ಜನಪದ ಮಹಾಕಾವ್ಯಗಳ ರಚನೆಗೆ ಸಂಬಂಧಿಸಿದಂತೆ ಅವುಗಳ ಶರೀರದ ಒಂದು ಸ್ಥೂಲವಾದ ರಚನಾಸ್ವರೂಪವನ್ನು ಹೇಳಲು ನನಗಿಲ್ಲಿ ಸಾಧ್ಯವಾಗಿದೆ. ಕನ್ನಡ ಜನಪದ ಸಾಹಿತ್ಯದಲ್ಲಿ ಈಗ ಪ್ರಕಟವಾಗಿರುವ ಕೆಲ ಬೃಹತ್ ಆಕಾರದ ಕಾವ್ಯಗಳು ದೊರೆಯುತ್ತವೆ. ಡಾಪಿ.ಕೆ.ರಾಜಶೇಖರ ಸಂಪಾದಿಸಿದ ‘ಮಲೆಯ ಮಾದೇಶ್ವರ’(೧೯೭೩), ‘ಜನಪದ ಬಸವ ಪುರಾಣ’(೧೯೮೧), ‘ಪಿರಿಯಾಪಟ್ಟಣದ ಕಾಳಗ’ (೧೯೯೦), ಡಾಜೀ.ಶಂ.ಪ. ಅವರು ಸಂಪಾದಿಸಿದ ‘ಶ್ರೀ ಮಂಟೇಸ್ವಾಮಿ ಕಾವ್ಯ’(೧೯೭೬) ಇವು ದಕ್ಷಿಣ ಕರ್ನಾಟಕದಲ್ಲಿ ದೊರೆತ ದೊಡ್ಡ ಪ್ರಮಾಣದ ಕಾವ್ಯಗಳು. ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದಿಂದ ‘ಜುಂಜಪ್ಪ’ (೧೯೯೭, ಸಂ. ಚೆಲುವರಾಜು), ‘ಮಲೆಮಾದೇಶ್ವರ’ (೧೯೯೭, ಸಂ. ಡಾಕೆ.ಕೇಶವನ್ ಪ್ರಸಾದ),’ಮಂಟೇಸ್ವಾಮಿ’ (೧೯೯೭, ಸಂ. ಹಿ.ಚಿ. ಬೋರಲಿಂಗಯ್ಯ) ಪ್ರಕಟಗೊಂಡಿವೆ. ಉತ್ತರಕರ್ನಾಟಕದಲ್ಲಿ ಡಾ ಎಂ.ಬಿ. ನೇಗಿನಹಾಳ ಅವರು ಸಂಪಾದಿಸಿದ ‘ಮೈಲಾರಲಿಂಗನ ಪದಗಳು’ (ಭಾಗ – ೧, ೨), ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯದಿಂದ ‘ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ’ (೧೯೯೭, ಸಂ. ಕೆ. ಎಂ. ಮೈತ್ರಿ ), ‘ಮೈಲಾರಲಿಂಗನ ಕಾವ್ಯ’ (೧೯೯೯, ಸಂ.ಡಾ ಮಂಜುನಾಥ ಬೇವಿನಕಟ್ಟಿ), ಕನ್ನಡ ಪುಸ್ತಕ ಪ್ರಾಧಿಕಾರದಿಂದ ‘ಜನಪದ ಹಾಲುಮತ ಮಹಾಕಾವ್ಯ’ (೨೦೦೦, ಸಂ.ವೀರಣ್ಣ ದಂಡೆ) ಎಂಬ ಕೃತಿಗಳು ಪ್ರಟವಾಗಿದ್ದು, ಎಲ್ಲಮ್ಮ ಪರಶುರಾಮರಿಗೆ ಸಂಬಂಧಪಟ್ಟ ಕಾವ್ಯ ಸಂಗ್ರಹಿಸಿ ಪ್ರಕಟಿಸಿದರೆ ಉತ್ತರ ಕರ್ನಾಟಕದಿಂದ ಸುಮಾರು ಮೂರು ದೊಡ್ಡ ಕಾವ್ಯಗಳನ್ನು ಕೊಡಬಹುದಾಗಿದೆ.

ಈಗ ನಮ್ಮ ಮುಂದಿರುವ ಮೊದಲ ಪ್ರಶ್ನೆ ಎಂದರೆ ಈ ಮೇಲೆ ಉಲ್ಲೇಖಿಸಿದವುಗಳಲ್ಲಿ ಮಹಾಕಾವ್ಯಗಳು ಯಾವುವು? ಎಂಬುದು. ಒಂದು ದೃಷ್ಟಿಯಿಂದ ಇವೆಲ್ಲ ಪುರಾಣ ಮಹಾಕಾವ್ಯಗಳು. ಮಹಾಕಾವ್ಯದ ಮಟ್ಟಕ್ಕೆ ಏರಬಲ್ಲವು ಯಾವುವು? ಅವುಗಳ ಸ್ವರೂಪ ವೇನು? ಗೊತ್ತುಗುರಿಗಳೇನು? ಈ ಮುಂತಾದ ಸಂಗತಿಗಳ ಕುರಿತು ನಮ್ಮಲ್ಲಿ ಚರ್ಚೆ ನಡೆಯ ಬೇಕಾಗಿದೆ. ಸಧ್ಯದ ಮಟ್ಟಿಗೆ ಈ ಮೇಲೆ ಉಲ್ಲೇಖಿಸಿದ ಎಲ್ಲ ಕಾವ್ಯಗಳನ್ನು ಇಲ್ಲಿ ಗಮನಿಸಲಾಗಿದೆ.

ಜನಪದ ಮಹಾಕಾವ್ಯಗಳ ರಾಚನಿಕ ಮತ್ತು ಸಂವಹನ ಸ್ವರೂಪಗಳು ಅವು ಪ್ರಯೋಗಗೊಳ್ಳುವ ಸಾಧ್ಯತೆಯನ್ನು ಅವಲಂಬಿಸಿವೆ :

೧. ವೌಖಿಕಪರಂಪರೆಯಲ್ಲಿ ಒಂದುಮಹಾಕಾವ್ಯವು ಸಂಪೂರ್ಣವಾಗಿ ಒಬ್ಬನಿಂದಲೇ ರಚಿತವಾಗಿರಲು ಸಾಧ್ಯವಿಲ್ಲ. ಒಂದು ಕಾವ್ಯದ ಒಂದೊಂದೇ ಭಾಗಗಳು ಸುದೀರ್ಘವೆನ್ನ ಬಹುದಾದ ಅವಧಿಯಲ್ಲಿ ಸೃಷ್ಟಿಗೊಂಡು, ಮತ್ತೆ ನಿರಂತರವಾಗಿ ಪುನರ್‌ಸೃಷ್ಟಿಗೊಳ್ಳುತ್ತ ಜೀವಂತವಾಗಿರುವ ಕಾವ್ಯಗಳಿವು. ಹೀಗಾಗಿ ಅವುಗಳ ರಚನೆಯ ಆಂತರ್ಯದಲ್ಲಿ ಒಂದು ಸುಸಂಗತತೆಯ ಕೊರತೆ ಎದ್ದು ಕಾಣುತ್ತದೆ. ಇದು ಒಟ್ಟಾರೆಯಾಗಿ ಜನಪದದ ಎಲ್ಲ ಬೃಹತ್ ಕಾವ್ಯಗಳಲ್ಲಿ ಕಂಡುಬರುವ ಅಂಶ.

೨. ಇವು ಹಾಡುವ ಕಾವ್ಯಗಳಾದುದರಿಂದ ಶ್ರೋತೃಗಳು ಎದುರಿಗೆ ಇರಲೇಬೇಕು. ಹಗಲು ಉದ್ಯೋಗ, ರಾತ್ರಿ ಮಾತ್ರ ಹಾಡು ಕೇಳಲು ಜನಪದರಿಗೆ ಸಾಧ್ಯ. ವಿಶೇಷವಾಗಿ ಜಾತ್ರೆ, ಉತ್ಸವಗಳಂತಹ ಸಂದರ್ಭಗಳಾದರೆ ನಿರಂತರವಾಗಿ ಒಂದೆರಡು ಹಗಲೂ ರಾತ್ರಿಯೂ ಹಾಡು ಕೇಳಲು ಸಾಧ್ಯವಾಗಬಹುದು.

೩. ಕಾವ್ಯದ ದೀರ್ಘತೆಯನ್ನು ಗಮನಿಸಿದರೆ, ನಿರಂತರವಾಗಿ ಒಂದು ಕಾವ್ಯವು ಸಂಪೂರ್ಣವಾಗಿ ಒಂದು ಕಡೆಯಲ್ಲಿ ಪ್ರಯೋಗಗೊಳ್ಳಲು ಸಾಧ್ಯವಾಗಲಾರದೆಂದೇ ಹೇಳಬೇಕು. ಇಲ್ಲಿ ಸಮಯ, ಹಾಡುಗಾರರ ಮಾನವ ಸಾಮರ್ಥ್ಯ, ಕೇಳುಗರ ಸಹನೆ, ಶ್ರದ್ಧೆಗಳು ಲೆಕ್ಕಕ್ಕೆ ಬರುತ್ತವೆ.

೪. ಜನಪದ ಮಹಾಕಾವ್ಯದ ನಾಯಕರು ಒಂದೊಂದು ಧರ್ಮ, ಒಂದೊಂದು ಪ್ರದೇಶಕ್ಕೆ ಸಂಬಂಧಪಟ್ಟವರಾಗಿರುತ್ತಾರೆ. ಆ ಪ್ರದೇಶದಲ್ಲಿ ಅವರ ವಾಸಸ್ಥಳದ ಗುರುತು – ಗುಡ್ಡ – ಗವಿ, ಗುಡಿ – ಗುಂಡಾರಗಳಿದ್ದು, ಜಾತ್ರೆ – ಉತ್ಸವಗಳು ನೆರವೇರುತ್ತಿರುತ್ತವೆ. ಮೈಸೂರು, ಮಂಡ್ಯ, ಬೆಂಗಳೂರು ಕಡೆಯಲ್ಲಿ ಮಲೆಯ ಮಾದೇಶ್ವರ, ಮಂಟೇಸ್ವಾಮಿ; ಬೆಳಗಾಂ, ಬಳ್ಳಾರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಮೈಲಾರಲಿಂಗ; ಧಾರವಾಡ, ಬೆಳಗಾಂ ಮತ್ತು ಬಿಜಾಪುರಗಳಲ್ಲಿ ಏಳುಕೊಳ್ಳದ ಎಲ್ಲಮ್ಮ ಹೀಗೆ ಪ್ರಾದೇಶಿಕ ಚೌಕಟ್ಟೊಂದು ಕಥಾನಾಯಕರ ಪ್ರಭಾವಕ್ಕೆ ಒಳಗಾಗಿರುತ್ತದೆ. ಹೀಗಾಗಿ ಆಯಾ ನಾಯಕರ ಕಥೆ ಅಷ್ಟೇ ಪ್ರದೇಶಕ್ಕೆ ಸೀಮಿತಗೊಂಡು ಪ್ರಸಾರವಾಗಿರುತ್ತದೆ. ಜೊತೆಗೆ ಕಾವ್ಯಕ್ಕೆ ಪ್ರಾದೇಶಿಕ ಭಾಷೆಯ ಹೊದಿಕೆಯೊಂದು ಇದ್ದೇ ಇರುತ್ತದೆ. ಆ ಭಾಗದಲ್ಲಿ ಆ ದೇವರ ಭಕ್ತಗಣವಿದ್ದು, ಹಾಡುಗರು ಮತ್ತು ಕೇಳುಗರು ಆ ಕಥಾನಾಯಕನಲ್ಲಿ ಶ್ರದ್ಧೆ ಉಳ್ಳವರಾಗಿರುತ್ತಾರೆ.

೫. ಮಹಾಕಾವ್ಯದ ಹಾಡುಗಾರರನ್ನು ಒಂದು ಪ್ರಾಂತದಿಂದ ಸ್ಥಳಾಂತರಿಸಿ ಬೇರೊಂದು ಪ್ರಾಂತದಲ್ಲಿ ಹಾಡಲು ಹಚ್ಚಿದರೆ ಅದರ ರಚನಾ ಸಾಧ್ಯತೆಗಳನ್ನು ಮ್ತು ಸಂವಹನ ಸಾಧ್ಯತೆಗಳನ್ನು ಮೀರಿ ಅು ಹೊರಬಂದಂತಾಗುತ್ತದೆ; ಶ್ರೋತೃಗಳಿಗೆ ಆ ಕಥೆ ತಿಳಿಯದು, ಅದರ ಬಗ್ಗೆ ಅವರ ಶ್ರದ್ಧೆ ಇರಲಾರದು, ಮೇಲಾಗಿ ಭಾಷಾ ತೊಡಕೂ ಕಾಣಿಸಿಕೊಳ್ಳುವುದು. ಹೀಗಾಗಿ ಪ್ರಾದೇಶಿಕ ಬದಲಾವಣೆ ಜನಪದ ಮಹಾಕಾವ್ಯದ ರಾಚನಿಕ ಚೌಕಟ್ಟು ಮತ್ತು ಸಂವಹನ ಸಾಧ್ಯತೆಗಳ ಮೇಲೆ ವಿಪರೀತ ಪರಿಣಾಮ ಬೀರುತ್ತದೆ. ಹೀಗೆ ಈ ಎರಡೂ ಸಂಗತಿಗಳು ಗೊತ್ತಾದ ಪ್ರದೇಶವನ್ನು ಅವಲಂಬಿಸಿರುತ್ತವೆ.

ಹೀಗೆ ಹಾಡುಗಾರರು ಎಷ್ಟು ವೇಳೆ ನಿರಂತರವಾಗಿ ಹಾಡಬಹುದು? ಕೇಳುಗರು ಎಷ್ಟು ಸಮಯ ನಿರಂತರವಾಗಿ ಆಲಿಸಬಹುದು? ಸಂದರ್ಭ ಮತ್ತು ಸ್ಥಳ ಯಾವುದು? ಹೀಗೆ ಹಾಡುಗಾರ, ಶ್ರೋತೃ, ಸಮಯ, ಸಂದರ್ಭ ಮತ್ತು ಸ್ಥಳ ಈ ಐದು ಅಂಶಗಳನ್ನು ಗಮನಿಸಿಯೇ ಕಾವ್ಯದ ಭಾಗಗಳ ರಚನೆ ಮತ್ತು ಅದರ ಸಂವಹನ ಸ್ವರೂಪಗಳು ನಿರ್ಧಾರಗೊಳ್ಳುತ್ತವೆ.

ಪ್ರತ್ಯೇಕ ಕಥಾನಕಗಳ ಸೃಷ್ಟಿ :

‘ಒಂದು ಬೈಠಕ್’, ಎಂದರೆ ನಾಲ್ಕರಿಂದ ಆರು ತಾಸು ಅರ್ಥಾತ್ ಒಂದು ಹಗಲು ಅಥವಾ ಒಂದು ರಾತ್ರಿ – ಹಾಡಬಹುದಾದ ದೀರ್ಘತೆಯಲ್ಲಿ ಮಹಾಕಾವ್ಯದ ಒಂದೊಂದು ಸಂಧಿ ಅಥವಾ ಭಾಗಗಳು ರಚನೆಗೊಂಡಂತೆ ತೋರುತ್ತವೆ. ಈ ನಡುವಿನ ವಿಶ್ರಾಂತಿಯ ನಂತರ ಪುನ: ಅದೇ ಶ್ರೋತೃಗಳು ( ಅಂದರೆ ಮೊದಲಿದ್ದ ಎಲ್ಲರೂ) ಅಲ್ಲಿರಲು ಸಾಧ್ಯವಿಲ್ಲ. ಇಲ್ಲಿ ಹೊಸದಾಗಿ ಹಾಜರಾದ ಶ್ರೋತೃಗಳಿಗೂ ಹಾಡು ಸ್ಪಂದಿಸಬೇಕೆಂದರೆ ಕಾವ್ಯ ಬಿತ್ತರಿಸುವ ಘಟನೆ ಮತ್ತು ಅದರ ರಚನೆ ಪರಿಪೂರ್ಣವಾಗಿರ ಬೇಕಾಗುತ್ತದೆ. ಹೀಗಾಗಿ ಮಹಾಕಾವ್ಯದ ಕಥಾನಕಗಳು (ಸಂಧಿಗಳು) ಪ್ರತ್ಯೇಕ ಅಸ್ತಿತ್ವ ಪಡೆದು ತಮ್ಮಷ್ಟಕ್ಕೆ ತಾವು ಪರಿಪೂರ್ಣ ವಾಗಿರುತ್ತವೆ. ಉದಾಹರಣೆಗೆ : ‘ಜನಪದ ಹಾಲುಮತ ಮಹಾಕಾವ್ಯ’ದಲ್ಲಿ – ಆದಿಗೊಂಡನ ಚರಿತ್ರೆ, ಮಾಳಿಂಗರಾಯನ ಚರಿತ್ರೆ, ಬೀರೇಶ್ವರ ಚರಿತ್ರೆ ಮುಂತಾದವುಗಳು. ಹೀಗೆಯೇ ಮಲೆಯ ಮಾದೇಶ್ವರ ಕಾವ್ಯದ ಅಧ್ಯಾಯಗಳನ್ನು, ‘ಶ್ರೀ ಮಂಟೇಸ್ವಾಮಿ ಕಾವ್ಯ’ದ ಧರೆಗೆ ದೊಡ್ಡವರ ವಚನ, ಸಿದ್ದಪ್ಪಾಜಿ ವಚನ, ರಾಚಪ್ಪಾಜಿ ವಚನ, ಸಿದ್ದಯ್ಯಸ್ವಾಮಿ ವಚನ ಹೀಗೆ ಪ್ರತ್ಯೇಕ ಪ್ರತ್ಯೇಕ ಕಥಾಭಾಗಗಳೇ ಇದ್ದು, ಇವುಗಳ ರಚನೆಯೂ ಪ್ರತ್ಯೇಕವಾಗಿಯೇ ಆಗಿರುತ್ತದೆ. ಇಲ್ಲೆಲ್ಲ ಪ್ರಾರಂಭದ ಸ್ತುತಿ, ನಂತರ ಕಾವ್ಯವಸ್ತುವಿನ ಬೆಳವಣಿಗೆ, ಕೊನೆಗೆ ಮುಕ್ತಾಯದ ಗುರುತುಗಳನ್ನು ಕಾಣುತ್ತೇವೆ. ್ರತ್ಯೇಕ ಅಸ್ತಿತ್ವ ಹೊಂದಿದ ಈ ಕಥಾನಕಗಳ ಒಳಗಡೆ ಮತ್ತೆ ಅಲ್ಲಲ್ಲಿ ನಿಲುಗಡೆಗಳಿರುತ್ತವೆ. ಅಂದರೆ ಒಂದು ದಮ್ಮು ಹಾಡಿದ ನಂತರ ವಿರಾಮಕ್ಕಾಗಿ ಕಾವ್ಯವನ್ನು ಅಲ್ಲಲ್ಲಿ ನಿಲ್ಲಿಸಲಾಗುತ್ತದೆ. ಉದಾಹರಣೆಗೆ ‘ಜನಪದ ಹಾಲುಮತ ಮಹಾಕಾವ್ಯ’ದ ಕಥಾನಕಗಳಲ್ಲಿ ಮೊದಲಿಗೆ: ‘‘ಸ್ವಾಮಿ ನಮ್ಮಯ ದೇವರು ಬಂದಾವ ಬನ್ನೀರೆ’’ಎಂದಿದ್ದರೆ ಮಧ್ಯದ ಮತ್ತು ಕೊನೆಯ ನಿಲುಗಡೆಗಳಲ್ಲಿ ಹೀಗೆ ಬರುತ್ತದೆ.

ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ
ಇಲ್ಲಿಗೆ ಇದೊಂದು ಸಂದೇಳೊ
ಸಂದಿನ ಪದಗಳು ವಂದಿಸಿ ಹೇಳುವೆ
ತಂದಿ ಮಾಳಿಂಗರಾಯನೋ
ದೇವರು ಬಂದಾವ ಬನ್ನಿರೇ

ಪ್ರತ್ಯೇಕ ಕಥಾನಕಗಳ ಮಾದರಿ ಪುರಾತನವಾದುದು :

ರಚನೆಯಲ್ಲಿ ಸ್ವತಂತ್ರ ಅಸ್ತಿತ್ವ ಹೊಂದಿದ ಪ್ರತ್ಯೇಕ ಕಥಾನಕ ಮಾದರಿಗಳ ಕಲ್ಪನೆ ಪುರಾತನ ವಾದುದು. ಇಂತಹ ಪುರಾತನ ಕಥಾನಕಗಳೇ ಮಹಾಕಾವ್ಯಗಳಂತಹ ದೀರ್ಘಕಾವ್ಯಗಳು ಹುಟ್ಟುವುದಕ್ಕಿಂತ ಮುಂಚೆ ಅಸ್ತಿತ್ವದಲ್ಲಿದ್ದು, ಅವುಗಳ ಸ್ವರೂಪವನ್ನವಲಂಬಿಸಿಯೇ ದೀರ್ಘ ಕಾವ್ಯಗಳು ರಚನೆಗೊಂಡವು. ‘‘ವಿಂಟರ್‌ನಿಟ್ಸ್ ಅವರು ಹಳೆಯ ಲಾವಣಿಗಳು (Ancient ballads ) ಮಹಾಕಾವ್ಯದ ಮೂಲವಿರಬಹುದು ಎಂದು ಹೇಳುತ್ತಾರೆ. ಈ ವಾದಕ್ಕೆ ಬಹುಜನ ವಿದ್ವಾಂಸರ ಬೆಂಬಲವಿದೆ.’’ (ಜಿ. ಎಸ್. ಶಿವರುದ್ರಪ್ಪ, ಮಹಾಕಾವ್ಯ ಸ್ವರೂಪ, ಪು. ೩೨) ಎಂಬ ಅಭಿಪ್ರಾಯ ನಮಗೆ ದೊರೆಯುತ್ತದೆ.

ಜನಪದ ದೀರ್ಘವಾದ ಕಾವ್ಯಗಳ ರಚನೆಗೆ ಒಂದು ಸಿದ್ಧ ಆಕಾರವನ್ನು ಒದಗಿಸಿಕೊಟ್ಟವು ಗಳು ಇಂತಹ ಕಥಾನಕಗಳೇ. ನಾವು ಪುಣ್ಯಕಥನಗಳೆಂದು ಕರೆಯಬಹುದಾದ, ಈಗ ಹೆಣ್ಣು ಮಕ್ಕಳ ವೌಖಿಕ ಪರಂಪರೆಯಲ್ಲಿ ಉಳಿದುಬಂದ, ತೀರ ಪುರಾತನ ಆಶಯಗಳಿಂದ ಕೂಡಿದ ಕಥಾನಕಗಳ ಮಾದರಿಗಳಿವು. ಗುಣದಮ್ಮನ ಕಥೆ, ಚೆನ್ನಮ್ಮನ ದಂಡಿ, ಈಸೂರಾಯನ ಪದ ಮುಂತಾದವು ಅಂತಹ ರಚನೆಯ ಮಾದರಿಗೆ ಉದಾಹರಣೆಗಳಾಗಿವೆ. ಒಂದು ಪುರಾಣಕಾವ್ಯ ಅಥವಾ ಮಹಾಕಾವ್ಯ ಹೊಂದುವ ಎಲ್ಲ ಆಶಯಗಳನ್ನು ಈ ಕಥಾನಕಗಳ ಶರೀರದ ರಚನೆಯ ಒಳಗಡೆ ಕಾಣಲು ಸಾಧ್ಯವಿದೆ. ಅಂತಹ ಕಥಾನಕಗಳ ಪ್ರಾರಂಭ ಮತ್ತು ಕೊನೆಯಲ್ಲಿ ರುವ ಮತ್ತು ಇಡೀ ಕಾವ್ಯದ ಸದ್ಭಾವನೆಯನ್ನು ವ್ಯಕ್ತಪಡಿಸುವ ಕೆಲಸಾಲುಗಳನ್ನು ಇಲ್ಲಿ ಉದಾಹರಣೆಯಾಗಿ ನೋಡಬಹುದಾಗಿದೆ :

ಪ್ರಾರಂಭ : ಹಾಡ ಹಾಡಂದರ ಹಾಡಲದಿದ್ದರ ಪಾಪ
ಹಾಡ ಕೇಳವರ ಪರಚಿತ್ತ ಸುಯ್
ಹಾಡ ಕೇಳವರ ಪರಚಿತ್ತ ಪರಧ್ಯಾನ
ಬಾಲ ಅಳತಾನಂತ ಮನಿಗ್ಹೋದ ಸುಯ್
ಬಾಲ ಅಳತಾನಂತ ಮನಿಗ್ಹೋದ ಅವ್ವಗ
ಬಾವುಲಿ ಜಲಮಕ ಎಳಿರಂದ ಸುಯ್  (...ಗೀ.೫೧)

ಇಂತಹ ಕಥಾನಕಗಳಲ್ಲಿ ಅನೇಕ ಸಂಧಿಗಳಿದ್ದು, ಪ್ರತಿಸಂಧಿಗೆ ವಿರಾಮಕ್ಕೆಂದು ಎಲೆ ಅಡಿಕೆ ಕೊಡುವ, ವಿಭೂತಿ ಧರಿಸುವ ಕೆಲಸ ನಡೆಯುವುದು. ಹೀಗೆ ಒಂದು ದಮ್ಮು ಆರಿದ ನಂತರ ಪುನ: ಇನ್ನೊಂದು ದಮ್ಮು ಹಾಡು ಪ್ರಾರಂಭವಾಗುವುದು.

ಸಂದೀಗಿ ವಿಭೂತಿ ತಂದುಕೊಟ್ಟವ್ವಗ
ರೂಢೀಗೀಶ್ವರನ ದಯವಿರಲಿ ರನ್ನದ
ರೂಢೀಗೀಶ್ವರನ ದಯವಿರಲಿ ನಾಗವ್ವಗ
ಮುಂದೆ ಪುಣ್ಯದ ಫಲಗೋಳ (ಆ.ಜ.ಕ.ಗೀ.೫೦)

ಸಂದ್ಯಾಗಿನ ಎಲಿಯ ಮಂದ್ಯಾಗ ತಂದಾಳ
ಎಲಿಯ ಕೊಟ್ಟವ್ವಗ ಭಲೆ ಪುಣ್ಯ ಕಸ್ತೂರಿಬಾಯಿ
ನಿನ್ನ ಪುತ್ರನ ಸಂತಾನ ಜಯ ಜಯ ಸುಯ್‌ ( ಆ.ಜ.ಕ.ಗೀ.೭೭)

ಹಾಡಿನ ಕೊನೆಯಲ್ಲಿ ಹಾಡಿಸಿದವರಿಗೆ, ಹಾಡಿದವರಿಗೆ, ದನಿಗೂಡಿಸಿದವರಿಗೆ, ಹಾಡು ಕೇಳಿದವರಿಗೆ, ಹಾಡು ಕಲಿಸಿದವರಿಗೆ ಶುಭಹಾರೈಸುವ, ಹಾಡನ್ನು ನಿರ್ಲಕ್ಷಿಸಿದವರಿಗೆ ಕೇಡುಂಟೆಂದು ಹೇಳುವ ಮಾತುಗಳು ಸುಮಾರಾಗಿ ದೊರೆಯುತ್ತವೆ :

ಹಾಡಿದವರಿಗೆ :         ಹಾಡಿದವ್ವಗ ಸೀರಿ ಸೋ ಅಂದವ್ವಗ ಕುಬುಸ
                        ಕೇಳಬಂದವರಿಗೆ ಬಿಳಿ ಎಲಿಯೇ (ಜೀ.ಜೋ...೬೮)   

ಹಾಡಿಸಿದವರಿಗೆ : ಎಂದಿಗೆ ನುಡಿಯ ಸಂದುಕದೊಳಗಿತ್ತ
                        ಇಂದ್ಯಾವ ಜ್ಯಾಣಿ ತಗಸ್ಯಾಳ ಸುವ್ವಿ
ಇಂದ್ಯಾವ ಜ್ಯಾಣಿ ತಗಸ್ಯಾಳ ಬಸಮ್ಮನ
ಕಂದನ ಸಂತಾನ ಘನವಾಗೆ ಸುವ್ವಿ  (ಜೀ.ಜೋ.ಗ.ಗ.೧೫೪)

 

ದನಿಗೂಡಿಸಿದವರಿಗೆ :   ಹಾಡಿದವ್ವನಕ್ಕಿನ್ನ ಕೇಳಿದವ್ವನಕ್ಕಿನ
ಸೋಬಾನದವ್ವ ದಣದವ್ವ ರನ್ನದ
ಸೋಬಾನದವ್ವ ದಣದವ್ವ ಸಿದ್ದವ್ವಗ
ಮುತ್ತೈದಿತನವ ಘನವಿರಲಿ               (ಆ.ಜ.ಕ.ಗೀ. ೫೦)

ಶ್ರೋತೃಗಳಿಗೆ :        ಹಾಡಿದವ್ವನಕಿನ್ನ ಕೇಳಿದವ್ವನಕಿನ್ನ
ಸುಮ್ಮನ ಕುಂತವ್ವಗ ಭಲಿಪುಣ್ಯ ಸುಯ್
ಸುಮ್ಮನ ಕುಂತವ್ವಗ ಭಲಿಪುಣ್ಯ ಶರಣಮ್ಮ
ನಿನ ಪುತ್ರನ ಸಂತಾನ ಜಯಜಯ ಸುಯ್ (ಜೀ.ಜೋ.ಗ.ಗ. ೧೬)

ಹಾಡು ಕಲಿಸಿದವರಿಗೆ :  ಹಾಲ ಕಾಸುದ ಬಿಟ್ಟು ಕೂಸು ತೂಗದು ಬಿಟ್ಟು
ವ್ಯಾಳೇಕ ನುಡಿಯ ಕಲಿಸುವಳ ಸುವ್ವಿ
ವ್ಯಾಳೇಕ ನುಡಿಯ ಕಲಿಸುವಳ ನಿಂಬೆವ್ವನ
ಬಾಲರ ಸಂತಾನ ಘನವಾಗೆ ಸುವ್ವಿ (ಜೀ.ಜೋ.ಗ.ಗ. ೧೫೫)

ಹಾಡು ಕೇಳದವರಿಗೆ :   ಎಂದೀಗೆ ಈ ಹಾಡ ಸಂದ ಬಲ್ಲೇನೆಂದು
ಅಂಗಳಕ ಬಂದು ತಿರುಗಿದವ್ವ ನಿನಗ
ಬೆಂದ ದೇಗುಲದ ಕದವಾಗೆ (ಜೀ.ಜೋ.ಗ.ಗ. ೭೩)

ಈ ಬಗೆಯ ರಚನೆ ಮತ್ತು ಉದ್ದೇಶಗಳು ಜನಪದ ಪುಣ್ಯಕಥಾನಕಗಳ ಸಾಮಾನ್ಯ ರಾಚನಿಕ ವಿನ್ಯಾಸ ಮತ್ತು ಉದ್ದೇಶವೆಂದು ಹೇಳಬಹುದಾಗಿದೆ. ಜೊತೆಗೆ ಜನಪದ ಮಹಾಕಾವ್ಯದ ಒಂದು ಬಿಡಿ ಕಥಾನಕದ ಅಂದರೆ ಒಂದು ಸಂಧಿಯ ರಚನಾ ವಿನ್ಯಾಸವೂ ಈ ಬಗೆಯದೇ ಆಗಿರುತ್ತದೆ.

ಕಥಾನಕಗಳ ಗುಚ್ಛವೇ ಮಹಾಕಾವ್ಯ :

ಬಿಡಿಬಿಡಿಯಾಗಿ ನಿರ್ಮಾಣಗೊಂಡ ಮತ್ತು ಪ್ರತ್ಯೇಕ ಪ್ರತ್ಯೇಕವಾಗಿಯೇ ಪ್ರಸಾರ ಹೊಂದಿದ ಕಥಾನಕಗಳೆಲ್ಲವೂ ಒಂದೇ ಕಾವ್ಯದ ಭಾಗಗಳು ಎಂದು ಗ್ರಹಿಸಲು ಅವುಗಳಲ್ಲಿ ಒಂದು ಸಾಮಾನ್ಯ ಪಾತ್ರ ಅಥವಾ ಸಾಮಾನ್ಯ ಸಂಗತಿ ಕಾಣಿಸುವುದು. ಉದಾಹರಣೆಗೆ: ಮೈಲಾರಲಿಂಗನ ಕಾವ್ಯದಲ್ಲಿ – ಗಂಗಿಮಾಳಮ್ಮನ ಲಗ್ನ, ಕೋಮಾಲಿ, ರಡ್ಡೇರ ನೀಲವ್ವ ಈ ಮುಂತಾದ ಕಥನಕಾವ್ಯಗಳು ಇವತ್ತಿಗೂ ಬಿಡಿಬಿಡಿಯಾದ ರೂಪದಲ್ಲಿ ಪ್ರಚಲಿತದಲ್ಲಿದ್ದು, ಅವೆಲ್ಲವುಗಳಲ್ಲಿ ಮೈಲಾರಲಿಂಗನ ಪಾತ್ರ ಸಾಮಾನ್ಯವಾಗಿ ಕಂಡುಬರುತ್ತದೆ. ಹೀಗೆ ಬಿಡಿ ಕಥಾನಕಗಳನ್ನು ಒಂದೆಡೆ ಸಂಪಾದಿಸಿ ಮುದ್ರಿಸಿದರೆ, ಅದೊಂದು ಮಹಾಕಾವ್ಯದ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.

ಇಂತಹ ಪ್ರಯತ್ನ ಡಾ.ಪಿ.ಕೆ.ರಾಜಶೇಖರ ಅವರ ‘ಬಸವ ಪುರಾಣ’ ಕಾವ್ಯದಲ್ಲಿ ಕಾಣ ಬಹುದು. ಆದಿಬಸವೇಶ್ವರ, ಕಲ್ಯಾಣದ ಬಸವಣ್ಣ, ಉಳ್ವಿಯ ಶರಣರು, ಘನಶರಣ ಹರಳಯ್ಯ, ತುರುಕರ ಪೀರಣ್ಣ, ನುಲುಗೆ ಚನ್ನಯ್ಯ, ಸತ್ಯ ಶರಣೆ ಶಿವನಾಗಮ್ಮ, ಮಡಿವಾಳ ಮಾಚಪ್ಪ, ಗಟ್ಟಿವಾಳಯ್ಯ, ಚನ್ನಬಸವಣ್ಣ ಹೀಗೆ ಹತ್ತು ಬಿಡಿ ಕಥೆಗಳನ್ನು ಅವರು ಇಲ್ಲಿ ಹೊಂದಿಸಿದ್ದಾರೆ. ಈ ಹತ್ತೂ ಶರಣರ ಚರಿತ್ರೆಗಳಲ್ಲಿ ಬಸವಣ್ಣನವರ ಪಾತ್ರ ಸಾಮಾನ್ಯವಾದುದರಿಂದ ಅವೆಲ್ಲವನ್ನು ಸೇರಿಸಿ, ‘ಬಸವ ಪುರಾಣ’ ಎಂದು ಹೆಸರಿಟ್ಟು ಪ್ರಕಟಿಸಲಾಗಿದೆ, ಮಹಾಕಾವ್ಯವೆಂದು ಕರೆಯ ಲಾಗಿದೆ. ಫಿನ್ಲೆಂಡಿನ ಕಲೆವಾಲಾ ಜನಪದ ಕಾವ್ಯ ಕೂಡ ಹೀಗೆ ಬಿಡಿ ಕಥಾನಕಗಳ ಸಂಗ್ರಹದಿಂದ ರೂಪು ಪಡೆದ ಒಂದು ಮಹಾಕಾವ್ಯವಾಗಿದೆ. ಇದನ್ನು ಗಮನಿಸಿದಾಗ ಜಗತ್ತಿನ ಜನಪದ ಮಹಾಕಾವ್ಯಗಳ ರಚನೆಯ ಒಂದು ಸಾಮಾನ್ಯ ರೀತಿಯೇ ಹೀಗಿದೆಯೆಂದು ತೋರುತ್ತದೆ.

ಕಥಾನಕಗಳ ಜೋಡಣೆಯಲ್ಲಿ ನಿಶ್ಚಿತತೆ ಇಲ್ಲ :

ಸ್ವತಂತ್ರ ಅಸ್ತಿತ್ವ ಹೊಂದಿದ ಕಥೆಯ ಭಾಗಗಳು ಪ್ರತ್ಯೇಕ ಕಥಾನಕಗಳಂತೆ ಸೃಷ್ಟಿಗೊಳ್ಳುವುದರಿಂದ ಒಂದು ಸಮಗ್ರ ಕಥೆ ಗೊತ್ತಿರದ ಕಾವ್ಯಗಳ ಕಥಾನಕಗಳನ್ನು ಒಂದು ಕ್ರಮದಲ್ಲಿ ಜೋಡಿಸಿಕೊಳ್ಳುವಲ್ಲಿ ಗೊಂದಲ ಉಂಟಾಗುತ್ತದೆ. ಏಕೆಂದರೆ ನಾನು ಗಮನಿಸಿದ ಯಾವುದೇ ಕಥಾನಕದಲ್ಲಿ – ಹಿಂದೆ ಹೀಗಾಯಿತು, ಈಗ ಇಂತಹ ಘಟನೆಯಿಂದ ಈ ಭಾಗ ಮುಂದುವರೆಯುತ್ತದೆ ಎಂಬ, ಇಲ್ಲಿಗೆ ಇದು ಮುಗಿದು, ಮುಂದೆ ಇಂತಹ ಘಟನೆ ಹೇಳಲಾಗುತ್ತದೆ ಎಂಬ ವಿವರಗಳು ಕಾವ್ಯದ ಯಾವ ಭಾಗದಲ್ಲೂ ಕಾಣಲಿಲ್ಲ.

ಬಿಡಿ ಬಿಡಿಯಾಗಿ ದೊರಕುವ ಕಥಾನಕಗಳನ್ನು ಕೂಡಿಸಿ ಸಂಪಾದಿಸುವಾಗ ನಮಗೆ ಕಥೆ ಗೊತ್ತಿಲ್ಲದಿದ್ದರೆ, ನಾವು ಯಾವ ಘಟನೆಯಿಂದಾದರೂ ಕಾವ್ಯ ಪ್ರಾರಂಭಿಸಬಹುದು. ಮೈಲಾರಲಿಂಗನ ಕಾವ್ಯದ ಕಥಾನಕಗಳಾದ ಗಂಗಿ ಮಾಳಮ್ಮನ ಲಗ್ನ, ಕೋಮಾಲಿ ಪದ, ರಡ್ಡೇರ ನೀಲವ್ವ ಇವರುಗಳಿಗೆ ಸಂಬಂಧಿಸಿದ ಕಥೆಗಳನ್ನು ಹಿಂಚು ಮುಂಚೆ ಮಾಡಿ ಹಾಡಿದಾಗ, ಪ್ರಕಟಿಸಿದಾಗ ಯಾವುದೇ ಅಭಾಸವುಂಟಾದಂತೆ ಅನ್ನಿಸುವುದಿಲ್ಲ. ಡಾ ಪಿ.ಕೆ. ರಾಜಶೇಖರ ಸಂಪಾದಿಸಿದ ‘ಬಸವ ಪುರಾಣ’ದ ಕಥೆಗಳಂತೂ ಪ್ರತ್ಯೇಕ ಥಾನಕಗಳಾಗಿರುವುದರಿಂದ ಅಂಥಲ್ಲಿ ಮತ್ತು ‘ಕಲೆವಾಲಾ’ದಂಥಲ್ಲಿ ಸಂಪಾದಕನ ಸ್ವಾತಂತ್ರ್ಯ ಬೇಕಾದ ಹಾಗೆ ಕೆಲಸ ಮಾಡ ಬಹುದಾಗಿದೆ. ಇಲ್ಲಿ ಸಂಪಾದಕನ ಸಹಾಯಕ್ಕೆ ಬರುವುದು ಅವನ ಸ್ವಂತ ಅನುಭವ ಮಾತ್ರ.

ಈ ಮೇಲಿನ ಚರ್ಚೆ ಸಂಗತಿಯು ಜನಪದ ಮಹಾಕಾವ್ಯದ ಶರೀರ ರಚನೆಯ ಶಿಥಿಲತೆ ಯನ್ನು ತೋರಿಸುತ್ತದೆ. ಇದು ಮಹಾಕಾವ್ಯ ರಚನೆಯ ವೈಶಿಷ್ಟ್ಯವೂ ಹೌದು, ನ್ಯೂನತೆಯೂ ಹೌದು. ಇಲ್ಲಿ ಒಟ್ಟು ಕಾವ್ಯದ ಸಂವಹನ ಸಾಧ್ಯತೆ ನಿಶ್ಚಿತವಾದ ಪರಿಣಾಮ ಬೀರುವಲ್ಲಿ ಸಫಲತೆ ಸಾಧಿಸಲು ಸಾಧ್ಯವಾಗದ ಸ್ಥಿತಿಯೂ ಉಂಟಾಗಬಹುದು.

ಒಬ್ಬ ಹಾಡುಗಾರನಿಗೆ ಒಂದೇ ಕಥೆ ಬರಬಹುದು; ಹಲವು ಕಥೆಗಳು ಬರಬಹುದು. ಸಂಪೂರ್ಣ ಕಾವ್ಯ ಬರಬೇಕೆಂದೇನಿಲ್ಲ. ಇದು ಸಮಯ ಮತ್ತು ಶ್ರೋತೃಗಳ ಅಭಿಲಾಷೆಯನ್ನೂ ಅವಲಂಬಿಸಿದ್ದು, ಪೂರ್ಣ ಕಾವ್ಯ ಹಾಡಲು ಬರುತ್ತಿದ್ದರೂ, ಅದು ಸಾಧ್ಯವಾಗದೇ ಹೋಗಬಹುದು. ಈ ಎಲ್ಲವುಗಳಿಂದ ಸಹೃದಯನಿಗೆ ಇಡೀ ಕಾವ್ಯ ಒಟ್ಟಿಗೇ ಕೇಳುವ ಪ್ರಸಂಗ ಅವನ ಜೀವಮಾನದಲ್ಲಿ ಬರದೇ ಹೋಗಬಹುದು.

ವೃತ್ತಿಗಾಯಕರು ಮತ್ತು ಹವ್ಯಾಸಿಗಾಯಕರು:

ಜನಪದ ಮಹಾಕಾವ್ಯವನ್ನು ಹಾಡುವವರು ಕೆಲವರು ವೃತ್ತಿಗಾಯಕರಾದರೆ, ಇನ್ನೂ ಕೆಲವರು ಹವ್ಯಾಸಿ ಗಾಯಕರು. ತಂತಿ ಮತ್ತು ಚರ್ಮವಾದ್ಯಗಳ ಬಳಕೆ ಸಾಮಾನ್ಯ. ಕೆಲವೆಡೆ ಚರ್ಮವಾದ್ಯಗಳ ಬಳಕೆಯೇ ಆಗುತ್ತದೆ. ಉದಾಹರಣೆಗೆ ಜನಪದ ಹಾಲುಮತ ಮಹಾಕಾವ್ಯ ದಲ್ಲಿ ಡೊಳ್ಳು ಮಾತ್ರ ಬಳಕೆಯಾಗುತ್ತದೆ. ಮುಮ್ಮೇಳ ಹಿಮ್ಮೇಳಗಳು ಎಲ್ಲಕಡೆ ಕಾಣಸಿಗುತ್ತವೆ. ದೀರ್ಘಕಾವ್ಯಗಳ ಹಾಡುಗಾರಿಕೆಯಲ್ಲಿ ಸಹಾಯಕ ವಾದ್ಯಗಳು ಮತ್ತು ಮೇಳಗಳು ಇರಲೇಬೇಕು.

ವೃತ್ತಿಗಾಯಕರಿರಲಿ ಅಥವಾ ಹವ್ಯಾಸಿ ಗಾಯಕರಿರಲಿ, ಜನಪದದಲ್ಲಿ ನೇರವಾಗಿ ಕಥೆ ಹೇಳುವ ಪದ್ಧತಿ ಮಾತ್ರ ಕಾಣುತ್ತದೆ. ಯಾವ ಉಪಕಥೆಗಳ ಗೋಜು ಇಲ್ಲಿ ಬರಲಾರದು. ವೈಶಂಪಾಯನ ಮುನಿ ಜನಮೇಜಯನಿಗೆ ಕಥೆ ಬಿತ್ತರಿಸುವಂತಹ ಅಥವಾ ಗಿಳಿಯ ಮೂಲಕ ಕಥೆ ಹೇಳಿಸುವಂತಹ ಸಾಮಾನ್ಯ ತಂತ್ರಗಳನ್ನೂ ಇಲ್ಲಿ ಕಾಣಲಾರೆವು. ಏಕೆಂದರೆ ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ, ಎಲ್ಲಮ್ಮನಂಥ ಕಾವ್ಯಗಳನ್ನು ಹಾಡುವ ವೃತ್ತಿಗಾ ಯಕರು ಸ್ವತ: ಆಯಾ ಮಹಿಮಾ ಪುರುಷರ ಭಕ್ತರೇ ಆಗಿರುತ್ತಾರೆ. ಹೀಗಾಗಿ ಕಥೆಯನ್ನು ಅತ್ಯಂತ ಪೂಜ್ಯ ಭಾವನೆಯಿಂದ, ಸ್ವತಃ ತಾವೇ ನೇರವಾಗಿ ಬಿತ್ತರಿಸುತ್ತಾರೆ. ಆದುದರಿಂದ ಕಥಾರಚನೆಯ ಒಳಗಡೆ ಅತಿಮಾನುಷ ಎನ್ನಬಹುದಾದ ಲೀಲಾಸದೃಶ ಘಟನೆಗಳ ರಚನೆ ಸಾಮಾನ್ಯವಾಗಿ ಕಂಡುಬರುತ್ತದೆ. ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಎಲ್ಲಮ್ಮ ಮುಂತಾದ ಕಥೆಗಳನ್ನು – ಭಕ್ತರು ತಮ್ಮ ದೇವರ ಪಾರಮ್ಯವನ್ನು ಹೇಳುವ ಕಥೆಗಳಾಗಿ ಬೆಳೆಸುವು ದನ್ನು ನಾವು ಕಾಣುತ್ತೇವೆ.

ನಮಗಿಲ್ಲಿ ನೆನಪಾಗುವುದು ‘ಪ್ರಭುಲಿಂಗಲೀಲೆ’ ಕಾವ್ಯ. ಪ್ರಭು ಸದಾಸಂಚಾರಿಯಾಗಿ, ಬೇರೆ ಬೇರೆ ವ್ಯಕ್ತಿಗಳ ಸಂಪರ್ಕದಲ್ಲಿ ಬೇರೆ ಬೇರೆ ಘಟನೆಗಳನ್ನು ನಿರ್ಮಾಣಗೈಯುತ್ತ ಹೋಗುವುದು. ಇಂಥಲ್ಲಿ ವಸ್ತುವಿನ ಬೆಳವಣಿಗೆ ಕಾಣದೆ ವ್ಯಕ್ತಿಯ ಬೆಳವಣಿಗೆಯೇ ಮುಖ್ಯವಾಗಿ ಕಾಣುತ್ತದೆ. ರಾಮಾಯಣ ಮಹಾಭಾರತದಂತಹ ಾವ್ಯಗಳಲ್ಲಿ ವಸ್ತು ಪ್ರಧಾನವಾಗಿ, ಅಲ್ಲಿ ವಸ್ತುವಿನ ಬೆಳವಣಿಗೆಯೇ ಮುಖ್ಯವಾಗಿ ಕಾಣುತ್ತದೆ. ಹೀಗೆ ನಾಯಕ ಪ್ರಧಾನ ಮತ್ತು ವಸ್ತು ಪ್ರಧಾನ ಕಾವ್ಯಗಳ ರಚನೆಯಲ್ಲಿ ಭಿನ್ನತೆ ಕಾಣುತ್ತದೆ.

ಹವ್ಯಾಸಿ ಹಾಡುಗಾರರ ಕಾವ್ಯಗಳಲ್ಲಿ ‘ಜನಪದ ಹಾಲುಮತ ಮಹಾಕಾವ್ಯ’ವನ್ನು ಉದಾಹರಿಸಬಹುದಾಗಿದೆ. ಕುರುಬ ಜನಾಂಗಕ್ಕೆ ಸೇರಿದ, ಒಕ್ಕಲುತನ ಮತ್ತು ಕುರಿಕಾಯುವ ಉದ್ಯೋಗಗಳನ್ನು ಪ್ರಮುಖವಾಗಿ ಹೊಂದಿದ ಹವ್ಯಾಸಿ ಗಾಯಕರಿವರು. ಸಂದರ್ಭಾನುಸಾರ ಹಾಡುವ ಹಾಡುಗಾರರು. ಈ ಕಾವ್ಯ – ನಾಯಕ ಪ್ರಧಾನವೆನಿಸದೆ ಧರ್ಮ ಪ್ರಧಾನ ಕಾವ್ಯವಾಗಿ ತೋರುತ್ತದೆ. ಹೀಗಾಗಿ ಆದಿಗೊಂಡ, ಪದ್ಮಗೊಂಡ, ಮಾಳಿಂಗರಾಯ, ಬೀರಪ್ಪ ಮುಂತಾದ ವರ ಕಥೆಗಳಲ್ಲಿ ತಮ್ಮ ಧಾರ್ಮಿಕ ಶ್ರೇಷ್ಠತೆಯನ್ನು ಹೇಳುವ ಉದ್ದೇಶ ಅವರದಾಗಿರುತ್ತದೆ. ಈ ಗಾಯಕರು ಹವ್ಯಾಸಿ ಕಲಾವಿದರಾದುದರಿಂದ ಈ ಕಾವ್ಯದ ರಚನೆ ಹೆಚ್ಚು ವಾಸ್ತವಿಕ ವಿವರಗಳಿಂದ ಕೂಡಿರುತ್ತದೆ. ಉದಾಹರಣೆಗೆ: ಒಬ್ಬ ಹೆಣ್ಣು ಮಗಳು ನೀರಿಗೆ ಹೊರಟ ದೃಶ್ಯ, ಕುರಿದೊಡ್ಡಿಗೆ ಬಂದು ಮರಿಗೆ ಹಾಲುಣಿಸಿ ಹಾಲು ಹಿಂಡಿಕೊಳ್ಳುವ ದೃಶ್ಯ, ಬೀರಣ್ಣ ಮತ್ತು ಮಾಯವ್ವರ ಕಥೆಯಲ್ಲಿ ಅಕ್ಕ – ತಮ್ಮರ ಸಂಬಂಧ ಮುಂತಾಗಿ ತೀರ ವಾಸ್ತವ ವಿವರಣೆಗಳಿಂದ ಕೂಡಿರುತ್ತವೆ. ಇಂಥಲ್ಲಿ ಕಾವ್ಯದ ರಚನೆ ತೀರ ಸಹಜ ಎನಿಸುತ್ತದೆ ಮತ್ತು ಸರಳವಾಗಿ ಎಲ್ಲರಿಗೂ ತಿಳಿಯುವಂತಹದ್ದಾಗಿರುತ್ತದೆ.

ಮಹಾಕಾವ್ಯ ಶರೀರದಲ್ಲಿ ಕಾಣುವ ಕೆಲವು ಸಾಮಾನ್ಯ ಅಂಶಗಳು :

ಈಗ ಪ್ರಕಟವಾಗಿರುವ ಕನ್ನಡ ಮಹಾಕಾವ್ಯಗಳ ಶರೀರದ ಒಳಗಡೆ ಕೆಲ ಸಾಮಾನ್ಯವಾದ ರಾಚನಿಕ ವಿನ್ಯಾಸಗಳು ಒಡೆದು ಕಾಣುತ್ತವೆ. ಅವುಗಳನ್ನು ಹೀಗೆ ಗುರುತಿಸಬಹುದು :

೧. ಸ್ತುತಿ ಮತ್ತು ಮಂಗಳ

೨. ಪುನರಾವರ್ತನೆ

೩. ರೂಪಾಂತರ

೪. ಹೆಣ್ಣನ್ನು ಗೆಲ್ಲುವುದು

೫. ನಾಯಕರ ಅಲೆದಾಟ

೬. ಜನಪದ ಕಥೆಗಳ ಸೇರ್ಪಡೆ

ಜನಪದ ಹಾಡುಗಾರಿಕೆಯ ಪ್ರಾರಂಭದಲ್ಲಿ ಸ್ತುತಿ, ಕೊನೆಯಲ್ಲಿ ಮಂಗಳ ಇರುವುದು ಸಾಮಾನ್ಯ. ಮಹಾಕಾವ್ಯಗಳಲ್ಲಿ ಇವು ಕಾವ್ಯದ ರಚನೆಯ ಭಾಗಗಳಾಗಿರಬಹುದು ಅಥವಾ ಪ್ರತ್ಯೇಕ ಹಾಡುಗಳ ಬಳಕೆಯಾಗಬಹುದು. ಪುನರಾವರ್ತನೆಯ ಗುಣ ಜನಪದ ಕಾವ್ಯಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಗುಣ. ಸೊಲ್ಲುಗಳಂತೂ ಪ್ರತಿಸಾಲಿಗೂ ಪುನರಾವರ್ತನೆ ಯಾಗುತ್ತವೆ. ಹಾಲುಮತ ಪುರಾಣದಲ್ಲಿ ಕುರಿಯ ದೊಡ್ಡಿಗೆ ಹೋಗಿ ಹಾಲು ಹಿಂಡಿಕೊಳ್ಳುವ, ಬಾವಿಯಿಂದ ನೀರು ತರುವ ವಿವರಗಳು ಬಂದಾಗಲೆಲ್ಲ ಪುನರಾವರ್ತನೆ ಸಾಮಾನ್ಯ. ಇಂಥಲ್ಲಿ ಹಾಡುಗಾರಿಕೆಯಿಂದಾಗಿ ಬೇಸರ ಬರದೆ, ವಿಶೇಷ ಜೀವಕಳೆ ತುಂಬುವ ರೀತಿಯಲ್ಲಿ ಪ್ರತಿಸಲ ವೈವಿಧ್ಯಮಯವಾದ ಗತಿ ವ್ಯತ್ಯಾಸಗಳಲ್ಲಿ ಹಾಡುವುದನ್ನು ಕೇಳುತ್ತೇವೆ., ಇಡೀ ಒಂದೊಂದು ದೃಶ್ಯಗಳ ಪುನರಾವರ್ತನೆಯಲ್ಲದೆ ಹಾಡುಗಾರಿಕೆಯಲ್ಲಿ ಸಾಲುಗಳ ಮತ್ತು ಪದಗಳ ಪುನರಾವರ್ತನೆಗಳು ಸಾಮಾನ್ಯ. ಇದೊಂದು ಸನ್ನಿವೇಶ ಬೆಳೆಸುವ ಕಲಾತ್ಮಕ ತಂತ್ರವಾಗಿಯೂ ಕಾಣುತ್ತದೆ. ಪಾತ್ರ ಪ್ರಧಾನವಾದ ಮಲೆಯ ಮಾದೇಶ್ವರ, ಮಂಟೇಸ್ವಾಮಿ, ಮೈಲಾರಲಿಂಗ ಮುಂತಾದ ಕಾವ್ಯಗಳಲ್ಲಿ ರೂಪಾಂತರ ಕ್ರಿಯೆ ತೀರ ಸಾಮಾನ್ಯವಾಗಿ ಕಾಣಿಸಿಕೊಂಡು, ಇದೊಂದು ರೀತಿಯಲ್ಲಿ ಕಥಾಪುರುಷನ ಲೀಲೆ ಎಂಬಂತೆ ಭಾವಿಸಲಾಗುತ್ತದೆ. ಮೈಲಾರಲಿಂಗನ ಪ್ರತಿ ಕಥಾನಕದಲ್ಲಿಯೂ ಆತ ಗೊರವನ ವೇಷ ತೊಡುವ ದೃಶ್ಯ ಸಾಮಾನ್ಯವಾಗಿ ಕಾಣುತ್ತದೆ.

ಜನಪದ ಮಹಾಕಾವ್ಯಗಳಲ್ಲಿ ಹೆಣ್ಣನ್ನು ಅಪಹರಿಸುವುದಕ್ಕಿಂತ ಹೆಣ್ಣನ್ನು ಗೆಲ್ಲುವ ಸನ್ನಿವೇಶಗಳ ಪರಿಣಾಮಕಾರಿ ಚಿತ್ರಣಗಳನ್ನು ಕಾಣುತ್ತೇವೆ. ಮೈಲಾರಲಿಂಗ ಮತ್ತು ಮಂಟೇಸ್ವಾಮಿ ಕಾವ್ಯಗಳಲ್ಲಿ ಇದು ಸಾಮಾನ್ಯ ಸಂಗತಿ. ನಾಯಕ ಪ್ರಧಾನ ಜನಪದ ಮಹಾಕಾವ್ಯಗಳಲ್ಲಿ ನಾಯಕರು ಸದಾ ಅಲೆದಾಡುತ್ತಲೇ ಇರುತ್ತಾರೆ. ನಾಯಕರ ಮಹಿಮೆ, ಲೀಲೆ ಮುಂತಾದವುಗಳನ್ನು ಹೇಳುವ ಮಂಟೇಸ್ವಾಮಿ, ಮಲೆಯ ಮಾದೇಶ್ವರ, ಮೈಲಾರ ಲಿಂಗನಂಥ ಪಾತ್ರಗಳುಸದಾ ಅಲೆದಾಡುತ್ತಲೇ ಇರುತ್ತವೆ. ಅಲೆದಾಟದ ಉದ್ದೇಶ ತಮ್ಮ ಲೀಲಾಸದೃಶ ಮಹಿಮೆಗಳನ್ನು ತೋರುವುದು, ಭಕ್ತರ ಬಳಗ ಹೆಚ್ಚಿಸುವುದು, ತಮ್ಮ ವ್ಯಕ್ತಿತ್ವದ ಪ್ರಭಾವವನ್ನು ಬೆಳೆಸುವುದು – ಇವು ಎಲ್ಲ ಕಡೆ ಸಾಮಾನ್ಯವಾಗಿರುತ್ತವೆ. ಜನಪದ ಮಹಾಕಾವ್ಯದ ಕೆಲಭಾಗಗಳಲ್ಲಿ ಜನಪದ ಕಥೆಗಳು ಅಥವಾ ಕಥನಾಶಯಗಳು ಸೇರಿಕೊಂಡಂತೆ ತೋರುತ್ತವೆ. ಇಲ್ಲಿ ಜನಪದ ಕಥೆಗಳು ಮಹಾಕಾವ್ಯದ ಶರೀರದಲ್ಲಿ ಸೇರಿಕೊಂಡಿವೆಯೋ ಅಥವಾ ಕಾವ್ಯಭಾಗಗಳೇ ಸಿಡಿದು ಜನಪದ ಕಥೆಗಳಾಗಿವೆಯೋ ಈ ಬಗೆಗೆ ನಮ್ಮ ಅಭ್ಯಾಸ ಮುಂದುವರೆಯಬೇಕು. ಈ ಹಿನ್ನೆಲೆಯಲ್ಲಿ ಗ್ರೀಮ್ ಸಹೋದರರ ‘ಜನಪದ ಕಥೆಗಳು ಪುರಾಣದ ಒಡೆದ ಚೂರುಗಳು’ ಎಂಬ ಪ್ರಮೇಯವನ್ನು ಸಾರಾಸಗಟಾಗಿ ತಳ್ಳಿಹಾಕಲು ಬಾರದೇನೋ ಎನಿಸುತ್ತದೆ.

ಕೊನೆಯದಾಗಿ ಕಥೆ ಯಾವ ಪ್ರದೇಶದಲ್ಲಿ ಬಳಕೆಯಲ್ಲಿರುತ್ತದೋ ಆ ಪ್ರಾದೇಶಿಕ ಭಾಷೆ ಕಾವ್ಯಕ್ಕೆ ಸಹಜವಾಗಿ ಬರುತ್ತದೆ. ಮಂಟೇಸ್ವಾಮಿ ಕಾವ್ಯ ಹಾಗೂ ಮಲೆಯ ಮಾದೇಶ್ವರ ಕಾವ್ಯ ಕಥೆ ಮಾಡುವ ರೀತಿಯಲ್ಲಿದ್ದು, ಗದ್ಯ ಪ್ರಧಾನವಾಗಿ ಪದ್ಯ ಸಹಾಯಕವಾಗಿ ಬಂದಿದೆ. ಹಾಲುಮತ ಪುರಾಣದಲ್ಲಿ ಪದ್ಯವೇ ಪ್ರಮುಖವಾಗಿ ಬಂದು, ನಡುವೆ ಅಲ್ಲಲ್ಲಿ ಅಲ್ಪಸ್ವಲ್ಪ ವಚನವನ್ನು ಪ್ರಯೋಗಿಸುತ್ತಾರೆ. ಆದರೆ ಕೆಲವು ಹಾಡಿನ ಸಂಪ್ರದಾಯಗಳು ಸರಳರಗಳೆಯ ರೂಪದಲ್ಲಿ ದೊರೆಯುತ್ತವೆ. ಮೈಲಾರಲಿಂಗನ ಕಾವ್ಯವು ಕೂಡ ಪೂರ್ಣವಾಗಿ ಕಾವ್ಯರೂಪ ದಲ್ಲಿದ್ದು, ಚೌಪದಿ ಛಂದಸ್ಸಿನಲ್ಲಿದೆ.

ಹಾಡುವ ಕಾವ್ಯಗಳಾದ ಮಹಾಕಾವ್ಯಗಳು ಸಂಗ್ರಹವಾಗಿ, ಪ್ರಕಟಗೊಂಡು ಪುಸ್ತಕ ರೂಪದಲ್ಲಿ ಕಾಣಿಸಿಕೊಂಡಾಗ, ಸ್ಥಿರಪಠ್ಯ ಹೊಂದಿ, ಬದಲಾಗದ ರಾಚನಿಕರೂಪವೊಂದು ದೊರೆತು, ಸಂವಹನ ಸಾಧ್ಯತೆಗಳಲ್ಲಿ ಪ್ರಾದೇಶಿಕ ಭಾಷೆ, ಧರ್ಮ, ಂಸ್ಕೃತಿ ಪದರಿನಲ್ಲಿ ಭಿನ್ನ ರೂಪ ತಾಳಿ ನಿಲ್ಲುತ್ತವೆ.

ಮಹಾಕಾವ್ಯ ನಾಯಕರ ಸಾಮಾನ್ಯ ವಿನ್ಯಾಸ :

ಜನಪದ ಮಹಾಕಾವ್ಯಗಳ ನಾಯಕರ ಜೀವನವನ್ನು ಅವಲೋಕಿಸಿದರೆ ಅವರ ಬದುಕು ಮತ್ತು ವ್ಯಕ್ತಿತ್ವದೊಂದಿಗೆ ಒಂದಿಷ್ಟು ಪೌರಾಣಿಕ ಅಂಶಗಳನ್ನು ಬೆರೆಸಿ ಹೇಳುವ ಪದ್ಧತಿ ಜನಪದರ ಲ್ಲಿದ್ದುದು ಸಾಮಾನ್ಯವಾಗಿ ತೋರುತ್ತದೆ. ಇದಕ್ಕೆ ಹಲವಾರು ಕಾರಣಗಳನ್ನು ಗುರುತಿಸಿಕೊಳ್ಳ ಬಹುದಾಗಿದೆ. ಈ ನಾಯಕರು ತಮ್ಮ ಜನಗಳಿಗಾಗಿ ಯಾವುದೇ ಉಪದೇಶದಂತಹ ತಾತ್ವಿಕ ಮಾತುಗಳನ್ನು ಆಡಲಾರರು. ಅವರ ಬದುಕೇ ಒಂದು ಆದರ್ಶವಾಗಿದ್ದು ; ಅದಕ್ಕಾಗಿ ಜನ ಅವರನ್ನು ದೇವರೆಂದೂ ಬೇಡಿದ್ದನ್ನು ಕೊಡುವ ಶಕ್ತಿ ಇಂಥವರಿಗೆ ಇರುವುದೆಂದೂ ನಂಬುತ್ತಾರೆ ಮತ್ತು ಪೂಜಿಸುತ್ತಾರೆ. ಈ ನಂಬುಗೆಗಳೇ ಕಾರಣವಾಗಿ ಅನೇಕ ಪೌರಾಣಿಕ ಸಂಗತಿಗಳನ್ನು ಸೃಷ್ಟಿಸುತ್ತಾರೆ. ಈ ಪೌರಾಣಿಕ ಸಂಗತಿಗಳ ಮಹತ್ವವೆಂದರೆ ತಮ್ಮ ದೈವವನ್ನು ಅವರ ವ್ಯಕ್ತಿತ್ವವನ್ನು ಇನ್ನಷ್ಟು ಬೆಳಗಿಸುವುದು ; ವರ್ತಮಾನ ಮಹತ್ವವನ್ನು ಬಿತ್ತರಿಸುವುದು. ಇವುಗಳ ಜೊತೆ ಈ ಕೆಲವು ಅಂಶಗಳನ್ನು ಗುರುತಿಸಿಕೊಳ್ಳುವ ಅಗತ್ಯ ಇರುತ್ತದೆ :

೧. ತಾವು ದೈವವೆಂದು ಸ್ವೀಕರಿಸುವ ನಾಯಕನ ವ್ಯಕ್ತಿತ್ವವು ಇತರ ಜನಾಂಗದ ನಾಯಕರಿಗಿಂತ ಕಡಿಮೆ ಎನಿಸಬಾರದು.

೨. ಮುಖ್ಯವಾಗಿ ಈ ನಾಯಕರು ದುಷ್ಟವ್ಯಕ್ತಿಗಳನ್ನು, ಸಂಗತಿಗಳನ್ನು ಎದುರಿಸಬೇಕಾಗುವಾಗ, ಯಾವುದೇ ತೊಂದರೆಗೆ ಸಿಲುಕಬಾರದು; ಅವೆಲ್ಲಾ ನಿರಾಯಾಸವಾಗಿ ದೂರಾಗಬೇಕು.

೩. ಇಂತಹ ವ್ಯಕ್ತಿ ಗಳು ಅದ್ಭುತ ಅಸಾಮಾನ್ಯವೆನಿಸುವಂತಿರಬೇಕು.

ಇಂತಹ ನಾಯಕರನ್ನು ಚಿತ್ರಿಸಿಕೊಳ್ಳುವ ಸಂದರ್ಭದಲ್ಲಿ ಜನಪದರು ಇಟ್ಟುಕೊಳ್ಳುವ ಸಾಮಾನ್ಯ ರಾಚನಿಕ ಸಂಗತಿಗಳೆಂದರೆ :

೧. ದೈವದ ಅನುಗ್ರಹದಿಂದ ಗರ್ಭದಲ್ಲಿ ಮೂಡುವುದು.

೨. ಅಯೋನಿಜ ಮತ್ತು ಮೃತ್ಯುಂಜಯನಾಗುವುದು.

೩. ಮಾಂತ್ರಿಕ – ಅಸಾಮಾನ್ಯ ಶಕ್ತಿಯ ಸ್ಪರ್ಶ ಪಡೆದಿರುವುದು.

೪. ಸಮಾಜಮುಖಿ ಬೆಳವಣಿಗೆ ಹೊಂದುವುದು.

೫. ರೌದ್ರಾವತಾರಿ – ವೀರಯೋಧನಾಗುವುದು.

‘ಜನಪದ ಹಾಲುಮತ ಮಹಾಕಾವ್ಯ’ದ ಬೀರಪ್ಪ ಮತ್ತು ಮಾಳಿಂಗರಾಯ, ಜುಂಜಪ್ಪನ ಕಾವ್ಯದ ಜುಂಜಪ್ಪ, ಮಲೆಯ ಮಹಾದೇಶ್ವರ, ಮಂಟೇಸ್ವಾಮಿ – ಇವರೆಲ್ಲರ ವ್ಯಕ್ತಿತ್ವ ರಚನೆಯಾಗಿರುವುದು ಈ ಮೇಲೆ ಸೂಚಿಸಿದ ಐದು ಅಂಶಗಳಿಂದಲೇ.

* * *