ಜನಪದ ಕಥೆಗಳಲ್ಲಿಯ ಆಶಯಗಳು ಅತ್ಯಂತ ಚಿಕ್ಕ ಘಟಕಗಳು. ಆದರೆ ಅವು ತಮ್ಮಷ್ಟಕ್ಕೆ ತಾವು ಏನನ್ನೂ ಹೇಳಲಾರವು. ಆಶಯಗಳು ಕಥೆಯ ಒಳಗಡೆ ಸಂದರ್ಭಗಳನ್ನು ಸೃಷ್ಟಿಸುತ್ತವೆ. ಆ ಸಂದರ್ಭಗಳು ಇಡೀ ಕಥೆಯ ಮೈಯ ಹಿನ್ನೆಲೆಯಲ್ಲಿ ಅರ್ಥ ಪಡೆದುಕೊಳ್ಳುತ್ತವೆ. ‘ಮಾಟದ ಹರಳು’ ಒಂದು ಆಶಯವಾಗಿದ್ದರೂ ಕಥೆಯ ಹೊರಗೆ ಅದರ ಅಸ್ತಿತ್ವ ವಿಶೇಷ ಎನಿಸಲಾರದು. ಹೀಗಾಗಿ ಆಶಯವು ಪ್ರತ್ಯೇಕವಾಗಿದ್ದಾಗ ಏನೂ ಪ್ರಯೋಜನವಿಲ್ಲ. ಆದರೆ ಅದೇ ‘ಮಾಟದ ಹರಳನ್ನು ನದಿಗೆ ಒಗೆದಾಗ ಅದು ದಾರಿ ಬಿಟ್ಟಿತು’ ಎಂಬ ಕಥಾಕ್ರಿಯೆಯ ವಿವರಣೆ ಆಕರ್ಷಕ ವೆನಿಸುತ್ತದೆ. ಈ ಆಶಯ ಕಥೆಯ ವಿವರಣೆಯ ಹಿನ್ನೆಲೆಯಲ್ಲಿ – ನಾಯಕನು ನದಿಯ ಆಚೆಗಿರುವ ಸ್ಥಳಕ್ಕೆ ಮುಟ್ಟಬೇಕಾದ ಪರಿಸ್ಥಿತಿಯಲ್ಲಿ – ‘ಮಾಟದ ಹರಳು ಒಗೆಯಲು ನದಿ ದಾರಿ ಬಿಟ್ಟಿತು’ ಎಂಬುದು ವಿಶೇಷ ಅರ್ಥ ಪಡೆದುಕೊಳ್ಳುತ್ತದೆ.

ಆಶಯಗಳ ಅಧ್ಯಯನದಲ್ಲಿ ‘ಆಶಯಸೂಚಿ’ ಆಕರಗ್ರಂಥ ಮಾತ್ರ. ಆಶಯಗಳ ಅಧ್ಯಯನ ಕಥೆಯ ಚೌಕಟ್ಟಿನಲ್ಲಿ ನಡೆದಾಗ ಮಾತ್ರ ನಮಗೆ ಆಶಯಗಳ ಸ್ವರೂಪ, ಅರ್ಥ ಗೊತ್ತಾಗುವುದು. ಅಂದರೆ ಆಶಯವನ್ನು ಸೂಚಿಯ ಮಟ್ಟದಲ್ಲಿ ನೋಡಿದಾಗ ಅದರ ಸಂಪೂರ್ಣ ಅರಿವು ನಮಗುಂಟಾಗುವುದಿಲ್ಲ. ಅವುಗಳ ಅಧ್ಯಯನವನ್ನು ಕಥೆಗಳ ಮಟ್ಟಕ್ಕೆ ಇಳಿಸಿ, ಕಥಾ ಚೌಕಟ್ಟಿನ ಒಳಗಡೆ ನೋಡಿದಾಗ ಮಾತ್ರ ಆಶಯವು ಅರ್ಥ ಪಡೆದುಕೊಳ್ಳುತ್ತದೆ.

ಕಥೆಯ ಅಧ್ಯಯನವೂ ಅಷ್ಟೇ. ಮಾದರಿ ಸೂಚಿ ಒಂದು ಆಕರಗ್ರಂಥವಾಗಿದ್ದು, ಕಥೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿದಾಗ ಮಾತ್ರ ಅದರ ನಿಜಸ್ವರೂಪ ಗೊತ್ತಾಗು ವುದು. ಆದರೆ ಸ್ಟಿಥ್ ಥಾಮ್ಸನ್‌ರು ಆಶಯ ಮತ್ತು ಮಾದರಿ ಸೂಚಿಗಳಿಗಾಗಿ ಕಥೆಗಳನ್ನು ನೋಡಿದ್ದರಿಂದಲೇ ಅವರಿಗೆ ‘ನೀರಡಿಸಿದ ಕಾಗೆ’ ಹಾಗೂ ‘ಸತ್ತೇನು ಗುಬ್ಬಿ’ – ಕಥೆಗಳು ‘ಏಾಶಯ ಮಾದರಿ’ ಗಳಾಗಿ ಕಾಣಲು ಕಾರಣವಾಯಿತು. ಆದರೆ ಈ ಕಥೆಗಳನ್ನು ಪ್ರತ್ಯೇಕವಾಗಿ ಅಧ್ಯಯನಕ್ಕೆ ತೆಗೆದುಕೊಂಡಾಗ ‘ನೀರಡಿಸಿದ ಕಾಗೆ, ಅರ್ಧ ನೀರಿರುವ ಹೂಜಿ, ಕಾಗೆಯ ಜಾಣತನ: ತನಗೆ ನೀರು ಕುಡಿಯಲು ಬರುವಂತೆ ಒಳಗಡೆ ಹರಳುಗಳನ್ನು ಹಾಕಿತು’ ಎಂಬ ನಾಲ್ಕು ಆಶಯಗಳು ಅಲ್ಲಿ ಕಂಡುಬರುತ್ತವೆ. ‘ಸತ್ತೇನು ಗುಬ್ಬಿ’ ಕಥೆಯಲ್ಲಿ ಅಘಾತಕ್ಕೊಳ ಗಾಗದ ಹಕ್ಕಿಎಂಬ ಒಂದೇ ಆಶಯವಿದ್ದರೂ, ಅದು ಪ್ರತಿಬಾರಿ ಬೇರೆ ಬೇರೆ ಸಂದರ್ಭಗಳ ಒಳಗಡೆ ಪುನರಾವರ್ತನೆ ಹೊಂದುತ್ತಿರುತ್ತದೆ. ಹೀಗಾಗಿ ಇಲ್ಲಿ ಒಂದೇ ಆಶಯವಿದ್ದರೂ ಅದು ಅನೇಕ ಬಾರಿ ಪುನರಾವರ್ತನೆ ಹೊಂದಿದಾಗ ಒಂದು ಜನಪದ ಕಥೆ ನಿರ್ಮಾಣವಾಗುತ್ತದೆ.

ಆಶಯ ಮತ್ತು ಮಾದರಿ ಸೂಚಿಗಳ ಉಪಯೋಗಕ್ಕಾಗಿ ಒಂದು ಕಥೆಯನ್ನು ನೋಡುವುದಕ್ಕಿಂತ, ಕಥೆಯೊಂದನ್ನು ಅದರ ಮೈಯ್ಯವ್ಯಾಪ್ತಿಯಲ್ಲಿ ಬಗೆದು ನೋಡಿದಾಗ ಅನೇಕ ಹೊಸ ಅಂಶಗಳನ್ನು ಕಾಣಲು ಸಾಧ್ಯವಾಗುತ್ತದೆ. ಆಶಯ ಮತ್ತು ಮಾದರಿ ಸೂಚಿಗಳ ಹಿನ್ನೆಲೆಯಲ್ಲಿ ಕಥೆಯನ್ನು ನೋಡುವುದು ಅಂತರರಾಷ್ಟ್ರೀಯ ದೃಷ್ಟಿ ಎನಿಸಿದರೆ, ಪ್ರತ್ಯೇಕವಾಗಿ ಒಂದೊಂದು ಕಥೆಯನ್ನು ನೋಡುವುದು ದೇಶೀ ( ಪ್ರಾದೇಶಿಕ )ದೃಷ್ಟಿ ಎನಿಸುತ್ತದೆ. ಇಂತಹ ದೇಶೀ(ಪ್ರಾದೇಶಿಕ)ದೃಷ್ಟಿಯ ಅಧ್ಯಯನದಿಂದ ಅಂತರಾಷ್ಟ್ರೀಯ ದೃಷ್ಟಿಯ ಅಧ್ಯಯನದಿಂದ ಉಂಟಾದ ಅನೇಕ ಸಂಕೀರ್ಣತೆಗಳನ್ನು ಸರಿಪಡಿಸಲು ಸಾಧ್ಯವಿದೆ. ಅದಕ್ಕಾಗಿ ಆಶಯಗಳ ಮತ್ತು ಕಥಾ ಮಾದರಿಗಳ ಪ್ರಾದೇಶಿಕ ಮಟ್ಟದ ಅಧ್ಯಯನ ಬಹಳ ಪ್ರಮುಖವಾದುದಾಗಿದೆ.

ಒಂದು ಕಥೆಯನ್ನು ರಚನೆಯ ದೃಷ್ಟಿಯಿಂದ ಗಮನಿಸಿ ‘ಮಾದರಿ’ ಎಂದು ಕರೆದರೆ, ಅದೇ ದೃಷ್ಟಿಯಿಂದ ಕಥೆಯಲ್ಲಿಯ ಅತಿ ಚಿಕ್ಕ ಘಟಕಗಳನ್ನು ಗಮನಿಸಿ ‘ಆಶಯ’ ಎಂದು ಕರೆಯಲಾಗಿದೆ. ಇವುಗಳಿಗೆ ಭಿನ್ನವಾದ ‘ಕಥೆಯ ಕ್ರಿಯೆಗಳನ್ನು’ ಗಮನಿಸಿ ವ್ಹಿ.ಜೆ. ಪ್ರಾಪ್ ಅವರು ಕಿನ್ನರ ಕಥೆಗಳ ರಚನೆಯಲ್ಲಿ ಒಟ್ಟು ೩೧ ಕ್ರಿಯೆಗಳು (Functions)ಕಾಣಿಸುವುದನ್ನು ಗುರುತಿಸುತ್ತಾರೆ. ಕ್ರಿಯೆಗಳು ಆಶಯಗಳಷ್ಟು ಚಿಕ್ಕವಲ್ಲ. ಮದುವೆ, ನಾಯಕ ಮನೆಯಿಂದ ಹೊರಡುವುದು, ಕೊರತೆ ಕಾಣಿಸುವುದು, ಕೊರತೆಯನ್ನು ನೀಗಿಸಿಕೊಳ್ಳುವುದು – ಹೀಗೆ ಕಥೆಯ ಬೆಳವಣಿಗೆಯಲ್ಲಿ ಕಾಣುವ ಪ್ರಮುಖ ಸಂಗತಿಗಳನ್ನು ಗುರುತಿಸಿ ಅವುಗಳನ್ನು ‘ಕ್ರಿಯೆಗಳು’ (Functions)ಎಂದು ಪ್ರಾಪ್ ಕರೆಯುತ್ತಾರೆ. ಹೀಗೆ ದೀರ್ಘವಾದ ಕಿನ್ನರ ಕಥೆಗಳ ಒಂದೊಂದು ಕ್ರಿಯೆಯಲ್ಲಿ ಕನಿಷ್ಠ ಮೂರ‌್ನಾಲ್ಕು ಆಶಯಗಳಾದರೂ ಬರುತ್ತವೆ.

ಜನಪದ ಕಥೆಗಳಲ್ಲಿ ಆಶಯದಂತಹ ಚಿಕ್ಕ ಘಟಕಗಳನ್ನು ಹೊರತುಪಡಿಸಿ, ಪ್ರಾಪ್ ಅವರು ಕಿನ್ನರ ಕಥೆಯಲ್ಲಿ ಗುರುತಿಸುವ ಕ್ರಿಯೆಗಳಿಗೂ ಭಿನ್ನವಾದ, ತಕ್ಕ ಮಟ್ಟಿಗೆ ವಿಸ್ತಾರವುಳ್ಳ ‘ಕಥಾಘಟಕಗಳು’ ಎಲ್ಲ ಬಗೆಯ ಜನಪದ ಕಥೆಗಳಲ್ಲಿ ಕಾಣಸಿಗುತ್ತವೆ. ಇವು ಒಂದು ರೀತಿಯಲ್ಲಿ ಸ್ಥಿರ ರಚನೆಯ ಕಲ್ಪನೆಯನ್ನು ಒಳಗೊಂಡಿರುತ್ತವೆ. ಇಂತಹ ಎರಡು, ಮೂರು, ನಾಲ್ಕು ಅಥವಾ ಇನ್ನೂ ಹೆಚ್ಚಿನ ಕಥಾಘಟಕಗಳು ಒಂದಾದ ನಂತರ ಒಂದು ಸೇರಿ, ಒಂದು ಸಂಕೀರ್ಣ ಕಥೆಯ ನಿರ್ಮಾಣವಾಗುತ್ತದೆ. ಹೀಗೆ ಈ ಕಥಾಘಟಕಗಳು ಒಂದರೊಡನೊಂದು ಕೂಡುವಲ್ಲಿ ಕೆಲ ವಿವರಗಳು ಕೊಂಡಿಗಳಾಗಿ (Connectives) ಕೆಲಸ ಮಾಡುತ್ತವೆ.

ಈ ‘ಕಥಾಘಟಕಗಳು’ ಅಸ್ತಿತ್ವದಲ್ಲಿ ಸಾಕಷ್ಟು ಸ್ವತಂತ್ರವಾಗಿರುತ್ತವೆ. ಸ್ವತಂತ್ರ ಅಸ್ತಿತ್ವ ಹೊಂದಿರುವ ಒಂದು ಅಕ್ಷರವು ಪದಗಳ ಭಿನ್ನಭಿನ್ನವಾದ ಸ್ಥಾನಗಳಲ್ಲಿ ಬಂದು, ಬೇರೆ ಬೇರೆ ಪದಗಳ ನಿರ್ಮಾಣದಲ್ಲಿ ಕೆಲಸ ಮಾಡುವಂತೆ, ಇಸ್ಪೀಟಿನ ಆಟದಲ್ಲಿ ಒಂದೇ ಎಲೆಯನ್ನು ಹಲವಾರು ಗುಂಪಿನಲ್ಲಿ ಜೋಡಿಸಿಕೊಂಬಂತೆ, ಅಕ್ಷರ ಮತ್ತು ಇಸ್ಪೀಟಿನ ಎಲೆಗಳಂತೆ ಪ್ರತ್ಯೇಕ ಅಸ್ತಿತ್ವದ ಗುಣಗಳನ್ನು ಹೊಂದಿದ ಹಲವಾರು ‘ಕಥಾಘಟಕ’ಗಳು ಒಂದು ಉದ್ದೇಶಕ್ಕೆ ತಕ್ಕಂತೆ : ಎರಡು, ಮೂರು, ನಾಲ್ಕು ಅಥವಾ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿಕೊಂಡು ಒಂದು ‘ಸಂಕೀರ್ಣ ಕಥೆ’ ನಿರ್ಮಾಣವಾಗುವುದನ್ನು ಕಾಣುತ್ತೇವೆ. ಉದಾಹರಣೆಗೆ – ‘ದಾರಿಯಲ್ಲಿ ಮಾಲೀಕನ ಜೊತೆ ಮಲಗಿದ್ದ ಸೇವಕ ಎಚ್ಚರಾಗಿದ್ದುಕೊಂಡು ಪಕ್ಷಿಗಳಿಂದ ಅಥವಾ ಇನ್ನಾವುದೇ ಮೂಲದಿಂದ ಮಾಲೀಕನಿಗೆ ದಾರಿಯಲ್ಲಿ ಒದಗಲಿರುವ ಕುತ್ತುಗಳನ್ನು ಕೇಳಿಕೊಂಡು ಆ ಎಲ್ಲ ಕುತ್ತುಗಳಿಂದ ಯಶಸ್ವಿಯಾಗಿ ಆತನನ್ನು ಪಾರು ಮಾಡುತ್ತಾನೆ.’ ಇದು ನಾನು ಗ್ರಹಿಸಿಕೊಂಡ ‘ಕಥಾಘಟಕ’ದ ಪರಿಕಲ್ಪನೆಗೆ ಒಂದು ಒಳ್ಳೆಯ ಉದಾಹರಣೆಯಾಗಿದೆ. ಈ ಕಥಾಘಟಕವು ಬೇರೆ ಬೇರೆ ಉದ್ದೇಶಗಳಿಗೆ ತಕ್ಕಂತೆ: ‘೫೧೬: ನಂಬಿಗಸ್ಥ ಸೇವಕ’, ‘೯೧೬ : ಅರಸನ ಶಯ್ಯಗಾರ ಹಾಗೂ ಹಾವು’, ಮತ್ತು ‘೧೫೧೧: ಅಪನಂಬಿಕೆಯ ರಾಣಿ’ ಈ ಮೂರು ಮಾದರಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ‘೫೧೬: ನಂಬಿಗಸ್ಥ ಸೇವಕ’ ಎಂಬ ಕಥಾಮಾದರಿಯಲ್ಲಿ ಆರು ಕಥಾಘಟಕಗಳಿವೆ :

i. ಜಡೆ ತೆಗೆಯಲು ಕಾಳಿಗುಡಿಗೆ ತಂದ ಹೆಣ್ಣು ಮಗುವನ್ನು ಸರ್ಪವು ರಾತ್ರಿ ಬಾವಿಯಲ್ಲಿರುವ ತನ್ನ ಬಿಲಕ್ಕೆ ಸಾಗಿಸುತ್ತದೆ. ಆ ಕೂಸಿನ ಮೂರ್ತಿಯನ್ನು ಕಟಿಸಿ, ಗುಡಿಯಲ್ಲಿ ನಿಲ್ಲಿಸುತ್ತಾರೆ. ಅಥವಾ ಹಾವಿನ ವಶದಲ್ಲಿರುವ ಒಂದು ಹೆಣ್ಣಿನ ಚಿತ್ರದ ಗೊಂಬೆಯನ್ನು ಬಾವಿಯಲ್ಲಿ ತೂಗಿಹಾಕಿರುತ್ತಾರೆ. ಅಥವಾ ಬಾವಿಯಲ್ಲಿ ಒಬ್ಬ ಸುಂದರ ಜಕಣಿ ವಾಸವಾಗಿರುತ್ತಾಳೆ.

ಪ್ರಧಾನಿಯೊಂದಿಗೆ ಅಡವಿಯಲ್ಲಿ ಬೇಟೆಯಾಡಲು ಬಂದ ರಾಜನು ಕಾಳಿಕಾ ಗುಡಿಯ (ಬಾವಿಯ)ಲ್ಲಿಯ ಸುಂದರ ಹೆಣ್ಣಿನ ಮೂರ್ತಿ ( ಭಾವಚಿತ್ರ ) ನೋಡಿ, ಇಲ್ಲವೇ ಜಕಣಿಯನ್ನು ಕಂಡು, ಮೋಹಗೊಳ್ಳುತ್ತಾನೆ. ಸಾಧು (ಊರ ಜನ) ಬಾವಿಯಲ್ಲಿ ಸುಂದರ ಹೆಣ್ಣಿರುವದೆಂದೂ ಆಕೆಯನ್ನು (ಏಳು ಹೆಡೆಯ) ಸರ್ಪ ಕಾಯುವುದೆಂದೂ, ಹಾವು ರಾತ್ರಿ ಮೇಯಲು ಹೊರಗೆ ಬಂದಾಗ ಸಾಯಿಸಿ, ಅದರ ರತ್ನ ತೆಗೆದುಕೊಂಡರೆ ಹೆಣ್ಣನ್ನು ದೊರಕಿಸಿಕೊಳ್ಳಬಹುದೆಂದೂ ಹೇಳುತ್ತಾರೆ.

ರಾತ್ರಿ ಗಿಡದ ಕೆಳಗೆ ಹಾವು ಮೇಯುತ್ತಿರುವಾಗ, ಗಿಡದ ಮೇಲಿಂದ ಚೂರಿ (ಬಲಿ, ಕಬ್ಬಿಣದ ಭಾರವಾದ ಬುಟ್ಟಿ ) ಇಳಿಬಿಟ್ಟು ಹಾವು ಸಾಯುವಂತೆ ಮಾಡುತ್ತಾರೆ. ಹಾವಿನ ರತ್ನ ನೀರಿಗೆ ತೋರಿಸಲು, ನೀರು ದಾರಿ ಬಿಡುತ್ತದೆ. ಹೋಗಿ ಹೆಂಗಸನ್ನು ಕೂಡುತ್ತಾರೆ. ಇಲ್ಲವೆ ಜಕಣಿಯ ಸೇವಕಿ ಮುದುಕಿಯ ಸಹಾಯದಿಂದ ಪ್ರಧಾನಿಯು ಹೆಣ್ಣು ವೇಷ ಧರಿಸಿ ಜಕಣಿಯನ್ನು ಅಪಹರಿಸುತ್ತಾನೆ. ಅವಳೊಂದಿಗೆ ರಾಜನನ್ನು ಬಿಟ್ಟು ಪ್ರಧಾನಿಯು ಸ್ವಾಗತ ಸಿದ್ಧತೆಗಾಗಿ ಊರಿಗೆ ಹೋಗುತ್ತಾನೆ.

ii. ಬಾವಿಯ ದಂಡೆಯ ಮೇಲೆ ಬಿದ್ದ ರತ್ನದ ಚಪ್ಪಲಿ ಅದೇ ಊರ ರಾಜನಿಗೆ ಮುಟ್ಟಿ ಈ ಚಪ್ಪಲಿ ತೊಡುವ ಬಾವಿಯ ಹೆಣ್ಣನ್ನು ತರಲು ಒಬ್ಬ ಮುದುಕಿಗೆ ಕಳುಹಿಸುತ್ತಾನೆ. ಮುದುಕಿ ಬಾವಿಯ ಹತ್ತಿರ ಬಂದು ಧ್ವನಿ ಮಾಡಿ ಅತ್ತು – ತಾನು ಆ ಹೆಣ್ಣಿನ ತಾಯಿಯಂತೆ ನಟಿಸಿ, ಅವಳಲ್ಲಿ ಆಶ್ರಯ ಪಡೆದು, ರತ್ನವನ್ನೂ ಹೆಣ್ಣನ್ನೂ ರಾಜನಿಗಾಗಿ ಅಪಹರಿಸುತ್ತಾಳೆ. ಹಿಂತಿರುಗಿ ಬಂದ ಪ್ರಧಾನಿ ಅಪಹರಿಸಲ್ಪಟ್ಟವಳನ್ನು ತರಲು ಶೋಧನೆಗೆ ತೊಡಗುತ್ತಾನೆ. ಮನೆ ಬಿಟ್ಟು ಹೋದ ಮುದುಕಿಯ ಮಗನಂತೆ ನಟಿಸಿ ಅವಳ ಆಶ್ರಯ ಪಡೆದು, ರತ್ನವನ್ನು ಅಪಹರಿಸುತ್ತಾನೆ. ಸಂಜೆ ಅವಳೊಂದಿಗೆ ಅರಮನೆ ಸೇರಿ, ಹೆಣ್ಣನ್ನು ಅಪಹರಿಸುತ್ತಾನೆ. ರಾಜನಿಗೆ ಒಪ್ಪಿಸುತ್ತಾನೆ.

iii. ದಾರಿಯಲ್ಲಿ ತಂಗಿದಾಗ ಎರಡು ಪಕ್ಷಿಗಳು ತಮ್ಮಲ್ಲೇ ರಾಜರಾಣಿಯರಿಗೆ ಮುಂದೊದಗಲಿರುವ ತೊಂದರೆಗಳ ಬಗ್ಗೆ ಭವಿಷ್ಯ ನುಡಿಯುತ್ತವೆ. ಹಕ್ಕಿ ನುಡಿದ ಶಕುನಗಳು: (೧) ಹೊಳೆ ಬಂದು ಅಪಾಯಕ್ಕೀಡಾಗುತ್ತಾರೆ, ಅಥವಾ ತೀವ್ರ ಏಳದಿದ್ದರೆ ಗಿಡ ಮೇಲೆ ಬಿದ್ದು ಸಾಯುತ್ತಾರೆ, (೨) ದಾರಿಯ ತೆಗ್ಗಿನಲ್ಲಿ ಬೀಳುತ್ತಾರೆ, ಇಲ್ಲವೆ ರಾಕ್ಷಸನು ಕುದುರೆಯಾಗಿ ದಾರಿಯಲ್ಲಿ ನಿಲ್ಲುತ್ತಾನೆ, (೩) ಮನೆಯಲ್ಲಿ ಮಲಗಿದಾಗ ಸರ್ಪ ಕಚ್ಚುತ್ತದೆ. ಇದನ್ನು ಕೇಳಿಸಿಕೊಂಡವರು ಗುಟ್ಟು ರಟ್ಟು ಮಾಡಿದರೆ ತಕ್ಷಣವೇ ಕಲ್ಲಾಗಿ ಬೀಳುತ್ತಾರೆ. ಪ್ರಧಾನಿ ಎಚ್ಚರದಿಂದಿದ್ದು, ಇವನ್ನೆಲ್ಲ ಕೇಳಿಸಿಕೊಳ್ಳುತ್ತಾನೆ. ದಾರಿಯ ಎಲ್ಲ ಕುತ್ತುಗಳಿಂದ ಅರಸನನ್ನು ಉಳಿಸುತ್ತಾನೆ.

iv. ರಾತ್ರಿ, ರಾಜ – ರಾಣಿ ಮಲಗುವ ಕೋಣೆಯಲ್ಲಿ ಹಾವು ನುಗ್ಗಿ ಬಂದಾಗ ಅದನ್ನು ಕತ್ತಿಯಿಂದ ಕಡಿದು ಹಾಕುತ್ತಾನೆ. ವಿಷದ ಒಂದು ಹನಿ ರಾಣಿಯ ಎದೆಯ ಮೇಲೆ ಬೀಳುತ್ತದೆ. ಅದನ್ನು ( ನಾಲಿಗೆಯಿಂದ ) ತೆಗೆಯಲು ಪ್ರಧಾನಿ ಹೋದಾಗ ರಾಣಿ ಎಚ್ಚರವಾಗಿ ಅವನನ್ನು ಅಪರಾಧಿಯಾಗಿ ನಿಲ್ಲಿಸುತ್ತಾಳೆ. ರಾಜನು ಪ್ರಧಾನಿಗೆ ಮರಣದಂಡನೆ ವಿಧಿಸುತ್ತಾನೆ. ಚಾಂಡಾಲರು ಎಸೆದ ಹತಿಯಾರವು ಪ್ರಧಾನಿಯ ಕೊರಳಲ್ಲಿ ಹಾರವಾಗಿ ಬೀಳುತ್ತದೆ.

v. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು’ ಎಂಬುದಕ್ಕೆ ಚಾಂಡಾಲರು ರಾಜನಿಗೆ ಹಲವಾರು ದೃಷ್ಟಾಂತಗಳನ್ನು ಅರಹುತ್ತಾರೆ. ೧. ತನ್ನ ಮಗುವನ್ನು ಹಾವಿನಿಂದ ಉಳಿಸಿದ ಮುಂಗುಲಿ – ಮಗುವನ್ನೇ ಕೊಲ್ಲಿದೆಯೆಂದು ತಪ್ಪಾಗಿ ತಿಳಿದು ಅದನ್ನು ಕೊಂದ ಕಥೆ. (೨) ತಿಂದರೆ, ಮುದುಕರು ವಯಸ್ಕರಾಗುವ ಹಣ್ಣನ್ನು ತಂದ ಗಿಳಿಗೆ ತಪ್ಪು ತಿಳಿದು ಕೊಲ್ಲಲಾಯಿತು. ಹಣ್ಣಿನಲ್ಲಿ ಹಾವು ವಿಷ ಬಿಟ್ಟಿತ್ತು. ಆ ಹಣ್ಣನ್ನು ತಿಂದವನು ಸಾವನ್ನಪ್ಪಲು, ಗಿಳಿ ವಿಷದ ಹಣ್ಣನ್ನೇ ತಂದಿದೆಯೆಂದು ತಿಳಿಯಲಾಯಿತು. (೩) ಕೊಳದಲ್ಲಿಯ ವಿಷದ ನೀರನ್ನು ಕುಡಿಯದಂತೆ ರಾಜನಿಗೆ ಗಿಡುಗ ಬಡಿಯಲು ಪ್ರಾರಂಭಿಸಿತು. ಆದರೆ ರಾಜ ತನಗೆ ನೀರು ಕುಡಿಯಲು ಅಡ್ಡ ಬಂದ ತನ್ನ ಗಿಡುಗವನ್ನೇ ಕತ್ತರಿಸಿ ಹಾಕಿದನು.

vi. ಕೊನೆಗೆ ಪ್ರಧಾನಿ ನಿಜಸಂಗತಿ ಅರುಹಲು ಕಲ್ಲಾಗಿ ಬೀಳುತ್ತಾನೆ. ರಾಜನು ತನ್ನ ಮಗುವನ್ನು ಕಡಿದು ರಕ್ತ ಹಚ್ಚಲು, ಪ್ರಧಾನಿ ಪುನರುಜ್ಜೀವನ ಹೊಂದುತ್ತಾನೆ. ಸತ್ತ ಕೂಸನ್ನು ಪ್ರಧಾನಿಯು ಪಕ್ಷಿಗಳ ಹತ್ತಿರ ತಂದಾಗ, ಅವು ಸಂಜೀವಿನಿ ಕಡ್ಡಿ ತಂದು ಕೂಸನ್ನು ಬದುಕಿಸುತ್ತವೆ.

೫೧೬: ನಂಬಿಗಸ್ಥ ಸೇವಕಮಾದರಿಯಲ್ಲಿ ಸೇರಿಕೊಂಡ ಈ ಆರು ಕಥಾಘಟಕಗಳನ್ನು ಗಮನಿಸಿದರೆ, ಅರಸನ ಶಯ್ಯಗಾರದಲ್ಲಿ ಸೇವಕನು ಾವನ್ನು ಕಾಯುತ್ತ ಕೂಡುವ ೪ನೇ ಘಟಕ ಪ್ರವುುಖವೆಂದು ಗ್ರಹಿಸಿ, ಕ್ರಮವಾಗಿ ೩, ೪, ೫, ೬, ಘಟಕಗಳಿಂದ ಕೂಡಿದ ‘೯೧೬: ಅರಸನ ಶಯ್ಯಗಾರವನ್ನು ಕಾಯುತ್ತಿರುವ ಸಹೋದರ ( ಸಹಾಯಕ) ಮತ್ತು ಹಾವು’ ಎಂಬ ಮಾದರಿಯನ್ನು ಥಾಮ್ಸನ್ನರು The Types of the Folktales ಎಂಬ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ಅಂದರೆ ಈ ಮೇಲಿನ ೯೧೬ ಮಾದರಿಯ ಕಥಾಘಟಕಗಳನ್ನುಳಿದು ಒಂದನೇ ಹಾಗೂ ಎರಡನೇ ಘಟಕಗಳ ವಿವರಣೆಗಳು ೫೧೬: ನಂಬಿಗಸ್ಥ ಸೇವಕ ಕಥೆಗೆ ಸಾಕೆನಿಸುತ್ತವೆ. ಹಾಗೆ ನೋಡಿದರೆ ಸೇವಕನ ನಿಷ್ಠೆ ಅಥವಾ ನಂಬುಗೆಗೆ ಸಾಕ್ಷಿಯಾಗಿ ಒಂದನೇ ಘಟಕವೇ ಸಾಕು. ಅಲ್ಲಿ ಸೇವಕನು ತಾನು ಸಾಹಸಗೈದು ಗೆದ್ದ ಹೆಣ್ಣನ್ನು ಮಾಲೀಕನಿಗೆ ಒಪ್ಪಿಸುತ್ತಾನೆ. ತದನಂತರ ಬರುವ ಘಟನೆಗಳೆಲ್ಲ ಪುನ: ಪುನ: ಇದೇ ಉದ್ದೇಶವನ್ನು ಬಿತ್ತರಿಸುವ, ಪುನರಾವರ್ತನೆಗೊಳಿಸುವ ಕೆಲಸವನ್ನೇ ಮಾಡುತ್ತವೆ. ಮೂರು ಮತ್ತು ನಾಲ್ಕನೆಯ ಘಟಕಗಳಂತೂ ೧೫೧೧: ಅಪನಂಬಿಕೆಯ ರಾಣಿಮಾದರಿಯಲ್ಲೂ ಕಾಣಿಸಿಕೊಳ್ಳುತ್ತವೆ.

ಎ.ಕೆ. ರಾಮಾನುಜನ್ ಅವರ Folktales from Indiaಎಂಬ ಕಥಾಸಂಕಲನದಲ್ಲಿ ಕಾಣಿಸಿಕೊಂಡ ‘ಹೇಳದ ಕಥೆಗಳು’ ಎಂಬ ಕಥೆಯಲ್ಲಿ ಈ ಕೆಳಗಿನ ಕಥಾಘಟಕಗಳು ಕಾಣಿಸಿಕೊಂಡಿವೆ :

i. ಕಥೆ ಹೇಳಲಾರದ ಜಿಪುಣಗೊಂಡಿ ಮಲಗಿದಾಗ ಅವನ ದೇಹದೊಳಗಿಂದ ನಾಲ್ಕು ಕಥೆಗಳು ಹೊರಬಂದು ಕುತ್ತುಗಳ ಬಗ್ಗೆ ಮಾತಾಡಿಕೊಳ್ಳುತ್ತವೆ : (೧) ಊಟದ ತುತ್ತನ್ನು ಸೂಜಿಮಯ ಮಾಡುವುದು, (೨) ದಾರಿಯಲ್ಲಿ ಮರ ತಲೆಯ ಮೇಲೆ ಬೀಳುವುದು, (೩) ಹಾವಾಗಿ ಕಚ್ಚುವುದು, (೪) ನದಿಯ ದೊಡ್ಡ ಅಲೆಯಾಗಿ ಕೊಲ್ಲುವುದು. ಈ ಎಲ್ಲ ಕುತ್ತುಗಳನ್ನು ಎಚ್ಚರಿದ್ದು ಕೇಳಿಸಿಕೊಂಡ ಸೇವಕ, ತನ್ನ ಮಾಲೀಕನನ್ನು ಯಶಸ್ವಿಯಾಗಿ ಬದುಕಿಸುತ್ತಾನೆ.

ii. ತನಗೊದಗಿದ ಎಲ್ಲ ಕುತ್ತುಗಳಿಂದ ಪಾರು ಮಾಡಿದ್ದನ್ನು ಗಮನಿಸಿದ ಮಾಲೀಕನು, ಈ ರಹಸ್ಯ ಸೇವಕನಿಗೆ ಹೇಗೆ ತಿಳಿಯಿತು? ಎಂದು ಪ್ರಶ್ನಿಸುತ್ತಾನೆ. ಅದನ್ನು ಅರುಹಿದರೆ ತಾನು ಕಲ್ಲಾಗಿ ಬೀಳುವ, ಕೂಸನ್ನು ಅಪ್ಪಳಿಸಿದರೆ ಜೀವಂತನಾಗುವ ಸಂಗತಿ ತಿಳಿಸಿ, ಗುಟ್ಟನ್ನು ರಟ್ಟು ಮಾಡುತ್ತಾನೆ. ನಂತರ ಕಲ್ಲಾಗಿ ಬಿದ್ದ ಆತನಿಗೆ ಕೂಸನ್ನು ಅಪ್ಪಳಿಸಿ ಬದುಕಿಸಲಾಗುತ್ತದೆ.

ಈ ಕಥೆಯ ವಿವರಗಳನ್ನು ಗಮನಿಸಿದಾಗ – ನಾಲ್ಕು ಅಂಶಗಳು ಗಮನಕ್ಕೆ ಬರುತ್ತವೆ :

೧. ಪ್ರಾರಂಭದಲ್ಲಿ ಕಥೆಗಳ ವೃತ್ತಾಂತದ ಪ್ರಸ್ತಾಪ ಮಾತ್ರ ಇಲ್ಲಿ ಹೊಸದು. ಅಷ್ಟನ್ನು ಬಿಟ್ಟರೆ   ನಂಬಿಗಸ್ಥ ಸೇವಕ (೫೧೬) ಮಾದರಿಯಲ್ಲಿಯ ೩ ಮತ್ತು ೬ ನೆಯ ಘಟನೆಗಳೇ ಕ್ರಮವಾಗಿ ಇಲ್ಲಿಯ ಒಂದನೇ ಮತ್ತು ಎರಡನೇ ಘಟಕಗಳಾಗಿವೆ.

೨. ಒಂದನೇ ಘಟನೆಯಲ್ಲಿ ಹಾವನ್ನು ಬೀದಿಯ ಮೇಲೆ ಕೊಲ್ಲುತ್ತಾನೆ ಮತ್ತು ಉಳಿದೆಲ್ಲ ಕುತ್ತುಗಳಲ್ಲಿ ಮಾಲೀಕನನ್ನು ಯಶಸ್ವಿಯಾಗಿ ಉಳಿಸುತ್ತಾನೆ. ಶಯ್ಯಗಾರವನ್ನು ಪ್ರವೇಶಿಸುವ ಅಂಶ ಇಲ್ಲಿ ಇಲ್ಲದಿರುವುದು ಗಮನಾರ್ಹ. ಅದಕ್ಕಾಗಿ ಇದೊಂದು ಪ್ರತ್ಯೇಕ ಕಥಾಘಟಕವೇ ಆಗಿದೆ.

೩. ನಂಬಿಗಸ್ಥ ಸೇವಕ’ (೫೧೬), ಹಾಗೂ ಅರಸನ ಶಯ್ಯಗಾರವನ್ನು ಕಾಯುತ್ತಿರುವ ಸಹೋದರ (ಸಹಾಯಕ) ಹಾಗೂ ಹಾವು’ (೯೧೬)ಈ ಮಾದರಿಗಳಲ್ಲಿ ‘ನಾಯಕನು ಶಯ್ಯಗಾರದಲ್ಲಿ ಹಾವು ಕಚ್ಚಿ ಸಾಯುವನು’ ಎಂಬ ನಿರೂಪಣೆಯು ಕಥೆಯೊಂದನ್ನು ಬೇರೊಂದು ಘಟನೆಗೆ ಬೆರೆಸುವ ಕೊಂಡಿ ಎನಿಸುತ್ತದೆ. ಹೀಗೆಯೇ ಕಥಾಘಟಕಗಳೆಲ್ಲ ಪ್ರತ್ಯೇಕ ಅಸ್ತಿತ್ವವೇ ಹೊಂದಿದ್ದು, ಕೊಂಡಿಗಳ ಬೆಳವಣಿಗೆಯಿಂದ ಅವು ಒಂದರೊಡ ನೊಂದು ಕೂಡುತ್ತ ಹೋಗುತ್ತವೆ.

೪. ಪ್ರಾರಂಭದ ಸ್ವಲ್ಪ ವಿವರ ಹೊಸದಾಗಿ ಸೇರಿಕೊಂಡು ಉಳಿದಂತೆ ಪ್ರತ್ಯೇಕ ಅಸ್ತಿತ್ವ ಹೊಂದಿ ರುವ ಹಾಗೂ ನಾವು ನೋಡಿದ ‘ನಂಬಿಗಸ್ಥ ಸೇವಕ’ ಮಾದರಿಯಲ್ಲಿ ಕಾಣಿಸಿಕೊಂಡ ೩ನೇ ಮತ್ತು ೬ನೇ ಈ ಎರಡು ಕಥಾಘಟಕಗಳನ್ನು ಬಳಸಿಕೊಂಡು, ಕೊಂಡಿಗಳ ವಿವರಗಳಿಂದ ಬೆಸೆದು, ಒಂದು ಹೊಸ ಕಥೆಯೇ ನಿರ್ಮಾಣವಾದುದು ಗೋಚರಕ್ಕೆ ಬರುತ್ತದೆ.

ಈ ಕಥಾಘಟಕಗಳ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು, ಪ್ರಾದೇಶಿಕ ಮಟ್ಟದಲ್ಲಿ ಕಥೆಗಳ ಸೂಕ್ಷ್ಮವಾದ ಅಭ್ಯಾಸ ನಡೆಸಿದರೆ ನಮ್ಮ ಅರಿವಿಗೆ ಸಹಜವಾಗಿ ಗುರುತು ಸಿಗದಂತೆ ಸೇರಿಕೊಂಡ ಕಥಾಘಟಕಗಳನ್ನೂ ಹಾಗೂ ಕಥಾಘಟಕಗಳಲ್ಲಿ ಸೇರಿಕೊಂಡ ತಪ್ಪುಗಳನ್ನೂ ಪತ್ತೆ ಹಚ್ಚಬಹುದಾಗಿದೆ. ಈ ಮಾತಿಗೆ ಉದಾಹರಣೆಯಾಗಿ ಜಗತ್ಪ್ರಸಿದ್ದ ಸಿಂಡ್ರೆಲ್ಲಾ ಮಾದರಿಯನ್ನೇ ಗಮನಿಸಬಹುದಾಗಿದೆ.

ಸಿಂಡ್ರೆಲ್ಲಾ ಕಥೆಯಲ್ಲಿ ಎರಡು ಕಥಾಘಟಕಗಳಿರುವಂತೆ ತೋರುತ್ತದೆ :

i. ಮಲತಾಯಿ ಮಲಮಗಳಿಗೆ ಕಾಡುತ್ತಾಳೆ. ಮುಸುರೆ ತಿಕ್ಕುವುದು, ದನ ಕಾಯಲು ಹಚ್ಚುವುದು, ತಿನ್ನಲು ಖಟಿರೊಟ್ಟಿ ಖಾರ‌್ಪುಡಿ ಕೊಡುವುದು ಇತ್ಯಾದಿ. ಈಕೆಯ ತೊಂದರೆಯನ್ನು ಕಂಡು ಗಿಡದಿಂದ ಬಂದ ಹೆಣ್ಣುಮಗಳು ಅಥವಾ ಗಿಡದಲ್ಲಿ ವಾಸವಾದ ಪಾರಿವಾಳಗಳು ಸಹಾಯಕ್ಕೆ ನಿಲ್ಲುತ್ತವೆ. ತಿನ್ನಲು, ಉಣ್ಣಲು, ಉಡಲು ಪೂರೈಸುತ್ತವೆ.

ii. ಆ ಊರಿನ ಅರಸ ತನ್ನ ಮಗನಿಗಾಗಿ ಸ್ವಯಂವರ ಏರ್ಪಡಿಸುತ್ತಾನೆ. ಮಲತಾಯಿಯ ಮಕ್ಕಳು ಅಲ್ಲಿಗೆ ಹೋಗಲು, ಸಿಂಡ್ರೆಲ್ಲಾ ಕೂಡ ಹೋಗಬಯಸುತ್ತಾಳೆ. ಆಕೆಗೆ ಅಸಾಮಾನ್ಯ ಸಹಾಯಕರು ನೆರವಿಗೆ ಬರುತ್ತಾರೆ. ಮಾಯದ ರಥ, ಝಗಝಗಿಸುವ ಬಟ್ಟೆ, ಗಾಜಿನ ಬೂಟುಗಳನ್ನು ಪೂರೈಸುತ್ತಾರೆ. ಹುಡುಗಿ ರಾಜಕುಮಾರನ ಸ್ವಯಂವರಕ್ಕೆ ಹೋಗುತ್ತಾಳೆ. ರಾಜಕುಮಾರ ಆಕೆಯನ್ನು ನೋಡಿ ಮೋಹಗೊಳ್ಳುತ್ತಾನೆ. ಹಿಡಿಯಲು ಹೋದಾಗ ಆಕೆಯ ಗಾಜಿನ ಬೂಟು ಉಚ್ಚಿ ಬಿದ್ದು, ಅವಳು ಮಾಯವಾಗುತ್ತಾಳೆ. ರಾಜಕುಮಾರ ಆ ಗಾಜಿನ ಬೂಟನ್ನು ಕಂಡು, ಇದು ಯಾರ ಕಾಲಿಗೆ ಬರುವುದೋ ಅವರನ್ನು ಮದುವೆಯಾ ಗುವುದಾಗಿ ಹೇಳುತ್ತಾನೆ. ಊರೆಲ್ಲ ಅನ್ವೇಷಿಸಿದರೂ ಯಾವ ಯುವತಿಯ ಕಾಲಿಗೂ ಬೂಟು ಬರಲಿಲ್ಲ. ಕೊನೆಗೆ ಉಳಿದ ಈ ಮುಸುರಿ ತಿಕ್ಕುವ ಹುಡುಗಿಗೆ ಗಾಜಿನ ಬೂಟು ಗಳು ಸರಿಹೊಂದುತ್ತವೆ. ರಾಜಕುಮಾರ ಆಕೆಯನ್ನು ಗುರುತಿಸಿ, ಮದುವೆಯಾಗುತ್ತಾನೆ.

ಈ ಎರಡು ಕಥಾಘಟಕಗಳಲ್ಲಿ ಎರಡನೇ ಘಟಕದ ಕಡೆಗೆ ಲಕ್ಷ ಸೆಳೆಯಲು ಬಯಸುತ್ತೇನೆ. ಇದನ್ನು ಸರಿಯಾಗಿ ತಿಳಿದುಕೊಳ್ಳಲು, ಹಿಂದೆ ನೋಡಿದ ‘ನಂಬಿಗಸ್ಥ ಸೇವಕ’ (೫೧೬) ಮಾದರಿಯ ಎರಡನೇ ಘಟಕ ನೆರವಾಗುತ್ತದೆ. ಅದು ಹೀಗಿದೆ: ‘ಬಾವಿಯ ದಂಡೆಯ ಮೇಲೆ ರತ್ನದ ಚಪ್ಪಲಿಯೊಂದನ್ನು ಕಂಡ ಅರಸ, ಆ ಚಪ್ಪಲಿ ತೊಡುವಾಕೆಯನ್ನು ಮದುವೆಯಾಗಲು ಬಯಸುತ್ತಾನೆ. ಸಹಾಯಕಿಯಾದ ಮುದುಕಿ, ಉಪಾಯವಾಗಿ ಆ ಹೆಣ್ಣನ್ನು ಒಯ್ಯುತ್ತಾಳೆ….’ ಇತ್ಯಾದಿ.

ಇದನ್ನು ಗಮನದಲ್ಲಿಟ್ಟುಕೊಂಡು ಸಿಂಡ್ರೆಲ್ಲಾ ಕಥೆಯ ಎರಡನೆಯ ಕಥಾಘಟಕದ ವಿವರಗಳನ್ನು ಹೀಗೆ ಪ್ರಶ್ನಿಸಬಹುದಾಗಿದೆ: ಒಂದು ವಸ್ತುವನ್ನು ಕಂಡು ಮೋಹಗೊಂಡವನು ಆ ಮೊದಲು ಆ ವಸ್ತು ಯಾರದೆಂದು ತಿಳಿಯದೆ ಮೋಹಗೊಳ್ಳುತ್ತಾನೆ. ಉದಾ : ಬಂಗಾರದ ಕೂದಲು, ಭಾವಚಿತ್ರ, ರತ್ನದ ಚಪ್ಪಲಿ ಇತ್ಯಾದಿಗಳನ್ನು ಕಂಡು, ದೊರೆತ ವಸ್ತುವಿನ ಮೂಲಕ ಸಂಬಂಧಿಸಿದವಳನ್ನು ಮೋಹಿಸುತ್ತಾನೆ. ಅಂದರೆ :

೧) ಒಂದು ವಸ್ತುವಿನ ಮೂಲಕ ಸಂಬಂಧಿಸಿದ ಹೆಣ್ಣನ್ನು ಮೋಹಗೊಳ್ಳುವವನು ಆ ಮೊದಲು ಆಕೆಯನ್ನು ನೋಡಿರಲಾರ.

೨) ನೇರವಾಗಿ ಹೆಣ್ಣನ್ನು ನೋಡಿದವನು ಅವಳ ಅಂಗಾಂಶ ಅಥವಾ ಅವಳಿಗೆ ಸಂಬಂಧಿಸಿದ ಯಾವುದೇ ವಸ್ತುವಿನ ಮೂಲಕ ಶೋಧ ನಡೆಸಲಾರ.

ಈ ಅಂಶಗಳ ಹಿನ್ನೆಲೆಯಲ್ಲಿ – ಸಿಂಡ್ರೆಲ್ಲಾ ಕಥೆಯಲ್ಲಿ ಕಾಣಿಸಿಕೊಳ್ಳುವ ಗಾಜಿನ ಬೂಟು ಗಳು, ಬಂಗಾರದ ಕೂದಲಿನಂತೆ ರತ್ನದ ಚಪ್ಪಲಿಗಳಂತೆ ಸೌಂದರ್ಯದ ಪ್ರತೀಕಗಳಾಗಿವೆ. ಆದುದರಿಂದ ‘ರಾಜಕುಮಾರನು ಸಿಂಡ್ರೆಲ್ಲಾಳನ್ನು ಮೊದಲು ಕಂಡು, ನಂತರ ಅವಳ ಗಾಜಿನ ಬೂಟಿನ ಮೂಲಕ ಆಕೆಯ ಶೋಧ ನಡೆಸಿದ’ ಎಂಬ ವಿವರಣೆ ಜನಪದ ಕಥೆಗಳ ಸ್ವಭಾವಕ್ಕೆ ವಿರುದ್ಧವಾಗಿದೆ.

ಆದುದರಿಂದ ನಂಬಿಗಸ್ಥ ಸೇವಕ’ (೫೧೬) ಕಥಾಮಾದರಿಯ ಎರಡನೇ ಘಟಕದಲ್ಲಿ ರತ್ನದ ಚಪ್ಪಲಿ ಕಂಡು, ಅವನ್ನು ಮೆಟ್ಟುವಾಕೆಯನ್ನು ಮೋಹಿಸುವಂತೆ, ರಾಜಕುಮಾರ ತಾನು ಆ ಪೂರ್ವ ನೋಡದ ಅಥವಾ ಗಮನಿಸದ ಹೆಣ್ಣನ್ನೇ ಅವಳ ಕಾಜಿನ ಬೂಟಿನ ಮೂಲಕ ಮೋಹಗೊಂಡು, ಶೋಧನೆಗೆ ತೊಡಗಬೇಕು. ಸಹಾಯಕರು ಸಿಂಡ್ರೆಲ್ಲಾಳನ್ನು ಶೋಧಿಸಿ ತಂದು ಒಪ್ಪಿಸಬೇಕು. ಆತ ಮದುವೆಯಾಗಬೇಕು. ಅಂದಾಗ ಅದು ಜನಪದ ಕಥೆಯ ಸ್ವಾಭಾವಿಕ ವಿವರಣೆ ಎನಿಸುತ್ತದೆ.

ಇದನ್ನು ಗಮನಿಸಿದರೆ : ‘ರಾಜಕುಮಾರನ ಸ್ವಯಂವರಕ್ಕೆ ಬಂದ ಹೆಣ್ಣುಗಳೆಲ್ಲ ಹೊರಟುಹೋದ ನಂತರ, ಅಲ್ಲಿ ಕಳಚಿಬಿದ್ದ ಕಾಜಿನ ಬೂಟನ್ನು ಕಂಡು, ರಾಜಕುಮಾರ ಆ ಬೂಟು ತೊಡುವಾಕೆಯನ್ನು ಮೋಹಿಸುತ್ತಾನೆ. ಸಹಾಯಕರ ಮೂಲಕ ಶೋಧಿಸಿ, ಮದುವೆ ಯಾಗುತ್ತಾನೆ’ ಎಂಬ ವಿವರ ಸರಿಯೆನಿಸುತ್ತದೆ. ಆಗ ಇದು ಒಂದು ಸ್ವತಂತ್ರ ಅಸ್ತಿತ್ವ ಹೊಂದಿದ ಕಥಾಘಟಕ ಎನಿಸುತ್ತದೆ. ಇದರಂತೆ ಸಿಂಡ್ರೆಲ್ಲಾದ ಪ್ರಥಮ ಘಟಕವು ಕೂಡ ಸ್ವತಂತ್ರ ಘಟಕವೇ ಎನಿಸುತ್ತದೆ: ಮಲತಾಯಿ ಮಲಮಗಳನ್ನು ಕಾಡುವುದು, ಅಸಾಧಾರಣ ಸಹಾಯಕರು ಮಲಮಗಳ ಸಹಾಯಕ್ಕೆ ನಿಲ್ಲುವುದು ಇತ್ಯಾದಿ. ಹೀಗೆ ಎರಡು ಸ್ವತಂತ್ರ ಘಟಕಗಳನ್ನು ಜೋಡಿಸಲು ರಾಜಕುಮಾರನ ಸ್ವಯಂವರಕ್ಕೆ ಮಲತಾಯಿಯ ಮಗಳೇ ತನ್ನ ಸಹಾಯಕರ ಸಹಕಾರದೊಂದಿಗೆ ಬಂದಳೆಂದು ಬೆಸುಗೆಯ ರೂಪದ ವಿವರಣೆ ಕೊಡಲಾಗುತ್ತದೆನಿಸುತ್ತದೆ.

ನಾವು ನಮ್ಮ ಅಭ್ಯಾಸವನ್ನು ಹೆಚ್ಚು ಪ್ರಾದೇಶಿಕಗೊಳಿಸುವುದರಿಂದ ಇಂತಹ ಸೂಕ್ಷ್ಮಗಳೆಲ್ಲ ಅರಿವಿಗೆ ಬರುತ್ತವೆ. ಈ ಅಧ್ಯಯನವನ್ನು ಇನ್ನೂ ಮುಂದುವರೆಸಿದರೆ ಈಗ ಸ್ವತಂತ್ರ ರೂಪದಲ್ಲಿ ಅಸ್ತಿತ್ವ ಹೊಂದಿದ ಕಥಾಘಟಕಗಳೆಲ್ಲ ಮೂಲದಲ್ಲಿ ಸರಳವಾದ ಸಣ್ಣ ಸಣ್ಣ ಕಥೆಗಳೇ ಆಗಿರುವಂತೆ ತೋರುತ್ತವೆ. ಸ್ವತಂತ್ರವಾದ ವಚನಗಳಿಂದ ಶೂನ್ಯ ಸಂಪಾದನೆಯ ಅಧ್ಯಾಯ ಗಳು ರೂಪು ಪಡೆದಂತೆ; ವಡ್ಡಾರಾಧನೆ, ಜೈನ ಭವಾವಳಿಯ ಕಥೆಗಳು, ಬೇತಾಳನ ಕಥೆಗಳು, ಪುರಾಣಕಾವ್ಯ ಮುಂತಾದವುಗಳನ್ನು ಗಮನಿಸಿದರೆ, ಒಂದು ಕಥೆಗೆ ಇನ್ನೊಂದು ಕಥೆ, ಒಂದು ಕಥೆಯೊಳಗೆ ಇನ್ನೊಂದು ಕಥೆಯನ್ನು ಬೆಸೆದು ಬರೆಯುವ ರೂಢಿ ಇರುವುದು ನಮಗೆ ಎದ್ದು ಕಾಣುತ್ತದೆ. ಎರಡು ಅಥವಾ ಹೆಚ್ಚಿನ ಕಥೆಗಳನ್ನು ಪೋಣಿಸಿ ಹೇಳುವಲ್ಲಿ ಎಲ್ಲ ಕಡೆ ಸಂಕೀರ್ಣತೆ ಉಂಟಾಗುವುದು. ಯಾವುದೋ ಕಾಲದಲ್ಲಿ ಪ್ರಾರಂಭವಾದ ಇಂತಹ ಬೆರೆಸಿ ಹೇಳುವ ಪದ್ಧತಿ, ಸರಳವಾದ ಜನಪದ ಕಥೆಗಳಲ್ಲಿ ಸಂಕೀರ್ಣತೆ ತಲೆ ಹಾಕಲು ಕಾರಣವಾಯಿತು.

ಹೀಗೆ ಎರಡು ಅಥವಾ ಹೆಚ್ಚಿನ ಕಥೆಗಳು ಒಂದನ್ನೊಂದು ಕೂಡುವಾಗ, ಅನೇಕ ಕಥೆಗಳು ತಮ್ಮ ಪ್ರಾರಂಭದ ಮತ್ತು ಕೊನೆಯ ವಿವರಗಳನ್ನು ಕಳೆದುಕೊಂಡು ಕಥಾಘಟಕಗಳಾಗಿ ಮಾರ್ಪಾಟು ಹೊಂದಿದಂತೆ ತೋರುತ್ತದೆ. ಪರ್ಯಾಯವಾಗಿ ಒಂದು ಘಟಕವನ್ನು ಇನ್ನೊಂದರ ಜೊತೆಯಲ್ಲಿ ಬೆರೆಯಲು ಬೇಕಾಗುವ ಕೊಂಡೀವಿವರಗಳು (Connectives)ಹುಟ್ಟಿಕೊಂಡವೆಂದು ತೋರುತ್ತದೆ.

ಆದರೆ ಕಥೆಗಳನ್ನು ಇವತ್ತಿಗೂ ಪ್ರಾದೇಶಿಕ ಮಟ್ಟದಲ್ಲಿ ವ್ಯಾಪಕವಾದ ಅಧ್ಯಯನಕ್ಕೆ ಒಳಪಡಿಸಿದರೆ, ಕೆಲ ಕಥಾಘಟಕಗಳ ಬಿಟ್ಟು ಹೋದ ವಿವರಗಳು ಏನಿರಬಹುದೆಂದು ತಿಳಿಯಲು ಸಾಧ್ಯವಿದೆ. ಏಕೆಂದರೆ ಅನೇಕ ಕಥಾಘಟಕಗಳ ಮೂಲ ಸರಳ ಕಥೆಗಳು ಇವತ್ತಿಗೂ ನಮ್ಮಲ್ಲಿ ಪ್ರಚಲಿತದಲ್ಲಿವೆ. ಆದರೆ ಎಲ್ಲ ಕಥಾಘಟಕಗಳ ಸರಳ ಕಥೆಗಳನ್ನು ಶೋಧಿಸಲು ನಮ್ಮಿಂದ ಸಾಧ್ಯವಾಗಲಿಕ್ಕಿಲ್ಲ. ಬಹುಶಃ ಏನಿರಬಹುದೆಂದು ಊಹಿಸಿಕೊಳ್ಳಲು ಸಾಧ್ಯವಾಗ ಬಹುದು. ಹೀಗೆ ಗುರುತಿಸಿಕೊಳ್ಳುವ ಸರಳ ಕಥೆಗಳನ್ನು ಮುದ್ರಿತ ರೂಪದಲ್ಲಿ ಪುನಃ ಅವನ್ನು ಪ್ರಚಾರಕ್ಕೆ ತರಬಹುದಾಗಿದೆ.

ಈಗ ಆರ್ನೆ – ಥಾಮ್ಸನ್ನರ ಮಾದರಿಸೂಚಿ The Types of the Folktales ಹಾಗೂ ಭಾರತ ಕಥಾ ಮಾದರಿ ಸೂಚಿಇವನ್ನು ಆಧಾರವಾಗಿಟ್ಟುಕೊಂಡು ಸರಳ ಕಥೆಗಳು ಹೇಗೆ ಸಂಕೀರ್ಣಗೊಳ್ಳುತ್ತವೆ, ‘ಕಥಾಘಟಕಗಳ’ ‘ಸರಳಕಥಾರೂಪ’ಗಳು ಹೇಗಿವೆ, ಸರಳಕಥೆಗಳು ಹೇಗೆ ತಮ್ಮ ಪ್ರಾರಂಭದ ಮತ್ತು ಕೊನೆಯ ವಿವರಗಳನ್ನು ಕಳೆದುಕೊಂಡು ಕಥಾಘಟಕ ಗಳಾಗುತ್ತವೆ ಹಾಗೂ ಮಾದರಿ ಸೂಚಿಯಲ್ಲಿ ಅನೇಕ ಗೊಂದಲಗಳು ಹೇಗೆ ಕಾಣಿಸಿಕೊಳ್ಳುತ್ತವೆ. ಈ ಗೊಂದಲಗಳಿಗೆ ಮಾದರಿ ಸೂಚಿ ತಯಾರಿಸಿಕೊಳ್ಳುವ ಅಂತರರಾಷ್ಟ್ರೀಯದೃಷ್ಟಿ ಹೇಗೆ ಕಾರಣವಾಗಿದೆ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕೆಲ ಉದಾಹರಣೆಗಳನ್ನು ಮೇಲೆ ಉಲ್ಲೇಖಿಸಿದ ‘ಕಥಾಮಾದರಿ ಸೂಚಿ’ ಗಳಿಂದಲೇ ಗಮನಿಸಬಹುದಾಗಿದೆ.

ಕಥೆಯ ಸಂಕೀರ್ಣ ಸ್ವಭಾವದಿಂದಾಗಿ ಸ್ಟಿಥ್ ಥಾಮ್ಸನ್ನರೇ ಒಂದು ಕಥೆಯನ್ನು ಎರಡಾಗಿ, ಎರಡು ಕಥೆಗಳನ್ನು ಒಂದಾಗಿ ಗಮನಿಸಿದ ಉದಾಹರಣೆಗಳು ನಮಗೆ ಆರ್ನೆ – ಥಾಮ್ಸನ್ ಮಾದರಿ ಸೂಚಿಯಲ್ಲಿ ದೊರೆಯುತ್ತವೆ. ಭಾರತೀಯ ಕಥಾಮಾದರಿ ಸೂಚಿಯಲ್ಲಿ ೧೦೦೦ ಕರಾರು: ಸಿಟ್ಟು ಮಾಡಬಾರದು’ (ದುಡಿಯಲು ಸಾಕೆನ್ನಬಾರದು) ಹಾಗೂ ೧೦೦೦ಎ : ಬ್ರಾಹ್ಮಣ ( ಮಾಲಿಕ) ನೂ ಹಾಗೂ ಅವನ ಸೇವಕನುಎಂದು ಎರಡು ಪ್ರತ್ಯೇಕ ಮಾದರಿಗಳನ್ನು ಥಾಮ್ಸನ್ನರು ಗುರುತಿಸಿದ್ದಾರೆ. ಹೀಗೆ ಗುರುತಿಸಲು ಅವರು ಒಂದಿಷ್ಟು ವಿವರಣೆಯನ್ನು ಕೊಟ್ಟು ಸಮರ್ಥಿಸಿಕೊಳ್ಳುತ್ತಾರೆ. ಈ ಕಥೆಯ ಸಾರಾಂಶ ಇಷ್ಟಿದೆ: ಮಾಲೀಕನು ಆಳಿಗೆ ಎಲೆಯ ತುಂಬ ಅನ್ನ, ಡೊಣ್ಣಿಯ ತುಂಬ ಸಾರು, ಕುಂಡಿ ತುಂಬ ಬಟ್ಟೆ ಪೂರೈಸಲಾಗುತ್ತದೆ ; ದುಡಿಯಲು ಸಾಕೆಂದರೆ ಕುಂಡಿಯ ತೊಗಲನ್ನು ಕೊಯ್ದು ಕೊಡಬೇಕು ಎಂಬ ಕರಾರಿನ ಮೇಲೆ ದುಡಿಯಲು ಇಟ್ಟುಕೊಳ್ಳುತ್ತಾನೆ. ಈ ತೊಂದರೆಯನ್ನು ಸಹಿಸದ ಅನೇಕ ಜನ ಆಳುಗಳು ಸೋಲಲು, ಅವರ ಕುಂಡಿಯ ತೊಗಲನ್ನು ಕೊಯ್ದುಕೊಂಡಿರುತ್ತಾನೆ. ಕೊನೆಗೆ ಒಬ್ಬ ಆಳು ಈತನಲ್ಲಿಗೆ ಮುದ್ದಾಮ ಬಂದು, ಮಾಲೀಕನಿಗೆ ಕಾಡಿಸಲು ಪ್ರಾರಂಭಿಸುತ್ತಾನೆ. ಮಾಲೀಕ ಈತನಿಗೆ ಹೇಗಾದರೂ ಮಾಡಿ ಕೊನೆಗಾಣಿಸಬೇಕೆಂದು ಮಗಳ ಮನೆಗೆ ಕರೆದುಕೊಂಡು ಹೊರಡುತ್ತಾನೆ : ದಾರಿಯಲ್ಲಿ ೧) ಕುದುರೆಯ ಹಿಂದೆ ಬಿದ್ದುದನ್ನು ನೋಡುತ್ತಾ ಬಾ ಎನ್ನಲು ಪೂಜೆಯ ಸಾಮಾನುಗಳನ್ನು ಬಿದ್ದರೂ ನೋಡುತ್ತ ಬರುವುದು, (೨) ಬಿದ್ದುದನ್ನು ತಾ ಎನ್ನಲು ಲದ್ದಿಯನ್ನು ಎತ್ತಿ ಕೊಡುವುದು, (೩) ರಾತ್ರಿ ಮಲಗಿದಾಗ ಕೊಲ್ಲಬೇಕೆಂದು ಹೊಂಚು ಹಾಕಿದಾಗ ತನ್ನ ಹಾಸಿಗೆಗೆ ಪ್ರಾಣಿಯನ್ನು ಬದಲಾಯಿಸಿ ಪಾರಾಗುವುದು, (೪) ನೀನು ದುಡಿಯುವುದು ಸಾಕೆನ್ನಲು ಮಾಲಿಕನ ಕುಂಡಿಯ ತೊಗಲನ್ನೇ ಕೊಯ್ದುಕೊಂಡು ಪಾಠ ಕಲಿಸುವುದು. ಈ ವಿವರಣೆಯುಳ್ಳ ಮಾದರಿಗೆ ೧೦೦೦ ಸಂಖ್ಯೆಯನ್ನು ಕೊಟ್ಟಿದ್ದಾರೆ. ೧೦೦೦ಎಕಥೆಯೂ ಇದೇ ಆಗಿದ್ದು, ಅದನ್ನು ಪ್ರತ್ಯೇಕವಾಗಿ ಗುರುತಿಸಲು ಅವರು ಕೊಡುವ ಕಾರಣ ಎಂದರೆ ಸೇವಕನನ್ನು ಕೊಲ್ಲಲು ಯೋಚನೆ ಮಾಡಿದ ಮಾಲೀಕ, ಅವನನ್ನು ಕೊಲ್ಲುವಂತೆ ಪತ್ರ ಬರೆದು ಅವನಿಂದಲೇ ಕಳಿಸುತ್ತಾನೆ. ಈ ಒಂದು ಭಿನ್ನವಾದ ಆಶಯದಿಂದಲೇ ಆ ಕಥೆಯನ್ನು ಪ್ರತ್ಯೇಕ ಮಾದರಿಯೆಂದು ಗಣಿಸಿದ್ದು ಇಲ್ಲಿ ಗಮನಾರ್ಹ.

ಥಾಮ್ಸನ್ನರ ಈ ಆಲೋಚನೆ ಸರಿಯಾದುದಲ್ಲ ಎನಿಸುತ್ತದೆ. ಕಾರಣವೆಂದರೆ ಅವರು ಭಾರತೀಯ ಮೂಲದ ಈ ಕಥೆಯನ್ನು ತಿಳಿದುಕೊಳ್ಳಲು ವಿಫಲರಾಗಿರುವುದು. ಇದು ಮೂಲಭೂತವಾಗಿ ಒಂದೇ ಕಥೆಯಾಗಿದ್ದು, ನಾವು ಉದ್ದಕ್ಕೂ ಈ ಕಥೆಯನ್ನು ಗಮನಿಸಿದರೆ ಅದರ ಬೆಳವಣಿಗೆ ರಂಜನೀಯವಾಗಿದೆ. ಆದರೆ ಸೇವಕನನ್ನು ಕೊಲ್ಲುವಂತೆ ಪತ್ರ ಬರೆದು, ಸ್ವತಃ ಅವನಿಂದಲೇ ಅದನ್ನು ಕಳಿಸುವ ಆಶಯ ತೀರ ಗಂಭೀರವಾದದ್ದಾಗಿದೆ. ಹೀಗಾಗಿ ಈ ಆಶಯ ಬೇರೆಡೆಯಿಂದ ಬಂದು ಸೇರಿಕೊಂಡಿರಬೇಕೆಂಬುದು ಮೇಲು ನೋಟಕ್ಕೆ ಗೋಚರಿಸುವ ಸಂಗತಿಯಾಗಿದೆ. ಮಾದರಿ ೯೩೦: ಹಣೆಬರಹ ಅಥವಾ ಭವಿಷ್ಯಎಂಬ ಮಾದರಿಯಲ್ಲಿ ನಾಯಕ ಮುಂದೆ ರಾಜನಾಗಲಿರುವ ಭವಿಷ್ಯ ಹೊಂದಿ, ಅವನನ್ನು ಕೊಲ್ಲಲು ಮಾಡುವ ಗಂಭೀರ ಪ್ರಯತ್ನಗಳಲ್ಲಿ ಇದೂ ಒಂದಾಗಿದೆ. ಮತ್ತು ಇದು ಅಲ್ಲಿಯ ಸಂದರ್ಭಕ್ಕೆ ತಕ್ಕಂತದ್ದೆನಿಸುತ್ತದೆ. ಮೇಲಾಗಿ ಪತ್ರದ ಪ್ರಸ್ತಾಪವೇ ಲಿಖಿತ ಮೂಲದಿಂದ ಬಂದು ಸೇರಿದ ಆಶಯವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಥಾಮ್ಸನ್ನರು ಸರಳವಾದ ಒಂದೇ ಕಥೆಯನ್ನೇ ಎರಡೆಂದು ಗ್ರಹಿಸಿದ್ದಾರೆ ಎಂದು ಹೇಳಬಹುದಾಗಿದೆ.

ಈ ಇಡೀ ಕಥೆಯೇ ೬೫೦ಎ೧ ಸಂಖ್ಯೆಯ ‘ಬಲಿಷ್ಠ ಜಾನ್’(Strong John) ಮಾದರಿಯ ಒಂದು ಘಟಕವಾಗಿ ಬಿತ್ತರಿಸಿದ್ದು ಆರ್ನೆ – ಥಾಮ್ಸನ್ ಮಾದರಿ ಸೂಚಿಯಲ್ಲಿ ದಾಖಲಾಗಿದೆ. ಅಲ್ಲಿ ‘ಬಲಿಷ್ಠ ಜಾನ್’ ಗೈಯ್ಯುವ ಅನೇಕ ಘಟನೆಗಳಲ್ಲಿ ಇದೂ ಒಂದು ಘಟನೆಯಾಗಿ ಸೇರಿದೆ.

ಈ ಮೇಲಿನ ಎರಡು ಉದಾಹರಣೆಗಳಿಂದ ಇಲ್ಲಿ ಗಮನಿಸಬೇಕಾದ ಅಂಶಗಳು ಎರಡು: (೧) ಒಂದೇ ಒಂದು ಹೊರಗಿನ ಆಶಯ ನುಸುಳಿ ಒಂದು ಕಥೆಯನ್ನು ಎರಡಾಗಿ ಗ್ರಹಿಸಲು ಕಾರಣವಾಗಿದೆ. (೨) ಒಂದು ಕಥೆ ಮತ್ತೊಂದು ಕಥೆಯ ಒಂದು ಘಟನೆಯಾಗಿ ಮಾರ್ಪಾಟು ಹೊಂದಿದೆ.

ಈ ಎರಡೂ ಕಾರಣಗಳಿಂದಾಗಿ ಬೇರೆ ಬೇರೆಯಾದ ಎರಡು ಕಥೆಗಳಲ್ಲಿ ಸಂಕೀರ್ಣತೆ ತಲೆಹಾಕಿದೆ. ಕಥೆಗಳ ವ್ಯಾಪಕವಾದ ಅಧ್ಯಯನದಿಂದ ಈ ಸಂಕೀರ್ಣತೆಗಳನ್ನು ಅರಿಯಲು ಮತ್ತು ಬಿಡಿಸಿಕೊಳ್ಳಲು ಸಾಧ್ಯವಿದೆ. ಆಶಯಗಳ ಸಂದರ್ಭಗಳನ್ನು ಅರಿತರೆ, ಇಂತಹ ಆಶಯ ಇಲ್ಲೇ ಬರಲು ಸಾಧ್ಯವಿದೆ ಎಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಈ ಕಥೆಯಲ್ಲಿ ನುಸುಳಿ ಬಂದ ‘ತನ್ನ ಕೊಲೆಯ ಸೂಚನೆಯನ್ನು ಹೊತ್ತ ಪತ್ರವನ್ನು ತಾನೇ ಕೊಂಡೊಯ್ಯುತ್ತಿರುವ ಯುವಕ’ ಎಂಬ ಆಶಯ ೯೩೦: ಭವಿಷ್ಯಹಣೆಬರಹದಂತಹ ಗಂಭೀರ ಕಥೆಯಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿದೆ. ಆದರೆ ಒಬ್ಬ ದುಷ್ಟ ಮಾಲೀಕನಿಗೆ ಪಾಠ ಕಲಿಸುವ ಮತ್ತು ರಂಜನೆಯ ಗುಣಗಳುಳ್ಳ ಒಂದು ಕಥೆಯಲ್ಲಿ ಈ ಆಶಯ ಸಂದರ್ಭಕ್ಕೆ ಹೊಂದಿಕೊಳ್ಳದೆ, ಮಣ್ಣಿನ ಮಡಿಕೆಯ ಮೈಯಲ್ಲಿ ಸೇರಿಕೊಂಡ ಹರಳಿನಂತೆ ಪ್ರತ್ಯೇಕವಾಗಿ ಕಾಣಿಸುತ್ತದೆ. ಹಾಗೆಯೇ ೬೫೦ : ಬಲಿಷ್ಠ ಜಾನ್ ಕಥೆಯ ಒಂದು ಘಟಕವಾಗಿ ಇಡೀ ಕಥೆ ಸೇರ್ಪಡೆಯಾದದ್ದು, ಆತ ಗೈಯ್ಯುವ ಅನೇಕ ಘಟನೆಗಳಲ್ಲಿ ಒಂದಾಗಿ. ಆದರೆ ನಮ್ಮಲ್ಲಿ ಈ ಕಥೆ ಪ್ರತ್ಯೇಕವಾಗಿ ಹೇಳುವ ಒಂದು ಪರಂಪರೆಯೇ ಇರುವುದರಿಂದ ಇದರ ಪ್ರತ್ಯೇಕತೆಯನ್ನು ಗುರುತಿಸಲು ಸಾಧ್ಯವಿದೆ. ಅಂದರೆ ಸ್ವತಂತ್ರ ಅಸ್ತಿತ್ವ ಹೊಂದಿದ ಒಂದು ಕಥೆ, ಒಂದು ಕಥಾಘಟಕವಾಗಿ ಪರಿವರ್ತನೆ ಹೊಂದಿ, ಬೇರೊಂದು ಕಥೆಯಲ್ಲಿ ಹೇಗೆ ಸೇರಿಕೊಳ್ಳುತ್ತದೆ ಎಂಬ ಮಹತ್ವದ ಅಂಶ ಇಲ್ಲಿ ಗೊತ್ತಾಗುತ್ತದೆ.

ಹೀಗೆ ಸ್ವತಂತ್ರ ಅಸ್ತಿತ್ವ ಹೊಂದಿರಬಹುದಾದ ಸೂಚನೆಗಳನ್ನು ಹೊತ್ತ ಅನೇಕ ಕಥಾಘಟಕಗಳು ಒಂದರೊಡನೊಂದು ಕೂಡಿ, ಈಗ ಪ್ರಚಲಿತದಲ್ಲಿರುವ ಅನೇಕ ಪ್ರಸಿದ್ಧ ಸಂಕೀರ್ಣಕಥೆಗಳು ರೂಪುಗೊಂಡಂತೆ ತೋರುತ್ತವೆ. ಉದಾಹರಣೆಗೆ :

.ಕಥಾಘಟಕ ಒಂದು :ಇರಳುಗಣ್ಣಿನ ಅಳಿಯ ಅತ್ತೆಯ ಮನೆಯಲ್ಲಿ ಫಜೀತಿಗೀಡಾಗುವುದು.

.ಕಥಾಘಟಕ ಎರಡು :ಅತ್ತೆಯ ಮನೆಯಲ್ಲಿ ಮಾಳಿಗೆ ಮೇಲೆ ರಾತ್ರಿ ಉಪವಾಸ ಮಲಗಿದ ಅಳಿಯ, ಬೆಳಕಿಂಡಿಯಿಂದ ಅಡಿಗೆಮನೆ ಹೊಕ್ಕು ಫಜೀತಿಗೀಡಾಗುವುದು.

ಥಾಮ್ಸನ್ನರು ಈ ಎಡೂ ಘಟಕಗಳನ್ನು ಸೇರಿಸಿ, ಒಂದೇ ಕಥಾ ಮಾದರಿ ಎಂದು ಗ್ರಹಿಸಿ ೧೬೮೫ಎ ಸಂಖ್ಯೆಯಡಿ : Stupid Son – in – Law ಎಂದು ಕರೆದಿದ್ದಾರೆ. ಆದರೆ ನಮ್ಮಲ್ಲಿ ಈ ಎರಡೂ ಕಥಾಘಟಕಗಳೂ ಪ್ರತ್ಯೇಕ ಕಥೆಗಳಾಗಿ ಬಳಕೆಯಲ್ಲಿವೆ. ಇವೆರಡನ್ನೂ ಕೂಡಿಸಿ, ಒಂದು ಕಥೆಯಾಗಿ ಹೇಳುವುದನ್ನು ನಾನು ಯಾವ ವಕ್ತಾರನಿಂದಲೂ ಕೇಳಿಲ್ಲ. ಅದಕ್ಕಾಗಿ ನನ್ನ ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಮಾದರಿ ಸೂಚಿಯಲ್ಲಿ ಇವೆರಡನ್ನೂ ಪ್ರತ್ಯೇಕವಾಗಿಯೇ ಗಣಿಸಿ, ೧೬೮೫ಎಹಾಗೂ ೧೬೮೫ಬಿ ಸಂಖ್ಯೆಗಳನ್ನು ಕೊಟ್ಟಿದ್ದೇನೆ.

ಥಾಮ್ಸನ್ನರು ಈ ಎರಡು ಕಥೆಗಳನ್ನು ಒಂದೇ ಕಥೆಯಾಗಿ ಗ್ರಹಿಸಲು ಎರಡು ಕಾರಣಗಳನ್ನು ಕೊಡಬಹುದು : (೧) ಎರಡೂ ಅತ್ತೆಯ ಮನೆಯಲ್ಲಿ ಅಳಿಯಎಂಬ ಸಂದರ್ಭಕ್ಕೆ ಸಂಬಂಧಿಸಿದ್ದು. (೨) ಯಾವನೋ ವಕ್ತಾರ ಅವುಗಳ ಸಂದರ್ಭದಿಂದಾಗಿ ಎರಡನ್ನೂ ಕೂಡಿಸಿಯೇ ಹೇಳಿದ್ದು, ಈ ಎರಡು ಕಾರಣಗಳಿಂದಾಗಿ ಥಾಮ್ಸನ್ನರಿಗೆ ಸ್ಥಳೀಯ ಕಥಾ ಸಂಪ್ರದಾಯವನ್ನು ಅರಿಯಲು ಸಾಧ್ಯವಾಗಿಲ್ಲ. ಹೀಗಾಗಿ ಎರಡನ್ನೂ ಕೂಡಿಸಿ ಒಂದೇ ಕಥೆಯಾಗಿ ಗ್ರಹಿಸಿದ್ದಾರೆ. ಇಲ್ಲಿ ಮತ್ತೆ ಗಮನಿಸಬೇಕಾದ ಅಂಶಗಳೆಂದರೆ : ೧. ವಸ್ತು, ಸಂದರ್ಭದ ಹೋಲಿಕೆಯಿಂದಾಗಿ ವಕ್ತಾರರು ಕಥೆಗಳನ್ನು ಪೋಣಿಸಿ ಹೇಳುತ್ತಾರೆ (೨) ಹೀಗೆ ಕಥೆಗಳು ಒಂದಾದ ನಂತರ ಒಂದು ಕೂಡುವಲ್ಲಿ ಸ್ವತಂತ್ರವಾಗಿ ಪಡೆದ ರೂಪದ ವಿವರಣೆಗಳಲ್ಲಿ ಕೆಲ ವಿವರಣೆಗಳನ್ನು ಕಳೆದುಕೊಂಡು ಕಥಾಘಟಕಗಳಾಗಿ ರೂಪು ಪಡೆಯುತ್ತವೆ ಎಂಬುದು.

ಇದನ್ನೆಲ್ಲ ಅರಿಯಬೇಕಾದರೆ ಸ್ಥಳೀಯ ಮಟ್ಟದಲ್ಲಿ ಕಥೆಗಳ ಅಧ್ಯಯನ ನಡೆಯ ಬೇಕಾದುದು ಅವಶ್ಯ. ಇದರಿಂದ ಜನಪದ ಕಥೆಗಳು ಮೂಲದಲ್ಲಿ ಹೇಗೆ ಸರಳ ರೂಪ ಪಡೆದಿ ದ್ದವು, ಅವು ಬರಬರುತ್ತ ವೌಖಿಕ ಸಂಪ್ರದಾಯದಲ್ಲಿ ಹೇಗೆ ಸಂಕೀರ್ಣ ರೂಪಕ್ಕೆ ವಾಲಿದವು ಎಂಬ ಇತಿಹಾಸ ಕಂಡುಕೊಳ್ಳಲು ಸಾಧ್ಯವಿದೆ. ಈ ಕಥೆಗಳನ್ನೆಲ್ಲ ಪುನರ್ ಅಭ್ಯಾಸಕ್ಕೆ ಅಳವಡಿಸಿ ದರೆ, ಅವುಗಳ ಸರಳ ರೂಪಗಳನ್ನು ಪತ್ತೆ ಹಚ್ಚಲು ಇಲ್ಲವೆ ಪುನಾರಚಿಸಿಕೊಳ್ಳಲು ಸಾಧ್ಯವಿದೆ.

ಈ ಹಿನ್ನೆಲೆಯಲ್ಲಿ ಆರ್ನೆ – ಥಾಮ್ಸನ್ನರ ಮಾದರಿ ಸೂಚಿಯಿಂದ ಇನ್ನೊಂದು ಬಗೆಯ ಉದಾಹರಣೆಯನ್ನು ಗಮನಿಸಬಹುದಾಗಿದೆ : ಅವರು ಗುರುತಿಸುವ ‘1313A: The man takes seriously the prediction of death ‘ ಎಂಬ ಮಾದರಿಯಲ್ಲಿ ಮೂರು ಮುಖ್ಯ ಕಥಾಘಟಕಗಳಿವೆ :

೧. ಟೊಂಗೆಯ ತುದಿಗೆ ಕುಳಿತು ಅದರ ಬೊಡ್ಡೆ ಕಡಿಯುತ್ತಿರುವ ಮೂರ್ಖ.

೨. ತನ್ನಷ್ಟಕ್ಕೆ ತಾನು ಸತ್ತಂತೆ ತಿಳಿದುಕೊಂಡವನು.

೩. ಮೂರ್ಖನು ಕಳ್ಳರ ಸಂಗದಲ್ಲಿ ಕಳ್ಳತನಕ್ಕೆ ಹೋಗುವುದು, ಫಜೀತಿಗೀಡಾಗುವುದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಥಾಮ್ಸನ್ನರೇ ಈ ಮೂರು ಕಥಾಘಟಕಗಳನ್ನು ಪ್ರತ್ಯೇಕ ಮಾದರಿಗಳಾಗಿಯೂ ಗುರುತಿಸಿದ್ದು ಅವರ ಮಾದರಿ ಸೂಚಿಯಲ್ಲಿಯೇ ಕಂಡುಬರು ತ್ತದೆ. ಕ್ರಮವಾಗಿ ಆ ಮಾದರಿ ಸಂಖ್ಯೆಗಳು ಹೀಗಿವೆ : ೧೨೪೦, ೧೩೧೩, ೧೬೯೨.

ನಮಗಿಲ್ಲಿ ಬೇಕಾದ ಅಂಶವೆಂದರೆ – ಒಂದೇ ವೇಳೆಗೆ ಪ್ರತ್ಯೇಕವಾಗಿ ಮೂರು ಸರಳ ಕಥೆಗಳು ಪ್ರಚಲಿತದಲ್ಲಿರುವುದು ಮತ್ತು ಅದೇ ವೇಳೆಗೆ ಆ ಮೂರು ಕಥೆಗಳು ಕೂಡಿ ಒಂದು ಸಂಕೀರ್ಣ ಕತೆಯಾಗಿ ರೂಪುಗೊಂಡು ಪ್ರಚಲಿತಗೊಂಡುದು. ಇಂಥಲ್ಲಿ : ೧) ಸ್ವತಂತ್ರ ಕಥೆಗಳು ಹೇಗಿರುತ್ತವೆ, ೨) ಅವು ಪರಸ್ಪರ ಕೂಡುವಾಗ ತಮ್ಮ ಕೆಲ ವಿವರಗಳನ್ನು ಕಳೆದು ಕೊಂಡು ಹೇಗೆ ಕಥಾಘಟಕಗಳಾಗಿ ಪರಿವರ್ತನೆ ಹೊಂದುತ್ತವೆ. ೩) ಈ ಕಥಾಘಟಕಗಳಿಂದ ಸಂಕೀರ್ಣ ಕಥೆಗಳು ಹೇಗೆ ನಿರ್ಮಾಣವಾಗುತ್ತವೆ ಎಂಬ ಅಂಶಗಳೂ ತಿಳಿದುಬರುತ್ತವೆ. ಇದರಿಂದ ಕಥಾಘಟಕಗಳ ಸೃಷ್ಟಿ ಮತ್ತು ಸ್ವರೂಪಗಳನ್ನು ಅರಿಯಲು ನಮಗೆ ಸಾಧ್ಯವಾಗುತ್ತದೆ.

ಈ ನಡುವೆ ನಮಗೆ ತಿಳಿದುಬರುವ ಇನ್ನೊಂದು ಮುಖ್ಯ ಅಂಶವೆಂದರೆ, ಸರಳ ಕಥೆಗಳು ಕೆಲ ವಿವರಗಳನ್ನು ಕಳೆದುಕೊಂಡು, ಪರಸ್ಪರ ಕೂಡುವಾಗ ಅಲ್ಲಿ ಕೆಲವು ಹೊಸ ವಿವರಗಳು ಬೆಳೆದುಕೊಳ್ಳುತ್ತವೆ. ಇವುಗಳ ಕೆಲಸವೆಂದರೆ ಒಂದು ಘಟಕವನ್ನು ಇನ್ನೊಂದು ಘಟಕದ ಜೊತೆಗೆ ಬೆಸೆಯುವುದು. ಇವುಗಳನ್ನು ನಾನು ಕೊಂಡಿ (Connectives)ವಿವರಗಳೆಂದು ಕರೆಯುತ್ತೇನೆ. ಈ ಜೋಡಣೆಗಳು ಕೆಲವು ಮಾತಿನ ವಿವರಗಳಾಗಿರಬಹುದು ಅಥವಾ ಆಶಯವಾಗಿರಬಹುದು. ಉದಾಹರಣೆಗೆ : ‘‘ಟೊಂಗೆಯ ಮೇಲೆ ಕುಳಿತು ಬೊಡ್ಡೆ ಕಡಿಯುವಾತನಿಗೆ ದೇವರು ಮನುಷ್ಯ ವೇಷದಲ್ಲಿ ಬಂದು ‘ನೀನು ಬೀಳುತ್ತಿ’ ಎಂದು ಹೇಳಿದನು. ಅವನ ಮಾತನ್ನು ಕೇಳದೆ ಟೊಂಗೆಯನ್ನು ಕಡಿದುದರಿಂದ ಬಿದ್ದ ಮೂರ್ಖ, ಆತ ನಿಜ ಹೇಳುತ್ತಾನೆಂದು ಬಗೆದು, ‘ನಾನು ಎಂದು ಸಾಯುವೆ’ ಎಂದು ಕೇಳಿದನು. ಆತ ಸುಮ್ಮನೆ – ‘ಹೊಟ್ಟೆಗೆ ದಾರ ಕಟ್ಟಿಕೊಂಡು, ಚಟಿಗೆ ನುಚ್ಚುಂಡು ಮಜ್ಜಿಗೆ ಕುಡಿದಾಗ, ದಾರ ಕಡಿದರೆ ಅಂದೇ ಸತ್ತಂತೆ’ ಎಂದು ಹೇಳಿದನು. ಹಾಗೆ ಆಗಲು, ಸತ್ತೆನೆಂದು ತಿಳಿದು ಸ್ಮಶಾನದಲ್ಲಿ ಹೋಗಿ ಕುಳಿತನು. ಅಲ್ಲಿ ರಾತ್ರಿ ಕಳ್ಳರ ಕೈಯಲ್ಲಿ ಸಿಕ್ಕಿಹಾಕಿಕೊಂಡನು. ಅವರು ಇವನನ್ನು ಕಳ್ತನಕ್ಕಾಗಿ ಉಪಯೋಗಿಸಿಕೊಳ್ಳಲು ಹೋದಾಗ ಫಜೀತಿಗೀಡಾದನು.’’ ಇಲ್ಲಿ ಪ್ರತ್ಯೇಕವಾದ ಮೂರು ಘಟಕಗಳು ಕೂಡಿಕೊಳ್ಳುವಲ್ಲಿ – ಶಿವನು ಮಾನವ ವೇಷದಲ್ಲಿ ಬಂದು ಅವನೊಂದಿಗೆ ವ್ಯವಹರಿಸಿದ ಘಟನೆ ಕೆಲಸ ಮಾಡಿದೆ.

ನನ್ನ ಗಮನಕ್ಕೆ ಬಂದಂತೆ, ನಮ್ಮಲ್ಲಿ ಈ ಮೂರು ಘಟಕಗಳನ್ನು ಕೂಡಿಸಿಯೇ ಒಂದು ಕಥೆಯಾಗಿ ಹೇಳುವ ಸಂಪ್ರದಾಯವಿದೆ. ಆದರೆ ಈ ಮೂರನ್ನು ಪ್ರತ್ಯೇಕವಾಗಿ ಹೇಳುವ ಸಂಪ್ರದಾಯವಿದೆ ಎಂದು ನನ್ನ ಗಮನಕ್ಕೆ ಬಂದುದು ಥಾಮ್ಸನ್ನರ ಸೂಚಿಯಿಂದಲೇ. ಇಂತಹ ಅಂಶಗಳನ್ನು ಗಮನಿಸಿ, ನಮ್ಮ ಶೋಧವನ್ನು ಮತ್ತೆ ಮುಂದುವರೆಸಬೇಕಾಗುತ್ತದೆ.

ಈ ಮೇಲಿನ ಉದಾಹರಣೆಯಲ್ಲಿ ಮೂರು ಪ್ರತ್ಯೇಕ ಮಾದರಿಗಳ ಉಲ್ಲೇಖ ಮತ್ತು ಆ ಮೂರೂ ಮಾದರಿಗಳು ಕೂಡಿಕೊಂಡು ನಿರ್ಮಾಣವಾದ ಒಂದು ಮಾದರಿಯ ಉಲ್ಲೇಖ – ಈ ಎರಡನ್ನೂ ಆರ್ನೆ – ಥಾಮ್ಸನ್ ಮಾದರಿ ಸೂಚಿಯಲ್ಲಿ ಕಾಣುತ್ತೇವೆ. ಆದರೆ ನಮ್ಮಲ್ಲಿ ಪ್ರತ್ಯೇಕವಾಗಿ ಪ್ರಚಲಿತದಲ್ಲಿದ್ದ ಮತ್ತು ಕೂಡಿಸಿಯೂ ಒಂದಾಗಿ ಹೇಳುವ ಸಂಪ್ರದಾಯವಿದ್ದ ಮೂರು ಕಥೆಗಳನ್ನು ಥಾಮ್ಸನ್ನರು ತಮ್ಮ ಮಾದರಿ ಸೂಚಿಯಲ್ಲಿ ಪ್ರತ್ಯೇಕವಾಗಿ ಸೂಚಿಸುವ, ಆದರೆ ಅವನ್ನು ಕೂಡಿಸಿ ಹೇಳಿದ ಮಾದರಿಯನ್ನು ಸೂಚಿಸದೇ ಇರುವ ಒಂದು ಉದಾಹರಣೆ ಯನ್ನು ಕೊಟ್ಟು ಈ ಚರ್ಚೆ ನಿಲ್ಲಿಸುತ್ತೇನೆ.

 ನರಿ ಹಾಗೂ ಮೊಸಳೆಗೆ ಸಂಬಂಧಪಟ್ಟಂತಹ ಮೂರು ಮಾದರಿಗಳು ಹೀಗಿವೆ :

೯೧. ಎದೆಯ ಕಾಳಜವನ್ನು ಗಿಡದಲ್ಲಿ ಬಿಟ್ಟು ಬಂದ ಮಂಗ ( ನರಿ )

೫. ಹಿಂಬಡಿಯನ್ನು ಕಚ್ಚಿ ಹಿಡಿಯುವುದು.

೬೬. ಓಗೊಡು ಮನೆ.

ಇವನ್ನು ನಮ್ಮಲ್ಲಿ ಪ್ರತ್ಯೇಕವಾಗಿ ಮತ್ತು ಕೂಡಿಸಿ ಎರಡೂ ರೀತಿಯಲ್ಲಿ ಹೇಳುತ್ತಾರೆ. ಥಾಮ್ಸನ್ನರಲ್ಲಿ ಇನ್ನೊಂದು ವಿಚಿತ್ರವೂ ನಡೆದು ಹೋಗುತ್ತದೆ. ಒಂದೇ ಕಥೆಯನ್ನು ಮೂರು ಕಡೆ ಬೇರೆ ಬೇರೆಯಾಗಿ ಪ್ರತ್ಯೇಕ ಮಾದರಿಗಳೆಂಬಂತೆ ಉಲ್ಲೇಖಿಸುತ್ತಾರೆ : ೧೭೦ಎ : ಜಾಣ ಪ್ರಾಣಿ ಹಾಗೂ ಭಾಗ್ಯಶಾಲಿ ಬದಲಾವಣೆಗಳು(ಬಾಲ ಹೋಗಿ ಕತ್ತಿ ಬಂತು ಡುಂಡುಂ) ಎಂಬುದನ್ನು ೨೦೨೯ಸಿ: ಇಲಿಯು ಒಂದರ ಬದಲಿಗೆ ಮತ್ತೊಂದರಂತೆ ಅನೇಕ ವಸ್ತುಗಳನ್ನು ಪಡೆಯುವುದು ಹಾಗೂ ೨೦೩೭ಎ: ಉಪಾಯದ ಅನೇಕ ಬದಲಾವಣೆಗಳು’. ಹೀಗೆ ಒಂದೇ ಕಥೆ ಮೂರು ಕಡೆ ಪ್ರತ್ಯೇಕ ಪ್ರತ್ಯೇಕ ಸಂಖ್ಯೆಗಳೊಂದಿಗೆ ನಮೂದಾಗಿರುವುದು ಕಂಡುಬರುತ್ತದೆ.

ಹೀಗೆ ಅನೇಕ ಕಾರಣಗಳಿಂದ ಮಾದರಿ ಸೂಚಿಯು ತೀರ ಸಂಕೀರ್ಣಗೊಂಡಿದೆ. ನಾವು ಕಥಾಘಟಕಗಳನ್ನು ಗುರುತಿಸಿಕೊಂಡು ಮತ್ತು ಸರಳ ಕಥೆಗಳ ಕಥಾಘಟಕಗಳನ್ನು ರಚಿಸಿಕೊಂಡು, ಹೊಸದಾಗಿ ‘ಕಥಾಘಟಕಗಳ ಮಾದರಿ ಸೂಚಿ’ಯೊಂದನ್ನು ತಯಾರಿಸಿ ಕೊಳ್ಳಲು ಸಾಧ್ಯವಿದೆ. ಈ ಕೆಲಸ ಮೊದಲು ಎಲ್ಲ ಕಡೆ ಸ್ಥಳೀಯವಾಗಿ ನಡೆಯಬೇಕು. ಹೀಗೆ ಪ್ರಾದೇಶಿಕ ಮಟ್ಟದಲ್ಲಿ ತಯಾರಾದ ‘ಕಥಾಘಟಕ ಮಾದರಿ ಸೂಚಿ’ಗಳನ್ನು ಬಳಸಿಕೊಂಡು, ಅಂತರರಾಷ್ಟ್ರೀಯ ಮಟ್ಟದ ಒಂದು ಸೂಚಿಯನ್ನು ತಯಾರಿಸಬಹುದಾಗಿದೆ. ಆಗ ಈಗಿರುವ ಆರ್ನೆ – ಥಾಮ್ಸನ್ ಮಾದರಿ ಸೂಚಿಯ ಅಸ್ತಿತ್ವ ತಾನೇ ಕಳಚಿ ಬೀಳುತ್ತದೆ.

* * *