ಮಾದರಿ (Type) ಕಥೆಗಳನ್ನು ಕ್ರಮಬದ್ಧವಾಗಿ ವಿಂಗಡಿಸಿಕೊಳ್ಳಲು ಅಳವಡಿಸಿಕೊಂಡ ಒಂದು ಹೊಸ ತಂತ್ರವಾಗಿದೆ. ಈ ಪರಿಕಲ್ಪನೆ ಕಥೆಯ ಸ್ಥೂಲವಾದ ರಚನಾ ಕ್ರಮವನ್ನು ಅನುಸರಿಸಿದೆ. ಒಂದು ಕಥೆಯ ಸ್ಥೂಲವಾದ ರಚನಾಕ್ರಮ ಯಾವುದು? ಇದು ಯಾವ ಜಾತಿಗೆ ಸೇರಿದುದು ? ಇದರ ಗೊತ್ತು ಗುರಿಗಳೇನು ? ಎಂಬುದನ್ನು ಮಾದರಿ ಸೂಚಿಸುತ್ತದೆ. ಇದಕ್ಕೆ ಉತ್ತರವಾಗಿ ಮಾದರಿಯ ಹಣೆಪಟ್ಟಿ (ಹೆಸರು) ಕಟ್ಟಲಾಗುತ್ತದೆ. ಆದರೆ ಮಾದರಿ ಕಥೆಯ ರಚನಾಕ್ರಮವನ್ನು ವಿವರವಾಗಿ ಅಭ್ಯಾಸಿಸದೆ, ಸ್ಥೂಲವಾಗಿ ಅದರ ವಸ್ತುಗಳನ್ನೊಳಗೊಂಡ ರೂಪದ ಕಲ್ಪನೆಯಾಗಿರುತ್ತದೆ. ಅದು ತಂತ್ರವನ್ನು ಕುರಿತ ಶಾಸ್ತ್ರೀಯ ವಾದ ಅಧ್ಯಯನ ವಾಗಿರದೆ, ತಂತ್ರಕ್ಕೊಳಪಟ್ಟ ವಿಷಯದ ವಿವರಣೆಯನ್ನು ಕೊಡುವುದಾಗಿದೆ.

ಈ ಮೇಲಿನ ಮಾತುಗಳು ‘ಮಾದರಿ ಪರಿಕಲ್ಪನೆ’ಯ ಕೆಲ ಸಾಮಾನ್ಯ ಲಕ್ಷಣಗಳನ್ನು ಗಮನಿಸಿ ಹೇಳಿದವುಗಳು. ಯಾವುದೇ ಒಂದು ಕಥೆಯನ್ನು ಮಾದರಿಯೆಂದು ಕರೆಯಬಹುದೆಂದು ಸ್ಟಿಥ್ ಥಾಮ್ಸನ್ನರು ಹೇಳಿದ್ದರೂ ಮಾದರಿಯ ಬಗೆಗಿನ ಎಲ್ಲ ಸಂಗತಿಗಳನ್ನು ಅರಿವಿಗೆ ತೆಗೆದುಕೊಂಡಾಗ – ಥಾಮ್ಸನ್ನರು ಹೇಳುವ ಮಾತುಗಳನ್ನು ಹಾಗೂ ಮಾದರಿಗಳ ಅಭ್ಯಾಸದಿಂದ ನಮ್ಮ ಅನುಭವಕ್ಕೆ ಬರುವ ತಿಳುವಳಿಕೆಗಳನ್ನು ಗಮನಿಸಿ ಇಲ್ಲಿ ‘ಮಾದರಿ ಪರಿಕಲ್ಪನೆ’ಯ ಒಂದು ಸಾಧಾರವಾದ ವಿವರಣೆಯನ್ನು ಕೊಡಲು ಪ್ರಯತ್ನಿಸ ಲಾಗಿದೆ. ಈ ನಿಟ್ಟಿನ ಪ್ರಯತ್ನಕ್ಕೆ ಹೊಳೆದುದು ಇಷ್ಟು : ‘ಮಾದರಿ ಪರಿಕಲ್ಪನೆ’ಯಲ್ಲಿ ‘ಮೂರು ಹಂತ’ಗಳು ಮತ್ತು ‘ಮೂರು ಅಂಶ’ಗಳು ಗಮನಾರ್ಹವೆನಿಸುತ್ತವೆ.

ಮಾದರಿಯ ಮೂರು ಹಂತಗಳು :

.      ಕಥಾಮಾದರಿ (Tale Type) : ಒಂದು ಪ್ರತ್ಯೇಕವಾದ ಕಥೆಯನ್ನು ಈ ಹೆಸರಿನಿಂದ                   ಗುರುತಿಸಬಹುದು.

.      ಮೂಲ ಮಾದರಿ (Arche Type) : ಒಂದು ಕಥೆಯ ಹಲವು ಭಿನ್ನ ಪಾಠಗಳಿಂದ              ತಯಾರಿಸಿಕೊಂಡ ಕಥೆಯ ಮೂಲ ರೂಪವನ್ನು (Basic form) ಹೀಗೆ ಗುರುತಿಸಲಾಗುತ್ತದೆ.

.      ರಚನಾ ಮಾದರಿ (Structural Type ) : ಒಂದು ಕಥೆಯ (ಸಂಕ್ಷಿಪ್ತ) ರಚನಾ ರೂಪ’ ಇಲ್ಲವೆ ಒಂದು ಕಥೆಯ ಮೂಲ ರೂಪದ (ಸಂಕ್ಷಿಪ್ತ ) ರಚನಾ ರೂಪ’ ಅಥವಾ ‘ರಚನಾ ಮಾದರಿ’ ಎನ್ನಬಹುದು.

ಮಾದರಿ ಮೂರು ಅಂಶಗಳು :

೧. ಮಾದರಿಯ ತಲೆಬರಹ

೨.ಮಾದರಿಯ ಸಂಖ್ಯೆ

೩.ಮಾದರಿಯ ವರ್ಗ (ಗುಂಪು)

ಮಾದರಿಯ ಸ್ವರೂಪ ಲಕ್ಷಣಗಳನ್ನು ರಚಿಸಿಕೊಳ್ಳುವಲ್ಲಿ ಈ ಆರೂ ಸಂಗತಿಗಳು ಸಮನ್ವಯಗೊಂಡಿರುತ್ತವೆ. ಇದರಲ್ಲಿ ಪ್ರಮುಖವಾದವು ಮಾದರಿಯ ಹಂತಗಳು. ಅದರಲ್ಲೂ ಕೊನೆಯದಾದ ‘ರಚನಾ ಮಾದರಿ’ ಮುಖ್ಯವಾದುದು. ಸಂಕ್ಷಿಪ್ತವಾಗಿ ಇದನ್ನೇ ‘ಮಾದರಿ’ ಎಂದು ಕರೆಯಲಾಗುತ್ತದೆ. ಮಾದರಿಯ ಬಗೆಗಿನ ಯಾವುದೇ ಮಾತು ಇದನ್ನು ಎದುರಿಗೆ ಇಟ್ಟುಕೊಂಡೇ ಹೇಳಲಾಗುತ್ತದೆ. ಕಥೆಗಳ ವರ್ಗೀಕರಣದ ಕಲ್ಪನೆಯ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಈ ರೂಪಗಳಿಂದಲೇ ಮಾದರಿ ಸೂಚಿಗಳು ತಯಾರಾಗುತ್ತವೆ.

ಈ ಸಂಗತಿಯ ಒಟ್ಟಾರೆ ಇತಿಹಾಸವನ್ನು ಹಂತಹಂತವಾಗಿ ಹೇಳಲಿರುವುದರಿಂದ, ಸಧ್ಯಕ್ಕೆ ಇಷ್ಟು ವಿವರಣೆ ಸಾಕು. ಇನ್ನು ಈ ಆರನ್ನೂ ಒಂದೊಂದಾಗಿ ಅರಿಯೋಣ.

ಮಾದರಿಯ ಮೂರು ಹಂತಗಳು :

. ಕಥಾ ಮಾದರಿ (Tale Type) : ‘‘ತಲೆಮಾರುಗಳಿಂದ ಹೇಳುತ್ತ ಬಂದ ಒಂದು ಕಥೆ. ಅದು ಸಂಕೀರ್ಣವಾಗಿರಬಹುದು, ಸರಳವಾಗಿರಬಹುದು ಅಥವಾ ಒಂದು ಕಥೆಯಲ್ಲಿ ಉಪಕಥೆಯಾಗಿ ಬಳಕೆಯಾಗಿರಬಹುದು. ಅದು ತನ್ನಷ್ಟಕ್ಕೆ ತಾನು ಸ್ವತಂತ್ರ ಎನ್ನುವಷ್ಟು ಪರಿಪೂರ್ಣವಾಗಿದ್ದು, ಒಂದು ಅರ್ಥವನ್ನು ಕೊಡುತ್ತಿದ್ದರೆ, ಅದಕ್ಕೆ ಮಾದರಿ ಎಂದು ಕರೆಯಬಹುದು’’ ಎಂದು ಥಾಮ್ಸನ್ನರು ಅಭಿಪ್ರಾಯಪಡುತ್ತಾರೆ.

” A type is a traditional tale that has an independent existence. It may be told as a complete narrative and does not depend for its meaning on any other tale. ”

ಉದಾಹರಣೆಗಾಗಿ ‘ನೀರಡಿಸಿದ ಕಾಗೆ’ ಕಥೆಯನ್ನು ನೋಡಬಹುದು: ನೀರಡಿಸಿದ ಒಂದು ಕಾಗೆ, ನೀರು ಹುಡುಕುತ್ತ ಒಂದು ಧರ್ಮಶಾಲೆಗೆ ಹೋಯಿತು. ಅಲ್ಲಿ ಅರ್ಧ ನೀರಿರುವ ಹರಿವೆ ಕಂಡಿತು. ಕಾಗೆ ತನಗೆ ನೀರು ಕುಡಿಯಲು ಬರುವಂತೆ ಅದರಲ್ಲಿ ಸಣ್ಣ ಸಣ್ಣ ಹರಳುಗಳನ್ನು ಹಾಕಿ, ನೀರು ಮೇಲಕ್ಕೆ ಬರಲು, ಕುಡಿದು ಹಾರಿ ಹೋಯಿತು.

ಇಲ್ಲಿ ಕೊಟ್ಟುದು ಕಥೆಯ ಸಾರಾಂಶ ಮಾತ್ರ. ಒಬ್ಬ ವಕ್ತಾರ ಈ ಕಥೆಯನ್ನು ಹೇಳಿದಾಗ ನಮಗೆ ದೊರೆಯುವ ಈ ಕಥೆಯ ಪೂರ್ಣಪಾಠವನ್ನು ‘ಕಥಾಮಾದರಿ’ ಎಂದು ಕರೆಯಲಾ ಗುತ್ತದೆ. ಒಟ್ಟಾರೆಯಾಗಿ ಹೀಗೆ ಒಂದು ಕಥೆಯನ್ನು ಮಾದರಿ ಎನ್ನಬಹುದು. ಆದರೆ ಕೇವಲ ಒಂದು ಕಥೆಯೇ ಮಾದರಿಯ ಸಂಪೂರ್ಣ ಪರಿಕಲ್ಪನೆಯನ್ನು ಕೊಡಲಾರದು. ಒಂದು ‘ಕಥಾಮಾದರಿ’ ಪರಿಕಲ್ಪನೆಯು ಮಾದರಿಯ ಮೊದಲ ರೂಪ ಮಾತ್ರ. ಅದಕ್ಕಾಗಿ ಇದನ್ನು ಥಾಮ್ಸನ್ನರೇ ‘ಕಥಾ ಮಾದರಿ’ (Tale Type) ಎಂದು ಕರೆಯುತ್ತಾರೆ. ಮಾದರಿಯ ಪರಿಕಲ್ಪನೆಯು ರಚನಾ ವಿಧಾನದ ಹಿನ್ನೆಲೆಯಲ್ಲಿ ಮೂಡಿಬಂದುದಾಗಿರುವುದರಿಂದ ಒಂದು ಜನಪದ ಕಥೆಯ ಸ್ವರೂಪ ಮತ್ತು ಮಾದರಿಗೆ ಸಂಬಂಧಿಸಿದಂತೆ ಒಂದು ಕಥೆ (ಕಥಾಮಾದರಿ) ಯ ಸ್ವರೂಪ ಭಿನ್ನವಾಗಿರುತ್ತದೆ. ಏಕೆಂದರೆ ಕೇವಲ ಒಂದು ಕಥೆಯನ್ನು ತೆಗೆದುಕೊಂಡಾಗ ಒಟ್ಟಾರೆ ಅದರ ಸ್ವರೂಪವನ್ನು ಹೇಳುತ್ತೇವೆ. ಮಾದರಿಯ ಹಿನ್ನೆಲೆಯಲ್ಲಿ ಒಂದು ಕಥೆಯನ್ನು ತೆಗೆದುಕೊಂಡಾಗ – ವರ್ಗೀಕರಣದ ಹಿನ್ನೆಲೆಯಲ್ಲಿ ಅದರ ಸ್ಥೂಲವಾದ ರಚನಾಕ್ರಮ ಮತ್ತು ತಿರುಳನ್ನು ಗಮನಿಸುತ್ತೇವೆ.

ವರ್ಗೀಕರಣದ ಹಿನ್ನೆಲೆಯಲ್ಲಿ ಒಂದು ಕಥೆಯನ್ನು ಪ್ರತ್ಯೇಕವಾಗಿ ಎತ್ತಿಕೊಂಡಾಗ, ಅದು ಒಂದು ‘ಕಥಾಮಾದರಿ’ (Tale Type) ಎನಿಸಿಕೊಳ್ಳುತ್ತದೆ. ಆದರೆ ಆ ಕಥೆಯನ್ನು ಬೇರೆ ಬೇರೆ ಭಾಗಗಳಿಂದ ಬೇರೆ ಬೇರೆ ವಕ್ತಾರರುಗಳಿಂದ ಸಂಗ್ರಹಿಸಿದಾಗ, ಅನೇಕ ಭಿನ್ನ ಪಾಠಗಳು ದೊರೆಯುತ್ತವೆ. ಆಗ ಕಲೆ ಹಾಕಿದ ಪಾಠಗಳಲ್ಲಿ ಅಥವಾ ಒಂದೇ ಬಗೆಯ ಹಲವು ಕತೆಗಳ ಗುಂಪಿನಲ್ಲಿ ಯಾವುದೇ ಒಂದು ಕಥೆಯನ್ನು ‘ಕಥಾಮಾದರಿ’ ಎಂದು ಹೇಳಬಹುದು. ಅಲ್ಲದೆ ‘ಮಾದರಿ’ ಎನ್ನಿಸಿಕೊಳ್ಳುವ ಕಥೆ, ಆ ಗುಂಪಿನದೇ ಆದುದರಿಂದ ಅದರಲ್ಲಿಯ ಬೇರೆ ಕಥೆಯನ್ನು ಕೂಡ ಮಾದರಿಗೆ ನಿದರ್ಶನ ಕೊಡಬಹುದು. ಇಂತಹ ‘ಕಥಾಮಾದರಿ’ ನಮ್ಮೆದುರಿಗೆ ಒಂದು ಗುಂಪಿನ ಪ್ರತಿನಿಧಿಯಾಗಿ ನಿಲ್ಲುತ್ತದೆ. ಅದು ಆ ಗುಂಪಿನ ಸ್ಥೂಲ ಸ್ವರೂಪವನ್ನು ನಿರ್ದೇಶಿಸುತ್ತಿ ರುತ್ತದೆ. ಇಲ್ಲವೆ ತನ್ನ ಗುಂಪಿನ ಸ್ಯಾಂಪಲ್ ಅದಾಗಿರುತ್ತದೆ. ಒಂದೇ ಅಂತಸ್ತಿನ ಹಲವು ವಿಷಯಗಳ ಒಂದು ಗುಂಪಿಗೆ, ಅದರಲ್ಲಿಯ ಯಾವುದಾದರೂ ಒಂದು ವಸ್ತುವು ಉಳಿದವುಗಳಿಗೆ ನಿದರ್ಶನವಾಗಿ ನಿಲ್ಲಬಹುದು. ಅಂತಹ ಗುಂಪಿಗೆ ಆದರ್ಶವಾದ ಗುರುತಿನ ಸಂಕೇತವೇ ‘ಮಾದರಿ’ ಎನ್ನಿಸಿಕೊಳ್ಳುತ್ತದೆ. ಅಥವಾ ಸಮಾನವಾದ ಗುಣಗಳಿಂದ ಕೂಡಿದ ಒಂದು ಗುಂಪು, ಯಾವುದರಿಂದ ಸಂಜ್ಞಿಸಲ್ಪಡುವುದೋ ಆ ಸಂಜ್ಞೆ ಅದೇ ಆದರ್ಶಗಳನ್ನು ಹೊಂದಿರುತ್ತದೆ. ಅದಕ್ಕಾಗಿ ಅದೇ ‘ಮಾದರಿ’ ಎನ್ನಿಸಿಕೊಳ್ಳುತ್ತದೆ.

ಒಂದು ಕಥೆಯಲ್ಲಿ ಹಲವಾರು ಆಶಯಗಳಿರುವುದು ಸಹಜ. ಒಬ್ಬ ಕಥೆಗಾರನಿಂದ ಅನೇಕ ಕಥೆಗಾರರ ನಡುವೆ ಒಂದು ಜನಪದ ಕಥೆ ಪರ್ಯಟನ ಮಾಡುವಾಗ, ಆಯಾ ಕಥೆಗಾರನ ಸಾಮರ್ಥ್ಯದ ಮೇರೆಗೆ – ಆತನ ಸ್ಮರಣ ಶಕ್ತಿ, ವಾಕ್‌ಚಾತುರ್ಯ ಇತ್ಯಾದಿಗಳಲ್ಲದೆ ಬದಲಾದ ಪರಿಸರಗಳ ಪ್ರಭಾವಗಳಿಂದ ಕಥೆಗಳಲ್ಲಿ ಅಲ್ಪಸ್ವಲ್ಪ ಬದಲಾವಣೆ, ರೂಪಾಂತರ, ಪಾಠಾಂತರವಾಗುವುದು ಸ್ವಾಭಾವಿಕ. ಇದು ಒಂದು ಕಥೆ ಬದುಕಿಕೊಳ್ಳುವುದಕ್ಕೆ ಅವಶ್ಯಕವಾಗಿ ನಡೆಯಬೇಕಾದ ಕ್ರಿಯೆ, ಕಥೆಯ ಜೀವಂತಿಕೆಯ ಲಕ್ಷಣ. ಹೀಗೆ ಬದಲಾವಣೆ ಹೊಂದುವಾಗ ಒಂದು ಕಥೆಯ ಗೊತ್ತಾದ ಕೆಲವು ಆಶಯಳು ಜಾರಿಕೊಂಡು ಹೋಗಬಹುದು. ಬದಲಿಗೆ ಅದೇ ಮನೋಧರ್ಮದ ಹೊಸ ಆಶಯಗಳು ಬಂದು ಸೇರಬಹುದು. ಒಮ್ಮಮ್ಮೆ ಹಲವು ಆಶಯಗಳು ಹೊಸದಾಗಿ ಬಂದು ಸೇರಬಹುದು. ಅಲ್ಲದೆ ಇದ್ದ ಆಶಯಗಳೇ ಮೇಲೆ ಕೆಳಗೆ ಸ್ಥಳಾಂತರವಾಗಬಹುದು. ಆದರೆ ಈ ಎಲ್ಲಾ ಕ್ರಿಯೆಗಳಿಂದ ಕಥೆಯ ‘ಮೂಲ ಉದ್ದೇಶ’ಕ್ಕೆ ಮಾತ್ರ ಯಾವ ಧಕ್ಕೆಯೂ ಬರುವುದಿಲ್ಲ. ‘ಕೇಂದ್ರ ಆಶಯ’ವು ಅದನ್ನು ಕಾಯ್ದುಕೊಂಡೇ ಇರುತ್ತದೆ. ಹೀಗಾಗಿ ‘ಕಥೆಯ ಚೌಕಟ್ಟು’ ಕೆಡದೆ, ಅದು ನಿರಂತರವಾಗಿ ಉಳಿದುಕೊಂಡು ಬಂದಿರುತ್ತದೆ. ಈ ರೀತಿ ಕಥೆಯ ಧ್ಯೇಯವನ್ನು ಬದಲಿಸಿಕೊಳ್ಳದೆ, ಸ್ಥಿರವಾಗಿ ಉಳಿದುಕೊಂಡು ಬರುವ ‘ಕಥೆಯ ಚೌಕಟ್ಟು’ಅಥವಾ ‘ಕಥಾಶಿಲ್ಪ’ವನ್ನೇ ‘ಕಥಾಮಾದರಿ’ ಎಂದು ಕರೆಯಲಾಗು ತ್ತದೆ. ಹೀಗೆ ಕಥೆಯ ವಸ್ತುವಿಗೆ ಸಂಬಂಧಿಸಿದ ‘ಆಶಯ’ವು ಕಥಾನಕದ ಒಟ್ಟು ತಿರುಳನ್ನು ಬದುಕಿಸಿದರೆ, ಕಥೆಯ ತಾಂತ್ರಿಕ ಸ್ವರೂಪವಾಗಿರುವ ‘ಮಾದರಿ’ಯು ಅದರ ರೂಪವನ್ನು ಕಾಪಾಡಿಕೊಂಡು ಬರುತ್ತದೆ.

. ಮೂಲ ಮಾದರಿ (Arche Type): ಮೂಲ ಮಾದರಿಯ ಕಲ್ಪನೆ ಎರಡನೇ ಹಂತದಲ್ಲಿ ಬರುತ್ತದೆ. ಕಥನಕಾವ್ಯಗಳ ಸಂಪಾದನಾ ಕಾಲಕ್ಕೆ ಬಳಕೆಗೆ ಬಂದುದು ‘ಚಾರಿತ್ರಿಕ ಭೌಗೋಳಿಕ ವಿಧಾನ’. ನಂತರ ಅದನ್ನು ಕಾರ್ಲೆ ಕ್ರಾಹ್ನ ಅವರು ಜನಪದ ಕಥೆಗಳಿಗೆ ಅಳವಡಿಸಿ ದರು. ‘ಚಾರಿತ್ರಿಕ ಭೌಗೋಳಿಕ ವಿಧಾನ’ದಲ್ಲಿ ಎರಡು ರೀತಿಯ ಕೆಲಸ ನಡೆಯುತ್ತದೆ. ಮೊದಲನೇ ಪ್ರಯತ್ನ ಚಾರಿತ್ರಿಕ ಅಂಶಗಳನ್ನು ಗುರುತಿಸುವುದು. ಅಂದರೆ ಕಥೆಯಲ್ಲಿಯ ಕೆಲ ವಿಶಿಷ್ಟ ಅಂಶಗಳ ಹಳಮೆಯನ್ನನುಲಕ್ಷಿಸಿ ಗುರುತಿಸುವುದು. ಇದು ನಮ್ಮ ಗ್ರಂಥಸಂಪಾದನೆಯ ಕಲ್ಪನೆಯಂತಹುದು. ಎರಡನೆಯದು – ಕಥೆಯ ಭೌಗೋಳಿಕ ಪ್ರಯಾಣವನ್ನು ಗುರುತಿಸು ವುದು. ‘ಕಥೆಯ ಸಂಪಾದಿತ ಪಾಠ’ ಅಂದರೆ ಒಂದು ಕಥೆಯ ಅನೇಕ ಅವತಾರಗಳನ್ನು ‘ಐತಿಹಾಸಿಕ ಭೌಗೋಳಿಕ ವಿಧಾನ’ಕ್ಕೆ ಒಳಪಡಿಸಿ, ಭಿನ್ನಾಂಶಗಳನ್ನೆಲ್ಲ ಒಡೆದು ಹಾಕಿ, ಸಮಗ್ರ ವಿವರಗಳನ್ನೊಳಗೊಂಡ, ನೈಜವಾದ ಒಂದು ‘ಮೂಲ ರೂಪ’ (Basic form)ವನ್ನು ತಯಾರಿಸಿಕೊಳ್ಳಲಾಗುತ್ತದೆ. ಮೂಲಕ್ಕೆ ಹೆಚ್ಚು ಹತ್ತಿರವೆಂದು ಗಣಿಸುವ ಈ ವಿಶ್ವಾಸಾರ್ಹ ಪಾಠವನ್ನು ‘ಮೂಲ ಮಾದರಿ’ (Arche Type)ಎಂದು ಹೇಳಲಾಗುತ್ತದೆ. ಈ ಮೇಲೆ ಉದಾಹರಿಸಿದ ‘ ನೀರಡಿಸಿದ ಕಾಗೆ’ಯ ಕೆಲ ಭಿನ್ನಪಾಠಗಳನ್ನು ಗಮನಿಸಿದರೆ, ಅಲ್ಲಿಯ ಸಮಾನ ಮತ್ತು ಭಿನ್ನಾಂಶಗಳು ಹೀಗೆ ಕಾಣಿಸಿಕೊಳ್ಳುತ್ತವೆ:

ಅ) ಈ ಕಥೆಯಲ್ಲಿ ಬರುವ ಪಾತ್ರ ಕಾಗೆ, ಎಲ್ಲ ಪಾಠಗಳಲ್ಲೂ ಬರುತ್ತದೆ.

ಬ) ಕಾಗೆ ನೀರಿಗಾಗಿ ಹುಡುಕಾಟ ನಡೆಸಿ, ಪ್ರಯಾಣ ಬೆಳೆಸುವ ಪ್ರದೇಶಗಳು ಭಿನ್ನವಾದಂತೆ, ಅಲ್ಲಿಯ ಪಾತ್ರೆಗಳೂ ಕೂಡ ಭಿನ್ನವಾಗಿರುತ್ತವೆ. (ಆದರೆ ನೀರು ಎಲ್ಲ ಕಡೆ ಅರ್ಧ ತುಂಬಿರುತ್ತದೆ ) :

೧. ಕಾಗೆ – ಧರ್ಮಶಾಲೆಗೆ ಹೋದರೆ, ಅಲ್ಲಿ ಅರ್ಧ ನೀರಿರುವ ಹರವಿ ಇರುತ್ತದೆ.

೨. ಕಾಗೆ – ಶಾಲೆಗೆ ಹೋದರೆ, ಅಲ್ಲಿ ಅರ್ಧ ನೀರಿರುವ ಹೂಜಿ ಇರುತ್ತದೆ.

೩. ಕಾಗೆ – ಬಾವಿಗೆ ಹೋದರೆ, ಅಲ್ಲಿ ಅರ್ಧ ನೀರಿರುವ ಕೊಡ ಇರುತ್ತದೆ.

ಕ) ಕಥೆಯ ಮುಂದಿನ ವಿವರಣೆ – ಎಲ್ಲ ಅವತಾರಗಳಲ್ಲಿ ಒಂದೇ ತೆರನಾಗಿರುತ್ತದೆ : ಹರಳು ಹಾಕಿ, ನೀರು ಮೇಲಕ್ಕೆ ಬರಲು, ಕುಡಿದು ಹಾರಿಹೋಗುತ್ತದೆ.

‘ಚಾರಿತ್ರಿಕ ಭೌಗೋಳಿಕ ವಿಧಾನ’ವನ್ನು ಅನುಸರಿಸಿ ಭಿನ್ನಪಾಠಗಳನ್ನು ಗಮನಿಸಿ, ವಿಶ್ವಾಸಾರ್ಹ ಪಾಠಗಳನ್ನು ಆಯ್ಕೆಮಾಡಿಕೊಂಡು, ಉಳಿದ ಭಿನ್ನಾಂಶಗಳನ್ನು ಅಡಿಟಿಪ್ಪಣಿಯಲ್ಲಿ ಕೊಟ್ಟು, ಒಂದು ಪಾಠ ತಯಾರಿಸಿ ಕೊಂಡು, ಅದನ್ನೇ ಪ್ರಕಟಿಸುವ ಪದ್ಧತಿ ಕಥನ ಕಾವ್ಯದಲ್ಲಿ ಕಾಣುತ್ತೇವೆ. ಆದರೆ ಜನಪದ ಕಥೆಯಲ್ಲಿ ಇಂತಹ ಪಾಠವನ್ನು ಪ್ರಕಟಿಸುವ ಪದ್ಧತಿಯಿಲ್ಲ. ಆದರೆ ಈ ಕೆಲಸ ಒಂದು ಹಂತದಲ್ಲಿ ಇಲ್ಲೂ ನಡೆಯುತ್ತದೆ. ಇಲ್ಲಿ ದೊರೆಯುವ ಆ ಪಾಠ Arche Type ಎನಿಸಿಕೊಳ್ಳುತ್ತದೆ. Arche Type(ಮೂಲಮಾದರಿ) ಎಂದರೆ ‘ಚಾರಿತ್ರಿಕ ಭೌಗೋಳಿಕ ವಿಧಾನ’ದ ಸಹಾಯದಿಂದ, ಜನಪದ ಕಥೆಗಳ ಅನೇಕ ಭಿನ್ನಪಾಠಗಳ ಸಹಾಯದಿಂದ ತಯಾರಿಸಿಕೊಂಡ ಒಂದು ಪಾಠ. ಇದನ್ನು ‘ಮೂಲ ರೂಪ’ Basic form, Original form (ur – form) ಎಂದೂ ಕರೆಯಲಾಗುತ್ತದೆ.

. ರಚನಾ ಮಾದರಿ (Structural Type) : ಈ ಮೇಲೆ ವಿವರಿಸಿದ ಎರಡು ಸಂಗತಿಗಳ ಕಡೆ ಲಕ್ಷ ಸೆಳೆಯಲು ಬಯಸುತ್ತೇನೆ. ೧) ಕಥಾ ಮಾದರಿ (Tale Type). ೨) ಮೂಲ ಮಾದರಿ (Arche Type). ಕೇವಲ ಒಂದೇ ಕಥೆ ನಿದರ್ಶನಕ್ಕೆ ತೆಗೆದು ಕೊಂಡಾಗ ಅದು ‘ಕಥಾ ಮಾದರಿ’, ಒಂದು ಕಥೆಯ ಹಲವು ಅವತಾರಗಳ ಕ್ರೋಡೀಕರಣಗೊಂಡ ರೂಪ ‘ಮೂಲ ಮಾದರಿ’. ಈಗ ಮೂರನೆಯ ಹಂತದಲ್ಲಿ ಮಾದರಿಯ ಕಲ್ಪನೆ ಹೇಗಿರುತ್ತದೆಂದರೆ ಆ ಅದು ‘ಕಥಾಮಾದರಿಯ ಸಂಕ್ಷಿಪ್ತ ರೂಪ’ ಅಥವಾ ‘ಮೂಲಮಾದರಿಯ ಸಂಕ್ಷಿಪ್ತ ರೂಪ’ ಆಗಿರುತ್ತದೆ. ಇವನ್ನು ಮಾದರಿಯ ‘ರಚನಾರೂಪ’ ಎಂದೂ ಕರೆಯಬಹುದು. ಇಲ್ಲಿ ರಚನೆಯ ತಂತ್ರ ವಿಶಿಷ್ಟವಾಗಿದ್ದು, ಈ ರಚನಾರೂಪಗಳಲ್ಲಿ ‘ ಕಥಾಮಾದರಿ’ ಯ ಇಲ್ಲವೆ ‘ಮೂಲಮಾದರಿ’ಯ ಮುಖ್ಯ ತಿರುಳು ಸೇರಿರುತ್ತದೆ ಮತ್ತು ಹೆಚ್ಚು ತಾಂತ್ರಿಕವಾಗಿ ರಚಿಸಲ್ಪಡುತ್ತದೆ.

ಈ ಮೇಲೆ ನೀರಡಿಸಿದ ಕಾಗೆಯ ‘ಮೂಲ ಮಾದರಿ’ಯಲ್ಲಿ ಸೇರಿಕೊಳ್ಳಬೇಕಾದ ಅಂಶಗಳನ್ನು ನಾವು ಗಮನಿಸಿದ್ದೇವೆ. ಅಲ್ಲಿ ಎರಡನೇ ಹಂತದಲ್ಲಿ ದೊರೆಯುವ ಭಿನ್ನಾಂಶಗಳಲ್ಲಿ ಹೆಚ್ಚು ಚಾರಿತ್ರಿಕವೆನಿಸುವಂತಹುದು: ‘ಧರ್ಮಶಾಲೆ – ಹರವಿ’, ನಂತರದ ಸ್ಥಾನ ‘ಬಾವಿ – ಕೊಡ’ ಈ ಕ್ರಮದಲ್ಲಿ ಕೊಡಬೇಕಾಗುತ್ತದೆ. ‘ಶಾಲೆ – ಹೂಜಿ’ ತೀರ ಇತ್ತೀಚಿನ ವಿವರಣೆ ಎನಿಸುತ್ತದೆ. ಈ ಭಿನ್ನಾಂಶಗಳ ಚರಿತ್ರೆಯನ್ನು ಗಮನಿಸಿ ಮೂಡಿಬಂದ ‘ಮೂಲ ಮಾದರಿ’ಯನ್ನು ಸಂಕ್ಷಿಪ್ತವಾಗಿ ಹೀಗೆ ರಚಿಸಿಕೊಳ್ಳಬಹುದಾಗಿದೆ

‘‘ನೀರಡಿಸಿದ ಕಾಗೆನೀರು ಹುಡುಕುತ್ತ ಧರ್ಮಶಾಲೆ (ಬಾವಿ, ಶಾಲೆ)ಗೆ ಬಂದು, ಅರ್ಧ ನೀರಿರುವ ಹರವಿ (ಕೊಡ, ಹೂಜಿ) ಕಂಡಿತು. ತನಗೆ ನೀರು ಕುಡಿಯಲು ಬರುವಂತೆ ಹರಳುಗಳನ್ನು ಅರ್ಧ ನೀರಿರುವ ಪಾತ್ರೆಯಲ್ಲಿ ಹಾಕಿ, ನೀರು ಮೇಲಕ್ಕೆ ಬರುವಂತೆ ಮಾಡಿ, ಕುಡಿದು ಹಾರಿ ಹೋಯಿತು’’.

ಇದು ‘ಮೂಲಮಾದರಿ’ಯಿಂದ ಪಡೆದ ‘ ರಚನಾರೂಪ’. ಇದನ್ನು ಕಥೆಯ ಒಂದೇ ಪಾಠ ಇದ್ದಾಗಲೂ (ಅಂದರೆ ಒಂದು ‘ಕಥಾಮಾದರಿ’ಯಿಂದಲೂ) ತಯಾರಿಸಿಕೊಳ್ಳ ಬಹುದು. ಆಗ ‘ರಚನಾ ರೂಪ’ ದಲ್ಲಿ ಭಿನ್ನಾಂಶಗಳನ್ನು ತೋರಿಸಲು ಆಗುವುದಿಲ್ಲ. ನೀರಡಿಸಿದ ಕಾಗೆ ನೀರಿಗಾಗಿ ಧರ್ಮಶಾಲೆಗೆ ಹಾರಿಹೋಗುವ ಪಾಠ ಇಟ್ಟುಕೊಂಡು ‘ಕಥಾಮಾದರಿ’ಯ ‘ರಚನಾರೂಪ’ವನ್ನು ಹೀಗೆ ರಚಿಸಿಕೊಳ್ಳಬಹುದು:

‘‘ನೀರಡಿಸಿದ ಕಾಗೆನೀರು ಹುಡುಕುತ್ತ ಧರ್ಮ ಶಾಲೆಗೆ ಬಂದು, ಅರ್ಧ ನೀರಿರುವ ಹರವಿ ಕಂಡಿತು. ತನಗೆ ಕುಡಿಯಲು ಬರುವಂತೆ ಹರಳನ್ನು ಅರ್ಧ ನೀರಿರುವ ಹರವಿಯಲ್ಲಿ ಹಾಕಿ, ನೀರು ಮೇಲಕ್ಕೆ ಬರುವಂತೆ ಮಾಡಿ, ಕುಡಿದು ಹಾರಿ ಹೋಯಿತು’.

ಇದು ಒಂದು ಸರಳ ಕಥೆಯ ವಿಷಯವನ್ನು ತೀರ ಸರಾಗವಾಗಿ, ಎಲ್ಲರಿಗೂ ತಿಳಿಯು ವಂತೆ ವಿವರಿಸಲು ಆಯ್ದುಕೊಂಡ ಉದಾಹರಣೆ. ಒಂದು ಸಂಕೀರ್ಣ ಕಥೆ ಇದ್ದಾಗ ಮತ್ತು ಹಲವಾರು ಭಿನ್ನಪಾಠಗಳು ದೊರೆತಾಗ ‘ರಚನಾಮಾದರಿ’ಯನ್ನು ರಚಿಸಿಕೊಳ್ಳುವುದು ಪ್ರಯಾಸದ ಮತ್ತು ಚಾಣಾಕ್ಷತನದ ಕೆಲಸವಾಗುತ್ತದೆ. ಇಲ್ಲಿ ಮಾದರಿಯ ರಚನೆಯ ಕೌಶಲ್ಯ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿಯೇ ಈ ಮೂರನೇ ಹಂತದ ಕಾರ್ಯ ತಾಂತ್ರಿಕವಾಗಿ ಕಷ್ಟದ್ದೆನಿಸುತ್ತದೆ.

‘ನೀರಡಿಸಿದ ಕಾಗೆ’ ಕಥೆಯ ‘ಮೂಲಮಾದರಿ’ಯಿಂದ ಮೇಲೆ ರಚಿಸಿಕೊಂಡ ‘ರಚನಾ ಮಾದರಿ’ಗಿಂತ ಹೆಚ್ಚು ತಾಂತ್ರಿಕವಾದ ರೀತಿಯಲ್ಲೂ ಅದನ್ನು ರಚಿಸಬಹುದಾಗಿದೆ. ವಿಷಯ ವನ್ನು ಸ್ಪಷ್ಟಪಡಿಸಲು ಪುನ: ಅದೇ ಉದಾಹರಣೆಯನ್ನು ಎತ್ತಿಕೊಳ್ಳಲಾಗುತ್ತಿದೆ. ‘ರಚನಾ ಮಾದರಿ’ಯ ಎಲ್ಲ ಅಂಶಗಳೊಂದಿಗೆ ಅದನ್ನು ಹೀಗೆ ದಾಖಲಿಸಬಹುದು :

 

೨೩೨ಡಿ: ಕಾಗೆ ತನಗೆ ನೀರು ಕುಡಿಯಲು ಸಾಧ್ಯವಾಗುವಂತಾಗಲು, ನೀರಿರುವ ಹರವಿ (ಕೊಡ, ಜಗ್ಗು) ಯಲ್ಲಿ ಹರಳುಗಳನ್ನು ಹಾಕಿತು (ಜೆ೧೦೧).

i. ನೀರಡಿಸಿದ ಕಾಗೆ(ಬಿ೯೧೦) ನೀರು ಹುಡುಕುತ್ತ ಬಂದು, ಧರ್ಮಶಾಲೆ (ಬಾವಿ, ಶಾಲೆ)ಯಲ್ಲಿ ಅರ್ಧ ನೀರು ತುಂಬಿದ ಹರವಿ (ಕೊಡ, ಹೂಜಿ) ಕಂಡಿತು ( ಎಫ್ ೮೪೯.೧.)

ii. ಹರವಿ (ಕೊಡ, ಹೂಜಿ)ಯಲ್ಲಿಯ ಅರ್ಧ ನೀರನ್ನು, ಹರಳು ಹಾಕುವ ಮೂಲಕವಾಗಿ ಮೇಲೆ ಬರುವಂತೆ ಮಾಡಿ, ಕುಡಿಯಿತು (ಜೆ. ೧೧೧೮.೨, ಜೆ ೧೦೧).

ಇದು ಒಂದು ಸರಳ ಕಥೆಯಿಂದ ರಚಿಸಿಕೊಂಡ ಮಾದರಿ. ಇದನ್ನು ಲಕ್ಷ್ಯದಲ್ಲಿಟ್ಟು ಕೊಂಡು ಒಂದು ಸಂಕೀರ್ಣ ಕಥೆಯ, ಅನೇಕ ಭಿನ್ನಪಾಠಗಳಿಂದ ತಯಾರಿಸಿಕೊಂಡ ‘ರಚನಾ ಮಾದರಿ’ಯಲ್ಲಿ ಕಾಣಿಸುವ ತಾಂತ್ರಿಕ ಅಂಶಗಳನ್ನು ಹೀಗೆ ಕ್ರೋಡೀಕರಿಸಬಹುದು:

೧. ಒಂದು ಕಥೆಯ ಅನೇಕ ಅವತಾರಗಳು ದೊರೆತಾಗ ‘ಮೂಲರೂಪ’ ಅಥವಾ ‘ಮೂಲಮಾದರಿ’ ತಯಾರಿಸಿಕೊಳ್ಳಲು ‘ಚಾರಿತ್ರಿಕ ಭೌಗೋಳಿಕ ವಿಧಾನ’ದನ್ವಯ ವಿಷಯಗಳನ್ನು ಒಡೆದು ಹಾಕುವ ಕೆಲಸ ಮೊದಲು ಆಗಿ, ಬಹು ಪ್ರಯಾಸದ ಕೆಲಸ ಮುಗಿಯಬೇಕು.

೨. ಒಂದೇ ಕಥೆಯಲ್ಲಿ ದೊರೆಯುವ ಭಿನ್ನಪಾಠಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕಥಾ ಸಂಪ್ರದಾಯ ಗಳು ದೊರೆಯಬಹುದು. ಅಂದರೆ ಕಥೆಯ ಭಿನ್ನಾಂಶಗಳಲ್ಲಿ ಹೆಚ್ಚಿನ ಸಾಮ್ಯ ಕಂಡುಬರುವ ಪಾಠಗಳ ಎರಡು ಮೂರು ಗುಂಪುಗಳಾಗಬಹುದು. ಆಗ ಅವುಗಳನ್ನು ಎ ಬಿ ಸಿ ಎಂದು ಗುರುತಿಸಿಕೊಳ್ಳ ಲಾಗುತ್ತದೆ. ‘ರಚನಾಮಾದರಿ’ ರೂಪದಲ್ಲೂ ಇವು ಕಾಣಿಸಿಕೊಳ್ಳುತ್ತವೆ.

೩. ಭಿನ್ನಪಾಠಗಳ ಗುಂಪಿನಲ್ಲಿ ಎ, ಬಿ, ಸಿ, ಗಳೆಂದು ಗುರುತಿಸಿಕೊಂಡವುಗಳಲ್ಲಿ ಮತ್ತೆ ಭಿನ್ನತೆ ಇದ್ದರೆ ಎ೧, ಎ೨, ಬಿ೧, ಬಿ೨ಎಂದೂ ಗುರುತಿಸಬಹುದು. ಅವುಗಳನ್ನು ‘ರಚನಾಮಾದರಿ’ಯ ರೂಪದಲ್ಲೂ ಕಾಣಿಸಬಹುದು.

೪. ಸಣ್ಣ ಸಣ್ಣ ಭಿನ್ನಾಂಶಗಳನ್ನು ಹೇಳಲು ‘ ಅಥವಾ’ ‘ಇಲ್ಲವೆ’ ಮುಂತಾದ ಪದಗಳನ್ನೂ ಕಂಸಗಳನ್ನೂ ಬಳಸಿಕೊಳ್ಳಬೇಕಾಗುತ್ತದೆ.

೫. ಮಾದರಿ ರಚನೆಯಲ್ಲಿ ಕಥೆಯ ತಿರುಳು ಅಡಕವಾಗಿರಬೇಕು.

೬. ‘ರಚನಾಮಾದರಿ’ಯನ್ನು ಲಕ್ಷದಲ್ಲಿಟ್ಟುಕೊಂಡು ಕಥೆಯ ಬೆಳವಣಿಗೆಯ ಮುಖ್ಯ ಹಂತಗಳನ್ನು ಗುರುತಿಸಿಕೊಳ್ಳಬೇಕು. ಅವುಗಳನ್ನು i, ii, iii ಮುಂತಾಗಿ ಗುರುತಿಸಿಕೊಳ್ಳಬೇಕಾಗುತ್ತದೆ.

೭. ‘ರಚನಾರೂಪ’ವನ್ನು ಅನೇಕ ಭಿನ್ನಪಾಠಗಳನ್ನು ಕ್ರೋಡೀಕರಿಸಿ ತಯಾರಿಸುವುದರಿಂದ, ಅಲ್ಲಿ ಆಶಯಗಳ ವಿವರಣೆಗಳೇ ಮುಖ್ಯವಾಗಿ ಬರುತ್ತವೆ. ಹೀಗಾಗಿ ನಡುನಡುವೆ ಆಶಯಗಳ ಸಂಖ್ಯೆಗಳನ್ನು ಹಾಕಬಹುದು.

೮. ಕಥೆಯ ತಿರುಳಿನಲ್ಲಿಯ ಮುಖ್ಯ ಘಟನೆ, ಪಾತ್ರ ಇತ್ಯಾದಿ ಆಕರ್ಷಕ ಅಂಶಗಳನ್ನು ಗಮನಿಸಿ ಮಾದರಿಗೆ ಒಂದು ಹೆಸರನ್ನು ಕೊಡಲಾಗುತ್ತದೆ.

೯. ಒಂದು ಮಾದರಿಯಲ್ಲಿ ಬೇರೆ ಮಾದರಿಯ ವಿವರಣೆಗಳು ಸೇರುತ್ತಿದ್ದರೆ, ಆ ಮಾದರಿಯ ಸಂಖ್ಯೆಯನ್ನು ಪ್ರಸ್ತುತ ಮಾದರಿಯ ಸಂಖ್ಯೆಯ ನಂತರ ಅಥವಾ ಅದರ ಹೆಸರಿನ ಮೊದಲಿಗೆ ಅಥವಾ ನಂತರ – ಕಂಸಿನಲ್ಲಿ ಕೊಡಬೇಕು. ಅಥವಾ ಮಾದರಿಯ ವಿವರಣೆಯಲ್ಲಿ ಗೊತ್ತಾದ ಸ್ಥಳದಲ್ಲಿ ಕೊಡಬಹುದು.

೧೦. ಮಾದರಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ, ಅದರ ಸ್ಥಾನವನ್ನು ಗುರುತಿಸಲು ಒಂದು ಸಂಖ್ಯೆಯನ್ನು ಕೊಡಲಾಗುತ್ತದೆ. ಒಂದು ಮಾದರಿಯ ವರ್ಗೀಕರಣದ ಗುಂಪಿನಲ್ಲಿಯ ಬೇರೆ ಬೇರೆ ಕಥೆಗಳನ್ನು ಗುರುತಿಸಲು ಸಂಖ್ಯೆಯ ಮುಂದೆ ಎ, ಬಿ, ಸಿ, ಎಂದೂ ೧, ೨, ೩ ಎಂದೂ ಅಥವಾ ಚುಕ್ಕೆಗಳ ಮೂಲಕ ಗುರುತಿಸಬಹುದು: ೫೧೬ಎ, ೫೧೬ಬಿ, ೫೧೬ಎ೧, ೫೧೬ಬಿ೧, ೫೧೬ಎ೨, ೫೧೬ಬಿ೨, ೫೧೬*, ೫೧೬ಎ* ( ಚುಕ್ಕೆಗಳನ್ನು ಇನ್ನೂ ಬೆಳೆಸಬಹುದು) ಇತ್ಯಾದಿ.

ಈ ಅಂಶಗಳನ್ನೊಳಗೊಂಡ ‘ರಚನಾ ಮಾದರಿ’ ರೂಪವು ಮೂರನೆಯ ಹಂತದಲ್ಲಿ ತಯಾರಿಸಿಕೊಂಡುದಾಗಿರುತ್ತದೆ ( ಉದಾಹರಣೆಗಾಗಿ ಮಾದರಿ ಸೂಚಿುನ್ನು ಗಮನಿಸಿ). ಒಟ್ಟಾರೆಯಾಗಿ ಈ ರೂಪವನ್ನೇ ಉದ್ದೇಶಿಸಿ ಸಂಕ್ಷಿಪ್ತವಾಗಿ ‘ಮಾದರಿ’ ಎಂದು ಕರೆಯ ಲಾಗುತ್ತದೆ. ಹೀಗಾಗಿ ಒಂದು ಕಥೆಯಿಂದ ‘ರಚನಾ ಮಾದರಿ’ ರೂಪ ತಾಳುವಲ್ಲಿಯವರೆಗೆ ಕಾಣುವ ಪ್ರಕ್ರಿಯೆಯನ್ನು ಗಮನಿಸಿ ಮಾದರಿಯ ಲಕ್ಷಣಗಳನ್ನು ಹೇಳಲಾಗುತ್ತದೆ.

ಪ್ರಕಟಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಅಂಶಗಳನ್ನು ಗಮನಿಸಬೇಕು:

೧. ಪ್ರಥಮ ಹಂತದಲ್ಲಿ ಕಥೆಯ ಒಂದು ಸಂಗ್ರಹಿತ ಪೂರ್ಣ ಪಾಠ – ‘ಕಥಾಮಾದರಿ’ ಎನಿಸುತ್ತದೆ. ಇದು ಪ್ರಕಾಶಪಡಿಸುವ ರೂಪ.

೨. ಎರಡನೆಯ ಹಂತದಲ್ಲಿ ಒಂದು ಕಥೆಯ ಹಲವಾರು ಪಾಠಗಳನ್ನು ಗಮನಿಸಿ, ‘ಚಾರಿತ್ರಿಕ ಭೌಗೋಳಿಕ ವಿಧಾನ’ದಡಿ, ಭಿನ್ನಾಂಶಗಳನ್ನು ತೂಗಿ ನೋಡುವ ಕೆಲಸ ನಡೆಯುತ್ತದೆ. ಇಲ್ಲಿ ತಯಾರಾಗುವ ಕಥೆಯ ಪಾಠವನ್ನು ‘ಮೂಲಮಾದರಿ’(Arche Type) ಎಂದು ಕರೆಯಬೇಕಾಗುತ್ತದೆ. ಆದರೆ ಕಥೆಗಳ ಪ್ರಕಟಣಾ ವಿಷಯದಲ್ಲಿ ಈ ಪಾಠಕ್ಕೆ ಅವಕಾಶವಿಲ್ಲ.

೩. ಮೂರನೆಯ ಹಂತದಲ್ಲಿ – ರಚನಾ ತಂತ್ರವೇ ಮುಖ್ಯ ಅಂಶವೆನಿಸುತ್ತದೆ. ಕಥೆಯ ಒಂದೇ ಪಾಠ ದೊರೆತಾಗ ಆ ‘ಮೂಲ ಮಾದರಿ’ಯನ್ನು ಗಮನಿಸಿ ಅಥವಾ ಭಿನ್ನಪಾಠಗಳಿಂದ ತಯಾರಿಸಿಕೊಂಡ ‘ಮೂಲಮಾದರಿ’ಯನ್ನು ಗಮನಿಸಿ, ವಿಶಿಷ್ಟ ರಚನಾ ಕೌಶಲದಲ್ಲಿ ಹಿಡಿದಿಡಲಾಗುತ್ತದೆ. ಇದನ್ನು ‘ರಚನಾಮಾದರಿ’ ಎನ್ನಬಹುದು. ಪ್ರಕಟಣಾ ವಿಷಯದಲ್ಲಿ ಇದು ಪ್ರಮುಖವಾದುದು.

ಕಥೆಯ ಒಂದೇ ಪಾಠ ದೊರೆತಾಗ ಅದು ಒಂದು ಪ್ರತ್ಯೇಕ ‘ಕಥಾಮಾದರಿ’ಯೂ ಹೌದು, ‘ಮೂಲಮಾದರಿ’ಯೂ ಹೌದು. ಆದರೆ ಒಂದು ಕಥೆಯ ಅನೇಕ ಪಾಠಗಳು ದೊರೆತಾಗ ‘ಮೂಲಮಾದರಿ’ ತಯಾರಿಸಿಕೊಳ್ಳಬೇಕಾಗುತ್ತದೆ. ಇದು ಎರಡನೆಯ ಹಂತದಲ್ಲಿ ನಡೆಯುವ ಮಹತ್ವದ ಪ್ರಕ್ರಿಯೆ. ಈಗ ಮೂರನೆಯ ಹಂತದಲ್ಲಿ ‘ಕಥಾ ಮಾದರಿ’ಯ ಅಥವಾ ‘ಮೂಲ ಮಾದರಿ’ಯ ಸಂಕ್ಷಿಪ್ತ ರೂಪ ತಯಾರಿಸಿಕೊಳ್ಳುವ ಕೆಲಸ ನಡೆಯುತ್ತದೆ. ಈ ಹಂತದಲ್ಲಿ ತಯಾರಿಸಿಕೊಂಡ ‘ರಚನಾಮಾದರಿ’ಯ ರೂಪವನ್ನೇ ರೂಢಿಯಲ್ಲಿ ‘ಮಾದರಿ’ (type) ಎಂದು ಕರೆಯಲಾಗುತ್ತದೆ. ‘ಮಾದರಿ ಸೂಚಿ’ಗಳು ಹುಟ್ಟಿಕೊಂಡಿದ್ದೇ ಈ ‘ರಚನಾ ಮಾದರಿ’ಗಳಿಂದ.

ಈ ರಚನಾ ರೂಪ ವರ್ಗೀಕರಣದ ಸೌಲಭ್ಯಕ್ಕಾಗಿ ಮಾತ್ರ ಹುಟ್ಟಿಕೊಂಡದ್ದು. ಹೀಗಾಗಿ ಇದಕ್ಕೆ ಪ್ರತ್ಯೇಕವಾಗಿ ತನ್ನಷ್ಟಕ್ಕೆ ತಾನೇ ಯಾವ ಮಹತ್ವವೂ ಇಲ್ಲ. ಮುಖ್ಯವಾಗಿ ಅದೊಂದು ಕಥೆಯ ಸಂಕ್ಷಿಪ್ತರೂಪ ಮಾತ್ರ. ಅದಕ್ಕಾಗಿ ಮಾದರಿ ನಿಜವಾದ ಅರ್ಥದಲ್ಲಿ ಒಂದು ಕಥೆಯೇ ಸರಿ. ಒಂದು ಕಥೆಯ ಭಿನ್ನಪಾಠಗಳಿಂದ ತಯಾರಿಸಿಕೊಂಡ ‘ಮೂಲಮಾದರಿ’ ವಿಸ್ತೃತ ರೂಪವಾಗಿದ್ದು ಪ್ರಕಟಣೆಯಲ್ಲಿ ಯಾವ ಮಹತ್ವವೂ ಇಲ್ಲದ್ದು. ರಚನಾ ಮಾದರಿ ತಾಂತ್ರಿಕ ವಾಗಿ ಕಥೆಯ ತಿರುಳನ್ನು ಹೇಳುವಂತಹದು. ಪ್ರಕಟಣೆಯಲ್ಲಿ ಮಹತ್ವ ಪಡೆದರೂ ಇದರ ಉದ್ದೇಶ ಒಂದು ಕಥೆ ಮೂಲಭೂತವಾಗಿ ವರ್ಗೀಕರಣದಲ್ಲಿ ಯಾವ ಸ್ಥಾನದಲ್ಲಿ ಇರಬೇಕು ಎಂಬುದನ್ನು ಸೂಚಿಸುವುದು ಮತ್ತು ಅದರ ತಿರುಳನ್ನು ಹೇಳಿ ಕೊಡುವುದು. ಮಾದರಿ ಸೂಚಿಯಲ್ಲಿ ಕೊಡುವ ಸಂಖ್ಯೆಯು ಕಥೆಯ ಸ್ಥಾನದ ನಿಶ್ಚಿತ ಸ್ಥಳವನ್ನು ಹೇಳಿಕೊಡುತ್ತದೆ.

ತನ್ನ ದೇಶದ ಎಲ್ಲ ಕಥೆಗಳನ್ನು ಕೆಲವೇ ಪುಟಗಳಲ್ಲಿ ಹಿಡಿದಿಡಬೇಕು ಮತ್ತು ಯಶಸ್ವಿಯಾಗಿ ತೋರ್ಪಡಿಸಬೇಕೆಂಬ ಮಹದಾಸೆಯ ಹಿನ್ನೆಲೆಯಲ್ಲಿ ಅಂಟಿ ಆರ್ನೆ ಮಾಡಿದ ಪ್ರಯತ್ನವದು. ಇವತ್ತು ಇಡೀ ಜಗತ್ತಿನ ಕಥೆಗಳನ್ನು ಕೆಲವೇ ಪುಟಗಳ ಒಂದು ಪುಸ್ತಕದಲ್ಲಿ ಕಾಣಲು ಸಹಾಯವಾದ ತಂತ್ರವಿದು. ಅದಕ್ಕಾಗಿ ಈ ಸಂಕ್ಷಿಪ್ತ ರಚನಾ ರೂಪವೂ ಅತ್ಯಂತ ಆಕರ್ಷಕ ರೂಪವೆನಿಸಿ ಇವತ್ತು ವಿಶಿಷ್ಟ ತಂತ್ರವೆನಿಸುತ್ತಿದೆ.

ಒಂದು ಕಥೆಯ ಒಂದೇ ಪಾಠವಿದ್ದಾಗ, ಮಾದರಿಯ ರಚನೆ ಸರಳವೆನಿಸಬಹುದು. ಆದರೆ ಒಂದು ಕಥೆಯ ಹೆಚ್ಚೆಚ್ಚು ಪಾಠಗಳು ದೊರೆಯುತ್ತ ಹೋದಂತೆ, ಮಾದರಿ ರಚನಾ ತಂತ್ರದಲ್ಲಿ ವೈವಿಧ್ಯತೆ ಕಾಣಿಸಿಕೊಳ್ಳಲು ತೊಡಗುತ್ತದೆ ಮತ್ತು ಅದೊಂದು ನಿಷ್ಟಾಪೂರ್ಣ ಅಭ್ಯಾಸದಿಂದಲೇ ರೂಢಿಗೊಳ್ಳುವ ತಂತ್ರವೆನಿಸುತ್ತದೆ.

ಆದರೆ ‘ಮಾದರಿ ಸೂಚಿ’ ತಯಾರಿಸಿಕೊಳ್ಳಲು ಒಂದೊಂದು ಮಾದರಿಯ ರಚನೆಯನ್ನು ಇಷ್ಟೊಂದು ಪರಿಶ್ರಮ ಪಟ್ಟು ರಚಿಸಿಕೊಳ್ಳುವ ಅವಶ್ಯಕತೆ ಇದೆಯೇ? ಎಂಬ ಸಂಶಯವು, ಫಲಿತಾಂಶದ ಮಿತಿ ಮತ್ತು ಅಪಾರವಾದ ಪರಿಶ್ರಮವನ್ನು ಗಮನಿಸಿ ಏಳುವ ಪ್ರಶ್ನೆಯಾಗಿದೆ. ಇಲ್ಲಿ ಅತಿಯಾದ ಪರಿಶ್ರಮಕ್ಕೆ ತಕ್ಕ ಫಲ ಏನೂ ಕಾಣಿಸದು. ಇದನ್ನು ಕಾರ್ಲೆ ಕ್ರಾಹ್ನ ಅವರೇ ಒಪ್ಪಿಕೊಂಡಿದ್ದರು. ಒಂದು ಕಥೆಯ ವ್ಯಾಪಕವಾದ ಅಧ್ಯಯನದಲ್ಲಿ ಅನೇಕ ಭಿನ್ನಪಾಠಗಳನ್ನು ಅಳವಡಿಸಿಕೊಳ್ಳಲು ಅಡ್ಡಿಯಿಲ್ಲ. ವರ್ಗೀಕರಣದ ಸೌಲಭ್ಯಕ್ಕೆ ರಚಿಸಿಕೊಳ್ಳುವ ಮಾದರಿಗಾಗಿ ಐದರಿಂದ ಹತ್ತು ಪಾಠಗಳು ಸಾಕೆನಿಸುತ್ತದೆ. ಈ ಮಾತನ್ನು ಒಂದು ಮಾದರಿಸೂಚಿ ತಯಾರಿಸಿದ ಅನುಭವದಿಂದ ಹೇಳುತ್ತಿದ್ದೇನೆ. ಏಕೆಂದರೆ ನಾವು ಒಂದು ಕಥೆಯ ವೈವಿಧ್ಯಮಯವಾದ ಪಾಠಗಳ ಒಂದು ವಿಶಿಷ್ಟರೂಪವನ್ನು ಮಾದರಿ ರಚನೆಯಲ್ಲಿ ಕೊಡಬೇಕಾ ಗಿರುತ್ತದೆ. ಕೇವಲ ಮಾದರಿ ರಚನೆಯೇ ಒಂದು ಮಹತ್ವದ ಫಲಿತಾಂಶವೇನೂ ಅಲ್ಲ.

‘ಮಾದರಿ ಪರಿಕಲ್ಪನೆ’ಯ ಸ್ವರೂಪ ಲಕ್ಷಣಗಳನ್ನು ಹೇಳುವಾಗ ಮುಖ್ಯವಾಗಿ ವರ್ಗೀಕರಣದ ಕಲ್ಪನೆಯ ಹಿನ್ನೆಲೆಯಲ್ಲಿಯೇ ವಿವರಗಳು ಅಡಕವಾಗಿರುತ್ತವೆ. ಈ ವರ್ಗೀಕರ ಣದ ಕಲ್ಪನೆಯ ಹಿನ್ನೆಲೆಯಲ್ಲಿ ‘ಮಾದರಿ’ ಎಂದಾಗ ಅದರ ಒಳಗಡೆ ಒಂದು ಪ್ರತ್ಯೇಕ ಕಥೆ, ಅದರ ‘ಮೂಲ ಮಾದರಿ’ಯ ಪರಿಕಲ್ಪನೆ ಹಾಗೂ ಅದರ ಸಂಕ್ಷಿಪ್ತ ‘ರಚನಾರೂಪ’ ಈ ಮೂರು ಸಂಗತಿಗಳು ಸೇರಿರುತ್ತವೆ. ಅದರೆ ನಮ್ಮ ಎದುರಿಗೆ ಇರುವುದು ಮಾದರಿಯ ‘ರಚನಾರೂಪ’. ಈ ರೂಪವನ್ನು ಮುಂದಿಟ್ಟುಕೊಂಡು ಇದರ ಒಳಗಡೆ ಹುದುಗಿಕೊಂಡಿರುವ ‘ಮೂಲ ಮಾದರಿ’ ಹಾಗೂ ‘ಕಥಾಮಾದರಿ’ (ಮಾದರಿ > ಮೂಲಮಾದರಿ > ಕಥಾ ಮಾದರಿ) ಇವುಗಳು ಅಡಕವಾಗಿರುವಿಕೆಯನ್ನೂ ಗಮನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಆಗ: ಕಥಾಮಾದರಿ > ಮೂಲ ಮಾದರಿ > ರಚನಾ ಮಾದರಿ = ಮಾದರಿ ಎಂಬ ಕಲ್ಪನೆ ಹೊಳೆಯುತ್ತದೆ. ಆದರೆ ಮಾದರಿ ಎಂದಾಗ ಅದರ ರಚನಾರೂಪ ತೋರಿಸುತ್ತೇವೆ. ಅದರ ಸ್ವರೂಪದಲ್ಲಿ ಮೇಲಿನ ಎರಡೂ ಪರಿಕಲ್ಪನೆಗಳು ಸೇರಿಕೊಂಡಿರುತ್ತವೆ. ಹೀಗೆ ಮಾದರಿಯ ಲಕ್ಷಣ ಹೇಳುವಾಗ ಸಂಗ್ರಹಿತ ಕಥೆಯೂ ಸೇರುತ್ತದೆ. ಹಾಗಾದರೆ ಕಥೆಯ ಸ್ವರೂಪ ಮತ್ತು ಮಾದರಿಯ ಸ್ವರೂಪ ಒಂದೇ ಎಂದು ಭಾವಿಸಬಾರದು ಎಂಬುದನ್ನು ಹಿಂದೆಯೇ ಎಚ್ಚರಿಸಲಾಗಿದೆ. ಮಾದರಿಯ ಸ್ವರೂಪ ಹೇಳುವಾಗ, ಕೇವಲ ಕಥೆಯ ರಚನಾ ಕಲ್ಪನೆ ಹಾಗೂ ಅದು ವಿಂಗಡಣೆಯಲ್ಲಿ ಯಾವ ಗುಂಪಿಗೆ ಸೇರಿರುತ್ತದೆಂಬ ಸಂಗತಿಗಳು ಮಾತ್ರ ಮುಖ್ಯವಾಗಿರುತ್ತವೆ.

ಮಾದರಿಯ ಮೂರು ಅಂಶಗಳು :

. ಮಾದರಿಯ ತಲೆಬರಹ : ಮಾದರಿಯ ರಚನಾರೂಪ (ರಚನಾಮಾದರಿ) ತಯಾರಾದ ಮೇಲೆ ವರ್ಗೀಕರಣಕ್ಕೆ ಸಂಬಂಧಿಸಿದಂತೆ, ನಮಗೆ ಈ ರೂಪವೇ ಅತ್ಯಂತ ಮಹತ್ವದ್ದಾಗಿರುತ್ತದೆ. ಈ ‘ರಚನಾರೂಪ’ದ ತಿರುಳು – ‘ಕಥಾಮಾದರಿ’ ಅಥವಾ ‘ಮೂಲ ಮಾದರಿ’ ಯಿಂದ ಪಡೆದುದಾಗಿರುತ್ತದೆ. ಆದರೆ ಮಾದರಿಗೆ ಕೊಡುವ ತಲೆಬರಹದ ತಂತ್ರ ಮಾತ್ರ ಕಥೆಯಿಂದಲೇ ಪಡೆದುದಾಗಿರುತ್ತದೆ.

ಕಥೆಗೆ ಸಂಬಂಧಿಸಿದಂತೆ ಮಾದರಿಯು ಮುಖ್ಯವಾಗಿ ನಾಲ್ಕು ಬಗೆಯಲ್ಲಿ ವರ್ತಿಸುತ್ತದೆ ಎಂದು ಥಾಮ್ಸನ್ನರು ಬರೆಯುತ್ತಾರೆ. ಬಹುಶಃ ಈ ಮಾತು ಮಾದರಿಯ ತಲೆಬರಹವನ್ನು ಕುರಿತದ್ದಾಗಿದೆ ಎಂದು ತೋರುತ್ತದೆ. ಏಕೆಂದರೆ ಅವರು ಕೊಟ್ಟ ನಾಲ್ಕು ಅಂಶಗಳಲ್ಲೂ ‘ಒಂದು ಮಾದರಿಗೆ ತಲೆಬರಹವನ್ನು ಕಥೆಗೆ ಸಂಬಂಧಿಸಿ ಹೇಗೆ ಕೊಡಲಾಗುತ್ತದೆ’ ಎಂಬುದೇ ಮುಖ್ಯ ವಿಷಯವಾಗಿದೆ :

೧. ‘ಪ್ರಾಣಿ ಕಥೆಗಳಲ್ಲಿ ಹಾಸ್ಯ ಹಾಗೂ ಉಪಕಥೆಗಳಲ್ಲಿ ಒಂದೇ ಆಶಯವಿದ್ದು, ಅದೇ ಮಾದರಿಯ ತಲೆಬರಹ ಕೂಡ ಆಗುತ್ತದೆ’ ಎಂದು ಸ್ಟಿಥ್ ಥಾಮ್ಸನ್ನರು ಬರೆಯುತ್ತಾರೆ. ಕಥೆಗಳಲ್ಲಿ ಒಂದೇ ಆಶಯವಿರುತ್ತದೆಂಬ ಮಾತು ಒಪ್ಪತಕ್ಕದ್ದಲ್ಲ. ಆದರೆ ಪ್ರಮುಖ ಆಶಯ ವೊಂದು ಮಾದರಿಯ ತಲೆಬರಹವಿರುತ್ತದೆಂಬ ಮಾತು ಒಪ್ಪಲೇಬೇಕು. ಉದಾಹರಣೆಗೆಃ ನೇಣಿಗೆ ತಕ್ಕ ಮನುಷ್ಯನನ್ನು ಆರಿಸಲಾಯಿತು (ಆಶಯ: ೧೭೮.೨, ಮಾದರಿ : ೧೫೩೪ಎ), ತಾನು ಕುಳಿತ ಟೊಂಗೆಯನ್ನು ಕಡಿದವನು (ಆಶಯ : ಜೆ. ೨೧೩೩.೪, ಮಾದರಿ: ೧೨೪೦), ಅಘಾತಕ್ಕೊಳಗಾಗದ ಹಕ್ಕಿ (ಆಶಯ : ಝಡ್ ೪೯.೩, ಮಾದರಿ : ೨೦೪೧ ) ಜಾಣಪ್ರಾಣಿ ಹಾಗೂ ಭಾಗ್ಯಶಾಲಿ ಬದಲಾವಣೆಗಳು (ಆಶಯ : ಝಡ್ ೨೯.೯, ಮಾದರಿ : ೧೭೦ಎ )

೨. ಕಥೆಯ ತಲೆಬರಹವೇ ಮಾದರಿಯ ಹೆಸರಾಗಿರಬಹುದು. ಆದುದರಿಂದ ಒಮ್ಮಮ್ಮೆ ಕಥೆಯ ಹೆಸರನ್ನೇ ಮಾದರಿಯ ತಲೆಬರಹವಾಗಿ ಕೊಡಲಾಗುತ್ತದೆ. ಉದಾಹರಣೆ – ಚೋಟು ಹುಡುಗ (ಚೋಟೆಪ್ಪ, ಮಾದರಿ: ೭೦೦), ಸೇಸಮ್ ತೆರೆಅಲಿಬಾಬಾ ಮತ್ತು ನಲ್ವತ್ತು ಜನ ಕಳ್ಳರು (ಮಾದರಿ: ೬೭೬), ಹತ್ತಂಡ್ಯೊ ಬಿಟ್ಟಂಡ್ಯೊ (ಮಾದರಿ: ೫೭೧), ಮಾಟದ ಉಂಗುರ (ಮಾದರಿ: ೫೬೦).

೩. ಕಥೆಯ ಕೇಂದ್ರ ಆಶಯವು ಕಥೆಯ ತಲೆಬರಹವಾಗಿದ್ದು, ಅದನ್ನೇ ಮಾದರಿಯ ಹೆಸರಾಗಿಯೂ ಸ್ವೀಕರಿಸಬಹುದು. ಉದಾಹರಣೆಗೆ: ಆಘಾತಕ್ಕೊಳಗಾಗದ ಹಕ್ಕಿ ( ಮಾದರಿ: ೨೦೪೧, ಆಶಯ : ಝಡ್ ೪೯.).

೪. ಕೆಲವು ಕಥೆಗಳ ತಲೆಬರಹಗಳು ಉಪಮಾದರಿಯ ಹೆಸರಾಗಿರಬಹುದು. ಇದು ಗೊತ್ತಾದ ಕಥೆಯೊಂದು ಉಪಮಾದರಿಯಾಗಿದ್ದರೆ ಮಾತ್ರ, ಅದರ ಹೆಸರು ಆ ಮಾದರಿಗೆ ಕೊಡಲಾಗುತ್ತದೆ. ಥಾಮ್ಸನ್ನರು ಹೇಳುವ ನಾಲ್ಕು ಅಂಶಗಳಲ್ಲದೆ ಇನ್ನೂ ಕೆಲವು ಅಂಶಗಳು ಮಾದರಿಯ ತಲೆಬರಹದಲ್ಲಿ ಕಾಣಿಸಿಕೊಳ್ಳುತ್ತವೆ :

೧.  ಕಥೆಯ ಪ್ರಮುಖ ಪಾತ್ರ – ಪಾತ್ರಗಳ ಹೆಸರುಗಳು. ಉದಾ: ಕಳ್ಳ ಮತ್ತು ಹುಲಿ (ಮಾದರಿ: ೧೭೭), ಸಿಂಡ್ರೆಲ್ಲಾ (ಮಾದರಿ ೫೧೦ಎ), ಬ್ರಾಹ್ಮಣನೂ ಮತ್ತು ಮುಂಗುಲಿಯೂ (ಮಾದರಿ: ೧೯೮ಎ), ಮಂತ್ರವಾದಿ ಮತ್ತು ಅವನ ಶಿಷ್ಯರು (ಮಾದರಿ ೩೨೫), ಅಲ್ಲಾವುದ್ದಿನ್ (೫೬೧).

೨. ಕ್ರಿಯಾರೂಪದ ಆಶಯವು ಮಾದರಿಯ ಹೆಸರಾಗಿರಬಹುದು. ಉದಾಹರಣೆಗೆ ರಾಜಕುಮಾರಿಯ ಪ್ರತಿಮೆ ಕಂಡು ಮೋಹಗೊಂಡ ರಾಜಕುಮಾರ (ಮಾದರಿ:೫೧೫ಬಿ೧), ಸನ್ಯಾಸಿಯ ಸಂಗ ಬೆಳೆಸಿ ರಾಜನನ್ನು ನಾಯಿಯಾಗಿಸಿದ ರಾಣಿ (ಮಾದರಿ: ೪೪೯), ದೇವರ ಭೇಟಿಗಾಗಿ ಪ್ರಯಾಣ (ಮಾದರಿ:೪೬೧ಎ), ತಂದೆಯ ಅದ್ಭುತ ಉಪಶಮನಕ್ಕಾಗಿ ಶೋಧ ನಡೆಸಿದ್ದು (ಮಾದರಿ:೫೫೧) ಮುಂತಾದವುಗಳು.

ಮಾದರಿ ಸೂಚಿ ನೋಡಿದರೆ: ಕಥೆಯ ತಲೆಬರಹಗಳು ಪ್ರಮುಖ ಆಶಯಗಳು, ಕ್ರಿಯೆಗಳು, ಪಾತ್ರಗಳು ಇವುಗಳ ಹೆಸರೇ ಮಾದರಿಗಳ ತಲೆಬರಹಗಳಾಗಿರುವುದು ಸ್ಪಷ್ಟವಾಗುತ್ತದೆ.

. ಮಾದರಿ ಸಂಖ್ಯೆ: ಮಾದರಿಯ ರಚನೆ ತಲೆಬರಹದೊಂದಿಗೇ ಆಗುವಂತಹದು. ಕಥೆಗಳು ಹೇಗೆ ತಲೆಬರಹಗಳೊಂದಿಗೆ ಗುರುತಿಸಲ್ಪಡುತ್ತವೆಯೋ ಮತ್ತು ಆ ತಲೆಬರಹ ಕಥೆಯ ರೂಪದ ಜೊತೆಗಿನ ಸಂಗತಿ ಎನ್ನಿಸುತ್ತದೆಯೋ ಹಾಗೆಯೇ ಮಾದರಿಯ ತಲೆಬರಹವೂ ಕೂಡ ಮಾದರಿಯ ಜೊತೆಗಿನ ಸಂಗತಿಯಾಗಿದೆ ಮತ್ತು ಅದು ಅದರ ತಿರುಳನ್ನು ಅವಲಂಬಿಸಿದ್ದು, ಇಡೀ ಕಥೆಯ ಸಂಗತಿಯ ಹಿನ್ನೆಲೆಯಲ್ಲಿ ಆ ಹೆಸರು ಮೂಡಿಬಂದಿರುತ್ತದೆ.

ಆದರೆ ಮಾದರಿಯ ಸಂಖ್ಯೆ ರಚನಾರೂಪದ ಭಾಗವಾಗಿರದೇ ವರ್ಗೀಕರಣದ ಭಾಗವಾಗಿದೆ. ಮಾದರಿಯ ರಚನಾರೂಪದ ತಯಾರಿಕೆಯ ಒಟ್ಟು ಉದ್ದೇಶವೇ ವರ್ಗೀಕರಣ ವಾಗಿರುವುದರಿಂದ, ವಿಭಾಗೀಕರಣದಲ್ಲಿ ಆ ಮಾದರಿಯ ಸ್ಥಾನವನ್ನು ಗುರುತಿಸುವ ಸಂಖ್ಯೆಯೂ ಅತ್ಯಂತ ಮಹತ್ವದ್ದೆನಿಸುತ್ತದೆ. ಎಷ್ಟೋ ಸಲ ಮಾದರಿಯನ್ನು ಅದರ ತಲೆಬರಹ ದಿಂದ ಕರೆಯುವಂತೆ ಅದರ ಸಂಖ್ಯೆಯಿಂದಲೂ ಕರೆಯಲಾಗುತ್ತದೆ.

ಆರ್ನೆ – ಥಾಮ್ಸನ್ ಮಾದರಿ ಸೂಚಿಯಲ್ಲಿ ಐದು ಭಾಗಗಳಿವೆ. ಅವನ್ನು ಸಂಖ್ಯಾನುಸಾರ ಹೀಗೆ ವಿಭಾಗಿಸಲಾಗಿದೆ:

i. ೨೯೯ ಪ್ರಾಣಿ ಕಥೆಗಳು

ii. ೩೦೦೧೧೯೯ ಸಾಮಾನ್ಯ ಜನಪದ ಕಥೆಗಳು

iii. ೧೨೦೦೧೯೯೯ ಹಾಸ್ಯ ಮತ್ತು ಅಡಗತೆಗಳು

iv. ೨೦೦೦೨೩೯೯ ಸೂತ್ರಬದ್ಧ ಕಥೆಗಳು

v. ೨೪೦೦೨೪೯೯ ವರ್ಗೀಕರಿಸದ ಕಥೆಗಳು.

ಇವುಗಳ ಒಳಗಡೆ ಮತ್ತೆ ವಿಷಯಾನುಸಾರ ವಿಂಗಡನೆ ಇರುತ್ತದೆ:

ಭಾಗi. ೨೯೯: ಪ್ರಾಣಿ ಕಥೆಗಳು

೧ – ೨೯೯ : ಪ್ರಾಣಿ ಕಥೆಗಳು

೧ – ೯೯ : ಕಾಡು ಪ್ರಾಣಿಗಳು

೧೦೦ – ೧೪೯: ಕಾಡುಪ್ರಾಣಿಗಳು ಹಾಗೂ ಸಾಕುಪ್ರಾಣಿಗಳು

೧೫೦ – ೧೯೯: ಮಾನವ ಮತ್ತು ಕಾಡುಪ್ರಾಣಿಗಳು

೨೦೦ – ೨೧೯: ಸಾಕುಪ್ರಾಣಿಗಳು

೨೨೦ – ೨೪೯: ಪಕ್ಷಿಗಳು

೨೭೫ – ೨೯೯: ಇತರ ಪ್ರಾಣಿಗಳು ಮತ್ತು ವಸ್ತುಗಳು

ಈ ಒಂದೊಂದು ವಿಂಗಡಣೆಯಲ್ಲೂ ಮತ್ತೆ ಪ್ರಮುಖ ಸಂಗತಿಗಳನ್ನು ಗಮನಿಸಿ ಒಳವಿಂಗಡಣೆಗಳನ್ನು ಗುರುತಿಸಿಕೊಳ್ಳಲಾಗುತ್ತದೆ :

೧ – ೯೯ : ಕಾಡು ಪ್ರಾಣಿಗಳು – ಎಂಬುದರಲ್ಲಿ

೧ – ೬೯ : ನರಿ – ಜಾಣ ಪ್ರಾಣಿ

೩೦ – ೩೫: ತಗ್ಗಿನಿಂದ ಕಾಪಾಡುವುದು.      

ಹೀಗೆ ನಮಗೆ ಕಥೆಗಳ ಮೊತ್ತ ದೊರಕಿದಂತೆ ಅವುಗಳ ವಸ್ತುವಿನ ಸಾಮಿಪ್ಯವನ್ನು ಗಮನಿಸಿ ಕಥೆಗಳನ್ನು ಸಂಖ್ಯೆಯಿಂದ ಸಂಜ್ಞಿಸಲಾಗುತ್ತದೆ ಮತ್ತು ವಿಭಾಗೀಕರಣದಲ್ಲಿ ಹಿಡಿದಿಡಲಾಗುತ್ತದೆ.

. ಮಾದರಿಯ ವರ್ಗ (ಗುಂಪು): ಕರ್ನಾಟಕದಲ್ಲಿ ಇಂಗ್ಲೀಷಿನಲ್ಲಿ Type ಎಂಬುದಕ್ಕೆ ಕೆಲವರು ‘ವರ್ಗ’ವೆಂದು ಬಳಸುತ್ತಿದ್ದು, ಅದು ಸರಿಯಾದ ಪ್ರಯೋಗವೆನಿಸದು. ‘ವರ್ಗ’ ಎನ್ನುವುದು ಇಡೀ ಮಾದರಿಯ ವ್ಯವಸ್ಥೆಯಲ್ಲಿ ಕಂಡುಬರುವ ಒಂದು ಅಂಶ ಮಾತ್ರ. ವರ್ಗ ಇದು Classಎಂಬುದಕ್ಕೆ ಸಂವಾದಿ. ಸರಳವಾಗಿ ಒಂದು ಗುಂಪು ಮತ್ತು ಗುಂಪಿನ ಸ್ಥಾನಮಾನ ವನ್ನು ವರ್ಗ (Class)ಕಲ್ಪನೆ ಹೊಂದಿದೆ. ಜನಪದ ಕಥೆಗಳ ವರ್ಗೀಕರಣ ಅತ್ಯಂತ ಕಠಿಣವಾ ದುದು. ಏಕೆಂದರೆ ಅವುಗಳಲ್ಲಿ ಸಾಮ್ಯತೆ ಅತಿ ಹೆಚ್ಚು. ವಿಶಿಷ್ಟವಾಗಿ ಬೆಳವಣಿಗೆ ಹೊಂದಿದ ಒಂದು ಕಥೆಯನ್ನು ಸಂಖ್ಯೆ ಕೊಟ್ಟು ಸ್ಥಾನ ನಿರ್ದೇಶಿಸುವಲ್ಲಿ ಈ ‘ವರ್ಗ ( ಗುಂಪು ) ಕಲ್ಪನೆ’ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ‘ನಂಬಿಗಸ್ಥ ಸೇವಕ’ – ಇದರ ಸಂಖ್ಯೆ ೫೧೬. ಇದು ಅತ್ಯಂತ ವ್ಯಾಪಕವಾಗಿ ಪ್ರಸರಣಗೊಂಡ ಕಥೆ. ಇಲ್ಲಿಯ ಮುಖ್ಯ ಸಂಗತಿಗಳೆಂದರೆ : ಒಬ್ಬ ಸೇವಕ – ಅವನ ನಿಷ್ಠೆ, ನಂಬುಗೆ ಮತ್ತು ಚಾಣಾಕ್ಷತನಗಳು – ಮಾಲೀಕನನ್ನು ಕಾಪಾಡುವಲ್ಲಿ, ಮೆಚ್ಚಿಸುವಲ್ಲಿ ವ್ಯಕ್ತವಾಗವುದು. ಈ ಬಗೆಯ ಕಥೆಗಳನ್ನು ೫೧೬ ಸಂಖ್ಯೆ ಮುಖ್ಯವಾಗಿಟ್ಟು ಕೊಂಡು, ಉಳಿದವುಗಳನ್ನು – (ಇವು ಹೆಚ್ಚಾಗಿ ಪ್ರಾದೇಶಿಕವಾಗಿರುವಂತಹವು, ಕಡಿಮೆ ಪ್ರಸರಣ ಹೊಂದಿರುವಂತಹವು ಆಗಿರುತ್ತವೆ). ಇವನ್ನು ೫೧೬ಎ, ೫೧೬ಬಿ, ೫೧೬ಸಿ ಎಂದೂ, ಇನ್ನೂ ಅಪ್ರಮುಖವೆನಿಸುವಂತಹವು ಆದರೆ ಸಾಮ್ಯದಲ್ಲಿ ಸೂಕ್ಷ್ಮವಾಗಿ ಹೋಲಿಕೆ ಇರುವಂತಹವುಗಳನ್ನು ೫೧೬ಎ೧, ೫೧೬ಬಿ೧, ೫೧೬ಸಿ೧ಎಂದೂ, ಮತ್ತೆ ೫೧೬*ಮತ್ತೆ ೫೧೬**, ೫೧೬***ಹೀಗೆಯೇ ಗುರುತಿಸುತ್ತ ಹೋಗಬಹುದು. ಇಲ್ಲಿ ವರ್ಗೀಕರಣದ ಸೌಲಭ್ಯ ಹೆಚ್ಚಿಸುವ ತಂತ್ರ ಕಾಣಿಸುತ್ತದೆ. ಈ ತಂತ್ರದಿಂದಾಗಿ ಇಲ್ಲಿ ೫೧೬ರ ಸಂಖ್ಯೆಯ ಕೆಳಗಡೆ ಇವೆಲ್ಲ ಬಂದು, ೫೧೬ರ ಒಂದು ಗುಂಪು ತಯಾರಾಗುತ್ತದೆ. ಇಲ್ಲಿಯೇ ನಾವು ಒಂದು ‘ವರ್ಗ ಕಲ್ಪನೆ’ಯನ್ನು ಕಾಣುತ್ತೇವೆ. ಇಂಥ ಒಂದು ‘ವರ್ಗ’ ತಯಾರಾಗಲು ಇಲ್ಲಿಯ ಮುಖ್ಯ ಮಾದರಿಯ (೫೧೬) ಸಾಮಾನ್ಯ ಅಂಶಗಳು (ನಂಬಿಗೆ, ಚಾಣಾಕ್ಷತೆ) ಕಾರಣವಾಗುತ್ತವೆ. ಅದಕ್ಕಾಗಿ ‘೫೧೬’ ನಂಬಿಗಸ್ಥ ಸೇವಕ’ ಮುಖ್ಯ ಮಾದರಿ ಎನಿಸಿ, ಉಳಿದವೆಲ್ಲ ಆ ವರ್ಗಕ್ಕೆ ಸೇರಿದ ‘ಉಪಮಾದರಿ’ (Sub – type)ಗಳಾಗಿ ಕರೆಸಿಕೊಳ್ಳುತ್ತವೆ.

ಒಂದು ಗುಂಪಿನ ಮುಖ್ಯ ಮಾದರಿ ಹೇಗಿರುತ್ತದೆಂದರೆ, ಅದು ಇತರ ಗುಂಪುಗಳಿಂದ ತನ್ನ ಗುಂಪನ್ನು ಹಲವು ವಿಶಿಷ್ಟತೆಗಳಲ್ಲಿ ಬೇರ್ಪಡಿಸಿ ಹಿಡಿದಿರುತ್ತದೆ. ಇದೊಂದು ಸಾಮಾನ್ಯ ನಿದರ್ಶನ ಇಲ್ಲವೆ ಆದರ್ಶವಾಗಿದ್ದು, ತಾನೊಂದು ಗುಂಪನ್ನೇ ನಿರ್ಮಿಸಿಕೊಂಡಿರುತ್ತದೆ. ಆ ಗುಂಪಿಗೆ ತಾನೇ ವಿಶಿಷ್ಟ ಸಂಜ್ಞೆಯಂತೆ ವರ್ತಿಸುತ್ತದೆ. ತನ್ನ ಹೆಸರಿನಿಂದಲೇ ಆ ಗುಂಪಿಗೆಲ್ಲ ಅದೇ ಹೆಸರು ತರಿಸುವಂತಹದಾಗಿರುತ್ತದೆ. ಇಲ್ಲವೇ ಆ ಗುಂಪಿನ ಹೆಸರನ್ನು ತಾನು ಹೊಂದಿರುತ್ತದೆ. ಹೀಗೆ ತಾನು ಸೇರಿರುವ ಕುಲಕ್ಕೆ ಇಲ್ಲವೆ ತನ್ನಂತೆ ನಿರ್ಮಾಣವಾಗಲಿರುವ ಕುಲಕ್ಕೆ ತನ್ನ ಜಾತಿ ನಾಮವನ್ನು ಕೊಡುವ ವಿಶಿಷ್ಟ ಅಂಶವೇ ಮಾದರಿ ಎನಿಸುತ್ತದೆ.

ನಮಗೆ ಗೊತ್ತಿಲ್ಲದ, ನಾವು ಎಂದೂ ಕಾಣದ ಒಂದು ಪ್ರಾಣಿಯನ್ನು ನೋಡುತ್ತೇವೆ. ಅದರ ಪರಿಚಯವಿಲ್ಲದ ನಾವು ಬಹುಶ: ನಮಗೆ ಪರಿಚಿತವಿರುವ ‘ಜೀವಜಾತಿ’ ಒಂದಕ್ಕೆ ಹೋಲಿಸುವ ಕಾಲ್ಪನಿಕ ವಿಚಾರ ಮಾಡುತ್ತೇವೆ. ಆಗ ಈ ಜೀವಿಯನ್ನು ನಮಗೆ ಗೊತ್ತಿರುವ ಜೀವಿಯೊಂದರ ಗುಂಪಿಗೆ – ಅದರ ಆಕಾರ, ಬಣ್ಣ ಮುಂತಾದವುಗಳ ಹೋಲಿಕೆಯನ್ನು ಗಮನಿಸಿ ಇದು ಇಂಥ ಪ್ರಾಣಿವರ್ಗಕ್ಕೆ ಸೇರಿದುದು ಎಂದು ಗಣಿಸುತ್ತೇವೆ. ಇಲ್ಲಿ ಈ ಮೊದಲೇ ನಮಗಿರುವ ಒಂದು ಪರಿಚಿತವಾದ ಜೀವಿಯ ಮೂಲ ಆದರ್ಶವೇ ‘ಮಾದರಿಯ ಕಲ್ಪನೆ’ ಯಾಗಿ ನಿಲ್ಲುತ್ತದೆ. ಅದು ನಾವು ನೋಡಿದ ಜೀವಿಯನ್ನು ಒಂದು ನಿರ್ದಿಷ್ಟ ವರ್ಗಕ್ಕೆ ಸೇರಿಸಲು ಕಾರಣವಾಗುತ್ತದೆ.

ಪ್ರತಿಯೊಂದು ಮಾದರಿಯು ತನ್ನಷ್ಟಕ್ಕೆ ತಾನು ಸ್ವತಂತ್ರವಾಗಿರುತ್ತದೆ. ಆದರೆ ವಿಭಾಗೀಕರಣದ ಸಮಯದಲ್ಲಿ ತನ್ನಂತಹ ಇತರ ಮಾದರಿಗಳೊಂದಿಗೆ ಒಂದು ಸಂಬಂಧದಲ್ಲಿ ನಿಲ್ಲುತ್ತದೆ. ಹೀಗೆ ಒಂದು ಮಾದರಿಯ ಉದ್ದೇಶವನ್ನೇ ಹೊತ್ತು, ಅಥವಾ ಸಂಬಂಧ ಹೊಂದಿದ್ದು, ನಿರೂಪಣೆಯಲ್ಲಿ ಅಲ್ಪಮಟ್ಟಿನ ಸಾಮ್ಯ ಇಲ್ಲವೇ ವೈವಿಧ್ಯಮಯವಾದವುಗಳನ್ನು ಅದೇ ಮಾದರಿಯ ಉಪಮಾದರಿಗಳಾಗಿ – ಅ, ಬ, ಕ ಇತ್ಯಾದಿಯಾಗಿ ಗುರುತಿಸಲಾಗುತ್ತದೆ.

* * *