಧಾಂತ’ ಇವು ಹೆಚ್ಚು ವ್ಯಾಪಕವಾಗಿ ಪ್ರಯೋಜನ ವಾಗುವ ಅಧ್ಯಯನಗಳಾಗಿವೆ. ಇವೆಲ್ಲ ಕಥನಪ್ರಕಾರಗಳಿಗೆ ಸಂಬಂಧಿಸಿದ ಪ್ರಕಾರಗಳೆಂಬುದನ್ನು ಗಮನಿಸಬೇಕು. ಅಂದರೆ ರಚನಾ ಸಿದ್ಧಾಂತಗಳೆಲ್ಲ ಸೃಷ್ಟಿಯಾದದ್ದು ಹೆಚ್ಚಾಗಿ ಕಥನಪ್ರಕಾರಗಳನ್ನೇ ಕುರಿತು. ಗಾದೆ ಮತ್ತು ಒಗಟುಗಳಿಗೆ ಸಂಬಂಧಿಸಿದಂತೆ ಅಲ್ಪಮಟ್ಟಿನ ರಾಚನಿಕ ಅಭ್ಯಾಸಗಳೂ ನಡೆದಿವೆ.

ಒಂದು ಗೊತ್ತಾದ ಸಂಗತಿಗೆ ಸಂಬಂಧಿಸಿದ ಯಾವುದೇ ಒಂದು ‘ತತ್ವ – ವಾದ’, ‘ಪರಿಕಲ್ಪನೆ – ಸಿದ್ಧಾಂತ’ವನ್ನು ಇನ್ನೊಂದು ಸಂಗತಿಗೆ ಸಂಬಂಧಿಸಲು ಆಗದು. ಇದಕ್ಕೆ ಕಾರಣವೆಂದರೆ ಗೊತ್ತಾದ ಒಂದು ತತ್ವ, ಒಂದು ಪರಿಕಲ್ಪನೆಯು ಖಚಿತವಾಗಿ ಯಾವುದೋ ಒಂದುಸಂಗತಿಯ ಹೊಟ್ಟೆಯೊಳಗಿಂದಲೇ ಹುಟ್ಟಿಬಂದಿರುತ್ತದೆ. ಪ್ಯಾರಿ – ಲಾರ್ಡ್ ಅವರ ‘ವೌಖಿಕ ಸೂತ್ರಾತ್ಮಕ ಸಿದ್ಧಾಂತ’ವು ಮಹಾಕಾವ್ಯಗಳೆನ್ನಬಹುದಾದ ದೀರ್ಘಕಾವ್ಯಗಳ ಹಾಡುಗಾರಿಕೆಯಲ್ಲಿ ಕಾಣುವ ಗುಣ – ಲಕ್ಷಣಗಳನ್ನು ಗಮನಿಸಿ ಸೃಷ್ಟಿಗೊಂಡುದಾಗಿದೆ. ಕಾರಣ ಸಣ್ಣ ಪ್ರಕಾರದ ಹಾಡುಗಳಿಗೆ ಅದನ್ನು ಅನ್ವಯಿಸಲು ಬಾರದು.

ಕಾವ್ಯಮೀಮಾಂಸೆಯ ಸೈದ್ಧಾಂತಿಕ ಚರ್ಚೆಗಳು ಕೂಡ ಇದಕ್ಕೆ ಹೊರತಾಗೇನೂ ಇರಲಾರವು. ಉದಾಹರಣೆಗೆ ‘ರಸ’ ಪರಿಕಲ್ಪನೆ ಭರತನಿಗೆ ಹೊಳೆದದ್ದು ನಾಟ್ಯ – ನಾಟಕ ಪ್ರಯೋಗದ ಹಂತದಲ್ಲಿ. ಅಭಿನವಗುಪ್ತನು ರಸಾನುಭವವನ್ನು ಕಾವ್ಯದಲ್ಲೂ ಕಾಣಬಹುದು ಎಂದುದರಿಂದ ಅಲ್ಲಿಂದ ರಸಾನಂದವನ್ನು ಕಾವ್ಯದಲ್ಲೂ ಕಾಣುವ ಪರಿಪಾಠದೊಂದಿಗೆ ಕಾವ್ಯದ ಉದಾಹರಣೆಗಳನ್ನು ಹುಡುಕಿಕೊಡುವ ಪ್ರಯತ್ನಗಳು ನಡೆದವು. ಅಭಿನವಗುಪ್ತನು ‘ರಸಾನಂದದ ಸ್ಥಿತಿ’ ಗುರುತಿಸಿದ್ದು ದೀರ್ಘವಾದ ಕಥೆಗಳುಳ್ಳ ಕಾವ್ಯದಲ್ಲಿ ಎಂಬುದು ಮುಖ್ಯವಿಚಾರ. ಏಕೆಂದರೆ ದೀರ್ಘವಾದ ಕಥಾಪ್ರಸಂಗಗಳಲ್ಲಿ ಮುಖ್ಯವಾಗಿ ಕಾಣುವುದು ನಾಟಕೀಯತೆ. ಅಂದರೆ ‘ಪ್ರಸಂಗ’ದ ಗುಣ. ನಾಟಕದಲ್ಲಿರುವುದು ಮುಖ್ಯವಾಗಿ ಕಥೆಯ ಪ್ರಸಂಗದ ಸಾಧ್ಯತೆಯೆ. ಈ ಸಮಾನ ಗುಣದಿಂದಾಗಿ – ನಾಟಕದ ಪ್ರದರ್ಶನದಲ್ಲಿ ಹೆಚ್ಚು ಪ್ರಕಟರೂಪದಲ್ಲಿ ಕಾಣುವ ರಸಾನಂದ ಸ್ಥಿತಿ, ಪ್ರದರ್ಶನವಲ್ಲದ – ದೀರ್ಘ ಕಥನಸಾಹಿತ್ಯದಲ್ಲಿ ತೆಳುವಾದ ‘ರಸಾನುಭವ’ವಾಗಿ ತೋರುತ್ತದೆ. ಅಂದರೆ ನಾಟಕದ ಪ್ರದರ್ಶನ ಸಂದರ್ಭದಲ್ಲಿ ಆಗುವ ರಸಾನಂದದ ಸಾಂದ್ರತೆಗಿಂತ ಬಹುತರವಾದ ಕ್ಷೀಣ ಸ್ಥಿತಿಯಲ್ಲಿ (ತೆಳುವಾದ) ಉಳಿದ ಓದುವ ಕಥನ ಸಾಹಿತ್ಯದಲ್ಲಿ (ನಾಟಕವನ್ನು ಓದುವಾಗಲಂತೆ) ರಸಾನುಭವವಾಗುತ್ತದೆ.

ಕಾವ್ಯಮೀಮಾಂಸೆಯಲ್ಲಿಯ ಪರಿಕಲ್ಪನೆಗಳೆಲ್ಲ ಹೆಚ್ಚಾಗಿ ಕಾವ್ಯಕ್ಕೆ ಮತ್ತು ನಾಟಕಗಳಿಗೆ ಸಂಬಂಧಿಸಿದವುಗಳಾಗಿವೆ. ಅವುಗಳನ್ನು ಸಾಹಿತ್ಯದ ಉಳಿದ ಪ್ರಕಾರಗಳಿಗೆ ಅಂದರೆ ಹೊಸ ಗನ್ನಡದ ಬಹುತೇಕ ಪ್ರಕಾರಗಳಿಗೆ ಯಥಾವತ್ ಅನ್ವಯಿಸಲು ಬಾರದು. ಆದರೆ ಸಾಮಾನ್ಯ ವಾಗಿ ಒಂದು ಕಲಾಪ್ರಕಾರದ ಗುಣಗಳು, ಇನ್ನೊಂದು ಪ್ರಕಾರದಲ್ಲೂ ತೆಳುವಾಗಿಯಾದರೂ ಕಾಣಿಸುತ್ತವೆ. ಹೀಗಾಗಿ ಸಾಮಾನ್ಯವಾಗಿ ಕಾವ್ಯಮೀಮಾಂಸೆಯ ತತ್ವಗಳು ಸಾಹಿತ್ಯದ ಉಳಿದೆಲ್ಲ ಪ್ರಕಾರಗಳಿಗೂ ಸಾಮಾನ್ಯ ದೃಷ್ಟಿಯಿಂದ ಅನ್ವಯಿಸಿ ನೋಡಬಹುದು. ಆದರೆ ಇಂಥಲ್ಲಿ ಫಲಿತಾಂಶದ ಪ್ರತಿಶತ ತೀರ ಕಡಿಮೆ ಇರುವುದು ಮಾತ್ರ ಲೆಕ್ಕಕ್ಕೆ ಹಿಡಿಯಲೇಬೇಕು.

ಕಾವ್ಯಮೀಮಾಂಸೆಯ ಚರ್ಚೆ ಹೆಚ್ಚಾಗಿ ಕಾವ್ಯ ಮತ್ತು ನಾಟಕಗಳ ಚರ್ಚೆ ಎಂಬಷ್ಟಕ್ಕೆ ಸೀಮಿತವಾಗಿದೆ. ನವೋದಯ ಪ್ರಾರಂಭವಾಗುವುದಕ್ಕಿಂತ ಮುಂಚೆ ಪ್ರಪಂಚದ ತುಂಬ ಸಾಹಿತ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ರೂಪಗಳೆಂದರೆ ಕಾವ್ಯ ಮತ್ತು ನಾಟಕಗಳು ಮಾತ್ರ. ಆದರೆ ಈಗ ಸಾಹಿತ್ಯದ ವಲಯ ವಿಸ್ತಾರವಾಗಿದೆ. ಬೇರೆ ಬೇರೆ ಪ್ರಕಾರಗಳ ಬಗ್ಗೆ ಹುಟ್ಟಿಕೊ ಳ್ಳುವ ಸಾಮಾನ್ಯ ಲಕ್ಷಣ, ಸ್ವರೂಪ, ರಚನೆ ಇತ್ಯಾದಿಗಳ ಬಗೆಗಿನ ಸೈದ್ಧಾಂತಿಕ ಚರ್ಚೆಗಳು ಕೂಡ ಕಾವ್ಯಮೀಮಾಂಸಾ ಕ್ಷೇತ್ರದಲ್ಲಿಯೇ ಗಣಿಸಬೇಕಾಗುತ್ತದೆ.

ಕಥನಸಾಹಿತ್ಯದ ಬಗ್ಗೆ ಪಾಶ್ಚಾತ್ಯರಲ್ಲಿ ಹುಟ್ಟಿಕೊಂಡು ಬಂದ ಹೊಸ ಸೈದ್ಧಾಂತಿಕ ಆಲೋಚನೆಗಳನ್ನು ಕಾವ್ಯಮೀಮಾಂಸೆಯ ಹೊರಗೇ ಇಟ್ಟಿರುವುದನ್ನು ನಾವು ಗಮನಿಸುತ್ತೇವೆ. ಉದಾಹರಣೆಗಾಗಿ ಸಣ್ಣ ಕಥೆ ಮತ್ತು ಕಾದಂಬರಿಗಳ ರಚನೆಗೆ ಸಂಬಂಧಿಸಿದ ಸೈದ್ಧಾಂತಿಕ ಚರ್ಚೆಗಳನ್ನು ಕಾವ್ಯಮೀಮಾಂಸೆಯ ಭಾಗಗಳೆಂದು ಗಣಿಸುತ್ತಿಲ್ಲ. ಇದಕ್ಕೆ ಕಾರಣವೆಂದರೆ ಪ್ರಪಂಚದ ತುಂಬ ಕಾವ್ಯಮೀಮಾಂಸೆಯ ಬಗೆಗಿರುವ ಒಂದು ಸೀಮಿತ ದೃಷ್ಟಿ.

ನಮ್ಮಲ್ಲಿರುವ ಜಾನಪದ ಸಂಗತಿಗಳ ‘ದೇಸೀ ದೃಷ್ಟಿ’ಯ ಅಭ್ಯಾಸದಿಂದ ನಾವೂ ತಾತ್ವಿಕ ಚಿಂತನೆಗಳನ್ನು ಸೃಷ್ಟಿಸಿಕೊಳ್ಳಬಹುದಾಗಿದೆ. ಪಾಶ್ಚಾತ್ಯರ ಮಾದರಿ (type) ಪರಿಕಲ್ಪನೆಯನ್ನು ಒಂದು ಸಿದ್ಧಾಂತವನ್ನಾಗಿ ಬೆಳೆಸಲು ನನಗೆ ಸಾಧ್ಯವಾದುದು ನಮ್ಮಲ್ಲಿಯ ಜಾನಪದ ಸಂಗತಿಗಳ ‘ದೇಸೀ ದೃಷ್ಟಿ’ಯ ಅಭ್ಯಾಸದಿಂದಲೇ. ಕನ್ನಡ ಜನಪದಕಾವ್ಯಗಳ ಅಭ್ಯಾಸದಿಂದ ‘ಜನಪದಕಾವ್ಯ ಮೀಮಾಂಸೆ’ಯನ್ನು (೧೯೮೨)ಬರೆಯಲು ಸಾಧ್ಯವಾಗಿದೆ. ಜನಪದ ಸಾಮಾಜಿಕ ಕಥನ ಕಾವ್ಯಗಳ ಅಭ್ಯಾಸದಿಂದಾಗಿ ‘ವೌಲ್ಯಗಳ ಸಂಘರ್ಷ’, ಸಣ್ಣ ಪ್ರಕಾರದ ಜನಪದ ಕಾವ್ಯಗಳ ಅಭ್ಯಾಸ ದಿಂದಾಗಿ ಅವುಗಳ ಆಶುಕವಿತ್ವದ ಸ್ವರೂಪವನ್ನನುಸರಿಸಿ ‘ಪ್ರಥಮ ವಿಮರ್ಶೆ’, ಜನಪದ ಮಹಾಕಾವ್ಯಗಳ ಅಭ್ಯಾಸದಿಂದ ‘ಜನಪದ ಮಹಾಕಾವ್ಯಗಳ ರಾಚನಿಕ ಮತ್ತು ಸಂವಹನ ಸ್ವರೂಪ’, ಕಥೆಗಳ ರಚನಾ ರೀತಿಯನ್ನು ಗಮನಿಸಿ ‘ಸಂಕೀರ್ಣ ಜನಪದ ಕಥೆಗಳ ರಾಚನಿಕ ಸ್ವರೂಪ – ಕಥಾಘಟಕಗಳು’ – ಈ ಮುಂತಾದ ಸೈದ್ಧಾಂತಿಕ ಬರಹಗಳನ್ನು ಬರೆಯಲು ನನಗೆ ಸಾಧ್ಯವಾಗಿರುವುದು – ಸಿದ್ಧಾಂತಗಳು ಆಯಾ ವಸ್ತುವಿನ ಗರ್ಭದಿಂದಲೇ ಉದ್ಭವಿಸಲು ಸಾಧ್ಯ ಎಂಬುದರಿಂದ. ಕನ್ನಡ ಸಾಹಿತ್ಯದ (ಲಿಖಿತ ಮತ್ತು ವೌಖಿಕ) ಬೇರೆ ಬೇರೆ ಪ್ರಕಾರಗಳಲ್ಲೂ ಇಂತಹ ಪ್ರಯತ್ನ ಗಳು ನಡೆದರೆ, ಕನ್ನಡದಲ್ಲೂ ವ್ಯಾಪಕವಾಗಿ ಹೊಸಬಗೆಯ ‘ಶಾಸ್ತ್ರಸಾಹಿತ್ಯ’ ಸೃಷ್ಟಿಯಾಗಲು ಸಾಧ್ಯವಿದೆ.

ಇಂತಹ ಸಾರ್ಥಕ ಪ್ರಯತ್ನಗಳು ನಮ್ಮಲ್ಲಿ ನಡೆದು ಕನ್ನಡ ಸಾಹಿತ್ಯಕ್ಕೇ (ವೌಖಿಕ ಮತ್ತು ಲಿಖಿತ) ವಿಶಿಷ್ಟವಾದ ಶಾಸ್ತ್ರಸಾಹಿತ್ಯವು ಬೆಳೆದುಬಂದರೆ ಕನ್ನಡ ಸಾಹಿತ್ಯವನ್ನು ಕೈಹಿಡಿದು ಸೃಷ್ಟಿಸುತ್ತಿರುವ ಸಂಸ್ಕೃತದ ಸಾವಿರ ವರ್ಷದ ಕಪಿಮುಷ್ಟಿಯಿಂದ ಮತ್ತು ಕಳೆದ ಒಂದು ಶತಮಾನದಿಂದ ಬೌದ್ಧಿಕವಾಗಿ ಕನ್ನಡವನ್ನು ಗುಲಾಮನಂತೆ ನಡೆಸಿಕೊಂಡು ಬರುತ್ತಿರುವ, ಕನ್ನಡದ ನೈಜ ಬೆಳವಣಿಗೆಗೆ ಸರ್ಕಾರಿ ಜಾಲಿಕಂಟಿಯಾಗಿ ಆವರಿಸಿರುವ ಇಂಗ್ಲೀಷಿನ ವಿಷದ ಪ್ರಭಾವದಿಂದ ಕನ್ನಡ ಮತ್ತು ಕನ್ನಡ ಸಾಹಿತ್ಯ ಬಿಡುಗಡೆಯ ನಿಟ್ಟುಸಿರು ಬಿಡುವ ಸಾಧ್ಯತೆ ಇದೆ. ಅಂತಹ ಒಂದು ಸಣ್ಣ ಪ್ರಯತ್ನವಾಗಿ ಈ ಕೃತಿಯನ್ನು ಗಮನಿಸಬಹುದಾಗಿದೆ.

ಈ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಗಮನಿಸಬೇಕು – ಕನ್ನಡದೇ ಆದ ಒಂದು ಸ್ವತಂತ್ರ ಕಾವ್ಯಮೀಮಾಂಸೆಯನ್ನು ರಚಿಸಿಕೊಳ್ಳುವಲ್ಲಿ ಕನ್ನಡಕವಿಗಳ ಮಾತುಗಳು ಸ್ವಲ್ಪಮಟ್ಟಿಗೆ ಸಹಾಯಕ್ಕೆ ಬರುತ್ತವೆ. ಆದರೆ ಅವರು ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಹೇಳುವ ಹೆಚ್ಚಿನ ಮಾತುಗಳೆಲ್ಲ ಸಂಸ್ಕೃತ ಕಾವ್ಯಮೀಮಾಂಸಕರ ಅಭಿಪ್ರಾಯಗಳಿಗೆ ಪೂರಕವಾಗಿವೆ. ಅಷ್ಟೇ ಅಲ್ಲ ಕನ್ನಡ ಸಾಹಿತ್ಯದ ಕೃತಿಗಳು ಸಂಸ್ಕೃತ ಕಾವ್ಯಮೀಮಾಂಸೆಗೆ ಉತ್ತಮ ಉದಾಹರಣೆಗಳಾಗಿವೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಅದೆಂದರೆ ಸಂಸ್ಕೃತ ಕಾವ್ಯಮೀಮಾಂಸೆಯ ಅಭಿಪ್ರಾಯಗಳೇ ಇಡೀ ಸಾವಿರವರ್ಷಗಳ ಕನ್ನಡ ಸಾಹಿತ್ಯವನ್ನು ಕೈಹಿಡಿದು ಬರೆಸಿವೆ ಎಂಬುದು. ಅದಕ್ಕಾಗಿ ಕನ್ನಡದ ಪಂಪನಿಂದ ಈವರೆಗಿನ ಕವಿಗಳ ಅಭಿಪ್ರಾಯಗಳು ಅವು ಸಂಸ್ಕೃತ ಕಾವ್ಯಮೀಮಾಂಸೆಗೆ ಪೂರಕವಾಗಿವೆ. ಕಾವ್ಯಮೀಮಾಂಸೆಗೆ ಸಂಬಂಧಿಸಿದಂತೆ ಹೆಚ್ಚುಸ್ವತಂತ್ರವಿಚಾರಗಳು ಕಾಣುವುದು ವಚನಕಾರರಲ್ಲಿ ಮಾತ್ರ.

ಇಲ್ಲಿ ಒಂದೊಂದು ಸಂಗತಿಗೆ ಸಂಬಂಧಿಸಿದ ಸೈದ್ಧಾಂತಿಕ ಚರ್ಚೆಯಲ್ಲಿ ಕನ್ನಡ ಶಾಸ್ತ್ರಕಾರರ, ಕವಿಗಳ, ವಚನಕಾರರ ವಿಚಾರಗಳನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗಿದೆ. ಹೀಗಾಗಿ ಕನ್ನಡದ ಲಿಖಿತ ಮತ್ತು ವೌಖಿಕ ಸಾಹಿತ್ಯದ ವಿಪುಲವಾದ ಸಾಮಗ್ರಿಯ ಬಳಕೆಯನ್ನು ಪ್ರತಿಯೊಂದು ಅಧ್ಯಾಯದಲ್ಲೂ ಕಾಣಬಹುದಾಗಿದೆ. ಆ ದೃಷ್ಟಿಯಿಂದ ಪ್ರಸ್ತುತ ಕೃತಿ ಜನಪದ ಕಾವ್ಯಮೀಮಾಂಸೆ ಎಂದಿದ್ದರೂ ಇದು ಕನ್ನಡ ಸಾಹಿತ್ಯ ಮೀಮಾಂಸೆಯೇ ಆಗಿದೆ.

* * *