ಸಾಂಸ್ಕೃತಿಕವಾಗಿ ಉತ್ತರ ಕರ್ನಾಟಕದ ಶ್ರೀಮಂತ ಪ್ರದೇಶಗಳಲ್ಲಿ ಧಾರವಾಡವು ಒಂದು. ಈ ಭಾಗವು ಭೌಗೋಳಿಕವಾಗಿ ಮಲೆನಾಡು ಹಾಗೂ ಬಯಲು ಪ್ರದೇಶಗಳ ಮಧ್ಯದಲ್ಲಿರುವುದರಿಂದ ಇದಕ್ಕೆ ‘ಹೊಂಗಲನಾಡು’ ಅಥವ ‘ಗಡಿನಾಡು’ ಎಂಬ ಹೆಸರು ಪ್ರಾಪ್ತವಾಗಿದೆ. ಈ ಪ್ರದೇಶದಲ್ಲಿ ಕನ್ನಡನಾಡಿನ ಸಂಸ್ಕೃತಿ ಕೀರ್ತಿ ಪತಾಕೆಯನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೆರೆಯಿಸಿದ ಅನೇಕ ಗಣ್ಯ ವ್ಯಕ್ತಿಗಳು ಆಗಿ ಹೋಗಿದ್ದಾರೆ, ಅಂಥವರಲ್ಲಿ ಕನ್ನಡ ಜನಪದ ಗೀತಕಾರ ಹಾಗೂ ಗಾಯಕ ಬಾಳಪ್ಪ ಹುಕ್ಕೇರಿಯವರು ಒಬ್ಬರು.

ಬಾಳಪ್ಪ ಹುಕ್ಕೇರಿಯವರು ಈ ಪ್ರದೇಶದ ಬೆಳಗಾವಿ ಜಿಲ್ಲೆಯ ಪುಟ್ಟ ಹಳ್ಳಿಯಾದ ಮುರಗೋಡದವರು. ಈ ಊರು ಮಧ್ಯಯುಗದಿಂದಲೂ ಅನೇಕ ಕಲೆಗಳಿಗೆ ಸಾಂಸ್ಕೃತಿಕ ನೆಲೆಯಾಗಿದೆಯಲ್ಲದೆ ಈ ಪುಟ್ಟ ಊರು ಧರ್ಮ, ಸಂಗೀತ, ಸಾಹಿತ್ಯ, ನಾಟಕ, ನೃತ್ಯ ಮತ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿದೆ. ಈ ತಪೋಭೂಮಿಯಲ್ಲಿ ಶಿವ ಭೋಧನೆಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಪವಾಡ ಪುರುಷ ಚಿದಂಬರರು ನೆಲೆಸಿದ್ದರು. ಗರಗದ ಮಡಿವಾಳಪ್ಪನವರು ಈ ಊರಿನ ಸಮೀಪದ ಸಿದ್ಧನ ಗವಿಯಲ್ಲಿ ಕೆಲವು ಕಾಲ ವಾಸವಾಗಿದ್ದರು. ನಾನು, ನನ್ನದು ಎಂಬ ಮಮಕಾರಗಳನ್ನು ತ್ಯಜಿಸಿದ ಲೀಲಾಮೂರ್ತಿ ನಾಗಲಿಂಗರವರು ಇಲ್ಲಿ ಜೀವಿಸಿದ್ದರು. ಊರಿಗೆ ಶುಚಿಯನ್ನು, ಜನರಿಗೆ ಶಿವಭಕ್ತಿಯ ನೀಡಿದ ಮಹಾಂತೇಶರು ಈ ಊರಿನ ದುರುದುಂಡೇಶ್ವರ ಮಠದ ಉತ್ತರಾಧಿಕಾರಿಯಾಗಿದ್ದರು. ಸಧ್ಯ ಊರಿನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಲಕಂಠ ಸ್ವಾಮಿಗಳು ನಡೆಸಿಕೊಂಡು ಹೋಗುತ್ತಿದ್ದಾರೆ. ಇವರು ತಮ್ಮ ಪಾಂಡಿತ್ಯ ಮತ್ತು ಅಸ್ಕಲಿತ ವಾಣಿಯಿಂದ ಭಕ್ತರ ಮನವನ್ನು ಸೂರೆಗೊಂಡಿದ್ದಾರೆ.

ಈ ಹೊಂಗಲನಾಡಿನ ಪುಟ್ಟ ಹಳ್ಳಿಯಾದ ಮುರಗೋಡದ ಜನರು ಸಾಹಿತ್ಯ, ಸಂಗೀತ, ಜನಪದ, ಸಣ್ಣಾಟ, ದೊಡ್ಡಾಟ, ನಾಟಕ, ನೃತ್ಯ, ಶಿಲ್ಪ, ಕುಂಭ ಕಲೆ, ನೇಕಾರಿಕೆ ಮತ್ತು ಬೆಳ್ಳಿ-ಬಂಗಾರದ ಕುಸುರಿನ ಗ್ರಾಮೀಣ ಕಲೆಗಳಲ್ಲಿ ನಿಪುಣರು. ಜನರಿಗೆ ಸಂಗೀತದ ಗುಂಗನ್ನು ಹಿಡಿಸಿದ ಶಿವಲಿಂಗಯ್ಯನವರು ಇಲ್ಲಿಯವರು. ಇವರ ಗರಡಿಯಲ್ಲಿಯೆ ಬಾಳಪ್ಪ ಹುಕ್ಕೇರಿಯವರು ಪಳಗಿದ್ದಾರೆ. ಸ್ತ್ರೀ ಪಾತ್ರ ವೇಷದಲ್ಲಿ ಜನರನ್ನು ಮರುಳುಮಾಡುತ್ತಿದ್ದ ಕರ್ನಾಟಕದ ಬಾಲಗಂಧರ್ವರೆಂದು ಹೆಸರಾದ ಶ್ರೀ ಗಂಗಾಧರ ಕೆಲಗೇರಿಯವರು ಈ ಊರಿನವರು. ಸ್ತ್ರೀ ವೇಷದಲ್ಲಿ ಹೆಸರಾದ ಇನ್ನೊಬ್ಬ ಕಲಾವಿದ ಮಲ್ಲಿಕಾರ್ಜುನ ಹಣ್ಣಿಕೇರಿ, ಪುರುಷ ಪಾತ್ರದಲ್ಲಿ ಹೆಸರು ಪಡೆದ ನರಸಿಂಹಾಚಾರ್ಯ, ಶ್ರೀಕೃಷ್ಣ ಪಾರಿಜಾತದ ಜ್ಯೋಶಿ, ದೊಡ್ಡಾಟದ ಗುರುಪಾದಪ್ಪ ಕರ್ಜಗಿ, ಸಂಗ್ಯಾ-ಬಾಳ್ಯಾ ನಾಟಕದ ಈರಪ್ಪ ಹಲಕಿ, ಲಾವಣಿಕಾರರಾದ ರಾಣು ಮತ್ತು ಕೂಬಣ್ಣ ಮುಂತಾದವರೆಲ್ಲ ಕಲೆಯ ರಂಗು ರಂಗಿನ ಜಗತ್ತಿನಲ್ಲಿ ಮಿಂಚಿ ಮಾಯವಾದ ಮುರಗೋಡಿ ಕಲಾವಿದರಾಗಿದ್ದಾರೆ.

ಸಾಮಾನ್ಯವಾಗಿ ಪ್ರತಿಯೊಂದು ಊರು ತನ್ನದೇಯಾದ ಚರಿತ್ರೆಯನ್ನು ಹೊಂದಿರುವಂತೆ ಮುರಗೋಡವು ಪೌರಾಣಿಕ, ಐತಿಹಾಸಿಕ ಮತ್ತು ಭೌಗೋಳಿಕ ಹಿನ್ನಲೆಯನ್ನು ಪಡೆದಿವೆ. ಪೌರಾಣಿಕವಾಗಿ ಆದಿಕಾಲದಲ್ಲಿ ಈ ಊರಿಗೆ ‘ತ್ರಿಶೃಂಗಪುರ’ ಅಂದರೆ ಮೂರು(ತಿ), ಕೋಡು(ಶೃಂಗ), ಮುರಗೋಡು ಎಂಬ ಹೆಸರು ಬಂದಿತೆಂದು, ತ್ರಿಶೃಂಗ ಎಂಬ ಋಷಿಗಳು ತಪಸ್ಸು ಮಾಡದ್ದರೆಂದು ದಂತಕಥೆ ಇದೆ. ಐತಿಹಾಸಿಕವಾಗಿ, ಹನ್ನೆರಡನೇ ಶತಮಾನದಲ್ಲಿ ಆದ ಕಲ್ಯಾಣ ಕ್ರಾಂತಿಯ ವೇಳೆಗೆ ಶರಣರು ಬಿಜ್ಜಳನ ಸೈನ್ಯದ ವಿರುದ್ಧ ಈ ಪ್ರದೇಶದಲ್ಲಿ ಯುದ್ಧ ಮಾಡಿದರೆಂದು, ಆ ಯುದ್ಧವು ಮುರುಗಡೆಯಾಗಿದ್ದರಿಂದ ಈ ಊರಿಗೆ ಮುರಗೋಡು ಎಂಬ ಹೆಸರು ಪ್ರಾಪ್ತವಾಯಿತು ಎನ್ನುತ್ತಾರೆ. ಭೌಗೋಳಿಕವಾಗಿ ಮುರಗೋಡದ ಸುತ್ತ-ಮುತ್ತ ಮೂರು ಗುಡ್ಡ(ಗೋಡೆ)ಗಳಿರುವುದರಿಂದ ಈ ಊರಿಗೆ ಮುರಗೋಡು ಎಂಬ ಹೆಸರು ಬಂದದ್ದು ಔಚಿತ್ಯಪೂರ್ಣವಾಗಿದೆ. ಹಾಗೆಯೇ ಚರಿತ್ರೆಗೆ ಸಂಬಂದಿಸಿದಂತೆ ‘ಕಂಗೇರಿ’ ಹಾಗೂ ‘ಊಳುವಿಯ ಹೆಬ್ಬಾಗಿಲು’ ಎಂದು ಕರೆಯಲ್ಪಡುವ ಕಲ್ಲಿನ ಮಂಟಪ ಊರ ಹೊರಗಡೆ ಇವೆ. ಈ ಊರು ಗುಡಿ ಗುಡಾರಗಳ ತವರೂರಾಗಿದೆ. ಜಕ್ಕಣ್ಣ ಶಿಲ್ಪವೆಂದು ಪ್ರತೀತಿಯಿರುವ ಮಲ್ಲಿಕಾರ್ಜುನ ಧೇವಾಲಯ ಮತ್ತು ವೀರಭದ್ರ ಜಂಬುಲಿಂಗೇಶ್ವರ, ಮಡಿವಾಳಪ್ಪ, ದೊಡ್ಡಪ್ಪಯ್ಯ, ಮಾರುತಿ, ಬಸವೇಶ್ವರ, ಶಿವ, ಚಿದಂಬರ ಹಾಗೂ ಗ್ರಾಮ ದೇವತೆಯ ದೇವಾಲಯಗಳಿವೆ. ಊರ ಮಧ್ಯ ದುರದುಂಡೇಶ್ವರ ಮಠವಿದೆ. ಉತ್ತರ ದಿಕ್ಕಿಗೆ ಗುಡ್ಡದ ಮೇಲೆ ಈದಗಾಹ, ಊರಾಚೆ ಗುಡ್ಡದಮೇಲೆ ಸಿದ್ದನಗವಿ ಮುಂತಾದವುಗಳು ಇವೆ. ಭೂಗರ್ಭಶಾಸ್ತೃಜ್ಙರಿಗೆ ಅಭ್ಯಾಸ ಮಾಡಲು ಇದೊಂದು ಅಪರೂಪದ ಸ್ಥಳವಾಗಿದೆ. ಪ್ರಸಿದ್ಧ ಯಾ‌ತ್ರಾ ಕ್ಷೇತ್ರ ‘ಸೊಗಲ’ವು ಈ ಊರಿನ ಸಮೀಪವಿದೆ.

ಇಂಥ ಪೌರಾಣಿಕ, ಐತಿಹಾಸಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನಲೆಯಿರುವ ಹಳ್ಳಿಯ ವಾತಾವರಣದಲ್ಲಿ ಶ್ರೀ ವೀರಭದ್ರಪ್ಪ ಮತ್ತು ಶ್ರೀಮತಿ ಚೆನ್ನವೀರಮ್ಮನವರ ಪುತ್ರನಾಗಿ ಬಾಳಪ್ಪನವರು ದಿನಾಂಕ ೨೧ ಆಗಸ್ಟ್ ೧೯೧೧ ರಂದು ಜನಿಸಿದರು. ಬಾಳಪ್ಪನವರ ಪೂರ್ವಜರು ಹುಕ್ಕೇರಿಯಿಂದ ಬಂದು ಇಲ್ಲಿ ನೆಲೆಸಿದ್ದರಿಂದ ಮುರಗೋಡದ ಹುಕ್ಕೇರಿ ಬಾಳಪ್ಪನವರೆಂದು ಚಿರಪರಿಚಿತರಾದರು.

ತಾಯಿ ಚೆನ್ನವೀರಮ್ಮಳ ಜೋಗುಳ ಹಾಡಿನ ಗುಂಗಿನಲ್ಲಿ ಬೆಳೆದ ಬಾಳಪ್ಪನವರು ಅಭಿಜಾತ ಕಲಾವಿದರು. ವ್ಯಾಪಾರ-ವ್ಯವಹಾರದ ಹಿನ್ನಲೆಯನ್ನು ಹೊಂದಿದ ಮನೆತನದಲ್ಲಿ ಈ ಹುಡುಗ ಒಬ್ಬ ಪ್ರಸಿದ್ಧ ಹಾಡುಗಾರನಾಗುತ್ತಾನೆಂಬುದನ್ನು ಯಾರೂ ಊಹಿಸಿರಲಿಲ್ಲ. ಆದರೆ ಮುರಗೋಡ ತಪೋಭೂಮಿಯ ಮಹಾಂತೇಶನ ಕೃಪೆಯಿಂದ ಈ ಮಗು ಊರಿನ ಜನಕ್ಕೆಲ್ಲ ಹಾಡುವ ಹುಡುಗನಾಗಿ ಬೆಳೆದ. “ಈ ಹುಡುಗ ಅತ್ತಿದ್ದನ್ನು ಕೇಳಿಲ್ರೀ, ಅವನಷ್ಟಕ್ ಅವ್ನ ಹಾಡತ್ತಿದ್ನರಿ” ಎಂದು ಊರ ಹಿರಿಯರು ಹೇಳುತ್ತಾರೆ. ಮಗು ಆರು ವರ್ಷದವನಾದ ಮೇಲೆ ಶಾಲೆ ಸೇರಿಸಿದರು. ಶಾಲೆಯಲ್ಲಿ ಈತನು ಒಬ್ಬಂಟಿಗನಾಗಿರುತ್ತಿದ್ದು, ಇವನಿಗೆ ಓದಿದ್ದೇ ಬಾ ಪಾಠ,ಗುರುಗಳು ಹೇಳಿದ್ದೇ ವೇದ ವಾಕ್ಯ. ಇವನು ಹಾಡುಗಳನ್ನು ಕಂಠಪಾಠ ಮಾಡಿ ಹಾಡುವುದನ್ನು ಕೇಳುವದುಗುರುಗಳಿಗೆ ಎಲ್ಲಿಲ್ಲದ ಸಂತಸ. ವಿದ್ಯಾರ್ಥಿ ಬಾಳಪ್ಪನಿಗೆ ಕನ್ನಡ ಚರಿತ್ರೆ ಹಾಗೂ ಭೂಗೋಲವೆಂದರೆ ಇಷ್ಟ. ಆದರೆ ಗಣಿತವೆಂದರೆ ಕಬ್ಬಿಣದ ಕಡಲೆ.

ಈತನಿಗೆ ಓದುವುದು ಹಾಡುವುದೆಂದರೆ ಬಾಳೆಹಣ್ಣು ಸುಲಿದಂತೆ. ಸರ್ವಜ್ಞನ ತ್ರಿಪದಿಗಳು, ಶರಣರ ವಚನಗಳು, ದಾಸರ ಪದಗಳು ಮತ್ತು ಹಳ್ಳಿಯ ಜನಪದ ಗೀತೆಗಳು ಎಲ್ಲವೂ ಅವನ ನಾಲಿಗೆ ಮೇಲಿದ್ದು, ಗುರುಗಳು “ಈ ಕವಿತೆ ಹಾಡು” ಎಂದರೆ ಬಾಳಪ್ಪನ ಹಾಡು ಪ್ರಾರಂಭವೆ. ಇವನ ಹಾಡುಗಳನ್ನು ಕೇಳುವುದೆಂದರೆ ಇವನ ಗುರುಗಳಾದ ನೀಲಕಂಠರಾವ್ ಶೇಡಬಾಳ್ ಮತ್ತು ಚಿಕ್ಕ ಮಠರಿಗೆ ಎಲ್ಲಿಲ್ಲದ ಸಂತೋಷವಾಗುತ್ತಿತ್ತೆಂದು ಊರಿನವರು ಹೇಳುತ್ತಾರೆ.

ಕನ್ನಡ ಐದನೆ ತರಗತಿಯನ್ನು ಮುಗಿಸಿ ಮುರಗೋಡ ಬಿಟ್ಟು ಬೈಲಹೊಂಗಲದ ಜಾಕ್ಸನ್ ಪ್ರೌಢಶಾಲೆ ಸೇರುವ ಹೊತ್ತಿಗೆ ಬಾಳಪ್ಪನವರು ಅನೇಕ ಹಾಡುಗಳನ್ನು ಬಾಯಿಪಾಠ ಮಾಡಿದ್ದರು. ಬಾಯಿಪಾಠ ಮಾಡಿ ಲಯಬದ್ಧವಾಗಿ ತಾಳ ತಪ್ಪದಂತೆ ಹಾಡುವ ಈ ಹುಡುಗನಿಗೆ ಕೇಳಿದವರೆಲ್ಲರೂ “ಏನ ಚಲೋ ಹಾಡ್ತಾನ್ರೀ, ಅವನ ಗಂಟಲದಾಗ ಏನ ಕೋಗಿಲ ಮರಿ ಹೊಕ್ಕೊಂಡ್ಯೆತೇನ್ರೀ” ಎಂದು ಶಹಭಾಸಗಿರಿ ಕೊಡುತ್ತಿದ್ದರು.

ದುರ್ದೈವವಶಾತ್ ಕೌಟುಂಬಿಕ ಒತ್ತಡಗಳಿಂದಾಗಿ ಬಾಳಪ್ಪನವರು ಪ್ರೌಢ ಶಾಲೆಯ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಸಣ್ಣ ವಯಸ್ಸಿನಲ್ಲಿಯೆ ಮನೆತನದ ಜವಾಬ್ದಾರಿ ಇವರ ಮೇಲೆ ಬಿದ್ದಿತು. ಮನೆಯ ಸಮಸ್ಯೆಯನ್ನು ಪರಿಹರಿಸಲು ವ್ಯಾಪಾರ ಮತ್ತು ವ್ಯವಸಾಯವನ್ನು ಮಾಡುವುದು ಇವರಿಗೆ ಅನಿರ್ವಾಯವಾಯಿತು. ಆದರೂ ಕೆಲಸಗಳನ್ನು ಮಾಡುವಾಗ ತಾವು ಶಾಲೆಯಲ್ಲಿ ಕಲಿತು ಕರಗತ ಮಾಡಿಕೊಂಡ ಹಾಡುಗಳನ್ನು ಹಳ್ಳಿಯ ಜನಪದ ಗೀತೆಗಳೊಂದಿಗೆ ತಮ್ಮದೇ ಆದ ಧಾಟಿಯಲ್ಲಿ ಮನ ತುಂಬಿ ಹಾಡುವಾಗ ಅವರ ಬಾಯಿಂದ ರಾಗ-ಲಯಗಳ ಸಮ್ಮಿಶ್ರಿತ ಆಲಾಪ, ತಾನಗಳು, ಮದ್ದಿನ ಕುಳ್ಳಿಯ ಕಿಡಿಗಳಂತೆ ಬರುತ್ತಿದ್ದವು. ಜನಪದ ಗೀತೆಗಳಲ್ಲಿ ಆಸಕ್ತಿ ಹೊಂದಿದ ಬಾಳಪ್ಪನವರು ಹಗಲಿರುಳು ಹಾಡಿನ ಗುಂಗಿನಲ್ಲಿರುತ್ತಿದ್ದರು. ಆಗಿನ ಕಾಲದಲ್ಲಿ ಜನಪದ ಹಾಡುಗಳಿಗೆ ಮಹತ್ವವಿರದಿದ್ದರೂ ಹೆಚ್ಚಿನ ಜ್ಞಾನ ಪಡೆಯಲು ಮುಂದಾದರು. ಸಾಕಷ್ಟು ಕಲಾತ್ಮಕತೆ, ಒಳ್ಳೆಯ ಧ್ವನಿ ಮತ್ತು ಹುಮ್ಮಸ್ಸುಗಳಿದ್ದರೂ ರಾಗ-ತಾಳಗಳ ಪರಿಜ್ಞಾನದ ಕೊರತೆ ಎನಿಸಿದ್ದರಿಂದ ಬಾಳಪ್ಪನವರು ಇದ್ದೂರಿನ ಶಿವಲಿಂಗಯ್ಯ ಗವಾಯಿಗಳಿಗೆ ತಮ್ಮನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ವಿನಂತಿಸಿಕೊಂಡರು. “ರೋಗಿ ಬೇಡಿದ್ದೂ ಅದೆ, ವ್ಯೆದ್ಯ ನೀಡಿದ್ದೂ ಅದೆ” ಎಂಬ ಗಾದೆಯಂತೆ ಶಿವಲಿಂಗಯ್ಯನವರು ಸಂತೋಷದಿಂದ ಬಾಳಪ್ಪನವರನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು. “ಬಾಳಪ್ಪ ನೀನು ಇನ್ನು ಮೇಲೆ ಈ ಸಂಗೀತದ ಗುರುಮನೆಯಲ್ಲಿ ಬೆಳೆ” ಎಂದು ಆಶೀರ್ವದಿಸಿದರು. ಹುಚ್ಚು ಹೊಳೆಯಂತೆ ಹರಿಯುತ್ತಿದ್ದ ಬಾಳಪ್ಪನವರ ಸಂಗೀತಲಹರಿಗೆ ಶಿಸ್ತನ್ನು, ಸೊಗಸನ್ನು ನೀಡುವ ಗುರುಗಳು ದೊರೆತರು.

ಸಂಗೀತವನ್ನು ವೃತ್ತಿಯಾಗಿರಿಸಿಕೊಂಡು ನಿಸ್ವಾರ್ಥಿಯಾಗಿ ಸಂಗೀತ ವಿದ್ಯಾದಾನ ಮಾಡುತ್ತಿದ್ದ ಶಿವಲಿಂಗಯ್ಯನವರು ಸುತ್ತ-ಮುತ್ತಲಿನ ಹಳ್ಳಿಗಳಲ್ಲಿ ಸಂಗೀತದ ಶಿವಲಿಂಗಯ್ಯನವರೆಂದೆ ಪ್ರಖ್ಯಾತರಾಗಿದ್ದರು. ಅವರ ಮನೆ ಕೇವಲ ಸಂಗೀತ ಶಾಲೆಯಲ್ಲ, ಕಲೆಯನ್ನು ಅರಸಿ ಬಂದವರಿಗೆ ಅದೊಂದು ಗುರುಕುಲವಾಗಿತ್ತು. ಸಂಗೀತ ವಿದ್ಯೆಯನ್ನು ಅರಸಿ ಬಂದ ಶ್ರೀಮತಿ ಗಂಗಾಸಾನಿ ಎಂಬುವಳು ಶಿವಲಿಂಗಯ್ಯನವರ ಸಂಗೀತದ ಸಾಥಿಯಾಗಿದ್ದರು. ಇವರೆಲ್ಲರ ಸಂಗೀತದ ನಾದ ಮುರಗೋಡಿನಲ್ಲಿ ದನವೂ ಪ್ರತಿಧ್ವನಿಸುತ್ತಿತ್ತು.

ಹಣಕ್ಕೆ ವಿದ್ಯೆ ದೊರೆಯದ ಅಂದಿನ ಕಾಲದಲ್ಲಿ ಗುರುವಿನ ಗುಲಾಮನಾಗಿಯೇ ವಿದ್ಯೆ ಕಲಿಯಬೇಕಾಗುತ್ತಿತ್ತು. ಗುರುಗಳಿಗೆ ಮನಸ್ಸಾದಾಗಲೆ ಪಾಠ ಪ್ರವಚನಗಳು ಜರುಗುತ್ತಿದ್ದವು. ಶಿಷ್ಯರು ಸಂಯಮ ಹಾಗೂ ಆಸಕ್ತಿಯಿಂದ ವಿದ್ಯಾರ್ಜನೆ ಮಾಡುತ್ತಿದ್ದರು. ಇಂತಹ ವಾತಾವರಣದಲ್ಲಿ ಬಾಳಪ್ಪನವರು ಮೊದಲು ಗುರುಗಳ ಸೇವೆಯನ್ನು ಮಾಡುತ್ತಾ ಸಂಗೀತ ಕೇಳುವುದು ಮಾತ್ರಾ ಕೆಲಸವಾಗಿತ್ತು. ದಿನ ಕಳೆದಂತೆ ಅವರು ಗುರುಗಳ ಪೆಟ್ಟಿನ ಆಶೀರ್ವಾದ ಪಡೆದು ಸ್ವರಕೂಡಿಸಲು ಹಾಗೂ ಶ್ರಧ್ಧೆಯಿಂದ ಕಲಿಯತೊಡಗಿದರು. ಹಂತ ಹಂತವಾಗಿ ಶಿವಲಿಂಗಯ್ಯನವರ ಶಿಷ್ಯರಲ್ಲಿ ಬಾಳಪ್ಪನವರು ಮೇಲುಗೈ ಸಾಧಿಸಿದರು. ಗುರುಗಳು ಅವರಿಗೆ ಶಾಸ್ತ್ರೋಕ್ತವಾದ ಸಂಗೀತ ಕಲಿಸಿಕೊಟ್ಟರು. ಬಾಳಪ್ಪನವರ ಕಂಚಿನ ಕಂಠದಿಂದ ಹೊರ ಹೊಮ್ಮುವ ಸ್ವರ ಮಾಧುರ್ಯಕ್ಕೆ ಅವರು ಮಾರು ಹೋದರು. ಬಾಳಪ್ಪನವರು ಗುರುಗಳು ಹೇಳಿಕೊಟ್ಟಿದ್ದನ್ನೆಲ್ಲಾ ಪಟ್ಟು ಹಿಡಿದು ಕಲಿಯುತ್ತಿದ್ದರು. ಇದರಿಂದಾಗಿ ಶಿವಲಿಂಗಯ್ಯನವರಿಗೆ ಬಾಳಪ್ಪನವರ ಬಗ್ಗೆ ಹೆಮ್ಮೆ ಎನಿಸುತ್ತಿತ್ತು. ಅವರು ಇದು ‘ಬೆಳೆಯುವ ಕುಡಿ’ ಎಂದು ಆನಂದ ಪಡುತ್ತಿದ್ದರು. ಅವರು ತಮ್ಮ ಸಂಗೀತ ಕಾರ್ಯಕ್ರಮಗಳ ಜೊತೆಗೆ ಸಾಥಿಯನ್ನು ಒದಗಿಸಲು ಬಾಳಪ್ಪನವರನ್ನು ಕರೆದುಕೊಂಡು ಹೋಗುತ್ತಿದ್ದರಲ್ಲದೆ ಅವರನ್ನು ಪ್ರೋತ್ಸಾಹಿಸಿ ಮಂಚಪ್ರದರ್ಶನದಲ್ಲಿ ಹಾಡಲು ಅವಕಾಶ ಮಾಡಿಕೊಡುತ್ತಿದ್ದರು. ಗುರುವಿನ ಮಾರ್ಗದರ್ಶನ ಪಡೆದ ಬಾಳಪ್ಪನವರು ತಮ್ಮ ಹಾಡಿನ ಮೋಡಿ, ವ್ಯೆವಿಧ್ಯತೆ ಮತ್ತು ವೈಶಿಷ್ಟ್ಯತೆಗಳಿಂದ ಮುಂದೆ ಕನ್ನಡಿಗರನ್ನು ದಂಗುಬಡಿಸಿ ಕನ್ನಡ ಜನಪದ ಸಂಗೀತ ಲೋಕದಲ್ಲಿ ಮುರಗೋಡಿನ ಮಹಿಮೆಯನ್ನು ತೋರಿಸುವರೆಂಬ ಆತ್ಮ ವಿಶ್ವಾಸ ಮೂಡಿಸಿದರು. ಸಂಗೀತಾಭ್ಯಾಸ ಮಾಡಿದ ಅವರು ಮುಂದೆ ಸ್ವತಂತ್ರವಾಗಿ ಕಾರ್ಯಕ್ರಮ ನೀಡಲಾರಂಭಿಸಿದರು. ಇಷ್ಟೆ ಅಲ್ಲದೆ ಬಾಳಪ್ಪನವರು ಮರಾಠಿ ರಂಗ ಭೂಮಿಯ ಹೆಸರಾಂತ ಬಾಲಗಂರ್ಧವ ಶ್ರೀ ಪಂಡಿತ ದೀನಾನಾಥ ಮಂಗೇಶಕರ ಮೊದಲಾದವರ ಜನಪ್ರಿಯ ರಂಗಶೈಲಿಯಿಂದಲೂ ಪ್ರಭಾವಿತರಾದರು. ಕೆಲವು ಕಾಲ ಮುರಗೋಡಿನಲ್ಲಿ ‘ಮಹಾತ್ಮ ಸೇವಾ ಸಂಗೀತ ನಾಟಕ ಕಂಪೆನಿ’ ಯನ್ನು ಸ್ಥಾಪಿಸಿ ನಡೆಸಿದ್ದೂ ಇದೆ. ಈ ಎಲ್ಲ ಪ್ರಭಾವಗಳಿಂದ ಶ್ರೀಯುತರ ಗಾಯನ ಶೈಲಿ ವಿಶಿಷ್ಟವಾಗಿ ರೂಪುಗೊಂಡಿತು.

ಶಿವಲಿಂಗಯ್ಯನವರ ಮಾರ್ಗದರ್ಶನದಿಂದ ಬಾಳಪ್ಪನವರಿಗೆ ಸ್ವರ-ಲಯಗಳ ಪರಿಚಯವಾಗಿ ರಾಗಗಳಮೇಲೆ ಹಿಡಿತ ಸಿಗಲಾರಂಭಿಸಿತು. ಧಾರವಾಡದ ಮರುಘಾಮಠದ ಮೃತ್ಯುಂಜಯಪ್ಪ ಸ್ವಾಮಿಗಳವರ ಸಲಹೆ ಮತ್ತು ಆಶೀರ್ವಾದಗಳ ಮೇರೆಗೆ ಬಾಳಪ್ಪನವರು ಕನ್ನಡ ಜನಪದ ಗೀತೆಗಳನ್ನು ಹಾಡುವಲ್ಲಿ ಯಶಸ್ವಿಯಾದರು. ಬಾಳಪ್ಪನವರು ಅನೇಕರು ತಾವೇಕೆ ಶಾಸ್ತ್ರೀಯ ಸಂಗೀತಗಾರರಾಗಲಿಲ್ಲ ಎಂದು ಕೇಳಿದ ಪ್ರಶ್ನೆಗೆ ಹೀಗೆ ಹೇಳಿದ್ದಾರೆ. “ಪೂಜ್ಯ ಮೃತ್ಯುಂಜಯ ಸ್ವಾಮಿಗಳು ನನಗೆ- ‘ಬಾಳಪ್ಪ ನೀನು ಆದಷ್ಟು ಕನ್ನಡ ಪದಗಳನ್ನು ಅದರಲ್ಲೂ ಜನಪದ ಹಾಡುಗಳನ್ನು ಕಲಿತು ಹಾಡಪ್ಪ” ಎಂದರಂತೆ.

ವ್ಯಾಪಾರ, ವ್ಯಯಸಾಯಗಳಲ್ಲಿ ತೊಡಗಿದ ಬಾಳಪ್ಪನವರು ಹಾಡುವುದನ್ನು ಮುಂದುವರೆಸಿದರು. ಅವರು ಹಬ್ಬ-ಹುಣ್ಣಿಮೆ, ಮದುವೆ-ಮುಂಜವೆ, ಸಾರ್ವಜನಿಕ ಸಮಾರಂಭಗಳಲ್ಲಿ ಹಾಗೂ ಜಾತ್ರೆಗಳಲ್ಲಿ ಹಾಡತೊಡಗಿದರು. ಹಾಡೆಂದರಲ್ಲಿ ಹಾಡಲು ಪ್ರಾರಂಭಿಸಿದ ಬಾಳಪ್ಪನವರಿಗೆ ಬೇಡಿಕೆಗಳು ಬರತೊಡಗಿದವು. ಸುತ್ತಲಿನ ಹಳ್ಳಿಗಳಲ್ಲಿ ಅವರ ಕಾರ್ಯಗಳಿಂದಾಗಿ ಅವರ ಖ್ಯಾತಿ ಹರಡಿತು. ಜೊತೆಗೆ ಬಾಳಪ್ಪನವರು ಸ್ವಂತ ಗೀತೆಗಳನ್ನು ರಚಿಸಿ ಹಾಡಿ ಸಂತೋಷ ಪಡೆಯುವುದರೊಂದಿಗೆ ಬೇರೆಯವರಿಗೂ ಆನಂದ ನೀಡಲಾರಂಭಿಸಿದರು.

ಜಾನಪದ ಹಾಡುಗಳನ್ನು ಹಾಡುವ ಕಲೆಯು ಬಾಳಪ್ಪನವರ ಜೀವನಕ್ಕೆ ಪ್ರೇರಣೆ ಮತ್ತು ಸ್ಥಿರತೆಯನ್ನು ತಂದುಕೊಟ್ಟಿತು. ಈ ಹೊಂಗಲನಾಡಿನ ಹಮ್ಮಿರ ಬಾಳಪ್ಪನವರಿಗೆ ಜನಪದ ಸಂಗೀತದ ಗೀಳು ಹತ್ತಿ ಅವರು ಊರೂರು ಅಲೆದಾಡಲಾ ರಂಭಿಸಿದರು. ಈ ಅನಿವಾರ್ಯತೆಯು ಬಾಳಪ್ಪನವರನ್ನು ಸಂಚಾರಿ ಮನುಷ್ಯನನ್ನಾಗಿ ಮಾರ್ಪಡಿಸಿತು. ಶ್ರೀಯುತರು ಹಬ್ಬ, ಹುಣ್ಣಿಮೆ, ಸಭೆ-ಸಮಾರಂಭಗಳಲ್ಲಿ ಆಮಂತ್ರಿತರಾಗಿ ಜನಮನವನ್ನು ಪ್ರೀತಿಯಿಂದ ಗೆಲ್ಲತೊಡಗಿದರು. ಹೀಗೆ ಜನಪದ ಗೀತೆಗಳನ್ನು ಹಾಡುವುದು ಬಾಳಪ್ಪ ಹುಕ್ಕೇರಿಯವರ ವೃತ್ತಿಯಾಯಿತು.

ಮಗ ಬಾಳಪ್ಪನವರು ಜನಪದ ಹಾಡುಗಳನ್ನು ಹಾಡುವುದರಲ್ಲಿಯೆ ಯಾವಾಗಲೂ ಲೀನವಾಗಿರಿವುದನ್ನು ಕಂಡು ತಾಯಿ ಚೆನ್ನವೀರಮ್ಮನವರಿಗೆ ಮಗನ ಮದುವೆಯ ಬಗ್ಗೆ ತೀವ್ರ ಕಳವಳವಾಯಿತು. ಈ ಹುಕ್ಕೇರಿ ಮನೆತನಕ್ಕೆ ದೀಪ ಬೆಳಗಿಸಲು ಅವರು ಮಗನಿಗೆ ಮದವೆ ಮಾಡಲು ಅಣಿಯಾದರು. ಆದರೆ ಜನಪದ ಸಂಗೀತಗಾರರಾದ ಬಾಳಪ್ಪನವರು ಊರೂರು ಅಲೆದಾಡುವುದನ್ನು ತಿಳಿದ ಜನರು ಈ ಸಂಚಾರಿ ಮನುಷ್ಯನಿಗೆ ಹೆಣ್ಣು ಕೊಡಲು ಮುಂದೆ ಬರಲಿಲ್ಲ. “ಏ ಇಂವ್ ಹೀಂಗ ಹಾಡಿಕೋತ ಊರೂರು ತಿರುಗಾಡಿದ್ರ ಮಗಳ ಕತೆ ಏನ್ರಿ !” ಎಂದು ವಿಚಾರ ಮಾಡತೊಡಗಿದರು. ಇದರಿಂದ ತಾಯಿಗೆ ಬೇಸರವಾಯಿತು. ಆಕೆಯೂ ಸಹ “ಹುಕ್ಕೇರಿ ಮನೆತನದ ದೀಪ ಹಚ್ಚಾಕ ಜ್ಯೋತಿ ಇಲ್ಲದಾಂಗ ಆಯ್ತಲ್ಲ” ಎಂದು ಕೊರಗುತ್ತಿದ್ದಳು. ಬಾಳಪ್ಪನವರು “ತಮ್ಮ ಹಣೆಬರಹದಾಗ ಬ್ರಹ್ಮಚಾರಿಯಾಗಿರೋದ ಬರದೈತೇನೋ” ಎಂದು ಬೇಸರ ಪಡುತ್ತಿದ್ದರು. ಆದರೂ ಅವರು ಸಂಗೀತದ ಮೇಲೆ ತಮ್ಮ ಶಕ್ತಿಯನ್ನು ಕೇಂದ್ರೀಕರಿಸಿ ಸಂಗೀತವನ್ನೇ ತಮ್ಮ ಸಾಥಿಯನ್ನಾಗಿ ಮಾಡಿಕೊಂಡರು.

ಹೀಗೆಯೆ ಒಂದು ದಿನ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿರುವ ಶ್ರೀ ಮುರುಘೇಂದ್ರ ಶಿವಯೋಗಿಗಳವರ ಮಠದಲ್ಲಿ ಬಾಳಪ್ಪನವರ ಸಂಗೀತ ಕಾರ್ಯಕ್ರಮ ಜರುಗಿತು. ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ ಸಾವಿರಾರು ಜನರು ಬಾಳಪ್ಪನವರ ಸಂಗೀತವನ್ನು ಮನಸಾರೆಯಾಗಿ ಹೊಗಳಿದರು. ಸುದೈವವಶಾತ್ ಆ ಸಭೆಗೆ ಅಂದಿನ ಆ ಭಾಗದ ವ್ಯವಸಾಯ ಇಲಾಖೆಯ ಉಪನಿರ್ದೇಶಕರಾದ ವ್ಹಿ. ಸಿ. ಪಾವಟೆಯವರು ಹಾಜರಿದ್ದರು. ಅವರಿಗೆ ವ್ವವಸಾಯ ಇಲಾಖೆಯಲ್ಲಿ ಸುಧಾರಿತ ಬೆಳೆ, ಗಿಡ ಮರಗಳ ಪೋಷಣೆ ರಕ್ಷಣೆಗೆ ರಾಸಾಯನಿಕ ಗೊಬ್ಬರಗಳ ಸಮರ್ಪಕ ಬಳಕೆ ಮತ್ತು ಪಶು ಸಂಗೋಪನದ ಬಗ್ಗೆ ತಿಳುವಳಿಕೆಯಿಲ್ಲದ ರೈತರಿಗೆ ಮನ ಮುಟ್ಟುವಂತೆ ಪ್ರಚಾರ ಮಾಡಲು ಕೃಷಿ ಪ್ರಚಾರಕರೊಬ್ಬರ ಅವಶ್ಯಕತೆ ಇತ್ತು. ಹುಕ್ಕೇರಿ ಬಾಳಪ್ಪನವರೆ ಯೋಗ್ಯ ಮನುಷ್ಯರೆಂದು ಮನಗಂಡು, ಸಮಾರಂಭ ಮುಗಿದ ಮೇಲೆ ಬೆನ್ನು ಚಪ್ಪರಿಸಿ, “ನಮ್ಮ ಇಲಾಖೆಯಲ್ಲಿ ಪ್ರಚಾರಕ ಹುದ್ದೆ ಖಾಲಿ ಐತಿ, ನೀವು ಸೇರ್ತಿರೇನು ?” ಅಂದರು. ‘ರೋಗಿ ಬಯಸಿದ್ದು ಅದೆ, ವ್ಯೆದ್ಯ ಹೇಳಿದ್ದು ಅದೆ’ ಅನ್ನುವಂತೆ ಬಾಳಪ್ಪನವರಿಗೂ ಒಂದು ನೆಲೆ ಬೇಕಾಗಿತ್ತು, ಅವರು “ತಮ್ಮ ದಯೆ ಸಾಹೇಬ್ರ” ಎಂದು ಒಪ್ಪಿ ಬಿಟ್ಟರು. ಸರಕಾರಿ ನೌಕರಿ ಬಾಳಪ್ಪನವರ ಬಾಳಿಗೊಂದು ಸ್ಥಿರತೆಯನ್ನು, ದ್ಯೆರ್ಯವನ್ನು ತಂದುಕೊಟ್ಟಿತು.

ಇಲ್ಲಿಯತನಕ ಬಾಳಪ್ಪನವರಿಗೆ ಯಾರೂ ಹೆಣ್ಣು ಕೊಡಲು ಮುಂದೆ ಬಂದಿರಲಿಲ್ಲ. ಆದರೆ ಸರಕಾರಿ ನೌಕರಿ ದೊರೆತ ನಂತರ ಸ್ಥಿತಿವಂತರೂ ಸಹ ಅವರಿಗೆ ಹೆಣ್ಣು ಕೊಡಲು ಮುಂದೆ ಬಂದರು. ಆದರೆ ಬಾಳಪ್ಪನವರು ಅದಕ್ಕೆಲ್ಲ ಬೆಲೆ ಕೊಡಲಿಲ್ಲ. ಅವರೊಮ್ಮೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ತಮ್ಮ ಕೃಷಿ ಇಲಾಖೆಯ ಪ್ರಚಾರಕ್ಕೆಂದು ಹೋದಾಗ, ಅವರ ಕಾರ್ಯಕ್ರಮ ಜರುಗಿತು. ಬಾಳಪ್ಪನವರು ಇನ್ನೂ ಅವಿವಾಹಿತರೆಂಬುದನ್ನು ಅರಿತು ಕೆಲವು ಊರ ಪ್ರಮುಖರು ಅವರನ್ನು ತಮ್ಮ ಊರಿನ ಅಳಿಯನನ್ನಾಗಿ ಏಕೆ ಮಾಡಿಕೊಳ್ಳಬಾರದೆಂದು ಆಲೋಚಿಸಿ, ಕೆಲವು ಕನ್ಯೆಗಳನ್ನು ತೋರಿಸಿದರು. ನೋಡಿದ ಕನ್ಯೆಯರಲ್ಲಿ ವೀರಪ್ಪ ಹೊನವಾಡರವರ ಮಗಳು ಕುಮಾರಿ ಶಾಂತವ್ವ ಬಾಳಪ್ಪನವರ ಮನಸ್ಸಿಗೆ ಹಿಡಿಸಿದರು. ಆದರೆ ವೀರಪ್ಪನವರು ಬಾಳಪ್ಪನವರಿಗೆ ಮಗಳನ್ನು ‘ಕೊಡಬೇಕೋ ಬೇಡವೋ’ ಎಂದು ಚಿಂತಿಸಿದರು. ಪರಸ್ಥಿಯನ್ನರಿತ ಆ ಊರಿನ ಕೆಲವು ಹಿರಿಯರು“ನೋಡಪ್ಪಾ, ನಿನ್ನ ಮನಸ್ಸಿನ್ಯಾಗ ಈ ಹಾಡೋ ಹುಡುಗನಿಗೆ ಮಗಳ್ನ ಹ್ಯಾಂಗಾರ ಕೊಡೋದು ಅನ್ನೋ ಗುದ್ದಾಟ ನಡೆದಂಗ ಕಾಣತೈತಿ. ಆದರೆ ಬಾಳಪ್ಪನ ಕ್ಯೆ ಹಿಡಿಯೋದು ನಿನ್ನ ಮಗಳ ಭಾಗ್ಯ ಅಂತ ತಿಳ್ಕೊ, ವಿದ್ಯಾ, ಬುದ್ಧಿ, ಸರ್ಕಾರಿ ನೌಕರಿ, ಮ್ಯಾಲೆ ಒಳ್ಳೆ ಸಂಗೀತಗಾರ. ನೀನು ಸುಮ್ಕ ಯಾವುದೂ ವಿಚಾರ ಮಾಡದ ಮಗಳನ ಧಾರೆಯೆರೆದುಕೊಡು.” ಎಂದಾಗ ಹೊನವಾಡ ವೀರಪ್ಪನವರು ಊರಿನ ಹಿರಿಯರ ಸಲೆಹೆಗೆ ತಲೆಬಾಗಿ ತಮ್ಮ ಮಗಳನ್ನು ಬಾಳಪ್ಪನವರಿಗೆ ಮದುವೆ ಮಾಡಿಕೊಡಲು ಒಪ್ಪಿದರು. ಆಗ ಬಾಳಪ್ಪನವರು ತಮ್ಮ ಕಾರ್ಯಗಳನ್ನು ಲಗುಬಗೆಯಿಂದ ಮುಗಿಸಿ ಸಂತೋಷದ ಈ ಸುದ್ದಿಯನ್ನು ತಾಯಿಗೆ ಬಂದು ತಿಳಿಸಲು ಆಕೆಗೆ ಸಂತೋಷವೇ ಸಂತೋಷ. ತಾಯಿಯವರು “ಬಾಳ ಚಲೋ ಆತ ಬಾಳು. ಇದೆಲ್ಲ ಆ ಮಹಾಂತೇಶಪ್ಪನ ಕೃಪಾ” ಎಂದು ಹೆಣ್ಣಿನವರ ಕಡೆಯಿಂದ ಒಂದು ಕಾಸು ವರದಕ್ಷಿಣೆ ಪಡೆಯದೆ ಮದುವೆಯಾಗ ಬೇಕೆಂದು ತಿಳಿಸಿದರು. ತಾಯಿಯ ಆಸೆಯನ್ನು ನಡೆಸಿಕೊಟ್ಟ ಬಾಳಪ್ಪ ಶಾಂತವ್ವ ಹೊನವಾಡ ಅವರನ್ನು ಮದುವೆಯಾಗಿ ಮನೆ ತುಂಬಿಸಿಕೊಂಡರು.

ಆದರೆ ಮುದ್ದೇಬಿಹಾಳದ ಈ ಮುಗ್ಧ ಸ್ವಭಾವದ ಶ್ರೀಮತಿ ಶಾಂತವ್ವ ಮುರಗೋಡದ ಬಾಳಪ್ಪನವರ ಮನೆಗೆ ಬಂದಾಗ ಅವರ ಮನೆತನ ಹೇಳಿಕೊಳ್ಳುವಂತಹ ಸ್ಥಿತಿ ಯಲ್ಲಿರಲಿಲ್ಲ. ಅವರ ಆರಂಭದ ಸ್ಥಿತಿ ಹೇಗಿತ್ತೆಂದರೆ ‘ಅವನು ಬಡವ, ಅವಳು ಬಡವಿ, ಒಲವೆ ಅವರ ಬದುಕಾಗಿತ್ತು. ಕಾಲಕ್ರಮೇಣ ಅವರ ಜೀವನ ಬೆಳಗುತ್ತ, ಅವರ ಬಾಳು ಬೆಳೆಯುತ್ತ, ಬದುಕು ಹಸನಾಗಿ ನಡೆಯಿತು. ಶ್ರೀಮತಿ ಶಾಂತವ್ವನವರ ಮುಗ್ಧ ಮನಸ್ಸು, ನಿರ್ಮಲವಾದ ಹೃದಯ, ಪ್ರೀತಿ, ಗೌರವ, ವಿಶ್ವಾಸ, ಬಾಳಪ್ಪನವರ ಜೀವನದ ಸ್ತರವನ್ನು ಎತ್ತರಿಸಿ ಅವರ ಜೀವನಕ್ಕೊಂದು ಕಳೆಕಟ್ಟಿಸಿತು. ಶ್ರೀಮತಿ ಶಾಂತವ್ವನವರು ಬಾಳಪ್ಪನವರ ಜೀವನಕ್ಕೆ ಪ್ರೀತಿ, ಸುಖ, ಶಾಂತಿ ಮತ್ತು ಶ್ರೇಯಸ್ಸನ್ನು ತಂದುಕೊಟ್ಟರು. ಒಮ್ಮೆ ವಿಮರ್ಶಕರೊಬ್ಬರು ಬಾಳಪ್ಪನವರ ಸಂಗೀತ ಸಾಧನೆಗೆ ತಮ್ಮ ಶ್ರೀಮತಿಯವರು ಹೇಗೆ ನೆರವಾದರು ಎಂದು ಕೇಳಿದಾಗ ಬಾಳಪ್ಪನವರು ಹೀಗೆ ಹೇಳಿದರು : “ನೋಡ್ರೆಪಾ ನಮ್ಮ ಜೀವನ ನಿಜವಾಗಲೂ ಹ್ಯಾಂಗ ಅದ ಅಂದ್ರ ಶರಣರು ಹೇಳ್ಯಾರಲ್ಲ ‘ಸತಿ-ಪತಿಗಳೊಂದಾದ ಭಕ್ತಿ ಹಿತ ವಿರ್ಪುದು ಶಿವಂಗೆ’ ಎನ್ನುವ ಹಾಗಿದೆ.”

ಆರು ಮುದ್ದುಮಕ್ಕಳ ತಾಯಿಯಾದ ಬಾಳಸಂಗಾತಿ ಶಾಂತವ್ವನವರು ಬಾಳಪ್ಪನವರನ್ನು ನೆರಳಾಗಿ ಹಿಂಬಾಲಿಸಿದರು. ಎಲ್ಲರಿಗೂ ಗೊತ್ತಿರುವಂತೆ ಅವರು ವಾರದ ಒಂದು ದಿನ ಊರಲ್ಲಿದ್ದರೆ ಇನ್ನುಳಿದ ಆರು ದಿನ ಊರಲ್ಲಿರುವ ಸಂಚಾರಿ ಮನುಷ್ಯರು. ಹೀಗಾಗಿ ಶಾಂತಮ್ಮನವರು ಮನೆತನದ ಸಂಪೂರ್ಣ ಜವಾಬ್ದಾರಿಯನ್ನು ತಾವೆ ನಿರ್ವಹಿಸುತ್ತಿದ್ದರು. ಬಾಳಪ್ಪನವರು ತಮ್ಮ ಕೌಟುಂಬಿಕ ಜೀವನದಲ್ಲಿ ಬಹಳ ಸರಳ ಮತ್ತು ಸಮಾಧಾನದ ವ್ಯಕ್ತಿಯಾಗಿದ್ದರು. ಅವರು ತಮ್ಮ ಹೆಂಡತಿಯನ್ನು ಬಹಳ ಗೌರವಿಸುತ್ತಿದ್ದರು. ಅವರದು ತುಂಬ ಅನ್ಯೋನ್ಯವಾದ ದಾಂಪತ್ಯ ಜೀವನವಾಗಿತ್ತು. ಈ ವಿಷಯವಾಗಿ ಶ್ರೀಮತಿ ಶಾಂತಮ್ಮನವರು “ನೋಡ್ರಿ ನಾವು ಬಹಳ ಪ್ರೀತಿಯಿಂದ ಇದ್ದೆವು. ನಮ್ಮ ಮನೆಯವರು ನನಗೆ ಎಂದೂ ಯಾವ ಕೊರತೆಯನ್ನೂ ಮಾಡಿಲ್ಲ. ಅವರು ನನ್ನನ್ನು ಸುಖದಿಂದ ಇಟ್ಟಿದ್ದರು.” ಎನ್ನುತ್ತಾರೆ. ತಮ್ಮ ದಾಂಪತ್ಯ ಜೀವನದಲ್ಲೊಮ್ಮೆ ಶ್ರೀಮತಿ ಶಾಂತಮ್ಮನವರು ಸಿಟ್ಟಿನಿಂದ ಪತಿ ಗದರಿಸಿದರಂತೆ. ಅದರಿಂದ ಶಾಂತಮ್ಮ ನೊಂದುಕೊಂಡಾಗ ಬಾಳಪ್ಪನವರು ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟರಂತೆ. ಈ ಘಟನೆಯನ್ನು ಸ್ವತಃ ಬಾಳಪ್ಪನವರೆ ತಮ್ಮ ಇಳಿವಯಸ್ಸಿನಲ್ಲಿ ನೆನೆದುಕೊಂಡು ಹೀಗೆ ಹೇಳಿದ್ದಾರೆ. “ಅದೇ ಕಡೆದು ನೋಡ್ರೀ ಅಂದಿನಿಂದ ಇಂದಿನವರೆಗೆ ಆಕಿ ಮನಸ್ಸು ನೋಯುವ ಕೆಲಸ ಅಚಾನಕ್ಕಾಗಿ ಕೂಡ ನಾನು ಮಾಡಿಲ್ಲ”.

ಬಾಳಪ್ಪನವರು ಹಳ್ಳಿಯ ಪರಿಸರದಿಂದ ಬಂದವರಾದರೂ ಹುಂಬರಾಗಿರಲಿಲ್ಲ. ಅವರದು ಶಾಂತ ಮತ್ತು ಸರಳ ಸ್ವಭಾವ. ಅವರು ಸಾಮಾನ್ಯವಾಗಿ ಹಾಸ್ಯ ಪ್ರಿಯರು. ಯಾರಾದರೂ ಭೇಟಿಯಾಗಲು ಮನೆಗೆ ಬಂದರೆ ಬಾಳಪ್ಪನವರು ‘ಅತಿಥಿ ದೇವೋಭವ’ ಎಂಬಂತೆ ಸಹೃದಯದಿಂದ ಸತ್ಕರಿಸುತ್ತಿದ್ದರು. ಮನೆಗೆ ಬಂದವರು ಧಾರಾಳವಾಗಿ ಊಟ ಮಾಡಿ ಅವರ ಹಾಡುಗಳನ್ನು ಕೇಳುತ್ತಿದ್ದರು. ಅವರ ಆಪ್ತಮಿತ್ರರಾದ ಗುರುಸಿದ್ದಪ್ಪ ಇಚ್ಚಂಗಿಯವರು ಬಾಳಪ್ಪನವರ ಊಟದ ವೈಖರಿಯ ಬಗ್ಗೆ ಹೀಗೆ ಹೇಳಿದ್ದಾರೆ: ‘ಹುಕ್ಕೇರಿ ಬಾಳಪ್ಪನವರು ಹೇಗೆ ಇಂಪಾಗಿ ಹಾಡೆಂದಲ್ಲಿ ತಮ್ಮ ಕಂಚಿನ ಕಂಠದಿಂದ ಹಾಡುತ್ತಿದ್ದರೊ, ಹಾಗೆಯೆ ಹೋದಲ್ಲಿ ಬಂದಲ್ಲಿ ಯಾವ ಸಂಕೋಚವಿಲ್ಲದೆ ಕೇಳಿ ಸವಿಯಾದ ಭೋಜನ ಮಾಡುತ್ತಿದ್ದರು.’ ಅವರು ಗಾನಪ್ರಿಯರಾಗಿದ್ದಂತೆ ಭೋಜನ ಪ್ರಿಯರೂ ಆಗಿದ್ದರು. ಹಳೆಯ ಊಟದ ಪದ್ಧತಿಗಳನ್ನು ಊಟದ ಮುದವನ್ನು ನೆನಪಿಸುತ್ತ ಉಣ್ಣುವುದು ಅವರ ವಿಶೇಷತೆಯಾಗಿತ್ತು. ‘ಪಕ್ವಾನ್ನ, ಕಡುಬು, ಹೋಳಿಗೆ, ತುಪ್ಪ, ಸಾರು, ರಸಪೋಳಿ, ಮಸರನ್ನ ಮುಂತಾದ ಖಾದ್ಯಗಳನ್ನು ತಿನ್ನುವುದೆಂದರೆ ಅದೊಂದು ರಸದೌತಣವೆ ಸರಿ’ ಎಂದು ಅವರಿಗೆ ಪರಿಚಿತರಿದ್ದ ಸಾಹಿತಿ ಸಿದ್ದಲಿಂಗ ದೇಸಾಯಿಯವರು ಸ್ಮರಿಸುತ್ತಾರೆ. ಈ ವಿಷಯವಾಗಿ ಶ್ರೀಮತಿ ಶಾಂತಮ್ಮನವರನ್ನು ಕೇಳಿದಾಗ ಅವರು: “ನಮ್ಮ ಧರ್ಮಪತಿಯವರಿಗೆ ಹೋಳಿಗೆ-ತುಪ್ಪ ಎಂದರೆ ಬಹು ಇಷ್ಟವಾಗಿರುತ್ತಿತ್ತು” ಎಂದಿದ್ದಾರೆ. ಅವರು ಕೇವಲ ತಮ್ಮ ಮನೆಯಲ್ಲಿ ಅಷ್ಟೆ ಅಲ್ಲ, ಬೇರೆಯವರ ಮನೆಗೆ ಹೋದಾಗಲೂ ಯಾವ ಸಂಕೋಚವಿಲ್ಲದೆ, ಮನೆಯ ತಾಯಂದಿರ ಹತ್ತಿರ ಹೋಗಿ ಧಾರಾಳವಾಗಿ ಊಟ ಮಾಡುತ್ತಿದ್ದರು. ಅವರು ಅಂದಿನ ಉಪರಾಷ್ಟ್ರಪತಿ ಬಿ. ಡಿ. ಜತ್ತಿಯವರ ಮನೆಗೆ ಹೋದಾಗಲೂ ನೇರವಾಗಿ ಅಮ್ಮನವರ ಹತ್ತಿರ ಹೋಗಿ ತಮಗೆ ಬೇಕಾದ್ದನ್ನು ಮಾಡಿಸಿ ತಿನ್ನುತ್ತಿದ್ದರೆಂದು ತಮ್ಮ ಒಂದು ಸಂಗೀತ ಸಮಾರಂಭದಲ್ಲಿ ಹೇಳಿದ್ದಾರೆ. ಊಟ ಮಾಡುವಾಗ ಬಾಳಪ್ಪನವರು ಬಹು ಹಾಸ್ಯಮುಖರಾಗಿರುತ್ತಿದ್ದರು. ತಮ್ಮ ಅನುಭವದ ಬತ್ತಳಿಕೆಯಿಂದ ಊಟದ ಪದ್ಧತಿಯ ಬಗ್ಗೆ ವೈವಿಧ್ಯಮಯವಾದ ಊಟಗಳ ಬಗ್ಗೆ ಉದಾಹರಣೆ ನೀಡುತ್ತಿದ್ದರು. ಒಟ್ಟಾರೆ ಅವರಿಗೆ ತಮ್ಮ ಸುತ್ತಲಿನ ಪರಿಸರವನ್ನು ಹಸನ್ಮುಖಿಯಾಗಿ ಕಾಣಬೇಕಾಗಿತ್ತು. ಅದಕ್ಕಾಗಿ ಅವರು ಕತೆ, ಕವನಗಳನ್ನು ಕಟ್ಟಿ, ಜನಪದ ಸಾಹಿತ್ಯ ಹಾಗೂ ಸಂಗೀತದ ಹಿನ್ನಲೆಯಲ್ಲಿ ನಗಿಸುತ್ತಿದ್ದರು. ಅವರು ಊಟ ಮಾಡುವಾಗೊಮ್ಮೆ ಹೀಗೆ ಹೇಳಿದ್ದಾರೆ: “ನೋಡ್ರಿ ಇಂಥ ಊಟ ನೀವು ಯಾರ ಮನ್ಯಾಗೂ ಹಿಂದೆ ಉಂಡಿರಲಿಕ್ಕಿಲ್ಲ. ತಿಳಿತೆಲ್ಲ ಮಸ್ತಂಗ ಉಣಬೇಕು. ಉಣ್ಣೋದಕ್ಕೆ ನಮ್ಮ ಮುರಗೋಡ ಬಹಳ ಪ್ರಸಿದ್ಧರಿ. ಬರಿ ಉಣ್ಣಾಕ ಹೊಲಮನಿ ಕಳಕೊಂಡ ಜನ ನಮ್ಮ ಊರಾಗ ಐತ್ರಿ. ಅಗದಿ ರಸಿಕರ ಊರ್ರಿ ಮುರಗೋಡ” ಅಷ್ಟೇ ಅಲ್ಲ “ಬರಿ ಅಡುಗೆ ಅಷ್ಟ ಚಲೋ ಇದ್ರ ಅಲ್ರಿ ಅದನ್ನು ಬಡಿಸೋರ ಮನಸ್ಸು ಚೊಲೊ ಇರಬೇಕು.” ಎಂದು ಹೇಳುತ್ತಿದ್ದರು. ತಮಗೆ ಬೇಕಾದ ಹಾಗೆ ಅಡಿಗೆಯನ್ನು ತಮ್ಮ ಶ್ರೀಮತಿಯವರಿಂದ ಮಾಡಿಸಿಕೊಳ್ಳುತ್ತಿದ್ದರು. ಹಾಸ್ಯ ಪ್ರಿಯರಾದ ಬಾಳಪ್ಪನವರು ಹಬ್ಬ ಹರಿದಿನಗಳಲ್ಲಿ ತಮ್ಮ ಹೆಂಡತಿಯ ಹೆಸರನ್ನು ಹೇಳುವುದು ಅವರು ತಮ್ಮ ಹೆಂಡತಿಯ ಮೇಲಿಟ್ಟ ಪ್ರೀತಿಯ ಸಂಕೇತವಾಗಿದೆ.

ಬಾಳಪ್ಪನವರು ತಮ್ಮ ಸಾಮಾಜಿಕ ಜೀವನದಲ್ಲಿ ಒಳ್ಳೆಯ ಹಾಡುಗಾರರಾಗಿದ್ದರು. ಹಾಸ್ಯ ಪ್ರಿಯ ವ್ಯಕ್ತಿಯಾಗಿದ್ದರು. ಅವರೊಬ್ಬ ಒಳ್ಳೆಯ ಗೆಳೆಯರು, ಹಿರಿಯರು ಹಾಗೂ ಹಿತೈಷಿಗಳು ಆಗಿದ್ದರು. ತರುಣ ಪೀಳಿಗೆಗೆ ಇವರೊಬ್ಬ ಆದರ್ಶ ವ್ಯಕ್ತಿಯಾಗಿದ್ದರೆಂದರೆ ಅತಿಶಯೋಕ್ತಿಯೇನಲ್ಲ. ಅವರ ಮಾತು ಅಂದ್ರೆ ಮಲ್ಲಗೆ ಮೊಗ್ಗು ಅರಳಿದಂಗ, ನೆಲಗಡಲಿ ಹುರಿದ್ದಂಗ, ಅಗದಿ ಖಡಕ್” ಎಂದು ಜನರ ಅಭಿಪ್ರಾಯವಾಗಿದೆ. ಅವರು ಮಾತನಾಡಲಿಕ್ಕೆ ಹತ್ತಿದರ ಸಣ್ಣವರು, ದೊಡ್ಡವರು, ಮುದುಕರು, ತದಕರು ಎಲ್ಲರೂ ಖುಷಿ ಪಡುತ್ತಿದ್ರಿ” ಎಂದು ಗುರುಸಿದ್ದಪ್ಪ ಇಚ್ಚಂಗಿಯವರು ಹೇಳುತ್ತಾರೆ. ಹೆಚ್ಚೇನು ಅವರು ತಾಸುಗಟ್ಟಲೆ ನಿರರ್ಗಳವಾಗಿ, ನಿರಾಡಂಬರವಾಗಿ ಮಾತನಾಡಬಲ್ಲ ‘ಮಾತಿನ ಕಾಕ’ ಎಂದೆ ಖ್ಯಾತರಾಗಿದ್ದರು. ಅವರ ಮಾತೆ ಕೆಲವೊಮ್ಮೆ ಹಾಡಾಗುತ್ತಿತ್ತು. “ಕಸದಲ್ಲಿ ರಸ ತುಂಬುವ ಚುರುಕು ಬುದ್ಧಿಯ ರಸಿಕ ಅವರಾಗಿದ್ದರು” ಎಂದು ಇವರ ಜೀವನ ಚರಿತ್ರಕಾರ ಜಿ. ಸಿ. ಪಾಟೀಲರು ಹೇಳುತ್ತಾರೆ. ಅವರು ಮಾತನಾಡಲು ಆರಂಭಿಸಿದರೆ ಅನೇಕರು ಅವರ ಪರವಶರಾಗುತ್ತಿದ್ದರು. ಅವರೊಮ್ಮೆ ಕೃಷ್ಣಾ ತೀರದ ಬಿಜಾಪುರ ಜಿಲ್ಲೆಯ ಹಳ್ಳಿಯೊಂದಕ್ಕೆ ಹೋದಾಗ ಒಬ್ಬ ತರುಣಿಯು ‘ಎಳೆ ಬದನೆಕಾಯಿ ಹೆಂಗಮ್ಮ ತಾಯಿ’ ಎಂದಾಗ ಆಕೆ “ಮೂರು ರೂಪಾಯಿಗೆ ಒಂದು ಕಿಲೋ” ಎಂದು ಕಟುವಾಗಿ ಮೊಟಕಾಗಿ ಉತ್ತರಿಸಿದಳಂತೆ. ತಕ್ಷಣವೇ ಬಾಳಪ್ಪನವರು “ಕೊಡಬೇಕವ್ವ, ಏನು ತುಟ್ಟಿ ಅಲ್ಲ ಬಿಡು, ಬದನೆಕಾಯಿ ಅಗದಿ ಮಲ-ಮಲ ಅಂತಾವು. ನಮ್ಮೂರ ಕಡೆ ಇಂಥ ಬದನೆಕಾಯಿ ನೋಡಾಕೂ ಸಿಗಾಂಗಿಲ್ಲ” ಎಂದು ಹೇಳಿದಾಗ, ಅವಳು “ಇದೆ ಇನ್ನ ಹರಕೊಂಡು ಬಂದೇನಣ್ಣ” ಎಂದು ಸಮಾಧಾನವಾಗಿ ಅಂದಳು. “ಹಾಂಗ ನಿನ್ನ ಹೆಸರೇನವ್ವ ಅಕ್ಕಾ” ಎಂದು ಬಾಳಪ್ಪನವರು ಕೇಳಿದಾಗ “ಕಲ್ಲವ್ವರಿ” ಅಂದಳು. ಅದಕ್ಕೆ ಬಾಳಪ್ಪನವರು “ಕಲ್ಲೇಶ್ವರ ದೇವರ ಹೆಸರ ಇಟ್ಟಾರ, ನಿನ್ನ ಜೀವನ ಸಾರ್ಥಕ ಆತು, ಬಾಳ ದೊಡ್ಡ ಹೆಸರು” ಎನ್ನುವುದೆ ತಡ, ಅವಳು “ಯಣ್ಣಾ, ನೀವು ದೂರದಿಂದ ಬಂದಂಗ ಕಾಣ್ತೈತಿ, ನಮ್ಮ ಹೊಲದಾಗ ರಗಡ ಬದನೆಕಾಯಿ ಬೆಳಿತೇವಿ, ನೀವು ರೊಕ್ಕಾ ಕೊಡಬ್ಯಾಡ್ರಿ, ಹಂಗ ಸ್ವಲ್ಪ ತೊಗೊಂಡು ಹೋಗ್ರಿ” ಎಂದು ಬುಟ್ಟಿಯನ್ನೇ ಬಾಳಪ್ಪನವರ ಮುಂದೆ ಇಟ್ಟಳಂತೆ.

“ಮಾತಿನ ಮಜಾ ಅಂದ್ರ ಹೀಂಗ ಇರತೈತ್ರಿ, ಗಿಡದ ಮ್ಯಾಲಿನ ಮಂಗ್ಯಾ ಸಹಿತ ಕೈ ಬಿಡಬೇಕು ಮಾತಾಡಿದರ” ಎಂದು ಚಟಾಕಿ ಹಾರಿಸುತ್ತಾ ಬಾಳಪ್ಪನವರು ಹೇಳುತ್ತಿದ್ದರು,

ಬಾಳಪ್ಪನವರು ಕೇವಲ ಒಣ ಹರಟೆಗಾರರಾಗಿರಲಿಲ್ಲ. ಅವರು ಮನ ಬಿಚ್ಚಿ ಮಾತಾಡುವ ಹೃದಯ ಶ್ರೀಮಂತಿಕೆಯುಳ್ಳವರಾಗಿದ್ದರು. “ಅವರು ಕಿರಿಯರಿಗೆ ಸಲಹೆ ನೀಡುವ, ಗೆಳೆಯರೊಂದಿಗೆ ಹಾಸ್ಯ ಮಾಡುವ, ಹಾಡೆಂದರಲ್ಲಿ ಹಾಡುವ ಜನಪದ ಗಾಯಕರಾಗಿದ್ದರು. ಅವರ ಮಾತಿನಲ್ಲಿ ಕಹಿಯಾಗಲಿ, ದ್ವೇಷವಾಗಲಿ, ವೈರತ್ವವಾಗಲಿ ಎಂದೂ ಸುಳಿಯುತ್ತಲಿರಲಿಲ್ಲ ಎಂದು ಧಾರವಾಡದ ಬಸಪ್ಪ ಖಾನಾವಳಿಯ ಮಾಲೀಕರು ಹೇಳುತ್ತಾರೆ. ಭಾರತದ ತುಂಬೆಲ್ಲಾ ತಿರುಗಾಡಿದ, ಕಾರ್ಯಕ್ರಮ ನೀಡಿದ ಜನಪದ ಸಂಗೀತದ ಮತ್ತು ಸಾಹಿತ್ಯದ ಜ್ಞಾನಭಂಡಾರಿ ಬಾಳಪ್ಪನವರು ಮಾತಿನ ವಿಷಯವಾಗಿ ಹೀಗೆ ಹೇಳಿದ್ದಾರೆ. “ನಮ್ಮ ಜನರಿಗೆ ಮಾತಾಡಕ ಬರೋದಿಲ್ರಿ, ನಾಲ್ಕು ಒಳ್ಳೆಯ ಮಾತು ಮಾತಾಡಿದರೆ ಗಂಟಲ ಕಳಕೊಂಡಂಗ ಮಾಡ್ತಾರ. ಒಳ್ಳೆಯ ಮಾತಾಡೋದು ಅಂದ್ರ ಹೊಗಳು ಅಂತ ಅಲ್ರಿ. ಯಾರೊ ಒಬ್ಬರು ಒಳ್ಳೆಯ ಕೆಲಸ ಮಾಡಿದರೆ, “ಅಗದಿ ಚಲೋ ಮಾಡಿದೆಪಾ ಅಂದ್ರ” ಅಂವ ಮುಂದಕ ಅದಕ್ಕಿಂತ ಒಳ್ಳೇದ ಮಾಡ್ತಾನ. ನನಗಾ ಆಗಲಿ, ಹಾಡೊ ಹೊತ್ನಾಗ ಭೇಷ್ ‘ಒನ್ಸಮೋರ’ ಅಂದರ ಮತ್ತೊಂದು ಹಾಡ್ತೇನಿ ನೋಡ್ರಿ. ಮನುಷ್ಯನ ಸ್ವಭಾವ ಹಂಗ್ರಿ. ನಿಮ್ಮ ಮನ್ಯಾಗಿನ ದನಕರು ನಾಯಿ ಅವಕ್ಕ ನಕ್ಕೊಂತ ಬೆನ್ನ ಸವರಿದರೆ ಅವು ಹ್ಯಾಂಗ ಪ್ರೀತಿ ಮಾಡ್ತಾವು ನೋಡ್ರಿ, ಮನಸ್ಯಾರು ಹಂಗರಿ.”

ಬಾಳಪ್ಪನವರು ಧಾರ್ಮಿಕ ಸಂಪ್ರದಾಯದವರು. ಶಿವಾರಾಧಕರು. ಹೀಗಾಗಿ ಅವರಿಗೆ ನಿತ್ಯ ಶಿವಪೂಜೆ, ಲಿಂಗಪೂಜೆ ತಪ್ಪುವಂತಿರಲಿಲ್ಲ. ಆದ್ದರಿಂದ ಅವರು ಎಲ್ಲಯೆ ಹೋಗಲಿ ಮಠಗಳಲ್ಲಿ ತಂಗುತ್ತಿದ್ದರು. ಸ್ನಾನ, ಪೂಜೆ, ಊಟ. ನಂತರ ಒಬ್ಬರೆ ಇರಲಿ, ಸಾವಿರ ಜನ ಇರಲಿ ‘ಹಾಡು ನೀ ಬಾಳ್ಯಣ್ಣ’ ಎಂದರೆ ಕಂಚಿನ ಕಂಠದ ಗಾನಸಿರಿ ಆರಂಭವೆ ಆಗಿತ್ತಿತ್ತು. ಹೀಗಾಗಿ ಕರ್ನಾಟಕದ, ಅದರಲ್ಲೂ ಉತ್ತರ ಕರ್ನಾಟಕದ ಮಠಾಧಿಶರಿಗೆ ಅವರು ಚಿರಪರಿಚಿತರಾದರು. ಅವರಿಗೆ ಬಾಳಪ್ಪನವರ ಸಂಬಂಧ ನಿಕಟವಾಗಿತ್ತು. ಮೇಲಾಗಿ ಬಾಳಪ್ಪನವರು ಜನಪದ ಸಂಗೀತಗಾರ ಮತ್ತು ಜನಪದ ಜಾದುಗಾರರಾಗಿದ್ದರಿಂದ ಅವರು ಸಾಮಾನ್ಯ ಜನರೊಂದಿಗೆ ಬಹುಬೇಗ ಹೊಂದಿಕೊಳ್ಳುತ್ತಿದ್ದರು. ಒಮ್ಮೆ ಅವರು ಗದುಗಿನಲ್ಲಿರುವ ತೋಂಟದಾರ್ಯ ಮಠಕ್ಕೆ ಅಪ್ಪನವರ ದರ್ಶನಕ್ಕೆ ಹೋದಾಗ ಅಪ್ಪನವರು “ಏನ್ ಗವಾಯಿಗಳೆ ಯಾವಾಗ ಬಂದ್ರಿ? ಏನ್ ಕತೆ?” ಬಾಳಪ್ಪನವರು ಹೀಗೆ ಉತ್ತರಿಸಿದ್ದಾರೆ: “ಈಗ ಸ್ವಲ್ಪ ಹೊತ್ತು ಆತ್ರಿ. ಮುಂಡರಗಿಯಿಂದ ಬರುವಾಗ ಡಂಬಳಕ್ಕೂ ಹೋಗಿದ್ನಿರಿ. ಮಠದ ಹೊಲದಾಗ ಜ್ವಾಳ ಬೆಳೆದ್ಯೆತ್ರಿ. ಅಕರಾಳ-ವಿಕರಾಳ, ಏನ್‌ತನಾ, ಆಳಹೊಕ್ಕರೂ ಕಾಣಾಕಿಲ್ಲ. ಜೋಳದ ತೆನಿ ಸಾಲು ಮುತ್ತಿನ ಚೆಂಡು ಗೋಣೆತ್ತಿ ನಿಂತಂಗ್ಯೆತ್ರಿ. ಹಾಂಗ ಒಂದು ತಾಸು ನೋಡಕೊಂತ ನಿಂತಿನ್ರಿ. ಪುಣ್ಯದ ಫಲ ಅದು. ಮಠದ ಹೋರಿನೂ ಅಲ್ಲೆ ಮ್ಯಾರ್ಯಾಗ ಮೇಯ್ಯಾಕ ಕಟ್ಟಿದ್ರು. ಅಬಬಾ ಏನ್ ಹೋರ್ರೆಪಾ ಅವು. ಆನಿ ಇದ್ಧಾಂಗ ಅದಾವರಿ. ಡರಕಿ ಹೊಡೆದರೆ ಬಸ್ಸಿನ್ಯಾಗ ಹೋಗ ಜನಗಳೆಲ್ಲ ಚಂಡ ಹೊರಗೆ ಹಾಕಿ ನೋಡ್ತಿದ್ರು.”

ಬಾಳಪ್ಪನವರಿಗೆ ಧಾರವಾಡದ ಮೃತ್ಯುಂಜಯ ಮತ್ತು ಮಹಾಂತ ಸ್ವಾಮಿಗಳವರ ಬಗ್ಗೆ ಬಹಳ ಭಕ್ತಿ, ಗೌರವವಿತ್ತು. ಅವರ ಇಚ್ಚೆಗೆ ತಕ್ಕಂತೆ ಬಾಳಪ್ಪನವರು ಅವರು ಕರಿಸಿದಾಗಲೊಮ್ಮೆ ಹೋಗಿ ಅವರ ಇಚ್ಚೆಗನುಗುಣವಾಗಿ ಹಾಡಿ ಅವರನ್ನು ಸಂತೃಪ್ತಿಗೊಳಿಸುತ್ತಿದ್ದರು. ಅವರ ನಿಕಟತೆ ಕೇವಲ ಸ್ವಾಮಿಗಳೊಂದಿಗೆ ಮಾತ್ರ ಅಲ್ಲ, ಸಾಮಾನ್ಯ ಜನರೊಂದಿಗೂ ಇತ್ತು. ಅವರು ೧೯೫೮ರಲ್ಲಿ ಸಂಗೀತ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಹೋದಾಗ ಅವರು ಉಳಿದುಕೊಂಡಿದ್ದ ಮನೆಯ ಮಾಲಿಕ ಬಸಪ್ಪ ಎಂಬುವರು ಇವರೊಂದಿಗೆ ಸಾಯುವವರೆಗೂ ನಿಕಟ ಸಂಬಂಧ ಇಟ್ಟುಕೊಂಡಿದ್ದರು. ಈ ವಿಷಯವನ್ನೊಮ್ಮೆ ಪ್ರಸ್ತಾಪಿಸಿದ ಬಾಳಪ್ಪನವರು ಹೀಗೆ ಹೇಳಿದ್ದಾರೆ. “ಅವತ್ತಿನಿಂದ ಮೈಸೂರಿಗೆ ಹೋದ್ರ ಈಗಲೂ ಬಸಪ್ಪನವರ ಮನಿ ವಸ್ತೀರಿ. ಅದೇ ಆತ್ಮೀಯತೆ ಉಳಿದು ಬಂದಿದೆ. ಮೊನ್ನೆ ಸನ್ಮಾನ ಸಮಯದಲ್ಲಿ ಹೋದಾಗ ನನ್ನ ಕುಟುಂಬಾನೂ ಕರಿಸಿ ಸೀರೆ ಉಡಿಸಿ ಕಳಿಸಿ ಕೊಟ್ರು. ಮುರಗೋಡ ಎಲ್ಲಿ? ಮೈಸೂರ ಎಲ್ಲಿ? ಅವರಿಗೂ ನನಗೂ ಏನು ಸಂಬಂಧ. ಚಂದದ ನಾಕ ಮಾತು, ಒಂದು ಹಾಡು. ಅಷ್ಟ ಖುಷಿ ಮಾಡುತ್ತ ನೋಡ್ರಿ. ಬಸಪ್ಪನವರದು ಒಂದು ಉದಾಹರಣೆ ಮಾತ್ರ. ಕರ್ನಾಟಕದಾಗ ಊರಿಗೊಂದು ಅದಾವ ನನಗೆ” ಎಂದು ಬಾಳಪ್ಪನವರು ಸಂತೋಷದಿಂದ ನೆನೆಸಿಕೊಂಡು ಹೇಳುತ್ತಿದ್ದರು.

ಬಾಳಪ್ಪನವರು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಹಾಡಿನ ಮೂಲಕ ನಾಡಿನ ಸೇವೆಯನ್ನು ಮುಂದುವರೆಸಿದರು. ಅವರಲ್ಲಿ ಎಂದೂ ಸೋಮಾರಿತನ ಇಣುಕಿ ಹಾಕಲಿಲ್ಲ. ತಮ್ಮ ಕೊನೆಗಾಲದವರೆಗೂ ಹಾಡುತ್ತೇನೆ ಎನ್ನುತ್ತಿದ್ದರು. ಸದಾ ಕಾಯಕಯೋಗಿಯಾದ ಈ ನಾದಯೋಗಿಗೆ ಕೆಲಸ ಮಾಡುವುದೆ ವಿಶ್ರಾಂತಿಯಾಗಿತ್ತು. ತಮ್ಮ ಕೊನೆ ದಿನಗಳಲ್ಲಿಯೂ ಅವರಿಗೆ ರೋಗರುಜಿನಗಳ ಭಯವಿರಲಿಲ್ಲ. ಎಂದೂ ಹಾಸಿಗೆ ಹಿಡಿಯದ ಅವರು ತಮ್ಮ ೮೩ನೇ ವಯಸ್ಸಿನಲ್ಲಿಯೂ ಕಾರ್ಯಕ್ರಮವನ್ನು ನೀಡಿದ್ದಾರೆ. ಅವರ ಕೊನೆಯ ಗಾಯನ ಸ್ವಂತ ಊರಿನ ದುರುದುಂಡೇಶ್ವರ ಮಠದಲ್ಲಿ. ದಿನಾಂಕ ೧೩.೧೧.೧೯೯೨ ರಂದು ಕಾಗಿನೆಲೆಯ ಸ್ವಾಮಿಜಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಆದರೆ ಈ ಕಾರ್ಯಕ್ರಮ ನೀಡಿದ ಎರಡು ದಿನದಲ್ಲಿ ದಿನಾಂಕ ೧೫.೧೧.೧೯೯೨ರಂದು ಅವರು ಸ್ವಾಭಾವಿಕ ಸಾವಿನಲ್ಲಿ ನಮ್ಮನ್ನಗಲಿದರು.

ಬಾಳಪ್ಪನವರ ಕಲ್ಪನೆಯಲ್ಲಿ ಹಿಂದೂಸ್ತಾನಕ ಎಂಥವನಿರಬೇಕು

“ಜನಸೇವೆಯೆ ಜನಾರ್ಧನ ಸೇವೆ” ಎಂದು ಪ್ರಾಣಕ್ಕಿಂತ ಮಾನ, ಪ್ರೀತಿಗಿಂತ ಕೆಲಸ ಮುಖ್ಯವೆಂದು ಕರ್ತವ್ಯ ನಿರ್ವಹಿಸಬಲ್ಲ ಸರಳ, ಸಂಪನ್ನ ಹಾಗೂ ಪ್ರಾಮಾಣಿಕ ವ್ಯಕ್ತಿಗಳು ಸಿಗಿವುದು ವಿರಳ. ಬಾಳಪ್ಪನವರು ಅಂಥ ವ್ಯಕ್ತಿಯಾಗಿದ್ದಷ್ಟೆ ಅಲ್ಲ. ಅಂಥ ಶಕ್ತಿಯಾಗಿದ್ದರು. ಹಿಂದೂಸ್ತಾನಕ್ಕೆ ಬೇಕಾಗುವ ವ್ಯಕ್ತಿತ್ವವನ್ನು ಹೊಂದಿದ ಬಾಳಪ್ಪನವರು, ೨೦ನೇ ಶತಮಾನದಲ್ಲಿ ಭಾರತ ಕಂಡ ಧೀಮಂತ ವ್ಯಕ್ತಿಗಳಂತೆ ಜನರನ್ನು ದಾರಿಗೆ ತರಲು, ಅವರ ಬಾಳನ್ನು ಹಸನಗೊಳಿಸಲು, ಅವರಿಗೆ ಹಾಡಿನ ಮೂಲಕ ಆನಂದ ನೀಡುವುದರ ಜೊತೆಗೆ ಅವರನ್ನು ಅಜ್ಞಾನದ ಅಂಧಕಾರದಿಂದ ಸುಜ್ಞಾನಕ್ಕೆ ತರಲು ಪ್ರಯತ್ನಪಟ್ಟವರು. ಅವರ ಹಾಡು ‘ಮೊದಲು ಮಾನವನಾಗು’ ಕೇವಲ ಭಾರತೀಯರಿಗಷ್ಟೆ ಅಲ್ಲ, ಅದು ವಿಶ್ವಮಾನವ ಸಂದೇಶವನ್ನು ಸಾರಿದೆ. ಪಾಶ್ಚಾತ್ಯ ನಾಟಕಕಾರ ಜಿ.ಬಿ. ಶಹಾ ಹೇಳಿದಂತೆ ಬಾಳಪ್ಪನವರು ‘ಕಲೆ(ಸಂಗೀತ)ಯನ್ನು ಕಲೆಗಾಗಿ’ ಉಳಸಿ ಬೆಳೆಸದೆ ಜೀವನಕ್ಕಾಗಿ ಅದನ್ನು ಸದುಪಯೋಗ ಮಾಡಿಕೊಂಡವರು.

ದೇಶ ಸೇವೆಯನ್ನು ಯಶಸ್ವಿಯಾಗಿ ಮಾಡಿದ ಗಣ್ಯವ್ಯಕ್ತಿಗಳ ಗುಂಪಿಗೆ ಬಾಳಪ್ಪನವರು ಸೇರಿಕೊಳ್ಳುತ್ತಾರೆ. “ಗೀತೆ ಮೇರೆ ಸಾಥಿ” ಎನ್ನುತ್ತ ತಮ್ಮ ಇಡೀ ಜೀವನವನ್ನೇ ಜನಸೇವೆಗಾಗಿ ಮುಡುಪಾಗಿಟ್ಟರು.ಜೀವನದಲ್ಲಿ ನೊಂದವರಿಗೆ ಸಾಂತ್ವನ-ಸಲಹೆ ನೀಡಿದ ಸಾತ್ವಿಕ ಪರಂಪರೆಯನ್ನು ಸೃಷ್ಟಿಸಿದರು. ಅವರು ಕೃಷಿ ಇಲಾಖೆಯಲ್ಲಿ ನೌಕರಿಗೆ ಸೇರಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ರೈತರಿಗೆ ಆಧುನಿಕ ರೀತಿಯ ಕೃಷಿ ಪದ್ಧತಿಯನ್ನು ಅನುಸರಿಸುವಂತೆ ತಮ್ಮ ಸ್ವರಚಿತ ಕವನ ಮತ್ತು ಜನಪದ ಗಾಯನದಿಂದ ತಿಳಿ ಹೇಳಿದರು. ೧೯೮೦ ರಲ್ಲಿ ಅವರ ಸಂಗೀತ ಸಾಧನೆ ಮತ್ತು ಸೇವೆಯನ್ನು ಗೌರವಿಸಿ ಕೇಂದ್ರ ಸರಕಾರ ಅವರಿಗೆ “ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ” ನೀಡಿತು. ಬೆಂಗಳೂರಿನ ಬಸವ ಸಮಿತಿಯವರು ಅವರನ್ನು ಸತ್ಕರಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಅವರ ಅಭಿಮಾನಿ ಮಾಜಿ ಉಪರಾಷ್ಡ್ರಪತಿ ಬಿ. ಡಿ. ಜತ್ತಿಯವರು “ಬಾಳಪ್ಪನವರು ಒಳ್ಳೆಯ ಸಾಹಿತ, ಸಂಗೀತಗಾರ, ಕವಿ” ಎಂದು ಬಣ್ಣಿಸಿ ಅವರಿಂದ ಸಂಗೀತದ ಮೂಲಕ ಜನರಿಗೆ ತಿಳುವಳಿಕೆ ಕೊಡುವ ಕಾಯಕ ಇನ್ನೂ ಹೆಚ್ಚಾಗಲೆಂದು ಹಾರೈಸಿದರು.

ಬೆಲ್ಲದ ಮಾತಿನ ಕಂಚಿನ ಕಂಠದ ಬಾಳಪ್ಪನವರು ಆ ಸ್ಥಾನವನ್ನು ತುಂಬಿದರು. ಈಗಿನ ಪತ್ರಿಕೆ, ರೇಡಿಯೊ, ದೂರದರ್ಶನ, ಸಿನೆಮಾ ಮಾಡುವ ಪ್ರಚಾರ ಕೆಲಸವನ್ನು ಆಗ ಏಕಾಂಗಿಯಾಗಿ ಕೃಷಿ ಇಲಾಖೆಯಲ್ಲಿ ನಿರ್ವಹಿಸಿದರು. ರೈತರಿಗೆ ಕೃಷಿಯ ಬಗ್ಗೆ ಅನಾಸ್ಥೆ ತುಂಬಿದ ಕಾಲದಲ್ಲಿ ಬಾಳಪ್ಪನವರು ಅವರಿಗೆ ತಿಳಿಹೇಳಿ ಹುರಿದುಂಬಿಸಿದ್ದನ್ನು ಅವರ ಮಾತಿನಲ್ಲೇ ಕೇಳಬೇಕು. “ರೈತ ಅಂದ್ರ ರೊಕ್ಕದ ಗಿಡರಿ ರೈ ಅಂದ್ರ ದುಡ್ಡು. ತೆರು ಅಂದ್ರ ಗಿಡ. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲು. ನೇಗಿಲ ಕುಲ ದೊಳಗಿದೆ ಧರ್ಮ” ಎಂದು ಹೇಳಿದರು.

ಸಮಾಜದಲ್ಲಿ ಅವರ ಸೇವೆ ಕೇವಲ ಕೃಷಿ ಪ್ರಚಾರಕ್ಕೆ ಸೀಮಿತವಾಗಿರಲಿಲ್ಲ. ಅವರು ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿ ಬ್ರಿಟಿಷರಿಂದ ಆರು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಿದರು. ಕುಟುಂಬ ಕಲ್ಯಾಣ ಇಲಾಖೆಯ ಯೋಜನೆಯಲ್ಲಿ ಸಾಕಷ್ಟು ಪ್ರಚಾರ ಮಾಡಿದರು. ಅವರು ನಿಜ ಜೀವನದಲ್ಲಿ ಆರು ಮಕ್ಕಳನ್ನು ಹೊಂದಿದ್ದರೂ ಮಿತಸಂತಾನದ ಬಗ್ಗೆ ಹಳ್ಳಿಯ ಜನರಿಗೆ ಮನಮುಟ್ಟುವಂತೆ ಹೇಳುತ್ತಿದ್ದ ವೈಖರಿ ಅಷ್ಟೆ ರೋಮಾಂಚಕಾರಿಯಾಗಿತ್ತು. ಶಿಕ್ಷಣ ಪ್ರಚಾರದಲ್ಲಿ ಅವರು ಕೈಕೊಂಡ ಪ್ರಚಾರಾಂದೋಲನವು ಶ್ಲಾಘನೀಯವಾಗಿದೆ.