ಪ್ರಸ್ತುತ ‘ಪ್ರಥಮ ವಿಮರ್ಶೆ’ಒಂದು ಹೊಸ ಪ್ರಯೋಗವಾಗಿದೆ. ಹಾಡುವ ಗುಣವುಳ್ಳ ‘ಜನಪದಕಾವ್ಯ’ವನ್ನು ‘ಓದುವಕಾವ್ಯ’ವಾಗಿ ಮಾರ್ಪಡಿಸಿಕೊಂಡು, ಶಿಷ್ಟಸಾಹಿತ್ಯದ ಸಾಧ್ಯತೆ ಯಾಗಿ ಕಾಣಿಸಿಕೊಂಡ ‘ಲಿಖಿತ ವಿಮರ್ಶೆ’ಗೆ ಒಳಪಡಿಸಿ ಪರಿಣಾಮವನ್ನು ಗಮನಿಸುವ ಒಂದು ಹೊಸಸಾಧ್ಯತೆಯತ್ತ ಹರಿದ ಯತ್ನವಾಗಿದೆ.

ಜನಪದಸಾಹಿತ್ಯದ ವೌಖಿಕ ಪರಂಪರೆಯ ಸಾಧ್ಯತೆಯಲ್ಲಿ ನಡೆಯುವ ‘ವೌಖಿಕ ವಿಮರ್ಶೆ’ಯು ದಾಖಲಿಸುವ ಪ್ರಯತ್ನದಲ್ಲಿ ಸಾಧ್ಯವಾಗದ ಮಾತು. ವಿಮರ್ಶಾ ಸಾಧ್ಯತೆ ಹೆಚ್ಚು ಪ್ರಯೋಜನಕಾರಿಯಾಗಿ ಬಳಕೆಯಾಗುತ್ತಿರುವುದು ಲಿಖಿತಮೂಲದಲ್ಲಿ. ಈಗ ವೌಖಿಕ ಪರಂಪರೆಯಲ್ಲಿ ಬೆಳೆದುಬಂದ ಜನಪದ ಕಾವ್ಯವೂ ಲಿಖಿತಸಾಹಿತ್ಯದ ಸಾಧ್ಯತೆಯಾದ ‘ಓದುವ ರೂಪ’ ದಲ್ಲಿ, ಅಂದರೆ ‘ಲಿಖಿತ ಮಾಧ್ಯಮ’ದಲ್ಲಿ ದಾಖಲಾಗುತ್ತಿದೆ, ಮತ್ತು ಮುದ್ರಣ ಮಾಧ್ಯಮದಲ್ಲೂ ಪ್ರಕಾಶಗೊಳ್ಳುತ್ತಿದೆ. ಇಂತಹ ಸಮಯದಲ್ಲಿ ‘ಲಿಖಿತ ಪರಂಪರೆ’ ಹುಟ್ಟು ಹಾಕಿದ ವಿಮರ್ಶೆಯ ಸಾಧ್ಯತೆಯನ್ನು, ಈಗ ಲಿಖಿತಮಾಧ್ಯಮದಲ್ಲಿ ಪ್ರಕಟವಾಗುತ್ತಿರುವ ಜನಪದಕಾವ್ಯಕ್ಕೆ ಅನ್ವಯಿಸಲು ಪ್ರಯತ್ನಿಸಬಹುದಾಗಿದೆ.

ಹೀಗೆ ಪ್ರಯತ್ನಿಸುವಾಗ ನಾವು ಗಮನಿಸಬೇಕಾದ ಒಂದು ಮಹತ್ವದ ಸಂಗತಿ ಎಂದರೆ, ಲಿಖಿತಮೂಲದ ಸಾಹಿತ್ಯವನ್ನು ವಿಮರ್ಶಿಸುವ ಕ್ರಮದಲ್ಲಿ ‘ವಿಮರ್ಶಾ ಸಿದ್ಧಾಂತ’ಗಳು ಸಹಾಯಕ್ಕೆ ಬರುವುವು ಎಂಬುದನ್ನು. ಹೀಗಾಗಲು ಕಾರಣವೆಂದರೆ ಲಿಖಿತಮೂಲದ ಯಾವುದೇ ಪ್ರಕಾರದ ಪರೀಕ್ಷೆಯಲ್ಲಿ ಖಚಿತವಾದ ದೃಷ್ಟಿ ಕೆಲಸಮಾಡುವುದು. ಹೀಗಾಗಿ ಲಿಖಿತ ಮೂಲದ ಸಾಹಿತ್ಯದ ಗರ್ಭದಲ್ಲಿ ಹುಟ್ಟಿದ ಸಿದ್ಧಾಂತಗಳನ್ನು ಆ ಸಾಹಿತ್ಯವನ್ನು ಪರೀಕ್ಷಿಸಲು ಬಳಸಿಕೊಳ್ಳುವುದು. ಈಗ ಲಿಖಿತ ರೂಪದಲ್ಲಿ ಪ್ರಕಟವಾಗುತ್ತಿರುವ ಜನಪದ ಕಾವ್ಯವನ್ನು ವಿಮರ್ಶಿಸಲು ಬಳಸುವ ಸಿದ್ಧಾಂತಗಳು ಕೂಡ – ಜನಪದ ಕಾವ್ಯ ಪ್ರಕಾರದ ಗರ್ಭದಿಂದಲೇ ಉದ್ಭವಿಸಿದ್ದಾಗಿರಬೇಕು ಎಂಬುದು ಉಚಿತ ಚಿಂತನೆ ಎನಿಸುತ್ತದೆ.

ಶಿಷ್ಟಸಾಹಿತ್ಯಕ್ಕಾಗಿ ಹುಟ್ಟಿದ ಮಾನದಂಡಗಳಿಗಿಂತ, ಜನಪದಕಾವ್ಯ ಗರ್ಭದಿಂದಲೇ ಜನಿಸಿದ ಹೊಸ ಮಾನದಂಡಗಳಿಂದ ನಾವು ಜನಪದಕಾವ್ಯವನ್ನು ಅಳೆದು ನೋಡಿದಾಗ, ಈ ಕಾವ್ಯದ ನಿಜವಾದ ಸಾಮರ್ಥ್ಯಗಳೇನು? ಎಂಬುದು ನಮಗೆ ಮನವರಿಕೆಯಾಗುತ್ತದೆ; ಅಲ್ಲಿನ ಫಲಿತಾಂಶವೂ ನಮ್ಮ ನಿರೀಕ್ಷಿತ ಮಟ್ಟದಲ್ಲಿರುತ್ತದೆ. ಶಿಷ್ಟಸಾಹಿತ್ಯದಿಂದ ಹುಟ್ಟಿದ ಮಾನದಂಡ ಗಳಿಂದ ಜನಪದ ಕಾವ್ಯವನ್ನು ಅಳೆಯಲು ತೊಡಗಿದಾಗ ಸಹಜವಾಗಿಯೇ ಅದು ತಪ್ಪು ಕ್ರಮ ಎನಿಸುತ್ತದೆ.

ಸಾಹಿತ್ಯ ಸಿದ್ಧಾಂತಗಳು ಯಾವಾಗಲೂ ಒಂದು ಗೊತ್ತಾದ ಸಂಗತಿಯಲ್ಲೇ ಕಾಣಿಸಿದ ಹೊಸ ಹೊಳಹುಗಳಾಗಿರುತ್ತವೆ. ಈ ಸೈದ್ಧಾಂತಿಕ ಹೊಳಹುಗಳು ಯಾವುದರ ಹೊಟ್ಟೆಯಿಂದ ಹುಟ್ಟಿರುತ್ತವೋ ಆಯಾ ಸಂಗತಿಯ ಗುಣಗಳನ್ನು ಅಲ್ಲಿ ಹುಟ್ಟಿದ ಸಿದ್ಧಾಂತಗಳು ಪಡೆದಿರುತ್ತವೆ. ಇನ್ನೊಂದರ್ಥದಲ್ಲಿ ಒಂದು ಸಂಗತಿಯ ಸಾಮಾನ್ಯಗುಣಗಳೆಲ್ಲ ಕೆನೆಗಟ್ಟಿದ ರೂಪವೇ ಒಂದು ಸಿದ್ಧಾಂತವಾಗಿರುತ್ತದೆ. ಹೀಗಾಗಿ ಒಂದು ಸಾಹಿತ್ಯ ಪ್ರಕಾರವನ್ನು ಅಳೆಯಲು, ಅದರ ಗರ್ಭದಲ್ಲಿ ಹುಟ್ಟಿದ ಒಂದು ಸಿದ್ಧಾಂತವು ತಕ್ಕ ಪ್ರಮಾಣವಾಗಿ ಪರೀಕ್ಷೆಗೆ ಸಹಾಯವಾಗುತ್ತದೆ; ಮತ್ತು ಇದು ಉಚಿತ ಮಾರ್ಗವೆನಿಸುತ್ತದೆ.

ಸಣ್ಣಪ್ರಕಾರದ ಜನಪದಕಾವ್ಯ (ಮದುವೆ, ಸೋಬಾನ, ಕುಪ್ಪಸ, ಮೈನರೆದ, ಜೋಗುಳ, ಕೋಲಾಟ ಮುಂತಾದ ಸಂದರ್ಭಗಳಲ್ಲಿ ಪ್ರಯೋಗವಾಗುವ ಕಾವ್ಯ ) ಓದಿದ ನಂತರದ ವಿಮರ್ಶಕನೊಬ್ಬನ ತಕ್ಷಣದ ಪ್ರತಿಕ್ರಿಯೆ, ಅಂದರೆ ‘ತಾಜಾತನದ ವಿಮರ್ಶೆ’ ಅಥವಾ ಕಾವ್ಯ ಅವನ ಮೇಲೆ ಬೀರುವ ‘ಮೊದಲ ಪರಿಣಾಮ’ ಏನಾಗಿರಬಹುದು ಎಂಬುದನ್ನು ಲಿಖಿತ ಮಾಧ್ಯಮದಲ್ಲಿ ಹಿಡಿದಿಡಲು ಪ್ರಯತ್ನಿಸಿದಾಗ ಏನಾಗಬಹುದು ಎಂಬುದರ ಒಂದು ಪ್ರಯತ್ನದ ಫಲವಾಗಿ ‘ಪ್ರಥಮ ವಿಮರ್ಶೆ’ ಮೂಡಿಬಂದಿದೆ.

೧೯೯೦ ರ ಮಾತು. ಆ ವರ್ಷ ಕರ್ನಾಟಕ ಜಾನಪದ ಅಕಾಡೆಮಿಯಿಂದ ಪ್ರಕಟ ಗೊಳ್ಳುವ ‘ಜಾನಪದ ಗಂಗೋತ್ರಿ’ ಪತ್ರಿಕೆಯ ಒಂದು ಸಂಚಿಕೆಯನ್ನು (೪ – ೨, ೧೯೯೦) ಸಂಪಾದಿಸಿಕೊಡಲು ನನಗೆ ಕೇಳಲಾಗಿತ್ತು. ಆದರೆ ಕೊಟ್ಟ ವೇಳೆ ಕೇವಲ ೨೫ ದಿನಗಳು ಮಾತ್ರ. ಇಷ್ಟು ಅಲ್ಪ ಕಾಲಾವಧಿಯಲ್ಲಿ ಯೇ ಹಲವು ಲೇಖಕರಿಂದ ದೀರ್ಘ ಲೇಖನಗಳನ್ನು ಪಡೆಯಲು ಸಾಧ್ಯವಿಲ್ಲವೆಂದು ಯೋಚಿಸಿ, ಒಂದು ಪ್ರಯೋಗಕ್ಕೆ ತೊಡಗಿದೆ. ಉತ್ತಮವಾದ, ಜನಪದ ಸಣ್ಣಪ್ರಕಾರದ ಮೂವತ್ತು ಹಾಡುಗಳನ್ನು ಆಯ್ಕೆ ಮಾಡಿದೆ. ಇವೆಲ್ಲ ಮೈನೆರೆದ, ಸೋಬಾನ, ಕುಪ್ಪಸ, ಮದುವೆ, ಜೋಗುಳ, ಕೋಲಾಟ ಮುಂತಾದ ಸಂದರ್ಭಗಳಲ್ಲಿ ಹಾಡುವ ಸಣ್ಣಪ್ರಕಾರದ ಹಾಡುಗಳು. ಇವುಗಳ ಉದ್ದ ಸುಮಾರಾಗಿ ೩೦ ರಿಂದ ೬೦ ಸಾಲುಗಳಷ್ಟು. ಭಾವಗೀತೆಯ ಸ್ವರೂಪ ಇವುಗಳ ಮುಖ್ಯ ಗುಣ.

ಈ ಮೂವತ್ತು ಭಾವಗೀತಾತ್ಮಕ ಜನಪದ ಹಾಡುಗಳನ್ನು ಜಾನಪದ ತಿಳಿದಿರುವ ಕರ್ನಾಟಕದ ಮೂವತ್ತು ಜನ ವಿಮರ್ಶಕರಿಗೆ ಕಳುಹಿಸಿದೆ. ಸಮಯದ ಅಭಾವದಿಂದ ಅವರಿಂದ ಲೇಖನಗಳನ್ನು ಕೂಡಲೇ ಪಡೆಯುವುದು ಅನಿವಾರ್ಯವಾಗಿತ್ತು. ಈ ಒತ್ತಡದಲ್ಲಿ ಕೇವಲ ಮೂರು ದಿನಗಳಲ್ಲಿ ಲೇಖನ ಬರೆದು ಪೋಸ್ಟ್ ಮಾಡಲು ವಿನಂತಿಸಿಕೊಂಡು ಒಂದು ಪತ್ರ ಬರೆದೆ. ಅವರಿಗೆ ಬರೆದ ಪತ್ರದ ಸಾಲುಗಳಲ್ಲಿ ಯೇ ಅಕಸ್ಮಾತ್ ‘ಪ್ರಥಮ ವಿಮರ್ಶೆ’ ಎಂಬ ಪದಪ್ರಯೋಗವಾಯಿತು. ಆ ಸಾಲುಗಳು ಹೀಗಿವೆ:

‘‘ಮಾನ್ಯರೆ, ತಮಗೊಂದು ಜನಪದ ಕಾವ್ಯದ ಮಾದರಿಯನ್ನು ಕಳುಹಿಸಿ ಕೊಡಲಾ ಗಿದೆ. ಒಂದು ಜನಪದಕಾವ್ಯ ಓದಿದ ಕೂಡಲೇ ಒಬ್ಬ ವಿಮರ್ಶಕನ ಮೇಲೆ ಬೀರುವ ‘ಪ್ರಥಮ ಪರಿಣಾಮ’ ಎಂತಹದು ಎಂಬುದನ್ನು ಕಲೆಹಾಕಲು ಬಯಸಲಾಗಿದೆ. ತಮಗೆ ಕಳುಹಿಸಿದ ಕಾವ್ಯದ ಮಾದರಿಯನ್ನು ಓದಿದ ಕೂಡಲೇ ತಮಗನಿಸಬಹುದಾದ ಅನಿಸಿಕೆ ರೂಪದ ‘ಪ್ರಥಮ ವಿಮರ್ಶೆ’ಯನ್ನು ಕೂಡಲೇ ಬರೆದು ನೋಡಿ. ಇದನ್ನು ಪುನ: ಪುನ: ತಿದ್ದಿ ಬರೆಯುವ ಗೋಜಿಗೆ ಹೋಗುವ ಅವಶ್ಯಕತೆಯಿಲ್ಲ. ಈ ಪತ್ರ ತಮಗೆ ಮುಟ್ಟಿದ ಮೂರನೇ ದಿನ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿರಿ’’ (೧೫ – ೨ – ೧೯೯೦).

ಪತ್ರದ ಈ ಸಾಲುಗಳಲ್ಲಿ ಅಕಸ್ಮಾತ್ ಕಾಣಿಸಿಕೊಂಡ ಒತ್ತಡದ ತೀವ್ರತೆ ಮತ್ತು ‘ಪ್ರಥಮ ಪರಿಣಾಮ’ ಮತ್ತು ‘ಪ್ರಥಮ ವಿಮರ್ಶೆ’ ಎಂಬ ಮಾತುಗಳು – ಒಂದು ಹೊಸ ಆಲೋಚನೆಗೆ ನಾಂದಿಯಾಗಬಹುದೆಂದು – ವಿದ್ವಾಂಸರಿಗೆ ವಿಮರ್ಶೆಗಾಗಿ ಹಾಡು ಕಳಿಸುವಾಗ ನನ್ನ ಗಮನಕ್ಕೆ ಬಂದಿರಲಿಲ್ಲ. ಆದರೆ ಹೊರಗಿನ ೧೪ ಜನ ವಿಮರ್ಶಕರು, ನನ್ನ ಪತ್ರಕ್ಕೆ ಸ್ಪಂದಿಸಿದ ರೀತಿ ಅದ್ಭುತವಾದುದು. ಅವರೆಲ್ಲ ನಾನು ಕೇಳಿದ ರೀತಿಯಲ್ಲಿ ಲೇಖನಗಳನ್ನು ಬರೆದು, ಜೊತೆಗಿಟ್ಟ ಪತ್ರದಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು. ಅವರ ಅಭಿಪ್ರಾಯಗಳೇ ‘ಪ್ರಥಮ ವಿಮರ್ಶೆ’ ಬಗ್ಗೆ ಆಲೋಚಿಸಲು ದಾರಿಮಾಡಿಕೊಟ್ಟವು. ಆ ಅಭಿಪ್ರಾಯಗಳ ಕೆಲ ಉದಾಹರಣೆಗಳು ಹೀಗಿವೆ:

. ಗಡಿಬಿಡಿಯಲ್ಲಿ ಏನೇನೋ ಬರೆದು ಕಳಿಸಿದ್ದೇನೆ. ಸಮಾಧಾನವಿಲ್ಲದ
ಬರಹವೆಂಬುದನ್ನು ನಾನು ಮರೆತಿಲ್ಲ.ಡಾಸೋಮಶೇಖರ ಇಮ್ರಾಪುರ

. ನನಗೆ ಅಷ್ಟು ಸಮಾಧಾನವಿಲ್ಲ. ನಿಮಗೂ ಒಂದು ವೇಳೆ ಲೇಖನ
ಸರಿಕಾಣದಿದ್ದರೆ ಹಾಕಬೇಡಿ.ಡಾಕೃಷ್ಣ ಮೂರ್ತಿ ಹನೂರ

. ಪ್ರತಿಕ್ರಿಯೆಯನ್ನು ಬರೆದು ಕಳಿಸುತ್ತಿದ್ದೇನೆ.ಪ್ರೊ ವಿರೇಂದ್ರ ಸಿಂಪಿ.

. ವಿಮರ್ಶೆ ಕಳಿಸಿದ್ದೇನೆ ಗಡಿಬಿಡಿಯಲ್ಲಿ ಬರೆದು. ತಮ್ಮ ಹೊಸ ಯೋಚನೆ ನಿಜಕ್ಕೂ ಹೊಸದು. ದಿಸೆಯಲ್ಲಿ ತಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.  – ಜ್ಯೋತಿ ಹೊಸೂರು.

. ಇದೊಂದು ಹೊಸ ಪ್ರಯತ್ನ. – ಹುರಕಡ್ಲಿ ಶಿವಕುಮಾರ.

. ತಮ್ಮ ಓಲೆ ಹಾಗೂ ತಾವು ಕಳಿಸಿದ ಜನಪದ ಕಾವ್ಯ ಎರಡನ್ನೂ ಓದಿದ ಮೇಲೆ ನನ್ನಲ್ಲುಂಟಾದ ಪರಿಣಾಮಗಳನ್ನು ಸಾಕ್ಷಿಯಾಗಿಟ್ಟುಕೊಂಡು ಲೇಖನವನ್ನು ಸಿದ್ಧಪಡಿಸಿ ಕಳಿಸುತ್ತಿದ್ದೇನೆ. ಅದರಲ್ಲಿ ಎರಡು ಭಾಗಗಳಿದ್ದು, ಮೊದಲ ಭಾಗ ತಮ್ಮ ಓಲೆಯ ವಿಷಯಕ್ಕೆ ಅಂದರೆ ಪ್ರಥಮ ವಿಮರ್ಶೆ ಪರಿಕಲ್ಪನೆಯ ಕುರಿತ ನನ್ನ ಪ್ರತಿಕ್ರಿಯೆಯನ್ನು ಒಳಗೊಂಡಿದೆ. ತಮ್ಮ ಸಲಹೆಯಂತೆ ಲೇಖನ ಪ್ರಥಮ ವಿಮರ್ಶೆಯಾಗುವಂತೇ ತಕ್ಕಷ್ಟು ಕಾಳಜಿ ವಹಿಸಿದ್ದೇನೆ. ಆದರೆ ಒಟ್ಟಿನಲ್ಲಿ ತಿದ್ದದೆಯೇ ಬರೆದಿದ್ದೇನೆ. ಓದಿದ ತಕ್ಷಣವೇ ಕಿಂಚಿತ್ತೂ ಆಲೋಚನೆಗೆ ಅವಕಾಶ ಕೊಡದೆ ಬರೆದಿದ್ದೇನೆಂದು ಹೇಳುವ ಸಾಹಸ ನನ್ನದಲ್ಲ. ಆದರೆ ನಾನು ಸಾಮಾನ್ಯ ವಾಗಿ ಬರೆಯುವ ಲೇಖನಗಳಿಗೆ ಹಿಡಿಯುತ್ತಿದ್ದ ಬಹಳಷ್ಟು ದೀರ್ಘ ಕಾಲದ ಚಿಂತನೆ, ಚರ್ಚೆ, ವಿವೇಚನೆವಿಮರ್ಶೆ ಇತ್ಯಾದಿಗಳು ಇದರಲ್ಲಿ ಬಳಕೆಯಾಗಿಲ್ಲ.  – ಡಾಎಸ್. ಎಸ್. ಕೋತಿನ.

ಹೀಗೆ ಹೊರಗಿನ ವಿಮರ್ಶಕರು ತಾವು ಕಳುಹಿಸಿದ ಲೇಖನದ ಜೊತೆ ಬರೆದ ಪತ್ರಗಳ ಸಾಲುಗಳು ನನ್ನಲ್ಲಿ ರೋಮಾಂಚನವನ್ನುಂಟು ಮಾಡಿದವು. ಡಾ. ಕೋತಿನ ಅವರು ಸುದೀರ್ಘವಾದ ಪತ್ರದ ಜೊತೆಗೆ ನೇರವಾಗಿ ಲೇಖನದಲ್ಲೂ ಅನೇಕ ಪ್ರಶ್ನೆಗಳನ್ನು ಎತ್ತಿದ್ದರು. ಡಾಎಂ. ಎಂ. ಕಲಬುರ್ಗಿಯವರು ತಾವು ಕಳುಹಿಸಿದ ಲೇಖನದಲ್ಲಿ ಯೇ ಹಲವಾರು ಬಗೆಯ ಚರ್ಚೆ ಮಾಡಿದ್ದರು.

ಇವರೆಲ್ಲರ ವಿಭಿನ್ನ ಬಗೆಯ ಪ್ರತಿಕ್ರಿಯೆಗಳಿಂದಲೇ ‘ಪ್ರಥಮ ವಿಮರ್ಶೆ’ ಒಂದು ಹೊಸ ಪರಿಕಲ್ಪನೆಯೆಂದು, ಹೊಸ ಆಲೋಚನೆಯ ಎಳೆ ಎಂದು, ಹೊಸ ಪ್ರಯೋಗ ಮತ್ತು ಪ್ರಯತ್ನವೆಂದು ನನ್ನ ಗಮನಕ್ಕೆ ಬಂದುದು. ಈ ವಿಮರ್ಶಕರು ವ್ಯಕ್ತಪಡಿಸಿದ ಭಾವನೆಗಳಿಗೆ, ಸಂಶಯಗಳಿಗೆ ಸಮಾಧಾನದ ಉತ್ತರ ಕಂಡುಕೊಳ್ಳಲು ನಾನು ಮಾಡಿದ ಪ್ರಯತ್ನದಿಂದ ‘ಪ್ರಥಮ ವಿಮರ್ಶೆ’ಯ ಆಲೋಚನೆ ಬೆಳೆಯಿತು. ‘ಪ್ರಥಮ ವಿಮರ್ಶೆ’ ಲೇಖನಗಳ ಸಂಗ್ರಹವಾಗಿ ಜಾನಪದ ಗಂಗೋತ್ರಿ(೪ – ೨, ೧೯೯೦) ಪ್ರಕಟವಾಗುವಾಗ ವಿಮರ್ಶಕರ ಸಂಶಯಗಳಿಗೆ ಪರಿಹಾರ ರೂಪದಲ್ಲಿ ಸಂಪಾದಕೀಯ ಬರೆದೆ. ಸಂಚಿಕೆ ಓದುಗರ ಕೈಗೆ ಮುಟ್ಟಿದಾಗ ಮತ್ತೆ ಕೆಲ ಉತ್ತಮ ಪ್ರತಿಕ್ರಿಯೆಗಳು ಬಂದವು. ಮತ್ತೆ ಕೆಲವರು ತಿಳಿದೋ ತಿಳಿಯದೆಯೋ ವಿಮರ್ಶೆಯಲ್ಲಿ – ಪ್ರಥಮ, ದ್ವಿತೀಯ ಎಂಬ ಹಂತಗಳಿವೆಯೇ? ಎಂಬ ಮಾತುಗಳನ್ನಾಡಿದರು. ಹೀಗೆ ಆಗಾಗ ಪ್ರಕಟವಾಗುವ ಪ್ರತಿಕ್ರಿಯೆಗಳಿಗೆ ಸರಿಯಾದ ಆಲೋಚನೆಗಳನ್ನು ಸೇರಿಸುತ್ತಲೇ ಹೋದೆ. ಇವೆಲ್ಲ ನಾನು ನಡೆಸಿದ ಪ್ರಯೋಗದ ಹಿನ್ನೆಲೆಯಲ್ಲೇ ಕಂಡುಕೊಂಡ ಆಲೋಚನೆಗಳಾಗಿವೆ. ಹೀಗೆ ಹಲವರ ಕುತೂಹಲ, ಪ್ರಶ್ನೆ, ಗ್ರಹಿಕೆಗಳನ್ನೇ ಆಧರಿಸಿ ‘ಪ್ರಥಮ ವಿಮರ್ಶೆ’ ಇಂದು ಸಿದ್ಧಾಂತ ರೂಪದಲ್ಲಿ ಬೆಳೆದು ನಿಂತಿದೆ.

ವಿಮರ್ಶೆ ಸಾಹಿತ್ಯವನ್ನನುಸರಿಸಿ ಹುಟ್ಟುವಂತಹದು. ಅಷ್ಟೇ ಅಲ್ಲ ಆ ಸಾಹಿತ್ಯ ಸೃಷ್ಟಿಸುವ ಸಂದರ್ಭದ ಗರ್ಭದಿಂದಲೇ ವಿಮರ್ಶೆಯ ಪರಿಕಲ್ಪನೆಗಳೆಲ್ಲ ಹುಟ್ಟು ಪಡೆಯುವುದು. ನಮ್ಮ ಮುಂದಿರುವ ಹೊಸ ವಿಮರ್ಶಾ ಮಾನದಂಡಗಳೆಲ್ಲ ನಮ್ಮ ಶಿಷ್ಟಸಾಹಿತ್ಯಕ್ಕಾಗಿ ಬಳಕೆಯಾಗುವಂತಹವು. ಶಿಷ್ಟಸಾಹಿತ್ಯವು ಒಬ್ಬನ ಗಂಭೀರ ಚಿಂತನೆಯ ಫಲದಿಂದ ಸೃಷ್ಠಿಯಾಗಿ, ಸ್ಥಿರಪಠ್ಯದ ರೂಪದಲ್ಲಿ ಇರುವಂತಹದು. ಅಲ್ಲಿ ಹುಟ್ಟು ಪಡೆಯುವ ವಿಮರ್ಶೆಯೂ ಅಷ್ಟೇ ಗಂಭೀರ ಚಿಂತನೆಯ ಫಲವಾಗಿ ಬರುವಂತಹದು.

ಜನಪದ ಕಾವ್ಯ ಮೂಲಭೂತವಾಗಿ ಆಶುಕವಿತ್ವದ ಲಕ್ಷಣವನ್ನು ಹೊಂದಿದೆ. ಹೆಚ್ಚಾಗಿ ಅಕ್ಷರ ಅರಿಯದವರ ಸೃಷ್ಟಿ ಅದಾಗಿರುವುದರಿಂದ ಅದು ಆಯಾ ಸಂದರ್ಭದಲ್ಲಿ ಬೇಕಾದಂತೆ ಸೃಷ್ಟಿಗೊಂಡಿರುವುದು. ಅದು ಪ್ರಯೋಗಗೊಳ್ಳುವಾಗಲೂ ಪ್ರತಿಬಾರಿಯೂ ಹೊಸ ಹುಟ್ಟು ಪಡೆಯುತ್ತದೆ ಎಂದು ಹೇಳುವಲ್ಲಿ, ಅದಕ್ಕೆ ಶಾಶ್ವತವಾಗಿ ಆಶುಕವಿತ್ವದ ಲಕ್ಷಣ ಹೊಂದಿಕೊಂಡೇ ಇದೆ. ಈ ಎಲ್ಲ ಅಂಶಗಳಲ್ಲಿ ಜನಪದಕಾವ್ಯ ಶಿಷ್ಟಕಾವ್ಯದಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ. ಈ ಅರ್ಥದಲ್ಲಿ – ಜನಪದಕಾವ್ಯ ಎಂತಹದೋ ಅಂತಹ ಗುಣಲಕ್ಷಣದ ವಿಮರ್ಶೆ ನಡೆಯ ಬೇಕಾದುದು ಅವಶ್ಯ. ಅಂದರೆ ವಿಮರ್ಶೆಯೂ ಆಶುಕವಿತ್ವದ ನೆಲೆಯಲ್ಲಿ ಆಗಬೇಕೆಂಬುದು ನನ್ನ ಒಂದು ನಿಲುವು.

ಹಾಗಾದರೆ ಗಂಭೀರ ಚಿಂತನೆಯಿಂದ ಈ ವಿಮರ್ಶೆ ದೂರ ಸರಿದಂತಾಗುತ್ತದೆ ಎಂಬ ಸಂಶಯ, ಅಪಾದನೆ ಬರುವುದು ಸಹಜ. ‘ಚಿಂತನಾ ಪ್ರಮುಖ ವಿಮರ್ಶೆ’ ತಿಳಿದಿರುವ ನಮಗೆ ಅದರಿಂದ ದೂರಾದಂತೆನಿಸುವುದು ಸಹಜ. ಆದರೆ ವಾಸ್ತವ ಹಾಗಾಗಿರುವುದಿಲ್ಲ. ನಾವು ವಿಮರ್ಶೆಯ ಇನ್ನೊಂದು ಸಾಧ್ಯತೆಯತ್ತ ಹೆಜ್ಜೆ ಇಟ್ಟಿರುತ್ತೇವೆ ಅಷ್ಟೆ. ಜನಪದ ಕಾವ್ಯವನ್ನು ಶಿಷ್ಟಸಾಹಿತ್ಯಕ್ಕಾಗಿ ಹುಟ್ಟಿಕೊಂಡ ಮಾನದಂಡಗಳಿಂದ ಅಳೆಯುವ ಕ್ರಮಕ್ಕಿಂತ ಹೀಗೆ ವೌಖಿಕ ಕಾವ್ಯದ ಹೊಟ್ಟೆಯೊಳಗೇ ಹುಟ್ಟಿಕೊಂಡ ಒಂದು ಪರಿಕಲ್ಪನೆಯ, ಆಶುಕವಿತ್ವ ಪ್ರಧಾನ ವಿಮರ್ಶೆಯನ್ನು ಬಳಕೆಗೆ ತಂದಂತಾಗುತ್ತದೆ. ಅಂದರೆ ಇಲ್ಲಿ ಚಿಂತನೆಯ ಅಂಶವೇ ಇಲ್ಲವೆಂದಲ್ಲ. ಆಶುಕವಿತ್ವದ ನಿಲುವಿನಲ್ಲಿ ಉತ್ತಮ ಕಾವ್ಯ ಹುಟ್ಟಬಹುದಾದರೆ, ಆ ನಿಲುವಿನಲ್ಲಿ ಉತ್ತಮ ವಿಮರ್ಶೆ ಹುಟ್ಟಲು ಹೇಗೆ ಸಾಧ್ಯವಿಲ್ಲ ? ಈ ಪ್ರಶ್ನೆ ನಮ್ಮಲ್ಲಿ ಹುಟ್ಟಿಕೊಂಡ ಸಂಶಯಗಳಿಗೆ ಉತ್ತರವನ್ನೊದಗಿಸುತ್ತದೆ.

ಈ ಬಗೆಯ ವಿಮರ್ಶಾಕ್ರಮದಿಂದಾಗಿ ನಾವು ಜನಪದ ಕಾವ್ಯದ ನೈಜತೆಯನ್ನು ಅರಿಯ ಬಹುದಾಗಿದೆ. ಏಕೆಂದರೆ ಆ ಕಾವ್ಯ ಸೃಷ್ಟಿಗೊಳ್ಳುವಂತಹ ಸಂದರ್ಭದಲ್ಲಿಯೇ ವಿಮರ್ಶೆಯನ್ನು ಸೃಷ್ಟಿಸುವತ್ತ ನಮ್ಮ ಪ್ರಯತ್ನ ನಡೆದಿರುತ್ತದೆ. ಈ ದೃಷ್ಟಿಯ ಹಿನ್ನೆಲೆಯಲ್ಲಿಯೇ ‘ಪ್ರಥಮ ವಿಮರ್ಶೆ’ಯ ಪರಿಕಲ್ಪನೆ ಮೂಡಿ ಬಂದುದು. ಇದು ಪ್ರಥಮ, ದ್ವಿತೀಯ ಎಂಬ ಅನುಕ್ರಮ ಣಿಕೆಯ ಹಿನ್ನೆಲೆಯಲ್ಲಿ ಗಣಿಸುವಂತಹದಲ್ಲ. ಚಿಂತನೆರಹಿತ ಬಾಲಿಶ ಕಲ್ಪನೆಯೂ ಅಲ್ಲ. ಹಾಗೆನ್ನುವುದಾದರೆ ಜನಪದಕಾವ್ಯವನ್ನೂ ಚಿಂತನೆರಹಿತ ಬಾಲಿಶಕಾವ್ಯ ಎನ್ನಬೇಕಾಗುತ್ತದೆ. ‘ಪ್ರಥಮ ವಿಮರ್ಶೆ’ ಎನ್ನುವಲ್ಲಿ ಯ ‘ಪ್ರಥಮ’ ಎಂಬ ಪದ ಈ ಎಲ್ಲ ಸಂಶಯಗಳಿಗೆ ಕಾರಣ ವಾಗುತ್ತಿದೆ. ಆದರೆ ನಾನು ಗ್ರಹಿಸಿಕೊಂಡ ‘ಪ್ರಥಮ ವಿಮರ್ಶೆ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ – ಅದೇ ಆಗ ಮೂಡಿದ, ಹೊಚ್ಚಹೊಸ, ನವೀನ, ತಾಜಾ, ಬಳಕೆಯಾಗದ, ಕಲುಷಿತಗೊಳ್ಳದ ಚಿಂತನೆಯ ಭಾವನೆಎಂಬ ಅರ್ಥದಲ್ಲಿ ‘ಪ್ರಥಮ ವಿಮರ್ಶೆ’ ಎಂಬ ಪದವನ್ನು ಬಳಸಲು ಪ್ರಯತ್ನಿಸಿದ್ದೇನೆ.

ಭಾರತೀಯ ಸಾಹಿತ್ಯಿಕ ವಲಯದಲ್ಲಿ ೧೯೫೦ ರ ವರೆಗೆ ಬಹುತೇಕವಾಗಿ ಭಾರತೀಯ ಕಾವ್ಯಮೀಮಾಂಸೆಯೊಂದಿಗೆ ಹುಟ್ಟಿಕೊಂಡು ಬಂದ ಸೌಂದರ್ಯಪ್ರಮುಖವಾದ ಪ್ರಸ್ಥಾನಗಳನ್ನೇ ಮುಖ್ಯ ಮಾನದಂಡಗಳನ್ನಾಗಿ ಮಾಡಿಕೊಂಡು ನಮ್ಮಲ್ಲಿ ವಿಮರ್ಶೆಯ ಕೆಲಸ ತಕ್ಕಮಟ್ಟಿಗೆ ನಡೆದಿದೆ. ಅದರೆ ಪ್ರಮುಖವಾದ, ಜೀವನವನ್ನು ವಿಮರ್ಶಿಸುವಂಥ ಕಾವ್ಯದ ಸಮಾಜ ಮುಖೀ – ತಿರುಳಿಗೆ ಸಂಬಂಧಿಸಿದ ಪ್ರತ್ಯೇಕಪ್ರಸ್ಥಾನಗಳು ಭಾರತೀಯ ಸಂದರ್ಭದಲ್ಲಿ ಹುಟ್ಟಿಬರಲಿಲ್ಲ. ಈ ಕಾರಣಕ್ಕಾಗಿಯೇ ಪ್ರಸ್ತುತವೆನಿಸಿದ ಪಾಶ್ಚಾತ್ಯ ವಿಮರ್ಶಾ ಮಾನದಂಡ ಗಳನ್ನು ನಮ್ಮಲ್ಲಿ ಯ ವಿಮರ್ಶಕರು ಬಳಕೆಗೆ ತಂದರೆಂದು ತೋರುತ್ತ ದೆ. ಆದರೆ ಇಲ್ಲಿ ಸೃಷ್ಟಿಗೊಂಡ ಸಾಹಿತ್ಯದ – ಭಾರತೀಯ ಲೌಕಿಕ ಜೀವನದ ಮನೋಧರ್ಮದ ಹಿನ್ನೆಲೆಯಲ್ಲಿ ಪ್ರತ್ಯೇಕವಾದ ಕಾವ್ಯಮೀಮಾಂಸಾ ಪ್ರಸ್ಥಾನಗಳು (ವಿಮರ್ಶಾ ತತ್ವಗಳು) ಹುಟ್ಟಿಕೊಳ್ಳದೇ ಇರುವುದು ಗಮನಾರ್ಹ ಸಂಗತಿ.

ಈಗ ಭಾರತೀಯ ಹಿನ್ನೆ ಲೆಯಲ್ಲಿ ಸೃಷ್ಟಿಗೊಂಡ ಕಾವ್ಯಮೀಮಾಂಸಾ ತತ್ವಗಳು ಮತ್ತು ನಾವು ಪ್ರಸ್ತುತವೆಂದು ಸ್ವೀಕರಿಸಿ ಬಳಕೆಗೆ ತಂದ ಪಾಶ್ಚಾತ್ಯ ವಿಮರ್ಶಾ ಮಾನದಂಡಗಳು ಈ ಎರಡೂ ಸಿದ್ಧಾಂತ ವಲಯಗಳು ನಮ್ಮ ಮುಂದಿವೆ. ಭಾರತೀಯ ಕಾವ್ಯಮೀಮಾಂಸೆಯಲ್ಲಿ ಸಹೃದಯನಿಗೆ ಮಹತ್ವದ ಸ್ಥಾನ ದೊರಕಿದೆ. ಆವನ ಕಲ್ಪನೆಯನ್ನು ಕೇವಲ ರಸಾನಂದವನ್ನನುಭವಿಸುವ ಮಟ್ಟಕ್ಕೆ ಮಾತ್ರ ಗ್ರಹಿಸಲಾಗಿದೆ. ಆದರೆ ರಸಾನಂದ ಆಥವಾ ಕಾವ್ಯಾನುಭವದ ಕಾಲಕ್ಕೆ ಅವನಿಗೆ ಆದ ಆನಂದದ ಅನುಭವದ ಸ್ವರೂಪ ಎಂತಹದು? ಎಂಬುದನ್ನು ಹೇಳುವ ಅವಕಾಶವನ್ನು ನಾವು ಆತನಿಗೆ ಒದಗಿಸಿಕೊಟ್ಟಿಲ್ಲ.

ಇನ್ನೊಂದು ಕಡೆ ವಿಮರ್ಶಾ ಕ್ಷೇತ್ರದಲ್ಲಿ – ವಿಮರ್ಶಕನಿಗೇ ಆಗ್ರಸ್ಥಾನ. ಅವನೇ ಅಲ್ಲಿಯ ನಾಯಕ. ಆತನಿಗೆ ಮೈತುಂಬ ಬಾಯಿಗಳು. ಅವನು ಕಾವ್ಯದ ಅಂತರಂಗದ ಜೊತೆಗೆ ತನ್ನೆಲ್ಲಾ ಸಾಧ್ಯತೆಗಳನ್ನು ಸಂಯೋಗಿಸಿ, ಕತಿಯಿಂದ ಸಿಡಿದು ಹೊರಬಂದು ದೂರ ನಿಂತು, ಅದರ ಬಗ್ಗೆ ಸಾಧ್ಯವಾದಷ್ಟನ್ನೂ ಮಾತನಾಡುತ್ತಾನೆ. ಕಾವ್ಯವನ್ನು ಹತ್ತು ಬಗೆಯಿಂದ ಬಗೆದು ನೋಡುತ್ತಾನೆ, ಒಮ್ಮಮ್ಮೆ ಕೃತಿಯನ್ನೂ ಮೀರಿ ನಿಲ್ಲುತ್ತಾನೆ. ಅಲ್ಲಿ ತನ್ನ ಶಕ್ತಿಬಲ ಪ್ರದರ್ಶನ ದಿಂದ ಕಾವ್ಯವೇ ಕುಬ್ಜವಾಗಿ ತೋರುವಂತೆಯೂ ಮಾಡುತ್ತಾನೆ.

ಒಂದು ಕಾವ್ಯ ಜೀವಂತಿಕೆಗೆ ಸಹೃದಯ ಮತ್ತು ವಿಮರ್ಶಕ ಈ ಇಬ್ಬರೂ ಅವಶ್ಯ. ಆದರೆ ಕಾವ್ಯಕ್ಕೆ ಸಂಬಂಧಿಸಿ ಇವರಿಬ್ಬರ ನಡವಳಿಕೆ ವಿಭಿನ್ನವಾಗಿದೆ. ಸಹೃದಯನು ಒಂದು ಕೃತಿ ತನ್ನ ವಾಚನದಿಂದ ಸೃಷ್ಟಿಸುವ ಪರಿಣಾಮದ ವ್ಯಾಪ್ತಿಯಲ್ಲಿಯೇ ಸುಳಿದಾಡುವವ. ಈ ವಾತಾವರಣದಲ್ಲಿ ತಾನು ಪಟ್ಟ ಪಾಡು ಏನೆಂಬುದನ್ನು ತಿಳಿಸಲಾಗದ ವಿಚಿತ್ರ ಸ್ಥಿತಿ ಆತನದು. ಇನ್ನೊಂದು ಕಡೆ ವಿಮರ್ಶಕನ ಸ್ಥಿತಿಯೇ ಬೇರೆಯಾಗಿದೆ. ಆತ ಚಾಣಾಕ್ಷ, ಪಂಡಿತ, ಆದರೆ ತನ್ನ ಮೇಲುಂಟಾದ ಕೃತಿಯ ಪರಿಣಾಮದ ವಲಯದಿಂದ ಹೊರಬಂದು ಕೃತಿಪರೀಕ್ಷೆಗೆ ತೊಡಗುವ ಜಾಯಮಾನ ಅವನದು.

ಸಹೃದಯನು ಕೃತಿಯ ಪರಿಣಾಮದ ವ್ಯಾಪ್ತಿಯ ಒಳಗೆ, ವಿಮರ್ಶಕನು ಆ ವಲಯದ ಹೊರಗೆ. ಒಳಗಿರುವವನು (ಸಹೃದಯ) ಅಲ್ಲಿರುವದೇನೆಂದು ಹೇಳಲು ರೂಢಿಸಿಕೊಂಡಿಲ್ಲ. ಬಾಯಿವುಳ್ಳವ(ವಿಮರ್ಶಕ) ವಲಯದ ಒಳಗಿಲ್ಲ. ಜೇನುಂಬುವವ(ಸಹೃದಯ)ನಿಗೆ ಸವಿಯ ಅನುಭವವನ್ನು ಅಂದರೆ ತನಗಾದ ಆನಂದದ ಪರಿಯನ್ನು ಬಿಚ್ಚಿಹೇಳಲು ಆಗುತ್ತಿಲ್ಲ. ಅದರ ರುಚಿ ನೋಡಿದವನೋ ಸವಿಯ ಬಗ್ಗೆ ಬಾಯಿ ತುಂಬ ಮಾತನಾಡುತ್ತಿದ್ದಾನೆ.

ಈಗ ನಾವು ಕೇವಲ ಆನಂದಮಯಿ ಸಹೃದಯನನ್ನು ಹಾಗೂ ರುಚಿಯ ಸವಿಯನ್ನು ಸೂಕ್ಷ್ಮವಾಗಿ ಹಿಡಿದಿಡಬಲ್ಲ ಸಾಮರ್ಥ್ಯವುಳ್ಳ ವಿಮರ್ಶಕನನ್ನು ಒಂದು ಒಲುಮೆಯ ರೇಖೆಯಲ್ಲಿ ಒಂದುಗೂಡಿಸಿದರೆ ಅಪರೂಪವಾದ ಒಂದು ಅದ್ಭುತ ಅನುಭವವನ್ನು ಹಿಡಿದಿಡಬಹುದಾಗಿದೆ. ಸಹೃದಯನ ಆನಂದದ ಸಾಗರವನ್ನು ವಿಮರ್ಶಕನ ತೂಬಿನ ಮೂಲಕ ಹರಿಸಬಹುದಾಗಿದೆ. ಆಗ ಅದೊಂದು ರೋಮಾಂಚಕಾರೀ ಅನುಭವದ ದರ್ಶನವಾಗುವ ಸಾಧ್ಯತೆಯಿದೆ. ಸಹೃದಯ ಮತ್ತು ವಿಮರ್ಶಕ ಈ ಇಬ್ಬರ ಮಿಲನದ ದಾರಿ ಮತ್ತು ಪರಿಣಾಮದ ಸಾಧ್ಯತೆಯನ್ನು ಹೇಳಿಕೊಡುವ – ದಾಖಲಿಸುವ ಮಾರ್ಗವೇ ‘ಪ್ರಥಮ ವಿಮರ್ಶೆ’ಯಾಗಿದೆ.

ಕಾವ್ಯವನ್ನು ವಿಮರ್ಶಿಸಲು ವಿಮರ್ಶಕನಾದವನು ಸಾಮಾನ್ಯವಾಗಿ ಸುದೀರ್ಘವಾದ ಕಾಲಾವಕಾಶವನ್ನು ಬೇಡುತ್ತಾನೆ. ಈ ಅವಧಿಯಲ್ಲಿ ಆತ ತನಗೆ ಇಷ್ಟವಾದ ಕಾವ್ಯವನ್ನು ಸಾಕಷ್ಟು ಸಲ ಓದಿ, ಮನನ ಮಾಡಿಕೊಂಡು, ಸಹಾಯಕ ಸಂಗತಿಗಳನ್ನೆಲ್ಲಾ ಕಲೆ ಹಾಕಿಕೊಂಡು, ಸಾವಧಾನವಾಗಿ ಸಮಾಲೋಚಿಸಿ, ಗೊತ್ತಾದ ಕಾವ್ಯದ ಸುದೀರ್ಘ ಹಾಗೂ ಸೂಕ್ಷ್ಮವಿವೇಚನೆ ನಡೆಸಿದಾಗ ಮಾತ್ರ ಆತನಿಗೆ ಸಮಾಧಾನ. ಇದು ವಿಮರ್ಶಕರಲ್ಲಿ ಬೆಳೆದುಕೊಂಡು ಬಂದ ಜಾಯಮಾನ, ರೂಢಿಸಿಕೊಂಡು ಬಂದ ಪದ್ಧತಿ.

ಒಬ್ಬ ಸಹೃದಯನು ಸಾಮಾನ್ಯವಾಗಿ ‘ಕಾವ್ಯದ ವಾಚಿಸುವಿಕೆಯ ಜೊತೆಜೊತೆಗೇ ಕಾವ್ಯಾನುಭವವನ್ನು ಪಡೆಯುತ್ತಾನೆ’ ಎಂದು ನಮ್ಮ ಸಾಮಾನ್ಯ ತಿಳುವಳಿಕೆ. ಒಬ್ಬನು ರಸಾನಂದವನ್ನು ಅಥವಾ ಕಾವ್ಯಾನುಭವವನ್ನು ಅನುಭವಿಸಲು ಒಂದು ಗೊತ್ತಾದ ಕಾವ್ಯವನ್ನು ಎಷ್ಟು ಬಾರಿ ಓದಬೇಕಾಗುತ್ತದೆ? ಎಂಬುದೊಂದು ಪ್ರಶ್ನೆ. ಆತ ಅಲ್ಲಿ ಒಬ್ಬ ವಿಮರ್ಶಕನು ಕಾವ್ಯವಿಮರ್ಶೆಗಾಗಿ ತೆಗೆದುಕೊಳ್ಳುವ ಸುದೀರ್ಘವೆನ್ನಬಹುದಾದ ಓದು, ಸಂಗತಿಗಳನ್ನು ಕಲೆಹಾಕುವುದು, ಸಮಾಲೋಚಿಸುವುದು ಇತ್ಯಾದಿಗಳನ್ನು ಮಾಡುತ್ತಾನೆಯೇ? ಇಲ್ಲ. ಏಕೆಂದರೆ ರಸಾನಂದ – ಕಾವ್ಯಾನುಭವ ಪಡೆಯಲು ಇಷ್ಟೆಲ್ಲಾ ತಯಾರಿ ಬೇಕೆಂದರೆ, ಬೆರಳೆಣಿಕೆಯಷ್ಟೇ ಲಭ್ಯವಿರುವ ವಿಮರ್ಶಕರಂತೆ, ಅಷ್ಟೇ ಪ್ರಮಾಣದ ಸಹೃದಯರೂ ಇರಬಹುದಾಗಿತ್ತು. ಆದರೆ ವಾಸ್ತವತೆ ಹಾಗಿಲ್ಲ ಎಂಬುದು ನಮಗೆಲ್ಲಾ ತಿಳಿದ ಸಂಗತಿಯೇ. ಸಹೃದಯರೆಲ್ಲ ಕಾವ್ಯಾನುಭವವನ್ನು ಪಡೆಯಲು ಇಷ್ಟೆಲ್ಲಾ ತಯಾರಿ ಆಗಬೇಕಾದ ಅವಶ್ಯಕತೆ ಕಾಣಿಸದು.ಒಬ್ಬನು ತನಗೆ ಕನಿಷ್ಟ ಪಕ್ಷ – ಕಾವ್ಯ ಅರಿತುಕೊಳ್ಳುವಷ್ಟು ಸಲವಾದರೂಓದಬೇಕು. ಅರಿಯಲು ಪ್ರಯತ್ನಿಸಬೇಕು. ಈ ಕನಿಷ್ಠ ಪ್ರಯತ್ನವನ್ನು ಆತ ಮಾಡಲೇಬೇಕಾಗುತ್ತದೆ. ಈ ಕನಿಷ್ಠ ತಯಾರಿಯ ಕಾವ್ಯದ ವಾಚನದಿಂದ ಸಹೃದಯನು ಕಾವ್ಯಾನುಭವನ್ನು ಪಡೆಯಬಲ್ಲ.

ಇಲ್ಲಿ ಸಹೃದಯ ಎಂದರೆ ರಸಾನಂದವನ್ನು ಅಥವಾ ಕಾವ್ಯಾನುಭವವನ್ನು ಪಡೆಯುವ ಹಂತದಲ್ಲಿಯ ಮಾನಸಿಕಸ್ಥಿತಿಎಂದು ಭಾವಿಸಬೇಕು. ಇದನ್ನು ಸಹೃದಯಸ್ಥಿತಿಎಂದೂ ಕರೆಯಬಹುದಾಗಿದೆ.ಈ ‘ಮಾನಸಿಕಸ್ಥಿತಿ’ಯಲ್ಲಿ ಎಂತಹ ಪಂಡಿತನಾಗಿರಲಿ, ವಿಮರ್ಶಕನಾ ಗಿರಲಿ ಆತ ಸಹೃದಯನೇ ಆಗಿರುತ್ತಾನೆ.ಈ ಹಂತ ದಾಟಿದ ನಂತರವೇ ಪಂಡಿತ, ವಿಮರ್ಶಕ ಮುಂತಾದ ಸ್ಥಿತಿಗಳು ಕಾಣಿಸಿಕೊಳ್ಳುತ್ತವೆ.

ಈಗ ಕಾವ್ಯ ವಾಚನದಿಂದ ಒಬ್ಬ ಸಾಮಾನ್ಯ ಸಹೃದಯನು ತನ್ನಲ್ಲುಂಟಾದ ಅನುಭವ ವನ್ನು ಮಾತಿನ ಮೂಲಕ ಪ್ರತಿಕ್ರಿಯಿಸಲು ಪ್ರಯತ್ನಿಸಬಹುದು. ಆದರೆ ಆತನಿಗೆ ತನ್ನ ವಿಚಾರ ಗಳನ್ನು ಸುಸಂಗತವಾಗಿ ಬರವಣಿಗೆಯ ಶಿಸ್ತಿಗೆ ಒಳಪಡಿಸಲು ಸಾಧ್ಯವಾಗಲಾರದು. ಏಕೆಂದರೆ ಸುಸಂಗತವಾದ ಆಲೋಚನಾ ವಿಧಾನ ಮತ್ತು ಅಷ್ಟೇ ಸುಸಂಗತವಾದ ಬರವಣಿಗೆಯ ರೀತಿ ಇವು ಪುನ: ಒಂದು ಅಭ್ಯಾಸದ ಫಲವಾಗಿ ಕಾಣಿಸಿಕೊಳ್ಳುತ್ತವೆ. ಆದರೆ ಈ ಕಲೆಗಳನ್ನು ವಿಮರ್ಶಕನಾದವನು ಪಳಗಿಸಿಕೊಂಡವನಾಗಿರುತ್ತಾನೆ. ಈಗ ವಿಮರ್ಶಕನೊಬ್ಬನು ಕಾವ್ಯ ವಾಚನಕ್ಕೆ ತೊಡಗಿದಾಗ, ಅವನ ಮನಸ್ಸು ಕೆಲಸ ಮಾಡುವದು ಎಲ್ಲಾ ಸಾಮಾನ್ಯ ಸಹೃದಯ ರಂತೆಯೇ. ಆತನೂ ಒಂದು ಸ್ಥರದಲ್ಲಿ ರಸಾನಂದ ಅಥವಾ ಕಾವ್ಯಾನುಭವವನ್ನು ಪಡೆಯುತ್ತಾನೆ. ಈ ಹಂತ ದಾಟಿ ಅಭ್ಯಾಸ ಮುಂದುವರೆಸಿದರೆ ಅದು ವಿಮರ್ಶಕನ ವಿಶೇಷ ಅಭ್ಯಾಸ ಅಥವಾ ತಯಾರಿ ಆಗುತ್ತದೆ. ಆದರೆ ಸಹೃದಯನ ಸ್ಥಿತಿಯಲ್ಲಿ ನಿಂತು ಕಾವ್ಯಾನುಭವ ವನ್ನು ಪಡೆದ ನಂತರ ಈ ವಿಮರ್ಶಕ ತನ್ನ ಪ್ರತಿಕ್ರಿಯೆಯನ್ನು ಸಾಮಾನ್ಯ ಓದುಗನಿಗಿಂತ ಸುಸಂಗತವಾಗಿ ವ್ಯಕ್ತಪಡಿಸಬಲ್ಲ. ಜೊತೆಗೆ ಈತನಿಗೆ ಬರವಣಿಗೆಯ ಕಲೆಯೂ ಒಗ್ಗಿರುವುದ ರಿಂದ ಮನಸ್ಸು ಮಾಡಿದರೆ ಆ ಕ್ಷಣದ ಅನುಭವವನ್ನು ಅಕ್ಷರಗಳಲ್ಲಿ ದಾಖಲಿಸಲೂ ಬಲ್ಲ.

ಇಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೆ, ಕೆಲವು ಸಂಶಯಗಳು ಕಾಣಿಸಿಕೊಳ್ಳುತ್ತವೆ. ಕಾವ್ಯದ ಪ್ರಥಮ ಹಂತದ ವಾಚನದಿಂದ ಒಬ್ಬ ಸಹೃದಯ ಮತ್ತು ಒಬ್ಬ ವಿಮರ್ಶಕ ಪಡೆಯುವ ಅನುಭವದ ಸಾಂದ್ರತೆಯಲ್ಲಿ ವ್ಯತ್ಯಾಸಗಳು ಕಾಣಿಸುವುದಿಲ್ಲವೇ ? ಎಂಬುದೊಂದು ಮಹತ್ವದ ಪ್ರಶ್ನೆ. ಇಲ್ಲಿ ನಾವು – ಈ ಇಬ್ಬರಲ್ಲೂ ಗ್ರಹಿಕೆಯ ಮಟ್ಟದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತ ವೆಂದು ಒಪ್ಪಿಕೊಳ್ಳಲೇಬೇಕಾಗುತ್ತದೆ. ಏಕೆಂದರೆ ಒಬ್ಬ ವಿಮರ್ಶಕನು ಪಡೆದ ‘ಸಂಸ್ಕಾರ ವಿಶೇಷ’ಕ್ಕೂ ‘ಸಹೃದಯನ ಸಂಸ್ಕಾರ ವಿಶೇಷ’ಕ್ಕೂ ವ್ಯತ್ಯಾಸ ಇದ್ದೇ ಇರುತ್ತದೆ. ಆದರೆ ಪ್ರಥಮ ಹಂತದ ಕಾವ್ಯವಾಚನದಲ್ಲಿ, ಸಹೃದಯನು ಪಡೆಯುವ ಅನುಭವಕ್ಕಿಂತ ಬಹು ಎತ್ತರದ ಅನುಭವವನ್ನು ವಿಮರ್ಶಕ ಹೊಂದಿರದೆ, ಸಾಮಾನ್ಯವಾಗಿ ಸಹೃದಯನ ಅನುಭವಕ್ಕೆ ಹತ್ತಿರದ ಅನುಭವ ಎನ್ನುವಷ್ಟರ ಮಟ್ಟಿಗೆ ಸಮೀಪದಲ್ಲಿ ರುತ್ತಾನೆ ಎಂದು ಹೇಳಬಹುದಾಗಿದೆ.

ನಾನೀಗ ‘ಪ್ರಥಮ ವಿಮರ್ಶೆ’ ಎಂದು ಕರೆಯಲು ಬಯಸಿದುದು – ‘ವಿಮರ್ಶಕನ ಈ ಸಹೃದಯನ ಸ್ಥಿತಿಯ ಅನುಭವದ ಅಭಿವ್ಯಕ್ತಿಯನ್ನು’. ಅಂದರೆ ಈ ಹಂತದ ವಿಮರ್ಶೆ ಸುಮಾರಾಗಿ ಸಾಮಾನ್ಯ ಸಹೃದಯನ ಅಭಿಪ್ರಾಯವೂ ಆಗಿರುತ್ತದೆ. ಗ್ರಹಿಕೆಯ ಮಟ್ಟದಲ್ಲ್ಲಿ ವ್ಯತ್ಯಾಸಗಳು ಕಾಣಿಸಿಕೊಂಡರೂ ಸಾಮಾನ್ಯನೋಟ ಒಂದೇ ಆಗಿರುವ ಸಾಧ್ಯತೆ ಇದೆ. ಈ ಹಂತದ ವಿಮರ್ಶೆಯಲ್ಲಿ ವಿಮರ್ಶಕನ ವೈಯಕ್ತಿಕ ಛಾಯೆ ಇನ್ನೂ ಬಲಿತಿರಲಾರದು. ವ್ಯಷ್ಠೀಮುದ್ರೆ ಒತ್ತಿರಲಾರದು. ಅದಕ್ಕಾಗಿ ‘ಸಮಷ್ಠೀದೃಷ್ಟಿ’ ‘ಪ್ರಥಮ ವಿಮರ್ಶೆ’ಯಲ್ಲಿ ತಾನೇ ತಾನಾಗಿ ಮೂಡಿ ಬಂದಿರುತ್ತದೆ. ಒಂದು ಗೊತ್ತಾದ ಕಾವ್ಯ ಓದಿದಾಗ, ಸಾಮಾನ್ಯ ಸಹೃದಯನಿಗೆ ಏನನಿಸಿರಬಹುದು ಎಂಬುದನ್ನು ‘ಪ್ರಥಮ ವಿಮರ್ಶೆ’ ನಮಗೆ ಹೇಳಿ ಕೊಡುತ್ತದೆ. ‘ಪ್ರಥಮ ವಿಮರ್ಶೆ’ಯ ವಿಚಾರಗಳು ಬಹುಮಟ್ಟಿಗೆ ಸಹೃದಯನವೇ ಆದುದ ರಿಂದ, ಒಂದು ಅರ್ಥದಲ್ಲಿ ಸಹೃದಯನೇ ಮೊದಲ ವಿಮರ್ಶಕನೆನಿಸುತ್ತಾನೆ. ಹೀಗಾಗುವು ದರಿಂದ ಒಂದು ಕಾವ್ಯದ ಸಾಮಾನ್ಯ ಸತ್ವ – ಶಕ್ತಿಗಳು ಏನೆಂಬುದು ನಮಗೆ ಗೊತ್ತಾಗುತ್ತವೆ.

ಅಂದರೆ – ‘ಕಾವ್ಯ ತನ್ನ ಸಂಬಂಧವನ್ನು ಸಹೃದಯನ ಜೊತೆಗೆ ಬೆಸೆದುಕೊಳ್ಳುವಾಗಿನ ಅನುಭವ ಪ್ರಥಮ ವಿಮರ್ಶೆಯ ದ್ರವ್ಯವಾಗಿರುತ್ತದೆ’. ಇಲ್ಲಿ ಹೆಚ್ಚಿನ ತಯಾರಿಯ ಅವಶ್ಯಕತೆ ಇರದೆ, ಅತಿಕಡಿಮೆ ಅವಧಿ ಮತ್ತು ಅಲ್ಪ ಪ್ರಯತ್ನದ ಮೂಲಕವಾಗಿಯೇ ದೊರಕಬಹುದಾದ, ಸಮಷ್ಠೀ ಪ್ರಜ್ಞೆಯಿಂದ ತುಂಬಿದ, ಕಾವ್ಯವನ್ನು ಸಾಮಾನ್ಯರಿಗೂ ಅರಿಯಲು ಸಾಧ್ಯವಾಗಿಸ ಬಹುದಾದ ಮಾರ್ಗದರ್ಶಿ ‘ಪ್ರಥಮ ವಿಮರ್ಶೆ’ಎಂದು ಹೇಳಬಹುದು.

ವಿಮರ್ಶಕನೊಬ್ಬ ಸಹೃದಯನ ಸ್ಥಿತಿಯಲ್ಲಿ ನಿಂತು, ಒಂದುಕಾವ್ಯವನ್ನು ಓದಿದ ನಂತರದ ಅವನ ಅನಿಸಿಕೆ ರೂಪದ ಪ್ರಥಮ ಅಭಿವ್ಯಕ್ತಿಯನ್ನು ಅಥವಾ ಕಾವ್ಯ ಅವನ ಮೇಲೆ ಬೀರುವ ಪ್ರಥಮ ಪರಿಣಾಮವನ್ನು ವಿಮರ್ಶೆಯ ರೂಪದಲ್ಲಿ ಹಿಡಿದಿಡಲು ಪ್ರಯತ್ನಿಸಿದರೆ ಏನಾಗಬಹುದು ಎಂಬುದನ್ನು ಪ್ರಥಮ ವಿಮರ್ಶೆಯಲ್ಲಿ ಕಾಣಬಹುದಾಗಿದೆ. ಹೀಗೆ ಪ್ರಥಮ ವಿಮರ್ಶೆ’ – ಒಂದು ವಿಶಿಷ್ಟ ಅನುಭವವನ್ನು ಹಿಡಿದಿಡುವ ಪ್ರಾಮಾಣಿಕ ಪ್ರಯತ್ನವಾಗಿ ರುತ್ತದೆ. ಆದುದರಿಂದ ವಿಮರ್ಶಕನಾದವನು ಬಲು ಎಚ್ಚರಿಕೆಯಿಂದಲೇ ಕಾವ್ಯನುಭವದ ಅದ್ಭುತ ಪರಿಣಾಮವನ್ನು ಆದಷ್ಟು ಪ್ರಾಮಾಣಿಕತನದಿಂದಲೇ ದಾಖಲಿಸುವ ಪ್ರಯತ್ನ ಮಾಡಬೇಕಾ ಗುತ್ತದೆ. ಕಾವ್ಯ ವಾಚನದಿಂದ ತನ್ನಲ್ಲುಂಟಾದ ಪರಿಣಾಮದ ಪ್ರಮಾಣ ಮತ್ತು ವ್ಯಾಪ್ತಿಯ ಜೊತೆಗೆ – ಆತ ಬಹು ಎಚ್ಚರಿಕೆಯಿಂದಲೇ ಸಂಬಂಧವನ್ನು ನಿರಂತರವಾಗಿಸಿ ಕೊಂಡು, ತನ್ನ ವಿಮರ್ಶನ ಶಕ್ತಿಯ ಸಂಗ್ರಹಿತ ಬಲದೊಂದಿಗೆ ಸಂಬಂಧವನ್ನು ಕುದುರಿಸಿ ಕೊಳ್ಳುತ್ತಾನೆ. ಈ ಸಂಯೋಗ ಪ್ರಥಮ ವಿಮರ್ಶೆಅಂಕುರಿಸುವ ಅತ್ಯಂತ ಮಹತ್ವದ ಯೋಗ. ಈ ಯೋಗಾಯೋಗ ಅತ್ಯಂತ ಸುಸಂಗತವಾಗಿ, ಮುದವಾಗಿ ಏರ್ಪಡದೇ ಹೋದರೆ ‘ಪ್ರಥಮ ವಿಮರ್ಶೆ’ಯ ಮೊಳಕೆ ಅಂಕುರಿಸಲು ಅವಕಾಶವಿಲ್ಲದಾಗುತ್ತದೆ. ಕಾವ್ಯವಾಚನದಿಂದ ತನ್ನ ಆಂತರ್ಯದಲ್ಲುಂಟಾದ ಕಂಪನದ ತೀವ್ರತೆಯನ್ನು ಕಾಪಾಡಿಕೊಂಡು ದಾಖಲಿಸುವ ಸಿದ್ಧತೆಗಾಗಿ ವಿಮರ್ಶಕ ತನ್ನ ಸಿದ್ಧಬಲವನ್ನು ಬಳಸಿಕೊಳ್ಳಬೇಕಾದುದು ಅವಶ್ಯ. ಆದರೆ ಈ ಸಿದ್ಧಬಲ ಕಾವ್ಯದ ಪರಿಣಾಮವನ್ನೇ ತಿಂದು ಹಾಕಬಹುದಾದ ಅಪಾಯದ ಅಂಚಿನಿಂದ ಆತ ಸದಾ ಜಾಗರನಿದ್ದುಕೊಂಡೇ ತನ್ನ ಸೂಕ್ಷ್ಮವಾದ ಮತ್ತು ಬಹುಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಆತನ ಸಹಾಯಕ್ಕೆ ಬರುವುದು ವಿಮರ್ಶಕನ ಸಂಸ್ಕಾರ ವಿಶೇಷ.

ವಿಮರ್ಶಕನು ತನ್ನ ಶಕ್ತಿಯ ಪ್ರಾಬಲ್ಯದಿಂದಾಗಿ, ವೈಯಕ್ತಿಕ ಸಂಬಂಧಗಳ ಅರಿವಿನಿಂದಾಗಿ ಆತನ ಮನಸ್ಸು ಭ್ರಷ್ಟವಾಗುವ ಮುನ್ನ ದಾಖಲಾಗುವ ಒಂದು ಕ್ರಿಯೆ ‘ಪ್ರಥಮ ವಿಮರ್ಶೆ.’ ಇದು ತೇಲುರೂಪದ ಅನಿಸಿಕೆಯನ್ನು ದಾಟಿ, ಹೇಳಿಕೆ ರೂಪದ ಅಭಿಪ್ರಾಯವನ್ನು ಮೀರಿ, ಜವಾಬ್ದಾರಿಯುತ ಪ್ರಾಮಾಣಿಕ ರೂಪದ ‘ಪ್ರಥಮ ವಿಮರ್ಶೆ’ಯು ಜನಪದಕಾವ್ಯ ಸೃಷ್ಟಿಗೊಳ್ಳುವ ಒಂದು ವಿಶಿಷ್ಟ ವಾತಾವರಣದಲ್ಲಿ ಹುಟ್ಟು ಪಡೆಯುವ ಒಂದು ಬಂಗಾರದ ಗಟ್ಟಿ, ಶುದ್ಧ ದ್ರವ್ಯ. ಹೀಗಾಗಿ ಇದರಲ್ಲಿ ಬಾಲಿಶತನ ಇಲ್ಲವೆ ಎಳೆತನ ಕಾಣಲಾರದು, ಭ್ರಷ್ಟತೆ ಇಲ್ಲವೆ ಕಲುಷಿತ ಬುದ್ಧಿ ತಲೆಹಾಕಲಾರದು. ಅದಕ್ಕಾಗಿ ‘ಪ್ರಥಮ ವಿಮರ್ಶೆ’ಯನ್ನು ವಿಮರ್ಶಾ ಕ್ಷೇತ್ರದಲ್ಲಿ ಯ ಒಂದು ಸುವರ್ಣದ ಎಳೆ ಎಂತಲೇ ಹೇಳಬೇಕಾಗುತ್ತದೆ.

ಇವಿಷ್ಟು ‘ಪ್ರಥಮ ವಿಮರ್ಶೆ’ ಎಂಬ ಪರಿಕಲ್ಪನೆ ಕುರಿತು ನನಗೆ ಹೊಳೆದ ಆಲೋಚನೆ ಗಳು. ಇನ್ನು ‘ಪ್ರಥಮ ವಿಮರ್ಶೆ’ಎನ್ನುವ ಬದಲಾಗಿ ‘ಸಹೃದಯ ವಿಮರ್ಶೆ, ಎಂದು ಕರೆಯ ಬಹುದಲ್ಲಾ ಎಂದು ಯಾರಾದರೂ ಕೇಳಬಹುದು. ‘ಸಹೃದಯ ವಿಮರ್ಶೆ’ ಎಂಬುದು ನನಗೆ ತಿಳಿದಂತೆ ನಮ್ಮಲ್ಲಿ ಕೇವಲ ಒಂದು ಕೃತಿಯ ಗುಣಗಾನ, ಗುಣಗ್ರಹಣ, ಗುಣವಿವೇಚನೆ ಎಂಬ ಅರ್ಥಗಳಲ್ಲಿ ಮಾತ್ರ ಗ್ರಹಿಸಿದ್ದೇವೆ. ಅಂದರೆ ಇಂಗ್ಲೀಷಿನ (Appreciation) ಎಂಬ ಪದದ ಸಮಾನ ಕಲ್ಪನೆಯಲ್ಲಿ ‘ಸಹೃದಯ ವಿಮರ್ಶೆ’ಎಂಬುದು ಬಳಕೆಯಾಗುತ್ತಿದೆ. ಆದ್ದರಿಂದ ಅದನ್ನು ‘ಪ್ರಥಮ ವಿಮರ್ಶೆ’ ಎಂಬ ಹೆಸರಿನ ಬದಲಿಗೆ ಬಳಸಲು ಆಗದು. ಇಂಗ್ಲೀಷಿನ Critical Appreciation ಎಂಬುದು ಹೆಚ್ಚು ಕಡಿಮೆ ವಿದ್ಯಾರ್ಥಿಗಳು ತಯಾರಿಸಿಕೊಳ್ಳುವ ಅಥವಾ ಅವರಿಗಾಗಿ ಸಿದ್ಧಪಡಿಸುವ ‘ನೋಟ್ಸ್’ ಕಲ್ಪನೆಯಲ್ಲಿ ಬಳಕೆಯಾಗುವಂತಹದು. ಒಂದು ಕಾವ್ಯದ ಗುಣವಿವೇಚನೆಯನ್ನೇ ಅಲ್ಪಮಟ್ಟಿನ (ಜನಪ್ರಿಯ) ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವಂತಹದು, ಅದಕ್ಕಾಗಿ Critical Appreciation ಕೊಡುವ ಅರ್ಥವೂ ‘ಪ್ರಥಮ ವಿಮರ್ಶೆ’ಯ ಮಟ್ಟಕ್ಕೆ ಏರಲಾರದು. ‘ರಸವಿಮರ್ಶೆ’ ಎಂಬುದು ಕೂಡ ತೀರ ಸೀಮಿತ ಅರ್ಥದಲ್ಲಿ ಬಳಕೆಯಾಗುತ್ತಿದ್ದು, ಕೇವಲ ರಸ ಪ್ರಸಂಗಗಳನ್ನು ಮಾತ್ರ ಎತ್ತಿಹೇಳುವ, ವೈಭವೀಕರಿಸುವ ಒಂದು ರೀತಿಯಾಗಿದೆ. ಹೀಗಾಗಿ ಇದು ‘ಪ್ರಥಮ ವಿಮರ್ಶೆ’ಯ ವ್ಯಾಪ್ತಿಯನ್ನು ಹಿಡಿದಿಡಲಾರದು.

ಒಟ್ಟಾರೆಯಾಗಿ ಇಲ್ಲಿ ಗಮನಿಸಬೇಕಾದ ಮುಖ್ಯಾಂಶಗಳು ಇಷ್ಟು :

. ಆಶುಕವಿತ್ವದ ಗುಣದ (ತಾಜಾತನದ, ಅದೇ ಆಗ ಹುಟ್ಟಿದ) ಪ್ರತಿಕ್ರಿಯೆ.

. ವಿಮರ್ಶಕ ಸಾಮರ್ಥ್ಯದಿಂದಸಹೃದಯ ಸ್ಥಿತಿಯ ಅನುಭವದ ದಾಖಲೆ.

. ವಿಮರ್ಶಕನ ಮನಸ್ಸು ಭ್ರಷ್ಟಗೊಳ್ಳದ ಮುನ್ನಿನ ಸ್ಥಿತಿಯ ಪ್ರತಿಕ್ರಿಯೆ.

. ಸಣ್ಣ ಪ್ರಕಾರದ ಕಾವ್ಯಗಳ ಓದಿನ ಪರಿಣಾಮ.

* * *