೧. ವೌಲ್ಯಗಳಸಂಘರ್ಷ: ಜನಪದಸಾಮಾಜಿಕಕಥನಸಾಹಿತ್ಯದಲ್ಲಿ

ಜನಪದರಲ್ಲಿ ಜೀವನ ವೌಲ್ಯಗಳ ಕಲ್ಪನೆ ಸರಳವಾಗಿದೆ, ಸ್ಪಷ್ಟವಾಗಿದೆ. ಜನಪದರು ತಮ್ಮ ಜೀವನ ಒಳ್ಳೆಯದಾಗಿರಲು, ಉನ್ನತವಾಗಿರಲು, ಆದರ್ಶವಾಗಿರಲು ಕೆಲವೊಂದು ನಿಯಮಗಳನ್ನು ಪಾಲಿಸಿಕೊಂಡು ಬರುತ್ತಾರೆ. ಇವೆಲ್ಲ ವೌಖಿಕಪರಂಪರೆಯಲ್ಲಿ ಸಾಗಿಕೊಂಡು ಬಂದ ಚಿಂತನೆಗಳಾಗಿರುವುದು ಮುಖ್ಯಸಂಗತಿ. ಸಹಕಾರ ಭಾವದ, ಸಮೂಹಿಕ ಜೀವನವನ್ನು ಸಾಗಿಸುವ, ಪರಸ್ಪರ ಪ್ರೀತಿಸುವ, ಪರಸ್ಪರ ವಿಶ್ವಾಸ ಅನಿವಾರ್ಯವೆಂದು ಭಾವಿಸುವ ಜನಪದರು – ತಮ್ಮ ಜೀವನದ ಪ್ರಾಮುಖ್ಯತೆಯನ್ನು ಸಮೂಹಿಕ ಬದುಕಿನಲ್ಲಿ ಕಾಣಬೇಕೆಂದು ಬಯಸಿದವರು. ಹೀಗಾಗಿ ಎಲ್ಲರೂ ಒಟ್ಟಾಗಿ ಬದುಕಲು ಕೆಲ ನಿಯಮಗಳನ್ನು ತಿಳುವಳಿಕೆ ಯಿಂದ (ಅರಿವಿನಿಂದ), ಕೆಲವು ನಂಬುಗೆಗಳನ್ನು ವೌಖಿಕ ಒಪ್ಪಂದಗಳಿಂದ ಅನುಸರಿಸುತ್ತಿರು ತ್ತಾರೆ. ಇವೇ ಅವರ ಬದುಕಿಗೆ ಆದರ್ಶಗಳಾಗಿರುತ್ತವೆ. ಇವುಗಳನ್ನು ಅವರು ಶ್ರದ್ಧೆಯಿಂದ ಗೌರವಿಸುತ್ತಾರೆ ಮತ್ತು ನಿಷ್ಠೆಯಿಂದ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಜೀವನವನ್ನು ಸಾಗಿಸುತ್ತಿರುತ್ತಾರೆ. ಇಂತಹ ಸಹಕಾರ ಭಾವನೆಯ ಸಮೂಹಬದುಕಿನ ರೀತಿ – ನೀತಿ – ನಂಬುಗೆ ಗಳಾದ ಈ ಚಿಂತನೆಗಳನ್ನು, ವೌಖಿಕ ಒಪ್ಪಂದಗಳನ್ನು ನಾವು ಜೀವನ ವೌಲ್ಯಗಳು ಎಂದು ಕರೆಯುವುದು

ಶಿಕ್ಷಿತ ಸಮಾಜವು ಸತ್ಯ, ಅಹಿಂಸೆ, ತ್ಯಾಗ, ದಾನ, ಪರೋಪಕಾರ, ಬಲಿದಾನ ಇಂತಹ ಕೆಲವು ಜೀವನ ವೌಲ್ಯಗಳ ಬಗ್ಗೆ ಕಥೆಕಟ್ಟಿ, ವೈಭವೀಕರಿಸಿ ಪ್ರಚಾರಮಾಡಿರುವುದನ್ನು ಕೇಳುತ್ತೇವೆ, ಓದುತ್ತೇವೆ. ಇವು ಜೀವನದ ಆದರ್ಶಗಳು, ಇವನ್ನು ವ್ಯಕ್ತಿತ್ವದಲ್ಲಿ, ಜೀವನದಲ್ಲಿ ಅಳವಡಿಸಿಕೊಂಡವರು ಪೂಜೆಗೆ ಅರ್ಹರು ಎಂಬ ಭಾವವನ್ನು ಗ್ರಾಮಾಂತರ ಪ್ರದೇಶದ ಜನಪದರು ಮತ್ತು ನಗರವಾಸಿಗಳಾದ ಶಿಕ್ಷಿತರು ಬಲವಾಗಿ ಹೊಂದಿರುವುದು ಸಾಮಾನ್ಯ ಸಂಗತಿ. ಜನಪದರ ಬದುಕನ್ನು ಹೊಕ್ಕು ನೋಡಿದರೆ ಇಂತಹ ಜೀವನ ವೌಲ್ಯಗಳ ನಿಜಸ್ವರೂಪವೇನು ಎಂಬುದು ನಮಗೆ ತಿಳಿದುಬರುತ್ತದೆ.

ಜನಪದಸಾಹಿತ್ಯ ಕುರಿತ ಅಭ್ಯಾಸದ ಹಿನ್ನೆಲೆಯಲ್ಲಿ ಈ ವೌಲ್ಯಗಳ ಬಗೆಗೆ ಆಲೋಚಿಸಿ ದಾಗ, ಇವುಗಳ ಬೇರುಗಳು ಜನಪದ ನಂಬುಗೆಗಳಲ್ಲಿರುವುದು ನಮ್ಮ ಗಮನಕ್ಕೆ ಬರುತ್ತದೆ. ಸಾಮಾನ್ಯ ಉದಾಹರಣೆಗಾಗಿ: ಶುಭಕಾರ್ಯಕ್ಕೆ ಹೋಗುವಾಗ ಒಂದು ಬೆಕ್ಕು ಅಡ್ಡಬಂದಿತೆನ್ನಿ ; ಅದನ್ನು ಜನಪದರು ಆಗುವ ಕೆಲಸಕ್ಕೆ ಅಡ್ಡಿಯ ಸೂಚನೆಯಾಗಿ, ಮಂಗಳಕಾರ್ಯಕ್ಕೆ ಅಮಂಗಳ ಆಶಯವೆಂದು ನಂಬುತ್ತಾರೆ. ಹೀಗೆ – ಬೆಕ್ಕು ಅಡ್ಡ ಹಾಯ್ದುದನ್ನು ಅಪಶಕುನವೆಂದು ಭಾವಿಸಿ, ಅಂದಿನ ಕೆಲಸವನ್ನು ಸ್ಥಗಿತಗೊಳಿಸುತ್ತಾರೆ. ಒಂದು ದಿನದ ಇಡೀ ಕಾರ್ಯಕ್ರಮವನ್ನು ರದ್ದುಗೊಳಿಸಲು ಇಚ್ಛಿಸದವರು ಕನಿಷ್ಟಪಕ್ಷ ಸ್ವಲ್ಪ ಹೊತ್ತು ನೆಲದ ಮೇಲೆ ಕುಳಿತುಕೊಂಡಾ ದರೂ ಮುಂದೆ ಹೋಗಬೇಕೆಂದು ಭಾವಿಸುತ್ತಾರೆ.

ಇದೊಂದು ಸಣ್ಣ ನಂಬುಗೆಯಾದರೂ ಅದು ಜನಪದಜೀವನವನ್ನು ತನ್ನ ಶಕ್ತ್ಯಾನುಸಾರ ನಿಯಂತ್ರಿಸುವುದನ್ನು ಕಾಣುತ್ತೇವೆ. ಇಂತಹ ನಂಬುಗೆ ಇನ್ನೂ ಶಕ್ತಿಶಾಲಿಯಾಗಿದ್ದರೆ ಅದಕ್ಕೆ ಸಲ್ಲಿಸುವ ಗೌರವವೂ ಇನ್ನೂ ಹೆಚ್ಚಿನದಾಗಿರುತ್ತದೆ. ‘ನೀರು ಬರದ ಕೆರೆಗೆ ಬಲಿಕೊಟ್ಟರೆ ನೀರು ಬರುತ್ತದೆ’ ಎಂಬುದೊಂದು ಶಕ್ತಿಶಾಲಿ ನಂಬುಗೆ. ಆದುದರಿಂದಲೇ ಭಾಗೀರತಿಯಂತಹ ಮುದ್ದಿನ ಹೆಣ್ಣನ್ನೂ ಬಲಿಕೊಡಲು ಹಿಂದೆಮುಂದೆ ನೋಡಲಿಲ್ಲ ಎಂಬುದು ‘ಕೆರೆಗೆ ಹಾರ’ ಎಂಬ ಕಥಾನಕದಲ್ಲಿ ನಮಗೆ ಉದಾಹರಣೆಯಾಗಿ ದೊರೆಯುವ ನಿದರ್ಶನವಾಗಿದೆ. ಸಾಮಾಜಿಕರು ನಂಬಿದ ಒಂದು ಮೂಢನಂಬುಗೆಯ ಹಿಡಿತ ಎಂತಹದು ಎಂಬುದು ನಮಗಿಲ್ಲಿ ಕಾಣಿಸುತ್ತದೆ. ತನಗೆ ಕೆರೆಗೆ ಬಲಿಕೊಡುವರೆಂಬ ವಿಷಯ ತಿಳಿದ ನಂತರವೇ ತನ್ನ ತಾಯಿ – ತಂದೆಯರನ್ನು ಭೇಟಿಯಾಗುವ ಭಾಗೀರತಿ ಅವರ ಮುಂದಾದರೂ ಬಲಿಯ ವಿಷಯವನ್ನು ಹೇಳಬಹುದಿತ್ತು. ಆದರೆ ಭಾಗೀರತಿ ಅವರ ಮುಂದೆಯೂ ಬಲಿಯ ವಿಷಯವನ್ನು ಏಕೆ ಹೇಳುವುದಿಲ್ಲ ? ಎಂಬುದು ನಮ್ಮೆದುರು ಒಂದು ದೊಡ್ಡ ಪ್ರಶ್ನೆಯಾಗಿ ನಿಲ್ಲುತ್ತದೆ. ಇದು ಭಾಗೀರತಿಯ ವಿಚಿತ್ರ ವರ್ತನೆ ಮಾತ್ರ ಆಗಿದೆಯೇ? ಅವಳ ಮಾನಸಿಕ ಒತ್ತಡವೇ ಹಾಗಿತ್ತೇ? ಎಂದೆಲ್ಲ ಯೋಚಿಸಲು ಇಲ್ಲಿ ಅವಕಾಶವಿದೆ. ಆದರೆ ತನಗೆ ಬಲಿಕೊಡುವ ಸಂಗತಿಯನ್ನು ತಾಯಿ ತಂದೆಗಳಿಗೆ ತಿಳಿದರೆ ಅವರಿಗೆ ತನ್ನನ್ನು ಆ ಆಪತ್ತಿನಿಂದ ಪಾರುಮಾಡಲು ಸಾಧ್ಯವೆಂದು ಭಾಗೀರತಿಗೆ ಖಾತ್ರಿಯಾಗಿದ್ದರೆ ಖಂಡಿತ ಆಕೆ ಬಲಿಯ ವಿಷಯವನ್ನು ಅವರ ಮುಂದೆ ಮುಚ್ಚಿಡುತ್ತಿರಲಿಲ್ಲವೆಂದು ತೋರುತ್ತದೆ. ಬಹುಶ: ವಿಷಯ ಗೊತ್ತಾದರೂ ಸಮೂಹ ನಂಬಿದ ಮತ್ತು ನಿರ್ಧರಿಸಿದ ಒಂದು ಸಂಗತಿಯನ್ನು ತಡೆಹಿಡಿಯಲು ಅವರಿಂದಲೂ ಅಸಾಧ್ಯವೆಂಬ ಭಾವನೆಯೇ ಅಲ್ಲಿ ಭಾಗೀರತಿಯ ಬಾಯಿ ಮುಚ್ಚಿಸಿರಬೇಕೆಂಬ ಸಂಶಯ ಸಹಜವಾಗಿಯೇ ಎದ್ದು ಕಾಣುತ್ತದೆ. ಮತ್ತು ಅಲ್ಲಿಯ ನಿಜಸಂಗತಿಯೂ ಅದೇ ಆಗಿದೆ.

ಹಾಗಿಲ್ಲವೆಂದರೆ ತಾಯಿ ತಂದೆಯ ಮುಂದೆ ತನ್ನ ಬಲಿಯ ಬಗ್ಗೆ ಚಕಾರವೆತ್ತದ ಭಾಗೀರತಿ ತನ್ನ ಗೆಳತಿಯ ಮುಂದೆ ‘ನಮ್ಮತ್ತೆ ನಮ್ಮಾವ ಕೆರೆಗ್ಹಾರ ಕೊಡುತಾರಂತೆ’ ಎಂದು ಬಾಯಿಬಿಡುವ ಅವಶ್ಯಕತೆಯೇ ಇರಲಿಲ್ಲ. ಹಾಗೆ ಹೇಳಿದಾಗ ಗೆಳತಿಯ ಪ್ರತಿಕ್ರಿಯೆ ಆಶ್ಚರ್ಯಕರ ವಾಗಿರುವುದನ್ನು ನಾವು ಗಮನಿಸಬೇಕು. ಆಕೆ ಹೇಳುತ್ತಾಳೆ ‘ಕೊಟ್ಟಾರ ಕೊಡಲೇಳು ಇಟ್ಟಾಂಗ ಇರಬೇಕು’ ಎಂದು. ಬಾಲ್ಯದಿಂದಲೂ ಕೂಡಿ ಆಡಿದ ಗೆಳತಿ, ಭಾಗೀರತಿಗೆ ಒದಗಿದ ದುರ್ಧರ ಪ್ರಸಂಗದ ಬಗ್ಗೆ ಕನಿಷ್ಠ ಪಕ್ಷ ಒಂದಿಷ್ಟು ಆತಂಕ, ದು:ಖ, ಕನಿಕರಗಳನ್ನಾದರೂ ವ್ಯಕ್ತಪಡಿಸ ಬಹುದಿತ್ತು. ಆದರೆ ಆಕೆ ಹಾಗೆ ಮಾಡದೆ ನೇರವಾಗಿ ‘ಕೊಟ್ಟಾರ ಕೊಡಲೇಳು ಇಟ್ಟಾಂಗ ಇರಬೇಕು’ ಎಂದುದು ಸಾಮಾನ್ಯ ವರ್ತನೆಯಲ್ಲವೆನಿಸುತ್ತದೆ. ಇಲ್ಲಿರುವ ಸಂಗತಿಯೆಂದರೆ, ಗೆಳತಿಯು ಸಾಮಾಜಿಕ ಪ್ರತಿನಿಧಿಯಾಗಿ ಮಾತನಾಡಿದ್ದಾಳೆ ಎಂಬುದು. ಸ್ನೇಹ ಎಂಬುದು ಸಾಮಾಜಿಕ ಸಂಬಂಧ. ಸಾಮಾಜಿಕ ಸಂಬಂಧಗಳು ಅರ್ಥಾತ್ ಸಾಮಾಜಿಕ ವೌಲ್ಯಗಳು ಯಾವಾಗಲು ಇನ್ನೊಂದು ಸಾಮಾಜಿಕ ಸಂಗತಿಯನ್ನು ಅರ್ಥಾತ್ ವೌಲ್ಯವನ್ನು ಎತ್ತಿ ಹಿಡಿಯುವ ಪ್ರಸಂಗಗಳೇ ಇಂತಹ ಕಾವ್ಯಗಳಲ್ಲಿ ಬರುತ್ತವೆ. ಒಂದು ಸಾಮಾಜಿಕ ನಂಬುಗೆಯ ನಿರ್ಧಾರವನ್ನು ತನ್ನ ತವರಿಗೆ ಎದುರಿಸಲು ಸಾಧ್ಯವಿಲ್ಲ. ಒಂದು ವೇಳೆ ಭಾಗೀರತಿ ತನ್ನ ತಾಯಿ – ತಂದೆಗಳ ಮುಂದೆ ಈ ವಿಷಯ ತಿಳಿಸಿದ್ದರೂ ಅವರಿಂದ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂಬ ಅರಿವೇ ಬಹುಶ: ಭಾಗೀರತಿಯ ಬಾಯಿ ಕಟ್ಟಿಸಿರಬೇಕೆನಿಸುತ್ತದೆ.

ಇಲ್ಲಿ ಇನ್ನೊಂದು ಸಂಗತಿಯೆಡೆಗೆ ಗಮನಹರಿಸಬೇಕು – ಭಾಗೀರತಿ ತನಗೆ ಬಲಿಕೊಡುವರೆಂಬ ಸಂಗತಿ ತಿಳಿದ ನಂತರ ಅದಕ್ಕೆ ತನ್ನ ಸಮ್ಮತಿಯಿಲ್ಲದ ಪ್ರತಿಭಟನೆಯ ರೂಪದಲ್ಲಿ ಅಥವಾ ಗಾಬರಿಯಾಗಿ ತವರಿಗೆ ಬಂದಾಗ, ತಾಯಿ – ತಂದೆಗಳಿಗೆ ಆಕೆ ವಿಷಯ ಹೇಳಲಿಲ್ಲ, ಅದಕ್ಕಾಗಿ ಅವರಿಗೆ ಭಾಗೀರತಿ ಕೆರೆಗೆ ಹಾರವಾಗುವ ವಿಷಯ ತಿಳಿಯಲಿಲ್ಲ ಎಂದು ಭಾವಿಸಬಹುದು. ಆದರೆ ಭಾಗೀರತಿಯ ಬಲಿಯ ನಂತರ ಅವಳ ಗಂಡ ಮಹಾದೇವರಾಯ ‘ನನ್ನ ಹೆಣತಿ ಭಾಗೀರತಿ ಎಲ್ಲಿಗ್ಹೋಗ್ಯಾಳತ್ತಿ’ ಎಂದು ಬಂದಾಗ ಭಾಗೀರತಿಯ ತಾಯಿಯೂ ಗೆಳೆತಿ ಮನೆಯೆಡೆಗೆ ಬೆರಳು ಮಾಡುವುದನ್ನು ಲಕ್ಷಕ್ಕೆ ತಂದುಕೊಳ್ಳಬೇಕು. ಇಲ್ಲಿರುವ ಪ್ರಶ್ನೆಯೆಂದರೆ, ಭಾಗೀರತಿಯ ಬಲಿಯ ನಂತರವೂ ತವರಿಗೆ ಸುದ್ದಿ ಮುಟ್ಟಿರಲಿಲ್ಲ್ಲವೆಂದರೆ ನಂಬಲು ಆಗದು. ಇಲ್ಲಿಯ ತಂದೆ – ತಾಯಿಗಳ ವರ್ತನೆ ವಿಚಿತ್ರವೆನಿಸುತ್ತದೆ.

ಈ ಮತ್ತು ಇಂತಹ ವರ್ತನೆಗಳಿಗೆ ಕಾರಣವೆಂದರೆ ಆಗಿನ ಕಾಲದ ಅವರೆಲ್ಲರೂ ನಂಬಿಕೊಂಡು ಬಂದ ನಂಬುಗೆಗಳೆಂದೇ ಹೇಳಬೇಕಾಗುತ್ತದೆ. ಸಮಾಜದ ಒಂದು ನಂಬುಗೆಯ ನಿರ್ಧಾರದ ಎದುರು ಇನ್ನೊಂದು ನಿರ್ಣಯಕ್ಕೆ ಅಲ್ಲಿ ಅವಕಾಶ ಇಲ್ಲ ಎಂಬ ಭಾವನೆಯೇ ತಾಯಿ – ತಂದೆಗಳ ಬಾಯಿ ಕಟ್ಟಿದೆ ಎಂದು ಅರ್ಥ. ಇದು ಜನಪದರು ನಂಬಿದ, ಕಾಲಕಾಲಕ್ಕೆ ಜೀವನದ ಆದರ್ಶಗಳು ಎಂದು ಭಾವಿಸಿದ ಬದುಕಿನ ವೌಲ್ಯಗಳ ನಿಜಸ್ವರೂಪ. ಹೀಗೇ ಜನಪದರ ನಂಬುಗೆಗಳು, ಸಂಪ್ರದಾಯಗಳು, ವಿಧಿಕ್ರಿಯೆಗಳು, ಒಪ್ಪಂದಗಳು ಇವುಗಳಲ್ಲೆಲ್ಲ ಹೆಚ್ಚು ಶಕ್ತಿಶಾಲಿಯಾಗಿದ್ದವುಗಳನ್ನೇ ನಾವು ‘ಜೀವನದ ವೌಲ್ಯ’ಗಳು ಎಂದು ಕರೆಯುತ್ತೇವೆ. ನಂತರ ಬುದ್ಧಿಶಾಲಿ ಜನ ಈ ವೌಲ್ಯಗಳ ಕಲ್ಪನೆಯನ್ನು ವೈಭವೀಕರಿಸಿದ್ದು ಸತ್ಯ ಸಂಗತಿ. ಅಂತಲೇ ಸತ್ಯ, ತ್ಯಾಗ, ಧರ್ಮ, ಉಪಕಾರ, ಪರೋಪಕಾರ, ದಾನ, ಪಾತಿವ್ರತ್ಯ, ಬಲಿದಾನ ಮುಂತಾದವುಗಳನ್ನು ಹೀಗೇ ಹೆಚ್ಚು ಮಾಡಿ ಹೇಳಿದ್ದನ್ನು, ಬದುಕಿನಲ್ಲಿ ಅತ್ಯಂತ ಮಹತ್ವದ ಸ್ಥಾನ ಅವುಗಳಿಗೆ ಕೊಟ್ಟಿರುವುದನ್ನು ನಾವು ಕಾಣುತ್ತೇವೆ. ಸತ್ಯಕ್ಕಾಗಿ ಹರಿಶ್ಚಂದ್ರನ ಕಥೆ, ದಾನಕ್ಕಾಗಿ ಕರ್ಣನ ಕಥೆ, ಪರೋಪಕಾರಕ್ಕಾಗಿ ಜೀಮೂತವಾಹನನ ಕಥೆ – ಹೀಗೆ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಈ ಎಲ್ಲ ವೌಲ್ಯಗಳಿಗಾಗಿ ರಾಜ್ಯ ಕಳೆದುಕೊಳ್ಳುವ, ಹೆಂಡಿರು – ಮಕ್ಕಳನ್ನು ಮಾರಿಕೊಳ್ಳುವ, ಮೋಸಗಳಿಗೆ ಬಲಿಯಾಗುವ, ಕೊನೆಗೆ ಜೀವಗಳನ್ನೇ ಕಳೆದುಕೊಳ್ಳುವ ಉದಾಹರಣೆಗಳು ಇವಾಗಿವೆ. ಅಂದರೆ ಈ ವೌಲ್ಯಗಳು ನ್ಮು ಬದುಕಿಗೆ ಆದರ್ಶಗಳು, ಇವುಗಳನ್ನು ಎಂತಹ ಪ್ರಸಂಗ ಬಂದರೂ ಪಾಲಿಸಬೇಕೆಂಬ ನಂಬಿಕೆ ನಮ್ಮದು. ಆದರೆ ಇವುಗಳನ್ನು ನಂಬಿದಾಗ ಆಗುವ ಅನಾಹುತಗಳ ಕಡೆಗೆ ನಮ್ಮ ಲಕ್ಷ ಹರಿಸುವುದು ಇಂದು ಬಹುಮುಖ್ಯವಾಗಿದೆ.

ಜನಪದ ಸಾಮಾಜಿಕ ಕಥನಸಾಹಿತ್ಯದ ಅಭ್ಯಾಸದಲ್ಲಿ ಕಾಣಿಸುವ ಇಂತಹ ಬದುಕಿನ ಆದರ್ಶಗಳನ್ನು ಅಥವಾ ವೌಲ್ಯಗಳನ್ನು ಗಮನಿಸಿ – ಅವೆಲ್ಲವನ್ನೂ ಎರಡು ಬಗೆಯಲ್ಲಿ ವಿಂಗಡಿಸಬಹುದಾಗಿದೆ: ೧) ವೈಯಕ್ತಿಕ ವೌಲ್ಯಗಳು, ೨) ಸಾಮಾಜಿಕ ವೌಲ್ಯಗಳು.

‘ವೈಯಕ್ತಿಕ ವೌಲ್ಯ’ಗಳಲ್ಲಿ – ಎರಡು ಅಂಶಗಳು ಕಾಣಿಸುತ್ತವೆ : ಒಂದು ವ್ಯಕ್ತಿಯ ಜೀವ, ಇನ್ನೊಂದು ಸಂಬಂಧಗಳು. ಈ ಸಂಬಂಧಗಳಲ್ಲಿ – ಮೊದಲ ಸುತ್ತಿನ ಸಂಬಂಧಿಗಳಾದ ಗಂಡ, ಹೆಂಡತಿ, ಮಕ್ಕಳು, ತಂದೆ, ತಾಯಿ, ಸಹೋದರ, ಸಹೋದರಿಯರು; ಎರಡನೇ ಸುತ್ತಿನ ಸಂಬಂಧಗಳಾದ ಅತ್ತೆ, ಮಾವ, ಸೊಸೆ, ಅಳಿಯ, ನಾದುನಿ, ನೆಗೆಣ್ಣಿ, ಅತ್ತಿಗೆ, ಚಿಕ್ಕಪ್ಪ, ಚಿಕ್ಕಮ್ಮ ಈ ಮುಂತಾದವರು ಬರುತ್ತಾರೆ. ‘ಸಾಮಾಜಿಕ ವೌಲ್ಯ’ಗಳಲ್ಲಿ – ಶಕ್ತಿಶಾಲಿ ನಂಬುಗೆಗಳು, ಆದರ್ಶಗಳು, ಸಂಪ್ರದಾಯಗಳು, ವೌಖಿಕ ಒಪ್ಪಂದಗಳು, ನಿಯಮಗಳು ಮುಂತಾಗಿ ಬರುತ್ತವೆ. ವೈಯುಕ್ತಿಕ ವೌಲ್ಯಗಳಲ್ಲಿ ಬರುವ ಎರಡು ಸಂಗತಿ (ಜೀವ ಸಂಬಂಧ)ಗಳನ್ನು ಹೊರತುಪಡಿಸಿ, ಉಳಿದೆಲ್ಲ ಸಂಗತಿಗಳು ಈ ಗುಂಪಿಗೆ ಸೇರುತ್ತವೆ. ಇವೆಲ್ಲ ವ್ಯಾಪಕವಾಗಿ ಸಮೂಹದ ನಂಬುಗೆಗಳೇ ಆಗಿರುತ್ತವೆ.

ಜನಪದ ಸಾಹಿತ್ಯ ಜನರ ಬದುಕಿನ ಚರಿತ್ರೆಯನ್ನೇ ಹೊತ್ತಿದೆ. ಅದಕ್ಕಾಗಿ ಜನಪದರ ಸಾಂಸ್ಕೃತಿಕ ಬದುಕಿನ ದಾಖಲೀಕರಣವನ್ನು ಜನಪದ ಸಾಹಿತ್ಯದಲ್ಲಿ ಕಾಣುತ್ತೇವೆ. ಜೀವನ ವೌಲ್ಯಗಳು ಜನಪದರ ಸಾಂಸ್ಕೃತಿಕ ಬದುಕಿನಲ್ಲಿಯ ಘಟ್ಟಿಗಳು. ಜನರು ತಮ್ಮ ಜೀವನದ ಅರ್ಥವಂತಿಕೆಯನ್ನು, ಸಾರ್ಥಕತೆಯನ್ನು ಇಂತಹ ವೌಲ್ಯಗಳನ್ನಾಧರಿಸಿಯೇ ಕಂಡುಕೊಳ್ಳು ತ್ತಾರೆ. ಈ ಜೀವನ ವೌಲ್ಯಗಳ ವ್ಯಾಪಕ ನಿರೂಪಣೆಗಳನ್ನು ಜನಪದ ಸಾಹಿತ್ಯದ ಸಣ್ಣ ಪ್ರಕಾರಗಳಾದ ಗಾದೆ, ಒಗಟು, ಒಡಪುಗಳಲ್ಲಿ ತೀರಾ ವಿರಳವಾಗಿ ಕಾಣುತ್ತೇವೆ. ಜನಪದ ಕಥೆಗಳು ಮಾನವ ಜೀವನ ನಿರಂತರವಾಗಿ ಸಾಗಿಬಂದುದರ ಛಾಯೆಯನ್ನು ಹಿಡಿದಿಡುವು ದರಿಂದ, ಕಥೆಗಳಲ್ಲಿ ಮಾನವ ಸಾಂಸ್ಕೃತಿಕ ಬದುಕಿನ ಚರಿತ್ರೆ ಉದ್ದಕ್ಕೂ ಹರಡಿದ್ದು, ವೌಲ್ಯಗಳ ಪ್ರತಿಪಾದನೆ ಅಲ್ಲೂ ವಿರಳವೆನಿಸುತ್ತದೆ. ಹೀಗಾಗಿ ನೇರವಾಗಿ ಮಾನವನ ಬದುಕಿನ ಪಡಿಯಚ್ಚುಗಳಂತೆ ಕಾಣಿಸುವ, ಪ್ರಸ್ತುತ ಬದುಕಿಗೆ ಹೆಚ್ಚು ಹತ್ತಿರವೆನಿಸುವ ಸಾಮಾಜಿಕ ವಸ್ತು – ಸಮಸ್ಯೆಗಳುಳ್ಳ ಕಥನಕಾವ್ಯಗಳಲ್ಲಿ ಮತ್ತು ಇಂತಹ ವಸ್ತುವುಳ್ಳ ಬಯಲಾಟದ ಕಥೆಗಳಲ್ಲಿ ಅತ್ಯಂತ ದಟ್ಟವಾಗಿ ಈ ಜೀವನ ವೌಲ್ಯಗಳ ಪ್ರತಿಪಾದನೆ ಕಂಡುಬರುತ್ತದೆ.

ಜನಪದದ ಹಲವಾರು ಬಗೆಯ ಹಾಡಿನ ಪ್ರಕಾರಗಳಲ್ಲಿ ಕಥನಕಾವ್ಯಗಳು ಕಾಣಸಿಗು ತ್ತವೆ. ಕೆಲವು ಕಥಾನಕಗಳು ರಚನೆಯಲ್ಲಿ ಅತ್ಯಂತ ದೀರ್ಘವಾಗಿದ್ದು – ಚನ್ನಮ್ಮನ ದಂಡಿ, ಗುಣದಮ್ಮನ ಕಥೆ ಈ ಮುಂತಾದ ಮಾದರಿಯ ಹಾಡುಗಳು ಈ ವರ್ಗಕ್ಕೆ ಸೇರುತ್ತವೆ. ಇಡೀ ರಾತ್ರಿಯೆಲ್ಲ ಒಂದೇ ಹಾಡು ಹಾಡುವಷ್ಟು ವಿಷಯ ಇವುಗಳಲ್ಲಿ ಹುದುಗಿರುತ್ತದೆ. ಇಂತಹ ದೀರ್ಘ ಕಥಾನಕಗಳಲ್ಲಿ ಮಾನವ ಬದುಕಿನ ಹಲವಾರು ಮಜಲುಗಳಲ್ಲಿ ಕಾಣಿಸಿಕೊಂಡ ಅನೇಕ ಬೆಯ ಆಶಯಗಳು ಬಳಕೆಯಾಗಿರುತ್ತವೆ. ಈ ಆಶಯಗಳ ರೂಪದಲ್ಲಿಯ ವೌಲ್ಯಗಳು ಬಹು ಹಿಂದಿನ ಜೀವನದ ಪಳೆಯುಳಿಕೆಗಳೆನಿಸುತ್ತವೆ.

ಇಲ್ಲಿ ಚರ್ಚೆಗೆ ಎತ್ತಿಕೊಳ್ಳಲು ಬಯಸಿದ್ದುದು ಕೆರೆಗೆ ಹಾರ, ಗೋವಿನ ಹಾಡು (ಆಕಳ ಹಾಡು), ಕಾಶಿಬಾಯಿ, ಸೋಮ್ರಾಯ – ಭೀಮ್ರಾಯ ಈ ಬಗೆಯ ಹಾಡುಗಳನ್ನು. ಇವು ಸುಮಾರಾಗಿ ನಾಲ್ಕೈದು ಪುಟಗಳಿಂದ ಹತ್ತು ಪುಟಗಳಷ್ಟು ದೀರ್ಘವಾಗಿರುತ್ತವೆ. ಹಾಡಲು ಹದಿನೈದಿಪ್ಪತ್ತು ನಿಮಿಷಗಳಿಂದ ಬಹಳವೆಂದರೆ ಒಂದು ತಾಸಿನ ಅವಧಿಯನ್ನು ಪಡೆಯುತ್ತವೆ. ಇವುಗಳ ವಸ್ತು ಮುಖ್ಯವಾಗಿ ಸಾಮಾಜಿಕ ಸಂಗತಿಯಾಗಿರುತ್ತದೆ. ಇಂತಹ ಸಾಮಾಜಿಕ ಸಮಸ್ಯೆಗಳನ್ನು ಹೊತ್ತ ಸಣ್ಣಾಟಗಳೂ ಈ ವರ್ಗಕ್ಕೆ ಸೇರುತ್ತವೆ. ಈ ಮೇಲೆ ಉಲ್ಲೇಖಿಸಿದ ಕಾಶೀಬಾಯಿ, ಸೋಮ್ರಾಯ – ಭೀಮ್ರಾಯ ಈ ಕಥಾನಕಗಳು ಕೂಡ ಸಣ್ಣಾಟಗಳಾಗಿಯೂ ಪ್ರಚಲಿತದಲ್ಲಿರುವುದನ್ನು ಗಮನಿಸಬೇಕು.

ಈ ಮೇಲೆ ಉಲ್ಲೇಖಿಸಿದ ಕಥೆಗಳ ವೈಶಿಷ್ಟ್ಯವೆಂದರೆ – ಇವೆಲ್ಲವೂ ಸಾಮಾಜಿಕ ಕಾಳಜಿಗಳನ್ನು ಎತ್ತಿಹಿಡಿದು ಪ್ರತಿಪಾದಿಸುವುದು. ಜನಪದರು ತಾವು ಒಪ್ಪಿಕೊಂಡ ವೈಯಕ್ತಿಕ ಮತ್ತು ಸಾಮಾಜಿಕ ವೌಲ್ಯಗಳ ಪ್ರಸ್ತಾಪವನ್ನು ಪ್ರಮುಖವಾಗಿ ಇಂತಹ ಹಾಡುಗಳಲ್ಲಿ ಮಾಡಿರುತ್ತಾರೆ. ಜನರು ತಮ್ಮ ಬದುಕಿಗೆ ಆದರ್ಶವಾಗಿ ಸ್ವೀಕರಿಸಿದ ಕೆಲ ವೌಲ್ಯಗಳನ್ನೇ ಇಂತಹ ಕಥಾನಕಗಳಲ್ಲಿ ಒರೆಗೆ ಹಚ್ಚುವ ಕೆಲಸ ಮಾಡುತ್ತಾರೆ. ಅವರು ಪ್ರತಿಪಾದಿಸಲು ಹೊರಡುವ ವೌಲ್ಯಗಳು ಇವತ್ತಿಗೂ ಪ್ರಚಾರದಲ್ಲಿರುವುದರಿಂದ ಕೆರೆಗೆ ಹಾರ, ಕಾಶೀಬಾಯಿ ಈ ಮಾದರಿಯ ಹಾಡುಗಳು ಇಂದಿಗೂ ಹೆಚ್ಚು ಜನಪ್ರಿಯವಾಗಿ ಉಳಿದುಕೊಂಡಿವೆ.

ಇಂತಹ ಕಥಾನಕಗಳಲ್ಲಿ ಪ್ರಮುಖವಾಗಿ ಕಂಡುಬರುವುದು ‘ವೌಲ್ಯಗಳ ಸಂಘರ್ಷ’. ಜನ ಒಪ್ಪಿಕೊಂಡ ಸಾಮಾಜಿಕ ಮತ್ತು ವೈಯಕ್ತಿಕ ವೌಲ್ಯಗಳ ಪರಸ್ಪರ ತಾಕಲಾಟವನ್ನು ನಾವು ಇವುಗಳಲ್ಲಿ ಕಾಣುತ್ತೇವೆ. ಈ ಸಂಘರ್ಷದಲ್ಲಿ ಕೊನೆಗೆ ಸಾರುವುದು ಬಹುಜನ ಒಪ್ಪಿಗೆಯಾದ ಸಾಮಾಜಿಕ ವೌಲ್ಯಗಳ ಜಯವನ್ನೇ. ಹೀಗೆ ಸಾಮಾಜಿಕ ವೌಲ್ಯವನ್ನು ಎತ್ತಿಹಿಡಿಯಲು ಹೋಗಿ, ವೈಯಕ್ತಿಕ ವೌಲ್ಯಗಳನ್ನು ಸಾಮಾಜಿಕ ವೌಲ್ಯಗಳ ಎದುರಿಗೆ ತ್ಯಾಗ (ಬಲಿ) ಮಾಡುವ ಅಥವಾ ಸೋಲಿಸುವ ಸಂದರ್ಭಗಳನ್ನು ಜನಪದರು ಸೃಷ್ಟಿಸುತ್ತಾರೆ. ಈ ಮೂಲಕ ವೈಯಕ್ತಿಕ ವೌಲ್ಯಗಳ ಸಾಧನೆಗಿಂತ ಸಾಮಾಜಿಕ ವೌಲ್ಯಗಳ ಸಾಧನೆಯೇ ಮಹತ್ವದ್ದೆಂದು ಸಾರಿ, ವೈಯಕ್ತಿಕ ವೌಲ್ಯಗಳ ತ್ಯಾಗವನ್ನೇ ಅವರು ಬೋಧಿಸುತ್ತಾರೆ.

ಇದು ಜನಪದರ ಮನೋಭಾವನೆ. ಆದರೆ ನಾವು ಕಥಾನಕದ ತಳಮೈಯನ್ನು ಎತ್ತಿ ಶೋಧಿಸಿದರೆ, ಅಲ್ಲಿ ಸಾಮಾಜಿಕ ವೌಲ್ಯದ ಬಿಗಿಹಿಡಿತ, ಬಲಿಷ್ಟ ಗುಣ, ಭಯಂಕರತೆ, ಕ್ರೂರತನಗಳೆಲ್ಲ ನಮ್ಮ ಅರಿವಿಗೆ ಬರುತ್ತವೆ. ವೈಯಕ್ತಿಕ ವೌಲ್ಯಗಳ ತ್ಯಾಗವನ್ನು ಸಾರುವಲ್ಲಿ ವ್ಯಕ್ತಿಯ ಅಸಹಾಯಕತೆ, ಅನಿವಾರ್ಯತೆಗಳೇ ಎದ್ದು ಕಾಣುತ್ತವೆ. ಈ ಮೂಲಕ ಅನೇಕ ಸಲ ನಮ್ಮವರು ಮತ್ತು ನಾವು ಸೃಷ್ಟಿಸಿ, ಬದುಕಿಸಿ, ಬಳಸುತ್ತ ಬಂದ ಸಾಮಾಜಿಕ ರೀತಿ – ನೀತಿಗಳ ಅರ್ಥಹೀನತೆ ನಮ್ಮ ಅನುಭವಕ್ಕೆ ಸ್ಪಷ್ಟವಾಗಿ ತೋರುತ್ತದೆ.

ಹಿಂದೆ ಉದಾಹರಿಸಿದ ಕೆರೆಗೆ ಹಾರದ ವಿಷಯವನ್ನೇ ಇಲ್ಲಿ ಗಮನಿಸಬಹುದಾಗಿದೆ. ಕಲ್ಲನಕೇರಿ ಮಲ್ಲನಗೌಡ ಊರ ಜನರಿಗೆ ಅನುಕೂಲವಾಗಲೆಂದು ಕೆರೆಯನ್ನು ತೋಡಿಸಿದ. ನೀರು ಬರದಿದ್ದಾಗ ಹೊತ್ತಿಗೆಯನ್ನು ತೆಗೆಸಿ ನೋಡಿದ. ಅವನ ದುರ್ದೈವ ಎಂತಹದೆಂದರೆ ಅವನ ಮನೆಯ ಹಿರಿಸೊಸೆಯನ್ನೇ ಅದಕ್ಕೆ ಹಾರ ಕೊಡಬೇಕೆಂದು ಪಂಚಾಂಗ ಹೇಳಿತು. ಆತ ಊರ ಗೌಡನಾಗಿದ್ದ. ‘ನನ್ನ ಸೊಸೆಗೆ ಹಾರ ಕೊಡಲಾರೆ’ ಎಂದರೆ ನಡೆಯುತ್ತಿತ್ತೇನೋ! ಆದರೆ ಹಿರಿಸೊಸೆ ಇಲ್ಲವೆಂದರೂ ಕಿರಿಸೊಸೆಯನ್ನಾದರೂ ಅವನು ಬಲಿಕೊಡಲು ಮುಂದಾದುದು ಆಶ್ಚರ್ಯವೆ. ಇದನ್ನು ಆತ ಮನಸಾ ಒಪ್ಪಿದನೆಂದು ಆ ಸಂದರ್ಭದಲ್ಲಿ ಅರ್ಥಮಾಡಲು ಆಗದು. ಅಲ್ಲಿ ಅವನ ಬಾಯಿ ಕಟ್ಟಿ ಹಾಕಿದ್ದು – ಅಂದು ಸಮೂಹ ನಂಬಿದ ‘ನೀರಿರದ ಕೆರೆಗೆ ಜೀವ ಬಲಿ ಕೊಟ್ಟರೆ ನೀರು ಬರುತ್ತದೆ’ ಎಂಬ ಒಂದು ನಂಬುಗೆ ಎಂದೇ ಹೇಳಬೇಕು. ಹೀಗೆ ಸಮೂಹ ನಂಬಿದ ಒಂದು ನಂಬುಗೆಯಿಂದ ಉಳಿದುಕೊಳ್ಳಲು ಒಬ್ಬ ಆಡಳಿತಗಾರನಿಗೂ ಸಾಧ್ಯವಾಗಿಲ್ಲ ಎಂಬುದು ಇಲ್ಲಿಯ ಗಮನಾರ್ಹ ಸಂಗತಿಯಾಗುತ್ತದೆ. ಅಂದರೆ ಒಂದು ಸಾಮಾಜಿಕ ನಂಬುಗೆಯ ಹಿಡಿತ ಎಂತಹದು ಎಂಬುದು ನಮಗೆ ಇದರಿಂದ ವೇದ್ಯವಾಗುತ್ತದೆ.

ಪ್ರಸಿದ್ಧ ಕಥಾನಕ ಗೋವಿನ ಹಾಡು ಹೀಗೆ ಸಾರುತ್ತದೆ :

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಇದು ಈ ಕಥಾನಕದ ಚರಮ ವಾಕ್ಯವೂ ಹೌದು. ಸತ್ಯ ಎನ್ನುವ ಸಾಮಾಜಿಕವೌಲ್ಯ ವನ್ನು ಕಾಪಾಡಲು ಗೋವು ತನ್ನ ಮೊಲೆವುಣ್ಣುವ ಕರುವನ್ನೂ (ಸಂಬಂಧ), ತನ್ನ ಪ್ರಾಣವನ್ನೂ (ಜೀವ) ತ್ಯಾಗ ಮಾಡಲು ಮುಂದಾಗುತ್ತದೆ. ಸತ್ಯದ ಆದರ್ಶವನ್ನು ಹೊತ್ತ ಆಕಳಿನ ನಿರ್ಧಾರ ಹುಲಿಯಂತಹ ಕ್ರೂರ ಪಶುವನ್ನು ಜೀವತ್ಯಾಗ ಮಾಡುವ ಸ್ಥಿತಿಗೆ ತರುತ್ತದೆ. ಕೊನೆಯಲ್ಲಿ ನಮ್ಮ ಮನಸ್ಸಿನಲ್ಲಿ ಆತ್ಮಬಲಿಯಾದ ಹುಲಿಯ ಬಗ್ಗೆ ಅನುಕಂಪದ ಒಂದಂಶವೂ ಕಾಣಸಿಗದು. ಏಕೆಂದರೆ ನಮ್ಮ ಮನಸ್ಸಿನ ತುಂಬ ತುಂಬಿಕೊಂಡದ್ದು ಸತ್ಯದ ಪ್ರತಿನಿಧಿಯಾದ ಗೋವಿನ ಯೋಚನೆ ಮಾತ್ರ.

ಸತ್ಯಕ್ಕಾಗಿ ತನ್ನ ಮಗ ಎಂಬ ಬಾಂಧವ್ಯವನ್ನೂ ತನ್ನ ಜೀವವನ್ನೂ ತ್ಯಾಗ ಮಾಡಲು ಸಿದ್ಧವಾಗಿರುವುದು ಆಕಳು ಮಾತ್ರ. ಆದರೆ ಇಲ್ಲಿ ನಿಜವಾಗಿ ಕೊನೆಗೂ ತ್ಯಾಗಿ (ಬಲಿ) ಆದದ್ದು ಹುಲಿಯೇ. ಹುಲಿಯನ್ನು ಬಲಿ ತೆಗೆದುಕೊಂಡ ಪಾಪದ ಭಾರವನ್ನು ಸತ್ಯ ಎಂಬ ಸಾಮಾಜಿಕ ವೌಲ್ಯದ ಬೆನ್ನಮೇಲೆಯೇ ಹೇರಬೇಕು. ಜನರನ್ನು ಭಾವನಾತ್ಮಕವಾಗಿ ಮರುಳುಗೊಳಿಸಿ, ಜೀವವನ್ನು ಬಲಿತೆಗೆದುಕೊಂಡು, ಸತ್ಯ ಆದರ್ಶವಾಗಿ ನಿಲ್ಲುತ್ತದೆ. ಸತ್ಯದ ಅತಿರಂಜಿತ ಉದಾಹರಣೆಗಳಾಗಿ ಇವೆಲ್ಲ ತೋರುತ್ತವೆ.

ಇಲ್ಲಿ ಯೋಚಿಸಬೇಕಾದ ಸಂಗತಿಯೆಂದರೆ – ಹುಲಿ ಬೆಟ್ಟದ ಕೆಳಗೆ ಹಾರಿ ಪ್ರಾಣಬಿಡು ವಂತಹ ಅಪರಾಧ ಏನು ಮಾಡಿತ್ತು? ಎಂಬುದು. ಹುಲಿ ಕಾಡುಪ್ರಾಣಿ. ಅದೊಂದು ವೇಳೆ ಆಕಳನ್ನು ತಿಂದರೂ ಅದು ಪ್ರಕೃತಿಯ ನಿಯಮದಂತೆಯೇ ಇರುತ್ತಿತ್ತು. ಇಷ್ಟಾಗಿಯೂ ಹುಲಿ ಆಕಳಿಗೆ ಒಂದು ಕೆಟ್ಟ ಮಾತನ್ನೂ ಆಡಿರಲಿಲ್ಲ, ತಿನ್ನಲೂ ಹೋಗಿರಲಿಲ್ಲ. ಆದರೂ ಹುಲಿಗೆ ಈ ಕಾವ್ಯ ಕೊಟ್ಟ ಶಿಕ್ಷೆ ಪ್ರಾಣತ್ಯಾಗವೆಂಬುದು ಚಿಂತಿಸಬೇಕಾದ ಸಂಗತಿಯಾಗಿದೆ. ಇಲ್ಲಿರುವ ಗುಟ್ಟೆಂದರೆ – ಸತ್ಯವನ್ನು ಕೆಡಿಸುವುದಲ್ಲ, ಅದನ್ನು ಸುಮ್ಮನೆ ಕೆಣಕಿದರೂ ಸಾಕು – ಉರಿದು ಹೋಗಬೇಕು ಎಂಬ ಭಾವನೆಯಿಂದ ವಿಪರೀತ ಶಕ್ತಿಯನ್ನು ನಾವೇ ಸತ್ಯವೆಂಬ ವೌಲ್ಯದಲ್ಲಿ (ನಂಬುಗೆಯಲ್ಲಿ )ತುಂಬಿದವರು. ಅಂದರೆ ಯಾವ ಯಾವ ವೌಲ್ಯಕ್ಕೆ ನಾವು ಎಷ್ಟೆಷ್ಟು ಶಕ್ತಿಯನ್ನು ತುಂಬಿರುತ್ತೇವೋ ಅಷ್ಟಷ್ಟು ಅವು ನಮ್ಮನ್ನು ತಿರುಗಿ ಆಳುತ್ತವೆ. ಸಮೂಹ ಒಪ್ಪಿಕೊಂಡ ನಂಬುಗೆಗಳೇ ಸಾಮಾಜಿಕ ವೌಲ್ಯಗಳಾಗಿ ಪ್ರಸಿದ್ಧಿ ಪಡೆದು ಅವು ನಮ್ಮ ತಲೆಯನ್ನೇ ಆಳುತ್ತಿದ್ದುದು ಇಂತಹ ಕಥಾನಕಗಳ ಅಭ್ಯಾಸದಿಂದ ತಿಳಿದುಬರುವ ಸಂಗತಿಯಾಗಿದೆ.

ಹೀಗೆಯೇ ಕಾಶೀಬಾಯಿ ಕಥಾನಕದಲ್ಲೂ ಸಾಮಾಜಿಕ ವೌಲ್ಯದ ಎದುರು ವೈಯಕ್ತಿಕ ವೌಲ್ಯಗಳು ಬಲಿಯಾಗುವುದನ್ನೇ ಕಾಣುತ್ತೇವೆ. ಕಾಶೀಬಾಯಿ ಕಡ್ಲಿಮಟ್ಟಿ ಸ್ಟೇಷನ್ನಿನಲ್ಲಿ ಸ್ಟೇಷನ್ ಮಾಸ್ತರನ ಬಲೆಗೆ ಸಿಕ್ಕು, ಅವನ ಕಾಮುಕ ಹಿಡಿತದಿಂದ ಪಾರಾಗಲು, ಮೂತ್ರ ವಿಸರ್ಜನೆಗೆಂದು ಕೂಸನ್ನು ಅವನ ಕೈಯಲ್ಲಿಟ್ಟು ಕಡೆಗಾಗುತ್ತಾಳೆ. ಬಾಗಿಲುಹಾಕಿ ಕೀಲಿ ಜಡಿಯುತ್ತಾಳೆ. ಇಲ್ಲಿ ಹೆಣ್ಣಿಗೆ ಪಾತಿವ್ರತ್ಯ ಎನ್ನುವದು ವೈಯಕ್ತಿಕ ವೌಲ್ಯವೂ ಹೌದು, ಅದೇ ವೇಳೆಗೆ ಅದು ಸಾಮಾಜಿಕ ವೌಲ್ಯವೂ ಹೌದು. ಸ್ಟೇಷನ್ ಮಾಸ್ತರನು ಕೂಸನ್ನು ಕಡಿದು ಚಲ್ಲುತ್ತೇನೆ ಎಂದಾಗ ಕಾಸೀಬಾಯಿಯು ಇಂತಹ ಹತ್ತು ಮಕ್ಕಳನ್ನು ಮತ್ತೆ ಹೆರುವ ಮಾತನಾಡಿ, ತನ್ನ ಮಗು ಎನ್ನುವ ಕರುಳಕುಡಿಯನ್ನು ( ಸಂಬಂಧ) ಅಂದರೆ ವೈಯಕ್ತಿಕ ವೌಲ್ಯವನ್ನು (ಮಗುವಿನ ಜೀವವನ್ನು )ಬಲಿಕೊಡುತ್ತಾಳೆ. ಆದರೆ ಸಾಮಾಜಿಕ ವೌಲ್ಯವಾದ ಪಾತಿವ್ರತ್ಯವನ್ನು ಮಾತ್ರ ಕಳೆದುಕೊಳ್ಳಲು ಆಕೆ ಬಯಸುವುದೇ ಇಲ್ಲ. ಅದನ್ನು ಕಳೆದುಕೊಂಡು ಆಕೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ. ಇದು ಎಲ್ಲ ಹೆಣ್ಣು ಮಕ್ಕಳಿಗೂ ಸಮಾಜ ವಿಧಿಸಿದ ನಿಯಮವಾಗಿ ತೋರುತ್ತೆ. ಶೀಲ ಕಳೆದುಕೊಂಡ ಹೆಣ್ಣನ್ನು ಸಮಾಜ ನೋಡುವ ದೃಷ್ಟಿಯೇ ಆಕೆಗೆ ಅವಮಾನಕಾರಕ ಮತ್ತು ಅಸಹ್ಯವಾಗಿರುವದರಿಂದ ಕಾಶೀಬಾಯಿಯ ನಿರ್ಣಯ – ಅಂದರೆ ‘ಜೀವಕ್ಕಿಂತ ಪಾತಿವ್ರತ್ಯವೇ ಮುಖ್ಯ’ವೆಂಬ ಮಾತು ಸಹಜವಾಗಿಯೇ ಅದು ಸಮಾಜದ ನಿರ್ಣಯವೇ ಎನಿಸುತ್ತದೆ.

ಕಾಶೀಬಾಯಿ ಕಥೆಯಲ್ಲಿ ನೇರವಾಗಿ ಪಾತಿವ್ರತ್ಯಕ್ಕಿಂತ ಸ್ವತ: ಹೊತ್ತು ಹೆತ್ತ ಜೀವವೂ ದೊಡ್ಡದಲ್ಲವೆಂಬ ನಿರ್ಣಯವನ್ನು ಘಂಟಾಘೋಷವಾಗಿ ಎತ್ತಿ ಸಾರಲಾಗುತ್ತದೆ. ಆದರೆ ‘ಸೋಮ್ರಾಯ ಭೀಮ್ರಾಯ’ ಎನ್ನುವ ಕಥಾನಕದಲ್ಲಿ ಪಾತಿವ್ರತ್ಯದ ಶಕ್ತಿಯನ್ನು ಬಲು ಗುಟ್ಟಾಗಿಟ್ಟು ಕಥೆ ಹೆಣೆಯಲಾಗುತ್ತದೆ. ಅಲ್ಲಿ ಭೀಮ್ರಾಯನ ಮಡದಿಯನ್ನು, ಆಕೆಗೆ ಪೂರ್ವಪರಿಚಯವಿಲ್ಲದ, ಆದರೆ ಗಂಡ ಭೀಮರಾಯನ ಗೆಳೆಯನಾದ ಸೋಮ್ರಾಯನು ಕಂಡು ಮೋಹಗೊಳ್ಳುತ್ತಾನೆ. ತನ್ನ ಇಚ್ಛೆಯನ್ನು ಗೆಳೆಯನ ಮೂಲಕ ಸೋಮ್ರಾಯ ಈಡೇರಿಸಿಕೊಳ್ಳಲು ಬಯಸಿದಾಗ, ಆತನಿಗೆ ಆಕೆ ತನ್ನ ಹೆಂಡತಿ ಎಂಬುದನ್ನೂ ತಿಳಿಸದೆ, ಅವನ ಬೇಡಿಕೆಯನ್ನು ಈಡೇರಿಸಲು ಮುಂದಾಗುತ್ತಾನೆ. ಇಲ್ಲಿ ಹೆಂಡತಿ ಎಂಬ ವೈಯಕ್ತಿಕ ವೌಲ್ಯವಾ ಸಂಬಂಧವನ್ನು, ಸ್ನೇಹ ಎಂಬ ಸಾಮಾಜಿಕ ಸಂಬಂಧದ ವೌಲ್ಯಕ್ಕೆ ಬಲಿಯಾಗಿಸುವುದನ್ನು ಕಾಣುತ್ತೇವೆ.

ಭೀಮ್ರಾಯ ತನ್ನ ಮನೆಯಲ್ಲೇ ತನ್ನ ಹೆಂಡತಿಯೊಂದಿಗೆ ಗೆಳೆಯನ ಸಮಾಗಮದ ವ್ಯವಸ್ಥೆಗೊಳಿಸಿ ದೂರಾಗುತ್ತಾನೆ. ಈಗ ಅಲ್ಲಿ ಮತ್ತೆ ಪಾತಿವ್ರತ್ಯ ಎಂಬ ಸಾಮಾಜಿಕ ವೌಲ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಗ ವೈಯಕ್ತಿಕ ವೌಲ್ಯವಾದ ಜೀವದ ಬಲಿಯಾಗುತ್ತದೆ. ಗೆಳೆಯ ಭೀಮ್ರಾಯನ ಮನೆಯಿದು, ತಾನು ಬಯಸಿದ ಹೆಣ್ಣು ಗೆಳೆಯನ ಹೆಂಡತಿ ಎಂಬುದರ ಅರಿವು ಅವನಿಗೆ ಎದುರಾಗಿ, ತನ್ನ ಜೀವವನ್ನು ತಾನೇ ಆತ್ಮಬಲಿಗೆ ಆಹುತಿಯಾಗಿಸುತ್ತಾನೆ. ಇಲ್ಲಿ ಸ್ನೇಹ ಮತ್ತು ಪಾತಿವ್ರತ್ಯ ಎಂಬ ಸಾಮಾಜಿಕ ವೌಲ್ಯಗಳು ಜೀವ ಎಂಬ ವೈಯಕ್ತಿಕ ವೌಲ್ಯವನ್ನು ಆಹುತಿಯಾಗಿ ಪಡೆಯುತ್ತವೆ.

ಜನಪದ ಸಾಮಾಜಿಕ ಕಥನಸಾಹಿತ್ಯದಲ್ಲಿ ಬರುವ ಇನ್ನೊಂದು ಮಾತನ್ನು ಗಮನಿಸ ಬೇಕು. ವೈಯಕ್ತಿಕ ವೌಲ್ಯವಾದ ಸಂಬಂಧಗಳನ್ನು ಸಾಮಾಜಿಕ ವೌಲ್ಯದ ಬಯಕೆಗಳನ್ನು ಈಡೇರಿಸಲು ಒಪ್ಪಿಸುವಲ್ಲಿ ಸಂಬಂಧಿಸಿದ ಇನ್ನೊಬ್ಬನ ಜವಾಬ್ದಾರಿಯೇ ಕಾಣುತ್ತದೆ. ಕಲ್ಲನಕೇರಿ ಮಲ್ಲನಗೌಡ ತನ್ನ ಸೊಸೆಯಾದ ಭಾಗೀರತಿಯನ್ನು, ಕಾಶೀಬಾಯಿ ತನ್ನ ಕೂಸನ್ನು, ಕಲಿಯುಗದ ಬಾಲೆ ತನ್ನ ಮಕ್ಕಳನ್ನು, ಭೀಮರಾಯ ತನ್ನ ಹೆಂಡತಿಯನ್ನು – ಸಾಮಾಜಿಕ ವೌಲ್ಯದ ಬೇಡಿಕೆಗೆ (ಬಲೆಗೆ) ಒಡ್ಡುತ್ತಾರೆ. ಇಲ್ಲೂ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾಜಿಕ ವೌಲ್ಯವನ್ನು ಕಾಪಾಡುವ ವೇಷದಲ್ಲಿ ಇಲ್ಲವೆ ವೈಯಕ್ತಿಕ ವೌಲ್ಯವಾದ ತನ್ನ ಜೀವವನ್ನು ಕಾಪಾಡಿಕೊಳ್ಳುವಲ್ಲಿ – ಸ್ವಾರ್ಥ ಮುಂದಾಗಿ ತನ್ನ ಸಂಬಂಧಗಳನ್ನು ಆಹುತಿಗೆ ಒಡ್ಡಲಾಗುತ್ತದೆ. ಆಹುತಿಯಾಗುವ ಸಂಬಂಧ ಎನ್ನುವ ವೌಲ್ಯಗಳಲ್ಲಿ ಎಲ್ಲಾಕಡೆ ಕಾಣಿಸುತ್ತಿರು ವುದು ಎರಡು ಬಗೆಯ ವ್ಯಕ್ತಿಗಳು ಮಾತ್ರ – ಅಬಲೆಯಾದ ಹೆಣ್ಣು ಮತ್ತು ಏನೂ ಅರಿಯದ ಮಕ್ಕಳು.

ಸಾಮಾಜಿಕ ವೌಲ್ಯಗಳನ್ನು ಪ್ರತಿಪಾದಿಸುವ ಕಥಾನಕಗಳ ಕೆಲವು ಘಟನೆಗಳಲ್ಲಿ – ಎರಡು ವೈಯಕ್ತಿಕ ವೌಲ್ಯಗಳ ನಡುವೆಯೇ ಸಂಘರ್ಷ ಏರ್ಪಡುವುದು ಕಾಣಿಸುತ್ತದೆ. ಇಂತಹ ಪ್ರಸಂಗಗಳಲ್ಲಿ – ಶಕ್ತಿಯುತವಾದ ವೈಯಕ್ತಿಕ ವೌಲ್ಯಕ್ಕೆ ಅಷ್ಟು ಬಲಶಾಲಿಯಲ್ಲದ ದುರ್ಬಲ ವೈಯಕ್ತಿಕ ವೌಲ್ಯ ಬಲಿಯಾಗುತ್ತದೆ. ಕಲ್ಲನಕೇರಿ ಮಲ್ಲನಗೌಡನು ಹೊತ್ತಿಗೆ ತೆಗೆಸಿ ನೋಡಿದಾಗ ಮೊದಲು ಆಹಾರ ಬೇಡಿದ್ದು ಹಿರಿಸೊಸೆಯನ್ನು. ಆದರೆ ಹಿರಿತನ ಎನ್ನುವ ಶಕ್ತಿಯ ಬಲ ಆ ಹೆಣ್ಣಿಗಿರುವುದರಿಂದ, ಮನೆಯಲ್ಲಿ ಕಿರಿಯವಳಾದ ಭಾಗೀರತಿ, ಅದರಲ್ಲೂ ಗಂಡನಿಂದ ದೂರ ಉಳಿದಿದ್ದ, ಯಾರೂ ಕೇಳುವವರೇ ಇಲ್ಲದ ಅಬಲೆಯಾದ ಭಾಗೀರತಿಯನ್ನು ಬಲಿ ಕೊಡಲು ನಿರ್ಧರಿಸುವಲ್ಲಿ – ಸೊಸೆ ಎಂಬ ಎರಡು ಸಂಬಂಧಗಳಲ್ಲಿ (ವೈಯಕ್ತಿಕ ವೌಲ್ಯಗಳಲ್ಲಿ) ಯಾವುದು ಬಲಯುತವಾಗಿದೆಯೋ ಅದು ಗೆಲವು ಸಾಧಿಸುತ್ತದೆ. ಹೀಗಿದ್ದಾಗಲೂ ಅಲ್ಲಿ ವೈಯಕ್ತಿಕ ವೌಲ್ಯಗಳ ನಡುವೆ ಹೆಚ್ಚಿನ ಸಂಘರ್ಷ ಕಾಣುವುದಿಲ್ಲ. ಏಕೆಂದರೆ ಯಾವ ಕಥೆಯಲ್ಲಿ ಸಾಮಾಜಿಕ ವೌಲ್ಯದ ಪ್ರತಿಪಾದನೆ ಇರುತ್ತದೋ ಅಂಥಲ್ಲಿ ವೈಯಕ್ತಿಕ ವೌಲ್ಯಗಳ ನಡುವೆ ಅಲ್ಪ ಸಂಘಷರ್ ಕಂಡುಬಂದರೂ ಕೊನೆಯಲ್ಲಿ ಬಲಹೀನ ವಾದ ವೈಯಕ್ತಿಕ ವೌಲ್ಯವು ಶರಣಾಗಿ ಬಿಡುತ್ತದೆ. ಏಕೆಂದರೆ ಸಾಮಾಜಿಕ ವೌಲ್ಯದ ಪ್ರಭಾವದ ಮುಂದೆ ಅದೆಲ್ಲ ಗೌಣವಾಗಿ ತೋರುತ್ತದೆ.

‘ಗೋವಿನ ಹಾಡು’ ಕಥಾನಕದಲ್ಲಿ ಹುಲಿಯ ಹಸಿವಿನ ಎದುರಿಗೆ ಆಕಳಿನ ಹಸಿವು ಗೌಣವಾಗುತ್ತದೆ. ಆದರೆ ಯಾವಾಗ ಆಕಳು ಸತ್ಯದ ಪ್ರಮಾಣ ಮಾಡಿ ನಿಲ್ಲುತ್ತದೋ ಆಗ ಆಕಳು ಸತ್ಯವೆಂಬ ಸಾಮಾಜಿಕ ವೌಲ್ಯದ ಪ್ರತಿನಿಧಿಯಾಗಿ ಪರಿವರ್ತನೆ ಹೊಂದುವುದರಿಂದ ಹುಲಿಯ ಹಸಿವು ಗೌಣವಾಗುತ್ತದೆ. ಅದಕ್ಕಾಗಿಯೇ ಆಕಳು ಮನೆಗೆ ಹೋಗಿ ಕರುವಿಗೆ ಮೊಲೆ ಕೊಟ್ಟು ಬರುತ್ತೇನೆಂದು ಹೇಳಿದಾಗ, ಹುಲಿ ತನಗಾದ ಹಸಿವನ್ನೂ ತಡೆಹಿಡಿದುಕೊಂಡು ಅಸಹಾಯಕವಾಗಿ ಆಕಳಿಗೆ ಮೊಲೆ ಕೊಟ್ಟು ಬರಲು ಮನೆಗೆ ಬಿಡುತ್ತದೆ. ಇದು ವೈಯಕ್ತಿಕ ವೌಲ್ಯದ ಮೇಲೆ ಸಾಮಾಜಿಕ ವೌಲ್ಯದ ಹಿಡಿತದ ಶಕ್ತಿಯನ್ನು ಎತ್ತಿ ಹೇಳುತ್ತದೆ.

ನಾವು ಗಮನಿಸಿದ ಉದಾಹರಣೆಗಳಲ್ಲಿ ಭಾಗೀರತಿ ಒಬ್ಬಳನ್ನು ಬಿಟ್ಟರೆ ಉಳಿದ ಕಡೆ ಪ್ರತಿಭಟನೆ ಎಂಬುದೇ ಇಲ್ಲ. ಕಾಶಿಬಾಯಿ ಮಗುವಿನಲ್ಲಿ, ಕಲಿಯುಗದ ಬಾಲೆಯ ಮಕ್ಕಳಲ್ಲಿ ಈ ಪ್ರತಿಭಟನೆ ನೋಡಲು ಸಾಧ್ಯವಿಲ್ಲ. ಏಕೆಂದರೆ ಅವೆಲ್ಲ ಏನೂ ಅರಿಯದ ಮಕ್ಕಳು. ಆದರೆ ಪ್ರಬುದ್ಧಳಾದ ಭೀಮರಾಯನ ಹೆಂಡತಿಯೂ ಚಕಾರವೆತ್ತದೇ ‘ಇನ್ನೊಬ್ಬನ ಜೊತೆ ಕೂಡಬೇಕೆಂಬ’ ತನ್ನ ಗಂಡನ ಮಾತಿಗೆ ಒಪ್ಪಿರುವಲ್ಲಿ ಮತ್ತೊಂದು ಸೈದ್ಧಾಂತಿಕ ಅಂಶ ತಲೆಹಾಕುತ್ತದೆ. ಅದೆಂದರೆ – ಒಂದೇ ವೌಲ್ಯವನ್ನು ಪ್ರತಿನಿಧಿಸುವ ಎರಡು ಸಂಗತಿಗಳು ಮತ್ತು ವ್ಯಕ್ತಿಗಳು ಪರಸ್ಪರ ವ್ಯವಹರಿಸುವ ಪ್ರಸಂಗ ಬಂದಾಗ ಅಲ್ಲಿ ಅಲ್ಪಮಟ್ಟಿನ ಸಂಘರ್ಷವೂ ಏರ್ಪಡುವುದಿಲ್ಲ. ಆ ಎರಡರ ನಡುವೆ ನಡೆಯುವ ಸಂಗತಿ ತಪ್ಪೆಂದಾದರೂ ಪರಸ್ಪರ ಅದನ್ನು ಎತ್ತಿ ಆಡದೆ – ವೌನವಾಗಿ ಒಪ್ಪಿಕೊಳ್ಳುವುದನ್ನೂ ಸಹಕರಿಸುವುದನ್ನೂ ಕಾಣುತ್ತೇವೆ. ‘ಸೋಮ್ರಾಯ – ಭೀಮ್ರಾಯ’ ಕಥಾನಕದಲ್ಲಿ ಈ ಮಾತಿಗೆ ಎರಡು ಬಗೆಯ ಉದಾಹರಣೆಗಳು ದೊರೆಯುತ್ತವೆ.

ಅ) ಒಬ್ಬ ಸ್ನೇಹಿತ ತಾನು ಕಂಡು ಮೋಹಗೊಂಡು ಆಕರ್ಷಣೆಗೆ ಒಳಗಾದ ಹೆಣ್ಣನ್ನು ತನಗೆ ದೊರಕಿಸಿಕೊಡಬೇಕೆಂದು ತನ್ನ ಗೆಳೆಯನನ್ನು ಕೇಳಿಕೊಳ್ಳುತ್ತಾನೆ. ಇದಂತೂ ನೀತಿಗೆಟ್ಟ ಮಾತೇ ಆಯಿತು. ಮೇಲಾಗಿ, ಗೆಳೆಯ ಮೋಹಿಸಿ ಬೇಡುತ್ತಿರುವ ಹೆಣ್ಣು ಬೇರಾರೂ ಆಗಿರದೆ ಸ್ವತ: ತನ್ನ ಹೆಂಡತಿ ಎಂಬುದನ್ನು ತಿಳಿದೂ ಗಂಡನಾದವನು ಗೆಳೆಯನಿಗಾಗಿ ಆಕೆಯನ್ನು ಒಪ್ಪಿಸಲು ಸಮ್ಮತಿಸುತ್ತಾನೆ. ಆಕೆ ತನ್ನ ಹೆಂಡತಿ ಎಂಬುದನ್ನೂ ಆತನಿಗೆ ತಿಳಿಸುವ ಗೋಜಿಗೂ ಹೋಗುವದಿಲ್ಲ. ಇಲ್ಲಿಯ ವ್ಯಕ್ತಿಗಳನ್ನು ಗೌಣಗೊಳಿಸಿ, ಅವರು ಪ್ರತಿಪಾದಿಸುವ ವೌಲ್ಯಗಳನ್ನು ಗಮನಿಸಿದರೆ ಈ ಇಬ್ಬರೂ ಪ್ರತಿನಿಧಿಸುತ್ತಿರುವುದು ಸಾಮಾಜಿಕ ವೌಲ್ಯವನ್ನು – ಸ್ನೇಹವನ್ನು. ಹೀಗಾಗಿಯೇ ಇಲ್ಲಿ ಯಾವುದೇ ಸಂಘರ್ಷ ಇಲ್ಲದ್ದನ್ನು ಕಾಣುತ್ತೇವೆ.

ಆ) ಇದಕ್ಕೆ ಎರಡನೇ ಉದಾಹರಣೆಯಾಗಿ ಗಂಡ – ಹೆಂಡತಿ ಮದ್ಯ ಅಂದರೆ ಎರಡು ವೈಯಕ್ತಿಕ ವೌಲ್ಯಗಳ ಮಧ್ಯ ನಡೆಯುವ ಸಂಗತಿಯನ್ನು ಗಮನಿಸಬೇಕು. ತನ್ನ ಗೆಳೆಯ ಮೋಹಿಸಿ ಅಪೇಕ್ಷಿಸಿದ್ದನ್ನು ತನ್ನ ಹೆಂಡತಿಯ ಮುಂದೆ ಹೇಳಿದಾಗ, ಆಕೆ ತಲೆಬಾಗಿ ಅದನ್ನು ಒಪ್ಪಿಕೊಳ್ಳುತ್ತಾಳೆ. ಸಹೃದಯರಾಗಿ ನಾವು ಈ ಇಬ್ಬರಿಗೂ ಬುದ್ಧಿಯೂ ಇಲ್ಲ ನಾಚಿಕೆಯೂ ಇಲ್ಲ ಎಂದು ಹಳಿಯಬಹುದು. ಆದರೆ ಕಥೆಯ ಆಂತರ್ಯದಲ್ಲಿ ಅಡಗಿದ್ದು ವೌಲ್ಯಗಳ ಸಂಘರ್ಷದ ಸಂಗತಿಯಾದುದರಿಂದ, ಗಂಡ – ಹೆಂಡತಿ ಸಂಬಂಧವನ್ನು ಗೌಣಗೊಳಿಸಿ, ಇಬ್ಬರೂ ವೈಯಕ್ತಿಕ ವೌಲ್ಯವನ್ನು ಪ್ರತಿಪಾದಿಸುವವರಾಗಿದ್ದಾರೆ ಎಂಬುದನ್ನು ಗಮನಿಸಿದರೆ, ಒಂದೇ ವೌಲ್ಯವನ್ನು ಪ್ರತಿನಿಧಿಸುವ ಎರಡು ಸಂಗತಿಗಳ ಅಥವಾ ವ್ಯಕ್ತಿಗಳ ನಡುವೆ ಯಾವುದೇ ಘರ್ಷಣೆ ನಡೆಯಲಾರದು ಎಂಬುದು ಈ ಸಿದ್ಧಾಂತದ ಇನ್ನೊಂದು ಸತ್ಯವಾಗಿ ತೋುತ್ತದೆ.

ಹೀಗೆ ಜನಪದ ಕಥನಸಾಹಿತ್ಯದಲ್ಲಿ ಕಾಣಿಸುವ ವೌಲ್ಯಗಳ ಸಂಘರ್ಷದ ಅಭ್ಯಾಸದಿಂದ ನಾವು ಜೀವನದಲ್ಲಿ ಬಹುದೊಡ್ಡ ಪಾಠಗಳನ್ನು ಕಲಿಯಬಹುದಾಗಿದೆ. ನಮ್ಮ ಅರ್ಥಹೀನ ನಂಬುಗೆಗಳು, ತಿಳುವಳಿಕೆಗಳು, ನಮ್ಮ ಅರಿವಿಗೆ ಬರಲು ಮತ್ತು ಆ ಮೂಲಕ ಒದಗಬಹುದಾದ ಅನಾಹುತಗಳಿಂದ ದೂರ ಇರಲು ಜನಪದ ಸಾಮಾಜಿಕ ಕಥನಸಾಹಿತ್ಯದ ಈ ದೃಷ್ಠಿಯ ಸೈದ್ಧಾಂತಿಕ ಹಿನ್ನೆಲೆಯ ಅಭ್ಯಾಸ ಅವಶ್ಯವೆನಿಸುತ್ತದೆ.

* * *